ನಾನು ಎಂಬುದು ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇರುವಂಥಹದ್ದು. ನಾನೂ ಇದಕ್ಕೆ ಹೊರತಾಗಿಲ್ಲ. ಯಾರಾದರೂ ನನ್ನನ್ನು ಹೊಗಳಿದರೆ ತಕ್ಷಣವೇ ಪುಳಕಗೊಳ್ಳುತ್ತೇನೆ. ಆದರೆ ಹೊರ ಪ್ರಪಂಚಕ್ಕೆ ತೋರ್ಪಡಿಸದಂತಿರುವ ಕಲೆ ಸಿದ್ಧಿಸಿಕೊಂಡಿದ್ದೇನೆ. ಹೀಗೆಯೇ ಕೆಲ ವರ್ಷಗಳ ಹಿಂದೆ ಬೇಸರ ಕಳೆಯಲೆಂದು ರಾಜ್ಯ ಪರ್ಯಟನೆಗೆ ಹೊರಟೆ. ಸುಮಾರು ದಿನಗಳ ಪಯಣದ ನಂತರ ನಗರವೊಂದರಲ್ಲಿ ಮ್ಯೂಸಿಯಂ ನೋಡುವ ಅವಕಾಶ ಒದಗಿ ಬಂತು. ಅಲ್ಲಿ ಕಲಾವಿದನೊಬ್ಬನ ಪರಿಚಯವಾಯಿತು. ಆತ ನಿಜಕ್ಕೂ ಬಹಳ ಅದ್ಭುತ ಶಿಲ್ಪಿ. ಅಲ್ಲಿ ಆತನೇ ಕೆತ್ತಿನ ಅನೇಕ ಮೂರ್ತಿಗಳು ಅನಾವರಣಗೊಂಡಿದ್ದವು. ಆ ಮೂರ್ತಿಗಳು ಅದೆಷ್ಟು ಮನಮೋಹಕವಾಗಿದ್ದವೆಂದರೆ ಅವು ನಿಜವಾಗಿಯೂ ಜೀವತಳೆದು ನಿಂತಿವೆಯೇನೋ ಎಂಬಷ್ಟು ! ನನಗೆ ನಂಬಲು ಸಾಧ್ಯವಾಗದೆ ಆಶ್ಚರ್ಯವಾಗಿ ಆತನನ್ನು ಪ್ರಶ್ನಿಸಿದೆ.
"ನಿಜವಾಗಿಯೂ ಈ ಮೂರ್ತಿಗಳನ್ನು ಕೆತ್ತಿದವರು ನೀವೇನಾ ?!!" ಆತ "ಹೌದು ಸಾರ್ ನಾನೇ" ನನಗೆ ಸಮಾಧಾನವಾಗಲಿಲ್ಲ "ನಿಜವಾಗಿಯೂ ನೀವೇ ಕೆತ್ತಿದ ಶಿಲ್ಪಿಗಳೇ ಇವು ?" "ಹೌದು ಸಾರ್ ನಾನೇ" ಊಹೂಂ…ನನಗೆ ಸಾಕಾಗಲಿಲ್ಲ "ನಿಜವಾಗಿಯೂ ?!!" "ಹೌದು ಸಾರ್ ನಾನೇ" ಎಂದು ಕೈ ಎತ್ತಿದ. ಆಗ ನನ್ನ ಗಮನ ಆತನ ಹಸ್ತದತ್ತ ಸೆಳೆಯಿತು. "ಎಲ್ಲಿ ನಿಮ್ಮ ಹಸ್ತ ತೋರಿಸಿ." "ಯಾಕೆ ಸಾರ್ ಭವಿಷ್ಯ ಹೇಳ್ತೀರಾ ? ನೀವು ಜ್ಯೋತಿಷಿಗಳಾ ?" ಕೈ ಮುಂದೆ ಚಾಚಿದ. "ಅಯ್ಯೋ ಹಾಗೇನೂ ಇಲ್ಲಾಪ ಹಾಗೇ ಕಲಿತಿದ್ದೇನೆ" ಆತನ ಹಸ್ತ ಪರಿಶೀಲಿಸಿದೆ. "ನೋಡಿ ನಿಮ್ಮಲ್ಲಿ ಅತೀ ಅದ್ಭುತವಾದ ಪ್ರತಿಭೆ ಇದೆ ಆದರೆ…" "ಆದರೆ ಏನು ಮುಂದೆ ಹೇಳಿ ಸಾರ್." "ಬೇಡ ಬಿಡಿ ನಾನಿನ್ನು ಬರಲೇ" ಹೊರಡಲನುವಾದೆ. "ಅಯ್ಯೋ ಮುಂದೆ ಹೇಳಿ ಸಾರ್ ಪ್ಲೀಸ್" "ನೋಡಿ ನಿಮ್ಮ ವಿಷಯದಲ್ಲಿ ಮುಂದೆ ಏನಾಗುವುದೋ ಅದನ್ನು ಈಗಲೇ ತಿಳಿದುಕೊಳ್ಳುವುದು ಅಷ್ಟು ಸಮಂಜಸವೆನಿಸುತ್ತಿಲ್ಲ. ಏನಾಗುವುದೋ ಅದು ಆಗಿಯೇ ತೀರುತ್ತದೆ. ಹಾಗಾಗಿ ತಾವು ಅದನ್ನು ತಿಳಿದುಕೊಳ್ಳದಿರುವುದೇ ಲೇಸು." ನನ್ನ ಮಾತು ಆತನಿಗೆ ಕುತೂಹಲದ ಸರಕಾಯಿತು. "ಸಾರ್ ಅದೇನೇ ಆಗಿರಲಿ ನನ್ನ ಸಾವಿನ ವಿಷಯವೇ ಆಗಿರಲಿ. ನನಗೆ ನಾಳೆಯೇ ಸಾವು ಬರಲಿ ನಾನು ಚಿಂತಿಸುವುದಿಲ್ಲ ನೀವು ಹೇಳಿ" ದುಂಬಾಲು ಬಿದ್ದ. "ಹೌದು ನಿನಗೆ ನಾಳೆ ಮಧ್ಯಾಹ್ನ 12.30 ಘಂಟೆಗೆ ಸಾವು ಬರುತ್ತದೆ." ನಿಜಕ್ಕೂ ಆತನ ಜಂಘಾಬಲವೇ ಉಡುಗಿಹೋಯಿತು. ಒಂದು ಕ್ಷಣ ಅಲ್ಲಿಯೇ ಗರಬಡಿದವನಂತೆ ಕುಳಿತ. "ಗೆಳೆಯಾ ನಾನು ಹೇಳಿರಲಿಲ್ಲವೇ ನನ್ನನ್ನು ಒತ್ತಾಯಪಡಿಸಿದೆ ಏಕೆ ?" "ಅಯ್ಯೋ ಇದಕ್ಕೇನಾದರೂ ಪರಿಹಾರವಿಲ್ಲವೇ ?" "ಊಹೂ ಸಾವಿನಿಂದ ತಪ್ಪಿಸಿಕೊಳ್ಳಲು ಮನುಷ್ಯ ಮಾತ್ರದವರಿಗ್ಯಾರಿಗೂ ಸಾಧ್ಯವಿಲ್ಲ." "ಏನಾದರೊಂದು ಪರಿಹಾರ ಸೂಚಿಸಿ ಗುರುಗಳೇ" ದುಂಬಾಲು ಬಿದ್ದ. ನನಗೆ ಆತನ ಸಂಕಟ ಅರ್ಥವಾಯಿತು. ಆತನನನ್ನು ಸಮಾಧಾನ ಪಡಿಸುವ ಪರ್ಯಾಯ ಮಾರ್ಗ ಆಲೋಚಿಸಿದೆ. "ಊಂ ಒಂದು ಮಾರ್ಗವಿದೆ." ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. "ಬೇಗ ಹೇಳಿ ಗುರೂಜಿ." "ನಿನ್ನಲ್ಲಿ ಮನುಷ್ಯರ ಮೂರ್ತಿಗಳನ್ನು ಕೆತ್ತುವ ಅದ್ಭುತವಾದ ಕಲೆಯಿದೆ. ನೀನು ನಿನ್ನ ಹಾಗೆಯೇ ಇರುವ ಒಂಬತ್ತು ಮೂರ್ತಿಗಳನ್ನು ಕೆತ್ತಿ ಸಾಲಾಗಿ ನಿಲ್ಲಿಸಿ ಮಧ್ಯೆ ನೀನೂ ನಿಲ್ಲಬೇಕು. ನಾಳೆ ಹನ್ನೆರಡೂವರೆ ಗಂಟೆಗೆ ಯಮ ಬರುತ್ತಾನೆ. ನೀನು ಸ್ವಲ್ಪವೂ ಮಿಸುಕಬಾರದು. ನೆನಪಿರಲಿ ಮಿಸುಕಿದರೆ ನಿನಗೆ ಸಾವು." "ಆಯ್ತು ಗುರೂಜಿ" ಕಾಲಿಗೆ ಬಿದ್ದೆದ್ದು ಮೂರ್ತಿ ಕೆತ್ತನೆ ಶುರುವಿಟ್ಟುಕೊಂಡ. ಸಾಯಂಕಾಲದ ಒಳಗಾಗಿ ಆತನಂತೆಯೇ ಇರುವ ಒಂಬತ್ತು ಮೂರ್ತಿಗಳು ಸಿದ್ಧಗೊಂಡವು ! ಎಷ್ಟು ಅದ್ಭುತವಾದ ಶಿಲ್ಪಗಳೆಂದರೆ ಸೃಷ್ಟಿಕರ್ತ ಸಾಕ್ಷಾತ್ ಬ್ರಹ್ಮದೇವನೇ ಬಂದರೂ ಗುರುತು ಸಿಗಲಾರದಷ್ಟು !! "ಸರಿ ಈಗ ಒಂದು ಗಂಟೆ ಮಿಸುಕಾಡದಂತೆ ನಿಲ್ಲುವುದನ್ನು ಅಭ್ಯಾಸ ಶುರು ಮಾಡು." ಕಠೋರವಾದ ಅಭ್ಯಾಸ ಶುರುವಾಯಿತು. ಆತ ಎಷ್ಟು ಚೆನ್ನಾಗಿ ಅಭ್ಯಸಿಸಿದನೆಂದರೆ ಅಕಸ್ಮಾತ್ ಆತನು ಕೆತ್ತಿದ ಮುರ್ತಿಗಳಾದರೂ ಮಿಸುಕಬಹುದೇನೋ ಆದರೆ ಈತನು ಮಿಸುಕುತ್ತಿರಲಿಲ್ಲ. ಸಾವನ್ನು ಗೆಲ್ಲಬೇಕಲ್ಲ ? ಮರುದಿನ ಮಧ್ಯಾಹ್ನ ಸಮಯ 12.30, ಯಮ ಸರಿಯಾಗಿ ಹಾಜರಾಗುತ್ತಾನೆ. ಆತನಿಗೆ ಆಶ್ಚರ್ಯ ! ಅಲ್ಲಿ ಈತನಂತೆಯೇ ಹತ್ತು ಜನರಿದ್ದಾರೆ !! ಆತನ ಇತಿಹಾಸವನ್ನು ಕೆದಕಿದ ಯಮನಿಗೆ ನಿಧಾನವಾಗಿ ಪರಿಸ್ಥಿತಿಯ ಅರಿವಾಯಿತು. ಈ ಹಿಂದೆ ಇವೆಲ್ಲವುಗಳ ಅನುಭವವಿದ್ದ ಯಮ ನಸುನಗುತ್ತ ಉದ್ಘರಿಸಿದ. "ವಾಹ್ ಭಲೇ…ಅದ್ಭುತ ! ಸುಂದರ. ಅತೀ ಸುಂದರ ಎಂತಹ ಅತ್ಯಂತ ಮನಮೋಹಕವಾದ ಶಿಲ್ಪಗಳನ್ನು ಕೆತ್ತಿದಂಥಹ ಶಿಲ್ಪಿಯಾದರೂ ಯಾರು ?!!!" ಆ ಒಂಬತ್ತು ಮೂರ್ತಿಗಳ ಮಧ್ಯೆ ಉಸಿರಾಡದೆ ನಿಂತಿದ್ದ ಶಿಲ್ಪಿ ಕೈ ಎತ್ತಿ ಹೇಳಿದ. "ನಾನು." ಕೃಪೆ : ಅಗ್ನಿ ಪತ್ರಿಕೆ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |