ನವೆಂಬರ್ ಎಂದಾಕ್ಷಣ ನಮಗೆ ಮನಸ್ಸಿಗೆ ಬರುವುದು ಮಕ್ಕಳು ಮತ್ತು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯಲ್ಲಿ ಮಕ್ಕಳಿಗೆ ಪುಸ್ತಕವೋ, ಪೆನ್ನೋ, ಸಿಹಿತಿಂಡಿಗಳೋ ಎನೋ ಒಂದು ಕೊಟ್ಟು ಜೊತೆಗೆ ಒಂದಷ್ಟು ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳನ್ನು ಮನೆಗೆ ಕಳುಹಿಸುವುದು ನಮ್ಮಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಇದನ್ನೆ ನಾವು ವರ್ಷಪೂರ್ತಿ ಮಕ್ಕಳಿಗಾಗಿ ನಾವು ಹಾಗೆ ಮಾಡಿದೆವು, ಹೀಗೆ ಮಾಡಿದೆವು ಎಂದುಕೊಳ್ಳುವವರು ಕಡಿಮೆಯೇನಲ್ಲ. ನೀವು ಮಕ್ಕಳ ದಿನಾಚರಣೆಗೆ ಹೋಗುವ ಮುಂಚೆ ಇದನ್ನು ಸ್ವಲ್ಪ ತಿಳಿದುಕೊಳ್ಳಿ... ಮಕ್ಕಳೇ ನೀವು ಹೇಗಿದ್ದೀರಾ...? ನಿಮಗೇನಾದರೂ ತೊಂದರೆಗಳಿವೆಯೇನು? ಶಾಲೆಯಲ್ಲೋ, ಆಟದ ಮೈದಾನದಲ್ಲೋ ಅಥವಾ ಊರಿನಲ್ಲೋ ಯಾವುದಾದರೂ ತೊಂದರೆಗಳು ಇವೆಯಾ..? ಹೀಗೆಂದು ಎಂದಾದರೂ ನೀವು ಮಕ್ಕಳ ಹತ್ತಿರವೋ, ಮಕ್ಕಳಿರುವ ಜಾಗಕ್ಕೋ ಹೋಗಿ ಈ ಮೇಲಿನ ಪ್ರಶ್ನೆಗಳನ್ನು ಕೇಳಿದ್ದೀರ...? ಅಥವಾ ನೀವು ಚಿಕ್ಕವರಾಗಿದ್ದಾಗ ನಿಮ್ಮನ್ನು ಯಾರಾದರೂ ದೊಡ್ಡವರೋ, ಪಂಚಾಯತಿಯವರೋ ಈ ಪ್ರಶ್ನೆಗಳನ್ನು ಕೇಳಿದ್ದಾರಾ... ಹೋಗಲಿ ಯಾವಾಗಲಾದರೂ, ಎಲ್ಲಿಯಾದರೂ, ಯಾರಾದರೂ ನಿಮ್ಮ ಸಮಸ್ಯೆಗಳನ್ನು ಹೇಳಲಿಕ್ಕೆ ಅವಕಾಶಗಳನ್ನು ಸೃಷ್ಟಿ ಮಾಡಿದ್ದಾರೇನು?
ಇದೇನಪ್ಪಾ ಇಂತಹ ಪ್ರಶ್ನೆಗಳನ್ನು ಕೇಳ್ತಾ ಇದಾರೆ ಅಂದ್ಕೊಳ್ದೆ ಯೋಚಿಸಿ, ಯೋಚಿಸಿದ್ರ, ಅಯ್ಯೋ ಅಂತಾ ಭಾಗ್ಯ ನಮಗೆಲ್ಲಿತ್ತು, ನಮಗೆ ಇರ್ಲಿಲ್ಲ ಇನ್ನ ನಮ್ಮ ಮಕ್ಕಳಿಗೆ ಎಲ್ಲಿ ಸಿಗುತ್ತೆ ಅಂತಾ ಅಂದ್ಕೋತಾ ಇದೀರ?.... ಬೇಸರ ಪಡದೆ ಮುಂದಿನ ಈ ಮುಂದೆ ಸ್ವಲ್ಪ ಓದಿ.. (ಮತ್ತೆ ಸಿಗೋಣ...)
ಈ ಮೇಲಿನ ವಿಚಾರಗಳು ಯಾವುದೋ ಪುಸ್ತಕದ ಪ್ರಸಂಗಗಳಲ್ಲ, ಹಾಗಂತ ಕಟ್ಟು ಕಥೆಗಳೂ ಅಲ್ಲಾ, ಇವೆಲ್ಲಾ ನಮ್ಮ ರಾಜ್ಯದ ವಿವಿಧ ಪಂಚಾಯಿತಿಗಳ ಸಾಧನೆಗಳು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗಳ ಫಲಶ್ರುತಿಗಳು. ಅಬ್ಬಾ!! ನಿಜಕ್ಕೂ ಇವು ಗ್ರಾಮೀಣ ಮಟ್ಟದಲ್ಲಿ ಆಗಿರುವ ವಿಚಾರಗಳಾ? ಗ್ರಾಮಸಭೆಗಳಿಗೆ ಅಷ್ಟು ಶಕ್ತಿ ಇವೆಯೇನು? ಹಾಗಾದರೆ ಸಾಮಾನ್ಯ ಗ್ರಾಮಸಭೆಗಳಿಗೂ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳಿಗೂ ಇರುವ ವ್ಯತ್ಯಾಸವೇನು? ಇಷ್ಟಕ್ಕೂ ಮಕ್ಕಳಿಗೂ ಪಂಚಾಯಿತಿಗೂ ಏನು ಸಂಬಂಧ? ಪಂಚಾಯಿತಿಗಳಲ್ಲಿ ಇಂತಹದೊಂದು ಅವಕಾಶ ನಿಜಕ್ಕೂ ಇದೆಯೇ... ಇದ್ದರೆ ಇದು ಪರಿಣಾಮಕಾರಿಯಾಗಿ ನಡೆಯುತ್ತಿದಿಯೇ? ಇದೆಲ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಜವಾಬ್ದಾರಿಯಲ್ಲವೇ ಎಂಬ ಹಲವಾರು ವಿಚಾರಗಳು ನಿಮ್ಮಲ್ಲಿ ಮೂಡುತ್ತಿದ್ದರೆ ಖಂಡಿತವಾಗಿಯೂ ಈ ಲೇಖನ ನೀವು ಓದಲೇಬೇಕು. ಮಕ್ಕಳು ಎಲ್ಲ ಸಮುದಾಯಗಳ ಅವಿಭಾಜ್ಯ ಅಂಗ. ಮಕ್ಕಳ ಉಳಿವು, ಅಭಿವೃದ್ಧಿ ಮತ್ತು ರಕ್ಷಣೆ ಎಲ್ಲ ಸಮುದಾಯಗಳ ಕರ್ತವ್ಯ. ಸರ್ಕಾರಗಳ ಬಹುತೇಕ ಯೋಜಿತ ಮತ್ತು ಯೋಜನೇತರ ಕಾರ್ಯಕ್ರಮಗಳು ಮಕ್ಕಳನ್ನೇ ಉದ್ದೇಶಿಸಿದೆ. ಇಂತಹ ಕಾರ್ಯಕ್ರಮಗಳ ಜಾರಿ ಆಗುತ್ತಿರುವುದು ತಳಮಟ್ಟದ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ. ಅದೇ ರೀತಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ಗುರುತಿಸಿ ಅಂತಹವುಗಳನ್ನು ತಡೆದು ಮಕ್ಕಳನ್ನು ರಕ್ಷಿಸುವಲ್ಲಿ ಗ್ರಾಮಪಂಚಾಯಿತಿಗಳಿಗೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಆಹಾರ ವಿತರಣೆ ಮತ್ತು ನಾಗರೀಕ ಸರಬರಾಜು ಇಲಾಖೆ, ಸಮಾಜ ಕಲ್ಯಾಣ ಹೀಗೆ ಮೊದಲಾದ ಎಲ್ಲಾ ಇಲಾಖೆಗಳ ಗುರುತರವಾದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ದೇಶದಲ್ಲೆ ಮೊದಲ ಬಾರಿಗೆ ಐತಿಹಾಸಿಕ ಸುತ್ತೋಲೆಯನ್ನು ಹೊರಡಿಸುವುದರ ಮೂಲಕ ಭಾರತ ಸರ್ಕಾರ ಸಹಿ ಮಾಡಿರುವ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಬದ್ಧತೆ ದೊರೆಯಿತೆಂದು ಹೇಳಬಹುದು. ಆ ಮೂಲಕ ಮಕ್ಕಳು ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟಿರುವುದು ಮಾತ್ರ ಅಲ್ಲ ಎಂಬ ನಂಬಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತೊಡೆದುಹಾಕಿತು ಎಂದು ಹೇಳಬಹುದು. ಇಂತಹದೊಂದು ಮಹತ್ವದ ಸುತ್ತೋಲೆ ಬಂದರು ಇಂದಿಗೂ ಇದರ ಬಗ್ಗೆ ಸಾಕಷ್ಟು ಜನರಿಗೆ, ಪಂಚಾಯತಿಗಳಿಗೆ, ಸಂಘ ಸಂಸ್ಥೆಗಳಿಗೆ ತಿಳಿದಿಲ್ಲ, ತಿಳಿದಿದ್ದರೂ ಆ ಸುತ್ತೋಲೆ ಯಾವಾಗ ಬಂದಿತು, ಆ ಸುತ್ತೋಲೆಯಲ್ಲಿ ಸರ್ಕಾರ ಏನು ಹೇಳಿದೆ? ಯಾರ ಜವಾಬ್ದಾರಿಗಳೇನು ಎಂಬ ಮೊದಲಾದ ವಿಚಾರಗಳು ಕಣ್ಮರೆಯಾಗುತ್ತಿವೆ, ಕೆಲವು ಪಂಚಾಯಿತಿಗಳು ಮತ್ತು ಸಂಘ ಸಂಸ್ಥೆಗಳು ಅವರವರ ಕಲ್ಪನೆಗಳಿಗೆ ಬಂದಂತೆ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿದ ಸುತ್ತೋಲೆಯ ಪರಿಚಯ, ಅದರಲ್ಲಿರುವ ಮುಖ್ಯ ಅಂಶಗಳು ಏನು, ನಮ್ಮ ನಿಮ್ಮ ಜವಾಬ್ದಾರಿಗಳೇನು ಇವೇ ಮೊದಲಾದವುಗಳನ್ನು ಪರಿಚಯಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯವು ಗ್ರಾಪ 367 ಗ್ರಾಪಂಅ 2006 ದಿನಾಂಕ: 18-9-2006 ಮಕ್ಕಳ ಹಕ್ಕುಗಳನ್ನು ಕುರಿತು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಮಕ್ಕಳ ಗ್ರಾಮ ಸಭೆ ಏರ್ಪಡಿಸುವ ಕುರಿತು ಮತ್ತು ಸಂಖ್ಯೆ: ಗ್ರಾಅಪ 638 ಗ್ರಾಪಂಅ 2007 ದಿನಾಂಕ: 30-10-2007 ಮಕ್ಕಳ ಗ್ರಾಮ ಸಭೆಯ ರೂಪುರೇಷೆಗಳ ಬಗ್ಗೆ ಮಾರ್ಗಸೂಚಿ ಕುರಿತು ಕರ್ನಾಟಕದ ಎಲ್ಲಾ ಪಂಚಾಯಿತಿಗಳಿಗೂ ಸುತ್ತೋಲೆಗಳನ್ನು ಹೊರಡಿಸಿದೆ. ಇದರಂತೆ ಮಕ್ಕಳನ್ನು ಹಾಗೂ ಮಕ್ಕಳ ವಿಚಾರಗಳನ್ನು ಕೇಂದ್ರೀಕರಿಸಿಕೊಂಡು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ಪ್ರತಿ ವರ್ಷ ನವೆಂಬರ್ 13ರಿಂದ 30ರವರೆಗೆ ಮಕ್ಕಳ ಹಕ್ಕಗಳ ಸಪ್ತಾಹವನ್ನು ಹಮ್ಮಿಕೊಳ್ಳುವಂತೆ ಹಾಗೂ ಈ ದಿನಗಳಲ್ಲಿ ವಿಶೇಷವಾಗಿ ಒಂದು ದಿನ ಮಕ್ಕಳ ಹಕ್ಕುಗಳ ಬಗ್ಗೆ, ಗ್ರಾಮಸ್ಥರು, ಪಾಲಕರು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮಕ್ಕಳನ್ನೊಳಗೊಂಡ ಗ್ರಾಮಸಭೆಗಳನ್ನು ಏರ್ಪಡಿಸಲು ಸರ್ಕಾರ ನಿರ್ಧರಿಸಿದೆ. ಈ ಗ್ರಾಮ ಸಭೆಯಲ್ಲಿ ವಿಶೇಷವಾಗಿ ಕೆಳಕಂಡ ಅಂಶಗಳನ್ನು ಸಹ ಚರ್ಚಿಸಲು ಸೂಚಿಸಲಾಗಿದೆ.
ಎಲ್ಲಾ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಮಕ್ಕಳ ಬಗ್ಗೆ ಅಂಕಿಸಂಖ್ಯೆ ಹಾಗೂ ಇನ್ನಿತರೆ ಮಾಹಿತಿಯನ್ನು ಕ್ರೋಢೀಕರಿಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಎಲ್ಲಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವೈಯಕ್ತಿಕವಾಗಿ ಗಮನಹರಿಸಿ ಮಕ್ಕಳ ಹಕ್ಕಿನ ವಿಶೇಷ ಗ್ರಾಮಸಭೆಯನ್ನು ಏರ್ಪಡಿಸಬೇಕೆಂದು ನಿರ್ದೇಶಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಇದನ್ನು ಮುಂದಿವರೆಸುತ್ತಾ ದಿನಾಂಕ : 30-10-2007ರಲ್ಲಿ ಮಕ್ಕಳ ಗ್ರಾಮಸಭೆಯ ರೂಪುರೇಷೆಗಳ ಬಗ್ಗೆ ಮಾರ್ಗಸೂಚಿ ಕುರಿತು ಕರ್ನಾಟಕದ ಎಲ್ಲಾ ಪಂಚಾಯಿತಿಗಳಿಗೂ ಸುತ್ತೋಲೆಗಳನ್ನು ಹೊರಡಿಸಿದೆ. ಇದರಲ್ಲಿರುವ ಮುಖ್ಯ ವಿಚಾರಗಳೆಂದರೆ. ಮಕ್ಕಳ ಗ್ರಾಮ ಸಭೆಯ ದಿನಾಂಕ, ಸ್ಥಳ ಮತ್ತು ಸಮಯ ನಿಗದಿ ಮಾಡುವ ಕುರಿತು ಪ್ರಸ್ತಾಪಿಸಿದೆ: ಇಲ್ಲಿ ನಾವು ತಿಳಿಯಲೇಬೇಕಾದ ವಿಚಾರಗಳೆಂದರೆ ಸಾಕಷ್ಟು ಗ್ರಾ.ಪಂಗಳು ತಮಗೆ ಇಷ್ಟ ಬಂದ ದಿನದಂದು ಮಕ್ಕಳ ಗ್ರಾಮಸಭೆಗಳನ್ನು ನಡೆಸಲು ಸೂಚಿಸುತ್ತಾರೆ, ಹೀಗೆ ಸೂಚಿಸುವುದರಿಂದ ಮಕ್ಕಳಿಗೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಈ ಗ್ರಾಮಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಸುತ್ತೋಲೆಯಲ್ಲಿ ಹೇಳಿರುವ ರೀತಿ ಯಾವುದೇ ಗ್ರಾ.ಪಂಗಳು ದಿನಾಂಕ, ಸ್ಥಳ ಮತ್ತು ಸಮಯ ನಿಗದಿ ಮಾಡುವ ಮೊದಲು ಒಂದು ಪೂರ್ವಭಾವಿ ಸಭೆಯನ್ನು 15 ದಿನ ಮುಂಚಿತವಾಗಿ ಕರೆಯಬೇಕಾಗುತ್ತದೆ. ಈ ಸಭೆಗೆ ಗ್ರಾ.ಪಂ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ತಪ್ಪದೆ ಕರೆಯಬೇಕಾಗುತ್ತದೆ. ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರು, ಆರೋಗ್ಯ ಇಲಾಖೆಯಿಂದ ಆ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಎ.ಎನ್.ಎಂ ಮತ್ತು ವೈದ್ಯಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಪ್ರತಿನಿಧಿ, ಪೊಲೀಸ್ ಇಲಾಖೆಯ ಪ್ರತಿನಿಧಿ, ತಾಲ್ಲೂಕು ಪಂಚಾಯಿತಿಯಿಂದ ನೇಮಕವಾಗಿರುವ ನೋಡೆಲ್ ಆಫೀಸರ್ ಅಥವಾ ಕಾರ್ಯನಿರ್ವಾಹಕ ಅಧಿಕಾರಿ, ಪಡಿತರ ಮತ್ತು ನಾಗರೀಕ ಸರಬರಾಜು ಇಲಾಖೆಯ ಪ್ರತಿನಿಧಿ, ಕಾರ್ಮಿಕ ಇಲಾಖೆಯ ಪ್ರತಿನಿಧಿ ಇವೇ ಮೊದಲಾದ ಇಲಾಖೆಗಳ ಜೊತೆ ಆ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಘಸಂಸ್ಥೆಗಳಿಂದ ಪ್ರತಿನಿಧಿಗಳನ್ನು ಆಹ್ವಾನಿಸಿ ಎಲ್ಲರ ಸಹಮತದೊಂದಿಗೆ ದಿನಾಂಕ, ಸಮಯ, ಸ್ಥಳ ನಿರ್ಧರಿಸಬೇಕಾಗುತ್ತದೆ.
ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮ ಪಂಚಾಯಿತಿಯು ತಪ್ಪದೆ ವಿಡಿಯೋ ಚಿತ್ರೀಕರಣ ಮಾಡಿ, ಸಿ.ಡಿ ಯನ್ನು ಕಾರ್ಯನಿರ್ವಾಹಕಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ಎಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಪ್ರತಿ ಗ್ರಾಮ ಪಂಚಾಯಿತಿಯಿಂದ ಮಕ್ಕಳ ಗ್ರಾಮ ಸಭೆ ಬಗ್ಗೆ ತಾಲ್ಲೂಕುವಾರು ವರದಿ ಪಡೆದು ಕ್ರೋಢೀಕರಿಸಿ ವಿಡಿಯೋ ಚಿತ್ರಿಕರಣಕ್ಕೆ ಸಂಬಂಧಿಸಿದಂತೆ, ಒಂದು ಸಿ.ಡಿ ಯನ್ನು ತಯಾರಿಸಿ ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಎಂದು ಈ ಸುತ್ತೋಲೆ ಸ್ಪಷ್ಟವಾಗಿ ತಿಳಿಸಿರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸುವ ಕರ್ನಾಟಕ ವಿಕಾಸ ಪುಸ್ತಕವನ್ನು ನೋಡಬಹುದು. (ಇದರ ಕಂಪ್ಯೂಟರ್ ಪ್ರತಿಗಳು ವೆಬ್ ಸೈಟ್ ನಲ್ಲಿ ಲಭ್ಯ) ಪ್ರಸ್ತುತ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳ ಹಾದಿಯಲ್ಲಿ ಎದುರಾಗುತ್ತಿರುವ ಸವಾಲುಗಳು :
ಖಂಡಿತಾ ನಿಮ್ಮ ಊರಿನಲ್ಲೂ ಈ ರೀತಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಆಯೋಜಿಸುತ್ತೀರ ಅಲ್ವಾ. ಹಾಗಾದರೆ ಇಂದೇ ನಿಮ್ಮ ಗ್ರಾಮ ಪಂಚಾಯಿತಿ ಭೇಟಿಕೊಡಿ, ಈ ವಿಚಾರಗಳನ್ನು ತಿಳಿಸಿ ಮತ್ತು ನಿಮ್ಮ ಪಂಚಾಯಿತಿಯನ್ನು ಮಕ್ಕಳ ಸ್ನೇಹಿ ಪಂಚಾಯಿತಿಯಾಗಿಸಿ. ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯು ಮಕ್ಕಳು ಮತ್ತು ಪಂಚಾಯಿತಿಗಳು ಅಡಿಯಲ್ಲಿ, ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ಎಲ್ಲೆಡೆ ನಡೆಸುವಂತಾ ಕೆಲಸದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಪೂರಕ ಸಾಮಗ್ರಿಗಳನ್ನು/ಮಾಹಿತಿ ಸಂಪನ್ಮೂಲಗಳನ್ನು, ತರಬೇತಿ, ಕಾರ್ಯಾಗಾರ ಮತ್ತು ಸರ್ಕಾರದ ಜೊತೆ ವಕೀಲಿ, ಸಮಾಲೋಚನೆಗಳನ್ನು ನಡೆಸುತ್ತಾ ಕ್ರಿಯಾತ್ಮಕವಾಗಿ ನಿರ್ವಹಿಸುವುದನ್ನು ಮತ್ತು ಇದರ ಕುರಿತು ಪ್ರಕಟಿಸಿರುವ ಮಾಹಿತಿಗಳನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.
1 Comment
8/5/2023 08:00:06 am
Hi sir I'm Rahul from raibag. Please give me your contact number
Reply
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|