ಮಾನವನಿಗೆ ದೇಹ ಅಥವಾ ಶರೀರದ ಸ್ಥಿತಿ ಉತ್ತಮವಾಗಿರಬೇಕು, ಜೊತೆಗೆ ಮನಸ್ಸೂ ಉತ್ತಮವಾಗಿರಬೇಕು. ದೇಹ ಮತ್ತು ಮನಸ್ಸು ಎರಡೂ ಉತ್ತಮವಾಗಿರಬೇಕಾದರೆ, ಆತನ ಇಲ್ಲವೆ ಆಕೆಯ ಆರೋಗ್ಯ ತುಂಬಾ ಚೆನ್ನಾಗಿರಬೇಕು. ರೋಗ ಬರದಂತೆ ತಡೆಯಬೇಕು. ಅಕಸ್ಮಾತ್ ರೋಗ ಬಂದರೆ ನಿವಾರಣೆ ಮಾಡಬೇಕು ಇದು ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಸೂತ್ರವಾಗಿದೆ.1 ಇದನ್ನೇ ಆರೋಗ್ಯವೇ ಭಾಗ್ಯ, ಆರೋಗ್ಯವೇ ಮಹಾಭಾಗ್ಯ, ಆರೋಗ್ಯವೇ ಸಂಪತ್ತು ಎಂಬುದಾಗಿ ಹೇಳಲಾಗುತ್ತಿದೆ. ಮಾನವನ ಬದುಕಿನಲ್ಲಿ ಆರೋಗ್ಯ ಭಾಗ್ಯಕ್ಕಿಂತ ಮೀಗಿಲಾದದ್ದು ಬೇರೊಂದಿಲ್ಲ. ಇದಕ್ಕೆ ಮಹತ್ತರ ಸ್ಥಾನವಿದೆ. ಕಣ್ಣಿನ ಮಹತ್ವ
ಮಾನವನ ಅಂಗಗಳಲ್ಲಿ ಅತಿ ಮುಖ್ಯವಾದ ಮತ್ತು ಅತ್ಯಂತ ಸೂಕ್ಷ್ಮವಾದ ಅಂಗ ಕಣ್ಣು. ದೃಷ್ಟಿಪಥ ಬಹಳ ಶ್ರೇಷ್ಠವಾದದ್ದು. ಕುಂಟನಾದರೂ ಸುಧಾರಿಸುತ್ತಾನೆ, ಕುರುಡನಾದರೆ ಸುಧಾರಿಸುವುದು ಬಹಳ ಕಷ್ಟ. ಕಣ್ಣಿಲ್ಲದಿದ್ದ ಮೇಲೆ ಬೇರಾವದಿದ್ದರೇನು? ಇಲ್ಲದಿದ್ದರೇನು? ಎನ್ನುವಂತೆ ಎಲ್ಲವೂ ಅಂಧಕಾರವೇ ಕಗ್ಗತ್ತಲೇ ಸಕಲ ಸಂಪತ್ತು, ಅತುಲೈಶ್ವರ್ಯಕ್ಕಿಂತ ಮನುಷ್ಯನಿಗೆ ಸ್ಪಷ್ಟ ಕಣ್ಣಿನ ದೃಷ್ಟಿ ಬಹಳ ಮುಖ್ಯ. ದೃಷ್ಟಿಹೀನತೆ ಒಂದು ಶಾಪ ಎನ್ನಬಹುದು. ಈ ರೀತಿಯ ಕುರುಡುತನವನ್ನು ಅಥವಾ ಅಂಧತ್ವವನ್ನು ಹೋಗಲಾಡಿಸುವುದು ಅತಿ ಮುಖ್ಯವಾದ ಅಷ್ಟೇ ಶ್ರೇಷ್ಠವಾದ ಕೆಲಸ. ದೃಷ್ಟಿಹೀನತೆಯ ನಿವಾರಣೆ ಅಷ್ಟೇ ಕಠಿಣ ಮತ್ತು ಸೂಕ್ಷ್ಮವಾದ ಕೆಲಸ. ಮೈಸೂರು ಸಂಸ್ಥಾನದಾದ್ಯಂತ ಬಹುಮಂದಿ ಅಂಧರಿದ್ದು, ಈ ಅಂಧತ್ವಕ್ಕೆ ತಮ್ಮ ಆರೋಗ್ಯದ ಬಗ್ಗೆ ಅರಿವಿಲ್ಲದಿರುವುದು. ತಮ್ಮ ಕಣ್ಣು ರೋಗವೇನು? ಎಂಬ ಅರಿವಿಲ್ಲದೇ ಕಣ್ಣಿದ್ದರೂ ಕುರುಡರಾಗಿದ್ದರು. ಅದರಲ್ಲೂ ಗ್ರಾಮೀಣ ಪ್ರದೇಶದ ಜನರು ತಿಳಿವಳಿಕೆಯಿಲ್ಲದೇ ತಮ್ಮ ಕಣ್ಣುಗಳನ್ನು ತಾವೇ ಕಳೆದುಕೊಳ್ಳುತ್ತಿದ್ದರು. ಕಣ್ಣು ನೋವು ಬಂದಾಗ ಕಳ್ಳಿ ಹಾಲು ಹಾಕುವುದು, ಬೆಲ್ಲದ ನೀರನ್ನು ಹಾಕುವುದು, ಅರಿಶಿನ ಬಟ್ಟೆಯನ್ನು ಕಣ್ಣಿಗೆ ಒತ್ತುವುದು, ದೇವರ ಹೆಸರಿನಲ್ಲಿ ಮೀಸಲು ಕಟ್ಟಿಸುವುದು, ಹರಕೆ ಹೊತ್ತುಕೊಳ್ಳುವುದು. ಹೀಗೆ ಹಲವಾರು ರೀತಿಯ ಚಿಕಿತ್ಸೆಗಳನ್ನು ಅವರೇ ಮಾಡಿಕೊಳ್ಳುತ್ತಿದ್ದರು. ಈ ಒರಟು ಚಿಕಿತ್ಸೆ ಫಲಕಾರಿಯಾಗದೆ ಹಲವರು ಕಣ್ಣುಗಳನ್ನು ಕಳೆದುಕೊಂಡಿದ್ದರು. ಕಣ್ಣಿಗೆ ಸಿಡುಬು ರೋಗ (Small Fox) ತಗುಲಿ ಕೆಲವರು ದೃಷ್ಟಿಹೀನರಾಗಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾದ ವಾಡಿಕೆ ಮತ್ತು ನಂಬಿಕೆಯೆಂದರೆ, ಕಣ್ಣು ರೋಗ ಬಂದಾಗ ಬೇವಿನ ಸೊಪ್ಪನ್ನು ರೋಗಿ ಬಳಿ ಹಾಕಿ ಏಳು ದಿನಗಳು ರೋಗಿಯನ್ನು ಬೆಳಕಿಗೆ ಬಿಡದೆ ಹಾಗೆಯೇ ಇರಿಸಿಕೊಳ್ಳುತ್ತಿದ್ದರು. ಈ ರೀತಿಯ ಉಪಚಾರದಿಂದ ಕಣ್ಣು ಗೋಜು- ಕಟ್ಟಿಕೊಂಡು (ಕಣ್ಣೆಂಜಲು) ದುರ್ವಾಸನೆ ಹುಟ್ಟಿ ಕಣ್ಣು ದೃಷ್ಟಿಯನ್ನು ಕಳೆದುಕೊಳ್ಳುವಂತಾಗುತ್ತಿತ್ತು. ಹೀಗೆ ಸಂಸ್ಥಾನದಲ್ಲಿ ಗ್ರಾಮೀಣ ಜನರಿಗೆ ಸರಿಯಾದ ತಿಳಿವಳಿಕೆ ಇಲ್ಲದೆ, ಆರೋಗ್ಯದ ಕಡೆ ಗಮನ ಕೊಡದೆ ರೋಗಕ್ಕೆ ತುತ್ತಾಗುತ್ತಿದ್ದರು. ಅದರಲ್ಲೂ ಮುಖ್ಯವಾಗಿ ಕಣ್ಣಿನ ರೋಗಕ್ಕೆ ತುತ್ತಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯುತ್ತಿರಲಿಲ್ಲ. ಮನ್ವಂತರ ಇಂತಹ ಅಂಧಕಾರದ ಸ್ಥಿತಿಯಲ್ಲಿ, ಅಂದಿನ ಮೈಸೂರು ಸಂಸ್ಥಾನದ ಆರೋಗ್ಯ ಮಂತ್ರಿಗಳಾದ ಶ್ರೀಯುತ ಟಿ. ಚನ್ನಯ್ಯನವರು ಸಂಸ್ಥಾನದಾದ್ಯಂತ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದರ ಬಗ್ಗೆ ಅರಿವನ್ನು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅದರಲ್ಲೂ ಬಹಳ ಮುಖ್ಯವಾಗಿ ಮನುಷ್ಯನ ಅಂಗಗಳಲ್ಲಿ ಅತಿ ಮುಖ್ಯವಾದ ಮತ್ತು ಸೂಕ್ಷ್ಮವಾದ ಅಂಗ ಕಣ್ಣು. ಈ ಅಮೂಲ್ಯವಾದ ನೇತ್ರಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಪ್ರಚಾರ ಕೈಗೊಂಡು, ಕುರುಡುತನವನ್ನು ಹೋಗಲಾಡಿಸಲು, ಸೂಕ್ತ ಚಿಕಿತ್ಸೆಯನ್ನು ಕೊಡಿಸಲು ಎಲ್ಲಾ ರೀತಿಯ ಏರ್ಪಾಡುಗಳನ್ನು ಮಾಡಿದರು.2 ಆಧುನಿಕ ಕರ್ನಾಟಕದ ಶಿಲ್ಪಿಗಳಲ್ಲಿ, ಪ್ರಮುಖ ನಾಯಕರಲ್ಲಿ, ಶ್ರೇಷ್ಠ ರಾಜಕಾರಣಿಗಳಲ್ಲಿ ಹಾಗೂ ನಾಡಿನ ಸಮಗ್ರ ಪ್ರಗತಿ ಮತ್ತು ಅಭಿವೃದ್ಧಿಗೆ ಶ್ರಮಿಸಿದ ಅಗ್ರಮಾನ್ಯರಲ್ಲಿ ಕೋಲಾರದ ಶ್ರೀಯುತ ಟಿ. ಚನ್ನಯ್ಯನವರು ಒಬ್ಬರಾಗಿದ್ದಾರೆ. ಅವರು ಪ್ರಾಮಾಣಿಕತೆಯನ್ನು ಮೆರೆದ ಉತ್ತಮರೆಂದು ಹೆಸರುವಾಸಿಯಾಗಿದ್ದಾರೆ. ಶ್ರೀಯುತರು ಮೈಸೂರು ಸಂಸ್ಥಾನದ ಕೆಂಗಲ್ ಹನುಮಂತಯ್ಯನವರ ಮಂತ್ರಿಮಂಡಲದಲ್ಲಿ ಸಚಿವರಾಗಿ (1952-1956) ಜನಾರೋಗ್ಯ, ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ, ಅರಣ್ಯ, ಬಂಧೀಖಾನೆ, ಅಬಕಾರಿ, ದೇಶಿವೈದ್ಯ, ಬೋರ್ಡು (ಮಂಡಳಿ)ಗಳು ಯೋಜನೆ ಮೊದಲಾದ ಖಾತೆಗಳನ್ನು ಹೊಂದಿದ್ದರು. ಕೈಗೊಂಡ ಸುಧಾರಣೆಗಳು ಟಿ.ಚನ್ನಯ್ಯನವರು ಸಂಸ್ಥಾನದ ಆರೋಗ್ಯ ಸಚಿವರಾಗಿ ನಾಡನ್ನು ಆರೋಗ್ಯವಂತ ನಾಡನ್ನಾಗಿ ಮಾಡಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದ್ದರು. ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ, ಭಾರತ ದೇಶದಲ್ಲೇ ಮೈಸೂರು ರಾಜ್ಯವು ಪ್ರಥಮ ಎನ್ನಬಹುದು. ಮೈಸೂರು ರಾಜ್ಯದಲ್ಲಿ 1951ರ ನಂತರ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರವು ಸುಧಾರಣೆಗೊಂಡಿತು. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದ ಸುಧಾರಣೆಗೆ ಎರಡು ಕಾರಣಗಳು ಮುಖ್ಯವಾಗಿದ್ದವು ಎನ್ನಬಹುದು. 1. ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಪಾಂಚವಾರ್ಷಿಕ ಯೋಜನೆ ಮತ್ತು. 2. 1952ರಲ್ಲಿ ಮೈಸೂರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ಚುನಾಯಿತ ಸರ್ಕಾರದ ದಕ್ಷತೆ.3 ಸಂಸ್ಥಾನದಲ್ಲಿದ್ದ ಎಲ್ಲಾ ಕಣ್ಣಿನ ಆಸ್ಪತ್ರೆಗಳನ್ನು ಉತ್ತಮ ದರ್ಜೆಗೆ ಏರಿಸಿದರು. ಕಣ್ಣು ರೋಗಿಗಳಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಂಡರು. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಟಿ. ಚನ್ನಯ್ಯನವರ ಧ್ಯೇಯವಾಗಿತ್ತು. ರಾಜ್ಯದಲ್ಲಿ ಅಂಧತ್ವವನ್ನು ಹೋಗಲಾಡಿಸಲು ಅನೇಕ ನೇತ್ರ ತಜ್ಞರ ಸಹಾಯವನ್ನು ಪಡೆಯಲು ಪ್ರಯತ್ನಿಸಿದರು. ಸಂಸ್ಥಾನದಲ್ಲಿ ಸೇವೆಯಲಿದ್ದಂತಹ ನೇತ್ರ ತಜ್ಞರ ಜೊತೆಗೆ ಹೊರಗಿನವರ ಸಹಾಯವನ್ನು ಪಡೆಯಲು ಮುಂದಾದರು. ಮನಸ್ಸಿದ್ದರೆ ಮಾರ್ಗ ಎಂಬಂತೆ ನೇತ್ರ ಸಮಸ್ಯೆಯ ಬಗ್ಗೆ ಪರಿಣತಿಯನ್ನು ಹೊಂದಿದ್ದ ನೇತ್ರ ತಜ್ಞರಾದ ಡಾ|| ಎಂ.ಸಿ. ಮೋದಿಯವರು ಸಿಕ್ಕಿದರಲ್ಲದೇ ನಾಡಿಗೆ ಇವರ ಸೇವೆ ದೊರೆಯುವಂತೆ ಮಾಡಿದರು. ಹೀಗಾಗಲೇ ಸಂಸ್ಥಾನದಲ್ಲೂ ಅನೇಕ ನೇತ್ರ ತಜ್ಞರು ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಮಾಡುತ್ತಿದ್ದರು. ಇವರ ಜೊತೆಗೆ ಭಾರತ ದೇಶದಲ್ಲೇ ಪ್ರಖ್ಯಾತಿ ಗಳಿಸಿದ್ದ ನೇತ್ರ ತಜ್ಞ ಡಾ|| ಎಂ.ಸಿ. ಮೋದಿಯವರು ಸೇರಿಕೊಂಡು ಅಂಧರ ಪಾಲಿಗೆ ಬೆಳಕಾದರು. ಇವರ ಸೇವೆಯಿಂದ ಸಂಸ್ಥಾನದಲ್ಲಿ ಲಕ್ಷಾಂತರ ಜನರು ಅಂಧಮುಕ್ತರಾದರು.4 ಹೀಗೆ ಚನ್ನಯ್ಯನವರು ಅಂಧತ್ವವನ್ನು ನಿವಾರಿಸಲು ನೇತ್ರ ತಜ್ಞರ ಸಹಾಯವನ್ನು ಕೋರಿ, ತಜ್ಞರಿಗೆ ಚಿಕಿತ್ಸೆಗಾಗಿ ಬೇಕಾಗಿದ್ದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದರು. ನೇತ್ರ ಚಿಕಿತ್ಸೆಯು ಕೇವಲ ನಗರ, ಪಟ್ಟಣಗಳ ಆಸ್ಪತ್ರೆಗಳಲ್ಲಿಯೇ ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ನೇತ್ರ ಚಿಕಿತ್ಸೆಗೆ ಸೂಕ್ತ ಏರ್ಪಾಡು ಮಾಡಿದರು. ಹಾಗೆಯೇ ಪ್ರಮುಖ ಸ್ಥಳಗಳಲ್ಲಿ ಸಾಮೂಹಿಕ ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಲು ತೀರ್ಮಾನಿಸಿ, ಶಿಬಿರಗಳನ್ನು ನಡೆಸಲು ಬೇಕಾಗುವ ಎಲ್ಲಾ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಜರೂರು ಕ್ರಮ ಜರುಗಿಸಿದರು; ಡಾ|| ಮೋದಿಯವರು ಬಂದ ಮೇಲೆ ಲಕ್ಷಾಂತರ ಜನ ತಮ್ಮ ದೃಷ್ಟಿ ಪಡೆದು ಅಂಧ ಮುಕ್ತರಾದರು. ನೇತ್ರ ಸಮಸ್ಯೆಗಳಿಂದ ನರಳುತ್ತಿದ್ದ ಅನೇಕರು ತಮ್ಮ ತಮ್ಮ ಕಣ್ಣು ರೋಗದ ಮುಂಜಾಗ್ರತೆ ಅರಿವನ್ನು ಪಡೆದರು. ಕಣ್ಣಿನ ರೋಗದ ಕಾರಣಗಳು ಕಣ್ಣಿನ ವಿಚಾರದಲ್ಲಿ ಗ್ಲೊಕೋಮಾ (Glaucoma) ಎಂಬ ಕಾಯಿಲೆ ಬರುತ್ತದೆ. ಈ ರೋಗವು ಕಣ್ಣಿನ ದೋಷಗಳಲ್ಲಿ ಬರುವ ಅತಿಸೂಕ್ಷ್ಮವಾದ, ಪರಿಣಾಮಕಾರಿಯಾದ ಮತ್ತು ಅಷ್ಟೇ ಅಪಾಯಕಾರಿಯಾದ ಕಾಯಿಲೆಯಾಗಿದೆ. ಇದು ಹುಟ್ಟಿನಿಂದಲೇ ಬರುತ್ತದೆ, ನಂತರವೂ ಅನೇಕ ಕಾರಣಗಳಿಂದ ಬರುತ್ತದೆ. ಉದಾಹರಣೆಗೆ, ಡಯಾಬಿಟಿಸ್, ಥೈರೋಟೆಕ್ಸಿಕೋಸಿಸ್, ಮೈಯೋಪಿಯಾ, ಹಾಗೂ ಅತಿಯಾದ ಮಾನಸಿಕ ಉದ್ವೇಗದಿಂದ ಬರುತ್ತದೆ. ಮುಖ್ಯವಾಗಿ ಅತಿಯಾದ ಉದ್ವೇಗದಿಂದ (Hypertension) ಬರುವ ಗ್ಲೊಕೋಮ (Glaucoma) ಕಣ್ಣಿನ ಕಾಯಿಲೆ ಮಿತಿ ಮೀರಿದ ಹಂತಕ್ಕೆ ತಲುಪಿ ಕಣ್ಣಿನ ದೃಷ್ಟಿ ಹೋಗಿ ಮತ್ತೆ ಪಡೆಯಲಾಗದ ಸ್ಥಿತಿಗೆ ಕೊಂಡೊಯ್ಯುತ್ತದೆ. ಗ್ಲೊಕೋಮ ಕಾಯಿಲೆ ಬಂದ ಪ್ರಾರಂಭದ ಹಂತದಲ್ಲಿಯೇ ಗುರ್ತಿಸಿ ಚಿಕಿತ್ಸೆ ಪಡೆದರೆ ಕಣ್ಣು ಉಳಿಯುತ್ತದೆ. ಇಲ್ಲದಿದ್ದರೆ ಸಂಪೂರ್ಣವಾಗಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಸಂಸ್ಥಾನದಲ್ಲಿಯೇ ಅಲ್ಲದೆ ಭಾರತ ದೇಶದಲ್ಲಿ ಶೇಕಡಾ 80ರಷ್ಟು ಮಂದಿ ಬಡವರಿದ್ದು, ಇವರೆಲ್ಲರೂ ಹಳ್ಳಿಗಳಲ್ಲಿಯೇ ವಾಸಮಾಡಿಕೊಂಡಿದ್ದು, ನೇತ್ರ ಕಾಯಿಲೆ ಬಂದರೆ ಸರಿಯಾದ ಚಿಕಿತ್ಸೆ ಪಡೆಯದೆ ನರಳುತ್ತಿದ್ದರು. ಈ ರೀತಿಯಾಗಿ ಸಂಸ್ಥಾನದಾದ್ಯಂತ ಇರುವ ನೇತ್ರ ಬಾಧೆ ಮತ್ತು ಅಂಧತ್ವವನ್ನು ಹೋಗಲಾಡಿಸಲು ಟಿ. ಚನ್ನಯ್ಯನವರು ಹೊಸ ಚಿಕಿತ್ಸಾ ವಿಧಾನಗಳನ್ನು ಜಾರಿಗೆ ತಂದರು.5 ಸಂಚಾರಿ ಕಣ್ಣಿನ ಆಸ್ಪತ್ರೆ ಸಂಸ್ಥಾನದಲ್ಲಿ ಸಂಚಾರಿ ಕಣ್ಣಾಸ್ಪತ್ರೆಗಳನ್ನು ಜಾರಿಗೆ ತಂದರು. ಇದರಿಂದ ಗ್ರಾಮಾಂತರ ಪ್ರದೇಶಗಳ ಜನರಿಗೆ ಸುಲಭವಾಗಿ ಚಿಕಿತ್ಸೆ ಪಡೆಯುವಂತಾಯಿತು. ಗ್ರಾಮೀಣ ಜನರು ಸ್ಥಳೀಯ ಮಟ್ಟದಲ್ಲಿ ರೋಗ ನಿವಾರಣೆಯನ್ನು ಮಾಡಿಕೊಳ್ಳುವಂತಾಯಿತು. ಬೆಂಗಳೂರಿನಲ್ಲಿ ಕಣ್ಣಿನ ಆಸ್ಪತ್ರೆಗಳು ಸ್ಥಾಪನೆಯಾಗಿ 1952ಕ್ಕೆ 40 ವರ್ಷಗಳಾಗಿದ್ದರೂ ನೇತ್ರ ಚಿಕಿತ್ಸೆ ಪಡೆದಿದ್ದವರ ಸಂಖ್ಯೆ ಕೇವಲ 1,60,303 ಮಾತ್ರ. ಆದರೆ ಟಿ. ಚನ್ನಯ್ಯನವರು ತಮ್ಮ ಅಧಿಕಾರ ಅವಧಿಯಲ್ಲಿ ಡಾ|| ಮೋದಿಯವರಿಂದ ಗ್ರಾಮೀಣ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ಮಾಡಿಸಿದ್ದರು. 1953 ಮಾರ್ಚ್ ತಿಂಗಳಿನಿಂದ 1954 ಮಾರ್ಚ್ ತಿಂಗಳವರೆಗೆ, ಅಂದರೆ ಒಂದು ವರ್ಷದಲ್ಲಿ ಸಂಚಾರಿ ಕಣ್ಣಿನ ಆಸ್ಪತ್ರೆ ನಡೆಸಿದ ಶಿಬಿರಗಳಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ 2,44,375 ಮಂದಿ. ಇವರಲ್ಲಿ ಅನೇಕರಿಗೆ ಶಸ್ತ್ರಚಿಕಿತ್ಸೆ ನಡೆಸಿ ಕಣ್ಣಿನ ಪೊರೆ ಮತ್ತು ಮೆಳ್ಳೆಗಣ್ಣುಗಳನ್ನು ಸರಿಪಡಿಸಲಾಯಿತು.6 ಬೆಂಗಳೂರಿನ ಪ್ರಮುಖ ಕಣ್ಣಿನ ಆಸ್ಪತ್ರೆಗಳಾದ ಮಿಂಟೊ ಆಸ್ಪತ್ರೆಯಲ್ಲಿ 1952ರಿಂದ 1954ರವರೆಗೆ 2,19,596 ಜನರಿಗೆ ನೇತ್ರ ಚಿಕಿತ್ಸೆ, ಬೌರಿಂಗ್ ಆಸ್ಪತ್ರೆಯಲ್ಲಿ 1,60,600 ಜನರಿಗೆ ಚಿಕಿತ್ಸೆ, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ 2,59,025 ಜನರಿಗೆ ನೇತ್ರ ಚಿಕಿತ್ಸೆಯನ್ನು ಮಾಡಿಸಿದ್ದರು. ಚಿಕಿತ್ಸೆ ನೀಡಿದ ತಜ್ಞರೆಂದರೆ ಡಾ|| ಎಂ.ಸಿ. ಮೋದಿ, ಡಾ|| ನಂಜಪ್ಪ, ಡಾ|| ಮೇಕ್ರಿ ಮುಂತಾದವರು. ಟಿ. ಚನ್ನಯ್ಯನವರು ಮಿಂಟೊ ಕಣ್ಣಾಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲು ಕ್ರಮ ಕೈಗೊಂಡರು. ಮೈಸೂರು ಸಂಸ್ಥಾನದಲ್ಲಿ ಸಂಪೂರ್ಣ ಅಂಧತ್ವ ನಿವಾರಣೆ, ಸಂಚಾರಿ ಕಣ್ಣಿನ ಆಸ್ಪತ್ರೆ ಮತ್ತು ಸಾಮೂಹಿಕ ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸುವುದರಿಂದ ಮಾತ್ರ ಸಾಧ್ಯ ಎಂದು ಅರಿತಿದ್ದ ಟಿ. ಚನ್ನಯ್ಯನವರು ಭಾರತ ದೇಶದಲ್ಲೇ ಪ್ರಥಮ ಬಾರಿಗೆ ಮೈಸೂರು ರಾಜ್ಯದಲ್ಲಿ ಸಂಚಾರಿ ಕಣ್ಣಿನ ಆಸ್ಪತ್ರೆಯನ್ನು ಜಾರಿಗೆ ತಂದು, ಸಾಮೂಹಿಕ ನೇತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿದರು. ಶಿಬಿರಗಳಿಗೆ ಬೇಕಾಗಿದ್ದ ಎಲ್ಲಾ ಅನುಕೂಲಗಳನ್ನು ಒದಗಿಸಿಕೊಟ್ಟರು. ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಎಲ್ಲೆಲ್ಲಿ ಅಂಧರ ಸಂಖ್ಯೆ ಹೆಚ್ಚಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಅಂತಹ ಕಡೆ ಸಾಮೂಹಿಕ ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿ ಲಕ್ಷಾಂತರ ಅಂಧರಿಗೆ ದೃಷ್ಟಿಯನ್ನು ಕೊಟ್ಟರು. ಡಾ|| ಮೋದಿಯವರು, ಮೈಸೂರು ಆಪ್ತೋಮಾಲಾಜಿಕಲ್ ಸಂಸ್ಥೆ, ರೆಡ್‍ಕ್ರಾಸ್ ಸಂಸ್ಥೆ ಮತ್ತು ಇತರೆ ಸೇವಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅನೇಕ ಶಿಬಿರಗಳನ್ನು ನಡೆಸಿದರು. ಡಾ|| ಮೋದಿಯವರಿಗೆ ಒಂದು ವಾಹನ, ಡ್ರೈವರ್, ಕ್ಲೀನರ್ ಮತ್ತು ಪೆಟ್ರೋಲ್ ಖರ್ಚಿಗೆಂದು 100ರಿಂದ 150 ರೂ.ಗಳ ವರೆಗೂ ಶಿಬಿರಗಳು ನಡೆಯುವ ಸಂದರ್ಭದಲ್ಲಿ ಕೊಡುತ್ತಿದ್ದರು. ಹಾಗೆಯೇ ಶಿಬಿರಗಳಿಗೆ 6 ಜನ ನರ್ಸುಗಳು, 6 ಜನ ಆಯಾಗಳು, 2 ಜನ ಮಿಡ್‍ವೈಫ್ (ಸೂಲಗಿತ್ತಿಯರು)ಗಳನ್ನು, ಸಲಕರಣೆಗಳು, 12 ಬೆಡ್ ಪಾಮ್‍ಗಳು, 12 ಯೂರೀನ್ ಬೌಲ್‍ಗಳು, 12 ಹಾಟ್‍ವಾಟರ್ ಬ್ಯಾಗ್‍ಗಳು ಇತರೆ ಅಗತ್ಯ ಉಪಕರಣಗಳನ್ನು ಒದಗಿಸಿದ್ದರು. ಕೆಲವೊಮ್ಮೆ ಶಿಬಿರಗಳಿಗೆ ರೋಗಿಗಳ ಸಂಖ್ಯೆ ಹೆಚ್ಚಾದಾಗ ಹೆಚ್ಚುವರಿ ಸಹಾಯಕ ಸಿಬ್ಬಂದಿಯನ್ನು ಒದಗಿಸುತ್ತಿದ್ದರು.7 ಸಾಮೂಹಿಕ ನೇತ್ರ ಚಿಕಿತ್ಸಾ ಶಿಬಿರಗಳು ಸಾಮೂಹಿಕ ನೇತ್ರ ಚಿಕಿತ್ಸಾ ಶಿಬಿರಗಳಲ್ಲಿ ಪ್ಲಾಸ್ಟಿಕ್ ಲೆನ್ಸ್ ಹಾಕುವುದು, ಆಪ್ಟಿಕಲ್ ಇಂಡೆಕ್ಟಮಿ, ನೀಡಲಿಂಗ್, ದುರ್ಮಾಂಸ, ಕಣ್ಣುಗಡ್ಡೆ ತೆಗೆಯುವುದು, ಮೆಳ್ಳೆಗಣ್ಣು, ಟ್ರಕಿಯಾಸೀಸ್, ಕರಿಗುಡ್ಡೆ ಮೇಲಿನ ಹೂ (ಪೊರೆ) ತೆಗೆಯುವುದು, ಕಸರು ತೆಗೆಯುವುದು ಹಾಗೂ ಇತರೆ ನೇತ್ರದೋಷಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಸಾಮೂಹಿಕ ನೇತ್ರ ಚಿಕಿತ್ಸಾ ಶಿಬಿರಗಳನ್ನು ಬೆಂಗಳೂರು, ದಾವಣಗೆರೆ, ಮಂಡ್ಯ, ಶಿವಮೊಗ್ಗ, ಕುಣಿಗಲ್, ತಿಪಟೂರು, ತುಮಕೂರು, ಕೋಲಾರ, ಕೆ.ಆರ್.ನಗರ, ಹಿರಿಯೂರು, ಆನಂದಪುರ, ಚಿಕ್ಕಮಗಳೂರು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶಿಬಿರಗಳನ್ನು ನಡೆಸಿ ಲಕ್ಷಾಂತರ ದೃಷ್ಟಿ ಹೀನರಿಗೆ ಚಿಕಿತ್ಸೆ ಕೊಡಿಸಿದ್ದರು. ಶಿಬಿರಗಳಲ್ಲಿ ಹೊರರಾಜ್ಯಗಳ ರೋಗಿಗಳು ಚಿಕಿತ್ಸೆಯನ್ನು ಪಡೆದರು. ಶಿಬಿರಗಳಲ್ಲಿ ಬಹುತೇಕ ಮಂದಿ ಕಣ್ಣಿನ ಪೊರೆ, ಮೆಳ್ಳೆಗಣ್ಣುಗಳಿಗೆ ಚಿಕಿತ್ಸೆ ಪಡೆದು ಕಣ್ಣುಗಳನ್ನು ಸರಿಪಡಿಸಿಕೊಂಡು ಅಂಧ ಮುಕ್ತರಾದರು.8 1956 ಮಾರ್ಚ್ ತಿಂಗಳಲ್ಲಿ ಮೈಸೂರಿನ ವಸ್ತು ಪ್ರದರ್ಶನ ಕಟ್ಟಡದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿದ್ದರು. ಈ ಶಿಬಿರದಲ್ಲಿ 9,925 ಜನರಿಗೆ ಚಿಕಿತ್ಸೆ ನೀಡಿ ರೋಗ ಮುಕ್ತರನ್ನಾಗಿ ಮಾಡಿದರು. ಈ ಶಿಬಿರಕ್ಕೆ ಶ್ರೀಮಾನ್ ಮಹಾರಾಜರು ಮತ್ತು ಟಿ. ಚನ್ನಯ್ಯನವರು ಭೇಟಿ ಕೊಟ್ಟು, ಡಾ|| ಮೋದಿಯವರು ಶಸ್ತ್ರಚಿಕಿತ್ಸೆ ಮಾಡುವುದನ್ನು ನೇರವಾಗಿ ವೀಕ್ಷಿಸಿದ್ದರು.9 ಒಟ್ಟಿನಲ್ಲಿ ಟಿ. ಚನ್ನಯ್ಯನವರು ತಮ್ಮ ಅಧಿಕಾರ ಅವಧಿಯಲ್ಲಿ ಮೈಸೂರು ಸಂಸ್ಥಾನದಲ್ಲಿ ಅಂಧತ್ವವನ್ನು ಹೋಗಲಾಡಿಸಲು ವಿವಿಧ ರೀತಿಯ ವಿಧಾನಗಳನ್ನು ಅಳವಡಿಸಿ ವಿಶೇಷ ಯೋಜನೆಗಳನ್ನು ರೂಪಿಸಿ ಲಕ್ಷಾಂತರ ಜನರಿಗೆ ನೇತ್ರ ಚಿಕಿತ್ಸೆ ಒದಗಿಸಿ, ಅಂಧತ್ವ ಮುಕ್ತರನ್ನಾಗಿಸಿ ಅವರ ಬದುಕಿಗೆ ಬೆಳಕಾದರು. ಈ ರೀತಿಯ ಸಾಮೂಹಿಕ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದು, ಭಾರತ ದೇಶದಲ್ಲೇ ಪ್ರಥಮವಾಗಿತ್ತೆಂದರೆ ತಪ್ಪಾಗಲಾರದು. ಶ್ರೀಯುತ ಟಿ. ಚನ್ನಯ್ಯನವರ ಈ ಮಾನವೀಯ ಅನುಕಂಪದ ಸಾಧನೆಯನ್ನು ನಾಡಿನ ಜನತೆ ಎಂದಿಗೂ ಮರೆಯುವಂತಿಲ್ಲ. ಬಹುಶಃ ಈ ರೀತಿಯ ನೇತ್ರ ಚಿಕಿತ್ಸಾ ಕಾರ್ಯಚಟುವಟಿಕೆಗಳು ಹಿಂದೆ ನಡೆದಿರಲಿಲ್ಲ ಎನಿಸುತ್ತದೆ. ನಂತರದ ಇತ್ತೀಚಿನ ದಿನಗಳಲ್ಲಿ ವಿಜ್ಞಾನ ತಂತ್ರಜ್ಞಾನದ ಉನ್ನತಿಯಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದ್ದರು ಅದು ಆಶ್ಚರ್ಯವೆನಿಸುವುದಿಲ್ಲ. ಅಡಿ ಟಿಪ್ಪಣಿಗಳು 1. ಕೆ. ಬೈರಪ್ಪ, ಸಮಗ್ರ ಗ್ರಾಮೀಣ ಸಮಾಜ, ಎಸ್.ಬಿ.ಎಸ್. ಪಬ್ಲಿಷರ್ಸ್, ಬೆಂಗಳೂರು-2002 ಪು.389. 2. The Mysore Legislative Assembly Debates, 25-03-1953, Page No. 990-992 3. ಕೆ. ಬೈರಪ್ಪ, ಸಮಗ್ರ ಗ್ರಾಮೀಣ ಸಮಾಜ, ಎಸ್.ಬಿ.ಎಸ್. ಪಬ್ಲಿಷರ್ಸ್, ಬೆಂಗಳೂರು-2002 ಪು.381 4. The Mysore Legislative Council Debates,07-04-1953, Page No. 882, 894 5. ಕ್ಷೇತ್ರ ಕಾರ್ಯ, ಡಾ|| ಕಮಲ, ಎಂ.ಬಿ.ಬಿ.ಎಸ್. ಸಹನ ಕ್ಲಿನಿಕ್, ಮುಳಬಾಗಲು 6. The Mysore Legislative Assembly Debates, Page No. 858, 859 7. The Mysore Legislative Assembly Debates, Page No. 396 8. The Mysore Legislative Assembly Debates, Page No. 115-117 9. ಸಾಧ್ವಿ ಪತ್ರಿಕೆ, 12-3-1956, ಜಿ. ಮುನಿವೆಂಕಟಪ್ಪ ಸಹ ಪ್ರಾಧ್ಯಾಪಕರು, ಎಫ್.ಐ.ಪಿ. ಟೀಚರ್ ಫೆಲೋ, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ, ಬೆಂಗಳೂರು.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|