ನೀರೊಳಗಿದ್ದೂ ನೀರು ಕುಡಿಯದ ಪ್ರಾಣಿಯ ಬಗ್ಗೆ, ಕೆಸರಿನಲ್ಲಿ ಹುಟ್ಟಿ ವಿಕಸನಗೊಂಡ ಗಿಡದ ಎಲೆಯ ಮೇಲೆ ಇದ್ದೂ ಆ ಎಲೆಗೆ ಅಂಟಿಕೊಂಡಿರದ ಜಲಬಿಂದುವಿನ ಬಗ್ಗೆ, ಇಂತಹುದೇ ಹಲವಾರು ಉದಾಹರಣೆಗಳನ್ನು ನೀಡಿ ಮನುಷ್ಯ ಹೀಗಿರಬೇಕು ಎಂದು ಉಪನ್ಯಾಸಕರು ಹೇಳುವುದುಂಟು. ಆದರೆ, ವಾಸ್ತವದಲ್ಲಿ ಹಾಗೆ ಇರಲು ಸಾಧ್ಯವೆ? ಹನ್ನೆರಡನೆಯ ಶತಮಾನದ ಶರಣರು ದಾರಿಯಲ್ಲಿ ಬಿದ್ದಿದ್ದ ನಾಣ್ಯಗಳನ್ನು ತಮ್ಮದಲ್ಲ, ಅದನ್ನು ಎತ್ತಿಕೊಂಡು ಬಳಸುವುದು ಹಾಗಿರಲಿ, ಅವುಗಳನ್ನು ಮುಟ್ಟಲೂ ಕೂಡದು ಎಂಬ ವೀರ ವ್ರತಿಗಳಾಗಿದ್ದರು ಎಂಬುದುಂಟು. ಚಿನ್ನದ ಗಟ್ಟಿಯೊಂದು ಹೊಳೆಯುತ್ತ ನಮ್ಮ ಹಾದಿಯಲ್ಲಿ ಇಂದು ಬಿದ್ದಿದ್ದರೆ ನಾವು ಅದರ ಕಡೆ ಅಸಡ್ಡೆ ತೋರಿ ಹಾಗೆಯೇ ಹೋಗುತ್ತಿದ್ದೆವೆಯೆ? ಇಂಥ ಪ್ರಶ್ನೆಗಳು ಮೂಡಿ ಅವುಗಳಿಗೆ ಇತ್ಯಾತ್ಮಕ ಉತ್ತರ ದೊರೆಯುತ್ತಿರುವುದು ಮಾನ್ಯ ಎಂ.ವಿ.ರಾಜಶೇಖರನ್ ಅವರನ್ನು ನೆನೆದಾಗಲೆಲ್ಲಾ ಮತ್ತು ಅವರನ್ನು ಕಂಡು ಸಂಭಾಷಿಸುತ್ತಿರುವಾಗಲೆಲ್ಲಾ. ತುಂಗಭದ್ರೆಯ ತಡಿಯಲ್ಲಿ ಹುಟ್ಟಿ ಬೆಳೆದು ಶ್ರೇಷ್ಠ ರಾಜಕಾರಣಿ ಮಾತ್ರವೇ ಅಲ್ಲ, ಮನುಕುಲದ ಕೀರ್ತಿ ಕಳಸವಾಗಿದ್ದ ಕರ್ನಾಟಕ ಶಿಲ್ಪಿ ಸಿದ್ಧವನಹಳ್ಳಿ ನಿಜಲಿಂಗಪ್ಪನವರು, ಕಾವೇರಿ ಸಮೀಪ ಹುಟ್ಟಿ ಬೆಳೆದು ಯುವ ಮುಂದಾಳಾಗಿ, ಕೃಷಿಕರ ಕಷ್ಟ ನಷ್ಟಗಳಿಗೆ ತೀವ್ರವಾಗಿ ಸ್ಪಂದಿಸುತ್ತಿರುವ, ಜಾರುಬಂಡೆಯನ್ನೇರಿ ಉರುಳುತ್ತಿರುವ ನೈತಿಕ ಅಧಃಪತನವನ್ನು ಕಂಡು ಕಣ್ಣೇರಿಡುತ್ತಿರುವ ರಾಜಶೇಖರನ್-ಈ ಇಬ್ಬರು ಮಾವ-ಅಳಿಯಂದಿರಾದದ್ದು ಹೇಳಿ ಮಾಡಿಸಿದ ಜೋಡಿ. ಮಾವನಿಗೆ ತಕ್ಕ ಅಳಿಯ ಎಂದು ಎಲ್ಲರೂ ಉದ್ಗರಿಸುವಂತಹ ವ್ಯಕ್ತಿ ರಾಜಶೇಖರನ್.
ದಕ್ಷಿಣ ಕರ್ನಾಟಕದ ಕನಕಪುರ ತಾಲ್ಲೂಕಿನ ದೊಡ್ಡ ಮರಳವಾಡಿಯಲ್ಲಿ 1928ರಲ್ಲಿ ಹುಟ್ಟಿದ ರಾಜಶೇಖರನ್ ಅವರದ್ದು ವಿಶಿಷ್ಟ ವ್ಯಕ್ತಿತ್ವ. ರಾಜಕೀಯದ ಬಗ್ಗಡದ ನೀರಿನಲ್ಲಿದ್ದೂ ಅದನ್ನು ಕುಡಿಯದ, ಜನಪ್ರತಿನಿಧಿಯಾಗಿದ್ದರೂ (ಹಿಂದೆ ರಾಜ್ಯದ ವಿಧಾನಸಭೆ, ವಿಧಾನ ಪರಿಷತ್ತು ಹಾಗೂ ಕೇಂದ್ರದ ಲೋಕಸಭೆ, ಕೇಂದ್ರ ಸರಕಾರದಲ್ಲಿ ರಾಜ್ಯ ಮಂತ್ರಿ, ಕೇಂದ್ರದ ರಾಜ್ಯಸಭೆಯ ಸದಸ್ಯತ್ವ, ಇಂದು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ) ಎಲೆಯ ಮೇಲಣ ಜಲಬಿಂದುವಿನಂತೆ ಪದವಿಗಳಿಗೆ ಅಂಟಿಕೊಂಡಿರದ ರಾಜಶೇಖರನ್ ಸದಾಚಿಂತಿಸುತ್ತಿರುವುದು ಜನಕಲ್ಯಾಣದ ಬಗ್ಗೆ, ಅದರಲ್ಲೂ ಗ್ರಾಮೀಣ ಅಭ್ಯುದಯದ ಬಗ್ಗೆ, ಅದರಲ್ಲೂ ರೈತಾಪಿ ಜನರ ಪ್ರಗತಿಯ ಬಗ್ಗೆ. ರಾಜಶೇಖರನ್ ಅವರದ್ದು ಕಲುಷಿತಗೊಂಡಿರದ, ಕಲುಷಿತಗೊಳ್ಳದ ಮನಸ್ಸು; ಸುತ್ತಲೂ ಬೆಟ್ಟದಂತೆ ಬೆಳೆದು ಭಯವನ್ನು ಹುಟ್ಟಸುತ್ತಿರುವ ಮಾನವ ಸಮಸ್ಯೆಗಳನ್ನು ಪರಿಹರಿಸಲೇಬೇಕೆಂಬ ಹಠ; ತಾವು ಕೈಗೊಂಡ ಕಾರ್ಯಗಳಲ್ಲಿ ಆಗೀಗ ಸೋಲನ್ನು ಅನುಭವಿಸಿದರೂ ಹೋರಾಟವನ್ನು ಮುಂದುವರಿಸಿರುವ ಸಾಹಸ ಪ್ರವೃತ್ತಿ; ಪ್ರಪಂಚದ ಬಹುಶಃ ಎಲ್ಲ ರಾಷ್ಟ್ರಗಳನ್ನು ಹಲವಾರು ಸಲ ಸಂದರ್ಶಿಸಿ ಅವುಗಳಲ್ಲಿನ ಕೊಳಕನ್ನು ಅನುಕಂಪೆಯಿಂದ ಅರಿತುಕೊಳ್ಳುತ್ತಲೇ ಅವುಗಳಲ್ಲಿ ಕಂಡ ಮಾನವೋತ್ಸಾಹವನ್ನು ಮೆಚ್ಚುವ ಚಿಕಿತ್ಸಕ-ವಿಶಾಲ ದೃಷ್ಟಿಯ ಎಲ್ಲ ದಿಕ್ಕುಗಳಿಂದಲೂ ಬರುವ ಪ್ರಗತಿಯ ಶುದ್ಧ ಗಾಳಿಯನ್ನು ಭಾರತೀಯರು ಸೇವಿಸಿ ಮುನ್ನಡೆಯಬೇಕೆಂಬ ಹಂಬಲವುಳ್ಳ, ದೈಹಿಕ ದೌರ್ಬಲ್ಯಗಳನ್ನು ಮೆಟ್ಟಿ ಮಾನಸಿಕ ಶಕ್ತಿಯಿಂದ ಜನಕಲ್ಯಾಣದ ಕಾರ್ಯದಲ್ಲಿ ತೊಡಗಿರುವ ಚೈತನ್ಯಮೂರ್ತಿ ರಾಜಶೇಖರನ್. ಮಾನ್ಯ ಶ್ರೀ ಎಸ್.ನಿಜಲಿಂಗಪ್ಪನವರೂ ಇದ್ದ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ ಶ್ರೀಮತಿ ಇಂದಿರಾಗಾಂಧಿಯವರು ಕರ್ನಾಟಕದ ಮುಖ್ಯಮಂತ್ರಿಯ ಚಿನ್ನದ ಸ್ಥಾನದ ಆಮಿಷದ ಗಾಳವನ್ನು ಬೀಸಿ ತಮ್ಮ ಪಕ್ಷದ ಕಡೆ ಸೆಳೆದುಕೊಳ್ಳಲು ತೊಡಗಿದ್ದಾಗ ಶರಣರ ನಿಲುವಿನಿಂದ ಅದನ್ನು ಕಡೆಗಣಿಸಿ, ಸತ್ಯದ ಪಕ್ಷದಲ್ಲೇ ಉಳಿದು ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿದ ಧೀರೋದಾತ್ತರೇ ರಾಜಶೇಖರನ್. ರಾಜಕಾರಣವು ಜನರ ಶೋಷಣೆಗೆ ಇರುವ ರಾಕ್ಷಸ ಶಕ್ತಿಯಲ್ಲ, ಬದಲಿಗೆ ಅವರ ಒಳಿತನ್ನು ಸಾಧಿಸುವ ಪ್ರಬಲ ಸಾತ್ತ್ವಿಕ ಶಕ್ತಿ ಎಂದು ದೃಢವಾಗಿ ನಂಬಿರುವ ರಾಜಶೇಖರನ್ ಹಾಗೆಯೇ ಕಾರ್ಯತತ್ಪರರಾಗಿದ್ದಾರೆ. ಏಷಿಯಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ, ಏಷಿಯಾ ರಾಷ್ಟ್ರಗಳ ಉನ್ನತ ಮಟ್ಟದ, ಅನುಭವಪೂರ್ಣ ತಜ್ಞರನ್ನು ಈ ಸಂಸ್ಥೆಯ ದೃಢತೆಗೆ ಪಾಲುಗಾರರನ್ನಾಗಿ ಮಾಡಿ ತಮ್ಮ ಸಂಸ್ಥೆಯನ್ನು ಬಾವಿಕಪ್ಪೆಯಾಗಿಸದೆ ಸಾಗರದ ತಿಮಿಂಗಿಲವನ್ನಾಗಿಸಿದ್ದಾರೆ. ಈ ಸಂಸ್ಥೆಯ ಮೂಲಕ ಸಾಮಾಜಿಕ ಸಂಶೋಧನೆ, ರಚನಾತ್ಮಕ ಕಾರ್ಯಕ್ರಮ, ಜನರ ಪ್ರಜ್ಞೆಯನ್ನು ಕುದುರಿಸುವ ಸಾಹಿತ್ಯ ಪ್ರಕಟಣೆ, ನವ ಸಮಾಜ ನಿರ್ಮಾಣಕ್ಕೆ ಸಮರ್ಥ ವ್ಯಕ್ತಿ-ಶಕ್ತಿಗಳನ್ನು ಕಂಡರಿಸಲು ಸೂಕ್ತ ತರಬೇತಿ ಕಮ್ಮಟಗಳ ವ್ಯವಸ್ಥೆ, ಪ್ರಪಂಚದ ರಾಷ್ಟ್ರಗಳನ್ನು ಅದರಲ್ಲೂ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಂದುಗೂಡಿಸಿ ಅವುಗಳ ಅನುಭವಗಳನ್ನು ಪಾರಸ್ಪರಿಕವಾಗಿ ಹಂಚಿಕೊಂಡು ಬೆಳೆಯಲು ತಕ್ಕ ಪರಿಸರ ನಿರ್ಮಾಣ, ಪ್ರಪಂಚದ ಯಾವ ಮೂಲೆಯಲ್ಲೇ ಇರಲಿ ಅಲ್ಲಿನ ಪ್ರತಿಭಾವಂತರನ್ನು ಗುರುತಿಸಿ ಅವರ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವ ದೂರಾಲೋಚನೆಯ ಕಾರ್ಯಕ್ರಮಗಳ ರೂಪಣೆ, ಇತ್ಯಾದಿಗಳನ್ನು ಕೈಗೊಂಡ ಅಪರೂಪದ ವ್ಯಕ್ತಿತ್ವ ರಾಜಶೇಖರನ್. ರಾಜಶೇಖರನ್ ಅವರನ್ನು ಹತ್ತಿರದಿಂದ ನೋಡಿದ್ದೇನೆ; ಅವರು ಹಮ್ಮಿಕೊಳ್ಳುವ ಹಲವಾರು ಸಮಾಜಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ; ಅವರ ಸತತಾಭ್ಯಾಸದ, ಬಿಡುವಿರದ ಚಟುವಟಿಕೆಗಳ, ಲೆಕ್ಕವಿಲ್ಲದ ವಿಶ್ವಪರ್ಯಟನೆಯ ವರದಿಗಳನ್ನು ಆಲಿಸಿದ್ದೇನೆ; ಅವರ ಮನಸ್ಸನ್ನು ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ; ಅವರ ವಿನಯಶೀಲ ನಡತೆಯನ್ನು ಕಣ್ಣಾರೆ ಕಂಡಿದ್ದೇನೆ. ಅವರ ಅಭಿಪ್ರಾಯದಲ್ಲಿ ಭಾರತದ ಪ್ರಗತಿಯು ಗ್ರಾಮೀಣ ಪ್ರಗತಿಯಲ್ಲಿದೆ; ಗ್ರಾಮದ ಪ್ರಗತಿಗೆ ಗಾಂಧೀಯ ಮಾರ್ಗವೇ ಏಕೈಕ ಮಾರ್ಗ. ಶರಣರ ಕಾಯಕ-ದಾಸೋಹವೇ ಮನುಕುಲದ ಒಳಿತಿಗೆ ದಿವ್ಯಸೂತ್ರ-ಹೀಗೆ ಸಾಗುತ್ತದೆ ಅವರ ಚಿಂತನೆಯ ಪ್ರವಾಹ. ಯಾವುದೇ ಸಭೆಯಿರಲಿ ಅದು ಮುಗಿದೊಡನೆ, ಯಾರೇ ಸಂದರ್ಶನಕ್ಕೆ ಬಂದಿರಲಿ ಸಂದಶರ್ನನ ಮುಗಿದೊಡನೆ ಅಲ್ಲಿಗೆ ಬಂದು ಪಾಲ್ಗೊಂಡವರು ಹೊರಟಾಗ ಅವರೊಡನೆ ಬಾಗಿಲವರೆಗೆ, ಹಲವೊಮ್ಮೆ ವಾಹನದಲ್ಲಿ ಕುಳಿತುಕೊಳ್ಳುವವರೆಗೂ ಹೋಗಿ ಅವರನ್ನು ನಗುಮುಖದಿಂದ ಬೀಳ್ಕೊಡುವುದು ರಾಜಶೇಖರನ್ ಶೈಲಿ. ಸ್ವಹಿತಕ್ಕಿಂತ ಲೋಕದ ಹಿತವನ್ನೇ ತಮ್ಮ ಬಾಳ ಧ್ಯೇಯವನ್ನಾಗಿ ಉಳ್ಳ, ನಮ್ಮ ನಡುವೆಯೇ ಇರುವ ರಾಜಶೇಖರನ್ ಒಂದು ಲೆಜೆಂಡ್. ಡಾ.ಎಚ್.ಎಂ.ಮರುಳಸಿದ್ಧಯ್ಯ ನಿವೃತ್ತ ಮುಖ್ಯಸ್ಥರು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|