ಭಾರತೀಯ ನಂಬಿಕೆ ಹಾಗೂ ಸಂಸ್ಕೃತಿಯಲ್ಲಿ ಜನರು ವಿವಿಧ ರಿತೀಯ ಶಕ್ತಿಗಳಿಂದ ಸ್ವಾಧೀನ/ ಸ್ವಾಮ್ಯಕ್ಕೊಳಪಡುವುದನ್ನು ನಾವೆಲ್ಲ ಕೇಳಿದ್ದೇವೆ. ಹಲವಾರು ಬಾರಿ ನೋಡಿರುತ್ತೇವೆ. ಸ್ವಾಧೀನ(ದೈವಾವೇಶ)ದಲ್ಲಿರುವವರು, ತಾವು ಬೇರೆ ಶಕ್ತಿ\ಆತ್ಮದ ವಶದಲ್ಲಿರುವಂತೆ ಬೇರೆ ರೀತಿಯ ಆವಭಾವ, ಮಾತು, ವರ್ತನೆಯನ್ನು ತೋರಿಸುತ್ತಾರೆ. ಅವರ ವರ್ತನೆಯು ಅವರ ನೈಜ ವರ್ತನೆಗಿಂತ ಭಿನ್ನವಾಗಿರುತ್ತದೆ. ನನಗೆ ಈ ರೀತಿಯ ವರ್ತನೆಯ ಪರಿಚಯವಾಗಿದ್ದು ಮೂವತ್ತು ವರ್ಷಗಳ ಹಿಂದೆ ನಮ್ಮ ನಾಡಿನ ಪ್ರತಿಷ್ಠಿತ ಮಾನಸಿಕ ಆರೋಗ್ಯ ಸಂಸ್ಥೆಯಾದ `ನಿಮ್ಹಾನ್ಸ್', ಬೆಂಗಳೂರಿನಲ್ಲಿ, ಮನೋವೈದ್ಯಕೀಯ ಸಮಜಕಾಯ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪದವಿ ಮಾಡುತ್ತಿದ್ದಾಗ. ಆ ಸಮಯದಲ್ಲಿ ಕೆಲವು ರೋಗಿಗಳು ಜೋರಾಗಿ ಬೈದಾಡುತ್ತ, ಕೂಗಾಡುತ್ತಿದ್ದರು. ಅವರನ್ನು ಮೈಮೇಲೆ ದೆವ್ವ/ಗಾಳಿ ಬಂದಿದೆಯೆಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿದೆ ಎಂದು ಉತ್ತರ ಬರತ್ತಿತ್ತು. ಈ ವಿಷಯ ಕೇಳಿ ನನಗೆ ಆಶ್ಚರ್ಯವಾಗಿತ್ತು. ಈ ರೋಗಿಗಳು ಅವಾಚ್ಯ ಶಬ್ದಗಳಲ್ಲಿ ಗಂಡನನ್ನೋ/ಅತ್ತೆಯನ್ನೋ ಅಥವಾ ಬೇರೆ ಸಂಬಧಿಕರನ್ನೋ ಬೈಯುತ್ತಿದ್ದರು. ಮಧ್ಯ-ಮಧ್ಯ ತಲೆಕೂದಲನ್ನು ಕೆದರಿಕೊಂಡು ಅತ್ತಿಂದಿತ್ತ ತೂಗಾಡುತ್ತಿದ್ದರು. ಸ್ವಲ್ಪ ಸಮಯದನಂತರ ತಮ್ಮಷ್ಟಕ್ಕೆ ತಾವೇ ಸುಮ್ಮನಾಗುತ್ತಿದ್ದರು, ಮತ್ತೆ ಅವರು ಸಹಜ ಸ್ಥಿತಿಗೆ ಬಂದ ಮೇಲೆ ಏನಾದರು ಕೇಳಿದರೆ, ಆ~: ನನಗೇನೂ ಗೊತ್ತಿಲ್ಲ. ನಾನು ಯಾರನ್ನು ಬಯ್ಯವುದಿಲ್ಲ ಎಂದು ಉತ್ತರಿಸುತ್ತಿದ್ದರು. ಇದರಿಂದ ನನಗೆ ಈ ವ್ಯಾದಿಯ ಬಗ್ಗೆ/ನಡವಳಿಕೆಯ ಬಗ್ಗೆ ಇನ್ನಷ್ಟು ಕುತೂಹಲ ಉಂಟಾಯಿತು. ಅನೇಕ ಪರಿಣಿತ ವೈದ್ಯರ ಬಳಿ ಮತ್ತು ಸಹಪಾಟಿಗಳ ಬಳಿ ಚರ್ಚಿಸುತ್ತಿದ್ದೆ. ಆಗ ನನಗೆ ಇದೂ ಕೂಡ ಒಂದು ಮಾನಸಿಕ ವೈಪರಿತ್ಯವೆಂದು ತಿಳಿದುಬಂತು. ಆಗ ಉಂಟಾದ ಆಸಕ್ತಿ, ಕುತೂಹಲವೇ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ವಿಭಾಗದಲ್ಲಿ ಅದ್ಯಾಪಕ ವೃತ್ತಿಗೆ ಸೇರಿದ ಮೇಲೆ ಪಿ.ಹೆಚ್.ಡಿಯ ಸಂಶೋಧನ ವಿಷಯವಾಗಿ ಈ ವಿಷಯವನ್ನೆ ಆಯ್ಕೆ ಮಾಡಿಕೊಂಡೆ. ಈ ವ್ಯಕ್ತಿಗಳು ಬದುಕಿನಲ್ಲಿ ಅನುಭವಿಸುವ ನೋವು, ಆತಂಕ, ಸಮಸ್ಯೆಗಳನ್ನು ವಿವರವಾಗಿ ಅಧ್ಯಯನ ಮಾಡಬೇಕೆಂಬ ಬಯಕೆಯೇ ಈ ಸಂಶೋಧನೆಗೆ ನಾಂದಿಯಾಯಿತು. ಈ ವಿಷಯವನ್ನು ಹಲವಾರು ವರ್ಷಗಳಿಂದ ಅನೇಕ ತಜ್ಞರು - ಮನೋವೈದ್ಯರು. ಮನೋವಿಜ್ನಾನಿಗಳು, ಮಾನವಶಾಸ್ತ್ರಜ್ಞರು ವಿವಿಧ ದೇಶಗಳಲ್ಲಿ ಅಧ್ಯಯಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಸಹ 1992ರ ಐ.ಸಿ.ಡಿ.-10, ಮಾರ್ಗಸೂಚಿಯಲ್ಲಿ ಈ ರೋಗದ ಬಗ್ಗೆ ಮಾಹಿತಿಯುನ್ನು ಎಫ್. 44.3 ಯಲ್ಲಿ `ಟ್ರಾನ್ಸ್ ಅಥವಾ ಪೊಸ್ಸೆಷನ್' ಎಂದು ವರ್ಗೀಕರಣ ಮಾಡಿದ್ದಾರೆ.
1977ರ ವೆಬ್ಸ್ಟೆರ್ ನಿಘಂಟಿನ ಪ್ರಕಾರ ದೈವಾವೇಶದಲ್ಲಿರುವವರನ್ನು "ಸ್ವಾಧೀನದಲ್ಲಿರುವುದು, ಸ್ವಾಮ್ಯ, ದುಷ್ಟ ಆತ್ಮದ ನಿಯಂತ್ರಣದಲ್ಲಿರುವುದು, ಉನ್ಮಾದ, ಹುಚ್ಚು" ಎಂಬ ಅರ್ಥ ಕೊಡಲಾಗಿದೆ. ವಿನ್ಟ್ರೊಬ್ (1973) ಎಂಬುವವರ ಪ್ರಕಾರ ಸ್ವಾಧೀನವೆಂದರೆ "ಒಬ್ಬ ವ್ಯಕ್ತಿಯ ಸಂಸ್ಕೃತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಯಾವುದೇ ಒಂದು ಆತ್ಮ/ದೇವರ ಗುಣಲಕ್ಷಣಗಳು ಆ ವ್ಯಕ್ತಿಯ ವರ್ತನೆಯಲ್ಲಿ ಚೂರು ಚೂರಾಗಿ ಕಂಡು ಬರುವ ಘಟನೆಗಳು ಮತ್ತು ಘಟನೆಯ ನಂತರ ವ್ಯಕ್ತಿಗೆ ಆ ಘಟನೆಯ ಸಮಯದಲ್ಲಿನ ತನ್ನ ವರ್ತನೆಯ ಬಗ್ಗೆ ಭಾಗಶಃ/ಸಂಪೂರ್ಣವಾಗಿ ಸ್ಮರಣೆ ಇಲ್ಲದಿರುವುದೆಂದು ಪ್ರತಿಪಾದಿಸಿದ್ದಾನೆ". ಈ ಪ್ರಸ್ತುತ ಅಧ್ಯಯನಕ್ಕೆ ವಿನ್ಟ್ರೊಬ್ರರವರ ವ್ಯಾಖ್ಯೆಯನ್ನು ಅಳವಡಿಸಿಕೊಳ್ಳಲಾಗಿದೆ. ದೈವಾವೇಶ ವರ್ತನೆಯ ವರ್ಗೀಕರಣ: ವಾರ್ಡ್ (1980) ರವರು ಈ ವರ್ತನಾ ವ್ಯೆಪರಿತ್ಯವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. 1) ಧಾರ್ಮಿಕ 2) ಪರಿಧಿ. "ಧಾರ್ಮಿಕ ಸ್ವಾಧೀನತೆಯು ಸಾಮಾನ್ಯವಾಗಿ ಸ್ವಯಂಪ್ರೇರಿತ(ಐಚ್ಚಿಕ)ವಾದದ್ದು, ವ್ಯತಿಕ್ರಮ ಸಾದ್ಯವಾದ್ದದು ಮತ್ತು ಅಲ್ಪ ಕಾಲಾವಧಿಯದ್ದಾಗಿದೆ. ಇದಕ್ಕೆ ಆಯಾ ಸಂಸ್ಕೃತಿಯ ನಂಬಿಕೆಗಳ ಪ್ರೋತ್ಸಾಹ ಮತ್ತು ಬೆಂಬಲವಿರುತ್ತದೆ ಹಾಗು ಧಾರ್ಮಿಕ ಆಚರಣೆಯ ಸಮಯದಲ್ಲಿ ಪ್ರೇರಿತವಾಗುತ್ತದೆ. ಈ ವರ್ತನೆಯು ಸಾಮಾನ್ಯವಾಗಿ `ರಕ್ಷಣಾ ತಂತ್ರವಾಗಿ ಕೆಲಸಮಾಡುತ್ತದೆ ಮತ್ತು ಇದು ವ್ಯಾದಿಯ ಸಾಂಸ್ಕೃತಿಕ ಪರಿಕಲ್ಪನೆಯಾಗಿ ಕಂಡುಬರುತ್ತದೆ. ಎಂದಿದ್ದಾರೆ. ಈ ವರ್ತನೆಗೆ ಚಿಕಿತ್ಸೆಯನ್ನು ಪಡೆಯುವಿದಿಲ್ಲ. ಆದರೆ ಪರಿಧಿ ಸ್ವಾಧೀನತೆಯು ಸ್ವಯಂಪ್ರೇರಿತವಲ್ಲದ್ದು (ಅನ್ಯೆಚ್ಚಿಕ), ದೀರ್ಘಾವದಿಯಾದದ್ದು ಮತ್ತು ಸಂಸ್ಕೃತಿಯಲ್ಲಿ ನಿಷೇದಾತ್ಮಕ ಭಾವನೆಯನ್ನು ಹೊಂದಿದೆ. ಇದು ವ್ಯಕ್ತಿಯ ಒತ್ತಡದಿಂದ ಪ್ರೇರಿತವಾಗಿರುತ್ತದೆ ಮತ್ತು ರೋಗಾವಿಷ್ಟ ಪ್ರತಿಕ್ರಿಯೆ ಹೊದಿರುತ್ತದೆ. ಇದು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಸಂಬಂಧ ಹೊಂದಿದೆ ಮತ್ತು ಇದಕ್ಕೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಕಾರ್ಸ್ಟೇರ್ಸ್ ಮತ್ತು ಕಪೂರ್ (1976) ರವರು ಈ ವರ್ತನೆಯ ಬಗ್ಗೆ ಧೀರ್ಘವಾದ ಅಧ್ಯಯನ ಮಾಡಿದ್ದಾರೆ. ಅವರು ಸ್ವಾಧೀನ(ದೈವಾವೇಶ) ವನ್ನು ಎರಡು ಬಗೆಯಾಗಿ ವಿಂಗಡಿಸಿದ್ದಾರೆ - 1)ಐಚ್ಚಿಕ-ವ್ಯಕ್ತಿಯು ಸ್ವಯಂಪ್ರೇರಿತವಾಗಿ ದೈವಾವೇಶಕ್ಕೆ ಒಳಪಡುವುದು. 2) ಅನೈಚ್ಚಿಕ- ವ್ಯಕಿಯು ಮನಸ್ಸಿಗೆ ವಿರುದ್ದವಾಗಿ ದೈವಾವೇಶಕ್ಕೆ ಒಳಪಡುವುದು. ಮೇಲಿನ ಸಂಶೋಧಕರ ಅಭಿಪ್ರಾಯದಂತೆ: ಮೊದಲನೆಯ ವರ್ಗದವರು ಜೀವನದಲ್ಲಿ ಯಾವುದೇ ತೆರನಾದ ತೊಂದರೆ/ಅವ್ಯವಸ್ಥೆ ಅನುಭವಿಸಿರುವುದಿಲ್ಲ. ಹಾಗು, ಇಂತಹ ಸಂದರ್ಭಗಳಲ್ಲಿ ಈ ವ್ಯಕ್ತಿ(ದೈವ ಪಾತ್ರಿ)ಯು ತನ್ನ ಬಳಿಗೆ ಸಹಾಯ ಕೇಳಿ ಬಂದಂತಹ ವ್ಯಕ್ತಿಗಳಿಗೆ ಪರಿಹಾರವನ್ನು ಸೂಚಿಸುತ್ತಾರೆ. ಹೀಗಾಗಿ ಈ ವರ್ಗದವರು ಜನರಿಂದ ಗೌರವ ಮತ್ತು ಪೂಜ್ಯ ಭಾವನೆಯನ್ನು ಸ್ವೀಕರಿಸುತ್ತಾರೆ. ಹಾಗು ತಮ್ಮ ಈ ವರ್ತನೆಯಿಂದ ಜೀವನದ ಗಳಿಕೆಯನ್ನು ಸಂಪಾದಿಸುತ್ತಾರೆ. ಆದರೆ ಎರಡನೇ ವರ್ಗದವರು ಅನೈಚ್ಚಿಕವಾಗಿ ದೈವಾವೇಶಕ್ಕೆ ಒಳಪಡುವುದರಿಂದ ತೊಂದರೆ ಅನುಭವಿಸುತ್ತಾರೆ ಮತ್ತು ತಮ್ಮ ವರ್ತನೆಯ ವೈಪರಿತ್ಯದಿಂದ ಸಂತೋಷಪಡುವುದಿಲ್ಲ. ಈ ಸಂಶೋಧಕರ ಪ್ರಕಾರ ಎರಡೂ ವರ್ತನೆಯ ಮಾದರಿಯು ಹೋಲಿಕೆವುಳ್ಳದ್ದಾಗಿವೆ. ನನ್ನ ಸಂಶೋಧನೆಗೆ ಇವರ ವರ್ಗೀಕರಣವು ಹೆಚ್ಚು ಸೂಕ್ತವೆಂದು (ನನ್ನ ಪೂರ್ವ ಕ್ಷೇತ್ರಕಾರ್ಯದ ಆಧಾರದ ಮೇಲೆ) ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಬಂಧಿತ ಸಾಹಿತ್ಯ ಅವಲೋಕನ: ಆದಿ ಕಾಲದಿಂದಲೂ ಮಾನವ ಸಮಾಜ ಅನೇಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಬೇರೆ ಬೇರೆ ಅತೃಪ್ತ ಆತ್ಮ/ಶಕ್ತಿಗಳಿಂದ ಮಾನವನ ಸ್ವಾಧಿನವೇ ಕಾರಣವೆಂದು ನಂಬಿದೆ. ನಮ್ಮ ದೇಶದ ಪುರಾತನ, ಶ್ರೀಮಂತ ಸಂಸ್ಕೃತಿಯು ವಿಶ್ವಕ್ಕೆ ವೇದಶಾಸ್ತ್ರಗಳ ಕೊಡುಗೆ ನೀಡಿದೆ. ಚರಕ, ಸುಶ್ರುತಾರಂತಹ ಮೇದಾವಿಗಳು ಸಹ ವೈದ್ಯಶಾಸ್ತ್ರದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ಅಥರ್ವಣ ವೇದದಲ್ಲಿ ಭೂತವಿದ್ಯೆ, ಭೂತವೈದ್ಯದ ಬಗ್ಗೆ ಮಾಹಿತಿ ಸಿಗುತ್ತದೆ. ನಮ್ಮ ಜನಪದ ಸಾಹಿತ್ಯದಲ್ಲಿ, ವೈದ್ಯದಲ್ಲಿ, ಭೂತ, ಅಸಂತುಷ್ಟ ಆತ್ಮಗಳು ಮಾನವನ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂಬ ಉಲ್ಲೇಖಗಳು ಕಂಡು ಬರುತ್ತವೆ. ನಮ್ಮ ವರ್ತನೆಯಿಂದ ದೇವರಿಗೆ ಕೋಪ ಬಂದರೆ ರೋಗ, ರುಜಿನಗಳು ಉಂಟಾಗುತ್ತದೆ ಎಂಬ ನಂಬಿಕೆ ಪ್ರಬಲವಾಗಿದೆ. ಹೀಗಾಗಿ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ-ಮಂತ್ರವಿದ್ಯೆ, ಭೂತವಿದ್ಯೆ, ಗಿಡಮೂಲಿಕೆಗಳನ್ನು ಉಪಯೋಗಿಸಿ ದೇವರು/ದೆವ್ವಗಳ ಕಾಟಗಳಿಂದ ಉಂಟಾಗುವುದೆಂಬ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದನ್ನು ಸಾಮಾನ್ಯವಾಗಿ ಗ್ರಾಮಿಣ ಪ್ರದೇಶಗಳಲ್ಲಿ, ಇಂದಿಗೂ ಕಾಣಬಹುದಾಗಿದೆ. ಅನೇಕ ಸಂಶೋಧಕರು ಈ ವಿಷಯವಾಗಿ ಬೇರೆ ಬೇರೆ ದೃಷ್ಟಿಕೋನಗಳಿಂದ ಅಭ್ಯಾಸ ಮಾಡಿರುತ್ತಾರೆ. ಈ ಅಧ್ಯಯನಗಳನ್ನು ಕೆಳಗಿನ ಮೂರು ಭಾಗಗಳಾಗಿ ವಿಭಜಿಸಬಹುದು (ಚಂದ್ರಶೇಖರ್ ಎಟ್ ಆಲ್, 1980): 1. ವಿಯೋಜಿತ (ಡಿಸ್ಸೋಸಿಯೇಟಿವ್) ಸಿದ್ಧಾಂತ. 2. ಸಂವಹನ ಸಿದ್ಧಾಂತ 3. ನಿರೀಕ್ಷಣೆ/ಸಾಮಾಜಿಕ-ಸಾಂಸ್ಕೃತಿಕ ಸಿದ್ಧಾಂತ. 1.ವಿಯೋಜಿತ ಸಿದ್ಧಾಂತ: ಕೆಲವು ಪರಿಣಿತರ ಪ್ರಕಾರ ಸ್ವಾಧೀನ ರೋಗ ಲಕ್ಷಣಗಳು ಉನ್ಮಾದ ನಿಯೋಜಿತದ ಅಭಿವ್ಯಕ್ತಿ ಎಂದು ಹೇಳುತ್ತಾರೆ. ಫ್ರೆಂಚ್ ಸಂಶೋಧಕರಾದ ಫ್ರೀಡ್ ಮತ್ತು ಫ್ರೀಡ್ (1964) ರವರ ಪ್ರಕಾರ ಈ ನಿಯೋಜಿತ ಸ್ಥಿತಿಯು ಕಾಲ್ಪನಿಕ ಚಿಂತನೆಗಳನ್ನು ಆಧರಿಸಿದೆ ಮತ್ತು ಸಂಕಟ ಸ್ಥಿತಿಯನ್ನು ನಾಟಕೀಯವಾಗಿ ಪ್ರದರ್ಶಿಸಲು ಅನುಕೂಲಕರವಾದ ಒಂದು ಸ್ಥಿತಿಯನ್ನೇ ಸ್ವಾಧೀನವೆಂದು ಕರೆಯಬಹುದು ಎನ್ನುತ್ತಾರೆ. ಈ ಸನ್ನಿವೇಶದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಲಾಭವಿರುತ್ತದೆ. ಪ್ರಾಥಮಿಕವಾಗಿ ಆಂತರಿಕ ಮಾನಸಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ ಹಾಗು ಮಾಧ್ಯಮಿಕ ಲಾಭವೆಂದರೆ ಸ್ವಾಧೀನಕ್ಕೆ ಒಳಪಟ್ಟ ವ್ಯಕ್ತಿಗೆ ತನ್ನ ಪರಿಸರದಿಂದ ಹೆಚ್ಚಿನ ಗಮನ, ಕರುಣೆ ಮತ್ತು ಸಂಬಂಧಿಕರ ಮೇಲೆ ಪ್ರಭಾವ ಬೀರಲು ಸಾದ್ಯವಾಗುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿಯ ಎಲ್ಲಾ ಕ್ರಿಯೆಗಳೂ ಅವನ ಮೇಲೆ ಸಾಧೀನ ಹೊಂದಿರುವ ಆತ್ಮ/ಶಕ್ತಿಯ ಕ್ರಿಯೆಗಳು ಆ ವ್ಯಕ್ತಿಯ ಸ್ವಂತದಲ್ಲವೆಂದು ಜನರು ಭಾವಿಸುತ್ತಾರೆ. ಆದ್ದರಿಂದ ವ್ಯಕ್ತಿಯು ತನ್ನ ಅತ್ತೆ, ಗಂಡ, ಅಥವಾ ಬೇರೆ ಹಿರಿಯರನ್ನು, ಬೇರೆಯವರನ್ನು ಬೈಯುವುದು, ಸಿಟ್ಟನ್ನು ತೋರಿಸುವುದು, ತಾನು ಸ್ವಾಭಾವಿಕ ಸ್ಥಿತಿಯಲ್ಲಿದ್ದಾಗ ಮಾಡಲಾಗದ ಕೆಲಸವನ್ನು, ಭಾವನೆಯನ್ನು, ಸ್ವಾಧೀನಕ್ಕೊಳಪಟ್ಟ ಸ್ಥಿತಿಯಲ್ಲಿ ಮಾಡುತ್ತಾನೆ/ಳೆ. ಇದರಿಂದ ವ್ಯಕ್ತಿ ಅದುಮಿಟ್ಟ ಭಾವನೆಗಳನ್ನು, ವರ್ತನೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದು ಈ ಸಿದ್ಧಾಂತವು ಪ್ರತಿಪಾದಿಸುತ್ತದೆ. 2. ಸಂವಹನ ಸಿದ್ಧಾಂತ: ಈ ಸಿದ್ಧಾಂತದ ಪ್ರಕಾರ ಸ್ವಾಧೀನ ರೋಗ ಲಕ್ಷಣವನ್ನು ವ್ಯಕ್ತಿ ತನ್ನ ಸಂಕಟ ಪರಿಸ್ಥಿತಿಯನ್ನು ಇತರರಿಗೆ ವ್ಯಕ್ತಪಡಿಸುವ ಸಂಕೇತವೆಂದು ಕರೆಯುತ್ತಾರೆ. ವ್ಯಕ್ತಿಗಳು ರೋಗಿಯ ಪಾತ್ರವಹಿಸಿ ಇತರರಿಂದ ಗಮನ ಮತ್ತು ಲಾಭವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಹಲವಾರು ಲೇಖಕರು ಈ ರೋಗಕ್ಕೆ ಮನೋವೈಜ್ಞಾನಿಕ ಕಾರಣಾಂಶಗಳನ್ನು ವ್ಯಕ್ತಪಡಿಸುತ್ತಾರೆ. (ಚಂದ್ರಶೇಖರ್, ಮತ್ತು ಇತರರು: 1982, ತೇಜ:1970, ವಿಜೆಸಿನ್ಂಘೇ:1976, ಮತ್ತು ಯಾಪ್:1960). ಆದರೆ ಈ ರೋಗಿಗಳು ಯಾಕೆ ಇಂತಹ ನೋವಿನ ವಿಧಾನವನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳುವುದು ಕಠಿಣ. ವರ್ಮ ಮತ್ತು ಮತ್ತಿತರರು (1970) ಮತ್ತು ಲೆವಿಸ್ (1970) ಇವರ ಪ್ರಕಾರ ಹೆಚ್ಚಿನ ಸಮಾಜದಲ್ಲಿ ಈ ರೀತಿಯ ದೈವಾವೇಶ/ಸ್ವಾಧೀನಕ್ಕೊಳಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಕೆಳಮಟ್ಟದ ಜೀವನ ನಡೆಸುತ್ತಿರುವವರು. ಸಮಾಜದಲ್ಲಿ ಅವರಿಗೆ ತಮ್ಮ ಸ್ವಂತಿಕೆಯನ್ನು ಬೆಳೆಸಲು, ಏನನ್ನಾದರೂ ಸಾಧಿಸಲು ಅವಕಾಶಗಳು ಕಡಿಮೆ, (ವಾಲ್ಕೆರ್ 1972). ಆದ್ದರಿಂದ ಅವರಿಗೆ ಈ ರೋಗದಿಂದ ಅನೇಕ ಲೌಕಿಕ ಮತ್ತು ಭಾವನಾತ್ಮಕ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಕಾರ್ಸ್ಟೇರ್ಸ್ ಮತ್ತು ಕಪೂರ್ (1976)ರವರು ತಮ್ಮ ಅಧ್ಯಯನದಲ್ಲಿ ಸಮಾಜದಲ್ಲಿ ಹೆಚ್ಚಿನ ಸ್ಥಾನ ಮತ್ತು ಹಕ್ಕುಗಳ್ಳನ್ನು ಹೊಂದಿದ ಮೊಗವೀರ(ದಕ್ಷಿಣ ಕನ್ನಡದ ಬೆಸ್ತರು ಪಂಗಡಕ್ಕೆ ಸೇರಿದವರು) ಮಹಿಳೆಯರಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುವುದೆಂದು ತಿಳಿಸಿರುತ್ತಾರೆ. 3.ನಿರೀಕ್ಷಣೆ/ಸಾಮಾಜಿಕ-ಸಾಂಸ್ಕೃತಿಕ ಸಿದ್ಧಾಂತಗಳು: ರೋಗ/ಆನಾರೋಗ್ಯದ ಪರಿಕಲ್ಪನೆ ಒಂದು ಸಮೂಹದಿಂದ ಒಂದು ಸಮೂಹಕ್ಕೆ ಮತ್ತು ಒಂದು ಸಮಾಜದಿಂದ ಮತ್ತೊಂದು ಸಮಾಜಕ್ಕೆ ಬದಲಾಗುತ್ತದೆ. ಆದ್ದರಿಂದ ವಿವಿಧ ಅಂಶಗಳು - ದೈಹಿಕ, ಮಾನಸಿಕ, ಆರ್ಥಿಕ ಮತ್ತು ಸಾಮಾಜಿಕ ಕಾರಣಗಳು ಸಮಾಜದಲ್ಲಿ ಕಂಡುಬರುವ ವಿವಿಧ ರೋಗಗಳನ್ನು ಹೆಸರಿಸುತ್ತಾರೆ. ಹಾಗೆಯೇ, ಸ್ವಾಧೀನ ರೋಗಲಕ್ಷಣಗಳನ್ನು ಉನ್ಮಾದ ಮನೋವಿಕೃತಿ ಎಂದು (ವಿಗ್ ಮತ್ತು ನಾರಂಗ್:1969;ತೇಜ:1971), ಇದು ಉನ್ಮಾದ ನಿ0ೋಜಿತ ಪ್ರತಿಕ್ರಿಯೆಯೆಂದು (ಕ್ಲಾಸ್:1979; ಮ್ಯಾಕಾಲ್ಲ್:1971;)ರವರು ಕರೆದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ, 1992ರಲ್ಲಿ ಈ ಅಸಾಧಾರಣ ಸಂಗತಿಯನ್ನು `ಟ್ರಾನ್ಸ್' (ಪ್ರಜ್ಞಾತೀತಾವಸ್ಥೆ) ಅಥವಾ `ಪೊಸ್ಸೆಶನ್' (ಇತರ ವಸ್ತುವಿನ ಸ್ವಾಧೀನದಲ್ಲಿರುವುದು) ಎಂದು ಗುರುತಿಸಿದೆ. ಸಂಶೋಧನ ವಿಧಾನ: ಮೇಲೆ ಹೇಳಿದ ವಿವಿಧ ಸಂಶೋಧನೆಗಳ ಫಲಿತಾಂಶಗಳಿಂದ ನನ್ನ ಮನಸ್ಸಿನಲ್ಲಿ ಇನ್ನೂ ಕೆಲವು ಪ್ರಶ್ನೆಗಳು ಹುಟ್ಟಿಕೊಂಡವು. ಈ ಮಾನಸಿಕ ಅವ್ಯವಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳು ಹಾಗೆಯೇ ಉಳಿದಿರುವುದು ನನ್ನ ಗಮನಕ್ಕೆ ಬಂತು. ಹೀಗಾಗಿ ಈ ಅಧ್ಯಯನದಲ್ಲಿ ಕೆಲವೊಂದು ಇದುವರೆವಿಗೂ ತೃಪ್ತಿಕರವಾಗಿ ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಂದ್ರೀಕರಿಸಿ ಸಂಶೋಧನಾ ವಿಧಾನವನ್ನು ತಯಾರಿಸಲಾಯಿತು. ಈ ನಿಟ್ಟಿನಲ್ಲಿ ಅನೇಕ ಸ್ನೇಹಿತರು, ಗುರುಗಳು ನನಗೆ ಸಹಾಯ ಮಾಡಿದರು. ಕ್ಷೇತ್ರ ಭೇಟಿ, ಅನುಭವಸ್ಥರೊಂದಿಗಿನ ಚರ್ಚೆ, ಸಮಾಲೋಚನೆಗಳು ನನ್ನ ಸಂಶೋಧನಾ ವಿಧಾನವನ್ನು ಪಕ್ವಗೊಳಿಸಲು ನೆರವಾದವು. ಸಂಶೋಧನೆಗೆ ಆಧಾರವಾದ ಪ್ರಶ್ನೆಗಳ ಮಂಡನೆ: ಬುರ್ವಿಗಿನಾನ್ ಮತ್ತು ಇವಾಸ್ಕ್ಯ್ (1977)ರವರು ವಿಶ್ವಾದಾದ್ಯಂತ 488 ಸಮಾಜ/ದೇಶಗಳಲ್ಲಿ ಶೇ.90ರಷ್ಟ್ಟು ಜನರಲ್ಲಿ ಪ್ರಜ್ಞಾತೀತ ಅವಸ್ಥೆ/ಸ್ವಾಧೀನದಲ್ಲಿರುವವರ ನಮೂನೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದದೆ ಇರುವ ಎರಡೂ ಪ್ರದೇಶಗಳಲ್ಲಿ ಇಂದಿಗೂ ನಾವು ಕಾಣಬಹುದು ಎಂದಿದ್ದಾರೆ. ಈ ಮೇಲಿನ ಎಲ್ಲಾ ಸಂಗತಿಗಳನ್ನು ಗಮನಿಸಿದರೆ, ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಶತ-ಶತಮಾನಗಳ ಹಿಂದಿನ ನಂಬಿಕೆ, ಆಚರಣೆ, ನಡವಳಿಕೆಗಳು ಏಕೆ ಕಾಣಿಸಿಕೊಳ್ಳುತಿವೆ? ಒಂದೇ ಸಂಸ್ಕೃತಿಯಲ್ಲಿ ಈ ರೋಗವು ಕೆಲವರಲ್ಲಿ ಕಾಣಿಸಿ ಮತ್ತೆ ಕೆಲವರಲ್ಲಿ ಏಕೆ ಕಾಣಿಸಿಕೊಳ್ಳುವುದಿಲ್ಲ? ಯಾವಾಗ ಜನರು ತಮ್ಮ ತೊಂದರೆ/ಕಾಯಿಲೆಗಳನ್ನು ಸ್ವಾಧೀನತೆಯಿಂದ ಉಂಟಾಗಿದೆಯೆಂದು ಭಾವಿಸುತ್ತಾರೆ? ಆಧುನಿಕ ವೈದ್ಯಕೀಯ ಸೇವೆ ಲಭ್ಯವಿರುವಾಗಲೂ, ಏಕೆ ಜನರು ಸಾಂಪ್ರದಾಯಿಕ ಚಿಕಿತ್ಸಕನ ಮೊರೆ ಹೊಗುತ್ತಾರೆ? ಯಾವ ತೆರನಾದ ಒತ್ತಡಗಳಿಂದ ಜನರು ಈ ಘಟನಾವಳಿಗೆ ಒಳಗಾಗುತ್ತಾರೆ? ಐಚ್ಛಿಕ ಮತ್ತು ಅನೈಚ್ಛಿಕ ವಿಧಗಳು ಹೇಗೆ ಭಿನ್ನವಾಗಿವೆ? ಈ ಘಟನಾವಳಿಗಳ ಚಿಕಿತ್ಸೆಗೆ ಸಾಂಪ್ರದಾಯಿಕ ಚಿಕಿತ್ಸಾ ಕೇಂದ್ರಗಳ ಕೊಡುಗೆಯೇನು? ಈ ಕೇಂದ್ರಗಳಲ್ಲಿ ದೊರಕುವ ಸೇವೆಗಳ ಪರಿಣಾಮ ಏನು? ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಈ ಅಧ್ಯಯನದಲ್ಲಿ ವಿಶ್ವಾಸಪೂರ್ಣ ಪ್ರಯತ್ನ ಮಾಡಲಾಗಿದೆ. ಧ್ಯೇಯೋದ್ಧೇಶಗಳು: ಸ್ವಾಧೀನಕ್ಕೊಳಗಾದ ವ್ಯಕ್ತಿಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ನಂಬಿಕೆ ಹಾಗೂ ಆಚರಣೆಗಳನ್ನು ಅರಿತುಕೊಳ್ಳುವುದು. ಈ ಘಟನೆಗಳಿಗೆ ಮುನ್ನ ಅರ್ಥಿ/ಮಾಹಿತಿದಾರರ ಜೀವನದಲ್ಲಿ ಅನುಭವಿಸಿದಂತಹ ಒತ್ತಡಗಳ ಅಧ್ಯಯನ. ಅರ್ಥಿ ಆರೋಗ್ಯದ ಕುರಿತು ಜ್ಞಾನ ಮತ್ತು ಅವರಿಗೆ ಲಭ್ಯವಿರುವ ಆಧುನಿಕ ವೈದ್ಯಕೀಯ ಸೇವೆಗಳ ಕುರಿತು ಅಧ್ಯಯನ. ಅರ್ಥಿಗಳ ವರ್ತನೆಯನ್ನು ಅಭ್ಯಸಿಸುವುದು. ಈ ರೋಗಿಗಳ ಚಿಕಿತ್ಸೆಯಲ್ಲಿ ಸಾಂಪ್ರದಾಯಿಕ ಚಿಕಿತ್ಸಾ ಕೇಂದ್ರಗಳ ಪಾತ್ರವನ್ನು ವಿಶ್ಲೇಷಿಸುವುದು. ವೃತ್ತಿಪರ ಸಮಾಜಕಾರ್ಯಕರ್ತರ ಪಾತ್ರವನ್ನು ವಿಶ್ಲೇಷಿಸುವುದು. ಅಧ್ಯಯನದ ಅವಧಿ: 1985 ರಲ್ಲಿ ನಾನು ಪರಿಚಯದ ಭೇಟಿ ಆರಂಭಿಸಿದೆ. ನಂತರ ಅನೇಕ ಅಧ್ಯಯನ ಸಾಧನಗಳನ್ನು ಪ್ರಯೋಗಿಸಿದೆ. ಕೊನೆಗೆ ಅಂತಿಮ ಸಂಶೋಧನಾ ಸಾಧನವನ್ನು ತಯಾರಿಸಿದೆ. ಇದೆಲ್ಲಾ ಕಾರ್ಯವನ್ನು ಮುಗಿಸಲು ಸುಮಾರು ಎರಡು ವರ್ಷಗಳ ಅವಧಿ ಬೇಕಾಯಿತು. ಈ ದೀರ್ಘ ಕಾಲಾವಧಿಗೆ ಕಾರಣ ನನ್ನ ಅಧ್ಯಾಪಕ ವೃತ್ತಿ ಮತ್ತು ಸಾಧನಗಳ ತಯಾರಿಕೆಯಲ್ಲಿ ಅಳವಡಿಸಿಕ್ಕೊಳ್ಳಬೇಕಾದ ಪರಿಕರಗಳ ಕುರಿತು ಕೈಗೊಂಡ ಕಸರತ್ತು. 1986 ರಿಂದ 1989ರವರೆಗೆ ಮಾಹಿತಿ ಸಂಗ್ರಹಣೆ, ಸಾಹಿತ್ಯ ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲಾಯಿತು. ನಂತರ ಪ್ರಬಂಧದ ತಯಾರಿಕೆ, ದತ್ತಾಂಶ ವಿಶ್ಲೇಷಣೆ, ಇತರೆ ಕೆಲಸವನ್ನು ಮುಗಿಸಿ, 1993 ರಲ್ಲಿ ಪ್ರಬಂಧವನ್ನು ಪಿಹೆಚ್.ಡಿ. ಪದವಿಗಾಗಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಯಿತು. ನಮೂನೆ ಆಯ್ಕೆಯ ತಂತ್ರೋಪಾಯ: ವಿವಿಧ ಕ್ಷೇತ್ರಗಳ ಪರಿಚಯ ಭೇಟಿ ವೇಳೆಯಲ್ಲಿ ತಿಳಿದ ಮತ್ತೊಂದು ವಿಷಯವೆಂದರೆ ಈ ಕ್ಷೇತ್ರಗಳಲ್ಲಿ ಅಲ್ಲಿಗೆ ಬರುವಂತಹ ಯಾವುದೇ ರೋಗಿಗಳ ಬಗ್ಗೆ ದಾಖಲೆಗಳು ಇರಲಿಲ್ಲ. ಆದ್ದರಿಂದ ತಿಂಗಳಿಗೆ, ವರ್ಷಕ್ಕೆ, ಎಷ್ಟು ಜನ ಚಿಕಿತ್ಸೆಗೆಂದು ಬರುತ್ತಾರೆ ಎಂಬ ಮಾಹಿತಿ ಸಿಗಲಿಲ್ಲ. ಹೀಗಾಗಿ ನನ್ನ ನಮೂನೆಯ ಸಂಖ್ಯೆ/ಗಾತ್ರ ಎಷ್ಟಿರಬೇಕೆಂದು ಪೂರ್ವ ನಿರ್ಧಾರ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಕ್ಷೇತ್ರ ಕಾರ್ಯಕ್ಕಾಗಿ ಸ್ವತಃ ನಿಗದಿತ ದಿನಗಳಲ್ಲಿ ಆಯಾ ಸ್ಥಳಗಳಿಗೆ ಭೇಟಿಕೊಟ್ಟು ಆ ದಿನ ಬಂದಂತಹ ನನ್ನ ಆಯ್ಕೆಗೆ ಒಳಪಟ್ಟಂತಹ ಮತ್ತು ನನ್ನ ಸಂಶೋಧನೆಗೆ ಸಹಕರಿಸುವಂತಹ ವ್ಯಕ್ತಿ/ಕುಟುಂಬಗಳನ್ನು ಗುರುತಿಸಬೇಕಾಗುತ್ತಿತ್ತು. ಆದ್ದರಿಂದ ಯಾವುದೇ ಪೂರ್ವಗ್ರಹದಿಂದ ದೂರವಿರಲು ನನ್ನ ಸಂಶೋಧನೆಯ ವ್ಯಾಪ್ತಿಗೆ ಬರುವಂತಹ ವ್ಯಕ್ತಿ(ನಮೂನೆ)ಗಳನ್ನು ಆಯ್ಕೆ ಮಾಡಲು ಕೆಲವೊಂದು ನಿಯಮಗಳನ್ನು ಹಾಕಿಕೊಂಡು ಅದರಂತೆ ಕಾರ್ಯನಿರ್ವಹಿಸಿದೆ.. ಅಧ್ಯಯನದ ಮುಖ್ಯ ತಥ್ಯಾಂಶಗಳು: ಇಲ್ಲಿ ಅಧ್ಯಯನದ ತಥ್ಯಾಂಶಗಳನ್ನು ಎರಡು ಭಾಗಗಳಾಗಿ ಕೊಡಲಾಗಿದೆ. ಭಾಗ -1 ರಲ್ಲಿ ಅರ್ಥಿಗಳ ವೈಯಕ್ತಿಕ ಹಿನ್ನೆಲೆಯಾದ ಅವರ ವಯಸ್ಸು, ಶಿಕ್ಷಣ, ಉದ್ಯೋಗ, ವರಮಾನ, ಕೌಟುಂಬಿಕ ಜೀವನ, ಧಾರ್ಮಿಕ ನಂಬಿಕೆ, ಆಚಾರ, ವಿಚಾರ, ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಭಾಗ -2 ರಲ್ಲಿ ಅಥರ್ಿಗಳ ಮನೋ ಸಾಮಾಜಿಕ ಅಂಶಗಳ ಆಯಾಮಗಳನ್ನು ವಿಶ್ಲೇಷಿಸಲಾಗಿದೆ. ಭಾಗ - 1 (ಅರ್ಥಿಗಳ ವರ್ಗೀಕರಣದ ಬಗ್ಗೆ ಕಳೆದ ಸಂಚಿಕೆಯಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ) 1. ಪ್ರತಿವಾದಿಗಳ ವಯಸ್ಸು: ಗುಂಪು 1ರ (ಐಚ್ಚಿಕ) ಸ್ವಾಧೀನಕ್ಕೊಳಗಾದವರ ವಯಸ್ಸಿಗೂ ಮತ್ತು ಗುಂಪು 2ರ (ಅನೈಚ್ಚಿಕ) ಸ್ವಾಧೀನಕ್ಕೊಳಗಾದವರ ವಯಸ್ಸಿಗೂ ನಡುವೆ ವಯಸ್ಸಿನ ಅಂತರ ಸ್ಪಷ್ಟವಾಗಿರುವುದು ಗೋಚರವಾಗುತ್ತದೆ. ಯಾಕೆಂದರೆ ಗುಂಪು 2ಕ್ಕೆ ಸೇರಿದ ಬಹಳಷ್ಟು (ಶೇ.48 ಕ್ಕೂ ಮೇಲ್ಪಟ್ಟು ಅರ್ಥಿಗಳು 40 ವರ್ಷಕ್ಕೂ ಮೀರಿದವರಾಗಿದ್ದಾರೆ ಮತ್ತು 19 ವರ್ಷ ವಯಸ್ಸಿನ ಒಳಗೆ ಕೇವಲ ಒಬ್ಬ ಅರ್ಥಿಯಿದ್ದಾರೆ. ಇದಕ್ಕೆ ವಿರುದ್ಧವಾಗಿ ಗುಂಪು 2ರ ಬಹಳಷ್ಟು (ಶೇ. 46ಕ್ಕೂ ಮೇಲ್ಪಟ್ಟು ಪ್ರತಿವಾದಿಗಳು 19 ವರ್ಷ ವಯಸ್ಸಿನೊಳಗಿನವರಾಗಿದ್ದರು. ಸಂಖ್ಯಾಶಾಸ್ತ್ರದ ಪರೀಕ್ಷೆ ಆ ಎರಡೂ ಗುಂಪಿನ ನಡುವೆ ನಿಶ್ಚಳ ವ್ಯತ್ಯಾಸ (ಪಿ<0.001) ತೋರಿಸುತ್ತದೆ. 2. ಅರ್ಥಿಗಳ ಲಿಂಗ: ಹೆಚ್ಚಿನ ಪುರುಷರು (ಶೇ. 55ಕ್ಕೂ ಮಿಗಿಲಾಗಿ) ಗುಂಪು 1ಕ್ಕೆ ಸೇರಿದವರು. ಆದರೆ ಹೆಚ್ಚಿನ ಮಹಿಳೆಯರು (ಶೇ. 91ಕ್ಕೂ ಮಿಗಿಲಾಗಿ) ಗುಂಪು 2ಕ್ಕೆ ಸೇರಿದವರಾಗಿದ್ದರು. ಒಟ್ಟು ಗಂಡು:ಹೆಣ್ಣಿನ ಅನುಪಾತ 19:46 ಇತ್ತು. ಈ ತಥ್ಯಾಂಶದಿಂದ ದೃಢಪಡುವುದೇನೆಂದರೆ ಈ ರೋಗವು ಹೆಚ್ಚಾಗಿ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಕಂಡು ಬರುತ್ತದೆಂದು. (ಪಿ.<0.01) 3. ಶಿಕ್ಷಣ ಮಟ್ಟ: ಈ ಅಧ್ಯಯನದಲ್ಲಿ ಅನಕ್ಷರಸ್ಥರು ಶೇ. 46.15 ಇದ್ದರು. ಆದ್ದರಿಂದ ಅರ್ಥಿಗಳ ಶೈಕ್ಷಣಿಕ ಮಟ್ಟ 1980-1990ರಲ್ಲಿ ಭಾರತ/ಕರ್ನಾಟಕದಲ್ಲಿದ್ದ ಸಾರ್ವತ್ರಿಕ ಮಟ್ಟಕ್ಕೆ ಅನುಗುಣವಾಗಿತ್ತೆಂದು ಹೇಳಬಹುದು. 4. ಔದ್ಯೋಗಿಕ ಹಿನ್ನೆಲೆ: ಮಹಿಳೆಯರು ಪ್ರಮುಖವಾಗಿ ಗೃಹಿಣಿಯರಿದ್ದರು (ಶೇ.47.22). ನಂತರ ವ್ಯವಸಾಯ (ಶೇ.11.11), ಮತ್ತು ಕೂಲಿ (ಶೇ.11.11) ಕೆಲಸದಲ್ಲಿ ತೊಡಗಿದ್ದರು. ಆದರೆ ಪುರುಷರು ಹೆಚ್ಚಾಗಿ (ಶೇ.20.69) ದೇವಸ್ಥಾನಗಳಲ್ಲಿ ಅರ್ಚಕರಾಗಿದ್ದರು, ಇಲ್ಲವೆ ವ್ಯಾಪಾರ (ಶೇ.13.79)ದಲ್ಲಿ ತೊಡಗಿದ್ದರು. ಮತ್ತೆ ಉಳಿದಂತೆ ಹೆಚ್ಚಿನ ಅರ್ಥಿಗಳು-ವಿದ್ಯಾರ್ಥಿ/ ಕುಶಲಕರ್ಮಿ/ಶ್ರದ್ಧಾಚಿಕಿತ್ಸಕರು ಅಥವಾ ನಿರುದ್ಯೋಗಿಗಳಾಗಿದ್ದರು 5. ಅರ್ಥಿಗಳ ಕುಟುಂಬದ ಇತಿಹಾಸ: ಗುಂಪು 1ರ ಶೇ.55.67ರಷ್ಟು ಜನ ತಮ್ಮ ಕುಟುಂಬದಲ್ಲಿ ಹಿಂದಿನಿಂದ ಈ ವರ್ತನೆಯ ಇತಿಹಾಸ ಇತ್ತೆಂದರು. ಆದರೆ ಗುಂಪು 2ಕ್ಕೆ ಸೇರಿದ ಹೆಚ್ಚಿನ (ಶೇ.77.78) ಜನ ತಮ್ಮ ಕುಟುಂಬದ ಇತಿಹಾಸದಲ್ಲಿ ಈ ವರ್ತನೆಯು ಇರಲಿಲ್ಲವೆಂದರು. 6. ಭೂಗೋಳಿಕ ಹಿನ್ನೆಲೆ: ದತ್ತಾಂಶದ ಪ್ರಕಾರ ಗುಂಪು 1ರ ಹೆಚ್ಚಿನ (ಶೇ.51.72) ಪ್ರತಿವಾದಿಗಳು ನಗರ ಪ್ರದೇಶಕ್ಕೆ, ಹಾಗೂ ಗುಂಪು 2ರ ಹೆಚ್ಚಿನ (ಶೇ.66.67) ಪ್ರತಿವಾದಿಗಳು ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದರು. ಆದರೆ ಈ ವ್ಯತ್ಯಾಸ ಸಂಖ್ಯಾಶಾಸ್ತ್ರದ ವಿಶ್ಲೇಷಣೆಯ ಪ್ರಕಾರ ಮಹತ್ವ ಪಡೆದಿಲ್ಲ. ಆದ್ದರಿಂದ ಎರಡೂ ವಿದಧ ವೈಪರಿತ್ಯವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಕಾಣಬಹುದು ಎಂದು ಹೇಳಬಹುದು. ಆದರೆ ಈ ಅಧ್ಯಯನದಲ್ಲಿ ಕಂಡು ಬಂದ ಪ್ರಮುಖ ವಿದ್ಯಮಾನವೆಂದರೆ ಪ್ರಾದೇಶಿಕ ವಲಯದಲ್ಲಿ ಎರಡು ವಿಧದ ಅಭಿವ್ಯಕಿಯಲ್ಲಿ ಭಾರೀ ವ್ಯತ್ಯಾಸ ಕಂಡು ಬರುತ್ತದೆ. ದಕ್ಷಿಣ ಭಾಗದ ಕರ್ನಾಟಕದಲ್ಲಿ ಗುಂಪು 1ರ ಅರ್ಥಿಗಳ ಸಂಖ್ಯೆ ಶೇ.80ಕ್ಕಿಂತ ಹೆಚ್ಚಿತ್ತು, ಆದರೆ ಗುಂಪು 2ರ ಹೆಚ್ಚಿನ (ಶೇ.80) ಅರ್ಥಿಗಳು ಉತ್ತರ ಕರ್ನಾಟಕಕ್ಕೆ ಸೇರಿದವರಾಗಿದ್ದರು. ಆದ್ದರಿಂದ ಇಲ್ಲಿ ನಾವು ನಿಸ್ಸಂದೇಹವಾಗಿ ಪ್ರತಿವಾದಿಗಳ ಪ್ರಾದೇಶಿಕ ಹಿನ್ನೆಲೆ, ಅಲ್ಲಿಯ ನಂಬಿಕೆ, ಆಚರಣೆಗಳ ಪ್ರಭಾವವು ಜನರು ಯಾವ ವಿಧದ ರೋಗಕ್ಕೆ ಬಲಿಯಾಗುತ್ತಾರೆಂಬುದನ್ನು ನಿರ್ಧರಿಸುತ್ತದೆಂದು ಹೇಳಬಹುದು. 7. ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು: ಭಾರತೀಯರು ಸನಾತನ ಧರ್ಮ, ನಂಬಿಕೆ, ಆಚರಣೆಗಳಲ್ಲಿ ತಲೆತಲಾಂತರಗಳಿಂದ ನಂಬಿಕೆ ಇಟ್ಟುಕೊಂಡು ಜೀವನ ನಡೆಸುತಿದ್ದಾರೆ. ಜನರು ತಮ್ಮ ಕಷ್ಟ, ಸುಖಗಳಿಗೆ ಅಗೋಚರ ಶಕ್ತಿಗಳು, ವಿಧಿ, ಕಾರಣವೆಂದು ನಂಬಿರುತ್ತಾರೆ. ಈ ಶಕ್ತಿಗಳಿಗೆ ಕೋಪಬರದಂತೆ ಸಂತೋಷ ಪಡಿಸಲು ಅನೇಕ ರೀತಿಯ ಪೂಜೆ, ಪುರಸ್ಕಾರ, ಸಂಸ್ಕಾರ, ವ್ರತ, ನಿಯಮಗಳನ್ನು ಆಚರಿಸುತ್ತಾರೆ. ಭಾಗ 2 1. ಸಾಧೀನ (ದೈವಾವೇಶ) ವರ್ತನಾ ಘಟನೆಗಳ ವಿವರಣೆ: ದೈವಾವೇಶದಲ್ಲಿರುವಾಗ ಅವರ ವರ್ತನೆಯು ಹೇಗೆ ಇರುತ್ತದೆ ಎಂಬುದನ್ನು ವಿಚಾರಿಸಿದಾಗ/ ಅವಲೋಕಿಸಿದಾಗ ಎರಡು ಗುಂಪಿನ ನಡುವೆ ಸ್ಪಷ್ಟ ವ್ಯತ್ಯಾಸ ಈ ಕೆಳಗಿನಂತೆ ಕಂಡು ಬಂತು. ಆ ಸಮಯದಲ್ಲಿ ಗುಂಪು 1ರ ಮಾಹಿತಿದಾರರು-ಆ ಸ್ಥಳದಲ್ಲಿ ನೆರೆದಿರುವರಿಗೆ ಸಲಹೆ ನೀಡುವುದು (ಶೇ.89.66), ನಾಟಕೀಯವಾಗಿ ಮಾತನಾಡುವುದು (ಶೇ.41.38), ವಿಶಿಷ್ಟ ಭಂಗಿ (ಶೇ.34.48) ಯಲ್ಲಿರುವ ವರ್ತನೆಯನ್ನು ತೋರಿಸಿದರೆ, ಗುಂಪು 2ರ ಮಾಹಿತಿದಾರರಲ್ಲಿ ಬೈದಾಡುವುದು (ಶೇ.80.56), ಅತ್ತಿಂದಿತ್ತ ತೂರಾಡುವುದು (ಶೇ.33.33), ಉರುಳಾಡುವುದು, ಜೋರಾಗಿ ಧ್ವನಿಎತ್ತಿ ಮಾತನಾಡುವ ವರ್ತನೆಯು ಸಾಮಾನ್ಯವಾಗಿತ್ತು. ಇಂತಹ ಘಟನೆಗಳು ಮಾಹಿತಿದಾರರಲ್ಲಿ ಎಷ್ಟು ದಿನಗಳಿಗೊಮ್ಮೆ ಪುನರಾವರ್ತನೆ ಆಗುತ್ತದೆ ಎಂದಾಗ ಕುತೂಹಲಕಾರಿಯಾದ ಮತ್ತು ಭಿನ್ನವಾದ ಉತ್ತರ ಸಿಕ್ಕಿದೆ. ಗುಂಪು 1ರ ಶೇ. 41ಕ್ಕೂ ಹೆಚ್ಚಿನ ಜನರು ಈ ಘಟನೆಯು ವಾರಕ್ಕೆ ಎರಡು ದಿನ ಕಾಣಿಸಿಕೊಳ್ಳುತ್ತದೆ ಎಂದರು. ಅದರಲ್ಲೂ ಹೆಣ್ಣು ದೈವವಾದರೆ ಪ್ರತೀ ಮಂಗಳವಾರ ಮತ್ತು ಶುಕ್ರವಾರ, ಅದೇ ಗಂಡು ದೈವವಾದರೆ ಪ್ರತೀ ಬುಧವಾರ, ಮತ್ತು ಭಾನುವಾರ ಕಾಣಿಸಿಕೊಳ್ಳುತ್ತೆ ಎಂದರು. ಆದರೆ ಗುಂಪು 2ರ ಮಾಹಿತಿದಾರರು ಹೆಚ್ಚಾಗಿ (ಶೇ. 52) ಹದಿನೈದು ದಿನಗಳಿಗೊಮ್ಮೆ ಮರುಕಳಿಸುತ್ತದೆಯೆಂದರು. ಊ. ದೈವಾವೇಶ ಘಟನೆಗಳ ಕುರಿತು ಮಾಹಿತಿದಾರರ ಭಾವನೆ: ಈ ವಿಷಯಕ್ಕೆ ಸಂಬಂಧಿಸಿದಂತೆಯೂ ಎರಡು ಗುಂಪಿನ ಅರ್ಥಿಗಳಲ್ಲಿ ವ್ಯತ್ಯಾಸ ಕಂಡು ಬಂತು. ಗುಂಪು 1ರ ಸದಸ್ಯರು ಹೆಚ್ಚಾಗಿ (ಶೇ. 86.21) ಸಂತೋಷ ವ್ಯಕ್ತಪಡಿಸಿದರೆ, ಗುಂಪು 2ರಲ್ಲಿ ಹೆಚ್ಚಿನವರು (ಶೇ.83.33) ತಮ್ಮ ಈ ವೈಪರಿತ್ಯ ಘಟನೆಗಳ ಬಗ್ಗೆ ಚಿಂತೆ ಕಾಣಿಸಿಕೊಂಡಿತು ಎಂದಿದ್ದಾರೆ. ಈ ಅಸಾಮಾನ್ಯ ಘಟನೆಗಳ ನಿವಾರಣೆಗಾಗಿ ಕೈಗೊಂಡ ಕ್ರಮಗಳು ಸಹ ಆ ಗುಂಪಿನ ಅನುಭವ ಮತ್ತು ಭಾವನೆಗಳಿಗೆ ತಕ್ಕಂತೆ ಇತ್ತು. ಗುಂಪು 1ರ ಮಾಹಿತಿದಾರರು ಹೆಚ್ಚಾಗಿ (ಶೇ. 89.66) ದೇವಸ್ಥಾನ/ ಪುಣ್ಯಕ್ಷೇತ್ರಗಳಿಗೆ ಮೊರೆ ಹೋಗಿದ್ದಾರೆ. ಆದರೆ ಗುಂಪು ಎರಡರ ಮಾಹಿತಿದಾರರು ಹೆಚ್ಚಾಗಿ (ಶೇ. 63.89) ಸಾಂಪ್ರದಾಯಿಕ ಚಿಕಿತ್ಸಕರ ಬಳಿ, ಮತ್ತು ಶೇ.52.78ರಷ್ಟು ಸದಸ್ಯರು ದೇವಸ್ಥಾನ/ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ನಂತರ ಶೇ.24.14 (ಗುಂಪು 1)ಮಾಹಿತಿದಾರರು ಈ ಅಪಸಾಮಾನ್ಯ ಘಟನೆಗಳ ನಿವಾರಣೆಗಾಗಿ, ಉದಾಸೀನತೆ, ಅಪಮಾನಮಾಡುವುದು. ಆತ್ಮದ ಬೇಡಿಕೆ ಪೂರೈಕೆ, ಇತ್ಯಾದಿ ಕ್ರಮಗಳನ್ನು ಕೈಗೊಂಡಿದ್ದಾಗಿ ತಿಳಿಸಿರುತ್ತಾರೆ. ನಿವಾರಣಾ ಕ್ರಮಗಳಿಂದ ಉಂಟಾದ ಪರಿಣಾಮವನ್ನು ತಿಳಿಯಲು ಪ್ರಯತ್ನಿಸಿದಾಗ ತಿಳಿದು ಬಂದಿದ್ದೇನೆಂದರೆ, ಕೇವಲ ಗುಂಪು 2ರ ಶೇ. 11.11ರಷ್ಟು ಜನರು ಮಾತ್ರ ಸಂಪೂರ್ಣವಾಗಿ ಅಪಸಾಮಾನ್ಯ ವರ್ತನೆಯಿಂದ ಮುಕ್ತಿ ಹೊಂದಿದ್ದರು. ಮತ್ತು ಶೇ. 27.78ರಷ್ಟು ಜನರು ಅರ್ಧ ಭಾಗದಷ್ಟು ಗುಣಮುಖ ಹೊಂದಿದ್ದರು. ಆದರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಶೇ.44.44ರಷ್ಟು ಜನರಲ್ಲಿ ಯಾವುದೇ ರೀತಿಯ ಶಮನವು ಕಂಡು ಬರಲಿಲ್ಲವೆಂದು ಅಭಿಪ್ರಾಯಪಟ್ಟರು. ಅದೇ ಗುಂಪು 1ರ ಶೇ.75.87 ರಷ್ಟು ಜನರು ಈ ವರ್ಗಕ್ಕೆ (ಶೂನ್ಯ ಶಮನ) ಸೇರಿದವರಾಗಿದ್ದರು. ಪರಿಸಮಾಪ್ತಿ: ಪ್ರಸಕ್ತ ಅಧ್ಯಯನದ ದತ್ತಾಂಶಗಳ ಆಧಾರದ ಮೇಲೆ ಸ್ವಾಧೀನತೆ (ದೈವಾವೇಶ) ಘಟನೆಗಳನ್ನು ವ್ಯಕ್ತಿ ತನ್ನ ಸಂಕಟ/ಒತ್ತಡ ಸನ್ನಿವೇಶಗಳೊಂದಿಗೆ ಹೊಂದಿಕೊಳ್ಳಲು ಕಲಿತುಕೊಂಡ/ಅರ್ಜಿತ ವರ್ತನೆಯ ರೀತಿ ಎಂದು ಅರ್ಥೈಸಿಕೊಳ್ಳಬಹುದು. ಈ ಘಟನಾವಳಿಯು ಮುಂಚಿನಿಂದಲೇ ಕೆಲವೊಂದು ಪೂರಕ ಅಂಶಗಳನ್ನು ಹೊಂದಿದಂತಹ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆ ಅಂಶಗಳೆಂದರೆ - ಪ್ರಭಾವಿತಗೊಳ್ಳುವ ವಯಸ್ಸು, ವಿವಿಧ ಪರ್ವಕಾಲದಲ್ಲಿರುವ ಸಣ್ಣ ವಯಸ್ಸಿನ ಹೆಣ್ಣುಮಕ್ಕಳು, ಈ ಜನರು ಅನುಸರಿಸುವ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು, ಯುವಕರು/ಯುವತಿಯರು ಜೀವನದಲ್ಲಿ ಅನುಭವಿಸಿದ ಪರಿಹಾರವಾಗದ ಮನೋಸಾಮಾಜಿಕ ಮತ್ತು/ಅಥವಾ ಮನೋ-ದೈಹಿಕ ಒತ್ತಡ ಸನ್ನಿವೇಶಗಳು, ಮತ್ತು ದೈವಾವೇಶವನ್ನು ಒಪ್ಪುವಂತಹ, ಪ್ರಚೋದನಾಕಾರಿ ವಾತಾವರಣಕ್ಕೆ ಆ ನೊಂದ ಜನರನ್ನು ಗುರಿಪಡಿಸಿದಾಗ/ಪರಿಚಯಿಸಿದಾಗ, ಅವರಲ್ಲಿ ಆ ಸನ್ನಿವೇಶಕ್ಕೆ ಒಪ್ಪುವಂತಹ ದೈವಾವೇಶ (ಐಚ್ಛಿಕ/ಅನೈಚ್ಛಿಕ) ವರ್ತನೆಯು ಪ್ರಕಟವಾಗುತ್ತದೆ. ಹಾಗೂ ಈ ವರ್ತನೆಗಳಿಗೆ ವ್ಯಕ್ತಿಯ ಪರಿಸರದಲ್ಲಿ ಎಲ್ಲಿಯವರೆಗೆ ಪುನರ್ಪುಷ್ಟಿಕರಣ ದೊರಕುತ್ತದೆಯೋ, ಅಲ್ಲಿಯವರೆಗೆ ಮಾತ್ರ ಈ ಘಟನೆಗಳು ಪುನರಾವರ್ತನೆಗೊಳ್ಳುತ್ತಿರುತ್ತದೆ. ಆಧಾರ ಗ್ರಂಥಗಳು:
ಡಾ|| ಶೋಭಾದೇವಿ, ಆರ್. ಪಾಟೀಲ್, ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|