ದಾಸ್ಯ ಮತ್ತು ಭ್ರಷ್ಟಾಚಾರ ಮುಕ್ತ ರಾಷ್ಟ್ರಕ್ಕಾಗಿ ಹೋರಾಡುವ ಡಾ. ದೊರೆಸ್ವಾಮಿ - ಸಾಮಾಜಿಕಕಾರ್ಯ ಮತ್ತು ನಾನು7/16/2017 ಕೊಳಚೆ ವಾತಾವರಣದಲ್ಲಿರುವ ಇವರನ್ನು ಊರ ಹೊರಗೆ ಓಡಿಸಿದರೆ, ಇವರು ಸುಧಾರಿಸುವುದಾದರೂ ಹೇಗೆ? ಸುಧಾರಿಸಿರುವ ಜನರೊಡನೆ ಇದ್ದರೆ ಇವರೂ ಕಾಲಕ್ರಮದಲ್ಲಿ ಬದಲಾವಣೆಯಾಗಬಹುದು ಎಂಬುದು ನನ್ನ ವಿಚಾರ. ಆದ್ದರಿಂದ ಅವರನ್ನೆಲ್ಲ ಅಲ್ಲಿಉಳಿಸಿಕೊಳ್ಳುವ ವಿಚಾರ ಮಾಡಿದೆ. ಎಚ್.ಎಸ್. ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ನಾನು ಹೈಸ್ಕೂಲಿನಲ್ಲಿದ್ದಾಗ ವಿಶ್ವೇಶ್ವರಪುರದಲ್ಲಿ `ಕಿರಿಯ ತರುಣರ ಸಂಘ' ಎಂಬ ಸಂಸ್ಥೆಯನ್ನು ನಾವೆಲ್ಲ ಸೇರಿ ಆರಂಭ ಮಾಡಿದೆವು. ನಮಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪರಿಚಯವಾಗಿತ್ತು. ಆದ್ದರಿಂದ ನಾವು ನಮ್ಮ ಸಂಘದ ವತಿಯಿಂದ ಬೆಂಗಳೂರಿನಲ್ಲಿರುವ ಸಾಹಿತಿಗಳನ್ನು ನಮ್ಮ ಸಂಘಕ್ಕೆ ಕರೆತಂದು, ಅವರ ಪರಿಚಯ ಮಾಡಿಕೊಡುವುದರ ಜೊತೆಗೆ ಅವರ ಅನೇಕ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದೆವು. ಬೇಸಿಗೆಯ ರಜೆಯಲ್ಲಿ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಹಾಗೂ ಕ್ರೀಡೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಪ್ರಯೋಗಗಳನ್ನು ಮಾಡಿದೆವು. ಅಖಿಲ ಕರ್ನಾಟಕ ಮಕ್ಕಳ ಕೂಟವನ್ನು ಆರಂಭಿಸುವ ಕಾರ್ಯದಲ್ಲಿ ನಾನೂ ಆರ್. ಕಲ್ಯಾಣಮ್ಮನವರಿಗೆ ನೆರವಾದೆ. ಮಕ್ಕಳ ಸಮ್ಮೇಳನಗಳು ನಡೆದಾಗ ಸ್ವಯಂಸೇವಕನಾಗಿ ಕೆಲಸಮಾಡಿದೆ. ಮೇಷ್ಟ್ರು ವೆಂಕಟರಂಗಯ್ಯಂಗಾರ್ಯರು ಪ್ರತಿವರ್ಷ ನಮ್ಮನ್ನು ಬನಶಂಕರಿ ತೇರಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಅವರು ನಮಗೆ ಹೊಟ್ಟೆ ತುಂಬ ಉಪ್ಪಿಟ್ಟು ತಿನ್ನಿಸಿ, ಬಡಿಸುವ ಕೆಲಸಕ್ಕೆ ನಿಯೋಜಿಸುತ್ತಿದ್ದರು. ರಥೋತ್ಸವದ ದಿನ ಬಂದ ಭಕ್ತಾದಿಗಳಿಗೆಲ್ಲ ಊಟ ಹಾಕುತ್ತಿದ್ದರು. ಮಧ್ಯಾಹ್ನ 2 ಘಂಟೆಗೆ ಆರಂಭವಾದ ಊಟ ಸಂಜೆಯವರೆಗೂ ಅನೇಕ ಪಂಕ್ತಿಗಳಲ್ಲಿ ನಡೆಯುತ್ತಿತ್ತು. ಅವರಿಗೆಲ್ಲ ಊಟ ಬಡಿಸಿದ ಮೇಲೆ ನಾವು ಸ್ಕೌಟುಗಳು ಸಂಜೆ 5 ಘಂಟೆಗೆ ಊಟಮಾಡುತ್ತಿದ್ದೆವು. ಸಮಾಜಸೇವೆಯ ಮೊದಲ ಪಾಠಗಳು ಹೀಗೆ ಆರಂಭವಾದವು. ನಾನು ಕಾಲೇಜು ಮುಗಿಸಿದ ಮೇಲೆ ನನ್ನ ನಿಜವಾದ ಸಮಾಜಸೇವೆಯ ಕೆಲಸ ಆರಂಭವಾಯಿತು. ನಾನು ಭಾರತ ಸೇವಕಸಮಾಜದ ಸಂಚಾಲಕನಾಗಿದ್ದಾಗ ಬೆಂಗಳೂರಿನ ಜಯನಗರದ ಎರಡನೆ ಬ್ಲಾಕಿನಲ್ಲಿರುವ `ದಾಸರಕಾಲೋನಿ' ಎಂಬ ಕೊಳಗೇರಿಯಲ್ಲಿ ಸ್ವಚ್ಛತೆಯ ಕಾರ್ಯ ಆರಂಭಿಸಿದೆ. ಈ ಕೆಲಸದಲ್ಲಿ ಆಗ ವಿದ್ಯಾರ್ಥಿಗಳಾಗಿದ್ದ ಮಾಜಿ ಶಾಸಕ ಸುಬ್ಬಾರೆಡ್ಡಿಯವರು, ಮಾಜಿ ಶಾಸಕ ಮುನಿವೆಂಕಟರೆಡ್ಡಿಯವರು, ಶಾಸನ ಸಭೆಯ ಸದಸ್ಯರೂ, ಪಿ.ಇ.ಎಸ್. ವಿದ್ಯಾಸಂಸ್ಥೆಗಳ ಸಂಸ್ಥಾಪಕರೂ ಆದ ಪ್ರೊ.ಎಂ.ಆರ್. ದೊರೆಸ್ವಾಮಿಯವರು ನೆರವಾದರು. ಜಯನಗರದ ಪ್ರತಿಷ್ಠಿತ ದಾಸರಕಾಲೋನಿಯ ಜನ ಈ ಜನರನ್ನು ಇಲ್ಲಿಂದ ಎತ್ತಂಗಡಿ ಮಾಡಿಸುವ ಪ್ರಯತ್ನ ಮಾಡುತ್ತಿದ್ದರು. ಕೊಳಚೆ ವಾತಾವರಣದಲ್ಲಿರುವ ಇವರನ್ನು ಊರ ಹೊರಗೆ ಓಡಿಸಿದರೆ, ಇವರು ಸುಧಾರಿಸುವುದಾದರೂ ಹೇಗೆ? ಸುಧಾರಿಸಿರುವ ಜನರೊಡನೆ ಇದ್ದರೆ ಇವರೂ ಕಾಲಕ್ರಮದಲ್ಲಿ ಬದಲಾವಣೆಯಾಗಬಹುದು ಎಂಬುದು ನನ್ನ ವಿಚಾರ. ಆದ್ದರಿಂದ ಅವರನ್ನೆಲ್ಲ ಅಲ್ಲಿ ಉಳಿಸಿಕೊಳ್ಳುವ ವಿಚಾರ ಮಾಡಿದೆ. ಆಗ ನಗರಾಭಿವೃದ್ಧಿ ಸಚಿವರಾಗಿದ್ದ ಟಿ. ಸುಬ್ರಹ್ಮಣ್ಯ ಅವರನ್ನು, ಟ್ರಸ್ಟ್ ಬೋರ್ಡ್‍ನ ಛೇರ್ಮನ್‍ರಾಗಿದ್ದ ವಿ.ಇ.ದೀನದಯಾಳು ನಾಯ್ಡು ಅವರನ್ನೂ ಭೇಟಿ ಮಾಡಿ ದಾಸರಕಾಲೋನಿಯ ಗುಡಿಸಲುಗಳನ್ನು ತೆಗೆದು ಹಾಕಿ ಅಲ್ಲಿ ಅವರಿಗೆ ವಾಸಕ್ಕೆ ಯೋಗ್ಯವಾದ ಮನೆಗಳನ್ನು ಕಟ್ಟಿಕೊಡಬೇಕೆಂದು ವಿನಂತಿಸಿಕೊಂಡೆ. ಆ ಕೊಳಚೆ ಕೋಟೆಯಲ್ಲಿದ್ದ ಜನರೂ ಅದಕ್ಕೆ ಒಪ್ಪಿಕೊಂಡರು. ತಾವಾಗಿಯೇ ಗುಡಿಸಲುಗಳನ್ನು ಕಿತ್ತು ಹಾಕಿ ತಾತ್ಕಾಲಿಕವಾಗಿ ಬೇರೆಡೆ ಗುಡಿಸಲನ್ನು ಕಟ್ಟಿಕೊಂಡರು. ಟ್ರಸ್ಟ್ ಬೋರ್ಡ್ ಪ್ರತಿ ಮನೆಗಳಿಗೂ ಒಂದು ಅಡಿಗೆ ಮನೆ, ಒಂದು ಮಲಗುವ ಕೊಠಡಿ, ಒಂದು ಸಂಡಾಸ್ ಕಟ್ಟಿಕೊಡಲು ಒಪ್ಪಿಕೊಂಡಿತು. ಆರು ತಿಂಗಳಲ್ಲಿ 58 ಮನೆಗಳು ತಯಾರಾದವು. ಈಗ ದಾಸರಕಾಲೋನಿ ತುಂಬ ಸುಧಾರಿಸಿದೆ. ಅಲ್ಲಿ ವಿದ್ಯಾವಂತರ ಸಂಖ್ಯೆಯೂ ಬೆಳೆದಿದೆ. ಆರ್ಥಿಕವಾಗಿಯೂ ಅವರು ಮುಂದೆ ಬಂದಿದ್ದಾರೆ. ಅದೇ ಸಮಯದಲ್ಲಿ ಮೈಸೂರು ರಸ್ತೆಯಲ್ಲಿರುವ ವಾಲ್ಮೀಕಿನಗರದಲ್ಲೂ ನಾನು ಸುಧಾರಣೆಯ ಕೆಲಸ ಆರಂಭಿಸಿದೆ. ವಾಲ್ಮೀಕಿನಗರದಲ್ಲಿ ಚರ್ಮದ ಕೆಲಸದಲ್ಲಿ ಬಹುಮಟ್ಟಿಗೆ ಎಲ್ಲ ಮನೆಯವರೂ ನಿರತರಾಗಿದ್ದರು. ಅವರಿಗಾಗಿ ಅಲ್ಲಿ ಒಂದು ಪಾದರಕ್ಷೆ ಘಟಕವನ್ನೂ ತೆರೆಯಲು ನಿರ್ಧರಿಸಿ, ಕೇಂದ್ರ ಸರ್ಕಾರಕ್ಕೆ ನೆರವಿಗಾಗಿ ಪತ್ರ ಬರೆದೆ. ಎರಡು ಲಕ್ಷ ರೂ.ಗಳನ್ನು ಅವರು ಒದಗಿಸಿದರು. ರಾಷ್ಟ್ರಾಧ್ಯಕ್ಷರಾಗಿದ್ದ ರಾಜೇಂದ್ರ ಪ್ರಸಾದರು ಮತ್ತು ರಾಜ ಪ್ರಮುಖರಾಗಿದ್ದ ಜಯಚಾಮರಾಜ ಒಡೆಯರ್ ಅವರು ಈ ಉದ್ಘಾಟನಾ ಸಮಾರಂಭಕ್ಕೆ ದಯಮಾಡಿಸಿದ್ದರು. ಚರ್ಮೋದ್ಯಮ ಕೆಲಸ ಆರಂಭವಾಯಿತು. ಉತ್ತಮವಾದ ಬೂಟುಗಳನ್ನೂ, ಚಪ್ಪಲಿಗಳನ್ನೂ ಇಲ್ಲಿಯ ಜನ ಉತ್ಪಾದನೆ ಮಾಡಿದರು. ಆದರೆ ಶನಿವಾರ ಬಟವಾಡೆ ಪಡೆದ ಜನ ಸೋಮವಾರ ಕೆಲಸಕ್ಕೆ ಚಕ್ಕರ್! ಕುಡಿಯುವುದಕ್ಕೆ ಕೈಯಲ್ಲಿ ಕಾಸಿಲ್ಲವೆಂದಾದ ಮೇಲೆಯೇ ಅವರಿಗೆ ಕೆಲಸಕ್ಕೆ ಹೋಗಬೇಕು ಎನಿಸುತ್ತಿತ್ತು. ಆದ್ದರಿಂದ ನಾನು ಅವರ ಮನೆಗಳಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸುವ ನಿರ್ಧಾರ ಮಾಡಿದೆ. ಬಟವಾಡೆಯ ದಿನ ಕಾರ್ಮಿಕರ ಕೈಗೆ 5, 10 ರೂ.ಗಳನ್ನು ಮಾತ್ರ ಕೊಡುತ್ತಿದ್ದೆ. ಹೀಗಾಗಿ ಎಲ್ಲರ ಮನೆಯಲ್ಲೂ ಇವರಿಗೆ, ಇವರ ಹೆಂಡತಿ ಮಕ್ಕಳಿಗೆ ಊಟ ಪ್ರತಿದಿನ ಸಿಗುವಂತಾಯ್ತು. ಕೆಲಸಕ್ಕೆ ತಪ್ಪಿಸಿಕೊಳ್ಳುವ ಪ್ರವೃತ್ತಿಯೂ ತಪ್ಪಿತು. ನಮ್ಮ ಸಂಸ್ಥೆ, ಸೇವೆಯ ಸಂಸ್ಥೆಯಾದ್ದರಿಂದ ನಮಗೆ ಲಾಭ ಮಾಡುವ ಉದ್ದೇಶವಿರಲಿಲ್ಲ. ಬೇರೆ ಕಡೆ ಸಿಗುತ್ತಿದ್ದ ಮಜೂರಿಗಿಂತ ಹೆಚ್ಚಿಗೆ ಮಜೂರಿಯನ್ನು ಈ ಕಾರ್ಮಿಕರಿಗೆ ಕೊಡುತ್ತಿದ್ದೆವು. ವಾಲ್ಮೀಕಿ ನಗರದ ಎಲ್ಲ ಮನೆಯ ಮಕ್ಕಳನ್ನು ಶಾಲೆಗೆ ಕಳುಹಿಸುವ ಯೋಜನೆ ಕೈಗೊಳ್ಳಲಾಯಿತು. ಈಗ ಆ ಹುಡುಗರೆಲ್ಲ ತಕ್ಕ ಮಟ್ಟಿಗೆ ವಿದ್ಯಾವಂತರಾಗಿ, ಸಂಪಾದನೆಯ ಮಾರ್ಗ ಹಿಡಿದಿದ್ದಾರೆ. ಅದು ಹರಿಜನ ಕಾಲೋನಿಯಾದ್ದರಿಂದಲೂ, ಬಡವರೇ ಬಹು ಮಂದಿ ಇದ್ದುದರಿಂದಲೂ ಕೊಳೆತ ಅಥವಾ ಬಲಿತ ತರಕಾರಿ, ಹಣ್ಣುಗಳನ್ನು ಅಲ್ಲಿ ಮಾರಲಾಗುತ್ತಿತ್ತು. ಇದನ್ನೂ ತಪ್ಪಿಸಿ ತಾಜಾ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಯಿತು. ದುಡಿಯುವ ಮಹಿಳೆಯರ ಮಕ್ಕಳನ್ನು ನೋಡಿಕೊಳ್ಳಲು ಒಂದು ಕ್ರಷ್ (ಶಿಶುಪಾಲನ ಕೇಂದ್ರ) ಏರ್ಪಡಿಸಲಾಯಿತು. ಆ ಮಕ್ಕಳಿಗೆ ಕಾಲ ಕಾಲಕ್ಕೆ ಹಣ್ಣಿನ ರಸ, ಹಾಲು ಕೊಡಲು ವ್ಯವಸ್ಥೆ ಮಾಡಲಾಯಿತು. ವಾಲ್ಮೀಕಿನಗರ ಈಗ ಬಹಳ ಮಟ್ಟಿಗೆ ಸುಧಾರಿಸಿದೆ. ಆದರೂ ಇನ್ನೂ ಆಗಬೇಕಾದ ಸುಧಾರಣೆಗಳು ಬೇಕಾದಷ್ಟಿವೆ. ಮೈಸೂರಿನಲ್ಲಿ ದಾಸಪ್ರಕಾಶ್ ಹತ್ತಿರ ಒಂದು Night Shelter' ಏರ್ಪಡಿಸಲಾಯಿತು. ಮಾರುಕಟ್ಟೆಯಲ್ಲಿ ಕೂಲಿ ಮಾಡುವ ಗಂಡಸರಿಗಾಗಿ ಈ ಯೋಜನೆ. ಇವರ ಕೆಲಸ ಬೆಳಗ್ಗೆ 6 ಘಂಟೆಯೊಳಗೆ ಆರಂಭವಾಗಬೇಕಾದ್ದರಿಂದ ಈ Night Shelter' ಮಾರುಕಟ್ಟೆಗೆ ಹತ್ತಿರವೇ ಇರಬೇಕಾದ್ದು ಅನಿವಾರ್ಯವಾಗಿತ್ತು. ಈ ಮೊದಲು, ಈ ಕೂಲಿಗಾರರು ರಾತ್ರಿ ರಸ್ತೆಬದಿಯಲ್ಲೇ ಮಲಗುತ್ತಿದ್ದರು. ಮಲ ವಿಸರ್ಜನೆಯನ್ನೂ ಅಲ್ಲೇ ಮಾಡುತ್ತಿದ್ದರು. ಇವರಿಗೆ ತಾವೂ ಗೌರವಯುತವಾಗಿ ಬದುಕಬೇಕೆಂಬ ಅರಿವುಂಟುಮಾಡುವುದಕ್ಕಾಗಿ ಈ `Night Shelter'. ಈ 'Night Shelter' ಧರ್ಮ ಛತ್ರವಲ್ಲ ಎಂಬುದನ್ನೂ ಮನವರಿಕೆ ಮಾಡಿಕೊಡುವುದಕ್ಕಾಗಿ ಅವರು ಪ್ರತಿದಿನ 10 ಪೈಸೆ ಕೊಡಬೇಕಾಗಿತ್ತು. ಹತ್ತು ಘಂಟೆಯ ಮೇಲೆ ಬರುವವರಿಗೆ ಅಲ್ಲಿ ಪ್ರವೇಶವಿರಲಿಲ್ಲ. ಪ್ರತಿಯೊಬ್ಬರಿಗೂ ಹಾಸಲು ಒಂದು ಚಾಪೆ, ಹೊದೆಯಲು ಒಂದು ಬೆಡ್‍ಷೀಟ್, ಒಂದು ತಲೆದಿಂಬನ್ನು ಒದಗಿಸಲಾಗುತ್ತಿತ್ತು. ಇದರ ಮೇಲ್ವಿಚಾರಣೆಗೆ ಒಬ್ಬ ಕಾರ್ಯಕರ್ತ ಅಲ್ಲಿರುತ್ತಿದ್ದ. ಬೆಳಗ್ಗೆ ಎದ್ದೊಡನೆ ಹಲ್ಲುಜ್ಜಲು ಹಲ್ಲುಪುಡಿ ಇರಿಸಲಾಗಿತ್ತು. ಸ್ನಾನ ಮಾಡಲು ನೀರಿರುತ್ತಿತ್ತು. ಸಾಮೂಹಿಕ ಪ್ರಾರ್ಥನೆ ಆದಮೇಲೆ ಅವರಿಗೆ ಒಂದು ಬಟ್ಟಲು ಹಾಲನ್ನೂ ನೀಡಲಾಗುತ್ತಿತ್ತು.
ಭೂದಾನದಿಂದ ಬಂದ 300 ಎಕರೆ ಜಮೀನನ್ನು ಹಂಚಲು ಪಾವಗಡ ತಾಲ್ಲೂಕಿನ ರಂಗ ಸಮುದ್ರದಲ್ಲಿ ಸರ್ವೋದಯ ಕಾರ್ಯಕರ್ತರೆಲ್ಲ ನೆರೆದಿದ್ದೆವು. ಉಗಾದಿಯ ದಿನ ಒಂದು ದುರಂತ ನಡೆಯಿತು. ರಂಗ ಸಮುದ್ರದಲ್ಲಿ ಒಂದು ಕೊಳ ಇತ್ತು. ಅಲ್ಲಿಂದಲೇ ಊರಿನವರೆಲ್ಲ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು. ಉಗಾದಿಯ ದಿನ ಮಧ್ಯಾಹ್ನ 12 ಘಂಟೆಗೆ ಒಬ್ಬ 9 ವಯಸ್ಸಿನ ಹುಡುಗಿ ಹೊಸ ಬಟ್ಟೆ ತೊಟ್ಟು ಕೊಡದಲ್ಲಿ ನೀರು ಮೊಗೆಯಲು ಕೊಳಕ್ಕೆ ಬಂದಳು. ಆ ಹುಡುಗಿ ನೀರು ತೆಗೆಯುವುದರಲ್ಲಿ ಮಗ್ನಳಾಗಿದ್ದಾಗ, ಆಕೆಯ 6 ವರ್ಷದ ತಮ್ಮ ಅಲ್ಲಿಗೆ ಓಡೋಡಿ ಬಂದವನೇ ಅಕ್ಕನ ಬಳಿಗೆ ಹೋದವನು ನೀರಿನಲ್ಲಿ ಜಾರಿಬಿದ್ದ. ಅವನನ್ನು ಸಂರಕ್ಷಿಸಲು ಹೋದ ಹುಡುಗಿ ಅವಳೂ ನೀರು ಪಾಲಾದಳು. ಈ ದುರಂತ ಯಾರ ಗಮನಕ್ಕೂ ಬರಲಿಲ್ಲ. ಸಿಲಲಾಯಿಡ್ ಬೊಂಬೆಗಳಂತೆ ಇದ್ದ ಎರಡೂ ಹೆಣಗಳು ಕೊಳದಲ್ಲಿ ತೇಲಿದವು. ಜನರೆಲ್ಲ ಮಮ್ಮಲ ಮರುಗಿದರು. ಭೂಮಿ ಹಂಚಿಕೆ ಮುಗಿದ ಮೇಲೆ, ರಂಗಸಮುದ್ರದ ಜನರ ಪರಿಶ್ರಮದಿಂದ, ಈ ಮೃತ್ಯುಕೂಪವನ್ನು ಮುಚ್ಚಿಸಿ, ಒಂದು ಸೇದುವ ಬಾವಿಯನ್ನು ನಿರ್ಮಿಸಿದೆವು. ಈಗ ಈ ಎಂಟು ರಾಟೆಯ ಬಾವಿ ಊರಿಗೆಲ್ಲ ಕುಡಿಯುವ ನೀರನ್ನು ಒದಗಿಸುತ್ತಿದೆ. ಪ್ರತಿಯೊಬ್ಬರ ಜೀವನದಲ್ಲೂ, ಜನರನ್ನು ಕಾಡುವ ಅನೇಕ ಸಮಸ್ಯೆಗಳು ಆಗಾಗ ಎದುರಾಗುತ್ತವೆ. ಅವುಗಳನ್ನು ಕಾಣುವ ಕಣ್ಣು ಬೇಕು, ತುಡಿತದ ಹೃದಯ ಬೇಕು, ಆ ಸಮಸ್ಯೆಯನ್ನು ಜನಶಕ್ತಿ ನಿರ್ಮಾಣ ಮಾಡುವ ಮೂಲಕ ಬಗೆಹರಿಸುವ ಛಲಬೇಕು. ಯುವಕರಲ್ಲಿ ಇಂತಹ ಸಹೃದಯತೆ ಬೆಳೆದಲ್ಲಿ, ನಮ್ಮ ಸಮಾಜವನ್ನು ಕಾಡುವ ಎಲ್ಲ ಸಮಸ್ಯೆಗಳನ್ನು ನಾವೇ ಬಗೆಹರಿಸಬಹುದು.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |