ಅವರು ದೇವಜೀಭಾಯಿ ಗೋವಿಂದಭಾಯಿ ಫತೇಪಾರ. ಲೋಕಸಭೆಯಲ್ಲಿ ಗುಜರಾತಿನ ಸುರೇಂದ್ರ ನಗರವನ್ನು ಪ್ರತಿನಿಧಿಸುತ್ತಾರೆ. ಮೊದಲ ಸಲ ಆರಿಸಿ ಬಂದವರು. ಇತ್ತೀಚೆಗೆ ಲೋಕಸಭೆಯಲ್ಲಿ ಅವರೊಂದು ಪ್ರಶ್ನೆ ಕೇಳಿದ್ದರು. ತಾವು ಕೇಳುತ್ತಿರುವ ಪ್ರಶ್ನೆಯ ಹಿಂದೆ ತಮಗೇ ತಿಳಿಯದ ರಾಜಕಾರಣ ಅಡಗಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಈ ರಾಜಕಾರಣ ತಮ್ಮದೇ ಗುಜರಾತಿನ ಸರ್ಕಾರವನ್ನು ಮತ್ತು ಇತ್ತೀಚಿನ ತನಕ ಆ ಸರ್ಕಾರದ ಮುಖ್ಯಮಂತ್ರಿಯಾಗಿದ್ದು ಇದೀಗ ಪ್ರಧಾನಿ ಆಗಿರುವ ಪ್ರಚಂಡ ನಾಯಕನನ್ನು ಅಪರಾಧಿಯ ಕಟಕಟೆಯಲ್ಲಿ ನಿಲ್ಲಿಸುತ್ತದೆ ಎಂಬುದನ್ನು ಅರಿಯದಷ್ಟು ಅಮಾಯಕರು ಅವರು. ದೇವಜೀಭಾಯಿ ಕೇಳಿದ್ದ ಪ್ರಶ್ನೆಗೆ ಸಂಬಂಧಿಸಿದಂತೆ ನೂರಕ್ಕೆ ತೊಂಬತ್ತರಷ್ಟು ಕೆಲಸ ಮಾಡಬೇಕಿದ್ದ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಹಾಗೆಂದು ಕೇಂದ್ರ ಕಾರ್ಮಿಕ ಸಚಿವ ನರೇಂದ್ರಸಿಂಗ್ ತೋಮರ್ಅನುಮಾನಕ್ಕೆ ಎಡೆಯಿಲ್ಲದಂತೆ ಎರಡೆರಡು ಬಾರಿ ಹೇಳಿದರು. ಆದರೂ ದೇವಜೀಭಾಯಿ ಅವರಿಗೆ ಅದು ತಿಳಿದಂತೆ ತೋರಲಿಲ್ಲ.
ಅಂದ ಹಾಗೆ ದೇವಜೀಭಾಯಿ ಕೇಳಿದ್ದು ಬಹಳ ಸರಳ ಪ್ರಶ್ನೆ. ಅದು ಉಪ್ಪಿನ ಕಾರ್ಮಿಕರು ಅತ್ಯಂತ ಅಮಾನವೀಯ ಮತ್ತು ಶೋಚನೀಯ ಸ್ಥಿತಿಗತಿಗಳಲ್ಲಿ ಬದುಕಿರುವ ಪ್ರಶ್ನೆ. ಅವರ ಕಷ್ಟ ಕಾರ್ಪಣ್ಯಗಳಅರಿವು ಸರ್ಕಾರಕ್ಕೆ ಇದೆಯೇ.....ಇದ್ದರೆ ವಿವರಗಳನ್ನು ನೀಡಬೇಕು, ಮೂರು ವರ್ಷಗಳಿಂದ ಮಳೆಯ ಕಾರಣ ದೇಶದ ನಾನಾ ಭಾಗಗಳ ಉಪ್ಪು ಕಾರ್ಮಿಕರು ತೀವ್ರ ನಷ್ಟ ಅನುಭವಿಸಿದ್ದಾರೆ. ಈ ಹಿಂದಿನಸರ್ಕಾರ ಅವರಿಗೆ ನಷ್ಟ ಪರಿಹಾರ ನೀಡಿದೆಯೇ.....ನೀಡಿಲ್ಲವಾದರೆ ಕಾರಣಗಳೇನು ? ಉಪ್ಪು ಕೇಂದ್ರಕ್ಕೆ ಸಂಬಂಧಿಸಿದ ವಿಷಯವೇ ಹೌದು. ಆದರೆ ಕಾರ್ಮಿಕರ ಕ್ಷೇಮ, ಲಾಭ ನಷ್ಟದ ವಿಚಾರಗಳನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳುತ್ತದೆ. ಮಳೆಯಿಂದ ನಷ್ಟವಾಗಿರುವ ವಿಚಾರ ಕೇಂದ್ರದಗಮನಕ್ಕೆ ಬಂದಿಲ್ಲ. ಹೀಗಾಗಿ ನೆರವಿನ ವಿಚಾರವೂ ಪರಿಗಣನೆಯಲ್ಲಿ ಇಲ್ಲ ಎಂಬುದು ತೋಮರ್ ಉತ್ತರವಾಗಿತ್ತು. ದೇಶದ ಶೇ.70ಕ್ಕೂ ಹೆಚ್ಚು ಉಪ್ಪಿನ ಉತ್ಪಾದನೆ ಗುಜರಾತಿನಲ್ಲಿ ಆಗುತ್ತದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಉಪ್ಪು ಮಾಡುವವರ ಬದುಕು ಮೂರಾಬಟ್ಟೆಯಾಗಿ ಹೋಗಿದೆ. ಅವರ ತಲೆಯ ಮೇಲೆ ನೆರಳುನಿರ್ಮಿಸುವ, ಕುಡಿಯಲು ಯೋಗ್ಯವಾದ ನೀರು ಒದಗಿಸುವ ಹಾಗೂ ಅವರ ಮಕ್ಕಳಿಗೆ ಓದು ಬರೆಹ ಕಲಿಸುವ ಯಾವುದೇ ಕೆಲಸ ಕಾರ್ಯ ಕಳೆದ ಹತ್ತು ವರ್ಷಗಳಲ್ಲಿ ಆಗಿಲ್ಲ. ನಮ್ಮ ಸರ್ಕಾರ ಅವರಿಗಾಗಿ ಏನುಮಾಡಲಿದೆ ಎಂಬುದನ್ನು ಹೇಳಿಯೇ ತೀರಬೇಕು ಎಂದು ಪಟ್ಟು ಹಿಡಿದರು ದೇವಜೀಭಾಯಿ. ಆದರೆ ಸಚಿವ ತೋಮರ್ ಪುನಃ ಹಳೆಯ ಉತ್ತರವನ್ನೇ ಹೇಳಿದರು. ಉಪ್ಪಿನ ತಯಾರಿಕೆಯಲ್ಲಿ ತೊಡಗಿದವರ ಎಲ್ಲ ಬಗೆಯ ಒಳಿತು-ಕೆಡುಕುಗಳನ್ನು ರಾಜ್ಯ ಸರ್ಕಾರಗಳೇ ನೋಡುತ್ತವೆ. ವೃತ್ತಿಸಂಬಂಧೀರೋಗ ರುಜಿನಗಳಿಗೆ ಚಿಕಿತ್ಸೆ, ಅಗತ್ಯ ಉಪಕರಣಗಳ ಸರಬರಾಜು, ಅವರ ತಲೆಯ ಮೇಲೊಂದು ಸೂರಿನ ನಿರ್ಮಾಣ, ಶುದ್ಧ ಪೇಯಜಲದ ವ್ಯವಸ್ಥೆ ಎಲ್ಲ ರಾಜ್ಯ ಸರ್ಕಾರವೇ ನೋಡಿಕೊಳ್ಳಬೇಕು. ಕೇಂದ್ರದಉಪ್ಪು ಆಯುಕ್ತರ ಕಚೇರಿ ಸಂಬಂಧಪಟ್ಟ ರಾಜ್ಯ ಸಕಾರಕ್ಕೆ ಸೂಕ್ತ ನೆರವು ನೀಡುತ್ತದೆ ಎಂದರು. ಉಪ್ಪಿನ ಕೂಲಿಗಳ ಕಷ್ಟದ ಈ ಪ್ರಶ್ನೋತ್ತರ ಅಲ್ಲಿಗೆ ಹೆಚ್ಚು ಕಡಿಮೆ ಕೊನೆಯಾಗಿತ್ತು. ಗುಜರಾತಿನ ರಣ ಎಂಬುದು ಉಪ್ಪು ಬಂಜರು ಸೀಮೆ. ಭಾರತ-ಪಾಕಿಸ್ತಾನದ ನಡುವಿನ ನಿಗೂಢ ಉಪ್ಪಿನ ಬೆಂಗಾಡು. ನೂರಾರು ಮೈಲುಗಳುದ್ದಕ್ಕೆ ಮರಗಿಡಗಳಿರಲಿ ಹುಲ್ಲಿನೆಸಳು ಕೂಡ ಕಾಣ ಸಿಗದು.ಭಯಾನಕವಾಗಿ ಬೆಳಗುವ ಕಣ್ಣು ಕುರುಡಾಗಿಸುವ ಕೊನೆಯಿಲ್ಲದ ಉಪ್ಪು ಬಿಳುಪು. ದಿಕ್ಕು ಕಾಣದ ದಾರಿಹೋಕರು ಈ ಅನಂತದಲ್ಲಿ ಕಳೆದು ಹೋಗುವ ಪ್ರಸಂಗಗಳೇ ಅಧಿಕ. ಕಳೆದು ಹೋದವರು ಮತ್ತೆತಿರುಗಿ ಬಂದ ಉದಾಹರಣೆಗಳಿಲ್ಲ. ಬಿಳಿ ದೆವ್ವಗಳಾಗಿ ಅಲೆದು ದಾರಿಹೋಕರ ನೆರವಿಗೆ ಬರುವ ದಂತಕತೆಗಳ ಸ್ಥಳೀಯರಲ್ಲಿ ಪ್ರಚಲಿತ. ಹೀಗಾಗಿ ರಾತ್ರಿ ವೇಳೆ ಆಕಾಶದ ಚುಕ್ಕಿಗಳನ್ನೇ ಅನುಸರಿಸಿಪಯಣಿಸುವುದು ಲೇಸು ಎಂಬ ಸ್ಥಿತಿ. ಏರಿಳಿತ ಸುಳಿಗಾಳಿ ಹಕ್ಕಿಪಕ್ಷಿ ಪೊದೆ ಪೊಟರೆಗಳಿಲ್ಲದ ಬೆಳ್ಳಂಬೆಳ್ಳನೆಯ ಶೂನ್ಯ. ಪೂರ್ವದಿಂದ ಪಶ್ಚಿಮಕ್ಕೆ ಇನ್ನೂರು ಮೈಲಿಗಳಾದರೆ ಉತ್ತರದಿಂದ ದಕ್ಷಿಣಕ್ಕೆ ನೂರುಮೈಲಿಗಳ ಉದ್ದಗಲಕ್ಕೆ ಕವಿದು ಮಲಗಿದ ಹುಚ್ಚು ಹಿಡಿಸುವ ಉಗ್ರ ಶ್ವೇತ ಉಷ್ಣ. ಬಣ್ಣಶೂನ್ಯ ನಿಶ್ಯಬ್ದ ಅನಂತ. ಶತಮಾನಗಳಿಂದ ಹೊಟ್ಟೆಪಾಡಿಗಾಗಿ ಉಪ್ಪು ತಯಾರಿಕೆಯನ್ನೇ ನೆಚ್ಚಿರುವ ಮಂದಿಗೆ ಗುಜರಾತಿನಲ್ಲಿ ಅಗಡಿಯಾಗಳು ಎನ್ನುತ್ತಾರೆ. ಪ್ರತಿ ವರ್ಷ ಹತ್ತಾರು ಸಾವಿರ ಅಗಡಿಯಾಗಳು ಗುಜರಾತಿನಸುರೇಂದ್ರನಗರ, ಭಾವನಗರ, ಪಾಟಣ, ರಾಜಕೋಟ ಹಾಗೂ ಹಾಗೂ ಕಛ್ ಜಿಲ್ಲೆಗಳಿಂದ ಕಛ್ನ ಸಣ್ಣ ರಣಕ್ಕೆ ವಲಸೆ ಹೋಗುತ್ತಾರೆ. ಈ ಬೆಂಗಾಡಿನಲ್ಲಿ ಅವರ ವಾಸ ಪೂರಾ ಎಂಟು ತಿಂಗಳು. ಬಿದಿರು ಮತ್ತುಮಣ್ಣಿನಿಂದ ಕಟ್ಟಿದ ಕುಟೀರಗಳು. ಅಲ್ಲಿ ಕೊಳವೆ ಬಾವಿ ತೋಡಿ ನೆಲದಾಳದಿಂದ ದಟ್ಟ ಲವಣಭರಿತ ಮಂದ ಜಲವನ್ನು ಹೊರತೆಗೆದು 25 ಗಜ ಉದ್ದಗಲದ ಮಡಿಗಳನ್ನು ಮಾಡಿ ಶೇಖರಿಸುತ್ತಾರೆ. ನೀರಿನಂಶಆವಿಯಾಗಿ ಉಪ್ಪು ಹರಳುಗಟ್ಟಲು ಬಡಿದು ರಾಚುವ ಉಗ್ರ ಸೂರ್ಯ ಪರಮಾತ್ಮನನ್ನು ನೆಚ್ಚುತ್ತಾರೆ. ಗುಜರಾತಿನ ಅಭಿವೃದ್ಧಿಯ ಅಂಕಿ ಅಂಶಗಳು ಏನನ್ನೇ ಹೇಳಿಕೊಳ್ಳಲಿ. ಈ ಅಗಡಿಯಾ ಮಂದಿ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಬಡತನವನ್ನೇ ಹೊದ್ದು ಮಲಗುತ್ತಿದ್ದಾರೆ. ತಾನು ಉತ್ಪಾದಿಸಿದಪ್ರತಿಯೊಂದು ಕೇಜಿ ಉಪ್ಪಿಗೆ ಅಗಡಿಯಾ ಕೈಗೆ ಸಿಗುವ ಬೆಲೆ ಇನ್ನೂ ಪೈಸೆಗಳ ಗಡಿ ದಾಟಿ ರೂಪಾಯಿಯನ್ನು ಮುಟ್ಟಿಲ್ಲ. ಕೋಳವೆ ಬಾವಿ ಮೋಟರಿಗೆ ಡೀಸೆಲ್, ದಿನಸಿಗಳನ್ನು ಕಡೆಗೆ ಕುಡಿಯುವ ನೀರನ್ನುಕೂಡ ಖರೀದಿಸಬೇಕು ಈ ಬಡಪಾಯಿ. ಕಛ್ನ ಸಣ್ಣ ರಣದಲ್ಲಿನ ಅಂತರ್ಜಲ ಸಮುದ್ರದ ನೀರಿಗಿಂತ ಐದರಿಂದ ಹತ್ತು ಪಟ್ಟು ಹೆಚ್ಚು ಉಪ್ಪುಪ್ಪು. ದಿನವೆಲ್ಲ ಉಪ್ಪು ನೀರಿನಲ್ಲಿ ಕೆಲಸ ಮಾಡುವ ಅಗಡಿಯಾಗಳ ಪಾಲಿಗೆ ಸಿಹಿ ನೀರಿನಲ್ಲಿ ಸ್ನಾನ ಮಾಡುವುದುಹತ್ತು ದಿನಗಳಿಗೆ ಒಮ್ಮೆ ದೊರೆಯುವ ವೈಭೋಗ. ಸಾಮಾಜಿಕ ಅಧ್ಯಯನಗಳ ಕೇಂದ್ರ ನಡೆಸಿದ ಅಧ್ಯಯನವೊಂದರ ಪ್ರಕಾರ ಶೇ. 75.76 ರಷ್ಟು ಮಂದಿ ಉಪ್ಪು ಕೂಲಿಗಳು ದರಿದ್ರರು. ಶೇ. 80 ರಷ್ಟು ಮಂದಿ ತಮ್ಮ ಹಳ್ಳಿಗಳಲ್ಲಿ ಭೂಹೀನರು. ಬದಲಿಜೀವನೋಪಾಯದ ದಾರಿಯೇ ಇಲ್ಲದವರು. ದೇಶದ ಶೇ. 70 ರಷ್ಟು ಉಪ್ಪು ಬೆಳೆದುಕೊಡುವ ಈ ಉಪ್ಪು ಕೂಲಿಗಳು ಖುದ್ದು ದರಿದ್ರರು. ಸಾಲ ಸೋಲಗಳ ಸುಳಿಯಲ್ಲಿ ನವೆಯುವವರು. ಹೊಟ್ಟೆ ತುಂಬ ಉಟ್ಟುಮೈತುಂಬ ತೊಡುವ ನೆಮ್ಮದಿಗೆ ಎರವಾದವರು. ಗಾಢ ಮಂದ ಉಪ್ಪಿನ ಮಡಿಗಳಲ್ಲಿ ಬೆಳಗಿನಿಂದ ಬೈಗಿನವರೆಗೆ ಬರಿಗಾಲು-ಬರಿಗೈಗಳಲ್ಲಿ ದುಡಿಯುವ ಇವರ ಕೈ ಕಾಲುಗಳು ಕಡ್ಡಿಯಂತೆ ಸಣ್ಣಗಾಗುತ್ತವೆ. ಸತ್ತ ನಂತರ ಈ ಕಾಲುಗಳು ಚಿತೆಯ ಬೆಂಕಿಯಲ್ಲಿಸುಟ್ಟರೂ ಸುಡುವುದಿಲ್ಲವಂತೆ. ಇಂತಹ ಕಾಲುಗಳನ್ನು ಬೇರ್ಪಡಿಸಿ ಉಪ್ಪಿನ ಜೊತೆ ಹೂಳುವ ಪ್ರಕರಣಗಳು ದಾಖಲಾಗಿವೆ. ಉಪ್ಪಿನ ಮಡಿಗಳಲ್ಲಿ ನೆನೆಯುವ ಬರಿಗಾಲುಗಳು ಉಪ್ಪನ್ನೇ ಹೀರಿಕೊಳ್ಳುತ್ತವೆ.ಉಪ್ಪಿನ ಚೂಪು ಹರಳುಗಳು ಉಂಟು ಚರ್ಮದಲ್ಲಿ ಮಾಡುವ ನೂರಾರು ತರಚುಗಳು ವ್ರಣಗಳಾಗುತ್ತವೆ. ನಂಜಾಗುತ್ತವೆ. ಇವರ ಆಯಸ್ಸು 50-60 ವರ್ಷ ದಾಟದು. ಹಗಲು ನಲವತ್ತು-ಐವತ್ತು ಡಿಗ್ರಿ ಬಿಸಿಲು ಇರುಳು ಐದು ಡಿಗ್ರಿ ಚಳಿ. ನಿತ್ಯ ಬಿರುಬಿಸಿಲು ಗಾಢ ಉಪ್ಪಿಗೆ ಸುಟ್ಟು ಕಪ್ಪಾಗುತ್ತದೆ ಇವರ ತೊಗಲು. ಅಕ್ಷರ ಭಾಗ್ಯದಿಂದ ಇವರ ಮಕ್ಕಳು ದೂರದೂರ. ಒಡೆದ ಕನ್ನಡಿಗಳ ಚೂರುಗಳನ್ನು ಬಿಸಿಲಿಗೆ ಒಡ್ಡಿ ಪ್ರತಿಫಲಿಸುವುದೇ ಅಲ್ಲಿನ ಸಂಪರ್ಕ ಸಂದೇಶ ರವಾನೆ ವ್ಯವಸ್ಥೆ. ಕಣ್ಣು ಕುಕ್ಕುವ ಬಿಸಿಲು ಮತ್ತು ಉಪ್ಪು ನೀರಿನಲ್ಲಿ ಈ ರಣಬಿಸಿಲಿನ ಪ್ರತಿಫಲನವನ್ನು ವರ್ಷವರ್ಷ ದಿಟ್ಟಿಸಿ ಸೋತ ಕಣ್ಣುಗಳು ಕಡೆಗೆ ನೋಟ ಕಳೆದುಕೊಂಡು ಕುರುಡಾಗುತ್ತವೆ. ಗುಜರಾತು ಸರ್ಕಾರ ತಾನು ನೀಡುತ್ತಿದೆ ಎಂದು ಹೇಳುವ ಕುಡಿವ ನೀರು, ಕಣ್ಣಿಗೆ ಕಪ್ಪು ಕನ್ನಡಕ, ಕೈಗವಸು ಮತ್ತು ಕಾಲಿಗೆ ರಬ್ಬರ್ ಬೂಟುಗಳನ್ನು ತಾವು ಕಂಡಿಲ್ಲ ಎನ್ನುತ್ತಾರೆ ಉಪ್ಪು ಕೂಲಿಗಳು. ಎಂಟೂತಿಂಗಳು ಎರಡೂ ಹೊತ್ತು ರೊಟ್ಟಿ ಮತ್ತು ಆಲೂ. ಮಕ್ಕಳಿಗೆ ಹಾಲು ಹಗಲುಗನಸು. ಪೀಳಿಗೆಗಳ ನಂತರ ಪೀಳಿಗೆಗಳ ಉಪ್ಪು ಕೂಲಿಗಳಿಗೆ ತಗುಲಿರುವ ಶಾಪ. ಉಪ್ಪು ಕೂಲಿಗಳಿಗೆ ಮರಣ ಬರುವುದು ಮೂರು ರೀತಿ. ಮೊದಲನೆಯದು ಗ್ಯಾಂಗ್ರೀನ್. ಎರಡನೆಯದು ಕ್ಷಯರೋಗ ಹಾಗೂಮೂರನೆಯದು ಕುರುಡುತನ. ಉಪ್ಪು ಕೂಲಿಗಳ ಮನೆ ಮನೆಗಳಲ್ಲಿ ಈ ಮರಣಗಳನ್ನು ಕಾಣಬಹುದು. ಹೊಪ್ಪಳೆಗಳು, ಉರಿಯುವ ಕಣ್ಣುಗಳು, ಉದುರುವ ಕೂದಲು, ತಲೆಶೂಲೆ, ಬಗೆ ಬಗೆಯಚರ್ಮರೋಗಗಳು, ಅಧಿಕ ರಕ್ತದೊತ್ತಡ, ಇರುಳುಗುರುಡು, ಸ್ತ್ರೀವ್ಯಾಧಿಗಳು, ಶಿಶುಮರಣ ಮುಂತಾದವು ಉಪ್ಪು ಕೂಲಿಗಳಿಗೆ ಅಭಿವೃದ್ಧಿಯಲ್ಲಿ ದೇಶಕ್ಕೇ ಮಾದರಿ ಎನ್ನಲಾಗುವ ಗುಜರಾತು ಪುಕ್ಕಟೆನೀಡಿರುವ ವರಗಳು. ಸಾಲ ನೀಡುವ ಸಾಹುಕಾರ-ದಲ್ಲಾಳಿ-ವರ್ತಕ-ಸಾಗಾಟಗಾರ-ಬಿಡಿ ವ್ಯಾಪಾರಸ್ಥರು ಉಪ್ಪು ಕೂಲಿಗಳನ್ನು ಕುಕ್ಕಿ ತಿನ್ನುವ ಹದ್ದುಗಳು. ಉಪ್ಪಿನ ಸುಗ್ಗಿ ಮುಗಿಸಿ ಹಳ್ಳಿಗೆ ಮರಳುವ ಉಪ್ಪುಕೂಲಿ ತನ್ನ ಕುಟುಂಬಕ್ಕೆಇನ್ನೇನಾದರೂ ತರುತ್ತಾನೋ ಇಲ್ಲವೋ, ಆದರೆ ಸಾಲವನ್ನಂತೂ ಖಚಿತವಾಗಿ ಹೊತ್ತು ಬರುತ್ತಾನೆ ಎಂಬ ಮಾತು ಗಾದೆಯೇ ಆಗಿ ಹೋಗಿದೆ. 2007ರ ಡಿಸೆಂಬರ್ ಚುನಾವಣೆಗಳಲ್ಲಿ ಅಂದಿನ ಮುಖ್ಯಮಂತ್ರಿ ಉಪ್ಪು ಕೂಲಿಗಳಿಗೆ ನೀಡಿದ್ದ ಆಶ್ವಾಸನೆಗಳು ಇನ್ನೂ ಮರೀಚಿಕೆ. ವಿಜಯಕರ್ನಾಟಕ, ಹೊಸದಿಲ್ಲಿ ಡಿ. ಉಮಾಪತಿ ಜರ್ನಲಿಸ್ಟ್, ವಿಜಯಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ ಗ್ರೂಪ್ಸ್.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
50,000 HR PROFESSIONALS ARE CONNECTED THROUGH OUR HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
Are you looking to enhance your knowledge of HR and labor laws? Join Nirathanka's HR and Employment Law Classes-Every Fortnight—a one-of-a-kind opportunity to learn from experienced professionals and industry experts.