ಸಾರಾಂಶ ಪ್ರತಿಯೊಂದು ರಾಷ್ಟ್ರ, ಸಮಾಜ, ವ್ಯಕ್ತಿಗಳ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣವು ಒಂದು ಪ್ರಮುಖ ಸಾಧನವಾಗಿದೆ. ಶಿಕ್ಷಣದ ಹಂತಗಳಲ್ಲಿ ಪದವಿ-ಪೂರ್ವ ಶಿಕ್ಷಣ ಹಂತದ ನಂತರ ಬರುವ ಶಿಕ್ಷಣವೇ ಉನ್ನತ ಶಿಕ್ಷಣ ಅಥವಾ ವಿಶ್ವವಿದ್ಯಾಲಯ ಶಿಕ್ಷಣವೆನ್ನುತ್ತೇವೆ. ಈ ಉನ್ನತ ಶಿಕ್ಷಣವು ಮಾನವ ಜನಾಂಗ ಇಂದು ಎದುರಿಸುತ್ತಿರುವ ಸಂದಿಗ್ಧವಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ನೈತಿಕ ಹಾಗು ಆಧ್ಯಾತ್ಮಿಕ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ಮಾಡುವುದರ ಜೊತೆಗೆ ಸೃಜನಾತ್ಮಕ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ ರಾಷ್ಟ್ರೀಯ ಅಭಿವೃದ್ಧಿಗೆ ತನ್ನ ಕೊಡುಗೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಯೋಚಿಸಿದಾಗ ನಮ್ಮ ಭಾರತ ದೇಶದ ಉನ್ನತ ಶಿಕ್ಷಣವು ಇಂದು ಬಹುತೇಕವಾಗಿ ನಿರುದ್ಯೋಗಿ ಪದವೀಧರರನ್ನು ಸೃಷ್ಟಿಸಿ ಆ ಅಭ್ಯರ್ಥಿಗಳು ಕೇವಲ ಪರೀಕ್ಷೆಗೆ ಸಂಬಂಧಪಟ್ಟ ಜ್ಞಾನವನ್ನು ಮಾತ್ರ ಪಡೆಯುವಂತೆ ಮಾಡುತ್ತಿದೆ. ಇದಕ್ಕೆ ಕಾರಣ ನಮ್ಮ ದೇಶದ ಕೆಲವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನು ಪಡೆದಿದ್ದರೆ, ಇನ್ನೂ ಕೆಲವು ವಿಶ್ವವಿದ್ಯಾಲಯಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು ಒಂದು ದೊಡ್ಡ ವೈಪರೀತ್ಯವಾಗಿದೆ. ಇನ್ನೂ ಈ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವು ಪ್ರಪಂಚದ ಕೆಲವು ರಾಷ್ಟ್ರಗಳಿಗೆ ಹೋಲಿಸಿದಾಗ ನಮ್ಮ ಒಟ್ಟು ದಾಖಲಾತಿಯ ಅನುಪಾತ ತುಂಬಾ ಕಡಿಮೆಯಿದೆ ಹಾಗೂ ಕ್ಯೂ ಎಸ್ ನ ಶ್ರೇಷ್ಠ ಮಟ್ಟದ ವಿಶ್ವವಿದ್ಯಾಲಯದ ರ್ಯಾಂಕ್ನಲ್ಲಿ ನಮ್ಮ ದೇಶದ ವಿಶ್ವವಿದ್ಯಾಲಯಗಳು ತುಂಬಾ ಕೆಳಮಟ್ಟದಲ್ಲಿವೆ ಹಾಗೂ ಗುಣಾತ್ಮಕ ಶಿಕ್ಷಣ ಸಂಸ್ಥೆಗಳು ರ್ಯಾಂಕ್ಗೆ ಹೋಲಿಕೆ ಮಾಡಿದಾಗ ಭಾರತ ಕೆಳಮಟ್ಟದ ರ್ಯಾಂಕ್ನಲ್ಲಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಲೇಖನವು ನಮ್ಮ ಭಾರತದ ಶಿಕ್ಷಣದ ರಚನೆ, ದಾಖಲಾತಿ, ಸಮತೆ, ಗುಣಾತ್ಮಕತೆ, ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ, ಸಂಶೋಧನೆಗಳ ಅಭಿವೃದ್ಧಿ ವಿಶ್ಲೇಷಣೆ ಮತ್ತು ಉನ್ನತ ಶಿಕ್ಷಣದ ಪ್ರಮುಖ ಸಮಸ್ಯೆಗಳಿಗೆ ಪರಿಹಾರಗಳ ಪೂರಕವಾದ ಅಂಶಗಳನ್ನು ಇಲ್ಲಿ ಅವಲೋಕಿಸಲಾಗಿದೆ. ಪ್ರತಿಯೊಂದು ರಾಷ್ಟ್ರದ ಸರ್ವತೋಮುಖ ಅಭಿವೃದ್ದಿಯು ಆ ರಾಷ್ಟ್ರದ ಶಿಕ್ಷಣದ ಗುಣಮಟ್ಟ, ಶಿಕ್ಷಿತರ ಪ್ರಮಾಣ, ಶಿಕ್ಷಣ ವ್ಯವಸ್ಥೆ, ಮಾನವ ಅಭಿವೃದ್ದಿಯ ಸೂಚ್ಯಂಕ ಮುಂತಾದ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣವು ಪ್ರತಿಯೊಂದು ಕ್ಷೇತ್ರದ ಅಭಿವೃದ್ದಿಯ ಅವಿಭಾಜ್ಯ ಅಂಗ. ಆದ್ದರಿಂದ ಯಾವುದೇ ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಅಲ್ಲಿನ ಶಿಕ್ಷಣ ಕ್ರಮವೇ ಕಾರಣವಾಗುತ್ತದೆ. ಅಲ್ಲದೇ ಪ್ರತಿಯೊಬ್ಬ ಮಾನವನಿಗೆ ಮಾನವೀಯತ್ವ ಪ್ರಾಪ್ತವಾಗಬೇಕಾದರೆ ಶಿಕ್ಷಣ ಅವಶ್ಯಕ. ಶಿಕ್ಷಣವು ಮಾನವನ ಮನಸ್ಸು, ಬುದ್ಧಿ, ದೇಹಗಳಿಗೆ ದೊರೆಯುವ ಒಂದು ಸಂಸ್ಕಾರ. ಈ ಸಂಸ್ಕಾರವು ಮನುಷ್ಯನಿಗೆ ಸಕಾಲದಲ್ಲಿ ಸಿಗದಿದ್ದರೆ ಆತನು ಸುಖ-ಸಂತೋಷದ ಜೀವನ ಪಡೆಯಲು ಸಾಧ್ಯವಿಲ್ಲ. ಅದಕೋಸ್ಕರವೇ ನಮ್ಮ ಈಶೋಪನಿಷತ್ತಿನಲ್ಲಿ ವಿದ್ಯೆಯಿಂದ ಅಮೃತವು ಪಾಪ್ತವಾಗುತ್ತದೆಯೆಂದು, ಭಗವದ್ಗೀತೆಯಲ್ಲಿ ನಹೀ ಜ್ಞಾನೇನ ಸದೃಶಂ ಪವಿತ್ರ ಮಿಹ ವಿದ್ಯತೇ. ಅಂದರೆ ಈ ಪ್ರಪಂಚದಲ್ಲಿ ಜ್ಞಾನಕ್ಕೆ ಸಮಾನವಾದುದು ಮತ್ತು ಪವಿತ್ರವಾದುದು ಮತ್ತೊಂದಿಲ್ಲ ಎನ್ನುವುದು ಸೂಕ್ತವಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿ, ಸಮಾಜ, ರಾಷ್ಟ್ರಗಳ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣ ಮಹತ್ವದ ಸಾಧನವಾಗಿದೆ. ಭಾರತದಲ್ಲಿ ಶಿಕ್ಷಣ ಕ್ರಮವು ವಿವಿಧ ಸ್ವರೂಪಗಳಲ್ಲಿ ಕಾಲದಿಂದ ಕಾಲಕ್ಕೆ ಬದಲಾಗುತ್ತ ಬೆಳೆದು ಬಂದಿದೆ. ವೇದೋಪನಿಷತ್ತುಗಳ ಕಾಲದಲ್ಲಿ ಪಾಯಶಃ ಮೌಖಿಕ ಶಿಕ್ಷಣವೇ ಪ್ರಧಾನವಾಗಿತ್ತು. ಕ್ರಿ.ಪೂ. 4ನೇ ಶತಮಾನಕ್ಕಿಂತ ಪೂರ್ವದಲ್ಲಿ ಶಿಕ್ಷಣ ಮನೆ ಮತ್ತು ಆಶ್ರಮಗಳಲ್ಲಿ ನಡೆಯುತ್ತಿತ್ತು ಎಂಬುದನ್ನು ಸ್ಮರಿಸಬಹುದು. ಅಂದು ರಾಜಾಶ್ರಯವೇನೂ ಇಲ್ಲದೇ ಋಷಿಗಳ ಆಶ್ರಮಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು. ವಿದ್ಯಾರ್ಥಿಗಳು ಅಂತಹ ಆಶ್ರಮಗಳನ್ನುರಿಸಿಕೊಂಡು ಹೋಗುತ್ತಿದ್ದರು. ಅಲ್ಲಿ ಶಾಸ್ತ್ರಗಳಲ್ಲಿ ಪರಿಣಿತಿ ಪಡೆಯುತ್ತಿದ್ದರು. ಕಾಳೀದಾಸ ಹೇಳುವಂತೆ ಕಣ್ವರಾಶ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಕಣ್ವರು ಕುಲಪತಿಗಳಂತಿದ್ದರು. ಇಂತಹ ಹಲವು ಆಶ್ರಮಗಳಿದ್ದವೆಂದು ತಿಳಿಯಬಹುದು. ಕಾಲಕ್ರಮೇಣ ಮಂಡಲಗಳು ಶಿಕ್ಷಣ ನೀಡುವ ಸ್ಥಳಗಳಾದವು. ನಂತರ ಅವು ಪರಿಷತ್ತುಗಳಾಗಿ ವಿದ್ಯಾಭ್ಯಾಸ ಪಡೆದು ಪ್ರೌಢಿಮೆ ಸಾಧಿಸಿದವರಿಗೆ ಪ್ರಶಸ್ತಿಯನ್ನು ನೀಡುತ್ತಿದ್ದವು. ವೈದಿಕ ಧರ್ಮದ ಪ್ರಾಧಾನ್ಯವನ್ನು ತಡೆಗಟ್ಟಿ ಬೌದ್ದಧರ್ಮವು ತಲೆಯೆತ್ತಿ ನಿಂತಾಗ ಶಿಕ್ಷಣವು ಅದನ್ನು ಅನುಸರಿಸಿತು. ಅದು ಸಂಘಗಳು ಮತ್ತು ವಿಹಾರಗಳಲ್ಲಿ ಅನೇಕ ವಿದ್ವಾಂಸರ ಉಪನ್ಯಾಸ ಮತ್ತು ಚರ್ಚೆಗಳ ಮೂಲಕ ಶಿಕ್ಷಣ ನಡೆಯುತ್ತಿತ್ತು. ಆಗಿನ ನಳಂದಾ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿತ್ತು. ನಂತರ ಜೈನಧರ್ಮವು ಶಿಕ್ಷಣ ಕ್ಷೇತ್ರವನ್ನು ಆಕ್ರಮಿಸಿತು. ತದನಂತರ ಮುಸ್ಲಿಂ ಕಾಲದ ಶಿಕ್ಷಣ ಜಾರಿಗೆ ಬಂತು. ಇವರು ದೆಹಲಿ, ಆಗ್ರಾ, ಜಾನ್ಪುರ, ಬೀದರ್ ಮುಂತಾದವುಗಳು ಪ್ರಮುಖ ಕಲಿಕಾ ಕೇಂದ್ರಗಳಾಗಿದ್ದವು. ಇವರು ಮದರಸಾ ಮತ್ತು ಮುಕ್ತಾಬ್ಗಳಲ್ಲಿ ಶಿಕ್ಷಣ ನೀಡುತ್ತಿದ್ದರು. ನಂತರ 17ನೇ ಶತಮಾನದ ಪ್ರಾರಂಭದಲ್ಲಿ ಯುರೋಪಿಯನ್ನರು ಆಗಮಿಸಿದರು. ಇವರ ಆಗಮನದಿಂದ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಯಿತು. ಅವರು ಭಾರತದಲ್ಲಿನ ಶಿಕ್ಷಣದ ಹೊಸ ಪದ್ಧತಿಗೆ ಭದ್ರ ಬುನಾದಿ ಹಾಕಿದರು. ಸ್ವಾತಂತ್ರ್ಯ ಪಡೆದ ನಂತರವೂ ಸಹ ಬ್ರಿಟಿಷರು ಹಾಕಿದ ಭದ್ರವಾದ ತಳಹದಿ ಶಿಕ್ಷಣದ ಆಧಾರದ ಮೇಲೆ ಆಧುನಿಕ ಶಿಕ್ಷಣ ಕ್ರಮವನ್ನು ಕಟ್ಟುವಲ್ಲಿ ಯಶಸ್ವಿಯಾದರೂ ಸಹ ನಮ್ಮ ಭವ್ಯ ಭಾರತಕ್ಕೆ ಸ್ವಾತಂತ್ರ್ಯ ಬಂದ 67 ವರ್ಷಗಳು ಕಳೆದರೂ ಸಹ ಒಂದು ಉತ್ಕೃಷ್ಟ / ಶ್ರೇಷ್ಟ ಮತ್ತು ಭದ್ರವಾದ ಶಿಕ್ಷಣ ಪದ್ಧತಿಯನ್ನು ಸ್ಥಾಪಿಸುವಲ್ಲಿ ಇಂದಿಗೂ ಸಾಧ್ಯವಾಗಿಲ್ಲ. ಇದು ನಮ್ಮ ಶಿಕ್ಷಣ ಪದ್ಧತಿ ಸಮಸ್ಯೆಯಾಗಿರುವುದಲ್ಲದೇ ಒಂದು ಸವಾಲಾಗಿ ನಮ್ಮ ದೇಶವನ್ನು ಕಾಡುತ್ತಿರುವುದು ದುರಂತದ ಸಂಗತಿಯೇ ಆದ್ದರಿಂದ ನಾವು ನಮ್ಮ ದೇಶದ ಭವ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಶ್ರೇಷ್ಠ ಮತ್ತು ಭದ್ರವಾದ ಶಿಕ್ಷಣ ವ್ಯವಸ್ಥೆ ರೂಪಿಸುವಲ್ಲಿ ಇಂದು ನಾವುಗಳೆಲ್ಲ ಶ್ರಮಿಸುವ ಅಗತ್ಯವಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಪದ್ಧತಿ ಭಾರತದ ಆಧುನಿಕ ಶಿಕ್ಷಣ ಕ್ರಮವು 10+2+3 ಮಾದರಿಯದ್ದಾಗಿದ್ದು, ಇದು ಸಾಮಾನ್ಯ ಶಿಕ್ಷಣ, ಪದವಿ ಪೂರ್ವ, ಉನ್ನತ ಶಿಕ್ಷಣಗಳನ್ನೊಳಗೊಂಡಿದೆ. ಭಾರತದಲ್ಲಿ ಉನ್ನತ ಶಿಕ್ಷಣವು 12ನೇ ತರಗತಿಯ (+2 ಹಂತ) ನಂತರ ಪ್ರಾರಂಭವಾಗುತ್ತದೆ. +2 ಹಂತದ ನಂತರ ಬರುವ ಶಿಕ್ಷಣವೇ ಉನ್ನತ ಶಿಕ್ಷಣ. ಇದನ್ನು ವಿಶ್ವವಿದ್ಯಾಲಯದ ಶಿಕ್ಷಣವೆಂತಲೂ ಕರೆಯುತ್ತಾರೆ. ವಿಶ್ವವಿದ್ಯಾಲಯ ಎಂಬುದನ್ನು ಇಂಗ್ಲೀಷಿನಲ್ಲಿ University ಎನ್ನುತ್ತಾರೆ. ಈ ಇಂಗ್ಲೀಷ್ ಪದ ಲ್ಯಾಟಿನ್ ಭಾಷೆಯ Universitia ಎಂಬ ಪದದಿಂದ ಬಂದಿದೆ. ಇದರ ಅರ್ಥ ಸಮುದಾಯ ಅಥವಾ ಒಟ್ಟುಗೂಡಿದ ಒಂದು ಅಂಗ ಅಂದರೆ ಯಾರು ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆಯಲ್ಲಿ ನಿರತರಾಗಿರುವರೋ ಅಂತಹ ವಿದ್ಯಾರ್ಥಿ ಮತ್ತು ಶಿಕ್ಷಕರ ಸಮುದಾಯ ಎನ್ನಬಹುದು. ಉನ್ನತ ಶಿಕ್ಷಣವು ಮನುಕುಲವು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ನೈತಿಕ, ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚಿಂತನ-ಮಂಥನ ಮಾಡಲು ಅವಕಾಶ ಮಾಡಿಕೊಟ್ಟು ವಿಶೇಷವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ ರಾಷ್ಟ್ರ ಮತ್ತು ಜಗತ್ತಿನ ಅಭಿವೃದ್ದಿಗೆ ತನ್ನ ಕಾಣಿಕೆಯನ್ನು ನೀಡುವ ಶಿಕ್ಷಣವಾಗಿದೆ. ಉನ್ನತ ಶಿಕ್ಷಣವು 12ನೇ ತರಗತಿಯ (+2 ಹಂತ) ನಂತರ ಪ್ರಾರಂಭವಾಗಿ 3 ವರ್ಷದ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ, ಬಿ.ಸಿ.ಎ ಮುಂತಾದ ಪದವಿಗಳು ಅಥವಾ 5 ವರ್ಷದ ಹಾನರ್ಸ್ ಪದವಿ ಪಡೆಯುವುದಾಗಿದೆ ಮತ್ತು 4ವರ್ಷದ ಇಂಜಿನಿಯರಿಂಗ್ 1 ವರ್ಷದ ಪ್ರಾಯೋಗಿಕ ತರಬೇತಿ ಕೋರ್ಸ್, ಮೆಡಿಕಲ್, ಕಾನೂನು, ಕೃಷಿ, ತೋಟಗಾರಿಕೆ, ಬಹುಮಾಧ್ಯಮ ಮುಂತಾದ ಪದವಿಗಳ ಶಿಕ್ಷಣ ಅಲ್ಲದೇ 2 ವರ್ಷದ ಅವಧಿಯ ಸ್ನಾತ್ತಕೋತ್ತರ ಶಿಕ್ಷಣದ ನಂತರ ಎಂ.ಫಿಲ್, ಪಿಹೆಚ್.ಡಿ, ಡಿ.ಲಿಟ್ ಮುಂತಾದ ಶಿಕ್ಷಣಗಳನ್ನು ಪಡೆಯುವ ಶಿಕ್ಷಣವೂ ಸೇರಿದೆ. ಈ ಉನ್ನತ ಶಿಕ್ಷಣವು ದೂರ ಶಿಕ್ಷಣ ಮತ್ತು ರೆಗ್ಯುಲರ್ ಮಾದರಿಯಲ್ಲಿ ದೊರೆಯುತ್ತದೆ. ಇತ್ತೀಚೆಗೆ ಆನ್ಲೈನ್ ಮಾದರಿಯ ಶಿಕ್ಷಣವೂ ಬಂದಿದೆ. ಉನ್ನತ ಶಿಕ್ಷಣದ ಸಂಸ್ಥೆಗಳ ಬೆಳವಣಿಗೆ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳು 1950 ರಿಂದ 2011-12 ರವರೆಗೆ ಬೆಳೆದು ಬಂದಿರುವ ಬೆಳೆವಣಿಗೆಯನ್ನು ಈ ಕೆಳಗಿನ ಕೋಷ್ಟಕದಿಂದ ತಿಳಿಯಬಹುದು. ಭಾರತದಲ್ಲಿ ಉನ್ನತ ಶಿಕ್ಷಣವು ಗಮನಾರ್ಹವಾದ ಬೆಳವಣಿಗೆಯಾಗಿದೆ. ಅಂದರೆ 1950-51 ರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಕೇವಲ 30 ವಿಶ್ವವಿದ್ಯಾಲಯಗಳು ಮತ್ತು 695 ಕಾಲೇಜುಗಳಿಂದ 700 ವಿಶ್ವವಿದ್ಯಾಲಯಗಳು ಮತ್ತು 35,539 ಕಾಲೇಜುಗಳ (2011-13 ರಲ್ಲಿದ್ದಂತೆ) ವರೆಗೆ ಬೆಳೆದು ಬಂದಿವೆ. ಇನ್ನೂ ವಾರ್ಷಿಕವಾಗಿ 25 ಮಿಲಿಯನ್ (2012-13 ರಲ್ಲಿದ್ದಂತೆ) ವಿದ್ಯಾರ್ಥಿಗಳು ಮುಕ್ತ ಮತ್ತು ದೂರ ಶಿಕ್ಷಣ ಸೇರಿ ಉನ್ನತ ಶಿಕ್ಷಣಕ್ಕೆ ದಾಖಲಾತಿ ಪಡೆಯುತ್ತಿದ್ದಾರೆ. ಅಲ್ಲದೇ ಇಂದು ಭಾರತ ಜಗತ್ತಿನಲ್ಲಿ ಆಮೇರಿಕಾ ಮತ್ತು ಚೈನಾ ನಂತರ ನಂತರದ 3ನೇ ದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆ ಹೊಂದಿದೆ. ಭಾರತದ ಉನ್ನತ ಶಿಕ್ಷಣಕ್ಕೆ ಶೇ.44% ರಷ್ಟು ರಾಜ್ಯ ವಿಶ್ವವಿದ್ಯಾಲಯಗಳು, ಶೇ.22%ರಷ್ಟು ಖಾಸಗೀ ವಿಶ್ವವಿದ್ಯಾಲಯಗಳು, ಶೇ.18% ರಷ್ಟು ಡೀಮ್ಡ್ ವಿಶ್ವವಿದ್ಯಾಲಯಗಳು, ಶೇ.10% ರಷ್ಟು ರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಗಳು, ಶೇ.6% ರಷ್ಟು ಕೇಂದ್ರೀಯ ವಿಶ್ವವಿದ್ಯಾಲಯಗಳು ತಮ್ಮದೇಯಾದ ಕೊಡುಗೆಯನ್ನು ನೀಡಿವೆ. ಹಾಗೆಯೇ ಭಾರತದಲ್ಲಿ ಬಹುತೇಕವಾಗಿ ಉನ್ನತ ಶಿಕ್ಷಣದ ಕಾಲೇಜುಗಳನ್ನು ಖಾಸಗೀ ವಲಯದವರು (ಶೇ.73%) ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ.58% ರಷ್ಟು ಖಾಸಗೀ ಅನುದಾನ ರಹಿತ ಮತ್ತು ಶೇ.14.8 ರಷ್ಟು ಅನುದಾನಿತ ಕಾಲೇಜುಗಳಿವೆ. ಸರ್ಕಾರದ ವಲಯದಲ್ಲಿ ಶೇ.26.8% ರಷ್ಟು ಕಾಲೇಜುಗಳನ್ನು ಹೊಂದಿದ್ದು ಉನ್ನತ ಶಿಕ್ಷಣಕ್ಕೆ ಖಾಸಗೀಯವರದೇ ಹೆಚ್ಚಿನ ಕೊಡುಗೆಯಿದೆ. ಭಾರತದ ರಾಜ್ಯಗಳ ಪೈಕಿ ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳೆರಡರಲ್ಲಿ ಶೇ.80% ರಷ್ಟು ಖಾಸಗೀ ಅನುದಾನರಹಿತ ಕಾಲೇಜುಗಳಿದ್ದರೆ ಬಿಹಾರ್ನಲ್ಲಿ ಮಾತ್ರ ಶೇ.5.2% ರಷ್ಟು, ಅಸ್ಸಾಂ ನಲ್ಲಿ ಶೇ.12.2% ರಷ್ಟಿರುವುದು ಕಂಡುಬಂದಿದೆ. ಆದರೆ ಖಾಸಗೀ ವಲಯದ ಕಾಲೇಜುಗಳಲ್ಲಿ ಉನ್ನತ ಶಿಕ್ಷಣದ ದಾಖಲಾತಿ ಮಾತ್ರ ಕಡಿಮೆಯಿದೆ. ಶೇ.30% ರಷ್ಟು ಕಾಲೇಜುಗಳಲ್ಲಿ 100 ಕ್ಕಿಂತ ಕಡಿಮೆ ದಾಖಲಾತಿಯಿದೆ. ಶೇ.36 ರಷ್ಟು ಕಾಲೇಜುಗಳಲ್ಲಿ 100 ರಿಂದ 500 ಕ್ಕಿಂತ ಕಡಿಮೆ ದಾಖಲಾತಿಯಿದೆ. ಕೇವಲ ಶೇ.4% ರಷ್ಟು ಕಾಲೇಜುಗಳು ಮಾತ್ರ 3000ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿ ಹೊಂದಿವೆ. ಇದರಿಂದ ತಿಳಿದುಬರುವುದೇನೆಂದರೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಿದ್ದು ಹೆಚ್ಚಿಸುವ ಅಗತ್ಯವಿದೆ. ಈ ಮೇಲಿನ ಕೋಷ್ಟಕಗಳನ್ನು ಗಮನಿಸಿದಾಗ ಕಾಲೇಜು / ವಿಶ್ವವಿದ್ಯಾಲಯಗಳು ಒಂದು ನಿರ್ದಿಷ್ಟವಾದ ಶ್ರೇಷ್ಟತೆಯ ನಿಯಮಗಳನ್ನು ಒಪ್ಪಿಕೊಳ್ಳುವುದು ಮತ್ತು ಅವುಗಳನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ಗುಣಮಟ್ಟದ ಮಾನ್ಯತೆ ಎಂದು ಹೇಳಬಹುದು. ನ್ಯಾಕ್ ಮಾನ್ಯತೆಯು ಇದುವರೆಗೂ ಭಾರತದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ಕಡ್ಡಾಯವಾಗಿಲ್ಲ. ಸ್ವಯಂ ಆಸಕ್ತಿಯಿಂದ ಮಾನ್ಯತೆ ಪಡೆಯುವುದು ಜಾರಿಯಲ್ಲಿದೆ. ಇದರ ಫಲಿತಾಂಶವನ್ನು ಗಮನಿಸಿದಾಗ ಕೇವಲ ತುಂಬಾ ಕಡಿಮೆ ಶೇಕಡವಾರು ಪ್ರಮಾಣ ಉನ್ನತ ಶಿಕ್ಷಣದ ಸಂಸ್ಥೆಗಳು NAAC ಸಂಸ್ಥೆಯಿಂದ ಮಾನ್ಯತೆ ಪಡೆದಿರುವುದು ಕಂಡುಬರುತ್ತದೆ. ಇದನ್ನು ಅಂಕಿ ಅಂಶಗಳಿಂದ ನೋಡುವುದಾದರೆ ಈ ಮೇಲಿನ ಕೋಷ್ಟಕ ಗಮನಿಸಿದರೆ ಒಟ್ಟು ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳ ಪೈಕಿ ವಿಶ್ವವಿದ್ಯಾಲಯಗಳು ಕೇವಲ 31.2% ರಷ್ಟು ಹಾಗೂ ಒಟ್ಟು ಕಾಲೇಜುಗಳ ಪೈಕಿ 14.5% ರಷ್ಟು ನ್ಯಾಕ್ ಸಂಸ್ಥೆಯಿಂದ ಮಾನ್ಯತೆ ಪಡೆದಿರುವುದು ತೋರಿಸುತ್ತದೆ. ವಿಶ್ವವಿದ್ಯಾಲಯದ ಧನಸಹಾಯ ಆಯೋಗವು (UGC) ಇತ್ತೀಚೆಗೆ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆಯಬೇಕೆಂದು ಶಿಫಾರಸ್ಸು ಮಾಡಿದೆ. ಇದರಿಂದ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಬೆಳೆಸುವುದು ಮತ್ತು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದ ಕಡೆಗೆ ಆಕರ್ಷಿಸುವುದು ಭವಿಷ್ಯದಲ್ಲಿ ಇದು ಕಡ್ಡಾಯ ಮಾಡಬಹುದು ಹಾಗೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ 12ಬಿ ಮತ್ತು 12ಎಫ್ ಪಡೆಯದ ಸಂಸ್ಥೆಗಳು ಬಹುತೇಕವಾಗಿ ಹೆಚ್ಚಾಗಿವೆ. ಆದ್ದರಿಂದ ಯುಜಿಸಿ ಕಾಯಿದೆಯಲ್ಲಿ ಬದಲಾವಣೆ ತಂದು ಈ ಸಂಸ್ಥೆಗಳಿಗೆ ಧನಸಹಾಯ ಒದಗಿಸುವುದು ಅಗತ್ಯವಿದೆ. ಭಾರತದ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಮತ್ತು ಅನುಪಾತ: ಈ ಮೇಲಿನ ಕೋಷ್ಟಕಗಳನ್ನು ಗಮನಿಸಿದಾಗ ಭಾರತದ ಉನ್ನತ ಶಿಕ್ಷಣದ ದಾಖಲಾತಿಯನ್ನು ಗಮನಿಸಿದರೆ ನಿರಂತರವಾಗಿ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ. 1950-51 ರಲ್ಲಿ ಉನ್ನತ ಶಿಕ್ಷಣಕ್ಕೆ 0.21 ಮಿಲಿಯನ್ ದಾಖಲಾಗಿದ್ದು, 2011-12 ರಲ್ಲಿ ಅದು 22 ಮಿಲಿಯನ್ನಷ್ಟು ಏರಿಕೆಯಾಗಿದೆ. ಹಾಗೆಯೇ ಒಟ್ಟು ದಾಖಲಾತಿಯ ಅನುಪಾತ 1950-51 ರಲ್ಲಿ ಶೇ.0.40 ರಷ್ಟಿದ್ದುದು, 2012-13 ರಲ್ಲಿ ಶೇ.19.4% ಏರಿಕೆಯಾಗಿರುವುದು ಗಮನಾರ್ಹವಾದ ಬೆಳವಣಿಗೆ. ಆದರೆ ಪ್ರಪಂಚದ ಕೆಲವು ರಾಷ್ಟ್ರಗಳಿಗೆ (2012-13 ರಲ್ಲಿದ್ದಂತೆ ಯು.ಎಸ್.ಎ-95%, ರಷ್ಯಾ-76%, ಸ್ವೀಡನ್-74%, ಅರ್ಜಂಟೈನಾ-71%, ಕೆನಡಾ-60%, ಯು.ಕೆ-59%, ಬ್ರೆಜಿಲ್-26%, ಚೈನಾ-25% ಮತ್ತು ದಕ್ಷಿಣ ಆಪ್ರಿಕಾ-15% ಒಟ್ಟು ದಾಖಲಾತಿ ಅನುಪಾತವಿದೆ.) ಹೋಲಿಸಿದಾಗ ಮತ್ತು ಪ್ರಪಂಚದ ಉನ್ನತ ಶಿಕ್ಷಣದ ಒಟ್ಟು ದಾಖಲಾತಿಯ ಅನುಪಾತದ ಸರಾಸರಿ (29%) ಗೆ ಹೋಲಿಸಿದಾಗ್ಯೂ ನಮ್ಮ ದೇಶದ ಒಟ್ಟು ದಾಖಲಾತಿಯ ಅನುಪಾತ (ಜಿ.ಇ.ಆರ್) ತುಂಬಾ ಕಡಿಮೆಯಿದೆ. ಭಾರತದ ಉನ್ನತ ಶಿಕ್ಷಣದಲ್ಲಿ ಕಳೆದ ವರ್ಷಗಳಿಂದಲೂ ಪರಿಶಿಷ್ಟ ಜಾತಿ (ಎಸ್ ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ ಟಿ)ಗಳ ದಾಖಲಾತಿ ಪ್ರಮಾಣ ಕಡಿಮೆಯಿದೆ. ಈ ಮೇಲಿನ ಕೋಷ್ಟಕ ಗಮನಿಸಿದರೆ ಒಟ್ಟು ದಾಖಲಾತಿಯ ಅನುಪಾತ ಎಸ್.ಸಿ ಶೇ.12.2% ರಷ್ಟು ಹಾಗೆಯೇ ಎಸ್.ಟಿ ಶೇ.9.7%ರಷ್ಟು (2009-10). ಇದು ದೇಶದ ಸರಾಸರಿ ದಾಖಲಾತಿಯ ಅನುಪಾತಕ್ಕಿಂತ ಕಡಿಮೆಯಿದೆ. ಆದ್ದರಿಂದ ಈ ಸಮುದಾಯಕ್ಕೆ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳುವ ಅಗತ್ಯವಿದೆ. ಅದೇ ರೀತಿ ನಮ್ಮ ದೇಶದ ಮಹಿಳೆ ಮತ್ತು ಪುರುಷರ ಉನ್ನತ ಶಿಕ್ಷಣದ ಒಟ್ಟು ದಾಖಲಾತಿಯ ಅನುಪಾತದಲ್ಲಿ ತುಂಬಾ ವ್ಯತ್ಯಾಸವಿದೆ. ಮಹಿಳೆಯರು ಶೇ.12.7%ರಷ್ಟು ಮತ್ತು ಪುರುಷರು ಶೇ.17.1%ರಷ್ಟು ಇರುವುದರಿಂದ ಹಾಗೆಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ವ್ಯತ್ಯಾಸವಿರುವುದು ಕಂಡುಬಂದಿದೆ. ಇನ್ನು ಉನ್ನತ ಶಿಕ್ಷಣದ ಒಟ್ಟು ದಾಖಲಾತಿಯ ಅನುಪಾತದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಸಂಖ್ಯೆಯನ್ನು ಗಮನಿಸಿದರೆ ಮುಖ್ಯವಾದ ಅಂಶ ಕಾಣಿಸುತ್ತದೆ. ನಗರದ ಅನುಪಾತ ಶೇ.32.5%ರಷ್ಟಿದ್ದು, ಇದು ಗ್ರಾಮೀಣ ಪ್ರದೇಶದ ಅನುಪಾತಕ್ಕಿಂತ ಎರಡು ಪಟ್ಟು ಏರಿಕೆಯಾಗಿದೆ. ಆದರೆ ಗ್ರಾಮೀಣ ಪ್ರದೇಶದ ಅನುಪಾತ ಶೇ.13.9% ಇದೆ. ನಗರ ಪ್ರದೇಶಗಳಲ್ಲಿ ಖಾಸಗೀ/ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿದ್ದು ಯುವಕರನ್ನು ಆಕರ್ಷಿಸುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಆದ್ದರಿಂದ ತುರ್ತಾಗಿ ಗ್ರಾಮೀಣ ಪ್ರದೇಶಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳು ತೆರೆಯಬೇಕಾಗಿದೆ. +2 ಹಂತದ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದರವು 2007 ರಲ್ಲಿ ಶೇ.61.4% ರಷ್ಟು, 20009-10 ರಲ್ಲಿ ಶೇ.67.55% ರಷ್ಟಿದ್ದು ಗಮನಾರ್ಹವಾದ ಪ್ರಗತಿಯಾಗಿದೆ. ಆದರೆ ಅದೇ ಉನ್ನತ ಶಿಕ್ಷಣದಲ್ಲಿಯೂ ಸಹ ಶೇ.32.45%ರಷ್ಟು ಶಿಕ್ಷಣದಿಂದ ಹೊರಗುಳಿಯುವುದು ಕಂಡುಬರುತ್ತಿರುವುದು ಗಮನಿಸಿದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಂತೆ ಉನ್ನತ ಶಿಕ್ಷಣದಲ್ಲಿಯೂ ಉನ್ನತ ಶಿಕ್ಷಣದಿಂದ ಅಥವಾ ಕಾಲೇಜು / ವಿಶ್ವವಿದ್ಯಾಲಯಗಳ ಶಿಕ್ಷಣದಿಂದ ಹೊರಗುಳಿಯುತ್ತಿರುವ ವಿಷಯದ ಬಗ್ಗೆ ಗಮನ ಹರಿಸಬೇಕಾಗಿದೆ. ಮೇಲಿನ ಕೋಷ್ಟಕದಲ್ಲಿರುವಂತೆ 1950-51 ರಿಂದ 2011-12 ರವರೆಗೆ ನಿರಂತರವಾಗಿ ಬೋಧನಾ ಸಿಬ್ಬಂದಿ ಏರಿಕೆಯಾಗಿರುವುದು ಗಮನಾರ್ಹವಾದ ಬೆಳವಣಿಗೆ. ಆದರೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತಕ್ಕೆ ಅನುಗುಣವಾಗಿ ನೋಡಿದರೆ ಕಡಿಮೆಯಿದೆ. ಹಾಗೂ ನಮ್ಮಲ್ಲಿ ಬೋಧನಾ ಸಿಬ್ಬಂದಿಯ ಕೊರತೆ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶೇ.35%ರಷ್ಟು, ರಾಜ್ಯ ವಿಶ್ವವಿದ್ಯಾಲಯಗಳು ಶೇ.40% ರಷ್ಟು, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಶೇ.25% ರಷ್ಟು, ಕಾಲೇಜುಗಳಲ್ಲಿ ಶೇ.40% ರಷ್ಟು ಕಂಡುಬಂದಿದೆ. ಆದ್ದರಿಂದ ತುರ್ತಾಗಿ ಅರ್ಹ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗಿದೆ. ಭಾರತದ ಉನ್ನತ ಶಿಕ್ಷಣದ ವೆಚ್ಚ ಈ ಮೇಲಿನ ಕೋಷ್ಟಕಗಳನ್ನು ಗಮನಿಸಿದಾಗ ಸಾರ್ವಜನಿಕ ವೆಚ್ಚದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅದರಲ್ಲೂ ಉನ್ನತ ಶಿಕ್ಷಣಕ್ಕೆ ಇಲ್ಲಿಯವರೆವಿಗೂ ತುಂಬಾ ಕಡಿಮೆ ವಿನಿಯೋಗಿಸಿರುವುದು ಕಂಡುಬರುತ್ತದೆ. ಅಂದರೆ ಒಟ್ಟು ಜಿಡಿಪಿ ಯಲ್ಲಿ ಶೇ.1% ಕ್ಕಿಂತ ಕಡಿಮೆಯಿದೆ. ರಾಷ್ಟ್ರೀಯ ಶಿಕ್ಷಣ ನೀತಿ-1968 ಮತ್ತು 1986 (1992 ರ POA) ಇವುಗಳು ಸರ್ಕಾರವು ಒಟ್ಟು ಜಿಡಿಪಿಯಲ್ಲಿ ಶೇ.6% ರಷ್ಟು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕೆಂದು ಶಿಫಾರಸ್ಸು ಮಾಡಿದ್ದವು. ಆದರೆ 2010-11 (BE) ರ ಆಯವ್ಯಯದಲ್ಲಿ ಶಿಕ್ಷಣದ ವೆಚ್ಚವೂ ಸಹ 3.8% ರಷ್ಟು ಮೀರಿಲ್ಲವೆಂಬುದು ತಿಳಿದುಬರುತ್ತದೆ. ಉನ್ನತ ಶಿಕ್ಷಣದಲ್ಲಿ ಸಂಶೋಧನೆಯು ಅವಿಭಾಜ್ಯ ಅಂಗ. ಇದರಿಂದ ತಕ್ಷಣದಲ್ಲಿ ಸಂದಿಗ್ಧ ಪರಿಸ್ಥಿತಿಯನ್ನು ಬದಲಾವಣೆ ತರಬಹುದಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ವ್ಯಯ ಮಾಡುವುದರಲ್ಲಿ ನಮ್ಮ ಭಾರತ ದೇಶದ ಪಾಲು 2.1%, ಚೈನಾ-12.5%. ಅಲ್ಲದೇ ಈ ಮೇಲಿನ ಕೋಷ್ಟಕದಲ್ಲಿ ಇತರೆ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕತೆಯ ವ್ಯಯವನ್ನು ತೋರಿಸಲಾಗಿದೆ. ಇದರಿಂದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ (R & D) ಆರ್ಥಿಕವಾಗಿ ವ್ಯಯ ಮಾಡುವುದನ್ನು ಹೆಚ್ಚಿಸಬೇಕೆಂದು ಸ್ಪಷ್ಟವಾಗಿ ತಿಳಿದು ಬರುತ್ತದೆ.
ಭಾರತದ ಉನ್ನತ ಶಿಕ್ಷಣದ ವ್ಯವಸ್ಥೆಯಲ್ಲಿ ಮುಖ್ಯವಾಗಿ ಪಾತ್ರವಹಿಸುವ ಸಂಸ್ಥೆಗಳು ಭಾರತದಲ್ಲಿ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ (ಯುಜಿಸಿ)ಯು ಉನ್ನತ ಶಿಕ್ಷಣದಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತದೆ. ಇದು ಧನ ಸಹಾಯ ಕೊಡುವದಷ್ಟನ್ನೇ ಅಲ್ಲ ಅಲ್ಲಿನ ಉನ್ನತ ಶಿಕ್ಷಣದ ಉತ್ಕೃಷ್ಟತೆ/ ಗುಣಮಟ್ಟವನ್ನು ನಿರ್ಧರಿಸುವ ಮತ್ತು ನಿರ್ವಹಿಸುವ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಂಯೋಜಿಸುವ ಕಾರ್ಯಗಳನ್ನು ಮಾಡುವ ಜವಾಬ್ದಾರಿ ಹೊಂದಿರುವ ಒಂದು ಸ್ವಾಯತ್ತತೆಯುಳ್ಳ ಸಂಸ್ಥೆಯಾಗಿದೆ. ಇದಲ್ಲದೇ ವಿವಿಧ ವೃತ್ತಿಪರ ಪರಿಷತ್ತುಗಳು ಕೋರ್ಸುಗಳಿಗೆ ಮಾನ್ಯತೆ ಕೊಡುವ ಮತ್ತು ವೃತ್ತಿಪರ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಹಾಗೂ ಪದವಿ ಶಿಕ್ಷಣದ ಕೋರ್ಸುಗಳಿಗೆ ಧನಸಹಾಯ ಕೊಡುವ ಜವಾಬ್ದಾರಿಯುಳ್ಳ ಸಂಸ್ಥೆಗಳೆಂದರೆ AICTE, DEC, ICAR, BCI, NCTE, RCI, MCI, PCI, INC, DCI, CCH, CCIM. ಇವುಗಳು ಭಾರತದಲ್ಲಿರುವ ವೃತ್ತಿಪರ ಪರಿಷತ್ಗಳಾಗಿವೆ. ಭಾರತದ ಉನ್ನತ ಶಿಕ್ಷಣಕ್ಕೆ ಹೊಸ ರೂಪವನ್ನು ಕೊಡುವ ಹೊಸ ಯೋಜನೆ ರೂಸಾ (RUSA) ನಮ್ಮ ಭಾರತ ಸರ್ಕಾರದ ಆರ್ಥಿಕ ವಲಯದ ಕ್ಯಾಬಿನೆಟ್ ಸಮಿತಿ 3ನೇ ಅಕ್ಟೋಬರ್ 2013 ರಂದು ರೂಸಾ (ಆರ್ ಯುಎಸ್ಎ), ಇದು ಭಾರತದ ಉನ್ನತ ಶಿಕ್ಷಣಕೋಸ್ಕರ ಬಂದಿರುವ ಸೇನಾಪತಿಯ ಹಡಗಿನ ತರಹದ ಯೋಜನೆಗೆ ಕೇಂದ್ರ ಅನುಮೋದನೆ ನೀಡಿತು. ನಮ್ಮ ಭಾರತದ ಕೇಂದ್ರ ಸರ್ಕಾರವು 2013ರಲ್ಲಿ ಉನ್ನತ ಶಿಕ್ಷಣಕ್ಕೆ ರೂಸಾ (ಆರ್ ಯುಎಸ್ಎ) ಎಂಬ ಕೇಂದ್ರ ಯೋಜನೆಯನ್ನು ಜಾರಿಗೊಳಿಸಿತು. ಇದು ಉನ್ನತ ಶಿಕ್ಷಣಕ್ಕೆ ಸೇನಾಪತಿಯ ಹಡಗಿನಂತಿದ್ದು, ಇದು ರಾಷ್ಟ್ರೀಯ ಉನ್ನತ ಶಿಕ್ಷಣದ ಮಿಷನ್ ಎಂತಲೂ ಹೇಳಬಹುದಾಗಿದೆ. ಇದರ ಮುಖ್ಯ ಗುರಿ ರಾಜ್ಯಮಟ್ಟದಲ್ಲಿ ಉನ್ನತ ಶಿಕ್ಷಣದ ದಾಖಲಾತಿ, ಸಮತೆ ಮತ್ತು ಗುಣಮಟ್ಟವನ್ನು ಉನ್ನತ ಶಿಕ್ಷಣದ ಅಭಿವೃದ್ಧಿ ಯೋಜನೆ ಮೂಲಕ ತರುವುದಾಗಿದೆ. ರೂಸಾ ಮೂಲಕ ಈಗಿನ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತ ಶೇ.19% ರಿಂದ 2022ರಷ್ಟೊತ್ತಿಗೆ ಶೇ 32% ರಷ್ಟಕ್ಕೆ ಹೆಚ್ಚಿಸುವುದನ್ನು ಯೋಜಿಸಲಾಗಿದೆ. ಹಾಗೆಯೇ ಉನ್ನತ ಶಿಕ್ಷಣಕ್ಕೆ ರಾಜ್ಯಗಳು ವಿನಿಯೋಗಿಸುತ್ತಿರುವ ಹಣವನ್ನು ಹೆಚ್ಚಿಸುವುದು ಸೇರಿದೆ. ರೂಸಾ ಯೋಜನೆಯ ಕೆಲವೊಂದು ಮುಖ್ಯ ಉದ್ದೇಶಗಳು ಈ ಕೆಳಗಿನಂತಿವೆ.
ರೂಸಾ ಯೋಜನೆಯ ಸಂಸ್ಥಾ ರಚನೆಯು ರಾಷ್ಟ್ರೀಯ ಮಟ್ಟದಲ್ಲಿ 4 ಸಂಸ್ಥೆಗಳನ್ನು ಹೊಂದಿರುತ್ತದೆ. ಅವುಗಳೆಂದರೆ ದ ರೂಸಾ ಮಿಷನ್ ಅಥಾರಿಟಿ ಪ್ರೊಜಿಕ್ಟ್ ಅಪ್ರೂವಲ್ ಬೋರ್ಡ್, ಟೆಕ್ನಿಕಲ್ ಸಪೋರ್ಟ್ ಗ್ರೂಪ್ ಅಂಡ್ ಪ್ರೊಜಿಕ್ಟ್ ಡೈರೆಕ್ಟರೋಟ್ (ಎಂ.ಎಚ್.ಆರ್.ಡಿ ಯಲ್ಲಿ) ಇವೆಲ್ಲವೂ ಸಹ ಎಲ್ಲಾ ರೀತಿಯ ಮಾರ್ಗದರ್ಶನ, ನೀತಿ ನಿರ್ಣಯ ಮತ್ತು ಯೋಜನೆ ನಿರ್ವಹಣೆ ಸಂಯೋಜಿಸುವುದು ಹಾಗೂ ಕಾರ್ಯರೂಪಕ್ಕೆ ತರುವ ಕೆಲಸವನ್ನೂ ನಿರ್ವಹಿಸುತ್ತವೆ. ರಾಜ್ಯಮಟ್ಟದಲ್ಲಿ ಪ್ರತಿಯೊಂದು ರಾಜ್ಯದಲ್ಲಿಯೂ ಸ್ಟೇಟ್ ಹೈಯರ್ ಎಜುಕೇಷನ್ ಕೌನ್ಸಿಲ್ ಕೇಂದ್ರ ಬಿಂದುವಾಗಿರುತ್ತದೆ. ಇದು ಪ್ರೊಜೆಕ್ಟ್ ಡೈರೆಕ್ಟರೋಟ್ಗೆ (ರಾಜ್ಯ ಸರ್ಕಾರದಲ್ಲಿ) ಸಹಾಯ ಮಾಡುತ್ತದೆ ಮತ್ತು ಟೆಕ್ನಿಕಲ್ ಸಪೋರ್ಟ್ ಗ್ರೂಪ್ ರಾಜ್ಯ ಮಟ್ಟದ ಪ್ರೊಜಕ್ಟ್ನ ನಿರ್ವಹಣೆ, ಸಂಯೋಜಿಸುವುದು, ಕಾರ್ಯರೂಪಕ್ಕೆ ತರುವುದು ಹಾಗೂ ಉಸ್ತುವಾರಿ ನೋಡಿಕೊಳ್ಳುತ್ತದೆ. ಸಂಸ್ಥೆಯ ಮಟ್ಟದಲ್ಲಿ ಬೋರ್ಡ್ ಆಫ್ ಗೌವರ್ನರ್ಸ್ ಮತ್ತು ಪ್ರೊಜೆಕ್ಟ್ ಮಾನಟೀರಿಂಗ್ ಯುನಿಟ್ ಮುಖ್ಯವಾಗಿ ಸಂಸ್ಥೆಯ ರೂಸಾ ಯೋಜನೆಯ ರಚನೆ ಮಾಡುವುದಾಗಿರುತ್ತದೆ. ಈ ಯೋಜನೆಯು ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ. ಭಾರತದ ಉನ್ನತ ಶಿಕ್ಷಣದ ಪ್ರಮುಖ ಸಮಸ್ಯೆಗಳು ನಮ್ಮ ದೇಶದ ಉನ್ನತ ಶಿಕ್ಷಣವು ಬ್ರಿಟಿಷರ ಕಾಲದಿಂದ ಇಂದಿನವರೆಗೂ ಗಮನಾರ್ಹವಾದ ಬೆಳವಣಿಗೆಯನ್ನು ಹೊಂದುತ್ತಾ ಬಂದಿದ್ದರೂ ಸಹ ಉನ್ನತ ಶಿಕ್ಷಣ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಇಂದು ಅತಿಮುಖ್ಯವಾಗಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳೆಂದರೆ 1. ಪ್ರವೇಶಾಧಿಕಾರ (Access) ಇಂದು ಉನ್ನತ ಶಿಕ್ಷಣವು ಕಡಿಮೆ ದಾಖಲಾತಿ ಪಡೆಯುತ್ತಿದ್ದು, ಅದರೊಂದಿಗೆ ಒಟ್ಟು ದಾಖಲಾತಿಯ ಅನುಪಾತವು ಶೇ.19.4%ರಷ್ಟಿದೆ. (ಉನ್ನತ ಶಿಕ್ಷಣ ಪಡೆಯುವ ಅರ್ಹತೆಯುಳ್ಳ 18-23 ವರ್ಷದವರು) ಮತ್ತು ನಮ್ಮ ದೇಶದ ಒಟ್ಟು ದಾಖಲಾತಿಯ ಅನುಪಾತವು ಆಮೇರಿಕಾ (80)ರಷ್ಟು, ರಷ್ಯಾ (78)ರಷ್ಟು, ಇಂಗ್ಲೆಂಡ್ (59)ರಷ್ಟು, ಮಲೇಷಿಯಾ (40), ಚೈನಾ (24) ಮುಂತಾದ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಬಹುತೇಕ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಾಗ ನಮ್ಮ ದೇಶದ ಒಟ್ಟು ದಾಖಲಾತಿ ಅನುಪಾತ ಕಡಿಮೆಯಿದೆ. ಅಲ್ಲದೇ 2009-10ರಲ್ಲಿ +2 ಹಂತದಲ್ಲಿ ಅರ್ಹತೆ ಪಡೆದವರಲ್ಲಿ ಶೇ.67.55% ರಷ್ಟು ದಾಖಲಾತಿಯಾದರೆ ಶೇ.32.45% ರಷ್ಟು ಉನ್ನತ ಶಿಕ್ಷಣದಿಂದ ಹೊರಗುಳಿದಿರುವುದು ನೋಡಿದರೆ ನಮ್ಮ ದೇಶಕ್ಕೆ ದಾಖಲಾತಿಯ ಸಮಸ್ಯೆ ಒಂದು ಸವಾಲಾಗಿದೆ. 2. ಸಮತೆ (Equity) ಭಾರತ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ ಮತ್ತು ವಿವಿಧ ಸಂಸ್ಕೃತಿ, ಸಮುದಾಯಗಳನ್ನು ಒಳಗೊಂಡಿರುವ ರಾಷ್ಟ್ರ. ಉನ್ನತ ಶಿಕ್ಷಣವು ಎಲ್ಲರಿಗೂ ಸಮಾನಾವಕಾಶ ನೀಡಬೇಕು. ಆದರೆ 2011ರ ಒಟ್ಟು ದಾಖಲಾತಿಯ ಅನುಪಾತವನ್ನು ಗಮನಿಸಿದರೆ ಶೇ.20.8%ರಷ್ಟು ಪುರುಷರು ಶೇ.17.9%ರಷ್ಟು ಮಹಿಳೆಯರಿದ್ದು, ಲಿಂಗ ತಾರತಮ್ಯದ ಸಮಸ್ಯೆ ತಲೆದೋರಿದೆ. ಅಲ್ಲದೇ ಉನ್ನತ ಶಿಕ್ಷಣದ ಪ್ರವೇಶಾಧಿಕಾಶದಲ್ಲಿ ಸಾಮಾಜಿಕ ಸಮುದಾಯಗಳಲ್ಲಿ ಅಸಮಾನತೆ (ಒಟ್ಟು ದಾಖಲಾತಿಯ ಅನುಪಾತ ಎಸ್.ಸಿ ಶೇ.13.5%, ಎಸ್.ಟಿ ಶೇ.11.2%-2011ರಂತೆ)ಯ ಸಮಸ್ಯೆಯಿದೆ ಹಾಗೂ ರಾಜ್ಯದಿಂದ ರಾಜ್ಯಕ್ಕೆ ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಅಸಮಾನತೆಯಿದೆ. ಉದಾಹರಣೆಗೆ ಗ್ರಾಮೀಣ-ಶೇ.13.9%, ನಗರ-ಶೇ.32.5% ಹಾಗೂ ತಮಿಳುನಾಡು ಶೇ.31.80%, ಬಿಹಾರ ಶೇ.10.5%, ಜಾರ್ಖಂಡ್ ಶೇ 8.1%, ಗುಜರಾತ್ ಶೇ.21.3%ರಷ್ಟು ಒಟ್ಟು ದಾಖಲಾತಿ ಅನುಪಾತವಿರುವುದು. ಇದು ನಮ್ಮ ಉನ್ನತ ಶಿಕ್ಷಣವು ಅಸಮಾನತೆಯ ಸಮಸ್ಯೆಯಿಂದ ಬಳಲುತ್ತಿದೆ. 3.ಗುಣಮಟ್ಟ (Quality) ನಮ್ಮ ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ಬೋಧನಾ ಸಿಬ್ಬಂದಿ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿದೆ. 2008 ರಲ್ಲಿ ಶೇ.40% ರಷ್ಟು ಬೋಧನಾ ಸಿಬ್ಬಂದಿಯ ಕೊರತೆ ಎದುರಿಸುತ್ತಿರುವುದು ಸ್ಮರಿಸಬಹುದು. ಇನ್ನೂ ನ್ಯಾಕ್ ಹೇಳುವ ಪ್ರಕಾರ ಶೇ.62%ರಷ್ಟು ವಿಶ್ವವಿದ್ಯಾಲಯಗಳು ಮತ್ತು ಶೇ.90% ರಷ್ಟು ಕಾಲೇಜುಗಳು ನಿಗಧಿಗೊಳಿಸಿದ ಗುಣಮಟ್ಟದ ಅಂಶಗಳಲ್ಲಿ ಸರಾಸರಿ ಅಥವಾ ಸರಾಸರಿಗಿಂತ ಕಡಿಮೆ ಅಂಶಗಳನ್ನು ಹೊಂದಿರುವುದು ನಮ್ಮ ಗುಣಮಟ್ಟದ ಎಂತಹದ್ದು ಎಂಬುದನ್ನು ತೋರಿಸುತ್ತದೆ. ಇನ್ನೂ ಕಲಿಕೆ-ಬೋಧನೆ ಮತ್ತು ಕಲಿಯುವವರಿಗೆ ಪರಿಪೂರ್ಣವಾದ ಪ್ರೇರಣೆಯು ಇಲ್ಲದಿರುವುದು. ಏಕೆಂದರೆ ನಮ್ಮ ಕಾಲೇಜುಗಳಲ್ಲಿರುವ ಮೌಲ್ಯಮಾಪನದ ಪ್ರಕ್ರಿಯೆಯೇ ಕಾರಣವಾಗಿದೆ. ಉತ್ತಮ ಕೌಶಲ್ಯವುಳ್ಳ ಪದವೀಧರರು ಹೊರಬರುತ್ತಿಲ್ಲ. ಇನ್ನೂ ಸಂಶೋಧನೆಯು ಕಳಪೆಯಾಗಿದ್ದು, ಒಟ್ಟಾರೆ ಶಿಕ್ಷಣವೂ ವ್ಯಾಪಾರದಂತಿದ್ದು ಕಡಿಮೆ ಮಟ್ಟದ ಉದ್ಯೋಗಾವಕಾಶ ಕಲ್ಪಿಸುತ್ತಿರುವ ಮುಂತಾದ ಗುಣಮಟ್ಟದ ಸಮಸ್ಯೆಗಳನ್ನು ಉನ್ನತ ಶಿಕ್ಷಣವು ಇಂದು ಎದುರಿಸುತ್ತಿದೆ. 4.ಆಡಳಿತ ಮತ್ತು ಹಣಕಾಸು ಇಂದು ವಿಶ್ವವಿದ್ಯಾಲಯಗಳು ಕಾಲೇಜುಗಳಿಗೆ ಸಂಯೋಜನೆ ನೀಡುವ ಆಡಳಿತ ಪ್ರಕ್ರಿಯೆಯು ವಿಶ್ವವಿದ್ಯಾಲಯಕ್ಕೆ ಆಡಳಿತದ ಹೊರೆಯಾಗಿದೆ ಮತ್ತು ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಸರಿಯಾದ ರಚನಾತ್ಮಕತೆ ಮತ್ತು ಸ್ವಾಯತ್ತತೆಯಿಲ್ಲದಿರುವುದು, ಖಾಸಗಿ ಕಾಲೇಜುಗಳ ಕೊಡುಗೆ ಉನ್ನತ ಶಿಕ್ಷಣದಲ್ಲಿ ಹೆಚ್ಚಿದ್ದು, ಇವುಗಳು ಉನ್ನತ ಶಿಕ್ಷಣದಲ್ಲಿ ಭಾಗವಹಿಸಲು ಸ್ಪಷ್ಟವಾದ ಮತ್ತು ನಿರ್ದಿಷ್ಟವಾದ ರೂಢಿ-ನಿಯಮಗಳುಳ್ಳ ಆಡಳಿತ ಪ್ರಕ್ರಿಯೆಯಿಲ್ಲ. ಇನ್ನೂ ಆರ್ಥಿಕವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪಾಲು ಕಡಿಮೆಯಿದೆ. ಅಲ್ಲದೇ ನಿರ್ಬಂಧವಿರುವುದು ಹಾಗೂ ಆಯವ್ಯಯದಲ್ಲಿ ತುಂಬಾ ಕಡಿಮೆ ಶೇಕಡವಾರು ಮೀಸಲಿರಿಸುವುದು ಸಮಸ್ಯೆಗಳಾಗಿವೆ. ಭಾರತದ ಉನ್ನತ ಶಿಕ್ಷಣದ ಅಭಿವೃದ್ಧಿಗೆ ಸಲಹೆಗಳು ನಮ್ಮ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯು ಪ್ರಪಂಚದಲ್ಲಿ 3ನೇ ದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆ ಹೊಂದಿರುವ ರಾಷ್ಟ್ರವಾಗಿರುವುದರಿಂದ ನಮ್ಮಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಿ ಪ್ರಪಂಚದಲ್ಲಿ ಅತಿ ದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಅವಕಾಶವೂ ಇದೆ. ಆ ನಿಟ್ಟಿನಲ್ಲಿ ಕೆಲವೊಂದು ಸಲಹೆಗಳೆಂದರೆ
ಉಪಸಂಹಾರ ಭಾರತದ ಉನ್ನತ ಶಿಕ್ಷಣದ ಅಭಿವೃದ್ಧಿಯು ಇಲ್ಲಿಯವರೆವಿಗೂ ಗಮನಾರ್ಹವಾದ ಸಾಧನೆ ಮಾಡಿದ್ದರೂ ಅಭಿವೃದ್ದಿ ಹೊಂದಿರುವ ಬಹುತೇಕ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಾಗ ನಮ್ಮ ದೇಶದ ಉನ್ನತ ಶಿಕ್ಷಣದ ಅಭಿವೃದ್ಧಿ ಹಿಂದುಳಿದಿದೆ. ಹಾಗೆಯೇ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಚೈನಾ, ಮಲೇಷಿಯಾ, ದಕ್ಷಿಣ ಕೋರಿಯಾ ದೇಶಗಳಲ್ಲಿ ನಮ್ಮ ದೇಶದ ಉನ್ನತ ಶಿಕ್ಷಣಕ್ಕಿಂತ ಉತ್ತಮವಾಗಿದೆ. ಪ್ರಸ್ತುತದ ಭಾರತದ ಸಂದಿಗ್ಧ ಪರಿಸ್ಥಿತಿಯಲ್ಲಿ ಉನ್ನತ ಶಿಕ್ಷಣದ ಜೊತೆಗೆ ಉದ್ಯೋಗಾವಕಾಶ ಮಾಡಿಕೊಟ್ಟಾಗ ಮಾತ್ರ ಬಲಾಢ್ಯವಾದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಸಾಧ್ಯ. ತಕ್ಷಣದಲ್ಲಿ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ನಮ್ಮ ಉನ್ನತ ಶಿಕ್ಷಣದ ಆಡಳಿತ, ಹಣಕಾಸು ವ್ಯವಸ್ಥೆಗಳು ಬದಲಾಗಬೇಕು ಮತ್ತು ದಾಖಲಾತಿ ಮತ್ತು ಸಮತೆಗಳನ್ನು ಗುಣಮಟ್ಟವನ್ನೊಳಗೊಂಡಂತೆ ಹೆಚ್ಚಿಸಬೇಕೇ ವಿನಃ ಕೇವಲ ಅಂಕಿ-ಅಂಶಗಳಿಂದಲ್ಲ ಎಂಬುದನ್ನು ಸರ್ಕಾರಗಳು ಉನ್ನತ ಶಿಕ್ಷಣದ ತಜ್ಞರು, ಮಂತ್ರಿಗಳು, ಖಾಸಗಿ ಆಡಳಿತ ಮಂಡಳಿಯವರು ಮನವರಿಕೆ ಮಾಡಿಕೊಳ್ಳುವುದು ಇಂದು ಅತ್ಯಾವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಅಭಿವೃದ್ಧಿಪಡಿಸಬೇಕಾಗಿದೆ. ಆಧಾರ ಗ್ರಂಥಗಳು
ಗೋವಿಂದರಾಜು ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಶಿಕ್ಷಣ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|