ನಮ್ಮ ಸಮಾಜ ಇಂದು ಬಹಳ ದುಸ್ಥಿತಿಯಲ್ಲಿದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ನಮ್ಮ ಸುದ್ದಿ ಮತ್ತು ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿರುವ ಸಮಾಚಾರಗಳನ್ನು ಅವಲೋಕಿಸಿದರೆ ಅದು ಬಹಳ ಮಟ್ಟಿಗೆ ನಿಜವೆನಿಸುತ್ತದೆ. ಪ್ರತಿ ದಿನ ಪತ್ರಿಕೆಗಳ ಮೂರನೆಯ ಪುಟದಲ್ಲಿ ಅಚ್ಚಾಗುತ್ತಿರುವ ಹಾಗು ದೂರದರ್ಶನ ಚಾನಲ್ಗಳು ಬಿತ್ತರಿಸುತ್ತಿರುವ ವಿಷಯಗಳನ್ನು ಗಮನಿಸಿ. ಕಳ್ಳತನ, ಕೊಲೆ, ಸುಲಿಗೆ, ಭ್ರಷ್ಟಾಚಾರ, ಆತ್ಮಹತ್ಯೆ, ಸ್ತ್ರೀಯರ ಮೇಲಣ ಅತ್ಯಾಚಾರ (ಇತ್ತೀಚೆಗೆ ಇದು ಗಂಡಸರ ಮೇಲೂ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ), ಮುಂತಾದವೇ ಅಲ್ಲಿ ತುಂಬಿರುತ್ತವೆ. ಇದನ್ನೆಲ್ಲಾ ಗಮನಿಸಿದಾಗ ನಮ್ಮದು ರೋಗಿಷ್ಠ ಸಮಾಜ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಅಭಿಪ್ರಾಯದಲ್ಲಿ ಕೊಂಚ ಉತ್ಪ್ರೇಕ್ಷೆ ಇರಬಹುದು. ಮೇಲೆ ಹೇಳಿದ್ದೆಲ್ಲಾ ಸಂಪೂರ್ಣ ನಿಜವಾಗಿದ್ದರೆ, ನಾನು ಇದನ್ನು ಬರೆಯಲು ಬದುಕಿರುತ್ತಿರಲಿಲ್ಲ; ಓದಲು ನೀವೂ ಇರುತ್ತಿರಲಿಲ್ಲ. ಯುದ್ಧ, ಕೊಲೆ, ಸುಲಿಗೆ, ಕಳ್ಳತನ, ಅತ್ಯಾಚಾರಗಳು ನಡೆಯುತ್ತಿವೆ. ನಿಜ. ಅವು ಎಲ್ಲಾ ಕಾಲದಲ್ಲೂ ಇದ್ದವೆ. ಸುಮಾರು ಕಳೆದ 5,600 ವರ್ಷಗಳಲ್ಲಿ 14,600 ಯುದ್ಧಗಳು ನಡೆದಿರುವುದಾಗಿ ಇತಿಹಾಸ ಹೇಳುತ್ತದೆ. ಕ್ರೌರ್ಯ, ಆಕ್ರಮಣ ಎಲ್ಲಾ ಜೀವಿಗಳಲ್ಲೂ ಕಂಡುಬರುವ ಒಂದು ಹುಟ್ಟುಗುಣ. ಆದರೆ, ಒಟ್ಟಾರೆಯಾಗಿ ನೋಡಿದರೆ ಅವುಗಳ ಸಂಭವನೀಯತೆಯ ಸಂಖ್ಯೆ ಬಹಳ ಕಡಮೆ. ಅಂಥ ದುಷ್ಕೃತ್ಯಗಳಲ್ಲಿ ತೊಡಗುವ ಜನಗಳ ಸಂಖ್ಯೆ ಅಷ್ಟೇನು ಹೆಚ್ಚಾಗಿರಲಿಕ್ಕಿಲ್ಲ; ಅವರ ಸಂಖ್ಯೆ ಇಡೀ ಸಮಾಜದಲ್ಲಿ ಸುಮಾರು ಶೇಕಡ ಎರಡರಿಂದ ಐದರವರೆಗೆ ಇರಬಹುದು. ಸಮಾಜದಲ್ಲಿ ಅವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿರುವಂತೆ ನಮಗೆ ತೋರಲು ಒಂದು ಕಾರಣವಿದೆ. ನಾವು ನಮ್ಮ ಪರಿಸರದಲ್ಲಿ ನಡೆಯುವ ಕೆಟ್ಟ ಘಟನೆಗಳನ್ನು ಗಮನಿಸುವಷ್ಟು ಸುಲಭವಾಗಿ ಒಳ್ಳೆಯವನ್ನು ಗಮನಿಸುವುದಿಲ್ಲ. ಮನೋವಿಜ್ಞಾನಿಗಳ ಪ್ರಕಾರ, ನಮ್ಮ ಮನಸ್ಸು ನಕಾರಾತ್ಮಕ ವಿಷಯಗಳನ್ನು ಶೀಘ್ರವಾಗಿ ಗ್ರಹಿಸುತ್ತದೆ; ಅವನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ (According to psychologists, we are more sensitized to notice the negative than the positive. The phenomenon is called automatic vigilance – a strong tendency to notice the undesirable and remember it). ನಮ್ಮ ಪತ್ರಿಕೆಗಳು ಕೂಡ ಹೆಚ್ಚಿಗೆ ಅಹಿತಕರವಾದ ವಿಷಯಗಳನ್ನೇ ಪ್ರಕಟಿಸುತ್ತವೆ. ಒಳ್ಳೆಯದನ್ನು ಪ್ರಕಟಿಸಿದರೆ ಓದುವವರಾರು? ಒಂದು ರೇಪ್ ಸುದ್ದಿ ಸ್ವಾರಸ್ಯವಾಗಿ ಕಂಡಷ್ಟು ರಾಮನವಮಿ ಸಂಗಿತದ ಸುದ್ದಿ ಕಂಡುಬರುವುದಿಲ್ಲ. ನಿಮ್ಮ ಪತ್ನಿ ಒಂದು ದಿನ ಸಾರಿಗೆ ಉಪ್ಪು ಹೆಚ್ಚಾಗಿ ಹಾಕಿದ್ದರೆ ಅವಳನ್ನು ತೀವ್ರವಾಗಿ ಆಕ್ಷೇಪಿಸುವ ನೀವು, ಅವಳು ಚನ್ನಾಗಿ ಅಡಿಗೆ ಮಾಡಿದ ದಿನ ಹೊಗಳಿದ್ದು ಕಡಮೆ. ಥಾಮಸ್ ಹಾರ್ಡ್ ಹೇಳಿರುವಂತೆ ನಾವು ಯುದ್ಧದ ಇತಿಹಾಸವನ್ನು ಓದುವಷ್ಟು ಆಸಕ್ತಿಯಿಂದ ಶಾಂತಿಯ ಇತಿಹಾಸವನ್ನು ಓದುವುದಿಲ್ಲ. ಒಳ್ಳೆಯದನ್ನು ಕೇಳುವ, ನೋಡುವ, ಓದುವ, ಆಲೋಚಿಸುವ, ತಿಳಿಯಲು ಹಂಬಲಿಸುವ ಪ್ರವೃತ್ತಿ ನಮ್ಮಲ್ಲಿ ಕಡಮೆ. ಅದೊಂದು ಮಾನವ ಸಹಜ ಪ್ರವೃತ್ತಿ.
ಹಾಗೆಂದ ಮಾತ್ರಕ್ಕೆ ನಮ್ಮ ಸಮಾಜದಲ್ಲಿ ನಡೆಯುತ್ತಿರುವುದೆಲ್ಲಾ ಲೇಸೆಂದು ಹೇಳಬರುವುದಿಲ್ಲ. ಎಲ್ಲಾ ಸಮಾಜಗಳಲ್ಲೂ, ಎಲ್ಲಾ ಕಾಲದಲ್ಲೂ ಒಳ್ಳೆಯವು ಕೆಟ್ಟವು ಜತೆಜತೆಯಾಗಿಯೇ ಜರುಗುತ್ತವೆ. ಇಡೀ ವಿಶ್ವದಲ್ಲಿ ಪರಸ್ಪರ ವಿರೋಧ ಕ್ರಿಯೆಗಳು ಸದಾ ನಡೆಯುತ್ತವೆ. ಹುಟ್ಟು-ಸಾವು, ಕತ್ತಲೆ-ಬೆಳಕು, ಆರೋಗ್ಯ-ಅನಾರೋಗ್ಯ, ಯುದ್ಧ-ಶಾಂತಿ, ಕಳ್ಳತನ-ಪರೋಪಕಾರ, ಕೊಲೆ-ರಕ್ಷಣೆ, ಒಳ್ಳೆಯದು-ಕೆಟ್ಟದು, ಜತೆಯಾಗಿ ಬರುತ್ತವೆ, ಇರುತ್ತವೆ, ಹೋಗುತ್ತವೆ. ಆದುದರಿಂದ ನಮ್ಮ ಸಮಾಜ ಒಳ್ಳೆಯದೋ ಕೆಟ್ಟದ್ದೋ ಎಂದು ಒಂದು ಖಚಿತವಾದ ತೀರ್ಮಾನಕ್ಕೆ ಬರುವುದು ಸುಲಭವಲ್ಲ. ಸಮಾಜ ಒಳ್ಳೆಯದೊ ಕೆಟ್ಟದೊ ಎಂಬುದನ್ನು ವಿಮರ್ಶಿಸುವ ಮೊದಲು ಸಮಾಜವೆಂದರೇನು ಎಂಬುದನ್ನು ಕೊಂಚ ಪರಿಶೀಲಿಸೋಣ. ಸಮಾಜದ ಪರಿಕಲ್ಪನೆ ಸಮಾಜವೆಂಬುದು ಒಂದು ಅಮೂರ್ತ ಪರಿಕಲ್ಪನೆ; ಇದು ಸಮಾಜ ಎಂದು ಅದನ್ನು ಮುಟ್ಟಿ ತೋರಿಸಲು ಬರುವುದಿಲ್ಲ. ನಮ್ಮ ಪರಿಸರದಲ್ಲಿರುವ ಸಂಘಸಂಸ್ಥೆಗಳು, ಅವುಗಳು ನಡೆಸುತ್ತಿರುವ ವ್ಯಾಪಾರ ವ್ಯವಹಾರಗಳು, ಅವು ಅನುಸರಿಸುತ್ತಿರುವ ನೀತಿನಿಯಮಗಳು, ಇವೆಲ್ಲವುಗಳನ್ನು ಒಟ್ಟಾಗಿ ನಿರ್ದೇಶಿಸಲು ನಾವು ಹುಟ್ಟಿಹಾಕಿರುವ ಒಂದು ಪರಿಕಲ್ಪನೆ ಸಮಾಜ. ನಮ್ಮ ಕುಟುಂಬ ಸಮಾಜದ ಒಂದು ಪ್ರಮುಖ ಘಟಕ, ಹಾಗೇ ನಮ್ಮ ವಿದ್ಯಾಸಂಸ್ಥೆಗಳು, ವ್ಯಾಪಾರಿಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು, ನ್ಯಾಯಾಲಯಗಳು, ರಾಜಕಿಯ ಪಕ್ಷಗಳು, ಸರ್ಕಾರ, ಇವೆಲ್ಲಾ ಸಮಾಜದ ಪರಿಕಲ್ಪನೆಯ ಒಳಗೆ ಬರುತ್ತವೆ. ಇವೆಲ್ಲವೂ ಸುಗಮವಾಗಿ ನಡೆಯುತ್ತಿದ್ದರೆ ನಮ್ಮ ಸಮಾಜ ಅಭಿವೃದ್ಧಿ ಪಥದಲ್ಲಿದೆ, ಆರೋಗ್ಯವಾಗಿದೆ ಎನ್ನಬಹುದು. ಇಲ್ಲವಾದರೆ ನಮ್ಮದು ರೋಗಿಷ್ಟ ಸಮಾಜ. ನಾನು ಮೊದಲೇ ಹೇಳಿದಂತೆ ಸಮಾಜದಲ್ಲಿ ಒಳ್ಳೆಯದು ಕೆಟ್ಟದು ಒಟ್ಟೊಟ್ಟಿಗೆ ಇರುತ್ತವೆ. ಸಮಾಜ ನಿಂತ ನೀರಲ್ಲ. ಅದು ಗತಿಶೀಲವಾದುದು; ಅದರಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಆಗುತ್ತಿರುವ ಬದಲಾವಣೆಗಳು ಒಳ್ಳೆಯವೋ ಕೆಟ್ಟವೋ ಎಂಬುದು ನಾವು ಅವನ್ನು ನೋಡುವ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ನಮ್ಮ ದೃಷ್ಟಿಕೋನ ಪ್ರಚಲಿತ ಸಾಮಾಜಿಕ ಮೌಲ್ಯಗಳಿಂದ ನಿರ್ಧರಿಸಲ್ಪಟ್ಟಿರುತ್ತದೆ. ಆರ್ಥಿಕ, ಧಾರ್ಮಿಕ, ನೈತಿಕ, ಮಾನವೀಯ, ಮುಂತಾದ ಮೌಲ್ಯಗಳಲ್ಲಿ ಯಾವುದರ ಪ್ರಭಾವ ಪ್ರಧಾನವಾಗಿದೆ ಎಂಬುದು ಇಲ್ಲಿ ಮುಖ್ಯ. ಆರ್ಥಿಕ ಮೌಲ್ಯದ ಪ್ರಭಾವ ಹಿರಿದಾಗಿದ್ದರೆ, ಮಾನವೀಯ, ಮತ್ತು ನೈತಿಕ ಮೌಲ್ಯಗಳು ಕೆಳಮುಖವಾಗಬಹುದು. ಸಂಬಂಧಗಳಲ್ಲಿ ಬಿರುಕು ಕಂಡುಬರಬಹುದು. ನಮಗೆ ತಪ್ಪಾಗಿ ಕಂಡದ್ದು ಕೆಲವು ವಿಮುಕ್ತ (ಲಿಬರಲ್) ಸಮಾಜಗಳಲ್ಲಿ ಸರಿಯಾಗಿರುವಂತೆ ಕಂಡುಬರಬಹುದು. ಕಾಲ ಕಳೆದಂತೆ ಮೌಲ್ಯಗಳು ಬದಲಾಗುತ್ತಿರುತ್ತವೆ. ಉದಾಹರಣೆಗೆ, ಒಂದು ಕಾಲದಲ್ಲಿ ನಮ್ಮಲ್ಲಿ ಬಾಲ್ಯ ವಿವಾಹ ಶ್ರೇಷ್ಠವೆನಿಸಿತ್ತು, ಯಾವುದೋ ಒಂದು ಕುಟುಂಬದವರು ಹೆಣ್ಣುಮಗುವಿಗೆ ಅವಳು ಋತುಮತಿಯಾಗುವುದರೊಳಗೆ ವಿವಾಹ ಮಾಡದಿದ್ದರೆ ಅಂಥವರನ್ನು ಸಮಾಜದಿಂದ ಬಹಿಷ್ಕರಿಸಲಾಗುತ್ತಿತ್ತು. ಮನುಧರ್ಮ ಶಾಸ್ತ್ರದ ಪ್ರಕಾರ ಹೆಣ್ಣುಮಕ್ಕಳಿಗೆ 8-12 ವರ್ಷಗಳೊಳಗೆ ವಿವಾಹ ಮಾಡಬೇಕಿತ್ತು, ಇಂದು ಬಾಲ್ಯವಿವಾಹ ನಿಷೇಧಿಸಲ್ಪಟ್ಟಿದೆ. ನಮ್ಮ ಸಮಾಜದಲ್ಲಿ ವಿವಾಹ ವಿಚ್ಛೇದನ, ವಿಧವಾ ವಿವಾಹಗಳನ್ನು ಕುರಿತು ಆಲೋಚಿಸುವುದು ಕೂಡ ಸಾಧ್ಯವಿರಲಿಲ್ಲ. ಈಗ ಅವು ನಡೆಯುತ್ತಿವೆ. ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವದಿಂದಾಗಿ ಲೈಂಗಿಕ ವರ್ತನೆಗಳಿಗೆ ಸಂಬಂಧಿಸಿದ ನೀತಿನಿಯಮಗಳು ಸಡಿಲಗೊಳ್ಳುತ್ತಿವೆ. ಇವುಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಹೇಳಬರುವುದಿಲ್ಲ. ಅವು ನಾವು ನೋಡುವ ದೃಷ್ಟಿಯನ್ನನುಸರಿಸಿರುತ್ತವೆ. ಈ ದೃಷ್ಟಿಯಿಂದ ಸಮಾಜವನ್ನು ಅದರ ಘಟಕಗಳು ಮತ್ತು ಅಂಗ ಸಂಸ್ಥೆಗಳನ್ನು ಪರಿಶೀಲಿಸಬೇಕು/ವಿಮರ್ಶಿಸಬೇಕು. ಅವುಗಳಲ್ಲಿ ಕೆಲವನ್ನು ನೋಡೋಣ. ಕೌಟುಂಬಿಕ ವ್ಯವಸ್ಥೆ ಮೊದಲಿಗೆ ನಮ್ಮ ಕುಟುಂಬಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸೋಣ. ಕುಟುಂಬ ಸಮಾಜದ ಮೂಲ ಘಟಕ. ಕುಟುಂಬಗಳಿಲ್ಲದ ಸಮಾಜವನ್ನು ಊಹಿಸುವುದು ಸಾಧ್ಯವಿಲ್ಲ. ಒಂದು ಕಾಲದಲ್ಲಿ ನಮ್ಮ ದೇಶ ಹಳ್ಳಿಗಳಿಂದ ತುಂಬಿತ್ತು. ವ್ಯವಸಾಯ (ಕೃಷಿ) ನಮ್ಮ ಜನರ ಪ್ರಮುಖ ಉದ್ಯೋಗವಾಗಿತ್ತು. ನಮ್ಮಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆ ಇತ್ತು. ಅಂಥ ಕುಟುಂಬಗಳಲ್ಲಿ ಹಿರಿಯರು, ಕಿರಿಯರು, ಹೆಂಗಸರು, ಗಂಡಸರು, ಅಶಕ್ತರು, ಸಶಕ್ತರು ಎಲ್ಲರೂ ಒಟ್ಟಾಗಿ ವಾಸಿಸುತ್ತಿದ್ದರು, ಒಟ್ಟಾಗಿ ದುಡಿಯುತ್ತಿದ್ದರು. ಒಟ್ಟಾಗಿ ಉಣ್ಣುತ್ತಿದ್ದರು. ನಿಧಾನವಾಗಿ ಕಾಲ ಬದಲಾಗುತ್ತಾ ಬಂತು. ಕೈಗಾರಿಕೆಗಳು ನಗರಗಳಲ್ಲಿ ಸ್ಥಾಪಿತವಾದವು. ಕೃಷಿಗಿಂತ ಫ್ಯಾಕ್ಟರಿ ಕೆಲಸ ಆಕರ್ಷಕವಾಯಿತು. ಕೈಗಾರಿಕೆಗಳಲ್ಲಿ ಕೆಲಸ ದೊರಕಿಸಿಕೊಳ್ಳಲು ಹೆಚ್ಚಿಗೆ ವಿದ್ಯಾಭ್ಯಾಸದ ಅವಶ್ಯಕತೆ ಬಂತು, ಇದಕ್ಕಾಗಿ ಹಳ್ಳಿಯ ಮಕ್ಕಳು ಪಟ್ಟಣಗಳಿಗೆ ಹೋಗಬೇಕಾಯ್ತು. ಪಟ್ಟಣಕ್ಕೆ ಬಂದು, ವಿದ್ಯೆ ಕಲಿತು, ಅಲ್ಲಿಯೇ ಕೆಲಸಕ್ಕೆ ಸೇರಿ, ಯಾರನ್ನಾದರೂ ಮದುವೆಯಾಗಿ, ಪುಟ್ಟದೊಂದು ಮನೆಮಾಡಿ, ವಾಸ್ತವ್ಯ ಹೂಡುವುದು ಆರಂಭವಾಯಿತು. ಮೊದಲಿಗೆ ತಿಂಗಳಿಗೋ ವರ್ಷಕ್ಕೋ ಒಂದು ಸಾರಿ ಹಳ್ಳಿಗೆ ಹೋಗಿಬರುತ್ತಿದ್ದ ಮಕ್ಕಳು, ಬರುಬರುತ್ತಾ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದರು. ಹಳ್ಳೀಯ ಪರಿಸರ ಪಟ್ಟಣದರಷ್ಟು ಆಕರ್ಷಕವಾಗಿಲ್ಲದೆ, ಹಳ್ಳಿಯ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿ, ಪಟ್ಟಣಕ್ಕೆ ಬಂದವರು ಅಲ್ಲೇ ಉಳಿಯುವಂತಾಯಿತು. ಪಟ್ಟಣದಲ್ಲಿ ವಾಸ್ತವ್ಯ ಹೂಡಿದ ಮಕ್ಕಳು ತಮ್ಮ ತಂದೆ ತಾಯಿ, ಸೋದರ ಸೋದರಿಯರನ್ನು ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ಬರುವಂತೆ ಕರೆಯುತ್ತಿದ್ದರು, ನಿಜ. ಆದರೆ, ಅದು ಇಬ್ಬರಿಗೂ ಅನಾನುಕೂಲವಾದ್ದರಿಂದ, ಅಂಥ ಪ್ರಯತ್ನ ಮುಂದುವರೆಯಲಿಲ್ಲ. ಹಳ್ಳಿಯಿಂದ ಮಕ್ಕಳು ಪಟ್ಟಣಕ್ಕೆ ಬಂದು ಹಳ್ಳಿಯ ಮನೆಗಳು ಖಾಲಿ ಗೂಡುಗಳಾದವು (empty nest). ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾದವು. ಕೆಲವು ಬುದ್ಧಿವಂತ ಮಕ್ಕಳು ದೂರದ ಹೊರ ಪ್ರಾಂತಗಳಲ್ಲಿ ನೆಲಸಿ ತಮ್ಮ ಕುಟುಂಬಗಳನ್ನು ಸಂಪೂರ್ಣವಾಗಿ ಮರೆಯುವಂತಾಯ್ತು; ಇನ್ನೂ ಕೆಲವು ಅತಿ ಬುದ್ಧಿವಂತರಾದವರು ವಿದೇಶಗಳಲ್ಲಿ ನೆಲೆಸಿ, ತಮ್ಮ ಊರು ಕೇರಿ ಇರಲಿ, ತಾವು ಹುಟ್ಟಿದ ನಾಡಿನಿಂದಲೇ ದೂರವಾದರು. ಹೀಗೆ, ನಗರೀಕರಣ (urbanization). ಕೈಗಾರಿಕೀಕರಣ (industrialization) ಮತ್ತು ಜಾಗತೀಕರಣ (globalization) ಗಳಿಂದಾಗಿ, ಜನರ ಜೀವನ ಶೈಲಿ ಬದಲಾಗಿ, ಅವಿಭಕ್ತ ಕುಟುಂಬ ವ್ಯವಸ್ಥೆ ಮುರಿದುಬಿತ್ತು. ಅವಿಭಕ್ತ ಕುಟುಂಬ ವ್ಯವಸ್ಥೆ ಉತ್ತಮವಾಗಿತ್ತು, ಅದು ಮುರಿದು ಬಿದ್ದು, ನಮ್ಮ ಸಮಾಜ ಹಾಳಾಯಿತೆಂಬುದು ಇಲ್ಲಿನ ಅಭಿಪ್ರಾಯವಲ್ಲ. ಹಳ್ಳಿಯ ಮಕ್ಕಳು ಪಟ್ಟಣಕ್ಕೆ ಬಂದರು, ಮತ್ತೆ ಹಳ್ಳಿಗೆ ಹಿಂದಿರುಗಲಿಲ್ಲ, ಸಮಾಜದಲ್ಲಿ ಬದಲಾವಣೆಯಾಯ್ತು, ಎಂದು ಹೇಳುವುದಷ್ಟೇ ಇಲ್ಲಿನ ಉದ್ದೇಶ. ಇಲ್ಲಿ ನಡೆಯುತ್ತಿರುವ ಬದಲಾವಣೆ ಒಳ್ಳೆಯದೋ ಕೆಟ್ಟದೋ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಸದ್ಯದ ಸ್ಥಿತಿ ಎಂದರೆ ಈ ಬದಲಾವಣೆಯಿಂದಾಗಿ ತಂದೆ ತಾಯಿಯರಿಂದ ಮಕ್ಕಳು ದೂರವಾದರು, ಕೊನೆಗಾಲದಲ್ಲಿ ತಂದೆ ತಾಯಿಯರು ವೃದ್ಧಾಶ್ರಮ ಸೇರುವಂತಾಯಿತು. ಈ ಸಂದರ್ಭದಲ್ಲಿ, ಬಹಳ ಹಿಂದೆ ನನ್ನ ಹಳ್ಳಿಯ ಇಬ್ಬರು ಹಿರಿಯರ ನಡುವೆ ನಡೆದ ಸಂಭಾಷಣೆ ನೆನಪಿಗೆ ಬರುತ್ತಿದೆ. ಅವರಿಬ್ಬರು ಊರಿನ ಪ್ರಮುಖರು, ಕೃಷಿಕರು, ತಕ್ಕಮಟ್ಟಿಗೆ ಅನುಕೂಲವಾಗಿದ್ದವರು. ಒಬ್ಬರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕಾಗಿ ಪಟ್ಟಣಕ್ಕೆ ಕಳಿಸಿದ್ದರು. ಇನ್ನೊಬ್ಬರು ತಮ್ಮೂರ ಶಾಲೆಯಲ್ಲಿ ಕಲಿತದ್ದು ಸಾಕೆಂದು ತಮ್ಮ ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಂಡಿದ್ದರು. ಮೊದಲನೇ ಹಿರಿಯರು ಎರಡನೆಯವರನ್ನು ನೀವೇಕೆ ನಿಮ್ಮ ಮಕ್ಕಳನ್ನು ಹೆಚ್ಚಿಗೆ ಓದಲು ನಗರಕ್ಕೆ ಕಳಿಸಲಿಲ್ಲ? ಎಂದು ಕೇಳಿದರು. ಅದಕ್ಕೆ ಎರಡನೆಯವರು ಕೊಟ್ಟ ಉತ್ತರ: ನನಗೆ ನನ್ನ ಮಕ್ಕಳನ್ನು ಕಳೆದುಕೊಳ್ಳುವುದು ಬೇಕಿರಲಿಲ್ಲ ಎಂದು. ಅವರ ಮಾತು ನನ್ನನ್ನು ಬಹಳ ಆಲೋಚನೆಗೆ ಹಚ್ಚಿತು. ಎರಡನೆಯವರ ಪ್ರಕಾರ, ಆಧುನಿಕ ವಿದ್ಯಾಭ್ಯಾಸ ಮಕ್ಕಳನ್ನು ಮನೆಯಿಂದ, ತಂದೆತಾಯಿಯರಿಂದ, ದೂರಮಾಡುತ್ತದೆ; ಮನೆಯನ್ನು ಒಡೆಯುತ್ತದೆ. ಹಳ್ಳಿಯವರ ಮಾತಿನಲ್ಲಿ ಮನೆ ಮುರಿಯುವ ಕೆಲಸ ಮಾಡುತ್ತದೆ ಎಂದಾಗಿತ್ತು. ಓದಲು ಪಟ್ಟಣಕ್ಕೆ ಬಂದ ಮಕ್ಕಳು ಮರಳಿ ಮನೆಗೆ ಹಿಂತಿರುಗುವುದಿಲ್ಲ ಎಂಬುದು ಅವರ ಅಭಿಪ್ರಾಯ. ಅವರಿಗೆ ಉನ್ನತ ವಿದ್ಯಾಭ್ಯಾಸಕ್ಕಿಂತ ತಮ್ಮ ಕುಟುಂಬದ ಒಳಿತು ಮುಖ್ಯವಾಗಿತ್ತು. ಅವರ ಆಲೋಚನೆ ನಮಗೆ-ನಿಮಗೆ ತಪ್ಪಾಗಿ ತೋರಬಹುದು. ಅವರಿಗೆ ಅದೇ ಯೋಗ್ಯವೆನಿಸಿತ್ತು. ಹಳ್ಳಿಯಿಂದ ಪಟ್ಟಣಕ್ಕೆ ಬಂದ ಮಕ್ಕಳೆಲ್ಲಾ ಓದಿ, ಶಿಕ್ಷಕರಾಗಿ, ವಿಜ್ಞಾನಿಗಳಾಗಿ, ಡಾಕ್ಟರಾಗಿ, ಲಾಯರಾಗಿ, ಇಂಜಿನೀಯರಾಗಿ, ಸರ್ಕಾರಿ ಅಧಿಕಾರಿಗಳಾಗಿ, ದೊಡ್ಡವರಾಗಿ ಬೆಳೆಯುತ್ತಾರೆಂಬ ಗ್ಯಾರಂಟಿ ಏನು? ಆಗಬಹುದು, ಆಗದಿರಲೂಬಹುದು. ಅದಕ್ಕೆ ಬದಲು ಎಷ್ಟೋ ಅಷ್ಟು ಓದು ಬರಹ ಕಲಿತು, ಹುಟ್ಟಿದ ಊರಲ್ಲಿ, ಮನೆಯಲ್ಲಿ ಉಳಿದು, ಅಲ್ಲ್ದೇ ಸಮೃದ್ಧ ಜೀವನ ನಡೆಸಬಾರದೇಕೆ? ಹಾಗೆ ಮಾಡುವುದು ಸಾಮಾಜಿಕವಾಗಿ ಲೇಸಲ್ಲವೆ? ಅದು ಮೇಲೆ ಹೇಳಿದ ಹಿರಿಯರ ಆಲೋಚನಾಸರಣಿ. ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಹಳ್ಳಿಯ ಮಕ್ಕಳನ್ನು ತಂದೆತಾಯಿಯರಿಂದ ದೂರ ಮಾಡುತ್ತಿದೆ ಎಂಬುದಂತು ನಿಜ. ಪಟ್ಟಣಕ್ಕೆ ಬಂದ ಮಕ್ಕಳು, ತಮ್ಮ ಹಳ್ಳಿ ಮನೆಗೆ, ತಂದೆತಾಯಿಯರ ಬಳಿಗೆ ಹಿಂದಿರುಗುವ ಸಾಧ್ಯತೆ ಬಹಳ ಕಡಮೆ; ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ, ಹಿರಿಯರ ಕಷ್ಟಸುಖಗಳಿಗೆ ಮಕ್ಕಳು ಆಗುವುದಿಲ್ಲ. ಎಷ್ಟೋ ವೇಳೆ ಅವರು ಸತ್ತಾಗ ನೋಡಲು ಹೋಗದಿದ್ದದ್ದು ಇದೆ. ಇದು ನಮಗೆ ಆಧುನಿಕ ಶಿಕ್ಷಣ ನೀಡಿರುವ ವರ, ಮಾಡಿರುವ ಉಪಕಾರ. ಇಂಥ ಶಿಕ್ಷಣ ನಮಗೆ ಬೇಕೆ? ವಿದ್ಯಾವಂತರಾದ ಮಕ್ಕಳು ಹುಟ್ಟಿದ ಮನೆಗೆ ಹಿಂತಿರುಗಿ, ಅಲ್ಲಿಯೇ ಏನಾದರೂ ಉದ್ಯೋಗ ಮಾಡಿಕೊಂಡು, ನಾಲ್ಕು ಜನರಿಗೆ ಬೇಕಾಗುವಂತೆ ಬಾಳಿ ಬದುಕಲು ಅನುವಾಗುವಂಥ ಶಿಕ್ಷಣವನ್ನು ರೂಪಿಸುವುದು ಸಾಧ್ಯವಿಲ್ಲವೆ? ನಮಗೆ ಈಗಿರುವ ಮನೆಮುರುಕ ಶಿಕ್ಷಣವಷ್ಟೇ ಸಾಕೆ? ಯೋಚಿಸಬೇಕಾದ ವಿಚಾರ. ಇದಿಷ್ಟು ಹಳ್ಳಿಗಳ ಕುಟುಂಬಗಳ ಕತೆ. ನಗರಗಳಲ್ಲಿ ಕೌಟುಂಬಿಕ ವ್ಯವಸ್ಥೆ ಇನ್ನೊಂದು ಬಗೆಯದು. ಇಲ್ಲಿ ಕೌಟುಂಬಿಕ ಜೀವನ ಯಾಂತ್ರಿಕವಾಗಿದೆ. ಇಲ್ಲಿರುವುದೆಲ್ಲಾ ಹೆಚ್ಚಿಗೆ ವಿಭಕ್ತ ಕುಟುಂಬಗಳು. ತಂದೆ, ತಾಯಿ, ಮತ್ತು ಒಂದೋ ಎರಡೋ ಮಕ್ಕಳು. ಮನೆಯಲ್ಲಿ ಅವರು ಒಬ್ಬರೊಡನೊಬ್ಬರು ಮಾತನಾಡುವುದು, ಕಾಲ ಕಳೆಯುವುದು, ಒಟ್ಟಿಗೆ ಕುಳಿತು ಊಟ ಮಾಡುವುದು ಅಪರೂಪ. ತಂದೆ ಕೆಲಸಕ್ಕೆ ಹೋಗುವಾಗ ಮಗು ಇನ್ನೂ ಎದ್ದಿರುವುದಿಲ್ಲ. ಅವನು ಮನೆಗೆ ಬಂದಾಗ ಮಗು ಮಲಗಿರುತ್ತದೆ. ರಜಾದಿನಗಳಲ್ಲಿ ತಂದೆ ಮಲಗಿ ವಿಶ್ರಾಂತಿ ಪಡೆಯುತ್ತಿರುತ್ತಾನೆ. ಹತ್ತು ವರ್ಷಗಳಾದರೂ ಪಕ್ಕದ ಮನೆಯವರ ಹೆಸರು ಗೊತ್ತಿರುವುದಿಲ್ಲ, ಅವರ ಪರಿಚಯವಾಗಿರುವುದಿಲ್ಲ. ನನ್ನ ಪಕ್ಕದ ಮನೆಯವರ ಹೆಸರು ನನ್ನ ಮಗನಿಂದ ತಿಳಿದು ಬಂತು. ಒಂದು ಸಾರಿ ನಮ್ಮ ಮನೆಯಲ್ಲಿ ಕಳ್ಳತನವಾಯ್ತು. ಮರುದಿನ ನ್ಯೂಸ್‍ಪೇಪರ್‍ನಲ್ಲಿ ನೋಡಿ ನಮ್ಮ ಪಕ್ಕದ ಮನೆಯವರು ಬಂದು ವಿಚಾರಿಸಿದರು. ಹಾಗಿದೆ ನಮ್ಮ ನಗರವಾಸಿಗಳ ಸಾಂಘಿಕ ಕಳಕಳಿ. ಹೀಗೆ ಆಧುನಿಕ ಶಿಕ್ಷಣ, ನಗರೀಕರಣ, ಕೈಗಾರಿಕೀಕರಣ, ಜಾಗತೀಕರಣಗಳಿಂದ ನಮ್ಮ ಸಮಾಜದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನಾವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಮುಂದುವರೆದಿದ್ದೇವೆಂದು ಹೇಳಲಾಗುತ್ತಿದೆ. ಅದು ನಿಜವಿದ್ದರೆ ಅದರಿಂದ ನಮ್ಮ ಸಮಾಜಕ್ಕೆ ಎಷ್ಟು ಒಳ್ಳೆಯದಾಗಿದೆ ಎಂಬುದು ಯೋಚಿಸಬೇಕಾದ ವಿಷಯ. ಶಿಕ್ಷಣ ಸಂಸ್ಥೆಗಳು ಇನ್ನು ಸಮಾಜದ ಅಂಗ ಸಂಸ್ಥೆಗಳನ್ನು ಪರಿಶೀಲಿಸೋಣ. ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತಿರುವುದನ್ನು ನೋಡಿದೆವು. ನಮ್ಮ ಶಿಕ್ಷಣ ರಂಗದಲ್ಲಿ ಏನಾಗುತ್ತಿದೆ ಎಂಬುದನ್ನು ಪರಿಶೀಲಿಸೋಣ. ಸಂಖ್ಯಾದೃಷ್ಟಿಯಿಂದ ಹೇಳುವುದಾದರೆ ಇಂದು ನಾವು ಬಹಳ ಮುಂದುವರೆದಿದ್ದೇವೆ. 1900 ರಲ್ಲಿ ಭಾರತದಲ್ಲಿ ಸಾಕ್ಷರತೆ 5%, 1945ರಲ್ಲಿ 20%, ಇದ್ದದ್ದು ಇಂದು ಸುಮಾರು 75% ಆಗಿದೆ: ಪುರುಷರು 82%; ಹೆಂಗಸರು 65%. ಶಾಲಾಕಾಲೇಜುಗಳು ಎಲ್ಲೆಲ್ಲೂ ತಲೆ ಎತ್ತಿ ನಿಂತಿವೆ. ಸುಮಾರು 95% ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. 80% ಶಾಲೆಗಳನ್ನು ಸರ್ಕಾರ ನಡೆಸುತ್ತಿದೆ. 20% ಖಾಸಗಿಯವು. 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುತ್ತಿದೆ. ಆದರೆ, ಪ್ರಾಥಮಿಕ ಶಿಕ್ಷಣ ಪಡೆದವರಲ್ಲಿ 15% ಹೈ ಸ್ಕೂಲ್ ತಲುಪುತ್ತಾರೆ. ಹೈ ಸ್ಕೂಲ್‍ಗೆ ಬಂದವರಲ್ಲಿ ಅರ್ಧ ಮಂದಿ ಕಾಲೇಜುಗಳಿಗೆ ಬರುತ್ತಾರೆ. ನಮ್ಮ ದೇಶದ ಕಾಲೇಜು ವಯಸ್ಸಿನ ಮಕ್ಕಳಲ್ಲಿ 7% ಮಾತ್ರ ಕಾಲೇಜ್ ಶಿಕ್ಷಣ ಕೊಡಬಲ್ಲೆವು. ಕೆಲ ದಿನಗಳ ಹಿಂದೆ ನನ್ನ ಗಮನಕ್ಕೆ ಬಂದ ಅಂಕಿಅಂಶಗಳ ಪ್ರಕಾರ, ಇಂದು ನಮ್ಮಲ್ಲಿ 20 ಕೇಂದ್ರಾಡಳಿತ ವಿಶ್ವವಿದ್ಯಾಲಗಳಿವೆ, 215 ರಾಜ್ಯಗಳು ನಡೆಸುವಂಥವು. ಇವುಗಳಡಿಯಲ್ಲಿ 16,000 ಕಾಲೇಜುಗಳಿವೆ. ಅವುಗಳಲ್ಲಿ 1,800 ಹೆಣ್ಣು ಮಕ್ಕಳಿಗೆ ಮೀಸಲಾದವು. 1,522 ಇಂಜಿನಿಯರಿಂಗ್ ಕಾಲೇಜುಗಳಲ್ಲಿ 5,82,000 ವಿದ್ಯಾರ್ಥಿಗಳಿದ್ದಾರೆ. 1,244 ಪಾಲಿಟೆಕ್ನಿಕ್ಗಳಲ್ಲಿ 2,65,000 ವಿದ್ಯಾರ್ಥಿಗಳು ಓದುತ್ತಿದ್ದಾರೆ. ನಮ್ಮ ಐಐಟಿಗಳಲ್ಲಿ 10,000 ವಿದ್ಯಾರ್ಥಿಗಳು ಓದುತ್ತಿದ್ದು ಇವರು ವಿಶ್ವದಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ಇದಲ್ಲದೆ ವಿಶಿಷ್ಟ ತರಬೇತಿಗಾಗಿ ನಿರ್ಮಿಸಲ್ಪಟ್ಟಿರುವ 33 ರಾಷ್ಟ್ರಮಟ್ಟದ ಸಂಸ್ಥೆಗಳು ಕೆಲಸ ಮಾಡುತ್ತಿವೆ. 100 ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಇತ್ತೀಚೆಗೆ ದೂರ ಶಿಕ್ಷಣದ ಮೂಲಕ ಕಾಲೇಜು ಶಿಕ್ಷಣವನ್ನು ಒದಗಿಸಲಾಗುತ್ತಿದೆ. ಇಡೀ ಪ್ರಪಂಚದಲ್ಲಿ ಹೈಯರ್ ಎಜುಕೇನ್‍ನಲ್ಲಿ ನಮ್ಮದು 3ನೇ ಸ್ಥಾನ (ಚೈನ ಯುಎಸ್ಎ ಅನಂತರ). ಇದೆಲ್ಲ ಸಂತೋಷ ಪಡಬೇಕಾದ ವಿಚಾರ. ಆದರೆ, ನಮ್ಮಲ್ಲಿರುವ ಶಿಕ್ಷಣ ಸಂಸ್ಥೆಗಳ ಸ್ಥಿತಿ ಹೇಗಿದೆ ಎಂಬುದು ಗಮನಿಸಬೇಕಾದ ವಿಚಾರ. ಹಳ್ಳಿಗಾಡಿನ ಪ್ರಾಥಮಿಕ ಶಿಕ್ಷಣದ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲಿನ ಶಿಕ್ಷಣದ ಗುಣಮಟ್ಟ ಬಹಳ ಕೆಳಗಿದೆ. ಸಾರ್ವಜನಿಕ (ಸರ್ಕಾರಿ) ಶಾಲೆಗಳು ದನದ ದೊಡ್ಡಿಗಳಾಗಿವೆ. ಅವುಗಳಲ್ಲಿ ಕಟ್ಟಡವಿದ್ದರೆ, ಬೆಂಚು ಕುರ್ಚಿಗಳಿರುವುದಿಲ್ಲ. ಅವೆರಡೂ ಇದ್ದರೆ ಅಧ್ಯಾಪಕರಿರುವುದಿಲ್ಲ. ಇರುವವರು ಪಾಠ ಮಾಡುವುದಿಲ್ಲ. ಕೆಲವರಿಗೆ ಪಾಠ ಮಾಡುವುದು ತಿಳಿದಿರುವುದಿಲ್ಲ. ಕೆಲವೆಡೆ ಸರ್ಕಾರಿ ಶಾಲೆಗಳನ್ನು ಎಂದು, ಹೇಗೆ ಮುಚ್ಚುವುದೆಂದು ಆಲೋಚಿಸಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇದ್ದುದರಲ್ಲಿ ಚನ್ನಾಗಿವೆ. ಅವು ಇರುವುದೆಲ್ಲಾ ನಗರಗಳಲ್ಲಿ. ನಗರಗಳಲ್ಲಿ ಸುಮಾರು 50% ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಅವು ವ್ಯಾಪಾರಿ ಕೇಂದ್ರಗಳಾಗಿವೆ; ಅಲ್ಲಿ ವಿದ್ಯೆ ಮಾರಾಟದ ವಸ್ತುವಾಗಿದೆ. ಸಾಮಾನ್ಯ ಜನರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವುದು ಕನಸಿನ ಮಾತು. ಈ ಎರಡು ಬಗೆಯ ಸಂಸ್ಥೆಗಳಲ್ಲಿ ಅಂತರ ಬಹಳವಿದ್ದು, ಆ ಅಂತರ ಅಲ್ಲಿ ಕಲಿತ ಮಕ್ಕಳ ಮೇಲೆ ಪ್ರಭಾವ ಬೀರಿ, ಸಮಾಜವನ್ನೇ ಇಬ್ಬಗೆಯಾಗಿಸುತ್ತಿದೆ. ನಮ್ಮ ಕಾಲೇಜು ಶಿಕ್ಷಣದ ಮಟ್ಟ ಕೂಡ ಕೆಳಮಟ್ಟದ್ದು. ಪ್ರಪಂಚದಲ್ಲಿರುವ 200 ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ನಮ್ಮದು ಒಂದೂ ಇಲ್ಲ. ನಮ್ಮಲ್ಲಿ ನಡೆಯುವ ಸಂಶೋಧನೆಗಳು ಪ್ರಪಂಚದಲ್ಲಿ ಗುರುತಿಸಲ್ಪಟ್ಟಿಲ್ಲ, ಅವು ಮೇಲ್ಮಟ್ಟದ ಜರ್ನಲ್‍ಗಳಲ್ಲಿ ಪ್ರಕಟವಾಗಿಲ್ಲ. ಶ್ರೇಷ್ಠಮಟ್ಟದ ಸಂಶೋಧನೆಗಳಿಗೆ ಪ್ರೋತ್ಸಾಹವಿಲ್ಲ. ನಮ್ಮ ಕಾಲೇಜುಗಳಲ್ಲಿ 25% ಅಧ್ಯಾಪಕರ ಸ್ಥಾನಗಳು ಖಾಲಿ ಇವೆ. 57% ಅಧ್ಯಾಪಕರಿಗೆ ಪಿಎಚ್‍ಡಿ ಡಿಗ್ರಿ ಇಲ್ಲ. ಕಾಲೇಜುಗಳಲ್ಲಿ ಶಿಕ್ಷಣ ಮಾಧ್ಯಮ ಇಂಗ್ಲೀಷ್ ಆಗಿದ್ದು, ಆ ಭಾಷೆಯಲ್ಲಿನ ಪ್ರಾವೀಣ್ಯತೆ ಹಲವರಿಗಿಲ್ಲದ್ದು ಎದ್ದು ಕಾಣುತ್ತಿದೆ. ನಮ್ಮ ಶಾಲಾಕಾಲೇಜುಗಳು ಕಲಿಸುತ್ತಿರುವ ವಿದ್ಯೆಯಾದರೂ ಎಂಥದು. ಇಂದು ಅಲ್ಲಿ ಕಲಿಸುತ್ತಿರುವುದು ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಹೇಗೆ ಎಂಬುದನ್ನು; ಜೀವನ ಮಾಡುವುದನ್ನಲ್ಲ. ಉನ್ನತ ಶಿಕ್ಷಣ ಪಡೆದು ಹೊರಬಂದ ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಏನನ್ನಾದರೂ ಮಾಡಲು ಕಲಿಸಲಾಗಿದೆಯೆ? ಅವರಿಗೆ ಸ್ವತಂತ್ರವಾಗಿ ಆಲೋಚಿಸುವುದು ಕೂಡ ಬರುವುದಿಲ್ಲ. ಅವರ ಗುರಿಯೆಲ್ಲಾ ಕಷ್ಟಪಟ್ಟು, ಏನಾದರೂ ಮಾಡಿ, ಪರೀಕ್ಷೆಯಲ್ಲಿ ಪಾಸಾಗಿ, ಎಂಥದಾದರೂ ಒಂದು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವುದು; ಅನಂತರ ವಿರಾಮವಾಗಿ (ಕೆಲಸ ಮಾಡದೆ) ಕಾಲ ಕಳೆಯುವುದು. ನಮ್ಮ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣ ಪಡೆದು ಹೊರಬಂದು ಜೀವನ ನಡೆಸುತ್ತಿರುವ ಕೆಲವರು ಹೇಳಿದ ಮಾತುಗಳು ಸ್ವಾರಸ್ಯವಾಗಿವೆ. ಒಬ್ಬ ಒಳ್ಳೆಯ ಡಾಕ್ಟರಾಗಬೇಕಾದರೆ, ಅವನು ಮೆಡಿಕಲ್ ಕಾಲೇಜಿನಲ್ಲಿ ಕಲಿತದ್ದನ್ನು ಮರೆಯಬೇಕಂತೆ. ಒಬ್ಬ ಒಳ್ಳೆಯ ಉಪಾಧ್ಯಾಯನಾಗಬೇಕಾದರೆ ಅವನು ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಕಲಿತದನ್ನು ಮರೆತ ನಂತರವಂತೆ. ಹಾಗೆ ಲಾ ಕಾಲೇಜಿನಲ್ಲಿ ಕಲಿತದ್ದನ್ನು ಅಲ್ಲಿಯೇ ಬಿಟ್ಟು ಬಂದಾಗ ಮಾತ್ರ ಒಳ್ಳೆಯ ಲಾಯರ್ ಆಗುವುದು ಸಾಧ್ಯವಂತೆ. ಹೀಗೆ ವೃತ್ತಿಶಿಕ್ಷಣಕ್ಕೂ ವೃತ್ತಿ ಜೀವನಕ್ಕೂ ನಡುವಿನ ಅಂತರ ಬಹಳವಿದೆ. ಇಂಥ ಶಿಕ್ಷಣ ನಮಗೆ ಬೇಕೆ? ಬುದ್ಧಿಗೆ ಹೆಚ್ಚು ಒತ್ತುಕೊಡುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಭಾವನೆಗಳು ನಾಶವಾಗುತ್ತಿವೆ. ಓದುವುದು, ಬರೆಯುವುದು, ಕೂಡುವುದು-ಕಳೆಯುವುದನ್ನು ಕಲಿಯುವ ಭರದಲ್ಲಿ ಮಾನವರಾಗಿ ಬದುಕುವುದನ್ನು ಮರೆಯುತ್ತಿದ್ದೇವೆ. ನಮ್ಮ ಹಿರಿಯರು ಮಹಾಭಾರತ, ರಾಮಾಯಣ, ಪಂಚತಂತ್ರದ ಕತೆಗಳನ್ನು ಓದುತ್ತಾ ಬೆಳೆದು ಬಂದವರು. ಇಂದಿನ ಮಕ್ಕಳು ಓದುವುದು ಫ್ಯಾಂಟಮ್, ಮಿಕ್ಕಿ ಮೌಸ್ ಬಗ್ಗೆ. ನಾನು 70 ವರ್ಷಗಳ ಹಿಂದೆ 6ನೇ ತರಗತಿಯಲ್ಲಿ ಓದಿದ ಗುರುಕುಲ ಕಥಾವಳಿ ಎಂಬ ಗುರುಶಿಷ್ಯರ ಸಂಬಂಧವನ್ನು ವಿವರಿಸುವ ಪೌರಾಣಿಕ ಕತೆಗಳ ಪುಸ್ತಕವನ್ನು ಇಂದು ಕೂಡ ನೆನೆಸಿಕೊಳ್ಳುತ್ತೇನೆ. ಅಣೆಕಟ್ಟುಗಳು-ಕೈಗಾರಿಕೆಗಳು ಸ್ವಾತಂತ್ರ್ಯೋತ್ತರ ಭಾರತ ಕೆಲವು ರಂಗಗಳಲ್ಲಿ ಅಭಿವೃದ್ಧಿ ಹೊಂದಿದೆ. ಸ್ವತಂತ್ರಪೂರ್ವದಲ್ಲಿ ನಾವು ನಮಗೆ ಸಾಲುವಷ್ಟು ಆಹಾರಧಾನ್ಯಗಳನ್ನು ಬೆಳೆಯಲಾಗುತ್ತಿರಲಿಲ್ಲ. ಸ್ವತಂತ್ರ ಬಂದ ಮೇಲೂ ಆಹಾರಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ನಮ್ಮ ಮೊದಲ ಪಂಚವಾರ್ಷಿಕ ಯೋಜನೆಯ ಗುರಿ ಹಸಿರು ಕ್ರಾಂತಿ. ಅದಕ್ಕಾಗಿ ಹಲವಾರು ಬೃಹತ್ ಅಣೆಕಟ್ಟುಗಳನ್ನು ಕಟ್ಟಲಾಯಿತು. ಈ ಅಣೆಕಟ್ಟುಗಳನ್ನು ಆಧುನಿಕ ದೇಗುಲಗಳೆಂದು ಕರೆಯಲಾಯ್ತು. ಸಾಕಷ್ಟು ಆಹಾರ ಬೆಳೆಯುವುದು ಸಾಧ್ಯವಾಯಿತು. ಸ್ವಾವಲಂಬನೆ ಸಾಧ್ಯವಾಯ್ತು. ಎರಡನೆಯ ಯೋಜನೆಯಲ್ಲಿ ಕೈಗಾರಿಕೆಗಳಿಗೆ ಒತ್ತು ಕೊಡಲಾಯ್ತು. ಅಂದು ನಮ್ಮ ನಾಯಕರ ದೂರದರ್ಶಿತ್ವದಿಂದ ನಮಗೆ ದುಡಿಯಲು ಕೆಲಸ, ಉಣ್ಣಲು ಅನ್ನ ದೊರಕುವಂತಾಯ್ತು ಮುಂದಿನ ಯೋಜನೆಗಳು ನಮ್ಮನ್ನು ಅಭಿವೃದ್ಧಿಶೀಲ ದೇಶವೆಂದು ಗುರುತಿಸಿಕೊಳ್ಳಲು ಸಹಾಯ ಮಾಡಿದವು, ಇವೆಲ್ಲಾ ಒಳ್ಳೆಯ ಕೆಲಸಗಳೇ. ಇವುಗಳಿಂದಾಗಿ ನಾವು ಬಹಳ ಅಭಿವೃದ್ಧಿ ಹೊಂದಿದೆವು. ನಿಜ. ಆದರೆ ಇವುಗಳಿಗೆ ಒಂದು ಡಾರ್ಕ್ ಸೈಡ್ ಕೂಡ ಇದೆ. ಅದನ್ನು ಕೊಂಚ ಗಮನಿಸೋಣ. ಅಣೆಕಟ್ಟುಗಳ ಮತ್ತು ಕೈಗಾರಿಕೆಗಳ ನಿರ್ಮಾಣದ ಇನ್ನೊಂದು ಮುಖವನ್ನು ನೀವು ಕಂಡಿದ್ದಿರೇನು? ಅಣೆಕಟ್ಟುಗಳನ್ನು ಕಟ್ಟಿ ಅಲ್ಲಿ ನದಿ ನೀರನ್ನು ಶೇಕರಿಸಲಾಯ್ತು. ಇದರಿಂದ ಅಪಾರವಾದ ಫಲವತ್ತಾದ ಭೂಮಿ ಮುಳುಗಡೆಯಾಯಿತು. ಹಲವು ರೈತರು ತಮಗೆ ಜೀವನಾಧಾರವಾಗಿದ್ದ ಭೂಮಿಯನ್ನು ಕಳೆದುಕೊಂಡರು. ಅಲ್ಲಿ ವಾಸಿಸುತ್ತಿದ್ದ ಜನರು ನಿರಾಶ್ರಿತರಾದರು. ಅವರಿಗೆ ಪರಿಹಾರ ಕೊಡಬೇಕೆಂದು ಸರ್ಕಾರ ಆದೇಶವನ್ನೇನೋ ಹೊರಡಿಸಿತು. ಅಂಥ ಪರಿಹಾರ ಸರಿಯಾಗಿ ಭೂಮಿ ಕಳೆದುಕೊಂಡವರಿಗೆ ದೊರಕಿತೇ? ಹಾಗೆ ದೊರಕಲು ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿದೆಯೆ? ನಮ್ಮ ಭ್ರಷ್ಟ ಅಧಿಕಾರಿಗಳು ಎಂದಾದರೂ ಪರಿಹಾರವನ್ನು ಸರಿಯಾಗಿ ವಿತರಿಸಿದ್ದಿದೆಯೆ? ಬಹಳಷ್ಟು ಪರಿಹಾರ ಧನ ಕೆಲವು ಅಧಿಕಾರಿಗಳ ಕಿಸೆ ಸೇರಿತು. ಉಳಿದದ್ದು ಭೂಮಿಕಳೆದುಕೊಂಡೆವೆಂದು ಬೊಬ್ಬೆಹೊಡೆದ ಕೆಲವು ಶ್ರೀಮಂತರ ಪಾಲಾಯ್ತು. ಕೆಲವು ಅಯೋಗ್ಯ ಭೂಮಾಲಿಕರು ಬಂದ ಹಣದಿಂದ ತಿಂದು, ಕುಡಿದು, ಮಜಾಮಾಡಿ ಹಾಳಾದರು. ನಿಜವಾಗಿ ಭೂಮಿ ಕಳೆದುಕೊಂಡ ಜನರ ಕತೆ ಏನಾಯ್ತು? ಅವರ ಭೂಮಿ ಮುಳುಗಡೆಯ ಜತೆಯಲ್ಲೇ ಅವರೂ ಮುಳುಗಿಹೋದರು; ಪರಿಹಾರದ ಆಶ್ವಾಸನೆಗಳೂ ಮುಳುಗಿ ಹೋದವು. ಜನ ನಿರಾಶ್ರಿತರಾದರು. ಅವರ ಜೀವನ ನಾಶವಾಯಿತು ಈ ವಿಚಾರವಾಗಿ ಹೆಚ್ಚಿಗೆ ತಿಳಿಯಬೇಕೆನ್ನುವವರು ಸರ್ದಾರ್ ಸರೋವರದ ಕತೆಯನ್ನು ಓದಿ ತಿಳಿದುಕೊಳ್ಳಿ. ಮೇಘಾ ಪಾಟ್ಕರ್ ಅವರ ನರ್ಮದಾ ಬಚಾವ್ ಕುರಿತು ಓದಿರಿ, ತಿಳಿಯುತ್ತದೆ. ಇತ್ತೀಚೆಗೆ ಮಧ್ಯಪ್ರದೇಶದ ಖಾಂಡ್ವ ಜಿಲ್ಲೆಯ ಓಂಕಾರೇಶ್ವರ ಅಣೆಕಟ್ಟಿನ ವಿವಾದದ ಬಗ್ಗೆ ನೀವು ಓದಿರಬಹುದು. ಅಣೆಕಟ್ಟಿನಿಂದಾಗಿ ಭೂಮಿ ಕಳೆದುಕೊಂಡ ರೈತರು ನರ್ಮದಾ ನದಿ ನೀರಿಗಿಳಿದು 17 ದಿನ ಅಲ್ಲೇ ನಿಂತು ಸತ್ಯಾಗ್ರಹ ಮಾಡಿದರು. ನೀರಿನಲ್ಲಿ ನಿಂತ ಅವರ ಕಾಲುಗಳು ಸೆಲೆತು ಹೋಗಿದ್ದವು. ಅಷ್ಟು ದಿನ ಅವರು ಅಲ್ಲಿ ಹೇಗೆ ನಿಂತಿದ್ದರು ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತದೆ. ಪುನರ್ವಸತಿ ವಿಚಾರವಾಗಿ ತಮಗಾಗುತ್ತಿರುವ ಅನ್ಯಾಯವನ್ನು ಅವರು ಹೊರ ಜಗತ್ತಿಗೆ ತೋರಿಸಲು ಅನುಸರಿಸಿದ ಹಾದಿ ಕರುಣಾಜನಕವಾಗಿತ್ತು; ಭಯಂಕರವಾಗಿತ್ತು. ಭೂಮಿಯನ್ನು ಕಳೆದುಕೊಂಡು ತಿನ್ನಲು ಕೂಳಿಲ್ಲದಾದ ಜನ ಇನ್ನೇನು ತಾನೆ ಮಾಡಲು ಸಾಧ್ಯ? ಇದೇ ರೀತಿ ಭೂ ಸುಧಾರಣೆ ಬೇಕೆಂದು 50 ಸಾವಿರ ಜನ ಗ್ವಾಲಿಯರ್‍ನಿಂದ ದೆಹಲಿಗೆ ಪಾದಯಾತ್ರೆಗೆ ಹೊರಟಾಗ ಅವರಿಗಾದ ಸಂಕಟವನ್ನು ಊಹಿಸಿ. ಕೈಗಾರಿಕೆಗಳನ್ನು ಸ್ಥಾಪಿಸುವಾಗಲೂ ಆದದ್ದು ಇದೇ ಕತೆ. ಇಂಡಿಯನ್ ಸೋಷಿಯಲ್ ಇನ್ಸ್‍ಟಿಟ್ಯೂಟ್ ಪ್ರಕಾರ, ಇಂದು ನಮ್ಮ ದೇಶದಲ್ಲಿ 2.13 ಕೋಟಿ ಜನ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರ ಪೈಕಿ 1.64 ಕೋಟಿ ಅಣೆಕಟ್ಟುಗಳಿಂದಾಗಿ ಭೂಮಿ ಕಳೆದುಕೊಂಡವರು. 25 ಲಕ್ಷ ಗಣಿಗಾರಿಕೆಗೆ ಬಲಿಯಾದವರು. 12.5 ಲಕ್ಷ ಕೈಗಾರಿಕೆಗಳಿಂದ ಹತರಾದವರು. 6 ಲಕ್ಷ ರಾಷ್ಟ್ರೀಯ ಉದ್ಯಾನಗಳಡಿಯಲ್ಲಿ ಹೂತು ಹೋದವರು. ನಿಜ, ಸಾಕಾದಷ್ಟು ಬೆಳೆ ಬೆಳೆಯಲು, ವಿದ್ಯುತ್ ಉತ್ಪಾದಿಸಲು, ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸಲು, ದೊಡ್ಡ ಅಣೆಕಟ್ಟುಗಳು ಅವಶ್ಯಕ. ಜನರ ಆರ್ಥಿಕ ಸ್ಥಿತಿ ಉತ್ತಮವಾಗಲು, ಮೇಲ್ಮಟ್ಟದ ಜೀವನ ನಡೆಸಲು ಕೈಗಾರಿಕೆಗಳು ಬೇಕು. ದೇಶ ಮುಂದುವರೆಯಬೇಕು. ಅಭಿವೃದ್ಧಿಗಾಗಿ ಕೆಲವರು ತ್ಯಾಗ ಮಾಡಲೇಬೇಕು, ಆದರೆ, ಆ ತ್ಯಾಗಿಗಳ ಜೀವನ ನಾಶವಾಗಬೇಕೆ? ಭೂಮಿ ಕಳೆದುಕೊಂಡ ಜನರಿಗೆ ಪುನರ್ವ್ಯವಸ್ಥೆ ಮಾಡಬೇಡವೆ? ಅಂಥ ಒಂದು ವ್ಯವಸ್ಥೆ ಇಂದಿನವರೆಗೆ ಎಲ್ಲಿಯಾದರು ಜಯಪ್ರದವಾಗಿ ಕೆಲಸಮಾಡಿದೆಯೆ? ದೊಡ್ಡ ದೊಡ್ಡ ಅಣೆಕಟ್ಟುಗಳ ನಿರ್ಮಾಣದಿಂದ, ಕೈಗಾರಿಕೆಗಳ ಸ್ಠಾಪನೆಯಿಂದ ಆಗಿರುವ ಪರಿಸರದ ನಾಶವನ್ನು ಕುರಿತು ನಾನು ಏನೂ ಹೇಳಿಲ್ಲ. ಅದನ್ನು ನೀವೇ ಊಹಿಸಿಕೊಳ್ಳಿ. ಇದು ನಮ್ಮ ಸಮಾಜ ಉದ್ಧಾರವಾಗುತ್ತಿರುವುದರ ಕತೆ. ರಾಜಕೀಯ ವ್ಯವಸ್ಥೆ ಇಂದು ಬದಲಾಯಿಸಲಾರದಷ್ಟು ಕೆಟ್ಟಿರುವುದು ನಮ್ಮ ರಾಜಕೀಯ ವ್ಯವಸ್ಥೆ. ಏನನ್ನಾದರೂ ಬದಲಾಯಿಸಬಹುದು, ನಮ್ಮ ರಾಜಕೀಯ ವ್ಯವಸ್ಥೆಯನ್ನು, ರಾಜಕಾರಣಿಗಳ ಜೀವನ ಶೈಲಿಯನ್ನು ಬದಲಾಯಿಸುವುದು ಸಾಧ್ಯವೇ ಇಲ್ಲವೇನೋ ಎನಿಸುತ್ತಿದೆ. ನಮ್ಮ ರಾಜಕಾರಣ ಕೊಳೆತು ನಾರುತ್ತಿದೆ. ನಮ್ಮ ಆಡಳಿತಗಾರರು ಸಾವಜನಿಕರ ಹಣವನ್ನು ಮನಬಂದಂತೆ ಬಳಸುತ್ತಿದ್ದಾರೆ. ಇವರ ವೈಯಕ್ತಿಕ ತೆವಲುಗಳಿಗೆಲ್ಲಾ ಬೊಕ್ಕಸದ ಹಣ ದುರ್ಬಳಕೆಯಾಗುತ್ತಿದೆ. ದೇಶದ ಸಂಪತ್ತನ್ನು ಲೂಟಿ ಮಾಡುವುದೇ ತಮ್ಮ ಏಕೈಕ ಕಾಯಕವೆಂದು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ತಿಳಿದಂತಿದೆ. ಕಚೇರಿಯಲ್ಲಿನ ಪರಿಚಾರಕರು, ಕಾರು ಚಾಲಕರು, ಹೀಗೆ ಹತ್ತಾರು ನಮೂನೆಯ ಜನ ಇವರ ಸೇವೆಗೆಂದೇ ಮುಡುಪಾಗಿರುತ್ತಾರೆ. ಸಾಮಾನ್ಯ ಜನರಿಗಿಂತ ತಾವು ಮೇಲ್ಮಟ್ಟದವರೆನ್ನುವ ಭಾವನೆ ಇವರಲ್ಲಿ ಮನೆ ಮಾಡಿಕೊಂಡಿದೆ. ಆಫೀಸ್ ಪರಿಚಾರಕರನ್ನು ಇವರ ಮನೆಗೆಲಸದವರಂತೆ ನಡೆಸಿಕೊಳ್ಳುತ್ತಾರೆ. ಇವರ ಹೆಂಡತಿ ಮಕ್ಕಳು ನಂಟರಿಷ್ಟರನ್ನು ಎಲ್ಲೆಂದರಲ್ಲಿಗೆ ಕರೆದೊಯ್ಯಲು ಸರ್ಕಾರಿ ವಾಹನಗಳು ಉಪಯೋಗಿಸಲ್ಪಡುತ್ತಿವೆ. ಇವರೆಂದೂ ಜನರ ಕಲ್ಯಾಣ ತಮ್ಮ ಜವಾಬ್ದಾರಿ ಎಂದು ಯೋಚಿಸಿದಂತೆ ಕಾಣುವುದಿಲ್ಲ. ಹಿಂದಿನ ಕಾಲದ ರಾಜರುಗಳು ಶೋಷಕರಾಗಿದ್ದರೂ, ಅವರಿಗೆ ಜನರ ಬಗ್ಗೆ ಕನಿಷ್ಠ ಕರುಣೆಯಾದರೂ ಇತ್ತು. ಅಂದು ರಾಜ ಒಬ್ಬ ಮಾತ್ರ ಶೋಷಣೆ ಮಾಡುತ್ತಿದ್ದ. ಇಂದು ರಾಜಕಾರಣಿಗಳೆಲ್ಲರೂ ಆ ಕೆಲಸ ಮಾಡುತ್ತಿದ್ದಾರೆ. ದೇಶದ ಸಂಪತ್ತು ಅದಕ್ಕೆ ಸಾಲುತ್ತಿಲ್ಲ. ಪ್ರಜಾಪ್ರಭುತ್ವದ ಮೂಲ ಮಂತ್ರ ಜನ ಕಲ್ಯಾಣವೆಂದು ಬೊಗಳೆ ಬಿಡುತ್ತಾ, ಸರ್ಕಾರ ಆಷಾಡಭೂತಿತನವನ್ನು ಪ್ರದರ್ಶಿಸುತ್ತಿದೆ. ಸ್ವಜನರ ಹಿತಾಸಕ್ತಿಯೇ ಇಂದು ರಾಜಕಾರಣದ ಮೂಲ ಮಂತ್ರವಾಗಿದೆ. ಜನರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಮೇರೆ ಮೀರಿದೆ. ಇದರಿಂದಾಗಿ ಜನರ ಅಸಹನೆ, ಅತೃಪ್ತಿ ಒಳಗೊಳಗೆ ಕುದಿಯುತ್ತಿದೆ. ಜನರಿಗೆ ರಾಜಕಾರಣಿಗಳ ಮೇಲೆ, ಆಳುವವರ ಮೇಲೆ, ಗೌರವ ಕಡಮೆಯಾಗಿ, ಅವರನ್ನು ಧಿಕ್ಕರಿಸುವ ಕಾಲ ಬಂದಿದೆ. ಆವರ ಅಸಹನೆ, ರೊಚ್ಚು ಹೊರಹೊಮ್ಮಿ ಅವರು ಬೀದಿಗಿಳಿಯುವ ದಿನ ದೂರವಿಲ್ಲ. ಜನರಿಗೆ ಆಳುವವರ ಮೇಲೆ ಗೌರವವಿಲ್ಲದಿದ್ದರೆ, ಅವರ ಮೇಲೆ ಕಸ ಎಸೆಯಲು ಮುಂದಾದರೆ, ಅವರ ಮೇಲೆ ತಿರುಗಿ ಬೀಳುವಂತಾದರೆ, ಅದು ಅನಾಯಕತ್ವಕ್ಕೆ ಎಡೆ ಮಾಡುತ್ತದೆ. ಈಗಾಗಲೇ ರಸ್ತೆ ಸುಂಕ ವಸೂಲಿ ಮಾಡುವವನ ಮೇಲೆ ಗುಂಡು ಹಾರಿಸಿದ್ದನ್ನು, ಕೆಲವು ಪ್ರತಿಷ್ಠಿತರ ಮೇಲೆ ಪಾದರಕ್ಷೆ ಎಸೆದದನ್ನು, ಕೆನ್ನೆಗೆ ಹೊಡೆದದನ್ನು ಕೇಳಿದ್ದೇವೆ, ಟಿವಿಯಲ್ಲಿ ನೋಡಿದ್ದೇವೆ. ಹೀಗಾಗಬಾರದು; ಅದು ಶುಭ ಸೂಚನೆಯಲ್ಲ. ಭ್ರಷ್ಟಾಚಾರ ಸಮಾಜದ ಎಲ್ಲಾ ಹಂತಗಳಲ್ಲಿ ತಾಂಡವವಾಡುತ್ತಿದೆ. ಸರ್ಕಾರ ನಡೆಸುತ್ತಿರುವ ಜನಪ್ರತಿನಿಧಿಗಳ ಪೈಕಿ ಮೂರನೇ ಒಂದರಷ್ಟು ಜನರ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆಯೆಂದು ಬಹಿರಂಗವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದಕ್ಕೆ ಯಾವ ರಾಜಕಾರಣಿಯೂ ವಿರೋಧ ತೋರಲಿಲ್ಲ. ಅಂದ ಮೇಲೆ ಅದು ನಿಜವಿರಬೇಕು. ರಾಜಕಾರಣಿಗಳು ನಡೆಸುತ್ತಿರುವ ಐಷಾರಾಮಿ ಜೀವನವನ್ನು ಗಮನಿಸಿ. ಹಾಗೆ ಮಾಡಲು ಅವರಿಗೆ ಹಣವೆಲ್ಲಿಂದ ಬಂತು? ಅವರು ರಾಜಕಾರಣಕ್ಕೆ ಬಂದ ದಿನ ಅವರ ಆಸ್ತಿ ಎಷ್ಟಿತ್ತು? ಇಂದು ಎಷ್ಟಿದೆ? ಇದು ಎಲ್ಲರಿಗೂ ತಿಳಿದಿರುವ ವಿಷಯ. ಇದನ್ನು ಕಂಡುಹಿಡಿಯಲು ಒಂದು ತಜ್ಞರ ಸಮಿತಿ ಬೇಕೆ? ಇಂದು ಬೆಳಕಿಗೆ ಬರುತ್ತಿರುವ ಆರ್ಥಿಕ ಅವ್ಯವಹಾರಗಳ ಸಂಖ್ಯೆ ಮತ್ತು ಗಾತ್ರವನ್ನು ನೋಡಿದರೆ ಎದೆ ನಡುಗುತ್ತದೆ. ನಮ್ಮನ್ನು ಆಳುವವರ ಪೈಕಿ ಯಾರಾದರೂ ಪ್ರಾಮಾಣಿಕರು ಇರುವರೇ ಎಂಬ ಅನುಮಾನ ಬರುತ್ತದೆ. ಭ್ರಷ್ಟಾಚಾರವನ್ನು ಒಂದು ಸಹಜ ಸ್ಥಿತಿ ಎಂದು ಜನ ಸ್ವೀಕರಿಸಿರುವಂತೆ ಕಾಣುತ್ತಿದೆ. ಒಂದು ವೇಳೆ ಭ್ರಷ್ಟಾಚಾರ ವಿರೋಧಿ ಚಳುವಳಿಗೆ ಗೆಲುವಾಗಿ, ಒಬ್ಬ ಯೋಗ್ಯ ಲೋಕ್‍ಪಾಲ್‍ನನ್ನು ಆಯ್ಕೆ ಮಾಡಬೇಕಾಗಿ ಬಂದರೆ, ಅಂಥ ವ್ಯಕ್ತಿಯನ್ನು ಎಲ್ಲಿಂದ ಹುಡುಕಿ ತರುವುದು? ದೇಶದಲ್ಲಿ ಅಂಥವರು ಯಾರಾದರೂ ಇದ್ದಾರೆಯೆ? ಎನ್ನುವ ಪ್ರಶ್ನೆಗಳು ಏಳುತ್ತಿವೆ. ಧರ್ಮ, ದರ್ಶನ ಮತ್ತು ಸಂಸ್ಕೃತಿ ಭಾರತದ ಧಾರ್ಮಿಕ, ದಾರ್ಶನಿಕ ಹಾಗು ಸಾಂಸ್ಕೃತಿಕ ಹಿನ್ನೆಲೆ ಬಹಳ ಪುರಾತನವಾದುದು. ಅಷ್ಟೇ ಮಹತ್ವ ಉಳ್ಳದ್ದು ಮತ್ತು ಜಗತ್ಪ್ರಸಿದ್ಧವಾದುದು. ಇಡೀ ವಿಶ್ವ ಬೆರಗಾಗುವಷ್ಟು ಸಾಂಸ್ಕೃತಿಕ ಹಿನ್ನೆಲೆ ಭಾರತದ್ದು. ನಾಲ್ಕು ವೇದಗಳು, ನೂರಾರು ಉಪನಿಷತ್ತುಗಳು, ಹದಿನೆಂಟು ಪುರಾಣಗಳು, ಇತಿಹಾಸವೆಂದು ಕರೆಸಿಕೊಳ್ಳುವ ರಾಮಾಯಣ ಮತ್ತು ಮಹಾಭಾರತಗಳು ನಮ್ಮಲ್ಲಿವೆ. ಜಗತ್ಪಸಿದ್ಧರಾದ ವ್ಯಾಸ, ವಾಲ್ಮೀಕಿಗಳು ಭಾರತೀಯರು. ಇಡೀ ಮಾನವ ಜನಾಂಗಕ್ಕೆ ಅನ್ವಯವಾಗುವಂತಹ ಮಾನವ ಧರ್ಮಶಾಸ್ತ್ರವನ್ನು (ಮನುಸ್ಮೃತಿ) ರಚಿಸಿದ ಹಿರಿಮೆ ಭಾರತದ್ದು. ಗೃಹಸ್ಥರಾದವರು ಅನುಸರಿಸಬೇಕಾದ ನೀತಿ ನಿಯಮಗಳನ್ನು ವಿವರಿಸುವ ಗೃಹ್ಯಸೂತ್ರಗಳು ನಮ್ಮಲ್ಲಿವೆ. ರಾಜಕಾರಣ ಮತ್ತು ಅರ್ಥವ್ಯವಸ್ಥೆಯನ್ನು ವಿವರಿಸುವ ಚಾಣಕ್ಯನ ಅರ್ಥಶಾಸ್ತ್ರವಿದೆ. ಕ್ರಿ.ಪೂ. 300ರಷ್ಟು ಹಿಂದೆಯೇ ವೈದ್ಯಶಾಸ್ತ್ರವನ್ನು ರಚಿಸಿದ ಚರಕ, ಸುಶ್ರುತ ಮತ್ತು ವಾಗ್ಭಟರು ನಮ್ಮವರು. ಪಾಣಿನಿಯಂಥ ವೈಯ್ಯಾಕರಣಿ ಭಾರತೀಯ. ಗಣಿತ ಶಾಸ್ತ್ರವನ್ನು ಬರೆದ ಆರ್ಯಭಟ ಮತ್ತು ಭಾಸ್ಕರರು ನಮ್ಮವರು. ಕವಿಗಳ, ನಾಟಕಕಾರರ ದಂಡೇ ನಮ್ಮಲ್ಲಿದೆ. ಭಾಸ, ಭವಭೂತಿ, ಕಾಳಿದಾಸರಿಗೆ ಸರಿಸಮಾನರಾದ ನಾಟಕಕಾರರು ಜಗತ್ತಿನಲ್ಲಿ ಬೇರೆಲ್ಲೂ ಕಂಡುಬಂದಿಲ್ಲ. ಕಾದಂಬರಿಕಾರ ಬಾಣ, ಇತಿಹಾಸಕಾರ ಕಲ್ಹಣ, ಕವಿ ದಂಡಿನ್ನಂಥವರು ವಿಶ್ವದಲ್ಲಿ ಬಹಳ ಕಡಮೆ. ವಾತ್ಸಾಯನನ ಕಾಮಸೂತ್ರ ಭಾರತದ ಕೊಡುಗೆ. ಶಂಕರ, ರಾಮಾನುಜ ಮತ್ತು ಮದ್ವಾಚಾರ್ಯರು ಹುಟ್ಟಿ ಬೆಳೆದ ನಾಡು ನಮ್ಮದು. ಬಸವಾದಿ ಪ್ರಮತರು, ಪುರಂದರಾದಿ ದಾಸವರೇಣ್ಯರು, ಹಾಡಿದ ನಾಡಿದು. ಕಬೀರ, ರಾಮದಾಸ, ಜ್ನಾನದೇವ, ನಾಮದೇವ, ವಲ್ಲಭಾಚಾರ್ಯ, ಚೈತನ್ಯ ಮಹಾಪ್ರಭು, ತಿರುವಳ್ಳುವರ್, ನಾರಾಯಣ ಗುರು, ಮುಂತಾದ ಮಹನೀಯರು ಪ್ರಾತಃಸ್ಮರಣೀಯರು. ಆಧುನಿಕ ಕಾಲದ ರಾಮಕೃಷ್ಣ-ವಿವೇಕಾನಂದರು ಜಗತ್ಪ್ರಸಿದ್ಧರು, ಭಾರತೀಯ ಸಮಾಜವನ್ನು ಬೆಳಗಿದ ಮಹಾನುಭಾವರ ಹೆಸರುಗಳನ್ನು ಹೇಳ ಹೊರಟರೆ ಅದಕ್ಕೆ ಮೊದಲಿಲ್ಲ, ಕೊನೆಯಿಲ್ಲ. ದಕ್ಷಿಣ ಭಾರತ ದೇಗುಲಗಳ ನಾಡು. ತಿರುಪತಿ, ಶ್ರೀಶೈಲ, ಮದುರೆ, ತಿರುವಣ್ಣಾಮಲೈ, ತಂಜಾಊರು. ಕನ್ಯಾಕುಮಾರಿ, ಪಳನಿ, ತಿರುವನಂತಪುರ; ಒಂದೆ ಎರಡೆ; ಗುಡಿ ಇಲ್ಲದ ಊರು ಇಲ್ಲಿಲ್ಲ. ಎಡವಿಬಿದ್ದೆಡೆಯಲ್ಲೆಲ್ಲಾ ದೇವಸ್ಥಾನಗಳಿವೆ. ಉತ್ತರದ ವಾರಣಾಸಿ, ಹರಿದ್ವಾರ, ಅಮರನಾಥ, ಬದ್ರಿನಾಥ, ಸೋಮನಾಥ, ದ್ವಾರಕ. ವೈಷ್ಣವೋದೇವಿ, ಗಯಾ, ಪ್ರಸಿದ್ಧ ಪುಣ್ಯಕ್ಷೇತ್ರಗಳು. ನಮ್ಮ ಶಿಲ್ಪಕಲೆ ಅಸದೃಶ, ಬೇಲೂರು, ಹಳೆಬೀಡು, ಸೋಮನಾಥಪುರ, ಕಜುರಾಹೊದಲ್ಲಿನ ಶಿಲ್ಪಗಳು ಅನನ್ಯ. ಎಷ್ಟು ಸಮೃದ್ಧವಾದುದು ನಮ್ಮ ನಾಡು, ನಮ್ಮ ಸಂಸ್ಕೃತಿ. ಇಲ್ಲಿ ಹುಟ್ಟಿದ ನಾವು ಎಷ್ಟು ಪುಣ್ಯವಂತರು. ವಿಶ್ವದಲ್ಲಿನ ಎಲ್ಲ ಒಳಿತನ್ನು ನಾವು ಪಡೆದುಬಂದಿರುವಂತೆ ಕಾಣುತ್ತದಲ್ಲವೆ? ಆದರೆ, ಇಂದೇಕೆ ನಾವು ಇಷ್ಟು ಕೀಳುಮಟ್ಟಕ್ಕಿಳಿದಿದ್ದೇವೆ? ದೇವಾಲಯಗಳನ್ನು ಒಡೆದಿದ್ದೇವೆ. ಶಿಲ್ಪಗಳನ್ನು ನಾಶಪಡಿಸಿದ್ದೇವೆ. ದೇವರ ವಿಗ್ರಹಗಳನ್ನು ಕದ್ದು ಮಾರುತ್ತಿದ್ದೇವೆ. ಸತ್ಯಮೇವ ಜಯತೆ ಎಂದು ಸಾರಿದ ನಾಡಿನಲ್ಲಿ ಎಲ್ಲೆಡೆ ಸುಳ್ಳು ಕೇಳಿಬರುತ್ತಿದೆ. ಅಹಿಂಸೆಯೇ ಪರಮಧರ್ಮವೆಂದು ಸಾರಿದ ನಾಡಿನಲ್ಲಿ ಕೊಲೆ, ಸುಲಿಗೆಗಳು ದಿನನಿತ್ಯದ ಸುದ್ದಿಗಳು. ಆಸೆಯೇ ದುಃಖದ ಮೂಲವೆಂದ ಬುದ್ಧನ ನಾಡಿನಲ್ಲಿ ದುರಾಸೆ ಹೆಚ್ಚಿ, ಎಲ್ಲೆಡೆ ಬ್ರಷ್ಟಾಚಾರ ತಾಂಡವವಾಡುತ್ತಿದೆ. ತಾವು ಮಾಡುತ್ತಿರುವುದು ಅನ್ಯಾಯವೆಂದು ಲಂಚಕೋರರಿಗೆ ಅನಿಸುತ್ತಲೇ ಇಲ್ಲ. ಅದು ತಪ್ಪೇ ಅಲ್ಲ, ಅದೊಂದು ಜೀವನವಿಧಾನವೆಂದು ಭಾವಿಸಲಾಗುತ್ತಿದೆ. ಭ್ರಷ್ಟಾಚಾರ ಜಗತ್ತಿನ ಎಲ್ಲೆಡೆ ನಡೆಯುತ್ತಿದೆ; ಅದೊಂದು ಸಹಜ ಕ್ರಿಯೆ ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳುವವರು ನಮ್ಮ ನಡುವಿದ್ದಾರೆ. ಹೆಣ್ಣನ್ನು ಜಗನ್ಮಾತೆ ಎಂದು ಕೊಂಡಾಡಿದ ನಾಡಿನಲ್ಲಿ ಅವಳು ಮಾರಾಟದ ವಸ್ತುವಾಗಿದ್ದಾಳೆ. ಹೆಣ್ಣಿನ ಬ್ರೂಣಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಅವಳ ಮೇಲೆ ಅತ್ಯಾಚಾರವೆಸಗಲಾಗುತ್ತಿದೆ. ನಮ್ಮ ಧರ್ಮ, ಸಂಸ್ಕೃತಿಗಳು ನಾಶವಾಗುತ್ತಿವೆಯೆ? ಈ ನಾಡಿನಲ್ಲಿ ಧರ್ಮ ಸಂಸ್ಥಾಪನೆ ಮಾಡಲು ದೇವರು ಹತ್ತು ಅವತಾರವೆತ್ತಿ ಬಂದು ಏನು ಸಾಧಿಸಲಾಗದೆ ಕೈಚೆಲ್ಲಿ ಶೇಷನ ಮೇಲೆ ಮಲಗಿದ್ದಾನೆ! ಯಾಕೆ ಹೀಗೆ? ಈ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. ಈ ಮೊದಲೇ ಹೇಳಿರುವಂತೆ, ನಮ್ಮ ವಿಶ್ವದಲ್ಲಿರುವ ಪ್ರತಿಯೊಂದು ವಸ್ತು, ವಿಷಯ, ಪ್ರಾಣಿಗಳ ಅಸ್ತಿತ್ವವೂ ಒಂದು ಧ್ರುವತಾ ನಿಯಮಕ್ಕೆ (polarity) ಒಳಪಟ್ಟಿರುವಂತೆ ಕಂಡುಬರುತ್ತದೆ. ಅಂದರೆ ಈ ವಿಶ್ವ ಪರಸ್ಪರ ವಿರೋಧ ಪ್ರವೃತ್ತಿಗಳ, ಹಾಗು ನಿಯಮಗಳಿಂದ ಆವೃತವಾಗಿದೆ. ವಸ್ತುವಿನಂತೆ ಪ್ರತಿವಸ್ತು (antimatter) ಒಂದಿದೆ ಎಂದು ವಿಜ್ಞಾನ ಹೇಳುತ್ತಿದೆ. ಹಾಗೆಯೇ ಮಾನವನ ವ್ಯಕ್ತಿತ್ವ ಕೂಡ ಪರಸ್ಪರ ವಿರೋಧ ಘಟಕಗಳಿಂದ ರಚಿಸಲ್ಪಟ್ಟಿದೆ ಎಂದು ಮನೋವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಮಾನವರಲ್ಲಿ ಒಳ್ಳೆಯ ಗುಣಗಳಿರುವಂತೆ ದುರ್ಗುಣಗಳೂ ಇವೆ. ತನ್ನಲ್ಲಿರುವುದನ್ನೆಲ್ಲಾ ದಾನ ಮಾಡುವ ಒಬ್ಬ ಮನುಷ್ಯ ಇನ್ನೊಬ್ಬರ ವಸ್ತುಗಳನ್ನು ದೋಚಿದರೆ ಆಶ್ಚರ್ಯವಿಲ್ಲ. ಒಬ್ಬರನ್ನು ಅಮಿತವಾಗಿ ಪ್ರೀತಿಸಿದ ಓರ್ವ ಅದೇ ವ್ಯಕಿಯನ್ನು ಅದಕ್ಕಿಂತ ಹೆಚ್ಚಾಗಿ ದ್ವೇಷಿಸಿದ್ದಿದೆ. ಬೇರೆಯವರ ಒಳಿತಿಗಾಗಿ ಪ್ರಾಣಕೊಡುವ ಮಾನವ ಇನ್ನೊಬ್ಬನ ಪ್ರಾಣತೆಗೆಯಲು ಹೇಸುವುದಿಲ್ಲ. ಇಂಥವು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ. ನಮ್ಮಲ್ಲಿರುವ ಕೆಡುಕನ್ನು ಮನೋವಿಜ್ಞಾನಿ ಕಾರ್ಲ್ ಯೂಂಗ್ ನೆರಳು ಅಥವಾ ಛಾಯೆ (shadow) ಎಂದು ನಿರ್ದೇಶಿಸಿದ್ದಾನೆ. ನಿಮ್ಮ ನೆರಳು, ನೀವೆಲ್ಲಿ ಹೋದರೂ, ನಿಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ. ನೆರಳಿನಿಂದ ನಿಮಗೆ ಬಿಡುಗಡೆ ಇಲ್ಲ. ಅಂದಮೇಲೆ, ಕೊಲೆ, ಸುಲಿಗೆ, ಮೋಸ, ವಂಚನೆ ಮುಂತಾದ ದುರ್ಗುಣಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳು ನಮ್ಮಲ್ಲಿವೆ. ಅವು ನಮ್ಮಲ್ಲಿರುದನ್ನು ಗುರುತಿಸಿ, ಅವುಗಳನ್ನು ನಿಯಂತ್ರಣದಲ್ಲಿಡುವುದೇ ನಮಗಿರುವ ದಾರಿ. ಅಂದರೆ, ನಮ್ಮೊಳಗಿನ ಛಾಯೆ ನಮ್ಮ ವೈರಿ; ಅದು ಬಲಿಷ್ಠ ವೈರಿ; ಅದನ್ನು ಗೆಲುವುದು ಸುಲಭವಲ್ಲ. ಆದುದರಿಂದ ಛಾಯೆಯ ಅಸ್ತಿತ್ವವನ್ನು ಒಪ್ಪಿಕೊಂಡು, ಅರಿತು, ಅದರೊಡನೆ ಸಂಧಿಮಾಡಿಕೊಳ್ಳಬೇಕಾಗುತ್ತದೆ. ನಾವಾರು ಪರಿಪೂರ್ಣರಲ್ಲ, ಪರಿಶುದ್ಧರಲ್ಲ. ನಮ್ಮೆಲ್ಲರಲ್ಲೂ ಒಳ್ಳೆಯದು-ಕೆಟ್ಟದ್ದು ಒಟ್ಟೊಟ್ಟಿಗೆ ಇರುತ್ತದೆ ಎನ್ನುವ ಪರಿಜ್ಞಾನ ನಮಗಿರಬೇಕು, ಆಂತರಿಕ ಅರಿವಿರಬೇಕು. ಆತ್ಮಜ್ಞಾನವಿರಬೇಕು. ಇದನ್ನೇ ನಮ್ಮ ಋಷಿಗಳು ಆತ್ಮ ಸಾಕ್ಷಾತ್ಕಾರ ಎಂದು ಕರೆದಿರುವುದು. ನಮ್ಮನ್ನು ನಾವು ಅರಿಯುವುದೇ ನಮ್ಮ ಸಮಾಜವನ್ನು ಉತ್ತಮಗೊಳಿಸುವ ಹಾದಿಯಲ್ಲಿ ಮೊದಲ ಹೆಜ್ಜೆ. ನಾನೊಬ್ಬ ಮಹಾ ಆಶಾವಾದಿ. ನಮ್ಮಲ್ಲಿರುವ ಕೆಡುಕುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ನಾವು ಉತ್ತಮ ಸಮಾಜವನ್ನು ನಿರ್ಮಿಸಬಲ್ಲೆವು ಎನ್ನುವ ದೃಢವಾದ ನಂಬಿಕೆ ನನ್ನದು. ಅದು ಅನಿವಾರ್ಯವೆಂದು ನನಗನ್ನಿಸುತ್ತದೆ. ಡಾರ್ವಿನ್ನನ ಸಿದ್ಧಾಂತದ ಪ್ರಕಾರ ಮಾನವನೂ ಸೇರಿದಂತೆ ಸಕಲ ಜೀವಿಗಳ ಉತ್ಕರ್ಷಕ್ಕೆ ಯಾವ ಲಕ್ಷಣಗಳು ಸಹಾಯಮಾಡುವುವೋ ಅವು ಮಾತ್ರ ಉಳಿದುಬರುತ್ತವೆ. ಇದನ್ನು ಡಾರ್ವಿನ್ ಸ್ವಾಭಾವಿಕ ಆಯ್ಕೆ (natural selection) ಎಂದಿದ್ದಾನೆ. ಆದುದರಿಂದ, ನಮ್ಮಲ್ಲಿನ ಕೆಡಕು ನಿಯಂತ್ರಣಕ್ಕೊಳಪಡಲೇಬೇಕು. ಒಳ್ಳೆಯದು ಉಳಿಯಲೇಬೇಕು. ಈ ಕಾರ್ಯಕ್ಕಾಗಿಯೇ ಸಮಾಜ ನಿರ್ಮಿತವಾಗಿರುವುದು. ಸಾಮಾಜಿಕ ಬದಲಾವಣೆಗೆ ಕಾಲ ಹಿಡಿಯುತ್ತದೆ. ಅದಕ್ಕಾಗಿ ನಾವು ಕಾಯಬೇಕು. ಋತಮೊಂದೆ ಗೆಲ್ವುದು, ಅನೃತಮಲ್ತು. ಕೊನೆಯ ಮಾತು ಒಂದು ಸಾರಿ, ಬಹಳ ಮನನೊಂದು ಸಮಾಜದ ದುಸ್ಥಿತಿಯ ಬಗ್ಗೆ ಮಾತನಾಡಿದ್ದನ್ನು ಕೇಳಿಸಿಕೊಂಡ ವ್ಯಕ್ತಿಯೊಬ್ಬರು ನನ್ನನ್ನು ಪ್ರಶ್ನಿಸಿದರು: ನಮ್ಮ ಸಮಾಜ ಕೊಳೆತು ನಾರುತ್ತಿದೆ, ನಿಜ. ಇದನ್ನು ಬದಲಾಯಿಸಲು ಸಾದ್ಯವಿಲ್ಲವೆ? ಎಂದು. ಅದಕ್ಕೆ ನಾನು ಸಮಾಜವನ್ನು ಬದಲಾಯಿಸುವುದು ಸಾಧ್ಯವಷ್ಟೇ ಅಲ್ಲ; ಅದು ಸುಲಭ ಕೂಡ ಎಂದೆ. ಅದಕ್ಕವರು ಆಶ್ಚರ್ಯದಿಂದ ಅದು ಹೇಗೆ? ಎಂದರು. ಅವರಿಗೆ ಅಚಾನಕ್ ಆಗಿ ನಾನು ಕೊಟ್ಟ ಉತ್ತರ ಅವರಿಗಷ್ಟೇ ಅಲ್ಲ, ನನಗೂ ಆಶ್ಚರ್ಯವನ್ನುಂಟು ಮಾಡಿತು. ಅವರಿಗೆ ಕೊಟ್ಟ ಉತ್ತರ ಹೀಗಿತ್ತು: ಇಂದಿನಿಂದ ಮನೆಗೆ ಹಿಂತಿರುಗಿದ ನಂತರ, ನೀವು ನಿಮ್ಮ ಮಕ್ಕಳಿಗೆ ಕಳಬೇಡಿ, ಕೊಲಬೇಡಿ, ಸುಳ್ಳು ಹೇಳಬೇಡಿ, ಅನ್ಯರ ಬಗ್ಗೆ ಅಸಹ್ಯ ಪಡಬೇಡಿ, ನಿಮ್ಮನ್ನು ನೀವು ಹೊಗಳಿಕೊಳ್ಳಬೇಡಿ, ಇತರರನ್ನು ಹಳಿಯ ಬೇಡಿ, ಎಂದು ನಿಷ್ಠೆಯಿಂದ, ಪ್ರಾಮಾಣಿಕವಾಗಿ, ಮನಮುಟ್ಟುವಂತೆ, ಪ್ರೀತಿಯಿಂದ ಹೇಳಿ. ಅವರು ಅದನ್ನು ಖಂಡಿತವಾಗಿ ಕಲಿಯುತ್ತಾರೆ, ಪಾಲಿಸುತ್ತಾರೆ (ಅದು ಮನೋವೈಜ್ಞಾನಿಕ ನಿಯಮ). ಆಗ ನಿಮ್ಮ ಮಕ್ಕಳು ಒಳ್ಳೆಯವರಾಗುತ್ತಾರೆ; ನಿಮ್ಮ ಕುಟುಂಬ ಒಳ್ಳೆಯದಾಗುತ್ತದೆ. ನಿಮ್ಮ ಕುಟುಂಬ ಒಳ್ಳೆಯದಾದರೆ ನಿಮ್ಮ ಸಮಾಜ ಒಳ್ಳೆಯದಾಗುತ್ತದೆ. ಈ ಮಾತುಗಳನ್ನು ಬಸವಣ್ಣ ಎಂದೋ ಹೇಳಿದ್ದ. ಅವನನ್ನು ದೇವರೆಂದು ಪೂಜಿಸುವ ನಾವು ಅವನ ಮಾತುಗಳನ್ನು ಮರೆತೆವು. ಸಮಾಜ ಬದಲಾಗಬೇಕೆನ್ನುವ ನೀವು, ನಿಮ್ಮನ್ನು ಮೊದಲು ಬದಲಾಯಿಸಿಕೊಳ್ಳಿ. ಸಮಾಜ ತಾನಾಗಿ ಬದಲಾಗುತ್ತದೆ. ದೇಶ ಬದಲಾಗುತ್ತದೆ. ಹೌದಲ್ಲವೇ? ಎಂ. ಬಸವಣ್ಣ ಮನಃಶ್ಶಾಸ್ತ್ರ ಪ್ರಾಧ್ಯಾಪಕ (ನಿವೃತ್ತ).
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|