ಮನೋವಿಜ್ಞಾನ ಮಾನವನಷ್ಟೇ ಹಳೆಯದಾದರೂ ಅದು ಒಂದು ಸ್ವತಂತ್ರ ವೈಜ್ಞಾನಿಕ ಪ್ರಕಾರವಾಗಿ ಅಸ್ಥಿತ್ವಕ್ಕೆ ಬಂದದ್ದು ಇತ್ತೀಚೆಗೆ, ಸುಮಾರು 125 ವರ್ಷಗಳ ಹಿಂದೆ. ಪುರಾತನ ಗ್ರೀಕ್ ದಾರ್ಶನಿಕರು ಮನಸ್ಸನ್ನು ಕುರಿತು ಹಲವಾರು ವ್ಯಾಖ್ಯಾನಗಳನ್ನು ಮಾಡಿದ್ದರು. ಅವರು ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಉದಾಹರಣೆಗೆ, ನಾನಾರು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೇನೆ? ಇಲ್ಲೇನು ಮಾಡುತ್ತಿದ್ದೇನೆ? ಏಕೆ ಮಾಡುತ್ತಿದ್ದೇನೆ? ಇಂತಹ ದಾರ್ಶನಿಕ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರು. ಈ ಪ್ರಶ್ನೆಗಳಿಗೆ ಇಂದು ಕೂಡಾ ಸಮರ್ಪಕವಾಗಿ ಉತ್ತರ ಹೇಳುವುದು ಸಾಧ್ಯವಾಗಿಲ್ಲ; ಅದು ಬೇರೆ ಮಾತು. ಇಂದು ಮನೋವಿಜ್ಞಾನ ವಿಫುಲವಾಗಿ ಬೆಳೆದಿದೆ. ಅಮೆರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು ಬಹಳ ಪ್ರಗತಿ ಸಾಧಿಸಿದೆ. ಒಂದು ಅಂದಾಜಿನ ಪ್ರಕಾರ ಇಂದು ಜಗತ್ತಿನಲ್ಲಿ ಸುಮಾರು ಆರು ಲಕ್ಷ ಮನೋವಿಜ್ಞಾನಿಗಳಿದ್ದಾರೆ. ಅವರಲ್ಲಿ ನಾಲ್ಕು ಲಕ್ಷ ಅಮೆರಿಕದಲ್ಲಿದ್ದಾರೆ; ಉಳಿದವರು ವಿಶ್ವದ ಇತರೆಡೆಗಳಲ್ಲಿ ಹಂಚಿ ಹೋಗಿದ್ದಾರೆ. ಭಾರತದಲ್ಲೂ ಸಾವಿರಾರು ಮಂದಿ ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ; ಮಾನಸಿಕ ಚಿಕಿತ್ಸೆ, ಆಪ್ತ ಸಲಹೆ ಮುಂತಾದ ಪರಿಣತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮನೋವಿಜ್ಞಾನಿಗಳು ಮಾನವನ ವರ್ತನೆ ಮತ್ತು ಸಾಮಾಜಿಕ ವ್ಯವಹಾರಗಳ ಬಗ್ಗೆ ಸಾಕಷ್ಟು ವಿಷಯ ಸಂಗ್ರಹ ಮಾಡಿದ್ದಾರೆ. ಸ್ವಾರಸ್ಯಕರವಾದ ಸಂಶೋಧನೆಗಳ ಮೂಲಕ ಕುತೂಹಲಕಾರಿಯಾದ ವಿಷಯಗಳನ್ನು ಹೊರಗೆಡವಿದ್ದಾರೆ. ಹಲವಾರು ಕ್ಲಿಷ್ಟ ಸಮಸ್ಯೆಗಳಿಗೆ ಉತ್ತರಿಸುವಲ್ಲಿ ಸಫಲರಾಗಿದ್ದಾರೆ. ಉದಾಹರಣೆಗೆ, ನಮ್ಮ ವರ್ತನೆಗಳಿಗೆ ಮೂಲ ಪ್ರೇರಣೆಗಳಾವುವು? ನಾವೇಕೆ ಕೋಪಿಸಿಕೊಳ್ಳುತ್ತೇವೆ? ದ್ವೇಷಿಸುತ್ತೇವೆ, ಪ್ರೀತಿಸುತ್ತೇವೆ, ಹೊಡೆದಾಡುತ್ತೇವೆ? ನಾವೇಕೆ ಇತರರಿಗೆ ಸಹಾಯ ಮಾಡುತ್ತೇವೆ ಅಥವಾ ಮಾಡುವುದಿಲ್ಲ? ನಾವು ನೈತಿಕವಾಗಿ ಅಥವಾ ಅನೈತಿಕವಾಗಿ ನಡೆದುಕೊಳ್ಳಲು ಕಾರಣಗಳೇನು? ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸಲು ಉತ್ತಮ ವಿಧಾನಗಳಾವುವು? ಕಲಿತ ಪಾಠಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ? ಪರೀಕ್ಷೆಯ ಭಯವನ್ನು ತಪ್ಪಿಸುವುದು ಹೇಗೆ? ಮಕ್ಕಳನ್ನು ತಿದ್ದುವಾಗ ಅವರನ್ನು ಶಿಕ್ಷಿಸುವುದು ಸರಿಯೆ? ತಂದೆ ತಾಯಿಗಳು ಮಕ್ಕಳ ಜತೆಯಲ್ಲಿ ಹೇಗೆ ವ್ಯವಹರಿಸಬೇಕು? ವೈವಾಹಿಕ ಜೀವನದಲ್ಲಿ ಏರುಪೇರುಗಳು ಹೇಗೆ ಹುಟ್ಟಿಕೊಳ್ಳುತ್ತವೆ? ಅವುಗಳಿಗೆ ಪರಿಹಾರಗಳಿವೆಯೇ? ವಿವಾಹ ವಿಚ್ಛೇಧನಕ್ಕೆ ಕಾರಣಗಳೇನು? ಅವುಗಳನ್ನು ತಡೆಯಬಹುದೆ? ಕಾರ್ಮಿಕರನ್ನು ಹೆಚ್ಚು ಉತ್ಪಾದಿಸುವಂತೆ ಪ್ರೇರೇಪಿಸಲು ಸಾಧ್ಯವೆ? ಮೇಲ್ವಿಚಾರಕರು ಕೆಲಸಗಾರರನ್ನು ಹೇಗೆ ನಡೆಸಿಕೊಳ್ಳಬೇಕು? ಮುಷ್ಕರಗಳಿಗೆ ಕಾರಣಗಳೇನು? ಅವನ್ನು ತಪ್ಪಿಸಬಹುದೇ? ನಿತ್ಯ ಜೀವನದಲ್ಲಿ ಒತ್ತಡ(Stress)ವನ್ನು ಪರಿಹರಿಸಿಕೊಳ್ಳುವುದು ಹೇಗೆ? ನಾಯಕರ ಲಕ್ಷಣಗಳಾವುವು? ಅವರನ್ನು ನಿರ್ಮಾಣ ಮಾಡಲು ಸಾಧ್ಯವೇ? ರಾಜಕಾರಣಿಗಳು ಮತದಾರರನ್ನು ಒಲಿಸಿಕೊಳ್ಳುವುದು ಹೇಗೆ? ಪ್ರಚಾರವನ್ನು ಪರಿಣಾಮಕಾರಿಯಾಗಿಸುವುದು ಹೇಗೆ? ಪೊಲೀಸರನ್ನು ಜನಾನುರಾಗಿಗಳಾಗಿರುವಂತೆ ತರಬೇತು ಮಾಡುವುದು ಹೇಗೆ? ಬುದ್ಧಿ ಶಕ್ತಿ ಎಂದರೇನು? ಅದನ್ನು ಅಳೆಯುವುದು ಹೇಗೆ? ಕನಸುಗಳು ಏಕೆ ಬೀಳುತ್ತವೆ, ಅವುಗಳಿಗೆ ಅರ್ಥವಿದೆಯೇ? ಜನರು ಆತ್ಮಹತ್ಯೆಗೆ ಏಕೆ ಶರಣುಹೋಗುತ್ತಾರೆ? ಅದನ್ನು ತಡೆಯಲು ಸಾಧ್ಯವಿಲ್ಲವೇ? ಮಾದಕ ದ್ರವ್ಯಗಳ ಸೇವನೆಗೆ ಕಾರಣಗಳೇನು? ಅವುಗಳ ಸೇವನೆಯನ್ನು ತಡೆಯುವುದು ಸಾಧ್ಯವಿಲ್ಲವೇ? ಬೀಡಿ, ಸಿಗರೇಟು ಸೇದುವುದು, ಮದ್ಯಪಾನ ಮುಂತದ ದುಶ್ಚಟಗಳನ್ನು ಬಿಡಿಸುವುದು ಹೇಗೆ? ಶಿಕ್ಷೆಗೊಳಗಾಗಿ ಸೆರೆವಾಸದಲ್ಲಿರುವವರಲ್ಲಿ ಮಾರ್ಪಾಡು ತಂದು ಅವರನ್ನು ನಾಗರಿಕ ಪ್ರಜೆಗಳಾಗಿ ಬಾಳುವಂತೆ ಮಾಡುವುದು ಸಾಧ್ಯವೆ? ಅತ್ಯಾಚಾರಕ್ಕೊಳಗಾದವರಿಗೆ ಸಾಂತ್ವನ ನೀಡುವುದು ಹೇಗೆ? ಭಯೋತ್ಪಾದಕರು ಹೇಗೆ ಸೃಷ್ಟಿಯಾಗುತ್ತಾರೆ? ಅವರನ್ನು ಸರಿದಾರಿಗೆ ತರುವುದು ಸಾಧ್ಯವಿಲ್ಲವೇ? ಮಾನಸಿಕ ವೈಪರೀತ್ಯಗಳಿಗೆ ಕಾರಣಗಳೇನು? ಅವುಗಳಿಗೆ ಸೂಕ್ತ ಚಿಕಿತ್ಸೆಗಳಾವುವು? ಅನವಶ್ಯಕ ಕೋಪತಾಪಗಳು, ಭಯಭೀತಿಗಳು, ವಿಷಣ್ಣತೆ (Depression) ನಿದ್ರಾಹೀನತೆ, ಚಿಂತೆ, ಆತಂಕ ಮುಂತಾದವನ್ನು ಹೋಗಲಾಡಿಸಬಹುದೇ? ಇಂಥ ನೂರಾರು, ಸಾವಿರಾರು ಸಮಸ್ಯೆಗಳಿಗೆ ಮನೋವಿಜ್ಞಾನ ಉತ್ತರ ಹೇಳಬಲ್ಲದು. ಆದರೆ ಮನೋವಿಜ್ಞಾನಿಗಳ ಈ ಪ್ರಯತ್ನಗಳಿಗೆ ಸರ್ಕಾರದಿಂದ, ಶೈಕ್ಷಣಿಕ ಸಂಸ್ಥೆಗಳಿಂದ, ಸಾರ್ವಜನಿಕರಿಂದ ಸಾಕಾದಷ್ಟು ಪ್ರೋತ್ಸಾಹ ದೊರಕದಿರುವುದು ದುರಾದೃಷ್ಟ. ಇಂದು ನಮ್ಮ ಗಮನವಿರುವುದೆಲ್ಲ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ತಾಂತ್ರಿಕ ವಿಜ್ಞಾನಗಳೆಡೆಗೆ; ಮಾನವಿಕ ವಿಜ್ಞಾನಗಳೆಡೆಗಲ್ಲ. ಒಂದು ಮೂಲದ ಪ್ರಕಾರ ಅಮೆರಿಕದಂಥ ಮುಂದುವರೆದ ದೇಶದಲ್ಲಿ ಮೊದಲ ಗುಂಪಿನವಕ್ಕೆ ಖರ್ಚು ಮಾಡುವ ಹಣದ 1/20 ಭಾಗ ಮಾತ್ರ ಮಾನವಿಕಗಳಿಗೆ ಖರ್ಚಾಗುತ್ತಿದೆಯಂತೆ ! ಇದರ ಪರಿಣಾಮವಾಗಿ ಮೂಲಭೂತ ವಿಜ್ಞಾನಗಳು ವಿಫುಲವಾಗಿ ಬೆಳೆದಿವೆ, ಬೆಳೆಯುತ್ತಿವೆ. ಅವುಗಳ ಪರಿಶೋಧನೆಗಳು ಅದ್ಭುತವಾಗಿವೆ. ಅವು ಕಾಲ ದೇಶಗಳ (Space and Time) ಮೇಲೆ ವಿಜಯ ಸಾಧಿಸಿವೆ. ನಮ್ಮ ಯಾಂತ್ರಿಕ ಬೆಳವಣಿಗೆ ಊಹಿಗೆ ಮೀರಿದುದು. ಹುಚ್ಚು ಹೊಳೆಗಳಿಗೆ ಅಡ್ಡಗಟ್ಟೆ ಕಟ್ಟಿ ಪ್ರವಾಹದಿಂದ ಪಾರು ಮಾಡುವುದರ ಜತೆಗೆ ಹೆಚ್ಚು ಬೆಳೆ ಬೆಳೆಯಲು ಅನುವು ಮಾಡಿಕೊಟ್ಟಿವೆ; ಬಾಹ್ಯ ಪರಿಸರದ ಮೇಲೆ ನಿಯಂತ್ರಣ ಸಾಧಿಸಲಾಗಿದೆ; ಹವೆಯನ್ನು ನಿಯಂತ್ರಿಸಿ ಹಿತಕರವಾದ ಜೀವನ ನಡೆಸಲು ಸಹಾಯ ಮಾಡಲಾಗಿದೆ. ವಾಹನ ಸೌಕರ್ಯಗಳು ಎಷ್ಟಾಗಿವೆಯೆಂದರೆ ನಾವು ನಡೆಯುವುದನ್ನೇ ಮರೆಯುತ್ತಿದ್ದೇವೆ. ದೂರವಾಣಿ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ ಎಲ್ಲರಿಗೂ ತಿಳಿದ ವಿಷಯ. ಅಣುವಿನ ಅಂತರಾಳವನ್ನು ಅರಿತು ಅಭೇದ್ಯನಿಸಿದ್ದ ಅದನ್ನು ವಿಭಜಿಸಿ ದೈತ್ಯಶಕ್ತಿಯನ್ನು ಹೊರಗೆಡವಲಾಗಿದೆ. ಅಣುವಿಜ್ಞಾನದ ಬೆಳವಣಿಗೆ ಆತಂಕದ ಮಟ್ಟವನ್ನು ಮುಟ್ಟಿದೆ.
ಆದರೆ ಎಲ್ಲವನ್ನು ಅರಿತ ಮಾನವನಿಗೆ ತನ್ನನ್ನು ತಾನು ಅರಿಯಲಾಗಿಲ್ಲ; ಎಲ್ಲವನ್ನು ನಿಯಂತ್ರಿಸಿದವನಿಗೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗುತ್ತಿಲ್ಲ. ಬಾಹ್ಯ ಪ್ರಪಂಚವನ್ನು ಅರ್ಥೈಸಿಕೊಂಡ ಮನುಷ್ಯನಿಗೆ ತನ್ನ ಆಂತರಿಕ ಪ್ರಪಂಚ ಅರ್ಥವಾಗದಿರುವುದು ಒಂದು ವೈಜ್ಞಾನಿಕ ವಿಪರ್ಯಾಸ. ಮಾನವನಿಗೆ ಎಲ್ಲವೂ ತಿಳಿದಿದೆ-ತನ್ನನ್ನು ಬಿಟ್ಟು. ಇಂದು ವೈಜ್ಞಾನಿಕ ಆವಿಷ್ಕಾರಗಳು ರಾಜಕಾರಣಿಗಳ ನಿಯಂತ್ರಣಕ್ಕೊಳಪಟ್ಟಿವೆ. ಅದರಿಂದಾಗಿ ಹಲವು ವೇಳೆ ಅವು ದುರುಪಯೋಗಕ್ಕೊಳಗಾಗುತ್ತಿವೆ. ಅಣು ವಿಭಜನೆ ಇದಕ್ಕೊಂದು ನಿದರ್ಶನ. ವಿಜ್ಞಾನಿಗಳು ಅಣು ಬಾಂಬನ್ನೇನು ಮಾಡಬೇಕೆಂದುಕೊಂಡಿರಲಿಲ್ಲ. ಅದನ್ನು ಮಾಡಿಸಿದವರು ರಾಜಕಾರಣಿಗಳು. ಅದ್ದರಿಂದ ಆಗಿರುವ ಅನಾಹುತಗಳು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನು ಕೆಲವು ಆವಿಷ್ಕಾರಗಳು ತಾಂತ್ರಿಕ ನಿಪುಣರ ಮತ್ತು ಲಾಭಕೋರ ಕೈಗಾರಿಕೋದ್ಯಮಿಗಳ ಕೈಗೆ ಸಿಕ್ಕು ಜನರ ಶೋಷಣೆಯಾಗುತ್ತಿದೆ; ಕಾಡುಗಳು ನಾಶವಾಗುತ್ತಿವೆ; ಕುಡಿಯುವ ನೀರು ಕೊಳಕಾಗುತ್ತಿದೆ; ಪರಿಸರ ಕಲುಷಿತವಾಗುತ್ತಿದೆ. ಒಳ್ಳೆಯ ಗಾಳಿ ಬೆಳಕು ದೊರಕುವುದು ಕಷ್ಟವಾಗುತ್ತಿದೆ. ನಮ್ಮ ನಗರಗಳಲ್ಲಿ ಆಮ್ಲಜನಕವನ್ನು ಮಾರುವ ಅಂಗಡಿಗಳನ್ನು ತೆರೆಯುವ ದಿನ ದೂರವಿಲ್ಲ. ನಮ್ಮ ಸಮಾಜ ಕೂಡಾ ರೋಗಗ್ರಸ್ಥವಾಗುತ್ತಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಸಂಬಂಧಗಳು ಸವಕಲಾಗುತ್ತಿವೆ. ಸ್ವಾರ್ಥ ಕೇಂದ್ರಿತವಾದ ವ್ಯಕ್ತಿತ್ವಗಳು ಹೇರಳವಾಗುತ್ತಿದ್ದಾರೆ. ಜನತೆಯನ್ನು ಬಾಧಿಸುತ್ತಿರುವ ಯಾವೊಂದು ಸಮಸ್ಯೆಗೂ ನಿಶ್ಚಿತ ಪರಿಹಾರ ಕಂಡುಬರುತ್ತಿಲ್ಲ. ಎಂದಾದರೊಂದು ದಿನ ಈ ಸಮಸ್ಯೆಗಳು ಬಗೆಹರಿಯಬಹುದೆಂಬ ಆಶಾಭಾವನೆ ಕೂಡಾ ಜನರಲ್ಲಿಲ್ಲ. ಅಧಿಕಾರ ಹಿಡಿಯುವವರ ಸ್ವಾರ್ಥ, ಹಣದಾಹ, ಅಧಿಕಾರವನ್ನು ಉಳಿಸಿಕೊಳ್ಳಲು ಅವರು ಮಾಡುತ್ತಿರುವ ಕಸರತ್ತು, ಮುಂತಾದವು ತಮ್ಮ ದುಸ್ಥಿತಿಗೆ ಬಹುಮಟ್ಟಿಗೆ ಕಾರಣವೆಂದು ತಿಳಿದಿದ್ದರೂ ಜನರು ಏನೂ ಮಾಡಲಾರದವರಾಗಿದ್ದಾರೆ. ಸರ್ಕಾರರಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಲಾರದೆಂಬ ನಿರಾಶಾಭಾವನೆ ಪ್ರಜೆಗಳಲ್ಲಿ ಬೆಳೆದು ಬರುತ್ತಿದೆ. ಆಡಳಿತ ವ್ಯವಸ್ಥೆಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲದಿರುವುದು ಶುಭ ಸೂಚನೆಯಲ್ಲ. ಅಧಿಕಾರದಲ್ಲಿರುವವರು ಮಾತ್ರ ತಮಗೆ ಮತ್ತು ತಮ್ಮ ಮುಂದಿನ ಪೀಳಿಗೆಗೆ, ಸಾಕಾಗುವಷ್ಟನ್ನು ಕೂಡಿಡಬಲ್ಲರು. ಅದಕ್ಕೆ ಯಾವ ಮಾರ್ಗವಾದರೂ ಸರಿ, ಎನ್ನುವ ಧೋರಣೆ ಜನರಲ್ಲಿ ಬೆಳೆದು ಬಂದು, ಸಾಮಾಜಿಕ ಮೌಲ್ಯಗಳು ಅಧೋಗತಿಗಿಳಿಯುತ್ತಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಅಪಮಾರ್ಗಗಳು ಮೇಲ್ಗೈಯಾಗುತ್ತಿದೆ. ಇದನ್ನು ಬದಲಾಯಿಸುವ ಪ್ರವೃತ್ತಿಯಾಗಲೀ, ಅದಕ್ಕಾಗಿ ಪ್ರಯತ್ನಿಸುವ ನಾಯಕತ್ವವಾಗಲೀ ಕಂಡುಬರದಿರುವುದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಬಹುದೊಡ್ಡ ಕೊರತೆ. ಇಂದು ಧಾರ್ಮಿಕ ವ್ಯವಸ್ಥೆಗಳು ಕೂಡಾ ನಮ್ಮನ್ನು ದಾರಿ ತಪ್ಪಿಸುತ್ತಿವೆ. ಧರ್ಮದ ಹೆಸರಿನಲ್ಲಿ ರಕ್ತದ ಹೊಳೆ ಹರಿಯುತ್ತಿದೆ. ಮತಾಂಧರು ಹೆಚ್ಚುತ್ತಿದ್ದಾರೆ. ಸಾಮಾನ್ಯ ಜನರು ತಾವು ಹಿಂದುಗಳೆಂದು, ಮುಸಲ್ಮಾನರೆಂದು, ಕ್ರೈಸ್ತರೆಂದು ಗುರುತಿಸಿಕೊಳ್ಳುವಷ್ಟು ಸರಳವಾಗಿ ತಾವು ಮನುಷ್ಯರೆಂದು ಗುರುತಿಸಿಕೊಳ್ಳುತ್ತಿಲ್ಲ. ದಯೆಯಿಲ್ಲದ ಧರ್ಮಗಳು ಹೆಚ್ಚಾಗಿ ಬೆಳೆಯುತ್ತಿವೆ. ಸುಳ್ಳು, ಮೋಸ, ವಂಚನೆ, ಕ್ರೌರ್ಯಗಳು ಕಾಣಸಿಗುವಷ್ಟು ಸುಲಭವಾಗಿ ಸತ್ಯ, ದಯೆ, ಪರೋಪಕಾರ, ಅಹಿಂಸೆಗಳು ಕಂಡುಬರುತ್ತಿಲ್ಲ. ಇದನ್ನೆಲ್ಲ ನೋಡಿದರೆ ಮಾನವ ವಿನಾಶದ ಹಾದಿ ಹಿಡಿಯುತ್ತಿದ್ದಾನೇನೊ ಅನ್ನಿಸುತ್ತದೆ. ಹೀಗಾಗಲು ಕಾರಣಗಳೇನು ಎಂದು ಯಾರೂ ಆಲೋಚಿಸುವಂತೆಯೂ ಕಾಣುತ್ತಿಲ್ಲ. ಇದು ನಮ್ಮ ದೌರ್ಭಾಗ್ಯ. ಈ ಪರಿಸ್ಥಿತಿಯನ್ನುಂಟುಮಾಡಿರುವ ಹಲವಾರು ಕಾರಣಗಳಲ್ಲಿ ನಾವು ಮಾನವಿಕ ವಿಜ್ಞಾನಗಳ ಮತ್ತು ಸಂಶೋಧನೆಗಳ ವಿಚಾರವಾಗಿ ತೋರುವ ನಿರ್ಲಕ್ಷ್ಯವೂ ಒಂದು. ಮಾನವಿಕಗಳು ಮಾನವನ ವರ್ತನೆಗಳಿಗೆ ಪ್ರೇರಣಗಳನ್ನು ಕಂಡುಹಿಡಿಯುವಲ್ಲಿ ತಕ್ಕಮಟ್ಟಿಗೆ ಜಯಶಾಲಿಯಾಗಿವೆ. ಉದಾಹರಣೆಗೆ, ಆಧುನಿಕ ಮನೋವಿಜ್ಞಾನ ಮಾನವನ ವೈಯುಕ್ತಿಕ ಹಾಗೂ ಸಾಮಾಜಿಕ ಜೀವನವನ್ನು ಉತ್ತಮಗೊಳಿಸಬಲ್ಲ ಕೆಲವು ಉಪಯುಕ್ತ ಸಲಹೆಗಳನ್ನು ಸಂಶೋಧನೆಗಳಿಂದ ಕಂಡುಕೊಂಡಿದೆ. ಮಕ್ಕಳನ್ನು ಸಾಕುವ ಉತ್ತಮ ವಿಧಾನಗಳು, ವಿದ್ಯಾರ್ಥಿಗಳಿಗೆ ಪಾಠ ಕಲಿಸಲು ಅನುಸರಿಸಬೇಕಾದ ಪರಿಣಾಮಕಾರಿ ಸೂತ್ರಗಳು, ಮಕ್ಕಳಲ್ಲಿ ನೈತಿಕತೆಯನ್ನು ವಿಕಾಸಗೊಳಿಸಬಲ್ಲ ಮಾರ್ಗಗಳು, ಕೋಪತಾಪಗಳೇ ಮೊದಲಾದ ಭಾವೋದ್ವೇಗವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಬಗೆಗಳು, ಸಾಮಾಜಿಕ ಮತ್ತು ಕೌಟುಂಬಿಕ ವಿರಸಗಳನ್ನು ಪರಿಹರಿಸುವ ವಿಧಾನಗಳು, ಪರಸ್ಪರರಲ್ಲಿ ಪ್ರೀತಿವಿಶ್ವಾಸಗಳನ್ನು ಬೆಳೆಯಲು ಸಹಾಯಕವಾಗಬಲ್ಲ ಪರಿಸರದ ನಿರ್ಮಾಣ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ, ಔದ್ಯೋಗಿಕ ಮಾರ್ಗದರ್ಶನ, ಶಿಶು ಮಾರ್ಗದರ್ಶನ, ಮಾನಸಿಕ ವೈಪರೀತ್ಯಗಳನ್ನು ಪರಿಹರಿಸಬಲ್ಲ ಆಪ್ತಸಲಹೆಯೇ, ಮುಂತಾದ ಮನಶ್ಚಿಕಿತ್ಸಾ ವಿಧಾನಗಳು, ಮಾದಕ ದ್ರವ್ಯಗಳ ಸೇವನೆಯಿಂದ ಬಿಡುಗಡೆ ಹೊಂದುವ ಬಗೆಗಳು, ಹೀಗೆ ನೂರಾರು ಉಪಯುಕ್ತ ಸಲಹೆಗಳನ್ನು ನಮ್ಮ ಮುಂದಿಟ್ಟಿದೆ. ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾದ್ಯಾಪಕರಾಗಿದ್ದ ಎ ಪಿಟಿರಿಮ್ ಸೊರೊಕಿನ್ (Pitirim A Sorokin 1889-1968) ಹೇಳಿದ ಕೆಲವು ಮಾತುಗಳು ಇಲ್ಲಿ ಬಹಳ ಪ್ರಸ್ತುತ. ಅವರ ಪ್ರಕಾರ ಇಂದು ನಮ್ಮ ವಿಜ್ಞಾನ ಸತ್ಯಶೋಧನೆಯಲ್ಲಿ ಬಹಳ ಪ್ರಗತಿ ಸಾಧಿಸಿದೆ; ಜನರ ಬಾಳನ್ನು ಸುಂದರವಾಗಿರಿಸಲು ಬಹಳ ಶ್ರಮ ವಹಿಸಿದೆ; ಆದರೆ, ಮಂಗಳಕರವಾದುದನ್ನು ಮಾಡುವಲ್ಲಿ ಸೋತಿದೆ. ಅಂದರೆ, ಬಾರತೀಯರು ಹೇಳುವ ಸತ್ಯಂ ಶಿವಂ ಸುಂದರಂಗಳಲ್ಲಿ ಶಿವಂನ್ನು ಮರೆತಿದೆ; ಇದು ನಮ್ಮ ದೌರ್ಭಾಗ್ಯ. ಇಂದು ನಮ್ಮ ಸಾಮಾಜಿಕ ಹಾಗೂ ವೈಯುಕ್ತಿಕ ರೋಗರುಜಿನಗಳಿಗೆ ಪರಮೌಷಧ ಪ್ರೇಮ. ನಿಸ್ವಾರ್ಥ ಸೃಜನಶೀಲ ಪ್ರೇಮ (selfless creative love), ಎಂಬುದು ಸೊರೊಕಿನ್ನರ ನಂಬಿಕೆ. ಪ್ರೇಮ ನಮ್ಮ ದೈಹಿಕ, ಮಾನಸಿಕ, ನೈತಿಕ ವಿಕಾಸಕ್ಕೆ ಅವಶ್ಯಕವಾದ ಮೂಲ ಶಕ್ತಿ. ನಮ್ಮನ್ನು ಕಾಡುವ ದ್ವೇಷಾಸೂಯೆಗಳಿಗೆ, ವ್ಯಾಧಿಗ್ರಸ್ಥ ಭಾವನೆಗಳಿಗೆ ದುಷ್ಕರ್ಮಗಳಿಗೆ ಆತ್ಮಹತ್ಯೆಯ ಅಭಿವೃತ್ತಿಗಳಿಗೆ ಭಯಭೀತಿಗಳಿಗೆ ಮನೋರೋಗಗಳಿಗೆ ಪ್ರೇಮವೇ ಏಕಮೇವ ಮದ್ದು. ಮಾನವನ ಔನ್ನತ್ಯಕ್ಕೆ, ನೈತಿಕ ವಿಕಾಸಕ್ಕೆ ಇರುವ ಒಂದೇ ಮಾರ್ಗ ಪ್ರೇಮದ್ದು. ಇಂದು ನಮ್ಮ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವ್ಯವಸ್ಥೆಗಳು ನಮಗೆ ಜನರನ್ನು ಪ್ರೀತಿಸುವುದನ್ನು ಕಲಿಸುತ್ತಿಲ್ಲ; ಸಾಮಾಜಿಕ ಆಸಕ್ತಿಯನ್ನು ಬೆಳಸಿಕೊಳ್ಳಲು ಸಹಾಯ ಮಾಡುತ್ತಿಲ್ಲ: ಏನಾದರೊಂದು ಮಹತ್ತಾದುದನ್ನು ಸಾಧಿಸುವುದನ್ನು ಹೇಳಿಕೊಡುತ್ತಿಲ್ಲ; ಏನಾದರೂ ಹೆಮ್ಮೆ ಪಡುವಂತಹ ಕೆಲಸ ಮಾಡಲು ನಮಗೆ ಅವಕಾಶವೇ ಸಿಗುತ್ತಿಲ್ಲ. ಇಂದಿನ ದಿನಗಳಲ್ಲಿ ನಮ್ಮ ಆಸಕ್ತಿಯೆಲ್ಲಾ ಇರುವುದು ತಿನ್ನುವುದು, ಕುಡಿಯುವುದು, ಲೈಂಗಿಕತೆ ಇವುಗಳೆಡೆಗೆ. ನಮ್ಮ ಶಾಲಾಕಾಲೇಜುಗಳು ಬೀಜಗಣಿತದ ಜತೆಗೆ ಪ್ರೇಮಿಸುವುದನ್ನೂ, ರಸಾಯನಶಾಸ್ತ್ರದ ಜತೆಗೆ ಕೊಂಚ ರಸಗ್ರಹಣ ಪ್ರಜ್ಞೆಯನ್ನು ಕಲಿಸಿದರೆ ಈ ಭೂಮಿ ಹೆಚ್ಚು ವಾಸ ಯೋಗ್ಯವಾಗುವುದರಲ್ಲಿ ಸಂದೇಹವಿಲ್ಲ. ಇದೇ ಮಾತನ್ನ ಮನೋವಿಜ್ಞಾನಿ ಎರಿಕ್ ಫ್ರಾಮ್ (Erich Fromm 1900-1980) ಕೂಡ ಹೇಳಿದ್ದಾರೆ. ಅವರ ಪ್ರಕಾರ, ಇಂದು ನಾವು ಒಂದು ರೋಗಿಷ್ಟ ಸಮಾಜದಲ್ಲಿ ವಾಸಿಸುತ್ತಿದ್ದೇವೆ; ಹಳೆಯ ಮೌಲ್ಯಗಳು ನಾಶವಾಗಿ, ಹೊಸವನ್ನು ಬೆಳಸಿಕೊಳ್ಳಲಾಗದೆ ನೈತಿಕ ಅನಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ; ಚುಕ್ಕಾಣಿಯಿಲ್ಲದ ನಾವೆಯಲ್ಲಿ ಪ್ರಯಾಣಿಸುತ್ತಿದ್ದೇವೆ. ಇಲ್ಲಿ ನಾವು ಎಲ್ಲವನ್ನು ಹೆಚ್ಚಾಗಿ ಉತ್ಪಾದಿಸುವುದು, ಹೆಚ್ಚಾಗಿ ಅನುಭೋಗಿಸುವುದು, ಇವುಗಳಲ್ಲಿ ನಿರತರಾಗಿದ್ದೇವೆ- ಪ್ರೇಮ ಒಂದನ್ನು ಬಿಟ್ಟು. ಪ್ರೀತಿ, ಪ್ರೇಮ, ವಿಶ್ವಾಸ, ಅಹಿಂಸೆ, ಪರೋಪಕಾರ, ತಾಳ್ಮೆ, ಮುಂತಾದ ಉದಾತ್ತ ಮಾನವೀಯ ಮೌಲ್ಯಗಳನ್ನು ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲಾಗದಿರುವುದು ನಿಜವಾಗಿಯೂ ವಿಷಾದನೀಯ. ಅಮೆರಿಕಾದ ಪಸಿದ್ಧ ಭೌತ ವಿಜ್ಞಾನಿ ಓಪನ್ ಹೀಮರ್ (Oppenheimer, 1904-1967) ಒಂದು ಸಾರಿ ಅಮೆರಿಕಾದ ಮನೋವಿಜ್ಞಾನ ಸಂಸ್ಥೆಯ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಾ, ಜಗತ್ತಿನ ಅಳಿವು ಉಳಿವುಗಳನ್ನು ನಿರ್ಧರಿಸುವುದು ಭೌತವಿಜ್ಞಾನವಲ್ಲ, ಮನೋವಿಜ್ಞಾನ ಎಂದು ಹೇಳಿದರು. ಈ ಮಾತಿನಲ್ಲಿ ಕೊಂಚ ಉತ್ಪ್ರೇಕ್ಷೆಯಿದ್ದರೂ ಅದು ಸತ್ಯದೂರವಲ್ಲ. ನಮ್ಮ ಸಮಾಜದ, ನಮ್ಮ ಶೈಕ್ಷಣಿಕ ತಜ್ಞರು ಮಾನವಿಕಗಳ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳನ್ನು ಕುರಿತು ಕೊಂಚ ಗಂಭೀರವಾಗಿ ಆಲೋಚಿಸಬೇಕಾದ ಕಾಲ ಬಂದಿದೆ. ಕೇವಲ ಮೆಡಿಸನ್, ಇಂಜಿನಿಯರಿಂಗ್, ಐಟಿ, ಬಿಟಿ, ಮುಂತಾದವುಗಳ ಮೇಲೆ ಮಾತ್ರ ಈ ಜಗತ್ತು ನಿಂತಿಲ್ಲ. ಜಗತ್ತು ಉದ್ಧಾರವಾಗಬೇಕಾದರೆ ಮಾನವ ತನ್ನ ತಾನರಿದು, ತಾನಾರೆಂಬುದ ತಿಳಿಯಬೇಕು. ಅವನಿಗೆ ಅವನಲ್ಲಿರುವ ದುರ್ಗುಣಗಳ ಅರಿವು ಮಾಡಿಕೊಟ್ಟು, ಅವುಗಳನ್ನು ಹತೋಟಿಯಲ್ಲಿಡುವ ವಿಧಾನಗಳನ್ನು ಕಲಿಯಬೇಕು; ಸದ್ಗುಣಗಳನ್ನು ಪ್ರೋತ್ಸಾಹಿಸಿ ಅವುಗಳನ್ನು ಹೊರಗೆಡವಬೇಕು. ಆಲ್ಫ್ರೆಡ್ ಆಡ್ಲರ್ (Alfred Adler) ಪ್ರಕಾರ, ಮನುಷ್ಯನಲ್ಲಿ ಸಾಮಾಜಿಕ ಹಿತಾಸಕ್ತಿ. (Social interest) ಅನುವಂಶಿಕವಾಗಿ ಬಂದಿರುತ್ತದೆ. ಅದನ್ನು ಹೊರಗೆಡುವಂತಹ ಶಿಕ್ಷಣ ವ್ಯವಸ್ಥೆ ನಮಗೆ ಬೇಕು. ಕಾರ್ಲ್ ಯೂಂಗ್ (Carl Jung) ಹೇಳುವಂತೆ ಮನುಷ್ಯನಿಗೆ ಸ್ವಯಂ ಸಾಕ್ಷಾತ್ಕಾರ (Self-realization) ಆಗಬೇಕು; ಅವನಲ್ಲಿ ಹುದುಗಿರುವ ಆಂತರಿಕ ಶಕ್ತಿ ಹೊರಬರಬೇಕು. ಆಗ ಜಗತ್ತಿನಲ್ಲಿ ಸುಖಶಾಂತಿಗಳು ನೆಲೆಸುತ್ತವೆ; ಮಾನವ ಪರಿಪೂರ್ಣ ಜೀವನ ನಡೆಸುವುದು ಸಾಧ್ಯವಾಗುತ್ತದೆ. ಅಂದ ಮಾತ್ರಕ್ಕೆ ಮಾನವಿಕ ವಿಜ್ಞಾನಗಳ ಅಧ್ಯಯನದಿಂದ ಇವೆಲ್ಲಾ ಖಂಡಿತಾ ಜರುಗುತ್ತವೆಂದು ಹೇಳಬರುವುದಿಲ್ಲ, ಮಾನವನ ವರ್ತನೆಗಳ ಮೂಲ ಬಹಳ ಸಂಕೀರ್ಣವಾದುದು; ಅದನ್ನು ಅರಿಯುವುದು ಸುಲಭವಲ್ಲ. ಆದರೆ, ಈ ಪ್ರಯತ್ನದಿಂದ ಕೆಡಕಂತೂ ಆಗುವುದಿಲ್ಲ! ಏಕೆ ಪ್ರಯತ್ನಿಸಬಾರದು? ಮನೋವೈಜ್ಞಾನಿಕ ಸಾಹಿತ್ಯ ಜಗತ್ತಿನಲ್ಲಿ ಇಂದು ವಿಫುಲವಾಗಿ ಬೆಳೆದಿದೆ. ಅದೇ ಮಟ್ಟದಲ್ಲಿ ಭಾರತೀಯ ಭಾಷೆಗಳಲ್ಲಿ ಬೆಳೆದಿಲ್ಲ. ಕನ್ನಡದಲ್ಲಿ ಆಗಿರುವುದು ಸಾಲದು. ನಮ್ಮ ಜನ ಮನೋವಿಜ್ಞಾನವನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು; ಅದನ್ನು ಕುರಿತು ಬರೆಯಬೇಕು; ಅದು ಜನರಿಗೆ ತಲುಪಬೇಕು. ಎಂ. ಬಸವಣ್ಣ ಮನೋವಿಜ್ಞಾನದ ನಿವೃತ್ತ ಪ್ರಾಧ್ಯಾಪಕರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |