ಮೊದಲ ಮಾತು: ನಮ್ಮ ದೇಶದ ಶೇಕಡಾ 654 ಕೃಷಿಕರು ಸಣ್ಣ ಹಿಡುವಳಿದಾರರು. ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬಲ್ಲ ತಂತ್ರಜ್ಞಾನ, ಹಣಕಾಸಿನ ಶಕ್ತಿ ಇವರಿಲ್ಲಿಲ್ಲವಾದುದರಿಂದ ಇವರು ಬಡವರಾಗಿಯೇ ಉಳಿದಿದ್ದಾರೆ. ಹೆಚ್ಚಿನವರು ತಮ್ಮ ಭೂಮಿಯಲ್ಲಿ ವಾರ್ಷಿಕ ಅಲ್ಪಕಾಲದ ಒಂದು ಬೆಳೆಯನ್ನು ಮಾತ್ರ ಬೆಳೆಯುತ್ತಾರೆ ಇಲ್ಲವೇ ಬೀಳು ಬಿಡುತ್ತಾರೆ ಹಾಗೂ ಸ್ವತಃ ಕೂಲಿಕಾರ್ಮಿಕರಾಗಿಯೇ ಉಳಿದಿದ್ದಾರೆ. ಸಣ್ಣ ಹಿಡುವಳಿದಾರರ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಕೂಲಿಯಾಳುಗಳ ಕೊರತೆ. ಇವರಿಗೆ ತಮ್ಮ ಭೂಮಿಯಿಂದ ಬರುವ ಅತ್ಯಲ್ಪ ಆದಾಯದಲ್ಲಿ ಕಾರ್ಮಿಕರಿಗೆ ವೇತನ ನೀಡಿ ಕೃಷಿ ಕೆಲಸ ಮಾಡಿಸುವ ತಾಕತ್ತು ಇಲ್ಲ. ಇವರ ಬೆಳೆಯು ನಾಲ್ಕಾರು ತಿಂಗಳ ನಂತರ ಇಳುವರಿ ನೀಡುವ ಬೆಳೆಯಾದುದರಿಂದ ಕೂಲಿಯಾಳುಗಳಿಗೆ ವಾರ ವಾರ ವೇತನ ನೀಡಲು ಇವರಲ್ಲಿ ಹಣವಿಲ್ಲ. ಆದುದರಿಂದ ಹೆಚ್ಚಿನ ಸಣ್ಣ ಹಿಡುವಳಿದಾರರ ಕೃಷಿ ಕೌಟುಂಬಿಕ ಸದಸ್ಯರ ಕೂಲಿಯನ್ನೇ ನೆಚ್ಚಿಕೊಂಡಿರುತ್ತದೆ. ಹೀಗಾಗಿ ಇವರಲ್ಲಿ ಪ್ರಯೋಗಶೀಲತೆ ಕಮ್ಮಿ, ನಿರಂತರ ಆದಾಯ ನೀಡುವ ಕೃಷಿಗಳು ಇಲ್ಲ. ಹೆಚ್ಚಿನ ರೈತರ ಭೂಮಿ ದಾಖಲಾತಿಗಳು ಸಮರ್ಪಕವಿಲ್ಲದ್ದರಿಂದ ಇವರಿಗೆ ಬ್ಯಾಂಕ್ ಸಾಲವೂ ದೊರೆಯುವುದಿಲ್ಲ. ಒಂದು ಸಂಶೋಧನೆಯಂತೆ ನಮ್ಮ ದೇಶದ ಶೇಕಡಾ 27 ರೈತರಿಗೆ ಮಾತ್ರ ಬ್ಯಾಂಕುಗಳಿಂದ ಸಾಲ ದೊರೆಯುತ್ತಿದೆ. ಶೇಕಡಾ 23 ರೈತರಿಗೆ ಲೇವಾದೇವಿಗಾರರಿಂದ ಸಾಲ ದೊರೆಯುತ್ತಿದೆ. ಇನ್ನುಳಿದ 51 ಶೇಕಡಾ ರೈತರು ಯಾವುದೇ ಹಣಕಾಸು ಸಹಾಯದಿಂದ ವಂಚಿತರಾಗಿದ್ದಾರೆ (ಎನ್.ಎಸ್.ಎಸ್.ಓ ಸಮೀಕ್ಷೆ 2003). ಸಾಧನೆ ಮಾಡಬೇಕೆಂಬ ಹಂಬಲವುಳ್ಳ ಕೆಲ ಸಣ್ಣ ರೈತರು ಕೈಕಚ್ಚಿಕೊಳ್ಳುತ್ತಾರೆ. ಕಳೆದ ಒಂದು ದಶಕದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಎರಡು ಲಕ್ಷ ಮೀರಿದೆ. ಸ್ವಾತಂತ್ರ್ಯಾನಂತರದಲ್ಲಿ ನಡೆದ ಎಲ್ಲ ಯುದ್ಧಗಳಲ್ಲಿ ಒಟ್ಟಾಗಿ ವೀರ ಮರಣ ಹೊಂದಿದ ಸೈನಿಕರಿಗಿಂತ ಈ ಸಂಖ್ಯೆ ಜಾಸ್ತಿ! ಸಂಘಟನೆಯೇ ಶಕ್ತಿ:
ಸಣ್ಣ ರೈತನ ದಯನೀಯ ಸ್ಥಿತಿಗೆ ಮಮ್ಮಲ ಮರುಗಿದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು. ದಿನನಿತ್ಯ ತಮ್ಮ ಚಾವಡಿಯಲ್ಲಿ ರೈತನ ಕಷ್ಟದ ಕಥೆಯನ್ನೇ ಕೇಳುತ್ತಾ ಬೆಳೆದು ಬಂದ ಹೆಗ್ಗಡೆಯವರ ಅನುಭವದ ಮೂಸೆಯಲ್ಲಿ ಮೂಡಿ ಬಂದ ಕಾರ್ಯಕ್ರಮ ಪ್ರಗತಿಬಂಧು. ಇದಕ್ಕಾಗಿ ಅವರು ಕಟ್ಟಿದ ಸಂಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಶ್ರೀ ಕ್ಷೇ.ಧ.ಗ್ರಾ.ಯೋ). 1982 ರಲ್ಲಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖ ಕಾರ್ಯಕ್ರಮ ರೈತ ಸಂಘಟನೆ. ಇದಕ್ಕಾಗಿ ಯೋಜನೆಯು ಬಳಸಿದ ಮಾರ್ಗ ಸ್ವಸಹಾಯ ಸಂಘ ರಚನೆ. ಸಾಮಾನ್ಯವಾಗಿ ಪ್ರಪಂಚದಾದ್ಯಂತ ಮಹಿಳಾ ಸ್ವಸಹಾಯ ಸಂಘಗಳಿದ್ದು, ಪ್ರತಿಯೊಂದು ಸಂಘದಲ್ಲಿಯೂ ಹತ್ತರಿಂದ ಇಪ್ಪತ್ತು ಸದಸ್ಯರಿದ್ದು ಇವರು ಹಣ ಉಳಿತಾಯ, ಸಾಲ ವಿತರಣೆ, ವಸೂಲಾತಿ ಮುಂತಾದ ಆರ್ಥಿಕ ವಹಿವಾಟುಗಳ ಮುಖೇನ ಸಬಲೀಕೃತರಾಗುತ್ತಾರೆ. ಪ್ರಗತಿಬಂಧು: ಇದಕ್ಕಿಂತ ಭಿನ್ನವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರೂಪಿಸಿರುವ ಮತ್ತು ಇದೀಗ ರಾಷ್ಟ್ರದಾದ್ಯಂತ ಪ್ರಗತಿಬಂಧು ಸ್ವಸಹಾಯಗಳೆಂದೇ ಪ್ರಖ್ಯಾತಗೊಂಡಿರುವ ಗುಂಪುಗಳಲ್ಲಿ ಕನಿಷ್ಠ ಐದರಿಂದ ಎಂಟು ಜನ ಸದಸ್ಯರಿರುತ್ತಾರೆ. ಇವರು ಅತಿ ಸಣ್ಣ ಅಥವಾ ಸಣ್ಣ ಕೃಷಿಕರೇ ಆಗಿರಬೇಕು. ಸಾಧಾರಣ ಅರ್ಧ ಎಕರೆಯಿಂದ 5 ಎಕರೆ ಹಿಡುವಳಿ ಹೊಂದಿರಬೇಕು. ಇಂತಹ ಹಿನ್ನೆಲೆಯುಳ್ಳ ಒಂದೇ ಬಯಲಿನ ಗ್ರಾಮದ ಕೃಷಿಕರು ಪ್ರಗತಿಬಂಧು ಸಂಘ ರಚಿಸಿಕೊಂಡಿರುತ್ತಾರೆ. ಹಿಡುವಳಿ ಯೋಜನೆ: ಪ್ರಗತಿಬಂಧು ಗುಂಪಿನ ಸದಸ್ಯರು ತಮಗಿರುವ ಕೃಷಿಭೂಮಿ ಮತ್ತು ಸಾಧ್ಯತೆಗಳ ಹಿನ್ನೆಲೆಯಲ್ಲಿ ಐದು ವರ್ಷಗಳ ಹಿಡುವಳಿ ಯೋಜನೆಯೊಂದನ್ನು ತಯಾರಿಸಿಕೊಳ್ಳುತ್ತಾರೆ. ಪ್ರಮುಖವಾಗಿ ಕೃಷಿಯಲ್ಲಿ ಬದಲಾವಣೆ, ನಿರಂತರ ಆದಾಯ ಬರುವ ಕೃಷಿಗಳನ್ನು ಕೈಗೊಳ್ಳುವುದು, ನೀರು ಪೂರೈಕೆ, ಯಾಂತ್ರೀಕರಣ, ಪೂರಕ ಉದ್ಯಮಗಳ ಪ್ರಾರಂಭ, ಗೃಹಾಡಳಿತದ ಸಮಸ್ಯೆಗಳಿಗೆ ಪರಿಹಾರ, ಮಕ್ಕಳ ಶಿಕ್ಷಣ, ಮದುವೆ, ಗೃಹ ನಿರ್ಮಾಣ ಮತ್ತಿತ್ಯಾದಿ ವಿಷಯಗಳನ್ನು ಹಿಡುವಳಿ ಯೋಜನೆಯಲ್ಲಿ ಸೇರಿಸಿಕೊಳ್ಳುತ್ತಾರೆ. ಈ ಯೋಜನೆಯನ್ನು ಪುಸ್ತಕವೊಂದರಲ್ಲಿ ದಾಖಲಿಸುತ್ತಾರೆ, ಅದಕ್ಕೆ ಬೇಕಾದ ಬಂಡವಾಳ ಮತ್ತಿತ್ಯಾದಿ ಮೂಲಗಳನ್ನು ನಮೂದಿಸುತ್ತಾರೆ. ಈ ಗುರಿಯನ್ನು ತಲುಪಲು ಪ್ರಯತ್ನಿಸುತ್ತಾರೆ. ಯೋಜನೆಯ ಅಧಿಕಾರಿಗಳು ಈ ರೈತನ ಮನೆಗೆ ಭೇಟಿ ನೀಡಿದಾಗ ಪರಿಶೀಲಿಸುವ ಪ್ರಮುಖ ದಾಖಲಾತಿ ಹಿಡುವಳಿ ಯೋಜನೆ. ಇದಲ್ಲದೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಗ್ರಾಮ ಒಕ್ಕೂಟದಲ್ಲಿ ಹಿಡುವಳಿ ಯೋಜನೆಯ ಅನುಷ್ಠಾನ ವ್ಯಾಪಕವಾಗಿ ಚರ್ಚಿತವಾಗುತ್ತದೆ. ಇದರಿಂದ ಹಿಡುವಳಿ ಯೋಜನೆಗೆ ಸಾಕಷ್ಟು ಪ್ರಾಮುಖ್ಯತೆ ದೊರೆತಿದೆ. ಅರ್ಥಪೂರ್ಣವಾಗಿ ರಚಿಸಲ್ಪಡುವ ಹಿಡುವಳಿ ಯೋಜನೆ ಸಣ್ಣ ರೈತನ ಬದುಕಿಗೊಂದುಹೊಸ ಆಯಾಮ ನೀಡುತ್ತದೆ. ಅವನಲ್ಲಿಯೂ ಕನಸನ್ನು ಮೂಡಿಸುತ್ತದೆ ಮತ್ತು ಅದನ್ನು ನನಸು ಮಾಡಲು ಅವನಲ್ಲಿ ಸ್ಪಷ್ಟ ಗುರಿಯೊಂದನ್ನು ರೂಪಿಸುತ್ತದೆ. ಶ್ರಮವಿನಿಮಯ: ವಾರಕ್ಕೊಂದು ದಿನದ ಕಡ್ಡಾಯ ಶ್ರಮವಿನಿಮಯ ಈ ಗಂಪುಗಳ ವೈಶಿಷ್ಟ್ಯತೆ. ಪ್ರತಿಯೊಂದು ಪ್ರಗತಿಬಂಧು ಸ್ವಸಹಾಯ ಗುಂಪುಗಳ ಸದಸ್ಯರು ವಾರದಲ್ಲಿ ಒಂದು ದಿನ ತಮ್ಮ ಗುಂಪಿನ ಓರ್ವ ಸದಸ್ಯನ ಮನೆಗೆ ಹೋಗಿ ಅವನ ಕೃಷಿ ಕೆಲಸವನ್ನು ಸಂಬಳ ಪಡೆಯದೆ ಮಾಡುತ್ತಾರೆ. ಈ ದಿನದ ಊಟ ಉಪಚಾರಗಳನ್ನು ಮಾತ್ರ ಆತ ನೋಡಿಕೊಳ್ಳುತ್ತಾನೆ. ಇನ್ನೊಂದು ವಾರದ ಅದೇ ದಿನ ಇನ್ನೋರ್ವ ಸದಸ್ಯನ ಮನೆಯಲ್ಲಿ ದುಡಿಯುತ್ತಾರೆ. ಇದರಿಂದ ಪ್ರತಿಯೋರ್ವ ಸಣ್ಣ ರೈತನ ಮನೆಯಲ್ಲಿ ಐದಾರು ವಾರಗಳಿಗೊಮ್ಮೆ ಐದಾರು ಆಳು ಕೆಲಸ ಉಚಿವಾಗಿ ದೊರೆಯುತ್ತದೆ. ಇದರಿಂದ ಕೃಷಿಯಲ್ಲಿ ಅತ್ಯಮೂಲ್ಯವಾದ ಮಾನವ ಸಂಪನ್ಮೂಲದ ತೊಡಗುವಿಕೆ ಯಾವುದೇ ಖರ್ಚಿಲ್ಲದೇ ಆಗುತ್ತದೆ. ತರಬೇತಿಗಳು: ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ವಿವಿಧ ತರಬೇತಿಗಳನ್ನು ಆಯೋಜಿಸಲಾಗಿತ್ತದೆ. ಮುಖ್ಯವಾಗಿ ಕೃಷಿ ಘಟಕಗಳ ಸಂದರ್ಶನ, ಸಂಶೋಧನಾ ಘಟಕಗಳಿಗೆ ಬೇಟಿ, ತಜ್ಞರಿಂದ ಮಾಹಿತಿ ಶಿಬಿರಗಳು ಪ್ರಾತ್ಯಕ್ಷಿಕೆಗಳು ಇವುಗಳ ಮುಖೇನ ರೈತ ಮಾಹಿತಿ, ಮಾರ್ಗದರ್ಶನ ಪಡೆಯುತ್ತಾನೆ, ವಿಕಸಿತಗೊಳ್ಳುತ್ತಾನೆ. ಪ್ರತಿಯೊಂದು ಗ್ರಾಮದಲ್ಲಿಯೂ ಯೋಜನೆಯ ಅನುದಾನದೊಂದಿಗೆ ಮಾದರಿ ಘಟಕಗಳನ್ನು ರಚಿಸಲಾಗುತ್ತದೆ. ಈ ಘಟಕಗಳ ಮುಖೇನ ರೈತರು ಪ್ರಭಾವಿತರಾಗುತ್ತಾರೆ. ನಿರಂತರ ಆದಾಯ: ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಲ್ಲಿ ಮಿಶ್ರ ಕೃಷಿಯ ಬಗ್ಗೆ ವ್ಯಾಪಕ ತಿಳಿವಳಿಕೆ ಮೂಡಿಸಲಾಗುತ್ತಿದೆ. ದೀರ್ಘಕಾಲೀನ ತೋಟಗಾರಿಕಾ ಕೃಷಿ, ಅಲ್ಪಕಾಲದ ಬೆಳೆಗಳು, ನಿರಂತರ ಆದಾಯ ನೀಡುವ ತರಕಾರಿ, ಪುಷ್ಪಕೃಷಿ, ಹೈನುಗಾರಿಕೆ, ಕೋಳಿ ಸಾಕಣೆ, ಜೇನು ಕೃಷಿ, ಮೀನುಗಾರಿಕೆ, ರೇಷ್ಮೆ ಮುಂತಾದ ಕೃಷಿಗಳನ್ನು ಕೈಗೊಳ್ಳುವರಿಗೆ ಹಿಡುವಳಿ ಯೋಜನೆಗಳಲ್ಲಿ ಆದ್ಯತೆ ನೀಡಲಾಗುತ್ತದೆ. ನೆಲಜಲ ಸಂರಕ್ಷಣೆ: ರೈತನ ಕೈಯಲ್ಲಿರುವ ಕಿಂಚಿತ್ ಭೂಮಿಯ ವ್ಯಾಪಕ ಬಳಕೆ ಪ್ರಗತಿಬಂಧು ಸಂಘದ ಸದಸ್ಯರು ಕಲಿಯುವ ಮೊದಲ ಪಾಠ. ಭೂಮಿಯ ಅಂಗುಲಂಗುಲದಲ್ಲಿಯೂ ಭೂಮಿ ತಾಯಿ ಚಿನ್ನ ಅಡಗಿಸಿಟ್ಟಿದ್ದಾಳೆ ಎಂಬುದರ ಅರಿವು ಪ್ರಗತಿಬಂಧುಗಳಿಗೆ ಬಹುಬೇಗನೆ ಆಗುತ್ತದೆ. ಅದರ ಜೊತೆಯಲ್ಲಿಯೇ ಜಲಾನಯನದ ವಿವಿಧ ಮಾದರಿಗಳ ಮುಖೇನ ಜಲಸಂರಕ್ಷಣೆ, ಜಲಮರುಪೂರಣ, ಜಲ ಕೊಯ್ಲು, ಹನಿಹನಿ ನೀರಿನ ಸಮರ್ಪಕ ಬಳಕೆಯ ಕುರಿತಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿಡುವಳಿ ಯೋಜನೆಗಳಲ್ಲಿ ಅಳವಡಿಸಲಾಗಿತ್ತದೆ. ಪ್ರಗತಿನಿಧಿ: ಪ್ರಗತಿಬಂಧುಗಳು ಹಮ್ಮಿಕೊಳ್ಳುವ ಕನಸಿನ ಹಿಡುವಳಿ ಯೋಜನೆಗೆ ಅಗತ್ಯವಿರುವ ಬಂಡವಾಳವನ್ನು ಒದಗಿಸುವ ಸಾಧನ ಪ್ರಗತಿನಿಧಿ. ಪ್ರಗತಿಬಂಧು ಸದಸ್ಯರು ವಾರಕ್ಕೆ ರೂ. 10/- ರಂತೆ ನಿಗದಿತ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಾರೆ. ಇವರ ಉಳಿತಾಯದ 40 ಪಟ್ಟಿನವರೆಗೂ ಯೋಜನೆಯಿಂದ ಇವರಿಗೆ ಪ್ರಗತಿನಿಧಿ ಎಂಬ ಹೆಸರಿನಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ಸಾಲಕ್ಕೆ ಬ್ಯಾಂಕಿನ ದರದಲ್ಲಿ ಬಡ್ಡಿಯನ್ನು ವಿಧಿಸಲಾಗುವುದು. ಆದರೆ ಮರುಪಾವತಿ ಮಾತ್ರ ವಾರದ ಕಂತುಗಳಲ್ಲಿಯೇ ಮಾಡಬೇಕು. ಯಾವನೇ ಸದಸ್ಯ ತಾನು ಹಾಕಿರುವ ಹಣದಿಂದ ತನ್ನ ಕೃಷಿ ಭೂಮಿಯಲ್ಲಿ ಉತ್ಪತ್ತಿ ಬಂದ ನಂತರವೇ ಹಣವನ್ನು ಪಾವತಿಸುತ್ತೇನೆ ಎಂದು ಹೇಳುವಂತಿಲ್ಲ. ಬದಲಾಗಿ ವಾರದ ಸುಲಭ ಕಂತುಗಳಲ್ಲಿ ಈತ ಪಾವತಿಸಬೇಕು. ಉದಾಹರಣೆಗೆ ಅಡಿಕೆ ಕೃಷಿಯನ್ನು ಕೈಗೊಳ್ಳಲು ರೂ. 20,000/- ಸಾಲ ಪಡೆಯುವ ಸದಸ್ಯ ಈ ಮೊತ್ತವನ್ನು 156 ವಾರಗಳಲ್ಲಿ ವಾರಕ್ಕೆ ರೂ. 78/-ರಂತೆ ಮರುಪಾವತಿಸಬೇಕು. ಇದಕ್ಕಾಗಿ ಆತ ನಿರಂತರ ಆದಾಯ ಕೊಡುವ ಹೈನುಗಾರಿಕೆ, ಪುಷ್ಪಕೃಷಿ, ತರಕಾರಿ, ವೀಳ್ಯ ಮುಂತಾದ ಕೃಷಿಗಳನ್ನು ಮಾಡಬೇಕು ಇಲ್ಲವೇ ಕೂಲಿ ಮಾಡಿಯಾದರೂ ಈ ಹಣ ಕಟ್ಟಬೇಕು. ಹೀಗೆ ವಾರದಿಂದ ವಾರಕ್ಕೆ ಸಾಲ ಮರುಪಾವತಿ ಮಾಡುವುದರಿಂದ ಅವನಿಗೆ ಬಡ್ಡಿ ಹೊರೆಯು ಕಡಿಮೆಯಾಗುತ್ತದೆ, ಸಾಲವೆಂಬ ಭೂತ ಅವನನ್ನು ಕಾಡುವುದಿಲ್ಲ. ಪ್ರಗತಿಬಂಧು ಒಕ್ಕೂಟ: ಪ್ರತಿ ಗ್ರಾಮದಲ್ಲಿರುವ ಎಲ್ಲ ಪ್ರಗತಿಬಂಧು ಸ್ವಸಹಾಯ ಸಂಘಗಳು ಸೇರಿ ಒಂದು ಒಕ್ಕೂಟವನ್ನು ರಚಿಸಿಕೊಳ್ಳುತ್ತವೆ. ಸಂಘಗಳ ಪ್ರಬಂಧಕ, ಸಂಯೋಜಕರು ಸೇರಿ ರಚಿಸುವ ಈ ಒಕ್ಕೂಟಕ್ಕೆ ಓರ್ವ ಅಧ್ಯಕ್ಷರು, ಏಳು ಜನ ಪದಾಧಿಕಾರಿಗಳು ಇರುತ್ತಾರೆ. ಗ್ರಾಮದಲ್ಲಿ ವಿವಿಧ ಸದಸ್ಯರ ಹಿಡುವಳಿ ಯೋಜನೆ ಸಮರ್ಪಕ ಅನುಷ್ಠಾನ, ಪ್ರಗತಿನಿಧಿ ಮಂಜೂರಾತಿ, ಮೂಲ ಸಮಸ್ಯೆಗಳ ಕುರಿತಂತೆ ಸುಧಾರಣೆಗೆ ಪ್ರಯತ್ನ. ಪ್ರಗತಿನಿಧಿ ಮರುಪಾವತಿ ಇವೇ ಮುಂತಾದ ಜವಾಬ್ದಾರಿಗಳನ್ನು ಒಕ್ಕೂಟವು ಹೊಂದಿರುತ್ತದೆ. ಚುನಾಯಿತ ಪ್ರತಿನಿಧಿಗಳುಳ್ಳ ಒಕ್ಕೂಟದ ಕಾರ್ಯಾವಧಿ ಎರಡು ವರ್ಷಗಳು. ಪದಾಧಿಕಾರಿಗಳ ಕೆಲಸ ವೇತನ ರಹಿತ. ಸಾಮಾಜಿಕ ಚಟುವಟಿಕೆಗಳು: ಪ್ರಗತಿಬಂಧುಗಳು ತಮ್ಮ ಕೃಷಿ ಮತ್ತು ಆರ್ಥಿಕ ಪ್ರಗತಿಯೊಂದಿಗೆ ಸಾಮಾಜಿಕವಾಗಿಯೂ ಸಬಲೀಕೃತರಾಗುತ್ತಾರೆ. ತಮ್ಮ ಗುಂಪಿನ ಶ್ರಮವಿನಿಮಯದ ಸಂದರ್ಭದಲ್ಲಿ ಅವರು ಇತರ ಸದಸ್ಯರೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಳ್ಳುತ್ತಾರೆ. ಗುಂಪಿನ ಆರ್ಥಿಕ ವ್ಯವಹಾರದ ಲೆಕ್ಕಾಚಾರಗಳನ್ನು ಅವರೇ ನಿರ್ವಹಿಸುತ್ತಾರೆ. ವಾರಕ್ಕೊಮ್ಮೆ ಬ್ಯಾಂಕಿಗೆ ಹೋಗಿ ಹಣ ಕಟ್ಟಿ ಬರುತ್ತಾರೆ. ಮೂರು ತಿಂಗಳಿಗೊಮ್ಮೆ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿಮುಕ್ತ ಚರ್ಚೆ ನಡೆಸುತ್ತಾರೆ. ವರ್ಷದಲ್ಲಿ ಎರಡು ದಿನದ ಶ್ರಮವನ್ನು ಇವರು ಗ್ರಾಮದ ಕೆಲಸಗಳಿಗೆ ಮೀಸಲಿಡುತ್ತಾರೆ. ಶಾಲೆಗೆ ಆಟದ ಮೈದಾನ, ಶಾಲಾ ಕೈತೋಟ ರಚನೆ, ಶಾಲಾವನ, ಗ್ರಾಮವನ, ಸಾಲು ಮರ ರಚನೆ, ದೇವರಕಾಡು, ರಸ್ತೆ ರಿಪೇರಿ, ಜಲಾನಯನ ಕಾರ್ಯಕ್ರಮ ಇವೇ ಮುಂತಾದ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಂಡು ಕೆಲವೇ ವರ್ಷಗಳಲ್ಲಿ ಪ್ರಗತಿಬಂಧುಗಳು ಸಮಾಜದ ಅವಿಭಾಜ್ಯ ಅತ್ಯಗತ್ಯ ಭಾಗಗಳಾಗಿಬಿಡುತ್ತಾರೆ. ಮೊದಮೊದಲಿಗೆ ಸಣ್ಣ ರೈತರ ಈ ಹೊಸ ಪ್ರಯತ್ನಗಳನ್ನು ಸಂಶಯದ ಕಣ್ಣುಗಳಿಂದ ನೋಡುವ ದೊಡ್ಡ ರೈತರು, ಗ್ರಾಮದ ನೇತಾರರು ನಿಧಾನವಾಗಿ ಪ್ರಗತಿಬಂಧುಗಳ ಪ್ರಾಮಾಣಿಕತೆಯನ್ನು ಅರಿತ ನಂತರ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಮತ್ತು ಗುಂಪಿನ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮ ಸಹಾಯ ಹಸ್ತವನ್ನೂ ಚಾಚುತ್ತಾರೆ. ಗ್ರಾಮದ ಪ್ರಮುಖ ಕಾರ್ಯಕ್ರಮಗಳಿಗೆ ಪ್ರಗತಿಬಂಧುಗಳ ಶ್ರಮ ಅನಿವಾರ್ಯ ಎನ್ನುವ ಮಟ್ಟಿಗೆ ಗ್ರಾಮಸ್ಥರು ತಲುಪುತ್ತಾರೆ. ಸದಭಿರುಚಿಯುಳ್ಳ ಸಮಾಜದ ನಿರ್ಮಾಣ: ಪ್ರಗತಿಬಂಧು ಸದಸ್ಯರು ತಮ್ಮ ದುಶ್ಚಟಗಳನ್ನು ದೂರಮಾಡಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಸಭ್ಯ ಸಮಾಜದ ನಿರ್ಮಾಣಕ್ಕೆ ಭಾಜನರಾಗುತ್ತಾರೆ. ಇದಕ್ಕಾಗಿ ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ಸದಸ್ಯರ ಮುಖೇನ ಹಮ್ಮಿಕೊಂಡಿದೆ. ಮದ್ಯವ್ಯಸನಿಗಳಿಗೆ ಚಿಕಿತ್ಸೆ ನೀಡುವ ಮದ್ಯವರ್ಜನಾ ಶಿಬಿರಗಳು, ಗ್ರಾಮ ಸುಭಿಕ್ಷಾ ಕಾರ್ಯಕ್ರಮಗಳು, ನಿರ್ಮಲ ಒಕ್ಕೂಟ ರಚನೆ, ಭಜನ ಮಂದಿರಗಳ ರಚನೆ, ನಗರ ಭಜನೆ ಮುಂತಾದ ಕಾರ್ಯಕ್ರಮಗಳು, ಧಾರ್ಮಿಕ ಮತ್ತು ರಾಷ್ಟ್ರೀಯ ಹಬ್ಬದಾಚರಣೆ ಇವೇ ಮುಂತಾದ ಕಾರ್ಯಕ್ರಮಗಳ ಮುಖೇನ ಸಣ್ಣ ರೈತರು ಗ್ರಾಮದಲ್ಲಿ ಹೊಸ ಶಕೆಯೊಂದನ್ನು ಪ್ರಾರಂಭಿಸುತ್ತಾರೆ. ಕಾರ್ಯಕರ್ತ: ಯೋಜನೆಯು ಕೈಗೊಂಡಿರುವ ಪ್ರಗತಿಬಂಧು ಕಾರ್ಯಕ್ರಮದಲ್ಲಿ ಜನರನ್ನು ಸಂಘಟಿಸಲು ಪ್ರತಿಯೊಂದು ಗ್ರಾಮದಲ್ಲಿ ಯೋಜನೆಯ ವತಿಯಿಂದ ಸೇವಾನಿರತ ಎಂಬ ಹೆಸರಿನ ಕಾರ್ಯಕರ್ತನ ನೇಮಕಾತಿ ಆಗಿರುತ್ತದೆ. ಈತನಿಗೆ/ಈಕೆಗೆ ಸಂಘಟನೆ, ಕೃಷಿ, ಕೃಷಿಯೇತರ ಚಟುವಟಿಕೆ, ಆರ್ಥಿಕ ವಹಿವಾಟು ನಿರ್ವಹಣೆ, ಸಬಲೀಕರಣದ ವಿಷಯಗಳ ಕುರಿತಂತೆ ವ್ಯಾಪಕ ತರಬೇತಿ ಯೋಜನೆಯು ನೀಡುತ್ತದೆ. ಇಂತಹ ಕಾರ್ಯಕರ್ತರು ಬಡ ಕೌಟುಂಬಿಕ ಹಿನ್ನೆಲೆಯಿಂದಲೇ ಬಂದಿರಬೇಕು, ಅತಿ ಹೆಚ್ಚು ಕಲಿತವರಿಗೆ ಪ್ರಾಶಸ್ತ್ಯವಿಲ್ಲ. ಇವರಿಗೆ ಗ್ರಾಮ ವಾಸ್ತವ್ಯ ಕಡ್ಡಾಯ. ಸೇವಾನಿರತರಿಗೆ ಅಗತ್ಯವಿರುವ ಮನೆ ಮತ್ತಿತರ ವೆಚ್ಚಗಳನ್ನು ಯೋಜನೆಯೇ ನೋಡಿಕೊಳ್ಳುತ್ತದೆ. ಅಲ್ಲದೆ, ರೂ. 3'000/- ಕ್ಕೂ ಮಿಕ್ಕಿ ಮಾಸಿಕ ವೇತನವನ್ನೂ ನೀಡುತ್ತದೆ. ರೈತರನ್ನು ಪ್ರಗತಿಬಂಧು ಗುಂಪುಗಳಿಗೆ ಸೇರುವಂತೆ ಪ್ರೇರೇಪಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಸಂಘಟಿಸುವ ಕಾರ್ಯ ಇವರದ್ದು. ನಿಜಾರ್ಥದಲ್ಲಿ ಈತ ಗ್ರಾಮಸ್ಥರಿಗೆ ಸ್ನೇಹಿತ, ಮಾರ್ಗದರ್ಶಿ, ತತ್ವಜ್ಞಾನಿಯಾಗುತ್ತಾನೆ. ಶ್ರೀ ಕ್ಷೇ.ಧ.ಗ್ರಾ.ಯೋ.ಯ ಹತ್ತು ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸೇವಾನಿರತರೇ ಪ್ರಮುಖ ಕಿಂಡಿ. ಸೇವಾನಿರತ ಸರಕಾರದ ಕಾರ್ಯಕ್ರಮಗಳನ್ನೂ ಪ್ರಗತಿಬಂಧುಗಳಿಗೆ ತಲುಪಿಸಲು ಮತ್ತು ಈ ಕಾರ್ಯಕ್ರಮಗಳ ಪ್ರಾಮಾಣಿಕ ಅನುಷ್ಠಾನವಾಗಲು ಪ್ರಯತ್ನಿಸುತ್ತಾರೆ. ಕ್ರಮಿಸಿದ ದಾರಿ: ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ಪ್ರಗತಿಬಂಧು ಸ್ವಸಹಾಯ ಗುಂಪುಗಳನ್ನು ರಚಿಸುತ್ತ ಬಂದಿರುವ ಶ್ರೀ ಕ್ಷೇ.ಧ.ಗ್ರಾ.ಯೋ.ಯು ಇದಕ್ಕಾಗಿ ವಿಶೇಷ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದೆ. ಕರ್ನಾಟಕ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಇದುವರೆಗೆ ಯೋಜನೆಯು 1,35,914 ಸ್ವಸಹಾಯ ಸಂಘಗಳನ್ನು ರಚಿಸಿದ್ದು, ಈ ಪೈಕಿ 28,824 ಪ್ರಗತಿಬಂಧು ಕೃಷಿಕರ ಸ್ವಸಹಾಯ ಸಂಘಗಳು. ಇವುಗಳಲ್ಲಿ 1,99,775 ರೈತರು ಸೇರಿಕೊಂಡಿದ್ದಾರೆ. ಈ ರೈತರು 3,40,85,264 ದಿನಗಳ ಶ್ರಮವಿನಿಮಯವನ್ನು ಮಾಡಿದ್ದು, ರೂ. 511.28 ಕೋಟಿ ಮೌಲ್ಯದ ಶ್ರಮದ ದಿನಗಳನ್ನು ತಮ್ಮ ಎರಡು ಲಕ್ಷ ಎಕರೆಗೂ ಮೀರಿದ ಪ್ರದೇಶದಲ್ಲಿ ತೊಡಗಿಸಿದ್ದಾರೆ. ಸರಿಸುಮಾರು ಎಂಟು ಸಾವಿರ ಗ್ರಾಮಗಳಿಗೆ ವಿಸ್ತರಿಸುವ ಶ್ರೀ ಕ್ಷೇ.ಧ.ಗ್ರಾ.ಯೋ.ಯಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಮಿಕ್ಕಿದ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಧರ್ಮಸ್ಥಳದಲ್ಲಿ ತನ್ನ ಕೇಂದ್ರ ಕಛೇರಿಯನ್ನು ಹೊಂದಿರುವ ಯೋಜನೆಯು 56 ಯೋಜನಾ ಕಛೇರಿಗಳನ್ನು ಹೊಂದಿದೆ ಮತ್ತು 2,542 ಕ್ಕೂ ಮಿಕ್ಕಿದ ಗ್ರಾಮ ಕಛೇರಿಗಳನ್ನು ತೆರೆದಿದೆ. ಯೋಜನೆಯ ಪ್ರಗತಿಬಂಧುಗಳು ಮತ್ತು ಜ್ಞಾನವಿಕಾಸ ಗುಂಪಿನ ಸದಸ್ಯರುಗಳು ರೂ. 326.51 ಕೋಟಿಯ ಉಳಿತಾಯ ಮಾಡಿದ್ದು, ರೂ. 3,403.24 ಕೋಟಿಯ ಸಾಲದ ವಹಿವಾಟು ನಡೆಸಿರುತ್ತಾರೆ. ಈ ಪೈಕಿ ರೂ. 2,569.31 ಕೋಟಿಯ ಹಣ ಗುಂಪುಗಳಿಗೆ ಯೋಜನೆಯಿಂದ ಪ್ರಗತಿನಿಧಿಯಾಗಿ ಬಿಡುಗಡೆಯಾಗಿರುತ್ತದೆ. ಇದರಲ್ಲಿ ರೂ. 1,639.74 ಕೋಟಿ ಈಗಾಗಲೇ ಮರುಪಾವತಿಯಾಗಿದ್ದು, ರೂ. 929.56 ಕೋಟಿ ಸಾಲ ಮರುಪಾವತಿಸಬೇಕಾಗಿದೆ. ಈ ಲೆಕ್ಕಾಚಾರದ ಪ್ರಕಾರ ಯೋಜನೆಯು ದೇಶದ ಅತಿ ದೊಡ್ಡ ಕಿರು ಆರ್ಥಿಕ ಸೇವಾಸಂಸ್ಥೆಯಾಗಿರುತ್ತದೆ. ಇಷ್ಟು ಪ್ರಮಾಣದ ವಹಿವಾಟನ್ನು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಧಾರವಾಡ, ಹಾವೇರಿ, ಗದಗ, ತುಮಕೂರು, ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ ನಡೆಸಿದ್ದು ಬಡಕೃಷಿಕರಿಗೆ ಸಮರ್ಪಕ ಸೌಲಭ್ಯ ನೀಡಿದಲ್ಲಿ ಬೇಕಾಗುವ ಅಗಾಧ ಮೊತ್ತದ ಕಲ್ಪನೆಯೊಂದನ್ನು ಮುಂದಿಟ್ಟಿದೆ. ಬಹುಶಃ ದೇಶದ ರೈತರ ಸಮಸ್ಯೆಗಳಿಗೆ ಪ್ರಗತಿಬಂಧು ಸ್ವಸಹಾಯ ಸಂಘಗಳ ರಚನೆ ಶಾಶ್ವತ ಉತ್ತರ ನೀಡಬಲ್ಲದು. ಆದರೆ ಈ ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕೆ ಗ್ರಾಮ ಮಟ್ಟದಲ್ಲಿ ಪ್ರಾಮಾಣಿಕ ಸೇವಾನಿರತರು ಮತ್ತು ಇದನ್ನು ಮುನ್ನಡೆಸುವ ಸಮಾಜದ ಬಗ್ಗೆ ನೈಜ ಕಳಕಳಿಯುಳ್ಳ ಹೆಗ್ಗಡೆಯವರಂತಹ ಮಾರ್ಗದರ್ಶಕರು ಅಗತ್ಯ. ಲೇಖಕರು: ಡಾ. ಎಲ್.ಎಚ್. ಮಂಜುನಾಥ್ ಕಾರ್ಯನಿರ್ವಾಹಕ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|