ಮನೆಯವರು ಹೊರಹಾಕಿದರು, ಸುತ್ತಮುತ್ತಲಿನವರು ನಿಂದಿಸುತ್ತಿದ್ದರು, ಇವೆಲ್ಲದಕ್ಕಿಂತಾ ನನಗೆ ಹೆಚ್ಚಾಗಿ ಕಾಣಿಸುತ್ತಿದ್ದದ್ದು ಏನು ತಪ್ಪೇ ಮಾಡಿರದ ನನ್ನ ಮುದ್ದು ಮಗಳ ಭವಿಷ್ಯ. ತಪ್ಪೆಂದರೆ ಏನೆಂಬುದನ್ನು ಅರಿಯದ ವಯಸ್ಸಿನಲ್ಲಿ ತನ್ನದಲ್ಲದ ತಪ್ಪಿಗೆ ಸ್ನೇಹಿತರು, ಸಂಬಂಧಿಗಳೂ, ನೆರೆಹೊರೆಯವರೆಲ್ಲರಿಂದ ದೂರವಿಡಲ್ಪಟ್ಟಿದ್ದಾಳೆ. ಏಕಪ್ಪ ರಮ, ಸುಮ, ಇವರೆಲ್ಲಾ ನನ್ನ ಜೊತೆ ಆಟ ಆಡಲು ಬರುವುದಿಲ್ಲ? ಕೇಳಿದರೆ ನಮ್ಮ ಅಮ್ಮ ಬೈತಾರೆ ಅಂತಾರಲ್ಲ ಯಾಕೆ? ಎಂಬ ನನ್ನ ಮಗಳ ಪ್ರಶ್ನೆಗೆ ಹೇಗೆ ಉತ್ತರಿಸಲಿ ತಿಳಿಯಲಿಲ್ಲ. ಆದರೆ ಇಂದು ನನ್ನವರೆಲ್ಲಾ ನನಗೆ ಮತ್ತೆ ಸಿಕ್ಕಿದ್ದಾರೆ. ನಾನು ಕಳೆದುಕೊಂಡಿದ್ದ ಸಂತೋಷ ನನಗೆ ಸಿಕ್ಕಿದೆ. ನನ್ನ ಹೆಸರು ರಾಮಸ್ವಾಮಿ. ನಮ್ಮ ಊರು ಕೋಲಾರದ ಜಿಲ್ಲೆಯ ಒಂದು ಪುಟ್ಟ ಹಳ್ಳಿ. ಅಪ್ಪ ವ್ಯವಸಾಯ ಮಾಡುತ್ತಾರೆ. ಅಣ್ಣ ಮತ್ತು ಒಬ್ಬಳು ತಂಗಿ. ನಾನು 14ನೆ ವಯಸ್ಸಿನಲ್ಲಿ ನನ್ನ ಅಪ್ಪ ಹೊಡೆದಿದ್ದಕ್ಕಾಗಿ ಮನೆ ಬಿಟ್ಟು ಹೋದೆ. ಏನು ಮಾಡಲು ತೋಚದೆ ಬಸ್ ಸ್ಟಾಪ್ನಲ್ಲಿ ಕುಳಿತ್ತಿದ್ದವನನ್ನು ಕುಡಿದು ತೇಲಾಡುತ್ತಾ ಬಂದು ನಿಂತ ವ್ಯಕ್ತಿಯೊಬ್ಬ ಏ ಯಾರೊ ನೀನು ಎಲ್ಲಿಗೆ ಹೋಗತ್ತಾ ಇದ್ದೀಯ ಇಷ್ಟೊತ್ತ್ನಲ್ಲಿ? ಎಂದು ಕೇಳಿದ. ಉತ್ತರಿಸಲಾಗದ ನಾನು ಹಾಗೆ ಸುಮ್ಮನೆ ತಲೆತಗ್ಗಿಸಿ ನಿಂತೆ. ನನ್ನ ವರ್ತನೆಯಿಂದ ನನ್ನ ಸ್ಥಿತಿಯನ್ನು ಅರ್ಥ ಮಾಡಿಕೊಂಡವನೇ ``ತಲೆ ಕೆಡಿಸ್ಕೊಬೇಡವೋ ಬಾ ನನ್ನ ಜೊತೆ ಕೆಲಸ ಮಾಡಕೊಂಡು ಹೊಟ್ಟೆ ತುಂಬ ಉಂಡ್ಕ್ಕೊಂಡು ಆರಾಮವಾಗಿ ಇರಿವಂತೆ ಎಂದು ಹೇಳಿ ನೆಲವನ್ನು ಅಳತೆ ಮಾಡುತ್ತಾ ಹೊರಟವನಂತೆ ರಸ್ತೆಯ ಒಂದು ತುದಿಯಿಂದ ಮತ್ತೊಂದು ತುದಿಗೆ ಓಲಾಡುತ್ತಾ ನಡೆಯುತ್ತಿದ್ದವನ ಹಿಂದೆ, ಮುಂದಿನ ಕುರಿಯ ಕಾಲುಗಳನ್ನೆ ಹಿಂಬಾಲಿಸುತ್ತಾ ನಡೆವ ಮತ್ತೊಂದು ಕುರಿಯಂತೆ ತಲೆತಗ್ಗಿಸಿ ಅವನ ಹಿಂದೆಯೇ ನಡೆದೆ. ಅಂದು ಅವನು ಯಾವುದೋ ಒಂದು ವಾಹನವನ್ನೇರಿ ಮಲಗಿದ ನಾನು ಅವನ ಕಾಲ ಬುಡದಲ್ಲಿ ಹಾಗೆ ಹೊರಳಿಕೊಂಡೆ. ಮರುದಿನ ಬೆಳಗ್ಗೆ ಕಣ್ಣು ತೆರೆದ ಮೇಲೆ ನನಗೆ ಅರಿವಾದದ್ದು ಅದು ಲಾರಿಯೆಂದು ಮತ್ತು ಆತ ಲಾರಿ ಡ್ರೈವರ್ ಎಂದು. ಅಂದಿನಿಂದ ನಾನು ಆ ಲಾರಿಯ ಕ್ಲೀನರ್ ಆದೆ. ಹಾಗೆ 10 ವರ್ಷ ಕಳೆದ ನಾನು ಕ್ರಮೇಣ ಲಾರಿ ಡ್ರೈವರ್ನಾದೆ.
ಇನ್ನು ಹೆಚ್ಚು ಕಾಲ ನನ್ನ ತಂದೆ ತಾಯಿಯನ್ನು ಬಿಟ್ಟಿರುವುದು ನನಗೆ ಕಷ್ಟವೆನಿಸಿತು ಹಳ್ಳಿಗೆ ಹೋಗಿ ಒಮ್ಮೆ ನನ್ನವರನ್ನು ನೋಡಿ ಬರಬೇಕೆಂದು ತೀರ್ಮಾನಿಸಿದೆ. ಅದರಂತೆ ಶಿವರಾತ್ರಿಯ ಹಬ್ಬದಂದು ಉಡುಗೊರೆಗಳೊಂದಿಗೆ ಹಳ್ಳಿಗೆ ಹೋದ ನನ್ನನ್ನು ಕಂಡ ತಂದೆ ತಾಯಿಗಳು ತುಂಬಾ ಸಂತೋಷದಿಂದ ಆನಂದ ಬಾಷ್ಪ ಹರಿಸುತ್ತ ನನ್ನ ಹರಸಿದರು. ಅಂದು ಅವರ ಸಡಗರ ಹೇಳತೀರದು, ಅಂದು ಅವರಿಗೆ ನಾನು ಮಾಡಿದ ತಪ್ಪಿನ ಅರಿವಾಗಿ ಅವರೆಲ್ಲರಲ್ಲಿ ಕ್ಷಮೆಯಾಚಿಸಿದೆ. ಸಂಜೆ ಒಟ್ಟಾಗಿ ಕುಳಿತ್ತಿದ್ದವರು ಇವನಿಗೆ ಒಂದು ಮದುವೆ ಮಾಡಿದರೆ ಒಳ್ಳಯದೆಂದು ತೀರ್ಮಾನಿಸಿಯೇಬಿಟ್ಟರು. ಅವರಿಗೆ ಇನ್ನು ನೋವುಕೊಡಲು ಇಚ್ಛಿಸದೆ ಸರಿ ಎಂದೆ. ಕೆಲವು ದಿನಗಳಲ್ಲೆ ಮಂಜುಳಾ ಎಂಬ ಸ್ಪುರದ್ರೂಪಿ ಹುಡುಗಿಯನ್ನು ನೋಡಿ ಮದುವೆಯನ್ನೂ ಮಾಡಿದರು. ಮದುವೆಯಾದ ಕೆಲತಿಂಗಳುಗಳ ಕಾಲ ನಾವು ಎಲ್ಲರಂತೆಯೇ ಸಂತೋಷದಿಂದ ಇದ್ದೆವು. ನಂತರ ನಾನು ನನ್ನ ಲಾರಿ ಡ್ರೈವರ್ ಉದ್ಯೋಗದಿಂದಾಗಿ ಮತ್ತೆ ಪುಣೆಗೆ ಮರಳಿದೆ. ಆಗ ನಾನು ಪುಣೆಯಿಂದ ಬೆಂಗಳೂರಿಗೆ ಪ್ರತಿ ನಿತ್ಯ ಲಾರಿ ಚಾಲನೆ ಮಾಡತ್ತಿದ್ದೆ. ಅದೇನು ಕೆಟ್ಟ ಸಮಯವೋ? ಏನೋ? ಕೆಲವು ದಿನಗಳ ಕಾಲ ನನ್ನ ವಯಸ್ಸು ಮತ್ತು ನನ್ನ ಬುದ್ಧಿ ನನ್ನ ಹಿಡಿತದಲ್ಲಿರಲಿಲ್ಲ. ನಾಲ್ಕೈದು ತಿಂಗಳ ನಂತರ ಮತ್ತೆ ಊರಿಗೆ ಮರಳಿದೆ. ಆ ಸಮಯದಲ್ಲಿ ನನ್ನ ಹೆಂಡತಿ ಸುಂದರವಾದ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಳು. 11ನೆ ದಿನದ ಶಾಸ್ತ್ರದಲ್ಲಿ ಮಗುವಿಗೆ ಕೀರ್ತನ ಎಂಬ ಹೆಸರನ್ನಿಟ್ಟೆವು. ಅದಾದ ಕೆಲದಿನಗಳ ನಂತರ ನನಗೆ ವಿಪರೀತ ಜ್ವರ, ಮೈ ಕೈ ನೋವು, ದಿನಕ್ಕೆ ಏಳೆಂಟು ಬಾರಿ ಬೇಧಿ ಆಗುತ್ತಿತು. ನಂತರ ಬೆಂಗಳೂರಿನ ಖಾಸಗೀ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಹೋದಾಗ ನನ್ನ ಕೆಲಸ ಮತ್ತು ನನ್ನ ನಡವಳಿಕೆಯ ಬಗ್ಗೆ ಸ್ಥೂಲವಾಗಿ ವಿಚಾರಿಸಿದವರೇ ಹೆಚ್.ಐ.ವಿ. ರಕ್ತಪರೀಕ್ಷೆ ಮಾಡಿದರು. ಆಗ ನನಗೆ ಹೆಚ್.ಐ.ವಿ. ಪಾಸಿಟಿವ್ ಇರುವುದು ಗೊತ್ತಾಯಿತು. ತಂದೆ ತಾಯಿಗಳು ನನ್ನನ್ನು ಮನೆಯಿಂದ ಹೊರ ಹಾಕಿದರು. ಹೆಂಡತಿ ಮಗುವಿನೊಂದಿಗೆ ತವರುಮನೆ ಸೇರಿಕೊಂಡಳು. ನಾನೇ ತಂದುಕೊಂಡ ಸ್ಥಿತಿಯಿಂದ ಬೀದಿಗೆ ಬಿದ್ದ ನಾನು ಅಪ್ಪನ ಬಳಿ ಅಂಗಲಾಚಿ ನಮ್ಮ ಜಮೀನಿನ ಬಳಿ ಗುಡಿಸಲೊಂದನ್ನು ಮಾಡಿಕೊಂಡೆ. ನಂತರ ನಾನು ಬೆಂಗಳೂರಿಗೆ ಬಂದು ಡಾಕ್ಟರರೊಬ್ಬರನ್ನು ಭೇಟಿಯಾಗಿ ನನ್ನ ಸ್ಥಿತಿಯನ್ನು ಅವರಿಗೆ ವಿವರಿಸಿದೆ. ಡಾಕ್ಟರರು ನನಗೆ ಚಿಕಿತ್ಸೆಯನ್ನು ನೀಡಿದರು. ಪ್ರತಿದಿನ ಎ.ಆರ್.ಟಿ. ಮಾತ್ರೆಗಳನ್ನು ಸೇವಿಸುವಂತೆ ತಿಳಿಸಿದರು ಮತ್ತು ಆಹಾರ ಸೇವನೆಯ ರೀತಿಗಳ ಬಗ್ಗೆ ತಿಳಿಸಿಕೊಟ್ಟರು. ಪ್ರಸ್ತುತ ಹೆಚ್.ಐ.ವಿ. ಸೋಂಕಿತರ ಸೇವೆಗೆಂದು ಸ್ಥಾಪಿಸಲ್ಪಟ್ಟಿರುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತಿ ತಿಂಗಳು 8 ರಿಂದ 10 ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತಿದ್ದೇನೆ. ನನ್ನ ತಂದೆ ತಾಯಿಗಳಿಗೆ ಪ್ರತಿ ತಿಂಗಳು ಹಣ ನೀಡುತ್ತೇನೆ. ಹೆಂಡತಿ ಮಕ್ಕಳನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇನೆ, ಅವರಿಗಾಗಿ ಅವರ ಭವಿಷ್ಯಕ್ಕಾಗಿ ಹಣವನ್ನು ಸಂಗ್ರಹಿಸಿಟ್ಟಿದ್ದೇನೆ. ಹೆಚ್.ಐ.ವಿ. ಸೋಂಕಿತ ಎಂದು ನಿಂದಿಸುತ್ತಿದ್ದವರು ಈಗ ನನ್ನನ್ನು ಗೌರವಿಸುತ್ತಾರೆ. ಸಮಾಜದ ದೃಷ್ಠಿಕೋನ ನಿಧಾನವಾಗಿ ಬದಲಾಗುತ್ತಿದೆ. ಅಪ್ಪ ಅಮ್ಮ ಬದಲಾಗಿದ್ದಾರೆ. ಹೆಂಡತಿಯ ಮನೆಯವರೂ ಬದಲಾಗಿದ್ದಾರೆ. ನನ್ನ ಹೆಂಡತಿ ಮತ್ತು ಮಗು ನನ್ನೊಂದಿಗೆ ಮತ್ತೆ ಜೀವಿಸಲು ಮುಂದಾಗಿದ್ದಾರೆ. ಇಂದು ನನ್ನ ಜೀವನದಲ್ಲಿ ಹೊಸಬೆಳಕು ಮೂಡಿದೆ ಅದರ ಸಂತೋಷವೇನೊ ಇದೆ, ಆದರೆ ಅವರೊಂದಿಗೆ ನಾನು ಮಾಡಿದ ತಪ್ಪಿನ ಬಗ್ಗೆ ಪಶ್ಚಾತ್ತಾಪವು ಇದೆ. ಈ ರೀತಿಯ ತಪ್ಪು ಬೇರ್ಯಾರ ಜೀವನದಲ್ಲೂ ನಡೆಯದಿರಲೆಂದು ನನ್ನ ಆಶಯ. ಶ್ರೀಯುತ ರಾಮಸ್ವಾಮಿ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|