Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಪುಸ್ತಕ ಪರಿಚಯ - ಸಮುದಾಯ ಸಂಘಟಕರಿಗೊಂದು ಆಕರ ಗ್ರಂಥ

12/20/2019

0 Comments

 
ವಾಸುದೇವ ಶರ್ಮಾ ಎನ್.ವಿ.
2 ಸೆಪ್ಟೆಂಬರ್ 2018, ಬೆಂಗಳೂರು

Picture
ಪುಸ್ತಕದ ಶೀರ್ಷಿಕೆ  : ಸಮುದಾಯ ಸಂಘಟನೆ
ಲೇಖಕರು : ಡಾ. ಸಿ.ಆರ್. ಗೋಪಾಲ್
ಪ್ರಕಾಶಕರು : ನಿರುತ ಪಬ್ಲಿಕೇಷನ್ಸ್, ಬೆಂಗಳೂರು
ಐ.ಎಸ್.ಬಿ.ಎನ್. : 978-93-84262-48-8
ಪುಟಗಳು : 490
ಪ್ರಥಮ ಮುದ್ರಣ : 2018
ಆಕಾರ : ಕ್ರೌನ್ 1/4
ಬೆಲೆ : 400/-
ತಾಂತ್ರಿಕ ವಿಚಾರಗಳನ್ನು ಕುರಿತು ಯಾವುದೇ ಭಾಷೆಯಲ್ಲಿ ಸರಳವಾಗಿ ಹೇಳುವುದು ಅಷ್ಟು ಸುಲಭವಲ್ಲ. ಅದು ವೈದ್ಯಕೀಯವಿರಬಹುದು, ಇಂಜಿನಿಯರಿಂಗ್, ವಿಜ್ಞಾನ, ಮಾನವಿಕ ಶಾಸ್ತ್ರಗಳು ಅಥವಾ ಪ್ರದರ್ಶನ ಕಲೆಗಳೇ ಆಗಿರಬಹುದು. ಮೂಲತಃ ಅಂತಹ ತಾಂತ್ರಿಕ ವಿಷಯ, ವಿಚಾರಗಳನ್ನು ವಿವರಿಸಲು ಹೊರಟಾಗ, ಅದರಲ್ಲೂ ಸಾಮಾನ್ಯವಾಗಿ ಆಯಾ ಶಾಸ್ತ್ರ, ಅಧ್ಯಯನಗಳನ್ನು ಕುರಿತು ಆಯಾ ನಿರ್ದಿಷ್ಟ ಭಾಷೆಯಲ್ಲಿ, ಪರಿಸರದಲ್ಲಿ ಅಧ್ಯಯನ, ಶಿಕ್ಷಣ ಹೆಚ್ಚು ಆಗದಿದ್ದಾಗ ಎರಡು ರೀತಿಯ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದು ಪರಿಕಲ್ಪನೆಗಳನ್ನು ವಿವರಿಸಲು ನಮ್ಮ ಸುತ್ತಮುತ್ತಲಿನ ಪರಿಸರದಿಂದ ಉದಾಹರಣೆ, ಅನುಭವಗಳನ್ನು ಹೇಗೆ ಮತ್ತು ಯಾವುದರಿಂದ ಹೆಕ್ಕುವುದು ಮತ್ತು ಎರಡನೆಯದು, ಅವುಗಳನ್ನು ಅಭಿವ್ಯಕ್ತಿಪಡಿಸಲು ಬೇಕಾದ ಭಾಷೆ ಮತ್ತು ಪದ ಸಂಪತ್ತನ್ನು ಎಲ್ಲಿಂದ ತೆಗೆದುಕೊಳ್ಳುವುದು. 
ಸಮಾಜಕಾರ್ಯ ಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದ ಸಾಹಿತ್ಯ ಸೃಷ್ಟಿಯಲ್ಲಿ ಈ ಪ್ರಶ್ನೆಗಳು ಈಗಲೂ ಪ್ರಸ್ತುತ. ಇಂಗ್ಲೀಷ್ ಭಾಷೆಯಲ್ಲಿ ಹೇರಳವಾಗಿ ದೊರಕುವುದು ಪಾಶ್ಚಿಮಾತ್ಯ ಅನುಭವ ಮತ್ತು ಸಿದ್ಧಾಂತಗಳನ್ನೇ ಒಳಗೊಂಡ ಪುಸ್ತಕಗಳು. ಭಾರತೀಯ ಪುಸ್ತಕಗಳು ಇದ್ದರೂ, ಬಹುತೇಕ ತೀರಾ ಇತ್ತೀಚಿನವರೆಗೂ ವಿದೇಶಿ ಪಂಡಿತರ ದೃಷ್ಟಿಕೋನದಲ್ಲೇ ನೋಡಿದ ಸ್ಥಳೀಯ ಅನುಭವ, ಪ್ರಯೋಗ, ಉದಾಹರಣೆಗಳನ್ನು ಸಿದ್ಧ ಸಿದ್ಧಾಂತಗಳಿಗೆ ಹೋಲಿಸಿ ನೋಡುವುದೇ ಹೆಚ್ಚು ಅಥವಾ ವಿದೇಶಿ ಪುಸ್ತಕಗಳ ನೇರ ಅನುವಾದಗಳು ಆಗಿವೆ. ಇಂತಹವುಗಳನ್ನು ಅರಗಿಸಿಕೊಳ್ಳುತ್ತಲೇ ಪ್ರೊ. ಎಚ್.ಎಂ. ಮರುಳಸಿದ್ಧಯ್ಯನವರು, ಪ್ರೊ. ಗಂಗ್ರಾಡೆ, ಪ್ರೊ. ಗುಂಜಲ್ ಬಿ.ಎಸ್., ಪ್ರೊ. ಭೈರಪ್ಪ, ಡಾ.ಚಂದ್ರ ಪೂಜಾರಿ, ಮತ್ತಿತರರು ನಮ್ಮ ಜನಪದರ ಮಣ್ಣಿನ ವಾಸನೆ, ನಮ್ಮ ಸಂಸ್ಕೃತಿಯ ಸೊಗಡು, ನಮ್ಮ ಚರಿತ್ರೆ, ಪುರಾಣಗಳು ಹಾಗೂ ಇಲ್ಲಿನ ರಾಜಕೀಯದ ಕುರುಹು, ಬದುಕಿನ ಏರಿಳಿತಗಳನ್ನು ಆಧರಿಸಿ ಮಾನವಿಕ ಶಾಸ್ತ್ರ, ಮಾನವಿಕ ಅಧ್ಯಯನಗಳಿಗೆ ಪೂರಕವಾದ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ. ಅಂತಹವರ ಸಾಲಿಗೆ ಈಗಾಗಲೇ ಸೇರಿರುವ ಡಾ.ಸಿ.ಆರ್.ಗೋಪಾಲ್ ಅವರು ಈಗ ಸಮುದಾಯ ಸಂಘಟನೆ ಬೃಹತ್ ಗ್ರಂಥವನ್ನು ನಮ್ಮ ದಿನನಿತ್ಯದ ಭಾಷೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕ್ಷೇತ್ರಕಾರ್ಯಕರ್ತರಿಗೆ ನೀಡಿ ಸಮಾಜಕಾರ್ಯ ಕ್ಷೇತ್ರದ ಬೆಳವಣಿಗೆಯನ್ನು ಖಾತ್ರಿ ಮಾಡಿದ್ದಾರೆ.

ಸಮಾಜಕಾರ್ಯದ ಒಂದು ಮಗ್ಗುಲಾದ ಸಮುದಾಯ ಸಂಘಟನೆ ಕುರಿತು ಹನ್ನೆರಡು ಅಧ್ಯಾಯಗಳ ಸುಮಾರು 500 ಪುಟಗಳ ಕೃತಿಯ ರಚನೆಯ ಸಂಕಲ್ಪವನ್ನು ಸಿ.ಆರ್.ಗೋಪಾಲ್ ಅವರ ಪ್ರಾಯಶಃ ತಾವು ಸಮಾಜಕಾರ್ಯ ವಿದ್ಯಾರ್ಥಿಯಾಗಿದ್ದಾಗಲೇ (1975-77) ಮಾಡಿಕೊಂಡಿರುವಂತೆ ಕಾಣುತ್ತದೆ. ಅವರ ಆಗಿನ ಸಂಕಲ್ಪ, ಈಗ ಸಮಾಜಕಾರ್ಯ ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲೇ ಅಧ್ಯಯನದಲ್ಲಿ ತೊಡಗಿರುವುದರಿಂದ ಖಂಡಿತಾ ಅಂತಹವರಿಗೆ ಈ ಪುಸ್ತಕ ವರದಾನವಾಗುವಂತೆ ಕಂಡುಬರುತ್ತಿದೆ. ಇದಕ್ಕಾಗಿ ನಾನು ಮೊದಲು ಲೇಖಕರಿಗೆ ಮತ್ತು ನಿರುತ ಪ್ರಕಾಶಕರಿಗೆ ಕನ್ನಡದಲ್ಲಿ ಓದುವ ವಿದ್ಯಾರ್ಥಿಗಳು, ಕನ್ನಡದಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರು ಮತ್ತು ಸಂಶೋಧಕರ ಪರವಾಗಿ ಅಭಿನಂದಿಸುತ್ತೇನೆ. 
 
ಸಮುದಾಯ ಸಂಘಟನೆ
ಸಮುದಾಯ ಸಂಘಟನೆ ಪುಸ್ತಕದಲ್ಲಿ ಯಾವ ಅಧ್ಯಾಯಗಳಿವೆ ಮತ್ತು ಏನು ವಿಷಯ ವಿಚಾರಗಳು ಹರಡಿಕೊಂಡಿವೆ ಎಂಬುದನ್ನು ನಾನು ಈ ಪರಿಚಯದಲ್ಲಿ ಹೇಳಬೇಕಿಲ್ಲ. ಆದರೆ, ಈ ಪುಸ್ತಕ ಏಕೆ ಮುಖ್ಯವಾಗಿದೆ ಮತ್ತು ಅದನ್ನು ನಾವು ಹೇಗೆ ಸ್ವೀಕರಿಸಿ ಅಳವಡಿಸಿಕೊಳ್ಳಬೇಕಿದೆ ಎಂಬುದು ನನಗೆ ಕಂಡಂತೆ ಹೇಳುವ ಪ್ರಯತ್ನವನ್ನು ಮಾಡುತ್ತೇನೆ. 

ಮೊದಲನೆಯದಾಗಿ ಈ ಬೃಹತ್ ಗ್ರಂಥ ನಾಲ್ಕು ಗುಂಪುಗಳ ದೃಷ್ಟಿಯಲ್ಲಿ ನನಗೆ ಕಂಡಿದೆ; ಸಂಶೋಧಕರಿಗೆ ಪರಾಮರ್ಶನ ಗ್ರಂಥ; ಸಮಾಜಕಾರ್ಯದಲ್ಲಿನ ಸಮುದಾಯ ಸಂಘಟನೆ ಕುರಿತು ಚಾರಿತ್ರಿಕ ಅರಿವು ನೀಡುವ ಪುಸ್ತಕ; ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪಠ್ಯಪುಸ್ತಕ ಮತ್ತು ಕ್ಷೇತ್ರ ಕಾರ್ಯಕರ್ತರಿಗೆ ಪ್ರಾಯೋಗಿಕ ಕೈಪಿಡಿಯಾಗಿ ನನಗೆ ಕಾಣುತ್ತದೆ.

ಎರಡನೆಯದಾಗಿ ಈ ಪುಸ್ತಕದ 12 ಅಧ್ಯಾಯಗಳನ್ನು ಓದುವಾಗ ನನಗೆ ನಾಲ್ಕು ಪ್ರತ್ಯೇಕ ಪುಸ್ತಕಗಳು ಕಾಣತೊಡಗಿತು. 
  • ಮೊದಲ ಮೂರು ಅಧ್ಯಾಯಗಳು ಮುಂದಿನ ಅಧ್ಯಾಯಗಳನ್ನು ಅರಗಿಸಿಕೊಳ್ಳಲು ಪೂರಕ ಸಿದ್ಧತಾ ಸಾಹಿತ್ಯ. ಸಮುದಾಯದ ಪರಿಚಯ, ಪ್ರಕಾರಗಳು, ಗ್ರಾಮೀಣ, ಬುಡಕಟ್ಟು ಮತ್ತು ನಗರ ಸಮುದಾಯಗಳ ರಚನೆ, ಸಮಸ್ಯೆ ಮತ್ತು ಇಂದಿನ ದಿನಗಳಲ್ಲಿ ಆಗುತ್ತಿರುವ ಬದಲಾವಣೆಗಳು, ಅವುಗಳ ಮೇಲಾಗುತ್ತಿರುವ ಒತ್ತಡವೇ ಮೊದಲಾದವುಗಳನ್ನು ಪರಿಚಯಿಸುವುದು. 
  • ಮುಂದೆ ಮೂರು ಭಾಗಗಳಲ್ಲಿರುವ ನಾಲ್ಕನೇ ಅಧ್ಯಾಯ ಜಾಗತಿಕ ಮತ್ತು ಭಾರತೀಯ ಚರಿತ್ರೆ, ಕಾಲಾನುಕಾಲದಲ್ಲಿ ಆಗಿರುವ ಬೆಳವಣಿಗೆಗಳು, ಧಾರ್ಮಿಕ ಚಳವಳಿಗಳು, ಹಾಗೂ ಸಮಾಜಕಾರ್ಯದ ಬೆನ್ನಿನಲ್ಲೇ ಬೆಳೆದು ಬಂದಿರುವ ಸಮುದಾಯ ಸಂಘಟನೆಯ ವಿವಿಧ ಹೆಗ್ಗುರುತುಗಳನ್ನು ವಿವರಿಸುವುದಾಗಿದೆ.  
  • ಈ ಹಿಂದಿನ ಅಧ್ಯಾಯಗಳ ಪೂರಕ ಸಾಹಿತ್ಯವನ್ನು ಅರಗಿಸಿಕೊಂಡವರಿಗೆ ನಿಜವಾದ ಪಠ್ಯ ಕಂಡುಬರುವುದು ಅಧ್ಯಾಯ ಐದರಿಂದ ಹತ್ತರವರೆಗೆ. ಸಮುದಾಯ ಅಭಿವೃದ್ಧಿ, ಸಮುದಾಯ ಸಂಘಟನೆಯ ಮಾದರಿಗಳು, ಸಿದ್ಧಾಂತಗಳು, ಅದರ ತತ್ತ್ವಗಳು, ವಿವಿಧ ಪದ್ಧತಿಗಳು ಮತ್ತು ಪ್ರಕ್ರಿಯೆಗಳನ್ನು ಸದೋಹರಣವಾಗಿ ವಿದ್ಯಾರ್ಥಿಗಳಿಗೆ ವಿವರಿಸುವುದು. ಉದಾಹರಣೆಗೆ, ಪ್ರತಿ ವಿಚಾರವನ್ನು ಎತ್ತಿಕೊಂಡಾಗ ಅದಕ್ಕಿಂತ ಅರ್ಥ ವಿವರಣೆ ನೀಡಿ, ಚರಿತ್ರೆ ಅಥವಾ ಅಂತಹದೊಂದು ವಿಚಾರ ಬೆಳೆದುಬಂದ ಹಂತಗಳನ್ನು ತಿಳಿಸಿ, ಪ್ರಸ್ತುತ ಸ್ಥಿತಿಯೇನು ಎಂದು ಹೇಳುತ್ತಾ, ಅದರಿಂದ ಈಗ ಸಮಾಜ ಎದುರಿಸುತ್ತಿರುವ ಸವಾಲುಗಳೇನು, ಅದಕ್ಕೆ ಪರಿಹಾರಗಳನ್ನು ಎಲ್ಲಿ ಯಾರು ಹೇಗೆ ಕಂಡುಕೊಂಡಿದ್ದಾರೆ ಮತ್ತು ಮುಂದೇನು ಎಂಬ ಸುಳುಹುಗಳನ್ನು ನೀಡುವುದು.   
  • ಮುಂದಿನ ಎರಡು ಅಧ್ಯಾಯಗಳಲ್ಲಿ ಹಿಂದಿನ ಅಧ್ಯಾಯಗಳಲ್ಲಿ ಪ್ರತಿಪಾದಿಸಿರುವ, ವಿವರಿಸಿರುವ ಸಿದ್ಧಾಂತಗಳು, ಪ್ರಮೇಯಗಳು, ಅನುಭವಗಳು, ವಿಚಾರಧಾರೆಯನ್ನು ಕ್ಷೇತ್ರದಲ್ಲಿ ಹೇಗೆ ಸಾಧಿಸುವುದು ಮತ್ತು ಕೆಲವರು ಹೇಗೆ ಸಾಧಿಸಿ ತೋರಿಸಿದ್ದಾರೆ ಎಂದು ಪಾಶ್ಚಿಮಾತ್ಯರ ಉದಾಹರಣೆಗಳ ಜೊತೆಜೊತೆಯಲ್ಲೇ ಭಾರತೀಯ ಪ್ರಯೋಗಶೀಲತೆಯನ್ನೂ ಲೇಖಕರು ಎದುರಿಟ್ಟು ಸಮುದಾಯ ಸಂಘಟನೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.
ಈ ನಿಟ್ಟಿನಲ್ಲಿ ಪುಸ್ತಕದ ರಚನೆ, ವಿಚಾರಗಳನ್ನು ವಿವಿಧ ಅಧ್ಯಾಯಗಳಲ್ಲಿ ಹರಡಿರುವುದು ವಿದೇಶಿ ಅಥವಾ ಪಾಶ್ಚಾತ್ಯ ಪಂಡಿತರು ರಚಿಸುವ ಪುಸ್ತಕಗಳಂತೆ ಎಂದು ಹೇಳಬಾರದಾದರೂ, ಅಂತಹ ವೃತ್ತಿಶೀಲತೆ, ಶ್ರದ್ಧೆ ಈ ಪುಸ್ತಕದ ಪರಿವಿಡಿಯಿಂದ ಶಬ್ದಕೋಶದವರೆಗೂ ಇರುವುದು ಗಮನಾರ್ಹ.   

ಇಂದಿನ ಓದುಗರು ದೀರ್ಘವಾದ ಬರಹ, ಲೇಖನಗಳನ್ನು ಓದುವರೆ ಎನ್ನುವ ಪ್ರಶ್ನೆ ಇದೆ. ಒಂದು ವಿಚಾರ, ಒಂದು ಪರಿಕಲ್ಪನೆ ಕುರಿತು ಬೃಹತ್ ಗ್ರಂಥ ಎದುರಿಟ್ಟರೆ ನಿಜವಾಗಿಯೂ ಗಮನಿಸುವರೆ, ಈಗಿನ ವಿದ್ಯಾರ್ಥಿಗಳು ಆಕರ ಗ್ರಂಥಗಳನ್ನು ಗಂಭೀರವಾಗಿ ಪರಿಗಣಿಸುವರೆ, ಈ ಪುಸ್ತಕ ಮಾರಾಟವಾದೀತೆ ಎಂಬ ಪ್ರಶ್ನೆಗಳು, ನನ್ನನ್ನೂ ಕಾಡಿದ್ದು, ಈ ಕುರಿತು ಪ್ರಕಾಶಕರು ಮತ್ತು ಲೇಖಕರೊಡನೆ ಮಾತನಾಡಿದ್ದು ಸುಳ್ಳಲ್ಲ. ಆದರೆ, ಓದುತ್ತಾ ಹೋದಂತೆ, ಮನೋರಮೆ ಮುದ್ದಣ್ಣನಿಗೆ ಆಗ್ರಹಿಸಿದ ಮಾತು ನೆನಪಾಯಿತು. ಕಾರಣ, ಕ್ಲಿಷ್ಟವಾದ ಕಲ್ಪನೆಗಳು, ಸಿದ್ಧಾಂತಗಳು, ವಿಚಾರಗಳ ಕಬ್ಬಿಣದ ಕಡಬುಗಳನ್ನು ಗಂಟಲಲ್ಲಿ ತುರುಕದೆ, ತಿಳಿ ಎಳನೀರು, ತಿಳಿಹಾಲು, ಮಜ್ಜಿಗೆಯಂತೆ ಓದುಗರಿಗೆ ಪ್ರಿಯವಾಗುವಂತೆ, ಪಕ್ಕದಲ್ಲಿ ಕುಳ್ಳರಿಸಿಕೊಂಡು ತಿಳಿಯಾದ ಭಾಷೆಯಲ್ಲಿ ಅರಿವು ಮೂಡಿಸಿದ್ದಾರೆ. ಬರಹಗಾರನ ಯಶಸ್ಸು ಇರುವುದು ಇದರಲ್ಲೇ. ಸಮುದಾಯ ಸಂಘಟನೆಯ ವಿವಿಧ ಆಯಾಮಗಳ ಚರಿತ್ರೆಯನ್ನು ತೆಗೆತೆಗೆದು ಮೊಗೆದು ಮೊಗೆದು ನಮ್ಮೆದುರು ಇಟ್ಟು ಸಮುದಾಯ ಸಂಘಟನೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಿದ್ದಾರೆ. ಈ ಹಂತಗಳಲ್ಲಿ ಬರಹದಲ್ಲಿರುವ ತಾಳ್ಮೆಯ ಓಘ, ದನಿಯನ್ನು ಗಮನಿಸದಿರಲು ಸಾಧ್ಯವೇ ಇಲ್ಲ.  

ಲೇಖಕರು ಸಮಾಜಕಾರ್ಯದ ಬೇರುಗಳನ್ನು ವೇದ, ಉಪನಿಷತ್ತುಗಳು, ಸ್ಮೃತಿ, ನೀತಿ ಗ್ರಂಥಗಳು, ಪಂಚತಂತ್ರ, ಪುರಾಣಗಳು, ಗೀತೆ, ಶರಣರ ವಚನ, ದಾಸ ಸಾಹಿತ್ಯ, ಬೈಬಲ್, ಕುರಾನ್, ಗುರುಗ್ರಂಥ ಸಾಹೇಬ್, ಮತ್ತಿತರ ಧರ್ಮ ಗ್ರಂಥಗಳು, ಸಂಹಿತೆಗಳು, ಜನಪದ ಸಾಹಿತ್ಯ, ಜನಜೀವದ ಆಡುಮಾತುಗಳಲ್ಲಿಯೂ ಹುಡುಕಿ ನಮ್ಮೆದುರು ಇಟ್ಟು, ಸಮುದಾಯ ಸಂಘಟನೆ ಎಲ್ಲಿಂದಲೋ ಬಂದುದಲ್ಲ, ನಮ್ಮ ಹುಲ್ಲುಬೇರುಗಳಲ್ಲೇ ಹುಟ್ಟಿ ಬೆಳೆದಿರುವುದು ಎನ್ನುವ ಆತ್ಮೀಯತೆಯನ್ನು ನೀಡುತ್ತಾರೆ. ಈ ಎಲ್ಲದಕ್ಕೂ ಸಮರ್ಥವಾದ ಉಲ್ಲೇಖಗಳನ್ನು ನೀಡುವಲ್ಲಿಯೂ ಲೇಖಕರು ಯಶಸ್ವಿಯಾಗಿದ್ದಾರೆ. ಅವರೇ ಹೇಳಿರುವಂತೆ, ಈ ಪುಸ್ತಕದ ರಚನೆಯ ಕಾಲಕ್ಕೆ ನಲವತ್ತೆಂಟು ವಿದ್ವಾಂಸರ ಅರವತ್ತೈದು ಗ್ರಂಥಗಳನ್ನು ಪರಿಶೀಲಿಸಿದ್ದಾರೆ ಅವನು ಕುರಿತು ಆಧಾರ ಗ್ರಂಥಗಳ ಉಲ್ಲೇಖಗಳನ್ನು ನೀಡಿದ್ದಾರೆ.

ಸಮಾಜಕಾರ್ಯದ ಒಂದು ವಿಧಾನವಾಗಿ ಸಮುದಾಯ ಸಂಘಟನೆಯಾಗಲು, ಒಂದು ಸಂಸ್ಥೆ ಸ್ಥಾಪಿಸಲು ಯಾವುದಾದರೂ ನಿರ್ದಿಷ್ಟ ವಿಚಾರ, ಪರಿಸ್ಥಿತಿ ಕುರಿತು ಜನರಿಗಿರುವ ಅಸಮಾಧಾನ, ಅತೃಪ್ತಿ, ಬೇಸರ ಇತ್ಯಾದಿ ಎಂದು ಹೇಳಲಾಗುತ್ತದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರೆ ಅಂತಹವರನ್ನು ಹೊಸಕಿ ಹಾಕಿಬಿಡುವ ಶಕ್ತಿಗಳು ಸುತ್ತಲೂ ಇದೆ. ಹಾಗಾದರೆ, ಏನು ಮಾಡಬೇಕು ಎಂಬ ಪ್ರಶ್ನೆ ಎದ್ದೇಳುವುದು ಸಹಜ. ಪ್ರತಿಭಟನೆ ಸಮಾಜಕಾರ್ಯದ ಒಂದು ಬಹಳ ಮುಖ್ಯವಾದ ವಿಧಾನ. ಅದನ್ನು ಸಮರ್ಥವಾಗಿ ಬಳಸಬೇಕೆಂದರೆ ಸಮುದಾಯ ಸಂಘಟನೆಯನ್ನು ಆಳವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕೆ ಪೂರಕವಾಗಿರುವುದು ನನಗೆ ಬಹಳ ಮುಖ್ಯವಾಗಿ ಮನತಟ್ಟಿದ್ದು ಅಧ್ಯಾಯ 6 ರಲ್ಲಿನ ಸಮುದಾಯ ಸಂಘಟನೆಯ ಮಾದರಿಗಳ ವಿವರಣೆ. ಸಮುದಾಯ ಸಂಘಟಕರಿಗೊಂದು ಕೈಪಿಡಿಯೇನೋ ಎಂಬಂತಿರುವ ಈ ಅಧ್ಯಾಯ, ಈ ವಿಚಾರದ ಚಾರಿತ್ರಿಕ ಅಂಶಗಳು, ಇದರ ನಿರ್ಮಾತೃಗಳ ಪರಿಕಲ್ಪನೆಗಳನ್ನು ಎದುರಿಡುತ್ತಲೇ ಪ್ರಸಕ್ತ ಸನ್ನಿವೇಶಗಳತ್ತ ಸೂಕ್ಷ್ಮಗೊಳಿಸಿದ್ದಾರೆ. ಈಗಿನ ಆವಶ್ಯಕತೆ ವಕೀಲಿ, ಜನಪರವಾದ ಒತ್ತಡಗಳನ್ನು ಹಾಕಲು ಬೇಕಿರುವ ಸಂಶೋಧನೆ, ಪ್ರಕರಣ ಅಧ್ಯಯನ, ದಾಖಲೆ, ಕಾನೂನು ಹೋರಾಟ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮ್ಮೆ, ನೀತಿ ಮತ್ತು ಕಾಯಿದೆಗಳ ನಿರ್ಮಾಣ, ತಿದ್ದುಪಡಿ ಇತ್ಯಾದಿಗಳತ್ತ ಕ್ಷೇತ್ರ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಮಾಜಕಾರ್ಯ ಶಿಕ್ಷಕರ ಗಮನ ಸೆಳೆದಿದ್ದಾರೆ.

ಗಾಂಧೀಜಿಯವರು ಗ್ರಾಮರಾಜ್ಯವಾಗಬೇಕೆಂದು ಅಪೇಕ್ಷಿಸಿದ್ದರು. ಆದರೆ, ಗ್ರಾಮಗಳಲ್ಲಿನ ಜಾತೀಯತೆ, ತಾರತಮ್ಯದ ಕ್ರೌರ್ಯದಿಂದ ಬೇಸತ್ತಿದ್ದ ಅಂಬೇಡ್ಕರ್ ಅವರು ಗ್ರಾಮಗಳ ವೈಭವೀಕರಣ ಬೇಡವೆಂದಿದ್ದರು. ಆದರೆ, ವಾಸ್ತವದಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳನ್ನು ನಾವು ತ್ರಿಶಂಕು ಸ್ಥಿತಿಗೆ ತಳ್ಳಿದ್ದೇವೆ. ಗ್ರಾಮಗಳಿಂದ ಹೊರಕ್ಕೆ ತಳ್ಳಿ, ನಗರಗಳಲ್ಲಿ ಬಡವರ ಕಾಲೋನಿಗಳು, ಕೊಳೆಗೇರಿಗಳನ್ನು ನಿರ್ಮಿಸಿಕೊಂಡಿದ್ದೇವೆ. ಇಂತಹ ಜನರ ಅತ್ತಲೂ ಇಲ್ಲ ಇತ್ತಲೂ ಇಲ್ಲ ಎನ್ನುವ ಪರಿಸ್ಥಿತಿಯನ್ನು ತಪ್ಪಿಸಿ ನಗರ ಮತ್ತು ಗ್ರಾಮೀಣದಲ್ಲಿ ಭರವಸೆಗಳನ್ನು ನೀಡಲು ಈಗಲೂ ಉತ್ತರವಿರುವುದು ಗಟ್ಟಿತಳಹದಿಯಲ್ಲಿನ ಸಮುದಾಯ ಸಂಘಟನೆಯಲ್ಲಿ. ಇಂದಿನ ಸವಾಲು ಸಮುದಾಯ ಸಂಘಟನೆಗೆ ನಾವು ಹೊಸ ವ್ಯಾಖ್ಯಾನಗಳನ್ನು ಕಂಡುಕೊಳ್ಳಬೇಕಿರುವುದರಲ್ಲಿ. ಆ ನಿಟ್ಟಿನಲ್ಲಿ ನಮ್ಮ ವಿಚಾರ ಪ್ರಚೋದನೆಗೆ ಡಾ.ಸಿ.ಆರ್.ಗೋಪಾಲ್ ಅವರ ಸಮುದಾಯ ಸಂಘಟನೆ ಸಹಕಾರಿಯಾಗುತ್ತದೆ. 

ಈ ಪುಸ್ತಕವನ್ನು ಬಹಳ ಸೂಕ್ತವಾಗಿ ಸಮಾಜಕಾರ್ಯ ಶಿಕ್ಷಣವನ್ನು, ಸಾಹಿತ್ಯವನ್ನು ಕನ್ನಡದಲ್ಲಿ ಸಮರ್ಥವಾಗಿ ನೀಡಿರುವ ಪ್ರೊ. ಎಚ್.ಎಂ. ಮರುಳಸಿದ್ದಯ್ಯನವರಿಗೆ ಲೇಖಕ ಡಾ.ಸಿ.ಆರ್.ಗೋಪಾಲ್ ಅವರು ಸಮರ್ಪಿಸಿರುವುದು ನನ್ನಂಥಹವರಿಗೆ ಆನಂದವಾಗಿದೆ.
​
ಈ ಪುಸ್ತಕವನ್ನು ಖಂಡಿತಾ ಗ್ರಂಥಾಲಯಗಳಲ್ಲಿ ಇರಿಸಬೇಕು. ಕೇವಲ ಸಮಾಜಕಾರ್ಯ ವಿದ್ಯಾರ್ಥಿಗಳಲ್ಲದೆ ಇತರ ಮಾನವಿಕ ವಿಷಯ ವಿಚಾರಗಳನ್ನು ಕುರಿತು ಅಧ್ಯಯನದಲ್ಲಿ ತೊಡಗಿರುವವರಿಗೆ, ಶಿಕ್ಷಕರಿಗೆ ಈ ಗ್ರಂಥದ ಪರಾಮರ್ಶೆ ಅಗತ್ಯವಾಗಿ ಉಪಯೋಗಕಾರಿ. ಅದರಲ್ಲೂ ಸಮಾಜಕಾರ್ಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕ್ಷೇತ್ರಕಾರ್ಯದಲ್ಲಿ ತೊಡಗಿರುವವರು ಪುಸ್ತಕವನ್ನು ಕೊಂಡು ಓದುವುದು ಮತ್ತು ಜೊತೆಯಲ್ಲಿ ಇಟ್ಟುಕೊಳ್ಳುವುದು ಅಪೇಕ್ಷಣೀಯ.

0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com