ಸಮಾಜಕಾರ್ಯ ಅಧ್ಯಾಪನದಿಂದ ನಿವೃತ್ತಿ ಹೊಂದಿಯೇ ಹದಿನಾರು ವರ್ಷಗಳು ಉರುಳಿದವು. ನನ್ನ ಜೀವನವನ್ನು ಸಿಂಹಾವಲೋಕನ ಮಾಡಿದರೆ ಕಾಣುವುದೇನು? ಸಮಾಜಕಾರ್ಯದ ಮತ್ತು ನನ್ನ ಜೀವನಾನುಭವದ ಹೆಜ್ಜೆಗುರುತುಗಳೇನು? ಈ ಪ್ರಶ್ನೆಗಳ ಸುತ್ತಲೇ ತಿರುಗುತ್ತಿರುವ ಸ್ಥೂಲಾವಲೋಕನ ಈ ಮುಂದಿನದ್ದು.
ಪ್ರವೇಶ ಆಕಸ್ಮಿಕ ಸಮಾಜಕಾರ್ಯಕ್ಕೆ ನಾನು ಪ್ರವೇಶಿಸಿದ್ದು ಆಶ್ಚರ್ಯಕರ ರೀತಿಯಲ್ಲಿ, ಬಹುಶಃ ನನ್ನ ಅರಿವಿಲ್ಲದಂತಯೇ ಗುರುತಿಸಬಹುದಾದರೆ ಸದಾಶ ಯ ಹೊಂದಿದ್ದ ಹಿರಿಯರೊಬ್ಬರ ಸಲಹೆ ಸೂಚನೆಯ ಮೇರೆಗೆ, ಕನ್ನಡ ಸಾಹಿತ್ಯದ ಆರಾಧಕ ಅಥವಾ ಕೃಷಿಕ ಆಗಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು, ಕವನ ಪ್ರಬಂಧ ರಚನೆಯಲ್ಲಿ ತೊಡಗಿದ್ದು, ಕನ್ನಡ ಸಾಹಿತ್ಯ ಕೃತಿಗಳನ್ನೇ ಓದುವುದರಲ್ಲಿ ಹೆಚ್ಚಿನ ಆಸಕ್ತಿ, ಆಸ್ಥೆಯನ್ನು ತಳೆದಿದ್ದೆ. ಅಂದಿನ ಮದ್ರಾಸು ಪ್ರಾಂತ್ಯಕ್ಕೆ ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಕನ್ನಡದಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ನನ್ನ ಗುರುಗಳೂ ನನಗೆ ಪ್ರೋತ್ಸಾಹದ ನೆರವು ನೀಡುತ್ತಿದ್ದರು. ಇದೂ ನನ್ನ ಕನ್ನಡ ದುಡಿಮೆಗೆ ಒತ್ತಾಸೆಯಾಯ್ತು. (ಆರ್ಥಿಕ ಅನನುಕೂಲ ಮತ್ತು ಇತರ ತೊಂದರೆಗಳ ಕಾರಣದಿಂದ ಒಂದು ವರ್ಷ ನನ್ನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದಿದ್ದುದರಿಂದ ಪತ್ರಿಕೋದ್ಯಮಿಯಾಗಿ ಹುಬ್ಬಳ್ಳಿ, ದಾವಣಗೆರೆ ನಗರಗಳಲ್ಲಿ ಕೆಲಸ ಮಾಡಬೇಕಾಯ್ತು) ಪ್ರೌಢಶಾಲಾ ಶಿಕ್ಷಣದ ನಂತರ ನನ್ನ ಅಣ್ಣ ಹಿ.ಮ. ನಾಗಯ್ಯನವರ ಸಹಾಯದಿಂದ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೇರಿದೆ. ಅಲ್ಲಿ ಓದುವಾಗ ಪ್ರೊ. ಕೆ.ಎಸ್. ಕೃಷ್ಣಮೂರ್ತಿ, ಪ್ರೊ. ಗೋಪಾಲಕೃಷ್ಣ ಅಡಿಗ, ಇಂಗ್ಲೆಂಡಿನ ಡೇವಿಡ್ ಹಾರ್ಸ್ ಬರೋ ಇಂಥವರ ನೆರವು ದೊರೆಯಿತು. ಅಲ್ಲಿಯೇ ಕರುಣಾಮಯಿ ಫಾದರ್ ಮುತಡಂ ಕಷ್ಟಕಾಲದಲ್ಲಿ ನೆರವಾದರು. ಆ ಅಧ್ಯಯನ ಕಾಲದಲ್ಲಿಯೇ ಕನ್ನಡದ ಕೃಷಿ ನಡೆದು ಅಂತಿಮ ಪರೀಕ್ಷೆಯಲ್ಲಿ ಒಂಭತ್ತನೆಯ ರ್ಯಾಂಕ್ ಪಡೆದುದಲ್ಲದೆ ಮೈಸೂರು ವಿಶ್ವವಿದ್ಯಾಲಯಕ್ಕೆ ಕನ್ನಡದಲ್ಲಿ ಪ್ರಥಮ ಸ್ಥಾನ ದೊರೆಕಿಸಿಕೊಂಡೆ ಎಂದು ನೆನಪು. ಆದುದರಿಂದಲೂ ಮಹಾರಾಜ ಕಾಲೇಜಿನಲ್ಲಿ ಕನ್ನಡ ಆನರ್ಸ್ ಓದಲು ನನಗೆ ಸಹಜವಾಗಿಯೇ ಅವಕಾಶ ಸಿಕ್ಕಿದುದಲ್ಲದೆ ಮೆರಿಟ್ ಸ್ಕಾಲರ್ಷಿಪ್ ಕೂಡಾ ದೊರೆಯಿತು.
ಪಡೆದ ತಿರುವು
ಅದೇ ಆ ಸಂದರ್ಭದಲ್ಲಿಯೇ ನನ್ನ ಶೈಕ್ಷಣಿಕ ಜೀವನಕ್ಕೆ ತಿರುವು ಸಿಕ್ಕಿತು, ಮತ್ತು ಗೊತ್ತಾಗದ ರೀತಿಯಲ್ಲಿ ನನ್ನ ವೃತ್ತಿ ಜೀವನದ ಅಂಕುರಾರ್ಪಣವಾಯ್ತು. (1952-53). ಆಗ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯವರಾಗಿದ್ದ ಡಾ. ಬಿ.ಎಲ್. ಮಂಜುನಾಥ ಅವರ ಸಲಹೆ ಪ್ರಕಾರ ನಾನು ಕನ್ನಡ ಆನರ್ಸ್ ಬಿಟ್ಟು ಸಮಾಜಶಾಸ್ತ್ರ ಆನರ್ಸ್ ಸೇರಿದೆ. ಅದೇ ವರ್ಷವೇ 'ಸಾಮಾಜಿಕ ತತ್ವಶಾಸ್ತ್ರ ತನ್ನ ನಾಮವನ್ನು 'ಸಮಾಜಶಾಸ್ತ್ರ' ಆಗಿ ಪರಿವರ್ತಿಸಿಕೊಂಡಿತ್ತು. 'ಮೆಟಫಿಸಿಕ್ಸ್ ಇದ್ದದ್ದು 'ಫಿಲಾಸಫಿ ಆಯ್ತು. (ಆ ಕೋರ್ಸ್ ಗ ಎಸ್.ಎಲ್. ಭೈರಪ್ಪ ಸೇರಿದ್ದ ನೆನಪು. ಇಂಗ್ಲಿಷ್ ಆನರ್ಸ್ ನಲ್ಲಿ ಯು.ಆರ್. ಅನಂತಮೂರ್ತಿ, ಕನ್ನಡ ಆನರ್ಸ್ ನಲ್ಲಿ ಆಗಲೇ ಎಂ. ಚಿದಾನಂದಮೂರ್ತಿ ಅಧ್ಯಯನ ಮಾಡುತ್ತಿದ್ದರು.) ಬಹದೊಡ್ಡ ವಿದ್ವಾಂಸರ ಗುಂಪೇ ಆ ಕಾಲೇಜಿನಲ್ಲಿ ನಮ್ಮ ಅಧ್ಯಯನಕ್ಕೆ ಚೇತನ ತುಂಬಿದರು. ಸಮಾಜಶಾಸ್ತ್ರಕ್ಕೆ ಸಂಬಂಧಿಸಿದಂತೆ ಎಂ. ಯಾಮುನಾಚಾರ್ಯ, ಟಿ.ಎ. ಪುರಷೋತ್ತಮ, ಎನ್.ಎ. ನಿಕ್ಕಂ, ಮುಂತಾದವರಿದ್ದರೆಂದು ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಸಮಾಜಶಾಸ್ತ್ರದ ಅಧ್ಯಯನದ ಮಧ್ಯೆಯೂ ಸೃಜನಾತ್ಮಕ ಸಾಹಿತ್ಯವು ನನ್ನ ಒಳಗನ್ನು ತುಂಬಿಕೊಂಡೇ ಇತ್ತು. ಸಮಾಜದ ಸಂಕೀರ್ಣದ ಮತ್ತು ವ್ಯಕ್ತಿತ್ವದ ಒಳಪದರುಗಳ ಪರಿಚಯವಾಗುತ್ತಿದ್ದಂತೆ ನನ್ನ ಸೃಜನಾತ್ಮಕ ಶಕ್ತಿಗೆ ನವಿನ ಆಯಾಮಗಳು ಸೇರಿಕೊಂಡವು. ಇವುಗಳಿಂದ ಸಾಹಿತ್ಯ ವಲಯದಲ್ಲಿ ಕೆಲವು ಕಾರ್ಯಕ್ರಮಗಳಿಗೆ ಪ್ರವರ್ತಕನು ನಾನಾದೆನೆಂಬುದು ನೆನಪಾಗುತ್ತಿದೆ. 'ಕನ್ನಡ ಕುಲ ಪ್ರಕಾಶನ ಸಂಸ್ಥೆಯೊಂದನ್ನು ಆರಂಭಿಸಿ, ಸಹಪಾಠಿಗಳನ್ನು ಸಂಘಟಿಸಿದೆ. ಸಾಹಿತ್ಯ ಸಂಘವನ್ನು ಆರಂಭಿಸಿ, ಗೆಳೆಯರೊಡಗೂಡಿ ಮಾಸಿಕ ಸಂವಾದಗೋಷ್ಠಿಗಳನ್ನು ನಡೆಸುತ್ತಾ ಅಂದು ಸುಪ್ರಸಿದ್ಧರಾಗಿದ್ದ ಎಂ. ಗೋಪಾಲಕೃಷ್ಣ ಅಡಿಗ, ಆನಂದ, ತರಸು, ತ್ರಿವೇಣಿ, ಮುಂತಾದವರನ್ನು ಕೂಡಿಸುವ ಪ್ರಯತ್ನ ಮಾಡಿದೆ. ಇಂಟರ್ಮೀಡಿಯೆಟ್ ಓದುವಾಗಲೇ ಮೊಳಕೆದೋರಿದ ವಸ್ತುವನ್ನು ಆಧರಿಸಿ, ಮನೋವಿಶ್ಲೇಷಣಾತ್ಮಕ ಕಾದಂಬರಿ 'ಕೆದರಿದ ಕೆಂಡವನ್ನು ಬರೆದು ಪ್ರಕಟಿಸಿದೆ. (ಈ ಪ್ರಕಟಣೆಗೆ ನೆರವಾದವರು ಸಾಹಿತಿ ಹೆಚ್. ದೇವಿರಪ್ಪ, ಪ್ರಕಾಶಕರು: ಹರಿಹರದ ವಿದ್ಯಾರಣ್ಯ ಪ್ರಕಾಶನ 1954) ಈ ಕಾದಂಬರಿಯು ಪ್ರಶಂಸೆಯನ್ನು ಗಳಿಸಿ, ಹಿರಿಯ ಸಾಹಿತಿಗಳ ಗಮನ ಸೆಳೆಯಿತು. ಸಮಾಜಶಾಸ್ತ್ರದ ಮೂಲಕ ಇತರ ಸಮಾಜವಿಜ್ಞಾನಗಳ ಪರಿಚಯವಾಗತೊಡಗಿ ಕನ್ನಡ ಸಾಹಿತ್ಯದಾಚೆಗಿನ ವಾಸ್ತವತೆಯ ವಿಸ್ತಾರ ಜಗತ್ತು ಕಣ್ಮುಂದೆ ತೆರೆದುಕೊಂಡಿತು. ಅಂತರ್ಮುಖತೆಯೇ ನನ್ನ ವ್ಯಕ್ತಿತ್ವದ ಪ್ರಧಾನ ಲಕ್ಷಣವಾಗಿದ್ದುದು ಬಹಿರ್ಮುಖತೆಗೆ ಮೊಗ ಮಾಡತೊಡಗಿತು. PROMOTE
|
|
|
0 Comments
Leave a Reply.
Categories
All
ಇತರೆ
ಎನ್‍ಜಿಓ
ಪರಿಸರ
ವ್ಯಕ್ತಿಚಿತ್ರಗಳು
ಸಮಾಜಕಾರ್ಯ
ಸಮುದಾಯ ಸಂಘಟನೆ
ಸಂಪುಟ 1
ಸಂಪುಟ 2
ಸಂಪುಟ 3
ಸಂಪುಟ 4
ಸಂಪುಟ 5
ಸಂಪುಟ 6
ಸಂಪುಟ 7
ಸಂಪುಟ 8
ಸಂಪುಟ 9
Social Work Learning Academy
MHR LEARNING ACADEMY
Get it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.