Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Promote Your Books
  • Niruta Book Club
  • Our Services
  • Leaders Talk
  • HR Blog
    • Inviting Articles
  • Books / Online Store
  • Media Mentions
    • Photos
  • Join Our Online Groups
  • Contact Us
Niruta Publications

ಮಹಿಳಾ ಸಬಲೀಕರಣದಲ್ಲಿ ಸ್ವ-ಸಹಾಯ ಸಂಘಗಳ ಪಾತ್ರ

12/19/2019

4 Comments

 
Picture
ಪೀಠಿಕೆ 
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವಿದೆ. ನಿನ್ನ ಶಕ್ತಿಯ ಬಲದಿಂದಲೇ ವ್ಯಕ್ತಿಯಾದೆನು ನಾನು ಈ ಲೋಕದಲ್ಲಿ ಎಂಬ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪರ ಹೆಣ್ಣಿನ ಮಹತ್ವವನ್ನು ಸಾರುವ ಪದ್ಯವನ್ನು ಉಲ್ಲೇಖಿಸುತ್ತಾ ಸುಶಿಕ್ಷಿತ ಗೃಹಿಣಿ, ಉದ್ಯೋಗಸ್ಥ ಮಹಿಳೆ ದೇಶದ ಆಸ್ತಿ ಮಾತ್ರವಲ್ಲ ಹೆಮ್ಮೆ ಕೂಡ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂದೂ ಹೆಣ್ಣನ್ನು ಕೊಂಡಾಡಲಾಗಿದೆ. ಇನ್ನೂ ಮುಂದುವರೆದು
ಮಾತೆಯಿಂ ಹಿತವರಿಲ್ಲ ಕೋತಿಯಿಂ ಮರುಳಿಲ್ಲ
ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವು
ಜಾತನಿಂದಲ್ಲ ಸರ್ವಜ್ಞ
ಎಂಬ ಸರ್ವಜ್ಞನ ವಚನದಂತೆ ಹೆಣ್ಣು ಮಗಳಾಗಿ, ಸೋದರಿಯಾಗಿ, ಮಡದಿಯಾಗಿ, ತಾಯಿಯಾಗಿ ಕುಟುಂಬದಲ್ಲಿನ ಅವಿಭಾಜ್ಯ ಅಂಗವಾಗಿದ್ದಾಳೆ. ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಸಾಹಸ, ಕಲೆ, ವಿಜ್ಞಾನ, ಕ್ರೀಡೆ, ಸಂಗೀತ.... ಹೀಗೆ ಸರ್ವ ಕ್ಷೇತ್ರಗಳನ್ನೂ ಮಹಿಳೆ ಪ್ರತಿನಿಧಿಸಿದ್ದಾಳೆ. 

ಮಹಿಳೆಯರನ್ನು ಸಮಾಜದಲ್ಲಿ ದ್ವಿತೀಯ ದರ್ಜೆಯ ಪ್ರಜೆಯೆಂದು ಅನಾದಿಕಾಲದಿಂದಲೂ ಕಡೆಗಣಿಸಲಾಗಿದೆ. ಮಹಿಳೆಯು ಸಮಾಜದ ಜೀವನಾಡಿಯಾಗಿದ್ದು ಮಹಿಳೆಯರ ಅಭಿವೃದ್ಧಿ, ಸಬಲೀಕರಣಕ್ಕೆ ಸಂಬಂಧಿಸಿದ ಕೂಗು ಬಹು ಹಿಂದಿನದು. ನಿಜಾರ್ಥದಲ್ಲಿ ಮಹಿಳೆಯರು ಸಮುದಾಯವೊಂದರಲ್ಲಿ ವಾಸ್ತವವಾಗಿ ಹೊಂದಿರುವ ಸಾಮಾಜಿಕ, ಆರ್ಥಿಕ ಸ್ಥಾನಮಾನಗಳು ಸಮಾಜವೊಂದರ ಸಮೃದ್ಧಿಯನ್ನು ನಿರ್ಧರಿಸುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣವು ಅತ್ಯಾವಶ್ಯಕವಾದುದು ಮತ್ತು ಅನಿವಾರ್ಯವಾದುದು. ವಿಶ್ವಸಂಸ್ಥೆಯು 1975ರ ವರ್ಷವನ್ನು ಅಂತಾರಾಷ್ಟ್ರೀಯ ಮಹಿಳಾ ವರ್ಷವನ್ನಾಗಿ, 1980ರ ವರ್ಷವನ್ನು ಮಹಿಳೆಯರ ಅಭಿವೃದ್ಧಿ ವರ್ಷವಾಗಿ, 1975-85ರ ಅವಧಿಯನ್ನು ಮಹಿಳಾ ದಶಕವಾಗಿ ಘೋಷಿಸಿದೆ. ಈ ಅವಧಿಯಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಕಾರ್ಯಚಟುವಟಿಕೆಗಳ ಕಡೆ ಗಮನ ಹರಿಸಲಾಗಿದೆ. ಅಂತೆಯೇ ಭಾರತ ಸರ್ಕಾರವು 1977 ರಲ್ಲಿ ಮಹಿಳೆಯರ ಆತ್ಮಗೌರವವನ್ನು ರಕ್ಷಿಸಲೋಸುಗ ನೇಮಿಸಿದ ಸಮಿತಿಯೊಂದರ ವರದಿಯನ್ವಯ 1992ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚಿಸಿತು.

1950 ರಲ್ಲಿ ಅಸ್ತಿತ್ವಕ್ಕೆ ಬಂದ ಗಣರಾಜ್ಯದಲ್ಲಿ ಸ್ತ್ರೀ-ಪುರುಷರ ಸಮಾನ ಹಕ್ಕುಗಳನ್ನು ಘೋಷಿಸಿದೆ. ಮಹಿಳೆಯರ ಸಬಲೀಕರಣಕ್ಕಾಗಿನ ಸರ್ಕಾರದ ಹಲವಾರು ಯೋಜನೆಗಳೂ ಸಹ ನಿರೀಕ್ಷಿತ ಪ್ರಗತಿ ಸಾಧಿಸಿರುವುದು ಸ್ತುತ್ಯಾರ್ಹವಾದುದಾದರೂ ಇನ್ನೂ ಬಹು ದೂರ ಕ್ರಮಿಸಬೇಕಾಗಿದೆ. ಅಭಿವೃದ್ಧಿಪರ ಯೋಜನೆಗಳಲ್ಲಿ  ಮಹಿಳೆಯರ ಕ್ರಿಯಾಶೀಲ ಸಹಭಾಗಿತ್ವವು ಅಭಿವೃದ್ಧಿಯ ವೇಗ ಹಾಗೂ ದಿಕ್ಕನ್ನೇ ಪ್ರಭಾವಿಸಬಲ್ಲದು. ಇದನ್ನು ಸಾಕಾರಗೊಳಿಸಲು ಸ್ವ-ಸಹಾಯ ಸಂಘಗಳು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಅನಾದಿ ಕಾಲದಿಂದಲೂ ಮಹಿಳೆ ತನ್ನನ್ನು ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಸೀಮಿತಗೊಳಿಸಿಕೊಂಡಿದ್ದು; ಸಾಧಿಸುವ ಪ್ರತಿಭೆ ಮತ್ತು ಶ್ರದ್ಧೆ ಹೊಂದಿದ್ದರೂ ಅವಕಾಶ ವಂಚಿತತೆಯ ಜೊತೆಗೆ ನಿರಂತರ ಶೋಷಣೆಗೆ ಒಳಗಾಗಿದ್ದಾಳೆ. ಆಧುನಿಕ ಹಾಗೂ ವೈಜ್ಞಾನಿಕವಾದ ಇಂದಿನ ಪರ್ವಕಾಲವೂ ಇದಕ್ಕೆ ಹೊರತಾಗಿಲ್ಲ. ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ, ದುರಾಚಾರ, ಹಿಂಸೆ, ಕೌಟುಂಬಿಕ ದೌರ್ಜನ್ಯ...  ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರ ಸಶಸ್ತೀಕರಣ ಆಂದೋಲನಗಳು ಪ್ರಾರಂಭವಾಗಿ ಜಾಗೃತಿಯ ಅಲೆಯನ್ನೆಬ್ಬಿಸಿವೆ. ಜಾಗತಿಕ ಮಟ್ಟದಲ್ಲಿನ ಅನೇಕ ಆಂದೋಲನಗಳು ಮಹಿಳೆಯರ ನ್ಯಾಯೋಚಿತ ಹಕ್ಕುಗಳನ್ನು ಮನ್ನಿಸುವಲ್ಲಿ ಹಾಗೂ ಗುರುತಿಸುವಲ್ಲಿ ಯಶಸ್ವಿಯಾಗಿವೆ. ಮಹಿಳೆಯರ ಸಬಲೀಕರಣಕ್ಕಾಗಿ ಭಾರತದಲ್ಲಿ ಹಲವಾರು ಕಾರ್ಯಕ್ರಮಗಳು ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗೆ ಕೈಗೊಳ್ಳಲಾದ ಕ್ರಮಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಸೃಷ್ಟಿ ಪ್ರಮುಖವಾದುದು. ಮಹಿಳೆಯರ ಸಶಸ್ತೀಕರಣಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುವುದು ಅಗತ್ಯವಾಗಿದ್ದು, ಈ ದಿಸೆಯಲ್ಲಿ ಸ್ವ-ಸಹಾಯ ಸಂಘಗಳು ವೇಗವರ್ಧಕವಾಗಿ ಕಾರ್ಯನಿರ್ವಸುತ್ತಿವೆ.

ಪ್ರಮುಖ ಪದಗಳು: SHG, ಮಹಿಳಾ ಸಬಲೀಕರಣ, ಆರ್ಥಿಕ ಅಭಿವೃದ್ಧಿ, ಸಮುದಾಯ ಜಾಗೃತಿ ಕಾರ್ಯಕ್ರಮಗಳು... ಇತ್ಯಾದಿ
 
ಮಹಿಳಾ ಸಬಲೀಕರಣದ ಅರ್ಥ:
ಸಬಲೀಕರಣ ಎನ್ನುವ ಪದವು 1970ರ ದಶಕದಲ್ಲಿ ಅಮೇರಿಕಾದಲ್ಲಿ ವ್ಯಾಪಕವಾಗಿ ಮೊದಲ ಬಾರಿಗೆ ಬೆಳಕಿಗೆ ಬಂದಿರುವುದು ತಿಳಿದುಬರುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ ಸಬಲೀಕರಣ ಎನ್ನುವುದು ಮಹಿಳೆಯರನ್ನು ಶಕ್ತಿವಂತರನ್ನಾಗಿ ಮಾಡುವುದು ಎನ್ನುವ ಅರ್ಥದಲ್ಲಿ ಬಳಸಲಾಗುತ್ತದೆ. ಇನ್ನು ಹೀಗೆ ಅವರಿಗೆ ಒದಗಿಸಲಾಗುವ ಶಕ್ತಿಯನ್ನು ಅವರು ಬಳಸಿಕೊಂಡು ಅದನ್ನು ಇನ್ನೊಬ್ಬರ ಮೇಲೆ ಬಲಪ್ರಯೋಗಕ್ಕಾಗಿ ಬಳಸದೇ ತಮ್ಮ ಸ್ವಾವಲಂಬನೆಗಾಗಿ ಮತ್ತು ಆಂತರಿಕ ಶಕ್ತಿ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಅದನ್ನು ಬಳಸಿಕೊಳ್ಳಬೇಕು ಎನ್ನುವದು ಮಹಿಳಾವಾದಿಗಳ ನಿಲುವಾಗಿದೆ. ಸಬಲೀಕರಣ ಎನ್ನುವುದು ಈ ಕೆಳಗಿನ ಅಂಶಗಳನ್ನೊಳಗೊಂಡಿದೆ;
  1. ಸಂಪನ್ಮೂಲಗಳ ಮೇಲಿನ ನಿಯಂತ್ರಣ,
  2. ಆತ್ಮವಿಶ್ವಾಸ,
  3. ಆತ್ಮಗೌರವ,
  4. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ,
  5. ಅಧಿಕಾರ ಪಡೆಯುವುದು.
 
ವ್ಯಾಖ್ಯಾನಗಳು:
ರಾಮಚಂದ್ರ ಜೋಷಿ (2013) ಯವರ ಪ್ರಕಾರ, ಲಿಂಗತಾರತಮ್ಯತೆ, ಅಸಮಾನತೆ, ಅನರ್ಹತೆ ಹಾಗೂ ಇನ್ನಿತರ ಬಗೆಯ ಸಂಕಷ್ಟಗಳಿಗೆ ಒಳಗಾಗಿರುವ ಸ್ತ್ರೀಯರಿಗೂ ಕೂಡ ಪುರುಷರಿಗೆ ಸರಿಸಮಾನವಾದ ಅಂತಸ್ತು ಹಾಗೂ ಅವಕಾಶಗಳನ್ನು ನೀಡಿ ಅವರನ್ನು ಸಬಲೀಕರಣಗೊಳಿಸಲು ಹಮ್ಮಿಕೊಳ್ಳಲಾಗಿರುವ ಅಭಿವೃದ್ಧಾತ್ಮಕ ಕಾರ್ಯ ಯೋಜನೆಗಳ ಪ್ರಕ್ರಿಯೆಯೇ ಮಹಿಳಾ ಸಬಲೀಕರಣ.

ಲಿಂಗ ತಾರತಮ್ಯವನ್ನು ತಪ್ಪಿಸಿ ಸಮಾನತೆಯತ್ತ ಸಾಗುವುದೆ ಸಬಲೀಕರಣವಾಗಿದೆ. ಅಸಮಾನತೆ, ಅನರ್ಹತೆ, ನಿರ್ಬಂಧನೆಗಳ ವಿರುದ್ಧ ಸಮಾನತೆ, ಅರ್ಹತೆ ಹಾಗೂ ಸ್ವಾತಂತ್ರ್ಯವನ್ನು ಕಲ್ಪಿಸುವದೇ ಸಬಲೀಕರಣವಾಗಿದೆ. ಪುರುಷರಂತೆ ಮಹಿಳೆಯರಿಗೆ ಅಧಿಕಾರ, ಜವಾಬ್ದಾರಿ ಹಾಗೂ ಅವಕಾಶಗಳನ್ನು ಸಮಾನವಾಗಿ ನೀಡುವ ಪ್ರಕ್ರಿಯೆಯೇ ಸಬಲೀಕರಣ.
 
ಅಂತರಾಷ್ಟ್ರೀಯ ಸಮ್ಮೇಳನ 1990ರ ಪ್ರಕಾರ
ಮಹಿಳಾ ಸಬಲೀಕರಣವೆಂದರೆ ವಿಶ್ವದ ಮಹಿಳೆಯರ ಅವಶ್ಯಕತೆಗಳನ್ನು ಪೂರೈಸುವಲ್ಲಿ ಹಾಗೂ ಅವರ ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುವುದು. ಮಹಿಳಾ ಸಬಲೀಕರಣವು ಈ ಕೆಳಗಿನ 4 ಪ್ರಮುಖ ಘಟಕಾಂಶಗಳನ್ನು ಒಳಗೊಂಡಿದೆ. ಅವುಗಳಲ್ಲಿ ಸ್ವಯಂ ನಿರ್ಧಾರ, ಹಕ್ಕು ಚಲಾವಣೆ, ಸದಾವಕಾಶಗಳನ್ನು ಪಡೆಯುವುದು ಹಾಗೂ ಸಂಪನ್ಮೂಲಗಳ ಬಳಕೆಯ ಹಕ್ಕು. ಅದು ವೈಯಕ್ತಿಕವಾಗಿರಬಹುದು ಅಥವಾ ಈ ಮೇಲಿನ ಅಂಶಗಳು ಸಾಮಾಜಿಕ ಬದಲಾವಣೆಗೆ ಪೂರಕವಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಅಂಶಗಳಾಗಿರಬಹುದು.
 
ಮಹಿಳಾ ಸಬಲೀಕರಣಕ್ಕಾಗಿರುವ ಸಂವಿಧಾನಾತ್ಮಕ ಕ್ರಮಗಳು:
ಭಾರತದ ಸಂವಿಧಾನವು ಜಾರಿಗೊಂಡಂದಿನಿಂದ ಲಿಂಗ, ಜಾತಿ, ಮತ, ಪ್ರದೇಶ ಮುಂತಾದ ಅಂಶಗಳಲ್ಲಿ ತಾರತಮ್ಯರಹಿತ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ಎತ್ತಿ ಹಿಡಿದಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿನ ವಿಧಿಗಳು ಇಂತಿವೆ;
  1. ಸಂವಿಧಾನದ 15ನೇ ವಿಧಿಯನ್ವಯ ಭಾರತದಲ್ಲಿರುವ ಎಲ್ಲರಿಗೂ ಸಮಾನತೆ ಒದಗಿಸಿದೆ.
  2. ಸಂವಿಧಾನದ 15(2)ನೇ ವಿಧಿಯನ್ವಯ ಜಾತಿ, ಮತ, ಪಂಥ ಹಾಗೂ ಲಿಂಗಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
  3. ಸಂವಿಧಾನದ 15(3) ವಿಧಿಯನ್ವಯ: ಮಹಿಳೆಯರು ಹಾಗೂ ಮಕ್ಕಳ ಕಲ್ಯಾಣ ದೃಷ್ಟಿಯಿಂದ ರಾಜ್ಯವು ವಿಶೇಷ ಸವಲತ್ತುಗಳನ್ನು ಜರುಗಿಸಿರುವುದು.
  4. ಸಂವಿಧಾನದ 16 ವಿಧಿಯ ಪ್ರಕಾರ ಸ್ತ್ರೀ-ಪುರುಷರಿಗೆ ಸಮಾನವಾಗಿ ಉದ್ಯೋಗ ನೀಡುವುದು,
  5. ಸಂವಿಧಾನದ 39 (ಡಿ) ಅನ್ವಯ - ಸ್ತ್ರೀ-ಪುರುಷರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು.
 
ಮಹಿಳಾ ಸಬಲೀಕರಣದ ಉದ್ದೇಶಗಳು:
  1. ಮಹಿಳೆಯರ ವಿರುದ್ಧ ನಡೆಯಬಹುದಾದ ಎಲ್ಲ ರೂಪಗಳ ದೌರ್ಜನ್ಯಗಳನ್ನು ತಡೆಗಟ್ಟುವುದು.
  2. ಪುರುಷರ ಪರ ಮತ್ತು ಮಹಿಳೆಯ ವಿರುದ್ಧ ಮಾಡಲಾಗುತ್ತಿರುವ ಎಲ್ಲ ರೀತಿಯ ತಾರತಮ್ಯಗಳನ್ನು ನಿಲ್ಲಿಸುವಂತೆ ಕ್ರಮಕೈಗೊಳ್ಳುವುದು.
  3. ಮಹಿಳೆಯರ ಬಗ್ಗೆ ಮಾಧ್ಯಮಗಳಲ್ಲಿ ಸಕಾರಾತ್ಮಕ ಧೋರಣೆಯತ್ತ ಸಾಗುವಂತೆ ಸುಧಾರಣೆ ಕೈಗೊಳ್ಳುವುದು.
  4. ಮಹಿಳೆಯರಿಗೆ ಸರ್ವರಂಗಗಳಲ್ಲೂ ಅಭಿವೃದ್ಧಿಯ ಪ್ರಕ್ರಿಯೆಗಳಲ್ಲಿ ಸಹಭಾಗಿಯಾಗಲು ಹಾಗೂ ಸೂಕ್ತ ಪ್ರಾತಿನಿಧ್ಯ ದೊರಕುವಂತೆ ಕ್ರಮ ಜರುಗಿಸುವುದು.
 
ಮಹಿಳಾ ಸಬಲೀಕರಣದ ಯೋಜನೆಗಳು:
ಭಾರತ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳಾ ಸಂಶೋಧನಾ ಕೇಂದ್ರಗಳು, ಕೇಂದ್ರೀಯ ಸಮಾಜ ಕಲ್ಯಾಣ ಮಂಡಳಿ ಹಾಗೂ ವಿವಿಧ ಯೋಜನಾ ಆಯೋಗಗಳ ಮುಖಾಂತರ ಸ್ಥಾಪಿತಗೊಂಡ ಸಂಸ್ಥೆಗಳು ಮಹಿಳೆಯರಿಗೆ ಸಹಾಯ, ನಿರಾಶ್ರಿತರಿಗೆ ಆಶ್ರಯ, ವಸತಿಹೀನರಿಗೆ ವಸತಿ ಮುಂತಾದ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ವಯಸ್ಕ ಮಹಿಳೆಯರಿಗೆ ಮೀಸಲಾದ ಸಬಲಾ, ಸಾಂತ್ವನ ಯೋಜನೆ, ಉದ್ಯೋಗಿನಿ, ಮಹಿಳಾತರಬೇತಿ ಯೋಜನೆ, ತಾಯಿಭಾಗ್ಯ ಯೋಜನೆ, ಮಹಿಳಾ ಪ್ರಸೂತಿ ಆರೈಕೆ, ಜನನಿ ಸುರಕ್ಷಾ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಇಂದಿರಾಗಾಂಧಿ ಮಾತೃತ್ವ ಸಹಯೋಗ್, ಮಹಿಳಾ ಸಶಕ್ತೀಕರಣ, ನಯೀ ರೋಷ್ನಿ, ಸಾಕ್ಷರ ಭಾರತ, ಸ್ತ್ರೀ-ಶಕ್ತಿ ಸ್ವ-ಸಹಾಯ ಗುಂಪು ಯೋಜನೆ ಇತ್ಯಾದಿ ಯೋಜನೆಗಳನ್ನು ಸ್ಥಾಪಿಸಿದೆ. 2010ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ರಾಷ್ಟ್ರೀಯ ಮಹಿಳಾ ಸಬಲೀಕರಣ ಮಿಷನ್ ಸ್ಥಾಪಿಸಿದೆ. ಇವುಗಳಷ್ಟೇ ಅಲ್ಲದೇ ಮಹಿಳಾ ಅಭಿವೃದ್ಧಿ ನಿಗಮ ಮುಂತಾದುವುಗಳ ಮೂಲಕ ಸ್ತ್ರೀಯರ ವಿವಿಧ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ;
  1. ಗ್ರಾಮೀಣ ಮತ್ತು ಬಡಸ್ತ್ರೀಯರಿಗಾಗಿ ಅರಿವು ನಿರ್ಮಾಣ ಶಿಬಿರ,
  2. ಉಚಿತ ಕಾನೂನು ನೆರವು ಮತ್ತು ತರಬೇತಿ,
  3. ಮಹಿಳೆಯರಿಗಾಗಿ ಉದ್ಯೋಗ ತರಬೇತಿ ಕೇಂದ್ರಗಳು,
  4. ನಿರಾಶ್ರಿತರಿಗೆ ಪುನರ್ವಸತಿ ಸಂಸ್ಥೆಗಳು,
  5. ದುಡಿಯುವ ಮಹಿಳೆಯರಿಗೆ ವಸತಿ ಸೌಲಭ್ಯ ಮುಂತಾದವು.
 
ಸ್ವ-ಸಹಾಯ ಸಂಘ ಎಂದರೆ,
ಮಹಿಳೆಯರು ಸಮಾಜದಲ್ಲಿ ತಮ್ಮ ಅಂತಃಶಕ್ತಿಯನ್ನು ಸಾಕಾರಗೊಳಿಸಿಕೊಳ್ಳಲು, ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಯಾಗಲು ಸಮಾನ ಮನಸ್ಕರ ಗುಂಪೊಂದನ್ನು ರಚಿಸಿಕೊಂಡು ಕಿರು ಆರ್ಥಿಕ ವ್ಯವಹಾರ ನಡೆಸುವುದೇ ಸ್ವ-ಸಹಾಯ ಸಂಘ.
 
ಸ್ವ-ಸಹಾಯ ಸಂಘದ ಪರಿಕಲ್ಪನೆಯ ಉಗಮ:
  • 1975 ರಲ್ಲಿ ಪ್ರೊ. ಮಹಮ್ಮದ್ ಯುನಸ್ ಬಾಂಗ್ಲಾದೇಶದಲ್ಲಿ ಪ್ರಥಮವಾಗಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸುವ ಮೂಲಕ ಕಿರು ಹಣಕಾಸಿನ ಸಂಸ್ಥೆಗಳ ಹುಟ್ಟಿಗೆ ತಳಪಾಯ ಹಾಕಿದರು. 1971 ರ ಭಾರತ ಪಾಕಿಸ್ತಾನದ ಯುದ್ಧದ ಸಮಯದಲ್ಲಿ ಬಾಂಗ್ಲಾದೇಶದ ನಿರಾಶ್ರಿತರು ತಮ್ಮ ಆರ್ಥಿಕ ಉನ್ನತಿಗಾಗಿ ಸ್ವ-ಸಹಾಯ ಗುಂಪುಗಳನ್ನು ರಚಿಸಿಕೊಂಡರು. ಈ ಸಂದರ್ಭದಲ್ಲಿ ಮಹಿಳೆಯರು ಸ್ವಾವಲಂಬಿಯಾಗಲು ಸಹಾಯಕಾರಿಯಾಯಿತು. ಮನೆ, ಮಠಗಳನ್ನು ಕಳೆದುಕೊಂಡು, ಉದ್ಯೋಗ ಮತ್ತು ಆದಾಯವಿಲ್ಲದೇ ಕಂಗಾಲಾದ ಜನ ಸಮುದಾಯದ ಅಸ್ಮಿತೆಯನ್ನು ಕಾಯ್ದುಕೊಳ್ಳಲು ಅವಿರ್ಭವಿಸಿದ್ದೇ ಸ್ವ-ಸಹಾಯ ಸಂಘದ ಪರಿಕಲ್ಪನೆ.
  • ಈ ಪರಿಕಲ್ಪನೆಯನ್ನು ಮೊದಲ ಬಾರಿಗೆ ಭಾರತದಲ್ಲಿ ಹಣಕಾಸು ನಿರ್ವಹಣಾ ಸಮೂಹ (Credit Management Groups) ಗಳೆಂದು 1980ರ ಸುಮಾರಿನಲ್ಲಿ ದಕ್ಷಿಣ ಭಾರತದಲ್ಲಿನ ಸರ್ಕಾರೇತರ ಪ್ರಮುಖ ಸಂಸ್ಥೆಯಾದ Mysore Resettlement and Development Agency (MYRADA) ಯು ಪರಿಚಯಿಸಿತು. ತದನಂತರ 1987 ರಲ್ಲಿ ಈ ಹಣಕಾಸು ನಿರ್ವಹಣಾ ಸಮೂಹ (Credit Management Groups) UÀ¼À£ÀÄß National Bank for Agricultural and Rural Development (NABARD) ನ ಸಹಭಾಗಿತ್ವದ ಸಂಶೋಧನಾ ಕಾರ್ಯಕ್ರಮವೊಂದನ್ನು ಜಾರಿಗೊಳಿಸುವಾಗ ಸ್ವ-ಸಹಾಯ ಸಂಘಗಳೆಂದು (Self Help Groups (SHGs) ಮರುನಾಮಕರಣಗೊಳಿಸಿತು.
  • ಕರ್ನಾಟಕದಲ್ಲಿ ಸ್ತ್ರೀಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಸಲುವಾಗಿ ಶ್ರೀ ಎಸ್.ಎಂ. ಕೃಷ್ಣ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು 2000-01 ರಲ್ಲಿ ಸ್ತ್ರೀ-ಶಕ್ತಿ ಯೋಜನೆಯನ್ನು ರೂಪಿಸಿತು. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಈ ಯೋಜನೆ ಸಹಕಾರಿಯಾಗಿದೆ. ಸ್ತ್ರೀಯರ ಆರ್ಥಿಕ ಅಭಿವೃದ್ಧಿ ಸಾಧಿಸುವುದು, ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಸ್ತ್ರೀಯರನ್ನು ತೊಡಗಿಸುವುದಾಗಿದೆ.
 
ಸ್ವ-ಸಹಾಯ ಸಂಘದ ರಚನೆ:
ಸ್ವ-ಸಹಾಯ ಸಂಘವು 10 ರಿಂದ 20 ಸದಸ್ಯರನ್ನು ಒಳಗೊಂಡಿರುವ ಸಮೂಹವಾಗಿರುತ್ತದೆ. 18 ರಿಂದ 45 ವಯೋಮಾನದೊಳಗಿನ ಮಹಿಳೆಯರು ಸದಸ್ಯರಾಗಿರುತ್ತಾರೆ. ಒಂದೊಂದು ಸ್ವ-ಸಹಾಯ ಗುಂಪಿಗೂ ಒಂದು ನಿರ್ದಿಷ್ಟ ಹೆಸರನ್ನು ಇಡಲಾಗಿರುತ್ತದೆ. ಈ ಗುಂಪು ಪ್ರತಿವಾರ ಯಾವುದಾದರೊಂದು ನಿಗದಿತ ದಿವಸದಂದು ನಿಗದಿತ ಸ್ಥಳದಲ್ಲಿ ಮತ್ತು ನಿಗದಿತ ಸಮಯದಲ್ಲಿ ಸಭೆ ನಡೆಸುತ್ತದೆ. ಪ್ರತಿ ವಾರ ಎಲ್ಲಾ ಸದಸ್ಯರು ನಿರ್ದಿಷ್ಟ ಮೊತ್ತದ ಹಣವನ್ನು ಉಳಿತಾಯದ ರೂಪದಲ್ಲಿ ಗುಂಪಿಗೆ ನೀಡುತ್ತಾರೆ. ಈ ಮೊತ್ತದಿಂದ ಸಾಮಾನ್ಯ ನಿಧಿ ರಚನೆಯಾಗುತ್ತದೆ. ಈ ಮೊತ್ತದಿಂದ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಲಾಗುತ್ತದೆ. ಈ ನಿಧಿಯಿಂದ ಗುಂಪು ತನ್ನ ಸದಸ್ಯೆಗೆ ನಿಗದಿತ ಬಡ್ಡಿದರದಲ್ಲಿ ಉತ್ಪಾದಕ ಅಥವಾ ಖರ್ಚುಗಳಿಗೆ ಸಾಲವನ್ನು ನೀಡಲಾಗುತ್ತದೆ. ಜಾತಿ, ವರ್ಗಗಳೆಂಬ ಭೇದ-ಭಾವವಿರದ ಈ ತಂಡ ರಚನೆಗೊಂಡ ಪ್ರಥಮ 3 ತಿಂಗಳೊಳಗೆ 6 ತರಬೇತಿಗಳನ್ನು ಏರ್ಪಡಿಸಬೇಕು. 3 ತಿಂಗಳು ಅಂದರೆ 12 ವಾರ ಕಡ್ಡಾಯವಾಗಿ ಉಳಿತಾಯ ಪಾವತಿಸಿರಬೇಕು. ಸದಸ್ಯರು ಕ್ರಮಬದ್ಧವಾದ ಶಿಸ್ತು, ನಡವಳಿಕೆಯನ್ನು ಹೊಂದಿರಬೇಕು. ದಾಖಲಾತಿ ಸರಿಯಾಗಿರಬೇಕು. ಉಳಿತಾಯ ಮತ್ತು ಸಾಲ ಮರುಪಾವತಿ ಮಾಡಬೇಕು. ಸಭೆ ಸರಿಯಾಗಿ ನಡೆಸಬೇಕು. ವಾರದ ಸಭೆ ಕಡ್ಡಾಯ, ಸಂಘಗಳು ತಮ್ಮ ಶ್ರೇಣಿಯನ್ನು ಉಳಿಸಿಕೊಳ್ಳಬೇಕು. ಈ ಸಾಲದ ಹಣದಿಂದ ಸಂಘದ ಮಹಿಳೆಯರು ಸ್ವಾವಲಂಬನೆ ಹಾಗೂ ಸಬಲೀಕರಣವನ್ನು ಸಾಧಿಸಲು ಅನುಕೂಲವಾಗುತ್ತದೆ.
 
ಸ್ವ-ಸಹಾಯ ಸಂಘದ ಗುಣಲಕ್ಷಣಗಳು:
  1. ಸಂಘದ ಸದಸ್ಯರು ಉಳಿತಾಯ ಮನೋಭಾವನೆಯನ್ನು ಹೊಂದಿರಬೇಕು,
  2. ಈ ಗುಂಪು ಸಮಾನ ಮನಸ್ಕರನ್ನು ಹೊಂದಿರುತ್ತದೆ ಮತ್ತು
  3. ಸ್ವಾವಲಂಬನೆಯ ಉದ್ದೇಶವನ್ನು ಹೊಂದಿರುತ್ತದೆ.
 
ಸ್ವ-ಸಹಾಯ ಸಂಘದ ಸದಸ್ಯರಿಗೆ;
  1. ಸಾಲ ಸೌಲಭ್ಯಗಳನ್ನು ಒದಗಿಸುವುದು,
  2. ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವ ಸಾಮಥ್ರ್ಯವನ್ನು ಬೆಳೆಸುವುದು,
  3. ಉಳಿತಾಯದ ಮನೋಭಾವನೆ ಮೂಡಿಸುವುದು,
  4. ಸ್ವಾವಲಂಬನೆಗೆ ನೆರವಾಗುವುದು ಮತ್ತು
  5. ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು.
 
ಸ್ವ-ಸಹಾಯ ಸಂಘದ ಕಾರ್ಯಕ್ರಮಗಳು:
  • ಬ್ಯಾಂಕ್ ಖಾತೆ ತೆರೆದಿರಬೇಕು,
  • ಪ್ರಥಮ ಹಂತದ ಸಾಲವನ್ನು ತೆಗೆದುಕೊಂಡಾಗ ಸಾಲದ ಮರುಪಾವತಿ ಮಾಡುವುದು,
  • ಕಂತು ಬಾಕಿ ಉಳಿಸಿಕೊಳ್ಳದಂತೆ ನೋಡಿಕೊಳ್ಳುವುದು,
  • ಸಂಘದ ಗ್ರೇಡ್‍ ಗಳನ್ನು ಉಳಿಸಿಕೊಳ್ಳಬೇಕು.
 
ಸಾಹಿತ್ಯ ಗ್ರಂಥಗಳ ಪರಾಮರ್ಷೆ:
1) ಯೋಜನಾ ಮಾಸಪತ್ರಿಕೆ ಜೂನ್, 2012:
ಸ್ವ-ಸಹಾಯ ಸಂಘಗಳು ಮಹಿಳೆಯರನ್ನು ಆಧುನಿಕ ಯುಗಕ್ಕೆ ಪರಿಚಯಿಸಲು ಸಹಾಯಕಾರಿಯಾಗಿವೆ. ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ಮಾಡುತ್ತದೆ. ಹಣ ಉಳಿತಾಯದ ಮನೋಭಾವನೆಯಿಂದ ಪ್ರತಿವಾರವು ಒಂದು ನಿಗದಿತ ಸ್ಥಳದಲ್ಲಿ ಸೇರುವುದು, ಹಣವನ್ನು ಉಳಿತಾಯ ಮಾಡುವುದು, ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು, ಬ್ಯಾಂಕಿನ ವ್ಯವಸ್ಥೆಯ ಬಗ್ಗೆ ಅರಿವು ಹೊಂದುವುದು ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯನ್ನು ಅಭಿವೃದ್ಧಿಪಡಿಸುವುದು ಮಾಹಿತಿ ಸಂಗ್ರಹಿಸಲು ಈ ಗ್ರಂಥ ಸಂಶೋಧನಾರ್ಥಿಗೆ ಸಹಾಯಕವಾಯಿತು.
 
2) ಚ.ನ. ಶಂಕರರಾವ್, 2013:
ಮಹಿಳೆಯರ ಸ್ಥಾನಮಾನಗಳು ವಿವಿಧ ಕಾಲಘಟ್ಟಗಳಲ್ಲಿ ಹೇಗಿದ್ದವು ಎಂಬುದನ್ನು ತಿಳಿದುಕೊಳ್ಳಲು ಈ ಗ್ರಂಥವು ಸಹಾಯಕವಾಗಿದೆ. 
 
3) ಶಿಕ್ಷಣ ಸೌಧ-ಶಿಕ್ಷಣ ಮತ್ತು ಸಂಶೋಧನಾ ಪತ್ರಿಕೆ (ತ್ರೈಮಾಸಿಕ) ಜೂನ್ 18, 2016:
ಸಬಲೀಕರಣ ಎನ್ನುವ ಪದವನ್ನು 1970ರ ದಶಕದಲ್ಲಿ ಲ್ಯಾಟಿನ್ ಅಮೇರಿಕಾದಲ್ಲಿ ಮೊದಲ ಬಾರಿಗೆ ಬಳಸಲಾಯಿತು. ಆಧುನಿಕ ಯುಗದಲ್ಲಿ ಮಹಿಳೆಯು ಹಲವಾರು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾಳೆ. ಮಹಿಳಾ ಸಬಲೀಕರಣ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಲು ಈ ಪತ್ರಿಕೆ ಸಹಾಯಕವಾಯಿತು.
 
4) ಡಾ. ಪುಷ್ಪಾ ಬಸನಗೌಡರ, ಮಹಿಳಾ ಸಬಲೀಕರಣ, 2015:
ಈ ಗ್ರಂಥವು ಮಹಿಳಾ ಸಬಲೀಕರಣದ ಅರ್ಥ, ವಿವಿಧ ಆಯಾಮಗಳನ್ನು ಅಂದರೆ, ಶೈಕ್ಷಣಿಕ, ರಾಜಕೀಯ, ಆರ್ಥಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಬಲೀಕರಣ ಆಯಾಮಗಳ ಕುರಿತು ಅರಿಯಲು ಸಹಾಯಕವಾಯಿತು.
 
5) ಡಾ. ಮಹಾದೇವ ನಾರಾಯಣರಾವ್ ಜೋಷಿ ಹಾಗೂ ಶ್ರೀ ಗುರುರಾಜ ನಾರಾಯಣರಾವ್ ಜೋಷಿ, ಸಾಮಾಜಿಕ ವಿಜ್ಞಾನಗಳಲ್ಲಿ ಸಂಶೋಧನೆ (ತಂತ್ರಗಳು ಮತ್ತು ವಿಧಾನಗಳು), 1998:
ಈ ಗ್ರಂಥವು ಸಂಶೋಧನೆಯ ವಿವಿಧ ವಿಧಾನಗಳ ಅಧ್ಯಯನ ಕೈಗೊಳ್ಳಲು ಸಹಾಯಕವಾಯಿತು.
 
ಸಂಶೋಧನಾ ವಿಧಾನ:
ಸಮಸ್ಯೆಯ ಹೇಳಿಕೆ: ಈ 21 ನೇ ಶತಮಾನದಲ್ಲಿ ಯುಗದಲ್ಲಿ ಮಹಿಳಾ ಸಬಲೀಕರಣವು ಪ್ರಮುಖವಾಗಿ ಚರ್ಚಿತವಾಗುತ್ತಿರುವ ವಿಷಯ. ಮಹಿಳಾ ಸ್ವ-ಸಹಾಯ ಸಂಘಗಳು ಸ್ಥಾಪನೆಗೊಂಡು ಹಲವು ವರ್ಷಗಳೇ ಗತಿಸಿದ್ದರೂ ಮಹಿಳೆಯು ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕವಾಗಿ ಸ್ವಾವಲಂಬಿಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಂತೂ ಮಹಿಳೆಯ ಸ್ಥಿತಿ ಇನ್ನೂ ಶೋಚನೀಯವಾಗಿದೆ. ಮಹಿಳೆಯು ಇಂದಿನ ವೈಜ್ಞಾನಿಕ-ಆಧುನಿಕ ಕಾಲದಲ್ಲಿಯೂ ಸಾರ್ವಜನಿಕ ಜೀವನದಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ಅದಕ್ಕೆ ಕಾರಣವೇನೆಂದರೆ ನಮ್ಮ ಜೀವನ ಶೈಲಿ, ಮೂಢನಂಬಿಕೆಗಳು, ಹಿಂಜರಿಕೆ, ಸಂಕುಚಿತತೆ ಮಹಿಳೆಯನ್ನು ಆಂತರಿಕವಾಗಿ ಕಟ್ಟಿಹಾಕಿದಂತಿವೆ. ಈ ನಿಟ್ಟಿನಲ್ಲಿ ಸ್ವ-ಸಹಾಯ ಸಂಘಗಳ ಪಾತ್ರವನ್ನು ಗಮನಿಸುವುದು ಅನಿವಾರ್ಯವಾಗಿದ್ದು ಅಧ್ಯಯನಕ್ಕೆ ಈ ವಿಷಯವನ್ನು ಆಯ್ದುಕೊಳ್ಳಲಾಗಿದೆ.
 
ಅಧ್ಯಯನದ ಉದ್ದೇಶಗಳು:
  1. ಸ್ವ-ಸಹಾಯ ಸಂಘಗಳ ರಚನೆ ಕಾರ್ಯ ವಿಧಾನವನ್ನು ತಿಳಿಯುವುದು.
  2. ಸ್ವ-ಸಹಾಯ ಸಂಘಕ್ಕೆ ಸೇರಿದ ಸದಸ್ಯ ಮಹಿಳೆಯರ ಜೀವನ ಕ್ರಮದಲ್ಲಾದ  ಬದಲಾವಣೆಗಳನ್ನು ಅವಲೋಕಿಸುವುದು.
  3. ಸ್ವ-ಸಹಾಯ ಸಂಘದ ಮಹಿಳೆಯರ ಉಳಿತಾಯದ ಮನೋಭಾವನೆ, ಆದಾಯ, ಆರ್ಥಿಕ ಸ್ವಾವಲಂಬನೆಯನ್ನು ಅಭ್ಯಸಿಸುವುದು.
  4. ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರ ಸಾಮಾಜಿಕ ಜೀವನದಲ್ಲಾದ ಬದಲಾವಣೆಗಳನ್ನು ಅರಿಯುವುದು.
ಸಂಶೋಧನಾ ಅಧ್ಯಯನದ ವ್ಯಾಪ್ತಿ: ಪ್ರಸ್ತುತ ಸಂಶೋಧನಾ ವಿಷಯಕ್ಕೆ ಹಾವೇರಿ ಜಿಲ್ಲೆಯನ್ನು ಆಯ್ದುಕೊಂಡಿದ್ದು; ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹೊನ್ನತ್ತಿ, ಹನುಮಾಪುರ, ಯಲ್ಲಾಪುರ, ಕಾಕೋಳ, ಬುಡಪನಹಳ್ಳಿ ಗ್ರಾಮಗಳನ್ನು ಸಂಶೋಧನಾ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
 
ಸಂಶೋಧನಾ ವಿನ್ಯಾಸ
ಪ್ರಸ್ತುತ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ವಿವರಣಾತ್ಮಕ ಸಂಶೋಧನಾ ವಿನ್ಯಾಸವನ್ನು ಆಯ್ದುಕೊಳ್ಳಲಾಗಿದೆ. ಮಹಿಳಾ ಸಬಲೀಕರಣದಲ್ಲಿ ಸ್ವ-ಸಹಾಯ ಸಂಘಗಳ ಪಾತ್ರವನ್ನು ವಿವರಿಸುವಲ್ಲಿ ಈ ವಿನ್ಯಾಸ ಸಹಾಯಕವಾಗಿದೆ.
 
ನಮೂನೆ ಮತ್ತು ನಮೂನೆಯ ಗಾತ್ರ:
ಪ್ರಸ್ತುತ ಅಧ್ಯಯನ ವಿಷಯದ ಸಂಶೋಧನೆಗಾಗಿ ಈ ಮೇಲ್ಕಾಣಿಸಿದ ಹಳ್ಳಿಗಳನ್ನು ಸಮುದಾಯ ನಮೂನೆ / ಗುಚ್ಛ ನಮೂನೆ (Cluster Sampling) ಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಸಂಶೋಧನಾ ವಿಷಯಕ್ಕೆ 15 ಸ್ವ-ಸಹಾಯ ಸಂಘದ 150 ಫಲಾನುಭವಿ ಮಹಿಳೆಯರನ್ನು / ಮಾಹಿತಿದಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
 
ದತ್ತಾಂಶ ಸಂಗ್ರಹಣೆಯ ವಿಧಾನ:
ಮಾಹಿತಿದಾರರಿಂದ ಅಧ್ಯಯನಕ್ಕೆ ಪೂರಕವಾದ ಮಾಹಿತಿ ಸಂಗ್ರಹಿಸಲು ಸಂದರ್ಶನಾ ಅನುಸೂಚಿ (Schedule) ಯನ್ನು ಬಳಸಿಕೊಳ್ಳಲಾಗಿದೆ. ಮಾಹಿತಿದಾರರೊಡನೆ ಮುಖಾಮುಖಿ ಸಂದರ್ಶನದ ಮೂಲಕ ಸ್ವತಃ ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಪಡೆದು, ಮಾಹಿತಿ ಸಂಗ್ರಹಿಸಲಾಗಿದೆ. ಈ ಸಂದರ್ಶನಾ ಅನುಸೂಚಿಯು ಸುವ್ಯವಸ್ಥಿತವಾಗಿ ತಯಾರಿಸಲಾದ ವಸ್ತುನಿಷ್ಠ ಮತ್ತು ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿತ್ತು.
 
ಮಾಹಿತಿ ಸಂಗ್ರಹಣೆಯ ಮೂಲಗಳು:
ಪ್ರಸ್ತುತ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಧಾನಗಳೆರಡರಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಪ್ರಾಥಮಿಕ ಮೂಲದ ಭಾಗವಾಗಿ ಸಂದರ್ಶನ ಅನುಸೂಚಿಯ ಮೂಲಕ ನೇರ ಸಂದರ್ಶನ ಮತ್ತು ಸಮೀಕ್ಷೆ ವಿಧಾನಗಳನ್ನು ಅನ್ವಯಿಸಿ ಮಾಹಿತಿದಾತರಿಂದ ಅಧ್ಯಯನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮಾಧ್ಯಮಿಕ ಮೂಲಕ್ಕೆ ಸಂಬಂಧಿಸಿದಂತೆ ಪ್ರಕಟಿತ ಪುಸ್ತಕಗಳು, ಪಾಕ್ಷಿಕಗಳ ಪ್ರಕಟಿತ ಲೇಖನಗಳು, ಅಂತರ್ಜಾಲದಿಂದ ಅಧ್ಯಯನಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
 
ದತ್ತಾಂಶಗಳ ವರ್ಗೀಕರಣ, ಅರ್ಥೈಸುವಿಕೆ ಮತ್ತು ವಿಶ್ಲೇಷಣೆ:
ಈ ಮೇಲಿನ ಮಾಹಿತಿಯ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಸಂಕೇತೀಕರಣ (Coding), ಪರಿಷ್ಕರಣೆ (Assessment), ಕೋಷ್ಟಕ (Table) ಹಾಗೂ ಸಂಖ್ಯಾಶಾಸ್ತ್ರದ (Statistical Method) ದ ನೆರವಿನಿಂದ ವಸ್ತುನಿಷ್ಠವಾಗಿ ವರ್ಗೀಕರಿಸಿ ವಿಶ್ಲೇಷಿಸಿ ವರದಿ ತಯಾರಿಸಲಾಗಿದೆ.
 
ಸಂಶೋಧನಾ ಅಧ್ಯಯನದ ಇತಿ-ಮಿತಿಗಳು:
  • ಈ ಸಂಶೋಧನೆಯ ಅಧ್ಯಯನವು ಕೇವಲ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸೀಮಿತವಾಗಿದೆ.
  • ಅತ್ಯಲ್ಪ ಕಾಲವಧಿಯಲ್ಲಿ ಈ ಸಂಶೋಧನಾ ಅಧ್ಯಯನ ಕೈಗೊಳ್ಳಲಾಗಿದೆ.
  • ಕುಟುಂಬಗಳ ಸಮೀಕ್ಷೆಯ ಸಮಯ ಕೆಲವು ಫಲಾನುಭವಿ ಸದಸ್ಯರು ಸಂದರ್ಶನಕ್ಕೆ ಲಭ್ಯವಾಗಿರಲಿಲ್ಲ.
  • ಪ್ರಸ್ತುತ ಸಂಶೋಧನಾ ಅಧ್ಯಯನವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಾಗೂ ಬ್ಯಾಡಗಿ ತಾಲೂಕುಗಳ ಆಯ್ದ ಗ್ರಾಮಗಳಿಗೆ ಸೀಮಿತಗೊಳಿಸಿ ಕೈಗೊಳ್ಳಲಾಗಿದೆ.
  • ಪ್ರಸ್ತುತ ಸಂಶೋಧನೆಯಲ್ಲಿ 150 ಮಾಹಿತಿದಾರರೊಂದಿಗೆ ಅಂತಃಕ್ರಿಯೆಯನ್ನು/ ಸಂದರ್ಶನವನ್ನು ಕೈಗೊಳ್ಳಲಾಗಿದೆ.
 
ಸಂಶೋಧನೆಯ ಫಲಿತಗಳು:
1. ಲೈಂಗಿಕವಾಗಿ ಕ್ರಿಯಾಶೀಲ ಹಾಗೂ ಆರ್ಥಿಕ ಉತ್ಪಾದನೆಯಲ್ಲಿ ತೊಡಗಿರುವವರು ಸಂಘಟಿತರಾಗಿರುವುದು:
ಸದರಿ ಕೋಷ್ಟಕ-1.1 ನ್ನು ಅವಲೋಕಿಸಿದಾಗ 24 - 35 ವಯೋಮಾನದ ಅಶಿಕ್ಷಿತ ಹಾಗೂ ಕಡಿಮೆ ಶಿಕ್ಷಣ ಪಡೆದವರು ಅಂದರೆ, 55 ಜನ ಅಶಿಕ್ಷಿತ ಮಹಿಳೆಯರು (37%), 42 ಜನ ಪ್ರಾಥಮಿಕ ಶಿಕ್ಷಣ (28%) ಪಡೆದವರು ಹಾಗೂ 24 ಜನ ಮಾಧ್ಯಮಿಕ ಶಿಕ್ಷಣ (16%) ಪಡೆದವರು ಸ್ವ-ಸಹಾಯ ಸಂಘದ ಕ್ರಿಯಾಶೀಲ ಸದಸ್ಯರಾಗಿದ್ದು, ಉಳಿತಾಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವುದು ಸ್ಪಷ್ಟವಾಗುತ್ತದೆ.
Picture
2. ವಿವಾಹಿತ ಮಹಿಳೆಯರೇ ಸ್ವ-ಸಹಾಯ ಸಂಘಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದಿದ್ದಾರೆ:
ಈ ಕೋಷ್ಟಕದಲ್ಲಿ ವಿವಾಹಿತ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದಿರುವುದು ನಿಚ್ಚಳವಾಗಿದೆ. ವಿವಾಹದ ತರುವಾಯ ಕುಟುಂಬದ ಹಲವಾರು ಅವಶ್ಯಕತೆಗಳನ್ನು ಹೊಂದಬೇಕಾದ ಅವಶ್ಯಕತೆಯಿರುವುದರಿಂದ ಮತ್ತು ಸಂಗಾತಿಯೊಂದಿಗೆ ಕುಟುಂಬದ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆಯಿರುವುದರಿಂದ ವಿವಾಹಿತ ಮಹಿಳೆಯರು ಸ್ವ-ಸಹಾಯ ಸಂಘದ ಸದಸ್ಯರಾಗಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆಂಬುದು ಗೋಚರಿಸುತ್ತದೆ.
Picture
3. ಕೃಷಿ ಮತ್ತು ಕೃಷಿ-ಪೂರಕ ಉದ್ಯೋಗಾಧಾರಿತ ಆರ್ಥಿಕ ಚಟುವಟಿಕೆಗಳ ಆಯ್ಕೆಗಳ ಪ್ರಾಧಾನ್ಯತೆ:
ಸದರಿ ಕೋಷ್ಟಕ-1.3 ರಲ್ಲಿ ಕೃಷಿ ಪ್ರಧಾನ ಮತ್ತು ಕೃಷಿ-ಪೂರಕ ಆರ್ಥಿಕ/ ಉತ್ಪಾದಕ ಚಟುವಟಿಕೆಗಳಲ್ಲಿ ಮಹಿಳೆಯರು ತೊಡಗಿರುವುದು ಕಂಡುಬರುತ್ತದೆ. ಸದರಿ ಸಂಶೋಧನಾ ಕ್ಷೇತ್ರದಲ್ಲಿ ಕೃಷಿಯೇ ಪ್ರಧಾನ ಕಸುಬಾಗಿರುವುದರಿಂದ ರೈತ ಮಹಿಳೆಯರೇ ಪ್ರಧಾನವಾಗಿ ಸ್ವ-ಸಹಾಯ ಸಂಘಗಳಲ್ಲಿ ಸದಸ್ಯತ್ವ ಪಡೆದಿರುವುದು ದಿಟವಾಗಿದೆ.
Picture
4. ಸ್ವ-ಸಹಾಯ ಸಂಘಕ್ಕೆ ಸೇರಿದ ತರುವಾಯ ಸದಸ್ಯ ಮಹಿಳೆಯರ ಆದಾಯ ದುಪ್ಪಟ್ಟಾಗಿದೆ:
Picture
ಸದರಿ ಸಂಶೋಧನೆಯಲ್ಲಿ ಪ್ರತಿಕ್ರಿಯಾದಾರ ಸ್ವ-ಸಹಾಯ ಸಂಘದ ಸದಸ್ಯ ಮಹಿಳೆಯರು ಸ್ವ-ಸಹಾಯ ಸಂಘ ಸೇರುವ ಮೊದಲಿನ ತಿಂಗಳ ಆದಾಯವು ರೂ. 1000 ರೂಪಾಯಿಗಳಿಗಿಂತ ಕ್ಕಿಂತ ಕಡಿಮೆ ಇದ್ದುದು (57%), ಸ್ವ-ಸಹಾಯ ಸಂಘ ಸೇರಿದ ತದನಂತರ ರೂ. 2500-3500 ರೂಪಾಯಿಗಳಿಗೆ ಏರಿಕೆಯಾಗಿರುವುದನ್ನು ಗುರುತಿಸಬಹುದು. ಜೊತೆಗೆ ಸ್ವ-ಸಹಾಯ ಸಂಘ ಸೇರುವ ಮೊದಲು ಕಡಿಮೆ ಆದಾಯ ಪಡೆಯುವವರ ಪ್ರಮಾಣ 85 (57%) ರಷ್ಟು ಇದ್ದುದು 35 (23%) ಕ್ಕೆ ಇಳಿದಿದೆ. ಒಟ್ಟಾರೆ, ಸ್ವ-ಸಹಾಯ ಸಂಘ ಸೇರಿದ ತರುವಾಯ 2 ರಿಂದ 2 1/2 ಪಟ್ಟು ಆದಾಯವು ಹೆಚ್ಚಾಗಿರುವುದನ್ನು ನೋಡಬಹುದಾಗಿದೆ.
 
5. ಸ್ವ-ಸಹಾಯ ಸಂಘದ ಸದಸ್ಯ ಮಹಿಳೆಯರು ಸಾಮಾನ್ಯ ಮಹಿಳೆಯರಿಗಿಂತ ಸ್ವಾವಲಂಬಿಗಳು:
Picture
Picture
ಸದರಿ ಅಧ್ಯಯನದಲ್ಲಿ ಕೋಷ್ಟಕ-1.5 ರಲ್ಲಿ ಉಲ್ಲೇಖಿಸಿದಂತೆ ಸ್ವ-ಸಹಾಯ ಸಂಘದ ಸದಸ್ಯ ಪ್ರತಿಕ್ರಿಯಾದಾರ ಮಹಿಳೆಯರು ತಮ್ಮ ದಿನನಿತ್ಯದ ವೈಯಕ್ತಿಕ ಮತ್ತು ಸಾಮುದಾಯಿಕವಾದ ಹಲವಾರು ವಿಷಯ ಹಾಗೂ ವ್ಯವಹಾರಗಳಲ್ಲಿ ಹೊಂದಿರುವ ಜವಾಬ್ದಾರಿಯುತ ಹೊಣೆಗಾರಿಕೆ, ವರ್ತನೆ ಹಾಗೂ ಕಾರ್ಯಚಟುವಟಿಕೆಗಳನ್ನು ಸೂಚಿಸುತ್ತದೆ. ಸದರಿ ಕೋಷ್ಟಕದಲ್ಲಿ ಪ್ರತಿಕ್ರಿಯಾದಾರರ ಪ್ರತಿಕ್ರಿಯೆಯು ಸರಾಸರಿ 80% ಕ್ಕಿಂತ ಹೆಚ್ಚು ಧನಾತ್ಮಕವಾಗಿದೆ. ಗ್ರಾಮ ಸಭೆಗಳಲ್ಲಿ ಭಾಗವಹಿಸುವುದರಿಂದ ಮೊದಲ್ಗೊಂಡು ವೈಯಕ್ತಿಕ ಕಾಳಜಿ, ಅರಿವು, ಜಾಗೃತಿ ಹಾಗೂ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಸಂಘದ ಮಹಿಳೆಯರಲ್ಲಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಭಾಗವಹಿಸುವವರೆಗಿನ ಅವರ ಸಾಮರ್ಥ್ಯ ವೃದ್ಧಿಯಲ್ಲಾದ (144-96%) ಧನಾತ್ಮಕ ಪ್ರಗತಿಯನ್ನು ಗಮನಿಸಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ ಸ್ವ-ಸಹಾಯ ಸಂಘದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಬಲರಾಗಿದ್ದು ಕಾಳಜಿ ಮತ್ತು ಜವಾಬ್ದಾರಿಯನ್ನು ಹೊಂದಿರುವುದನ್ನು ಎತ್ತಿ ತೋರಿಸುತ್ತದೆ.
 
ಸಂಶೋಧನಾ ಅಧ್ಯಯನದ ಫಲಿತಾಂಶಗಳು:
  1. ಸದರಿ ಸಂಶೋಧನಾ ಅಧ್ಯಯನದಲ್ಲಿ ಸ್ವ-ಸಹಾಯ ಸಂಘದ 50 ಪ್ರತಿವಾದಿ ವಿವಾಹಿತ ಮಹಿಳೆಯರು ಶೇಕಡಾ 74% ರಷ್ಟು, ಇರುವುದು ತಿಳಿದುಬಂದಿದೆ.
  2. ಈ ಸಂಶೋಧನೆಯಲ್ಲಿ 50 ಪ್ರತಿಕ್ರಿಯಾದಾರರಲ್ಲಿ ಶೇಕಡಾ 62% ರಷ್ಟು ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರು ಕೂಲಿಯನ್ನು ಮಾಡುತ್ತಿರುವುದು ಕಂಡುಬಂದಿದೆ.
  3. ಪ್ರಸ್ತುತ ಸಂಶೋಧನೆಯಲ್ಲಿ ಸ್ವ-ಸಹಾಯ ಸಂಘಕ್ಕೆ ಸೇರಲು ಕಾರಣಗಳನ್ನು ಗಮನಿಸಿದಾಗ ಶೇಕಡಾ 50% ರಷ್ಟು ಸದಸ್ಯರು ಹಣ ಉಳಿತಾಯ ಮಾಡಲು ಸ್ವ-ಸಹಾಯ ಸಂಘಕ್ಕೆ ಸೇರಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.
  4. ಸದರಿ ಸಂಶೋಧನೆಯಲ್ಲಿ ಪ್ರತಿಕ್ರಿಯಾದಾರರು ಸ್ವ-ಸಹಾಯ ಸಂಘಕ್ಕೆ ಸೇರಿದ ನಂತರದ ತಿಂಗಳ ಆದಾಯವನ್ನು ಗಮನಿಸಿದಾಗ 54% ಮಹಿಳಾ ಸದಸ್ಯರ ಆದಾಯವು 2 ಪಟ್ಟು ಅಧಿಕವಾಗಿರುವುದನ್ನು ಅಂದರೆ 2000 ರಿಂದ 4000 ಕ್ಕೆ ಏರಿಕೆಯಾಗಿರುವುದನ್ನು ಗಮನಿಸಬಹುದಾಗಿದೆ.
  5. ಪ್ರಸ್ತುತ ಸಂಶೋಧನೆಯಲ್ಲಿ ಮಹಿಳೆಯರು ಸ್ವ-ಸಹಾಯ ಸಂಘಕ್ಕೆ ಸೇರಿದ ನಂತರ ತಮ್ಮ ಆತ್ಮ ವಿಶ್ವಾಸ ಹಾಗೂ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವು ಹೆಚ್ಚಾಗಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.
  6. ಹಾಗೆಯೇ 6 ಜನ ಸದಸ್ಯ ಮಹಿಳೆಯರಲ್ಲಿ (4%) ರಷ್ಟು ಪ್ರತಿಕ್ರಿಯಾದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸ್ವ-ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವೃದ್ಧಿ ಪ್ರೇರಣೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.
 
ಸಲಹೆಗಳು:
  1. ಸರ್ಕಾರಗಳು ಮಹಿಳಾ ಸ್ವ-ಸಹಾಯ ಸಂಘಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಅವಶ್ಯವಾಗಿದೆ.
  2. ಮಹಿಳೆಯರ ಸಬಲೀಕರಣವಾಗಬೇಕಾದರೆ ಸ್ವ-ಸಹಾಯ ಸಂಘದ ಸದಸ್ಯರ ಕುಟುಂಬದವರ ಸಹಕಾರ ಅಗತ್ಯವಾಗಿದೆ.
  3. ಸ್ವ-ಸಹಾಯ ಸಂಘಗಳು ಸರ್ಕಾರದಿಂದ ಸಿಗುವ ಸಾಲ-ಸೌಲಭ್ಯಗಳನ್ನು ಸರಿಯಾಗಿ ಹಾಗೂ ಸೂಕ್ತವಾಗಿ ಬಳಸಿಕೊಳ್ಳಬೇಕಾಗಿದೆ.
  4. ಬ್ಯಾಂಕುಗಳು ಸ್ವ-ಸಹಾಯ ಸಂಘಗಳೊಂದಿಗೆ ಸಹಕಾರಯುತವಾಗಿ ವರ್ತಿಸುವುದು ಅವಶ್ಯಕವಾಗಿದೆ.
  5. ಮಹಿಳೆಯರು ಸ್ವಯಂ ಪ್ರೇರಣೆಯಿಂದ ಅಭಿವೃದ್ಧಿ ಹೊಂದಲು ಹಾಗೂ ಸಮಸ್ಯೆಗಳನ್ನು ಎದುರಿಸುವ ಮನೋಭಾವನೆಯನ್ನು ಹೊಂದಬೇಕಾದ ಅನಿವಾರ್ಯತೆಯಿದೆ.
 
ಉಪಸಂಹಾರ:
ಮಹಿಳಾ ಸಬಲೀಕರಣವೆನ್ನುವುದು ಹಿಂದೆಂದಿಗಿಂತಲೂ ಇಂದು ಪ್ರಸ್ತುತವಾಗಿದೆ. ಬದಲಾದ ದಿನಮಾನಗಳಲ್ಲಿ ಮಹಿಳೆಯರನ್ನು ದೇಶದ ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ಬೆಸೆಯುವಲ್ಲಿ ಸ್ವ-ಸಹಾಯ ಸಂಘಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಮಹಿಳೆಯು ಸ್ವ-ಸಹಾಯ ಸಂಘಗಳ ವೇದಿಕೆಯ ಮೂಲಕ ಅಭಿವೃದ್ಧಿಯನ್ನು ಸಾಧಿಸುವಲ್ಲಿ ದಾಪುಗಾಲು ಇಡುತ್ತಿದ್ದಾಳೆ. ಸಾಮಾನ್ಯವಾಗಿ ವಿವಾಹಿತ ಮಹಿಳೆಯರು ಸ್ವ-ಸಹಾಯ ಸಂಘಗಳಲ್ಲಿ ಸದಸ್ಯರಾಗಿರುತ್ತಾರೆ. ಬ್ಯಾಂಕ್‍ ನ ಕಾರ್ಯನಿರ್ವಹಣೆಯ ತಿಳುವಳಿಕೆ, ಉಳಿತಾಯ ಮನೋಭಾವನೆಯ ಮೂಲಕ ಸಾಮಾಜಿಕ ಅಭಿವೃದ್ಧಿಯನ್ನು ಸಾಧಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮಹಿಳೆಯರು ಸ್ವ-ಸಹಾಯ ಗುಂಪುಗಳಲ್ಲಿ ಹೆಚ್ಚಾಗಿ ಜಾತ್ಯಾತೀತವಾಗಿ ಸಂಘಟಿತವಾಗುತ್ತಿದ್ದಾರೆ. ಪ್ರಮುಖವಾಗಿ ಆರ್ಥಿಕವಾಗಿ ಸಬಲೀಕರಣವನ್ನು ಸಾಧಿಸುವುದರಿಂದ ಆತ್ಮ ವಿಶ್ವಾಸ ವೃದ್ಧಿಸುತ್ತದೆ. ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನವನ್ನು ಸಾಗಿಸುತಿದ್ದಾರೆ. ಮಹಿಳಾ ಸ್ವ-ಸಹಾಯ ಸಂಘಗಳು ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಅವರು ಆರ್ಥಿಕವಾಗಿ ಸಬಲೀಕರಣವನ್ನು ಹೊಂದುವುದರ ಜೊತೆಗೆ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಮಹಿಳೆಯರು ಸ್ವ-ಸಹಾಯ ಸಂಘಕ್ಕೆ ಸೇರಿದ ನಂತರ ಅವರ ಜೀವನ ಕ್ರಮದಲ್ಲಿ ಹಲವಾರು ಬದಲಾವಣೆಗಳು ಗೋಚರವಾಗಿವೆ. ಒಟ್ಟಾರೆಯಾಗಿ ಮಹಿಳೆಯರು ಸ್ವ-ಸಹಾಯ ಸಂಘಕ್ಕೆ ಸೇರಿದ ನಂತರದ ಅವರ ಜೀವನ ಹಾಗೂ ಜೀವನ ಕ್ರಮದಲ್ಲಿ ಗಮನಾರ್ಹ ಪ್ರಗತಿಯಾಗುತ್ತಿರುವುದು ಅತಿಶಯೋಕ್ತಿಯೇನಲ್ಲ.
 
ಆಧಾರ ಗ್ರಂಥಗಳು:
  1. ಚ. ನ. ಶಂಕರರಾವ್- ಭಾರತೀಯ ಸಮಾಜಶಾಸ್ತ್ರ, ಪರಿಷ್ಕೃತ ಹಾಗೂ ವಿಸ್ತೃತ ಆವೃತ್ತಿ-2013, ಜೈ ಭಾರತ್ ಪ್ರಕಾಶನ, ಮಂಗಳೂರು, ಪುಟ ಸಂಖ್ಯೆ, 488 ರಿಂದ 562.
  2. ಶಿಕ್ಷಣ ಸೌಧ, ತ್ರೈಮಾಸಿಕ, ಶಿಕ್ಷಣ ಮತ್ತು ಸಂಶೋಧನಾ ಪತ್ರಿಕೆ, ಜೂನ್ 2015, ಪ್ರಕಾಶಕರು - ಜಯದೇವ ವೈ ಮೆಣಸಗಿ, ವಿಧ್ಯಾನಿಧಿ ಪ್ರಕಾಶನ, ಗದಗ, ಪುಟ ಸಂಖ್ಯೆ- 14.
  3. ರಾಮಚಂದ್ರ ಜೋಷಿ, ಸಮಗ್ರ ಸಮಾಜಶಾಸ್ತ್ರ, ದ್ವಿತೀಯ ಮುದ್ರಣ - 2011, ಪ್ರಕಾಶಕರು - ಸಿದ್ಧಲಿಂಗ ಬಿ. ಕೊನೆಕ್, ಗುಲಬರ್ಗಾ, ಪುಟ ಸಂಖ್ಯೆ - 376, 681 & 685.
  4. ಚ. ನ. ಶಂಕರರಾವ್, ಮಹಿಳಾ ಅಧ್ಯಯನ, ಜೈ ಭಾರತ್ ಪ್ರಕಾಶನ, ಮಂಗಳೂರು, ಪುಟ ಸಂಖ್ಯೆ - 145 - 147 & 158.
  5. ಡಾ. ಮಹಾದೇವ ನಾರಾಯಣರಾವ್ ಜೋಷಿ ಮತ್ತು ಶ್ರೀ ಗುರುರಾಜ ನಾರಾಯಣರಾವ್ ಜೋಷಿ, (1998), ಸಾಮಾಜಿಕ ವಿಜ್ಞಾನಗಳಲ್ಲಿ ಸಂಶೋಧನೆ (ತಂತ್ರಗಳು ಮತ್ತು ವಿಧಾನಗಳು), ಸುಶೀಲ ಪ್ರಕಾಶನ, ಧಾರವಾಡ.
  6. ಪುಷ್ಪಾ ಬಸನಗೌಡರ, (2015), ಮಹಿಳಾ ಸಬಲೀಕರಣ, ಉಪನ್ಯಾಸ ಗ್ರಂಥಮಾಲೆ-513, ಪ್ರಸಾರಾಂಗ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
4 Comments
Amruta chenaveer
5/8/2020 12:22:29 am

Sir this article is very helpful for me.. Thank u so much... Very deep information u given

Reply
Abhi
9/18/2021 12:10:23 am

🙏

Reply
Sachin prasad
9/22/2021 06:25:37 am

Sir ಈ ನಿಮ್ಮ ಸಂಶೋಧನೆಯ ಪ್ರಶ್ನಾವಳಿ ಯನ್ನು ಕಳಿಸಿ please

Reply
Jeevan link
12/8/2024 05:15:23 am

Very good

Reply



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9
    ಸಮಾಜಕಾರ್ಯ
    ಸಮುದಾಯ ಸಂಘಟನೆ


    Picture

    Social Work Learning Academy

    Join WhatsApp Channel

    Niruta Publications

    Social Work Foot Prints

    Leaders Talk

    Ramesha Niratanka

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed

Niruta Publications Books List
File Size: 672 kb
File Type: pdf
Download File

Social Work Books
File Size: 116 kb
File Type: pdf
Download File

HR Books
File Size: 87 kb
File Type: pdf
Download File

General Books
File Size: 195 kb
File Type: pdf
Download File



SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • HR BLOG
  • PUBLICATION WITH US
  • TRANSLATION & TYPING
  • VIDEOS
  • HR & EMPLOYMENT LAW CLASSES - EVERY FORTNIGHT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

NIRATHANKA

  • ​CSR
  • TREE PLANTATION PROJECT

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe


Picture
More Details

Copyright Niruta Publications 2021,    Website Designing & Developed by: www.mhrspl.com