Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಪ್ರೀತಿಯ ಮೂಲ ಯಾವುದು?

6/20/2017

0 Comments

 
ಪ್ರೀತಿ ಎಂದರೇನು, ಅದು ಎಲ್ಲಿ ಹುಟ್ಟುತ್ತದೆ, ಹೇಗೆ ಹುಟ್ಟುತ್ತದೆ, ಹೇಗೆ ಬೆಳೆಯುತ್ತದೆ ಎನ್ನುವ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಉತ್ತರಿಸುವುದು ಸುಲಭವಲ್ಲ. ಅದು ಕಲಾವಿದರ, ಕವಿಗಳ, ಕಾದಂಬರಿಕಾರರ ಕೆಲಸ. ಆದರೂ ಪ್ರೀತಿ ಒಂದು ಮಾನಸಿಕ ಸಂಸ್ಥಿತಿಯಾದ್ದರಿಂದ ಹಾಗು ವ್ಯಕ್ತಿಗಳ ನಡುವೆ ಏರ್ಪಡುವ ಅಪೂರ್ವ ಸಂಬಂಧವಾದರಿಂದ, ಮನೋವಿಜ್ಞಾನಿಗಳಿಗೆ ಅದರ ವಿಚಾರವಾಗಿ ಕುತೂಹಲವಿರುವುದು ಸಹಜ. ಸುಮಾರು 1950ರವರೆಗೆ ಪ್ರೀತಿಯಂಥ ವ್ಯಕ್ತಿನಿಷ್ಠ ಅನುಭವವನ್ನು ಪ್ರಯೋಗಾಲಯದಲ್ಲಿ ಅಧ್ಯಯನ ಮಾಡುವ ಸಾಧ್ಯತೆಯನ್ನು ಯಾವ ಮನೋವಿಜ್ಞಾನಿಯೂ ಯೋಚಿಸಿರಲಿಲ್ಲ. ಅಂಥ ಒಂದು ಹುಚ್ಚು ಸಾಹಸಕ್ಕೆ ಕೈ ಹಾಕಿದವರು  ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಹ್ಯಾರಿ ಹಾರ್ಲೊ (Harry Frederick Harlow, 1905-1981) ಎಂಬುವವರು. ಪ್ರೀತಿಯಂಥ ವ್ಯಕ್ತಿನಿಷ್ಠ (subjective) ಅನುಭವವನ್ನು ವಸ್ತುನಿಷ್ಠವಾಗಿ (objective) ಲೆಬಾರಟರಿಯಲ್ಲಿ ಅಧ್ಯಯನ ಮಾಡಿದ ಹಾರ್ಲೊ ಅವರ ಪ್ರಯತ್ನ ಮೆಚ್ಚತಕ್ಕದ್ದೆ. ಹಾರ್ಲೊ ನಡೆಸಿದ ಪ್ರಯೋಗಗಳು ಮನೋವಿಜ್ಞಾನದ ಇತಿಹಾಸದಲ್ಲಿ ಪ್ರಸಿದ್ಧವಾಗಿರುವುದಷ್ಟೇ ಅಲ್ಲ; ಬಹಳಷ್ಟು ವಿವಾದಗಳನ್ನೂ ಹುಟ್ಟುಹಾಕಿವೆ; ಅದು ಬೇರೆ ವಿಚಾರ.
ಪ್ರೀತಿ-ಪ್ರೇಮ ಎಂದ ತಕ್ಷಣ ಸಾಮಾನ್ಯ ಜನರ ಮನಸ್ಸಿನಲ್ಲಿ ಹುಟ್ಟುವುದು ಹೆಣ್ಣು-ಗಂಡುಗಳ ನಡುವಿನ ಅನುಬಂಧ; ಲೈಂಗಿಕ ಆಕರ್ಷಣೆ ಎಂದರೂ ಸರಿಯೆ. ಆದರೆ ಅದೊಂದೇ ಪ್ರೇಮವಲ್ಲ. ಮಾನವನ ಹಂತದಲ್ಲಿ ಪ್ರೀತಿ ಹಲವು ದಿಕ್ಕುಗಳಲ್ಲಿ ಪ್ರವಹಿಸುತ್ತದೆ. ಇಂಗ್ಲೀಷಿನಲ್ಲಿ ಪ್ರೇಮವನ್ನು ಬಹುಮುಖ ಭವ್ಯ ವಸ್ತು (“love is a many splendored thing”) ಎಂದು ಹೇಳಲಾಗಿದೆ. ಒಬ್ಬ ಹಿರಿಯ ಮನೋವಿಜ್ಞಾನಿ ಎರಿಕ್ ಫ್ರಾಮ್ (1900-1980) ತಮ್ಮ ಒಂದು ಗ್ರಂಥದಲ್ಲಿ (Fromm, 1956) ಮಾನವರ ಪ್ರೀತಿ ಐದು ದಿಕ್ಕುಗಳಲ್ಲಿ ಹರಿಯುತ್ತದೆ ಎಂದಿದ್ದಾರೆ. ಅವು ಕೆಳಕಂಡಂತಿವೆ. 

1.ಪುತ್ರಪ್ರೇಮ (filial love): ಹೆತ್ತವರು ತಮ್ಮ ಮಕ್ಕಳ ಮೇಲೆ ತೋರುವ ಪ್ರೀತಿ; ಪುತ್ರ ವಾತ್ಸಲ್ಯ; ಇದು ಮುಂದುವರೆದು ಎಲ್ಲಾ ಮಕ್ಕಳ ಕಡೆಗೂ ಹಾಗೂ ಎಲ್ಲಾ ಅಸಹಾಯಕರೆಡೆಗೆ ಹರಿಯುತ್ತದೆ.

2. ಪಿತೃಪ್ರೇಮ (parental love): ಮಕ್ಕಳಿಗೆ ಹೆತ್ತವರ ಮೇಲಣ ಪ್ರೀತಿ; ಕಾಲ ಕಳೆದಂತೆ ಇದು ಅಜ್ಜಿ-ತಾತ, ಚಿಕ್ಕಪ್ಪ-ಚಿಕ್ಕಮ್ಮ, ಮತ್ತಿತರ ಬಂಧುಬಾಂಧವರು ಹಾಗು ಎಲ್ಲ್ಲ ಹಿರಿಯರ ಕಡೆಗೂ ಪ್ರವಹಿಸುತ್ತದೆ. ಮುಂದುವರೆದು ಈ ಪ್ರೀತಿ ನಾಡಿನ ನಾಯಕರು, ಕೊನೆಗೆ ದೇವರೆಡೆಗೂ ಹರಿಯುತ್ತದೆ.

3. ಬ್ರಾತೃಪ್ರೇಮ (fraternal love): ಸೋದರ ಸೋದರಿಯರು, ಸ್ನೇಹಿತರು, ಮತ್ತು ನೆರೆಹೊರೆಯವರು, ಕಡೆಗೆ ಇಡೀ ಮಾನವ ಜನಾಂಗದೆಡೆಗೆ ಹರಿಯುವ ಪ್ರೀತಿ.

4. ದಾಂಪತ್ಯ ಪ್ರೇಮ (conjugal love) ಪತಿ-ಪತ್ನಿಯ ನಡುವಿನ ಪ್ರೀತಿ; ಮೇಲೆ ಹೇಳಿದ ಪ್ರೀತಿಗಳು ಹಲವರೆಡೆಗೆ ಪ್ರವಹಿಸಿದರೆ, ಒಬ್ಬ ವ್ಯಕ್ತಿಯ     ಕಡೆಗೆ ಮಾತ್ರ ಹರಿಯುವುದು ದಾಂಪತ್ಯ ಪ್ರೇಮದ ವೈಶಿಷ್ಟ್ಯ.

5. ಸ್ವಯಂ ಪ್ರೇಮ (self-love): ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮೇಲೆ ತನಗಿರುವ ಅಭಿಮಾನಪೂರ್ವಕ ಪ್ರೀತಿ. ಇದು ಸ್ವಾನುರಕ್ತಿಯಲ್ಲ. ತನ್ನನ್ನು ತಾನರಿದು, ಬೆಳೆಸಿಕೊಳ್ಳುವ ಆತ್ಮಗೌರವ.

ಪ್ರೇಮ ಮತ್ತು ಅದರ ವೈವಿಧ್ಯತೆಗಳ ಬಗ್ಗೆ ಫ್ರಾಮ್ ಪ್ರತಿಪಾದಿಸಿರುವ ಸಿದ್ಧಾಂತವನ್ನು ವಿವರಿಸುವ ಉದ್ದೇಶ ಈ ಲೇಖನದ್ದಲ್ಲ. ಕೇವಲ ಪ್ರೀತಿಯ ಉಗಮ ಹೇಗೆ ಜರಗುತ್ತದೆ ಎನ್ನುವುದನ್ನು ತಿಳಿಸುವ ಪ್ರಯತ್ನ ಮಾತ್ರ ಇಲ್ಲಿದೆ. ಮಾನವರಲ್ಲಿ ಪ್ರಪ್ರಥಮವಾಗಿ ಪ್ರೀತಿಯ ಅನುಭವ ಅಂಕುರವಾಗುವುದು ಶೈಶವದಲ್ಲಿ; ಮಗು ತಾಯಿಯಿಂದ ಪಡೆಯುವ ಮಮತೆಯ ಮೂಲಕ. ಇದೇ ಸಕಲ ಪ್ರೀತಿಗಳಿಗೂ ಮೂಲಾಧಾರ. ಹೀಗೆ ಹುಟ್ಟಿದ ಪ್ರೀತಿ ಅನಂತರ ಹಲವು ಪ್ರಕಾರಗಳಲ್ಲಿ ಹರಿಯುತ್ತದೆ ಎಂಬುದು ಒಂದು ಸಿದ್ಧಾಂತ. ಹಾರ್ಲೊ (ಚಿತ್ರ-1) ಅಧ್ಯಯನ ಮಾಡಿದ್ದು ತಾಯಿ ಮತ್ತು ಮಗುವಿನ ನಡುವೆ ಪ್ರೀತಿ ಹೇಗೆ ಬೆಳೆಯುತ್ತದೆ ಎಂಬುದನ್ನು. ಅವನು ಪ್ರಯೋಗ ನಡೆಸಿದ್ದು ಮಂಗಗಳ ಮೇಲೆ. ಕಾರಣ ಸ್ಪಷ್ಟ; ಯಾವ ತಾಯಿಯೂ ತನ್ನ ಮಗುವಿನೊಡನೆ ಲೆಬಾರೆಟರಿಗೆ ಬಂದು ಪ್ರಯೋಗಕ್ಕೊಳಗಾಗಲು ಇಚ್ಚಿಸುವುದಿಲ್ಲ.

ಎಲ್ಲರೂ ಹೇಳುವ ಹಾಗೆ, ತಾಯಿ ಮಕ್ಕಳ ನಡುವಿನ ಪ್ರೀತಿ (ಪ್ರೇಮ, ಬಾಂಧವ್ಯ, ಮಮತೆ, ಅಥವಾ ಅನುಬಂಧ) ಅನುಪಮ, ಅನನ್ಯ, ಅಪಾರ, ಅದನ್ನು ದೈವಿಕವೆನ್ನುವವರೂ ಇದ್ದಾರೆ. ಹ್ಯಾರ್ಲೊಗೆ ಇಂಥ ಭಾವಪೂರಿತ ಮಾತುಗಳಲ್ಲಿ ಆಸಕ್ತಿ ಇರಲಿಲ್ಲ. ಅವನೇನು ಕಲಾವಿದನಲ್ಲ, ಸಾಹಿತಿಯಲ್ಲ, ಅವನೊಬ್ಬ ವಸ್ತುನಿಷ್ಠ ವಿಜ್ಞಾನಿ. ಬೇರೆಲ್ಲಾ ಮನೋವಿಜ್ಞಾನಿಗಳಿಗಿದ್ದಂತೆ, ಅವನ ಆಸಕ್ತಿ ಇದ್ದುದೆಲ್ಲಾ ಪ್ರೀತಿ ಎನ್ನುವ ಮನಃಸ್ಥಿತಿ ಎಲ್ಲಿ ಹುಟ್ಟುತ್ತದೆ? ಹೇಗೆ ಬೆಳೆಯುತ್ತದೆ? ಅದರ ಹಿನ್ನೆಲೆ ಏನು? ಎನ್ನುವ ಪ್ರಶ್ನೆಗಳಿಗೆ ವಸ್ತುನಿಷ್ಠವಾದ ಉತ್ತರಗಳನ್ನು ಹುಡುಕುವಲ್ಲಿ ಮಾತ್ರ. 

ಕೆಲವು ಮನೋವಿಜ್ಞಾನಿಗಳ ಪ್ರಕಾರ ಪ್ರೀತಿಯ ಹುಟ್ಟಿಗೆ ಕಾರಣ ಸಾಮೀಪ್ಯ (proximity). ಯಾರನ್ನಾದರೂ ಒಟ್ಟಿಗೆ, ಹತ್ತಿರ ಹತ್ತಿರ ಇರಲು ಬಿಟ್ಟರೆ, ಪ್ರೀತಿ ಅದರ ಪಾಡಿಗೆ ಅದು ಹುಟ್ಟುತ್ತದೆ, ಬೆಳೆಯುತ್ತದೆ, ಎಂಬುದು ಅವರ ನಂಬಿಕೆ; ತಾಯಿ ಮತ್ತು ಮಗು ಸದಾ ಒಟ್ಟಿಗೆ ಇರುವುದರಿಂದ ಅವರಿಬ್ಬರ ಮಧ್ಯೆ ಪ್ರೀತ್ಯಾನುಬಂಧ ಬೆಳೆಯುತ್ತದೆ. ಇನ್ನು ಕೆಲವರ ಪ್ರಕಾರ, ತಾಯಿ-ಮಗುವಿನ ನಡುವೆ ಪ್ರೀತಿ ಬೆಳೆಯಲು ಸಹಾಯ ಮಾಡುವ ಪ್ರಮುಖ ಕಾರಣಗಳು ದೈಹಿಕ ಮೂಲದವು; ಹಸಿವು, ಬಾಯಾರಿಕೆ, ಮತ್ತು ನೋವು ನಿವಾರಣೆಗೆ ಸಂಬಂಧಿಸಿದವು; ತಾಯಿ ಮಗುವಿಗೆ ಮಾಡುವ ಪಾಲನೆ, ಪೋಷಣೆ. ಪ್ರೀತಿಯ ಉಗಮಕ್ಕೆ ಕಾರಣ. ಮಗು ಹಸಿದಿರುವಾಗ ತಾಯಿ ಅದಕ್ಕೆ ಹಾಲೂಡುತ್ತಾಳೆ. ಅದರಿಂದ ಮಗುವಿಗೆ ತೃಪ್ತಿಯಾಗುತ್ತದೆ, ಮನಸ್ಸಿಗೆ ಹಿತವಾಗಿದ್ದು ಮಗುವಿಗೆ ಸಂತೋಷವನ್ನುಂಟು ಮಾಡುತ್ತದೆ. ಆ ಹಿತವಾದ ಭಾವಾವೇಶದ (emotional state) ಪ್ರಭಾವ ಅದನ್ನು ಉಂಟು ಮಾಡಿದವರ ಕಡೆಗೂ ಹರಡುತ್ತದೆ. ಇದು ಮನೋವಿಜ್ಞಾನದಲ್ಲಿ ಪ್ರಚಲಿತವಿರುವ ಸಾಮಾನ್ಯೀಕರಣ (generaralization) ನಿಯಮ. ತಾಯಿ ಪ್ರತಿದಿನ ಮಗುವನ್ನು ತೃಪ್ತಿಪಡಿಸಿ, ಸಂತೋಷವನ್ನು ಉಂಟು ಮಾಡುವಾಗಲೆಲ್ಲಾ ಮಗುವಿನ ಜತೆಯಲ್ಲೇ ಇರುವುದರಿಂದ, ಅವಳ ಮೇಲೆ ಮಗುವಿಗೆ ಪ್ರೀತಿ ಬೆಳೆಯುತ್ತದೆ.  

ಈ ವಾದಗಳಲ್ಲಿ ಹುರುಳಿರುವಂತೆ ಕಂಡರೂ ಅವು ಹ್ಯಾರ್ಲೊಗೆ ಒಪ್ಪಿಗೆಯಾಗಲಿಲ್ಲ, ಇವು ಬಹಳ ಸರಳವಾಗಿದ್ದು, ಪ್ರೀತಿಯ ಸುಲಭೀಕೃತ ವಿವರಣೆಗಳೆನಿಸಿತು. ಕೇವಲ ಜತೆಗಿರುವುದರಿಂದ, ಹಾಲು ಕುಡಿಸುವುದರಿಂದ, ಉಣಬಡಿಸುವುದರಿಂದ, ಹೊಟ್ಟೆ ತುಂಬಿಸುವುದರಿಂದ, ಪ್ರೀತಿ ಬೆಳೆಯುತ್ತದೆಂಬುದು ತೀರ ಸರಳ ಸಿದ್ಧಾಂತದ ಹಾಗೆ ಕಂಡಿತು. ಪ್ರೀತಿ, ಅಥವಾ ಮಾತೆಯ ಮಮತೆ ಬಹಳ ಆಳವಾದ, ನಿಕಟವಾದ, ಮಧುರವಾದ, ಮಾನಸಿಕ ಅನುಭವ, ಅದೊಂದು ಅನುಪಮ, ಸಂಕೀರ್ಣ ಭಾವಾವೇಶ (emotion); ಅದಕ್ಕೆ ಪಾಲನೆ ಪೋಷಣೆಗಳಲ್ಲದೆ ಇನ್ನೂ ಮುಖ್ಯವಾದ ಕಾರಣಗಳಿರಬೇಕೆಂದು ಹಾರ್ಲೊಗೆ ಅನಿಸಿತು. ಅದೇನೆಂದು ಕಂಡುಹಿಡಿಯಲು ಹ್ಯಾರ್ಲೊ ಕೈಗೊಂಡ ಪ್ರಯೋಗಗಳು ಮನೋವಿಜ್ಞಾನದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿವೆ. ತಾಯಿ-ಮಕ್ಕಳ ಪ್ರೀತಿಯ ಬೆಳವಣಿಗೆಯನ್ನು ಪ್ರಯೋಗಾಲಯದಲ್ಲಿ ಅವಶ್ಯಕವಿರುವ ನಿಯಂತ್ರಣಗಳಿಗೆ ಒಳಪಡಿಸಿ, ವಸ್ತುನಿಷ್ಠವಾಗಿ ಅಧ್ಯಯನ ಮಾಡುವುದು ಕಷ್ಟದ ಕೆಲಸ. ಯಾವ ತಾಯಿಯೂ ಇದಕ್ಕೆ ಒಪ್ಪುವುದಿಲ್ಲ. ಆದುದರಿಂದ ಈ ಪ್ರಯೋಗಗಳನ್ನು ಮಂಗಗಳ (rhesus monkeys) ಮೇಲೆ ನಡೆಸಲಾಯಿತು.

ಪ್ರಯೋಗಾಲಯದಲ್ಲಿ ಒಂದು ದೊಡ್ಡ ಪಂಜರವನ್ನು ನಿರ್ಮಿಸಿ, ಅದರಲ್ಲಿ ಕಬ್ಬಿಣದ ತಂತಿಗಳನ್ನು ಉಪಯೋಗಿಸಿಕೊಂಡು ತಯಾರಿಸಲಾದ ಎರಡು ಕೃತಕ ತಾಯಿ ಮಂಗಗಳನ್ನು ಇರಿಸಲಾಯ್ತು. ಅವುಗಳಲ್ಲಿ ಒಂದನ್ನು ಮೆತ್ತನೆಯ ರಬ್ಬರ್‍ನಿಂದ ಮುಚ್ಚಿ, ಅದರ ಮೇಲೆ ಮೃದುವಾದ ಬಟ್ಟೆಯನ್ನು (terry cloth) ಹೊದಿಸಲಾಗಿತ್ತು (ಇದನ್ನು ಮೃದು ತಾಯಿ ಅಥವಾ ಬಟ್ಟೆ ತಾಯಿ ಎನ್ನೋಣ). ಇನ್ನೊಂದು ಕೃತಕ ತಾಯಿಯನ್ನು ಕೇವಲ ತಂತಿಗಳಿಂದ ನಿರ್ಮಿಸಿ, ಅದು ಒರಟಾಗಿರುವಂತೆ ಮಾಡಲಾಗಿತ್ತು (ಇದು ಒರಟು ತಾಯಿ ಅಥವಾ ತಂತಿ ತಾಯಿ). ಚಿತ್ರ 2 ರಲ್ಲಿ ಈ ಎರಡು ಬಗೆಯ ತಾಯಿಯರನ್ನು ತೋರಿಸಿದೆ. ಕೆಲವು ಪ್ರಯೋಗಗಳಲ್ಲಿ, ಮೃದು ತಾಯಿಯ ಮುಖವನ್ನು ಮಂಗಗಳ ಮುಖದಂತೆಯೂ, ಒರಟು ತಾಯಿಯ ಮುಖವನ್ನು ನೋಡಲು ಅಷ್ಟೇನು ಹಿತವಾಗಿಲ್ಲದಂತೆ ಒಡ್ಡೊಡ್ಡಾಗಿಯೂ ನಿರ್ಮಿಸಲಾಗಿತ್ತು. ಒರಟು ತಾಯಿಯ ಎದೆಯ ಭಾಗದಲ್ಲಿ ನಿಪ್ಪಲ್ನೊಡನಿರುವ ಹಾಲಿನ ಸೀಸೆಯನ್ನು ಜೋಡಿಸಲಾಗಿತ್ತು. ಮರಿ ಮಂಗಗಳು  ಹಸಿವೆನಿಸಿದಾಗ ತಂತಿ ತಾಯಿಯ ಬಳಿ ಹೋಗಿ ನಿಪ್ಪಲ್ ಚೀಪಿ ಹಾಲು ಕುಡಿಯಬಹುದಾದ ವ್ಯವಸ್ಥೆ ಮಾಡಲಾಗಿತ್ತು (ನೋಡಿ ಚಿತ್ರ 2 ಮತ್ತು 3). ಹೀಗೆ ನಿರ್ಮಿಸಲಾದ ಪ್ರಯೋಗಾಲಯದಲ್ಲಿ ಹಾರ್ಲೊ ಮತ್ತು ಅವನ ಸಹೋದ್ಯೋಗಿಗಳು ಸನ್ನಿವೇಶಕ್ಕೆ ತಕ್ಕಂತೆ ಇನ್ನೂ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಹಲವಾರು ಚರಿತ್ರಾರ್ಹ ಪ್ರಯೋಗಗಳನ್ನು ನಡೆಸಿದರು. ಅವುಗಳಲ್ಲಿ ಕೆಲವನ್ನು ಕೆಳಗೆ ತಿಳಿಸಿದೆ.
Picture
Picture
Picture
ಒಂದು ಪ್ರಯೋಗದಲ್ಲಿ, ಈಗ ತಾನೆ ಹುಟ್ಟಿದ ಮಂಗದ ಮರಿಗಳನ್ನು (ಹುಟ್ಟಿದ 6 ರಿಂದ 12 ಗಂಟೆಗಳೊಳಗೆ) ಅವುಗಳ ತಾಯಿಯರಿಂದ ಬೇರ್ಪಡಿಸಿ ಪ್ರಯೋಗಾಲಯದೊಳಗೆ ಬೆಳೆಯಲು ಬಿಡಲಾಯ್ತು.ಅವುಗಳಿಗೆ ಮೇಲೆ ವಿವರಿಸಿದ ಎರಡು ಕೃತಕ ತಾಯಿಯರ ಪೈಕಿ ಯಾವುದರ ಬಳಿ ಬೇಕಾದರೂ ಹೋಗಬಹುದಾದ ಅವಕಾಶವಿತ್ತು. ಮರಿಗಳು ಹಸಿವಾದಾಗ ಒರಟು (ತಂತಿ) ತಾಯಿಯ ಬಳಿ ಹೋಗಿಹಾಲೇನೋ ಕುಡಿಯುತ್ತಿದ್ದುವು. ಆದರೆ, ಹಾಲು ಕುಡಿದಾದ ಮೇಲೆ ಮರಿಗಳು ಮೃದು (ಬಟ್ಟೆ) ತಾಯಿಯ ಬಳಿಬಂದು ಅಪ್ಪಿಕೊಂಡು ವಿಶ್ರಾಂತಿ ಪಡೆಯುತ್ತಿದ್ದವು. 

(ನೋಡಿ ಚಿತ್ರ-3). ಹೊಟ್ಟೆ ತುಂಬಿರುವಾಗಏನೇ ಕಾರಣಕ್ಕೂ ಮರಿಗಳು ಒರಟು ತಾಯಿಯ ಬಳಿಗೆ ಹೋಗುತ್ತಿರಲಿಲ್ಲ. ಇದು ಒಂದು ದಿನದ ಮಾತಲ್ಲ. ಪ್ರತಿ ದಿನವೂ ಹೀಗೆ ನಡೆಯುತ್ತಿತ್ತು. ಹಸಿದಾಗ ಹಾಲು ಕುಡಿಯಲು ಒರಟು ತಾಯಿ; ಮುದ್ದುಮಾಡಲು, ಅಪ್ಪಿಕೊಂಡು ಪ್ರೀತಿಸಲು ಮೃದು ತಾಯಿ. ಹೀಗೆ ಬೆಳೆಯಿತು ತಾಯಿ ಮತ್ತು ಮಗುವಿನ ನಡುವಿನ ಅನುಬಂಧ. ಇದರ ಅರ್ಥವಿಷ್ಟೆ. ಕೇವಲ ಹೊಟ್ಟೆಗೆ ಕೊಡುವುದರಿಂದ ತಾಯಿ ಮಕ್ಕಳ ನಡುವೆಪ್ರೀತ್ಯಾನುಬಂಧ ಹುಟ್ಟುವುದಿಲ್ಲ. ಇನ್ನು ಏನೇನೊ ಬೇಕು. ಅವುಗಳಲ್ಲೊಂದು ಸ್ಪರ್ಶಸೌಖ್ಯ (contact comfort). ಮರಿಗಳಿಗೆ ತಾಯಿಯಿಂದ ದೊರಕುವ ಮೆತ್ತನೆಯ ಸ್ಪರ್ಶಾನುಭವ, ಅವಳು ಕೊಡುವಹಾಲಿನಷ್ಟೆ ಅಥವಾ ಅದಕ್ಕಿಂತ ಹೆಚ್ಚು ಮುಖ್ಯವಾಗಿತ್ತು.

ಮೇಲೆ ಹೇಳಿರುವುದು ಹಾರ್ಲೊ ನಡೆಸಿದ ಪ್ರಯೋಗಗಳಲ್ಲಿ ಒಂದು ಮಾತ್ರ. ಕೆಲವು ವಿವರಗಳನ್ನು ಬದಲಾಯಿಸಿ ಇಂಥ ಹಲವಾರು ಪ್ರಯೋಗಗಳನ್ನು ನಡೆಸಿ ಮಂಗಗಳ ವರ್ತನೆಗಳನ್ನು ಅಧ್ಯಯನಮಾಡಲಾಗಿದೆ.

ಇನ್ನೊಂದು ಪ್ರಯೋಗದಲ್ಲಿ ಹಾಲಿನ ಬಾಟಲಿಯನ್ನು ಮೃದು ತಾಯಿಯ ಎದೆ ಭಾಗದಲ್ಲಿ ಕೂಡ ಇಡಲಾಯಿತು. ಅಂಥ ಸಂದರ್ಭಗಳಲ್ಲಿ ಮರಿಮಂಗಗಳು ಮೃದು ತಾಯಿಯ ಬಳಿ ಹಾಲು ಕುಡಿದು ಅಲ್ಲೇವಿಶ್ರಾಂತಿ ಪಡೆಯುತ್ತಿದ್ದವು. ಒರಟು ತಾಯಿಯ ಬಳಿ ಹಾಲು ಕುಡಿಯಲು ಹೋಗುವುದಿರಲಿ, ಆ ಕಡೆ ತಿರುಗಿ ಕೂಡ ನೋಡುತ್ತಿರಲಿಲ್ಲ. ಅದರ ಇರುವಿಕೆಯನ್ನ ಅವು ಗಮನಿಸುತ್ತಿರಲೇ ಇಲ್ಲ. 

ಬೇರೊಂದು ಪ್ರಯೋಗದಲ್ಲಿ ಮೃದುತಾಯಿ ಮತ್ತು ಒರಟು ತಾಯಿಯರನ್ನು ಬೇರೆ ಬೇರೆ ಪಂಜರಗಳಲ್ಲಿ ಇಡಲಾಯ್ತು. ಮರಿಮಂಗಗಳನ್ನು ಎರಡು ಗುಂಪಾಗಿ ವಿಂಗಡಿಸಿ, ಒಂದು ಗುಂಪಿನ ಮರಿಗಳನ್ನುಒಂದೊಂದಾಗಿ ಒರಟು ತಾಯಿಯೊಡನೆಯೂ, ಮತ್ತೊಂದು ಗುಂಪಿನವನ್ನು ಮೃದು ತಾಯಿಯೊಡನೆಯೂ ಬೆಳೆಯಲು ಬಿಡಲಾಯ್ತು. ಎರಡು ತಾಯಿಯರಿಗೂ ಹಾಲಿನ ಸೀಸೆಯನ್ನು ಸಿಕ್ಕಿಸಲಾಗಿತ್ತು. ಎರಡುಗುಂಪಿನ ಮರಿಗಳು ಹಾಲನ್ನೇನೋ ಕುಡಿದವು; ಅವು ಕುಡಿದ ಹಾಲಿನ ಪ್ರಮಾಣದಲ್ಲಿ ವ್ಯತ್ಯಾಸವೇನೂ ಇರಲಿಲ್ಲ. ವ್ಯತ್ಯಾಸವಿದ್ದುದು ಅವುಗಳು ವಿಸರ್ಜಿಸಿದ ಮಲದಲ್ಲಿ (feces). ಒರಟು ತಾಯಿಯೊಡನೆಬೆಳೆದ ಮರಿಗಳಿಗೆ ಅವು ಕುಡಿದ ಹಾಲನ್ನು ಅರಗಿಸಿಕೊಳ್ಳುವುದು ಕಷ್ಟವಾಗಿ ಅವುಗಳ ಮಲ ತೆಳುವಾಗಿದ್ದು, ಭೇದಿಯಾದಂತೆ ಕಂಡು ಬರುತ್ತಿತ್ತು. ಅದು ಮನೋದೈಹಿಕ ವ್ಯಾಧಿಯ (psychosomatic disorder) ಲಕ್ಷಣವೆಂದು ತೀರ್ಮಾನಿಸಲಾಯ್ತು. ಹೀಗೆ, ಒರಟು ತಾಯಿಯ ಒಡನಾಟ ಹೊಟ್ಟೆ ತುಂಬಿಸಿತ್ತು. ಆದರೆ, ತನು ತುಂಬಿದಂತೆ ಮನ ತುಂಬಲಿಲ್ಲ. ದೇಹ ಬೆಳೆಯಿತು, ಪ್ರೀತಿ ಬೆಳೆಯಲಿಲ್ಲ. ಒಲವಿನಬೆಳವಣಿಗೆಗೆ ಹಾಲೊಂದೇ ಸಾಲದು. ಸ್ಪರ್ಶಸೌಖ್ಯ ಹಾಲಿಗಿಂತ ಮಿಗಿಲಾದುದೆಂದು ಈ ಪ್ರಯೋಗಗಳಿಂದ ತಿಳಿದುಬಂತು.

ಮಾನವರ ಮಟ್ಟದಲ್ಲೂ ತಾಯಿಯ ಎದೆ ಹಾಲು ಕುಡಿಯುವ ಮಗುವಿಗೆ ಹಾಲಿಗಿಂತ ತಾಯಿಯ ಬೆಚ್ಚನೆಯ, ಮೃದುವಾದ ಮೈ ಸಂಪರ್ಕ ಬಹಳ ಮುಖ್ಯ ಎಂದು ಹಾರ್ಲೊ ಪ್ರಯೋಗಗಳು ಸೂಚಿಸುತ್ತವೆ.ನೆಲದ ಮೇಲೆ ಮಲಗಿಸಿ, ಚಿನ್ನದ ಚಮಚದಿಂದ ಅಥವಾ ಬೆಳ್ಳಿ ಬಾಟಲಿಯಿಂದ ಹಾಲು ಕುಡಿಸಬೇಡಿ, ನಿಮ್ಮ ಮೈ ಸಂಪರ್ಕ ಮಗುವಿಗಾಗುವಂತೆ ನೋಡಿಕೊಳ್ಳಿ ಎಂದು ಆಧುನಿಕ ತಾಯಿಯರಿಗೆ ಹಾರ್ಲೊಒತ್ತಿ ಹೇಳಿದ್ದಾನೆ. ಒಂದೆಡೆ, ಹಾರ್ಲೊ ಭಾಷಣವನ್ನು ಕೇಳಿದ ಸುಂದರ ಯುವತಾಯಿಯೊಬ್ಬಳು ಅವನ ಬಳಿ ಬಂದು ಪ್ರೊಪೆಸರ್, ಇಂದು ನನ್ನ ತಪ್ಪಿನ ಅರಿವಾಯ್ತು. ನಾನೊಬ್ಬಳು ತಂತಿ ತಾಯಿ ಎಂದಳಂತೆ!ಅವಳು ತಂತಿ ಪತ್ನಿಯೂ ಆಗಿದ್ದಿರಬಹುದೆಂಬುದು ಹಾರ್ಲೊ ಊಹೆ. 

ಒರಟು ತಾಯಿಯ ಜತೆಯಲ್ಲಿ ಬೆಳೆದ ಮರಿಗಳಲ್ಲಿ ಹಲವಾರು ಅನುಚಿತ, ಅಸಂಗತ ವರ್ತನೆಗಳು ಕಂಡುಬಂದಿರುವುದನ್ನು ಹಾರ್ಲೊ ಪ್ರಯೋಗಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ. ಕೆಲವು ಪ್ರಯೋಗಗಳಲ್ಲಿಅಪರಿಚಿತ ಪ್ರಚೋಧನೆಗಳಿಂದ ಮರಿಗಳನ್ನು ಹೆದರಿಸಲಾಯ್ತು. ಹೀಗೆ ಭಯಪಡಿಸಿದಾಗ ಮರಿಗಳು ಮೃದು ತಾಯಿಯನ್ನು ಅಪ್ಪಿಕೊಂಡವೇ ಹೊರತು, ಒರಟು ತಾಯಿಯ ಬಳಿಗೆ ಹೋಗಲಿಲ್ಲ (ಚಿತ್ರ 4).ಇಂಥ ಸನ್ನಿವೇಶದಲ್ಲಿ ಬಟ್ಟೆ ತಾಯಿ ಇಲ್ಲದೆ ಬರಿ ತಂತಿ ತಾಯಿ ಮಾತ್ರ ಇದ್ದರೆ, ಅದರ ಬಳಿಗೆ ಮರಿಗಳು ಹೋಗಲಿಲ್ಲ. ಒಂದು ಮೂಲೆಯಲ್ಲಿ ಭಯದಿಂದ ಮುದುರಿಕೊಂಡು ಕುಳಿತು ಅಳುತ್ತಿದ್ದವು.

ಒರಟು ತಾಯಿಯೊಡನೆ ಬೆಳೆದ ಮಂಗದ ಮರಿಗಳನ್ನು ಹೊಸದಾದ ಅಪರಿಚಿತ ಪರಿಸರದಲ್ಲಿ ಬಿಟ್ಟಾಗ ಅವು ಬಹಳ ಹೆದರುವುದು ಕಂಡುಬಂತು; ಒಂದೆಡೆ ಭಯದಿಂದ ಅಳುತ್ತಾ ಮುದುರಿಕೊಂಡುಕುಳಿತಿರುತ್ತಿದ್ದವು. ಒರಟು ತಾಯಿ ಜತೆಯಲ್ಲಿ ಇರಲಿ, ಇಲ್ಲದಿರಲಿ, ಅವರ ವರ್ತನೆಯಲ್ಲಿ ವ್ಯತ್ಯಾಸವೇನೂ ಕಂಡುಬರಲಿಲ್ಲ. ಮೃದು ತಾಯಿಯೊಡನೆ ಬೆಳೆದ ಮರಿಗಳನ್ನು ತಾಯಿಯ ಜತೆ ಅಪರಿಚಿತಪರಿಸರದಲ್ಲಿ  ಬಿಟ್ಟಾಗ, ಮೊದಲಿಗೆ ಭಯಪಟ್ಟರೂ, ನಿಧಾನವಾಗಿ ಪರಿಸರವನ್ನು ಪರೀಕ್ಷಿಸುವ ಪ್ರಯತ್ನ ಮಾಡುತ್ತಿದ್ದವು. ಮೃದು ತಾಯಿಯ ಸನ್ನಿಧಿ ಅವುಗಳಿಗೆ ಒಂದು ಬಗೆಯ ಮಾನಸಿಕ ರಕ್ಷಣೆಯನ್ನುಒದಗಿಸಿದಂತೆ ಕಂಡುಬರುತ್ತಿತ್ತು.

ಕೃತಕ ತಾಯಿಯರೊಡನೆ ಬೆಳೆಸಿದ್ದ ಮರಿಗಳನ್ನು ಅವುಗಳ ತಾಯಿಯರಿಂದ ಒಂದು ವರ್ಷಕಾಲ ಬೇರ್ಪಡಿಸಿ ಮತ್ತೆ ಅವುಗಳನ್ನು ತಾಯಿಯರ ಬಳಿಗೆ ಬಿಡಲಾಯಿತು. ಆಗ, ಮೃದು ತಾಯಿಯೊಡನೆ ಬೆಳೆದಿದ್ದಮರಿಗಳು ತಮ್ಮ ತಾಯಿಯನ್ನು ಗುರುತಿಸಿ, ಅದನ್ನು ಅಪ್ಪಿಕೊಳ್ಳಲು ಮುಂದಾದವು. ಅಂಥದೇ ಸನ್ನಿವೇಶದಲ್ಲಿ, ತಂತಿ ತಾಯಿಯೊಡನೆ ಬೆಳೆದಿದ್ದ ಮರಿಗಳು ತಮ್ಮ ತಾಯಿಯ ಬಳಿಗೆ ಹೋಗುತ್ತಿರಲಿಲ್ಲ;ಅವುಗಳಲ್ಲ್ಲಿ ಯಾವ ಆಸಕ್ತಿಯನ್ನೂ ತೋರುತ್ತಿರಲಿಲ್ಲ.

ತಾಯಿ ಮತ್ತು ಮಗುವಿನ ನಡುವೆ ಅನುಬಂಧ (attachment) ಬೆಳೆಯುವಲ್ಲಿ ಕೇವಲ ಪಾಲನೆ-ಪೋಶಣೆ ಮಾತ್ರ ಸಾಲುದು, ಅದು ಸ್ಪರ್ಶಸುಖವನ್ನು ಅವಲಂಬಿಸಿರುತ್ತದೆ, ಎನ್ನುವುದನ್ನು ಹಾರ್ಲೊ ನಡೆಸಿದಪ್ರಯೋಗಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ. ಇಂಥ ಪ್ರಯೋಗಗಳನ್ನು ಮಾನವ ಶಿಶುಗಳ ಮೇಲೆ ನಡೆಸುವುದು ಸಾಧ್ಯವಿಲ್ಲ. ಆದರೂ ಸ್ಪರ್ಶಸುಖದ ಪ್ರಭಾವವನ್ನು ತಾಯಿಯಿಂದ ಮಗುವನ್ನುಬೇರ್ಪಡಿಸಲು ಪ್ರಯತ್ನಿಸಿದಾಗ ಕಾಣಬಹುದು. ಉದಾಹರಣೆಗೆ, ತಾಯಿಯ ಹೆಗಲ ಮೇಲಿರುವ ಮಗುವನ್ನು ಯಾರಾದರೂ ಬೇರೆಯವರು ಎತ್ತಿಕೊಳ್ಳಲು ಪ್ರಯತ್ನಿಸಿದಾಗ ಅದು ಹೇಗೆ ವಿರೋಧಿಸುತ್ತದೆಎಂಬುದನ್ನು ಗಮನಿಸಿ, ಆಗ ನಿಮಗೆ ಸ್ಪರ್ಶಸೌಖ್ಯದ ಪ್ರಭಾವ ಅರಿವಾಗುತ್ತದೆ. ಸ್ಪರ್ಶಸುಖದ ಅಭಾವದಿಂದ ಆಗುವ ಅಹಿತಕರ ಪರಿಣಾಮಗಳು ಅನಾಥಾಲಯಗಳಲ್ಲಿ ಬೆಳೆದ ಮಕ್ಕಳ ಅಧ್ಯಯನಗಳಲ್ಲಿಕಂಡುಬಂದಿದೆ. ಅನಾಥಾಲಯಗಳಲ್ಲಿ ಮಕ್ಕಳಿಗೆ ಹೊಟ್ಟೆಗೇನೋ ಕೊಡಲಾಗುತ್ತದೆ. ಆದರೆ, ಅವರನ್ನು ಎತ್ತಿಕೊಂಡು ಮುದ್ದಾಡಲು ಸಾಕಾದಷ್ಟು ಮಂದಿ ದಾದಿಯರಿರುವುದಿಲ್ಲ; ಅವರಿಗೆ ಸ್ಪರ್ಶಸುಖದಅನುಭವ ದೊರಕಿರುವುದಿಲ್ಲ. ಆ ಕಾರಣದಿಂದಾಗಿ ಅಲ್ಲಿ ಬೆಳೆದ ಮಕ್ಕಳು ಹಲವಾರು ಮಾನಸಿಕ ವೈಪರೀತ್ಯಗಳಿಗೆ ತುತ್ತಾಗಿರುವುದು ಕಂಡುಬಂದಿದೆ. ಮಕ್ಕಳನ್ನು ಅನಾಥಾಲಯಗಳಿಗೆ ಕಳಿಸುವುದಕ್ಕಿಂತದತ್ತುಮಕ್ಕಳಾಗಿ ಸಾಕುವುದು ಆರೋಗ್ಯಕರವಾದುದೆಂದು ಈ ಪ್ರಯೋಗಗಳು ತೋರಿಸಿಕೊಟ್ಟಿವೆ.

ಹಾರ್ಲೊ ಮತ್ತು ಅವನ ಸಂಗಡಿಗರು 1960 ರವರೆಗೆ ನಡೆಸಿದ ಪ್ರಯೋಗಗಳ ಸಾರಾಂಶ ಮೇಲಿನದು. ಅನಂತರದ 10-15 ವರ್ಷಗಳಲ್ಲಿ ಅವರು ನಡೆಸಿದ ಪ್ರಯೋಗಗಳು ಅನನ್ಯವಾಗಿರುವಂತೆಯೇ,ವಾದಗ್ರಸ್ತವಾಗಿಯೂ ಇವೆ. ಅವುಗಳ ಒಂದು ಸ್ಥೂಲ ಪರಿಚಯ ಕೆಳಗಿನದು.

ಆರೋಗ್ಯಕರವಾದ ಪ್ರೀತಿಯ ವಿಕಾಸಕ್ಕೆ ಮೆತ್ತನೆ ತಾಯಿಯ ಸ್ಪರ್ಶಸುಖದ ಅನುಭವ ಒಂದೇ ಸಾಲದೆಂಬುದು ಅನಂತರದ ಪ್ರಯೋಗಗಳಿಂದ ಹಾರ್ಲೊಗೆ ಮನದಟ್ಟಾಯಿತು. ಮೃದು ತಾಯಿಯೊಡನೆಬೆಳೆದ ಮರಿಗಳನ್ನು, ಹೆತ್ತ ತಾಯಿಯೊಡನೆ ಬೆಳೆದ ಮರಿಗಳೊಡನೆ ಬಿಟ್ಟಾಗ, ಅವುಗಳ ವರ್ತನೆ ಸಮಂಜಸವಾಗಿರಲಿಲ್ಲ. ಅವು ನಾರ್ಮಲ್ ಆಗಿ ಬೆಳೆದ ಮಂಗಗಳ ಜತೆ ಬೆರೆಯಲು ಇಷ್ಟ ಪಡಲಿಲ್ಲ್ಲ. ಅವುಗಳವರ್ತನೆ ಹಿಂಸಾತ್ಮಕವಾಗಿದ್ದು, ಸಂಘವಿರೋಧವಾಗಿತ್ತು. ಕೆಲವು ತಲೆಯನ್ನು ಚೆಚ್ಚಿಕೊಂಡು ಕಿರುಚಾಡುತ್ತಿದ್ದವು. ಅವುಗಳು ಸಹಜ ಸಂಭೋಗಕ್ರಿಯೆಗಳಲ್ಲಿ ನಿರತವಾಗಲು ಆಸಕ್ತಿ ತೋರಲಿಲ್ಲ; ಆ ಕ್ರಿಯೆಗೆಬೇಕಾದ ಚಲನವಲನಗಳು ಅವುಗಳಲ್ಲ್ಲಿ ಬೆಳೆದಿದ್ದಂತೆ ಕಂಡುಬರಲಿಲ್ಲ. ಅವುಗಳಲ್ಲಿ ಕೆಲವನ್ನು ಬಲವಂತವಾಗಿ ಸಂಭೋಗಕ್ಕೆ ತೊಡಗಿಸಿ, ಗರ್ಭಕಟ್ಟಿಸಿ, ಮರಿಗಳಿಗೆ ಜನ್ಮ ಕೊಡಿಸಲಾಯಿತು. ಆಗ ಅವುತಮ್ಮ ಮರಿಗಳನ್ನು ಪಾಲಿಸುವಲ್ಲಿ ಆಸಕ್ತಿ ತೋರಲಿಲ್ಲ. ತಾವು ಹೆತ್ತ ಮರಿಗಳನ್ನು ಉಪೇಕ್ಷೆ ಮಾಡುವುದು ಕಂಡುಬಂತು. ಹೀಗೆ ನೈಜ ತಾಯಿಯ ಪ್ರೀತಿಯನ್ನು ಅನುಭವಿಸಿಲ್ಲದ ಆ ತಾಯಿಯಿಲ್ಲದತಾಯಿಯರು ತಾವು ಒಳ್ಳೆಯ ತಾಯಿಯರಾಗಿರಲಿಲ್ಲ. ಅವುಗಳಿಗೆ ತಾಯ್ತನದ ಅಭಿವ್ಯಕ್ತಿ ಸಾಧ್ಯವಾಗಲಿಲ್ಲ.

ಮುಂದಿನ ವರ್ಷಗಳಲ್ಲಿ ಹಾರ್ಲೊ ಯಾವುದೇ ವಿಧವಾದ ತಾಯಿಯ (ಕೃತಕ ಅಥವಾ ನೈಜ) ಅಥವಾ ಬೇರೆ ಮಂಗಗಳ ಸಂಪರ್ಕವಿಲ್ಲದೆ ಬೆಳೆದ ಮಂಗಗಳ ವರ್ತನೆಗಳನ್ನು ಅಧ್ಯಯನ ಮಾಡಲುಆರಂಭಿಸಿದ. ಕೆಲವು ಮರಿಗಳನ್ನು ಅವುಗಳ ತಾಯಿ ಮತ್ತು ಬೇರೆ ಮಂಗಗಳಿಂದ ಭಾಗಶಃ ಪ್ರತ್ಯೇಕಿಸಲಾಯ್ತು, ಇನ್ನು ಕೆಲವನ್ನು ಸಂಪೂರ್ಣವಾಗಿ ಬೇರ್ಪಡಿಸಲಾಯ್ತು. ಭಾಗಶಃ ಪ್ರತ್ಯೇಕಿಸಲಾದಮರಿಗಳನ್ನು ಪಂಜರದಲ್ಲಿಡಲಾಗಿತ್ತ್ತು. ಅವು ಬೇರೆ ಮಂಗಗಳನ್ನು ನೋಡುವ, ಅವುಗಳ ಧ್ವನಿಯನ್ನು ಕೇಳುವ ಅವಕಾಶವಿತ್ತು. ಆದರೆ ದೈಹಿಕ ಸಂಪರ್ಕದ ಅವಕಾಶವಿರಲಿಲ್ಲ. ಪೂರ್ಣವಾಗಿ ಪ್ರತ್ಯೇಕಿಸಲಾದಮರಿಗಳಿಗೆ ಬೇರೆ ಮಂಗಗಳೊಡನೆ ಯಾವುದೇ ವಿಧವಾದ ಸಂಪರ್ಕವಿರದಂತೆ ನೋಡಿಕೊಳ್ಳಲಾಗಿತ್ತು. ಭಾಗಶಃ ಒಂಟಿಯಾಗಿ ಬೆಳೆದ ಮರಿಗಳು ಬಹಳಷ್ಟು ಅನುಚಿತ ವರ್ತನೆಗಳನ್ನು ಪ್ರದರ್ಶಿಸಿದವು.ಅವುಗಳಲ್ಲಿ ಶೂನ್ಯ ನೋಟ, ಮಾಡಿದ್ದನ್ನೆ ಮತ್ತೆ ಮತ್ತೆ ಮಾಡುವುದು, ಪಂಜರದೊಳಗೆ ಸುತ್ತುವುದು, ತಮ್ಮನ್ನು ತಾವೆ ವಿರೂಪಗೊಳಿಸಿಕೊಳ್ಳುವುದೇ ಮುಂತಾದ ವರ್ತನೆಗಳು ಕಂಡುಬಂದವು.ಸಂಪೂರ್ಣವಾಗಿ 6, 12, ಅಥವಾ 24 ತಿಂಗಳುಗಳು ಒಂಟಿಯಾಗಿ ಬೆಳೆದಿದ್ದ ಮಂಗಗಳ ಸ್ಥಿತಿ ಬಹಳ ಕೆಟ್ಟದಾಗಿತ್ತು. ಅವುಗಳು ಹಲವಾರು ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿರುವುದುಕಂಡುಬಂತು.

ಆರು ತಿಂಗಳು ಒಂಟಿಯಾಗಿ ಬೆಳೆದ ಮರಿಗಳನ್ನು ನಾರ್ಮಲ್ ಮಂಗಗಳೊಡನೆ ಬಿಟ್ಟು ಅವುಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಫಲಕಾರಿಯಾಗಲಿಲ್ಲ. ಮೊದಲ 6 ತಿಂಗಳು ಮಕ್ಕಳ ಜೀವನದಲ್ಲಿಬಹಳ ಪ್ರಮುಖವಾದವು. 6 ತಿಂಗಳು ಬೇರ್ಪಟ್ಟ ಮರಿಗಳನ್ನು ಸರಿ ದಾರಿಗೆ ತರುವುದು ಕಷ್ಟ. ಇದು ಮಾನವ ಶಿಶುಗಳಿಗೂ ಅನ್ವಯವಾಗುತ್ತದೆ.

ಹಾರ್ಲೊ ಮಂಗದ ಮರಿಗಳನ್ನು ತನ್ನ ಪ್ರಯೋಗಗಳಲ್ಲಿ ಬಹಳ ಕ್ರೂರವಾಗಿ ನಡೆಸಿಕೊಂಡನೆಂಬ ಅಪವಾದವಿದೆ. ಅದನ್ನು ಅವನೂ ಒಪ್ಪಿಕೊಂಡಿದ್ದಾನೆ. ಆದರೆ ಅದು ಅನಿವಾರ್ಯವಾಗಿತ್ತು. ಲಕ್ಷಾಂತರಮಕ್ಕಳ ಒಳಿತಿಗಾಗಿ, ಹತ್ತು ಮಂಗಗಳನ್ನು ಹಿಂಸೆಗೊಳಪಡಿಸುವುದು ಅಪರಾಧವಲ್ಲವೆಂಬುದು ಅವನ ವಾದ. ಇಂದು ಪ್ರಾಣಿಗಳನ್ನು ಪ್ರಯೋಗಗಳಿಗೆ ಉಪಯೋಗಿಸಿಕೊಳ್ಳುವುದನ್ನು ಪ್ರಾಣಿ ದಯಾಸಂಘಗಳು ವಿರೋಧಿಸುತ್ತಿವೆ. ಅದು ಕ್ರೌರ್ಯ ಮತ್ತು ಅನೈತಿಕವೆಂದು ಪರಿಗಣಿಸಲಾಗುತ್ತದೆ. ಮನುಷ್ಯ ತನ್ನ ಸುಖಕ್ಕಾಗಿ ಬೇರೆ ಮನುಷ್ಯರನ್ನೇ ಹಿಂಸಿಸುವುದು ಸರ್ವೇಸಾಮಾನ್ಯ. ಆದುದರಿಂದ ಒಳ್ಳೆಯಉದ್ದೇಶಕ್ಕಾಗಿ ಕೆಲವು ಪ್ರಾಣಿಗಳನ್ನು ಹಿಂಸಿಸಿದ ಹಾರ್ಲೊನಲ್ಲಿ ತಪ್ಪು ಹುಡುಕುವುದು ಸರಿಯಲ್ಲವೆನ್ನಬಹುದು.

ಮಾನವ ಬೆಳೆಯುವ ಪರಿಸರ ಸಂಕೀರ್ಣವಾದುದು. ಕೇವಲ ದೈಹಿಕ ಅವಶ್ಯಕತೆಗಳಾದ ಅನ್ನ ನೀರುಗಳನ್ನು ಪೂರೈಸುವುದರಿಂದ ಅವನಿಗೆ ಪೂರ್ಣ ತೃಪ್ತಿ ಸಿಗುವುದಿಲ್ಲ. ಮನುಷ್ಯ ಸಂಘಜೀವಿ. ಅವನಿಗೆಇತರರ ಪ್ರೀತಿ-ಪ್ರೇಮ ಬಹಳ ಅವಶ್ಯಕ. ಸ್ಪರ್ಶ ಅಂದರೆ, ಮುಟ್ಟುವುದು ಮುಟ್ಟಿಸಿಕೊಳ್ಳುವುದು-ಪ್ರೀತಿಯ ಅವಿಭಾಜ್ಯ ಘಟಕ. ಸ್ಪರ್ಶೇಂದ್ರಿಯ ಬೇರೆಲ್ಲಾ ಇಂದ್ರಿಯಗಳೆಲ್ಲಕ್ಕಿಂತಲೂ ಬಹಳ ಮುಖ್ಯವಾದುದು.ಸ್ಪರ್ಶಾನುಭವ ಸಕಲ ಜೀವರಾಶಿಗಳಿಗೂ ಅವಶ್ಯಕವೆಂದು ತಿಳಿದುಬಂದಿದೆ. ಮಾನವರ ಹಂತದಲ್ಲಂತೂ ಅದು ಅತ್ಯಾವಶ್ಯಕ. ಜೀವವಿಕಾಸದ ಹಾದಿಯಲ್ಲಿ ಮೊದಲು ಹುಟ್ಟಿದ್ದು ಸ್ಪರ್ಶಜ್ಞಾನ (ಅಮೀಬದಲ್ಲಿಸ್ಪರ್ಶವಲ್ಲದೆ ಬೇರಾವ ಇಂದ್ರಿಯಾನುಭವವೂ ಇರುವುದಿಲ್ಲ). ನಾವು ಪ್ರಮುಖವೆಂದು ತಿಳಿದಿರುವ ಇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಗೆ) ನಾಶವಾದರೂ ಪ್ರಾಣಿಗಳು ಬದುಕಬಲ್ಲವು. ಆದರೆ,ಸ್ಪರ್ಶೇಂದ್ರಿಯ ನಾಶವಾದರೆ ಯಾವ ಪ್ರಾಣಿಯೂ ಬದುಕಿರಲಾರರು. ದೇವರ ದಯೆ! ಅದು ಸಾಮಾನ್ಯವಾಗಿ ನಾಶವಾಗುವುದಿಲ್ಲ.  

References
  1. Fromm, E. (1956). The art of loving. New York: Bantam.
  2. Harlow, H. F. (1958). The nature of love.  American Psychologist, 13, 673-685.
  3. Harlow, H. F. & Zimmerman, R. R. (1959). Affectional responses in the infant monkey. Science, 130, 421-432.
  4. Harlow, H. F. & Harlow, M. K. (1966). Learning to love. American Scientist, 54, 244-272.
  5. Harlow, H. F. (1974). Learning to love. New York: Aronson. 
  6. Harlow, H. F. & Suomi, S. J. (1970). The nature of love-simplified. American Psychologist, 25. 161-168.

(ಈ ಪತ್ರಿಕೆಯ ಆಗಸ್ಟ್ 2012ರ ಸಂಚಿಕೆಯ ಸಂಪಾದಕೀಯದಲ್ಲಿ ಪ್ರೀತಿಯ ವಿಷಯವಾಗಿ  ಓಶೋ ಹೇಳಿದ ಕತೆಯೊಂದರ ಬಗ್ಗೆ ಬರೆಯಲಾಗಿತ್ತು. ಅಲ್ಲಿ ರಷ್ಯ ದೇಶದ ವಿಜ್ಞಾನಿಯೊಬ್ಬ ಮಂಗಗಳ ಮೇಲೆನಡೆಸಿದ ಪ್ರಯೋಗವನ್ನು ಕುರಿತು ಹೇಳಲಾಗಿದೆ. ನನಗೆ ಓಶೋ ವಿಚಾರವಾಗಿಯಾಗಲೀ, ರಷ್ಯದ ವಿಜ್ಞಾನಿಯ ಪ್ರಯೋಗದ ವಿಚಾರವಾಗಿಯಾಗಲೀ ತಿಳಿಯದು. ಆದರೆ, ಈ ಸಂದರ್ಭದಲ್ಲಿ ನನ್ನ ನೆನಪಿಗೆಬಂದದ್ದು ಪ್ರೀತಿಯ ಉಗಮದ ಬಗ್ಗೆ ಅಮೆರಿಕನ್ ಮನೋವಿಜ್ಞಾನಿಯೊಬ್ಬರು ನಡೆಸಿದ ಚರಿತ್ರಾರ್ಹ ಪ್ರಯೋಗ. ಆ ಪ್ರಯೋಗದ ಸಾರಾಂಶವನ್ನು ಈ ಪತ್ರಿಕೆಯ ಓದುಗರೊಡನೆ ಹಂಚಿಕೊಳ್ಳುವ ಬಯಕೆಯಅಕ್ಷರರೂಪ ಈ ಲೇಖನ).

M. Basavanna 
Bangalore
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com