ಇಷ್ಟವಾದದ್ದೇ ಮುಖ್ಯವೋ ? ಮುಖ್ಯವಾದದ್ದು ಇಷ್ಟವಾಗಲೇಬೇಕೊ ? ಎರಡೂ ಮುಖ್ಯವಾದರೆ ಎರಡೂ ಇಷ್ಟವಾಗಲೇಬೇಕೆ ? ಹಾಗಾದರೆ ಯಾವುದನ್ನು ಆರಿಸಿಕೊಳ್ಳಬೇಕು ? ಇದು ಇಕ್ಕಟ್ಟಿನ ಪ್ರಸಂಗವೇ ಸರಿ. ವ್ಯಕ್ತಿಯು ಮುಖ್ಯವೊ, ಹಳ್ಳಿಗರು ಮುಖ್ಯವೊ ? ವ್ಯಕ್ತಿಗೆ ನೆರವಾಗಿ ಆತನ ಸೇವೆಯಲ್ಲಿ ನಿರತರಾಗಿರುವುದು ಇಷ್ಟವೊ, ಹಳ್ಳಿಗರೊಡನೆ ಇದ್ದು ಅವರ ಜೊತೆ ಕೆಲಸ ಮಾಡುವುದು ಇಷ್ಟವೊ ? ಇದು ಇಕ್ಕಟ್ಟಿನ ಪ್ರಸಂಗ. ಇಂಥ ಇಕ್ಕಟ್ಟಿನ ಪ್ರಸಂಗ ನಮ್ಮ ಇತ್ತೀಚಿನ ರೋಮಾಂಚಕ ವ್ಯಕ್ತಿಗಳ ಜೀವನದಲ್ಲಿ ಆಗಿಹೋದದ್ದು ನನಗೆ ಇತ್ತೀಚೆಗೆ ತಿಳಿದುಬಂತು. ಇದು ಲೋಕನಾಯಕ ಜಯಪ್ರಕಾಶ ನಾರಾಯಣರಿಗೆ ಮತ್ತು ಅವರ ನಿಕಟ ಸಹಕಾರ್ಯಕರ್ತ ಸುರೇಂದ್ರ ಮೋಹನರಿಗೆ ಸಂಬಂಧಿಸಿದ ಸಂಗತಿ.
ಜಯಪ್ರಕಾಶರ ಜೊತೆಗೆ ಕೆಲಸ ಮಾಡುತ್ತಿದ್ದ ಹಲವಾರು ವ್ಯಕ್ತಿಗಳಲ್ಲಿ ಸುರೇಂದ್ರ ಮೋಹನ್ ಒಬ್ಬರು. ಅವರು ಜಯಪ್ರಕಾಶರ ಆಪ್ತ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಜನರ ಭಾವನೆಗಳನ್ನು ಆತ್ಮೀಯವಾಗಿ ಆಕರ್ಷಿಸಿದ ಅಪರೂಪದ ವ್ಯಕ್ತಿ ಜಯಪ್ರಕಾಶ. ಸಂಪೂರ್ಣ ಕ್ರಾಂತಿಯ ಮಹಾ ತತ್ತ್ವಾದರ್ಶವನ್ನು ರೂಪಿಸಿ, ಸಂಪೋಷಿಸುತ್ತಿದ್ದ ಅವರು ಬಹುಜನರಿಗೆ ಪ್ರಿಯರೂ ಲೋಕನಾಯಕರೂ ಆಗಿದ್ದರು. ಅಂಥವರ ಭಾವನೆಗೆ ಅನುಗುಣವಾಗಿ ನಡೆದುಕೊಳ್ಳುವ, ಅವರ ಆಲೋಚನೆಗಳನ್ನು ಹಿಡಿದಿಡುವ, ಅವರು ಅನ್ಯರೊಡನೆ ಇರಿಸಿಕೊಂಡಿರುವ ಸಂಬಂಧಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವನ್ನು ಪೋಷಿಸುವ, ಅವರಿಗೆ ಒದಗಿ ಬರುವ ಕಷ್ಟಗಳಲ್ಲಿ ಸಹಭಾಗಿಯಾಗುವ ಗುರುತರ ಕರ್ತವ್ಯ ಆಪ್ತ ಕಾರ್ಯದರ್ಶಿಗೆ ಇದ್ದೇ ಇರುತ್ತದೆ. ಅಂಥ ದೊಡ್ಡವರ ಆಪ್ತ ಕಾರ್ಯದರ್ಶಿಯಾಗಿರುವುದು ಎಷ್ಟು ಮಹತ್ತರ ಹೊಣೆಗಾರಿಕೆಯ ಸ್ಥಾನವೊ ಅಷ್ಟೇ ಭಾಗ್ಯದ ಪದವಿಯೂ ಕೂಡ. ಅಂತಹ ಸ್ಥಿತಿ ಸುರೇಂದ್ರ ಮೋಹನರಿಗೆ ದೊರೆಕೊಂಡಿತ್ತು. ಸುರೇಂದ್ರ ಮೋಹನರ ಒಂದು ಮಾತು ಜಯಪ್ರಕಾಶರ ಮುಖದಲ್ಲಿ ನೋವಿನ ಸೆಳಕನ್ನು ಉಂಟು ಮಾಡಿತ್ತು. ಆ ಮಾತು ಹೀಗಿತ್ತು: "ರಾಷ್ಟ್ರೀಯ ನಾಯಕನ ಹತ್ತಿರ ಬರಿಯ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಲು ನನಗೆ ಇಷ್ಟವಾಗುತ್ತಲಿಲ್ಲ." ಅದು ಆಘಾತವನ್ನುಂಟು ಮಾಡುವಂತಹದ್ದೇ. ಅದರಲ್ಲೂ ಸೂಕ್ಷ್ಮ ಸಂವೇದನಾಶೀಲರಾದ, ಅನ್ಯರಿಗೆ ಅನುಚಿತವಾಗಿ ತೊಂದರೆಯನ್ನು ಕೊಡದ ಜಯಪ್ರಕಾಶರಿಗೆ ಸಹಜವಾಗಿಯೇ ನೋವಾಗಿರಬೇಕು. ತನ್ನಿಂದ ಏನಾದರೂ ಅಪಚಾರವಾಗಿರಬಹುದೆ ? ತನ್ನ ಹತ್ತಿರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವುದನ್ನು ಕಡಮೆ ದರ್ಜೆಯ ಕೆಲಸವೆಂದು ಸುರೇಂದ್ರ ಮೋಹನರು ಭಾವಿಸುತ್ತಾರೆಯೆ ? ಅವರ ಮುಖದ ಮೇಲೆ ನೋವಿನ ತೆಳು ಮೋಡ ಹಾಯ್ದು ಹೋದದ್ದು ಸಹಜವೇ. ಇದನ್ನು ಸುರೇಂದ್ರ ಮೋಹನ್ ಗಮನಿಸಿದರು. ಆದರೆ ಸುರೇಂದ್ರ ಮೋಹನರ ಇನ್ನೊಂದು ಮಾತನ್ನು ಕೇಳಿ ಜಯಪ್ರಕಾಶರ ಮುದುಡಿದ ಮುಖ ಅರಳಿತು. ಆ ಮಾತು ಹೀಗಿತ್ತು : "ಯಾವುದಾದರೂ ಹಿಂದುಳಿದ ಹಳ್ಳಿಗೆ ಹೋಗಿ ಅಲ್ಲಿಯೇ ಇದ್ದು ಆ ಜನರೊಡನೆ ಬೆರೆತು, ಅವರ ಅಭಿವೃದ್ಧಿಯ ಕಾರ್ಯವನ್ನು ಕೈಗೊಳ್ಳುವುದು ನನಗೆ ಬಹು ಇಷ್ಟವಾದದ್ದು." ಜಯಪ್ರಕಾಶರಿಗೆ ಸುರೇಂದ್ರ ಮೋಹನರ ಮಾತಿನಿಂದ ಸಹಜವಾಗಿ ಆನಂದವಾಯಿತು. ಆತನ ಬಗ್ಗೆ ಹೆಮ್ಮೆ ಮೂಡಿ ಬಂದಿತು. ಸುರೇಂದ್ರ ಮೋಹನರ ಮಾತಿಗೆ ಒಂದು ತಿದ್ದುಪಡಿಯನ್ನೂ ಜಯಪ್ರಕಾಶರು ಸೂಚಿಸಿದರು. "ನನ್ನ ಸೇವೆಗಿಂತಲೂ ಅತೀ ಮಹತ್ವದ್ದೂ, ಮುಖ್ಯವೂ ಆದದ್ದು ಹಳ್ಳಿಗರ ಸೇವೆ. ಅದು ಬರಿಯ ಇಷ್ಟವಾದ ಕಾರ್ಯ ಮಾತ್ರವೇ ಅಲ್ಲ, ಬಹು ಮುಖ್ಯವಾದ ಕಾರ್ಯವೂ ಹೌದು." ಆದರೆ ಸುರೇಂದ್ರ ಮೋಹನರಿಗೆ ಜಯಪ್ರಕಾಶರ ಸೇವೆಯೂ ಮುಖ್ಯವೆನ್ನಿಸಿತ್ತು. ಹಳ್ಳಿಗರ ಸೇವೆಯೂ ಮುಖ್ಯವೆನ್ನಿಸಿತು. ಜಯಪ್ರಕಾಶರ ಸೇವೆಯೂ ಇಷ್ಟ. ಆದರೆ ಅದಕ್ಕಿಂತಲೂ ಇಷ್ಟವಾದದ್ದು ಹಳ್ಳಿಗರ ಸೇವೆ. ಈ ಮಾತನ್ನು ಅವರು ಆಡಿ ತೋರಿಸಿದರು. ಇಂಥ ಮಾತನ್ನು ಆಡಲು ಸುರೇಂದ್ರ ಮೋಹನರಿಗೆ ಮೊದಮೊದಲಿಗೆ ಸಂಕೋಚವಾಗಿದ್ದಿರಬೇಕು; ಎರಡು ಮುಖ್ಯವೂ, ಎರಡೂ ಇಷ್ಟವೂ ಆಗಿರುವಾಗ ಇಕ್ಕಟ್ಟಿನ ಪ್ರಸಂಗದಲ್ಲಿ ಅವರು ಸಿಕ್ಕು ಒದ್ದಾಡಿದ್ದಿರಬೇಕು. ಆದರೆ ಯಾವುದು ಮುಖ್ಯ, ಎಂದು ಅವರು ನಿರ್ಧರಿಸಲು ಆಲೋಚಿಸದೆ, ಯಾವುದು ಹೆಚ್ಚು ಇಷ್ಟ ತನಗೆ, ಎಂದು ಅವರ ಆಲೋಚನೆ ಸರಿದಾಡಿತು. ಎರಡನೆಯ ಕ್ರಾಂತಿಯನ್ನು, ಹೊಸ ತಿರುವನ್ನು ರೂಪಿಸಿದ ಹಿರಿಯ ಚೇತನದೊಡನೆ ಇರುವುದು ಅತೀ ಮಹತ್ವದ ಪ್ರಸಂಗವಲ್ಲವೆ ? ಹಳ್ಳಿಗರೊಡನೆ ದುಡಿಯುವುದು ಕಡಿಮೆಯೆಂದು ಯಾರು ತಿಳಿಉದಾರು ? ಆದರೆ ಕಾಲ್ಪನಿಕ ದೃಷ್ಠಿಯಿಂದ ನೋಡಿದಾತ ಲೋಕನಾಯಕನ ಸಾನಿಧ್ಯವೇ ಹೆಚ್ಚು ಮುಖ್ಯವೆಂದೆನಿಸಬಹುದು. ಅದು ಇಷ್ಟವೂ ಆಗಿರಬೇಕೆಂದು ಸಹಜವಾಗಿಯೇ ನಿರೀಕ್ಷಿಸಲಾಗುತ್ತದೆ. ಆದರೆ ಸುರೇಂದ್ರ ಮೋಹನರಿಗೆ ತಮ್ಮ ಇಷ್ಟದ ಪ್ರಮಾಣವನ್ನು ಅಳೆಯುವ, ಅದರಂತೆ ನಡೆಯಲು ನಿರ್ಧರಿಸುವ, ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಹಸ ಸಾಧ್ಯವಾಯಿತು. ದೊಡ್ಡ ಜೀವಕ್ಕೆ ಹಳ್ಳಿಗರ ಸೇವೆ ತನ್ನ ಸೇವೆಗಿಂತ ಅತೀ ಮುಖ್ಯ,ಮ ಎಂದೆನಿಸಿತು; ಆದ್ದರಿಂದಲೇ ಅದು ಬಹುಮುಖ್ಯ ಪ್ರಿಯವಾದದ್ದೂ ಆಗಿರಬೇಕು ಎಂದೆನಿಸಿತು. ಇಂಥ ಅಪೂರ್ವ ಪ್ರಸಂಗದಿಂದ ಜನನಾಯಕರ ಸತ್ವದ ಪರೀಕ್ಷೆ ಆಗುತ್ತದೆಯಲ್ಲವೇ ? ಅವರ ಹಿರಿಯತನವು ಸಾಬೀತಾಗುತ್ತದೆಯಲ್ಲವೆ ? (ವಿ.ಸೂ : ಸುರೇಂದ್ರ ಮೋಹನ್ ಇತ್ತೀಚೆಗೆ ವಿಧಿವಶರಾದರು) ಡಾ. ಎಚ್.ಎಂ. ಮರುಳಸಿದ್ಧಯ್ಯ ನಿವೃತ್ತ ಪ್ರೊಫೆಸರ್, ಬೆಂಗಳೂರು ವಿಶ್ವವಿದ್ಯಾಲಯ ಆಕರ : ದಿಗ್ಭ್ರಾಂತ ಸಮಾಜಕ್ಕೆ ಬೆಳಕಿನ ದಾರಿ: ಸಮಾಜಕಾರ್ಯ (ಸಂಪುಟ-2 ಅನುಷ್ಠಾನದ ಹರವು ಪುಟ ಸಂಖ್ಯೆ : 580)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|