ಮುಂದಿನ ನೂರು ವರ್ಷಗಳಲ್ಲಿ ಮನುಕುಲ ನಾಶವಾಗಲಿದೆಯೆಂದು ಕೆಲವು ಸಮಯದ ಹಿಂದೆ ಆಸ್ಟ್ರೇಲಿಯಾದ ವಿಜ್ಞಾನಿಯೊಬ್ಬರು ಭವಿಷ್ಯ ನುಡಿದಿದ್ದರು. ಇವರ ಲೆಕ್ಕಾಚಾರದ ಪ್ರಕಾರ ಈ ನಾಶಕ್ಕೆ ಕಾರಣ ಎಗ್ಗಿಲ್ಲದ ಬಳಕೆ, ಅಂದರೆ ಮನುಷ್ಯರ ಅತಿಭೋಗದ ಬದುಕು. ಕೈಗಾರಿಕೀಕರಣದ ಬಳಿಕ ಮಾನವ ಆಂತ್ರೋಪೊಸೀನ್ ಎಂಬ ಅನಧಿಕೃತ ವೈಜ್ಞಾನಿಕ ಕಾಲಘಟ್ಟವನ್ನು ಪ್ರವೇಶಿಸಿದ್ದಾನಂತೆ. ಈ ಕಾಲಘಟ್ಟದಲ್ಲಿ ಮನುಷ್ಯ ಅಗತ್ಯ ಮತ್ತು ಆಸೆ ಗಳಿಗಾಗಿ ನಿಸರ್ಗದ ಸಂಪತ್ತನ್ನು ಕೃತಕ ಸಂಪತ್ತನ್ನಾಗಿ ಪರಿವರ್ತಿಸುತ್ತಾ, ಪರಿಸರವನ್ನು ಮಾಲಿನ್ಯ ಮಾಡುತ್ತಾ, ಅಸಮತೋಲನವನ್ನು ಉಂಟು ಮಾಡುತ್ತಾ ಸಾಗುತ್ತಾನೆ. ಈ ಮಾಲಿನ್ಯ, ಅಸಮತೋಲನದಿಂದ ಮತ್ತೆ ನೈಸರ್ಗಿಕ ಸಂಪನ್ಮೂಲದ ಅಭಾವ, ಆಹಾರದ ಅಭಾವ ಉಂಟಾಗಿ; ಅನೇಕಾನೇಕ ಕಾಯಿಲೆಗಳು ಬಂದು; ಸಾಮಾಜಿಕ ಪ್ರಕ್ಷುಬ್ದತೆಯು ಉಂಟಾಗಿ ಮನುಕುಲದ ನಾಶ ಆಗಬಹುದು ಎಂಬುದನ್ನು ಯಾರಾದರೂ ಊಹಿಸಬಹುದು. ಆದರೆ ಉಂಟಾಗುವ ತೊಂದರೆಗಳು ಮತ್ತು ಅವುಗಳ ಕಾರಣಗಳ ಅರಿವು ಆದಂತೆಲ್ಲಾ ಮತ್ತಷ್ಟು ವೈಜ್ಞಾನಿಕ ಸಂಶೋಧನೆಗಳನ್ನು ಮಾಡಿ, ಪರಿಹಾರ ಹುಡುಕಿಕೊಳ್ಳಬಲ್ಲೆವು ಎಂದು ಜನರು ನಂಬಿಕೊಂಡಿದ್ದಾರೆ. ಇನ್ನು ಕೆಲವು ವಿಜ್ಞಾನಿಗಳು ಮತ್ತು ಇತರ ಜನರು ಪ್ರಕೃತಿಯನ್ನು ಗೆಲ್ಲಬಲ್ಲೆವೆಂಬ ಅಹಂನಿಂದ ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಸಾಗದೆ ಅದರ ವಿರುದ್ಧವಾಗಿ ಸಾಗುವುದು ಇನ್ನಷ್ಟು ದುರಂತಕ್ಕೆ ಕಾರಾಣವಾಗಬಹುದು. ಹೀಗಿರುವಾಗ ಈ ಭೂಮಿಯ ಬಿಸಿಯನ್ನು ಕಡಿಮೆ ಮಾಡುವುದು, ಮಾಲಿನ್ಯವನ್ನು ತಡೆಗಟ್ಟುವುದು, ಅರಣ್ಯ ರಕ್ಷಣೆ ಮಾಡುವುದು ಅನಿವಾರ್ಯವೆಂದು ಎಲ್ಲರಿಗೆ ತಿಳಿದರೂ ಅದಕ್ಕೆ ತಕ್ಕಂತೆ ಜೀವನ ಶೈಲಿ ಬದಲಾಯಿಸಿಕೊಳ್ಳವುದು ಕಷ್ಟವೆನಿಸುವುದರಿಂದ ಎಲ್ಲರೂ ಜಾಣ ಕಿವುಡರಾಗುವ ಸಾಧ್ಯತೆಯೇ ಹೆಚ್ಚು. ನಾಳೆಯಿಂದ ಮಾಡೋಣ ಅನಿಸುತ್ತದೆ. ನೀನು ಮಾಡು, ಅವರು ಅಲ್ಲಿ ಮಾಡಲಿ ಎಂದೆನಿಸುತ್ತದೆ. ಬಹಳ ದೇಶ-ಜನಗಳು ಅಭಿವೃದ್ಧಿಯಾಗಿ ವಿಮಾನದಲ್ಲಿ ಹಾರಾಡಿಕೊಂಡಿರುವಾಗ, ಉಳಿದವರು ಹಾರಲು ಹಾತೊರೆದು ಕಾದು ನಿಂತಿರುವಾಗ ಸೈಕಲ್ಲಲ್ಲಿ ಸವಾರಿ ಮಾಡಲು ಯಾರು ತಯಾರಿದ್ದಾರೆ! ನಮ್ಮ ಜನ ನಾಯಕರಂತೂ ಸೈಕಲ್ಲು ತುಳಿಯಿರಿ ಎಂದು ಜನತೆಗೆ ಕರೆ ಕೊಡುವುದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅವರು ಎಲ್ಲರನ್ನೂ ವಿಮಾನ ಹತ್ತಿಸಲು ಹೊರಟವರಲ್ವೇ!
ಇಷ್ಟು ದೊಡ್ಡ ಪೀಠಿಕೆಯೊಂದಿಗೆ ಇಲ್ಲಿ ಪ್ರಸ್ತಾಪಿಲು ಪ್ರಯತ್ನಿಸಿರುವುದು ಇಲ್ಲಿ ಈಗ ನಾವು ಎಸಗಬಹುದಾದ ಒಂದು ದೊಡ್ಡ ತಪ್ಪಿನ ಬಗ್ಗೆ. ಅದು ಪಶ್ಚಿಮ ಘಟ್ಟವನ್ನು ನಾಶ ಮಾಡಲು ಹೊರಟಿರುವ ಕರ್ನಾಟಕ ಸರಕಾರದ ಒಂದು ವಿದ್ಯುತ್ ಯೋಜನೆಯ ಬಗ್ಗೆ. ಅದೇ ಗುಂಡ್ಯ ಜಲ ವಿದ್ಯುತ್ ಯೋಜನೆ. ಕೇರಳ, ಕರ್ನಾಟಕ, ಗೋವಾ ಮಹಾರಾಷ್ಟ್ರ ರಾಜ್ಯಗಳಲ್ಲಿ ಉತ್ತರ ದಕ್ಷಿಣವಾಗಿ ಹಬ್ಬಿಕೊಂಡಿರುವ ದಟ್ಟ ಹಾಗೂ ನಿತ್ಯ ಹಸಿರಾಗಿರುವ ಕಾಡನ್ನು ಹೊಂದಿರುವ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಹಾಗೂ ವಿಶಿಷ್ಟ ಜೀವವೈವಿಧ್ಯತೆಯುಳ್ಳ ಭೂಮಿಯ ಪ್ರಮುಖ ಹದಿನೆಂಟು ಪ್ರದೇಶಗಳಲ್ಲಿ ಒಂದು ಎಂದು ಹೇಳಲಾಗಿದೆ. ಭಾರತದ ಹವಾಗುಣ, ಮಳೆಪ್ರಮಾಣ, ನೀರಿನ ಲಭ್ಯತೆ ಮತ್ತು ಆಮೂಲಕ ಪಶ್ಚಿಮದ ಕರಾವಳಿ ಮತ್ತು ಪೂರ್ವದ ಬಯಲು ಪ್ರದೇಶಗಳ ಜನಜೀವನದ ಮೇಲೆ ಪಶ್ಚಿಮ ಘಟ್ಟಗಳ ಪ್ರಭಾವವಿದೆ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಪಶ್ಚಿಮ ಮತ್ತು ಪೂರ್ವಾಭಿಮುಖವಾಗಿ ಹರಿಯುವ ನದಿಗಳು ಆಯಾ ಪ್ರದೇಶದ ಜನರ ಕೃಷಿ ಮತ್ತು ಪೂರಕ ಜೀವನಾಧಾರ ಚಟುವಟಿಕೆಗಳನ್ನು ಮತ್ತು ಸಂಸ್ಕೃತಿಯನ್ನು ರೂಪಿಸುತ್ತವೆ. ಕಾರಂತರ ಬೆಟ್ಟದ ಜೀವಕ್ಕೆ ಜೀವ ಬಂದಿದ್ದು, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಓಡಾಡಿದ್ದು ಈ ಕಾಡುಗಳಲ್ಲೇ! ಇಂತಹ ಪಶ್ಚಿಮ ಘಟ್ಟದ ಅರಣ್ಯವನ್ನು ಈಗಾಗಲೇ ಅನೇಕಾನೇಕ ಅಭಿವೃದ್ಧಿ ಯೋಜನೆಗಳಿಗಾಗಿ, ರಸ್ತೆಗಳ ನಿರ್ಮಾಣಕ್ಕಾಗಿ, ಗಣಿಗಾರಿಕೆಗಾಗಿ ನಾಶಮಾಡಲಾಗಿದೆ. ಇದೀಗ ಇಲ್ಲಿನ ನದಿ ತೊರೆಗಳಿಗೆ ಅಡ್ಡಲಾಗಿ ಕಟ್ಟೆಗಳನ್ನು ಕಟ್ಟಿ ವಿದ್ಯುತ್ ಉತ್ಪಾದಿಸುವ ಯೋಜನೆಗಳ ಮೂಲಕ ಉಳಿದಿರುವ ಅಲ್ಪ ಸ್ವಲ್ಪ ಕಾಡನ್ನು ನಾಶ ಮಾಡಲು ನಮ್ಮ ಸರಕಾರವೇ ಮುಂದೆ ನಿಂತಿದೆ. ಗುಂಡ್ಯ ಜಲ ವಿದ್ಯುತ್ ಯೋಜನೆ (GHEP) ಕರ್ನಾಟಕ ಸರಕಾರದ ಒಂದು ಯೋಜನೆ. ಬೆಟ್ಟ ಕುಮ್ರಿ ಮತ್ತು ಹೊಂಗದಹಳ್ಳ ನದಿಗಳಿಗೆ ಅಡ್ಡಲಾಗಿ ಕಟ್ಟಲು ಹೊರಟಿರುವ ಅಣೆಕಟ್ಟೆಗಳಿಂದ 1900 ಎಕರೆ ಅರಣ್ಯ ಮುಳುಗಡೆಯಾಗಲಿದೆ. ಈ ಯೋಜನೆಯಲ್ಲಿ 21 ಕಿ.ಮೀ. ದೂರದ ಸುರಂಗವನ್ನೂ ನಿರ್ಮಾಣ ಮಾಡಲಾಗುವುದಂತೆ. ಈ ಯೋಜನೆಯು ಅನುಷ್ಠಾನವಾದರೆ ಅರಣ್ಯ ಮತ್ತು ಜೀವ ವೈವಿಧ್ಯ ನಾಶವಾಗಲಿದೆಯಲ್ಲದೆ ಹರಿವ ನೀರಿನಲ್ಲಾಗುವ ಬದಲಾವಣೆಯು ಅನೇಕ ಸಮಸ್ಯೆಗಳಿಗೆ ಕಾರಣವಾಗಲಿದೆ. ಏನೇ ಮಾಡಿದರೂ ಇಲ್ಲಿ ನಾಶವಾಗುವ ಅರಣ್ಯ ಮತ್ತು ಜೀವವೈವಿದ್ಯವನ್ನು ಮತ್ತೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಗುಂಡ್ಯ ಅರಣ್ಯ ಪ್ರದೇಶದಲ್ಲಿ ವಿಶಿಷ್ಠವಾದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿವೆ. ಈ ಪ್ರದೇಶಕ್ಕೆ ಸ್ಥಳ ನಿರ್ದಿಷ್ಟವಾದ (Endemic) 67 ವಿಶಿಷ್ಟ ಜಾತಿಯ ಸಸ್ಯ ಪ್ರಭೇದಗಳಿವೆ. ರಾಳದೂಪದ ಮರ (Veteria Indica) ಪಶ್ಚಿಮಘಟ್ಟಗಳಿಗೆ ಮಾತ್ರ ಸೀಮಿತವಾದದ್ದು. ಈ ಅರಣ್ಯವು ಅಪರೂಪದ ಸಿಂಹಬಾಲದ ಕೋತಿ, ಹುಲಿ, ಆನೆ, ಅನೇಕ ಜಾತಿಯ ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಟ್ರಾವಂಕೂರ್ ಹಾರುವ ಅಳಿಲು (Petinomys fuscocapillus) ಕಾಣಸಿಗುವ ಕರ್ನಾಟಕದ ಮೂರೇ ಮೂರು ತಾಣಗಳಲ್ಲಿ ಗುಂಡ್ಯವೂ ಒಂದು. ಅರಣ್ಯ ನಾಶದಿಂದ ಪ್ರಾಣಿಗಳ ಚಲನವಲನಗಳಿಗೆ ತೊಂದರೆಯಾಗುತ್ತದೆ. ಮಿತಿ ಮೀರಿದ ಅರಣ್ಯ ನಾಶದಿಂದಾಗಿಯೇ ಕಾಡಾನೆಗಳು ನಾಡಿಗೆ ನುಗ್ಗುತ್ತಿವೆ ಎಂಬ ಅಭಿಪ್ರಾಯ ಬಲವಾಗುತ್ತಿದೆ. ಕಾಡಾನೆಗಳ ನಾಶದಿಂದ ಬೆಳೆಗಳ ನಾಶವಲ್ಲದೆ, ಜನರ ಪ್ರಾಣ ಹಾನಿಯಾಗುತ್ತಿದೆ. ಆನೆಗಳ ಹಾವಳಿಯಿಂದ ಸತ್ತವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹುಲಿಗಳು ವಾಸಿಸುವ ಪ್ರದೇಶವಿದಾಗಿದ್ದು ಇಲ್ಲಿನ ಹುಲಿ ಸಂತತಿ ನಾಶವಾಗುತ್ತಿದೆ. ಗುಂಡ್ಯ ಮತ್ತು ಕೊಡಗಿನ ಈ ಭಾಗದಲ್ಲಿ ಮನುಷ್ಯ-ಕಾಡು ಪ್ರಾಣಿಗಳ ಪೈಪೋಟಿ ಇದೆ. ಆದರೆ ಮನುಷ್ಯ ಮೇಲುಗೈ ಸಾಧಿಸುವುದು ಅಪಾಯಕಾರಿ ಮತ್ತು ಆ ಜಯ ಕ್ಷಣಿಕ. ಭಾರತ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ಸ್ಥಳ ನಿರ್ದಿಷ್ಟವಾದ ಎರಡು ಮತ್ತು ಅಪಾಯದ ಅಂಚಿನಲ್ಲಿರುವ ಎರಡು ಜಾತಿಯ ಮೀನುಗಳೂ ಸೇರಿದಂತೆ 14 ಬಗೆಯ ಸಿಹಿನೀರಿನ ಮೀನಿನ ಜಾತಿಗಳನ್ನು ಗುಂಡ್ಯ ಭಾಗದಲ್ಲಿ ಗುರುತಿದ್ದಾರೆ. ಆದರೆ ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮವನ್ನು ಅಧ್ಯಯನವನ್ನು ಮಾಡಿದ್ದ ಪಾರಿಸರಿಕ ಪರಿಣಾಮ ಅಧ್ಯಯನ ಸಮಿತಿಯು (EIA) ಇಲ್ಲಿ ಯಾವುದೇ ವಿಶೇಷವಾದ ಜೀವವೈವಿಧ್ಯವಿಲ್ಲವೆಂಬಂತೆ ವರದಿ ನೀಡಿದ್ದು ಅದು ಅಧ್ಯಯನ ಮಾಡಲು ಹೋಗುವಾಗ ದಾರಿ ತಪ್ಪಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಇಲ್ಲಿ ಕಾಡಿದೆ, ಯಥೇಚ್ಛ ಮಳೆ, ಹರಿವ ನೀರು, ಇದರೊಡನೆ ಪ್ರಾಣಿ ಪಕ್ಷಿ ಸಂಕುಲ ಒಂದು ವಿಶಿಷ್ಟ ಜೀವಜಾಲವಿದೆ. ವಿಶಿಷ್ಟ ಜಲ ಚಕ್ರವಿದೆ. ಇಲ್ಲಿ ಹರಿದು ಹೋಗುವ ನೀರು ವೇಸ್ಟ್ ಎಂದು ಅಂದುಕೊಳ್ಳುವ ದಡ್ಡತನವೂ ನಮ್ಮಲ್ಲಿದೆ. ಅಷ್ಟು ಪ್ರಮಾಣದ ನೀರು ಆ ಸ್ವರೂಪದಲ್ಲಿ ಹರಿದು ಹೋಗುವುದರಿಂದಲೇ ಆ ಭಾಗದಲ್ಲಿ ಮತ್ತು ಕರಾವಳಿಯಲ್ಲಿ, ಅಲ್ಲಿನ ಅಳಿವೆ-ಸಾಗರದ ಭಾಗದಲ್ಲಿ ಒಂದು ವಿಶಿಷ್ಟವಾದ ಜೀವನಪದ್ಧತಿ, ಜೀವಜಾಲವಿದೆ ಎಂಬುದನ್ನು ನಾವು ತಿಳಿಯಬೇಕು. ಇಲ್ಲಿನ ಪ್ರಕೃತಿಯ ಮೇಲೆ ನಡೆಯುವ ಯಾವುದೇ ಅತಿಕ್ರಮಗಳು ಜನ ಜೀವನ ಮತ್ತು ಜೀವಜಾಲದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತದೆ ಎಂಬ ಅರಿವು ನಮಗಿರಬೇಕು. ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಿಗಳಾಗಿದ್ದ ಜೈರಾಮ್ ರಮೇಶ್ ಅವರ ಸಮಯ ಮತ್ತು ಪರಿಸರ ಪ್ರಜ್ಞೆಯಿಂದಾಗಿ ಗುಂಡ್ಯ ಯೋಜನೆಗೆ ಹಸಿರು ನಿಶಾನೆ ಸಿಗಲಿಲ್ಲ. ಪಶ್ಚಿಮ ಘಟ್ಟ ಮಾತ್ರವಲ್ಲ, ಭಾರತದ ಯಾವುದೇ ಬಾಗದಲ್ಲೂ ಅರಣ್ಯ ಮತ್ತು ಜೀವ ವೈವಿಧ್ಯ ನಾಶವಾಗುವ ಸಾಧ್ಯತೆಗಳಿರುವ ಕಡೆಗೆ ಇಂತಹ ಯೋಜನೆಗಳಿಗೆ ಅನುಮತಿ ನೀಡಲಾಗುವುದಿಲ್ಲವೆಂದು ಅವರು ಈ ಹಿಂದೆ ಹೇಳಿಕೆಯೊಂದನ್ನೂ ನೀಡಿದ್ದರು. ಈ ಯೋಜನೆಯ ಕುರಿತು ಅಧ್ಯಯನ ಮಾಡಿ ವರದಿ ಒಪ್ಪಿಸಲು ಪ್ರೊ. ಮಾಧವ ಗಾಡ್ಗೀಳ್ ಅವರ ನೇತೃತ್ವದ ಪಶ್ಚಿಮ ಘಟ್ಟ ಪರಿಸರ ಪರಿಣತರ ಸಮಿತಿಯ ಜವಾಬ್ದಾರಿ ನೀಡಿದ್ದು ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯಕ್ಕೆ ವರದಿ ನೀಡಿದೆ. ಬಲ್ಲ ಮೂಲಗಳ ಪ್ರಕಾರ ಉದ್ಧೇಶಿತ ಯೋಜನೆಯ ಅಡಿ ಬರುವ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಇಂತಹ ಯೋಜನೆಗಳನ್ನು ತರುವುದು ಸೂಕ್ತವಲ್ಲವೆಂದೇ ಸಮಿತಿಯು ವರದಿ ನೀಡಿದೆಯಂತೆ. ಈ ನಡುವೆ ಕಳೆದ ಎಪ್ರಿಲ್ ನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದನ್ನು ನೀಡಿ ಪಶ್ಚಿಮಘಟ್ಟಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾದ ಸುಮಾರು 72 ಜಲ ವಿದ್ಯುತ್ ಘಟಕಗಳ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಿದೆ. ರಾಜ್ಯ ವನ್ಯ ಜೀವಿ ಮಂಡಳಿ ಉಪಾಧ್ಯಕ್ಷರಾಗಿರುವ ಅನಿಲ್ ಕುಂಬ್ಳೆ ಅವರು ಪ್ರಸ್ತಾವಿತ ಜಲ ವಿದ್ಯುತ್ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಪಶ್ಚಿಮ ಘಟ್ಟಗಳ ಈ ಅರಣ್ಯವು ಇತರ ಕೆಲವು ರಾಷ್ಟ್ರೀಯ ವನ್ಯ ಜೀವಿ ಉದ್ಯಾನಗಳಿಗಿಂತಲೂ ದಟ್ಟವಾಗಿದೆ, ಈ ಅರಣ್ಯವನ್ನು ಸಂರಕ್ಷಿಸಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಗುಂಡ್ಯ ಭಾಗದ ಜನರು, ಗ್ರಾಮಪಂಚಾಯತ್ ಗಳು ಯೋಜನೆಯ ವಿರುದ್ಧ ಇವೆ. ಅಲ್ಲಿನ ಜನರ ಸಂಘಟನೆಯಾದ ಮಲೆನಾಡು ಜನಪರ ಹೋರಾಟ ಸಮಿತಿಯು ಯೋಜನೆಯ ವಿರುದ್ಧ ಯಶಸ್ವಿಯಾಗಿ ಹೋರಾಟ ನಡೆಸಿದ್ದು ಯೋಜನೆಯನ್ನು ಅನುಷ್ಠಾನಗೊಳಿಸಲು ನಡೆಸುವ ಯಾವುದೇ ಹುನ್ನಾರಗಳ ಬಗ್ಗೆ ಎಚ್ಚರಿಕೆಯಿಂದ ಗಮನಿಸುತ್ತಿದೆ. ವೃತ್ತಿಯಲ್ಲಿ ವಕೀಲರೂ, ಯೋಜನೆಯ ವ್ಯಾಪ್ತಿಗೆ ಬರುವ ಹಳ್ಳಿಯ ರೈತರೂ ಆಗಿರುವ ಯುವ ಹೋರಾಟಗಾರ ಹೆಚ್.ಎ.ಕಿಶೋರ್ ಕುಮಾರ್ ಅವರು ಮತ್ತು ಅವರ ತಂಡ ಬಹಳ ವ್ಯವಸ್ಥಿತವಾದ ಸಂಘಟನೆ ಮತ್ತು ಕಾರ್ಯತಂತ್ರಗಳ ಮೂಲಕ ಪರಿಸರ ಮತ್ತು ಜನಸ್ನೇಹಿ ಹೋರಾಟವೊಂದನ್ನು ಕಟ್ಟಿದ್ದಾರೆ. ವೈಜ್ಞಾನಿಕ ಅಧ್ಯಯನ, ಮಾಹಿತಿ ಹಕ್ಕು ಕಾಯಿದೆ - ಕಾನೂನು ಬಳಕೆ, ಮಾದ್ಯಮ ವಕಾಲತ್ತು ಮತ್ತು ಸಮಾನ ಮನಸ್ಕರ ಜೊತೆಗೆ ಸಂಪರ್ಕಜಾಲದ ಮೂಲಕ ಇದೊಂದು ಯಶಸ್ವಿ ಹೋರಾಟವಾಗುವ ಕೊನೆಯ ಹಂತದಲ್ಲಿದೆ. ವಿರೋಧಿಸುವುದಕ್ಕಷ್ಟೇ ಸೀಮಿತವಾಗದ ಈ ಚಳುವಳಿಯು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ರಚನಾತ್ಮಕ ಚಟುವಟಿಕೆಗಳನ್ನೂ ಕೈಗೆತ್ತಿಕೊಂಡಿದೆ. ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಸಕಲೇಶಪುರ ತಾಲೂಕಿನ ರೈತರು ಆನೆಗಳ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ತಮ್ಮ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿ ಎಲಿಫೆಂಟ್ ಕಾರಿಡಾರನ್ನು ಮತ್ತೆ ಪುನಶ್ಚೇನಗೊಳಿಸುವ ಪ್ರಯತ್ನದಲ್ಲಿದ್ದಾರೆ. ಇದು ಸಾಧ್ಯವಾಗಿದ್ದೇ ಆದಲ್ಲಿ ಇದೊಂದು ಹೊಸ ಬದಲಾವಣೆಗೆ ನಾಂದಿಯಾಗಲಿದೆ. ಪಶ್ಚಿಮಘಟ್ಟ ಉಳಿಸಿ ಅಭಿಯಾನವು ಆರಂಭವಾದಾಗಿನಿಂದ ಈ ಭಾಗದಲ್ಲ್ಲಿ ಅಣೆಕಟ್ಟೆಗಳನ್ನು ಕಟ್ಟಬಾರದು, ಪಶ್ಚಿಮಘಟ್ಟಗಳನ್ನು ಕಾಪಾಡಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಾ ಬರಲಾಗಿದೆ. ಈಗಾಗಲೇ ಕಟ್ಟಿರುವ ಅನೇಕ ಅಣೆಕಟ್ಟುಗಳು, ಮತ್ತಿತರ ಚಟುವಟಿಕೆಗಳು ಪಶ್ಚಿಮ ಘಟ್ಟದ ಅರಣ್ಯ ಮತ್ತು ಜೀವಸಂಕುಲವನ್ನು ಸಾಕಷ್ಟು ನಾಶ ಮಾಡಿವೆ. ಇರುವ ಒಂದಿಷ್ಟು ಹಸಿರನ್ನು ಉಳಿಸಬೇಕಾದವರು ನಾವು, ಇಲ್ಲಿ, ಈಗಲೇ! ಜನಾರ್ದನ ಕೆಸರಗದ್ದೆ ಸಹ ನಿರ್ದೇಶಕರು, ಸಂವಾದ, ಶೇಷಾದ್ರಿಪುರಂ, ಬೆಂಗಳೂರು-20 ಮೊ: 9845709825
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |