ಮಕ್ಕಳು ಸಮುದಾಯದ 'ಆಸ್ತಿ' ದೇಶದ ಸಂಪತ್ತು ಮುಂತಾದ ಕಲ್ಪನೆಗಳು ಇತ್ತೀಚೆಗೆ ನಮ್ಮ ಸಮಾಜದಲ್ಲಿ ಮೂಡುತ್ತಿರುವುದು ಮಕ್ಕಳ ಅಭಿವೃದ್ಧಿ / ರಕ್ಷಣೆ ವಿಚಾರದಲ್ಲಿ ಧನಾತ್ಮಕ ಬೆಳವಣಿಗೆ ಆಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಮುದಾಯದ ಪ್ರತಿಯೊಬ್ಬರೂ ಭಾಗಿಯಾಗಬೇಕಿರುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಮಕ್ಕಳ ಹಕ್ಕುಗಳನ್ನು ಪ್ರಚಾರ ಮಾಡಲು ಮಕ್ಕಳ ಸಮಸ್ಯೆಗಳಿಗೆ ಪ್ರತಿಕ್ರಿಯಿಸಲು ವಕೀಲ ನಡೆಸಲು ಸಮಾನ ಚಿಂತಕರು ಒಟ್ಟಾಗಿ ಆಂದೋಲನ, ಸಮೀಕ್ಷೆ, ಸಂಶೋಧನೆ, ವಿಚಾರ ಸಂಕಿರಣ ನಡೆಸಲು ವೇದಿಕೆಗಳನ್ನು ಹುಟ್ಟುಹಾಕಿ, ಪರಸ್ಪರ ಕೈ ಜೋಡಿಸಿ 'ಜಾಲ' ನಿರ್ಮಿಸಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇತಿಹಾಸದ ಪುಟಗಳನ್ನು ತಿರುವಿದಾಗ ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆಗೆ ಪ್ರಾರಂಭವಾದ ಜಾಲ ವ್ಯವಸ್ಥೆಗಳು ಬಹಳ ಕಡಿಮೆ. ಮಕ್ಕಳ ವಿಚಾರವಾಗಿ ವಿಶ್ವ ಮಟ್ಟದಲ್ಲಿ ಜರುಗಿರುವ ಆಂದೋಲನಗಳು ಬೆರಳೆಣಿಕೆಯಷ್ಟು -1989 ನವೆಂಬರ್ 20 ರಂದು ವಿಶ್ವಸಂಸ್ಥೆಯು ಮಕ್ಕಳ ಹಕ್ಕುಗಳ ಒಡಂಬಡಿಕೆಯು ಅಂತಾರಾಷ್ಟ್ರೀಯ ಕಾನೂನಾಗಿದೆ. ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವ ಹಕ್ಕುಗಳನ್ನು ಎತ್ತಿಹಿಡಿಯಲು ಜಗತ್ತಿನ ಬಹುತೇಕ ರಾಷ್ಟ್ರಗಳು ಸದಸ್ಯರಾಗಿರುವ 'ಜಾಲ' ವಿಶ್ವ ಮಟ್ಟದಲ್ಲಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾದರೂ ಪ್ರತಿಕ್ರಿಯಿಸುವ ಈ ಜಾಲ ವ್ಯವಸ್ಥೆಗೆ ಯುನಿಸೆಫ್ ಸಂಚಾಲಕತ್ವ ವಹಿಸಿದೆ.
ಅಂತಾರಾಷ್ಟ್ರೀಯ ಜಾಲ ವ್ಯವಸ್ಥೆಗಳಿಂದ ಸ್ಥಳೀಯ ಮಕ್ಕಳ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರಕುವುದಿಲ್ಲ. ಕಾಯಬೇಕಾಗುತ್ತದೆ. ಹಾಗಾಗಿ ಸ್ಥಳೀಯವಾಗಿ-ರಾಷ್ಟ್ರಮಟ್ಟದ, ರಾಜ್ಯಮಟ್ಟದ ಜಾಲ ವ್ಯವಸ್ಥೆಗಳು ಮಕ್ಕಳ ಸಮಸ್ಯೆಗಳ ಬಗ್ಗೆ ಚುರುಕಾಗಿ, ಶೀಘ್ರವಾಗಿ ವಕೀಲಿ ನಡೆಸಬಹುದು. ಪರಿಹಾರ ಮಾರ್ಗ ಕಂಡುಕೊಳ್ಳಬಹುದು. ಕಾಣೆಯಾದ ಮಕ್ಕಳನ್ನು ಪತ್ತೆ ಮಾಡಲು, ಮಕ್ಕಳ ಸಾಗಾಣೆ, ಮಾರಾಟವನ್ನು ತಡೆಯಲು ಏಕಕಾಲದಲ್ಲಿ ರಾಷ್ಟ್ರವ್ಯಾಪಿ ಆಂದೋಲನ, ಪ್ರತಿಭಟನೆ ನಡೆಸಲು ಸರ್ಕಾರದ ಮೇಲೆ ಒತ್ತಡ ತಂದು ವಕೀಲಿ ಸಡೆಸಲು ಸ್ಥಳಿಯ ಜಾಲ ವ್ಯವಸ್ಥೆಗಳು ನೆರವಾದ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಮಕ್ಕಳ ಹಕ್ಕುಗಳ ಒಡಂಬಡಿಕೆ ಸಹಿ ಮಾಡಿದ ಪ್ರತಿ ದೇಶಗಳು ನಿರ್ದಿಷ್ಟ ಅವಧಿಗಳಲ್ಲಿ ವಿಶ್ವಸಂಸ್ಥೆಗೆ ತಮ್ಮ ದೇಶದಲ್ಲಿನ ಮಕ್ಕಳ ಪರಿಸ್ಥಿತಿ ಹಾಗೂ ಮಕ್ಕಳ ಹಕ್ಕುಗಳ ಜಾರಿ ಕುರಿತಂತೆ ವರದಿ ಕಳುಹಿಸಬೇಕು ಎಂಬುದಾಗಿ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 44 ತಿಳಿಸುತ್ತದೆ. ಸರ್ಕಾರಗಳು ಕಳುಹಿಸುವ ವರದಿಗಳು ಸರ್ಕಾರದ ಮೂಗಿನ ನೇರಕ್ಕೆ ಇರುತ್ತವೆ ಎಂಬುದರಲ್ಲಿ ಯಾವುದೇ ಆಶ್ಚರ್ಯ ಅನುಮಾನ ಇರಬೇಕಿಲ್ಲ. ಸರ್ಕಾರ ಜಾರಿಗೆ ತಂದ ಯೋಜನೆಗಳು ಮತ್ತು ಅವುಗಳಿಂದಾಗಿರಬಹುದಾದ 'ಧನಾತ್ಮಕ' ಅಂಶಗಳನ್ನು ಮಾತ್ರ ವರದಿಗಳಲ್ಲಿ ದಾಖಲಿಸಿ ವಿಶ್ವಸಂಸ್ಥೆಗೆ ಕಳಿಸಿಕೊಡುವ ಸರ್ಕಾರಗಳು, 'ಋಣಾತ್ಮಕ' ಮತ್ತು ವಿಗತಿ. ಸೋಲಿನ ಅಥವಾ ಅಪ್ರಯೋಜಕವಾದ ಬೆಳವಣಿಗೆಯ ಅಂಶಗಳನ್ನು ವರದಿಯಲ್ಲಿ ಸೇರಿಸದೆ ಮುಚ್ಚಿಡುತ್ತವೆ. ಹೀಗಾಗಿ ವರದಿಗಳು ವರದಿಗಳು ಅಪೂರ್ಣವಾಗುವ ಸಂಭವಗಳೇ ಹೆಚ್ಚು. ಇಂತಹದನ್ನು ತಡೆಯಲು ಒಡಂಬಡಿಕೆಯ 45 ನೇ ಪರಿಚ್ಛೇಧ ಪರ್ಯಾಯ ವರದಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ವಿಶ್ವಸಂಸ್ಥೆಗೆ ತಮ್ಮ ಮಕ್ಕಳ ಪರಿಸ್ಥಿತಿಯ ಬಗ್ಗೆ ಪೋಷಕರು, ಶಿಕ್ಷಕರು, ಸ್ವಯಂಸೇವಾ ಸಂಘಟನೆಗಳು ಹೀಗೆ ಯಾರು ಬೇಕಾದರೂ ವರದಿ ಕಳುಹಿಸಬಹುದು. ಸ್ವತಃ ಮಕ್ಕಳೇ ತಮ್ಮ ಪರಿಸ್ಥಿತಿಯ ಬಗ್ಗೆ ವರದಿ ಕಳುಹಿಸಲೂ ಅವಕಾಶವಿದೆ. ಇದರಿಂದಾಗಿ ಸರ್ಕಾರ ಕಳುಹಿಸುವ 'ಎಲ್ಲಾ ಸೊಗಸಾಗಿದೆ' ಎಂಬ ವರದಿಗೆ 'ಪರ್ಯಾಯವಾಗಿ' ವಾಸ್ತವಂಶಗಳನ್ನು ಕಳುಹಿಸಲು ಸಹಾಯಕವಾಗುತ್ತವೆ. ದೆಹಲಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ India Alliance for Child Rights (IACR) - ಮಕ್ಕಳ ಹಕ್ಕುಗಳಿಗಾಗಿ ಭಾರತದ ಒಕ್ಕೂಟ, ದೇಶದ ಪ್ರತಿ ರಾಜ್ಯದಲ್ಲೂ ತನ್ನ ಸದಸ್ಯರನ್ನು ಹೊಂದಿದೆ. ತನ್ನ ಸದಸ್ಯರುಗಳಿಂದ ಅವರ ರಾಜ್ಯದಲ್ಲಿನ ಮಕ್ಕಳ ಪರಿಸ್ಥಿತಿಗಳ ಬಗ್ಗೆ ವರದಿಯನ್ನು ಪಡೆದುಕೊಂಡು ಪರಿಶೀಲಿಸಿ, ಸಂಗ್ರಹಿಸಿ, ಸಂಪಾದಿಸಿ ವಿಶ್ವಸಂಸ್ಥೆಗೆ ಕಳುಹಿಸಿಕೊಡುವ ರಾಷ್ಟ್ರವ್ಯಾಪಿ ಜಾಲವ್ಯವಸ್ಥೆಯಾಗಿದೆ. ರಾಷ್ಟ್ರ ಮಟ್ಟದಲ್ಲಿ ಮಕ್ಕಳ ಸ್ಥಿತಿ ಕುರಿತು ಕಾಲಕಾಲಕ್ಕೆ 'ಪರ್ಯಾಯ' ವರದಿಗಳನ್ನು ಸಿದ್ಧಪಡಿಸುವುದಲ್ಲದೆ ಸರ್ಕಾರದ ವರದಿಗಳನ್ನು 'ವಿಮರ್ಶೆ' ಮಾಡುವ ಪ್ರಮುಖ ಕೆಲಸವನ್ನೂ ತನ್ನ ಸದಸ್ಯ ಸಂಸ್ಥೆಗಳೊಡನೆ ಕೂಡಿ ಐ.ಎ.ಸಿ.ಆರ್ ಮಾಡುತ್ತಿದೆ. ಪರ್ಯಾಯ ವರದಿಗೆ ಮಾಹಿತಿ ಸಂಗ್ರಹಿಸುವುದು, ಪರ್ಯಾಯ ವರದಿ ಸಿದ್ಧಪಡಿಸುವುದು ಮಕ್ಕಳ ಹಕ್ಕುಗಳ ರಕ್ಷಣೆಗೆ / ಪ್ರಚಾರಕ್ಕೆ ಬಹಳ ಮುಖ್ಯ. ಇಂತಹುದೇ ರಾಷ್ಟ್ರಮಟ್ಟದ ಸುಸಂಘಟಿತ ಕೆಲಸಗಳನ್ನು ಇತರ ವಿಚಾರಗಳ ಬಗ್ಗೆಯೂ ನಡೆಸಬೇಕಿದೆ. ಉದಾ. ಮಹಿಳೆಯರ ಸ್ಥಿತಿಗತಿ, ದಲಿತ ಸಮುದಾಯಗಳು, ಪರಿಸರ, ನೀರು, ಇತ್ಯಾದಿ. ಐ.ಎ.ಸಿ.ಆರ್.ನ ಜಾಲ ವ್ಯವಸ್ಥೆಯು 'ಪರ್ಯಾಯ ವರದಿ'ಯ ಶಕ್ತಿಯನ್ನು ಮನಗಂಡಿದೆ. ಸರ್ಕಾರ ತಪ್ಪು ಹೆಜ್ಜೆಗಳಿಡಬಾರದೆಂದು ಕಾವಲು ಕಾಯುವುದು (ಕಾವಲು ನಾಯಿ ಎಂದರೂ ತಪ್ಪೇನಿಲ್ಲ) ಪರ್ಯಾಯ ವರದಿಗಳ ಉದ್ದೇಶ. ಆದರೆ ಇದರ ತಯಾರಿ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಅಸಾಧ್ಯ. ಮಕ್ಕಳ ಹಕ್ಕುಗಳಿಗಾಗಿ ವಕೀಲಿ ಮಾಡುವುದು, ನಿರ್ದಿಷ್ಟ ಒಳ್ಳೆಯ ಕ್ರಮ, ಕಾರ್ಯಕ್ರಮಗಳಿಗಾಗಿ ಒತ್ತಡ ಹಾಕುವುದು, ಅದಕ್ಕಾಗಿ ಅಥವಾ ನ್ಯಾಯಕ್ಕಾಗಿ ಆಂದೋಲನ ಮಾಡುವುದೇ, ಮೊದಲಾದ ಎಲ್ಲಾ ಅಸ್ತ್ರಗಳನ್ನು ಪರ್ಯಾಯ ವರದಿ ಒಳಗೊಂಡಿದೆ. ಅಭಿವೃದ್ಧಿ ಪ್ರಚಾರ, ವಕೀಲಿ ಉದ್ದೇಶಗಳಿಗಾಗಿ ಪ್ರಾರಂಭವಾದ 'ಜಾಲ ವ್ಯವಸ್ಥೆ'ಗಳು ಪ್ರಜಾಪ್ರಭುತ್ವ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತವೆ. ಯಾವುದೇ ಒಬ್ಬ ವ್ಯಕ್ತಿಯ ನಿರ್ಧಾರ ಅಂತಿಮವಾಗಿರುವುದಿಲ್ಲ. ಇವೆಲ್ಲಾ ನಡೆಸಬೇಕು ಎನ್ನುವ ಜಾಲವ್ಯವಸ್ಥೆಗಳು ಗಟ್ಟಿಯಾಗುವುದು ಸಮರ್ಥ 'ಸಂವಹನ'ದಿಂದ ಮಾತ್ರ. ಭಾರತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992 ರಲ್ಲಿ ಸಹಿ ಮಾಡಿತು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರದಾದ್ಯಂತ, ರಾಷ್ಟ್ರವ್ಯಾಪಿಯಾಗಿ, ಸಮರ್ಪಕವಾಗಿ, ಸೂಕ್ತವಾಗಿ ಜಾರಿಗೊಳಿಸುವುದನ್ನು, ಮೇಲ್ವಿಚಾರಣೆ ಉಸ್ತುವಾರಿ ಮಾಡಲು ಪಾರಂಭವಾದ ಜಾಲ ವ್ಯವಸ್ಥೆ 'ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನ' (CACL-Campaign Against Child Labour). ಸದ್ಯದಲ್ಲಿ ಈ ಜಾಲದ ಪ್ರಧಾನ ಕಛೇರಿ ಕೊಲ್ಕತ್ತಾ ನಗರದಲ್ಲಿದೆ. ಜಮ್ಮು ಕಾಶ್ಮೀರ ಹೊರತು ಪಡಿಸಿ ರಾಷ್ಟ್ರದ ಪ್ರತಿ ರಾಜ್ಯಗಳಲ್ಲೂ ಸಿ.ಎ.ಸಿ.ಎಲ್. ರಾಜ್ಯ ಸಂಚಾಲಕರು ಮತ್ತು ರಾಜ್ಯ ಸಂಚಾಲಕರಿಗೆ ಸಹಕರಿಸಲು ಜಿಲ್ಲಾ ಸಂಚಾಲಕರ ಜಾಲ ವ್ಯವಸ್ಥೆ ಜಾರಿಯಲ್ಲಿದೆ. ರಾಷ್ಟ್ರ ಸಂಚಾಲಕರು ಜಾಲದ ಪ್ರಧಾನರಾಗಿರುತ್ತಾರೆ. ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನ ರಾಜ್ಯ/ಜಿಲ್ಲಾ ಸಂಚಾಲಕರು ಸ್ಥಳೀಯ ಮಕ್ಕಳ ಸಮಸ್ಯೆಗಳ ಬಗ್ಗೆ ತಮ್ಮ ಘಟಕದೊಂದಿಗೆ ಸಮಾಲೋಚನೆ / ಚರ್ಚೆ ನಡೆಸಿ ಕ್ರಿಯಾ ಯೋಜನೆ ರೂಪಿಸಿಕೊಳ್ಳಲು ಸ್ವಾತಂತ್ರ್ಯ ಪಡೆದಿರುತ್ತಾರೆ. ಜಿಲ್ಲಾ ಮಟ್ಟದಲ್ಲಾಗುವ ಕಾರ್ಯಕ್ರಮಗಳ ಬಗ್ಗೆ ರಾಜ್ಯ ಸಂಚಾಲಕರು ರಾಷ್ಟ್ರ ಸಂಚಾಲಕರಿಗೆ ಮಾಹಿತಿ ನೀಡುತ್ತಿರುತ್ತಾರೆ. ತಮ್ಮ ಘಟಕಗಳ ಕಾರ್ಯಕ್ರಮ/ಚಟುವಟಿಕೆಗಳಿಗೆ ಸಂಚಾಲಕರು ಹಣ ಸಂಗ್ರಹ ಮಾಡಬಹುದು. ಪತ್ರಿಕಾ ಮಾಹಿತಿ ನೀಡಬಹುದು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ಇತರೆ ಜಾಲವ್ಯವಸ್ಥೆಯೊಡನೆ ಸಂಯುಕ್ತವಾಗಿ ಕಾರ್ಯನಿರ್ವಹಿಸಬಹುದು. ಈ ರೀತಿಯ ಕೆಲಸಗಳಿಗೆ ಯಾವುದೇ ನಿರ್ಬಂಧವಿಲ್ಲ. ಈ ಆಂದೋಲನದ ಕಾರ್ಯಕ್ರಮಗಳೆಲ್ಲವೂ ಮಕ್ಕಳ ಹಿತದೃಷ್ಟಿಯಿಂದ ಕೂಡಿರಬೇಕಾದದ್ದು ಅತ್ಯಗತ್ಯ. ಮೂರು ವರ್ಷಕ್ಕೊಮ್ಮೆ ರಾಷ್ಟ್ರ/ರಾಜ್ಯ/ಜಿಲ್ಲಾ ಸಂಚಾಲಕರ ಸ್ಥಾನಗಳಿಗೆ ಚುನಾವಣೆ ನಡೆಯತ್ತದೆ. ಸಿ.ಎ.ಸಿ.ಎಲ್‍ಗೆ ಸಂಸ್ಥೆಗಳಲ್ಲದೆ, ವ್ಯಕ್ತಿಗತವಾಗಿ ಮಕ್ಕಳ ಹಕ್ಕುಗಳು / ಮಕ್ಕಳ ರಕ್ಷಣೆ ಬಗ್ಗೆ ಚಿಂತಿಸುವ ಯಾರು ಬೇಕಾದರೂ ಸದಸ್ಯರಾಗಬಹುದು. ಸಿ.ಎ.ಸಿ.ಎಲ್.ನ ಸದಸ್ಯರಾದವರಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ ವಿಚಾರಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ. ರಾಜ್ಯ ಸಂಚಾಲಕರೊಂದಿಗೆ ಕೆಲಸ ನಿರ್ವಹಿಸಲು ಕಾರ್ಯಕ್ರಮ ಸಂಯೋಜಕರು ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೆ ನಿಗದಿತ ಅವಧಿಗಳಲ್ಲಿ ಭೇಟಿ ನೀಡಿ ಸ್ಥಳೀಯ ಮಕ್ಕಳ ಸಮಸ್ಯೆ/ ಹಣಕಾಸಿನ ವಿಚಾರ/ಕಾರ್ಯಕ್ರಮ ಕ್ರಿಯಾ ಯೋಜನೆ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಆಂದೋಲನ, ಪ್ರತಿಭಟನೆ ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವ ರಾಜ್ಯ ಮತ್ತು ಜಿಲ್ಲಾ ಘಟಕಗಳಿಗೆ ಕಾನೂನಿನ ನೆರವು ನೀಡಲು ಪ್ರತಿ ರಾಜ್ಯದಲ್ಲೂ ವಕೀಲಿ ಘಟಕಗಳಿವೆ'. ರಾಷ್ಟ್ರ, ರಾಜ್ಯ ಸರ್ಕಾರಗಳ ಗಮನ ಸೆಳೆದು ಮಕ್ಕಳ ಬಗ್ಗೆ ಇರುವ ಕಾನೂನು ಕಾಯ್ದೆಗಳಲ್ಲಿ ಬದಲಾವಣೆ ತರುವಲ್ಲಿ ವಕೀಲಿ ಘಟಕಗಳು ಪ್ರಮುಖ ಪಾತ್ರವಹಿಸುತ್ತವೆ. ಸದ್ಯದಲ್ಲಿ ದೊಡ್ಡ ಚರ್ಚೆಯಲ್ಲಿರುವ 'ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009'ರ ಪ್ರಚಾರ ಕಾರ್ಯದಲ್ಲಿ ಸಿ.ಎ.ಸಿ.ಎಲ್. ಸಂಪೂರ್ಣವಾಗಿ ಒಡ್ಡಿಕೊಂಡಿಲ್ಲ. ಆದರೆ ಈ ಕಾಯಿದೆಯಲ್ಲಿರುವ ಉತ್ತಮ ಅಂಶಗಳಿಂದ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಲು ಅನುಕೂಲವಾಗುತ್ತದೆ ಎಂಬ ಕಾರಣದಿಂದಾಗಿ ಕಾಯ್ದೆಯ ಜಾರಿ ಉಸ್ತುವಾರಿಯಲ್ಲಿ ತೊಡಗಿಕೊಂಡಿದೆ. ಆಂದೋಲನದ ಸದಸ್ಯರಿಗೆ ಶಿಕ್ಷಣ ಹಕ್ಕು ಕಾಯಿದೆ ಕುರಿತು ತರಬೇತಿ ಹಾಗೂ ಕಾಯಿದೆ ಕುರಿತು ಪ್ರಚುರ ಪಡಿಸಲು, ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ನಿರ್ಮಿಸುವಲ್ಲಿ ಕ್ರಿಯಾಯೋಜನೆಗಳು ಸಿದ್ಧವಾಗಿವೆ. ಸರ್ಕಾರದೊಂದಿಗೆ ವಕೀಲಿ ನಡೆಸಿ ಕಾಯ್ದೆಯಲ್ಲಿ ಅವಶ್ಯಕ ತಿದ್ದುಪಡಿಗಳನ್ನು ತರುವ ಆಶಾವಾದದಿಂದ ಸಿ.ಎ.ಸಿ.ಎಲ್. ಕೆಲಸ ನಿರ್ವಹಿಸುತ್ತಿದೆ. ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂದೋಲನದ ಮಾದರಿಯಲ್ಲಿ ಅಸ್ತಿತ್ವದಲ್ಲಿರುವ ಹಲವಾರು ಜಾಲ ವ್ಯವಸ್ಥೆಗಳನ್ನು ನಾವು ಕಾಣಬಹುದು. ಇದಕ್ಕೆ ಕೆಲವು ಉದಾಹರಣೆಗಳು: ಮಕ್ಕಳ ಸಾಗಾಣಿಕೆ ಮಾರಾಟ ವಿರೋಧೀ ಆಂದೋಲನ, ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟಕ್ಕಾಗಿ ಆಂದೋಲನ, ಪ್ರಾಥಮಿಕ ಪೂರ್ವ ಶಿಕ್ಷಣದಲ್ಲಿ ಗುಣಮಟ್ಟಕ್ಕಾಗಿ ಆಂದೋಲನ, ಪೋಷಕತ್ವಕ್ಕಾಗಿ ಆಂದೋಲನ, ಇತ್ಯಾದಿ. ಒಂದೇ ಉದ್ದೇಶದಿಂದ ಕೆಲಸ ಮಾಡುತ್ತಿರುವ ಹಲವಾರು ಜಾಲ ವ್ಯವಸ್ಥೆಗಳು ಒಟ್ಟಾಗಿ ಒಕ್ಕೂಟ'ಗಳನ್ನು ನಿರ್ಮಿಸಿಕೊಂಡಿರುವ ಉದಾಹರಣೆಗಳೂ ಇವೆ. ಸರ್ಕಾರದ ಆಡಳಿತ ಮಕ್ಕಳನ್ನು ಕುರಿತು ಹಕ್ಕುಗಳ ದೃಷ್ಟಿಕೋನದಲ್ಲಿ ಚಿಂತಿಸಬೇಕು, ಮಾಧ್ಯಮಗಳು ಮಕ್ಕಳ ಪರವಾದ ನಿಲುವುಗಳನ್ನು ಬೆಳೆಸಿಕೊಳ್ಳಬೇಕು, ಸ್ವಯಂಸೇವಾ ಸಂಘಟನೆಗಳು ಮಕ್ಕಳ ಹಕ್ಕುಗಳ ಜಾರಿ ವ್ಯವಸ್ಥೆಯನ್ನು ಅರಿತು ಜಾರಿ ವ್ಯವಸ್ಥೆಗಳ ಉಸ್ತುವಾರಿ ಮಾಡಬೇಕು ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ / ಮಕ್ಕಳ ರಕ್ಷಣೆಯ ವಿಚಾರಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿ ಶಾಸಕರನ್ನು ಮಕ್ಕಳ ಸ್ನೇಹಿಗಳನ್ನಾಗಿಸಿ, ಸರ್ಕಾರ, ಆಡಳಿತ ವರ್ಗ ಮಕ್ಕಳ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡುವ ಉದ್ದೇಶಗಳನ್ನು ಒಳಗೊಂಡಿರುವ ಜಾಲ 'ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ' (KCRO-Karnataka Child Rights Observatory). ಸದ್ಯದಲ್ಲಿ ಈ ಜಾಲ ವ್ಯವಸ್ಥೆಗೆ ಯುನಿಸೆಫ್ ಬೆಂಬಲವಿದೆ. ಮಕ್ಕಳ ವಿಭಿನ್ನ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸಿ /ಅಂಕಿಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ ಸರ್ಕಾರದೊಡನೆ ವಕೀಲಿ ನಡೆಸುವ ಕೆ.ಸಿ.ಆರ್.ಒ ಮಕ್ಕಳ ಭಾಗವಹಿಸುವ ಹಕ್ಕನ್ನು ವಿಶೇಷವಾಗಿ ಗಮನಿಸುತ್ತಿದೆ. ಜಿಲ್ಲಾ ಮಟ್ಟದ/ ರಾಜ್ಯ ಮಟ್ಟದ ಮಕ್ಕಳ ಸಂಪತ್ತನ್ನು ಆಯೋಜಿಸಿ ಮಕ್ಕಳ ಸಮಸ್ಯೆಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ಪ್ರಕ್ರಿಯೆಗಳು ಉಂಟಾಗುವಂತೆ ಮಾಡಿರುವುದು ಕೆ.ಸಿ.ಆರ್.ಒ.ನ ಹೆಗ್ಗಳಿಕೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ಜಾಲವ್ಯವಸ್ಥೆಗಳನ್ನು (ನೆಟ್‍ವರ್ಕ್) ಹತ್ತಿರದಿಂದ ನೋಡುತ್ತಿದ್ದಾಗ ಅಲ್ಲಲ್ಲಿ ಯಶಸ್ಸುಗಳು ಕಂಡುಬರುತ್ತಿದ್ದರೂ, ಜಾಲ ವ್ಯವಸ್ಥೆಗಳು ತಮ್ಮದೇ ಆದ ತೊಂದರೆಗಳು, ನ್ಯೂನತೆಗಳನ್ನು ಅನುಭವಿಸುವುದು ಸರ್ವವಿದಿತ. ಜಾಲ ವ್ಯವಸ್ಥೆಗಳನ್ನು ಮಾಡಬೇಕೆಂಬ ಕಲ್ಪನೆ ಯಾರಿಗೆ ಬರುತ್ತದೋ ಅವರು ಅದನ್ನು ಸದಾಕಾಲಕ್ಕೂ ಮುನ್ನಡೆಸಿಕೊಂಡು ಹೋಗುವ ಹಂಬಲ ತೋರಬಹುದು ಅಥವಾ ಬೇರೆ ಯಾರಾದರೂ (ವ್ಯಕ್ತಿ/ಸಂಸ್ಥೆ) ವಹಿಸಿಕೊಂಡರೂ, ಅವರಿಗೆ ಮೂಲ ಉದ್ದೇಶಗಳು ಸ್ಷಷ್ಟವಾಗಿಲ್ಲದಿರಬಹುದು. ಜಾಲ ವ್ಯವಸ್ಥೆಗಳಿಗೆ ಹಣಕಾಸಿನ ನೆರವು ಕೊಡುವವರು ಜಾಲ ವ್ಯವಸ್ಥೆ ನಿರ್ವಹಿಸುತ್ತಿರುವ ಸಂಸ್ಥೆಗಳ ಮೇಲೆ ಅತ್ಯಧಿಕವಾದ ಒತ್ತಡ ಹಾಕುವುದರಿಂದ, ಆಯಾ ಸಂಸ್ಥೆಯ ಮೂಲ ಕೆಲಸಗಳು ಮರೆಯಾಗಿ ಜಾಲವ್ಯವಸ್ಥೆಯನ್ನು ನೋಡಿಕೊಳ್ಳುವುದೇ ಅಧಿಕವಾಗಬಹುದು ಅಥವಾ ಜಾಲ ಸಂಸ್ಥೆಯಿಂದ ಆದುದ್ದನ್ನೆಲ್ಲಾ ತನ್ನ ಸಂಸ್ಥೆಯೇ ಮಾಡಿದ್ದು ಎಂದು ಬಿಂಬಿಸಿಕೊಳ್ಳಲೆತ್ನಿಸಬಹುದು! ಇಲ್ಲಿನ ಸಿಬ್ಬಂದಿಯ ಮುಂದುವರಿಕೆಯೂ ಒಂದು ದೊಡ್ಡ ಸಮಸ್ಯೆಯಾಗಬಹುದು ಅಥವಾ ಹಣಕಾಸು ನೀಡುವ ಸಂಸ್ಥೆಯ ಆದ್ಯತೆಗಳು ಸೊರಗಬಹುದು. ಈ ಎಲ್ಲದರ ನಡುವೆಯೂ ನಾವು ಗಮನಿಸಬೇಕಿರುವುದು ಸಂಸ್ಥೆಗಳ ಜಾಲವ್ಯವಸ್ಥೆಯಿಂದ ಸಾಕಷ್ಟು ಶಕ್ತಿಯಿದೆ, ಒಮ್ಮನಸ್ಸು ಇದೆ ಹಾಗೂ ನಿರ್ದಿಷ್ಟ ಗುರಿಯನ್ನು ಸಾಧಿಸುವ ಸಾಧ್ಯತೆಗಳು ಹೆಚ್ಚಿವೆ ಎಂಬುದನ್ನು. ಸದ್ಯದ ಬೇಡಿಕೆ, ಜಾಲವ್ಯವಸ್ಥೆಗಳ ಅವಶ್ಯಕತೆ, ಹುಟ್ಟು, ಬೆಳವಣಿಗೆ, ನಿರ್ವಹಣೆ ಮತ್ತು ಮುಂದುವರಿಕೆ ಇವೇ ಮೊದಲಾದ ವಿಚಾರಗಳನ್ನು ಕುರಿತು ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಉದಾಹರಣೆಗಳೊಂದಿಗೆ ತರಬೇತಿ ನೀಡಬೇಕಿರುವುದು. ಸಮಾಜಕಾರ್ಯ ವಿದ್ಯಾರ್ಥಿಗಳು ವಿವಿಧ ಸ್ವಯಂಸೇವಾ ಸಂಘಟನೆಗಳಿಗೆ ಕ್ಷೇತ್ರಕಾರ್ಯಕ್ಕೆ ಹೋಗುವಾಗ, ಅಲ್ಲಿ ಸಂಸ್ಥೆಗಳು ಜಾಲ ಸಂಸ್ಥೆಗಳಲ್ಲಿ ತೊಡಗುವುದನ್ನು ಗಮನಿಸಿರುತ್ತಾರೆ. ಅವುಗಳನ್ನೇ ಉದಾಹರಣೆಗಳಾಗಿ ತೆಗೆದುಕೊಂಡು ತರಗತಿಗಳಲ್ಲಿ ಚರ್ಚಿಸುವ ಮೂಲಕ ಸಮುದಾಯ ಸಂಘಟನೆಯ ಹೊಸ ಸಾಧ್ಯತೆಗಳನ್ನು ತಿಳಿಸಬಹುದು. ಇಂತಹ ಉದಾಹರಣೆಗಳೊಡನೆ ಕಲಿಯುವ ವಿದ್ಯಾರ್ಥಿಗಳು ಮುಂದೆ ಕ್ಷೇತ್ರಕಾರ್ಯಕ್ಕೆ ಬಂದಾಗ ಸಾಕಷ್ಟು ಪರಿಣಾಮಕಾರಿಯಾಗಿರುತ್ತಾರೆ. ನಾಗಸಿಂಹ ಜಿ. ರಾವ್ ನಿರ್ದೇಶಕರು, ಚೈಲ್ಡ್ ರೈಟ್ಸ್ ಟ್ರಸ್ಟ್ ಮತ್ತು ಬೆಂಗಳೂರು ಜಿಲ್ಲಾ ಸಂಯೋಜಕರು, ಬಾಲಕಾರ್ಮಿಕ ಪದ್ಧತಿ, ವಿರೋಧಿ ಆಂದೋಲನ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |