14 ವರ್ಷದ ಆ ಬಾಲೆ ತನ್ನ ಟ್ಯೂಷನ್ ಮುಗಿಸಿ ಸಂಜೆಯ ಮಬ್ಬುಗತ್ತಲಿನಲ್ಲಿ ಮನೆಗೆ ಮರಳುತ್ತಿರುವಾಗ, ಹೆಂಗಸೊಬ್ಬಳು ಹತ್ತಿರ ಬಂದು ಯಾವುದೋ ಚೀಟಿ ತೋರಿಸಿ, ವಿಳಾಸ ಕೇಳುವಂತೆ ನಟಿಸಿದ್ದೊಂದೇ ಗೊತ್ತು. ಮತ್ತೆ ಮೈಮೇಲೆ ಎಚ್ಚರವೇ ಇಲ್ಲ. ಅರೆ ಮಂಪರಿನ ಎಚ್ಚರಾದಾಗ ರೈಲಿನಲ್ಲಿ ಎಲ್ಲಿಗೋ ಪ್ರಯಾಣಿಸುತ್ತಿರುವುದು, ಮಧ್ಯರಾತ್ರಿ ಮೀರಿ ಹೋಗಿರುವುದು ತಾನು ಸೀಟಿನ ಕೆಳಗಡೆ ಮಲಗಿಸಲ್ಪಟ್ಟಿರುವುದು ಅವಳ ಗಮನಕ್ಕೆ ಬಂದಿದೆ. ನಿಧಾನಕ್ಕೆ ಎಚ್ಚೆತ್ತು ಸಹಪ್ರಯಾಣಿಕರ ಗಮನ ಸೆಳೆದು ಅವರು ಈ ಹುಡುಗಿಯನ್ನು ವಿಚಾರಿಸುತ್ತಿರುವಾಗಲೇ ಇವಳನ್ನು ಕದ್ದು ತಂದಿದ್ದ ಹೆಂಗಸು ರೈಲು ನಿಂತ ಮುಂದಿನ ಸ್ಟೇಷನ್ನಲ್ಲಿ ಇಳಿದು ಹೋಗಿದ್ದಾಳೆ. ಅಂತೂ ಹೇಗೋ ಈ ಹುಡುಗಿ ಮನೆ ಸೇರಿದಳಾದರೂ ಪೊಲೀಸ್‍ಗೆ ದೂರು ನೀಡಿದ್ದರೆ ಆ ಹೆಂಗಸು ಸಿಕ್ಕಿ ಹಾಕಿಕೊಳ್ಳಬಹುದಾದ, ಅವಳ ಹಿಂದೆ ಇರಬಹುದಾದ ಜಾಲವನ್ನು ಪತ್ತೆ ಹಚ್ಚುವ ಎಲ್ಲ ಸಾಧ್ಯತೆಗಳಿದ್ದೂ ಬಾಲ ನ್ಯಾಯಮಂಡಳಿಗೆ ದೂರು ನಡಿ, ಅವರು ಅದನ್ನು ಗಂಭೀರವಾಗಿ ಪರಿಗಣಿಸದೇ ಕೆಲದಿನಗಳಲ್ಲೇ ಕೇಸನ್ನು ಮುಚ್ಚಿಹಾಕಿದರು. ಹಾಗಿದ್ದರೆ ನ್ಯಾಯ ಎಲ್ಲಿದೆ? ಹಳ್ಳಿಯೊಂದರ 15 ವರ್ಷ ವಯಸ್ಸಿನ ಹುಡುಗಿಯನ್ನು ಬಲವಂತದಿಂದ ನಗರದ ಪ್ರತಿಷ್ಠಿತರೊಬ್ಬರ ಮನೆಯಲ್ಲಿ ಅಪ್ಪ ಮನೆಗೆಲಸಕ್ಕೆ ಸೇರಿಸಿದ್ದಾನೆ. ಆ ಮನೆಗೆ ಬಂದ ಬಂಧುವೊಬ್ಬ ಈ ಹುಡುಗಿಗೆ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದ ನೆಪ ಹೇಳಿ ತನ್ನೊಂದಿಗೆ ಕರೆದುಕೊಂಡು ಹೋಗಿ, ಕೇಳಿದವರಿಗೆ ಅವಳಿಗೆ ಬುದ್ಧಿ ಸರಿಯಿಲ್ಲವೆಂದು ನಾಟಕವಾಡಿ ಅವಳ ತೀವ್ರ ವಿರೋಧದ ನಡುವೆಯೂ ಗೆಳೆಯರೊಂದಿಗೆ ಸೇರಿ ದೆಹಲಿಯ ವೇಶ್ಯಾವಾಟಿಕೆಯೊಂದಕ್ಕೆ 50,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಬೇರೊಂದು ಪ್ರಕರಣದಲ್ಲಿ ಕಣ್ಮರೆಯಾದ ಹುಡುಗಿಯನ್ನು ಹುಡುಕುತ್ತಾ ದೆಹಲಿಗೆ ಬಂದ ಕರ್ನಾಟಕ ಪೊಲೀಸರಿಗೆ ಇವಳೊಂದಿಗೇ ಇನ್ನೂ ನಾಲ್ವರು ಕಣ್ಮರೆಯಾದ ಹುಡುಗಿಯರೂ ವೇಶ್ಯಾವಾಟಿಕೆಯ ಅಡ್ಡದಲ್ಲಿ ಸಿಕ್ಕಿ ಅವರನ್ನೂ ವಾಪಸ್ ಕರೆತಂದಿದ್ದಾರೆ. ತಾಯಿ ಮಾನಸಿಕ ಅಸ್ವಸ್ಥೆ, ತಂದೆ ಕಾಮುಕ ತನ್ನನ್ನು ಬಹಳಷ್ಟು ಬಾರಿ ಲೈಂಗಿಕವಾಗಿ ಹಿಂಸಿಸಿದ್ದಾನೆ ತಾನು ಮನೆಗೆ ವಾಪಸಾಗುವುದಿಲ್ಲವೆಂದ ಹುಡುಗಿಗೆ, ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ದೊರೆತಿದೆ. ದೆಹಲಿಯಿಂದ ಬರುವಾಗಲೇ ಬಸಿರಾಗಿದ್ದ ಈ ಹುಡುಗಿಯ ಇಷ್ಟದಂತೆ ಗರ್ಭ ತೆಗೆಸಿ ಮುಂದಿನ ಓದಿಗೆ ಅನುಕೂಲ ಮಾಡಿಕೊಡಲಾಗಿದೆ. ಕದ್ದವರು, ಮಾರಾಟ ಮಾಡಿದವರು, ಇವಳನ್ನು ಉಪಯೋಗಿಸಿಕೊಂಡು ದಂಧೆ ನಡೆಸಿದವರು ನೆಮ್ಮದಿಯಾಗಿ ತಮ್ಮ ಕೆಲಸಗಳನ್ನು ಮುಂದುವರೆಸಿದ್ದಾರೆ! ಎಲ್ಲವೂ ಕನ್ನಡಿಯಲ್ಲಿ ಕಾಣುವಷ್ಟು ನಿಚ್ಚಳವಾಗಿ ಗೋಚರಿಸುತ್ತಿದ್ದರೂ ತಪ್ಪಿತಸ್ಥರು ಸಿಕ್ಕಿಬಿದ್ದಿಲ್ಲ. ಶಿಕ್ಷೆಯೂ ಇಲ್ಲ. ಎಲ್ಲವೂ ಯಥಾಸ್ಥಿತಿ ಮುಂದುವರೆದಿದೆ. ಆದರೆ ಜೀವನಪರ್ಯಂತ ಓಡಿಹೋಗಿದ್ದವಳು, ವೇಶ್ಯಾವಾಟಿಕೆ ಮಾಡಿದವಳು, ಅವಿವಾಹಿತೆಯಾಗಿಯೂ ಬಸಿರಾದವಳೆಂಬ ಶಾಶ್ವತ ಹಣೆಪಟ್ಟಿ ಈ ಹುಡುಗಿಯ ಪಾಲಿಗೆ. ಅಪರಾಧಿಗಳೇಕೆ ಮತ್ತು ಹೇಗೆ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರೆ?
ಹೋಮ್ ನರ್ಸ್ ಸೇವಾ ಸಂಸ್ಥೆಯೊಂದಕ್ಕೆ ತರಬೇತಿಗಾಗಿ ಸೇರಿದ ಓರ್ವ 20ರ ಹರೆಯದ ಯುವತಿ ತನ್ನ ಗೆಳತಿಯರ ಸಮೇತವಾಗಿ ಹೆಣ್ಣುಮಕ್ಕಳ ಅಕ್ರಮ ಮಾರಾಟ ಜಾಲಕ್ಕೆ ಸಿಕ್ಕಿ, ತಾನೊಬ್ಬಳು ಮಾತ್ರ ಹೇಗೋ ಅದರಿಂದ ತಪ್ಪಿಸಿಕೊಂಡು ವಾಪಸ್ ಊರಿಗೆ ಬಂದು ಅಲ್ಲಿಯೇ ಚಿಕ್ಕದೊಂದು ಕೆಲಸಕ್ಕೆ ಸೇರಿದ್ದಾಳೆ. ಸಮಾಜದ ಕುಹಕ ದೃಷ್ಟಿಯಿಂದ ನಿತ್ಯ ನರಕ ಅನುಭವಿಸುತ್ತಿದ್ದಾಳೆ. ಎಲ್ಲಿ ಹೋಗಿದ್ದಳೋ, ಏನೇನಾಗಿತ್ತೋ ಎಂಬ ಸಂಶಯದಿಂದ ಇವಳನ್ನು ಮದುವೆಯಾಗಲು ಯಾರೊಬ್ಬರೂ ಮುಂದೆ ಬಂದಿಲ್ಲ. ಈ ಪ್ರಕರಣ ಕುರಿತು ಪೊಲೀಸ್ ಕೇಸು ದಾಖಲಾಗಿದ್ದರೂ, ಮಾರಾಟ ಜಾಲದ ಯಾವ ಸುಳುಹುಗಳೂ ಸಿಗದೇ ಮುಚ್ಚಿಹೋಗಿದೆ. ತಪ್ಪು ಯಾರದ್ದು? ಯಾರಿಗೆ ಶಿಕ್ಷೆ? ಜಾನಪದ ಹೆಣ್ಣೊಬ್ಬಳು ಹೊಟ್ಟೆಯ ಈ ಕಿಚ್ಚು/ ಮುಟ್ಟಲಾಗದ ಬೆಂಕಿ/ ನನ್ನ ಸಿಟ್ಟೋಗಿ ತಟ್ಟಲಿ/ ಆ ಪರಶಿವನ ಮಡದಿಗೆ ಎನ್ನುತ್ತಾಳೆ. ತನ್ನ ಅರ್ಧಂಗಿಗೇ ನೋವಾದಾಗಲಾದರೂ ಹೆಣ್ಣುಜೀವದ ಸಂಕಟವನ್ನು ಶಿವ ಅರ್ಥ ಮಾಡಿಕೊಂಡಾನೇ? ಎಂಬ ಹಲುಬುವಿಕೆ ಅವಳದ್ದು. ಹೆಂಗಳೆಯರು ನಾವಂತೂ, ನಮ್ಮದೇ ಹೆಣ್ಣು ಸಂಕುಲದ ದಾರುಣ ನೋವನ್ನು ನೋಡುವಾಗಲೆಲ್ಲಾ, ಸಂಕಟದಿಂದ ಅವರ ಮನೆ ಹೆಣ್ಣುಮಕ್ಕಳಿಗೇ ಹೀಗೆಲ್ಲ ಆಗಿದ್ದರೆ, ಹೀಗೇ ಸುಮ್ಮನೆ ಇರ್ತಿದ್ದರಾ? ಎಂದು ಪುರುಷ ಪ್ರಭುತ್ವಕ್ಕೆ ಮನಸಿನಾಳದಲ್ಲೇ ಶಾಪ ಹಾಕುತ್ತಿರುತ್ತೇವೆ! ಆದರೆ ತನ್ನದೇ ಅರ್ಧಭಾಗವಾಗಿರುವ ಹೆಣ್ಣುಜೀವದ ನೋವನ್ನು ಅರ್ಥಮಾಡಿಕೊಳ್ಳುವ, ಅದಕ್ಕಾಗಿ ತುಡಿಯುವ ಸಂವೇದನೆಯನ್ನು ನಮ್ಮ ಸುತ್ತಲಿನ ಪುರುಷ ಪ್ರಪಂಚ ರೂಢಿಸಿಕೊಳ್ಳಬಾರದೇ? ಇದು ಸದಾ ನಮ್ಮನ್ನು ಕಾಡುತ್ತಲೇ ಇದೆ. ಹೆಣ್ಣುಜೀವದ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳ ಜೊತೆಗೇ ರಾಜ್ಯದಲ್ಲಿ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಆತಂಕ ಹುಟ್ಟಿಸುವಷ್ಟು ಮಿತಿಮೀರಿದೆ. ಪ್ರತಿದಿನ ಪತ್ರಿಕೆಯ ಸ್ಥಳೀಯ ಪುಟಗಳಲ್ಲಿ ಒಂದಲ್ಲಾ ಒಂದು ಹೆಣ್ಣುಮಕ್ಕಳ ನಾಪತ್ತೆಗೆ ಸಂಬಂಧಿಸಿದ ಸುದ್ದಿ ಈಗ ಮಾಮೂಲಿಯಾಗಿಬಿಟ್ಟಿದೆ. ರಾಜ್ಯದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ 2009ರಿಂದ 2011ರವರೆಗೆ ದಾಖಲಾದ ನಾಪತ್ತೆಯಾದ ಹೆಣ್ಣುಮಕ್ಕಳು 14,989. ನಾವಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಮರ್ಯಾದೆಗೆ ಅಂಜಿ ದಾಖಲಾಗದವು ಇದರ ದುಪ್ಪಟ್ಟೋ ಮೂರುಪಟ್ಟೋ ಇದ್ದರೂ ಅಚ್ಚರಿಪಡಬೇಕಿಲ್ಲ. ಆದರೆ ದಾಖಲಾದವುಗಳಲ್ಲೇ ಪತ್ತೆಯಾಗದೇ ಉಳಿದ ಹೆಣ್ಣುಮಕ್ಕಳು 8039! ಜೊತೆಗೆ 2012ರಲ್ಲಿ ನಾಪತ್ತೆಯಾದವರು 8084! ಇವರೆಲ್ಲಾ ಏನಾದರು? ಎಲ್ಲಿ ಹೋಗುತ್ತಾರೆ? ನಾಪತ್ತೆಯಾಗುವುದು ಎಂದರೆ ಏನು? ತಾವಾಗೆಯೇ ನಾಪತ್ತೆಯಾಗಿಬಿಡುತ್ತಾರೆಯೇ? ಅಥವಾ ಕಾಣದ ಕೈಗಳು ಅವರನ್ನು ನಾಪತ್ತೆ ಮಾಡಿಬಿಡುತ್ತವೆಯೇ? ಅವರನ್ನು ಕಾಳಜಿಯಿಂದ ಹುಡುಕುವ ಕೆಲಸವಾಗುತ್ತಿಲ್ಲ ಯಾಕೆ? ಈ ಪ್ರಮಾಣದಲ್ಲಿ ಹೆಣ್ಣುಮಕ್ಕಳು ನಾಪತ್ತೆಯಾಗುತ್ತಿದ್ದರೂ ಅದು ನಮ್ಮ ವ್ಯವಸ್ಥೆಯ ಕರುಳನ್ನು ಅಳ್ಳಾಡಿಸುತ್ತಿಲ್ಲವೇಕೆ? ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕಾರ್ಮಿಕ ಇಲಾಖೆ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಬಾಲ ನ್ಯಾಯ ಮಂಡಳಿ, ಮಹಿಳೆ ಮತ್ತು ಮಕ್ಕಳ ಪರ ಹಲವು ಸರ್ಕಾರಿ ಆಯೋಗಗಳು, ಸಮಿತಿಗಳು...... ಇಂತಹ ಹತ್ತು ಹಲವು ವ್ಯವಸ್ಥೆಗಳು ಪ್ರಕರಣಗಳನ್ನು ನೇರವಾಗಿ ನಿರ್ವಹಿಸುತ್ತಿದ್ದರೂ ಹೆಣ್ಣುಮಕ್ಕಳ ನಾಪತ್ತೆ ನಿಯಂತ್ರಣಕ್ಕೆ ಬರದೇ ಅದಕ್ಕಾಗಿ ಪ್ರತ್ಯೇಕವಾದ ಯಾವ ಗಂಭೀರ ಕ್ರಮವನ್ನೂ, ಕಾರ್ಯಯೋಜನೆಯನ್ನೂ ತೆಗೆದುಕೊಳ್ಳುತ್ತಿಲ್ಲವೆಂದರೆ ಹೆಣ್ಣುಮಕ್ಕಳನ್ನು ರಕ್ಷಿಸುವವರಾರು? ಮಹಿಳೆಯರ ಕಳ್ಳಸಾಗಾಣಿಕೆಯ ಹಿಂದಿರುವ ಸತ್ಯಸಂಗತಿಗಳನ್ನು ಅರಿಯಲು ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಡೆಸಿದ ಅಧ್ಯಯನದಿಂದ ಹಲವಾರು ಬೆಚ್ಚಿಬೀಳುವಂತಹ ಅಂಶಗಳು ಹೊರಬಿದ್ದಿವೆ. ಕಳ್ಳಸಾಗಾಣಿಕೆ ಜಾಲಕ್ಕೆ ಸಿಕ್ಕಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟವರಲ್ಲಿ ಶೇಕಡಾ 60.6ರಷ್ಟು ಮಂದಿ ಬಾಲ್ಯವಿವಾಹವಾದವರೇ! ಕಳ್ಳಸಾಗಾಣಿಕೆಯ ವ್ಯವಹಾರದಲ್ಲಿ ನಿರತರಾದ ದಲ್ಲಾಳಿಗಳು ಮಹಿಳೆಯರನ್ನು ಹೆಚ್ಚಾಗಿ ಒಳ್ಳೆಯ ಕೆಲಸದ ಭರವಸೆ ನೀಡಿಯೇ ಬಲಿಪಶು ಮಾಡುತ್ತಿದ್ದಾರೆ. ಪ್ರೀತಿ ಅಥವಾ ಮದುವೆಯ ಭರವಸೆ ನೀಡಿ ಈ ಜಾಲಕ್ಕೆ ಕೆಡಹುವುದು ಶೇಕಡಾ 20 ಮಾತ್ರ! ವಂಚನೆಗೊಳಗಾದವರಲ್ಲಿ ತಳವರ್ಗದವರೇ ಹೆಚ್ಚಿದ್ದು, ಶೇಕಡಾ 70ರಷ್ಟು ಮಹಿಳೆಯರು ತಳಸಮುದಾಯದವರು! ಜಾಗತಿಕವಾಗಿ ಮಹಿಳೆಯರ ಮತ್ತು ಮಕ್ಕಳ ಮಾರಾಟದಲ್ಲಿ ಭಾರತವು ಪ್ರಮುಖ ತಾಣವಾಗಿದೆಯೆಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. 90ರ ದಶಕದಿಂದ ಎಲ್ಲಾ ಸರ್ಕಾರಗಳು ಜಾರಿಗೊಳಿಸಿದ ಜಾಗತೀಕರಣದ ನೀತಿಗಳು ಮಹಿಳೆಯರ ಮತ್ತು ಮಕ್ಕಳ ಮಾರಾಟ ಅತಿ ಹೆಚ್ಚು ಬೆಳೆಯಲು ಕಾರಣವಾಗಿದೆ. 2010ರ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ವರದಿಯಂತೆಯೇ ಸದ್ಯ 25 ಲಕ್ಷ ಮಹಿಳೆಯರು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ. ಆದರೆ ಮಾನವ ಹಕ್ಕುಗಳ ವಾಚ್ನ ವರದಿಯಂತೆ ಇದುವರೆಗೆ ಅಂದಾಜು 150 ಲಕ್ಷ ಭಾರತದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಲಾಗಿದೆ! ಹೆಣ್ಣುಮಕ್ಕಳ ಅಕ್ರಮ ಮಾರಾಟವೆಂಬುದು ಈಗ ಸೀಮಿತ ಚೌಕಟ್ಟುಗಳನ್ನು ದಾಟಿ, ರಾಜ್ಯ-ಅಂತರ್ರಾಜ್ಯ ಮಿತಿಗಳನ್ನು ಮೀರಿ ರಾಷ್ಟ್ರ ಹಾಗೂ ಜಾಗತಿಕ ವಿದ್ಯಮಾನವಾಗಿ ಸದ್ದಿಲ್ಲದೇ ಬೆಳೆದು ನಿಂತಿದೆ. ನಾಪತ್ತೆಯಾದ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಅಡ್ಡಗಳಲ್ಲಿ ಸಿಕ್ಕಿದರೂ ಇದರ ಹಿಂದಿರುವ ವ್ಯವಸ್ಥಿತವಾದ ಅಕ್ರಮ ಹೆಣ್ಣುಮಕ್ಕಳ ಸಾಗಾಣಿಕಾ ಜಾಲವನ್ನು ಭೇದಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಎಲ್ಲವೂ ಗೊತ್ತಿದ್ದೂ ಹೆಣ್ಣುಮಕ್ಕಳನ್ನು ಹುಡುಕುವ, ರಕ್ಷಿಸುವ, ಮತ್ತೆ ಅವರನ್ನು ಯಥಾಸ್ಥಿತಿಯಲ್ಲಿ ಉಳಿಸುವ ಕಣ್ಣಾಮುಚ್ಚೆ ನಾಟಕವನ್ನು ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ಆಡುತ್ತಿದೆಯೇ? ಹೆಣ್ಣಿನ ದೇಹವನ್ನು ವಸ್ತುವನ್ನಾಗಿಸಿಕೊಂಡು ವ್ಯಾಪಾರದ ಆಟವಾಡುತ್ತಿರುವವರಿಗೆ ನಾಪತ್ತೆಯಾದ ಹೆಣ್ಣುಮಕ್ಕಳೇ ಬಂಡವಾಳ ಹೂಡಿಕೆಯಾಗಿ ಬಳಕೆಯಾಗುತ್ತಿದ್ದಾರೆ. ಅದರಿಂದ ಕೋಟಿಗಟ್ಟಲೆ ಆದಾಯ ದೊರಕುತ್ತಿದೆ! ಇದು ಕೇವಲ ಮಹಿಳಾ ಹಕ್ಕಿನ ವಿಷಯವಲ್ಲ, ಮನುಷ್ಯತ್ವದ ಕಟ್ಟಕಡೆಯ ಮಜಲು ಎಂದು ಸರ್ಕಾರಕ್ಕೆ ಹೃದಯ ದ್ರವಿಸುವಂತೆ ಹೇಗೆ ಅರ್ಥಮಾಡಿಸುವುದು? ಕಳೆದ 2012ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ತಂಡ ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಸರಾಸರಿ 200-300 ಹೆಣ್ಣುಮಕ್ಕಳು ಕಾಣೆಯಾಗುತ್ತಿದ್ದಾರೆ. ಇದರಲ್ಲಿ ಶೇಕಡಾ 70ರಷ್ಟು ಇನ್ನೂ ಬಾಲ್ಯದಾಟದವರು ಎನ್ನುವುದು ಆತಂಕಕಾರಿಯಾಗಿದೆ. ರಾಜ್ಯ ಮಹಿಳಾ ಆಯೋಗವೂ ಕಳೆದ ವರ್ಷ ಈ ವರದಿಯನ್ನಾಧರಿಸಿ- ಶೇಕಡಾ 36ರಷ್ಟು ಹೆಣ್ಣುಮಕ್ಕಳು ಪ್ರೀತಿ, ಪ್ರೇಮ ಪ್ರಕರಣಗಳಿಗಾಗಿ ಓಡಿ ಹೋಗುತ್ತಾರೆ ಎಂದು ಒತ್ತಿ ಹೇಳಿದೆ. ಹಾಗಿದ್ದರೆ ಅವರೊಂದಿಗೆ ಇಷ್ಟೇ ಪ್ರಮಾಣದ ವಯಸ್ಕ ಪುರುಷರೂ ನಾಪತ್ತೆಯಾಗಬೇಕಿತ್ತಲ್ಲ? ಈ ಬಗ್ಗೆ ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳನ್ನು ಅಭ್ಯಸಿಸಿದಾಗ ಹಾಗೆ ನಾಪತ್ತೆಯಾದ ಪುರುಷರ ಪ್ರಮಾಣ ಶೇಕಡಾ 5ರೊಳಗೇ ಇದೆ! ಇದರಲ್ಲೂ ಪ್ರೀತಿ ಪ್ರೇಮಕ್ಕಿಂತಾ ಬೇರೆ ವೈಯಕ್ತಿಕ ಕಾರಣಗಳೇ ಮುಖ್ಯವಾಗಿವೆ. ಹಾಗಿದ್ದರೆ ನಮ್ಮ ಹೆಣ್ಣುಮಕ್ಕಳು ಯಾರನ್ನು ಪ್ರೀತಿಸಿ ಓಡಿ ಹೋಗುತ್ತಿದ್ದಾರೆ? ನಮ್ಮ ಹೆಣ್ಣುಮಕ್ಕಳೇನು ಮೀರಾ, ಅಕ್ಕಮಹಾದೇವಿ, ಆಂಡಾಳ್ರಂತೆ ಸಂತಭಕ್ತೆಯರೇ? ಇದು ಏನನ್ನು ಸೂಚಿಸುತ್ತದೇ? ಹೆಣ್ಣುಮಕ್ಕಳ ವ್ಯವಸ್ಥಿತವಾದ ಮಾರಾಟ ಜಾಲವನ್ನು ನಿಗೂಢ ಕೈಗಳು ವ್ಯವಸ್ಥಿತವಾಗಿ ನಿರಾತಂಕವಾಗಿ ನಡೆಸುತ್ತಿವೆ ಎಂದಲ್ಲವೇ? ಪ್ರೀತಿಸಿ ಮನೆ ಬಿಟ್ಟು ಹೋಗುತ್ತಿರುವ ಹೆಣ್ಣುಮಕ್ಕಳು ಇಲ್ಲವೇ ಇಲ್ಲವೆಂದಲ್ಲ. ಆದರೆ ಪ್ರೀತಿಯ ಹಿಂದೆ ಬಿದ್ದು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದರೆ ಅವರನ್ನು ಪತ್ತೆ ಹಚ್ಚುವುದು ಕಷ್ಟವಾದರೂ ಸಾಧ್ಯ. ಆದ್ದರಿಂದ ಹೆಣ್ಣುಮಕ್ಕಳು ಶಾಶ್ವತವಾಗಿ ಕಾಣೆಯಾಗುವುದರ ಹಿಂದೆ ಮೋಸದ ಮಾಯಾ ಜಾಲ ಹರಡಿ ನಿಂತಿರುತ್ತದೆ ಎಂಬುದನ್ನು ಯಾರಾದರೂ ಅರ್ಥಮಾಡಿಕೊಳ್ಳಬಲ್ಲರಲ್ಲವೇ? ಈ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಣೆಕೆಯೆಂಬ ಕ್ರೂರ ವ್ಯವಹಾರ ನಿಯಂತ್ರಣಕ್ಕೆ ಇನ್ನಾದರೂ ಸರ್ಕಾರದ ಉನ್ನತ ಹಂತದಲ್ಲಿ ಸಮಗ್ರವಾದ ಕಾರ್ಯಯೋಜನೆ ಅತ್ಯಂತ ತುರ್ತಾಗಿ ಆಗಬೇಕಿದೆ. ಇದಕ್ಕೆ ಸಂಬಂಧಿತವಾದ ಎಲ್ಲಾ ಇಲಾಖೆಗಳು, ಸರ್ಕಾರಿ ಸಮಿತಿಗಳೂ ಹಾಗೂ ಸ್ವಯಂಸೇವಾ ಸಂಸ್ಥೆಗಳು ಸಂಘಟಿತವಾಗಿ, ಪರಸ್ಪರ ಪೂರಕವಾಗಿ ಈ ಕೆಲಸದಲ್ಲಿ ತೊಡಗಿಕೊಳ್ಳಬೇಕಿದೆ. ಈ ವಿಷಯದ ಗಂಭೀರತೆಗೆ ತಕ್ಕ ಸಶಕ್ತವಾದ ಕಾನೂನುಗಳು ಇಲ್ಲದಿರುವುದು, ಇದ್ದರೂ ಅದರೊಳಗಿನ ನುಸುಳುಗಳು, ಜತೆಗೆ ನ್ಯಾಯದಾನದ ವಿಳಂಬ ಹಾಗೂ ಕಾನೂನು ಜಾರಿಯಲ್ಲೂ ವಿಳಂಬ, ಹೀಗಾಗಿ ಈ ಅಕ್ರಮ ವ್ಯವಹಾರ ಎಗ್ಗಿಲ್ಲದೇ ನಡೆಯುತ್ತಿವೆ. ಅದಕ್ಕಾಗಿ ತ್ವರಿತಗತಿಯ ನ್ಯಾಯಾಲಯಗಳಲ್ಲಿ ತಕ್ಷಣವೇ ನ್ಯಾಯ ನೀಡುವ ವ್ಯವಸ್ಥೆಯಾಗಬೇಕು. ಜೊತೆಗೇ ಇಂದಿನ ಅವಶ್ಯಕತೆಗನುಗುಣವಾಗಿ ಕಾನೂನು ತಿದ್ದುಪಡಿಯೂ ಆಗಬೇಕಿದೆ. 30ಮೇ 2005ರಲ್ಲಿ ಕರ್ನಾಟಕ ಸರ್ಕಾರದಿಂದ, ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹೆಣ್ಣುಮಕ್ಕಳ ಮಾರಾಟ ತಡೆ ಸಮಿತಿಗಳನ್ನು ರಚಿಸಲು ಆದೇಶ ಜಾರಿಯಾಯ್ತು. ಅದು ಯಶಸ್ವಿಯಾಗಿ ಜಾರಿಯಾಗಲಿಲ್ಲವೆಂದು ಮತ್ತೆ 28ಮೇ 2007ರಲ್ಲಿ, ಚುನಾಯಿತ ಪ್ರತಿನಿಧಿಗಳ ಮುಖಂಡತ್ವದಲ್ಲಿ ಈ ಸಮಿತಿಗಳನ್ನು ಪುನರ್ ರಚಿಸಬೇಕೆಂಬ ಆದೇಶ ಜಾರಿಯಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಸಮಿತಿಯ ಸಭೆ ಸೇರಿ ಕಾರ್ಯಯೋಜನೆಯ ಸಿದ್ಧತೆ ಹಾಗೂ ಆದ ಕೆಲಸಗಳ ಪರಾಮರ್ಶೆ ಮಾಡಬೇಕೆಂದು ಆದೇಶದಲ್ಲಿ ಒತ್ತಿಹೇಳಲಾಗಿತ್ತು. ಆದರೆ ಬಹಳಷ್ಟು ಕಡೆಗಳಲ್ಲಿ ಇಂತಹ ಸಮಿತಿ ರೂಪುಗೊಂಡಿಲ್ಲ. ರೂಪುಗೊಂಡ ಸಮಿತಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂಬುದು ದುಃಖಕರ. ಈ ಸಮಿತಿ 10 ಜನ ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಡ್ಡಾಯವಾಗಿ ಒಬ್ಬ ಪೊಲೀಸ್ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಜೊತೆಗೆ 10 ಜನ ಜವಾಬ್ದಾರಿಯುತ ಸಾರ್ವಜನಿಕರನ್ನೊಳಗೊಂಡು [5ಮಂದಿ ಪುರುಷರು, 5ಮಂದಿ ಮಹಿಳೆಯರು] ಮೂಲಮಟ್ಟದಲ್ಲಿ ಪುನರ್ ರಚಿತವಾಗಬೇಕು. ಈ ಕಣ್ಗಾವಲು ಸಮಿತಿ ಕನಷ್ಠ ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸಾರ್ವಜನಿಕರನ್ನೊಳಗೊಂಡಾಗ ಮಾತ್ರ ಸಮಿತಿ ನಿಗದಿತವಾಗಿ ಸೇರಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪೊಲೀಸ್ ಇಲಾಖೆಯಲ್ಲೇ ಇಂತಹ ನಾಪತ್ತೆ ಪ್ರಕರಣಗಳನ್ನು ಶೀಘ್ರವಾಗಿ ವ್ಯವಹರಿಸಲು ಪ್ರತ್ಯೇಕ ಸೆಲ್ ಒಂದನ್ನು ರಚಿಸುವ ತುರ್ತು ಕೂಡ ಹೆಚ್ಚಾಗಿದೆ. ಈ ಕುರಿತು ಸರ್ಕಾರದ ಉನ್ನತಮಟ್ಟದಲ್ಲಿ ಕಾರ್ಯಯೋಜನೆಯೊಂದು ರೂಪುಗೊಂಡು, ಅದರ ಅನುಷ್ಠಾನಕ್ಕಾಗಿ ಬಿಗಿ ಕ್ರಮಗಳನ್ನು ಜಾರಿಗೊಳಿಸಬೇಕು. ಇದರ ಜೊತೆಗೇ ಹದಿಹರೆಯದ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಲೈಂಗಿಕ ಶಿಕ್ಷಣ ಮತ್ತು ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿ, ಜೀವನ ಕೌಶಲ್ಯಗಳ ಕುರಿತು ತರಬೇತಿ, ಮಾನವ ಕಳ್ಳಸಾಗಾಣಿಕೆಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದೂ ಅಷ್ಟೇ ಮುಖ್ಯವಾಗಿದೆ. ನಾಪತ್ತೆಯಾಗಿ ಮತ್ತೆ ಪತ್ತೆಯಾದ ಹೆಣ್ಣುಮಕ್ಕಳಿಗೆ ಗೌರವಯುತ ಪುನರ್ವಸತಿ ನಿರ್ಮಿಸುವ ಕುರಿತು, ಅವರ ಸಹಜ ಹಕ್ಕುಗಳನ್ನು ದೊರಕಿಸಿಕೊಡುವ ಕುರಿತು ಸರ್ಕಾರ ವಿಶೇಷವಾಗಿಯೇ ಯೋಚಿಸಬೇಕಿದೆ. ಅವರು ಮತ್ತೆ ಇಂತಹ ಅಕ್ರಮ ಮಾರಾಟ ಜಾಲಕ್ಕೆ ಬೀಳದಂತೆ ತಡೆಯುವ ಪ್ರಯತ್ನಗಳೂ ಆಗಬೇಕಿದೆ. ವಾಪಸಾದ ಹೆಣ್ಣುಮಕ್ಕಳು ಹೇಗೆ ನಾಪತ್ತೆಯಾದರು? ಇಷ್ಟು ಕಾಲ ಎಲ್ಲಿದ್ದರು? ಯಾವ ಕೆಲಸದಲ್ಲಿದ್ದರು? ಅಲ್ಲಿನ ವ್ಯವಸ್ಥೆ ಮತ್ತು ವ್ಯವಹಾರಗಳು ಯಾವ ರೀತಿಯದಾಗಿತ್ತು ಎಂಬುದರ ಕೂಲಂಕುಷ ಸಮೀಕ್ಷೆಗಳಾಗಿ ಅದರ ಆಧಾರದ ಮೇಲೆ ಕಾರ್ಯಯೋಜನೆಯನ್ನು ಸಿಧ್ಧಗೊಳಿಸಬೇಕು. ಇಂತಹ ಸಮೀಕ್ಷೆಯಿಂದ ಮಾತ್ರ ನಾಪತ್ತೆ ಹಿಂದಿರುವ ವೈಯಕ್ತಿಕ ಕಾರಣಗಳು, ಕೌಟುಂಬಿಕ, ಆರ್ಥಿಕ, ಸಾಮಾಜಿಕ ಕಾರಣಗಳು ಪತ್ತೆಯಾಗಿ ಅವುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಲು ಹಾಗೂ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತವೆ. ಇಲ್ಲಿ ನಮಗೆ ಬೇಕಾಗಿರುವುದು, ಬೇಡುತ್ತಿರುವುದು-ನಮ್ಮ ಮನೆಯ ಹೆಣ್ಣುಮಗಳೇ ನಾಪತ್ತೆಯಾಗಿದ್ದರೆ..... ಎಷ್ಟು ತೀವ್ರವಾಗಿ ಸ್ಪಂದಿಸುತ್ತಿದ್ದೆವೋ, ಅಂತಹುದೇ ತೀವ್ರತೆಯನ್ನು ಪ್ರಭುತ್ವದಿಂದಲೂ, ಆಡಳಿತಶಾಹಿಯಿಂದಲೂ ನಾವು ನಿರೀಕ್ಷಿಸಬಹುದೇ? ರೂಪ ಹಾಸನ್
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|