ಮಾನವನ ವರ್ತನೆ ವಿಚಿತ್ರ. ಅದು ಹಿತವಾಗಿರುವಷ್ಟೇ ಅಹಿತವಾಗಿಯೂ ಇರುತ್ತದೆ. ಮನುಷ್ಯರಲ್ಲಿ ಒಳ್ಳೆಯದರ ಜತೆಗೆ ಕೆಟ್ಟ ಗುಣಗಳೂ ಇರುತ್ತವೆ. ನಾವು ಇತರರನ್ನು ಪ್ರೀತಿಸುತ್ತೇವೆ, ಪೋಷಿಸುತ್ತೇವೆ, ಕಾಪಾಡುತ್ತೇವೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೇವೆ. ಅಷ್ಟೇ ಸರಾಗವಾಗಿ ಇತರರ ಮೇಲೆ ಕೋಪಿಸಿಕೊಳ್ಳುತ್ತೇವೆ, ಆಕ್ರಮಣ ಮಾಡುತ್ತೇವೆ; ಹೋರಾಡುತ್ತೇವೆ, ಹೊಡೆಯುತ್ತೇವೆ, ಗಾಯಗೊಳಿಸುತ್ತೇವೆ, ನೋವುಂಟು ಮಾಡುತ್ತೇವೆ. ಹಿಂಸಿಸುತ್ತೇವೆ, ಬೈಯುತ್ತೇವೆ, ಮರ್ಯಾದೆ ಕಳೆಯುತ್ತೇವೆ, ಅವಮಾನಗೊಳಿಸುತ್ತೇವೆ. ಅಷ್ಟೇಕೆ, ಯುದ್ಧ ಮಾಡುತ್ತೇವೆ, ಜನರನ್ನು ಕೊಲ್ಲುತ್ತೇವೆ, ಅಪಾರವಾದ ಕಷ್ಟ ನಷ್ಟಗಳಿಗೆ ಕಾರಣಕರ್ತರಾಗುತ್ತೇವೆ. ನಿಮಗೆ ಆಶ್ಚರ್ಯವಾಗಬಹುದು, ಕಳೆದ 5,600 ವರ್ಷಗಳಲ್ಲಿ ಸುಮಾರು 14,600 ಯುದ್ಧಗಳು ನಡೆದಿವೆಯೆಂದು ಹೇಳಲಾಗಿದೆ. ಕೋಟ್ಯಾಂತರ ಜನರ ಕೊಲೆಯಾಗಿದೆ. ಯಾಕೆ ಹೀಗೆ? ವಿಶ್ವದಲ್ಲಿ ಯಾವ ಪ್ರಾಣಿಯೂ ಅನವಶ್ಯಕವಾಗಿ ಕೊಲ್ಲುವುದಿಲ್ಲ, ಮಾನವರನ್ನು ಬಿಟ್ಟು. ಪ್ರಾಣಿಗಳು ಕೊಲ್ಲುವುದು ಊಟಕ್ಕಾಗಿ, ಮಾನವರು ಕೊಲ್ಲುವುದು ಆಟಕ್ಕಾಗಿ; ಕೆಲವರು ವಿನೋದಕ್ಕಾಗಿ ಬೇಟೆಯಾಡುತ್ತಾರೆ; ಪ್ರಾಣಿಗಳನ್ನು ಕೊಲ್ಲುತ್ತಾರೆ. ಇಂದು ವಿಶ್ವದ ಹಲವೆಡೆ ನಡೆಯುತ್ತಿರುವ ನರಮೇಧಗಳನ್ನು ನೋಡಿದರೆ ಮಾನವ ಎಲ್ಲಾ ಪ್ರಾಣಿಗಳಿಗಿಂತಲೂ ಕಟುಕನೆನಿಸುತ್ತದೆ. ಎಲ್ಲೆಡೆ ನಡೆಯುತ್ತಿರುವ ಭಯೋತ್ಪಾದಕರ ಮತ್ತು ಆತ್ಮಹತ್ಯೆ ದಳದವರ ಘೋರ ಕೃತ್ಯಗಳನ್ನು ಗಮನಿಸಿದರೆ ಮಾನವನಿಗಿಂತ ಹಿಂಸ್ರ ಪ್ರಾಣಿ ಇನ್ನೊಂದಿದೆಯೆ ಎನಿಸುತ್ತದೆ. ಮಾನವರಲ್ಲಿ ಹಿಂಸಾಪ್ರವೃತ್ತಿ ಹುಟ್ಟಿನಿಂದಲೇ ಬಂದಿದೆಯೇನೋ ಅನಿಸುತ್ತದೆ. ನಮ್ಮ ಸುತ್ತ ಆಕ್ರಮಣಕಾರಿ ಅಥವಾ ಹಿಂಸಾಚಾರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಹೇರಳವಾಗಿ ಜರುಗುತ್ತಿವೆ. ಹೊಡೆಯುವುದು, ಬಡಿಯುವುದು, ಕೊಲೆ, ಸುಲಿಗೆ, ಕಲಹ, ದೊಂಬಿ, ಅತ್ಯಾಚಾರ, ಅನಾಚಾರ, ಇವುಗಳ ಸುದ್ಧಿ ದಿನನಿತ್ಯ ಕೇಳಿಬರುತ್ತಿದೆ; ಮಾಧ್ಯಮಗಳಲ್ಲಿ ಪ್ರತಿದಿನ ಪ್ರಕಟಗೊಳ್ಳುತ್ತಿದೆ. ಇದು ಆರೋಗ್ಯಕರವಾದ ಬೆಳವಣಿಗೆಯೇನಲ್ಲ. ಹಿಂಸಾಚಾರ ಒಂದು ಸಾಮಾಜಿಕ ರೋಗ. ಇಂಥ ಹಾನಿಕಾರಕ ಪ್ರವೃತ್ತಿಯನ್ನು ತಡೆಯಬೇಕು. ತಡೆಯಬೇಕಾದರೆ ಅದರ ಪೂರ್ಣ ಪರಿಚಯ ನಮಗಿರಬೇಕು. ಅದಕ್ಕಿರುವ ಕಾರಣಗಳು ತಿಳಿದಿರಬೇಕು. ಹಿಂಸಾಚಾರವನ್ನು ಕುರಿತಾದ ವೈಜ್ಞಾನಿಕ ಅಧ್ಯಯನಗಳು, ಸಂಶೋಧನೆಗಳು ನಡೆಯಬೇಕು. ಮನೋವಿಜ್ಞಾನದ ಅಧ್ಯಯನ ವಸ್ತು ವರ್ತನೆ; ಪ್ರಮುಖವಾಗಿ ಮಾನವನ ವರ್ತನೆ. ಹಿಂಸಾಚಾರವೂ ವರ್ತನೆಯ ಒಂದು ಪ್ರಕಾರ; ಅದೊಂದು ಅಹಿತಕರ ವರ್ತನೆ, ವಿನಾಶಕಾರಿ ವರ್ತನೆ, ಅಷ್ಟೆ. ಆದುದರಿಂದ, ಮನೋವಿಜ್ಞಾನಿಗಳು ಹೊಡೆದಾಟ, ಹೋರಾಟ, ಹಿಂಸಾಚಾರ ಅಥವಾ ಆಕ್ರಮಣಕಾರಿ ಪ್ರವೃತ್ತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತಿದ್ದಾರೆ. ಅದರ ಮೇಲೆ ಸಾಕಾದಷ್ಟು ಬೆಳಕು ಚೆಲ್ಲಿದ್ದಾರೆ. ಆಕ್ರಮಣಶೀಲತೆಯನ್ನು ಕುರಿತು ಆಧುನಿಕ ಮನೋವಿಜ್ಞಾನ ಏನು ಹೇಳುತ್ತದೆ ಎಂಬುದರ ಒಂದು ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಆಕ್ರಮಣವೆಂದರೇನು? ಇಲ್ಲಿ ಆಕ್ರಮಣ ಎನ್ನುವ ಮಾತನ್ನು ಇಂಗ್ಲೀಷ್ ಭಾಷೆಯ ಅಗ್ರೆಷನ್ (aggression) ಎಂಬ ಪದಕ್ಕೆ ಸಂವಾದಿಯಾಗಿ ಉಪಯೋಗಿಸಿದೆ. ಆಕ್ರಮಣ ಎಂದರೇನು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಅದನ್ನು ನಿಖರವಾಗಿ ನಿರೂಪಿಸುವುದು ಅಷ್ಟು ಸುಲಭವಲ್ಲ; ಅದನ್ನು ವಿವರಿಸಬಹುದಷ್ಟೆ. ಯಾವುದು ಆಕ್ರಮಣ, ಯಾವುದು ಅಲ್ಲ, ಎನ್ನುವುದನ್ನು ಎಲ್ಲಾ ಸನ್ನಿವೇಶಗಳಲ್ಲೂ ಕರಾರುವಾಕ್ಕಾಗಿ ಹೇಳುವುದು ಕಷ್ಟ. ಉದಾಹರಣೆಗೆ, ಈ ಕೆಳಗಿನವುಗಳಲ್ಲಿ ಯಾವುದು ಆಕ್ರಮಣ, ಯಾವುದು ಅಲ್ಲ ಹೇಳಿ ನೋಡೋಣ.
ಪ್ರಾಣಿಗಳಲ್ಲಿ ಆಕ್ರಮಣ ಪ್ರವೃತ್ತಿ ಹೋರಾಟ ಪ್ರವೃತ್ತಿ ಮಾನವರಲ್ಲಿ ಮಾತ್ರ ಕಂಡುಬರುವ ವರ್ತನೆಯಲ್ಲ; ಅದು ಪ್ರಾಣಿಗಳಲ್ಲೂ ಇದೆ. ಜೀವ ವಿಜ್ಞಾನಿಗಳು ಪ್ರಾಣಿಗಳಲ್ಲಿ ಕಂಡುಬರುವ ಆಕ್ರಮಣ ಪ್ರವೃತ್ತಿಯನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಪ್ರಾಣಿಗಳಲ್ಲಿ ಪ್ರಚಲಿತವಿರುವ ಆಕ್ರಮಣ ಪ್ರವೃತ್ತಿಯನ್ನು ಸಮಯ-ಸಂದರ್ಭಗಳನ್ನನುಸರಿಸಿ ಹಲವು ಬಗೆಯಲ್ಲಿ ವಿಂಗಡಿಸಬಹುದು. ಅವುಗಳಲ್ಲಿ ಮುಖ್ಯವಾದವು: ಮರಿಗಳಿಗೆ ಅಪಾಯ ಕಂಡುಬಂದಾಗ ಅವನ್ನು ಕಾಪಾಡಿಕೊಳ್ಳಲು, ತಾಯಿ ತೋರುವ ಮಾತೃಸಹಜವಾದ ಆಕ್ರಮಣ (maternal aggression); ತಾನು ಕೊಂದು ತಿನ್ನಬೇಕಿರುವ ಪ್ರಾಣಿ ಎದುರಾದಾಗ ಪ್ರದರ್ಶಿಸುವ ಪರಭಕ್ಷ ಆಕ್ರಮಣ (predatory aggression); ಇತರ ಪ್ರಾಣಿಗಳ ಮೇಲೆ ತನ್ನ ಅಧಿಕಾರವನ್ನು ತೋರುವಾಗಿನ ಅಧಿಕಾರಸ್ಥ ಆಕ್ರಮಣ (dominance aggression); ತಾನು ವಾಸಿಸುವ ಪ್ರದೇಶಕ್ಕೆ ಇತರರು ಬರದಂತೆ ನೋಡಿಕೊಳ್ಳುವಾಗಿನ ಕ್ಷೇತ್ರ ರಕ್ಷಣಾ ಆಕ್ರಮಣ (territorial aggression); ತನ್ನದೇ ಜಾತಿಯ ಇತರ ಪ್ರಾಣಿಗಳೊಡನೆ ತೋರುವ ಸ್ಪರ್ಧಾತ್ಮಕ ಆಕ್ರಮಣ (intermale or interfemale aggression); ಭಯಪ್ರೇರಿತ ಆಕ್ರಮಣ (fear-induced aggression); ಲೈಂಗಿಕ ಕ್ರಿಯೆಗೆ ಅಡ್ಡಬಂದವರ ಮೇಲೆ ತೋರುವ ಆಕ್ರಮಣ (sexual aggression). ಒಟ್ಟಾರೆಯಾಗಿ ಪ್ರಾಣಿಗಳು ತೋರುವ ಆಕ್ರಮಣದಲ್ಲಿ ಒಂದು ವಿಶಿಷ್ಟತೆ ಇದೆ. ಅವು ಆಹಾರಕ್ಕಾಗಿ ಕೊಲ್ಲುತ್ತವೆ, ಆಟಕ್ಕಲ್ಲ. ತಮ್ಮ ಉಳಿವಿಗಾಗಿ ಅವು ಆಕ್ರಮಣ ಮಾಡುತ್ತವೆ; ಅದು ಅವಶ್ಯಕ. ಸಾಮಾನ್ಯವಾಗಿ, ವಿನಾಕಾರಣ ಯಾವ ಪ್ರಾಣಿಯೂ ಇನ್ನೊಂದು ಪ್ರಾಣಿಯನ್ನೂ ಕೊಲ್ಲುವುದಿಲ್ಲ. ಆ ಕೆಲಸ ಮಾಡುವವರು ಮಾನವರು ಮಾತ್ರ. ಆಕ್ರಮಣಕ್ಕೆ ಕಾರಣಗಳು ಆಕ್ರಮಣಕ್ಕೆ ಕಾರಣವೇನೆಂದು ಕೇಳಿದರೆ ನಾವೆಲ್ಲಾ ಹೇಳುವುದು ಕೋಪ. ಆದರೆ ಕೋಪವೇಕೆ ಬರುತ್ತದೆ? ನಮ್ಮನ್ನು ಯಾರಾದರು ಅವಮಾನಿಸಿದಾಗ, ಕೆರಳಿಸಿದಾಗ, ರೇಗಿಸಿದಾಗ, ನಾವು ಮಾಡುವ ಕೆಲಸಗಳಿಗೆ ಏನಾದರು ಅಡ್ಡಬಂದು ಅಡಚಣೆಯಾದಾಗ, ನಮ್ಮ ಮೇಲೆ ಆಕ್ರಮಣ ನಡೆದಾಗ, ನಮ್ಮ ವಸ್ತುಗಳನ್ನು ಯಾರಾದರೂ ಅಪಹರಿಸುವಾಗ, ನಮಗೆ ಅಪಾಯವಾಗಬಹುದು ಎನಿಸಿದಾಗ, ಹೀಗೆ ಬಹಳಷ್ಟು ಸನ್ನಿವೇಶಗಳಲ್ಲಿ ಜನರು ಉದ್ರಿಕ್ತರಾಗಿ ಆಕ್ರಮಣ ಮಾಡುತ್ತಾರೆ. ಹೀಗೆ ಆಕ್ರಮಣಕ್ಕೆ ನೂರಾರು ಕಾರಣಗಳನ್ನು ಹೇಳಬಹುದು. ಆದರೆ ಇವೆಲ್ಲ ಎಷ್ಟರಮಟ್ಟಿಗೆ ನಿಜ ಎಂಬುದನ್ನು ನಿರ್ಧರಿಸುವುದು ವಿಜ್ಞಾನಿಗಳ ಕೆಲಸ. ಆಕ್ರಮಣ ಪ್ರವೃತ್ತಿಯನ್ನು ಕುರಿತು, ಅದಕ್ಕಿರಬಹುದಾದ ಕಾರಣಗಳನ್ನು ಕುರಿತು. ಇಂದು ವೈಜ್ಞಾನಿಕ ಪ್ರಯೋಗಗಳು, ಅಧ್ಯಯನಗಳು ಹೇರಳವಾಗಿ ನಡೆಯುತ್ತಿವೆ. ಲೆಬರಾಟರಿಯಲ್ಲಿ ಅಗ್ರೆಷನ್ ಮಷೀನ್ಗಳನ್ನು ಉಪಯೋಗಿಸಿಕೊಂಡು ಆಕ್ರಮಣ ಏಕೆ, ಹೇಗೆ, ಹುಟ್ಟುತ್ತದೆ ಎಂಬುದನ್ನು ಪ್ರಯೋಗಗಳ ಮೂಲಕ ನಿರ್ಧರಿಸಲಾಗುತ್ತಿದೆ. ಶಾಲೆಗಳಲ್ಲಿ, ಆಫೀಸುಗಳಲ್ಲಿ ಕೈಗಾರಿಕಾ ಸಂಸ್ಥೆಗಳಲ್ಲಿ. ಕ್ಷೇತ್ರಕಾರ್ಯಗಳ (field work) ಮೂಲಕ ಆಕ್ರಮಣಶೀಲತೆಯ ಅಧ್ಯಯನ ನಡೆಯುತ್ತಿವೆ. ಇದೆಲ್ಲದರ ಪರಿಣಾಮವಾಗಿ ಆಕ್ರಮಣವನ್ನು ಕುರಿತಾದ ಹಲವಾರು ಸಿದ್ಧಾಂತಗಳು ಪ್ರತಿಪಾದಿಸಲ್ಪಟ್ಟವೆ. ಸಾವಿರಾರು ಗ್ರಂಥಗಳು ಪ್ರಕಟಗೊಂಡಿವೆ. ಅವೆಲ್ಲವನ್ನು ಒಂದು ಲೇಖನದಲ್ಲಿ ಹೇಳುವುದು ಕಷ್ಟ. ಆಯ್ದಂತೆ, ಮುಖ್ಯವಾದುವನ್ನು ಸಂಕ್ಷಿಪ್ತವಾಗಿ ಹೇಳಲು ಇಲ್ಲಿ ಪ್ರಯತ್ನಿಸಲಾಗಿದೆ. ಆಕ್ರಮಣಶೀಲತೆ ಒಂದು ಹುಟ್ಟುಗುಣವೆ? ಆಕ್ರಮಣಕಾರಿ ವರ್ತನೆ ಹುಟ್ಟಿನಿಂದಲೇ ಬರುತ್ತದೆ ಎಂಬುದು ಬಹು ಹಳೆಯ ಸಿದ್ಧಾಂತ. ಸಿಗ್ಮಂಡ್ ಫ್ರಾಯ್ಡ್ ಅದೊಂದು ಸಹಜ ಪ್ರವೃತ್ತಿ (instinct) ಎಂದು ಹೇಳಿದ್ದಾನೆ. ಅಂದರೆ ಅದೊಂದು ಹುಟ್ಟುಗುಣ. ಅವನ ಪ್ರಕಾರ, ಮಾನವರಲ್ಲಿ ಎರಡು ಸಹಜ ಪ್ರವೃತ್ತಿಗಳಿವೆ: ಒಂದನೆಯದು ಬದುಕುವ ಅಭಿಲಾಷೆ, ಬದುಕುವ ಪ್ರವೃತ್ತಿ (ಜೀವನ ಪ್ರವೃತ್ತಿ-Eros); ಎರಡನೆಯದು ಸಾಯುವ ಪ್ರವೃತ್ತಿ (ಮರಣ ಪ್ರವೃತ್ತಿ-Thanatos). ಮೊದಲನೆಯದು ಸೃಷ್ಟ್ಯಾತ್ಮಕ ಕ್ರಿಯೆಗಳಿಗೆ ಪ್ರೇರಣೆಯನ್ನೊದಗಿಸುತ್ತದೆ; ಎರಡನೆಯದು ವಿನಾಶಕಾರಕ ಕ್ರಿಯೆಗಳಿಗೆ ಪ್ರೇರಣೆ. ಮಾನವನ ಪ್ರತಿಯೊಂದು ವರ್ತನೆಯಲ್ಲಿಯೂ ಇವೆರಡು ಪ್ರವೃತ್ತಿಗಳು ಸದಾ ಕಾರ್ಯನಿರತವಾಗಿತ್ತವೆ. ತಾನು ಬದುಕಿ, ತನ್ನ ಸಂತತಿಯನ್ನು ಬೆಳೆಸುವ ಕ್ರಿಯೆಗಳ ಹಿನ್ನೆಲೆಯಲ್ಲಿರುವುದು ಜೀವನ ಪ್ರವೃತ್ತಿ. ಇದು ಪ್ರೀತಿ, ಪ್ರೇಮ, ಲೈಂಗಿಕ ಬಯಕೆಯ ಮೂಲಕ ಜೀವಸೃಷ್ಟಿ ಕಾರ್ಯದಲ್ಲಿ ತೊಡಗಿಸುತ್ತದೆ. ಹುಟ್ಟಿನಷ್ಟೆ ನಿಶ್ಚಿತ ಸಾವು. ಮಣ್ಣಿನಿಂದ ಬಂದ ಮಾನವ ಮರಳಿ ಮಣ್ಣಿಗೆ ಹಿಂತಿರುಗಲೇಬೇಕು. ಅದು ಪ್ರಕೃತಿ ನಿಯಮ. ನಮ್ಮ ಜೀವಿತಾವಧಿಯ ಪ್ರತಿ ಕ್ಷಣವೂ ನಾವು ಸಾವಿನೆಡೆಗೆ ಚಲಿಸುತ್ತಿರುತ್ತೇವೆ. ಜೀವನದಲ್ಲಿ ಏನೇ ನಡೆಯಲಿ ಅಥವಾ ನಡೆಯದಿರಲಿ; ಒಂದಂತು ಖಂಡಿತ ನಡೆಯುತ್ತದೆ; ಅದು ಸಾವು. ಜಾತಸ್ಯ ಮರಣಂ ದ್ರುವಂ; ಸಾವು ಖಂಡಿತ. ಹುಟ್ಟಿದವರೆಲ್ಲ ಸಾಯಲೇ ಬೇಕು. ಅಂದಮೇಲೆ ಜೀವನದ ಗುರಿ ಸಾವೇ ಇರಬಹುದೇನೋ ಎಂದಿದ್ದಾನೆ ಫ್ರಾಯ್ಡ್. ಮರಣ ವಿನಾಶಕಾರಿ ಕ್ರಿಯೆ. ಪ್ರತಿ ವ್ಯಕ್ತಿಯಲ್ಲೂ ಇರುವ ವಿನಾಶಕಾರಕ ಪ್ರವೃತ್ತಿ, ತನ್ನನ್ನು ತಾನೆ ನಾಶಮಾಡುವುದಕ್ಕೆ ಬದಲಾಗಿ, ಹೊರಗಡೆಗೆ ಹರಿದು (ಪ್ರಕ್ಷೇಪಗೊಂಡು) ಪರಿಸರದಲ್ಲಿರುವ ಇತರ ವಸ್ತು, ವಿಷಯ, ವ್ಯಕ್ತಿಗಳನ್ನು ನಾಶ ಮಾಡುವ ಆಕ್ರಮಣಕಾರಿ ವರ್ತನೆಯಾಗಿ, ಹಿಂಸಾಚಾರ ಕ್ರಿಯೆಯಾಗಿ ಪರಿವರ್ತಿತವಾಗುತ್ತದೆ ಎನ್ನುತ್ತಾನೆ ಫ್ರಾಯ್ಡ್. ಏನನ್ನಾದರೂ ಸೃಷ್ಟಿಸಬೇಕಾದರೆ ಇನ್ನೇನನ್ನೋ ನಾಶಮಾಡಲೇಬೇಕು. ಜೀವನ ಪರ್ಯಂತ ನಾವು ಬದುಕುವುದಕ್ಕಾಗಿ ಏನನ್ನಾದರೂ ನಾಶ ಮಾಡುತ್ತಲೇ ಇರುತ್ತೇವೆ. ಅದು ಪ್ರಕೃತಿ ನಿಯಮ. ಒಂದು ಮನೆ ಕಟ್ಟಬೇಕಾದರೆ ಎಷ್ಟೊಂದು ವಸ್ತುಗಳು ನಾಶವಾಗುತ್ತವೆ ಯೋಚಿಸಿ. ಈ ಕ್ರಿಯೆಗಳ ಹಿನ್ನೆಲೆಯಲ್ಲಿ ಮರಣಪ್ರವೃತ್ತಿ ಇದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಫ್ರಾಯ್ಡ್ ಪ್ರಕಾರ, ಮಾನವರ ಬಹುತೇಕ ವರ್ತನೆಗಳ ಹಿನ್ನೆಲೆಯಲ್ಲಿರುವ ಪ್ರಮುಖ ಘಟಕಗಳು ಎರಡು. ಒಂದು ಲೈಂಗಿಕತೆ, ಎರಡನೆಯದು ಆಕ್ರಮಣಶೀಲತೆ. ಉದಾಹರಣೆಗೆ, ನಾವು ನೋಡುವ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಲೈಂಗಿಕತೆ (sex) ಮತ್ತು ಹೊಡೆದಾಟ (aggression) ಇದ್ದೇ ಇರುತ್ತದೆ (ಅವಿಲ್ಲದಿದ್ದರೆ, ಆ ಚಿತ್ರ ಹೆಚ್ಚಿಗೆ ದಿನ ನಡೆಯಲಾರದು). ಅಂತಹ ಚಲನಚಿತ್ರಗಳನ್ನು ನೋಡಿ ನಾವು ಸಂತೋಷ ಪಡುತ್ತೇವೆ. ನಾವು ಮಾಡಬೇಕೆನಿಸಿದುದನ್ನು, ಆದರೆ ಮಾಡಲಾಗದುದನ್ನು, ಅಲ್ಲಿ ನಾಯಕ/ನಾಯಕಿಯರು ಮಾಡುತ್ತಾರೆ. ಅವರು ಮಾಡುವುದನ್ನು ನೋಡುವುದರ ಮೂಲಕ, ನಾವು ನಮ್ಮ ಬಯಕೆಗಳನ್ನು ಪರೋಕ್ಷವಾಗಿ ಪೂರೈಸಿಕೊಂಡು ತೃಪ್ತಿ ಪಡುತ್ತೇವೆ. ನಮ್ಮಲ್ಲಿ ಸುಪ್ತವಾಗಿರುವ ಜೀವನ್ಮರಣ ಪ್ರವೃತ್ತಿಗಳು ಹೀಗೆ ಪರೋಕ್ಷವಾಗಿ ತೃಪ್ತಿ ಹೊಂದುತ್ತವೆ. ಅಂದ ಮೇಲೆ, ಸೃಷ್ಟಿಸುವ ಮತ್ತು ಹೋರಾಡುವ ಗುಣಗಳು ನಮಗೆ ಹುಟ್ಟಿನಿಂದಲೇ ಬಂದಿರುವ ಸಹಜ ಪ್ರವೃತ್ತಿಗಳು ಎನ್ನುವ ಫ್ರಾಯ್ಡ್ ನ ಮಾತಿನಲ್ಲಿ ಸ್ವಲ್ಪ ಸತ್ಯವಿರಲೇಬೇಕು. ಪ್ರಖ್ಯಾತ ಜೀವವಿಜ್ಞಾನಿ, ನೊಬೆಲ್ ಪಾರಿತೋಷಕ ವಿಜೇತ, ಕೊನ್ರಾಡ್ ಲೊರೆನ್ಜ್ (Konrad Lorenz) ಹೇಳುವಂತೆ, ಹೋರಾಡುವ ಪ್ರವೃತ್ತಿ ವಿಕಾಸದ ಹಾದಿಯಲ್ಲಿ ನಾವು ಪ್ರಾಣಿಗಳೊಡನೆ ಹಂಚಿಕೊಂಡು ಬಂದಿರುವ ಒಂದು ಸಹಜ ಗುಣ. ಪ್ರಾಣಿಗಳು ಆಹಾರಕ್ಕಾಗಿ, ಲೈಂಗಿಕ ಸಂಗಾತಿಗಳನ್ನು ಪಡೆಯುವುದಕ್ಕಾಗಿ, ತಮ್ಮ ವಾಸಸ್ಥಳದ ಗಡಿಯನ್ನು ಕಾಪಾಡಿಕೊಳ್ಳಲು, ಹೊಡೆದಾಡಲೇಬೇಕು. ಬೇಟೆಯಾಡಿ ಮಾಂಸ ತಿಂದು ಬದುಕುವ ಪ್ರಾಣಿಗಳು ಬೇರೆ ಪ್ರಾಣಿಗಳನ್ನು ಕೊಲ್ಲಲೇಬೇಕು. ಅಂಥ ಪ್ರಾಣಿಗಳ ಉಳಿವಿಗೆ ಆಕ್ರಮಣ ಕ್ರಿಯೆ ಅವಶ್ಯಕ. ಅದೇ ಪ್ರವೃತ್ತಿ ಪ್ರಾಣಿಗಳಿಂದ ನಮಗೆ ಬಳುವಳಿಯಾಗಿ ಬಂದಿದೆ ಎಂಬುದು ಲೊರೆನ್ಜ್ನ ವಾದ. ಹೀಗಾಗಿ, ಹೊಡೆದಾಡುವುದು, ಗಾಯಗೊಳಿಸುವುದು, ಯುದ್ಧ ಮಾಡುವುದು, ಮುಂತಾದ ವಿನಾಶಕಾರಿ ಪ್ರವೃತ್ತಿಗಳು ನಮಗೆ ಪ್ರಕೃತಿದತ್ತವಾಗಿ ಬಂದಿದೆ ಎನ್ನುತ್ತಾರೆ ಲೊರೆನ್ಜ್ ಮತ್ತು ಇತರ ವಿಕಾಸವಾದಿಗಳು. ಲೊರೆನ್ಜ್ ಪ್ರತಿಪಾದಿಸಿರುವ ಕೆಲವು ಅಭಿಪ್ರಾಯಗಳು ಬಹಳ ವಿವಾದಾತ್ಮಕವಾಗಿವೆ. ಅವನ ಪ್ರಕಾರ, ಮಾನವರಲ್ಲಿ ಆಕ್ರಮಣಕಾರಕ ಅಭಿಲಾಷೆ ಕಾಲಕಳೆದಂತೆ ಒಳಗೊಳಗೆ ಅಭಿವೃದ್ಧಿಯಾಗುತ್ತಿದ್ದು, ಒಂದು ಸಾರಿ ತೀವ್ರವಾದ ಹಿಂಸೆಯ ರೂಪದಲ್ಲಿ ಹೊರಹೊಮ್ಮುತ್ತದೆ. ಅದು ಹೊರಹೊಮ್ಮಲೇಬೇಕು. ವೈಜ್ಞಾನಿಕವಾಗಿ ಇದನ್ನು ಕೆಥಾರ್ಸಿಸ್ (catharsis) ಎಂದು ಕರೆಯಲಾಗಿದೆ. ಅದುಮಿಟ್ಟ ಆಕ್ರಮಣ ಪ್ರವೃತ್ತಿಗೆ ಹೊರಗೆಡವಲು ಅವಕಾಶ ದೊರಕದಿದ್ದರೆ, ಅದನ್ನು ಪ್ರದರ್ಶಿಸುವ ಬಯಕೆ ಹೆಚ್ಚಾಗುತ್ತಿರುತ್ತದೆ; ಹೊರಬಿದ್ದಾಗ ಅದರಿಂದ ಅಪಾಯವಾಗಬಹುದು. ಆದುದರಿಂದ, ಅದನ್ನು ಅಪಾಯಕರವಲ್ಲದ ರೀತಿಯಲ್ಲಿ ಹೊರಹಾಕುವುದಕ್ಕೆ ಸಮಾಜ ಅವಕಾಶ ಮಾಡಿಕೊಡಬೇಕು ಎನ್ನುತ್ತಾನೆ ಲೊರೆನ್ಜ್. ಅದಕ್ಕಾಗಿ ಆಗಾಗ ಕುಸ್ತಿ (wrestling), ಮುಷ್ಟಿ ಕಾಳಗ (boxing) ಕತ್ತಿವರಸೆ (fencing), ಬಂದೂಕು ಹೋರಾಟ (gun fight), ಗೂಳಿ ಕಾಳಗ (bull fight), (ತಮಿಳುನಾಡಿನ ಜೆಲ್ಲಿಕಟ್ಟು) ಕಾಡುಪ್ರಾಣಿಗಳ ಬೇಟೆ (hunting), ಮುಂತಾದ ತಕ್ಕಮಟ್ಟಿನ ಅಪಾಯಕಾರಿ ಆಟಗಳಲ್ಲಿ ತೊಡಗಿಸಿಕೊಂಡು, ಒಳಗೆ ಅದುಮಿಟ್ಟ ಹಿಂಸಾಚಾರದ ಅಭಿವ್ಯಕ್ತಿ ಆಗಬೇಕೆಂಬುದು ಲೊರೆನ್ಜ್ ಅಭಿಪ್ರಾಯ. ತಾರ್ಕಿಕವಾಗಿ ಕಂಡರೂ, ಇದನ್ನು ವೈಜ್ಞಾನಿಕವಾಗಿ ಸಾಬೀತು ಮಾಡುವುದು ಸಾಧ್ಯವಾಗಿಲ್ಲ. ಅದುಮಿಟ್ಟ ಆಕ್ರಮಣಕಾರಕ ಶಕ್ತಿ ಹೊರಬರಲು ಕಾದಿರುತ್ತದೆ ಎಂಬುದಕ್ಕೆ ಆಧಾರಗಳಿಲ್ಲ. ಆದರೂ ಲೊರೆನ್ಜ್ ಮಾತಿನಲ್ಲಿ ಎಲ್ಲೋ ಒಂದು ಕಡೆ ಸತ್ಯವಿರಬಹುದೆನಿಸುತ್ತದೆ. ಸಮಾಜ-ಜೀವವಿಜ್ಞಾನಿಗಳು (sociobiologists) ಇದೇ ವಾದವನ್ನು ಎತ್ತಿ ಹಿಡಿಯುತ್ತಾರೆ. ಶಕ್ತಿಶಾಲಿಯಾದ ಪ್ರಾಣಿಗಳು ಇತರ ಪ್ರಾಣಿಗಳನ್ನು ಹೊಡೆದೋಡಿಸಿ, ಹೆಣ್ಣುಗಳೊಡನೆ ಕೂಡುವುದರಿಂದ ಉತ್ತಮ ತಳಿಯನ್ನು ಬೆಳೆಸುವುದು ಸಾಧ್ಯವಾಗುತ್ತದೆ. ಸ್ವಾಭಾವಿಕ ಆಯ್ಕೆಯ ಮೂಲಕ ಸಮರ್ಥ ತಳಿಯ ಉಳಿಯುವಿಕೆ (survival of the fittest) ಸಾಧ್ಯವಾಗುತ್ತದೆ. ಇದು ವಿಕಾಸ ಸಿದ್ಧಾಂತದ ಮೂಲ ನಿಯಮ. ತಾನು ಬದುಕಿ, ತನ್ನ ತಳಿಯನ್ನು ಬೆಳಸಬೇಕಾದರೆ ಹೋರಾಟ ಮಾಡಲೇಬೇಕು. ಯಾವ ವರ್ತನೆ ಜನಾಂಗದ ಅಭಿವೃದ್ಧಿಗೆ ಸಹಾಯಕವಾಗುವುದೋ ಅದು ಉಳಿಯುತ್ತದೆ (natural selection). ಹೋರಾಟ ಅದಕ್ಕೆ ಸಹಾಯಕವಾಗುವುದರಿಂದ ಅದು ಉಳಿದುಬಂದಿದೆ. ಆದುದರಿಂದ ಪ್ರತಿಯೊಂದು ಜೀವರಾಶಿಯಲ್ಲೂ ಆಕ್ರಮಣ ಪ್ರವೃತ್ತಿ ಹಾಸುಹೊಕ್ಕಾಗಿ ಉಳಿದುಬಂದಿದೆ ಎಂಬುದು ಸೋಸಿಯೊ ಬೈಯಾಲಜಿಷ್ಟರ ಅಭಿಪ್ರಾಯ. ಆದರೆ ಇಂಥ ವಾದವನ್ನು ಸಂಪೂರ್ಣವಾಗಿ ಒಪ್ಪುವುದು ಕಷ್ಟ. ಹೋರಾಟ ಜಗತ್ತಿನ ಎಲ್ಲೆಡೆ ನಡೆಯುತ್ತಿರುವುದರಿಂದ ಇದನ್ನು ಹುಟ್ಟುಗುಣವೆಂದು ಪರಿಗಣಿಸಲಾಗುತ್ತಿದೆ. ಇದಕ್ಕೆ ಸಾಕಾದಷ್ಟು ಪುರಾವೆಗಳಿಲ್ಲ. ಆಕ್ರಮಣ ಪ್ರವೃತ್ತಿ ಎಲ್ಲಾ ಸಮುದಾಯಗಳಲ್ಲೂ ಒಂದೇ ಸಮನಾಗಿ ನಡೆಯುತ್ತಿಲ್ಲ. ಉದಾಹರಣೆಗೆ, ನಾರ್ವೆ ದೇಶದಲ್ಲಿ ಕೊಲೆ ಬಹಳ ಅಪರೂಪ; ಒಂದು ಲಕ್ಷದಲ್ಲಿ ಒಬ್ಬ ಕೊಲೆಯಾಗಬಹುದು (0.9). ಜಪಾನಿನಲ್ಲಿಅದಕಿಂತ ಕೊಂಚ ಹೆಚ್ಚು (1.2). ಬ್ರಿಟನ್ನಲ್ಲಿ 1.4. ಅಮೆರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ಆ ಸಂಖ್ಯೆ 9.9. ಅದರೆ ನ್ಯೂಗಿನಿಯಲ್ಲಿ ಕೊಲೆಗಳ ಪ್ರಮಾಣ ಲಕ್ಷದಲ್ಲಿ 683 ಕಿಂತ ಅಧಿಕ. ಅಂದಮೇಲೆ ಆಕ್ರಮಣಶೀಲತೆಯನ್ನು ಹುಟ್ಟುಗುಣವೆಂದು ಹೇಳುವುದು ಹೇಗೆ? ಅದಕ್ಕೆ ಸಾಮಾಜಿಕ, ಸಾಂಸ್ಕೃತಿಕ. ಅಥವಾ ಇನ್ನು ಬೇರೆ ಕಾರಣಗಳಿರಬೇಕೆಂಬುದು ಸಮಾಜ ಮನೋವಿಜ್ಞಾನಿಗಳ ವಾದ. ಒಟ್ಟಾರೆಯಾಗಿ ಹೇಳುವುದಾದರೆ, ಇನ್ಸ್ಟಿಂಕ್ಟ್ ವಾದವನ್ನು ಪೂರ್ಣವಾಗಿ ಒಪ್ಪುವುದು ಕಷ್ಟ. ಅದಕ್ಕೆ ಸಾಕಾದಷ್ಟು ಪುರಾವೆಗಳಿಲ್ಲ. ಮಾನವರ ಮಟ್ಟದಲ್ಲಿ ಹಿಂಸಾಚಾರ ಬಹಳ ಸಂಕೀರ್ಣವಾದ ಪ್ರಕ್ರಿಯೆ. ಅದನ್ನು ಹುಟ್ಟುಗುಣವೆಂದು ರೂಪಿಸುವುದು ಕಷ್ಟ. ನಮ್ಮ ಆಕ್ರಮಣಶೀಲತೆಯ ಕೊಂಚ ಭಾಗ ಹುಟ್ಟಿನಿಂದ ಬಂದಿರಬಹುದು. ಆದರೆ, ಅದರ ಬಹ್ವಂಶ ಸ್ವಯಾರ್ಜಿತ, ಪರಿಸರದಲ್ಲಿ ಇತರರನ್ನು ನೋಡಿ ಕಲಿತದ್ದು; ಪರಿಸರ ನಮಗೆ ಕಲಿಸಿಕೊಟ್ಟದ್ದು. ಹೀಗೆ ಪ್ರತಿಪಾದಿಸುವ ಸಮಾಜ ಮನೋವಿಜ್ಞಾನಿಗಳು ಹಿಂಸಾಚಾರಕ್ಕೆ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಿದ್ದಾರೆ. ಆಧುನಿಕ ವಿಜ್ಞಾನಿಗಳು ಆಕ್ರಮಣಶೀಲತೆಯನ್ನು ಯಾವುದೇ ಒಂದು ಕಾರಣದಿಂದ ವಿವರಿಸಬಹುದೆಂಬ ಮಾತನ್ನು ಒಪ್ಪುವುದಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ ಎಂಬುದು ಅವರ ವಾದ. ಅವು ದೈಹಿಕ (ಜೈವಿಕ), ವೈಯಕ್ತಿಕ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ, ಕಾರಣಗಳಾಗಿರಬಹುದು. ಹಿಂಸಾಚಾರವನ್ನು ಸಮುದಾಯವೇ ನಮಗೆ ಕಲಿಸುತ್ತಿರಬಹುದು. ಮಾಧ್ಯಮಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಹಿಂಸಾಚಾರವನ್ನು ನೋಡಿ, ಅದನ್ನು ನಾವು ಅನುಕರಿಸುತ್ತಿರಬಹುದು. ಜತೆಗೆ ವ್ಯಕ್ತಿಯ ಮಾನಸಿಕ ಸ್ಥಿತಿ (emotion; ಉದ್ವೇಗ) ಕಾರಣವಾಗಿರಬಹುದು. ಆಲ್ಕೊಹಾಲ್ ಮುಂತಾದ ಮಾದಕ ದ್ರವ್ಯಗಳ ಸೇವನೆ ಹಿಂಸಾಚಾರವನ್ನು ಪ್ರಚೋದಿಸಬಹುದು. ಅಶ್ಲೀಲ ಚಿತ್ರಗಳನ್ನು ನೋಡಿದಾಗ ಹಿಂಸೆ ಹೊರಹೊಮ್ಮಬಹುದು, ಸುತ್ತಮುತ್ತ ಇರುವ ಆಯುಧಗಳು ಅದಕ್ಕೆ ಕಾರಣವಾಗಬಹುದು. ಇವನ್ನು ಕೊಂಚ ವಿವರವಾಗಿ ನೋಡೋಣ. ಜೈವಿಕ ಕಾರಣಗಳು ಹಿಂಸಾಚಾರ ಸಂಪೂರ್ಣವಾಗಿ ಹುಟ್ಟುಗುಣವಾಗಿಲ್ಲದಿರಬಹುದು. ಹಾಗೆಂದು ಅದರಲ್ಲಿ ಜೈವಿಕ ಹಾಗು ಅನುವಂಶಿಕತೆಯ (heredity) ಪಾತ್ರ ಇಲ್ಲವೇ ಇಲ್ಲ ಎಂದು ಹೇಳಲಾಗುವುದಿಲ್ಲ. ಉದಾಹರಣೆಗೆ, ತದ್ರೂಪಿ ಯಮಳರಲ್ಲಿ (identical twins) ಒಬ್ಬರು ಆಕ್ರಮಣಶೀಲರಾಗಿದ್ದರೆ ಇನ್ನೊಬ್ಬರು ಕೂಡ ಹಾಗೆಯೇ ಆಗಿರುವುದು ಕಂಡುಬಂದಿದೆ. ಅವರು ಬೇರೆ ಬೇರೆ ವಿಭಿನ್ನ ಪರಿಸರಗಳಲ್ಲಿ ಬೆಳೆದಿದ್ದರೂ ಕೂಡ, ಆಕ್ರಮಣಶೀಲತೆ ಅವರಿಬ್ಬರಲ್ಲೂ ಒಂದೇ ಮಟ್ಟದ್ದಾಗಿರುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ಹಾಗೆಯೇ ಆಯ್ದ ಆಕ್ರಮಣಶೀಲ ಹೆಣ್ಣುಗಂಡುಗಳ ಕೂಢಿಕೆಯಿಂದ ಆಕ್ರಮಣಕಾರಿ ತಳಿಯೊಂದನ್ನು ಬೆಳೆಸಬಹುದೆಂಬುದು ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ತಿಳಿದುಬಂದಿದೆ. ಜೈವಿಕ (bioogical) ಕಾರಣಗಳಲ್ಲಿ ಮಿದುಳಿನ ಪಾತ್ರವೂ ಮುಖ್ಯವಾದುದು. ಬೆಕ್ಕಿನ ಹೈಪೊತೆಲಮಸ್ (hypothalamus) ಪ್ರಚೋದನೆಗೊಳಗಾದಾಗ ಆ ಪ್ರಾಣಿ ಆಕ್ರಮಣಕಾರಿ ವರ್ತನೆಯಲ್ಲಿ ತೊಡಗಿದುದು ಕಂಡುಬಂದಿದೆ. ಕೆಲವು ಅಪಾಯಕಾರಿ ಅಪರಾಧಿಗಳಲ್ಲಿ ಅವರ ಅಮಿಗ್ಡಲವನ್ನು (amygdala) ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದಾಗ, ಅವರಲ್ಲಿ ಆಕ್ರಮಣಕಾರಿ ವರ್ತನೆ ಕಡಮೆಯಾದುದು ಕಂಡುಬಂದಿದೆ. ಮಾನವರ ಮುಮ್ಮಿದುಳು (frontal lobe) ಆವೇಶವನ್ನು ನಿಯಂತ್ರಿಸುವ ಅಂಗ. ಅದರ ಕಾರ್ಯಕ್ಷಮತೆಯಲ್ಲಿ ನ್ಯೂನತೆ ಉಂಟಾದಾಗ ಆಕ್ರಮಣಶೀಲತೆ ಹೆಚ್ಚಾಗಬಹುದು ಎಂದು ಹೇಳುತ್ತಿದ್ದಾರೆ. ಇತ್ತೀಚಿನ ಸಂಶೋಧನೆಗಳು ಹಿಂಸಾಚಾರದಲ್ಲಿ ಸೆರೊಟೊನಿನ್ (serotonin) ಎಂಬ ನರವಾಹಕದ (neurotransmitter) ಪ್ರಭಾವವಿರುವುದನ್ನು ಗುರುತಿಸಿವೆ. ಈ ರಸಾಯನಿಕ ಮಿದುಳಿನಲ್ಲಿ ಕಾರ್ಯನಿರತವಾಗಿದ್ದು ನಮ್ಮಲ್ಲಿನ ಆವೇಗಯುಕ್ತ (emotional) ವರ್ತನೆಗಳನ್ನು ತಡೆಹಿಡಿಯವಂತೆ ಕಂಡುಬಂದಿದೆ. ಸೆರೊಟೊನಿನ್ ಅಂಶ ಕಡಮೆ ಇರುವವರಲ್ಲಿ ಆಕ್ರಮಣ ಪ್ರವೃತ್ತಿ ಹೆಚ್ಚಾಗಿರುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಸ್ತ್ರೀಯರಿಗಿಂತ ಪುರುಷರಲ್ಲಿ ಆಕ್ರಮಣ ಪ್ರವೃತ್ತಿ ಹೆಚ್ಚು. ಇದಕ್ಕೆ ಕಾರಣ ಪುರುಷರ ಲೈಂಗಿಕ ಹಾರ್ಮೋನ್ ಟೆಸ್ಟೊಸ್ಟೆರೋನ್ (testosterone) ಎಂದು ನಂಬಲಾಗಿದೆ. ಆದುದರಿಂದ ಆಕ್ರಮಣ ಪ್ರವೃತ್ತಿಯಲ್ಲಿ ಟೆಸ್ಟೊಸ್ಟೆರೋನ್ ಪ್ರಭಾವ ಕೂಡ ಇರುವ ಸಾಧ್ಯತೆಯನ್ನು ಅಲ್ಲಗಳಿಯಲಿಕ್ಕಾಗುವುದಿಲ್ಲ. ಆದರೆ ಇವೆಲ್ಲವನ್ನೂ ಸಂಪೂರ್ಣವಾಗಿ ನಂಬುವಂತಿಲ್ಲ. ಉದಾಹರಣೆಗೆ, ಟೆಸ್ಟೋಸ್ಟೆರೋನ್ ಹೆಚ್ಚಿಗೆ ಇರುವವರೆಲ್ಲಾ ಆಕ್ರಮಣಕಾರರಾಗಿರುವುದಿಲ್ಲ. ಆಕ್ರಮಣ ಮಾಡುವವರೆಲ್ಲರಲ್ಲೂ ಟೆಸ್ಟೋಸ್ಟೆರೋನ್ ಹೆಚ್ಚಾಗಿರುವಂತೆ ಕಂಡುಬಂದಿಲ್ಲ. ಪರಿಸರಜನ್ಯ ಕಾರಣಗಳು ಮನೋವಿಜ್ಞಾನಿಗಳು ಆಕ್ರಮಣ ಪ್ರವೃತ್ತಿಯನ್ನು ಕುರಿತು ಅಪಾರವಾಗಿ ಸಂಶೋಧನೆಗಳನ್ನು ನಡೆಸಿದ್ದಾರೆ. ಅವರು ಈ ವರ್ತನೆಗೆ ಪರಿಸರದಿಂದ ಉದ್ಭವವಾಗುವ ಪ್ರಚೋದನೆಗಳು ಮತ್ತು ವ್ಯಕ್ತಿಗತವಾದ ಕಾರಣಗಳನ್ನು ಕುರಿತು ಆಳವಾಗಿ ಅಧ್ಯಯನ ಮಾಡಿದ್ದಾರೆ. ಆಕ್ರಮಣಕ್ಕೆ ಪರಿಸರದಿಂದ ಹೊರಹೊಮ್ಮುವ ಕಾರಣವನ್ನು ಕುರಿತು ಪ್ರತಿಪಾದಿಸಿರುವ ಸಿದ್ಧಾಂತಗಳಲ್ಲಿ ಪ್ರಸಿದ್ಧಿಯಾದುದು ನಿರಾಶಾಪ್ರೇರಿತ-ಆಕ್ರಮಣ ಸಿದ್ಧಾಂತ (frustration-aggression hypothesis). ನಿರಾಶಾಪ್ರೇರಿತ-ಆಕ್ರಮಣ ಸಿದ್ಧಾಂತ ನಮ್ಮ ಎಲ್ಲಾ ವರ್ತನೆಗಳು ಸಾಮಾನ್ಯವಾಗಿ ಯಾವುದಾದರು ಒಂದು ಗುರಿಯನ್ನು ಹೊಂದಿರುತ್ತವೆ. ನಾವು ಗುರಿಯನ್ನು ತಲುಪುವ ಪ್ರಯತ್ನದಲ್ಲಿ ನಿರತರಾಗಿರುತ್ತೇವೆ. ನಮ್ಮ ಗುರಿಮುಟ್ಟುವಿಕೆಗೆ ಏನಾದರೂ ಅಡ್ಡಬಂದು ಅಡಚಣೆಯಾದಾಗ, ನಮಗೆ ಕೋಪ ಬರುತ್ತದೆ, ಆಶಾಭಂಗವಾಗುತ್ತದೆ; ನಿರಾಶೆಯುಂಟಾಗುತ್ತದೆ. ಹೀಗೆ ಹುಟ್ಟಿದ ನಿರಾಶೆಯೇ ಆಕ್ರಮಣಕ್ಕೆ ಪ್ರಮುಖ ಪ್ರೇರಣೆ ಎಂಬುದು ಈ ಸಿದ್ಧಾಂತದ ಪ್ರತಿಪಾದನೆ (Dollard, J, et al, 1939). ಈ ಸಿದ್ಧಾಂತದಲ್ಲಿ ಎರಡು ಭಾಗಗಳಿವೆ: ಮೊದಲನೆಯದು, ನಿರಾಶೆ ಯಾವಾಗಲೂ ಆಕ್ರಮಣವನ್ನು ಪ್ರೇರೇಪಿಸುತ್ತದೆ ಎಂಬುದು; ಎರಡನೆಯದು, ಎಲ್ಲ ಆಕ್ರಮಣಗಳಿಗೂ ನಿರಾಶೆಯೇ (frustration) ಕಾರಣ ಎನ್ನುವುದು. ಈ ಎರಡು ಭಾಗಗಳೂ ಪೂರ್ಣವಾಗಿ ಸರಿಯಲ್ಲ ಎಂಬುದನ್ನು ಮುಂದಿನವರು ತೋರಿಸಿಕೊಟ್ಟಿದ್ದಾರೆ (Berkowitz, L, 1969). ನಿರಾಶೆ ಆಕ್ರಮಣಕ್ಕೆಡೆಮಾಡುತ್ತದೆ, ನಿಜ; ಆದರೆ ಎಲ್ಲಾ ಸಂದರ್ಭಗಳಲ್ಲೂ ಹಾಗಾಗುವಂತೆ ಕಂಡುಬರುವುದಿಲ್ಲ, ಎಷ್ಟೋ ವೇಳೆ, ನಿರಾಶೆ ಬೇರೆ ವರ್ತನೆಗಳನ್ನೂ ಪ್ರೇರಿಸಬಹುದು. ಉದಾಹರಣೆಗೆ, ನಮ್ಮ ಪ್ರಯತ್ನ ಫಲಿಸದಿದ್ದಾಗ, ನಾವು ಆ ಕಾರ್ಯವನ್ನೇ ಕೈಬಿಡಬಹುದು; ನಿರಾಶಾದಾಯಕ ಸನ್ನಿವೇಶದಿಂದ ಹಿಂತೆಗೆಯಬಹುದು; ಸೋಲಿನಿಂದುಂಟಾದ ನೋವನ್ನು ಮರೆಯಲು ಕುಡಿಯುವುದಕ್ಕೆ ಮೊದಲು ಮಾಡಬಹುದು. ಇನ್ನೂ ಕೆಲವು ವೇಳೆ, ಗುರಿಮುಟ್ಟಲು ಹೆಚ್ಚು ಶ್ರಮವಹಿಸಿ ಮರುಪ್ರಯತ್ನ ಮಾಡಬಹುದು; ಗುರಿ ತಲಪಲು ಬೇರೆ ದಾರಿ ಹಿಡಿಯಬಹುದು. ಸಿದ್ಧಾಂತದ ಎರಡನೆಯ ಭಾಗ ಹೇಳುವಂತೆ, ಆಕ್ರಮಣಕ್ಕೆ ಆಶಾಭಂಗವಷ್ಟೇ ಕಾರಣವಲ್ಲ; ಬೇರೆ ಕಾರಣಗಳೂ ಇರುವುದು ಕಂಡುಬಂದಿದೆ. ನಿರಾಶೆ ಆಕ್ರಮಣಕ್ಕೆ ಪ್ರೇರಿಸುತ್ತದೆಯೋ ಇಲ್ಲವೋ ಎಂಬುದು ಕೆಲವು ಅಂಶಗಳನ್ನು ಅವಲಂಬಿಸಿರುತ್ತದೆ. ಅವುಗಳಲ್ಲೊಂದು, ನಾವು ಅನುಭವಿಸುವ ನಿರಾಶೆ ಎಷ್ಟು ಪ್ರಬಲವಾಗಿದೆ (strong) ಎಂಬುದು. ನಿರಾಶೆಯ ಪ್ರಾಬಲ್ಯ, ನಮ್ಮ ಗುರಿ ನಮಗೆ ಎಷ್ಟು ಮುಖ್ಯ, ಗುರಿ ಮುಟ್ಟುವುದರಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ, ಆ ನಿರೀಕ್ಷೆ ಎಷ್ಟು ದೊಡ್ಡದು, ಗುರಿ ಮುಟ್ಟದಿದ್ದರೆ ಆಗುವ ನಷ್ಟವೆಷ್ಟು, ಎಂಬುದನ್ನು ಅವಲಂಬಿಸಿರುತ್ತದೆ. ನಮ್ಮ ನಿರೀಕ್ಷೆ (ಅಪೇಕ್ಷೆ) ಮಹತ್ವದ್ದಾಗಿದ್ದರೆ, ನಾವು ಆಕ್ರಮಣ ಮಾಡುವ ಸಾಧ್ಯತೆ ಹೆಚ್ಚು. ಎರಡನೆಯದಾಗಿ, ನಮಗಾದ ನಿರಾಶೆ ನ್ಯಾಯಯುತವಾದುದು ಎನಿಸಿದರೆ, ಆಗ ಆಕ್ರಮಣ ಮಾಡುವ ಸಾಧ್ಯತೆ ಕಡಮೆ. ಅದು ವಿನಾಕಾರಣವಾದದ್ದು ಎನಿಸಿದರೆ ಆಕ್ರಮಣ ಮಾಡುವ ಸಂಭವ ಹೆಚ್ಚು. ಹೀಗೆ, ನಿರಾಶೆ ಆಕ್ರಮಣಕ್ಕೆ ಕಾರಣವಾಗಬಹುದಾದರೂ, ಅದೊಂದೇ ಯಾವಾಗಲೂ ಕಾರಣವಾಗಲಾರದು. ಅನುಕರಣೆ: ನೋಡಿ ಕಲಿಯುವುದು ಇನ್ನೊಂದು ಗುಂಪಿನ ಸಂಶೋಧಕರ ಪ್ರಕಾರ, ಆಕ್ರಮಣಕ್ಕೆ ಕಾರಣ ಸಾಮಾಜಿಕ ಕಲಿಕೆ (social learning). ಅಂದರೆ, ಸಾಮಾಜಿಕ ಸನ್ನಿವೇಶಗಳು ನಮಗೆ ಆಕ್ರಮಣ ಮಾಡುವುದನ್ನು ಕಲಿಸುತ್ತವೆ. ಅಮೆರಿಕಾದ ಮನೋವಿಜ್ಞಾನಿ ಅಲ್ಬರ್ಟ್ ಬಂದುರ (Albert Bandura) ಎಂಬುವರ ಪ್ರಕಾರ, ನಮ್ಮ ವರ್ತನೆಯ ಬಹುಭಾಗ ಬೇರೆಯವರು ಮಾಡುವುದನ್ನು ನೋಡಿ ಕಲಿತದ್ದಾಗಿರುತ್ತದೆ (ನಮ್ಮ ಸರ್ವಜ್ಞ ಹೇಳಿದಂತೆ ಮಾಳ್ಪವರಿಂದ ನೋಡಿ ಕಲಿಯುತ್ತೇವೆ). ವರ್ತನೆಯ ಬೆಳವಣಿಗೆಯಲ್ಲಿ ಅನುಕರಣೆಯ (imitation; modeling) ಪಾತ್ರ ದೊಡ್ಡದು. ಇದು ಆಕ್ರಮಣಶೀಲತೆಗೂ ಅನ್ವಯವಾಗುತ್ತದೆ. ಬೇರೆಯವರು ಆಕ್ರಮಣ ಮಾಡುವುದನ್ನು ನೋಡಿದಾಗ, ನಾವೂ ಕೂಡ ಅದನ್ನು ಅನುಕರಣೆ ಮಾಡುವ ಸಾಧ್ಯತೆಗಳಿವೆ. ನಾವು ನೋಡಿದ ಸನ್ನಿವೇಶದಲ್ಲಿ ಆಕ್ರಮಣ ಮಾಡಿದವರಿಗೆ ಶಿಕ್ಷೆಯಾಗಿರದಿದ್ದರೆ, ಅಂಥ ವರ್ತನೆಗಳಲ್ಲಿ ನಾವೂ ತೊಡಗುವ ಸಾಧ್ಯತೆ ಹೆಚ್ಚು. ದೂರದರ್ಶನದಲ್ಲಿ, ಚಲನಚಿತ್ರಗಳಲ್ಲಿ, ತಾವು ಕಂಡ ಹಿಂಸಾಚಾರಗಳನ್ನು ಜನರು ಅನುಕರಣೆ ಮಾಡಬಹುದೆಂಬುದು ಹಲವಾರು ಪ್ರಯೋಗಗಳಿಂದ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಂದುರ ನಡೆಸಿದ ಪ್ರಯೋಗಗಳು ಜಗತ್ಪ್ರಸಿದ್ಧವಾಗವೆ. ಒಬ್ಬ ಮಾದರಿ ವ್ಯಕ್ತಿ (model) ಒಂದು ಪ್ಲಾಸ್ಟಿಕ್ ಬೊಂಬೆಗೆ (Bobo doll) ಹಿಗ್ಗಾ ಮುಗ್ಗಾ ಹೊಡೆಯುವುದು, ಒದೆಯುವುದು, ತಿವಿಯುವುದನ್ನು ನೋಡಿದ ಮಕ್ಕಳನ್ನು ಅಂಥದೆ ಸನ್ನಿವೇಶದಲ್ಲಿ ಬಿಟ್ಟಾಗ, ಅವರು ಕೂಡ ಅಂತಹದೆ ವರ್ತನೆಯಲ್ಲಿ ತೊಡುಗುವುದನ್ನು ಬಂದುರ ಪ್ರಯೋಗಗಳ ಮೂಲಕ ತೋರಿಸಿದ್ದಾನೆ. ಈ ಘಟನೆಯನ್ನು ಮಕ್ಕಳಿಗೆ ಚಲನಚಿತ್ರ ರೂಪದಲ್ಲಿ ತೋರಿಸಿದಾಗಲೂ ಪಲಿತಾಂಶ ಅದೇ ಆಗಿತ್ತು. ಬಂದುರ ನಡೆಸಿದ ಪ್ರಯೋಗಗಳು ಮನೋವಿಜ್ಞಾನದಲ್ಲಿ ಒಂದು ಆಂದೋಲನವನ್ನೆ ಉಂಟು ಮಾಡಿವೆ. ಮುಖ್ಯವಾಗಿ ವರ್ತನೆಯ ಮೇಲೆ ದೂರದರ್ಶನ, ಚಲನಚಿತ್ರ, ಮುಂತಾದ ದೃಶ್ಯಮಾಧ್ಯಮಗಳ ಪ್ರಭಾವನ್ನು ಕುರಿತು ಸಂಶೋಧನೆಗಳು ಆರಂಭವಾದುವು. ಇಂದು ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಮಾಧ್ಯಮಗಳ ವೀಕ್ಷಣೆ ಒಂದು ಬಹು ಮುಖ್ಯ ಕಾರಣವಿರಬಹುದೆಂಬ ಅನುಮಾನ ವಿಜ್ಞಾನಿಗಳಿಗೆ ಬರುತ್ತಿದೆ. ಇತರೆ ಕಾರಣಗಳು ನಿತ್ಯ ಜೀವನದಲ್ಲಿ ನಮ್ಮನ್ನು ಯಾರಾದರು ಅತಿಯಾಗಿ ರೇಗಿಸಿದಾಗ, ನಮಗೆ ಅವಮಾನವಾದಾಗ, ನಮ್ಮ ಮಾನ ಮರ್ಯಾದೆಗೆ, ಆತ್ಮಾಭಿಮಾನಕ್ಕೆ ಕುಂದುಂಟಾದಾಗ, ಕೋಪ ಬಂದು ಆಕ್ರಮಣ ಮಾಡುವ ಸಾಧ್ಯತೆ ಅಧಿಕ. ಸಾಮಾನ್ಯವಾಗಿ ಅವಮಾನ ವಾಚಿಕವಾಗಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರು ನಮಗೆ ಅವಮಾನ ಮಾಡಿದರೆ, ಅದನ್ನು ನಾವು ಸಹಿಸುವುದಿಲ್ಲ. ಕೆರಳುತ್ತೇವೆ. ಕೆನ್ನೆಗೆ ಹೊಡೆದವರಿಗೆ ಇನ್ನೊಂದು ಕೆನ್ನೆ ತೋರುವ ನಿಯಮ ಇಲ್ಲಿ ಅನ್ವಯವಾಗುವುದಿಲ್ಲ, ಅಂಥವರ ಮೇಲೆ ನಾವು ತಿರುಗಿ ಬೀಳುತ್ತೇವೆ. ಮುಯ್ಯಿಗೆ ಮುಯ್ಯಿ ಮಾಡುತ್ತೇವೆ. ಹಲವು ವೇಳೆ ಕಣ್ಣುಮುಚ್ಚಿ ವಿವೇಚನಾರಹಿತವಾಗಿ ಆಕ್ರಮಣ ಮಾಡಬೇಕಾಗುತ್ತದೆ. ಯುದ್ಧದಲ್ಲಿ ಮುಖ ಮೂತಿ ನೋಡದೆ ಇತರರನ್ನು ಕೊಲ್ಲುತ್ತೇವೆ. ನಾವು ಕೊಲ್ಲುವ ವ್ಯಕ್ತಿ ನಮಗೇನೂ ಕೇಡು ಮಾಡಿರುವುದಿಲ್ಲ; ಅವನಾರೆಂಬುದು ಕೂಡ ನಮಗೆ ತಿಳಿದಿರುವುದಿಲ್ಲ. ಮೇಲಧಿಕಾರಿ ಶೂಟ್ ಎಂದರೆ ಸೈನಿಕರು ಶೂಟ್ ಮಾಡುತ್ತಾರೆ; ತಾವು ಯಾರನ್ನು ಯಾಕೆ ಶೂಟ್ ಮಾಡುತ್ತಿದ್ದೇವೆ ಎಂಬುದನ್ನು ಯೋಚಿಸುವುದೇ ಇಲ್ಲ. ನಮ್ಮ ಮೇಲಧಿಕಾರಿಗಳು ಆಕ್ರಮಣ ಮಾಡುವಂತೆ ಅಪ್ಪಣೆ ಮಾಡಿದರೆ, ಅದನ್ನು ನಾವು ಹಿಂದು ಮುಂದು ನೋಡದೆ ಪಾಲಿಸುತ್ತೇವೆ. ಅವರು ಹೇಳಿದರು, ನಾನು ಮಾಡಿದೆ ಎನ್ನುವ ತರ್ಕ ಇಲ್ಲಿನದು. ಇದೊಂದು ಬಗೆಯ ವಿವೇಚನಾರಹಿತ, ಅಂಧ ವಿಧೇಯತೆ. ಇಂಥ ಅಂಧ ವಿಧೇಯತೆಯ ಪರಿಣಾಮವನ್ನು ಮಿಲ್ಗ್ರಾಮ್ (Stanley Milgram) ಎಂಬ ಅಮೆರಿಕನ್ ಮನೋವಿಜ್ಞಾನಿ ಕೆಲವು ಸ್ವಾರಸ್ಯಕರವಾದ ಪ್ರಯೋಗಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಹೊರಗಿನ ಅಹಿತಕರವಾದ ಸ್ಥಿತಿ ಅಥವಾ ಘಟನೆಗಳು ಕೆಲವರನ್ನು ಆಕ್ರಮಣಶೀಲರನ್ನಾಗಿ ಮಾಡುತ್ತದೆ. ಪರಿಸರದಲ್ಲಿ ಉಷ್ಣಾಂಶ ಹೆಚ್ಚಾದಾಗ, ಗಲಾಟೆ ಅತಿಯಾದಾಗ, ಜನದಟ್ಟನೆ ಮಿತಿಮೀರಿದಾಗ, ಹಿಂಸಾಚಾರ ಹೊರಬೀಳುವ ಸಾಧ್ಯತೆಗಳು ಹೆಚ್ಚು. ಕೋಪಗೊಂಡ ಜನರ ಎದುರು ಆಯುಧಗಳು ಇದ್ದಾಗ ಹಿಂಸಾಚಾರದಲ್ಲಿ ತೊಡಗುವ ಸಂಭವ ಹೆಚ್ಚು. ಪಾನಮತ್ತರಾದಾಗ (ಆಲ್ಕೊಹಾಲ್ ಪ್ರಭಾವದಿಂದ), ಅತಿಯಾದ ಲೈಂಗಿಕ ಪ್ರಚೋದನೆಗೆ ಒಳಗಾಗಿದ್ದಾಗ, ಮತ್ತು ಅಶ್ಲೀಲ ಚಿತ್ರಗಳನ್ನು ನೋಡಿದಾಗ, ಕೆಲವರಲ್ಲಿ ಆಕ್ರಮಣಕಾರಿ ವರ್ತನೆ ಹೊರಬೀಳುವ ಸಾಧ್ಯತೆ ಹೆಚ್ಚಾಗುವುದು ಕಂಡುಬಂದಿದೆ. ಇವೆಲ್ಲಕ್ಕೂ ಸಂಶೋಧನೆಗಳು ಪುರಾವೆಗಳನ್ನು ಒದಗಿಸಿವೆ. ಕಾರಣಗಳೇನೆ ಇರಲಿ, ಎಲ್ಲರೂ ಒಂದೆ ಮಟ್ಟದ ಹಿಂಸಾಚಾರದಲ್ಲಿ ತೊಡಗುವುದಿಲ್ಲ. ಕೆಲವರು ಹೆಚ್ಚು ಕೆಲವರು ಕಡಿಮೆ. ಇದಕ್ಕೆ ಕಾರಣಗಳೇನು? ವೈಯಕ್ತಿಕ ಕಾರಣಗಳು ಹಿಂಸಾಚಾರಕ್ಕೆ ಕೆಲವು ವ್ಯಕ್ತಿಗತ ಕಾರಣಗಳೂ ಇರಬಹುದು. ಇತ್ತೀಚೆಗೆ ಮನೋವಿಜ್ಞಾನಿಗಳು ಜನರಲ್ಲಿ ಎ ವರ್ಗ ಮತ್ತು ಬಿ ವರ್ಗ ಎಂಬ ಎರಡು ಬಗೆಯನ್ನು ಗುರಿತಿಸಿದ್ದಾರೆ. ಎ ಗುಂಪಿನವರು ಸ್ಪರ್ಧಾ ಮನೋಭಾವದವರು, ಏನನ್ನಾದರೂ ಮಾಡಬೇಕು, ಮಾಡುವ ಕೆಲಸದಲ್ಲಿ ಜಯ ಗಳಿಸಬೇಕು, ಅದನ್ನು ಶೀಘ್ರವಾಗಿ ಮಾಡಬೇಕು, ಬೇಗ ಮುಂದೆ ಬರಬೇಕು, ಎನ್ನುವ ಮನೋಭಾವ ಅವರದು. ಅವರಿಗೆ ಯಾವುದಕ್ಕೂ ಕಾಲ ಸಾಲುವುದಿಲ್ಲ. ಅವರು ಸದಾ ಓಡುತ್ತಲೇ ಇರುತ್ತಾರೆ. ಬಿ ಗುಂಪಿನವರು ನಿಧಾನಿಗಳು, ಸಮಾಧಾನಚಿತ್ತರು. ರೋಮ್ ನಗರವನ್ನು ಒಂದೆ ದಿನ ಕಟ್ಟಲಾಗಿಲ್ಲ ಎಂಬುದು ಇವರ ತರ್ಕ. ಎ ಗುಂಪಿನವರಲ್ಲಿ ಆಕ್ರಮಣಶೀಲತೆ ಹೆಚ್ಚಾಗಿರುವುದು ಕಂಡುಬಂದಿದೆ. ಇವರಲ್ಲಿ ಹಿಂಸಿಸುವ ಉದ್ದೇಶದಿಂದಲೇ ಆಕ್ರಮಣ ಮಾಡುವ ಪ್ರವೃತ್ತಿ ಹೆಚ್ಚು ಎಂಬುದು ತಿಳಿದು ಬಂದಿದೆ. ಇನ್ನು ಕೆಲವರು ಆಕ್ರಮಣಶೀಲತೆಯನ್ನು ಬೇರೆಯವರಿಗೆ ಆರೋಪಿಸಿ, (hostile attributional bias), ಅವರು ತಮ್ಮ ಮೇಲೆ ಆಕ್ರಮಣ ಮಾಡಬಹುದೆಂದು ತೀರ್ಮಾನಿಸಿ, ಅವರ ಮೇಲೆ ಬೀಳುತ್ತಾರೆ. ನಾನು ಹೊಡೆಯದಿದ್ದರೆ ಅವರೇ ನನ್ನ ಮೇಲೆ ಆಕ್ರಮಣ ಮಾಡುತ್ತಿದ್ದರೆಂಬುದು ಇಲ್ಲಿನ ತರ್ಕ. ಇನ್ನು ಕೆಲವು ಸಂದರ್ಭಗಳಲ್ಲಿ ಕೊಟ್ಟ ಮಾತಿಗೆ ತಪ್ಪಿ, ಅಪರಾಧ ಪ್ರಜ್ಞೆಯನ್ನು ಅನುಭವಿಸಿ, ಲಜ್ಜಿತರಾದವರು ಆಕ್ರಮಣ ಮಾಡುವ ಸಾಧ್ಯತೆಗಳು ಹೆಚ್ಚೆಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಉದ್ರೇಕ-ವರ್ಗಾವಣಾ ಸಿದ್ಧಾಂತ ನೀವು ಯಾವುದಾದರೂ ಒಂದು ಅಹಿತಕರವಾದ ಸನ್ನಿವೇಶದಲ್ಲಿದ್ದು, ಅದರಿಂದ ಪಾರಾಗಿ ಹೊರಗೆ ಬಂದಿರುವಿರೆಂದುಕೊಳ್ಳಿ. ಆಗ ನೀವು ಮಾನಸಿಕವಾಗಿ, ದೈಹಿಕವಾಗಿ ಉದ್ವಿಗ್ನತೆಗೊಳಗಾಗಿದ್ದರೆ ಆಶ್ಚರ್ಯವಿಲ್ಲ. ಉದಾಹರಣೆಗೆ, ಒಂದು ದಿನ ಆಫೀಸಿನಲ್ಲಿ ನಿಮ್ಮ ಮೇಲಧಿಕಾರಿ ವಿನಾ ಕಾರಣ ರೇಗಾಡಿ ನಿಮ್ಮನ್ನು ಅವಮಾನಿಸಿರಬಹುದು. ಅಂದು ಸಂಜೆ ನೀವು ಮನೆಗೆ ಬರುತ್ತಿರುವಾಗ ಬೀದಿಯಲ್ಲಿ ಮಕ್ಕಳು ಚಂಡಾಟ ಆಡುತ್ತಿದ್ದಾರೆ. ಅವರು ಎಸೆದ ಚಂಡು ಅಕಸ್ಮತ್ತಾಗಿ ನಿಮ್ಮ ಮೇಲೆ ಬೀಳುತ್ತದೆ. ಅದೇನು ಮಹಾಪರಾಧವಲ್ಲ. ಆದರೆ, ನೀವು ಬಹಳ ಕೋಪಗೊಂಡು ಆ ಹುಡುಗರಿಗೆ ಬೈದು ಹೊಡೆಯುತ್ತೀರಿ. ಯಾಕೆ ಹೀಗೆ ಮಾಡಿದಿರಿ? ಈಗಾಗಲೇ ನಿಮ್ಮ ಆಫೀಸಿನಲ್ಲಿ ನೀವು ಅನುಭವಿಸಿದ್ದ ಉದ್ರೇಕ ನಿಮ್ಮಲ್ಲಿ ಉಳಿದಿದ್ದು, ಈಗ ನಡೆದ ಸಣ್ಣ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಹೊರಬಿದ್ದಿದೆ. ಈ ಪ್ರಕ್ರಿಯೆಯನ್ನು ಮನೋವಿಜ್ಞಾನಿಗಳು ಉದ್ರೇಕ-ವರ್ಗಾವಣಾ ಸಿದ್ಧಾಂತವೆಂದು (excitation transfer theory) ಕರೆದಿದ್ದಾರೆ. ಅಂದರೆ, ನೀವು ಈ ಮೊದಲೆ ಅನುಭವಿಸಿದ್ದ ಉದ್ವಿಗ್ನತೆ ನಿಮ್ಮ ಅಂತರಂಗದಲ್ಲಿ ಉಳಿದಿತ್ತು. ಈಗ ನಿಮಗೆ ಚೆಂಡು ಬಿದ್ದಾಗ, ಅದು ಒಂದು ಸಣ್ಣ ವಿಷಯವಾದರೂ, ನಿಮ್ಮಲ್ಲಿದ್ದ ಕೋಪವನ್ನು ಹೊರಹಾಕಲು ಸಾಕಾದಷ್ಟು ಪ್ರಚೋದನೆಯಾಗಿತ್ತು. ನಿಮ್ಮಲ್ಲಿ ಈ ಮೊದಲೆ ಉದ್ಭವವಾಗಿದ್ದ ಉದ್ರೇಕ ಈಗಿನ ಸನ್ನಿವೇಶಕ್ಕೆ ವರ್ಗಾವಣೆಯಾಗಿ ಉಗ್ರರೂಪದಲ್ಲಿ ಹೊರಬಿದ್ದಿದೆ. ಇಂತಹ ಘಟನೆಗಳು ಎಲ್ಲರ ಜೀವನದಲ್ಲೂ ಆಗಾಗ್ಗೆ ಜರಗುವುದು ಸಾಮಾನ್ಯ ಸಂಗತಿ. ಸ್ತ್ರೀ-ಪುರುಷರಲ್ಲಿ ಆಕ್ರಮಣಶೀಲತೆ ಎಲ್ಲರು ಹೇಳುವುದು, ಸಾಮಾನ್ಯವಾಗಿ ಸ್ತ್ರೀಯರು ಪುರುಷರಷ್ಟು ಹಿಂಸಾಚಾರಿಗಳಲ್ಲ ಎಂದು. ಇದು ತಕ್ಕಮಟ್ಟಿಗೆ ನಿಜ. ಹಿಂಸಾಚಾರದಲ್ಲಿ ತೊಡಗಿ ಅದಕ್ಕಾಗಿ ಬಂಧನಕ್ಕೊಳಗಾಗುವವರಲ್ಲಿ ಪುರುಷರೇ ಹೆಚ್ಚು. ಪುರುಷರು ಸ್ತ್ರೀಯರಿಗಿಂತ ಹೆಚ್ಚು ಆಕ್ರಮಣಶೀಲರಷ್ಟೇ ಅಲ್ಲ. ಹೆಚ್ಚಾಗಿ ಆಕ್ರಮಣಕ್ಕೆ ಒಳಗಾಗುವವರೂ ಅವರೆ. ಗಂಡಸರು ಹೊಡೆದಾಟಕ್ಕೆ ಇಳಿದಷ್ಟು ಹೆಂಗಸರು ಇಳಿಯುವುದಿಲ್ಲ. ಈ ವ್ಯತ್ಯಾಸ ಸಣ್ಣ ಮಕ್ಕಳಲ್ಲೂ ಕಂಡು ಬರುತ್ತದೆ. ಶಾಲೆಯಲ್ಲಿ, ಬೀದಿಯಲ್ಲಿ, ಆಟವಾಡುವಾಗ ಗಂಡು ಮಕ್ಕಳು ಹೊಡೆದಾಡುವಷ್ಟು ಹೆಣ್ಣುಮಕ್ಕಳು ಹೊಡೆದಾಡುವುದಿಲ್ಲ; ಹುಡುಗಿಯರು ಹಿಂಸಾಚಾರದಲ್ಲಿ ತೊಡಗುವುದಿಲ್ಲ. ಆದರೆ ಈ ಲೈಂಗಿಕ ವ್ಯತ್ಯಾಸ ನಿಜವಾದುದೆ ಎನ್ನುವ ಅನುಮಾನ ಇತ್ತೀಚಿನ ಸಂಶೋಧನೆಗಳಿಂದ ಹೊರಬೀಳುತ್ತಿದೆ. ವಾಸ್ತವವಾಗಿ ನೋಡುವುದಾದರೆ, ಹೊಡೆದಾಡುವುದಷ್ಟೇ ಹಿಂಸಾಚಾರವಲ್ಲ. ಈ ಮೊದಲೆ ಹೇಳಿರುವಂತೆ, ಹಿಂಸಾಚಾರ ಹಲವು ವಿಧದಲ್ಲಿ ಹೊರಬರಬಹುದು. ಹೆಂಗಸರು ದೈಹಿಕವಾಗಿ ಹೊಡೆದಾಟಕ್ಕೆ ಹೋಗುವುದಿಲ್ಲ. ಅವರು ಹೊಡೆದಾಟದ ಪರಿಣಾಮ ಏನಾಗಬಹುದೆಂದು ಆಲೋಚಿಸುತ್ತಾರೆ. ತಮ್ಮಿಂದ ಆಕ್ರಮಣಕ್ಕೆ ಒಳಗಾದವರು ತಮ್ಮ ಮೇಲೆ ತಿರುಗಿಬಿದ್ದರೆ ಏನು ಮಾಡುವುದೆಂದು ಆಲೋಚಿಸುತ್ತಾರೆ. ಹೀಗಾಗಿ ಸ್ತ್ರೀಯರು ಸಾಮಾನ್ಯವಾಗಿ ಇನ್ನೊಬ್ಬರನ್ನು ಒಡೆದು, ಬಡಿದು, ಗಾಯಗೊಳಿಸುವುದು ಅಪರೂಪ. ಆದರೆ, ದೈಹಿಕೇತರ ಆಕ್ರಮಣದಲ್ಲಿ ಮಾತ್ರ ಪುರುಷರಿಗಿಂತ ಸ್ತ್ರೀಯರದೆ ಮೇಲುಗೈ. ಹೆಂಗಸರದು ಪರೋಕ್ಷ, ನಿಷ್ಕ್ರಿಯ ಆಕ್ರಮಣ (passive aggression). ಅವರು ಮಾತಿನಿಂದ ಹಿಂಸಿಸುವುದು ಹೆಚ್ಚು. ಕೂಗಾಡುವುದು, ಚಾಡಿ ಹೇಳುವುದು, ಸಂಗ ಬಿಡುವುದು, ಮಾತು ಬಿಡುವುದು, ಮ್ಯಾನಿಪುಲೇಟ್ ಮಾಡಿ ಪರಸ್ಪರರ ಸಂಬಂಧಗಳಲ್ಲಿ ಬಿರುಕು ಉಂಟುಮಾಡುವುದು, ಮುಂತಾದ ಕ್ರಿಯೆಗಳು ಹೆಂಗಳೆಯರಲ್ಲಿ ಹೆಚ್ಚು. ಅದೇನೆ ಇದ್ದರೂ, ಓಟ್ಟಾರೆಯಾಗಿ ನೋಡಿದರೆ, ಆಕ್ರಮಣ ಪ್ರವೃತ್ತಿ ಸ್ತ್ರೀಯರಿಗಿಂತ ಪುರುಷರಲ್ಲಿ ಅಧಿಕ. ಅದೇಕೆ ಹಾಗೆ? ಪುರುಷರ ಲೈಂಗಿಕ ಹಾರ್ಮೊನ್ ಕಾರಣವಿರಬಹುದೆಂಬುದು ಕೆಲವರ ಊಹೆ. ಮತ್ತೆ ಕೆಲವರು, ನಾವು ಗಂಡು ಮಕ್ಕಳನ್ನು ಬೆಳೆಸುವ ರೀತಿಯಲ್ಲೇ ಆಕ್ರಮಣಕ್ಕೆ ಪ್ರೋತ್ಸಾಹವಿರುವುದನ್ನು ಎತ್ತಿ ತೋರಿಸುತ್ತಾರೆ. ಉದಾಹರಣೆಗೆ, ಒಂದು ಗಂಡು ಮಗು ಯಾರಿಂದಲೊ ಏಟು ತಿಂದು, ಅಳುತ್ತಾ ಮನೆಗೆ ಬಂದಾಗ, ಹಿರಿಯರು ಏನು ಹೇಳಬಹುದು ಊಹಿಸಿ. ನೀನೆಂಥ ಗಂಡಸೊ, ಒಡೆಸಿಕೊಂಡು ಅಳುತ್ತಾ ಬಂದಿದ್ದೀಯೆ. ಅವನಿಗೆ ಅಲ್ಲೇ ನಾಲ್ಕು ಹಾಕಿ ಬರಬಾರದಿತ್ತಾ, ಎನ್ನುವ ಮಾತನ್ನು ನೀವು ಕೇಳಿರಲೇಬೇಕು. ಅದೇ ಒಂದು ಹೆಣ್ಣು ತೊಂದರೆಗೀಡಾದಾಗ ಇದೆಲ್ಲಾ ಬೇಕಿತ್ತಾ, ನೀನ್ಯಾಕೆ ಮನೆ ಬಿಟ್ಟು ಹೊರಗೆ ಹೋದೆ? ಒಳಗಿದ್ದರೆ ಇಂಥದೆಲ್ಲಾ ನಡೆಯುತ್ತಿರಲಿಲ್ಲ ಎನ್ನುತ್ತೇವೆ. ಅಂದಮೇಲೆ, ಗಂಡುಮಕ್ಕಳು ಆಕ್ರಮಣ ಮಾಡುವುದನ್ನು ಮನೆಯ ಹಿರಿಯರೇ ಪ್ರೋತ್ಸಾಹಿಸುತ್ತಾರೆ ಎಂದಾಯಿತು. ಸಂಸ್ಕೃತಿ ಮತ್ತು ಆಕ್ರಮಣಶೀಲತೆ ಜನರು ಎಷ್ಟರಮಟ್ಟಿಗೆ ಆಕ್ರಮಣಶೀಲರು ಎಂಬುದನ್ನು ಅವರ ಸಮುದಾಯ ಆಚರಿಸುವ ಸಂಸ್ಕಾರ-ಸಂಸ್ಕೃತಿಗಳು ನಿರ್ಧರಿಸುತ್ತವೆ ಎಂಬುದು ಸಾಂಸ್ಕೃತಿಕ ಮಾನವಶಾಸ್ತ್ರಜ್ಞರ (cultural anthropologists) ಅಭಿಮತ. ಫ್ರಾಂಜ್ ಬೋಯಾಸ್ (Franz Boas), ರೂತ್ ಬೆನಡಿಕ್ಟ್ (Ruth Benedict), ಮಾರ್ಗರೆಟ್ ಮೀಡ್ (Margaret Mead) ಮುಂತಾದವರು ವಿಶ್ವದ ಹಲವೆಡೆ ವಾಸಿಸುವ ಬುಡಕಟ್ಟು ಜನರ ಸಂಸ್ಕೃತಿಯನ್ನು ಅಧ್ಯಯನ ಮಾಡಿ, ಅವರಲ್ಲಿ ಪ್ರಚಲಿತವಿರುವ ಸಂಸ್ಕೃತಿ - ಅಂದರೆ, ಜನರು ಆಡುವ ಭಾಷೆ, ಆಚರಿಸುವ ಧಾರ್ಮಿಕ ಸಂಸ್ಕಾರಗಳು, ಮೌಲ್ಯಗಳು, ಜೀವನಶೈಲಿ, ಅವರ ನಂಬಿಕೆಗಳು, ಪುರಾಣಗಳು, ಕಲೆ ಹಾಗು ಸಾಮಾಜಿಕ ಸಂಸ್ಥೆಗಳು - ಅವರ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ ಎಂದು ಹೇಳುತ್ತಾರೆ. ಉದಾಹರಣೆಗೆ ಬೆನಡಿಕ್ಟ್ 1934 ರಲ್ಲಿ ಪ್ರಕಟಿಸಿದ ಒಂದು ಪುಸ್ತಕ (Patterns of culture - ಸಂಸ್ಕೃತಿಯ ಸ್ವರೂಪಗಳು) ಜಗತ್ಪ್ರಸಿದ್ಧವಾಗಿದ್ದು ಪ್ರಪಂಚದ 14 ಕಿಂತ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿದೆ; ಇತ್ತೀಚೆಗೆ 2005ರಲ್ಲಿ ಅದರ ಪುನರ್ಮುದ್ರಣವಾಗಿದೆ. ಆ ಗ್ರಂಥದಲ್ಲಿ ಜೂನಿ (Zuni), ಕ್ವಾಕಿಟಲ್ (Kwakiutl) ಮತ್ತು ಡೋಬು (Dobu) ಎಂಬ ಮೂರು ಆದಿಮ ಜನಾಂಗಗಳ (ಬುಡಕಟ್ಟು) ಸಂಸ್ಕೃತಿಗಳನ್ನು ವಿವರಿಸಲಾಗಿದೆ. ಈ ಮೂರು ಬುಡಕಟ್ಟು ಜನರು ಹೊರಗಣ ಪ್ರಪಂಚದ ಸಂಪರ್ಕವಿಲ್ಲದೆ ಬೆಳೆದಿರುವವರು. ಅವರಲ್ಲಿ ಜೂನಿಗಳು ಸದಾ ಶಾಂತಚಿತ್ತರು, ಸಹಕಾರ ಮನೋಭಾವದವರು, ಯಾರಿಗಾದರೂ ಸಹಾಯ ಮಾಡಿ ಸಂತೋಷಿಸುವವರು, ಎಂದೂ ಯಾರಿಗೂ ಕೇಡು ಬಯಸದವರು, ಹೊಡದಾಟ ಬಡಿದಾಟವನ್ನು ಕಂಡರಿಯದವರು. ಅದೇ ಕ್ವಾಕಿಟಲ್ ಜನರು ಜಗಳಗಂಟಿಗರು, ಸ್ಪರ್ಧಾ ಮನೋಭಾವದವರು, ಅಹಂಕಾರಿಗಳು, ಮಹತ್ವಾಕಾಂಕ್ಷಿಗಳು. ಅವರದು ಅತಿಯಾದ ಸ್ವಪ್ರತಿಷ್ಠೆ. ಅದನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ಅವರು ಸದಾ ಸಿದ್ಧ. ದೋಬುಗಳು ಸದಾ ಅಸಂತುಷ್ಟರು. ಸಂಶಯಗ್ರಸ್ತರು. ವಿನಾಕಾರಣ ಮುನಿಸುಕೊಳ್ಳವರು, ಯಾವಾಗಲೂ ಎಲ್ಲರಲ್ಲೂ ವಿರಸ. ಅನಿಸಿದ್ದನ್ನು ಹಿಂದುಮುಂದು ನೋಡದೆ ತಕ್ಷಣ ಕೈಗೊಳ್ಳುವರು, ಅವರು ದಯೆದಾಕ್ಷಿಣ್ಯವನ್ನರಿಯರು. ಯಾರನ್ನೂ ಕ್ಷಮಿಸರು. ತಾವೂ ಕ್ಷಮೆಯನ್ನು ನಿರೀಕ್ಷಿಸುವುದಿಲ್ಲ. ಅವರ ಪ್ರಕಾರ, ಇದು ಕತ್ತು ಕತ್ತರಿಸುವ, ಕೊಲೆಗಡುಕ ಪ್ರಪಂಚ. ಅದನ್ನು ಎದುರಿಸಲು ಸದಾ ಸಿದ್ಧರಿರಬೇಕು ಎನ್ನುವ ಮನೋಭಾವ ಅವರದು. ಈ ಬುಡಕಟ್ಟು ಜನರ ವರ್ತನೆಗಳನ್ನು ಅವರ ಪರಿಸರ, ಸಂಸ್ಕೃತಿ ನಿರ್ಧರಿಸಿರುವುದೆಂಬುದು ಮಾನವಶಾಸ್ತ್ರಜ್ಞರ ಅಭಿಪ್ರಾಯ. ಅಂದಮೇಲೆ, ಜನರ ಆಕ್ರಮಣಶೀಲತೆಯನ್ನು ಕೂಡ ಸಂಸ್ಕೃತಿ ನಿರ್ಧರಿಸುತ್ತದೆ ಎನ್ನುವ ಅಭಿಪ್ರಾಯವನ್ನು ನಿರಾಕರಿಸುವುದು ಸುಲಭವಲ್ಲ. ಆಕ್ರಮಣಶೀಲತೆಯನ್ನು ತಡೆಗಟ್ಟಬಹುದೆ? ಇಂದು ನಮಗೆ ತಿಳಿದಮಟ್ಟಿಗೆ ಆಕ್ರಮಣಶೀಲತೆ ವಿಶ್ವದಾದ್ಯಂತ ಕಂಡುಬರುತ್ತಿರುವ ಒಂದು ಸಾಮಾಜಿಕ ವ್ಯಾಧಿ. ಅದರಿಂದಾಗುವ ಅನಾಹುತಗಳು ಅಪಾರ. ಆದುದರಿಂದ, ಆಕ್ರಮಣಕ್ಕಿರುವ ಕಾರಣಗಳನ್ನು ಕಂಡುಹಿಡಿದು ಅದನ್ನು ತಡೆಗಟ್ಟುವುದು ಇಂದಿನ ಸಮಾಜದ, ಸರ್ಕಾರದ ಕರ್ತವ್ಯ. ಆಕ್ರಮಣಕ್ಕೆ ಕಾರಣಗಳು ಹಲವಾರು. ಅದೊಂದು ಸಂಕೀರ್ಣ ಕ್ರಿಯೆ. ಅದಕ್ಕೆ ಕಾರಣಗಳು ವೈಯುಕ್ತಿಕವಾಗಿರಬಹುದು, ಪರಿಸರದಿಂದ ಹೊರಹೊಮ್ಮುವ ಪ್ರಚೋದನೆಗಳಾಗಿರಬಹುದು, ಅವು ಉಂಟುಮಾಡುವ ನಿರಾಶೆಯಾಗಿರಬಹುದು. ನಮಗಾದ ತೊಂದರೆಗಳನ್ನು ನೆನಪಿಸಿಕೊಂಡು ಅವುಗಳನ್ನು ನಾವು ಅರ್ಥೈಸುವ ರೀತಿಯೇ ಆಕ್ರಮಣಕ್ಕೆ ನಾಂದಿಯಾಗಬಹುದು. ಇವೆಲ್ಲವೂ ಪರಸ್ಪರ ಒಂದರ ಮೇಲೊಂದು ಪ್ರಭಾವ ಬೀರುತ್ತಾ ಆಕ್ರಮಣವನ್ನು ಉತ್ಪಾದಿಸುವುದರಿಂದ, ಅದನ್ನು ಸುಲಭೀಕರಿಸುವುದು ಕಷ್ಟ. ಆದರೆ ಕೆಲವರು ಹೇಳುವಂತೆ, ಇದೊಂದು ಹುಟ್ಟುಗುಣವೆಂದು ನಿರ್ಧರಿಸಿ ಕೈಕಟ್ಟಿ ಕೂಡುವುದು ತಪ್ಪಾಗಬಹುದು. ಬಹುಮಟ್ಟಿಗೆ ಹಿಂಸಾಚಾರ ಪರಿಸರಜನ್ಯ ಪ್ರಕ್ರಿಯೆ; ಇದು ಹೊರಜಗತ್ತನ್ನು ನೋಡುತ್ತಾ ನಾವೇ ರೂಢಿಸಿಕೊಂಡಿರುವ ಅಹಿತಕರ ವರ್ತನೆ. ಅದೇನೆ ಇದ್ದರೂ, ಅದನ್ನು ತಡೆಹಿಡಿಯಲಾಗುವುದಿಲ್ಲವೆ? ಕೊನೆಯ ಪಕ್ಷ ಅದರ ಸಂಭಾವ್ಯತೆಯನ್ನು, ಅದರ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೆ? ಎನ್ನುವ ಪ್ರಶ್ನೆ ಏಳುತ್ತದೆ. ಆಧುನಿಕ ಸಮಾಜ ವಿಜ್ಞಾನಿಗಳ ಪ್ರಕಾರ, ಆಕ್ರಮಣವನ್ನು ತಡೆಹಿಡಿಯುವುದು ಸಾಧ್ಯ; ಅದೇನು ಪರಿಹರಿಸಲಾಗದ ಸಮಸ್ಯೆಯಲ್ಲ. ಹೀಗೆ ನಂಬುವ ಅವರು ಅದರ ನಿಯಂತ್ರಣಕ್ಕೆ ಕೆಲವು ಕಾರ್ಯಕ್ರಮಗಳನ್ನು ಸೂಚಿಸಿದ್ದಾರೆ. ಅವುಗಳ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ. ಶಿಕ್ಷಿಸುವುದರಿಂದ ಆಕ್ರಮಣವನ್ನು ನಿಯಂತ್ರಿಸುವುದು ಸಾಧ್ಯವೆ? ಅನಾದಿ ಕಾಲದಿಂದಲೂ ವಿಶ್ವದ ಎಲ್ಲಾ ಸಮಾಜಗಳೂ ಅಪರಾದಕ್ಕೆ ಶಿಕ್ಷೆ ವಿಧಿಸುತ್ತಲೇ ಬಂದಿವೆ; ದಂಡಂ ದಶಗುಣಂ ಭವೇತ್ ಎಂಬುದು ಪುರಾತನ ಕಾಲದಿಂದಲೂ ಕೇಳಿಬರಿತ್ತಿರುವ ಮಾತು. ಕೊಲೆ, ಸುಲಿಗೆ, ಹಲ್ಲೆ, ಅತ್ಯಾಚಾರ, ಅನಾಚಾರಗಳಿಗೆ ದಂಡ ವಿಧಿಸುತ್ತಲೇ ಬಂದಿದೆ. ಅಪರಾಧಿಗಳನ್ನು ಜೈಲಿಗೆ ಅಟ್ಟಲಾಗುತ್ತಿದೆ, ಮರಣದಂಡನೆಗೂ ಗುರಿಪಡಿಸಲಾಗುತ್ತಿದೆ. ಆದರೆ ಇದೆಲ್ಲ ಅಪರಾದ, ಹೋರಾಟ, ಆಕ್ರಮಣಗಳನ್ನು ತಡೆಯುವಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿದೆ? ಹೌದು, ಶಿಕ್ಷೆಗೊಳಗಾದವರು, ಸೆರೆಮನೆಗೆ ಹೋದವರು, ಮತ್ತೆ ಅಪರಾಧ ಮಾಡುವ ಸಾಧ್ಯತೆಗಳು ಕಡಿಮೆ. ಆದರೆ, ಸಮಾಜದಲ್ಲಿ ಅಪರಾಧದ ಸಂಭಾವ್ಯತೆ ಕಡಿಮಯಾಗುತ್ತಿದೆಯೆ? ಹೇಳುವುದು ಕಷ್ಟ. ಶಿಕ್ಷೆಯನ್ನು ಸೂಕ್ತರೀತಿಯಲ್ಲಿ ವಿಧಿಸಿದರೆ ಮಾತ್ರ ಅಪರಾಧಗಳನ್ನು ತಡೆಯಬಲ್ಲದೆಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ನಮ್ಮ ವ್ಯವಸ್ಥೆಯಲ್ಲಿ ಅದು ಸಾಧ್ಯವಿದ್ದಂತೆ ಕಾಣುವುದಿಲ್ಲ. ಶಿಕ್ಷೆ ಪರಿಣಾಮಕಾರಿಯಾಗಬೇಕಾದರೆ ಕೆಲವು ಪೂರ್ವಭಾವಿ ಷರತ್ತುಗಳಿವೆ. ಮೊದಲನೆಯದಾಗಿ, ಶಿಕ್ಷೆ ಆಕ್ರಮಣ ಅಥವಾ ಅಪರಾಧ ಜರುಗಿದ ತಕ್ಷಣ ವಿಧಿಸಲ್ಪಡಬೇಕು. ಎರಡನೆಯದಾಗಿ, ಅದು ಸಾಕಷ್ಟು ಶಕ್ತಿಯುತವಾಗಿರಬೇಕು, ಪ್ರಬಲವಾಗಿರಬೇಕು. ವ್ಯಕ್ತಿಗೆ ಅದು ಸಹಿಸಲಾಗದಷ್ಟು ನೋವುಂಟು ಮಾಡಬೇಕು, ಅಪಾಯಕಾರಿಯಾಗಿರಬೇಕು, ಭಯವನ್ನುಂಟು ಮಾಡುವಂತಿರಬೇಕು. ಮೂರನೆಯದಾಗಿ, ಆಕ್ರಮಣ ಮಾಡಿದವರಿಗೆಲ್ಲ ಇಂಥ ಶಿಕ್ಷೆ ಕಟ್ಟಿಟ್ಟದ್ದೆ ಎನ್ನುವ ಭರವಸೆ ಎಲ್ಲರ ಮನಸ್ಸಿನಲ್ಲೂ ಇರಬೇಕು. ಆದರೆ, ಪ್ರಸಕ್ತ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಈ ಮೂರು ಷರತ್ತುಗಳು ಕಾರ್ಯರೂಪಕ್ಕೆ ಬರುವಂತೆ ಕಾಣುತ್ತಿಲ್ಲ. ಎಷ್ಟೋ ಕಡೆ ತಪ್ಪಿಗೆ ಶಿಕ್ಷೆಯಾಗಲು, ತಿಂಗಳುಗಳೇನು, ವರ್ಷಗಳೇ ಹಿಡಿಯುತ್ತದೆ. ಶಿಕ್ಷೆಯ ಪ್ರಮಾಣ ಎಲ್ಲೆಡೆ ಒಂದೇ ಆಗಿರುವುದಿಲ್ಲ. ಕೆಲವೆಡೆ ಶಿಕ್ಷೆಯೇ ಆಗದಿರುವುದೂ ಉಂಟು. ಕೆಲವು ದೇಶಗಳಲ್ಲಿ ಆಕ್ರಮಣ ಮಾಡಿದವರನ್ನು ಬಂಧಿಸಿ, ವಿಚಾರಣೆ ಮಾಡಿ, ಶಿಕ್ಷೆಗೆ ಗುರಿಪಡಿಸುವ ವ್ಯವಸ್ಥೆಯೇ ಇದ್ದಂತೆ ಕಂಡುಬರುವುದಿಲ್ಲ. ಎಷ್ಟೋ ವೇಳೆ ಅಪರಾಧ ಮಾಡಿದವರು ನಮ್ಮೆದುರೇ ಹಾಯಾಗಿ ಬದುಕುತ್ತಿರುತ್ತಾರೆ. ಅಂದಮೇಲೆ ಇಂದಿನ ಕಾನೂನಿನಡಿಯಲ್ಲಿ ಶಿಕ್ಷೆಯಿಂದ ಆಕ್ರಮಣವನ್ನು ತಡೆಯಬಹುದು ಎನ್ನುವ ಮಾತಿಗೆ ಬೆಲೆಯಿಲ್ಲ. ಇಂದಿನವರೆಗೆ ಶಿಕ್ಷೆ ಹಿಂಸಾಚಾರವನ್ನು ತಡೆಯುವಲ್ಲಿ ಪರಿಣಾಮಕಾರಿಯಾದಂತೆ ಕಂಡುಬಂದಿಲ್ಲ. ಹೀಗೆ ನಡೆದರೆ, ಇನ್ನು ಮುಂದೆ ಕೂಡ ಅದು ಪರಿಣಾಮಕಾರಿಯಾಗುತ್ತದೆ ಎಂಬ ನಂಬಿಕೆಯೂ ಇಲ್ಲ. ಕೆಥಾರ್ಸಿಸ್ ಮತ್ತು ಇತರ ಸಿದ್ಧಾಂತಗಳು ಈ ಮೊದಲೇ ಸೂಚಿಸಿದಂತೆ ಅದುಮಿಟ್ಟ ಆಕ್ರಮಣ ಪ್ರವೃತ್ತಿಯನ್ನು ನಿರಪಾಯವಾದ ರೀತಿಯಲ್ಲಿ ಹೊರಹಾಕುವಂತೆ ಮಾಡುವುದು, ಅದನ್ನು ತಡೆಯುವ ಅಥವಾ ಅದರ ತೀವ್ರತೆಯನ್ನು ತಗ್ಗಿಸುವ, ಒಂದು ವಿಧಾನವೆಂಬುದು ಕೆಲವರ ನಂಬಿಕೆ. ಮಡುಗಟ್ಟಿದ ಕ್ರೋಧವನ್ನು ಕತ್ತಿವರಸೆ, ಕುಸ್ತಿ, ಮುಷ್ಟಿಕಾಳಗ, ಗೂಳಿಕಾಳಗ, ಬೇಟೆ, ಮುಂತಾದ ಆಟಪಾಟಗಳ ಮೂಲಕ ಹೊರಗೆಡವುದರಿಂದ ತಡೆಹಿಡಿಯಬಹುದೆಂಬುದು ಒಂದು ಹಳೆಯ, ವಿವಾದಾತ್ಮಕ ಸಿದ್ಧಾಂತ. ಇದನ್ನು ಭಾವ ವಿರೇಚನ (emotional catharsis) ಎಂದು ಕರೆಯಲಾಗಿದೆ. ಈ ಸಿದ್ಧಾಂತಕ್ಕೆ ಸಂಶೋಧನೆಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ. ಕೆಲವು ಸಂಶೋಧನೆಗಳು ಕೆಥಾರ್ಸಿಸ್ ಪ್ರಭಾವವನ್ನು ಸಂಪೂರ್ಣವಾಗಿ ನಿರಾಕರಿಸಿದರೆ, ಇನ್ನು ಕೆಲವು ಅದು ಅಲ್ಪಸ್ವಲ್ಪ ಪರಿಣಾಮ ಬೀರಬಹುದೆನ್ನುತ್ತವೆ. ಸಂಪ್ರಜ್ಞಾತ್ಮಕ ಸಿದ್ಧಾಂತಗಳು ನಿಮಗೆ ಕೋಪ ಬರುವಂತೆ ಮಾಡಿದವರು, ನಿಮ್ಮ ಬಳಿ ಬಂದು ಹಾಗೆ ಮಾಡಿದುದಕ್ಕೆ ನೇರವಾಗಿ, ಪ್ರಾಮಾಣಿಕವಾಗಿ, ಕಾರಣವನ್ನು ವಿವರಿಸಿ ಹೇಳಿ, ಕ್ಷಮೆ ಯಾಚಿಸಿದರೆ, ಕೋಪ ಶಮನವಾಗಿ ಆಕ್ರಮಣ ಮಾಡುವ ಸಾಧ್ಯತೆಗಳು ಕಡಮೆಯಾಗುವುದೆಂಬುದು ಸಂಪ್ರಜ್ಞಾತ್ಮಕ ಮನೋವಿಜ್ಞಾನಿಗಳ ಅಭಿಪ್ರಾಯ. ಉದಾಹರಣೆಗೆ, ನೀವು ಯಾವುದೋ ಒಂದು ಮುಖ್ಯ ಕಾರ್ಯಕ್ಕಾಗಿ ಒಬ್ಬರಿಗಾಗಿ ಕಾಯುತ್ತಿದ್ದೀರಿ; ಹತ್ತು ಗಂಟೆಗೆ ಬರುತ್ತೇನೆ ಎಂದು ಹೇಳಿದ್ದ ಅವರು ಹನ್ನೆರಡಾದರೂ ಬಂದಿಲ್ಲ. ನಿಮಗೆ ಕೋಪ ನೆತ್ತಿಗೇರಿದೆ. ಆಗ ಅವರು ಬಂದು ದಯವಿಟ್ಟು ಕ್ಷಮಿಸಿ, ಟ್ರಾಫಿಕ್ ಜಾಮ್ನಿಂದಾಗಿ ತಡವಾಯ್ತು, ಎಂದು ಹೇಳಿದರೆ, ನಿಮ್ಮ ಕೋಪ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಹೀಗೆ, ಕ್ಷಮಾಯಾಚನೆ ಆಕ್ರಮಣವನ್ನು ತಡೆಯುವಲ್ಲಿ ಪರಿಣಾಮಕಾರಿ ಎಂಬುದು ಕೆಲವರ ನಂಬಿಕೆ. ಒಬ್ಬ ಮಾದರಿ ವ್ಯಕ್ತಿ ಆಕ್ರಮಣ ಮಾಡುವುದನ್ನು ನೋಡಿದ ನಾವು ಅವನನ್ನು ಅನುಕರಿಸುವುದು ನಿಜವಾದರೆ, ಎಂತಹ ಉದ್ರೇಕ ಪರಿಸ್ಥಿತಿಯಲ್ಲೂ ಕೋಪಗೊಳ್ಳದ, ತಮ್ಮ ಮಾನಸಿಕ ಸಮತೋಲವನ್ನು ಕಳೆದುಕೊಳ್ಳದ, ಸ್ಥಿತಪ್ರಜ್ಞರನ್ನು ನೋಡಿದಾಗ, ಅವರಂತೆ ಇರಲು ಪ್ರಯತ್ನ ಮಾಡುವ ಸಾಧ್ಯತೆಗಳಿಲ್ಲವೆ? ಹಾಗಾಗುವ ಸಾಧ್ಯತೆಗಳು ಇವೆ ಎನ್ನುತ್ತಾರೆ ಮನೋವಿಜ್ಞಾನಿಗಳು. ಎಂಥ ಸಂದರ್ಭಗಳಲ್ಲೂ ಉದ್ವಿಗ್ನಗೊಳ್ಳದ ಶಾಂತಚಿತ್ತರೊಡನೆ ಬೆಳೆಯುತ್ತ ಕಾಲಕಳೆದ ಮಕ್ಕಳು ಹಿಂಸಾಚಾರದಲ್ಲಿ ಪಾಲ್ಗೊಳ್ಳುವುದು ಕಡಮೆ ಎಂಬುದು ತಿಳಿದುಬಂದಿದೆ. ಅಂದಮೇಲೆ, ಶಾಂತ ಕುಟುಂಬಗಳಲ್ಲಿ ಬೆಳೆದ ಮಕ್ಕಳು ಹಿಂಸಾಚಾರದಲ್ಲಿ ತೊಡಗುವುದು ಕಡಿಮೆಯೆಂದಾಯ್ತು. ಆಕ್ರಮಣವನ್ನು ತಡೆಹಿಡಿಯಲು ಒಂದು ವಿಶಿಷ್ಟ ಮನೋವೈಜ್ಞಾನಿಕ ಸೂತ್ರವನ್ನು ಉಪಯೋಗಿಸಿಕೊಳ್ಳಬಹುದು. ಯಾರಾದರೂ ದ್ವೇಷ ಮತ್ತು ಪ್ರೀತಿ ಎರಡನ್ನು ಒಂದೇ ಕಾಲದಲ್ಲಿ ಪ್ರಕಟಿಸುವುದು ಕಷ್ಟ. ಸುಖ ಮತ್ತು ದುಃಖ ಎರಡನ್ನು ಒಟ್ಟಿಗೆ ಅನುಭವಿಸುವುದು ಸಾಧ್ಯವಿಲ್ಲ. ಹೀಗೆ ಪರಸ್ಪರ ವಿರೋಧವಾಗಿರುವ ಎರಡು ಸಂವೇಗಗಳನ್ನು (emotions) ಒಟ್ಟಿಗೆ ಒಂದೇ ಬಾರಿ ಅನುಭವಿಸುವುದು ಅಥವಾ ಎರಡು ವಿರುದ್ಧವಾದ ಪ್ರತಿಕ್ರಿಯೆಗಳನ್ನು ಏಕ ಕಾಲದಲ್ಲಿ ಪ್ರದರ್ಶಿಸುವುದು ಕಷ್ಟ. ಈ ಸೂತ್ರವನ್ನು ಆಕ್ರಮಣಶೀಲತೆಯನ್ನು ನಿಯಂತ್ರಿಸುವ ಕಾರ್ಯದಲ್ಲಿ ಉಪಯೋಗಿಸಬಹುದು. ಕೋಪೋದ್ರೇಕಗೊಂಡವರಲ್ಲಿ ಸಹಾನುಭೂತಿಯನ್ನುಂಟು ಮಾಡಿದರೆ, ಹಿತಕರವಾದ ಪರಿಸರದಲ್ಲಿ ಹಾಸ್ಯಪೂರ್ಣ ಅನುಭವವಾಗುವಂತೆ ಮಾಡಿದರೆ, ಅವರಲ್ಲಿ ಹಿಂಸ್ರ ಪ್ರವೃತ್ತಿ ಇಳಿಮುಖವಾಗುವುದು ಕಂಡುಬಂದಿದೆ. ನಮ್ಮಲ್ಲಿ ಹಿರಿಯರು ಹೇಳುವ ಈ ಮಾತನ್ನು ಗಮನಿಸಿ: ಯಾರನ್ನಾದರೂ ಹೊಡೆಯಬೇಕೆನಿಸಿದರೆ, ಹತ್ತರವರೆಗೆ ಎಣಿಸಿ, ನಂತರ ಹೊಡೆ. ಅಂದರೆ, ನಮ್ಮವರಿಗೆ ಈ ಮನೋವೈಜ್ಞಾನಿಕ ಸೂತ್ರ ಆಗಲೇ ತಿಳಿದಿತ್ತು. ಸಾಮಾಜಿಕ ಕೌಶಲಗಳ ತರಬೇತಿ ಇಂದು ನಾವಿರುವ ಸಮಾಜ ಬಹಳ ವೇಗವಾಗಿ ಸಾಗುತ್ತಿದೆ, ಬದಲಾಗುತ್ತಿವೆ. ಆಗುತ್ತಿರುವ ಬದಲಾವಣೆಗಳೆಲ್ಲಾ ಒಳ್ಳೆಯವೆಂದು ಹೇಳಬರುವುದಿಲ್ಲ. ಆಧುನಿಕ ಸಮಾಜ ಬಹಳಷ್ಟುಮಟ್ಟಿಗೆ ಆರ್ಥಿಕ ತಳಪಾಯದ ಮೇಲೆ ನಿಂತಿದೆ. ಹಣ ಆಸ್ತಿಯ ಪ್ರಭಾವ ಹೆಚ್ಚಾಗಿ, ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ನೀವೇನು? ಎನ್ನುವುದಕ್ಕಿಂತ ನಿಮ್ಮಲ್ಲೇನಿದೆ? ಎಂಬುದು ನಮ್ಮ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ ಅಳತೆಗೋಲಾಗಿದೆ. ಇಂದು ಜನರಿಗೆ ಬೇರೆಯವರೊಡನೆ ಹೇಗೆ ವ್ಯವಹರಿಸಬೇಕು ಎಂಬುದರ ಪೂರ್ಣ ತಿಳಿವಳಿಕೆ ಇದ್ದಂತೆ ಕಾಣುವುದಿಲ್ಲ. ಇತರರೊಡನೆ ಹೇಗೆ ಮಾತನಾಡಬೇಕು ಎಂಬ ಅರಿವು ಎಲ್ಲರಲ್ಲೂ ಇದ್ದಂತಿಲ್ಲ; ಬೇರೆಯವರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ತಾಳ್ಮೆ ಕೂಡ ಕಡಿಮೆ. ಇತರರ ಆಂತರಿಕ ಭಾವನೆಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ಹೇಗೆ ಸ್ಪಂಧಿಸಬೇಕೆನ್ನುವ ತಿಳಿವಳಿಕೆಯ ಅಭಾವವಿದೆ. ದುಃಖಿತರಿಗೆ ಸಮಾಧಾನ ಹೇಳಬೇಕು, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರಬೇಕು, ಸಾಧ್ಯವಿದ್ದಷ್ಟು ಸಹಾಯ ಮಾಡಬೇಕು, ಎನ್ನುವ ಮಾನವೀಯ ಮನೋವೃತ್ತಿ ಅಪರೂಪವಾಗುತ್ತಿದೆ. ಇತರರ ಸ್ನೇಹವನ್ನು ಗಳಿಸಬೇಕು, ಇರುವ ಸ್ನೇಹಿತರನ್ನು ಉಳಿಸಿಕೊಳ್ಳಬೇಕು ಎನ್ನುವ ಪ್ರಯತ್ನಗಳು ಕಡಮೆಯಾಗುತ್ತಿವೆ. ನೆರೆಹೊರೆಯವರು ನಮ್ಮನ್ನು ಶೋಷಣೆ ಮಾಡಬಹುದೆಂಬ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ, ಸಾಧ್ಯವಾದಷ್ಟು ಮಟ್ಟಿಗೆ ಇತರರನ್ನು ದೂರವಿಡಬೇಕೆನ್ನುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಕಡಿಮೆಯಾಗುತ್ತಿದೆ. ಬೇರೆಯವರೊಡನೆ ಬೆರೆತು ಸುಮಧುರ ಸಂಬಂಧವನ್ನು ಬೆಳೆಸಿಕೊಳ್ಳಲು ಅವಶ್ಯಕವಿರುವ ಚಟುವಟಿಕೆಗಳನ್ನು ಸಮಾಜಿಕ ಕೌಶಲಗಳೆಂದು (social skills) ಕರೆಯಲಾಗಿದೆ. ಇಂತಹ ಸಮಾಜಪರವಾದ ಚಟುವಟಿಕೆಗಳನ್ನು ಬೆಳೆಸಿಕೊಂಡ ಜನ ತಾವು ಸಂತೋಷವಾಗಿದ್ದು, ಇತರರನ್ನು ಸಂತೋಷಗೊಳಿಸುವ ಸಾಧ್ಯತೆಗಳು ಹೆಚ್ಚು. ಇಂದು ಸಮಾಜಿಕ ಕೌಶಲಗಳನ್ನು ಮಕ್ಕಳಿಗೆ ಕಲಿಸುವ ಶಿಬಿರಗಳು ತಲೆ ಎತ್ತುತ್ತಿರುವುದು ಶುಭಸೂಚನೆ. ಹೀಗೆ ತರಬೇತಿ ಪಡೆದ ಮಕ್ಕಳು ಹಿಂಸಾಚಾರದಲ್ಲಿ ತೊಡಗುವ ಸಂಭವ ಕಡಿಮೆ ಎಂದು ಸಂಶೋಧನೆಗಳು ತಿಳಿಸಿವೆ. ಸಮಾಜದಲ್ಲಿ ಜನರು ಶಾಂತಿ, ಸಮಾಧಾನ, ಸುಖ, ಸಂತೋಷಗಳಿಂದ ಬದುಕಬೇಕಾದರೆ ಏನು ಮಾಡಬೇಕು ಎಂಬುದನ್ನು ಕಂಡುಕೊಳ್ಳಲು, ಬ್ರಿಟನ್ ದೇಶದಲ್ಲಿ ಒಂದು ಮಹತ್ತರವಾದ ಸಂಶೋಧನೆ 70 ವರ್ಷಗಳ ಹಿಂದೆ ಆರಂಭವಾದದ್ದು ಇನ್ನೂ ನಡೆಯುತ್ತಿದೆ. ಅದಕ್ಕಾಗಿ ಹಲವಾರು ತಲೆಮಾರಿಗೆ ಸೇರಿದ ಸುಮಾರು 70,000 ಸಾವಿರ ವ್ಯಕ್ತಿಗಳನ್ನು ಹುಟ್ಟಿದಂದಿನಿಂದ ಸಾಯುವವರಗೆ ಅಧ್ಯಯನ ಮಾಡಲಾಗುತ್ತಿದೆ. ಈ ಸಂಶೋಧನೆಯಿಂದ ತಿಳಿದುಬಂದ ಒಂದು ಮುಖ್ಯ ವಿಷಯವೆಂದರೆ: ಸುಖಜೀವನಕ್ಕೆ ಬೇಕಾದ ಪ್ರಮುಖ ವಸ್ತು ಮಾನವೀಯ ಸಂಬಂಧಗಳು ಎಂಬುದು. ಅಂದರೆ, ನಿಮ್ಮ ಸಂತೋಷ, ನಿಮ್ಮ ಆಸ್ತಿ, ಅಂತಸ್ತು, ಸ್ಥಾನಮಾನಗಳನ್ನು ಅವಲಂಬಿಸಿರುವುದಿಲ್ಲ. ಅದು ನಿಂತಿರುವುದು ನೀವು ನಿಮ್ಮ ಪರಿಸರದಲ್ಲಿರುವ ಜನರೊಡನೆ - ಹೆಂಡತಿ-ಮಕ್ಕಳು, ತಂದೆ-ತಾಯಿ, ಬಂದು-ಬಳಗ, ಸ್ನೇಹಿತರು, ನೆರೆಹೊರೆಯವರು, ಮೇಲಧಿಕಾರಿಗಳು, ನಿಮ್ಮ ಕೈಕೆಳಗಿನವರು, ಇತ್ಯಾದಿ - ಹೇಗೆ ವರ್ತಿಸುತ್ತಿರುವಿರಿ, ಅವರೊಡನೆ ನಿಮ್ಮ ಸಂಬಂಧ ಎಂತಹದು, ಎನ್ನುವುದರ ಮೇಲೆ. ನಿಮ್ಮ ಸಂತೋಷವನ್ನು ನಿರ್ಧರಿಸುವ ಪ್ರಮುಖ ಘಟಕ ಮಾನವೀಯ ಸಂಬಂಧಗಳೆಂದು ಈ ಸಂಶೋಧನೆ ಸಾರಿ ಹೇಳುತ್ತಿದೆ. ಅಂದಮೇಲೆ ಪರಸ್ಪರ ಸಂಬಂಧಗಳು (interpersonal relations) ಉತ್ತಮವಾಗಿದ್ದರೆ, ಅಲ್ಲಿ ಹಿಂಸಾಚಾರ ಅಥವಾ ಆಕ್ರಮಣಕ್ಕೆ ಅವಕಾಶವಾದರೂ ಎಲ್ಲಿರುತ್ತದೆ ಹೇಳಿ? ಕೊನೆಯ ಮಾತು ಆಕ್ರಮಣ ಪ್ರವೃತ್ತಿಯಾಗಲಿ, ಹಿಂಸಾಚಾರವಾಗಲಿ, ಎಲ್ಲರಲ್ಲೂ, ಎಲ್ಲಾ ಸಂದರ್ಭಗಳಲ್ಲೂ, ಒಂದೇ ಕಾರಣದಿಂದ ಉದ್ಭವವಾಗುತ್ತದೆಂದು ಹೇಳಲಾಗುವುದಿಲ್ಲ. ಆಕ್ರಮಣ ಪ್ರವೃತ್ತಿಗೆ ಕಾರಣಗಳು ಹಲವಾರು. ಹಿಂಸಾಚಾರ ಜೀವಿಗಳ ವರ್ತನೆಗೆ ಸಂಬಂಧಿಸಿದ ವಿಷಯ; ನಿರ್ಜೀವಿಗಳದಲ್ಲ. ಮನೋವಿಜ್ಞಾನದ ವಿಷಯಗಳನ್ನು ಭೌತಿಕ ನಿಯಮಗಳ ಮೂಲಕ ವಿವರಿಸುವುದು ಸಾಧ್ಯವಿಲ್ಲ. ಭೌತಶಾಸ್ತ್ರದ ಪ್ರಕಾರ, ಒಂದು ಕಾರ್ಯಕ್ಕೆ ಎಲ್ಲ ಸನ್ನಿವೇಶಗಳಲ್ಲೂ ಒಂದೇ ಕಾರಣವಿರುತ್ತದೆ. ಇದೇ ನಿಯಮವನ್ನು ಮನೋವಿಜ್ಞಾನದ ವಿಷಯಗಳಿಗೆ ಅನ್ವಯಿಸಲಾಗುವುದಿಲ್ಲ. ಇಲ್ಲಿ ಒಂದೇ ಕಾರ್ಯಕ್ಕೆ ಹಲವು ಕಾರಣಗಳಿರಬಹುದು. ಒಂದೇ ಕಾರಣ ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಪ್ರತಿಕ್ರಿಯೆಗಳನ್ನು ಹುಟ್ಟಿಸಬಹುದು. ಒಂದೇ ಪ್ರಚೋದನೆ ಬೇರೆ ಬೇರೆ ವ್ಯಕ್ತಿಗಳಲ್ಲಿ ಬೇರೆ ಬೇರೆ ವರ್ತನೆಗಳನ್ನು ಹೊರತರಬಹುದು; ಒಂದೇ ಪ್ರಚೋದನೆ ಒಬ್ಬ ವ್ಯಕ್ತಿಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಪ್ರತಿಕ್ರಿಯೆಗಳನ್ನು ಹೊರಬೀಳಿಸಬಹುದು. ಹಾಗೆ, ಬೇರೆ ಬೇರೆ ಪ್ರಚೋದನೆಗಳು ಒಂದೇ ಪ್ರತಿಕ್ರಿಯೆಯನ್ನು ಹುಟ್ಟಿಸಬಹುದು. ಆದುದರಿಂದ, ವ್ಯಕ್ತಿ, ಸಮಯ, ಸಂದರ್ಭಗಳನ್ನು ನೋಡಿಕೊಂಡು ಹಿಂಸಾಚಾರಕ್ಕೆ ಕಾರಣಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಹಿಂಸಾಚಾರವನ್ನು ಸಂಪೂರ್ಣವಾಗಿ ತೊಡೆದುಹಾಕುವುದೂ ಕಷ್ಟವೆ. ಅದು ವಿಕಾಸ ನಮಗೆ ಕೊಟ್ಟರುವ ಬಳುವಳಿ. ಪ್ರಾಣಿಗಳು ಉಳಿಯಬೇಕಾದರೆ ಹೊಡೆದಾಡಲೇಬೇಕು. ಮಾನವನೂ ಒಂದು ಪ್ರಾಣಿಯಾದ್ದರಿಂದ ಅದೇ ಗುಣ ಅವನಲ್ಲೂ ಉಳಿದುಬಂದಿದೆ. ಈ ದೃಷ್ಟಿಯಿಂದ ನೋಡಿದರೆ, ಮಾನವ ಪಳಗಿಸಿದ ಪ್ರಾಣಿ (domesticated animal). ಸಮಾಜ ಅವನನ್ನು ಪಳಗಿಸಿದೆ. ಸಮಾಜದ ಕಟ್ಟುಪಾಡುಗಳಿಲ್ಲದಿದ್ದರೆ ಅವನು ಏನೇನು ಮಾಡುತ್ತ್ತಿದ್ದ ಎಂಬುದನ್ನು ಊಹಿಸುವುದು ಕೂಡ ಸಾಧ್ಯವಿಲ್ಲ. ತಮ್ಮಲ್ಲಿರುವ ಪ್ರಾಣಿ ಸಹಜವಾದ ಗುಣಗಳನ್ನು ನಿಯಂತ್ರಣದಲ್ಲಿಡುವುದಕ್ಕಾಗಿಯೇ ಮಾನವರು ಸಮಾಜವನ್ನು ನಿರ್ಮಿಸಿಕೊಂಡರು ಎನ್ನುವ ಅಭಿಪ್ರಾಯವಿದೆ. ಸಮಾಜ ಒಂದು ವ್ಯವಸ್ಥೆ. ಅದಕ್ಕೆ ಕೆಲವು ರೀತಿ, ನೀತಿ, ನಿಯಮಗಳಿವೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದೆಂಬುದು ಬಹು ಮುಖ್ಯವಾದ ಸಾಮಾಜಿಕ ನಿಯಮ. ಆದುದರಿಂದ ಮಾನವನಿಗೆ ಅಂಟಿಕೊಂಡಿರುವ ಆಕ್ರಮಣ ಶೀಲತೆಯನ್ನು ಏನಾದರೂ ಮಾಡಿ ತೊಡೆದುಹಾಕಬೇಕು. ಹಾಗಾಗಬೇಕಾದರೆ ಮಾನವರನ್ನು ಶಾಂತ ಪರಿಸರಿದಲ್ಲಿ ಬೆಳೆಸಬೇಕು. ಕುಟುಂಬದಲ್ಲಿ, ನೆರೆಹೊರೆಯಲ್ಲಿ, ಶಾಂತ ಸ್ವಭಾವದಿಂದ ವರ್ತಿಸುವ ವ್ಯಕ್ತಿಗಳು ಅವನಿಗೆ ಮಾದರಿಯಾಗಬೇಕು. ಆಗಾಗ್ಗೆ ಅವನಲ್ಲಿ ಹೆಪ್ಪುಗಟ್ಟಿರುವ ಆಕ್ರಮಣಕಾರಿ ಶಕ್ತಿಯನ್ನು ಪರೋಕ್ಷವಾಗಿಯಾದರೂ ಪ್ರದರ್ಶಿಸಲು ಏನಾದರು ಅವಕಾಶ ಮಾಡಿಕೊಡಬೇಕು. ಈ ರೀತಿಯಲ್ಲಿ ಆಲೋಚಿಸಿದಾಗ, ಫ್ರಾಯ್ಡ್ ಮತ್ತು ಲೊರೆನ್ಜ್ ಹೇಳಿದ ಮಾತುಗಳಲ್ಲಿ ಕೊಂಚ ಸತ್ಯ ಇರುವುದು ಕಂಡುಬರುತ್ತದೆ. ಗ್ರಂಥ ಋಣ
ಎಂ. ಬಸವಣ್ಣ ನಿವೃತ್ತ ಮನೋವಿಜ್ಞಾನ ಪ್ರಾಧ್ಯಾಪಕರು, ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|