ಅಣ್ಣ್ಣಾಹಜಾರೆ ನೇತೃತ್ವದ ಜನಲೋಕಪಾಲ್ ಮಸೂದೆ ರಚನಾ ಸಮಿತಿ ವಿವಾದಕ್ಕೆ ಸಿಲುಕಿದೆ. ಒಂದು ಕಡೆ ಈ ಸಮಿತಿಯ ಸ್ವರೂಪವೇ ನಮ್ಮ ಸಂವಿಧಾನದ ಭಾವನೆಗೆ ವಿರುದ್ಧವಾಗಿದ್ದು, ಸಂಸದೀಯ ಪ್ರಜಾಸತ್ತಾತ್ಮಕ ವಿಧಿ-ವಿಧಾನಗಳಿಗೇ ಅಪಚಾರವೆಸಗುವಂತಿದೆ ಎಂದು ಕೆಲವರು ವಾದಿಸುತ್ತಿದ್ದರೆ, ಇನ್ನೊಂದು ಕಡೆ, ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದ ವಿರುದ್ಧದ ರಾಮಬಾಣವೆಂದೇ ಪರಿಗಣಿಸಲಾಗುತ್ತಿರುವ ಈ ಮಸೂದೆಯನ್ನು ರಚಿಸುತ್ತಿರುವವರೇ ಭ್ರಷ್ಟಾಚಾರಿಗಳಾಗಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ. 1968ರಿಂದಲೂ ಸಂಸತ್ತಿನಲ್ಲಿ ನೆನಗುದಿಗೆ ಬಿದ್ದಿರುವ ಈ ಮಸೂದೆ ಅಂತೂ ಅಂತಿಮ ರೂಪು ಪಡೆದು ಕಾನೂನಾಗಿ ಜಾರಿಗೆ ಬರುವ ದಿನಗಳು ದೂರವಿಲ್ಲ ಎಂಬ ಭರವಸೆ ಹುಟ್ಟಿದ ಸಂದರ್ಭದಲ್ಲೇ ಈ ವಿವಾದ ಸೃಷ್ಟಿಯಾಗಿದೆ. ಏಕೆ ಈ ವಿವಾದ? ಯಾರಿದನ್ನು ಸೃಷ್ಟಿಸುತ್ತಿರುವವರು? ಈ ಬಗ್ಗೆಯೂ ಈಗ ಸಾಕಷ್ಟು ಚರ್ಚೆ-ವಿವಾದಗಳು ನಡೆದಿವೆ. ಹಾಗೆ ನೋಡಿದರೆ, ಸಮಿತಿಯ ಸ್ವರೂಪ ಕುರಿತ ಆಕ್ಷೇಪ ಮತ್ತು ಅದರ ಕೆಲವು ಸದಸ್ಯರ ಮೇಲೆ ಮಾಡಲಾಗುತ್ತಿರುವ ಆರೋಪಗಳೆರಡೂ ಒಂದೇ ನೆಲೆಯಿಂದ ಹುಟ್ಟಿದವುಗಳಾಗಿವೆ ಎಂಬುದನ್ನು ನಾವು ಗಮನಿಸಬಹುದು ಅಥವಾ ಮೊದಲನೆಯದರಿಂದ ಎರಡನೆಯದು ಹುಟ್ಟಿದೆ ಎಂದೂ ಹೇಳಬಹುದಾಗಿದೆ. ಸಮಿತಿಯ ಸ್ವರೂಪ ಕುರಿತ ಆಕ್ಷೇಪಣೆ ಎಂದರೆ, ಶಾಸಕಾಂಗ ಮಾಡಬೇಕಾದ ಮಸೂದೆ ರಚನೆಯ ಕೆಲಸವನ್ನು ನಾಗರಿಕ ಸಮಾಜಕ್ಕೆ ಒಪ್ಪಿಸಲಾಗಿದೆ; ಹಾಗಾಗಿ, ಚುನಾವಣೆಗಳ ಮೂಲಕ ಆಯ್ಕೆಯಾದ ಜನತಾ ಪ್ರತಿನಿಧಿಗಳ ರೂಪದಲ್ಲಿನ ಜನತಾ ಶಕ್ತಿಯೇ ರಾಷ್ಟ್ರದ ಸಾರ್ವಭೌಮ ಅಧಿಕಾರ ಶಕ್ತಿ ಎಂಬ ಸಂವಿಧಾನದ ಕೇಂದ್ರ ಭಾವನೆಗೇ ಧಕ್ಕೆ ತರಲಾಗಿದೆ ಎಂಬುದು.
ಆದರೆ ಇದು ಸರ್ಕಾರದ ಪ್ರಜ್ಞಾಪೂರ್ವಕ ನಿರ್ಧಾರವೇ? ಎಂದು ನಾವು ಆಲೋಚನೆ ಮಾಡಬೇಕು. ಜನತಾ ಪ್ರತಿನಿಧಿಗಳೆಂದು ಸಂವೈಧಾನಿಕವಾಗಿ ಕರೆಯಲ್ಪಡುವ ನಮ್ಮ ಶಾಸಕರು/ಸಂಸದರು ಕಳೆದ 50 ವರ್ಷಗಳಿಂದಲೂ ಸಂವಿಧಾನದಿಂದ ನಿರ್ದೇಶಿತವಾದ ಈ ಲೋಕಪಾಲ ಮಸೂದೆಗೆ ಅಂತಿಮ ರೂಪು ಕೊಟ್ಟು ಕಾಯಿದೆಯನ್ನಾಗಿ ಜಾರಿಗೊಳಿಸಲು ಏಕೆ ಮೀನ ಮೇಷ ಎಣಿಸುತ್ತಾ ಹಿಂಜರಿಯುತ್ತಿದ್ದಾರೆ? ಒಂದಾದ ಮೇಲೊಂದು ಸಮತಿ-ಉಪ ಸಮತಿಗಳನ್ನು ರಚಿಸುತ್ತಾ, ಈ ಸಮಗ್ರ ಭ್ರಷ್ಟಾಚಾರ ವಿರೋಧಿ ಶಾಸನಾತ್ಮಕ ಕ್ರಮವನ್ನು ಮುಂದೂಡತ್ತಲೇ ಇದ್ದಾರೆ ಏಕೆ? ಇದಕ್ಕೆ ಕಳೆದ 50 ವರ್ಷಗಳಲ್ಲಿ ಒಂದಾದ ಮೇಲೊಂದರಂತೆ ಸಾರ್ವಜನಿಕ ವಲಯದಲ್ಲಿ ಸ್ಫೋಟಿಸುತ್ತಿರುವ ಕೋಟ್ಯಂತರ ರೂಪಾಯಿಗಳ ಹಗರಣಗಳೇ ಉತ್ತರ ಹೇಳುವಂತಿವೆ. ಈ ಹಗರಣಗಳಲ್ಲಿ ಆಪಾದಿತರು ಯಾರು? ಸಂವಿಧಾನದ ಯಾವ ಅಂಗಗಳಿಗೆ ಸೇರಿದವರು? ಇವರ ಪೈಕಿ ಎಷ್ಟು ಜನರ ವಿರುದ್ಧ ಪ್ರಕರಣಗಳು ದಾಖಲಾಗಿ, ಎಷ್ಟು ಜನಕ್ಕೆ ಶಿಕ್ಷೆಯಾಗಿದೆ? ಉತ್ತರಗಳು ಸ್ಪಷ್ಟವಿವೆ. ಹೀಗೆ ನಮ್ಮ ಶಾಸಕಾಂಗ ಸಂಪೂರ್ಣ ಭ್ರಷ್ಟಗೊಂಡು, ನಿಷ್ಕ್ರಿಯವಾಗಿ ತನ್ನ ಉದ್ದೇಶಗಳ ವಿಫಲತೆಯ ಅಂಚನ್ನು ತಲುಪಿದೆ. ಇದರ ಪರಿಣಾಮವಾಗಿ ಕಾರ್ಯಂಗವೂ ಭ್ರಷ್ಟಗೊಂಡು, ನಮ್ಮ ಜನ ತಮ್ಮ ನಾಗರಿಕ ಬದುಕಿನ ಮೌಲ್ಯಗಳ ರಕ್ಷಣೆಗಾಗಿ, ಆ ಮೂಲಕ ಸಂವಿಧಾನದ ರಕ್ಷಣೆಗಾಗಿ ಇನ್ನೂ ಅಷ್ಟೇನೂ ಭ್ರಷ್ಟಗೊಂಡಿಲ್ಲವೆಂದು ನಂಬಲಾಗಿರುವ ಉನ್ನತ ಸ್ತರದ ನ್ಯಾಯಾಂಗದ ಮೊರೆ ಹೋಗಲಾರಂಭಿಸಿದ್ದಾರೆ. ನಮ್ಮ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ವಿಚಾರಣೆಗೆ ದಾಖಲಾಗಿರುವ ಪ್ರಕರಣಗಳ ಸ್ವರೂಪವನ್ನು ನೋಡಿದರೇ ಇದು ನಿಚ್ಚಳವಾಗುತ್ತದೆ. ಆ ಹುಡುಗನಿಗೆ ಈ ಕಾಲೇಜಿನಲ್ಲಿ ಸೀಟು ಕೊಡಿ, ಆ ಹಳ್ಳಿಗೆ ಈ ಗಡುವಿನಲ್ಲಿ ಕುಡಿಯುವ ನೀರು ಪೂರೈಸಿ ಎಂಬ ಆಜ್ಞೆಗಳಿಂದ ಹಿಡಿದು, ರೈತರಿಂದ ಸಂಗ್ರಹಿಸಿದ ಧಾನ್ಯಗಳನ್ನು ಕೊಳೆಯದಂತೆ ಸರಿಯಾಗಿ ಸಂರಕ್ಷಿಸಿ, ರೈಲುಗಳನ್ನು ಸರಿಯಾದ ಸಮಯಕ್ಕೆ ಓಡಿಸಿ ಎಂದು ಸೂಚಿಸಲೂ ಇಂದು ಈ ನ್ಯಾಯಾಲಯಗಳು ಬೇಕಾಗಿವೆ! ಅಂದರೆ, ಸಂವಿಧಾನ ಅರ್ಥಾತ್ ರಾಷ್ಟ್ರಜೀವನದ ಕಾರ್ಯಶೀಲತೆ ಇಂದು ಒಂಟಿಗಾಲ ಮೇಲೆ, ಅದೂ ಸಾಕಷ್ಟು ಕುಂಟಾಗಿರುವಂತೆ ತೋರುತ್ತಿರುವ ನ್ಯಾಯಾಂಗದ ಮೇಲಷ್ಟೇ ನಿಲ್ಲುವಂತಾಗಿದೆ. ಇಂತಹ ಸಂದರ್ಭದಲ್ಲಿ ಅದು ಕುಸಿದು ಬೀಳದಂತೆ ತಡೆಯಲು ನಾಗರಿಕ ಸಮಾಜ ಮುಂದಾದರೆ, ಅದು ಸಂವಿಧಾನ ರಕ್ಷಣೆಯ ಕ್ರಮವಾಗುತ್ತದೆಯೇ ಹೊರತು ಸಂವಿಧಾನ ವಿರೋಧಿ ಕ್ರಮ ಹೇಗಾಗುತ್ತದೋ ತಿಳಿಯದಾಗಿದೆ! ಅಷ್ಟಕ್ಕೂ, ಈ ಜನಲೋಕಪಾಲ ಮಸೂದೆ ರಚನಾ ಸಮಿತಿಯಲ್ಲಿ ನಾಗರಿಕ ಸಮಾಜದ ಸದಸ್ಯರಷ್ಟೇ ಅಲ್ಲ, ಶಾಸಕಾಂಗ ಮತ್ತು ಕಾರ್ಯಾಂಗಗಳ ಸದಸ್ಯರೂ ಇದ್ದಾರಲ್ಲವೇ? ಇದಕ್ಕಿಂತ ಮುಖ್ಯವಾಗಿ, ಈ ಮಸೂದೆ ಅಂತಿಮವಾಗಿ ಸಂಸತ್ತಿನ ಮುಂದೆ ಬಂದು ಅದರ ಅನುಮೋದನೆ ಪಡೆದೇ ಕಾಯಿದೆಯಾಗಬೇಕಲ್ಲವೇ? ಇರಬಹುದು, ಈಗ ಸಂವಿಧಾನದ ರಕ್ಷಣೆಗೆ ಧಾವಿಸಿ ಬಂದಿರುವ ನಾಗರಿಕ ಸಮಾಜ ಎಲ್ಲರೂ ಒಪ್ಪುವಂತಹ ರೀತಿಯಲ್ಲಿ ಪ್ರಾತಿನಿಧಿಕವಾಗಿಲ್ಲದಿರಬಹುದು. ಅಣ್ಣಾ ಹಜಾ಼ರೆ ರಾಷ್ಟ್ರದ ಇಂದಿನ ಸರ್ವಶ್ರೇಷ್ಠ ನಾಯಕರಲ್ಲದಿರಬಹುದು. ಆದರೆ ಜನತಾ ಶಕ್ತಿಯನ್ನು ಶಾಸನಾತ್ಮಕವಾಗಿ ಪ್ರತಿನಿಧಿಸಬಲ್ಲ ಈ ಜನ ಪ್ರತಿನಿಧಿಗಳ ಆಯ್ಕೆಗೆ ಅನುವು ಮಾಡಿಕೊಡಬೇಕಾದ ಚುನಾವಣಾ ಪ್ರಕ್ರಿಯೆಯೇ ಭ್ರಷ್ಟಗೊಂಡು ಕುಸಿದು ಬೀಳುತ್ತಿರುವಾಗ ನಿಜವಾದ ಜನ ಪ್ರತಿನಿಧಿಗಳೆಂದು ಯಾರನ್ನು ಒಪ್ಪುವುದು? ಭ್ರಷ್ಟತೆಯಲ್ಲಿ ಭಾಗಿಯಾಗಿ ಅಥವಾ ಅದನ್ನು ಕಣ್ಮುಚ್ಚಿ ಸಹಿಸುತ್ತಿರುವ ಶಾಸನಾತ್ಮಕ ಪ್ರತಿನಿಧಿಗಳನ್ನೋ? ಅಥವಾ, ಅವರ ಮತ್ತು ಅವರ ಚೇಲಾಗಳಾಗಿ ಪರಿವರ್ತಿತರಾಗಿರುವ ಕಾರ್ಯಾಂಗದ ಕಾರ್ಯವೈಖರಿಯನ್ನು ಇನ್ನು ಸಹಿಸಲಾಗದೆಂಬಂತೆ; ಯಾರು ಜನ ಸಂಘಟನೆ ಮಾಡಿ ಸರ್ಕಾರವನ್ನು ಮಣಿಸಿ, ಈಗ ಈ ಎಲ್ಲ ಅನಾಹುತವನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಲ್ಲ ಶಾಸನ ರಚಿಸುವ ಪ್ರಾಥಮಿಕ ಹಂತದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಾನ್ಯತೆ ಪಡೆಯಬಲ್ಲವರಾಗಿದ್ದಾರೋ, ಅವರನ್ನೋ? ಸಹಜವಾಗಿ ಎರಡನೆಯವರನ್ನು ನಮ್ಮ ಆಪತ್ಬಾಂಧವರೆಂಬ ನೆಲೆಯಲ್ಲಾದರೂ ತತ್ಕಾಲೀನ ಜನ ಪ್ರತಿನಿಧಿಗಳೆಂದು ಒಪ್ಪಿಕೊಳ್ಳಲು ನಾವು ಸಿದ್ಧರಾಗಬೇಕಲ್ಲವೇ? ಇದಾವುದನ್ನೂ ಮಾಡದೆ, ಬರೇ ಬೈಯುತ್ತಾ, ವಿಮರ್ಶಿಸುತ್ತಾ, ಅದರಲ್ಲಿ ಮಹಿಳೆಯರಿಲ್ಲ, ದಲಿತರಿಲ್ಲ ಎಂಬ ಅರ್ಧ ತಾಂತ್ರಿಕ, ಅರ್ಧ ಭಾವನಾತ್ಮಕ ಆಕ್ಷೇಪಣೆಗಳನ್ನು ದಾಖಲಿಸುತ್ತ್ತಾ ಕೂರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನೂ ಇಂದು ನಾವು ಹಾಕಿಕೊಳ್ಳಬೇಕಾಗಿದೆ. ಇಲ್ಲದೆ ಹೋದರೆ ನಮ್ಮ ಅಸಮಧಾನ, ವಿರೋಧ, ವಿಮರ್ಶೆ, ಆಕ್ಷೇಪಣೆಗಳೇ ಅನುಮಾನಾಸ್ಪದವಾಗತೊಡಗುತ್ತವೆ. ಆದರೆ ಅದೇ ಸಮಯದಲ್ಲಿ ಈ ಅನೌಪಚಾರಿಕ ಮಾರ್ಗದ ಮೂಲಕ ಮೂಡಿದ ನಾಗರಿಕ ಸಮಾಜದ ಈ ಜನತಾ ಪ್ರತಿನಿಧಿಗಳು, ಕೆಲವರು ಆಪಾದಿಸುತ್ತಿರುವಂತೆ ಶಾಸನಾತ್ಮಕ ಪ್ರತಿನಿಧಿಗಳಂತೆಯೇ ನಿಜವಾಗಿ ಭ್ರಷ್ಟರೇ ಆಗಿದ್ದರೆ, ಅವರಿಂದ ಎಂತಹ ಕಾಯಿದೆ ರೂಪುಗೊಳ್ಳಬಹುದೆಂಬ ಆತಂಕ ಯಾರಲ್ಲಾದರೂ ಉಂಟಾಗುವುದು ಸಹಜವೇ ಎಂಬುದನ್ನೂ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ; ಉದಾಹರಣೆಗೆ, ಖ್ಯಾತ ನ್ಯಾಯವಾದಿ ಶಾಂತಿಭೂಷಣ್ ಅವರ ಮೇಲೆ ಮಾಡಲಾಗುತ್ತಿರುವ ಆರೋಪಗಳನ್ನು ಗಮನಿಸಬೇಕು. ಆಗ ಹಜಾ಼ರೆ ಅವರ ನೇತೃತ್ವದ ಈ ಇಡೀ ಭ್ರಷ್ಟಾಚಾರ ವಿರೋಧಿ ಆಂದೋಲನ ಸದುದ್ದೇಶಿತವಾದರೂ, ಅಂತಹ ಸುಭದ್ರ ಭ್ರಷ್ಟಾಚಾರ ವಿರೋಧಿ ನೆಲೆಯ ಮೇಲೆ ರೂಪುಗೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಶಾಂತಿ ಭೂಷಣ್ ಹಿರಿಯ ವಕೀಲರಾಗಿ, ಮಾಜಿ ಕೇಂದ್ರ ಕಾನೂನು ಮಂತ್ರಿಯಾಗಿ ಕಳೆದ ನಾಲ್ಕು ದಶಕಗಳಿಂದಲೂ ಭ್ರಷ್ಟಾಚಾರದ ವಿರುದ್ಧ ಹಲವು ಹೋರಾಟಗಳನ್ನು ನಡೆಸುತ್ತಾ ಬಂದಿರುವ ಇತಿಹಾಸ ಹೊಂದಿರುವವರು. ಆದರೆ, 2006ರಲ್ಲಿ, ಆಗ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಪರ ನಡೆಸುತ್ತಿದ್ದ ಮೊಕದ್ದಮೆಯೊಂದರಲ್ಲಿ ಸಂಬಂಧಪಟ್ಟ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಯತ್ನಿಸಿದರೆಂದು ಈಗ ಆಪಾದಿಸಲಾಗುತ್ತಿದೆ. ಅದಕ್ಕೆ ಈಗ ಧ್ವನಿಮುದ್ರಿಕೆ ರೂಪದ ಸಾಕ್ಷಿಯೂ ಲಭ್ಯವಾಗಿದೆಯಂತೆ. ಆದರೆ ಈ ಸಾಕ್ಷ್ಯ ನಿರ್ಮಾಣದ ಹಿಂದೆ ಇರುವವರು ಮತ್ತಾರೂ ಅಲ್ಲ, ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸಮಾಜವಾದವೂ ಸೇರಿದಂತೆ ಭಾರತೀಯ ರಾಜಕಾರಣದಲ್ಲಿ ಅಳಿದುಳಿದಿದ್ದ ಎಲ್ಲ ಪವಿತ್ರ ಮೌಲ್ಯಗಳನ್ನೂ ಬುಡಮೇಲು ಮಾಡಿದ ಕುಖ್ಯಾತಿ ಹೊಂದಿರುವ ಅಮರ್ ಸಿಂಗ್ ಎಂಬ ರಾಜಕಾರಣಿ ಎಂಬುದು ಮಾತ್ರ ನಮಗೆ ಅಷ್ಟಾಗಿ ಮುಖ್ಯವಾಗಿ ಕಾಣದೇ ಹೋಗುತ್ತದೆ! ಇನ್ನು ಶಾಂತಿಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಉತ್ತರ ಪ್ರದೇಶದಲ್ಲಿ ಮಾರುಕಟ್ಟೆ ಬೆಲೆಗಿಂತ ಅತಿ ಕಡಿಮೆ ದರದಲ್ಲಿ ಜಮೀನು ಕೊಂಡು ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆಂಬುದು ಇನ್ನೊಂದು ಭ್ರಷ್ಟಾಚಾರದ ಆರೋಪ. ಸರಿ, ಆದರೆ ಇವೊತ್ತು ಯಾವ ಮತ್ತು ಯಾರ ಭೂ-ಖರೀದಿ, ಮಾರುಕಟ್ಟೆ ಬೆಲೆಯಲ್ಲಿ ನೋಂದಿತವಾಗುತ್ತಿದೆ? ಇದಕ್ಕೆ ಕಾರಣವೇನು? ಯಾರು? ಈ ಪ್ರಶ್ನೆಗಳನ್ನೂ ನಮ್ಮನ್ನು ನಾವೇ ಕೇಳಿಕೊಳ್ಳಬೇಕುಗುತ್ತದೆ ಅಲ್ಲವೇ? ಮುಖ್ಯವಾಗಿ ಇಲ್ಲಿ ಗಮನಿಸಬೇಕಾದದ್ದು, ಇಂತಹ ಆರೋಪಗಳು ಭ್ರಷ್ಟಾಚಾರ ನಡೆಯಿತೆಂದು ಹೇಳಲಾಗುತ್ತಿರುವ ಸಂದರ್ಭಗಳಲ್ಲಿ ಕೇಳಿ ಬರದೆ, ಭ್ರಷ್ಟಾಚಾರ ವಿರೋಧೀ ಆಂದೋಲನವೊಂದು ಗಂಭೀರ ರೂಪದಲ್ಲಿ ಆರಂಭವಾದಾಗ ಮಾತ್ರ ಏಕೆ ಕೇಳಿಬರುತ್ತವೆ? ಶಾಂತಿ ಭೂಷಣರು, ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರುಪಾಯಿಗಳ ನಷ್ಟಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿರುವ 2ಜಿ ಸ್ಪೆಕ್ಟ್ರಂ ಹಗರಣದ ಬಗ್ಗೆ ಆರಂಭವಾಗಿರುವ ವಿಚಾರಣೆಯ ರೂವಾರಿ ಎಂದೋ? ಅಥವಾ ಅವರೂ ಭ್ರಷ್ಟ ವ್ಯವಸ್ಥೆಯ ಫಲಾನುಭವಿಯೇ ಆಗಿದ್ದಾರೆ ಎಂದೋ? ಎರಡೂ ಇರಬಹುದು. ಆದರೆ ಈ ಎರಡೂ ಅಭಿನ್ನವಾಗಿ ಬೆರತು, ಜನಲೋಕಪಾಲ ಮಸೂದೆ ರಚನಾ ಸಮಿತಿಯ ವಿಶ್ವಾಸಾರ್ಹತೆಯನ್ನೇ ಭಂಗಗೊಳಿಸುವಂತಹ ಏಕ ಪರಿಣಾಮ ರೂಪದಲ್ಲಿ ಕಾಣಿಸಿಕೊಳ್ಳತೊಡಗಿದಾಗ ಬೇಸರವಾಗುತ್ತದೆ, ಜುಗುಪ್ಸೆಯಾಗುತ್ತದೆ, ಗಾಬರಿಯಾಗುತ್ತದೆ. ಸ್ವಲ್ಪ ಆಳವಾಗಿ ಯೋಚಿಸಿದಾಗ ಇದಕ್ಕೆ ಕಾರಣ, ಪ್ರಸಕ್ತ ಭ್ರಷ್ಟಾಚಾರ ವಿರೋಧಿ ಆಂದೋಲನವು ಭ್ರಷ್ಟಾಚಾರ ವೆಂಬುದನ್ನು ಗ್ರಹಿಸಿರುವ ರೀತಿ-ನೀತಿಗಳಲ್ಲೇ ಅಡಗಿದೆ ಎಂದೆನಿಸುತ್ತದೆ. ಭ್ರಷ್ಟಾಚಾರವೇನೂ ಈ ದೇಶದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದದ್ದಲ್ಲ. ಗಾಂಧಿಯುಗದ ರಾಜಕಾರಣದ ಸಾಮಾನ್ಯ ಪ್ರತಿನಿಧಿಯೆಂದು ಗುರುತಿಸಬಹುದಾದ ನಿಜಲಿಂಗಪ್ಪನವರೇ ಒಂದೆಡೆ ಹೇಳಿದಂತೆ, ಶ್ರೀರಾಮನ ಕಾಲದಲ್ಲೂ ಭ್ರಷ್ಟಾಚಾರವಿತ್ತು. ಇನ್ನು ಈ ಗಾಂಧಿ ರಾಜಕಾರಣದ ಯುಗಕ್ಕೆ ಅಂತ್ಯ ಹಾಡಿದವರೆಂದು ಹೇಳಲಾಗುವ ಹೊಸ ಕಾಲದ ಗಾಂಧಿ, ಇಂದಿರಾ ಗಾಂಧಿಯವರು ತಮ್ಮ ವಿರುದ್ಧದ ಜೆಪಿ ನೇತೃತ್ವದ ಭ್ರಷ್ಟಾಚಾರ ಆಂದೋಲನದ ಸಂದರ್ಭದಲ್ಲಿ ಹೇಳಿದಂತೆ, ಭ್ರಷ್ಟಾಚಾರವಿಲ್ಲದ ಜಾಗ ಜಗತ್ತಿನಲ್ಲಿಯೇ ಇಲ್ಲ! ಜೆಪಿ ಆಂದೋಲನ ಅನತಿ ಕಾಲದಲ್ಲೇ ಭ್ರಮನಿರಸನ ಉಂಟು ಮಾಡಿ ಭ್ರಷ್ಟಾಚಾರ ಕುರಿತ ಈ ಎರಡೂ ಮಾತುಗಳು ನಿಜವೆನ್ನಿಸುವಂತಾದರೂ, ಇಂದು ಮತ್ತೆ ರಾಷ್ಟ್ರಾದ್ಯಂತ ಭ್ರಷ್ಟಾಚಾರದ ವಿರುದ್ಧ ಹೊಸ ಜಾಗೃತಿ, ಹೊಸ ಆವೇಶ ಉಂಟಾಗಿರುವಂತೆ ತೋರುತ್ತಿದೆಯಾದರೆ, ಅದಕ್ಕೆ ಭ್ರಷ್ಟಾಚಾರ ಈಗ ಸಹಿಸಲಾಗದಷ್ಟು ಬೃಹದಾಕಾರವಾಗಿ ಬೆಳೆದಿದೆ ಎಂಬುದಷ್ಟೇ ಕಾರಣವಿರಲಾರದು. ಏಕೆಂದರೆ, ಭ್ರಷ್ಟಾಚಾರ ನಿಗ್ರಹಿಸಲು ಸಂವಿಧಾನದಲ್ಲಿ, ಸರ್ಕಾರಗಳನ್ನು ಕಾಲಾನುಕಾಲಕ್ಕೆ ಬದಲಿಸುವುದೂ ಸೇರಿದಂತೆ, ಸಾಕಷ್ಟು ಅಸ್ತ್ರಗಳಿಲ್ಲವೇ? ಅವನ್ನೇಕೆ ಪರಿಣಾಮಕಾರಿಯಾಗಿ ಬಳಸಬಾರದು ಎಂಬ ಪ್ರಶ್ನೆ ಏಳುತ್ತದೆ. ಆದರೆ ಪರಿಸ್ಥಿತಿ ಇಂದು ಅಷ್ಟು ಸರಳವಾಗಿಲ್ಲ. ಸಂವಿಧಾನದ ಈ ಅಸ್ತ್ರಗಳನ್ನೇ ನಿಷ್ಕ್ರಿಯಗೊಳಿಸಬಲ್ಲಂತಹ ಹೊಸ ಭ್ರಷ್ಟಾಚಾರ ಇಂದು ಮೈದಳೆದು ನಿಂತಿದೆ. ಅದು ಶಾಸಕಾಂಗವನ್ನೂ, ಕಾರ್ಯಂಗವನ್ನೂ ನುಂಗಿ, ನ್ಯಾಯಾಂಗವನ್ನೂ ನುಂಗಲು ಕಾದು ನಿಂತಿದೆ. ಸಂವಿಧಾನ ಎಷ್ಟೇ ಚೈತನ್ಯಶಾಲಿ ಎಂದು ನಾವು ಬೌದ್ಧಿಕವಾಗಿ ವರ್ಣಿಸಿದರೂ, ಅದು ಆ ಚೈತನ್ಯ ಪಡೆಯುವುದು ಅದನ್ನು ನಂಬಿ ಆಚರಿಸುವ ಪ್ರಜೆಗಳ ಮೂಲಕ ತಾನೇ? ಆದರೆ ಪ್ರಜೆಗಳನ್ನೇ ನಿಶ್ಚೇಷ್ಟಿತಗೊಳಿಸುವಂತಹ ಶಕ್ತಿಗಳು ಸೃಷ್ಟಿಯಾದರೆ ಏನು ಮಾಡುವುದು? ಇಂದು ಹಣ ಎನ್ನುವುದು ಎಂತಹ ರಾಕ್ಷಸ ಪ್ರಮಾಣ ಮತ್ತು ಸಾಧ್ಯತೆಗಳನ್ನು ಗಳಿಸಿಕೊಂಡಿದೆ ಎಂದರೆ, ಅದು ಈ ಕಾಲದ ಎಂತಹ ಬೈರಾಗಿಗಳನ್ನೂ ನುಂಗಿ ನೊಣೆಯಬಲ್ಲುದಾಗಿದೆ. ಸಾವಿರ ರೂಪಾಯಿಗಳಿಗೆ ಬಗ್ಗದವನು, ಲಕ್ಷಕ್ಕೆ ಬಗ್ಗದಿರುವನೇ? ಲಕ್ಷಕ್ಕೆ ಬಗ್ಗದವನು ಕೋಟಿಗೆ ಬಗ್ಗದಿರುವನೇ? ಕೋಟಿಗೆ ಬಗ್ಗದವನು ದಶಕೋಟಿ-ಶತಕೋಟಿಗೆ ಬಗ್ಗದಿರುವನೇ? ಈ ಹಣ ಗಳಿಸಿ ಈಗ ಏನೆಲ್ಲ ಸುಖ ಅನುಭವಿಸಬಹುದು! ಇದರ ವೈವಿಧ್ಯತೆಗೆ, ತೀವ್ರತೆಗೆ ಮಿತಿ ಎಂಬುದಿದೆಯೇ? ಕೊನೆಯಿಲ್ಲದೆ, ಸದಾ ಆವಿಷ್ಕಾರಗೊಳ್ಳುತ್ತಾ ಹೋಗುತ್ತಿರುವ ಸುಖದ ಈ ವೈವಿಧ್ಯತೆ ಮತ್ತು ತೀವ್ರತೆಗಳ ದೊಡ್ಡ ಕೈಗಾರಿಕೆಯನ್ನೇ ನಾವಿಂದು ಮುಕ್ತ ಮಾರುಕಟ್ಟೆ ಪ್ರಪಂಚ ಎಂದು ಕರೆಯುತ್ತಿರುವುದಲ್ಲವೇ? ಶಾಂತಿಭೂಷಣ್ ಈ ಪ್ರಪಂಚದ ಒಬ್ಬ ಸಾಮಾನ್ಯ ಪ್ರಜೆ ಮಾತ್ರವಲ್ಲವೇ? ನಾನು, ನೀವು? ಹೆಚ್ಚೆಂದರೆ, ನಾವಿನ್ನೂ ಅಂತಹ ಪ್ರಜೆತನದ ಸುಖಗಳಿಗೆ ತೆರೆದುಕೊಳ್ಳುವ ಅವಕಾಶಗಳನ್ನು ಪಡೆದಿಲ್ಲದಿರಬಹುದಷ್ಟೆ! ಇದು ನಮ್ಮ ಕಣ್ಮುಂದೆ ಇರುವ ಸತ್ಯ. ಇದನ್ನು ಎದುರಿಸಲು, ನಮ್ಮ ನ್ಯಾಯಾಲಯಗಳಲ್ಲಿ ಬಾಡಿಗೆ ಬಂಟರ ಬಾಯಿಗೆ ಸಿಕ್ಕಿ ಭಾಷೆಯ ಎಂಜಲಿನಲ್ಲಿ ಹೊರಳಾಡಿ ಉಸಿರುಗಟ್ಟಿಕೊಳ್ಳಬಲ್ಲ್ಲ ಕಾಯಿದೆಯೊಂದನ್ನು ರೂಪಿಸಲು ನಾವಿಂದು ಹೊರಟಿದ್ದೇವೆ. ಯಡಿಯೂರಪ್ಪನವರಿಗೆ ಮತ್ತು ದಿಗ್ವಿಜಯ ಸಿಂಗ್ ಅವರಿಗೆ ಅರ್ಥವಾಗಿರುವ ಈ ಸಂಗತಿ ಸಂತೋಷ್ ಹೆಗ್ಡೆಯವರೂ ಸೇರಿದಂತೆ ಇತರ ಕಾನೂನು ತಜ್ಞರು ಮತ್ತು ಹೋರಾಟಗಾರರಿಗೆ ಅರ್ಥವಾಗದಿರುವುದರಿಂದಲೇ ಈ ಎಲ್ಲ ಅಸಮಧಾನ, ಆರೋಪ, ಜಗಳ, ಕಿತ್ತಾಟಗಳು! ಆದರೆ ಇವೆಲ್ಲವುಗಳ ಮಧ್ಯೆ, ಕೆಲವರಿಗೆ ಮಿತಿಯಿಲ್ಲದ ಸ್ವರ್ಗ ಸುಖವನ್ನೂ, ಇದಕ್ಕೆ ಅನುವಾಗುವಂತೆ ಮತ್ತೆ ಕೆಲವರಿಗೆ ಮಿತಿಯಿಲ್ಲದ ನರಕ ವಾಸವನ್ನೂ ಸೃಷ್ಟಿಸುತ್ತಿರುವ ಮನಮೋಹನ ಸಿಂಗ್ ಪ್ರಣೀತ ಉದಾರ ಆಥರ್ಿಕ ನೀತಿಯು, ದುಡಿಮೆಯ ಅರ್ಥವನ್ನೇ, ದುಡಿಮೆ ಮತ್ತು ಪ್ರತಿಫಲಗಳ ನಡುವಣ ಸಮೀಕರಣವನ್ನೇ ಅಸ್ತವ್ಯಸ್ತಗೊಳಿಸಿದೆ ಎಂಬುದೇ ನಮ್ಮ ಗಮನಕ್ಕೆ ಬಾರದೇ ಹೋಗಿದೆ. ಇದು ಈ ಸಂದರ್ಭದ ನಿಜವಾದ ದುರಂತ! ಈ ಹಿಂದೆ ಯಾವುದನ್ನು ಅನ್ಯಾಯ, ಅನುಚಿತ, ಅಕ್ರಮ, ಮೋಸ-ವಂಚನೆ, ದಗಾ ಎಂದು ಕರೆಯುತ್ತಿದ್ದೆವೋ ಅವು ಇಂದು ಈ ನೀತಿ ಎತ್ತಿ ಹಿಡಿಯುತ್ತಿರುವ ಅಭಿವೃದ್ಧಿ ಮತ್ತು ಅದಕ್ಕೆ ತಕ್ಕುನಾದ ವಾಣಿಜ್ಯ ವ್ಯವಸ್ಥಾಪನೆಯ ಪರಿಭಾಷೆಯಲ್ಲಿ ಬಹು ಮರ್ಯಾದಸ್ಥ ಹೆಸರುಗಳನ್ನು ಪಡೆದು, ನ್ಯಾಯ-ಅನ್ಯಾಯ, ತೃಪ್ತಿ, ನೆಮ್ಮದಿ, ಸಂತೋಷಗಳ ಅರ್ಥಗಳೇ ವಿಕ್ಷಿಪ್ತಗೊಂಡಿವೆ. ಇಂದು, ಸ್ವಲ್ಪ ಕಾಲದ ಮಟ್ಟಿಗೆ ಮತ್ತು ಸ್ವಲ್ಪ ಪ್ರಮಾಣದಲ್ಲಷ್ಟೇ ವೈಯುಕ್ತಿಕ ಮಾನ-ಮರ್ಯಾದೆಗಳನ್ನು ತ್ಯಜಿಸಿಬಲ್ಲ ದುಸ್ಸಾಹಸ ಮಾಡಬಲ್ಲಷ್ಟು ಉದ್ಯಮಶೀಲತ್ವವನ್ನು ಪ್ರದರ್ಶಿಸಬಲ್ಲಿರಾದರೆ, ನೀವು ರಾತ್ರೋ ರಾತ್ರಿ ಕೋಟ್ಯಾಧೀಶರಾಗಬಲ್ಲಿರಿ ಮತ್ತು ಆನಂತರ ಅದರ ಹತ್ತು-ನೂರರಷ್ಟ್ಟು ಕಾಲ ಮತ್ತು ಪ್ರಮಾಣದ ಸಾರ್ವಜನಿಕ ಮಾನ ಮರ್ಯಾದೆಗಳನ್ನು ಗಳಿಸಬಲ್ಲಿರಿ! ಈ ಹಿಂದಿನ ಷೇರು ಹಗರಣ, ಬ್ಯಾಂಕ್ ಹಗರಣ, ಯುಟಿಐ ಹಗರಣ ಇತ್ಯಾದಿಗಳು ಮತ್ತು ಇತ್ತೀಚಿನ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್‍ವೆಲ್ತ್ ಕ್ರೀಡಾಕೂಟದ ಹಗರಣಗಳು ಹಾಗೂ ನಮ್ಮದೇ ರಾಜ್ಯದ ಗಣಿ ಹಗರಣ, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಕುಟುಂಬಗಳನ್ನೊಳಗೊಂಡ ರಿಯಲ್ ಎಸ್ಟೇಟ್ ಹಗರಣಗಳು ಇವನ್ನು ಸಾಕಷ್ಟು ದೊಡ್ಡ ರೀತಿಯಲ್ಲೇ ಸಾಬೀತುಪಡಿಸುತ್ತಿವೆ. ಆದರೆ ಇದರ ಪರಿಣಾಮಗಳನ್ನು ನಾವು ಅಭೂತಪೂರ್ವ ಅಭಿವೃದ್ಧಿ ಪಥದಲ್ಲಿ ಎದುರಾಗುವ ಸಣ್ಣ ತೊಡಕುಗಳೆಂದಷ್ಟೇ ಪರಿಗಣಿಸಿ, ಜನರ ತಕ್ಷಣದ ಸಮಾಧಾನಕ್ಕಾಗಿ ಒಂದು ತನಿಖೆಗೋ ಒಂದು ಆಯೋಗ ರಚನೆಗೋ ಆದೇಶಿಸಿ ನಿರ್ಯೋಚನೆಯಿಂದ ಮುಂದೆ ಸಾಗುತ್ತಿದ್ದೇವೆ! ಇದೊಂದು ನೈತಿಕ ಬಿಕ್ಕಟ್ಟು ಮಾತ್ರವೆಂದೂ, ಇದನ್ನು ಮೌಲ್ಯಗಳ ಪುನರುತ್ಥಾನ ಆಂದೋಲನದ ಮೂಲಕ ಸರಿಪಡಿಸಬಹುದೆಂದೂ ಈ ಆರ್ಥಿಕ ನೀತಿಯ ಕೆಲ ಫಲಾನುಭವಿಗಳು ಅಮಾಯಕವಾಗಿ ಹೇಳತೊಡಗಿದ್ದಾರೆ. ಕೆಲವರು ನಂಬಿರುವಂತೆ ಅಂತಹ ಆಳವಾದ ನಂಬಿಕೆಯುಳ್ಳ ಗಾಂಧೀವಾದಿಯೇನೂ ಅಲ್ಲದ ಅಣ್ಣ ಹಜಾ಼ರೆಯವರು ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಮಾತಾಡಿದ್ದೂ ಇಂತಹ ಸುಲಭ ಚಿಂತನೆಯ ಪ್ರಭಾವದಿಂದಲೇ ಇರಬಹುದು. ಆದರೆ ಮನುಷ್ಯನನ್ನು ಒಂದು ಜೈವಿಕ ಮತ್ತು ಸಾಮಾಜಿಕ ಸಮತೋಲನದಲ್ಲಿಡಬಲ್ಲ ಕರುಣೆ-ಸಹಾನುಭೂತಿ, ನ್ಯಾಯ-ಅನ್ಯಾಯ, ನೆಮ್ಮದಿ-ತೃಪ್ತಿಗಳ ಅರ್ಥಸೀಮೆಗಳನ್ನೇ ಅಸ್ತವ್ಯಸ್ತಗೊಳಿಸಬಲ್ಲಷ್ಟು ಹಣ ಕೆಲವರ ಕೈಸೇರಿ, ಅವರನ್ನು ತೀರದ ದಾಹಕ್ಕೆ ಬಲಿ ಕೊಡುವಂತಹ ರಾಕ್ಷಸ ವ್ಯವಸ್ಥೆ ಸೃಷ್ಟಿಯಾದಾಗ, ನೈತಿಕತೆ, ಮೌಲ್ಯಗಳನ್ನು ವ್ಯಾಖ್ಯಾನಿಸಬಲ್ಲ ಬಗೆಯಾದರೂ ಯಾವುದು? ಅದಕ್ಕೆ ಬೇಕಾದ ಭಾಷೆಯಾದರೂ ಎಲ್ಲಿ, ಹೇಗೆ ಉಳಿದಿರುತ್ತದೆ? ನಿಮ್ಮ ನೈತಿಕ ಪುನರುತ್ಥಾನದ ಬೋಧೆಯನ್ನು ಎಲ್ಲಿಂದ, ಹೇಗೆ ಆರಂಭಿಸುವಿರಿ? ರವಿಶಂಕರ್, ನಿತ್ಯಾನಂದರ ಮಠಗಳಿಂದಲೇ? ಅಥವಾ ನಮ್ಮ ವೀರಶೈವ ಮಠಗಳಿಂದಲೇ? ಮೂರ್ತದ ಆಧಾರವಿಲ್ಲದ ಅಮೂರ್ತಗಳು ಭೋಳೆ ಮಾತ್ರ ಎನ್ನಿಸಿಕೊಳ್ಳಬಲ್ಲವು ಅಲ್ಲವೇ? ನಿಜ ಇದೊಂದು ನೈತಿಕ ಬಿಕ್ಕಟ್ಟೇ. ಹಾಗೆ ನೋಡಿದರೆ ಎಲ್ಲ ಮಾನವ ಬಿಕ್ಕಟ್ಟುಗಳೂ ಆಳದಲ್ಲಿ ನೈತಿಕ ಬಿಕ್ಕಟ್ಟುಗಳೇ. ಆದರೆ ಕಳೆದ ಇಪ್ಪತ್ತು ವರ್ಷಗಳ ಆರ್ಥಿಕ ನೀತಿಯ ಉದಾರತೆ, ಕೆಲವರ ಬಳಿ ಅನುಚಿತ ಮಾರ್ಗಗಳ ಮೂಲಕ ಮಿತಿ ಇಲ್ಲದ ಹಣ ಶೇಖರಣೆಗೆ ದಾರಿ ಮಾಡಿಕೊಟ್ಟಿರುವುದೇ ಇವರು ಹೇಳುವಂತಹ ಇಂದಿನ ನೈತಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂಬುದು ಮೊದಲು ನಮಗೆ ಅರ್ಥವಾಗಬೇಕಿದೆ. ಹಣ ಮತ್ತು ನೈತಿಕತೆಯ ನಡುವಣ ಈ ನಿರ್ಣಾಯಕ ಸಂಬಂಧವನ್ನು ಅರ್ಥಮಾಡಿಕೊಂಡ ಹೊರತು, ಯಾವುದನ್ನು ಇಂದು ಭ್ರಷ್ಟಾಚಾರ ಎಂದು ಕರೆಯುತ್ತಿದ್ದೇವೆಯೋ ಅದು ಕಾನೂನಿಗೆ ಇರಲಿ, ಕಲ್ಪನೆಗೂ ಸಿಗದಂತೆ ಬೆಳೆದು ನಮ್ಮನ್ನು ನಮ್ಮ ರಾಷ್ಟ್ರದ ಸಹಿತ ನುಂಗಿ ಹಾಕಬಲ್ಲುದು. ಈ ಅರಿವು ಭಾರತ ಮಾತೆಯ ಭವ್ಯ ಚಿತ್ರವನ್ನು ಮುಂದಿಟ್ಟುಕೊಂಡು ಉಪವಾಸ ಮಾಡಿದ ಈ ಭ್ರಷ್ಟಾಚಾರ ವಿರೋಧಿ ಆಂದೋಲನಕಾರರಲ್ಲಿ ಮತ್ತು ಅದಕ್ಕಿಂತ ಮುಖ್ಯವಾಗಿ, ಅದರ ಟೀಕಾಕಾರರಲ್ಲಿ ಮೂಡಬೇಕಿದೆ. ಅದರ ಹೊರತಾಗಿ, ಈ ಜಗಳ, ಈ ತರ್ಕ, ಈ ಕಿತ್ತಾಟಗಳು ಲೋಕಪಾಲ ಮಸೂದೆ ಕಾಯಿದೆಯಾದ ನಂತರವೂ, ಭ್ರಷ್ಟಾಚಾರದೊಂದಿಗೆ ಮುಂದುವರೆದೇ ಇರುತ್ತದೆ! ಈ ಹೊಸ ಉದಾರ ಆರ್ಥಿಕ ನೀತಿ ಜಾರಿಗೆ ಬಂದುದು, ನೆಹರೂ ಪ್ರಣೀತ ಮಿಶ್ರ ಆರ್ಥಿಕ ನೀತಿಯ ಹೆಸರಿನ ಸಮಾಜವಾದಿ ರಾಜಕಾರಣದ ವೈಫಲ್ಯಕ್ಕೆ ಉತ್ತರವಾಗಿ ಎಂದು ಹೇಳಲಾಗುತ್ತದೆ. ಆ ಸಮಾಜವಾದದ ದಿನಗಳನ್ನು, ಉದ್ಯಮಶೀಲತೆಯನ್ನು ಲಂಚಕೋರತನದಿಂದ ನಿರ್ಬಂಧಿಸುತ್ತಿದ್ದ ಲೈಸೆನ್ಸ್ ರಾಜ್ಯವೆಂದೂ ಹಳಿಯಲಾಗುತ್ತಿದೆ. ಆದರೆ ಈಗ ಇದಕ್ಕೆ ಪ್ರತಿಯಾಗಿ ಸೃಷ್ಟಿಯಾಗಿರುವುದು ಎಂತಹ ರಾಜ್ಯ? ಇಂದು ನಾವು ಎಂತಹ, ಯಾವುದಕ್ಕೆ, ಎಂತಹ ಅನಾಹುತಕ್ಕೆ ಲೈಸೆನ್ಸ್ ನೀಡಿರುವ ರಾಜ್ಯದಲ್ಲಿ ಬದುಕುತ್ತಿದ್ದೇವೆ? ಇಂದು ಎಂತೆಂತಹ ಹೊಸ ಹೊಸ ವೈಯುಕ್ತಿಕ, ಕೌಟುಂಬಿಕ, ವೃತ್ತೀಯ ಮತ್ತು ಸಾಮಾಜಿಕ ಹಿಂಸೆಗಳು ನಮ್ಮ ದಿನ ನಿತ್ಯ ಬದುಕಿನಲ್ಲಿ ಆವಿಷ್ಕಾರಗೊಂಡಿವೆ ಎಂಬುದನ್ನು ಯಾರಾದರೂ ಗಮನಿಸಿದ್ದಾರಾ? ಇತ್ತೀಚೆಗೆ ತಾನೇ ಜಗತ್ಭೀಕರ ದುರಂತಕ್ಕೀಡಾದ ಜಪಾನ್ನ ಫುಕೋಶಿಮಾದ ಅಣು ಸ್ಥಾವರವನ್ನು ಕಟ್ಟಿದ ಸಮಾಜದ ಜೀವನ ಶೈಲಿ, ಗುರಿ ಮತ್ತು ಗತಿಯಾದರೂ ಯಾವುದು ಮತ್ತು ಈ ದುರಂತದ ಪರಿಣಾಮಗಳ ಸ್ವರೂಪವಾದರೂ ಏನು; ಮತ್ತೂ ಮುಖ್ಯವಾಗಿ, ಈ ಶೈಲಿ, ಗುರಿ, ಗತಿ ಹಾಗೂ ಪರಿಣಾಮಗಳಿಂದ ನಾವು ನಿಜವಾಗಿ ಎಷ್ಟು ದೂರದಲ್ಲಿದ್ದೇವೆ ಎಂಬುದರ ಕಡೆಗೆ ನಮ್ಮ ಗಮನ ಕೊಂಚವಾದರೂ ಹರಿದಿದೆಯೇ? ಗಮನಿಸುವಷ್ಟು ಸಂವೇದನಾಶೀಲತೆ ಇರಲಿ, ವ್ಯವಧಾನವಾದರೂ ಯಾರಿಗಾದರೂ ಇದೆಯಾ? ಆಯಿತು ಗಮನಿಸುವ ಸೂಕ್ಷ್ಮತೆಗಳ ಈ ಗೋಜಲೇ ಬೇಡ, ಈ ಬಗ್ಗೆ ಎಲ್ಲವನ್ನೂ ಸಾರಾಂಶ ರೂಪದಲ್ಲಿ ಹೇಳುವ ಒಂದು ಗಟ್ಟಿ ಅಂಕಿ ಅಂಶವೇ ಇಲ್ಲಿದೆ ನೋಡಿ: ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಳ್ಳಹಣದ ಮೂರನೇ ಎರಡು ಭಾಗ ಜಮಾ ಆಗಿರುವುದು ಕಳೆದ ಇಪ್ಪತ್ತು ವರ್ಷಗಳಿಂದ ಜಾರಿಗೆ ಬಂದಿರುವ ಈ ಹೊಸ ಲೈಸೆನ್ಸ್ ರಾಜ್ಯದ ಅವಧಿಯಲ್ಲಿ ಎಂದು Global Financial Integrity ಪ್ರಕಟಿಸಿದೆ. ಇದು ಜಾಗತಿಕ ಕಪ್ಪು ಹಣದ ಹಾವಳಿಯ ವಿರುದ್ಧ ಹೋರಾಡುತ್ತಿರುವ ಒಂದು ಸ್ವತಂತ್ರ ಸೇವಾ ಸಂಸ್ಥೆ. ಈಗಲಾದರೂ ಇದು ನಿಜವಾಗಿ ಯೋಚಿಸಬೇಕಾದ ವಿಚಾರ ಅನ್ನಿಸುತ್ತದೆಯೇ? ಆದುದರಿಂದ ಈ ಎರಡೂ ರೀತಿಯ ಲೈಸೆನ್ಸ್ ರಾಜ್ಯಗಳ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು, ಹೊಸ ಮಧ್ಯಮ ಮಾರ್ಗವೊಂದನ್ನು ನಾವು ರಾಜಕೀಯ ನೆಲೆಯಲ್ಲಿ ಕಂಡುಕೊಳ್ಳಲು ಸಾಧ್ಯವೇ? ಈ ಪ್ರಶ್ನೆ ಕುರಿತು ಗಂಭೀರವಾಗಿ ಯೋಚಿಸುವ ಕಾಲ ಈಗ ಬಂದಿದೆ ಎನಿಸುತ್ತದೆ. ಹಾಗಾಗಿಯೇ ಏನೋ-ಕಾಲದ ಈ ಒತ್ತಡಕ್ಕೆ ಸಿಕ್ಕಿಯೇ ಏನೋ-ಹೀಗೆ ಆಲೋಚಿಸಲು ಪ್ರೇರೇಪಿಸುವಂತಹ ನಮ್ಮ ಇತ್ತೀಚಿನ ಇತಿಹಾಸದ ನಿರ್ಲಕ್ಷಿತ ಅಧ್ಯಾಯಗಳಲ್ಲಿ ಹುದುಗಿರುವ ವೈಚಾರಿಕ ವಿನ್ಯಾಸಗಳ ಮತ್ತು ಅನುಭವ ಸಾಮಗ್ರಿಗಳ ಉತ್ಖನನ ಹೊಸ ಉತ್ಸಾಹದೊಂದಿಗೆ ಆರಂಭವಾಗಿದೆ. ಅದರತ್ತ ನಾವೀಗ ತುರ್ತು ಗಮನ ಮತ್ತು ಹೊಸ ನೋಟ ಬೀರಬೇಕಿದೆ. ಇಂತಹ ಸಂದರ್ಭದಲ್ಲಿ, ಈ ಮೇಲಿನ ಪ್ರಶ್ನೆಯನ್ನು ಮುಖಾಮುಖಿ ಮಾಡಿಕೊಳ್ಳುವ ರೀತಿಯಲ್ಲಿ ಸದ್ಯದ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಲೋಕಪಾಲ ಮಸೂದೆಯ ರಚನೆಯ ಆಚೆಗೂ ವಿಸ್ತರಿಸಿ ಬೆಳೆಸಬಲ್ಲವಾದರೆ ಮಾತ್ರ ಅಣ್ಣ ಹಜಾ಼ರೆ ಅವರ ನೇತೃತ್ವದ ಸಮಿತಿ ಕುರಿತು ನಮ್ಮ ಆಕ್ಷೇಪಣೆಗಳನ್ನು ದಾಖಲಿಸುವ ನೈತಿಕ ಅಧಿಕಾರ ನಮಗೆ ಬಂದೀತು. ಡಿ.ಎಸ್.ನಾಗಭೂಷಣ ಎಚ್.ಐ.ಜಿ.-5, ನುಡಿ, ಕಲ್ಲಳ್ಳಿ ಬಡಾವಣೆ, ವಿನೋಬ ನಗರ, ಶಿವಮೊಗ್ಗ-577 204.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|