12.09.1928 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಜನಿಸಿರುವ ಶ್ರೀ ಎಂ.ವಿ. ರಾಜಶೇಖರನ್ ಅವರು ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. 1947-48ರ ಮೈಸೂರು ಚಲೋ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶ್ರೀ ಎಂ.ವಿ. ರಾಜಶೇಖರನ್ ಅವರು, ಅಪ್ಪರ್ ಸೆಕೆಂಡರಿ (ಮಾಧ್ಯಮಿಕ ಶಾಲೆಯಲ್ಲಿ) ವ್ಯಾಸಂಗ ಮಾಡುತ್ತಿದ್ದಾಗಲೇ ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ಮೌಲ್ಯಗಳಿಗೆ ತಮ್ಮನ್ನ ತೆತ್ತುಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಮಿತ್ರಮೇಳ ಎಂಬ ಸಾಂಸ್ಕೃತಿಕ ಸಂಘಟನೆಯಲ್ಲಿ ದುಡಿದು ತಮ್ಮ ಮುಂದಿನ ಬದುಕನ್ನು ರಚನಾತ್ಮಕ ಕೆಲಸಗಳಿಗೆ ಮೀಸಲಾಗಿಟ್ಟಿದ್ದಾರೆ. 1953ರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ವ್ಯಾಸಂಗ ಮುಗಿಸುವ ಮುಂಚೆಯೇ ತಮ್ಮ ತಂದೆಯವರ ಅಕಾಲ ಮರಣದಿಂದ ಮರಳವಾಡಿಗೆ ಮರಳಿ ವ್ಯವಸಾಯಕ್ಕೆ ತಮ್ಮ ಸಂಪೂರ್ಣ ಸಮಯವನ್ನು ಮೀಸಲಿಟ್ಟು ಪ್ರಗತಿಪರ ರೈತರೆನಿಸಿಕೊಂಡಿದ್ದಾರೆ. ಶ್ರೀ ಹೆಚ್.ಸಿ. ದಾಸಪ್ಪ ಮತ್ತು ಶ್ರೀಮತಿ ಯಶೋಧರಮ್ಮ ದಾಸಪ್ಪನವರ ಮಧ್ಯಸ್ತಿಕೆಯಿಂದ ಕರ್ನಾಟಕದ ರೂವಾರಿ ಶ್ರೀ ಎಸ್. ನಿಜಲಿಂಗಪ್ಪನವರ ನಾಲ್ಕನೆಯ ಮಗಳು ಗಿರಿಜಾ ಅವರನ್ನು 1959ರಲ್ಲಿ ವಿವಾಹವಾದರು. ಅಖಿಲ ಭಾರತ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಘಟಕದ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಅವರದಾಯಿತು. ವಿಶೇಷವಾಗಿ ಯೂತ್ ಕಾಂಗ್ರೆಸ್ ರಾಜ್ಯದಲ್ಲಿ ಬಲಗೊಳ್ಳಲು ಅವರು ಕಾರಣಕರ್ತರಾಗಿದ್ದಾರೆ. 1967ರಲ್ಲಿ 50 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಕನಕಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಎಂ.ವಿ.ರಾಜಶೇಖರನ್ ಯಾವ ಲೋಕಸಭಾ ಸದಸ್ಯರೂ ಯೋಚಿಸದ ರೀತಿ ಚಿಂತಿಸಿ, ಅವುಗಳನ್ನು ಅನುಷ್ಠಾನ ಮಾಡಿದರು. ಮಂಚನಬೆಲೆ ನೀರಾವರಿ ಯೋಜನೆ ಹೀಗೆಯೇ ಅನುಷ್ಠಾನಗೊಂಡ ಒಂದು ಯೋಜನೆಯಾಗಿದೆ. 1978ರಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜನತಾಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ರಾಜಶೇಖರನ್ ತಮ್ಮ ರಚನಾತ್ಮಕ ಕೆಲಸಗಳಿಂದ ತಮ್ಮ ಕ್ಷೇತ್ರದ ಎಲ್ಲೆಡೆ ಪ್ರಸಿದ್ಧಿಯಾಗಿದ್ದರು. 1999ರಲ್ಲಿ ವಿಧಾನಪರಿಷತ್ತಿನ ಸದಸ್ಯತ್ವ, 2002ರಲ್ಲಿ ರಾಜ್ಯಸಭಾ ಸದಸ್ಯತ್ವ ಸ್ಥಾನವು ಅವರನ್ನು ಅರಸಿಕೊಂಡು ಬಂದಿತು. ಭಾರತ ಸರ್ಕಾರದಲ್ಲಿ ಯೋಜನಾ ರಾಜ್ಯ ಮಂತ್ರಿಯಾಗಿ ದುಡಿದರು. 2009ರ ವರೆಗೂ ಬದ್ಧತೆ, ಸಂಘಟನೆ ಹಾಗೂ ವಿಚಾರಶೀಲತೆಗೆ ರಾಜಶೇಖರನ್ ಸದಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಕುರಿತಂತೆ 100ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಮಂಡಿಸಿದ್ದಾರೆ. ರಾಜಶೇಖರನ್ ಅವರ ಏಷ್ಯಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಸರಳತೆ, ಸಜ್ಜನಿಕೆ, ತಾಳ್ಮೆಗಳನ್ನು ರೂಢಿಸಿಕೊಂಡಿರುವ ರಾಜಶೇಖರನ್ ಮಹಾತ್ಮ ಗಾಂಧೀಜಿ ಹೇಳಿದ ಜೀವನ ಮೌಲ್ಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.
ಆ ಕಾಲದಲ್ಲಿ ಜಾತಿ ಕಟ್ಟುಪಾಡುಗಳು ಹೇಗಿದ್ದವು? ಪರಿಶಿಷ್ಟ ಜಾತಿ, ವರ್ಗ ಹಾಗೂ ಹಿಂದುಳಿದವರು ನೆಮ್ಮದಿಯ ಜೀವನ ನಡೆಸುತ್ತಿದ್ದರೇ? ನಮ್ಮ ಊರಿನಲ್ಲಿ ಎಲ್ಲಾ ಸಂಪ್ರದಾಯದವರೂ ಮತ್ತು ಎಲ್ಲ ಸಮುದಾಯದವರೂ ಇದ್ದರು. ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದ ದಿನಗಳವು. ಗ್ರಾಮೀಣ ಪ್ರದೇಶದ ಮೇಲೆ ಹೆಚ್ಚಿನ ಹಣವನ್ನು ಸರ್ಕಾರ ವೆಚ್ಚ ಮಾಡುತ್ತಿರಲಿಲ್ಲ. ಮೂಲಭೂತ ಸೌಲಭ್ಯಗಳಿಲ್ಲದೆ ಜನ ನರಳುತ್ತಿದ್ದರು. ಆದರೆ, ಸಮಾಜದಲ್ಲಿನ ವಿವಿಧ ಪಂಗಡಗಳಲ್ಲಿ ಮಾನವೀಯತೆಯ ಗುಣ ಹೆಚ್ಚಾಗಿತ್ತು. ಬಡತನ ಬಹುಮಟ್ಟಿನ ಜನರ ಮನೆಯನ್ನು ಹಾಸಿಹೊಕ್ಕಿತ್ತು. ಆದರೂ, ಹಸಿವಿನಿಂದ ಆ ಕಾಲದಲ್ಲಿ ಒಬ್ಬರಾದರೂ ಸತ್ತಿದ್ದನ್ನು ನಾನು ನೋಡಿಲ್ಲ. ಶ್ರೀಮಂತ ರೈತ ಹಾಗೂ ಇತರರಲ್ಲಿ, ಒಂದಿಷ್ಟಾದರೂ ಹಂಚಿಕೊಂಡು ತಿನ್ನಬೇಕೆಂಬ ಮನಸ್ಸು ಇತ್ತು. ಸಾಮಾಜಿಕ ಕಟ್ಟುಪಾಡು ಅಂದರೆ ಮೂಢನಂಬಿಕೆ, ಸಂಪ್ರದಾಯಗಳು ಸಾಕಷ್ಟಿದ್ದರೂ, ಯಾರಿಗೂ ದಿನನಿತ್ಯದ ಜೀನವ ನಿರ್ವಹಿಸುವುದು ಕಷ್ಟದ ಕೆಲಸ ಆಗಿರಲಿಲ್ಲ. ಕೃಷಿ ಕೂಡ ಅಂದು ಲಾಭದಾಯಕವಾಗಿರಲಿಲ್ಲ. ವಾಣಿಜ್ಯ ಬೆಳೆಗಳು ಅಪರಿಚಿತವಾಗಿತ್ತು. ತಲೆತಲಾಂತರದಿಂದ ವಿದ್ಯೆಯನ್ನು ಹಂಚದ ಕಾರಣ ಕೆಳವರ್ಗವನ್ನು ಮೂಢನಂಬಿಕೆಗಳು ಆಳುತ್ತಿದ್ದವು. ಅಜ್ಞಾನ ಸಮಾಜದಲ್ಲಿ ಪ್ರಮುಖ ಸ್ಥಾನ ಪಡೆದಿತ್ತು. ವ್ಯಕ್ತಿಗೆ ಅರಿವಿಲ್ಲದೆ ಎಲ್ಲಾ ಸ್ತರದಲ್ಲೂ ಶೋಷಣೆ ಆಗುತ್ತಿತ್ತು. ಈಗ ಅದು ಸ್ವಲ್ಪ ಸುಧಾರಣೆಯಾಗಿದೆ. ನೀವು ಹುಟ್ಟಿದಾಗ ಮರಳವಾಡಿಯ ಪರಿಸರ ಹೇಗಿತ್ತು? ಆ ಕಾಲದ ಜನರ ಭಾವನೆಗಳು ಯಾವುವು? ನಿಮ್ಮ ಊರಿನಲ್ಲಿ ನಡೆಯುತ್ತಿದ್ದ ಪ್ರಮುಖ ಜಾತ್ರೆಗಳು ಯಾವುವು? ಬೇರೆ ಬೇರೆ ಪಂಗಡದವರು ಅಲ್ಲಿ ಹೇಗೆ ಒಂದಾಗಿ ಬಾಳುತ್ತಿದ್ದರು? ಈ ಅಂಶಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿವೆಯೇ? ನಿರ್ಮಲ ಪರಿಸರ ಹಾಗೂ ಮುಗ್ಧ ಜನಸಮುದಾಯವಿದ್ದ ಮರಳವಾಡಿ ನನಗೆ ತುಂಬಾ ಪ್ರಿಯವಾದ ಸ್ಥಳ. ಅದನ್ನು ಒಂದು ಪುಟ್ಟ ಭಾರತ ಎಂದು ಕರೆದರೆ ತಪ್ಪಾಗಲಾರದು. ಅಲ್ಲಿ ಎಲ್ಲ ಜಾತಿಯ ಜನ ಇದ್ದಾರೆ. ಕಾಳುಗಳಿಂದ ಎಣ್ಣೆ ತೆಗೆಯುವ ಗಾಣಿಗರು ನಮ್ಮ ಎಡಭಾಗಕ್ಕಿದ್ದರು. ಮನೆಯ ಹಿಂಭಾಗದಲ್ಲಿ ಮಹಮದೀಯರು, ಮನೆಯ ಮುಂದೆ ಒಕ್ಕಲಿಗರು, ಇನ್ನೊಂದು ಕಡೆ ವಿಶ್ವಕರ್ಮಿಗಳು, ತಿಗಳರು, ಅಗಸರು, ಮೇದರು, ಕುಂಬಾರರು, ಮರಾಠರು ಹೀಗೆ ಎಲ್ಲರೂ ಅಲ್ಲಿ ವಾಸ ಮಾಡುತ್ತಿದ್ದರು. ಮುಂದಿನ ಬೀದಿಯಲ್ಲಿ ಬ್ರಾಹ್ಮಣ ಸಮುದಾಯದ ಶ್ಯಾನುಭೋಗ್ ವೆಂಕಣ್ಣನವರು ವಾಸ ಮಾಡುತ್ತಿದ್ದರು. ಊರಿನ ಹೊರಕೇರಿಯಲ್ಲಿ ಹರಿಜನರು, ಅದರ ಪಕ್ಕದಲ್ಲಿಯೇ ಸ್ವಲ್ಪ ದೂರದಲ್ಲಿ ಬಸವೇಶ್ವರ ದೇವಸ್ಥಾನ. ನಾವು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಎಲ್ಲಾ ಸಮುದಾಯದಲ್ಲೂ ನನಗೆ ಸ್ನೇಹಿತರಿದ್ದರು. ಮರಳವಾಡಿ ನಂಜುಂಡಭಟ್ಟರು ನನ್ನ ಸಹಪಾಠಿಗಳು. ನಮ್ಮ ಊರಿನಲ್ಲಿದ್ದ ಮಹಮದೀಯರು ನಮ್ಮನ್ನು ಹೊಂದಿಕೊಂಡು ಹೋಗುತ್ತಿದ್ದರು. ಆ ಸಮುದಾಯಕ್ಕೆ ಸೇರಿದವರೇ ಆಗಿ ನಮ್ಮ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಯಜಮಾನ್ ಯಾಕೂಬ್ ಸಾಹೇಬರು ಜನ ಮೆಚ್ಚುಗೆಯ ಕೆಲಸಮಾಡಿದ್ದಾರೆ. ಸ್ವತಃ ರೈತರಾದ ತಾವು ಕೃಷಿಯಲ್ಲಿ ಯಾವ ರೀತಿ ಪ್ರಯೋಗ ನಡೆಸಿದ್ದೀರಿ? ಅಂತಹ ಪ್ರಯೋಗಗಳು ಯಶಸ್ವಿ ಆಗಿವೆಯೇ? ಅದು ಒಂದುವೇಳೆ ವಿಫಲವಾಗಿದ್ದರೆ ಅದಕ್ಕೆ ಕಾರಣಗಳೇನು? ನಮ್ಮ ತಾತನವರು ಹರಾಜಿನಲ್ಲಿ ಸ್ವಲ್ಪ ಜಮೀನನ್ನು ಕೊಂಡರು. ಜೊತೆಗೆ ಪಿತ್ರಾರ್ಜಿತವಾದ ಆಸ್ತಿ ಇತ್ತು. ನಮ್ಮ ಮನೆತನಕ್ಕೆ ಆ ಕಾಲದಲ್ಲಿ 364 ಎಕರೆ ಜಮೀನು ಇತ್ತು. ನಮ್ಮ ತಂದೆಯವರು ನಮ್ಮ ತಾತನವರಿಗೆ ಏಕಮಾತ್ರ ಪುತ್ರರಾದ ಕಾರಣ ಎಲ್ಲಾ ಜಮೀನು ಅವರ ಹೆಸರಿಗಾಯಿತು. ಎರಚಲವಾಡಿ, ಮರಳವಾಡಿ, ಶೀತಲವಾಡಿ, ಹುಯಿಲಪ್ಪನಹಳ್ಳಿ ಮೊದಲಾದ ಕಡೆ ನಮ್ಮ ಮನೆತನದ ಜಮೀನು ಇತ್ತು. ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಯಲ್ಲೂ ಕೂಡ ಸ್ವಲ್ಪ ಜಮೀನು ಇತ್ತು. ನಾನು ದಿಲ್ಲಿಯಲ್ಲಿ ಕಾನೂನು ವ್ಯಾಸಂಗ ಮುಗಿಸುವ ಮೊದಲೆ ಮರಳವಾಡಿಗೆ ಬಂದೆ. ನಮ್ಮ ತಂದೆ ಹಠಾತ್ತನೆ ನಿಧನರಾದ ಕಾರಣ ಆ ಜಮೀನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಸ್ವತಃ ಕೃಷಿಕ ಕುಟುಂಬದಿಂದ ಬಂದ ನನಗೆ ಜಮೀನಿನಲ್ಲಿ ಹೊಸ ಹೊಸ ಬೆಳೆ ತೆಗೆಯಬೇಕು ಎಂಬ ಆಸೆ ಸ್ಫುರಿಸಿತು. ನಮ್ಮ ತಾತನವರು ಜಮೀನನ್ನು ಹೆಚ್ಚು ಮಾಡುತ್ತಾ ಹೋದರೆ, ನಾನು ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದೆ. ರೇಷ್ಮೆ ಕೃಷಿಯನ್ನು ಕೈಗೊಂಡೆ. ಹೊಗೆಸೊಪ್ಪನ್ನು ಬೆಳೆದೆ. ವಿದೇಶಗಳಿಗೆ ಹೋದಾಗ ಭತ್ತದ ಹೊಸ ತಳಿಗಳನ್ನು ತಂದು ನನ್ನ ಜಮೀನಿನಲ್ಲಿ ಕೃಷಿ ಮಾಡಿದೆ. ತೆಂಗಿನ ಮರವನ್ನು ಬೆಳೆಸಿದೆ. ವಿವಿಧ ಮರಗಳು ನಮ್ಮ ಜಮೀನಿನಲ್ಲಿ ಇರಬೇಕೆಂದು ಎಲ್ಲಾ ರೀತಿಯ ಮರಗಳನ್ನು ನೆಡಿಸಿದೆ. ಜಾನುವಾರುಗಳಿಗೂ ಸಹ ನನ್ನ ಕೃಷಿಯಲ್ಲಿ ಆದ್ಯತೆ ಇತ್ತು. ವ್ಯವಸಾಯದ ಪ್ರಾಯೋಗಿಕ ಅನುಭವ ಇದ್ದ ಕಾರಣ ನಾನು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮೂಲಕ ಹೊಸ ತಳಿಗಳನ್ನು ಸಂಶೋಧಿಸಲು ವಿಜ್ಞಾನಿಗಳಿಗೆ ಸಲಹೆ ಸೂಚನೆ ಕೊಟ್ಟೆ. ಇಂತಹ ಕ್ಷೇತ್ರಗಳಲ್ಲಿ ವಿಫಲತೆ ಅಥವಾ ಸಫಲತೆ ಎಂಬುದಿಲ್ಲ. ರೈತ ಮುಗಿಲು ನೋಡುತ್ತಾ ವ್ಯವಸಾಯ ಮಾಡುತ್ತಾನೆ. ಅವನ ಅದೃಷ್ಟ ಚೆನ್ನಾಗಿದ್ದರೆ ಮಳೆ ಆಗಬಹುದು, ಇಲ್ಲದಿದ್ದರೆ ಬಿತ್ತನೆಗೆ ಚೆಲ್ಲಿರುವ ಕಾಳು ಕೂಡ ಸೀದು ಹೋಗಬಹುದು. ಒಳ್ಳೆಯ ಬೆಳೆ ಬಂದ ನಂತರವೂ ಅದರ ಪೂರ್ಣ ಲಾಭ ಆತನಿಗೆ ದೊರೆಯುತ್ತದೆ ಎಂಬ ವಿಶ್ವಾಸವಿಲ್ಲ. ಅವನು ಬೆಳೆದ ಬೆಳೆಯ ಲಾಭವನ್ನು ಮಧ್ಯವರ್ತಿಗಳು ನುಂಗಬಹುದು. ಒಟ್ಟಾರೆ ಭಾರತೀಯ ರೈತ ಅಸಹಾಯಕನಾಗಿದ್ದಾನೆ. ಅದೂ ಕೂಡ ನನಗೆ ಕೃಷಿಯಲ್ಲಿ ಮನವರಿಕೆಯಾದ ಅಂಶ. ತಮ್ಮ ಮುಂದಿನ ರಾಜಕೀಯ ಗುರಿ ಏನು? ನಾನು ಯಾವುದೇ ಮಹತ್ವಾಕಾಂಕ್ಷೆ ಇಟ್ಟುಕೊಂಡು ರಾಜಕೀಯ ಕ್ಷೇತ್ರಕ್ಕೆ ಬಂದವನಲ್ಲ. ನನಗೆ ರಾಜಕೀಯಕ್ಕಿಂತ ಅಭಿವೃದ್ಧಿ ತುಂಬಾ ಪ್ರಿಯವಾದುದು. ಗ್ರಾಮೀಣ ಅಭಿವೃದ್ಧಿ, ಕೃಷಿ, ಗುಡಿ ಕೈಗಾರಿಕೆ ಹಾಗೂ ದೀನದಲಿತರ ಉದ್ಧಾರವೇ ನನಗೆ ಮುಖ್ಯ. ಗ್ರಾಮೀಣ ಭಾರತದ ಅಭಿವೃದ್ಧಿಯನ್ನು ಕುರಿತು ನಾನು ಸದಾ ಚಿಂತಿಸುತ್ತೇನೆ. 21ನೇ ಶತಮಾನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಗ್ರಾಮೀಣ ಭಾರತವನ್ನು ನಮ್ಮ ಜೊತೆ ಕರೆದುಕೊಂಡು ಹೋಗಬೇಕೆಂಬ ಮಹತ್ವಾಕಾಂಕ್ಷೆ ನನ್ನದು. ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿ, ಅವರ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆಯಾದರೆ ನಾನು ಅತ್ಯಂತ ಹರ್ಷಿತ ವ್ಯಕ್ತಿ ಆಗುತ್ತೇನೆ. ಅದೇ ನನ್ನ ಕನಸು ಹಾಗೂ ಜೀವನದ ಗುರಿ. ತಮ್ಮ ಪ್ರಿಯವಾದ ಕೃಷಿ ಹಾಗೂ ಕೃಷಿಕರ ಹಿತರಕ್ಷಣೆಗೆ ತಾವು ಕೈಗೊಂಡ ಕ್ರಮಗಳು ಯಾವುದು? ಮೂಲತಃ ನಾನೊಬ್ಬ ರೈತನ ಮಗ. ನಮ್ಮ ತಂದೆಯವರ ನಿಧನದ ನಂತರ ನಾನು ವ್ಯವಸಾಯಕ್ಕೆ ನನ್ನೆಲ್ಲಾ ಶ್ರಮವನ್ನು ಮೀಸಲಿಟ್ಟೆ. ಕೃಷಿಯಲ್ಲಿ ಅನೇಕ ರೀತಿಯ ಪ್ರಯೋಗ ಮಾಡಿ ಅವುಗಳನ್ನು ರೈತರಿಗೆ ಮುಟ್ಟಿಸುತ್ತಿದ್ದೇನೆ. ರಾಜ್ಯದ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಬೇರೆ ಬೇರೆ ಸ್ತರದಲ್ಲಿ ರೈತರ ಹಿತಕ್ಕೆ ದುಡಿದಿದ್ದೇನೆ. ಬೆಂಗಳೂರಿನ ಹಡ್ಸನ್ ವೃತ್ತದಲ್ಲಿರುವ ಕೃಷಿಕ ಭವನ ತಲೆ ಎತ್ತಲು ನನ್ನದೂ ಅಳಿಲು ಸೇವೆ ಇದೆ. ರೈತ ಬೆಳೆದ ಹಣ್ಣು ಹಂಪಲುಗಳನ್ನು ಸಂಗ್ರಹಿಸಲು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ 1200 ಟನ್ನಿನ ಶೈತ್ಯಾಗಾರವನ್ನು ಕೃಷಿಕ ಸಮಾಜದ ಆಶ್ರಯದಲ್ಲಿ ಸ್ಥಾಪಿಸಿದೆ. ಕೃಷಿಯ ಜೊತೆಗೆ ನಮ್ಮ ರೈತರು ಹೈನುಗಾರಿಕೆ, ರೇಷ್ಮೆ, ಪುಷ್ಪೋದ್ಯಮ ಮೊದಲಾದವುಗಳನ್ನು ಕೈಗೊಳ್ಳಬೇಕು ಎನ್ನುವ ಆಶಯ ನನ್ನದು. ಏಷ್ಯಾ ಗ್ರಾಮೀಣ ಸಂಕಿರಣಗಳನ್ನು ಏರ್ಪಡಿಸಿದ್ದೇನೆ. ಲೋಕಸಭಾ ಸದಸ್ಯನಾಗಿದ್ದಾಗ ಮಂಚನಬೆಲೆ ನೀರಾವರಿ ಯೋಜನೆ, ಇಗ್ಗಲೂರು ಏತ ನೀರಾವರಿ ಯೋಜನೆ, ತೊರೆಬೇಕುಪ್ಪೆ ಏತನೀರಾವರಿ ಮುಂತಾದ ಯೋಜನೆಗಳು ಜಾರಿಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಶೋಧನೆಗಳು ರೈತರು ಹೊಲಗಳಿಗೆ ಬರಬೇಕು ಎಂಬ ಆಶಯದಿಂದ ನಾನು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೂಲತಃ ರೈತ ಸಮಾಜಕ್ಕೆ ದನಿ ಇಲ್ಲ. ಎಲ್ಲಾ ಸಂಘಟನೆಗಳು ಅವರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಯಾರೂಕೂಡ ಅವರ ಹಿತವನ್ನು ಕಾಯುತ್ತಿಲ್ಲ. ಅವರನ್ನು ಪಕ್ಷಾತೀತವಾಗಿ ಸಂಘಟಿಸುವುದು ಹೇಗೆ? ನಿಮ್ಮ ಮಾತು ಅಕ್ಷರಶಃ ಸತ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಗಾಂಧಿ, ಸರದಾರ ವಲ್ಲಭಾಯಿ ಪಟೇಲ್, ಡಾ. ಬಾಬು ರಾಜೇಂದ್ರ ಪ್ರಸಾದ್ರವರೂ ಸಹ ರೈತ ಸಂಘಟನೆಗೆ ಮುಂದಾಗಿದ್ದರು. ಸರ್ಕಾರದ ಶೋಷಣೆ ವಿರುದ್ಧ ಹೋರಾಡುವುದು ರೈತ ನಾಯಕರ ಆಗಿನ ಮುಖ್ಯ ಗುರಿಯಾಗಿತ್ತು. ಇಂದು ರೈತರ ಸಂಘಟನೆಯನ್ನು ರಾಜಕೀಯ ಪಕ್ಷಗಳು ತಮ್ಮ ಮತಗಳಿಕೆಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿವೆ. ರೈತರು ಪಕ್ಷಾತೀತವಾಗಿ ಯೋಚಿಸುವಂತಾಗಬೇಕು. ಉದಾಹರಣೆಗೆ, ಕಾವೇರಿ ನೀರಿನ ಸಮಸ್ಯೆಯನ್ನು ತೆಗೆದುಕೊಳ್ಳಿ. ಕರ್ನಾಟಕ ಹಾಗೂ ತಮಿಳುನಾಡಿನ ರೈತರು ಒಂದೆಡೆ ಶಾಂತಚಿತ್ತರಾಗಿ ಕುಳಿತು ಯೋಚಿಸಿದರೆ ಖಂಡಿತವಾಗಿ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ರೈತರ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಇದೊಂದು ಸಾಮಾಜಿಕ ಸಮಸ್ಯೆ ಎಂದು ಯೋಚಿಸಬೇಕು. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಂತೆ ವರ್ತಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮೂಲತಃ ಜನರಿಗೆ ಉದ್ಯೋಗವಿಲ್ಲ. ಅಂದರೆ, ಅನಿಶ್ಚಿತ ಮಳೆಯಿಂದಾಗಿ ಅವರ ಸ್ಥಿತಿ ಚಿಂತಾಜನಕವಾಗಿದೆ. ಈಪರಿಸ್ಥಿತಿಯಿಂದ ಹೊರಬರುವುದು ಹೇಗೆ? ಸ್ವಾತಂತ್ರ್ಯಾನಂತರ ಗ್ರಾಮೀಣ ಆರ್ಥಿಕತೆಯನ್ನು ಕುರಿತು ನಾವು ಸಮರ್ಪಕವಾಗಿ ಯೋಚಿಸಿಲ್ಲ. ಕೇವಲ ಮಳೆಯ ಆಧಾರದ ಮೇಲೆ ನಮ್ಮ ಕೃಷಿ ಚಟುವಟಿಕೆ ನಿಂತಿದೆ. ಅಪಾರವಾದ ಮಾನವ ಸಂಪನ್ಮೂಲ ಮತ್ತು ಅಪಾರ ನೈಸರ್ಗಿಕ ಸಂಪನ್ಮೂಲ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಪಾರಂಪರಿಕವಾಗಿ ವೃತ್ತಿ ನಡೆಸಿಕೊಂಡು ಬಂದಿದ್ದ ಕುಶಲಕರ್ಮಿಗಳು ಈ ಭಾಗದಲ್ಲಿದ್ದಾರೆ. ಇವುಗಳನ್ನು ನಾವು ಸರಿಯಾಗಿ ಬಳಸಿಕೊಂಡು ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಬೇಕು. ಕೃಷಿಯ ಜೊತೆ ಗುಡಿ ಕೈಗಾರಿಕೆ, ರೇಷ್ಮೆ ಕೃಷಿ, ತೋಟಗಾರಿಕೆ, ಪಶುಪಾಲನೆ, ಆಹಾರ ಧಾನ್ಯ, ತರಕಾರಿ ಹಾಗೂ ಹಣ್ಣುಗಳ ಸಂಸ್ಕರಣ ಘಟಕಗಳು ಪ್ರಾರಂಭವಾಗಬೇಕು. ಮಹಾತ್ಮಾ ಗಾಂಧಿಯವರು ಹೇಳಿದಂತೆ ಯಂತ್ರಗಳ ಬಳಕೆ ಕಡಿಮೆ ಮಾಡಿ ಯಥೇಚ್ಛವಾಗಿರುವ ಮಾನವ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ನೀರಿನ ಸದ್ಬಳಕೆ ಕೂಡ ಇಂದಿನ ಅಗತ್ಯವಾಗಿದೆ. ರೈತರ ಸಮಸ್ಯೆಗಳನ್ನು ವಿಶ್ಲೇಷಿಸುವಾಗ ನಾವು ಜಮೀನುದಾರರ ಸಮಸ್ಯೆಗೆ ಮಾತ್ರ ಸ್ಪಂದಿಸುತ್ತೇವೆ. ಭೂರಹಿತ ಕಾರ್ಮಿಕರಸಮಸ್ಯೆಗಳನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ಇವುಗಳನ್ನು ಕೃಷಿ ಚಟುವಟಿಕೆಯ ವ್ಯಾಪ್ತಿಗೆ ತರುವುದು ಹೇಗೆ? ಗ್ರಾಮಾಂತರ ಪ್ರದೇಶದ ಬಹುಮಟ್ಟಿನ ರೈತರು ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದಾರೆ. ಒಂದಿಂಚು ಜಮೀನೂ ಇಲ್ಲದ ಅನೇಕ ಕೃಷಿ ಕಾರ್ಮಿಕರು ನಮ್ಮ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಇಂಥವರನ್ನು ದೃಷ್ಟಿಯಲ್ಲಿಟ್ಟುಕೊಂಡು ಡಾ.ಕುರಿಯನ್‍ರವರು ಕ್ಷೀರ ಕ್ರಾಂತಿಯನ್ನು ಮಾಡಿದರು. ಗೃಹ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವುದು ಹಾಗೂ ಅವರುಗಳಿಗೆ ಸಕಾಲದಲ್ಲಿ ಸಹಾಯಧನ ಕೊಡುವುದು, ನಿರ್ದಿಷ್ಟ ಕ್ಷೇತ್ರದಲ್ಲಿ ಅವರಿಗೆ ಹೊಸ ತಂತ್ರಜ್ಞಾನದ ತರಬೇತಿ ಕೊಡಿಸಿ ಅವರು ಉತ್ಪಾದನೆ ಮಾಡಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವುದು ಮೊದಲಾದ ಜವಾಬ್ದಾರಿಯನ್ನು ನಮ್ಮ ಆಡಳಿತ ವ್ಯವಸ್ಥೆ ಹೊರಬೇಕು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ವಿಶೇಷವಾಗಿ ಇದರ ಬಗ್ಗೆ ಚಿಂತಿಸಬೇಕು. ಗ್ರಾಮ ಪಂಚಾಯಿತಿಯು ತನ್ನ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ, ಕೃಷಿ ಕಾರ್ಮಿಕರು ಎಷ್ಟು ಜನರಿದ್ದಾರೆ, ಅವರ ಆರ್ಥಿಕ ಸ್ಥಿತಿ ಎಂಥದ್ದು, ಅವರಿಗೆ ಯಾವ ಯಾವ ರೀತಿ ಸಹಾಯ ಒದಗಿಸಬೇಕು ಎನ್ನುವುದರ ಬಗ್ಗೆ ನೀಲಿನಕಾಶೆಯನ್ನು ತಯಾರಿಸಿಕೊಳ್ಳಬೇಕು. ಹಾಗೆಯೇ ತಾಲ್ಲೂಕು ಪಂಚಾಯಿತಿಯೂ ಕೂಡ ಸರ್ವೆ ಮಾಡಿಸಿ ತನ್ನದೇ ಆದ ಯೋಜನಾ ವರದಿಯನ್ನು ಸಿದ್ಧಪಡಿಸಬೇಕು. ಇವೆರಡರ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ತನ್ನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಸೂಕ್ತ ಯೋಜನೆ ಇದ್ದರೆ ಅದರ ಅನುಷ್ಠಾನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಈಗ ಹೊಸ ಹೊಸ ಯೋಜನೆಗಳ ಅನುಷ್ಠಾನಕ್ಕೆ ಎಲ್ಲಾ ಕಡೆಯಿಂದ ನೆರವು ಬರುತ್ತಿದೆ. ಆದರೆ ಅನುಷ್ಠಾನ ಮಾಡುವವರು ಪ್ರಾಮಾಣಿಕರಾಗಿದ್ದು, ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜಾಗತೀಕರಣದ ಹಿನ್ನೆಲೆಯಲ್ಲಿ ನಮ್ಮ ಗ್ರಾಮೀಣ ಪ್ರದೇಶದ ಗೃಹಕೈಗಾರಿಕೆಗಳು ಅವನತಿಯ ಹಾದಿ ಹಿಡಿದಿದೆ. ಅವುಗಳಿಗೆ ಪುನಶ್ಚೇತನಕೊಡಲು ಸಾಧ್ಯವೇ? ಸ್ವಾತಂತ್ರ್ಯಾನಂತರ ಕೂಡ ನಾವು ನಮ್ಮ ಆರ್ಥಿಕ ಕ್ಷೇತ್ರವನ್ನು ಸ್ವಾವಲಂಬಿಯನ್ನಾಗಿ ಮಾಡಲು ವಿಫಲರಾಗಿರುವುದೇ ಇಂದಿನ ಎಲ್ಲಾ ಸಮಸ್ಯೆಗಳಿಗೆ ಮೂಲ. ನಮ್ಮ ಆರ್ಥಿಕ ದೃಷ್ಟಿಯ ಚಿಂತನೆ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದೆ. ನಗರಗಳ ಆಕರ್ಷಣೆಯ ಬದುಕಿನ ಮುಂದೆ ಗ್ರಾಮೀಣ ಬದುಕು ನಿಸ್ಸಾರ ಎನಿಸಿದೆ. ಜಾಗತೀಕರಣದ ಪೂರ್ವದಲ್ಲೇ ರೈತ ಅಸಹಾಯಕನಾಗಿದ್ದ. ಜಾಗತೀಕರಣ ಹೆಚ್ಚಾದಂತೆಲ್ಲಾ ಅವನ ಸ್ಥಿತಿ ಮತ್ತಷ್ಟು ಚಿಂತಾಜನಕವಾಗುತ್ತಿದೆ. ಯಾವುದೇ ಹೊಸ ತಂತ್ರಜ್ಞಾನವನ್ನು ತಡೆಹಿಡಿಯಲು ಸಾಧ್ಯವಿಲ್ಲ. ಅವುಗಳನ್ನು ನಮ್ಮ ಹಿತಕ್ಕೆ ಬಳಸಿಕೊಳ್ಳುವಂತೆ ನಾವು ಯೋಜನೆ ರೂಪಿಸಬೇಕು. ಜಾಗತೀಕರಣದ ಪ್ರಯೋಜನವನ್ನು ರೈತ ಸಮುದಾಯಕ್ಕೆ ಕೊಡಲು ಈಗಲೂ ಸಾಧ್ಯವಿದೆ. ಹೊಸ ತಂತ್ರಜ್ಞಾನವನ್ನು ಬಳಸಿ ಉತ್ಪಾದನೆ, ಆಹಾರ ಸಂಸ್ಕರಣೆ ಹಾಗೂ ಪುಷ್ಪೋದ್ಯಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಖಂಡಿತ ರೈತ ಹೆಚ್ಚು ಸ್ವಾವಲಂಬಿ ಆಗುತ್ತಾನೆ. ಭಾರತದ ರೈತ ಸಮುದಾಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಉತ್ಪನ್ನವನ್ನು ಹೆಮ್ಮೆಯಿಂದ ಮಾರಾಟ ಮಾಡುವುದುಯಾವಾಗ? ಇಂತಹ ಸ್ಪರ್ಧೆಗೆ ನಮ್ಮ ರೈತರನ್ನು ಸಜ್ಜುಗೊಳಿಸುವುದು ಹೇಗೆ? ನಮ್ಮ ಗ್ರಾಮೀಣ ಭಾಗದಲ್ಲಿರುವ ಜನ ಕೃಷಿಯನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾರೆ. ಆದರೆ ಅವರಲ್ಲಿ ಆಧುನಿಕ ಜ್ಞಾನದ ಅಭಾವ ಎದ್ದು ಕಾಣುತ್ತಿದೆ. ನಮ್ಮ ಕೃಷಿ ಇಲಾಖೆ ಕೇವಲ ಹೊಸ ತಾಂತ್ರಿಕತೆಯನ್ನು ರೈತರಿಗೆ ಹೇಳಿದರೆ ಸಾಲದು. ಅವರಲ್ಲಿ ಪರಿವರ್ತನಾ ಮನೋಭಾವವನ್ನು ಬೆಳೆಸಬೇಕು. ಹೆಚ್ಚು ಹೆಚ್ಚು ಗುಣಮಟ್ಟದ ಕೃಷಿ ಉತ್ಪಾದನೆ ಮಾಡಲು ರೈತರಿಗೆ ವ್ಯವಸ್ಥಿತವಾದ ಜ್ಞಾನ ತುಂಬಾ ಅಗತ್ಯ. ಭಾರತದ ಕೃಷಿ ವಿಜ್ಞಾನಿಗಳು ತಮ್ಮ ಸಂಶೋಧನೆಯಿಂದ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ. ಡಾ. ಸ್ವಾಮಿನಾಥನ್, ಡಾ.ಪರೋಡ, ಡಾ.ದ್ವಾರಕನಾಥ್, ಡಾ. ಲಕ್ಷ್ಮಣಯ್ಯ, ಡಾ.ಜಿ.ಕೆ. ವೀರೇಶ್, ಡಾ.ಎಂ. ಮಹಾದೇವಪ್ಪ, ಡಾ.ಎನ್.ಪಿ. ಪಾಟೀಲ್ ಮೊದಲಾದವರ ಸಂಶೋಧನೆ ನಿಜಕ್ಕೂ ರೈತರಿಗೆ ಉಪಯಕಾರಿಯಾಗಿದೆ. ಆದರೆ ಅವರ ಸಂಶೋಧನೆಯ ಫಲ ರೈತರ ಹೊಲಗಳಿಗೆ ಅಥವಾ ಗದ್ದೆಗಳಿಗೆ ಸಮರ್ಪಕವಾಗಿ ಹರಿದುಬಂದಿಲ್ಲ. ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ಇಲಾಖೆಯಲ್ಲಿ ಅನ್ಯೋನ್ಯ ಸಂಬಂಧ ಇರಬೇಕು. ಆಧುನಿಕ ಮಾರುಕಟ್ಟೆಯ ತಿಳಿವಳಿಕೆ ಇರುವ ಜನ ಈ ಎರಡೂ ಸ್ಥಳಗಳಲ್ಲಿರಬೇಕು. ಭಾರತದ ರೈತನ ಬಗ್ಗೆ ಅಮೆರಿಕಾದ ರಾಯಭಾರಿ ಚೆಸ್ಟ್ರ್ಬೋಲ್ಸ್ ಹೇಳಿದ ಮಾತು ಜ್ಞಾಪಕಾರ್ಹವಾದುದು: ಭಾರತದ ರೈತನಷ್ಟು ಕಷ್ಟ ಸಹಿಷ್ಣುಗಳು ಬೇರಾವ ದೇಶದಲ್ಲೂ ಇಲ್ಲ. ರೈತನ ಕಷ್ಟ ಸಹಿಷ್ಣುತೆಯನ್ನು ನಮ್ಮ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಅವನಿಗೆ ಎಲ್ಲಾ ಹಂತದಲ್ಲೂ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿ ಆತ ಗುಣಮಟ್ಟದ ವಸ್ತುಗಳನ್ನು ಉತ್ಪಾದನೆ ಮಾಡುವಂತೆ ಮಾಡಬೇಕು. ಆಗ ನಮ್ಮ ರೈತ ಸಮುದಾಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತದೆ. ತಾವು 7ನೆಯ ದಶಕದಲ್ಲಿ ಸಹಕಾರಿ ಪ್ರಕಾಶನವನ್ನು ಪ್ರಾರಂಭಿಸಿದಿರಿ. ಅದರ ಧ್ಯೇಯೋದ್ದೇಶಗಳೇನು? ಅದು ವಿಫಲವಾಗಲುಕಾರಣವೇನು? ಈ ಯೋಜನೆಯ ಮೂಲ ರೂವಾರಿಗಳು ಅಂದಿನ ಅರ್ಥ ಸಚಿವರಾಗಿದ್ದ ರಾಮಕೃಷ್ಣ ಹೆಗಡೆಯವರು ಹಾಗೂ ಶಿಕ್ಷಣ ಸಚಿವರಾಗಿದ್ದ ಕೆ.ವಿ.ಶಂಕರಗೌಡರವರು. ಸಹಕಾರಿ ಪ್ರಕಾಶನಕ್ಕೆ ವ್ಯಾಪಕವಾದ ಅರ್ಥಕೊಟ್ಟವರು ಅಂದಿನ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದ ಡಾ.ದೇ. ಜವರೇಗೌಡರು. ನಾನೂ ಕೂಡ ಅದರ ಒಬ್ಬ ಟ್ರಸ್ಟಿ. ಖ್ಯಾತ ಲೇಖಕ ನಿರಂಜನ, ಪತ್ರಕರ್ತ ಪ.ಸು. ಭಟ್ಟ ಮೊದಲಾದವರು ಆ ಟ್ರಸ್ಟಿನಲ್ಲಿದ್ದರು. ಆ ಸಂಸ್ಥೆಯ ಮೂಲಕವೇ ಮಕ್ಕಳ ವಿಶ್ವಕೋಶ ಜ್ಞಾನಗಂಗೋತ್ರಿ ಏಳು ಸಂಪುಟಗಳಲ್ಲಿ ಹೊರಬಂದಿದೆ. ರಾಜ್ಯದ ಎಲ್ಲಾ ಲೇಖಕರಿಗೂ ಸಹಕಾರಿ ಪ್ರಕಾಶನ ಒಂದು ಆಪ್ತ ಸಂಸ್ಥೆ ಆಗಬೇಕು ಎಂಬುದು ಅದರ ಉದ್ದೇಶವಾಗಿತ್ತು. ಜೊತೆಗೆ ಕನ್ನಡದಲ್ಲಿ ಶ್ರೇಷ್ಠ ದಿನಪತ್ರಿಕೆಯೊಂದನ್ನು ಪ್ರಕಟಿಸುವ ಉದ್ದೇಶ ಇತ್ತು. ಇದಕ್ಕೆ ಸಂಬಂಧಪಟ್ಟಂತೆ ಮುದ್ರಣ ಯಂತ್ರಗಳನ್ನೂ ಕೂಡ ನಾವು ಆಮದು ಮಾಡಿಕೊಂಡೆವು. 1972ರ ರಾಜಕೀಯ ಬೆಳವಣಿಗೆಯ ಬದಲಾವಣೆಯಿಂದ ಆ ಸಂಸ್ಥೆ ತನಗೇ ತಾನೇ ತೆರೆಮರೆಗೆ ಸರಿದಿತ್ತು. ಯಾವುದೇ ಸಂಸ್ಥೆಯಾಗಲಿ ಅದನ್ನು ಬೆಳೆಸುವವನಿಗೆ ವಿಶಾಲವಾದ ದೃಷ್ಟಿಕೋನ ಇರಬೇಕು. ಸಹಕಾರಿ ಪ್ರಕಾಶನದಲ್ಲಿ ಹನುಮಂತೇಗೌಡ ಇರುವ ತನಕ ಅದಕ್ಕೆ ಒಂದು ಚೈತನ್ಯ ಇತ್ತು. ಆಮೇಲೆ ಬಂದವರು, ಹಿಂದೆ ಕಂಡಿದ್ದ ಕನಸುಗಳನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಲು ವಿಫಲರಾದರು. ಆ ಕಾರಣದಿಂದಾಗಿ ನಿರೀಕ್ಷೆಯ ಮಟ್ಟದಲ್ಲಿ ಸಹಕಾರಿ ಪ್ರಕಾಶನ ಸಂಸ್ಥೆ ಕೆಲಸಮಾಡಲಿಲ್ಲ. 1956ರಿಂದ ತಾವು ವಿದೇಶಿ ಪ್ರವಾಸ ಮಾಡುತ್ತಿದ್ದೀರಿ. ಭಾರತದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಕಾಣಿಕೆಯಾವುದು? ಈ ಹಿನ್ನೆಲೆಯಲ್ಲಿ ನೀವು ಮೆಚ್ಚಿಕೊಂಡ ರಾಷ್ಟ್ರಗಳು ಯಾವುವು? ಸುಮಾರು ಮೂರು ದಶಕಗಳಿಂದ ನಾನು 10ಕ್ಕೂ ಹೆಚ್ಚು ಸಾರಿ ವಿದೇಶಿ ಪ್ರವಾಸವನ್ನು ಕೈಗೊಂಡಿದ್ದೇನೆ. ಎಷ್ಟೋ ದೇಶಗಳಲ್ಲಿ ನಾನು ರಾಜಕಾರಣಿ ಎಂಬುದು ಗೊತ್ತೇ ಇಲ್ಲ. ಭಾರತದಿಂದ ಬಂದ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದ ತಜ್ಞ ಎಂದೇ ಗುರುತಿಸುತ್ತಾರೆ. ನನಗೆ ತುಂಬಾ ಹಿಡಿಸಿದ ದೇಶಗಳೆಂದರೆ ಜಪಾನ್, ಚೀನಾ, ಅಮೆರಿಕಾ, ಜರ್ಮನಿ, ಹಾಲೆಂಡ್ ಮುಂತಾದವು. ಚೀನಾ ಮತ್ತು ನಮ್ಮ ದೇಶದ ಅನೇಕ ವಿಚಾರಗಳಲ್ಲಿ ಸಾಮ್ಯತೆ ಇದೆ. ಚೀನಾದಲ್ಲಿ ಮೂರು ಬಾರಿ ಪ್ರವಾಸ ಮಾಡಿ ಎರಡು ತಿಂಗಳ ಕಾಲ ಇದ್ದು ಸುಮಾರು 8000 ಕಿ.ಮೀ. ಪ್ರಯಾಣವನ್ನು ಬೆಳೆಸಿ ಅಲ್ಲಿನ ಕೃಷಿ ಹಾಗೂ ಗುಡಿ ಕೈಗಾರಿಕೆಯನ್ನು ಅಧ್ಯಯನ ಮಾಡಿದ್ದೇನೆ. ಆಗೆಲ್ಲಾ ನನಗೆ ಚೀನಾ ನಾಯಕರ ದೂರದೃಷ್ಟಿ ಪರಿಚಯವಾಯಿತು. ಚೀನಾದಲ್ಲಿ ವಾಸ್ತವಿಕವಾಗಿ ಅನುಷ್ಠಾನಗೊಳ್ಳದ ಯಾವ ಯೋಜನೆಯನ್ನೂ ರೂಪಿಸುವುದಿಲ್ಲ. ರೈತನಿಗೂ ಕೃಷಿ ವಿಜ್ಞಾನಿಗೂ ಅನ್ಯೋನ್ಯ ಸಂಬಂಧ ಇದೆ. ಜನಸಮೂಹವನ್ನು ಬಳಸಿಕೊಂಡು ಉತ್ಪಾದನೆ ಮಾಡುವ ವಸ್ತುಗಳಿಗೆ ಚೀನಾ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತದೆ. ಭಾರತದ ಕೃಷಿ ಸಂಶೋಧನಾ ಕ್ಷೇತ್ರವು ಚೀನಾ ದೇಶದ ಕೃಷಿ ಸಂಶೋಧನಾ ಕ್ಷೇತ್ರಕ್ಕಿಂತ ಅರ್ಧ ಶತಮಾನದಷ್ಟು ಮುಂದಿದೆ. ಚೀನಾದ ಕೃಷಿ ಕ್ಷೇತ್ರವು ಭಾರತದ ಕೃಷಿ ಕ್ಷೇತ್ರಕ್ಕಿಂತ ಅರ್ಧ ಶತಮಾನದಷ್ಟು ಮುಂದಿದೆ ಎನ್ನುವ ಮಾತೊಂದಿದೆ. ಅಂದರೆ ಚೀನಾ ರೈತನ ಚಟುವಟಿಕೆಗಳು ಹೆಚ್ಚು ಅರ್ಥಪೂರ್ಣವಾಗಿವೆ. ಆದರೆ ನಮ್ಮ ರೈತನ ಚಟುವಟಿಕೆ ಪಾರಂಪರಿಕವಾದ ನೆಲೆಯಲ್ಲೇ ಅಡಗಿ ಕುಳಿತಿದೆ. ಹೀಗಾಗಿ ನಮ್ಮ ಕೃಷಿ ಕ್ಷೇತ್ರವು ನಿರೀಕ್ಷಿಸಿದಷ್ಟು ಸತ್ಫಲಗಳನ್ನು ಕೊಡಲಾಗುತ್ತಿಲ್ಲ. ಅದೇ ರೀತಿ ಜಪಾನ್ನ ಕೃಷಿ ಕ್ಷೇತ್ರ ಕೂಡ ಆಧುನಿಕ ವಿಚಾರಗಳನ್ನು ಅಳವಡಿಸಿಕೊಂಡಿದೆ. ಈ ವಿಚಾರದಲ್ಲಿ ರೈತರನ್ನು ಸಜ್ಜುಗೊಳಿಸುವ ಹೊಣೆಯನ್ನು ಸರ್ಕಾರ ಹೊರಬೇಕು. ಅವರನ್ನು ಹೊಸ ಜ್ಞಾನಕ್ಕೆ ತಕ್ಕಂತೆ ಅಣಿಗೊಳಿಸಬೇಕು. ಅವರು ಬೆಳೆದ ಪದಾರ್ಥಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಶ್ರೀಲಂಕಾ ಸಾಂಸ್ಕೃತಿಕವಾಗಿ ನಮಗೆ ಹತ್ತಿರವಿರುವ ರಾಷ್ಟ್ರ. ನಮ್ಮ ಮೇಲೆ ಆ ನೆಲದ ಯಾವ ಗುಣ ಪ್ರಭಾವ ಬೀರಲು ಸಾಧ್ಯ? ಶ್ರೀಲಂಕಾ, ಥೈಲ್ಯಾಂಡ್, ಕಾಂಬೋಡಿಯಾ, ಬರ್ಮಾ, ಇಂಡೋನೇಷ್ಯಾ ಮೊದಲಾದ ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವ ಅನ್ಯೋನ್ಯವಾಗಿದೆ. ಇಂಡೋನೇಷ್ಯಾದಲ್ಲಂತೂ ಹಿಂದೂ ಸಂಸ್ಕೃತಿಯ ಪ್ರಭಾವನ್ನು ಹೆಜ್ಜೆ ಹೆಜ್ಜೆಗೂ ಗುರುತಿಸಬಹುದು. ಶ್ರೀಲಂಕಾದಲ್ಲಿ ಸ್ಥಳೀಯ ಜನರು ತುಸು ಸೋಮಾರಿಗಳು. ತಮಿಳುನಾಡಿನಿಂದ ವಲಸೆ ಹೋಗಿರುವ ತಮಿಳು ಜನರು ಶ್ರೀಲಂಕಾದ ಆರ್ಥಿಕ ಕ್ಷೇತ್ರಕ್ಕೆ ಬಲ ತುಂಬಿದ್ದಾರೆ. ಅಲ್ಲಿನ ಪ್ಲಾಂಟೇಷನ್ನಲ್ಲಿ ದುಡಿಯುತ್ತಿರುವ ಬಹುಮಟ್ಟಿನ ಕಾರ್ಮಿಕರು ತಮಿಳರೇ. ತಮಿಳರ ನಾಯಕ ತೊಂಡಮಾನ್, ತಮಿಳರಿಗೆ ಸೂಕ್ತ ಸ್ಥಾನಮಾನ ಕೊಡಲು ಹೋರಾಡಿದ. ಅವನ ಮಗ ಶ್ರೀಲಂಕಾದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು. ಶ್ರೀಲಂಕಾದ ಸ್ಥಳೀಯರು ಹಾಗೂ ತಮಿಳರ ಅಂತರ್ಯುದ್ಧದಿಂದಾಗಿ ಶ್ರೀಲಂಕಾ ಅನುಭವಿಸುತ್ತಿರುವ ನಷ್ಟವನ್ನು ನೋಡಿ ನಾವು ಪಾಠ ಕಲಿಯಬೇಕಾಗಿದೆ. ರಾಷ್ಟ್ರದ ಭಾವೈಕ್ಯತೆ ಎಷ್ಟು ಮುಖ್ಯ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಾದರೆ ಶ್ರೀಲಂಕಾದ ಪರಿಸ್ಥಿತಿಯನ್ನು ನೋಡಬೇಕು. ಇದರ ಜೊತೆಗೆ ಶ್ರೀಲಂಕಾ ಭಾರತಕ್ಕೆ ತುಂಬಾ ಹತ್ತಿರವಿರುವ ದ್ವೀಪ. ಅಲ್ಲಿ ಬೇರೆ ಪ್ರಬಲ ರಾಷ್ಟ್ರಗಳು ತಮ್ಮ ನೆಲೆಯನ್ನು ಮಾಡಿಕೊಂಡರೆ ಭಾರತ ಎಲ್ಲಿಗೆ ಹೋಗಬೇಕು? ಇದನ್ನು ಯೋಚಿಸಿಯೇ ಪ್ರಧಾನಿ ರಾಜೀವ್‍ಗಾಂಧಿ ಶ್ರೀಲಂಕಾಕ್ಕೆ ಸಹಾಯ ಹಸ್ತ ಚಾಚಿದರು. ಆದರೆ ನಮ್ಮ ಜನ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕಾರಣ ಮಾನಸಿಕವಾಗಿ ಅವರಿಗೆ ತುಂಬಾ ಹಿಂಸೆಯಾಯಿತು. ಜಪಾನ್ ದೇಶದ ಕೃಷಿ ಕ್ಷೇತ್ರವನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳಬಹುದೆ? ಖಂಡಿತವಾಗಿ ಜಪಾನ್ ದೇಶದ ಕೃಷಿ ನಮಗೆ ಮಾದರಿ ಆಗಬಲ್ಲದು. ಆ ದೇಶಕ್ಕೆ ನಾನು ಆರೇಳು ಸಲ ಭೇಟಿ ಕೊಟ್ಟಿರಬಹುದು. ಅಲ್ಲಿನ ರೈತರು ಕ್ಯಾಲೆಂಡರ್ ಆಫ್ ಇವೆಂಟ್ಸ್ ಇಟ್ಟುಕೊಂಡು ಕೃಷಿ ಚಟುವಟಿಕೆಯನ್ನು ಮಾಡುತ್ತಾರೆ. ಪ್ರತಿಯೊಬ್ಬ ರೈತನೂ ತಾನು ಸಮುದಾಯದ ಭಾಗ ಎಂಬಂತೆ ಯೋಚಿಸುತ್ತಾನೆ. ಹೊಸ ಸಂಶೋಧನೆಗಳು ಪ್ರಕಟವಾದಾಗ ತುಂಬಾ ಆಸಕ್ತಿಯಿಂದ ಅದನ್ನು ಅಳವಡಿಸಿಕೊಂಡು ಅದರ ಪ್ರತಿಫಲವನ್ನು ಎಲ್ಲರಿಗೂ ತಿಳಿ ಹೇಳುತ್ತಾನೆ. ಅನೇಕರು ಹೇಳುವ ಮಾತೊಂದು ಹೀಗಿದೆ: ನಾವು ಬ್ರಹ್ಮಾಂಡ, ಅಂದರೆ ಆಕಾಶ ನೋಡುತ್ತೇವೆ; ಅವರು ಭೂಮಿ ನೋಡುತ್ತಾರೆ. ಅಂದರೆ, ವಾಸ್ತವಿಕ ಪ್ರಜ್ಞೆಯಿಂದ ಅವರು ಕೃಷಿ ಕ್ಷೇತ್ರವನ್ನು ವಿಸ್ತಾರಗೊಳಿಸಿ ಲಾಭದಾಯಕವಾಗಿ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಮಧ್ಯಮ ವರ್ಗ ಮತ್ತು ಜನಸಾಮಾನ್ಯರಲ್ಲಿ ದೇಶಪ್ರೇಮ ನಮಗಿಂತ ಹೆಚ್ಚೆಂಬಂತೆ ಕಾಣುತ್ತದೆ. ನಾಗರಿಕ ಜೀವನಕ್ಕೆ ಬೇಕಾದ ಶಿಸ್ತು ಅಲ್ಲಿ ಎಲ್ಲರಲ್ಲೂ ಇದೆ. ಸಮುದಾಯದ ಬೆಳವಣಿಗೆಯಲ್ಲಿ ವೈಯಕ್ತಿಕ ಪ್ರತಿಷ್ಠೆ ಬರದಂತೆ ನೋಡಿಕೊಂಡ ಹಿರಿಮೆ ಆ ದೇಶದ್ದು. ಅಮೆರಿಕಾ, ಇಂಗ್ಲೆಂಡ್, ಕೆನಡಾ ರಾಷ್ಟ್ರಗಳಲ್ಲಿ ಕೃಷಿಗೆ ಸಹಾಯಧನ ಕೊಡುವ ಪದ್ದತಿ ಇದೆಯೇ? ಅಲ್ಲಿನ ರೈತರಿಗೂ, ಇಲ್ಲಿನ ರೈತರಿಗೂಆಂತರಿಕವಾಗಿ ವ್ಯತ್ಯಾಸ ಇದೆಯೇ? ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೃಷಿಗೆ ನಮಗಿಂತ ಹೆಚ್ಚಾಗಿ ಸಹಾಯಧನ ಕೊಡುವ ಪದ್ಧತಿ ಇದೆ. ಅದೇ ರೀತಿ ಸೌಲಭ್ಯವನ್ನು ಕಲ್ಪಿಸಿಕೊಡುವ ದಿಸೆಯಲ್ಲಿ ಈ ರಾಷ್ಟ್ರಗಳು ಹೆಮ್ಮೆ ಎನಿಸುವ ಸಾಧನೆ ಮಾಡಿವೆ. ಅಲ್ಲಿನ ರೈತ ಬೆಳೆಯುವ ಆಹಾರ ಪದಾರ್ಥ ಅಥವಾ ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸಲು ಶ್ರಮವೇ ಪಡಬೇಕಾಗಿಲ್ಲ. ರೈತನ ಫಾರಂ ಹೌಸ್ ತನಕ ಸುಸಜ್ಜಿತವಾದ ರಸ್ತೆ ಇರುತ್ತದೆ. ಆತ ಟ್ರ್ಯಾಕ್ಟರ್ ಮೊದಲಾದ ಉಪಕರಣಗಳನ್ನು ಕೊಳ್ಳಬೇಕಾದರೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿಲ್ಲ. ಸಾಲ ಪಡೆಯುವುದಕ್ಕಾಗಿ ಸಂಬಂಧಪಟ್ಟವರಿಗೆ ಕಾಣಿಕೆ ಅರ್ಪಿಸಬೇಕಾಗಿಲ್ಲ. ಒಂದು ಅರ್ಜಿಯನ್ನು ಬರೆದು ಹಾಕಿದರೆ, ಸಂಬಂಧಪಟ್ಟ ಕಂಪೆನಿಗಳೇ ರೈತನ ಮನೆ ಬಾಗಿಲಿಗೆ ಬರುತ್ತವೆ. 5 ಸಾವಿರ ರೂಪಾಯಿ ಸಾಲ ಪಡೆಯಬೇಕಾದರೆ ನಮ್ಮ ರೈತ ಇಲ್ಲಿ ಬಹಳ ಕಷ್ಟಪಡಬೇಕು. ಅವನು ಬೆಳೆದ ಬೆಳೆಯನ್ನು ಬೆಂಗಳೂರಿಗೋ ಅಥವಾ ತಾಲ್ಲೂಕು ಕೇಂದ್ರಕ್ಕೋ ತರಬೇಕಾದರೆ ಆತ ಪಡುವ ಪಾಡೆಷ್ಟು ಎಂಬುದನ್ನು ನೆನೆದಾಗ ನಾವುಗಳು ರೈತನಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲ ಎಂದು ವಿಷಾದದಿಂದ ಹೇಳಬೇಕು. ನಮ್ಮ ಅಧಿಕಾರ ವರ್ಗ ಯಾವಾಗಲೂ ನಕಾರಾತ್ಮಕ ಧೋರಣೆಯನ್ನೇ ಪ್ರದರ್ಶಿಸುತ್ತದೆ. ರೈತ, ಮಳೆ ಬಂದ ತಕ್ಷಣ ಸಾಲಕ್ಕೆ ಸಹಕಾರಿ ಬ್ಯಾಂಕುಗಳಿಗೆ ಅರ್ಜಿ ಹಾಕಿದರೆ, ಅವರು ಕಟಾವು ಸಮಯಕ್ಕೆ ಸಾಲ ಮಂಜೂರು ಮಾಡುತ್ತಾರೆ. ಆಗ ರೈತ ಸಾಲ ಪಡೆದು ತನ್ನ ಇತರ ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತಾನೆ. ಸಾಲ ಕೊಟ್ಟಿದ್ದು ಮಾತ್ರ ನಮಗೆ ನೆನಪಿರುತ್ತದೆ. ಆದರೆ, ಅದರ ಉಪಯೋಗವಾಗಿಲ್ಲ ಎಂಬ ಅಂಶ ನಮ್ಮ ತಿಳಿವಳಿಕೆಗೆ ಬರುವುದಿಲ್ಲ. ಹೊರ ರಾಷ್ಟ್ರಗಳಲ್ಲಿ ಕೆಳಸ್ತರದಲ್ಲಿ ಭ್ರಷ್ಟಾಚಾರ ಅಪರೂಪ. ನಮ್ಮಲ್ಲಿ ಕೆಳಸ್ತರದಲ್ಲೇ ಭ್ರಷ್ಟಾಚಾರವಿರುವ ಕಾರಣ ಜನಸಾಮಾನ್ಯರ ಬದುಕು ತುಂಬಾ ಚಿಂತಾಜನಕ ಸ್ಥಿತಿಯಲ್ಲಿದೆ. ತಮ್ಮ ಯೂರೋಪ್ ಪ್ರವಾಸದಲ್ಲಿ ಗುರುತಿಸಬೇಕಾದ ರಾಷ್ಟ್ರಗಳು ಯಾವುವು? ನನ್ನ ಮೇಲೆ ವಿಶೇಷವಾಗಿ ಪ್ರಭಾವ ಬೀರಿದ ರಾಷ್ಟ್ರವೆಂದರೆ ನೆದರ್ಲ್ಯಾಂಡ್. ಈ ರಾಷ್ಟ್ರದ ಆರ್ಥಿಕ ಸ್ಥಿತಿಯಲ್ಲಿ ಹೈನುಗಾರಿಕೆ ತುಂಬಾ ಪಾತ್ರ ವಹಿಸಿದೆ. ಕೃಷಿಯಿಂದ ಬರುವಷ್ಟು ಆದಾಯ ಹೈನುಗಾರಿಕೆಯಿಂದ ಕೂಡ ಬರುತ್ತದೆ. ಡಾ. ಕುರಿಯನ್‍ರವರ ದುಡಿಮೆಯಿಂದಾಗಿ ಭಾರತದಲ್ಲೂ ಹೈನುಗಾರಿಕೆ ಉತ್ತಮ ಸ್ಥಿತಿಯಲ್ಲಿದೆ. ಅಂತಾರಾಷ್ಟ್ರ ಮಟ್ಟದಲ್ಲಿ ನಾವು ಪ್ರಥಮ ಸ್ಥಾನದಲ್ಲಿದ್ದೇವೆ. ಆದರೂ, ಹೊಸ ಸವಾಲಿಗೆ ಉತ್ತರ ಕೊಡುವಷ್ಟು ನಮ್ಮ ಹೈನುಗಾರಿಕೆ ಬೆಳೆದಿಲ್ಲ. ಇದನ್ನು ಮತ್ತಷ್ಟು ಸಮೃದ್ಧಗೊಳಿಸಲು ಗ್ರಾಮೀಣ ಅಭಿವೃದ್ಧಿಯಲ್ಲಿ ಆಸಕ್ತಿ ಇರುವ ಎಲ್ಲಾ ಚಿಂತಕರು ಒಟ್ಟಿಗೆ ದುಡಿಯುವುದು ಇಂದಿನ ಅಗತ್ಯವಾಗಿದೆ. ಭಾರತದ ಆರ್ಥಿಕತೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ? ಗ್ರಾಮೀಣ ಅಭಿವೃದ್ಧಿಯನ್ನು ನಾವು ಅಸಡ್ಡೆ ಮಾಡಿದ್ದೇವೆಯೇ? ಸ್ವಾತಂತ್ರ್ಯ ಪೂರ್ವದಿಂದಲೂ ನಾವು ಹಳ್ಳಿಯ ಅಭಿವೃದ್ಧಿಗೆ ಸಾಕಷ್ಟು ಗಮನಕೊಟ್ಟಿಲ್ಲ ಎಂಬುದು ಐತಿಹಾಸಿಕ ಸತ್ಯ. ಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ನಮ್ಮ ಆರ್ಥಿಕ ಕ್ಷೇತ್ರವನ್ನು ಚಿಂತಿಸಬೇಕಾಗಿದೆ. ನೆಹರುರವರು ಸಮಾಜವಾದದ ಪ್ರೇರಣೆಯಿಂದ ಬೃಹತ್ ಕೈಗಾರಿಕೆಗಳತ್ತ ಗಮನಕೊಟ್ಟರು. ಅದರಲ್ಲಿ ತಪ್ಪೇನಿಲ್ಲ. ಅಲ್ಲೂ ಕೂಡ ಸಾಕಷ್ಟು ಉದ್ಯೋಗ ಸೃಷ್ಠಿಯಾಯಿತು. ಆದರೆ ನಾವು ಅದರ ಜೊತೆಗೆ ಹಳ್ಳಿಗಳನ್ನು ಮರೆಯಬಾರದಾಗಿತ್ತು. ನಮ್ಮ ಇಂದಿನ ಎಲ್ಲಾ ಕಾರ್ಯಕ್ರಮಗಳು ನಗರಕೇಂದ್ರಿತವಾಗಿವೆ. ನಗರದ ಜನರ ಮೂಲಭೂತ ಆವಶ್ಯಕತೆಗೆ ನಾವು ಗಮನಕೊಟ್ಟಷ್ಟು ಹಳ್ಳಿಗಳಿಗೆ ಗಮನ ಕೊಡುತ್ತಿಲ್ಲ. ಭಾರತದ 5 ಲಕ್ಷ ಹಳ್ಳಿಗಳು ಇಂದು ಅನಾಥ ಸ್ಥಿತಿಯಲ್ಲಿವೆ. ಅಲ್ಲಿನ ಜನಕ್ಕೆ ಚೇತೋಹಾರಿಯಾದ ಬದುಕಿಲ್ಲ. ಗ್ರಾಮೀಣ ಭಾರತದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ದೃಢ ಪ್ರಯತ್ನಗಳನ್ನು ಮಾಡದೇ ಹೋದರೆ ನಗರ ಹಾಗೂ ಹಳ್ಳಿಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ. ಇಂತಹ ಕಂದರ ಅನೇಕ ಹೊಸ ಸಮಸ್ಯೆಗಳನ್ನು ಸೃಷ್ಟಿಸಲೂಬಹುದು. ತಮ್ಮ ಬದುಕಿನ ಮೇಲೆ ಗಾಢ ಪ್ರಭಾವ ಬೀರಿದ ಚೇತನಗಳಾವುವು? ಮನುಷ್ಯ ಸಂಘಜೀವಿ. ಆತನ ಮೇಲೆ ಎಲ್ಲಾ ರೀತಿಯ ಪ್ರಭಾವಗಳು ಬೀಳುತ್ತವೆ. ಅಂತಹ ಪ್ರಭಾವಗಳನ್ನು ಅರಗಿಸಿಕೊಂಡು ಬೆಳೆಯುತ್ತಾ ಹೋದರೆ ಆತ ಪರಿಪಕ್ವತೆಯತ್ತ ಸಾಗುತ್ತಾನೆ. ನನ್ನ ಮೇಲೆ ಬಾಲ್ಯದಲ್ಲಿ ನಮ್ಮ ತಾತ ಮುದ್ದಮಲ್ಲಶೆಟ್ಟರು ಗಾಢವಾದ ಪ್ರಭಾವ ಬೀರಿದ್ದರು. ಗುರುಹಿರಿಯರಲ್ಲಿ ಭಕ್ತಿ ಮೂಡಲು ನನ್ನ ತಂದೆಯವರು ಕಾರಣಕರ್ತರು ಎಂದು ಹೇಳಬಹುದು. ನಮ್ಮ ತಾಯಿ ಬಸಮ್ಮನವರಂತೂ ನನ್ನಲ್ಲಿ ಮಾನವೀಯ ಗುಣಗಳು ಸ್ಫುರಿಸಲು ಪ್ರೇರಕರಾದರು. ಸೋದರ ಮಾವ ವೀರಭದ್ರಯ್ಯ ಮತ್ತಿತರರು ನನ್ನನ್ನು ಕರುಣೆಯಿಂದ ಬೆಳೆಸಿದ್ದಾರೆ. ದೇಗುಲಮಠದ ಶ್ರೀಗಳು, ಗಾಂಧೀ ವಿಚಾರವಾದಿ ಎಸ್.ಕರಿಯಪ್ಪ, ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಡಿಸೋಜಾ, ಪ್ರೊ.ಸಿ.ಡಿ.ಎನ್. ಮೊದಲಾದವರನ್ನು ಮರೆಯುವಂತಿಲ್ಲ. ಹೆಚ್.ಸಿ. ದಾಸಪ್ಪ ದಂಪತಿಗಳಂತೂ ನನ್ನನ್ನು ತಮ್ಮ ಮಗ ತುಳಸಿಯಂತೆ ನೋಡಿಕೊಂಡಿದ್ದಾರೆ. ನನಗೆ ಹೆಣ್ಣು ಕೊಟ್ಟ ನಿಜಲಿಂಗಪ್ಪನವರನ್ನಂತೂ ಮರೆಯುವ ಹಾಗಿಲ್ಲ. ಅವರ ವ್ಯಕ್ತಿತ್ವದ ಅನೇಕ ಗುಣಗಳು ನನ್ನನ್ನು ರೂಪಿಸಿವೆ. ವಿಶೇಷವಾಗಿ ನಿಜಿಲಿಂಗಪ್ಪನವರ ಸರಳತೆ, ಪ್ರಾಮಾಣಿಕತೆ, ತಾತ್ತ್ವಿಕ ಸಿದ್ಧಾಂತಕ್ಕಾಗಿ ಅಧಿಕಾರ ತ್ಯಾಗದ ಗುಣ-ಇವು ನನಗೆ ಆದರ್ಶವಾಗಿವೆ. ನನ್ನ ವ್ಯಕ್ತಿತ್ವ ಗಟ್ಟಿಯಾಗಲು ಇವುಗಳು ನನಗೆ ಸಹಾಯಕವಾಗಿವೆ. ಈ ಸಂದರ್ಭದಲ್ಲಿ ನಾನು ನೆನೆಯಬೇಕಾದ ಮತ್ತೊಂದು ಚೇತನವೆಂದರೆ ಸುತ್ತೂರು ಜಗದ್ಗುರು ಲಿಂಗೈಕ್ಯ ಪೂಜ್ಯ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಗಳು. ನನ್ನ ತಂದೆಯವರ ಸ್ನೇಹಿತರಾಗಿದ್ದ ತಹಶೀಲ್ದಾರ್ ಮುರಿಗೇಂದ್ರಸ್ವಾಮಿ ಅವರ ಸಲಹೆ ಮೇಲೆ ನಾನು ಕಾಲೇಜು ಶಿಕ್ಷಣಕ್ಕೆ ಮೈಸೂರಿಗೆ ಹೋದಾಗ ಮೊದಲು ಉಳಿದದ್ದು ಆನೇಕಲ್ಲಿನ ಪೊಲೀಸ್ ಪುಟ್ಟಪ್ಪನವರ ಮನೆಯಲ್ಲಿ. ನಂತರ ಪೂಜ್ಯ ಸುತ್ತೂರು ಸ್ವಾಮೀಜಿ ಅವರ ಮಾತೃ ಹೃದಯದ ದಿವ್ಯದರ್ಶನವಾದಂತಾಯಿತು. ಆಗ ಘನ ವಿದ್ವಾಂಸರೂ, ದಾರ್ಶನಿಕರೂ ಆದ ಪೂಜ್ಯ ಗೌರಿಶಂಕರ ಸ್ವಾಮಿಗಳಿದ್ದರು. ಅವರೂ ಅಷ್ಟೆ. ಎಷ್ಟೋ ಸಲ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ತಾವೇ ಊಟಕ್ಕೆ ನೀಡುತ್ತಿದ್ದುದು ನನಗಿನ್ನೂ ನೆನಪಿದೆ. ಸುತ್ತೂರು ಮಠವಂತೂ ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿರುವ ಮಹಾಸಂಸ್ಥೆ. ನಾನು ಅಲ್ಲಿದ್ದಾಗ ಶ್ರೀಮಠದ ಈಗಿನ ಜಗದ್ಗುರುಗಳಾದ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ ಶ್ರೀ ಪ್ರಭುಸ್ವಾಮಿಗಳ ಪರಿಚಯವೂ ಆಯಿತು. ತಾವು ವಿವಾಹವಾಗಿ 5 ದಶಕಗಳು ಆಗಿವೆ. ಇಂತಹ ಸಂದರ್ಭದಲ್ಲಿ ನಿಮ್ಮ ದಾಂಪತ್ಯ ಜೀವನದ ಸವಿ ನೆನಪು ಹೇಗಿದೆ? ಶ್ರೇಷ್ಠ ವ್ಯಕ್ತಿಯ ಹಿಂದೆ ಗೃಹಿಣಿಯೊಬ್ಬಳ ತ್ಯಾಗ ಅಡಗಿದೆ ಎಂಬುದು ಲೋಕೋಕ್ತಿ. ನನ್ನ ತಾಯಿ ಬಸಮ್ಮನವರು ನನ್ನಲ್ಲಿ ಕೆಲವು ಮಾನವೀಯ ಗುಣ ಬೆಳೆಯಲು ಕಾರಣೀಭೂತರಾಗಿದ್ದರು. ನನ್ನ ಮಡದಿ ಗಿರಿಜಾ, ನಾನು ಭ್ರಷ್ಟನಾಗದಂತೆ ಅಥವಾ ಅಪಖ್ಯಾತಿ ಪಡೆಯದಂತೆ ನನ್ನನ್ನು ರಕ್ಷಿಸುತ್ತಿದ್ದಾಳೆ. ಸುಮಾರು ವರ್ಷಗಳ ಸಾಂಸಾರಿಕ ಜೀವನದಲ್ಲಿ ಆಕೆ ಎಂದೂ ನನಗೆ ಅದು ಬೇಕು, ಇದು ಬೇಕು ಎಂದು ಕೇಳಿಲ್ಲ. ತಂದೆ ಮನೆಯಲ್ಲಿ ಕಲಿತ ಸರಳ ಜೀವನ ಪಾಠವನ್ನು ಇಲ್ಲಿ ಆಕೆ ಅನುಸರಿಸುತ್ತಿದ್ದಾಳೆ. ಎಲ್ಲರೂ ಅನುಕರಣೆ ಮಾಡುವಷ್ಟೂ ಗಟ್ಟಿ ವ್ಯಕ್ತಿತ್ವ ಆಕೆಯದು. ಅವಳು ಸಂತೃಪ್ತಿಯನ್ನು ಹೊಂದಿದ್ದ ಕಾರಣದಿಂದಲೇ ನಾನು ಹತ್ತು-ಹಲವು ದೇಶ ಸುತ್ತಲು ಸಾಧ್ಯವಾಯಿತು. ನನ್ನ ಎಲ್ಲಾ ಸಮಯವನ್ನು ಸಾರ್ವಜನಿಕ ಕ್ಷೇತ್ರಕ್ಕೆ ಧಾರೆ ಎರೆಯಲು ಸಾಧ್ಯವಾಯಿತು. ಗಂಡು ಮಕ್ಕಳು, ಹೆಣ್ಣು ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಕಕ್ಕಳಿಂದಾಗಿ ತಮ್ಮ ಜೀವನ ಸಂತೃಪ್ತಿಯನ್ನು ಕಂಡಿದೆಯೇ? ಖಂಡಿತ. ನನ್ನ ಗಂಡು ಮಕ್ಕಳಾಗಲಿ, ಹೆಣ್ಣುಮಕ್ಕಳಾಗಲಿ ನನ್ನಿಂದ ಏನನ್ನೂ ಅಪೇಕ್ಷಿಸಿಲ್ಲ. ಈ ಸಂದರ್ಭದಲ್ಲಿ ನನ್ನ ತಮ್ಮ ಕೀರ್ತಿಹಾಸನ್ ಹಾಗೂ ಅವನ ಪತ್ನಿಯನ್ನೂ ನೆನೆಯಬೇಕು. ಎಷ್ಟೋ ಸಂದರ್ಭದಲ್ಲಿ ನನ್ನ ಹೊಣೆಗಾರಿಕೆಯನ್ನು ಆತ ವಹಿಸಿಕೊಂಡು ಅದರಲ್ಲಿ ಯಶಸ್ವಿಯಾಗಿದ್ದಾನೆ. ಅವನ ಮಗ ಜಯಶಂಕರ್ ಕೂಡ ಅಷ್ಟೇ ಬದ್ಧತೆಯಿಂದ ನನ್ನ ಜೊತೆ ದುಡಿಯುತ್ತಿದ್ದಾನೆ. ನಾನು ಹೇಗೆ ನಮ್ಮ ತಂದೆಗೆ ವಿಧೇಯನಾಗಿದ್ದೇನೋ, ಅದೇ ರೀತಿ ನನ್ನ ಮಕ್ಕಳು ಕೂಡ ನನ್ನೊಡನಿದ್ದಾರೆ. ಎಲ್ಲಾ ಸರಿಯಿದ್ದ ವ್ಯಕ್ತಿಗೆ ಯಾವುದಾದರೂ ಒಂದು ಕೊರತೆ ಇರುವಂತೆ, ನನ್ನ ಮೊದಲನೆಯ ಮಗಳ ಬಾಳು ಸಂಕಷ್ಟದಲ್ಲಿದೆ. ನಮ್ಮ ಕುಟುಂಬದ ಘನತೆಗೆ ಒಂದಿಷ್ಟೂ ಸರಿಹೊಂದದ ಅಳಿಯನಿಂದಾಗಿ ನಾವು ನಿರಂತರವಾಗಿ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದೇವೆ. ದೇವರ ಬಗ್ಗೆ ತಮ್ಮ ನಂಬಿಕೆ ಎಂಥದ್ದು? ತಾವು ಪ್ರತಿನಿತ್ಯ ದೇವರ ಪೂಜೆ ಮಾಡುತ್ತೀರಾ? ನಮ್ಮ ತಾತನವರಿಂದಾಗಿ ನನಗೆ ದೈವಶ್ರದ್ಧೆ ಬಾಲ್ಯದಿಂದಲೇ ಬೆಳೆದುಬಂದಿದೆ. ವಿದೇಶಗಳಿಗೆ ಹೋದಾಗಲೂ ಕೂಡ ನಾನು ಒಂದಿಷ್ಟು ಹೊತ್ತು ಧ್ಯಾನ ಮಾಡುತ್ತೇನೆ. ಬೆಳಗ್ಗೆ, ಸಂಜೆ ದೇವರನ್ನು ಪೂಜಿಸುವುದನ್ನು ರೂಢಿ ಮಾಡಿಕೊಂಡಿರುವ ನನಗೆ, ಅದರಿಂದಾಗಿ ಮಾನಸಿಕ ಶಾಂತಿ ದೊರಕಿದೆ. ದೇವರು ಎಂಬುದು ಸಂಕೇತ ಮಾತ್ರ. ನಮ್ಮ ಮನಸ್ಸಿನ ಭಾವನೆಗಳನ್ನು ಅದುಮಿಟ್ಟುಕೊಳ್ಳಲು, ನಮ್ಮಲ್ಲಿ ಸಂಯಮವನ್ನು ರೂಢಿಸಿಕೊಳ್ಳಲು, ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಲು ದೇವರು ಅಗತ್ಯ ಎಂಬುದು ನನ್ನ ಖಚಿತ ಅಭಿಪ್ರಾಯ. ಸಂದರ್ಶನ: ಕೆ.ಆರ್. ಕಮಲೇಶ್ ಚಿದಾನಂದ ಎಸ್. ಮಠದ ಕೃಪೆ: ನಿಜಬಿಂಬ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |