Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಮಹಿಳೆ ಮತ್ತು ಶೋಷಣೆ

7/16/2017

0 Comments

 
ಪ್ರಸ್ತಾವನೆ:
ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆ ಪುರುಷನಿಗೆ ಸಮಾನವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದಾಳೆ. ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ಸಾಕ್ಷಿಯಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಮಹಿಳೆ ಪುರುಷನನ್ನೇ ಮೀರಿ ನಿಂತಿದ್ದಾಳೆ. 1991ರ ಆರ್ಥಿಕ ನೀತಿಗಳಲ್ಲಿನ ಬದಲಾವಣೆಯಿಂದಾಗಿ ಮಹಿಳೆ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿಯೂ ತನ್ನನ್ನು ಕಂಡುಕೊಂಡಿದ್ದಾಳೆ, ಅದು ಕೇವಲ ಉದ್ಯೋಗವನ್ನಷ್ಟೇ ಸೃಷ್ಠಿಸಿಲ್ಲ, ಜೊತೆಗೆ ಮಹಿಳೆ ಪುರುಷನಿಗೆ ಸಮಾನವಾಗಿ ಯಾವುದೇ ಕ್ಷೇತ್ರದಲ್ಲಿ, ಯಾವುದೇ ಸಮಯದಲ್ಲಿ ಕೆಲಸ ಮಾಡಲು ಅರ್ಹಳು ಎಂಬುದನ್ನು ನಿರೂಪಿಸಲಾಗಿದೆ. ಪ್ರಮುಖವಾಗಿ ಸಾಫ್ಟ್‍ವೇರ್ ಉದ್ಯಮಗಳಲ್ಲಿ ಮಹಿಳೆಯರ ಪಾಲು ನೋಡಿದಾಗ ಆಶ್ಚರ್ಯವಾಗಬಹುದು.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. 48.58ರಷ್ಟು ಇರುವ ಮಹಿಳೆಯರು ಶೇ.50ಕ್ಕಿಂತ ಹೆಚ್ಚಿಗೆ ಅಸಂಘಟಿತ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. 2001ರ ಜನಗಣತಿಯ ಪ್ರಕಾರ ಒಟ್ಟು ಮಹಿಳಾ ಕಾರ್ಮಿಕರಲ್ಲಿ ಶೇ.41.51ರಷ್ಟು ವ್ಯವಸಾಯಗಾರರು, ಶೇ.50.35ರಷ್ಟು ಕೃಷಿ ಕಾರ್ಮಿಕರು ಮತ್ತು ಶೇ.8.14ರಷ್ಟು ಕೈಗಾರಿಕೆ ಮತ್ತು ಸೇವಾವಲಯದಲ್ಲಿ ಕಂಡುಬಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಗುಂಪುಗಳ ಮುಖಾಂತರ ಸಶಕ್ತರಾಗುತ್ತಿದ್ದಾರೆ. ಎಲ್ಲಾ ರಂಗಗಳಲ್ಲಿ ಮಹಿಳೆ ಗುರುತಿಸಿಕೊಂಡಿರುವುದು ಜಾಗತೀಕರಣದ ಪರಿಣಾಮವೆಂದೇ ಹೇಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆಯೇನು ಇಲ್ಲ ಎಂಬಷ್ಟರ ಮಟ್ಟಿಗೆ ತೋರಿಸಿಕೊಂಡಿದ್ದರೂ ಸಹ ಹಲವಾರು ದೌರ್ಜನ್ಯಗಳು ಮಹಿಳೆಯರನ್ನು ದಿನವೂ ಕಾಡುತ್ತಿವೆ. ಸಂವಿಧಾನದ 15 (3) ನೆಯ ವಿಧಿಯು ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ಕಲ್ಟಿಸಿಕೊಡುತ್ತದೆ. ಈ ವಿಧಿಯನ್ವಯವೇ ವರದಕ್ಷಿಣಿ ತಡೆ ಕಾಯ್ದೆ, 2005 ಮತ್ತು 2008ರ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆಯುವಲ್ಲಿ ಕಾಯ್ದೆಯನ್ನು ರೂಪಿಸಲಾಗಿದೆ. 23ನೆಯ ವಿಧಿಯ ಅಡಿಯಲ್ಲಿ ಮಹಿಳೆಯರ ಮೇಲೆ ಶೋಷಣೆ ಹಾಗೂ ಲೈಂಗಿಕ ದೌರ್ಜನ್ಯ ನಡೆಸುವುದನ್ನು ತಡೆಯಲಾಗಿದೆ ಎಂಬ ಕಾನೂನುಗಳು ಕೇವಲ ದಾಖಲೆ ಪುಸ್ತಕಗಳಲ್ಲಿವೆಯೇ ಹೊರತು ಕಾರ್ಯಾಚರಣೆಗೆ ಬಂದಿಲ್ಲ, ವಾಸ್ತವದಲ್ಲಿ ಕಾನೂನುಗಳು ಅರ್ಥಪೂರ್ಣವಾಗಿ ಬಳಕೆಯಲ್ಲಿ ಇಲ್ಲದೇ ಇರುವುದರಿಂದ ರುಚಿಕ, ಆರುಷಿ ಮತ್ತು ಜೆಸ್ಸಿಕಾರಂತಹ ಮುಗ್ಧ ಬಾಲೆಯರ ಕೊಲೆ ಪ್ರಕರಣದ ಅಪರಾಧಿಗಳಿಗೆ ನ್ಯಾಯಸಮ್ಮತ ಶಿಕ್ಷೆಯಾಗಿದೆಯಾ ಎಂಬ ಪ್ರಶ್ನೆ ನಮ್ಮ ಮುಂದಿದೆ. ಅವರ ಪ್ರಕರಣಗಳಲ್ಲಿ ಭಾಗಿಯಾದವರಿಗೆ ನಮ್ಮ ಸರ್ಕಾರಗಳು ಮುಂಬಡ್ತಿ ಕೊಡುತ್ತಿವೆಯಾದರೆ ಕಾನೂನುಗಳು ರೂಪಿಸಿಯಾದರೂ ಫಲವೇನು ಎಂಬ ಪ್ರಶ್ನೆ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಕಾಯ್ದೆ ಕಾನೂನುಗಳು ಅಪರಾಧಿಗಳನ್ನು ರಕ್ಷಿಸಿ ನಿರಪರಾಧಿಗಳನ್ನು ಶಿಕ್ಷಿಸುವ ಸಲುವಾಗಿ ಸಬಲರು ಮಾಡಿಕೊಂಡಂತಹ ನಿಯಮಗಳೇ ಹೊರತು ಸಂರಕ್ಷಿಸುವ ಕಾನೂನುಗಳಲ್ಲ ಎಂದು ಹಲವರ ವಾದವಾಗಿದೆ. ಇದರಿಂದಾಗಿ ಮಹಿಳೆಯು ದಿನಬೆಳಗಾದರೆ ಒಂದಲ್ಲಾ ಒಂದು ಶೋಷಣೆಗೆ ಒಳಗಾಗುತ್ತಿದ್ದಾಳೆ ಅವಳನ್ನು ಕಾನೂನು  ಹೇಗೆ ರಕ್ಷಿಸುತ್ತದೆ ಎಂಬುದನ್ನು ಪ್ರಸ್ಥುತಪಡಿಸುವುದೇ ಈ ಲೇಖನದ ಪ್ರಮುಖ ಉದ್ದೇಶವಾಗಿದೆ.
 
ಶೋಷಣೆಯ ಪರಿಕಲ್ಪನೆ:
ಶೋಷಣೆ ಎಂಬ ಪದವು ಎಲ್ಲ್ಲಾ ನೆಲೆಯಲ್ಲಿಯೂ ಜೀವಂತವಾಗಿದ್ದು ವಿಶಾಲವಾದ ರೂಪ ಪಡೆದುಕೊಂಡಿದೆ. ಇಲ್ಲಿ ಶೋಷಣೆ ಎಂದರೆ ಒಬ್ಬ ವ್ಯಕ್ತಿ ಅಥವಾ ಗುಂಪು ಇನ್ನೊಬ್ಬ ವ್ಯಕ್ತಿ ಅಥವಾ ಗುಂಪನ್ನು ದುರ್ಬಲಗೊಳಿಸುವುದಾಗಿದೆ. ಇದು ಗಂಡು ಹೆಣ್ಣನ್ನು ದುರ್ಬಲಗೊಳಿಸುವ ಕಾರ್ಯಕ್ಕೂ ಅನ್ವಯವಾಗುತ್ತದೆ. ಪ್ರಪಂಚದಲ್ಲಿ ಪುರುಷ ಮಾತ್ರ ಮಹಿಳೆಯನ್ನು ಶೋಷಣೆ ಮಾಡುತ್ತಿಲ್ಲ. ವಿದ್ಯಾವಂತ ಮಹಿಳೆಯರಿಂದ ಅವಿದ್ಯಾವಂತ ಮಹಿಳೆಯರ ಮೇಲೆ, ಶ್ರೀಮಂತ ಮಹಿಳೆಯರಿಂದ ಬಡ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಹೊಸತೇನಲ್ಲ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರಾಜಕೀಯದಲ್ಲಿ ಮತ್ತು ಸಮಾಜದಲ್ಲಿರುವ ಅವಕಾಶಗಳನ್ನು ನಿರಾಕರಿಸುವುದೇ ಮಹಿಳಾ ಶೋಷಣೆ ಆಗಿದೆ. ಇವುಗಳಲ್ಲದೇ ಮಹಿಳೆ ಲೈಂಗಿಕವಾಗಿಯೂ ಪುರುಷರಿಂದ ಶೋಷಣೆ ಅನುಭವಿಸುತ್ತಿದ್ದಾಳೆ.
 
ಮಹಿಳೆ, ಸಮಾಜ ಮತ್ತು ಶೋಷಣೆಗಳು:
ಮಹಿಳಾ ಶೋಷಣೆಗಳು, ದೌರ್ಜನ್ಯಗಳು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಕುಟುಂಬದಿಂದ ಹಿಡಿದು, ಹೊಲ-ಗದ್ದೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಮತ್ತು ಸರ್ಕಾರೇತರ ಕಛೇರಿಗಳಲ್ಲಿ ಕಂಡು ಬರುತ್ತವೆ, ಕುಟುಂಬದಲ್ಲಿ ಗಂಡ, ಮಾವ, ಮೈದುನ, ಅತ್ತೆ ಮತ್ತು ನಾದಿನಿಯರಿಂದ ಸೊಸೆಯ ಮೇಲೆ ದೌರ್ಜನ್ಯ, ಜಮೀನ್ದಾರಿ ಗಂಡಸರಿಂದ ಕೆಲಸದ ಮಹಿಳಾ ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಂತೆಗಳಲ್ಲಿ ಅಪರಿಚಿತರಿಂದ ಲೈಂಗಿಕ ಕಿರುಕುಳ, ಕಛೇರಿಗಳಲ್ಲಿ ಮ್ಯಾನೇಜರ್ ಮತ್ತು ಸಹ ಕೆಲಸಗಾರರಿಂದ ಲೈಂಗಿಕ ಶೋಷಣೆಗಳು ನಡೆಯುತ್ತವೆ. ಕೆಲವು ಮಹಿಳೆಯರು ಇವುಗಳ ವಿರುದ್ಧ ಪ್ರತಿಭಟಿಸಿದರೆ, ಕೆಲವು ಮಹಿಳೆಯರು ಮರ್ಯಾದೆಗೆ ಅಂಜಿ ಸಹಿಸಿಕೊಳ್ಳುತ್ತಿದ್ದಾರೆ.
 
ವರದಕ್ಷಿಣೆ ಹಿಂಸೆ:
ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಹಿಂಸೆಗಳು ಎಲ್ಲಾ ಸಮುದಾಯ ಮತ್ತು ಎಲ್ಲಾ ಪ್ರದೇಶಗಳಲ್ಲಿ ಕಂಡು ಬರುತ್ತಿವೆ. ಹಿಂದಿನ ಕಾಲದಲ್ಲಿ ಮದುವೆಯ ಸಂದರ್ಭದಲ್ಲಿ ಅಥವಾ ನಂತರ ಪ್ರೀತಿಯಿಂದ ಕೊಡುತ್ತಿದ್ದ ಉಡುಗೊರೆಗಳು ಇಂದು ವರದಕ್ಷಿಣೆಯಾಗಿ ಮಾರ್ಪಾಡಾಗಿ ವಸೂಲಿ ಮಾಡುವಲ್ಲಿ ಸಂಬಂಧಗಳನ್ನು ಲೆಕ್ಕಿಸದೇ ನಿರ್ದಾಕ್ಷಿಣ್ಯ ದಾರಿ ತುಳಿಯುತ್ತಿವೆ. ಮದುವೆಗೆ ಮುಂಚಿತವಾಗಿ ಪ್ರಾರಂಭವಾದ ಕಾಟ ಸಂಸಾರ ನಡೆಸಿ ಹತ್ತಾರು ವರ್ಷಗಳಾದರೂ ಮುಂದುವರೆಯುತ್ತಿವೆ. ವರದಕ್ಷಿಣೆಯ ವ್ಯಾಪ್ತಿಗೆ ಕೇವಲ ಹಣವೊಂದೇ ಸೇರದೆ, ಒಡವೆ, ಜಮೀನು, ಮನೆ, ವಾಹನ, ಗೃಹೋಪಯೋಗಿ ವಸ್ತುಗಳು, ಸರ್ಕಾರಿ ಕೆಲಸ, ಬೆಲೆ ಬಾಳುವ ಬಟ್ಟೆಗಳು ಮತ್ತು ಹುಟ್ಟುವ ಮಕ್ಕಳಿಗೆ ಬಟ್ಟೆಗಳು ಇತ್ಯಾದಿ ಸೇರಿಕೊಳ್ಳುತ್ತವೆ. ಇವುಗಳನ್ನು ಪೂರೈಸಲು ಹೆಣ್ಣು ಹೆತ್ತ ತಂದೆ ತಾಯಿಗಳು ತಮ್ಮ ಮನೆ, ಜಮೀನುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಬಿ.ಜೆ.ಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿದ್ದ ಮೃದುಲಾ ಸಿನ್ಹಾರ ಮಾತುಗಳನ್ನು ಕೇಳಿದಾಗ ವರದಕ್ವಿಣೆ ತಪ್ಪು ಆದರೆ ಏನು ಮಾಡುವುದು ಅಳಿಯನಿಗೆ ಕೊಟ್ಟಿದ್ದೇನೆ ಮತ್ತು ಮಗನಿಗೆ ತೆಗೆದುಕೊಂಡಿದ್ದೇನೆ ಎನ್ನುವ ಮಾತು ಎಷ್ಟು ಸೂಕ್ತವೆನಿಸುತ್ತದೆ. ಅದಕ್ಕಾಗಿ ಮದುವೆ ಇತ್ಯಾದಿ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವದನ್ನು ಕುಟುಂಬಕ್ಕೆ ಬಿಡಬೇಕು. ಪ್ರೀತಿಸಿ ಅಂತರ್ ಜಾತಿ ವಿವಾಹವಾದರೆ ವರದಕ್ಷಿಣೆ ಸಮಸ್ಯೆ ಬರುವದಿಲ್ಲವೆಂಬುದು ಹಲವರ ಅಭಿಪ್ರಾಯವಾಗಿದೆ. ಆದರೆ ಇತ್ತಿಚೀನ ದಿನಗಳಲ್ಲಿ ಅಂತಹ ಮದುವೆಗಳಿಗೂ ಸಹ ವರದಕ್ಷಿಣೆ ಭೂತ ಕಾಡ ಹತ್ತಿದೆ. ಹುಡುಗನಿಗೆ ಬೇಕಾಗಿರಲಿಕ್ಕಿಲ್ಲಾ, ಆದರೆ ಹುಡುಗನ ತಂದೆ ತಾಯಿಯರು ಸುಮ್ಮನಿರುತ್ತಾರೆಯೇ ಎಂಬ ಪ್ರಶ್ನೆ ನಮ್ಮ ಮುಂದಿದೆ.
 
ಮಾಧ್ಯಮದಲ್ಲಿ ಮಹಿಳೆಯರ ಚಿತ್ರಣ:
ಮಾಧ್ಯಮಗಳು ಮಹಿಳೆಯನ್ನು ವಸ್ತುರೂಪಿಯಾಗಿಸಿಕೊಂಡು ಬೃಹತ್ ಪ್ರಮಾಣದಲ್ಲಿ ಶೋಷಣೆ ನಡೆಸುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಮಾಧ್ಯಮದಲ್ಲಿ ದುಡಿಯುತ್ತಿರುವ ಮಹಿಳೆಯರ ಮೇಲೆಯೂ ಶೋಷಣೆ ನಡೆಯುತ್ತಿರುವ ಸಂಗತಿ ತಿಳಿದೇ ಇದೆ. ಮಾಧ್ಯಮಗಳಲ್ಲಿ ಬಹುತೇಕ ಮಹಿಳೆಯರನ್ನು ಸಂವೇದನಾ ರಹಿತ, ಸ್ವ-ಹಿತಾಸಕ್ತಿಯ ಒಳಿತನ್ನು ಬಯಸದ ವ್ಯಕ್ತಿಯನ್ನಾಗಿ ಚಿತ್ರಿಸಲಾಗುತ್ತಿದೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ವೈಭವೀಕರಿಸುವ ಮಹಿಳೆಯನ್ನು ಹೆಂಡತಿ, ತಾಯಿ ಹಾಗೂ ಆಶ್ರಿತಳಂತೆ ಚಿತ್ರೀಕರಿಸುವುದನ್ನು ಕಂಡಂತೆ ಅವಳನ್ನು ಸಾಮಾಜಿಕ ವ್ಯವಸ್ಥೆಯ ಬಹುಮುಖ್ಯ ಅಂಗವೆಂಬ ಚಿತ್ರಣ ಇಲ್ಲವೇ ಇಲ್ಲ ಎನ್ನಬಹುದು. ಹಾಗೆಯೇ ಮಹಿಳೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ದಬ್ಬಾಳಿಕೆ ವಿರುದ್ದ ಸಿಡಿದೇಳುವ, ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಹಾಗೂ ನ್ಯಾಯೋಚಿತ ತೀರ್ಮಾನಗಳನ್ನು ತೆಗೆದುಕೊಳ್ಳುವ ದಿಟ್ಟ ಹೆಣ್ಣನ್ನಾಗಿ ಚಿತ್ರಸುವುದು ಅತ್ಯಂತ ವಿರಳ. ಮಹಿಳೆಯನ್ನು ಕೇವಲ ಕಾಮದ ಗೊಂಬೆಯನ್ನಾಗಿ ಚಿತ್ರಿಸುವ ಜಾಹೀರಾತು ಮಾಧ್ಯಮಗಳಂತೂ ನೇರವಾಗಿ ಮಹಿಳಾ ವಿರೋಧಿ ಎನ್ನಬಹುದು.
 
ಲೈಂಗಿಕ ಶೋಷಣೆಯ ಪ್ರಮುಖ ನಿದರ್ಶನಗಳು:
ಮಹಿಳೆಯರ ಮೇಲಿನ ಶೋಷಣೆ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅಡುಗೆ ಮನೆಯಿಂದ ಹಿಡಿದು ಅಧಿಕಾರ ವರ್ಗದ ಎಲ್ಲ್ಲಾ ಕ್ಷೇತ್ರಗಳಿಗೂ ಇದರ ಛಾಪು ಆವರಿಸಿಕೊಂಡಿದೆ. `ಆಡು ಮುಟ್ಟದ ಸೊಪ್ಪಿಲ್ಲ ಮಹಿಳೆಗೆ ಲೈಂಗಿಕ ಶೋಷಣೆ ನೀಡದ ಕ್ಷೇತ್ರವಿಲ್ಲ ಎನ್ನುವಂತಾಗಿದೆ. ಕೆಲವು ಲೈಂಗಿಕ ಶೋಷಣೆಯ ನಿದರ್ಶನಗಳನ್ನು ಈ ಕೆಳಗಿನಂತೆ ನೋಡಬಹುದು.

ಜನರನ್ನು ರಕ್ಷಿಸಬೇಕಾದ ಪೊಲೀಸರು ಭಕ್ಷಕರಾದಾಗ ಹೇಗಿರುತ್ತದೆ ಎಂಬ ನಿದರ್ಶನ ಇಲ್ಲಿದೆ. 1970 ರಲ್ಲಿ 16 ವರ್ಷದ ಮಧುರ ಎಂಬ ಯುವತಿ ಪೊಲೀಸರ ಅತ್ಯಾಚಾರಕ್ಕೆ ಒಳಗಾಗಿದ್ದಳು. ಕೋರ್ಟಿನಲ್ಲಿ ಅಪರಾಧಿಯನ್ನು ಬಿಡುಗಡೆ ಮಾಡಲಾಯಿತು. ಈ ಪ್ರಕರಣದಿಂದಾಗಿ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ಮಾಡಲಾಯಿತು (ಎನ್.ಗಾಯಿತ್ರಿ, 1996).

1980ರಲ್ಲಿ 20 ವರ್ಷದ ಮಾಯಾತ್ಯಾಗಿ ಎಂಬ ವಿವಾಹಿತ ಮಹಿಳೆಯನ್ನು ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪೇದೆಯೊಬ್ಬ ಅತ್ಯಾಚಾರ ಮಾಡುವಾಗ ತಡೆಯಲು ಬಂದ ಪತಿಯನ್ನು ಗುಂಡಿಟ್ಟು ಕೊಂದು, ಆಕೆಯು ಡಕಾಯಿತ ಗುಂಪಿಗೆ ಸೇರಿದವಳೆಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈ ಪ್ರಕರಣ ಸುಪ್ರಿಂ ಕೋರ್ಟಿನಲ್ಲಿರುವುದನ್ನು ಮಾತ್ರ ಇಲ್ಲಿ ಸ್ಮರಿಸಬಹುದು.

ಬಿಹಾರದ ಸಸಾರಂ ಜೈಲಿನಲ್ಲಿ 35 ವಯಸ್ಸಿನ ಜಜ್ಮಾಖತೂನ ಎಂಬ ಮಹಿಳಾ ವಿಚಾರಣಾಧೀನ ಖೈದಿಯ ಮೇಲೆ ಜೈಲಿನ ಸಿಬ್ಬಂದಿಯವರೇ ಅತ್ಯಾಚಾರವೆಸಗಿದ್ದಾರೆ. ಗರ್ಭಿಣಿಯಾಗಿ ಅವಳು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು, ಅದೇ ಜೈಲಿನ ಪುರುಷರ ವಾರ್ಡಿನಲ್ಲಿದ್ದ ಅವಳ ಪತಿ ಆ ಮಗುವಿನ ತಂದೆ ನಾನಲ್ಲ, ಏಕೆಂದರೆ ನಾನು ನನ್ನ ಪತ್ನಿಯೊಂದಿಗೆ ಹಲವಾರು ವರುಷಗಳಿಂದ ಲೈಂಗಿಕ ಸಂಪರ್ಕ ಹೊಂದಿಲ್ಲವೆಂದು ಹೇಳುತ್ತಾನೆ ಇದಕ್ಕೆ ಇನ್ನೂ ಉತ್ತರ ದೊರೆತಿಲ್ಲ.

2000ರಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಸುರಪೂರ ತಾಲ್ಲೂಕಿನ ಹಳ್ಳಿಯೊಂದರ 16ರ ಹರೆಯದ ಸುಜಾತ ಎಂಬ ದಲಿತ ಬಡ ವಿಧ್ಯಾರ್ಥಿನಿ ಅನಾರೋಗ್ಯದ ನಿಮಿತ್ತ ರಕ್ತ ಪರೀಕ್ಷೆಗೆಂದು ಹೋದಾಗ ರಕ್ತ ಪರೀಕ್ಷಿಸುವನಿಂದಲೇ ಅತ್ಯಾಚಾರಕ್ಕೆ ಒಳಗಾದಳು. ನ್ಯಾಯವನ್ನು ಕೋರಿ ಕೋರ್ಟಿನ ಮೆಟ್ಟಿಲು ಹತ್ತಿದಳು. ನ್ಯಾಯ ದೊರಕದೆ ಆಕೆ ಇದುವರೆಗೂ ಅವಿವಾಹಿತಳಾಗಿಯೇ ಜೀವನ ಕಳೆಯುತ್ತಿದ್ದಾಳೆ.

ಕೊಪ್ಪಳ ಜಿಲ್ಲೆಯ ಕುದುರೆ ಮೊತಿ ಎಂಬ ಗ್ರಾಮದಲ್ಲಿ ಒಬ್ಬ ಸ್ವಾಮಿ ಆ ಗ್ರಾಮದ ಶಾಲಾ ಶಿಕ್ಷಕರ ಪತ್ನಿ ತನಗೆ ದೊರೆಯಲಿಲ್ಲವೆಂದು ಆಕೆಯನ್ನು ನಗ್ನಳನ್ನಾಗಿ ಊರಲ್ಲಿ ಮೆರವಣಿಗೆ ಮಾಡಿಸಿದನು. ರಾಜಕೀಯ ಪ್ರಭಾವದಿಂದಾಗಿ ಸ್ವಾಮಿಯು ಶಿಕ್ಷೆಯಿಲ್ಲದೆ ಮೆರೆದನು. ಹಾಗೆಯೇ ತಿರುವನಂತಪುರದ ಭೀಮಪಲ್ಲಿಯಲ್ಲಿ ನಡೆದ ಸುಲೋಶಿ ಬೀವಿಯ ಪ್ರಕರಣ ಧರ್ಮದ ಹೆಸರಿನಲ್ಲಾದ ಅತ್ಯಾಚಾರಕ್ಕೆ ಇನ್ನೊಂದು ಉದಾಹರಣೆಯಾಗಿದೆ.

1999ರಲ್ಲಿ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನಡೆದಿದ್ದು, ಮೇಧಾ ಕೋತ್ವಾಲ್ ಮತ್ತು ಇತರ ಸಮಾಜಕಾರ್ಯಕರ್ತರು ಸೇರಿ ಸುಪ್ರಿಂ ಕೋರ್ಟ್‍ಗೆ ಮೊರೆ ಹೋಗಿದ್ದರು. ಈ ಪ್ರಕರಣದಿಂದಾಗಿ ಕೋರ್ಟಿನ ಆದೇಶವನ್ನು ಭಾರತದ ಎಲ್ಲಾ ಕಡೆಗೂ ಜಾರಿಗೆ ತರಬೇಕೆಂದು ತೀರ್ಮಾನಿಸಲಾಯಿತು.

ಕರ್ನಾಟಕದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪುರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಗೆ ಅದೇ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೀಡುತ್ತಿರುವ ಕಿರುಕುಳ ತಾಳಲಾರದೇ ದಿನಾಂಕ 4.4.2007ರಂದು ಆತನ ಮನೆ ಎದುರಿಗೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ನಾಲ್ಕಾರು ದಿನಗಳ ನಂತರ ಮರಣ ಹೊಂದಿದಳು. ಇದರಿಂದ ಆತನ ಮೇಲೆ ಯಾವುದೇ ಶಿಕ್ಷೆ ಆಗಲಿಲ್ಲ (ಸಂಯುಕ್ತ ಕರ್ನಾಟಕ 2007. ಪುಟ 1-7).

ಅಮರ ಅಸ್ಸಾಂ ದಿನ ಪತ್ರಿಕೆಯ ಉಪಸಂಪಾದಕಿ ಸಬಿತಾ ಲಹ್ಕರ್ ಅದೇ ಪತ್ರಿಕೆಯ ಸಂಪಾದಕ ಹೋಮನ್ ಬೋಗೋ ಹೇನ್ ಅವರು ತಮ್ಮ ಅಧಿಕಾರದ ದುರುಪಯೋಗದಿಂದ ತಮ್ಮೊಂದಿಗೆ ಲೈಂಗಿಕ ಸಂಬಂಧ ಬೆಳೆಸಲು ಎರಡು ವರ್ಷಗಳ ಅವಧಿಯಲ್ಲಿ ಹಲವು ಬಾರಿ ಒತ್ತಾಯಿಸಿದ್ದಾರೆ. ಈ ಅನೈತಿಕ ಸಂಬಂಧಕ್ಕೆ ಪ್ರತಿಯಾಗಿ ಸಂಬಳ ಹೆಚ್ಚಿಸುವ ಹಾಗೂ ಬಡ್ತಿ ನೀಡುವ ಆಮಿಷಗಳನ್ನು ಒಡ್ಡಿದರೆನ್ನಲಾಗಿದೆ. ಅವನ ಕಿರುಕುಳವನ್ನು ಸಹಿಸಿಕೊಂಡಿದ್ದ ಆ ಮಹಿಳೆಯ ಸಹನೆ ಮಿತಿಮೀರಿದಾಗ ಹುದ್ದೆಗೆ ರಾಜೀನಾಮೆ ನೀಡಿದಳು (ದಿಕ್ಸೂಚಿ ನವೆಂಬರ್. 2003). ಶಕುಂತಲಾ ಸುಪ್ರಿಯಾ ಎಂಬ ಮಹಿಳೆ 1984-88ರವರೆಗೆ ಜೈ ರಾಜಸ್ಥಾನ ಎಂಬ ಹಿಂದಿ ಪತ್ರಿಕೆಯಲ್ಲಿ ಜೈಪುರದಲ್ಲಿ ಕೆಲಸ ಮಾಡುತ್ತಿದ್ದು, ಸಂಪಾದಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದರೆ, ವರ್ಷಾ ಪಾಟೀಲ್ ಎಂಬ ಯುವತಿ ನಾಗಪುರದ ಲೋಕಮತ್ ಎಂಬ ಮರಾಠಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಳು. ಅವಳು ಸಹೋದ್ಯೋಗಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು.

ಈ ಮೇಲಿನ ಎಲ್ಲಾ ಘಟನೆಗಳು ಭಾರತದಲ್ಲಿ ಮಹಿಳೆಯ ವಿರುದ್ದ ನಡೆದ ಲೈಂಗಿಕ ಕಿರುಕುಳಗಳಿಗೆ ಮೂಕ ಸಾಕ್ಷಿಗಳಾಗಿವೆ. ಲೈಂಗಿಕ ಕಿರುಕುಳವನ್ನು ತಡೆಯಲು ಯಾವುದೇ ಅಸ್ತ್ರವನ್ನು ಜಾರಿಗೆ ತಂದರು ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
 
ಲೈಂಗಿಕ ಶೋಷಣೆಯ ಸಮೀಕ್ಷೆಗಳು:
ಭಾರತದಲ್ಲಿ ಪ್ರತಿ 54 ನಿಮಿಷಕ್ಕೆ ಒಬ್ಬ ಮಹಿಳೆ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ ಎಂದು ವಿಶ್ವ ಸಂಸ್ಥೆಯ ಸಮೀಕ್ಷೆಯು ತಿಳಿಸುತ್ತದೆ. ಸುಮಾರು 10 ಸಾವಿರ ಮಹಿಳೆಯರನ್ನು ಸಮೀಕ್ಷಿಸಲಾಗಿ ಪ್ರತಿಶತ 50 ರಷ್ಟು ಮಹಿಳೆಯರು ಮದುವೆಯ ಬದುಕಿನಲ್ಲಿ ಒಂದಲ್ಲ ಒಂದು ರೀತಿಯ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಶೇ.42.5ರಷ್ಟು ಮಹಿಳೆಯರು ಪ್ರತಿನಿತ್ಯ ಮಾನಸಿಕ ನೆಮ್ಮದಿಯನ್ನು ಕೆಡಿಸಿಕೊಳ್ಳುವ ಯಾವುದಾದರೂ ಬೈಗುಳಕ್ಕೆ ಒಳಗಾಗುತ್ತಿದ್ದಾರೆ. ಶೇ. 40.3ರಷ್ಟು ಮಹಿಳೆಯರು ನಾನಾ ಬಗೆಯ ದೈಹಿಕ ಹಿಂಸೆಗಳಿಗೆ (ಹೊಡೆತ-ಬಡಿತ) ಬಲಿಯಾಗುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ (ದಿಕ್ಸೂಚಿ, ಜುಲೈ 2003).

2000ರಲ್ಲಿ ಅಂತಾರಾಷ್ಟ್ರೀಯ ಕ್ಲಿನಿಕಲ್ ಎಪಿಡೆಮೊಲಾಜಿಸ್ಟ್ ನೆಟ್‍ವರ್ಕ್ ನಡೆಸಿದ ಸಮೀಕ್ಷೆಯ ಪ್ರಕಾರ ಶೇ. 42.5ರಷ್ಟು ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಪ್ರತಿದಿನ ಗಂಡನಿಂದ ಹಿಂಸಾಚಾರಕ್ಕೆ ಒಳಗಾಗುತ್ತಿದ್ದಾರೆ. ಶೇ.68ರಷ್ಟು ಲೈಂಗಿಕ ಕಿರುಕುಳಗಳ ಪ್ರಕರಣಗಳು ಪೊಲೀಸ್ ಠಾಣೆಯವರೆಗೆ ಹೋಗುವುದಿಲ್ಲ ಎಂದು ತಿಳಿಸಿದೆ. ಇತ್ತೀಚೆಗೆ ಶಕ್ತಿಯಿಲ್ಲದ ಕಾನೂನು ವ್ಯವಸ್ಥೆಯಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳಾ ಶೋಷಣಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಇವುಗಳಿಗೆ ಕೊನೆಯೇ ಇಲ್ಲವೇ ಎಂದು ಮಹಿಳಾ ಸಮುದಾಯ ಕೇಳುತ್ತಿದೆ.

1990ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ನ್ಯಾಯಾಧೀಶರ ಧೋರಣೆಗಳನ್ನು ನೋಡಿದಾಗ ಮಹಿಳೆಯರ ಮೇಲಿನ ದೌರ್ಜನ್ಯಗಳು ಸಾಮಾನ್ಯವೆನಿಸುತ್ತವೆ ಅವುಗಳು ಇಂತಿವೆ;

ಶೇ.48ರಷ್ಟು ನ್ಯಾಯಾಧೀಶರು ಗಂಡ ಹೆಂಡತಿಯ ಕೆನ್ನೆಗೆ ಹೊಡೆಯುವುದು ಸರಿ ಎಂದಿದ್ದಾರೆ.

ಶೇ.74ರಷ್ಟು ನ್ಯಾಯಾಧೀಶರು ಮಹಿಳೆ ಹಿಂಸಾಚಾರ ಎದುರಿಸುವುದರ ಜೊತೆಗೆ ಕುಟುಂಬದಲ್ಲಿನ ಸಂಬಂಧವನ್ನು ಹದಗೆಡದಂತೆ ಉಳಿಸಿಕೊಳ್ಳಲು ಸಹಕರಿಸಬೇಕೆಂದು ಹೇಳಿದ್ದಾರೆ.

ಶೇ.50ರಷ್ಟು ನ್ಯಾಯಾಧೀಶರು ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ಅಪರೂಪವೆಂದು ಅಭಿಪ್ರಾಯಪಟ್ಟಿದ್ದಾರೆ. 
  
ಶೇ.68ರಷ್ಟು ನ್ಯಾಯಾಧೀಶರು ಹರೆಯದ ಯುವತಿಯರು ಪ್ರಚೋದನಕಾರಿ ಬಟ್ಟೆಗಳು ಹಾಕಿಕೊಳ್ಳುವುದರಿಂದ ತಮ್ಮನ್ನು ತಾವೇ ಲೈಂಗಿಕ ಹಿಂಸಾಚಾರ ಆಹ್ವಾನಿಸಿಕೊಂಡಂತೆ ಎಂದು ಹೇಳಿದ್ದಾರೆ.

ಸಮಾಜದಲ್ಲಿ ವರದಕ್ಷಿಣಿ ಪದ್ಧತಿ ಜನರ ಸಾಮಾಜಿಕ ಅಂತಸ್ತನ್ನು ನಿರ್ಧರಿಸುತ್ತದೆ ಅದಕ್ಕಾಗಿ ವರದಕ್ಷಿಣಿ ಸಾಂಸ್ಕ್ರತಿಕ ಮೌಲ್ಯವನ್ನು ಹೊಂದಿದೆ. ಆದ್ದರಿಂದ ವರದಕ್ಷಿಣೆ ಶೋಷಣೆ ಸಾಮಾನ್ಯವಾದುದ್ದು ಎಂದು ಶೇ.34ರಷ್ಟು ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಿಳೆಯ ನೈತಿಕ ಚಾರಿತ್ರ್ಯ ಲೈಂಗಿಕ ಅತ್ಯಾಚಾರದ ಪ್ರಕರಣಗಳಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಶೇ.55ರಷ್ಟು ನ್ಯಾಯಾಧೀಶರು ಹೇಳಿದ್ದಾರೆ.
 
ಕಾನೂನು ಮತ್ತು ಮಹಿಳೆ:
ಭಾರತ ದಂಡ ಸಂಹಿತೆಯು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ 312 ರಿಂದ 318ರವರೆಗೆ ಹಾಗೂ 354, 361, 366, 366ಎ-ಬಿ, 367, 372, 373, 375, 376ಬಿ.ಸಿ.ಡಿ, 377, 493ರಿಂದ 498 ಮತ್ತು 498ಎ ಪ್ರಕರಣಗಳನ್ನು ಪಟ್ಟಿ ಮಾಡಿ ಘೋಷಿಸಿದರೂ (ಪ್ರಭಾ ಎನ್, 2003) ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಕಡಿಮೆಯಾಗುತ್ತಿಲ್ಲ. ಇವುಗಳಲ್ಲದೆ ಸಂವಿಧಾನದ 44ನೇ ಪರಿಚ್ಛೇದವು ಸಮಾನ ನಾಗರೀಕ ಹಕ್ಕನ್ನು ಎತ್ತಿ ಹಿಡಿದಿದೆ. ಕೌಟುಂಬಿಕ ದೌರ್ಜನ್ಯಗಳ ವಿರುದ್ಧವಲ್ಲದೇ ಎಲ್ಲ ರೀತಿಯ ಕ್ರೌರ್ಯದ ವಿರುದ್ಧವಾಗಿವೆ. ಸಂವಿಧಾನ ಮತ್ತು ಮಹಿಳಾ ಆಯೋಗಗಳ ರಕ್ಷಣೆ ಇದ್ದರು, ಮಹಿಳೆಯರಿಗಾಗಿಯೇ ಕಾನೂನುಗಳು ರಚನೆಗೊಂಡಿದ್ದರೂ, ಹೊಸ ಹೊಸ ಕಾನೂನುಗಳು ಪರಿಚಯಗೊಳ್ಳುತ್ತಿದ್ದರು, ಮಹಿಳೆಯರ ಮೇಲೆ ಹಲವಾರು ರೀತಿಯ ದೌರ್ಜನ್ಯಗಳು ಏಕೆ ನಡೆಯುತ್ತಿವೆ ಎಂಬುದರ ಬಗ್ಗೆಯೇ ಚಿಂತನೆಯಲ್ಲಿ ತೊಡಗಿಕೊಂಡಿದ್ದಾರೆಯೇ ಹೊರತು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಮ್ಮ ಸರ್ಕಾರಗಳು ವಿಫಲವಾಗಿವೆ.

ಮಹಿಳೆಯರ ಮೇಲಿನ ಅತ್ಯಾಚಾರ, ಅಪಹರಣ, ಹಿಂಸೆ, ಲೈಂಗಿಕ ಕಿರುಕುಳಗಳು ಅತ್ಯಂತ ನಾಚಿಕೆಗೇಡಿನ ಸಂಗತಿಯೆಂದು ಸಮಾಜಕ್ಕೆ ತಿಳಿದಿದ್ದರೂ, ಅದೇ ಸಮಾಜದಲ್ಲಿ ದಿನಗಳು ಉರುಳಿದಂತೆಲ್ಲಾ ಲೈಂಗಿಕ ಕಿರುಕುಳಗಳ ಸಂಖ್ಯೆ ಹೆಚ್ಚಾಗುತ್ತಲಿವೆ. ಮಹಿಳೆಯರ ಮೇಲೆ ನಡೆಯುವ ಇಂತಹ ದೌರ್ಜನ್ಯಗಳಿಗೆ ಭೌಗೋಳಿಕ. ಸಾಂಸ್ಕ್ರತಿಕ, ಧಾರ್ಮಿಕ, ಬಡವ ಶ್ರೀಮಂತರೆಂಬ ಚೌಕಟ್ಟುಗಳಿಲ್ಲ. ಇದು ಎಲ್ಲಿಯವರೆಗೆ ಮುಂದುವರೆಯುತ್ತದೆಯೋ ಅಲ್ಲಿಯವರೆಗೆ ನಿಜವಾದ ಪ್ರಗತಿ ಸಾಧ್ಯವಿಲ್ಲ. ಅಭಿವೃದ್ಧಿ, ಶಾಂತಿ ಮತ್ತು ಸಮಾನತೆ ಸ್ಥಾಪಿಸಲು ಸಾಧ್ಯವಿಲ್ಲ.

ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳಗಳನ್ನು ತಡೆಯಲು ಅನೇಕ ಕಾಯ್ದೆಗಳು ಇದ್ದರೂ ಸಹಿತ ದಿನಬೆಳಗಾದಂತೆ ಮಹಿಳೆಯರು ಹಿಂಸೆ, ಅತ್ಯಾಚಾರ ಅಥವಾ ಇನ್ಯ್ನಾವುದೋ ರೀತಿಯ ಕಿರುಕುಳಕ್ಕೆ ಒಳಗಾದ ತಕ್ಷಣ ದೂರು ಕೊಡದೆ ಇರುವುದರಿಂದ ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಆದ್ದರಿಂದ ಮಹಿಳೆಯರು ಮಹಿಳಾ ಸಂಘ, ಉಚಿತ ಕಾನೂನು ಸಲಹಾ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಅವರು ಯಾವುದೇ ರೀತಿಯ ಆರ್ಥಿಕ ಒತ್ತಡಗಳನ್ನು ನೀಡದೆ ಉಚಿತವಾಗಿ ವಕೀಲರನ್ನು ನೇಮಿಸಿ ಅವರ ಮೂಲಕ ಕಾನೂನಿನ ರೀತಿಯಲ್ಲಿ ಕ್ರಮಕೈಗೊಂಡು ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಆದರೆ ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿಯೇ ಧೂಳು ಹಿಡಿಯುತ್ತಿವೆ, ಬೇಲಿಯೇ ಎದ್ದ ಹೊಲ ಮೇಯ್ದಾಗ ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂಬಂತಾಗಿದೆ  ಈಗಿನ ಸಮಾಜ ಮತ್ತು ಕಾನೂನು.
 
ಆಧಾರ ಗ್ರಂಥಗಳು:
  1. ಎನ್ ಗಾಯತ್ರಿ (1996), ಮಹಿಳೆ ಬಿಡುಗಡೆಯ ಹಾದಿಯಲ್ಲಿ ನವ ಕರ್ನಾಟಕ ಪಬ್ಲಿಕೆಷನ್ಸ್ ಪ್ರೈ. ಲಿಮಿಟೆಡ್, ಬೆಂಗಳೂರು.
  2. ಸಂಯುಕ್ತ ಕರ್ನಾಟಕ ದಿನಪತ್ರಿಕೆ (ಗುಲಬರ್ಗಾ ಪ್ರಕಟಿತ) 20.07.2007, ಪು. 5.
  3. ಪ್ರಜಾವಾಣಿ ದಿನಪತ್ರಿಕೆ, 21.04.2007, ಪು. 5.
  4. ಸಂಯುಕ್ತ ಕರ್ನಾಟಕ ದಿನಪತ್ರಿಕೆ (2007) ಪು. 5.
  5. ದಿಕ್ಸೂಚಿ ಮಾಸ ಪತ್ರಿಕೆ ಜೂಲೈ 2003.
  6. ಪ್ರಭಾ ಎನ್ (2003), ಕೌಟುಂಬಿಕ ಹಿಂಸಾಚಾರ ಮತ್ತು ಕಾನೂನುಗಳು. ಐಕ್ಯರಂಗ, ಸಂಪುಟ.25, ಸಂಚಿಕೆ.11, ಪು.17, ಮಾರ್ಚ್‍.
  7. ಶೃತಿ ಜಿ.ಎಂ. (2006), ಮಹಿಳಾ ಶೋಷಣೆ, ಸಂಪಾದಕರು, ಡಾ|| ಶಿವಚಿತ್ತಪ್ಪ ಕೆ. ಮಹಿಳಾ ಸಬಲೀಕರಣದ ವಿಭಿನ್ನ ನೆಲೆಗಳು, ಲಕ್ಷ್ಮೀ ಪ್ರಿಂಟಿಂಗ ಆ್ಯಂಡ್ ಪಬ್ಲಿಸಿಂಗ್ ಹೌಸ್, ಮೈಸೂರು.
  8. ಭಾರತದ ಜನಗಣತಿ, 1991 ಮತ್ತು 2001, ನವದೆಹಲಿ.
 
ಡಾ. ವಿಠೋಬ ಬಿ
ಅತಿಥಿ ಉಪನ್ಯಾಸಕರು, ಅರ್ಥಶಾಸ್ತ್ರ ವಿಭಾಗ, ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿ (ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ).

ಡಾ. ಶ್ರೀಕಾಂತ
ಅತಿಥಿ ಉಪನ್ಯಾಸಕರು, ಇತಿಹಾಸ ವಿಭಾಗ, ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿ (ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ)
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com