ಒಂದು ದೇಶ ಸಮೃದ್ಧವಾಗಿ ಬೆಳೆದು, ಅಲ್ಲಿಯ ಜನಮನದಲ್ಲಿ ಹಚ್ಚಹಸಿರಾಗಿ ನೆಲೆಯೂರಬೇಕಾದರೆ, ಅಲ್ಲಿ ಸತ್ಯ, ನ್ಯಾಯ, ನೀತಿ, ಪ್ರೀತಿಗಳು ತಳಹದಿಯಾಗಿರಬೇಕು. ಅಂಥ ಗೌರವಕ್ಕೆ ಪಾತ್ರವಾದದ್ದು ಆಷ್ಟ್ರೇಲಿಯಾ ದೇಶವೆನ್ನಬಹುದು. ಸತ್ಯವೇ ದೇವರೆಂದು ಬಗೆಯುವ ಉದಾತ್ತ ಭಾವನೆ ಅಲ್ಲಿಯ ಜನತೆಯದು. ಆ ದೇಶದ ಜನಜೀವನಕ್ಕೆ ಸುಖ-ಶಾಂತಿಯೇ ಪ್ರಧಾನವಾಗಿದೆ. ಅದರಂತೆ ಅನ್ಯದೇಶಿಯರೂ ಪ್ರೀತಿ-ಸ್ನೇಹಗಳನ್ನು ಬೆಳೆಸಿಕೊಂಡು ಹೋಗಬೇಕೆಂಬುದೇ ಅವರ ತತ್ವವೂ, ಸಂಕಲ್ಪವೂ ಆಗಿದೆ. ಆಷ್ಟ್ರೇಲಿಯಾವು ಪ್ರಪಂಚದಲ್ಲಿ ಆರನೆಯ ಖಂಡವಾಗಿದ್ದು, ದೊಡ್ಡ ದೇಶಗಳಲ್ಲಿ ಮೊದಲನೆಯ ಸ್ಥಾನವನ್ನಲಂಕರಿಸುತ್ತದೆ. ಅದು ವಿಸ್ತೀರ್ಣದಲ್ಲಿ 7682300 ಚ. ಕಿಲೋಮೀಟರ್ ಅಗಲಳತೆಯನ್ನು ಹೊಂದಿದ್ದು ಪೂರ್ವ ಪಶ್ಚಿಮವಾಗಿ 4000 ಕಿ.ಮೀಟರ್ ಹಾಗೂ ಉತ್ತರ ದಕ್ಷಿಣವಾಗಿ 36735 ಕಿ.ಮೀಟರ್ ಅಗಲಳತೆಯನ್ನು ಪಡೆದ ಈ ದೇಶ ಭಾರತದ ವಿಸ್ತೀರ್ಣಕ್ಕಿಂತ 2.5 ಪಟ್ಟು ವಿಸ್ತಾರವನ್ನು ಹೊಂದಿದ್ದರೂ ಜನಸಂಖ್ಯೆಯ ದೃಷ್ಟಿಯಿಂದ ನೋಡಿದರೆ 33.6 ರಷ್ಟು ಮಿಲಿಯನ್ ಮಾತ್ರ. ಆಸ್ಟ್ರೇಲಿಯಾದಲ್ಲಿ ವಾಸಿಸುವ ಜನರಲ್ಲಿ 90% ಭಾಗ ನಗರ ಪ್ರದೇಶಗಳಲ್ಲಾದರೆ 10% ಭಾಗ ಹಳ್ಳಿಗಳಲ್ಲಿ ವಾಸ.
ಈ ದೇಶಕ್ಕೆ ಪ್ಯಾಸಿಪಿಕ್ ಹಾಗೂ ಹಿಂದೂ ಮಹಾಸಾಗರಗಳು ಸುತ್ತುವರಿಯಲ್ಪಟ್ಟಿದ್ದರಿಂದ ಬೇರೆ ದೇಶಗಳ ನಿವಾಸಿಗಳು ಈ ದೇಶವನ್ನು ಪ್ರವೇಶಿಸುವದಾಗಲಿ ಹಾಗೂ ಒಳನುಸುಳುವದಾಗಲಿ ಅಷ್ಟು ಸುಲಭವಲ್ಲ. ದೇಶಕ್ಕೆ ಸಾಗರದ ಗಡಿಗುಂಟ ಭದ್ರವಾದ ರಕ್ಷಣಾ ವ್ಯವಸ್ಥೆಯಿದೆ. ಜಾಗ್ರತೆಯಿಂದ ಕಾಯುತ್ತಿರುವ ಕಾವಲು ದಳವಿದೆ. ಹೀಗಾಗಿ ಈ ನಾಡು ಸ್ವತಂತ್ರವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತಿದೆ. ಬೇರೆ ದೇಶಗಳೊಡನೆ ವೈರ ಸಾಧಿಸುವದಾಗಲಿ, ಯುದ್ಧ ಮಾಡುವ ದಾಹವಾಗಲಿ ಇರಲಾರದು. ಯುದ್ಧಕ್ಕೆ ಬೇಕಾಗುವ ಸಾಮಗ್ರಿಗಳಿಗೆ ವ್ಯಯವಾಗುವ ಬಂಡವಾಳವನ್ನು ಉಳಿತಾಯ ಮಾಡಿ, ದೇಶದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವಂಥ ಅದೃಷ್ಟ ಇವರಿಗೆ ಇದ್ದುದರಿಂದಲೇ ಇಂದು ಪ್ರಗತಿ ಹೊಂದಿದ ದೇಶಗಳ ಎತ್ತರಕ್ಕೆ ನಿಲ್ಲುವಷ್ಟು ಸಾಮರ್ಥ್ಯವನ್ನು ಹೊಂದಿದೆಯೆನ್ನಬಹುದು. ಯುರೋಪಿಯನ್ನರು ಆಷ್ಟ್ರೇಲಿಯಾ ದೇಶದ ಪ್ರಗತಿಯನ್ನು ಅಲ್ಪಾವಧಿಯಲ್ಲಿಯೇ ಅತ್ಯದ್ಭುತವಾಗಿ ಸಾಧಿಸಿದ ಕೀರ್ತಿ ಅನುಪಮವಾದುದು ಹಾಗೂ ಅಗಾಧವಾದುದು. ಕೇವಲ ಎರಡು ಶತಮಾನಗಳ ಹಿಂದೆ ಕಾಡುವಾಸಿಗಳೂ, ಅನಾಗರಿಕರೂ ಎನಿಸಿದ ಮೂಲನಿವಾಸಿಗಳಾದ ಅಬಾರ್ಜಿನ್‍ಗಳು ಇಲ್ಲಿ ಸುಮಾರು 40 ಸಾವಿರದಿಂದ 50 ಸಾವಿರ ವರ್ಷಗಳಿಂದ ನೆಲೆಸುತ್ತಾ ಬಂದ ಹಿನ್ನೆಲೆಗೆ ಐತಿಹ್ಯ ಉಂಟು. ಕಾಡಿನಲ್ಲಿ ಗುಂಪು ಕಟ್ಟಿಕೊಂಡು ಪ್ರಾಣಿ, ಪಕ್ಷಿಗಳ ಬೇಟೆಯಾಡುತ್ತ, ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದ ಅನಾಗರಿಕರ ತಾಣವಾಗಿತ್ತು. ಕ್ರಿ.ಶ. 1788 ರಲ್ಲಿ ಆಗಮಿಸಿದ ಯುರೋಪಿಯನ್ ಪ್ರವಾಸಿ ಕ್ಯಾಪ್ಟನ್-ಜೇಮ್ಸ್-ಕುಕ್ ಎಂಬವನು ಹೊಸ ವಸಾಹತುಗಳ ಶೋಧನೆಗಾಗಿ ಸುತ್ತುವರಿಯುತ್ತ ಆಷ್ಟ್ರೇಲಿಯಾದ ದಕ್ಷಿಣ ಭಾಗದ ಈಗಿರುವ ಸಿಡ್ನಿ ಪ್ರದೇಶದಲ್ಲಿ ಬಂದಿಳಿದಾಗ ಅವನು ಈ ನಾಡಿನ ವೈಭವ ಕಂಡು ಬೆರಗಾದ. ಇಲ್ಲಿಯ ವಿಶಾಲವಾದ ಸಾಗರ ತೀರಗಳು, ಆಗಸದೆತ್ತರಕ್ಕೆ ಬೆಳೆದು ನಿಂತ ಗಿಡಮರಗಳು, ಹಸಿರಿನಿಂದ ಕಂಗೊಳಿಸುವ ಫಲಭರಿತ ಭೂ ಪ್ರದೇಶಗಳು, ವಿವಿಧ ಬಗೆಯ ಪಕ್ಷಿ ಸಂಕುಲಗಳಂಥ ಸಿರಿ ಸಂಪತ್ತನ್ನು ಕಂಡ ಅವನ ಕಣ್ಣು ತೆರೆಯಿತು. ಇಲ್ಲಿಯೇ ನೆಲೆಸಲು ಕ್ಯಾ ಕುಕ್ ನಿರ್ಧಾರ ಮಾಡಿದ್ದಾಯಿತು. ಆಷ್ಟ್ರೇಲಿಯಾ ದೇಶವು ಯುರೋಪಿಯನ್ನರ ವಸತಿಗೆ ಇದೊಂದು ಅತ್ಯುತ್ತಮ ನೆಲೆಯೆಂದು ಗುರುತಿಸಿದ. ತಮ್ಮ ದೇಶದಿಂದ ವಿವಿಧ ವೃತ್ತಿಯ ಜನರನ್ನು ಕ್ರಿ.ಶ. 1788 ರಲ್ಲಿ ಹನ್ನೆರಡು ಹಡಗುಗಳೊಂದಿಗೆ ಮೊದಲ ತಂಡವಾಗಿ ಬಂದು ಇಳಿದ. ಯುರೋಪದಲ್ಲಿಯ ಜೈಲುಗಳೆಲ್ಲ ತುಂಬಿ ಸಾಲದೇ ಹೋದಂಥ ಅಪರಾಧಿಗಳನ್ನೂ ಹಾಗೂ ದಾರಿದ್ರ್ಯದಿಂದ ಬಳಲುತ್ತಿದ್ದವರನ್ನು, ಹಸಿವೆಗಾಗಿ ಕದ್ದು ತಿನ್ನುತ್ತಿದ್ದ ಸಾಮಾನ್ಯ ಅಪರಾಧಿಗಳನ್ನೂ ಇಲ್ಲಿಗೆ ಕರೆತಂದು ಬಿಡಲಾಯಿತು. ಶಿಕ್ಷೆಗೊಳಗಾದ ಜನರನ್ನು ಕ್ರಿ.ಶ. 1823 ರವರೆಗೂ ಇಲ್ಲಿಗೆ ಕಳುಹಿಸುತ್ತ ಬಂದರು. ಮುಂದೆ ಅವರನ್ನೇ ಕೂಲಿ ಕೆಲಸಕ್ಕೆ ತೊಡಗಿಸಲಾಯಿತು. ನಗರ ಯೋಜನೆಗೆ, ಕಟ್ಟಡಗಳ ನಿರ್ಮಾಣಕ್ಕೆ ಯುರೋಪಿಯನ್ ನಿರಾಶ್ರಿತರನ್ನು ಕರೆತರಲಾಯಿತು. ವರುಷಗಳುರುಳಿದಂತೆ ಸಾಗರ ತೀರದಲ್ಲಿ ದೊಡ್ಡ ನಗರಗಳು ತಲೆಯೆತ್ತತೊಡಗಿದವು. ಒಳ್ಳೇ ಆಡಳಿತದ ವ್ಯವಸ್ಥೆಯೊಡನೆ ಸಿಟಿ ಕೌನ್ಸಿಲ್‍ಗಳು ಉತ್ಸಾಹದಿಂದ ಕೆಲಸ ಮಾಡಹತ್ತಿದವು. ಅಲ್ಲಲ್ಲಿ ಬ್ರಿಟಿಷ್ ಕಾಲನಿಗಳೂ ಸ್ಥಾಪಿಸಲ್ಪಟ್ಟವು. ಕ್ರಿ.ಶ. 1945ರವರೆಗೂ 6.5 ಮಿಲಿಯನ್ ಜನರು ಯುನೈಟೆಡ್ ಕಿಂಗ್‍ಡಂ (UK) ದಿಂದ ಬಂದು ನೆಲೆಸಿದ್ದಾಯ್ತು. ಅನಂತರವೂ ಪ್ರತಿವರ್ಷ ಒಂದು ಲಕ್ಷದಷ್ಟು ಯುರೋಪಿಯನ್ನರು ಆಗಮಿಸತೊಡಗಿದರು. ಯುರೋಪಿಯನ್ನರು ಆಷ್ಟ್ರೇಲಿಯಾಕ್ಕೆ ಬಂದು ನೆಲೆಸಿದ ಮೇಲೆ ಇಲ್ಲಿಯ ಸುಂದರವಾದ ನಿಸರ್ಗದೊಡನೆ ಬೆರೆತುಕೊಳ್ಳುವದು ಹಾಗೂ ವಿಶ್ವಾಸದಿಂದ ದುಡಿಯುವದು ತಮ್ಮ ಕರ್ತವ್ಯವೆಂದು ಭಾವಿಸುವದಲ್ಲದೆ ಪ್ರಗತಿ ಕಂಡು ತುಂಬ ಧನದಿಂದಲೂ ಸಹಕರಿಸಿದರು. ನಗರಗಳಲ್ಲಿ ಸುಂದರವಾದ ನಂದನವನಗಳನ್ನು, ವ್ಯಾಯಾಮಕ್ಕಾಗಿ ಜಿಮ್‍ಗಳನ್ನು, ಮಕ್ಕಳಿಗಾಗಿ ಆಟದ ವಸ್ತುಗಳನ್ನು ರಚಿಸಿದುದಲ್ಲದೆ, ವನಭೋಜನಕ್ಕೂ ಆಹಾರ ಸಿದ್ಧತೆಗಾಗಿ, ಅಥವಾ ಬೇಯಿಸಲಿಕ್ಕಾಗಿ ವಿದ್ಯುತ್ ಒಲೆಗಳನ್ನೂ ಸ್ಥಾಪಿಸಿದರು. ಅಲ್ಲದೆ ಸಂಚರಿಸಲು ಸುಭದ್ರವಾದ ರಾಜಬೀದಿಗಳನ್ನು ಹಾಗೂ ತಮ್ಮ ವಾಸಕ್ಕೆ ಸುಂದರವಾದ, ಕಲಾತ್ಮಕವಾದ ಹಾಗೂ ವಿಶಾಲವಾದ ಕಟ್ಟಡಗಳನ್ನು ನಿರ್ಮಿಸಿದರು. ಅಲ್ಲಿಯ ನಿವಾಸಿಗಳು ನಿಸರ್ಗಪ್ರಿಯರು, ಮೇಲಾಗಿ ಸೌಂದರ್ಯದ ಆರಾಧಕರು. ತಾವು ವಾಸಿಸುವ ಮನೆಯನ್ನು ಕಡಲತಡದಲ್ಲಾಗಿ, ಬೆಟ್ಟದಂಥ ಎತ್ತರವಾದ ಪ್ರದೇಶಗಳಲ್ಲಾಗಲಿ, ಅಥವಾ ಅರಣ್ಯದ ಸಸ್ಯ ಸಂಪತ್ತಿನ ಮಧ್ಯದಲ್ಲಾಗಲಿ ನಿರ್ಮಿಸಿ ಸುಖ ಸಂತೋಷದಿಂದ ಕಾಲಹರಣ ಮಾಡುವದೂ ಅವರ ಇಚ್ಛೆಯಾಗಿತ್ತು. ಹೀಗಾಗಿ ಹಿಂದಿದ್ದ 30% ಅರಣ್ಯಪ್ರದೇಶವು ನಗರ ಯೋಜನೆಗಾಗಿ ಬಳಕೆಯಾಗುತ್ತ ಈಗ ಅದು 15% ಕ್ಕೆ ಬಂದು ನಿಂತಿದೆ. ಇಂದು ಆಷ್ಟ್ರೇಲಿಯಾದ ಪಶ್ಚಿಮಕ್ಕಿರುವ 50 ಕಿ.ಮೀ, ವ್ಯಾಪ್ತಿಯಲ್ಲಿ ಅಂದರೆ ಬ್ರಿಸ್ಬೆಗ್ ನಗರದಿಂದ ಮೆಲ್ಬೋರ್ನ ನಗರದವರೆಗಿನ ಪ್ರದೇಶದಲ್ಲಿರುವ ಜನಸಂಖ್ಯೆಯು ಇಡೀ ದೇಶದ ಅರ್ಧದಷ್ಟು ಜನಸಂಖ್ಯೆ ಅಲ್ಲಿಯೇ ನೆಲೆಗೊಂಡಿದೆ. ಇದಕ್ಕೆ ಕಾರಣವೇನೆಂದರೆ-ಅಲ್ಲಿದ್ದ ಶುದ್ಧ ನೀರಿನ ಪೂರೈಕೆ, ಹಿತಕರವಾದ ಹವಾಮಾನ, ಫಲವತ್ತಾದ ಕೃಷಿ ಭೂಮಿ, ಸುಗಮ ಸಂಚಾರ ವ್ಯವಸ್ಥೆ, ಉತ್ತಮವಾದ ಬಂದರುಗಳು (Ports) ಇತ್ಯಾದಿ ಸೌಲಭ್ಯಗಳನ್ನು ಹೊಂದಿದ್ದರಿಂದ ಅದು ಸಾಧ್ಯವಾಗಿದೆ. ಆಷ್ಟ್ರೇಲಿಯಾದಲ್ಲಿ ನೆಲೆಯೂರಿದ ಮೂಲನಿವಾಸಿಗಳಾದ ಅಬಾರ್ಜಿನ್‍ಗಳ ಜೀವನ ಮಟ್ಟವನ್ನು ಎತ್ತರಿಸಬೇಕು. ಅವರ ಅಲೆದಾಟದ ಜೀವನವನ್ನು ತಪ್ಪಿಸಿ, ತಮ್ಮ ಮಧ್ಯದಲ್ಲಿಯೇ ನಿಂತು ಒಳ್ಳೇ ಉದ್ಯೋಗವನ್ನು ಕೈಕೊಳ್ಳಲೆಂಬ ಅಥವಾ ಕೃಷಿ ಉದ್ಯೋಗವನ್ನು ಕಲಿತುಕೊಂಡು ಜೀವನ ಸಾಗಿಸಲಿ ಎಂಬ ಸದುದ್ದೇಶವನ್ನಿರಿಸಿ ಸರ್ಕಾರವು ಅವರ ಮನವೊಲಿಸಿದರೂ ಅವರು ಅದಕ್ಕೆ ಒಪ್ಪಿಗೆಯನ್ನೀಯುತ್ತಿಲ್ಲ. ಶತಶತಮಾನಗಳಿಂದ ನಡೆದು ಬಂದ ತಮ್ಮ ಆಚರಣೆಯನ್ನು ಬದಲಿಸಲು ಸಿದ್ಧರಾಗಲಿಲ್ಲ. ಸಾವಿರಾರು ವರ್ಷಗಳಿಂದ ಲಿಪಿ ಹೊಂದದೇ ಇದ್ದ ಭಾಷೆಯನ್ನು ಇನ್ನೂ ಮುಂದುವರಿಸಿದ್ದಾರೆ. ಅವರಿಗೆ ಆಲ್ಕೋಹಾಲ, ಡ್ರಗ್ಸಗಳಿದ್ದರೆ ಸಾಕು. ಅದೇ ಜೀವನವೆಂದು ಭಾವಿಸಿದವರು. ಮೈತುಂಬ ಬಟ್ಟೆ ಧರಿಸದೆ, ಪ್ರಾಣಿ ಪಕ್ಷಿಗಳ ಬೆನ್ನತ್ತಿ ಬೇಟೆಯಾಡಿ ಹೊಟ್ಟೆ ಹೊರೆಯುವದೇ ಅವರ ಉದ್ಯೋಗ. ನಾಗರಿಕತೆಯಿಂದ ದೂರ ಇರಬಯಸುವ ವಿಚಿತ್ರ ಜನಾಂಗ ಅದಾಗಿದೆ. ಆದಾಗ್ಯೂ ಸರ್ಕಾರವು ಅವರಿಗೆ ರಾಯಲ್ಟಿಯೆಂದು ಧನಸಹಾಯ ಮಾಡುತ್ತಿದೆ. ಆದರೆ ಅದನ್ನು ತಮ್ಮ ದುರ್ಚಟಗಳಿಗೆ ವಿನಿಯೋಗಿಸುವದನ್ನು ಕಂಡಾಗ ಎಂಥವರಿಗೂ ವ್ಯಥೆಯೆನಿಸಬಲ್ಲದು. ಆಷ್ಟ್ರೇಲಿಯಾ ದೇಶದಲ್ಲಿ ಮಾನವನು ಸಾಮಾಜಿಕ ಜೀವನವನ್ನು ಸುರಕ್ಷಿತವಾಗಿ ಹಾಗೂ ಸುಗಮವಾಗಿ ನಡೆಸಲು ಶಕ್ತನಾಗುವಂತೆ ಸರ್ಕಾರವು ಅನೇಕ ಬಗೆಯಲ್ಲಿ ಧನ ಸಹಾಯವನ್ನೀಯುತ್ತದೆ. ಅನ್ಯದೇಶಿಯರು ಆಷ್ಟ್ರೇಲಿಯಾಕ್ಕೆ ಬಂದು ಕಾಯಂ ನಿವಾಸಿಯಾದ (PR) ನಂತರ ಅವರ ಯೋಗಕ್ಷೇಮದ ಹೊಣೆಯನ್ನು ಸರ್ಕಾರವೇ ಹೊರುತ್ತದೆ ಹಾಗೂ ಕೆಲವು ವ್ಯಕ್ತಿಗಳ ವಾರ್ಷಿಕ ಆದಾಯ ಕನಿಷ್ಟ 8 ಸಾವಿರ ಡಾಲರದಿಂದ 12 ಸಾವಿರ ಡಾಲರದವರೆಗೆ ಸೀಮಿತಗೊಂಡಿದ್ದರೆ ಅವರಿಗೂ ಸರ್ಕಾರದಿಂದ ಎಲ್ಲ ಸೌಲಭ್ಯಗಳು ದೊರೆಯುತ್ತವೆ. ಸರ್ಕಾರವು ಸೋಸಿಯಲ್ ಸೆಕ್ಯುರಿಟಿ ಮೂಲಕ ಸಹಾಯಧನವನ್ನು ಪೂರೈಸುತ್ತದೆ. ದುಡಿಯಲು ಅರ್ಹತೆ ಉಳ್ಳವರಿಗೆ ಉದ್ಯೋಗವನ್ನೂ ಒದಗಿಸಬಲ್ಲದು. ಕೆಲಸ ಸಿಕ್ಕುವವರೆಗೆ ಅವರ ಜೀವನೋಪಾಯಕ್ಕೆ ಗೌರವಧನವನ್ನೂ ನೀಡುತ್ತದೆ. ದುಡಿಯಲು ಅಸಮರ್ಥರಾದ ವೃದ್ಧರಿಗೆ, ಅಂಗವಿಕಲರಿಗೆ, ಮಂದಬುದ್ಧಿಯುಳ್ಳವರಿಗೆ ಪೆನ್ಶೆನ್ ನೀಡುತ್ತದೆ. ಬೇನೆಯಿಂದ ಬಳಲುವವರಿಗೆ ಸುವ್ಯವಸ್ಥಿತವಾದ ವೈದ್ಯಕೀಯ ಚಿಕಿತ್ಸೆಯನ್ನೂ ಒದಗಿಸುತ್ತದೆ. ಈ ದಿಸೆಯಲ್ಲಿ ಸೋಸಿಯಲ್ ಸೆಕ್ಯುರಿಟಿ, ಫೋಸ್ಟರ ಕೇರ್ ಸಂಸ್ಥೆಗಳು ಅಲ್ಲದೆ ಅನೇಕ ಖಾಸಗಿ ಸಂಸ್ಥೆಗಳೂ ನೆರವಾಗುತ್ತವೆ. ದರಿದ್ರರ ಸೇವೆಯೇ ದೇವರ ಸೇವೆಯೆನ್ನುವ ಭಾವನೆ ಉದ್ಭವಿಸುತ್ತದೆ. ಅಲ್ಲಿ ಯಾವದೇ ಜೀವಿ, ಹಸಿವೆಯಿಂದ ಅಸು ನೀಗಲಾರ. ಇಲ್ಲಿಯ ನಿವಾಸಿಗಳಿಗೆ ತಾವು ವಾಸಿಸುವ ನಗರ ಪ್ರದೇಶವು ಶಿಸ್ತು, ಸ್ವಚ್ಛತೆ ಹಾಗೂ ಸೌಂದರ್ಯದಿಂದ ಕೂಡಿರಬೇಕು. ತಮ್ಮ ದೇಶದಲ್ಲಿಯೇ ಪ್ರತಿಯೊಂದು ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಆಸ್ಪತ್ರೆ, ಕ್ರೀಡಾಂಗಣ ಮೊದಲಾದವುಗಳು ಅವರ ಅಭಿಮಾನವನ್ನು ಹೆಚ್ಚಿಸುವ ತಾಣಗಳು. ಅವುಗಳನ್ನು ಅಭಿವೃದ್ಧಿಗೊಳಿಸುವಲ್ಲಿ ತುಂಬ ಹೆಮ್ಮೆ ಪಡುತ್ತಾರೆ. ಸಹಾಯವನ್ನೂ ಸಲ್ಲಿಸುತ್ತಾರೆ. ಅಲ್ಲಿ ಕಲಹ, ಗಲಭೆ, ದರೋಡೆ, ಕಳ್ಳತನಕ್ಕೆ ಅವಕಾಶವೇ ಇಲ್ಲ. ಏಕೆಂದರೆ ಕಾನೂನುಗಳು ಸುಭದ್ರವಾದ ಕಾವಲು ಕೆಲಸ ಮಾಡುತ್ತವೆ. ಪೋಲಿಸರು ಮಾಡುವ ಅರ್ಧಕೆಲಸವನ್ನು ಅಲ್ಲಲ್ಲಿ ಸ್ಥಿರಪಡಿಸಿದ ಕ್ಯಾಮರಾ ಕಣ್ಣುಗಳೇ ನಿರ್ವಹಿಸುತ್ತವೆ. ಇಲ್ಲಿಯ ಸಂಚಾರದ ಸುವ್ಯವಸ್ಥೆಯೂ ಅಷ್ಟೇ ಮಹತ್ತರವಾದುದು. ರಹದಾರಿಗಳಲ್ಲಿ ವಾಹನ ಚಾಲಕರಿಂದ ಅಪಘಾತ ಸಂಭವಿಸದಂತೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗುತ್ತದೆ. 1) ಅಲ್ಲಲ್ಲಿ ವೇಗದ ಮಿತಿಯನ್ನು ಗುರುತಿಸುವ ಸ್ಪೀಡ ಫಲಕಗಳನ್ನಳವಡಿಸಿದಾಗ್ಯೂ ಆ ಮಿತಿಯನ್ನು ಮೀರಿ ಚಲಿಸುವಂಥ 2) ನಿರ್ದಿಷ್ಟಪಡಿಸಿದ ಮಿತಿಯನ್ನು ಮೀರಿ ಕುಡಿದು ವಾಹನ ಚಲಿಸುವಂಥ 3) ಮತ್ತು ಗುರುತಿಸಿದ ಸ್ಥಳದಲ್ಲಿ ವಾಹನಗಳನ್ನು ಓವರ್‍ಟೇಕ್ ಮಾಡದೆ ಸಿಕ್ಕ ಕಡೆಗೆ ಬೇರೆ ವಾಹನಗಳನ್ನು ಹಿಂದೆ ಹಾಕಿ ಓಡಿಸುವಂಥ ತಪ್ಪನ್ನೆಸಗಿದರೆ ದಂಡನೆಗೆ ಗುರಿಯಾಗಬೇಕಾಗುತ್ತದೆ. ಅದರಂತೆ ಅನುಕೂಲವನ್ನೊದಗಿಸುವ ಕೆಲವು ಅಂಶಗಳನ್ನು ಮೆಚ್ಚಲೇಬೇಕು. ನಿರ್ಜನ ಪ್ರದೇಶಗಳಲ್ಲೂ ಫೋನಿನ ಸೌಲಭ್ಯವುಳ್ಳ ಫೋನ್ ಬೂತ್‍ಗಳನ್ನು, ಪತ್ರಗಳನ್ನು ಪೋಸ್ಟ್ ಮಾಡುವದಕ್ಕಾಗಿ ಅನುಕೂಲವುಳ್ಳ ಪೋಷ್ಟ ಬಾಕ್ಸಗಳನ್ನು ಸ್ಥಾಪಿಸಿರುವುದು ನಿಜಕ್ಕೂ ಮೆಚ್ಚುವಂಥದು. ಇದಲ್ಲದೆ ವಾಹನ ಚಾಲಕರು ಸು. 200 ಕಿ.ಮಿ.ಗಳಷ್ಟು ದೂರದ ಪ್ರಯಾಣ ಮಾಡಿ ದಣಿದುಕೊಳ್ಳಬಾರದೆಂದು ಅಲ್ಲಲ್ಲಿ ವಿರಾಮಕೇಂದ್ರಗಳನ್ನು ನಿರ್ಮಿಸಿ, ಅವರು ಕೆಲಹೊತ್ತು ವಿಶ್ರಮಿಸಿ ಉಚಿತವಾಗಿ ಒದಗಿಸಿದ ಚಹಾ, ಕಾಫಿ, ಬಿಸ್ಕತ್ತುಗಳನ್ನು ಕೊಡಮಾಡುವ ವ್ಯವಸ್ಥೆಯೂ ಕೂಡ ಮೆಚ್ಚುವಂಥದೇ. ಮುಂದೆ ಅಪಘಾತ ಸಂಭವಿಸಬಾರದೆನ್ನುವದೇ ಅವರ ಸದುದ್ದೇಶ. ಇಷ್ಟೆಲ್ಲ ಅವಕಾಶವಿದ್ದರೂ ವಾಹನ ಚಾಲನೆಯಲ್ಲಿ ತಪ್ಪನ್ನೆಸಗಿದರೆ ಶಿಕ್ಷೆ, ದಂಡ ಕಾಯ್ದಿರುತ್ತದೆ. ಅಲ್ಲಿ ದೊಡ್ಡವರು, ಚಿಕ್ಕವರೆಂಬ ತಾರತಮ್ಯವಿಲ್ಲ. ತಪ್ಪಿತಸ್ಥರು ಅಧಿಕಾರಿಯೇ ಇರಲಿ, ಮಂತ್ರಿ, ಮಹೋದಯರೇ ಇರಲಿ ಎಲ್ಲರಿಗೂ ಸಮಾನವಾದ ನ್ಯಾಯ ದೊರಕುವದು. ಕಾನೂನುಗಳ ಘನತೆಯನ್ನು ಗೌರವಿಸುವಲ್ಲಿ ಪ್ರಾಮಾಣಿಕತೆಯೇ ಪ್ರಮುಖವಾಗಿರುತ್ತದೆ. ಆಷ್ಟ್ರೇಲಿಯಾದ ಜನಸಂಖ್ಯೆಯಲ್ಲಿ ನೂರಕ್ಕೆ ನೂರರಷ್ಟು ವಿದ್ಯಾವಂತರಿದ್ದು ಅವರಲ್ಲಿ ಗಂಡು-ಹೆಣ್ಣು ಸಮಪ್ರಮಾಣದಲ್ಲಿದ್ದುದು ಮಹತ್ತರವಾದದ್ದು. ಇಲ್ಲಿಯ ಶೈಕ್ಷಣಿಕ ವ್ಯವಸ್ಥೆಯು ಸಾಮಾನ್ಯವಾಗಿ ಎಲ್ಲ ದೇಶಗಳೂ ಪಾಲಿಸಿಕೊಂಡು ಬರುವ ಕ್ರಮವನ್ನೇ ಅನುಸರಿಸುತ್ತಿದೆ. ಪ್ರಾಥಮಿಕ 1ನೆಯ ವರ್ಗದಿಂದ 11ನೇ ವರ್ಗದವರೆಗೂ ಶಾಲಾಮಟ್ಟದಲ್ಲಿಯೇ ಪರೀಕ್ಷೆ ನಡೆದರೆ ಹನ್ನೆರಡನೆ (ಪಿ.ಯು.ಸಿ. ) ವರ್ಗಕ್ಕೆ ಮಾತ್ರ ಪಬ್ಲಿಕ್ (ಬೋರ್ಡ) ಪರೀಕ್ಷೆ ನಡೆದು ಪಾಸಾದ ವಿದ್ಯಾರ್ಥಿಗಳು-ವೈದ್ಯಕೀಯ, ತಾಂತ್ರಿಕ, ವಿಜ್ಞಾನ, ಕಲೆ, ಕಾನೂನು, ಬ್ಯುಜಿನೆಸ್ ಮೊದಲಾದ ಕ್ಷೇತ್ರಗಳಲ್ಲಿಯ ಕೋರ್ಸನ್ನು ಆಯ್ಕೆ ಮಾಡಿ ವ್ಯಾಸಂಗ ಮುಂದುವರಿಯಬಹುದು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಸ್ವತಂತ್ರವಾಗಿ ನೌಕರಿ ಮಾಡಲು 10ನೇ ವರ್ಗಕ್ಕೋ ಅಥವಾ 12ನೇ ವರ್ಗಕ್ಕೋ ಓದನ್ನು ನಿಲ್ಲಿಸಿ ಯಾವದಾದರೊಂದು ಅಲ್ಪಾವಧಿಯ ಔದ್ಯೋಗಿಕ ಕೋರ್ಸನ್ನು ಮುಗಿಸಿ ಸ್ವತಂತ್ರವಾಗಿ ಕೆಲಸ ಕೈಕೊಳ್ಳುವ ಸಂಭವವೇ ಹೆಚ್ಚು. ಅಲ್ಲಿ ಸಾಮಾನ್ಯ ದುಡಿಮೆಗೂ ಗಂಟೆಗೆ 15 ಡಾಲರಿನಿಂದ 20 ಡಾಲರ್ವರೆಗೂ ಸಿಕ್ಕುವ ಕೂಲಿಯಾದರೆ ದಿನದಲ್ಲಿ ಐದಾರು ಗಂಟೆ ದುಡಿದರೂ ನೂರಾರು ಡಾಲರ್ (1 ಡಾಲರ್ ಬೆಲೆ 50 ರೂ.ಗಳು) ಗಳಿಕೆ ಪಡೆಯುವದಾದರೆ ಅವರು ಸುಖಮಯ ಸಂಸಾರ ನಡೆಸಬಹುದು. ಇನ್ನು ಉದ್ಯೋಗವನ್ನು ಬಲ್ಲ ಟೇಲರ್, ಕಾರ್ಪೆಂಟರ್, ಪ್ಲಂಬರ್, ಕ್ಲೀನರ್, ಚೆಫ್ ಮೊದಲಾದವರು ದಿನವೊಂದಕ್ಕೆ 200 ರಿಂದ 300 ಡಾಲರವರೆಗೂ ಗಳಿಸುವ ಸಾಧ್ಯತೆಯುಂಟು. ಹೆಚ್ಚು ಕಲಿತು ದೊಡ್ಡ ನೌಕರಿ ಮಾಡಿದರೂ ಸಾಮಾನ್ಯ ಉದ್ಯೋಗಿಗಳಿಗಿಂತ ಎರಡು ಮೂರು ಪಟ್ಟು ಗಳಿಸುವ ಸಾಧ್ಯತೆ ಉಂಟು. ಆದರೂ ಎಲ್ಲರೂ ಸಮಾಜದಲ್ಲಿ ಸಮನಾದ ಗೌರವವನ್ನು ಹೊಂದಿದ್ದವರೇ. ಹೆಚ್ಚಿನ ಮಕ್ಕಳು ವಿದ್ಯಾರ್ಥಿ ದಿಸೆಯಲ್ಲಿಯೇ ಗಂಡು ಹೆಣ್ಣುಗಳ ನಡುವೆ ಪ್ರೀತಿ ಅಂಕುರಿಸಿ ತಮ್ಮ ಓದು ಮುಗಿಯುವವರೆಗೂ ಸ್ನೇಹಿತರಂತೆಯೇ ಇದ್ದು ಕೆಲಸ ದೊರಕಿದ ನಂತರ ಮದುವೆಯಾಗಿ ಸ್ವಾವಲಂಬಿಗಳಾಗಿ ಸ್ವತಂತ್ರ ಜೀವನ ನಡೆಸುತ್ತಾರೆ. ಹೆತ್ತವರೂ ಅದನ್ನೇ ಅಪೇಕ್ಷಿಸುತ್ತಾರೆ. ಅದು ಪರಂಪರೆಯಾಗಿ ಬಂದ ಜೀವನದ ಒಂದು ಭಾಗವೆಂದು ಭಾವಿಸುತ್ತಾರೆ. ಆ ದೇಶದಲ್ಲಿ ಯಾವ ನೌಕರಿಯೂ ಕಾಯಂ ಎನಿಸುವದಿಲ್ಲ. ನೌಕರನ ಕಾರ್ಯದಕ್ಷತೆಯನ್ನು ಗಮನಿಸಿ ಅವರಿಗೆ ಮುಂದುವರಿಸಲಾಗುತ್ತದೆ. ಮೈಗಳ್ಳರಿಗೆ ಯಾವಾಗಲಾದರೂ ತೆಗೆದು ಹಾಕಬಹುದು. ಅಲ್ಲದೆ ಪೆನ್ಶೆನ್‍ಗೆ ಸೀಮಿತವಾದ ವಯಸ್ಸಿಲ್ಲ. ಅವರ ಯೋಗ್ಯತೆಯನ್ನವಲಂಬಿಸಿ ಎಪ್ಪತ್ತೋ ಎಂಬತ್ತೋ ವಯಸ್ಸಿನವರೆಗೂ ಸೇವೆಯಲ್ಲಿರಬಹುದು. ಈ ದೇಶದಲ್ಲಿ ಕೃಷಿಯೂ ಪ್ರಧಾನ ಉದ್ಯೋಗವಾಗಿದೆ. ಹಳ್ಳಿಗಳಲ್ಲಿಯ ರೈತರು ಸಾವಿರಾರು ಎಕರೆ ಭೂಮಿಗೆ ಒಬ್ಬರೇ ಒಡೆಯರಾಗಿದ್ದರೂ ಕೇವಲ ಇಬ್ಬರು ಮೂವರು ಸಹಾಯಕರಿಂದ ವ್ಯವಸ್ಥಿತವಾದ ಬೇಸಾಯವನ್ನು ದೊಡ್ಡ ಯಂತ್ರಗಳ ಮೂಲಕವೇ ಸಾಗಿಸಿ ದೊಡ್ಡ ಪ್ರಮಾಣದಲ್ಲಿ ಧಾನ್ಯ ಪಡೆದು ಹೊಲದಲ್ಲಿಯೇ ಸಂಗ್ರಹಿಸಿ ಉತ್ತಮ ಬೆಲೆ ನಿಗಧಿಯಾದಾಗ ನೇರವಾಗಿ ವ್ಯವಹಾರ ಮಾಡುತ್ತಾರೆ. ಹೀಗಾಗಿ ದಲ್ಲಾಳಿಗೆ ಒದಗುವ ಲಾಭಾಂಶ ರೈತರಿಗೇ ಸೇರುತ್ತದೆ. ಆಷ್ಟ್ರೇಲಿಯಾವು ಅನೇಕ ಕೃಷಿ ಉತ್ಪನ್ನಗಳಿಂದ ಜಗತ್ತಿನಲ್ಲಿಯೇ ಗುರುತಿಸಲ್ಪಟ್ಟ ದೇಶವಾಗಿದ್ದು, ಗೋಧಿ, ಅಕ್ಕಿ, ಕಾಳು, ಸಕ್ಕರೆ, ಹತ್ತಿ, ಉಣ್ಣೆ, ಮಾಂಸ ಮೊದಲಾದ 70% ರಷ್ಟು ಕೃಷಿ ಉತ್ಪನ್ನಗಳು ಹೊರದೇಶಗಳಿಗೆ ರಫ್ತಾಗುತ್ತವೆ. 31/2 ಲಕ್ಷ ಕೃಷಿ ಉದ್ಯೋಗಿಗಳಿದ್ದರೆ ಅವರಲ್ಲಿ 4% ಮಹಿಳೆಯರೂ ಕೆಲಸ ನಿರ್ವಹಿಸುವರು. ಇಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ಕೃಷಿ ಉದ್ದಿಮೆ ನಡೆಯುತ್ತದೆ. ಹೀಗೆ ಮಾನಧನರಾದ ಆಷ್ಟ್ರೇಲಿಯನ್ನರು ಶಾಂತಿಪ್ರಿಯರು. ಸದಾ ಹಸನ್ಮುಖಿಯಾಗಿ ಬೇರೆಯವರೊಡನೆ ಬೆರೆಯುತ್ತಾರೆ. ಶುಭಾಶಯ ಕೋರುತ್ತಾರೆ. ಸುಖದುಃಖಗಳಲ್ಲೂ ಒಂದಾಗುತ್ತಾರೆ. ಇಂಥ ಮಾನವತೆಯನ್ನು ಹೊಂದಿದ ಆಷ್ಟ್ರೇಲಿಯನ್ನರ ಅಭಿಮಾನವನ್ನು ಮೆಚ್ಚಲೇಬೇಕಲ್ಲವೇ ? ಎಂ.ಎಂ. ಹಿರೇಮಠ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|