ಸಾರಾಂಶ ದೈಹಿಕ ಚಟುವಟಿಕೆ ಎಂಬುದು ಇತ್ತೀಚೆಗೆ ಒಂದು ಪ್ರಮುಖ ಆರೋಗ್ಯ ಸೂಚಕ ಅಂಶಗಳಲ್ಲಿ ಒಂದಾಗಿದೆ. ಯುವ ವಯಸ್ಕರಲ್ಲಿ ಅದರಲ್ಲೂ ಪದವಿ ವಿದ್ಯಾರ್ಥಿನಿಯರಲ್ಲಿ ದೈಹಿಕ ಚಟುವಟಿಕೆಯಲ್ಲಿ ವ್ಯಾಯಾಮ ಚಟುವಟಿಕೆ ಯಾವ ಮಾದರಿಯಲ್ಲಿ ಇದೆ ಎಂದು ಅಧ್ಯಯನ ಮಾಡುವುದು ಈ ಅಧ್ಯಯನದ ಉದ್ದೇಶವಾಗಿದೆ. ಸರಳ ಯಾದೃಚ್ಛಿಕ ಮಾದರಿಯ ಮೂಲಕ ಶಿವಮೊಗ್ಗ ನಗರದ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿನಿಯರಲ್ಲಿ ಬಿಎ, ಬಿಕಾಂ, ಬಿಎಸ್ಸಿ ತರಗತಿಗಳಿಂದ 19 ರಿಂದ 23 ವಯಸ್ಸಿನ ಅವಧಿಯ ತಲಾ 15 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡು ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಾಗಿದೆ. ಒಟ್ಟು 45 ವಿದ್ಯಾರ್ಥಿನಿಯರನ್ನು ಕುರಿತು ಅಧ್ಯಯನ ಕೈಗೊಳ್ಳಲಾಗಿದೆ. ಸಂದರ್ಶನ ಅನುಸೂಚಿ ತಯಾರಿಸುವುದರ ಮೂಲಕ, ಮಾದರಿಗಳನ್ನು ಸಂದರ್ಶನ ಮಾಡುವುದರ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ದೈಹಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿನಿಯರು ವ್ಯಾಯಾಮಕ್ಕೆ ಆಯ್ಕೆ ಮಾಡುವ ಸಮಯ, ವ್ಯಾಯಾಮದ ಮಾಹಿತಿಯ ಮೂಲ, ಯಾವ ರೀತಿಯ ವ್ಯಾಯಾಮದ ಆಯ್ಕೆ ಮಾಡುತ್ತಾರೆ, ವ್ಯಾಯಾಮ ಮಾಡದಿದ್ದರೆ ಅದಕ್ಕೆ ಕಾರಣಗಳೇನು ಎಂದೂ ತಿಳಿಯಲಾಗಿದೆ. ಪ್ರಮುಖ ಪದಗಳು : ದೈಹಿಕ ಚಟುವಟಿಕೆ, ವ್ಯಾಯಾಮ, ವಿದ್ಯಾರ್ಥಿನಿಯರು, ಆರೋಗ್ಯ. ಪೀಠಿಕೆ ಒಟ್ಟಾರೆ ಆರೋಗ್ಯ ಮತ್ತು ದೈಹಿಕ ಕ್ಷೇಮ ನಿರ್ವಹಿಸಲು ದೈಹಿಕ ಚಟುವಟಿಕೆ ಅಗತ್ಯವಾಗಿದೆ.1 ಶಾರೀರಿಕ ವ್ಯಾಯಾಮದಿಂದ ಸ್ನಾಯು ಬಲಪಡಿಸಲು, ತೂಕ ಕಳೆದುಕೊಳ್ಳಲು ಮತ್ತು ತೂಕ ನಿರ್ವಹಣೆ ಮಾಡಲು, ಹೃದಯನಾಳದ ವ್ಯವಸ್ಥೆ ಸರಿಯಾಗಿಡಲು ಮತ್ತು ಮನೋರಂಜನೆಗಾಗಿ, ವಿವಿಧ ಕಾರಣಗಳಿಗಾಗಿ ಶಾರೀರಿಕ ವ್ಯಾಯಾಮ ನಡೆಸಲಾಗುತ್ತದೆ. ನಿಯಮಿತ ವ್ಯಾಯಾಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಖಾಯಿಲೆ, ಮಧುಮೇಹ, ಸ್ಥೂಲಕಾಯತೆ ಇತ್ಯಾದಿ ಖಾಯಿಲೆ ತಡೆಯಲು ಸಹಾಯಕವಾಗಿದೆ.2,3 ಒತ್ತಡ, ಖಿನ್ನತೆ, ನಿದ್ರಾಹಿನತೆ ಉಂಟಾಗದಂತೆ, ಸ್ಥಿರ ಜೀರ್ಣಕ್ರಿಯೆ ನಿರ್ವಹಿಸಲು, ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು, ಮಲಬದ್ಧತೆ ನಿಯಂತ್ರಿಸಲು, ವ್ಯಕ್ತಿಯ ದೈಹಿಕ ಸದೃಢತೆ ಕಾಯ್ದುಕೊಳ್ಳಲು, ಬೊಜ್ಜು ನಿಯಂತ್ರಿಸಲು, ದೇಹದ ಅಂದ ಕಾಯ್ದುಕೊಳ್ಳಲು ಸಹಾಯಕವಾಗಿದೆ.456 ವ್ಯಾಯಾಮದ ಉಪಯೋಗಗಳು ಪುರಾತನ ಕಾಲದಿಂದಲೂ ತಿಳಿದು ಬಂದಿದೆ. ಮಾರ್ಕಸ್ ಸಿಸೆರೊ ಸುಮಾರು ಕ್ರಿಸ್ತ ಪೂರ್ವ 65 ರಲ್ಲಿಯೇ ವ್ಯಾಯಾಮದ ಬಗ್ಗೆ ಹೇಳಿಕೆ ನೀಡಿದ್ದಾರೆ. ವ್ಯಾಯಾಮವು ದೇಹವನ್ನು ಚೈತನ್ಯದಿಂದ ಇಡಲು ಮತ್ತು ಮನಸ್ಸನ್ನು ಉತ್ತಮ ಸ್ಥಿತಿಯಲ್ಲಿ ಇಡಲು ಸಹಾಯಕವಾಗಿದೆ11. ಹಲವಾರು ಸಾಮೂಹಿಕ ವ್ಯಾಯಾಮ ಆರಂಭವಾದದ್ದು ಮತ್ತು ಅದರ ಉಪಯೋಗದ ಬಗ್ಗೆ ಗಮನ ಹರಿದದ್ದು 20ನೇ ಶತಮಾನದ ಮಧ್ಯಭಾಗದಲ್ಲಿ. ಮೊದಲಿಗೆ ಮೆರಿ ಬಾಗಟ್ ಸ್ಟಾಕ್ ಎಂಬುವವರು 1930 ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಮಹಿಳಾ ಸಂಘಟನೆ ಸ್ಥಾಪಿಸಿದರು. ಇದು ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಮಹತ್ವ ನೀಡಿತು.12 ಶಾರೀರಿಕ ವ್ಯಾಯಾಮವನ್ನು ಸಾಮಾನ್ಯವಾಗಿ ಮೂರು ರೀತಿ ವರ್ಗೀಕರಣ ಮಾಡಲಾಗಿದೆ. ಏರೋಬಿಕ್, ಅನಾಏರೋಬಿಕ್, ಫ್ಲೆಕ್ಸಿಬಿಲಿಟಿ ವ್ಯಾಯಾಮ ಎಂದು ವರ್ಗೀಕರಣ ಮಾಡಲಾಗಿದೆ. ಈ ರೀತಿ ವ್ಯಾಯಾಮದಲ್ಲಿ ಸೈಕ್ಲಿಂಗ್, ಈಜು, ವಾಕಿಂಗ್, ಹಗ್ಗ ಜಿಗಿಯುವುದು, ರೋಯಿಂಗ್, ಹೈಕಿಂಗ್, ಟೆನ್ನಿಸ್ ಇತ್ಯಾದಿ ಬರುತ್ತವೆ7. ಒಬ್ಬೊಬ್ಬರು ಒಂದೊಂದು ರೀತಿ ವ್ಯಾಯಾಮದಲ್ಲಿ ತೊಡಗುತ್ತಾರೆ. ಶಾರೀರಿಕ ಆರೋಗ್ಯ ಕಾಯ್ದುಕೊಳ್ಳುವುದು ಮುಖ್ಯ. ಅದಕ್ಕೆ ದೈಹಿಕ ವ್ಯಾಯಾಮದಲ್ಲಿ ತೊಡಗುವುದು ಮುಖ್ಯ. ಇದರಿಂದ ದೈಹಿಕ ಮತ್ತು ಆರೋಗ್ಯಕರ ತೂಕ ಕಾಪಾಡಲು, ಜೀರ್ಣಕ್ರಿಯೆ ನಿಯಂತ್ರಿಸಲು, ಆರೋಗ್ಯಕರ ಮೂಳೆ ಸಾಂದ್ರತೆ ಹೊಂದಲು, ಸ್ನಾಯು ಶಕ್ತಿ ಮತ್ತು ಕೀಲಿನ ಚಲನೆ ಕಾಯ್ದುಕೊಳ್ಳಲು, ಮಾನಸಿಕ ಆರೋಗ್ಯ ಕಾಪಾಡಲು, ಪ್ರತಿರಕ್ಷಣ ವ್ಯವಸ್ಥೆ ಬಲಪಡಿಸಲು ಸಹಾಯವಾಗುತ್ತದೆ. ಕೆಲ ಅಧ್ಯಯನಗಳು ವ್ಯಾಯಾಮವು ದೀರ್ಘಾಯಸ್ಸು ಮತ್ತು ಜೀವನ ಗುಣಮಟ್ಟ ಹೆಚ್ಚಿಸುತ್ತವೆ ಎಂದು ತಿಳಿಸುತ್ತವೆ8. ದೈಹಿಕ ವ್ಯಾಯಾಮದಲ್ಲಿ ಸಾಧಾರಣ ಮತ್ತು ಅಧಿಕ ಮಟ್ಟದ ಪಾಲ್ಗೊಳ್ಳುವ ಜನರಿಗೆ ಹೋಲಿಸಿದಾಗ, ಅಧಿಕ ಮಟ್ಟದಲ್ಲಿ ವ್ಯಾಯಾಮದಲ್ಲಿ ಪಾಲ್ಗೊಳ್ಳುವ ಜನರ ಮರಣ ಪ್ರಮಾಣ ಕಡಿಮೆ ಎಂದು ತಿಳಿಯಲಾಗಿದೆ.9 ಇತ್ತೀಚೆಗೆ ವ್ಯಾಯಾಮ ಪ್ರವೃತ್ತಿಗಳು ಇಲ್ಲದಂತೆ ಆಗಿದೆ. ಕಡಿಮೆ ದೈಹಿಕ ಶ್ರಮದ ಕಾರ್ಯಪ್ರವೃತ್ತಿಗೆ ವಿಶ್ವದಾದ್ಯಂತ ಜನರು ವಾಲುತ್ತಿದ್ದಾರೆ. ಯಾಂತ್ರಿಕೃತ ಸಾರಿಗೆ, ಮನೆಯಲ್ಲಿ ಯಾಂತ್ರಿಕ ಉಪಕರಣಗಳ ಬಳಕೆಯಿಂದಾಗಿ ದೈಹಿಕ ಚಟುವಟಿಕೆಗೆ ಕಡಿಮೆಯಾಗಿದೆ.10 ಅಧ್ಯಯನದ ಮಹತ್ವ ಪ್ರತಿದಿನ ದೈಹಿಕ ಚಟುವಟಿಕೆಯು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಮುಖವಾದುದು. ದೈಹಿಕ ಚಟುವಟಿಕೆಯು ಮಾನವನ ಸಂಪೂರ್ಣ ಆರೋಗ್ಯಕ್ಕೆ ಸಹಾಯಕವಾದುದು. ಆರೋಗ್ಯಕರ ತೂಕ ನಿರ್ವಹಿಸಲು ಮತ್ತು ಅನೇಕ ದೀರ್ಘಕಾಲದ ರೋಗಗಳನ್ನು ತಡೆಯಲು ಮತ್ತು ಉತ್ತಮ ಮಾನಸಿಕ ಆರೋಗ್ಯ ವೃದ್ಧಿಸಲು ಸಹಾಯಕವಾದುದು. ಆಸ್ಟ್ರೇಲಿಯಾದ ಫಿಸಿಕಲ್ ಆಕ್ಟಿವಿಟಿ ಅಂಡ್ ಸೆಡೆಟರಿ ಬಿಹೇವಿಯರ್ ಗೈಡ್ಲೈನ್ಸ್ ಸಂಸ್ಥೆಯು ಪ್ರತಿದಿನ ಕನಿಷ್ಟ 30 ನಿಮಿಷಗಳು ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಮಾರ್ಗಸೂಚಿ ನೀಡಿದೆ. ಪ್ರತಿ ಪುರುಷ ಮತ್ತು ಸ್ತ್ರೀಗೂ ಇದು ಅನ್ವಯಿಸುತ್ತದೆ ಎಂದಿದೆ. ಸಾಮಾನ್ಯವಾಗಿ ಮಹಿಳೆಯರು ದೈಹಿಕ ಚಟುವಟಿಕೆಯಲ್ಲಿ ತೊಡಗಲು ಕಾರಣಗಳು ತಮ್ಮ ದೈಹಿಕತೆ ಕಾಪಾಡಲು, ಸಂತೋಷಕ್ಕಾಗಿ, ತೂಕ ನಿರ್ವಹಿಸಲು, ಕೆಲ ಸಮಯ ಅವುಗಳಿಗಾಗಿ ಮೀಸಲಿಡಬೇಕೆಂದು ಅನೇಕ ಅಧ್ಯಯನಗಳಿಂದ ತಿಳಿದಿದೆ. ಹಾಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗದಿರಲು ಕಾರಣಗಳು ಸಮಯದ ಅಭಾವ, ಪ್ರಚೋದನೆಯ ಕೊರತೆ, ಶಕ್ತಿಯ ಕೊರತೆ, ಆರೋಗ್ಯ ಪರಿಸ್ಥಿತಿಗಳು, ಹಣದ ಕೊರತೆ, ಲಿಂಗ ಅಸಮಾನತೆ ಎಂದು ಕೆಲ ಅಧ್ಯಯನಗಳಿಂದ ತಿಳಿದಿದೆ. ದೈಹಿಕ ಚಟುವಟಿಕೆಯಿಂದ ಎಂಡ್ರೋಪಿನ್ ಎಂಬ (say- en-DOR-fin) ಹಾರ್ಮೋನ್ ಬಿಡುಗಡೆ ಆಗಿ ಮೆದುಳನ್ನು ಆರಾಮದಾಯಕವಾಗಿ ಇಡಲು ಸಹಾಯಕವಾಗಿದೆ. ಅದರಲ್ಲೂ ಕಾಲೇಜಿನ ಹುಡುಗಿಯರಲ್ಲಿ ದೈಹಿಕ ಚಟುವಟಿಕೆಯಿಂದ ಒತ್ತಡ ನಿವಾರಿಸಲು, ನಿದ್ರಾಹಿನತೆ ನಿವಾರಿಸಲು, ಖಿನ್ನತೆ ಮತ್ತು ಆತಂಕ ನಿವಾರಿಸಲು ಸ್ವಾಭಿಮಾನ ಹೆಚ್ಚಿಸಲು, ಅಧ್ಯಯನದಲ್ಲಿ ಮುಂದುವರಿಯಲು ಸಹಾಯಕವಾಗಿದೆ. ಹಾಗಾಗಿ ಆರೋಗ್ಯದ ಉತ್ತಮ ಆರೈಕೆ ಮುಖ್ಯವಾಗಿದೆ. ಅಧ್ಯಯನದ ಉದ್ದೇಶ 1. ಪದವಿ ವಿದ್ಯಾರ್ಥಿನಿಯರಲ್ಲಿ ವ್ಯಾಯಾಮದ ಪ್ರವೃತ್ತಿ ತಿಳಿಯುವುದು. 2. ಪದವಿ ವಿದ್ಯಾರ್ಥಿನಿಯರಿಗೆ ವ್ಯಾಯಾಮದ ಮಾಹಿತಿಯ ಮೂಲ ತಿಳಿಯುವುದು. 3. ಪದವಿ ವಿದ್ಯಾರ್ಥಿನಿಯರಲ್ಲಿ ಯಾವ ಮಾದರಿಯ ದೈಹಿಕ ಚಟುವಟಿಕೆ ಇದೆ ಎಂದು ತಿಳಿಯುವುದು. 4. ಪದವಿ ವಿದ್ಯಾರ್ಥಿನಿಯರಲ್ಲಿ ವ್ಯಾಯಾಮದ ಕೊರತೆಗೆ ಕಾರಣ ತಿಳಿಯುವುದು. ಸಂಶೋಧನ ಪದ್ಧತಿಗಳು ಪ್ರಸ್ತುತ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವ ಪದವಿ ವಿದ್ಯಾರ್ಥಿನಿಯರು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯವರಾಗಿರುತ್ತಾರೆ. ಶಿವಮೊಗ್ಗ ಒಂದು ಸಾಂಸ್ಕೃತಿಕ ಪ್ರದೇಶವಾಗಿದ್ದು, ಮಲೆನಾಡು ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ತುಂಗಾ ನದಿ ಹರಿಯುತ್ತದೆ ಮತ್ತು ಪಶ್ಚಿಮ ಘಟ್ಟಗಳಿಗೆ ಹೆಸರಾಗಿದೆ. ಇಲ್ಲಿನ ಜನಸಂಖ್ಯೆ 2011 ರ ಜನಗಣತಿಯಂತೆ 322428 ಆಗಿದ್ದು, ಸಾಕ್ಷರತೆ ಪ್ರಮಾಣ 88.2% ಇದ್ದು, ಲಿಂಗಾನುಪಾತ 1000 ಹುಡುಗರಿಗೆ 961 ಹುಡುಗಿಯರಿದ್ದಾರೆ.13 ಇಲ್ಲಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವ ಪದವಿ ವಿದ್ಯಾರ್ಥಿನಿಯರು 2016ನೇ ಸಾಲಿನ ಶಿವಮೊಗ್ಗ ಜಿಲ್ಲೆ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿನಿಯರಾಗಿದ್ದು ಒಟ್ಟು 45 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. ಪ್ರತಿ ತರಗತಿಯಿಂದ ತಲಾ 15 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಯೋಮಾನ 19 ರಿಂದ 23 ಆಗಿರುತ್ತದೆ. ಯಾದೃಚ್ಛಿಕ ಮಾದರಿ ವಿಧಾನದ ಮೂಲಕ ಮಾಹಿತಿದಾರರನ್ನು ಗುರುತಿಸಿ 45 ಪದವಿ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಲಾಗಿದೆ, 19 ರಿಂದ 23 ವಯೋಮಾನದ ವಿದ್ಯಾರ್ಥಿನಿಯರನ್ನ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಪ್ರಾಥಮಿಕ ಮಾಹಿತಿ ಸಂಗ್ರಹಣೆ ವಿಧಾನವನ್ನು ಆಧರಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಮಾಹಿತಿ ಸಂಗ್ರಹಣೆಗೆ ಸಂದರ್ಶನ ದರ್ಶಿಕೆಯನ್ನು ಸಿದ್ಧಪಡಿಸಿ, ಕ್ಷೇತ್ರಕಾರ್ಯದ ಮೂಲಕ ರಚಿಸಿದ ಪ್ರಶ್ನಾವಳಿಗಳನ್ನು ವಿದ್ಯಾರ್ಥಿನಿಯರಿಗೆ ಕೇಳುವುದರ ಮೂಲಕ ಸಂದರ್ಶನ ಮಾಡಲಾಗಿದೆ. ಆ ಮೂಲಕ ಅಧ್ಯಯನದ ಮಾಹಿತಿ ಸಂಗ್ರಹಿಸಲಾಗಿದೆ. ಮಾಹಿತಿ ಸಂಗ್ರಹಣೆಯನ್ನು ತರಗತಿಯಲ್ಲಿ ಸಮಯ ತೆಗೆದುಕೊಂಡು ಮಾಡಲಾಗಿದೆ. ಮಾಹಿತಿಯನ್ನು SPSS (Statistical Package for the Social Sciences) version 20ರಲ್ಲಿ ಸಂಕೇತಿಕರಣ ಮಾಡಲಾಗಿದೆ. ನಂತರ ಶೇಕಡವಾರು ತೆಗೆಯಲಾಗಿದೆ. ಸಂಶೋಧನ ಪ್ರಕ್ರಿಯೆ/ ಫಲಿತಾಂಶ ಮಾಹಿತಿಯನ್ನು SPSS (Statistical Package for the Social Sciences) version 20 ರಲ್ಲಿ ಸಂಕೇತಿಕರಣ ಮಾಡಲಾಗಿದೆ. ನಂತರ ಶೇಕಡವಾರು ತೆಗೆಯಲಾಗಿದೆ. ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನು ಮಾತ್ರ ಆಯ್ಕೆ ಮಾಡಿಕೊಂಡು ಅಧ್ಯಯನಿಸಲಾಗಿದೆ. ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿನಿಯರು 19 ರಿಂದ 23 ವಯೋಮಾನದವರಾಗಿದ್ದಾರೆ. ಶೇ 35.6ರಷ್ಟು ವಿದ್ಯಾರ್ಥಿನಿಯರು 19-20 ವಯೋಮಾನದವರು, ಶೇ 60.0ರಷ್ಟು ವಿದ್ಯಾರ್ಥಿನಿಯರು 20-21 ವಯೋಮಾನದವರು, ಶೇ 2.2ರಷ್ಟು ವಿದ್ಯಾರ್ಥಿನಿಯರು 21-22 ವಯೋಮಾನದವರು, ಶೇ 2.2ರಷ್ಟು ವಿದ್ಯಾರ್ಥಿನಿಯರು 22-23 ವಯೋಮಾನದವರು ಆಗಿರುತ್ತಾರೆ. 20-21 ವಯೋಮಾನದವರು ಹೆಚ್ಚಿದ್ದಾರೆ. ಆಯ್ಕೆ ಮಾಡಿದ ಮಾಹಿತಿದಾರರಲ್ಲಿ ಶೇ 62.2 ರಷ್ಟು ನಗರವಾಸಿಗಳಾಗಿದ್ದಾರೆ, ಶೇ 6.7ರಷ್ಟು ಉಪನಗರವಾಸಿಗಳಾಗಿದ್ದಾರೆ, ಶೇ 31.1ರಷ್ಟು ಗ್ರಾಮೀಣವಾಸಿಗಳಾಗಿದ್ದಾರೆ. ನಗರವಾಸಿಗಳೇ ಹೆಚ್ಚಿದ್ದಾರೆ. ಆಯ್ಕೆ ಮಾಡಿದ ವಿದ್ಯಾರ್ಥಿನಿಯರಲ್ಲಿ ಬಿಎ ತರಗತಿಯಿಂದ ಶೇ 33.3 ರಷ್ಟು, ಬಿಕಾಂ ತರಗತಿಯಿಂದ ಶೇ 33.3 ರಷ್ಟು, ಬಿಎಸ್ಸಿ ತರಗತಿಯಿಂದ ಶೇ 33.3 ರಷ್ಟು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿದೆ. ಮಾದರಿಗಳನ್ನು ಸಮವಾಗಿ ತೆಗೆದುಕೊಳ್ಳಲಾಗಿದೆ. ಮಾಹಿತಿದಾರರಲ್ಲಿ ವಿಭಕ್ತ ಕುಟುಂಬದಿಂದ ಶೇ 93.3 ರಷ್ಟು ವಿದ್ಯಾರ್ಥಿನಿಯರು, ಅವಿಭಕ್ತ ಕುಟುಂಬದಿಂದ ಶೇ 6.7 ರಷ್ಟು ವಿದ್ಯಾರ್ಥಿನಿಯರು ಇದ್ದಾರೆ. ಹೆಚ್ಚಾಗಿ ವಿಭಕ್ತ ಕುಟುಂಬಗಳು ಇವೆ. ಶೇ 4.4 ರಷ್ಟು ವಿದ್ಯಾರ್ಥಿನಿಯರು ಆದಿಕರ್ನಾಟಕ ಜಾತಿಯವರು, ಶೇ 2.2 ರಷ್ಟು ವಿದ್ಯಾರ್ಥಿನಿಯರು ಭೋವಿ ಜಾತಿಯವರು, ಶೇ 2.2 ರಷ್ಟು ವಿದ್ಯಾರ್ಥಿನಿಯರು ಬ್ರಾಹ್ಮಣ ಜಾತಿಯವರು, ಶೇ 2.2 ರಷ್ಟು ವಿದ್ಯಾರ್ಥಿನಿಯರು ಕ್ರಿಶ್ಚಿಯನ್ನ ಜಾತಿಯವರು, ಶೇ 2.2 ರಷ್ಟು ವಿದ್ಯಾರ್ಥಿನಿಯರು ದೇವಾಂಗ ಜಾತಿಯವರು, ಶೇ 6.7ರಷ್ಟು ವಿದ್ಯಾರ್ಥಿನಿಯರು ಈಡಿಗ ಜಾತಿಯವರು, ಶೇ 2.2 ರಷ್ಟು ವಿದ್ಯಾರ್ಥಿನಿಯರು ಕ್ಷತ್ರಿಯ ಜಾತಿಯವರು, ಶೇ 4.4 ರಷ್ಟು ವಿದ್ಯಾರ್ಥಿನಿಯರು ಕುರುಬ ಜಾತಿಯವರು, ಶೇ 2.2 ರಷ್ಟು ವಿದ್ಯಾರ್ಥಿನಿಯರು ಲಂಬಾಣಿ ಜಾತಿಯವರು, ಶೇ 28.9 ರಷ್ಟು ವಿದ್ಯಾರ್ಥಿನಿಯರು ಲಿಂಗಾಯತ ಜಾತಿಯವರು, ಶೇ 4.4 ರಷ್ಟು ವಿದ್ಯಾರ್ಥಿನಿಯರು ಮಡಿವಾಳ ಜಾತಿಯವರು, ಶೇ 6.7 ರಷ್ಟು ವಿದ್ಯಾರ್ಥಿನಿಯರು ಮರಾಠಿ ಜಾತಿಯವರು, ಶೇ 6.7 ರಷ್ಟು ವಿದ್ಯಾರ್ಥಿನಿಯರು ಮುಸ್ಲಿಂ ಜಾತಿಯವರು, ಶೇ 2.2 ರಷ್ಟು ವಿದ್ಯಾರ್ಥಿನಿಯರು ನಾಡವ ಜಾತಿಯವರು, ಶೇ 2.2 ರಷ್ಟು ವಿದ್ಯಾರ್ಥಿನಿಯರು ನಾಮದಾರ್ಗೊ ಜಾತಿಯವರು, ಶೇ 8.9 ರಷ್ಟು ವಿದ್ಯಾರ್ಥಿನಿಯರು ಒಕ್ಕಲಿಗ ಜಾತಿಯವರು, ಶೇ 2.2 ರಷ್ಟು ವಿದ್ಯಾರ್ಥಿನಿಯರು ಪದ್ಮಸಾಲಿ ಜಾತಿಯವರು, ಶೇ 4.4 ರಷ್ಟು ವಿದ್ಯಾರ್ಥಿನಿಯರು ಉಪ್ಪಾರ ಜಾತಿಯವರು, ಶೇ 4.4 ರಷ್ಟು ವಿದ್ಯಾರ್ಥಿನಿಯರು ವಿಶ್ವಕರ್ಮ ಜಾತಿಯವರು ಇದ್ದಾರೆ. ಹೆಚ್ಚಾಗಿ ಅಧ್ಯಯನದಲ್ಲಿ ಲಿಂಗಾಯತ ಜಾತಿಯವರು ಕಂಡುಬಂದಿದ್ದಾರೆ. ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗುವವರು ಸಮಯವಾರು ನೋಡಿದಾಗ ಬೆಳಗ್ಗೆ ಸಮಯದಲ್ಲಿ ಶೇ 44.4 ವಿದ್ಯಾರ್ಥಿನಿಯರು, ಸಂಜೆಯ ಸಮಯ ಶೇ 4.4 ವಿದ್ಯಾರ್ಥಿನಿಯರು ತೊಡಗಿದ್ದಾರೆ. ಇನ್ನೂ ಶೇ 51.1 ರಷ್ಟು ವಿದ್ಯಾರ್ಥಿನಿಯರು ಯಾವುದೇ ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ ಎಂದು ತಿಳಿದಿದೆ. ಅದರಲ್ಲೂ ಬೆಳಿಗ್ಗೆ ಸಮಯದಲ್ಲಿ ಹೆಚ್ಚು ವಿದ್ಯಾರ್ಥಿನಿಯರು ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಸಂಜೆಯ ಸಮಯದಲ್ಲಿ ಅತಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿನಿಯರು ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ. ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗುವವರ ದೈಹಿಕ ವ್ಯಾಯಾಮ ಚಟುವಟಿಕೆಗೆ ಮಾಹಿತಿಯ ಮೂಲ ಟಿವಿ ಶೇ 20.0 ರಷ್ಟು ವಿದ್ಯಾರ್ಥಿನಿಯರು ಮಾಹಿತಿ ಪಡೆದಿದ್ದಾರೆ, ಇನ್ನೂ 28.9 ರಷ್ಟು ವಿದ್ಯಾರ್ಥಿನಿಯರು ಟಿ ವಿ ಯಿಂದ ಮಾಹಿತಿ ಪಡೆದಿಲ್ಲ. ಇನ್ನೂ 51.1 ರಷ್ಟು ವಿದ್ಯಾರ್ಥಿನಿಯರಿಗೆ ಅನ್ವಯಿಸುವುದಿಲ್ಲ. ಶೇ 13.3 ರಷ್ಟು ವಿದ್ಯಾರ್ಥಿನಿಯರು ಸ್ನೇಹಿತರಿಂದ ಮಾಹಿತಿ ಪಡೆದಿದ್ದಾರೆ, ಇನ್ನೂ ಶೇ 35.6 ರಷ್ಟು ವಿದ್ಯಾರ್ಥಿನಿಯರು ಸ್ನೇಹಿತರಿಂದ ಮಾಹಿತಿ ಪಡೆದಿಲ್ಲ. ಇನ್ನೂ ಶೇ 51.1 ರಷ್ಟು ವಿದ್ಯಾರ್ಥಿನಿಯರಿಗೆ ಅನ್ವಯಿಸುವುದಿಲ್ಲ. ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗುವವರಲ್ಲಿ ಶೇ 22.2 ರಷ್ಟು ವಿದ್ಯಾರ್ಥಿನಿಯರು ಶಾಲೆಯಿಂದ ಮಾಹಿತಿ ಪಡೆದಿದ್ದಾರೆ, ಇನ್ನೂ ಶೇ 26.7 ರಷ್ಟು ವಿದ್ಯಾರ್ಥಿನಿಯರು ಶಾಲೆಯಿಂದ ಮಾಹಿತಿ ಪಡೆದಿಲ್ಲ. ಇನ್ನೂ ಶೇ 51.1 ರಷ್ಟು ವಿದ್ಯಾರ್ಥಿನಿಯರಿಗೆ ಅನ್ವಯಿಸುವುದಿಲ್ಲ. ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗುವವರಲ್ಲಿ ಶೇ 3 ರಷ್ಟು ವಿದ್ಯಾರ್ಥಿನಿಯರು ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ, ಶೇ 19 ರಷ್ಟು ವಿದ್ಯಾರ್ಥಿನಿಯರು ಸಂಬಂಧಿಕರಿಂದ ಮಾಹಿತಿ ಪಡೆದಿಲ್ಲ. ಇನ್ನೂ 51.1 ರಷ್ಟು ವಿದ್ಯಾರ್ಥಿನಿಯರಿಗೆ ಅನ್ವಯಿಸುವುದಿಲ್ಲ. ಇಲ್ಲಿನ ಒಟ್ಟು ಮಾಹಿತಿದಾರರ ದೈಹಿಕ ವ್ಯಾಯಾಮ ಚಟುವಟಿಕೆಯ ಮಾಹಿತಿಯ ಮೂಲವಾಗಿ ಪ್ರಥಮವಾಗಿ ಶಾಲೆ ಕಂಡುಬಂದಿದೆ, ನಂತರ ಟಿ ವಿ, ನಂತರ ಸ್ನೇಹಿತರು, ನಂತರ ಸಂಬಂಧಿಕರಿಂದ ಮಾಹಿತಿ ಪಡೆದವರಾಗಿದ್ದಾರೆ. ದೈಹಿಕ ವ್ಯಾಯಾಮ ಚಟುವಟಿಕೆ ಯೋಗದಲ್ಲಿ ಪಾಲ್ಗೊಳ್ಳುವವರು ಶೇ 24.4 ರಷ್ಟು ವಿದ್ಯಾರ್ಥಿನಿಯರು, ಪಾಲ್ಗೊಳ್ಳದೆ ಇರುವವರು ಶೇ 24.4 ರಷ್ಟು ವಿದ್ಯಾರ್ಥಿನಿಯರು, ಇನ್ನೂ ಶೇ 51.1 ರಷ್ಟು ವಿದ್ಯಾರ್ಥಿನಿಯರಿಗೆ ಅನ್ವಯಿಸುವುದಿಲ್ಲ. ದೈಹಿಕ ವ್ಯಾಯಾಮ ಚಟುವಟಿಕೆ ವ್ಯಾಯಾಮದಲ್ಲಿ ಪಾಲ್ಗೊಳ್ಳುವವರು ಶೇ 15.6 ರಷ್ಟು ವಿದ್ಯಾರ್ಥಿನಿಯರು, ಪಾಲ್ಗೊಳ್ಳದೆ ಇರುವವರು ಶೇ 33.3 ರಷ್ಟು ವಿದ್ಯಾರ್ಥಿನಿಯರು, ಇನ್ನೂ ಶೇ 51.1 ರಷ್ಟು ವಿದ್ಯಾರ್ಥಿನಿಯರಿಗೆ ಅನ್ವಯಿಸುವುದಿಲ್ಲ. ದೈಹಿಕ ವ್ಯಾಯಾಮಕ್ಕಾಗಿ ವಾಯುವಿಹಾರದಲ್ಲಿ ಪಾಲ್ಗೊಳ್ಳುವವರು ಶೇ 33.3 ರಷ್ಟು ವಿದ್ಯಾರ್ಥಿನಿಯರು, ಪಾಲ್ಗೊಳ್ಳದೆ ಇರುವವರು ಶೇ 15.6 ರಷ್ಟು ವಿದ್ಯಾರ್ಥಿನಿಯರು, ಇನ್ನೂ 51.1 ರಷ್ಟು ವಿದ್ಯಾರ್ಥಿನಿಯರಿಗೆ ಅನ್ವಯಿಸುವುದಿಲ್ಲ. ದೈಹಿಕ ವ್ಯಾಯಾಮ ಚಟುವಟಿಕೆಗಳಿಗಾಗಿ ಈಜುವುದರಲ್ಲಿ ಪಾಲ್ಗೊಳ್ಳುವವರು ಶೇ 00 ರಷ್ಟು ವಿದ್ಯಾರ್ಥಿನಿಯರು, ಪಾಲ್ಗೊಳ್ಳದೆ ಇರುವವರು ಶೇ 48.9 ರಷ್ಟು ವಿದ್ಯಾರ್ಥಿನಿಯರು, ಇನ್ನೂ 51.1 ರಷ್ಟು ವಿದ್ಯಾರ್ಥಿನಿಯರಿಗೆ ಅನ್ವಯಿಸುವುದಿಲ್ಲ. ಒಟ್ಟು ದೈಹಿಕ ವ್ಯಾಯಾಮದ ಚಟುವಟಿಕೆಗಳಲ್ಲಿ ಭಾಗವಹಿಸಿದವರಲ್ಲಿ ವಾಯುವಿಹಾರದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗಿದೆ, ನಂತರದ ಸ್ಥಾನ ಯೋಗ ಪಡೆದಿದೆ, ನಂತರದ ಸ್ಥಾನ ವ್ಯಾಯಾಮ ಪಡೆದಿದೆ, ಕೊನೆಗೆ ಈಜುವುದರಲ್ಲಿ ಯಾರು ಪಾಲ್ಗೊಳ್ಳುತ್ತಿಲ್ಲ ಎಂದು ಕಂಡುಬಂದಿದೆ. ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ವಿದ್ಯಾರ್ಥಿನಿಯರು ವಾರದಲ್ಲಿ ತೊಡಗುವ ದಿನದ ವಿವರದಲ್ಲಿ ಪ್ರತಿದಿನ ಶೇ 17.8 ರಷ್ಟು ವಿದ್ಯಾರ್ಥಿನಿಯರು, ವಾರದಲ್ಲಿ 1-2 ದಿನ ಶೇ 6.7 ರಷ್ಟು ವಿದ್ಯಾರ್ಥಿನಿಯರು, 2-3 ದಿನ ಶೇ 2.2 ರಷ್ಟು ವಿದ್ಯಾರ್ಥಿನಿಯರು, 3-4 ದಿನ ಶೇ 11.1 ರಷ್ಟು ವಿದ್ಯಾರ್ಥಿನಿಯರು, 4-5 ದಿನ ಶೇ 11.1 ರಷ್ಟು ವಿದ್ಯಾರ್ಥಿನಿಯರು, 5-6 ದಿನ ಶೇ 8.9 ರಷ್ಟು ವಿದ್ಯಾರ್ಥಿನಿಯರು ತೊಡಗುತ್ತಿದ್ದಾರೆ. ಆದರೆ ಶೇ 51.1 ರಷ್ಟು ವಿದ್ಯಾರ್ಥಿನಿಯರು ಯಾವ ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿಯೂ ಪಾಲ್ಗೊಳ್ಳುತ್ತಿಲ್ಲ. ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗದೆ ಇರುವುದಕ್ಕೆ ಕಾರಣಗಳನ್ನು ಕೇಳಿದಾಗ, ಶೇ 11.1 ರಷ್ಟು ವಿದ್ಯಾರ್ಥಿನಿಯರಿಗೆ ಸೋಮಾರಿತನ, ಶೇ 20.0 ರಷ್ಟು ವಿದ್ಯಾರ್ಥಿನಿಯರಿಗೆ ಸಮಯದ ಅಭಾವ, ಶೇ 15.6 ರಷ್ಟು ವಿದ್ಯಾರ್ಥಿನಿಯರಿಗೆ ಬೆಳಗ್ಗೆ ಬೇಗ ಏಳಲು ಆಗದಿರುವುದು, ಶೇ 4.4 ರಷ್ಟು ವಿದ್ಯಾರ್ಥಿನಿಯರು ಕುಟುಂಬದಲ್ಲಿ ಪ್ರೋತ್ಸಾಹ ಇಲ್ಲದಿರುವುದು, ಶೇ 48.9 ರಷ್ಟು ವಿದ್ಯಾರ್ಥಿನಿಯರಿಗೆ ಇದು ಅನ್ವಯಿಸುವುದಿಲ್ಲ, ಕಾರಣ ಅವರು ದೈಹಿಕ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹೆಚ್ಚಿನ ವಿದ್ಯಾರ್ಥಿನಿಯರು ಶೇ 20 ರಷ್ಟು ಸಮಯದ ಅಭಾವದಿಂದ ಎಂದು ಹೇಳಿದ್ದಾರೆ.
ಸಲಹೆಗಳು
ಉಪಸಂಹಾರ ದೈಹಿಕ ವ್ಯಾಯಾಮ ಚಟುವಟಿಕೆಯ ಕಡಿಮೆ ಆಗುತ್ತಿರುವುದು ಅತಿ ಹೆಚ್ಚಾಗಿ ಕಂಡು ಬರುತ್ತಿರುವ ಆತಂಕಕಾರಿಯದ ಸಾರ್ವಜನಿಕ ಸಮಸ್ಯೆ ಅಗಿದೆ. ಹಾಗಾಗಿ ಕಲಿಕೆಯ ಹಂತದಲ್ಲಿಯೇ ಆ ಬಗ್ಗೆ ಜಾಗೃತಿ ವಿದ್ಯಾರ್ಥಿನಿಯರಿಗೆ ಮೂಡಿಸಬೇಕೆಂಬುದು ಈ ಲೇಖನದ ಆಶಯವಾಗಿದೆ. ಆಧಾರ ಗ್ರಂಥಗಳು
ವೀಣಾ ಎಂ.ಜಿ., ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿ, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ, ಶಿವಮೊಗ್ಗ. ಡಾ. ಚಂದ್ರಶೇಖರ್ ಪ್ರಾಧ್ಯಾಪಕರು, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ, ಶಂಕರಘಟ್ಟ, ಶಿವಮೊಗ್ಗ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|