Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ಸಮಾಜ ಸೇವೆಯಲ್ಲಿ ನನ್ನ ಅನುಭವಗಳು

7/6/2017

0 Comments

 
ಸಮಾಜ ಸೇವೆಯಲ್ಲಿ ನನ್ನ ಅನುಭವಗಳ ಬಗ್ಗೆ ಒಂದು ಲೇಖನ ಬೇಕೆಂದು ಕೇಳಿ ಶ್ರೀಮತಿ ಅನಿತ ಅವರು ದೂರವಾಣಿಯಲ್ಲಿ ಕರೆ ಮಾಡುವುದಕ್ಕೆ ಕೆಲವು ನಿಮಿಷಗಳ ಮೊದಲು ನನ್ನ ಮೊಬೈಲ್ ಫೋನ್‍ನಲ್ಲಿ ಒಂದು ಕರೆ ಬಂದಿತ್ತು. ಹೆಣ್ಣು ಧ್ವನಿಯೊಂದು ಕೇಳಿತ್ತು "ನೀವು ಒಂಟಿತನದಿಂದ ಬಳಲುತ್ತಿದ್ದೀರಾ?", ಎಂದು. ತಕ್ಷಣ "ಇಲ್ಲ" ಎಂದು ಹೇಳಿ ಅವಳ ಕರೆಯನ್ನು ಮುಗಿಸಿದ್ದೆ.
​

ಪ್ರೀತಿ ವಿಶ್ವಾಸದಿಂದ ಬದುಕಿನ ಏರುಪೇರುಗಳಲ್ಲಿ ಬೆಂಬಲವಾಗಿರುವ ನನ್ನ ಕುಟುಂಬ ಮತ್ತು ಬಂಧು ಮಿತ್ರರೊಡನೆ ಇರುತ್ತಿರಲಿಲ್ಲವಾದರೆ, ನನ್ನ ಉತ್ತರ "ಹೌದು" ಎಂದಾಗುತ್ತಿತ್ತೊ ಏನೊ. ಹಣ ಕೊಟ್ಟು ಸ್ನೇಹಜಾಲಗಳ ಸದಸ್ಯನಾಗಿ ಗೆಳೆತನವನ್ನು ಕೊಂಡುಕೊಳ್ಳುತ್ತಿದ್ದೆನೇನೊ. ನಮ್ಮ ಮನೆಯ ಎದುರಿನಲ್ಲಿದ್ದ ಆಟದ ಮೈದಾನದಲ್ಲಿ, ಬೆಂಗಳೂರು ಮಹಾನಗರ ಪಾಲಿಕೆಯು, ಕೆಳ ಸೇತುವೆ ನಿರ್ಮಿಸುವಾಗ ಉಂಟಾದ ಕಲ್ಲು ಮಣ್ಣುಗಳ ತ್ಯಾಜ್ಯವನ್ನು ಸುರಿದಿದ್ದರು. ಅದನ್ನು ನೋಡಿ ಖಾಸಗಿ ಕಟ್ಟಡಗಳ ಅವಶೇಷಗಳೂ ಅಲ್ಲಿ ಹಾಕಲ್ಪಟ್ಟಿದ್ದವು. ಜೊತೆಗೆ ಕೆಲವರು ಕಸದ ರಾಶಿಯನ್ನೂ ಅಲ್ಲಿ ಹಾಕಿ, ಸೊಳ್ಳೆಗಳ ಕಾಟ ಮತ್ತು  ದುರ್ಗಂಧದಿಂದ ಸುತ್ತುಮುತ್ತಲಿನ ಜನ ಕಂಗಾಲಾಗಿದ್ದರು. ಅವರುಗಳ ದೂರು ಅಧಿಕಾರಿಗಳ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ಸತತ ಎರಡು ವರ್ಷಗಳ ಕಾಲ, ಪತ್ರಗಳ ಮೂಲಕ, ಪತ್ರಿಕೆಗಳಲ್ಲಿ ಲೇಖನ ಬರೆದು, ಚಿತ್ರಗಳನ್ನು ಪ್ರಕಟಿಸಿ, ಅಧಿಕಾರಿಗಳನ್ನು ಭೇಟಿ ಮಾಡಿ, ಕಡೆಗೆ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸಹಾಯದಿಂದ, ನಗರ ಪಾಲಿಕೆಯಿಂದ, ಮೈದಾನವನ್ನು ಸ್ವಚ್ಛಗೊಳಿಸಿ ಅಲ್ಲಿ ಉದ್ಯಾನವನ್ನು ಮಾಡಿಸುವಲ್ಲಿ ಫಲಪ್ರದನಾದೆ. ಇದನ್ನು ನೋಡಿ ನೆರೆಹೊರೆಯ ನಿವಾಸಿಗಳು, ಈ ಕ್ಷೇತ್ರದ ಅಭಿವೃದ್ಧಿಗೆ ಒಂದು ಸಂಘವನ್ನು ನೋಂದಾಯಿಸಿಕೊಂಡರು. ಈಗ ಇಲ್ಲಿನ ಹಿರಿಯ ನಾಗರಿಕರಿಗೆ, ಅದರಲ್ಲೂ ಸ್ತ್ರೀಯರಿಗೆ, ಬೆಳಿಗ್ಗೆ, ಸಂಜೆ ವಾಯುವಿಹಾರದ ತಾಣವಾಗಿದೆ-ಈ ಉದ್ಯಾನವನ.
ಒಂಟಿತನ, ಕಲುಷಿತ ಪರಿಸರ ಮುಂತಾದ ನಾನಾ ಸಮಸ್ಯೆಗಳು ಈಗಿನ ಸಮಾಜವನ್ನು ಕಾಡುತ್ತಿದೆ. ಇವುಗಳಿಗೆ ಸ್ಪಂದಿಸಿ, ಅವುಗಳ ನಿವಾರಣೆಗೆ ಪ್ರಯತ್ನ ಮಾಡುವುದೇ ಸಮಾಜಸೇವೆ. ಸಮಾಜಸೇವೆ, ಅನೌಪಚಾರಿಕವಾಗಿರಬಹುದು, ವ್ಯವಸ್ಥಿತವಾಗಿರಬಹುದು, ವೈಯುಕ್ತಿಕವಾಗಿರಬಹುದು, ಸಂಘಟಿತವಾಗಿರಬಹುದು, ಧರ್ಮಪ್ರೇರಿತವಾಗಿರಬಹುದು ಇಲ್ಲವೆ ವೃತ್ತಿಪರವಾಗಿರಬಹುದು. ನಾನು ಸಮಾಜಸೇವೆಯಲ್ಲಿ ತೊಡಗಿಕೊಳ್ಳುತ್ತೇನೆಂದು ಅಂದುಕೊಂಡಿರಲಿಲ್ಲ. ಆದರೆ ನನ್ನ ಶಾಲಾ ಕಾಲೇಜು ದಿನಗಳು ಆಧುನಿಕ ಭಾರತದ ಇತಿಹಾಸದ ಅಪೂರ್ವ ದಿನಗಳು, ಮಹಾತ್ಮಾ ಗಾಂಧಿ, ಗೋಖಲೆ, ತಿಲಕ್, ನೆಹರೂ, ಪಟೇಲ್, ಸುಭಾಷ್ ಚಂದ್ರ ಬೋಸ್ ಅವರುಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮ, ವಿಧವಾ ವಿವಾಹ, ಅಸ್ಪೃಶ್ಯತಾ ನಿವಾರಣೆ ಮುಂತಾದ ಸಾಮಾಜಿಕ ಕ್ರಾಂತಿ, ಜಗತ್ತನ್ನೇ ಆಳುತ್ತೇನೆ ಎಂದು ಹೊರಟಿದ್ದ ಹಿಟ್ಲರನ ವಿರುದ್ಧ ಜರುಗಿದ ಎರಡನೆಯ ವಿಶ್ವಯುದ್ಧ, ಈ ಆಗು ಹೋಗುಗಳೆಲ್ಲ, ನಮ್ಮ ಮೇಲೆ ಪರಿಣಾಮ ಬೀರದೆ ಇರಲಿಲ್ಲ. ಹರಿಜನ ಸೇವಾ ಸಂಘದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮತ್ತು ಗಾಂಧೀಜಿ, ಗೋಖಲೆ ಮುಂತಾದವರ ವಿಚಾರಗಳಲ್ಲಿ ನನಗೆ ಮನದಟ್ಟು ಮಾಡಿಸುತ್ತಿದ್ದ ನಮ್ಮ ತಂದೆಯವರ ಬದುಕೂ ನನ್ನ ಮೇಲೆ ಪ್ರಭಾವ ಬೀರಿತ್ತು.

ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಸ್ಕೌಟ್, ರೋವರ್ ಯೂನಿವರ್ಸಿಟಿ ಟ್ರೈನಿಂಗ್ ಕೋರ್ಸ್ (ಸೈನ್ಯದ ತರಬೇತಿ) ಮತ್ತು ಇಂಡಿಯನ್ ಏರ್ ಟ್ರೈನಿಂಗ್ ಕೋರ್ಸ್ (ವೈಮಾನಿಕ ತರಬೇತಿ) , ಕೊಕೊ, ಕ್ರಿಕೆಟ್, ಟೆನ್ನಿಸ್ ಆಟಗಳು, ಸಂಘಜೀವನದ ಪ್ರಾಮುಖ್ಯತೆಯನ್ನು ತೋರಿಸಿಕೊಟ್ಟಿದ್ದುವು.

ಮೈಸೂರು ಮಹಾರಾಜ ಕಾಲೇಜಿನಲ್ಲಿ 1947 ರಲ್ಲಿ ಬಿ.ಎ. (ಆನರ್ಸ್) ಸೋಶಿಯಲ್ ಫಿಲಾಸೊಫಿ ವ್ಯಾಸಂಗವನ್ನು ಮುಗಿಸಿ ಡಿಮ್ ಪದವಿಗೋಸ್ಕರ "ಫಿಲಾಸೊಫಿ ಆಫ್ ರೆವಲ್ಯೂಷನ್" ಎಂಬ ಪ್ರಬಂಧವನ್ನು (ಥೀಸಿಸ್) ಡಾ. ಟಿ.ಎ. ಪುರುಶೋತ್ತಮ್ ಅವರ ಮಾರ್ಗದರ್ಶನದಲ್ಲಿ ರಚಿಸುತ್ತಿರುವಾಗ, ಜೀವನೋಪಾಯಕ್ಕಾಗಿ ವ್ಯಾಸಂಗವನ್ನು ಬಿಟ್ಟು, ಹಾಸನ್ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ಹಂಗಾಮಿ ಲಾಜಿಕ್ ಲೆಕ್ಚರರ್ ಕೆಲಸಕ್ಕೆ ಸೇರಿದೆ. 1948 ರಲ್ಲಿ ಆ ಸಮಯದಲ್ಲಿ ನನ್ನ ಹಿತೈಶಿಯೊಬ್ಬರ ಸಲಹೆಯಂತೆ ಬೊಂಬಾಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ಗೆ (ಟಿಸ್) ಪ್ರವೇಶ ಪಡೆದೆ. ಆ ಸಂಸ್ಥೆಯಲ್ಲಿ ಆಗಿದ್ದ ಭಾರತದ ವಿವಿಧ ರಾಜ್ಯಗಳಿಂದ ತಲಾ ಇಬ್ಬರಿಗೆ ಪ್ರವೇಶ ದೊರೆಯುತ್ತಿತ್ತು. ಆದ್ದರಿಂದ ಅಲ್ಲಿನ ವ್ಯಾಸಂಗ ಕಾಲದಲ್ಲಿ ದೇಶದ ವಿವಿಧ ಸಂಸ್ಕೃತಿಗಳ, ಜೀವನ ಶೈಲಿಗಳ ಮತ್ತು ಭಾಷೆಗಳ ಪರಿಚಯವಾಯಿತು. ಪಠ್ಯಪುಸ್ತಕಗಳು ಬಹುತೇಕ ಅಮೆರಿಕ ಮತ್ತು ಇಂಗ್ಲೆಂಡ್ನ ತಜ್ಞರು ಬರೆದವುಗಳಾದರೂ, ನಮ್ಮ ಅಧ್ಯಾಪಕರು ವಿಷಯಗಳನ್ನು ನಮ್ಮ ದೇಶದ ಸನ್ನಿವೇಶಕ್ಕೆ ಸಂಬಂಧಿಸಿದಂತೆ ತಿಳಿಯ ಹೇಳುತ್ತಿದ್ದರು. ತರಗತಿಯ ಪಾಠದ ಜೊತೆಗೆ, ಸಮಾಜಕಾರ್ಯದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯರೂಪದ ತರಬೇತಿ ಕೊಡುತ್ತಿದ್ದರು. ಅವುಗಳಲ್ಲಿ ಹಾಸ್ಪಿಟಲ್ ಸೋಶಿಯಲ್ ವರ್ಕ್ ನನಗಿನ್ನೂ ನೆನಪಿದೆ. ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನನ್ನ ತರಬೇತಿ, ಆಗಾಗ್ಗೆ ಕ್ಯಾನ್ಸರ್ ರೋಗದಿಂದ ರಕ್ತಸ್ರಾವವಾಗುತ್ತಿದ್ದ ಸ್ತ್ರೀರೋಗಿಗೆ ಸೀರೆಗಳನ್ನು ಒದಗಿಸುವುದು, ಗಂಟಲು ಕ್ಯಾನ್ಸರ್ ರೋಗಿಗೆ ಹಣ್ಣುಗಳನ್ನು ಒದಗಿಸುವುದು ನಾನು ಮಾಡಬೇಕಿತ್ತು. ಅದಕ್ಕಾಗಿ ಜನರಿಂದ ಹಣ  ಪಡೆಯಬೇಕಿತ್ತು. ಒಂದಾದ ಮೇಲೆ ಇನ್ನೊಂದು ಆಸ್ಪತ್ರೆಗಳಲ್ಲಿ ಶುಶ್ರೂಷೆ ಪಡೆದು ವಾಸಿಯಾಗದೆ, ಕಡೆಗೆ ಅಂದರೆ 10 ವರ್ಷಗಳ ನಂತರ ಈ ಆಸ್ಪತ್ರೆಗೆ ಸೇರಿದ್ದ ರೋಗಿಯನ್ನು ಆತ್ಮಹತ್ಯೆ ಪ್ರಯತ್ನದಿಂದ ತಪ್ಪಿಸಲು ಸಲಹೆಕೊಡುವುದು. ಎಲ್ಲ ರೋಗಿಗಳೂ, ಡಾ. ಬೋರ್ಜರ್ಸ್ ಎಂಬ ವೈದ್ಯರಿಂದಲೇ ಶಸ್ತ್ರಚಿಕಿತ್ಸೆ ಪಡೆಯಬೇಕೆಂದು ಹಾತೊರೆಯುತ್ತಿದ್ದರು. ಯಾಕೆಂದರೆ ಅವರು ಬಹಳ ಪ್ರಸಿದ್ಧ ವೈದ್ಯರು. "ಇತರ ವೈದ್ಯರೂ ಪರಿಣಿತರು, ಅವರಿಂದ ಚಿಕಿತ್ಸೆ ಮಾಡಿಸಿಕೊಳ್ಳಿ, ಏಕೆಂದರೆ ಡಾ. ಬೋರ್ಜರ್ಸ್ ಅವರು ಅತಿ ತುರ್ತು ಸ್ಥಿತಿಯ ರೋಗಿಗಳನ್ನು ಚಿಕಿತ್ಸೆ ಮಾಡಬೇಕು" ಎಂದು ಹೇಳಿ ರೋಗಿಗಳನ್ನು ಒಪ್ಪಿಸುವುದು ಕೂಡ ನಾನು ಮಾಡುತ್ತಿದ್ದೆ.

 ಅಲ್ಲಿ ತರಬೇತಿ ಮುಗಿಸಿ, ಅಲ್ಲಿಗೆ ಹೋಗುವುದನ್ನು ಬಿಟ್ಟ ಮೇಲೆ, ಅಲ್ಲಿನ ಅಧಿಕಾರಿಯೊಬ್ಬರು ನನಗೆ ಹೇಳಿದರು "ರಕ್ತಸ್ರಾವವಾಗುತ್ತಿದ್ದ ಸ್ತ್ರೀ ರೋಗಿ ವಾಸಿಯಾಗಿ ಹಳ್ಳಿಗೆ ಹೋದಮೇಲೆ ಒಂದು ದಿನ ಅವಳ ಮನೆಯಲ್ಲಿ ಕಡೆದ ಬೆಣ್ಣೆಯನ್ನು ನಿನಗೆ ಕೊಡಲು ಬಂದಿದ್ದಳು" ಎಂದು. ಎಂತಹ ಕೃತಜ್ಞತೆ!

 ಟಿಸ್ ನ ಬಹುತೇಕ ವಿದ್ಯಾರ್ಥಿಗಳ ಗುರಿ, "ಸಿಬ್ಬಂದಿ ಆಡಳಿತ ಮತ್ತು ಕಾರ್ಮಿಕ ಹಿತ" (ಪರ್ಸನಲ್ ಮ್ಯಾನೇಜ್ಮೆಂಟ್ ಅಂಡ್ ಲೇಬರ್ ವೆಲ್ಫೇರ್) ಎಂಬ ವಿಷಯದಲ್ಲಿ ವಿಶಿಷ್ಟ ವ್ಯಾಸಂಗ ಮಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳಬೇಕೆಂಬುದು. ಅದರಂತೆ, ಡಿಪ್ಲೊಮೊ ಇನ್ ಸೋಶಿಯಲ್ ಸರ್ವೀಸ್ ಅಡಮಿನಿಸ್ಟ್ರೇಶನ್, ಎಂಬ ಪದವಿ ಪಡೆದೆ, ಟಿಸ್ನಲ್ಲಿ ಒಟ್ಟು 21/2 ವರ್ಷಗಳ ಕಾಲ ಇದ್ದಮೇಲೆ, 1951 ರಲ್ಲಿ.

 ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಸಿಗಲಿಲ್ಲ. ಆದರೆ, ಅದೇ ವರ್ಷ ಹೈದರಾಬಾದಿನಲ್ಲಿ ಜುವೆನೈಲ್ ಕೋರ್ಟಿನಲ್ಲಿ (ಬಾಲಾಪರಾಧಿಗಳ ನ್ಯಾಯಾಲಯ) ಪ್ರೊಬೇಶನ್ ಆಫೀಸಿನವನಾಗಿ ಕೆಲಸ ಸಿಕ್ಕಿತು. ಪೋಲೀಸರು, ಕಾನೂನು ವಿರುದ್ಧವಾಗಿ ನಡೆದ ಮಕ್ಕಳನ್ನು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಈ ನ್ಯಾಯಾಲಯಕ್ಕೆ ಕರೆದು ತರುತ್ತಿದ್ದರು. ಆ ಮಕ್ಕಳ ಕೌಟುಂಬಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ತಿಳಿದುಕೊಂಡು ಜುವೆನೈಲ್ ಕೋರ್ಟಿನ ಮಹಿಳಾ ನ್ಯಾಯಾಧೀಶರಿಗೆ ನಾನು ವರದಿ ಮಾಡಬೇಕಿತ್ತು. ನನ್ನ ವರದಿಯ ಆಧಾರದ ಮೇಲೆ, ನ್ಯಾಯಾಧೀಶರು ವಿಚಾರಣೆ ನಡೆಸಿ, ಆ ಮಕ್ಕಳನ್ನು ಅವರ ಪೋಷಕರಿಗೆ ಒಪ್ಪಿಸಬೇಕೋ ಇಲ್ಲವೆ ಅಂತಹ ಮಕ್ಕಳ ಸುಧಾರಣೆಗಾಗಿಯೇ ಇರುವ ಜುವೆನೈಲ್ ಹೋಮ್ಗೆ ಸೇರಿಸಬೇಕೊ ಎಂಬುದನ್ನು ನಿರ್ಧರಿಸುತ್ತಿದ್ದರು. ಪೋಷಕರಿಗೆ ಒಪ್ಪಿಸಿದ ಮಕ್ಕಳ ಮೇಲೆ ಕೊಂಚಕಾಲ ನಿಗಾ ಇಟ್ಟು, ನ್ಯಾಯಾಲಯಕ್ಕೆ ವರದಿ ಒಪ್ಪಿಸಬೇಕಿತ್ತು. ಜುವೆನೈಲ್ ಹೋಮಿನ ಚಟುವಟಿಕೆಗಳಲ್ಲಿ ಅಲ್ಲಿನ ಸೂಪರಿಂಟೆಂಡೆಂಟ್ಗೆ ಸಹಾಯ ಮಾಡಬೇಕಿತ್ತು. ಟಿಸ್ನಲ್ಲಿನ ಕ್ಷೇತ್ರಕಾರ್ಯ (ಫೀಲ್ಡ್ ವರ್ಕ್) ನನಗೆ ಒತ್ತಾಸೆಯಾಗಿತ್ತು. ಕೆಲಸ ಮನಸ್ಸಿಗೆ ತೃಪ್ತಿ ಕೊಡುತ್ತಿತ್ತು. ಆದರೆ, ಬೆಂಗಳೂರು ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ನಲ್ಲಿ ವೆಲ್ಫೇರ್ ಆಫೀಸರ್ ಆಗಿ ಆರಿಸಲ್ಪಟ್ಟಾಗ, ಕೈಗಾರಿಕಾ ಕ್ಷೇತ್ರದ ಸೆಳೆತ ನನ್ನನ್ನು ಬೆಂಗಳೂರಿಗೆ ಕರೆತಂದಿತು.

 ಸಾರ್ವಜನಿಕ ವಲಯದಲ್ಲಿ (ಪಬ್ಲಿಕ್ ಸೆಕ್ಟರ್) ಕೆಲವೇ ವರ್ಷಗಳ ಹಿಂದೆ, ಸ್ಥಾಪಿತವಾಗಿದ್ದ ಐ.ಟಿ.ಐ. ಅದಕ್ಕೆ ಮೊದಲೆ ಸ್ಥಾಪಿಸಲ್ಪಟ್ಟಿದ್ದ ಎಚ್.ಎ.ಎಲ್.ನಂತೆ ತಾನು ಉತ್ಪಾದಿಸುವ ಸರಕುಗಳ ಮೇಲೆ ಏಕಸ್ವಾಮಿತ್ಯ ಹೊಂದಿತ್ತು. (ಮೊನಾಪೊಲಿ) ಜತೆಗೆ ಸಾರ್ವಜನಿಕ ಉದ್ದಿಮೆಯಾದ್ದರಿಂದ, ಅದರ ಆದ್ಯತೆ ಲಾಭವಾಗಿರಲಿಲ್ಲ. ಆಗ, ಉದ್ಯೋಗ ಸೃಷ್ಟಿ, ಕಾರ್ಮಿಕರ ವೈಯುಕ್ತಿಕ ಮತ್ತು ಸಾಮಾಜಿಕ ಹಿತಕ್ಕೆ ಒತ್ತು, ಸುಮಾರು 15 ವರ್ಷಗಳ ಕಾಲ ಕೆಲಸ ಮಾಡಿ, ಆಗತಾನೆ ಮೈಸೂರು ರಾಜ್ಯಕ್ಕೆ ವಿಸ್ತರಿಸಲ್ಪಟ್ಟಿದ್ದ, ಫ್ಯಾಕ್ಟರೀಸ್ ಆಕ್ಟ್, ಪ್ರಾವಿಡೆಂಟ್ ಫಂಡ್ ಆಕ್ಟ್, ಇ.ಎಸ್.ಐ.ಆಕ್ಟ್ ಮುಂತಾದ ಕಾರ್ಮಿಕ ಸ್ನೇಹಿ ಕಾಯಿದೆಗಳನ್ನು ಕಾರ್ಖಾನೆಯಲ್ಲಿ ಕಾರ್ಯರೂಪಕ್ಕೆ ತಂದು, ಜತೆಗೆ ಕಾರ್ಮಿಕರ ವಸತಿಗಾಗಿ ದೂರವಾಣಿ ನಗರವನ್ನು ನಿರ್ಮಿಸಿ, ದೂರವಾಣಿ ನಗರ ವಿದ್ಯಾಮಂದಿರ, ಆಸ್ಪತ್ರೆ ಮುಂತಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದೆ. ಪ್ರಾಯೋಗಿಕವಾಗಿ, ಆಗ ಅಂಧ ಕೆಲಸಗಾರರನ್ನು ನೇಮಿಸಿಕೊಂಡೆವು. ಅವರಿಗೆ ಡೆಹರಾಡೂನ್ ಅಂಧರ ಶಾಲೆಯಲ್ಲಿ ಬೆತ್ತ ಹೆಣೆಯುವ ಕಸುಬಿನಲ್ಲಿ ತರಬೇತಿ ಕೊಟ್ಟಿದ್ದರು. ಆದರೆ, ಯಂತ್ರಗಳನ್ನು ಉಪಯೋಗಿಸುವುದನ್ನು ಅವರಿಗೆ ಹೇಳಿಕೊಟ್ಟು, ದೃಷ್ಟಿಯುಳ್ಳ ಕೆಲಸಗಾರರಂತೆ ಕೆಲಸ ಮಾಡಲು ನೇಮಿಸಿಕೊಂಡೆವು. ಈ ಪ್ರಯೋಗ ಫಲಪ್ರದವಾದ್ದರಿಂದ ಇನ್ನೂ ಮೂವತ್ತು ಅಂಧರಿಗೆ ಕೆಲಸ ಕೊಟ್ಟೆವು. ಅವರಲ್ಲಿ ಬಹಳ ಮಂದಿ ಮದುವೆ ಮಾಡಿಕೊಂಡು ಹೆಂಡತಿ ಮಕ್ಕಳ ಜತೆ ಬಾಳತೊಡಗಿದರು. ಖಾಸಗಿ ವಲಯದ  ಕಾರ್ಖಾನೆಯಲ್ಲಿ ಕೆಲಸ ಮಾಡಬೇಕೆಂದು 1967ರಲ್ಲಿ ಮೈಕೊಗೆ (ಮೋಟಾರ್ ಇಂಡಸ್ಟ್ರೀಸ್ ಕಂಪೆನಿ) ಸೇರಿದೆ. ಐಟಿಐ ಬಿಟ್ಟು ಹತ್ತು ವರ್ಷದ ಮೇಲೆ ನನ್ನ ಮಗನನ್ನು ಸೈಂಟ್ ಜೋಸೆಫ್ ಶಾಲೆಗೆ ಸೇರಿಸಬೇಕೆಂದು ಅಲ್ಲಿನ ಪ್ರಿನಿಪಾಲ್ ಅವರನ್ನು ನೋಡಲು ಹೋಗಿ ಕ್ಯೂನಲ್ಲಿ ನಿಂತಿದ್ದೆ. ನನ್ನ ಮುಂದೆ ಇದ್ದ ವ್ಯಕ್ತಿಯೊಡನೆ ಮಾತನಾಡುತ್ತಿದ್ದಾಗ, ದೂರದಿಂದ ಒಬ್ಬ ವ್ಯಕ್ತಿ ನನ್ನ ಹತ್ತಿರ ಬಂದ. ಆತ ಅಂಧ. "ಸಾರ್ ನೀವು ಶ್ರೀನಿವಾಸ್ ಮೂರ್ತಿಯವರಲ್ಲವೆ, ನಾನು ಮಾರ್ಗಬಂಧು ಸಾರ್. ನೀವು ನನಗೆ ಕೆಲಸ ಕೊಟ್ಟಿದ್ದಿರಿ, ಐ.ಟಿ.ಐ ನಲ್ಲಿ, ನನ್ನ ಮಗನ್ನ ಸ್ಕೂಲಿಗೆ ಸೇರಿಸೋಕೆ ಬಂದೆ ನಿಮ್ಮ ಧ್ವನಿ ಕೇಳಿ ನಿಮ್ಮನ್ನು ಮಾತನಾಡಿಸೋಣ ಅಂತ ಬಂದೆ" ಅಂದ. "ಎಂತಹ ಜ್ಞಾಪಕ ಶಕ್ತಿ, ಎಂತಹ ಪ್ರೀತಿ ವಿಶ್ವಾಸ" ಅಂದುಕೊಂಡೆ.

 ಖಾಸಗಿ ವಲಯದ ಉದ್ದಿಮೆಗಳ ಮುಖ್ಯ ಗುರಿ ಲಾಭ, ಪೈಪೋಟಿ, ಹೆಚ್ಚುತ್ತಿರುವ ಉತ್ಪಾದನ ವೆಚ್ಚ, ಮುಂತಾದ ಸವಾಲುಗಳನ್ನು ಎದುರಿಸಲು ಲಾಭ ಅನಿವಾರ್ಯ. (ಈಗ ಸಾರ್ವಜನಿಕ ವಲಯದ ಉದ್ದಿಮೆಗಳೂ ಲಾಭ ಮಾಡದಿದ್ದರೆ ಉಳಿಯುವುದಿಲ್ಲ) ಆದ್ದರಿಂದ ಮೈಕೊ, ಕೆಲಸಗಾರರಿಗೆ ಒಳ್ಳೆಯ ವೇತನ, ಉಚಿತ ಊಟದ ವ್ಯವಸ್ಥೆ, ಕಾನೂನು ಪ್ರಕಾರ ಕೊಡಲೇಬೇಕಾದ ಸೌಲಭ್ಯಗಳಿಗೆ ಮಾತ್ರ ಗಮನಕೊಟ್ಟಿತ್ತು. ಆದರೆ, ಆಡಳಿತ ವರ್ಗ ಮತ್ತು ಕಾರ್ಮಿಕ ನಡುವೆ ತೀವ್ರವಾದ ಕೆಲವು ಘರ್ಷಣೆಗಳು ನಡೆದಾಗ, ಕಾರ್ಮಿಕರ ಕೌಟುಂಬಿಕ ಹಿತಕ್ಕೂ ಗಮನಕೊಡುವುದು ಮುಖ್ಯ ಎಂಬ ಅರಿವು ಮೂಡಿತು.

 ಎಂ.ಎಸ್.ಡಬ್ಲ್ಯೂ ಪದವೀಧರೆಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತೆಯಾಗಿ ನೇಮಿಸಿಕೊಂಡು, ಕಾರ್ಮಿಕರ ಕುಟುಂಬಗಳಿಗೂ, ಸಂಸ್ಥೆಗೂ ಮಧುರ ಸಂಬಂಧ ಬೆಳೆಯಲು ಬೇಕಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡೆವು. ಕುಟುಂಬದ ಸದಸ್ಯರನ್ನು ವರ್ಷಕ್ಕೆ ಒಂದು ಸಲ ಆಹ್ವಾನಿಸಿ, ಕಾರ್ಖಾನೆಯ ವಿವಿಧ ಇಲಾಖೆಗಳನ್ನು ತೋರಿಸುವುದು, `ನಮ್ಕಂಪೆನಿ' ಎಂಬ ಕಾರ್ಮಿಕರಿಗೆ ಸಂಬಂಧಿಸಿದ ಮತ್ತು ಉಪಯೋಗವಾದಂತಹ ವಿಷಯಗಳನ್ನು ಕಾರ್ಮಿಕರ ಸಂಪಾದಕೀಯ ಸಹಾಯದಿಂದ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪ್ರಕಟಿಸುವುದು. ಕಾರ್ಮಿಕರ ಮಕ್ಕಳಿಗೆ ಕ್ರೀಡೆಗಳಲ್ಲಿ ತರಬೇತಿ, ಮದ್ಯವ್ಯಸನಿಗಳ ಸುಧಾರಣೆಗೆ `ಆಲ್ಕೋಹಾಲಿಕ್ ಅನಾನಿಮಸ್' ಕೂಟಗಳನ್ನು ಏರ್ಪಡಿಸುವುದು, ಕುಟುಂಬದ ಸಮಸ್ಯೆಗಳಲ್ಲಿ ಸಾಮಾಜಿಕ ಕಾರ್ಯಕರ್ತೆಯು ಸಹಾಯ ಮಾಡಬಲ್ಲವುದನ್ನು ಮಾಡುವುದು, ಈ ಕಾರ್ಯಕ್ರಮಗಳಲ್ಲಿ ಕೆಲವು... ಮೊಟ್ಟಮೊದಲು ನಾವು ನೇಮಿಸಿದ ರಾಧ ಎಂಬ ಎಂ.ಎಸ್.ಡಬ್ಲ್ಯೂ ಪದವೀಧರೆ, ಕಾರ್ಮಿಕರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಎಷ್ಟು ಜನಪ್ರಿಯರಾದರೆಂದರೆ, ಎಲ್ಲರೂ ಅವರನ್ನು `ಅಮ್ಮ' ಎಂದು ಕರೆಯತೊಡಗಿದರು. ಕಾರ್ಖಾನೆಯಲ್ಲಿ ಕೆಲಸದ ವೇಳೆ ಆಗುವ ಅಪಘಾತದಿಂದಾಗಲಿ, ದೈಹಿಕ ಕಾರಣದಿಂದಾಗಲಿ, ಕಾರ್ಮಿಕರು ತಾವು ಮಾಡುತ್ತಿದ್ದ ಕೆಲಸಕ್ಕೆ ಅನರ್ಹರಾದರೆ, ಅಂತಹವರನ್ನು ಸಾಧ್ಯವಾದಷ್ಟು ಮಟ್ಟಿಗೆ ಬೇರೆ ಕೆಲಸದಲ್ಲಿ ಉಪಯೋಗಿಸಲಿಕ್ಕೆ ಆದಷ್ಟು ಪ್ರಯತ್ನ ಪಡುತ್ತಿದ್ದೆವು.

  ಇಂದಿನ ಇಡೀ ವಿಶ್ವವನ್ನೇ ಅಸ್ಥಿರಗೊಳಿಸುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ, ಸಮಾಜ ಸೇವಕರ ಮುಂದೆ ಹಲವಾರು ಸವಾಲುಗಳು ಏಳುತ್ತಿವೆ. ಮಾನವನನ್ನು ಹಿಂದಿನಕಾಲದಿಂದಲೂ ಉತ್ಪಾದಕ ಮತ್ತು ಗ್ರಾಹಕ ಎಂದು ಮಾತ್ರ ಪರಿಗಣಿಸಲಾಗಿತ್ತು. ಆದರೆ ಇಂದು ಆತ ಮುಖ್ಯವಾಗಿ ಒಂದು ಸಂಪನ್ಮೂಲ. ಸಂಪತ್ತನ್ನು ಸೃಷ್ಟಿಸುವುದಕ್ಕೆ ಬೇಕಾದ ಅಂಶಗಳಲ್ಲಿ ಅವನೂ ಒಂದು. ಈಗ ಪರ್ಸೋನೆಲ್ ಮ್ಯಾನೇಜ್ಮೆಂಟ್, ಲೇಬರ್ ವೆಲ್ಫೇರ್ ಎನ್ನುವ ಬದಲು ಎಚ್.ಆರ್. ಅಂದರೆ ಹ್ಯೂಮನ್ ರಿಸೋರ್ಸ್ ಎನ್ನುತ್ತಾರೆ. ಯಾವುದೇ ವಸ್ತುವಾಗಲಿ ಸಂಪತ್ತನ್ನು ಸೃಷ್ಟಿಸಲು ಬಳಸಲ್ಪಟ್ಟಾಗ, ಅದರ ಉಪಯೋಗ ಮುಗಿದ ಮೇಲೆ ತ್ಯಜಿಸಲ್ಪಡುವುದು. ಅದೇ ರೀತಿ ಮಾನವ ಉತ್ಪಾದನೆಗೆ ಉಪಯೋಗಿಸಲ್ಪಟ್ಟ ಮೇಲೆ, ಅವನ ಅನಾರೋಗ್ಯದಿಂದಲೂ, ಅಪಘಾತದಿಂದಲೋ, ವಯಸ್ಸಿನಿಂದಲೋ, ಬದಲಾಗುತ್ತಿರುವ ಯಾಂತ್ರಿಕ ಜ್ಞಾನಕ್ಕೆ ಇಲ್ಲ ಚಟುವಟಿಕೆಗಳಿಗೆ ಹೊಂದಿಕೊಳ್ಳಲು ಅಶಕ್ತನಾದರೆ, ಇಲ್ಲ ಅನರ್ಹನಾದರೆ, ಇತರ ಸಂಪನ್ಮೂಲಗಳಂತೆ ಅವನೂ ಸಮಾಜಕ್ಕೆ ನಿಷ್ಟ್ರಯೋಜಕನಾಗುತ್ತಾನೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸಮಾಜಸೇವಕನ ಕರ್ತವ್ಯವಾಗಿದೆ. ಹ್ಯೂಮನ್ ರಿಸೋರ್ಸ್ ಮಾತ್ರ ಎಚ್.ಆರ್. ಆಗುತ್ತದೋ ಇಲ್ಲ ಎಚ್.ಆರ್. ಅಂದರೆ ಹ್ಯೂಮನ್ ರಿಲೇಶನ್ಸ್ (ಮಾನವ ಸಂಬಂಧಗಳು), ಹ್ಯೂಮನ್ ರೈಟ್ಸ್ (ಮಾನವ ಹಕ್ಕುಗಳು) ಮತ್ತು ಹ್ಯೂಮನ್ ರಿಹ್ಯಾಬಿಲಿಟೇಶನ್ (ಮಾನವ ಪುನಾರ್ವಸತಿ) ಎಂದೂ ಆಗುತ್ತದೆ. ಈ ಎಲ್ಲ ಆಯಾಮಗಳನ್ನು ದೃಷ್ಟಿಯಲ್ಲಿಕೊಂಡರೆ ಸಮಾಜ ಸೇವೆ ಅರ್ಥಪೂರ್ಣವಾಗುತ್ತದೆ.

 ಮೈಕೋ ಸೇವೆಯಿಂದ ನಿವೃತ್ತನಾದ ಮೇಲೆ, ಕೆಲವು ದಿನ ಕಿಂಗ್ ಅಂಡ್ ಪಾರ್ವ್ರಿಡ್ಜ್ ಎಂಬ ನ್ಯಾಯವಾದಿಗಳ ಸಂಸ್ಥೆಯಲ್ಲಿ ಸಲಹೆಗಾರನಾಗಿ ಕೆಲಸ ನಿರ್ವಹಿಸಿದೆ. ಐ ಟಿ ಐ ನಲ್ಲಿದ್ದಾಗ ಬಿ.ಎಲ್. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದೆ. ಆ ಸಂಸ್ಥೆಯಲ್ಲಿರುವಾಗಲೆ, ಯು.ಎಸ್.ಏಡ್. ಪ್ರೋಗ್ರಾಮಿನಡಿಯಲ್ಲಿ ಅಮೆರಿಕದಲ್ಲಿ ಸಿಬ್ಬಂದಿ ಆಡಳಿತದ ಬಗ್ಗೆ ಹೆಚ್ಚಿನ ವ್ಯಾಸಂಗ  ಮಾಡಿದ್ದೆ. ಅಮೆರಿಕದಲ್ಲಿ ಲೇಬರ್ ವೆಲ್ಫೇರ್ ಅಂತ ಹೇಳಿದಾಗ, ನನ್ನನ್ನು ಕಾರ್ಮಿಕ ಸಂಘದವನು ಎಂದು ತಿಳಿದರು ಅಲ್ಲಿನ ಜನ. ನಾನು ಕಾರ್ಖಾನೆಯ ಅಧಿಕಾರಿ ಎಂದು ಅವರಿಗೆ ಹೇಳುತ್ತಿದ್ದೆ.

 ಐಟಿಐ ಮತ್ತು ಮೈಕೊ ನಲ್ಲಿ ಕೆಲಸ ಮಾಡುವಾಗಲೂ, ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ಸಿ) ಮತ್ತು ಭಾರತೀಯ ವಿದ್ಯಾಭವನದಲ್ಲಿ ಅತಿಥಿ ಅಧ್ಯಾಪಕನಾಗಿ ಸಂಜೆಯ ಹೊತ್ತು ಪಾಠ ಹೇಳಿದ್ದೆ. ನಿವೃತ್ತನಾದ ಮೇಲೆ ಭಾರತೀಯ ವಿದ್ಯಾಭವನ, ಕ್ಸೇವಿಯರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು ವಿಶ್ವವಿದ್ಯಾನಿಲಯ, ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಅಡವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ವಿವಿಧ ಕೈಗಾರಿಕಾ ಸಂಸ್ಥೆಗಳ ತರಬೇತಿ ಕೇಂದ್ರಗಳಲ್ಲಿ ಪಾಠ ಹೇಳಿದೆ. 1988 ರಲ್ಲಿ, ವಿಡಿಯಾ ಕಾರ್ಖಾನೆಯ ಆಡಳಿತದವರ ಕೋರಿಕೆ ಮೇಲೆ, ಉಡುಪಿಯ ಶ್ರೀ ಅದಮಾರು ಮಠಾದೀಶರಾಗಿದ್ದ  ದಿ. ಶ್ರೀ ವಿಭುದೇಶತೀರ್ಥ ಅವರ ನೇತೃತ್ವದಲ್ಲಿ ವಿಡಿಯಾ ಪೂರ್ಣ ಪ್ರಜ್ಞ ಶಾಲೆಯನ್ನು ಕಿಂಡರ್ ಗಾರ್ಡನ್ ತರಗತಿಯೊಡನೆ ಪ್ರಾರಂಭಿಸಲು ಕಾರಣನಾದೆ. ಸ್ವಾಮೀಜಿಯವರ ಆಣತಿಯಂತೆ ಅದರ ಗೌರವ ಕಾರ್ಯದರ್ಶಿಯಾಗಿ, ಸುಮಾರು 15 ವರ್ಷ ಸೇವೆ ಸಲ್ಲಿಸಿ, ಈ ಶಾಲೆ ಪ್ರೌಢಶಾಲೆಯಾಗಿ ಎರಡು ಮೂರು ವರ್ಷಗಳು ಕಳೆಯುವವರೆಗೆ ಸೇವೆ ಸಲ್ಲಿಸಿದೆ.

 ಆ ಸಮಯದಲ್ಲಿ, ನನ್ನ ಪತ್ನಿಯೊಡನೆ, ವಿದೇಶಗಳನ್ನು ನೋಡಿಬಂದೆ. ಈಗ ನನ್ನ ಹವ್ಯಾಸಗಳಾದ ಆಟ, ಓದು, ಕನ್ನಡ ಕವನ ರಚನೆ ("ನಿನ್ನಾಚೆ ನೋಡು" ಎಂಬ ಕವನ ಸಂಗ್ರಹ ಪ್ರಕಟವಾಗಿದೆ) ಕುಟುಂಬದ ಸದಸ್ಯರೊಡನೆ ಮತ್ತು ಮಿತ್ರರೊಡನೆ ಒಡನಾಟ, ನಮ್ಮ ಕ್ಷೇತ್ರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಂತಾದವು ಜೀವನದಲ್ಲಿ ಆಸಕ್ತಿ ಕಡಿಮೆಯಾಗದಂತೆ ಮಾಡಿವೆ.

 ಜೊತೆಗೆ ಸಮಾಜ ಸೇವೆಗೆ ಬೇಕಾದ ಅರಿವು, ಮನೋವೃತ್ತಿ, ಕೌಶಲ್ಯ ಮತ್ತು ಅಭ್ಯಾಸ ನನಗೆ ಸಹಾಯಕಾರಿಯಾಗಿವೆ.
0 Comments



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com