ಶಿಬಿರದ ಹಿನ್ನೆಲೆ, ಉದ್ದೇಶಗಳು
ಸಮಾಜಕಾರ್ಯದಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳು ಸಮಾಜಸೇವಾ ಶಿಬಿರದಲ್ಲಿ ಹತ್ತು ದಿನ ಕಳೆಯಬೇಕೆಂಬುದು ನಿಯಮ. ಯಾವುದಾದರೂ ಒಂದು ಹಳ್ಳಿಯಲ್ಲಿ ಶಿಬಿರವನ್ನು ವಿದ್ಯಾರ್ಥಿಗಳು ತಮ್ಮ ಖರ್ಚಿನಲ್ಲಿಯೇ ನಡೆಸಬೇಕಾಗುತ್ತದೆ. ಅವರ ಮಾರ್ಗದರ್ಶನಕ್ಕಾಗಿ ಹೋಗಿರುವ ಪ್ರಾಧ್ಯಾಪಕ (ನಿರ್ದೇಶಕ)ನ ಹಾಗೂ ಈ ಕಾರ್ಯಗಳಲ್ಲಿ ನೆರವಾಗುವ ವಿಭಾಗದ ಸಿಪಾಯಿಯ ಖರ್ಚನ್ನು, ಶಿಬಿರ ನಡೆಯುವ ಸ್ಥಳವು ಧಾರವಾಡಕ್ಕೆ ಆರು ಮೈಲುಗಳ ಒಳಗಿರದಿದ್ದರೆ, ವಿಶ್ವವಿದ್ಯಾಲಯವೇ ವಹಿಸಿಕೊಳ್ಳುತ್ತದೆ.
ಕರ್ನಾಟಕ ವಿಶ್ವವಿದ್ಯಾಲಯವೇ ಸ್ನಾತಕೋತ್ತರ ಮಟ್ಟದಲ್ಲಿ ಸಮಾಜಕಾರ್ಯದ ಅಧ್ಯಯನವನ್ನು ಆರಂಭಿಸಿದ್ದು 1962ರಲ್ಲಿ, ಮೊದಲಿನ ವಿದ್ಯಾರ್ಥಿಗಳ ಗುಂಪು 1964ರಲ್ಲಿ ಪದವಿ ಪಡೆದು ಹೊರಹೋಯಿತು. ಇದುವರೆಗೂ ಎಂಟು ಗುಂಪುಗಳು, ಅಂದರೆ ಅಂದಾಜು 75 ವಿದ್ಯಾರ್ಥಿಗಳು ಸಮಾಜಕಾರ್ಯದಲ್ಲಿ ವೃತ್ತಿ ಶಿಕ್ಷಣವನ್ನು ಪಡೆದು ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ವಿವಿಧ ಕಲ್ಯಾಣ ಕ್ಷೇತ್ರಗಳಲ್ಲಿ ಕಾರ್ಯನಿರತರಾಗಿದ್ದಾರೆ. ಇವರೆಲ್ಲರೂ ಸಮಾಜಸೇವಾ ಶಿಬಿರಗಳಲ್ಲಿ ಪಾಲ್ಗೊಂಡವರೇ ಆಗಿದ್ದಾರೆ. ಇದುವರೆಗೂ ಧಾರವಾಡ ಸುತ್ತಮುತ್ತಲಿರುವ ಮನಸೂರು, ಹೆಬ್ಬಳ್ಳ, ಅಮ್ಮಿನಭಾವಿ ಹಾಗೂ ಸಲಕಿನಕೊಪ್ಪ ಗ್ರಾಮಗಳಲ್ಲಿ ಏಳು ಶಿಬಿರಗಳು ನಡೆದಿದ್ದವು. ಈ ಸಲದ ಶಿಬಿರವು ಸಮಾಜಕಾರ್ಯ ವಿಭಾಗವು ನಡೆಸಿದ ಎಂಡನೆಯ ಶಿಬಿರ, ಸಲಕಿನಕೊಪ್ಪದಲ್ಲಿಯೇ ನಡೆಸಿದ ಮೂರನೆಯ ಶಿಬಿರ.
ಶಿಬಿರವನ್ನು ಸಾಮಾನ್ಯವಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೇ ನಡೆಸಲಾಗುತ್ತದೆ. ಒಮ್ಮೊಮ್ಮೆ ಕಾರಣಾಂತರಗಳಿಂದ ಶಿಬಿರವನ್ನು ಮುಂದಕ್ಕೆ ಹಾಕಿ ಎರಡು ವರ್ಷಗಳ ವಿದ್ಯಾರ್ಥಿಗಳನ್ನೂ ಒಂದೇ ಶಿಬಿರದಲ್ಲಿ ಒಗ್ಗೂಡಿಸುವುದುಂಟು. ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಅಂಥ ಒಂದು ಶಿಬಿರವು ನಡೆಯಿತು. NIRATHANKA CLUB HOUSE
ಶಿಬಿರಕ್ಕೆ ಹಲವಾರು ಉದ್ದೇಶಗಳಿರುತ್ತವೆ. ಅವುಗಳಲ್ಲಿ ಬಹು ಮುಖ್ಯವಾದವುಗಳನ್ನು ಕೆಳಗಿನಂತೆ ಪಟ್ಟಿಮಾಡಬಹುದು:
ಈ ಶಿಬಿರದ ವಿಶಿಷ್ಟ ಉದ್ದೇಶಗಳು ಇದುವರೆಗೆ ನಮೂದಿಸಿದ ಉದ್ದೇಶಗಳು ಸಮಾಜಸೇವಾ ಶಿಬಿರಗಳಲ್ಲಿ ಸಾಮಾನ್ಯವಾದವುಗಳು. ಆದರೆ ಈ ಶಿಬಿರಕ್ಕೆ, ಇವುಗಳ ಜೊತೆಗೆ, ಕೆಲವು ಬಹುಮುಖ್ಯವಾದ ಉದ್ದೇಶಗಳನ್ನು ಇರಿಸಿಕೊಳ್ಳಲಾಗಿತ್ತು. ಅವನ್ನು ಈ ರೀತಿಯಲ್ಲಿ ಪಟ್ಟಿ ಮಾಡಬಹುದು:
ಸಲಕಿನಕೊಪ್ಪ ಶಿಬಿರ ನಡೆದದ್ದು ಧಾರವಾಡ ನಗರಕ್ಕೆ ಐದು ಮೈಲು ದೂರದಲ್ಲಿ ಪಶ್ಚಿಮದಲ್ಲಿ, ಧಾರವಾಡ-ಹಳಿಯಾಳ ರಸ್ತೆ ಉತ್ತರ ಭಾಗಕ್ಕೆ ಇರುವ ಚಿಕ್ಕಹಳ್ಳಿ ಸಲಕಿನಕೊಪ್ಪದಲ್ಲಿ. ಮಲೆನಾಡಿನ ಸೆರಗಿನ ಕುಸುರಿನ ಹಸಿರಿನ ಮುದ್ದಾದ ಹಳ್ಳಿ. ಧಾರವಾಡ-ಹಳಿಯಾಳ ರಸ್ತೆಯಲ್ಲಿ ನಿಂತರೆ ಹತ್ತಿರದಲ್ಲೇ ಕಾಣುತ್ತದೆ. ಧಾರವಾಡದಿಂದ ನಿಗದಿ, ಬಾಡ ಹಳ್ಳಿಗಳಿಗೆ ಹೋಗುವ ಬಸ್ಸುಗಳಲ್ಲಿ ಹೋಗಿ ಸಲಕಿನಕೊಪ್ಪದ ಕತ್ತರಿಗೆ ಇಳಿದು ಎರಡು ಫರ್ಲಾಂಗ್ ನಡೆದರೆ ಹಳ್ಳಿಯ ಮೊದಲ ಮನೆ ಸಿಗುತ್ತದೆ. ಊರಿನಭಿಮುಖವಾಗಿ ಸಾಗಿದಾಗ ಒಂದು ಫರ್ಲಾಂಗು ಕ್ರಮಿಸಿದರೆ ಊರ ಕೆರೆಯ ಏರಿಯ ಮೇಲೆ ಇರುತ್ತೇವೆ. ಬಲಗಡೆಗೆ ಕೆರೆಯ ನೀರು, ಎಡಗಡೆಗೆ ಹಸುರುಗುವ ಭತ್ತದ ಗದ್ದೆಗಳು. ಕೆರೆ ಏರಿಯನ್ನು ಕ್ರಮಿಸಿದ ನಂತರ ಊರ ಸೇರಲು ಏರಿರುವ ಹಾದಿಯನ್ನು ಕ್ರಮಿಸಬೇಕು. ಇದು ಎರಡು ಫರ್ಲಾಂಗ್ ಉದ್ದವಿದ್ದು, ಊರಿನ ಉತ್ತರಕ್ಕಿರುವ ಗುಡ್ಡದ ತಪ್ಪಲನ್ನು ತಲುಪುತ್ತದೆ. ಶಿಬಿರಾರ್ಥಿಗಳು ಶಿಬಿರವನ್ನು ಯಶಸ್ವಿಯಾಗಿ ನಡೆಸಬೇಕಾದರೆ ವ್ಯವಸ್ಥಿತವಾಗಿಯೇ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿರಬೇಕಾಗುತ್ತದೆ. (ಈ ವಿಚಾರವನ್ನು ಆನಂತರ ಪ್ರಸ್ತಾಪಿಸಲಾಗುವುದು) ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಶಿಬಿರಾರ್ಥಿಗಳೂ ಯೋಗ್ಯರಾಗಿರಬೇಕಾಗುತ್ತದೆ. ಸಮರ್ಥರಾಗಿರಬೇಕಾಗುತ್ತದೆ. ಅಕ್ಟೋಬರ್ 12ರ ಮಂಗಳವಾರ ಆರಂಭವಾಗಿ ಅದೇ ತಿಂಗಳ 21ರ ಗುರುವಾರದವರೆಗೆ ನಡೆದ ಶಿಬಿರದಲ್ಲಿ ನೇರವಾಗಿ ಪಾಲ್ಗೊಂಡವರು 27 ಜನರು. ಇವರಲ್ಲಿ ಇಬ್ಬರು ಮಹಿಳೆಯರು. ಗ್ರಾಮಸ್ಥರು ಕೆಲವು ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದರು. ಶಿಬಿರದಲ್ಲಿ ಭಾಗವಹಿಸಿದವರು ನಾಲ್ಕಾರು ಗುಂಪುಗಳಿಗೆ ಸೇರಿದ್ದರು: ಕರ್ನಾಟಕದ ಎಂಟು ಜಿಲ್ಲೆಗಳಿಗೆ ಮೂಲತಃ ಸೇರಿದವರಾಗಿದ್ದರು. ವಿದ್ಯಾರ್ಥಿಗಳೂ (10), ಮನೋಚಿಕಿತ್ಸಾರ್ಥಿಗಳೂ (10), ಮನೋಚಿಕಿತ್ಸಾ ವಿದ್ಯಾರ್ಥಿಯೂ (1), ಸಿಪಾಯಿಗಳೂ (3), ಅಡುಗೆಯವರೂ (2), ನಿರ್ದೇಶಕನೂ (1) ಕೂಡಿದ ಈ ಗುಂಪಿನಲ್ಲಿ 12 ಜನರು ಧಾರವಾಡ ಜಿಲ್ಲೆಯಿಂದಲೂ, 4 ಜನ ಬೆಳಗಾವಿಯಿಂದಲೂ, 3 ಜನರಂತೆ ಬಳ್ಳಾರಿ, ಕಾರವಾರ (ಉತ್ತರ ಕನ್ನಡ) ಜಿಲ್ಲೆಗಳಿಂದಲೂ, 2 ಜನ ಬಿಜಾಪುರ ಜಿಲ್ಲೆಯಿಂದಲೂ, ಒಬ್ಬೊಬ್ಬರಂತೆ ಬೀದರ್, ಮಂಗಳೂರು (ದಕ್ಷಿಣ ಕನ್ನಡ) ಹಾಗೂ ಹಾಸನ ಜಿಲ್ಲೆಗಳಿಂದಲೂ ಬಂದಿದ್ದರು. ಆದರೆ ವಿದ್ಯಾರ್ಥಿಗಳು 5 ಜಿಲ್ಲೆಗಳಿಗೂ, ಮನೋಚಿಕಿತ್ಸಾರ್ಥಿಗಳು 6 ಜಿಲ್ಲೆಗಳಿಗೂ ಸೇರಿದ್ದರು. ಸಿಪಾಯಿಗಳೂ, ಅಡುಗೆಯವರೂ ಒಂದು ಜಿಲ್ಲೆಗೆ ಸೇರಿದ್ದರು. ಅಂತೂ ಒಟ್ಟಿನಲ್ಲಿ ನೋಡಿದಾಗ ಧಾರವಾಡ ಜಿಲ್ಲೆಯಿಂದ ಬಂದವರ ಶೇಕಡಾ ಪ್ರಮಾಣ 44. ಇದೇ ಜಿಲ್ಲೆಯಿಂದಲೇ ಮಹಿಳೆಯರಿಬ್ಬರೂ ಬಂದಿದ್ದರು. ಇವರಲ್ಲಿ ಒಬ್ಬಾಕೆ ವಿದ್ಯಾರ್ಥಿನಿ, ಇನ್ನೊಬ್ಬಾಕೆ ಅದೇ ಊರಿಗೆ ಸೇರಿದ ಅಡುಗೆಯವನಿಗೆ ನೆರವಾಗಿ ರೊಟ್ಟಿ ಬಡಿಯುವ ಮಹಿಳೆ (ಈ ಇಪ್ಪತ್ತೇಳು ಜನರಲ್ಲಿ ಅಡುಗೆಯವರು ಕೂಲಿಯಾಳುಗಳಾಗಿ ದುಡಿಯಲು ಬಂದಿದ್ದರು. ಇತರರೆಲ್ಲಾ ತಂತಮ್ಮ ಖರ್ಚಿನಿಂದಲೇ (ಮನೋಚಿಕಿತ್ಸಾರ್ಥಿಗಳನ್ನು ಹೊರತು) ಬಂದಿದ್ದರು. (ಮನೋಚಿಕಿತ್ಸಾರ್ಥಿಗಳ ಖರ್ಚನ್ನು ಮಾನಸಿಕ ಆರೋಗ್ಯ ಕೇಂದ್ರವೇ ವಹಿಸಿಕೊಂಡಿತ್ತು.) ಶಿಬಿರಾರ್ಥಿಗಳ ಸರಾಸರಿ ವಯಸ್ಸು 30 ವರ್ಷ. ಈ ಶಿಬಿರದಲ್ಲಿ ಮುಖ್ಯವಾಗಿ ಎರಡು ಸಂಸ್ಥೆಗಳಿಂದ ಬಂದವರಿದ್ದರು: ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಪ್ರಥಮ ವರ್ಷದ ಹತ್ತು ವಿದ್ಯಾರ್ಥಿಗಳೂ, ಒಬ್ಬ ಸಿಪಾಯಿಯೂ, ಒಬ್ಬ ಪ್ರಾಧ್ಯಾಪಕನೂ ಸೇರಿ 12 ಜನರು; ಇವರೆಲ್ಲರ ಸರಾಸರಿ ವಯಸ್ಸು 25 ವರ್ಷ, ವಿದ್ಯಾರ್ಥಿಗಳ ಸರಾಸರಿ ವಯಸ್ಸು 23. ಎರಡನೆಯ ಸಂಸ್ಥೆ ಧಾರವಾಡದ ಸರಕಾರೀ ಮಾನಸಿಕ ಆರೋಗ್ಯ ಕೇಂದ್ರ. ಇಲ್ಲಿಂದ ಮನೋಚಿಕಿತ್ಸಾರ್ಥಿಗಳೂ, ಸಿಪಾಯಿಗಳೂ, ಮನೋಚಿಕಿತ್ಸಾ ವಿದ್ಯಾರ್ಥಿಯೂ ಸೇರಿ 13 ಜನ ಬಂದಿದ್ದರು, ಇವರ ಸರಾಸರಿ ವಯಸ್ಸು 33 ವರ್ಷ, ಚಿಕಿತ್ಸಾರ್ಥಿಗಳ ಸರಾಸರಿ ವಯಸ್ಸು 33 ವಯಸ್ಸು ವರ್ಷವೇ ಆಗಿತ್ತು. ಅಡುಗೆಯವರ ಸರಾಸರಿ ವಯಸ್ಸು 34. ಅಂದರೆ, ಶಿಬಿರದಲ್ಲಿ ತರುಣರೂ, ನಡುಹರೆಯದವರೂ ಇದ್ದರು. ಕನಿಷ್ಠ ವಯಸ್ಸು 18 ಇದ್ದರೆ, ಗರಿಷ್ಠ ವಯಸ್ಸು 50. ವಯೋವೃಂದದ ದೃಷ್ಟಿಯಿಂದ ನೋಡಿದರೆ ಶಿಬಿರಾರ್ಥಿಗಳು ಉತ್ಪಾದನಾ ಶಕ್ಯಿಯನ್ನುಳ್ಳವರೆಂದೇ ಅರ್ಥವಾಗುತ್ತದೆ. ಈ ಹಿಂದೆಯೇ ಹೇಳಿದಂತೆ ಶಿಬಿರದಲ್ಲಿ ಇಬ್ಬರು ಮಹಿಳೆಯರು ಮಾತ್ರವಿದ್ದರು ನಿಜ. ಆದರೆ ಶಿಬಿರಾರ್ಥಿಗಳ ಮಹಿಳಾ ಬಂಧುಗಳೂ ಧಾರವಾಡದಿಂದ ಬಂದು ಹೋಗುತ್ತಿದ್ದರು; ಹಳ್ಳಿಯಲ್ಲಿಯೇ ನೆಲೆಸಿರುವ ಡಾಕ್ಟರ್ ಗೋಪಿನಾಥರ ಪತ್ನಿ ಅಂಬುಜಮ್ಮನವರು ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು; ಶಾಲಾ ಬಾಲಕಿಯರು ಕುತೂಹಲಕ್ಕೆಂದೊ, ಆಸಕ್ತಿಯಿಂದಲೊ ಕೆಲವು ಕಾರ್ಯಗಳಲ್ಲಿ ತೊಡಗಿರುತ್ತಿದ್ದರು. ಹೀಗಾಗಿ ಶಿಬಿರದಲ್ಲಿ ಹೆಣ್ಣಿನ ಬಣ್ಣಕ್ಕೆ ಕುಂದೇನೂ ಬಂದಿರಲಿಲ್ಲ. ವಿದ್ಯಾರ್ಥಿಗಳೂ, ಚಿಕಿತ್ಸಾರ್ಥಿಗಳೂ ವಿದ್ಯಾರ್ಥಿಗಳ ಮತ್ತು ಚಿಕಿತ್ಸಾರ್ಥಿಗಳ ಬಗ್ಗೆ ಒಂದಿಷ್ಟು ವಿವರಗಳನ್ನು ಕೊಡುವ ಅಗತ್ಯವಿದೆ. ವಿದ್ಯಾರ್ಥಿಗಳು ಬಿ.ಎ. ಅಥವಾ ಬಿ.ಎಸ್.ಸಿ. ತೇರ್ಗಡಗೆಯಾಗಿ ಬಂದವರು. ಸಮಾಜಕಾರ್ಯದಲ್ಲಿ ಎಂ.ಎ. ಓದಲೆಂದು ಅರ್ಜಿ ಹಾಕಿಕೊಂಡ ಸುಮಾರು 70 ಜನ ಪದವೀಧರರಲ್ಲಿ ಸಂದರ್ಶನದ ಮೂಲಕ ಈ ಹತ್ತು ಜನ ಆಯ್ಕೆಯಾಗಿದ್ದರು. ಇವರಲ್ಲಿ ಕೆಲವರು ಅರ್ಥಶಾಸ್ತ್ರ ಓದಿದ್ದರೆ, ಕೆಲವರು ಸಮಾಜಶಾಸ್ತ್ರವನ್ನೂ, ಕೆಲವರು ಅಪರಾಧ ಶಾಸ್ತ್ರವನ್ನೂ ಓದಿದ್ದವರು; ಒಬ್ಬಾತ ಇಂಗ್ಲಿಷ್ ಭಾಷೆಯನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದಾತ. ವಿದ್ಯಾರ್ಥಿಗಳಲ್ಲಿ ಬಹಳ ಜನ ನಗರದಿಂದ ಬಂದವರೇ ಆಗಿದ್ದರು. ಅವರಿಗೆ ಗ್ರಾಮೀಣ ಸಮುದಾಯದ ಅಲ್ಪಸ್ವಲ್ಪ ಪರಿಚಯವಿದ್ದಿತು. ಒಂದಿಬ್ಬರು ಎನ್.ಸಿ.ಸಿ. ಶಿಬಿರದಲ್ಲಿ ಭಾಗವಹಿಸಿದ್ದಿರಬಹುದು. ಮೂವರನ್ನು ಹೊರತು ಮನೋಚಿಕಿತ್ಸಾರ್ಥಿಗಳ ಪರಿಸ್ಥಿತಿಯು ಇವರಿಗೆ ತಿಳಿಯದು. ಒಬ್ಬಾತ ಮಾತ್ರ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ವೃತ್ತಿಯಲ್ಲಿರುವಾತ. ವಿದ್ಯಾರ್ಥಿಗಳಲ್ಲಿ ಬಹುಜನ ಅವಿವಾಹಿತರು. ಈ ಹಿನ್ನೆಲೆಯಲ್ಲಿ ನೋಡಿದರೆ ಗ್ರಾಮದಲ್ಲಿ ನಡೆಸುವ ಶಿಬಿರಕ್ಕೆ ಅವರು ಹೊಂದಿಕೊಳ್ಳುವಲ್ಲಿ ಪಡುವ ಕಷ್ಟಗಳ ಕಲ್ಪನೆ ಬರಬಹುದಲ್ಲವೆ? ಅದರಲ್ಲೂ ಹೊಣೆಗಾರಿಕೆಯನ್ನು ತಾವೇ ಹೊತ್ತುಕೊಳ್ಳುವುದಲ್ಲದೆ ಮನೋಚಿಕಿತ್ಸಾರ್ಥಿಗಳೊಡನೆ ಹತ್ತು ದಿನ ಹೊತ್ತು ಕಳೆಯುವುದೆಂತು, ಎಂಬ ಚಿಂತೆ ಅವರಿಗೆ ಹಾಸಲುಂಟು, ಹೊದೆಯಲುಂಟು, ಎನ್ನಿಸಿದರೆ ತಪ್ಪೇನು! ಶಿಬಿರದಲ್ಲಿ ಭಾಗವಹಿಸಬೇಕಾದುದು ಕಡ್ಡಾಯವಾದುದ್ದರಿಂದ ಅವರು ಬರಲೇಬೇಕಾಗಿದ್ದು, ಬಂದಿದ್ದರು. ಅದೂ ಅಲ್ಲದೆ ಆ ಹತ್ತು ಜನರಲ್ಲಿ ಆರು ಜನ ಮನೆಗಳಲ್ಲಿದ್ದು ಬಂದವರು, ಇಬ್ಬರು ಪ್ರತ್ಯೇಕವಾದ ಕೋಣೆಯಲ್ಲಿದ್ದು ಬಂದವರು, ಉಳಿದಿಬ್ಬರು ಮಾತ್ರ ಹಾಸ್ಟೆಲಿನಲ್ಲಿದ್ದವರು. ಆದರೆ ವೃಂದ ಜೀವನದ ಅನುಭವದಲ್ಲಿ ಊಟೋಪಚಾರದಲ್ಲಿ, ಕೊಡು-ಕೊಳ್ಳುವ ಹೊಣೆಗಾರಿಕೆಯಲ್ಲಿ ಅವರೆಲ್ಲರ ಸ್ಥಿತಿ ಭಿನ್ನಭಿನ್ನವಾದದ್ದು. ಇಂಥ ಹಿನ್ನೆಲೆಯಿಂದ ಬಂದವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ವೀಕ್ಷಿಸಿ, ಅಭ್ಯಾಸಿಸುವುದೇ ಒಂದು ಅನುಭವ. ಇನ್ನು ಮನೋಚಿಕಿತ್ಸಾರ್ಥಿಗಳು, ಇವರೆಲ್ಲರೂ ವೃಂದಜೀವನಕ್ಕೆ ಒಳಗಾಗಿ ಬಂದವರೇನೋ ನಿಜವೇ. ಆಸ್ಪತ್ರೆಯ ವಾತಾವರಣದಲ್ಲಿ ಇದ್ದು ಬಂದವರು. ಅದರಲ್ಲಿ ಐದು ವರ್ಷದಿಂದಲೂ ಒಬ್ಬಾತ, ಮೂರು ವರ್ಷದಿಂದಲೂ ಇನ್ನೊಬ್ಬಾತ ಇದ್ದುದು ತಿಳಿಯಿತು. ಉಳಿದವರೆಲ್ಲಾ ಇತ್ತೀಚೆಗೆ ಆಸ್ಪತ್ರೆಗೆ ಸೇರಿದವರು. ಅವರು ಆಸ್ಪತ್ರೆಯಲ್ಲಿದ್ದ ಸರಾಸರಿ ಕಾಲವೆಂದರೆ 4 ತಿಂಗಳು ಮಾತ್ರ. ಅವರ ಮನೋವಿಕಲ ಸ್ಥಿತಿಯ ಮೇಲೆ ವೃಂದಜೀವನವು ಎಂಥ ಪರಿಣಾಮ ಮಾಡರಿಬೇಕು ಎಂದು ಊಹಿಸಬೇಕು. ಚಿಕಿತ್ಸಾರ್ಥಿಗಳಲ್ಲಿ ಮೂವರು ಮಾತ್ರ ಖಾಸಗಿಯಾಗಿ ಸೇರಿಸಲ್ಪಟ್ಟಿದ್ದರು. ಉಳಿದವರೆಲ್ಲಾ ಜನರಿಗೆ ಅಪಾಯಕಾರಿಯಾಗಿ ವರ್ತಿಸುವವರೆಂದು ನ್ಯಾಯಾಲಯದ ಮೂಲಕ ಸೇರಿಸಲ್ಪಟ್ಟವರು. ಅವರೆಲ್ಲರೂ ಒಂದೇ ಗುಂಪಿಗೆ ಸೇರಿದವರಲ್ಲ. ಎಲ್ಲರೂ ಹಿಂದೂ ಧರ್ಮೀಯರಾಗಿದ್ದರೂ ಬೇರೆ ಬೇರೆ ಜಾತಿಗೆ ಸೇರಿದ್ದರು. ಅವರ ರೋಗದ ಪರಿ ಮತ್ತು ಚಿಕಿತ್ಸೆ ಪಡೆದ ರೀತಿ ಇವೂ ಭಿನ್ನವಾಗಿದ್ದವು. ಮೂವರನ್ನು ಹೊರತು ಎಲ್ಲರೂ ಒಂದಕ್ಕಿಂತ ಹೆಚ್ಚು ಸಲ ಮನೋಚಿಕಿತ್ಸೆಗೆ ಈ ಹಿಂದೆಯೇ ಒಳಗಾಗಿದ್ದವರು. ಸಮಾಜದಲ್ಲಿ ಸರಿಯಾಗಿ ಹೊಂದಿಕೊಂಡು ಜೀವಿಸಲು ಅವರಿಗೆ ಸಾಧ್ಯವಾಗಲಿಲ್ಲವೊ, ಅವಕಾಶ ಸಿಗಲಿಲ್ಲವೊ ಅಥವಾ ರೋಗವು ಉಲ್ಬಣವಾಯಿತೊ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹಿಂದಿರುಗಿದ್ದರು. ಅವರಲ್ಲಿ ಆರನೆಯ ಸಲ ಬಂದಾತನೊಬ್ಬನಿದ್ದರೆ, ಇನ್ನೊಬ್ಬನಾತ ಐದನೆಯ ಸಲ ಬಂದಿದ್ದ. ಚಿಕಿತ್ಸಾರ್ಥಿಗಳಲ್ಲಿ ಹೆಚ್ಚಾಗಿ ನಗರಸಮುದಾಯದಿಂದಲೇ ಬಂದವರಾಗಿದ್ದರು (6), ನಾಲ್ವರು ಮಾತ್ರ ಹಳ್ಳಿಗಳಿಂದ ಬಂದವರು. ಆದರೂ ಇವರಿಗೂ ನಗರವು ಹೊಸದೇನೂ ಅಲ್ಲ. ರೋಗಿಷ್ಠರಾಗದ ಮುನ್ನ ಯಾವ್ಯಾವ ಉದ್ಯೋಗಗಳಲ್ಲಿದ್ದರೆಂಬುದನ್ನು ತಿಳಿಯಬೇಕಾಗುತ್ತದೆ. ಇಬ್ಬರು ವಿದ್ಯಾರ್ಥಿಗಳಾಗಿದ್ದರು. ಇಬ್ಬರು ಸರಕಾರಿ ಕಚೇರಿಗಳಲ್ಲಿ ಸಿಪಾಯಿಗಳಾಗಿದ್ದರು. ಒಬ್ಬಾತ ಮಿಲಿಟಿರಿಯಲ್ಲಿದ್ದು ನಿವೃತ್ತಿಯಾ ನಂತರ ಹಳ್ಳಿಗೆ ಬಂದು ಒಕ್ಕಲುತನದಲ್ಲಿ ನಿರತನಾಗಿದ್ದ, ಒಬ್ಬಾತ ಹೈಸ್ಕೂಲೊಂದರ ಮುಖ್ಯೋಪಾಧ್ಯಾಯನಾಗಿದ್ದ. ಒಬ್ಬಾತ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ. ಮತ್ತೊಬ್ಬ ಅಂಗಡಿಯೊಂದರಲ್ಲಿ ಕೂಲಿಯಾಗಿದ್ದ. ಒಬ್ಬಾತ ಶ್ರೀಮಂತ ರೈತನ ಏಕೈಕ ಪುತ್ರನಾಗಿದ್ದುದರಿಂದ ಏನೂ ಕೆಲಸದಲ್ಲಿದಂತೆ ಕಾಣುತ್ತಿಲ್ಲ. ಕೊನೆಯಾತ ಒಂದನೆಯ ದರ್ಜೆ ಭಾರತ ಸರಕಾರದ ಸುಂಕದ ಅಧಿಕಾರಿಯಾಗಿದ್ದ. ಇವರ ವಿದ್ಯಾಭ್ಯಾಸದ ಮಟ್ಟವೇನೂ ಕಡಿಮೆಯಾಗಿರಲಿಲ್ಲ. ಅಂದರೆ, ಇಬ್ಬರನ್ನು ಹೊರತು ಎಲ್ಲರೂ ವಿದ್ಯಾವಂತರೇ. ಕನಿಷ್ಠ ಓದಿನ ಮಟ್ಟವೆಂದೆ ಆರನೆಯ ತರಗತಿ. ಅತೀ ಹೆಚ್ಚಿನ ಮಟ್ಟವೆಂದರೆ ಪದವಿಯನ್ನು ಪಡೆದ್ದುದು. ಚಿಕಿತ್ಸಾರ್ಥಿಗಳು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಲ್ಲವರಾಗಿದ್ದರು. ಎಂಟು ಜನರದು ಕನ್ನಡ ಮಾತೃಭಾಷೆಯಾಗಿತ್ತು. ಒಬ್ಬಾತನದು ಕೊಂಕಣಿ, ಇನ್ನೊಬ್ಬಾತನದು ಗುಜರಾತಿ. ಆದರೆ ಎಲ್ಲರಿಗೂ ಕನ್ನಡ ಬರುತ್ತಿತ್ತು. ನಾಲ್ವರಿಗೆ ಇಂಗ್ಲಿಷೂ, ಏಳೂ ಜನರಿಗೆ ಹಿಂದಿಯೂ, ಇಬ್ಬರಿಗೆ ಮರಾಠಿಯೂ ಬರುತ್ತಿತ್ತು. ವಿದ್ಯಾರ್ಥಿಗಳು ಚಿಕಿತ್ಸಾರ್ಥಿಗಳೊಡನೆ ಆಗಾಗ ಇಂಗ್ಲಿಷ್, ಹಿಂದಿ ಹಾಗೂ ಮರಾಠಿಯಲ್ಲಿಯೂ ಸಂಭಾಷಿಸುತ್ತಿದ್ದುದು ಕಂಡು ಬರುತ್ತಿತ್ತು. ಅವರ ವೈವಾಹಿಕ ಸ್ಥಿತಿಯ ಬಗ್ಗೆ ಒಂದು ಮಾತು. ಹತ್ತರಲ್ಲಿ ನಾಲ್ವರಿಗೆ ಮದುವೆಯಾಗಿ ಮಕ್ಕಳಾಗಿದ್ದವು. ಉಳಿದ ಆರು ಜನರಿಗೆ ಮದುವೆಯಾಗರಿಲಿಲ್ಲ. ಆದರೂ ಒಂದಿಬ್ಬರಿಗಂತೂ ಲೈಂಗಿಕ ಸಂಪರ್ಕದ ಅನುವಭವಿತ್ತೆಂದು ತಿಳಿದುಬರುತ್ತದೆ. ಚಿಕಿತ್ಸಾರ್ಥಿಗಳನ್ನು ಆಸ್ಪತ್ರೆಗೆ ಏಕೆ ಸೇರಿಸಲಾಯಿತು? ಎಂಬ ಪ್ರಶ್ನೆ ಏಳುತ್ತದೆ. ಎಲ್ಲರನ್ನೂ ಒಂದೇ ಕಂಸಿನಲ್ಲಿ ಗಣಿಸಲಾಗದು. ಪ್ರತಿಯೊಬ್ಬರ ರೋಗ ಮತ್ತವರ ಕಾರಣವನ್ನು ಇಲ್ಲಿ ಪ್ರಸ್ತಾಪಿಸಲು ಸಾಧ್ಯವಲ್ಲವಾದುದರಿಂದ ಅವರೆಲ್ಲರ ವರ್ತನೆಗಳ ಸ್ಥೂಲ ವಿವರಣೆಯನ್ನು ಕೊಡಲಾಗುವುದು. ಅಶ್ಲೀಲವಾಗಿ ಕಂಡಕಂಡವರನ್ನೆಲ್ಲಾ ಬೈಯುವುದು, ಹೊಡೆಯುವುದು, ಕಲ್ಲು ತೂರುವುದು, ಹೇಳದೆ, ಕೇಳದೆ ಅದೆಲ್ಲಿಗೋ ಓಡಿ ಹೋಗುವುದು, ನಿದ್ರೆ ಮಾಡದಿರುವುದು, ಜ್ಞಾಪಕಶಕ್ತಿಯಿಲ್ಲದಿರುವುದು, ಕಾರ್ಯಕಾರಣ ಸಂಬಂಧವನ್ನು ಕಾಣಲಾರದ ಸ್ಥಿತಿ, ತನ್ನ ವರ್ತನೆಯನ್ನು ನಿವಾರಿಸಲಾರದ ಅಸಮರ್ಥತೆ, ಏನೋ ಮನೋಗೊಂದಲ, ಜನರಿಗೆ ಅಪಾಯವಾಗುವಂತೆ ವರ್ತಿಸುವುದು, ಕೊಳಕು ಕೊಳಕಾಗಿರುವುದು, ಅರಿವೆಗಳನ್ನು ಹರಿದು ಹಾಕುವುದು, ಉಗ್ರ ವರ್ತನೆ, ಶಂಕೆ ಅನುಮಾನಪಡುವುದು, ಕಿರಿಕಿರಿ ಮಾಡುವುದು, ಉಪಟಳ ಕೊಡುವುದು, ಏಕಾಗ್ರಚಿತ್ತವಿಲ್ಲದಿರುವುದು, ಉನ್ಮಾದ ರೀತಿಯಲ್ಲಿ ಕುಣಿದಾಡುವುದು, ಚೀರಾಡುವುದು, ಗಾಳಿ ಹಗುರಾದ ಭಾವನೆಗಳಿಗೆ ಈಡಾಗಿ ವರ್ತಿಸುವುದು, ವಿಪರೀತ ಚಟುವಟಿಕೆ, ಉದಾಸೀನತೆ, ಧ್ಯಾನಮಗ್ನತೆ, ವಟಗುಟ್ಟುವುದು ಅಥವಾ ತನ್ನೊಳಗೇ ತಾನು ಮಾತನಾಡಿಕೊಳ್ಳುವುದು, ಏಕಾಕಿತನ, ಆತ್ಮಹತ್ಯೆಗೆ ಎಳಸುವುದು, ಊಟವನ್ನು ತಿರಸ್ಕರಿಸುವುದು, ಇತ್ಯಾದಿ. ಇಂಥ ವರ್ತನೆಯು ಜನರಿಗೆ ಅಪಾಯಕಾರಿ ಎಂದು ಕಂಡುದುದರಿಂದ ಮಾನಸಿಕ ಆರೋಗ್ಯ ಕೇಂದ್ರಕ್ಕೆ ತಂದು ಸೇರಿಸಲಾಗಿತ್ತು ಎಂಬುದು ನಿಜವೇ. ಕೇಂದ್ರದಲ್ಲಿ ಔಷದೋಪಚಾರದಿಂದ ಚಿಕತ್ಸೆ ನಡೆಯುತ್ತಿದ್ದುದೂ ನಿಜವೇ. ಇವರೆಲ್ಲರೂ ಬಹುಮಟ್ಟಿಗೆ ಗುಣಮುಖರಾಗಿದ್ದುದೂ ನಿಜವೇ. ಆದರೂ ಆಸ್ಪತ್ರೆಯ ಬಂಧನ ರಕ್ಷಣೆಯ ಕಾವಲಿನಿಂದ ಪೂರ್ಣ ತೆರೆದ ಶಿಬಿರದ ವಾತಾವರಣಕ್ಕೆ ಇವರೆಲ್ಲಾ ಬಂದಿದ್ದರು.1 ಸಮಾಜಕಾರ್ಯದ ವಿದ್ಯಾರ್ಥಿಯೂ, ಮಾನಸಿಕ ಆರೋಗ್ಯ ಕೇಂದ್ರದಲ್ಲಿ ನರ್ಸೂ, ಶಿಬಿರದ ಕಾರ್ಯದರ್ಶಿಯೂ ಆಗಿದ್ದಾತನ ನೆರವಿನಿಂದ ಇವರನ್ನು ಆರಿಸಲಾಗಿತ್ತು, ಶಿಬಿರಕ್ಕೆ ಕರೆದು ತರಲಾಗಿತ್ತು. ಆದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಇವರ ಸಮವಸ್ತ್ರವನ್ನು (Uniform) ಇರಿಸಿಕೊಂಡುದಲ್ಲದೆ ಇಬ್ಬರು ಸಿಪಾಯಿಯರನ್ನೂ ಒಬ್ಬ ಮನೋಚಿಕಿತ್ಸಾರ್ಥಿಯನ್ನೂ ಜೊತೆಗೆ ಕರೆದು ತರಲಾಗಿತ್ತು. ಯೋಜಿತ ಮತ್ತು ವ್ಯವಸ್ಥಿತ ಕಾರ್ಯ ಸಮಾಜಸೇವಾ ಶಿಬಿರವನ್ನು ನಡೆಸಬೇಕಾದರೆ ಯೋಜಿತ ಮತ್ತು ವ್ಯವಸ್ಥಿತ ಕಾರ್ಯವನ್ನು ಕೈಗೊಳ್ಳಬೇಕಾಗುತ್ತದೆ. ಶಿಬಿರವನ್ನು ಹೇಗೆ ನಡೆಸಬೇಕು ಎಂಬುದನ್ನು ಕಲಿತುಕೊಳ್ಳುವಂಥ ಅವಕಾಶವನ್ನೂ ವಿದ್ಯಾರ್ಥಿಗಳಿಗೆ ಒದಗಿಸಬೇಕಾಗಿರುವುದರಿಂದ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕನೊಬ್ಬ ಶಿಬಿರದ ನಿರ್ದೇಶಕನೆಂದು ನಿಯಮಿತನಾಗಿದ್ದರೂ ಶಿಬಿರವು ಯಶಸ್ವಿಯಾಗಲು ಇಡಿಯ ವಿಭಾಗವೇ ಆಸಕ್ತಿಯಿಂದ ಕಾರ್ಯಮಗ್ನವಾಗಬೇಕಾಗುತ್ತದೆ. ಪ್ರಥಮ ವರ್ಷದ ವಿದ್ಯಾರ್ಥಿಗಳು ಶಿಬಿರಕ್ಕೆ ಹೋಗುತ್ತಿರುವುದರಿಂದ ಅವರಿಗೆ ಎರಡನೆಯ ವರ್ಷದ ವಿದ್ಯಾರ್ಥಿಗಳ ಅನುಭವ ಮಾರ್ಗದರ್ಶನಬೇಕಾಗುತ್ತದೆ. ನಿರ್ದೇಶಕನಿಗೆ ಇತರ ಸಹೋದ್ಯೋಗಿಗಳ ನೆರವು, ಸಹಕಾರಬೇಕಾಗುತ್ತದೆ, ಶಿಬಿರ ನಡೆಯುವುದು ಇನ್ನೂ ಒಂದೆರಡು ತಿಂಗಳುಗಳಿದೆ ಎನ್ನುವಾಗಲೇ ಶಿಬಿರದ ವ್ಯವಸ್ಥೆಯ ಕಾರ್ಯ ಆರಂಭವಾಗಬೇಕಾಗುತ್ತದೆ. ಅದರಲ್ಲೂ ಸಮಾಜಕಲ್ಯಾಣ ಕೇಂದ್ರದ ಅರ್ಥಿಗಳನ್ನೂ ಶಿಬಿರಕ್ಕೆ ಕರೆದೊಯ್ಯುವ ಕಾರ್ಯಕ್ರಮವನ್ನಿರಿಸಿ ಕೊಂಡವರಂತೂ ಮೈತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದಲ್ಲದೆ ಸಮಗ್ರ ಯೋಜನೆಯನ್ನು ಬಹು ಮೊದಲೇ ಸಿದ್ಧಗೊಳಿಸಿ, ಅದರ ಅನುಷ್ಠಾನದಲ್ಲಿ ಒದಗಬಹುದಾದ ಎಡರು-ತೊಡರುಗಳನ್ನು ಮುಂದಾಲೋಚನೆಯಿಂದ ಊಹಿಸಿ, ಅವುಗಳ ಪರಿಹಾರಕ್ಕೆ ಸೂಕ್ತವಾದ ಉಪಾಯಗಳನ್ನು ನಿಯೋಜಿಸಿಕೊಳ್ಳಬೇಕಾಗುತ್ತದೆ. ಈ ವರ್ಷದ ಶಿಬಿರವನ್ನು ಎಲ್ಲಿ ನಡೆಸಬೇಕು, ಎಂದು ಆಲೋಚಿಸಿದಾಗ ಸಲಕಿನಕೊಪ್ಪವು ಮನದ ಇದಿರು ನಿಂತಿತು. ಸಾರ್ಥಕ ಕೆಲಸ ಮಾಡಬೇಕಾದರೆ ಒಂದು ಹಳ್ಳಿಯಲ್ಲಿ ಧ್ವಜ ಊರಿದರೆ, ಒಳ್ಳೆಯದೆನ್ನಿಸಿತು. ಒಂದೊಂದು ಹಳ್ಳಿಯಲ್ಲಿ ಒಂದೊಂದು ಕೆಲಸ ತೆಗೆದುಕೊಂಡು ಅರೆಕೊರೆಯಾಗಿ ಕಾರ್ಯ ಮಾಡುವುದಕ್ಕಿಂತ ಇದು ಒಳಿತು, ಎನ್ನಿಸಿತು. ಯಾಕೆಂದರೆ, ಒಂದಾದ ನಂತರ ಒಂದು ಕೆಲಸ ಹಮ್ಮಿಕೊಂಡು, ಸತತವಾದ ಸಂಪರ್ಕವನ್ನಿರಿಸಿಕೊಂಡರೆ ಹಳ್ಳಿಗರಲ್ಲಿ ತಮ್ಮ ಬಗ್ಗೆ ವಿಶ್ವಾಸ ಮೂಡಿ, ಅಭಿವೃದ್ಧಿಯ ಹಾದಿಯತ್ತ ನಡೆಯುತ್ತಾರೆ, ಎನ್ನುವ ವಿಶ್ವಾಸ. ಈ ಕಾರಣದಿಂದಲೇ ಈಗಾಗಲೇ ಅನುನಯಸಂಬಂಧವನ್ನು (Rapport) ಸ್ಥಾಪಿಸಿ ಬೆಳೆಸಿ, ಕೆಲವು ಕೆಲಸಗಳನ್ನು ಮಾಡಿದ್ದುದರಿಂದ ಸಂಚಿತ ಪರಿಣಾಮವನ್ನು (Cumulative Effect) ಅಲ್ಲಿ ಕಾಣಬಹುದೆಂದು ಸಲಕಿನಕೊಪ್ಪವನ್ನು ಆರಿಸಿಕೊಳ್ಳಲಾಯಿತು. ಸಮಾಜಸೇವಾ ಶಿಬಿರವನ್ನು ನಡೆಸಬೇಕಾದರೆ ಆ ಮೊದಲೇ ಹಳ್ಳಿಯ ಪರಿಚಯ, ಸಾಧ್ಯವಾದರೆ ಹೆಚ್ಚಿನ ಸಂಬಂಧ ಇರಬೇಕಾಗುತ್ತದೆ. ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ವರ್ಗದವರಿಗೇನೊ ಸಲಕಿನಕೊಪ್ಪದೊಡನೆ ಆ ಊರಿನ ಪರಿಚಯವಿರಲಿಲ್ಲ. ಆದುದರಿಂದ ಆ ಊರನ್ನು ಕ್ಷೇತ್ರಕಾರ್ಯಕ್ಕೆ ಮೊದಲು ಆರಿಸಿಕೊಂಡಿರದಿದ್ದರೂ ಆನಂತರ ಆರಿಸಿಕೊಳ್ಳಲಾಯಿತು. ಕ್ಷೇತ್ರಕಾರ್ಯಕ್ಕಾಗಿ, ಮುಂದಾಗುವ ಯಶಸ್ವೀ ಶಿಬಿರದ ಸೂಚನೆಯೋ ಎಂಬಂತೆ, ಮಾನಸಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿದ್ದುಕೊಂಡು ಸಮಾಜಕಾರ್ಯದ ಸ್ನಾತಕೋತ್ತರ ಪದವಿಯನ್ನು ಪಡೆಯುವ ಬಂದಾತನನ್ನು ಸಲಕಿನಕೊಪ್ಪಕ್ಕೆ ಕಳಿಸಲಾಯಿತು. ಶಿಬಿರವನ್ನು ನಡೆಸುವ ಯೋಜನೆ ಇದ್ದಿತಾದರೂ, ಮನೋ ಚಿಕಿತ್ಸಾರ್ಥಿಗಳನ್ನು ಕರೆದುಕೊಂಡು ಬರುವ ಆಲೋಚನೆಯೇನೂ ಇರಲಿಲ್ಲ. ಮನೋಚಿಕಿತ್ಸಾರ್ಥಿಗಳನ್ನು ಬೇರೆಯವರ ಬದಲು ಕರೆದುಕೊಂಡು ಹೋಗಬೇಕಾಯಿತು. ಸಮಾಜಸೇವಾ ಶಿಬಿರವು ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೇ ಸೀಮಿತವಾದದ್ದು. ಆದರೆ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಹುಬ್ಬಳ್ಳಿ-ಧಾರವಾಡ ನಗರದಲ್ಲಿನ ಯಾವುದಾದರೂ ಕಲ್ಯಾಣ ಕೇಂದ್ರದ ಅರ್ಥಿಗಳನ್ನು ಶಿಬಿರಕ್ಕೆ ಯಾಕೆ ಕರೆದೊಯ್ಯಬಾರದು? ಎಂಬ ಆಲೋಚನೆ ಒಂದು ವರ್ಷದಿಂದಲೂ ಕಾಡುತ್ತಿತ್ತು. ಹುಬ್ಬಳ್ಳಿಯಲ್ಲಿರುವ ಸರಕಾರೀ ಪಾಶ್ಚಾದ್ಯೋಗ ಕ್ಷೇಮ ಕೇಂದ್ರ (ಸ್ಟೇಟ್ ಹೋಂ ಫಾರ್ ಮೆನ್) ಮನದೆದುರು ಸುಳಿಯಿತು. ಆ ಕೇಂದ್ರಕ್ಕೆ ಒಂದು ಸ್ಥಳೀಯ ವ್ಯವಸ್ಥಾಪಕ ಮಂಡಲಿಯಿದೆ. ಅದರ ಸದಸ್ಯನಾಗಿರುವ ಅವಕಾಶ ನನಗೆ ಇದೆ. ಹಿಂದಿನ ವರ್ಷ ವ್ಯವಸ್ಥಾಪಕ ಮಂಡಲಿಯ ಸಭೆ ಸೇರಿದಾಗ ಅರ್ಥಿಗಳು ಯಾವುದಾದರೂ ದೈಹಿಕ ಶ್ರಮಕಾರ್ಯದ ಉದ್ಯೋಗವನ್ನು ದೊರಕಿಸಿಕೊಟ್ಟರೆ ಸ್ವೀಕರಿಸುವುದಿಲ್ಲ. ರೈಲ್ವೆಯವರು ಹಲವರನ್ನು ತೆಗೆದುಕೊಳ್ಳಲು ಸಾಧ್ಯವಿದೆ, ಏನು ಮಾಡುವುದು ಎಂಬ ಸಮಸ್ಯೆ ಸಭೆಯ ಮುಂದೆ ಬಂದಿತು. ಅರ್ಥಿಗಳು ಸಮುದಾಯದಲ್ಲಿ ಇನ್ನೂ ಒಂದಾಗಿಲ್ಲ. ಹೊಂದಿಕೊಂಡು ಜೀವಿಸುವುದು ಕಷ್ಟ, ಶ್ರಮ ಜೀವನದ ಪರಿಚಯ ಅವರಿಗೆ ಸಾಕಷ್ಟಿರುವುದಿಲ್ಲ. ಆದುದರಿಂದ ಅವರನ್ನು ಹಳ್ಳಿಯೊಂದರಲ್ಲಿ ಶಿಬಿರಾರ್ಥಿಗಳನ್ನಾಗಿ ಮಾಡಿ ದೈಹಿಕ ಶ್ರಮ, ಮನೋರಂಜನೆ, ಬುದ್ಧಿ ವಿಕಾಸ ಕಾರ್ಯಕ್ರಮಗಳ ಮೂಲಕ ಜೀವನದ ನೈಜಸ್ಥಿತಿಯನ್ನೂ, ಕೆಲಸ ಮಾಡುವುದರಿಂದ ದೊರೆಯುವ ತೃಪ್ತಿಯ ಪರಿಚಯವನ್ನೂ ಅವರಿಗೆ ಮಾಡಿಸಿ ಕೊಡಬಹುದೆಂಬ ಸಲಹೆಯನ್ನು ನಾನು ಮಂಡಿಸಿದೆ. ಈ ಸಲಹೆಯನ್ನು ಮಂಡಲಿಯ ತಾತ್ತ್ವಿಕವಾಗಿ ಒಪ್ಪಿಕೊಂಡರೂ, ಇಂತಹ ಶಿಬಿರವನ್ನು ನಡೆಸುವವರಾರು? ಎಂಬ ಪ್ರಶ್ನೆ ಎದ್ದಿತು. ಆಗ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದವರು ಈ ಕಾರ್ಯ ಕೈಗೊಳ್ಳಬಹುದು ಎಂದು ನಾನು ಪರಿಹಾರ ಸಲಹೆಯನ್ನು ಸೂಚಿಸಿದೆ. ಇದು ಮಂಡಲಿಗೆ ಒಪ್ಪಿಗೆಯಾಯಿತು. ಕೇಂದ್ರದಲ್ಲಿ ಹುಡುಗರಿಗೆ ಖರ್ಚು ಮಾಡುವ ಆಹಾರ ಪದಾರ್ಥಗಳನ್ನು ಶಿಬಿರಕ್ಕೆ ತೆಗೆದುಕೊಂಡು ಹೋಗಬಹುದು ಎಂಬ ನಿರ್ಣಯವನ್ನೂ ಸ್ವೀಕರಿಸಲಾಯಿತು. ಆದರೆ ಹುಬ್ಬಳ್ಳಿಯಿಂದ ಶಿಬಿರ ನಡೆಯುವ ಸ್ಥಳಕ್ಕೆ ಅವರನ್ನು ಸಾಗಿಸುವ ಖರ್ಚನ್ನು ಭರಿಸುವುದು ಹೇಗೆ ಎಂಬ ಪ್ರಶ್ನೆ ಹಾಗೆಯೇ ಉಳಿಯಿತು. ಏನಾದರೂ ಮಾಡಿದರಾಯಿತು, ಎಂದುಕೊಳ್ಳಲಾಯಿತು. JOIN OUR ONLINE GROUPS
ಈ ವರ್ಷದ ವಿದ್ಯಾರ್ಥಿ ಶಿಬಿರದ ಜೊತೆಗೆ ಆ ಕ್ಷೇಮ ಕೇಂದ್ರದ ಹುಡುಗರನ್ನು ಕರೆದೊಯ್ಯುವ ನಿರ್ಣಯವನ್ನು ಕೈಕೊಳ್ಳಲಾಯಿತು. ವ್ಯವಸ್ಥಾಪಕ ಮಂಡಳಿಯ ಅಧಿಕಾರ ವ್ಯಾಪ್ತಿಗೆ ಬರುತ್ತದೆಂಬ ನಿಯಮವಿದ್ದುದರಿಂದ ಇಪ್ಪತ್ತೈದು ರೂಪಾಯಿಗಳನ್ನು ಹುಡುಗರನ್ನು ಕರೆದುಕೊಂಡು ಹೋಗಿ ಹಿಂದಿರುಗಿಸಲು ಉಪಯೋಗಿಸಬಹುದೆಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಶಿಬಿರ ನಡೆಯಲು ಇನ್ನೊಂದು ತಿಂಗಳಿರಲಿಲ್ಲ. ಆಗ ಹುಡುಗರ ಆಯ್ಕೆಯನ್ನು ಮಾಡಬೇಕೆಂದು ಕೇಂದ್ರ ಮುಖ್ಯಾಧಿಕಾರಿಯನ್ನು ವಿನಂತಿಸಿಕೊಳ್ಳಲಾಯಿತು. ಆ ಅಧಿಕಾರಿಗೂ ಇಂಥದೊಂದು ಶಿಬಿರ ನಡೆಯುವುದು ಒಳ್ಳೆಯದೆಂಬ ಉತ್ಸಾಹ.
ಆ ಕ್ಷೇಮ ಕೇಂದ್ರವೂ ಸಮಾಜಕಾರ್ಯ ವಿದ್ಯಾರ್ಥಿಗಳು ಕ್ಷೇತ್ರಕಾರ್ಯ ಮಾಡುವ ಕೇಂದ್ರವಾಗಿದೆ. ಕ್ಷೇತ್ರಕಾರ್ಯಕ್ಕೆ ಹೋಗುವಾತ ಪ್ರಥಮ ವರ್ಷ ವಿದ್ಯಾರ್ಥಿಯಾದುದರಿಂದ ಪ್ರಾಧ್ಯಾಪಕ-ತನಿಖೆಯಧಿಕಾರಿಯ ಮತ್ತು ಕೇಂದ್ರದ ಮುಖ್ಯಾಧಿಕಾರಿಯ ನೆರವಿನಿಂದ ಆತನು ಹತ್ತು ಹುಡುಗರನ್ನು ಆಯ್ದುಕೊಳ್ಳುವ ಅಗತ್ಯವನ್ನು ಸೂಚಿಸಲಾಯಿತು. ಆ ಮೂವರೂ ಸೇರಿ ಶಿಬಿರಕ್ಕೆ ಸೂಕ್ತರಾದರವರನ್ನು ಆಯ್ದುಕೊಂಡರೂ ಕೂಡ. ಶಿಬಿರಕ್ಕಾಗಿ ಹೊರಡುವ ದಿನ ಹತ್ತಿರ ಬಂದಿತು. ಆದರೆ ಸಿಡಿಲೆರಗಿದಂಥ ಸುದ್ದಿ ಬಂದಿತು: ಹತ್ತು ದಿನಕ್ಕಾಗುವ ಜೋಳವನ್ನು ಮಾತ್ರವೇ ಕೊಡಲು ಸಾಧ್ಯವೆಂದೂ, ಅಕ್ಕಿ ಬೇಳೆ ಇಲ್ಲವೆಂದೂ, ಕಾಯಿಪಲ್ಲೆ ಹಾಗೂ ಹಾಲಿಗೆ ಬೇಕಾದ ಹಣವನ್ನು ಕೊಡಲು ಸಾಧ್ಯವಿಲ್ಲವೆಂದೂ ಮುಖ್ಯಾಧಿಕಾರಿಯಿಂದ ತಿಳಿದುಬಂದಿತು. ಹತ್ತು ಹುಡುಗರ ಊಟಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಕೊಡಲು ಸರಕಾರೀ ನಿಯಮವಿಲ್ಲ, ಹೊರಗೆ ಹೋದವರಿಗೊಂದು, ಕೇಂದ್ರದಲ್ಲಿಯೇ ಇರುವವರಿಗೆ ಇನ್ನೊಂದು ಲೆಕ್ಕವನ್ನು ಇಡಲು ಬರುವುದಿಲ್ಲ, ಕಾಯಿಪಲ್ಯೆ ಹಾಗೂ ಹಾಲನ್ನು ಪ್ರತಿ ದಿನವೂ ತೆಗೆದುಕೊಳ್ಳಬೇಕಾಗುತ್ತದಾದುರಿಂದ ಹತ್ತು ದಿನ ಮೊದಲಿಗೇ ಹಣವನ್ನು ಕೊಡಲು ಸಾಧ್ಯವಿಲ್ಲ, ಅದು ನಿಯಮಕ್ಕೆ ವಿರುದ್ಧವಾದುದು. ಹೀಗೆಂದು ತಿಳಿಯಿತು. ಬರಿಯ ಜೋಳದಿಂದ ಕೆಲಸವಾಗದು, ಹತ್ತು ದಿನಕ್ಕೆ ಹತ್ತು ಹುಡುಗರಿಗೆ (ಅವರೆಲ್ಲಾ ತರುಣರೇ) ಸಾಕಾಗುವ ಇತರ ಆಹಾರ ಸಾಮಗ್ರಿಗಳಿಗೆ ಬೇಕಾಗುವ ಹಣವನ್ನು ಒದಗಿಸುವುದೂ ಸಾಧ್ಯವಿಲ್ಲ, ಆದುದರಿಂದ ವಿದ್ಯಾರ್ಥಿಗಳನ್ನಷ್ಟೇ ಕರೆದುಕೊಂಡು ಹೋಗುವುದೆಂದೂ ನಿರ್ಧರಿಸಲಾಯಿತು. ಮನಸ್ಸಿಗೆ ಬೇಸರವೇನೊ ಆಯಿತು. ಸಮಾಜಕಾರ್ಯದಲ್ಲಿ ನವೀನ ಪ್ರಯೋಗವನ್ನು ನಡೆಸುವ ಆಕಾಂಕ್ಷೆಗೆ ತಣ್ಣೀರು ಎರಚಿದಂತೆ ಆಯಿತು. ಆದರೆ ಕತ್ತಲೆಯಲ್ಲಿಯೂ ಮಿಂಚು ಹೊಳೆಯಿತು. ಮಾನಸಿಕ ಆರೋಗ್ಯ ಕೇಂದ್ರವೂ ಕ್ಷೇತ್ರಕಾರ್ಯ ಕೇಂದ್ರ, ಅದರಲ್ಲಿನ ಚಿಕಿತ್ಸಾರ್ಥಿಗಳನ್ನು ಕರೆದುಕೊಂಡು ಹೋದರೆ ಹೇಗೆ? ಈ ಆಲೋಚನೆ ಹೊಳೆಯುತ್ತಿದ್ದಂತೆಯೇ ಸಲಕಿನಕೊಪ್ಪಕ್ಕೆ ಕ್ಷೇತ್ರಕಾರ್ಯಕ್ಕೆ ಹೋಗುತ್ತಿದ್ದ ವಿದ್ಯಾರ್ಥಿ ಆನಂದಶೆಟ್ಟಿಯೂ ಆ ಪ್ರಸ್ತಾಪವೆತ್ತಿದರು. ವಿಚಾರಿಸಿ ತಿಳಿಸಲು ಹೇಳಲಾಯಿತು. ಆರೋಗ್ಯ ಕೇಂದ್ರದ ಮುಖ್ಯಸ್ಥರನ್ನು ಕಂಡುಬರಬೇಕೆಂದು ತೀರ್ಮಾನಿಸಲಾಯಿತು. ಅಕ್ಟೋಬರ್ 11ನೆಯ ಸೋಮವಾರ ಮಾನಸಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆಯನ್ನೂ, ಕಾರ್ಯದರ್ಶಿಯನ್ನೂ ಕಂಡು ಮಾತನಾಡಲಾಯಿತು. ಹೊಸ ಪ್ರಯೋಗ, ಮನೋರೋಗಿಗಳನ್ನು ಸ್ವಚ್ಛಂದ ವಾತಾವರಣಕ್ಕೆ ಕರೆದೊಯ್ದು ದಿನಗಟ್ಟಲೆ ಆಸ್ಪತ್ರೆಯ ಹೊರಗಡೆಯೇ ಇರಿಸಿಕೊಂಡರೆ ಹೇಗೆ? ಏನಾದರೂ ಕಹಿ ಪ್ರಸಂಗ ಉಂಟಾಗಲಿಕ್ಕಿಲ್ಲವೆನ್ನಲು ಭರವಸೆಯೇನು? ಇದರ ಹೊಣೆ ಹೊರುವವರಾರು? ಮೇಲಾಗಿ ರೋಗಿಗಳ ಆಹಾರದ ಖರ್ಚನ್ನು ಭರಿಸುವುದು ಹೇಗೆ? ಇಂಥವೇ ಜಟಿಲ ಪ್ರಶ್ನೆಗಳಿದ್ದವು. ಬೆಳಿಗ್ಗೆ ಕರೆದೊಯ್ದು ಸಂಜೆ ಅವರನ್ನು ಹಿಂದಿರುಗಿಸಿದರೆ ಒಳಿತು, ಎಂಬ ಸಲಹೆಯೂ ಬಂದಿತು. ಆದರೆ ಒಮ್ಮೆ ಸಾಮಾನು ಹಾಗೂ ವಿದ್ಯಾಥರ್ಿಗಳನ್ನು ಸಾಗಿಸುವುದೇ ಕಷ್ಟವಾಗಿರುವಾಗ ಹತ್ತು ದಿನವೂ ಸಾರಿಗೆಯ ವ್ಯವಸ್ಥೆಮಾಡುವುದು ಅಸಾಧ್ಯದ ಮಾತೇ ಸರಿ. ಅದೂ ಅಲ್ಲದೆ ದಿನಗಳೂ-ಹಗಲೂ, ಇರುಳೂ-ಜೊತೆಗೆ ಜೀವಿಸಬೇಕಾದಂಥ ಪರಿಸ್ಥಿತಿಯನ್ನು ನಾವು ನಿರ್ಮಿಸಿಕೊಳ್ಳುತ್ತಿರುವಾಗ ಇದು ಸರಿಯಾಗಲಾರದು. ಹತ್ತು ದನವೂ ನಿರಂತರವಾಗಿ ಹಳ್ಳಿಯ ಶಿಬಿರದಲ್ಲಿಯೇ ಇರಲೆಂದು ಒಪ್ಪಿಕೊಳ್ಳೋಣ. ಆದರೆ ಅವರಿಗೆ ಬೇಕಾದ ಆಹಾರ ಸಾಮಗ್ರಿಗಳ ಸರಬರಾಜು ಹೇಗೆ? ಎಂಬ ಪ್ರಶ್ನೆ ಬಂದಿತು. ಅವರಿಗೆ ಬೇಕಾದ ಸೀದಾವನ್ನು (Ration) ಕೊಡಬಹುದು. ಆದರೆ ಜನತಾ ಬಜಾರಿನಿಂದ ದಿನ ದಿನವೂ ಕೊನೆಗೆ ಎರಡು ದಿನಕ್ಕೊಮ್ಮೆಯಾದರೂ ಬೇಳೆ, ಹಿಟ್ಟು ಮುಂತಾದುವನ್ನು ತಂದು ರೋಗಿಗಳಿಗಾಗುವಷ್ಟು ಮೊದಲೇ ಕೊಡಬಹುದು. ಇಂಥ ಸಮಸ್ಯೆಗೆ ನಾನೊಂದು ಪರಿಹಾರ ಸೂಚಿಸಿದೆ. ಪ್ರತಿದಿನವೂ ನಮ್ಮಲ್ಲೊಬ್ಬರು ಬಂದು ಆ ದಿನದ ಸೀದಾವನ್ನು ತೆಗೆದುಕೊಂಡು ಹೋಗುತ್ತೇವೆ ಎಂದು. ಇದು ಒಪ್ಪಿಗೆಯಾಯಿತು. ಆಗ ದೊಡ್ಡದೊಂದು ಹಗುರಾದ ಉಸಿರನ್ನು ಬಿಟ್ಟೆವು. ಮರು ದಿನವೇ ಸಲಕಿನಕೊಪ್ಪಕ್ಕೆ ಪಯಣ ಬೆಳೆಯಿಸಬೇಕು. ಆಸ್ಪತ್ರೆಯ ಸಿಬ್ಬಂದಿಯವರ ನೆರವಿನಿಂದ ಆನಂದಶೆಟ್ಟಿ ಹತ್ತು ಜನರನ್ನು ಆಯ್ದುಕೊಂಡರು. ಅವರ ಆರೋಗ್ಯದ ಪರಿಸ್ಥಿತಿಯನ್ನು ಪರೀಕ್ಷಿಸಿದರು, ತೂಕವನ್ನು ಮಾಡಿಸಿದರು, ಅವರ ಹಾಸುಗೆ ಇತ್ಯಾದಿಗಳೊಡನೆ ಸಿದ್ಧವಾಗಲು ತೊಡಗಿದರು. ಯೋಜನೆ ಹಾಗೂ ಕ್ರಿಯಾತ್ಮಕ ಗುಂಪುಗಳು ಸಮಾಜಕಾರ್ಯದ ವಿದ್ಯಾರ್ಥಿಗಳು ಕೇವಲ ಹತ್ತು ಜನ. ಆದರೆ ಹತ್ತು ದಿನದ ಶಿಬಿರಕ್ಕಾಗಿ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕಲ್ಲವೇ? ವ್ಯವಸ್ಥೆಯೆಂದರೆ, ಹತ್ತು ದಿನ ಶಿಬಿರದಲ್ಲಿ ಏನೇನು ಕಾರ್ಯಕ್ರಮಗಳನ್ನು ಇರಿಸಿಕೊಳ್ಳಬೇಕು, ಯಾವ್ಯಾವ ಸಾಮಗ್ರಿಗಳನ್ನು ಸಂಗ್ರಹಿಸಬೇಕು, ಯಾವುದಕ್ಕೆ ಎಷ್ಟು ಹಣ ಬೇಕಾಗುತ್ತದೆ, ಯಾರ್ಯಾರು ಯಾವ್ಯಾವ ಕಾರ್ಯವನ್ನು ಎಷ್ಟು ಸಮಯದೊಳಗೆ ನಿರ್ವಹಿಸಬೇಕು? ಎಂಬಿತ್ಯಾದಿ ಮಾರ್ಗದರ್ಶಿ ಪ್ರಶ್ನೆಗಳನ್ನಿರಿಸಿಕೊಂಡು ಕಾರ್ಯಪ್ರವೃತ್ತರಾದರು ವಿದ್ಯಾರ್ಥಿಗಳು. ಶ್ರಮಕಾರ್ಯವಾವುದನ್ನು ತೆಗೆದುಕೊಳ್ಳಬೇಕು ಎಂಬುದೊಂದು ಸಮಸ್ಯೆ. ಕ್ಷೇತ್ರಕಾರ್ಯಕ್ಕಾಗಿ ಹೋಗುವ ವಿದ್ಯಾರ್ಥಿಯು ಹಳ್ಳಿಯ ಸಮಸ್ಯೆ, ಸಂಪನ್ಮೂಲಗಳ ಪರಿಚಯವನ್ನು ಮಾಡಿಕೊಳ್ಳುವಾಗಲೇ ಹಳ್ಳಿಗರ ಅಭಿಮತದಲ್ಲಿ ಯಾವುದು ಅತ್ಯಂತ ಮುಖ್ಯವಾದ ಕಾರ್ಯವೆಂಬುದನ್ನೂ, ಅದು ಸಾಧ್ಯವಾಗದಿದ್ದರೆ ಎರಡು, ಮೂರನೆಯ ಮಹತ್ವದ ಕಾರ್ಯಗಳನ್ನೂ ತಿಳಿದುಕೊಂಡು ಇತರ ವಿದ್ಯಾರ್ಥಿಗಳೊಡನೆಯೂ, ನಿರ್ದೇಶಕನೊಡನೆಯೂ ಚರ್ಚಿಸಬೇಕಾಗುತ್ತದೆ. ಆ ಕಾರ್ಯಗಳ ಆಗುಹೋಗುಗಳನ್ನು ಮುನ್ನವೇ ಪರಾಂಬರಿಸಬೇಕಾಗುತ್ತದೆ. ಒಂದೆರಡು ಸಲವಾದರೂ ಎಲ್ಲ ವಿದ್ಯಾರ್ಥಿಗಳೂ ಶಿಬಿರದ ಸ್ಥಳವನ್ನು ನೋಡಿರಬೇಕಾಗುತ್ತದೆ. ಆದರೆ ಸಲಕಿನಕೊಪ್ಪದೊಡನಿದ್ದ ಸಂಪರ್ಕದ ಕಾರಣದಿಂದ ಕೆರೆಯ ಏರಿಯ ಇಬ್ಬದಿಯಲ್ಲಿಯೂ ಇರುವ ತಗ್ಗನ್ನು ಕೊಳವೆಗಳನ್ನು ಹಾಕಿ ಅಡಿಗಾಲುವೆ (Culvert) ಗಳನ್ನು ನಿರ್ಮಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡುವುದು ಅತ್ಯಂತ ಮುಖ್ಯ ಕಾಯವೆಂಬುದನ್ನು ಕಂಡುಕೊಂಡಿದ್ದೆವು. ರಸ್ತೆಯ ಕೆಲಸ ತಾಲ್ಲೂಕು ಅಭಿವೃದ್ಧಿ ಮಂಡಳಿಯದು. ಆದರೆ ಆ ಕೆರೆಯ ಏರಿಯೋ ಲೋಕೋಪಯೋಗಿ ಶಾಖೆಗೆ ಸೇರುತ್ತದೆ. ಹೀಗಾಗಿ ಒಂದು ಸಮಸ್ಯೆ ಎದ್ದಿತು. ಆದರೂ ಕೆರೆ ಏರಿಯ ದುರಸ್ತಿಯನ್ನು ಲೋಕೋಪಕಯೋಗಿಯವರು ಕೈಕೊಳ್ಳಬೇಕೆಂದು ಅವರನ್ನು ಕಂಡು ಮನವೊಲಿಸಲಾಯಿತು. ಆ ಕೆಲಸಕ್ಕೆ ಆಗುವ ಹಣವನ್ನು ಮಂಜೂರು ಮಾಡಿದರೆ ಶ್ರಮದಾನದಿಂದ ಕಾರ್ಯವನ್ನು ಮಾಡಿ ಊರ ಅಭೀವೃದ್ಧಿಗಾಗಿ ಹಣವನ್ನು ಉಳಿಸುವ ಹಂಚಿಕೆಯನ್ನು ಹಾಕಲಾಯಿತು. ನಿಯಮಕ್ಕೆ ತಕ್ಕಂತೆ ಪಂಚಾಯಿತಿಯ ಬೇಡಿಕೆಯ ನಿರ್ಣಯವನ್ನು ಲೋಕೋಪಯೋಗಿ ಕಚೇರಿಗೆ ಕಳಿಸಲಾಯಿತು. ಆದರೆ ಕಾರಣಾಂತರಗಳಿಂದ ಶಿಬಿರ ಆರಂಭವಾದರೂ ಲೋಕೋಪಯೋಗಿಯವರಿಂದ ಆ ಕೆಲಸಕ್ಕೆ ಮಂಜೂರಾತಿ ಬರಲಿಲ್ಲ. ಮುಂದಿನ ಶಿಬಿರದ ಹೊತ್ತಿಗೆ ಮಂಜೂರಾತಿ ಪಡೆಯುವ ನಿರ್ಧಾರವನ್ನು ಕೈಕೊಂಡು ಏರಿಯ ಉತ್ತರದ ಕೊನೆಯಿಂದ ಊರ ಮುಖ್ಯರಸ್ತೆಯ ಇಬ್ಬದಿಯ ಚರಂಡಿಗಳನ್ನು ಅಗೆದು ಅದೇ ಮಣ್ಣನ್ನು ಹರಡಿ ರಸ್ತೆಯನ್ನು ಸರಿಮಾಡುವುದು ಎಂಬ ನಿರ್ಣಯವನ್ನು ತೀರಾ ಕೊನೆಗೆ ಕೈಕೊಳ್ಳಲಾಯಿತು. ಈ ಕಾರ್ಯವು ಗ್ರಾಮದವರ ಅಭಿಪ್ರಾಯದಲ್ಲಿ ಎರಡನೆಯ ಮಹತ್ವದ ಕೆಲಸವಾಗಿತ್ತು. ಯಾಕೆಂದರೆ ಗುಡ್ಡದ ನೀರೆಲ್ಲಾ ಹರಿದು ರಸ್ತೆಯ ನಡುವೆ ಕೊರಕಲನ್ನು ಮಾಡಿತ್ತು. ಚರಂಡಿಗಳು ದುರಸ್ತುಗೊಂಡರೆ, ನೀರು ಹಾದಿಯನ್ನು ಹಾಳುಮಾಡದೆ ಹಾದಿಯನ್ನು ಹಿಡಿದು ಹರಿದು ಕೆರೆಯನ್ನು ಸೇರುತ್ತದೆ ಎಂಬುದು ಅವರ ಅಭಿಪ್ರಾಯವಿತ್ತು. ಈ ಕೆಲಸಕ್ಕೆ ಹಣದ ಆವಶ್ಯಕತೆಯೇನೂ ಇರಲಿಲ್ಲ. ವಿಶ್ವವಿದ್ಯಾಲಯದವರು ಗುದ್ದಲಿ, ಸಲಿಕೆ, ಪುಟ್ಟಿಗಳನ್ನು ಒದಗಿಸುತ್ತಾರೆ. ಆದುದರಿಂದ ಕೆಲಸ ನಡೆಯಲು ತೊಂದರೆಯಿಲ್ಲವೆನ್ನಿಸಿತು. ಆದರೆ ಇಂಥ ಕೆಲಸವನ್ನು ಆರಿಸಿಕೊಳ್ಳುವಲ್ಲಿ ಶಿಬಿರಾರ್ಥಿಗಳೂ, ಊರವರೂ ಸಮಾಲೋಚನೆಯನ್ನು ನಡೆಸುವುದು ಅತ್ಯಗತ್ಯವಾಗಿತ್ತು. ಅಂಥ ಔಪಚಾರಿಕ ಸಭೆಯಾಗಲಿಲ್ಲವೆಂಬುದೊಂದು ಲೋಪವೇ. ಹತ್ತು ವಿದ್ಯಾರ್ಥಿಗಳಲ್ಲಿ ಒಬ್ಬಾತನನ್ನು ಕಾರ್ಯದರ್ಶಿಯನ್ನಾಗಿ ಆರಿಸಲಾಯಿತು. ಆತನು ಎಲ್ಲ ಸಮಿತಿಗಳ ಸಾಮಾನ್ಯ ಸದಸ್ಯನಾಗಿರತಕ್ಕುದೆಂದು ತೀರ್ಮಾನಿಸಲಾಯಿತು. ಉಳಿದ ಒಂಬತ್ತು ವಿದ್ಯಾರ್ಥಿಗಳು ನಾಯಕರಾಗುವಂತೆ ಆರ್ಥಿಕ, ಅಡುಗೆ, ಸಾರಿಗೆ, ಆರೋಗ್ಯ, ದೈಹಿಕಶ್ರಮ (ರಸ್ತೆ ರಿಪೇರಿ), ವಸತಿ, ಚರ್ಚಾಗೋಷ್ಠಿ, ಸಾರ್ವಜನಿಕ ಸಂಪರ್ಕ, ಮನೋರಂಜನೆ ಹೀಗೆ ಒಂಬತ್ತು ಯೋಜನಾ ಗುಂಪುಗಳನ್ನು ಸೃಷ್ಟಿಸಲಾಯಿತು. ಒಂದೊಂದು ಗುಂಪಿನಲ್ಲೂ ಸಾಮಾನ್ಯವಾಗಿ ಇಬ್ಬರು ಸದಸ್ಯರೂ ಒಬ್ಬ ನಾಯಕರೂ ಇರುವಂತೆ ಏರ್ಪಡಿಸಲಾಯಿತು. ಎಲ್ಲ ಗುಂಪುಗಳ ನಾಯಕರೂ, ಕಾರ್ಯದರ್ಶಿಯೂ, ನಿರ್ದೇಶಕನೂ ಸೇರಿದಂತೆ ಸಂಯೋಜನಾ ಸಮಿತಿಯನ್ನು ನಿಯಮಿಸಲಾಯಿತು. ಶಿಬಿರವನ್ನು ಮೊದಲಿನಿಂದಲೂ ವೀಕ್ಷಿಸಿ ವಸ್ತುನಿಷ್ಠ ಮೌಲ್ಯಮಾಪನೆಯನ್ನು ಮಾಡಲು ಐವರು ವಿದ್ಯಾರ್ಥಿಗಳ ಸಮಿತಿಯನ್ನು ನಿಯಮಿಸಲಾಯಿತು. ಈ ಗುಂಪುಗಳು ಆಗಾಗ ಕೂಡಿ, ಚರ್ಚಿಸಿ, ಹಣ ಹಾಗೂ ವಸ್ತುಗಳನ್ನು ಸಂಗ್ರಹಿಸಬೇಕೆಂದೂ, ಸಮಯವನ್ನು ಫಲದಾಯಕವಾಗಿ ಉಪಯೋಗಿಸುವ ಉದ್ದೇಶದಿಂದ ಸೂಕ್ತ ಕಾರ್ಯಕ್ರಮ ಪಟ್ಟಿಯನ್ನು ಸಿದ್ಧಗೊಳಿಸಬೇಕೆಂದೂ ನಿರ್ದೇಶನವನ್ನು ನೀಡಲಾಯಿತು. ಈ ಎಲ್ಲಾ ಕಾರ್ಯಗಳನ್ನು ಪೂರೈಸಲು ಹದಿನೈದು ಇಪ್ಪತ್ತು ದಿನಗಳಷ್ಟು ಸಮಯವಿದ್ದರೂ ಅನೇಕ ಸಮಿತಿಗಳು ತಂತಮ್ಮ ಯೋಜನೆಗಳನ್ನು ಪೂರ್ಣ ಸಿದ್ಧಗೊಳಿಸಿದ್ದುದು ಶಿಬಿರ ಇನ್ನೇನು ಎರಡು-ಮೂರು ದಿನಗಳಲ್ಲಿ ಆರಂಭವಾಗಲಿದೆ ಎನ್ನುವಾಗಲೇ. ಆದುದರಿಂದ ಎಲ್ಲರಲ್ಲಿಯೂ ಗಡಿಬಿಡಿಯಿತ್ತು, ಕೆಲವರಲ್ಲಿ ಅಧೈರ್ಯವಿತ್ತು. ಆದರೆ ಸಮಾಜಕಾರ್ಯದ ಎಲ್ಲ ಪ್ರಾಧ್ಯಾಪಕರೂ ವಿದ್ಯಾರ್ಥಿಗಳಿಗೆ ನೆರವನ್ನು ನೀಡಿದುದರಿಂದ ಯೋಜನೆಯು ಸಿದ್ಧವಾಯಿತು. ಆಹಾರ ಸಾಮಗ್ರಿಗಳನ್ನು ಕೊಳ್ಳಲಾಯಿತು. ಕೆಲಸಕ್ಕೆ ಬೇಕಾದ ಉಪಕರಣಗಳನ್ನು ಸಂಗ್ರಹಿಸಲಾಯಿತು. ಆರೋಗ್ಯ ಸಮಿತಿಯವರು ಸಲಕಿನಕೊಪ್ಪಕ್ಕೆ ಹೋಗಿ ಬೀಡು ಬಿಡುವ ಸ್ಥಳದ ಹತ್ತಿರ ಪಾಯಖಾನೆಯನ್ನು ನಿರ್ಮಿಸಿ ಬಂದರು. ವಾಹನವನ್ನು ಗೊತ್ತು ಮಾಡಲಾಯಿತು. ಯಾರ್ಯಾರು ಯಾವ್ಯಾವ ಸ್ಥಳದಿಂದ ಎಷ್ಟೆಷ್ಟು ಹೊತ್ತಿಗೆ ಹೋಗಬೇಕು ಎಂಬುದನ್ನು ನಿರ್ಧರಿಸಲಾಯಿತು. ಆದರೂ ವಾಹನವೊಂದರಲ್ಲಿ ಎಲ್ಲ ಸಾಮಾನುಗಳನ್ನೂ, ಎಲ್ಲ ಜನರನ್ನೂ ಸಾಗಿಸುವುದು ಅಸಾಧ್ಯವಾದುದರಿಂದ ಅನೇಕರು ಬಸ್ಸುಗಳಲ್ಲಿಯೇ ಶಿಬಿರದ ಸ್ಥಳಕ್ಕೆ ಪ್ರಯಾಣ ಮಾಡಬೇಕಾಯಿತು. ಶಿಬಿರ ಆರಂಭವಾದಂದಿನಿಂದ ಮುಗಿಯುವವರೆಗೂ ಕ್ರಿಯಾತ್ಮಕ ಗುಂಪುಗಳು ಕಾರ್ಯಶೀಲವಾಗಿದ್ದವು. ಈ ಗುಂಪುಗಳನ್ನು ಹಿಂದಿನ ರಾತ್ರಿ ನಿಯಮಿಸಲಾಗುತ್ತಿತ್ತು. ಒಂದೊಂದು ಕಾರ್ಯಕ್ಕೆ ಒಬ್ಬೊಬ್ಬ ನಾಯಕನಿರುತ್ತಿದ್ದ. ಕಾರ್ಯಕ್ಕೆ ತಕ್ಕಂತೆ ಗುಂಪಿನ ಸದಸ್ಯರ ಸಂಖ್ಯೆ ಇರುತ್ತಿತ್ತು. ಉದಾಹರಣೆಗೆ 5-30ಕ್ಕೆ ಏಳಿಸಲು ಒಬ್ಬಾತ, ಕವಾಯಿತು ಮಾಡಿಸುವಾತ ಒಬ್ಬ. ನೀರು ಸರಬರಾಜುಮಾಡುವ ಗುಂಪಿನ ಸಂಖ್ಯೆ ದೊಡ್ಡದು. ಆದ್ದರಿಂದ ಅದಕ್ಕೊಬ್ಬ ನಾಯಕನಿರುತ್ತಿದ್ದ. ಅಡುಗೆಯನ್ನು ಏರ್ಪಡಿಸುವವರದು ಮೂವರ ಗುಂಪು. ಇದಕ್ಕೆ ಒಬ್ಬ ನಾಯಕ. ಒಮ್ಮೊಮ್ಮೆ ಬೆಳಗಿನ ಉಪಾಹಾರಕ್ಕೆ ಒಬ್ಬಾತ ನಾಯಕನಾದರೆ, ಇನ್ನೊಬ್ಬ ಮಧ್ಯಾಹ್ನದ ಊಟಕ್ಕೆ, ಮಗದೊಬ್ಬ ರಾತ್ರಿಯ ಊಟಕ್ಕೆ. ಉಪನ್ಯಾಸವನ್ನೀಯಲಿರುವ ಅತಿಥಿಗಳನ್ನು ಧಾರವಾಡದಿಂದ ಕರೆದುತರಲು ಒಬ್ಬೊಬ್ಬರು ಒಂದೊಂದು ದಿನ ಹೋಗಿಬರುವಂತೆ ಏರ್ಪಾಟಾಯಿತು. ಆತನೇ ಬೇಕಾದ ಸಾಮಾನುಗಳನ್ನು ಪೇಟೆಯಿಂದ ತರಬೇಕಾಗುತ್ತಿತ್ತು. ಒಮ್ಮೆ ನಿರ್ದೇಶಕ ಹೋಗಿ ಬಂದುದುಂಟು. ಇನ್ನೊಮ್ಮೆ ಪ್ರಾಧ್ಯಾಪಕರೊಬ್ಬರು ಸ್ವಯಂಪ್ರೇರಿತವಾಗಿ ಮನೋರಂಜಕರನ್ನು ಕರೆದು ತಂದುದುಂಟು. ಯೋಜನಾ ಸಮಿತಿಗಳ, ಕ್ರಿಯಾತ್ಮಕ ಗುಂಪುಗಳ ನಿರ್ಮಾಣ ಉದ್ದೇಶವೆಂದರೆ ಪ್ರತಿಯೊಬ್ಬ ಶಿಬಿರಾರ್ಥಿಯೂ ಶಿಬಿರದ ಪ್ರತಿಯೊಂದು ಭಾಗದ ಪರಿಚಯವನ್ನು ಮಾಡಿಸುವುದು, ಹಾಗೂ ಹೊಣೆಗಾರಿಕೆಯನ್ನು ಸ್ವೀಕರಿಸಿ, ನೆರವೇರಿಸುವಂಥ ತಂತ್ರಕೌಶಲಗಳನ್ನು ಬೆಳೆಸಿಕೊಳ್ಳುವುದು. ಆದರೆ ಮಾನಸಿಕ ಆರೋಗ್ಯ ಕೇಂದ್ರದಿಂದ ದಿನದಿನದ ಸೀದಾವನ್ನು ಅವರು ಆ ಕೇಂದ್ರದಿಂದ ಬಂದಿದ್ದ ಸಿಪಾಯಿಗಳನ್ನು ಒಬ್ಬಾತನಾಗಲಿ, ಮನೋಚಿಕಿತ್ಸಾ ವಿದ್ಯಾರ್ಥಿಯಾಗಲಿ, ನರ್ಸ್ (ಅಲ್ಲಿನ ವಿದ್ಯಾರ್ಥಿ) ಆಗಲಿ ಹೋಗಿ ಬರುತ್ತಿದ್ದುದುಂಟು. ದೈನಂದಿನ ಕಾರ್ಯಕ್ರಮ ಇಡಿಯ ದಿನವನ್ನು ಬೆಳಗಿನ 5-20 ರಿಂದ ರಾತ್ರಿಯ 10-00 ರವರೆಗೆ ಕೆಲವು ಕಾರ್ಯಕ್ರಮಗಳಲ್ಲಿ ವಿಭಾಗಿಸಲಾಗಿತ್ತು. ಮೊದಲ ಮತ್ತು ಕೊನೆಯ ದಿನಗಳಲ್ಲಿ ಕಾರ್ಯಕ್ರಮ ಪಟ್ಟಿ ಭಿನ್ನವಾಗಿತ್ತು. ಯಾಕೆಂದರೆ, ಮೊದಲನೆಯ ದಿನ ಬಿಡಾರವನ್ನು ಹೂಡುವುದಷ್ಟೇ ಕಾರ್ಯವಾಗಿತ್ತು. ಕೊನೆಯದಿನ ಮಧ್ಯಾಹ್ನ ಶಿಬಿರದಿಂದ ಹೊರಡುವ ಏರ್ಪಾಡಿತ್ತು. ಇನ್ನಿತರ ದಿನಗಳಲ್ಲಿ ಸಾಮಾನ್ಯವಾದ ಕಾರ್ಯಕ್ರಮ ಹೀಗಿತ್ತು: ಶಿಬಿರದಲ್ಲಿರುವವರೆಲ್ಲರೂ 5-30ಕ್ಕೆ ಏಳುವುದು, 6-30ರ ಒಳಗೆ ಮುಖ ತೊಳೆದು, ಮಾರ್ಜನಾದಿಗಳನ್ನು ತೀರಿಸಕೊಂಡು ಪ್ರಾರ್ಥನೆಗೆ ತೊಡಗುವುದು, ಪ್ರಾರ್ಥನೆಯಾದ ನಂತರ ಕವಾಯಿತು, ಅನಂತರ ನೀರು ತರುವುದು, ಇದೆಲ್ಲಾ 8 ಗಂಟೆ ಒಳಗೆ ಮುಗಿಯವುದು. ಅಷ್ಟರ ಒಳ ಉಪಾಹಾರವೂ ಆಗುವುದು. 8 ಗಂಟೆಗೆ ಶ್ರಮಕಾರ್ಯ ಆರಂಭ. 11 ರವರೆಗೆ ಕೆಲಸ, 11 ರಿಂದ 12-30 ರವರೆಗೆ ಸ್ನಾನಾದಿಗಳು, 1-30ರ ಒಳಗೆ ಮಧ್ಯಾಹ್ನದ ಊಟ, 2-30 ರವರೆಗೆ ವಿಶ್ರಾಂತಿ, 4 ರವರೆಗೆ ಊರನ್ನು ಸಂದರ್ಶಿಸಿ, ಗ್ರಾಮಸ್ಥರೊಡನೆ ವಿಚಾರ ವಿನಿಮಯ ಮಾಡುವುದು, 4 ಕ್ಕೆ ಮಧ್ಯಾಹ್ನದ ಚಹಾ, 6ರವರೆಗೆ ಬಂದ ಅತಿಥಿಯಿಂದ ಭಾಷಣ, ಚರ್ಚಾಗೋಷ್ಠಿ, 8.30ರವರೆಗೆ ಮನರಂಜನೆ, ದಿನದ ಕಾರ್ಯದ ಸಮೀಕ್ಷೆ, ವಿಮರ್ಶೆ ಹಾಗೂ ಮರುದಿನದ ಕಾರ್ಯಕ್ರಮದ ಮತ್ತು ಕ್ರಿಯಾತ್ಮಕ ಗುಂಪುಗಳ ಹಾಗೂ ನಾಯಕರ ನೇಮಕ, 9-30ರ ಒಳಗೆ ರಾತ್ರಿಯ ಊಟ, 10ಕ್ಕೆ ನಿದ್ರೆಹೋಗುವುದು. ಈ ಕಾರ್ಯಕ್ರಮದಲ್ಲಿ ಆಗಾಗ ಅಲ್ಪಸ್ವಲ್ಪ ಬದಲಾವಣೆಯಾಗುತ್ತಿತ್ತು. ಕೆಲವೊಮ್ಮೆ 11 ಗಂಟೆಯವರೆಗೂ ಮಲಗುತ್ತಿರಲಿಲ್ಲ. ಒಂದೆರಡು ಸಲ ಕಾರ್ಯಕ್ರಮದ ಸಮೀಕ್ಷೆಯಾಗಲಿಲ್ಲ. ಮನರಂಜನೆಗೆ ಕೆಲವು ಸಲ ಸಮಯ ಸಿಗಲಿಲ್ಲ. ಎರಡು ದಿನಗಳಲ್ಲಿ ಬರಬೇಕಾದ ಅತಿಥಿಗಳು ಬರಲಿಲ್ಲ. ಒಂದು ದಿನ ಶ್ರಮಕಾರ್ಯವನ್ನು ಬೆಳಗಿನ ಬದಲು ಸಂಜೆಗೆ ಬದಲಾಯಿಸಲಾಯಿತು, ಊರಸಂದರ್ಶನಕ್ಕೆ ಒಂದೆರಡು ಸಲ ವ್ಯತ್ಯಯ ಬಂದಿತು. ಈ ಶಿಬಿರವು ನಮ್ಯತೆಯ (Flexibility) ಮೇಲೆ ಅವಲಂಬಿಸಿಕೊಂಡಿರಬೇಕಾದುದರಿಂದ ಹೀಗಾಗುವುದು ಸಹಜ. ಸ್ಥಿತ್ಯಂತರವಾಗುವುದು ಪರಿಣಾಮಕಾರೀ ಕೆಲಸವನ್ನು ನೆರವೇರಿಸಲಿಕ್ಕಾಗಿಯೇ. ಕಾರ್ಯಕ್ರಮ ಹಾಗೂ ವಾತಾವರಣ ಊರಿನ ಶಾಲೆಯಲ್ಲಿ ಶಿಬಿರಾರ್ಥಿಗಳ ಬಿಡಾರ. ಹಿಂದೊಮ್ಮೆ ಬಂದ ಸರ್ವೋದಯ ಮಂಡಳಿಯವರು ಮೊದಲ ಶಾಖೆಯನ್ನು ಕಟ್ಟಿದ್ದರು. ಅದಕ್ಕೆ ಹೊಂದಿಕೊಂಡಂತೆಯೇ ಊರಿನ ಮುಖ್ಯ ರಸ್ತೆಯ ಕಡೆಗೆ ಚಿಕ್ಕ ಕೋಣೆ. ಅದು ಊರ ಉಪಾಧ್ಯಾಯನು ಇರುವ ಮನೆ. ಶಾಲಾಕೋಣೆಯ ಎಡಪಕ್ಕದಲ್ಲಿ ಖಾಸಗೀ ಹೊಲ. 1969ರಲ್ಲಿ ಕಟ್ಟಿದ ಕೋಣೆಯು ಈ ಮುಖ್ಯ ಕೋಣೆಯ ಮುಂದೆ, ದಕ್ಷಿಣಕ್ಕೆ, ಎಡಭಾಗದ ಕೆಲವು ಭಾಗವನ್ನು ಮರೆಮಾಡಿದಂತೆ ಪಶ್ಚಿಮಾಭಿಮುಖವಾಗಿ ಇದೆ. ಮುಖ್ಯರಸ್ತೆಯಿಂದ ಕಚ್ಚಾ ಮೆಟ್ಟಲುಗಳನ್ನು ಏರಿ ಹೋದರೆ ಈ ಶಾಲಾ ಕೋಣೆಗಳನ್ನು ಸೇರಬಹುದು. ಸರ್ವೋದಯದವರ ಕೋಣೆಯಲ್ಲಿ ಸಮಾಜಕಾರ್ಯ ವಿಭಾಗದವರೂ, ಗಾಂಧೀ ಶತಮಾನೋತ್ಸವದ ಕೋಣೆಯಲ್ಲಿ ಮಾನಸಿಕ ಆರೋಗ್ಯ ಕೇಂದ್ರದವರೂ ಉಳಿದುಕೊಂಡಿದ್ದರು. ಸಲಕಿನಕೊಪ್ಪವನ್ನು ಹಳಿಯಾಳ-ಧಾರವಾಡ ರಸ್ತೆಯಿಂದ ನೋಡಿದರೆ ಅದರಲ್ಲಿ ಎತ್ತರವಾಗಿ ಕಾಣುವ ಕಟ್ಟಡವೇ ಶಾಲೆ. ಊರೊಳಗೆ ಬಂದಾಗಲೂ ಮೋಹಕವಾಗಿ ಕಾಣುವಂತಹದೇ ಈ ಶಾಲೆ. ಕಲಾವಿದ ಕುಲಕರ್ಣಿಯವರ ವರ್ಣಕುಂಚದಲ್ಲಿ ಶಾಲೆಗೆ ಅಪೂರ್ವಕಳೆ ಬಂದಿತು. ಶಿಬಿರದ ಆವರಣವನ್ನು ಸದಾ ಶುಚಿಯಾಗಿಡಲು ವಿದ್ಯಾರ್ಥಿ ನವಾಬನ ಆರೋಗ್ಯ ವಿಭಾಗದವರೂ, ಚಿಕಿತ್ಸಾರ್ಥಿಗಳಲ್ಲಿ ಇಬ್ಬರೂ ಯತ್ನಿಸುತ್ತಿದ್ದರು, ಊಟದ ಎಲೆಗಳನ್ನು ಹಾಕಲು ಶಾಲೆಯ ಹಿಂದೆ ತಗ್ಗುಗಳನ್ನು ತೋಡಲಾಗುತ್ತಿತ್ತು. ಆಗಾಗ ನಾಯಿಗಳ ದೆಸೆಯಿಂದ ಪತ್ರಾವಳಿಯ ಚೂರುಗಳು ಚೆಲ್ಲಿರುತ್ತಿದ್ದುದುಂಟು. ಆದರೆ ಕಂಡೊಡನೆ ಕೈಹಾಕಿ ಯಾರಾದರೂ ಅವನ್ನು ತಗ್ಗುಗಳಲ್ಲಿ ಹಾಕುತ್ತಿದ್ದರು. ಶಿಬಿರದಲ್ಲಿಯೇ ದೀಪಾವಳಿಯನ್ನು ಆಚರಿಸಲಾಯಿತು. ಅಂದು ಇನ್ನೂ ಬೇಗನೆ ಎದ್ದು ಮುಖ ತೊಳೆದು ಎಲ್ಲರೂ ಸಾಲಾಗಿ ಕುಳಿತು ಅಂಬುಜಮ್ಮ ಮತ್ತು ವಿದ್ಯಾರ್ಥಿನಿ ಸುಮಿತ್ರಾ ಶಿಬಿರಾರ್ಥಿಗಳೆಲ್ಲರಿಗೂ ಆರತಿಯನ್ನು ಬೆಳಗಿದರು. ಮನೋಚಿಕಿತ್ಸಾರ್ಥಿಗಳ ಕೈಗೆ ಕೆಲವು ಪೈಸೆಗಳನ್ನು ಕೊಡಲಾಗಿತ್ತು. ಅವನ್ನು ಅವರು ಆರತಿಯ ತಟ್ಟೆಗೆ ಹಾಕಿದರು. ಹಾಗೆ ಆಚರಿಸಿದ್ದುದು ಎಲ್ಲರಿಗೂ ಸಂತೋಷವನ್ನೇ ತಂದಿದು. ಸಂಗ್ರಹವಾದ ಹಣವನ್ನು ಆರತಿ ಬೆಳಗಿದವರಿಬ್ಬರೂ ಹೃತ್ಪೂರ್ವಕವಾಗಿ ಆ ಶಿಬಿರದಲ್ಲಿ ಆರಂಭಿಸಲ್ಪಟ್ಟ ಸಮಾಜಕಾರ್ಯ ಕಲ್ಯಾಣ ನಿಧಿಗೆ ಅರ್ಪಿಸಿದರು. ಅದೇ ಮಧ್ಯಾಹ್ನ ಚಿಕಿತ್ಸಾರ್ಥಿಯೊಬ್ಬನನ್ನು ಆತನ ಬಂಧುಗಳು ಬಂದು ಕರೆದುಕೊಂಡು ಹೋದರು. ಶಿಬಿರಕ್ಕೆ ಬರುವ ಮುನ್ನ ಇದ್ದುದಕ್ಕಿಂತ ಬಹುವಾಗಿ ಉತ್ತಮಗೊಂಡಿದ್ದುದು ಆತನ ಮುಖದಲ್ಲಿ ಕಾಣುತ್ತಿತ್ತು. ಉತ್ತಮಗೊಂಡಿದ್ದಾನೆಂದು ಆಸ್ಪತ್ರೆಯ ಬಿಡುಗಡೆಯ ಪತ್ರವನ್ನು ಆ ಬಂಧುಗಳು ತಂದಿದ್ದರು. ಆತನ ಸಹೋದರಿ ಆತನಿಗೆ ಆರತಿ ಮಾಡಲು ಮನೆಯಲ್ಲಿ ಕಾಯ್ದು ಕುಳಿತಿದ್ದಳಂತೆ. ಚಿಕಿತ್ಸಾರ್ಥಿ ಆಗ ಸಾಧಾರಣ, ಸರಳ ವ್ಯಕ್ತಿಯಾದ, ಸಮವಸ್ತ್ರದಿಂದ ಸಾಮಾನ್ಯ ಉಡಪನ್ನು (ಹೊಸ ಅರಿವೆಗಳನ್ನು) ಧರಿಸಿದಾಗ ಆತನ ಮುಖದ ತುಂಬಾ ಆನಂದದ ಕಳೆ ಕಂಡುಬಂದಿತು. ಆತನ ಬಿಡುಗಡೆಯು ಆ ಪವಿತ್ರ ದಿನದಂದು ಶಿಬಿರದಿಂದಲೇ ಆದುದನ್ನು ಕಂಡು ಅದೊಂದು ಶುಭ ಸಂಕೇತ ಎಂದು ಎಲ್ಲರಿಗೂ ಅನ್ನಿಸಿತು. ಚಿಕಿತ್ಸಾರ್ಥಿ ಬಸವಲಿಂಗಪ್ಪ ವಿಪರೀತ ಚಟುವಟಿಕೆಯ ಮನುಷ್ಯ. ಆತನೆಷ್ಟು ಗಿಡ್ಡಕ್ಕಿದ್ದನೊ ಅದರ ವಿರುದ್ಧವೆಂಬಂತೆ ಆತನ ಹಾಡುಗಳು, ಕೆಲಸಗಳು ವಿಶಾಲ, ಉದ್ದ, ಸಮೃದ್ಧ. ಶಾಲೆಯ ಅಂಗಳವನ್ನು ಚಿಕಿತ್ಸಾರ್ಥಿ ಶುಕ್ರೆ ಕೆತ್ತಿ ಸ್ವಚ್ಛಗೊಳಿಸಿದರೆ, ಬಸವಲಿಂಗಪ್ಪ ಸಗಣಿ ತಂದು ಸಾರಿಸಿದ. ಸಿಸ್ಟರ್ (ಹಾಗೆಂದು ಸುಮಿತ್ರಾ ಅವರನ್ನು ಅವರೆಲ್ಲ ಸಂಬೋಧಿಸುತ್ತಿದ್ದರು) ರಂಗೋಲಿ ಹಾಕಿರಿ ಎಂದು ಆತನ ಆಜ್ಞಾಬಿನ್ನಪ್ಪ. ಆತನು ಎಷ್ಟು ದೊಡ್ಡದಾಗಿ ನೆಲವನ್ನು ಸಾರಿಸುತ್ತಾನೊ ಅಷ್ಟು ದೊಡ್ಡ ರಂಗೋಲಿಯನ್ನು ಸಿಸ್ಟರ್ ಹಾಕಬೇಕು ಎಂಬುದು ಆತನ ಸವಾಲು. ಹೆಚ್ಚಾಗಿ ಆತನೇ ಗೆಲ್ಲುತ್ತಿದ್ದ. ಹಳ್ಳಿಯ ಪದ್ಧತಿಯಂತೆ ಸಗಣಿಯ ಉಂಡೆ ಮಾಡಿ, ಹೊನ್ನರಿಕೆ ಹೂಗಳನ್ನು ಸಿಗಸಿ ನಾಲ್ಕಾರು ಕಡೆ ಅಂಗಳದಲ್ಲಿ ಆತನೇ ಇರಿಸಿದ. ಅವೆಲ್ಲ ಹಟ್ಟೆವ್ವಗಳು, ದನಕರುಗಳ ದೇವತೆಗಳು. ರಾತ್ರಿಯೆಲ್ಲಾ ಹಣತೆ ಬೆಳಗಿದವು. 20ರ ಬೆಳಗು ಹಳ್ಳಿಯ ಸಡಗರದಿಂದ ಬಣ್ಣ ಬಳಿದುಕೊಂಡಿತ್ತು, ಮನೆಗಳೆಲ್ಲ ಸಾಣೆಯ ಕಾರಣೆಯನ್ನು ಕಂಡಿದ್ದವು, ಮಕ್ಕಳು ಮರಿಗಳು ಹೆಣ್ಣು-ಗಂಡುಗಳು ಹೊಸ ಉಡುಪು ಧರಿಸಿದ್ದರು, ಎತ್ತುಗಳ ಕೋಡುಗಳಿಗೆ ಬಣ್ಣ ಬಳಿದು, ಗಂಟೆ ಕಟ್ಟಿ ಓಡಿಸಲಾಯಿತು, ಹಬ್ಬದೂಟವನ್ನುಂಡು ಜನ ರಾತ್ರಿ ಉರಿಯನ್ನು ಹಾಕಿ ದನಗಳನ್ನು ಅದರ ಮೇಲೆ ಹಾಯಿಸಿದರು. ವಿದ್ಯುದ್ದೀಪಗಳಿಲ್ಲದ ಊರು ಓಣಿಓಣಿಗಳಲ್ಲಿ ಬೆಳಗುವ ಉರಿಗಳ ಮತ್ತು ಕವಿದ ಕತ್ತಲೆಯಲ್ಲಿ ಅಪೂರ್ವ ಮೆರಗನ್ನು ಪಡೆದಿತ್ತು. ಊರ ಹಬ್ಬದ ಸಡಗರ ಶಿಬಿರದಲ್ಲೂ ಪ್ರತಿಫಲಿಸಿತು. ದೀಪಾವಳಿಯಂಥ ದೊಡ್ಡ ಹಬ್ಬವನ್ನು ತಮ್ಮ ತಮ್ಮ ಮನೆಗಳಲ್ಲಿ ಆಚರಿಸದೆ ಯಾವುದೋ ಹಳ್ಳಿಯಲ್ಲಿ ಕಳೆಯುವುದೇ? ಎಂಬ ಪ್ರಶ್ನೆಗೆ ಇಂಥ ದೀವಳಿಗೆ ಎಂದಾದರೂ ಬಂದೀತೆ, ಎಂಬಂತಹ ಹರ್ಷೋತ್ತರ ಸಿಕ್ಕಿತು. ಆದರೂ ಕ್ರಿಯಾವಿಧಿಯು ಬಿಡಲಾರದೆಂದು ಒಬ್ಬ ವಿದ್ಯಾರ್ಥಿ ಸೋಮಶೇಖರ ತನ್ನೂರಿಗೆ ಹೋಗಿ ರಾತ್ರಿಯೊಂದನ್ನು ಕಳೆದುಬರಲು ಅವಕಾಶ ಮಾಡಿಕೊಡಲಾಯಿತು. ಶಿಬಿರಕ್ಕೆ ಧಾರವಾಡದಿಂದ ಶಿಬಿರಾರ್ಥಿಗಳು ಬಂಧುಗಳು ಬಂದರು, ಗೆಳೆಯರು ಬಂದರು, ಪ್ರಾಧ್ಯಾಪಕರೂ, ಎರಡನೆಯ ವರ್ಷದ ವಿದ್ಯಾರ್ಥಿಗಳು ಬಂದರು. ಭಾರತ ಸರಕಾರ ಹಾಗೂ ಮೈಸೂರು ಸರಕಾರದ ವಾರ್ತಾ ಮತ್ತು ಪ್ರಚಾರ ಖಾತೆಯ ಅಧಿಕಾರಿಗಳು ಚಲನಚಿತ್ರ ತೋರಿಸಲು ಬಂದರು, ಪತ್ರಿಕಾಕರ್ತರೂ ಐತಂದರು, ಆಕಾಶವಾಣಿಯವರೂ ಸಂದರ್ಶನವನ್ನು ರೆಕಾರ್ಡು ಮಾಡಲು ಬಂದರು, ಅಕ್ಕಪಕ್ಕದ ಹಳ್ಳಿಯ ಕೆಲವು ಹಿರಿಯರೂ, ಕಿರಿಯರೂ ಬಂದರು. ಬಂದವರೆಲ್ಲಾ ಶಿಬಿರಾರ್ಥಿಗಳೆಲ್ಲರೊಡನೆ ಬೆರೆತರು. ಅವರಲ್ಲಿ ಹಲವರು ಸಿಹಿತಿನಿಸುಗಳನ್ನು ತಂದರು, ಹಂಚಿ ತಾವೂ ತಿಂದರು, ಶಿಬಿರಾರ್ಥಿಗಳು ಅತಿಥ್ಯವನ್ನೂ ಸ್ವೀಕರಿಸಿದರು. ಹೀಗಾಗಿ ಶಿಬಿರವು ಸದಾ ತುಂಬಿಕೊಂಡಿತ್ತು. ಚಟುವಟಿಕೆಗಳಿಂದ ಪ್ರಫುಲ್ಲಿತವಾಗಿತ್ತು. ನೀವು ಹೋದ ಮೇಲೆ ಕೆಲವು ದಿನ ಇಲಿ ಹಳಹಳ ಎನಿಸುತ್ತದೆ ಎಂದು ಗ್ರಾಮದ ಬಾವಿ ಚನ್ನಬಸಪ್ಪನವರೂ ಅಂದರು, ಯುವಕ ಮಂಡಲಿಯ ಕಾರ್ಯದರ್ಶಿ ರಾಮಣ್ಣನೂ ಅಂದರು. ಕಾರ್ಯಕ್ರಮಗಳು ಶಿಬಿರದ ಹೊರಗೂ ಇದ್ದವು, ಒಳಗೂ ಇದ್ದವು. ಎಲ್ಲ ಕಾರ್ಯಕ್ರಮಗಳೂ ಮಹತ್ವದ ಅಂಶಗಳಾಗಿದ್ದವೇನೊ ನಿಜವೆ. ಆದರೆ ರಸ್ತೆಯನ್ನು ರಿಪೇರಿ ಮಾಡುವುದು, ಉಪನ್ಯಾಸ ಚರ್ಚಾಗೋಷ್ಠಿಯನ್ನು ನಡೆಸುವುದು ಹೇಳಿಕೊಳ್ಳುವಂಥವುಗಳೇ. ಮೊದಲನೆಯದು ದೈಹಿಕ ಶಕ್ತಿಯ ಸಾರ್ಥಕ ಉಪಯೋಗವಾಗಲಿಕ್ಕೆ ಅವಕಾಶವನ್ನಿತ್ತಿದ್ದರೆ, ಎರಡನೆಯದು ಬೌದ್ಧಿಕ ಶಕ್ತಿಯ ಸಂವರ್ಧನೆಗೆ ಎಡೆ ಮಾಡಿಕೊಟ್ಟಿತ್ತು. ಶಿಬಿರಾರ್ಥಿಗಳೆಲ್ಲರೂ ಊರಿನವರೂ ಈ ಎರಡರಲ್ಲೂ ಭಾಗವಹಿಸಿದರೆಂಬುದು ನಿಜವಾದರೂ ಮೊದಲಿನದರಷ್ಟು ಎರಡನೆಯದಲ್ಲಿ ಭಾಗ ತೆಗೆದುಕೊಂಡವರು ಕಡಿಮೆಯೆಂದೇ ಹೇಳಬೇಕು. ವಿಚಾರಗೋಷ್ಠಿಯ ವ್ಯವಸ್ಥೆಗೆ ಹೊಣೆಗಾರನಾಗಿದ್ದ ವಿದ್ಯಾರ್ಥಿ ಸುಧೀರ ಅಲ್ಪಸ್ವಲ್ಪ ಅಸಮಾಧಾನಪಟ್ಟರಿಬೇಕು. ಆದರೆ ಚರ್ಚಾಗೋಷ್ಠಿಯ ಕೊನೆಗೆ ಚಿಕಿತ್ಸಾರ್ಥಿಗಳನ್ನು ನಾಗರಾಜಪ್ಪ ಹಾಗೂ ಶ್ರೀಕಾಂತ ವಂದನಾರ್ಪಣೆಯನ್ನು ಸಲ್ಲಿಸುವುದನ್ನು ಕಂಡವರು ಮೂಗಿನ ಮೇಲೆ ಬೆರಳಿಡುವಂತಿತ್ತು. ಹರ್ಷಬಾಷ್ಟ ತುಳುಕುವಂತಿತ್ತು. ಮನೋರಂಜನೆಯ ಕಾರ್ಯಕ್ರಮವು ಅಂದುಕೊಂಡಷ್ಟು ಕ್ರಮಾಗತವಾಗಿ ಆಗದುದಕ್ಕೆ ಅದರ ವ್ಯವಸ್ಥಾಪಕ ವಿದ್ಯಾರ್ಥಿ ಸಿಂಧೆಯದೇನೂ ತಪ್ಪಿಲ್ಲವೆಂದೆಲ್ಲರೂ ಅಭಿಪ್ರಾಯಪಟ್ಟರು. ಸಮಯದ ಅಭಾವವಿದ್ದರೂ ಧಾರವಾಡದಿಂದ ಗೆಳೆಯರ ಗುಂಪೊಂದು ಬಂದು ಕಾರ್ಯಕ್ರಮವಿತ್ತರು, ಹುಕ್ಕೇರಿ ಬಾಳಪ್ಪನವರೂ ಬಂದು ಹತ್ತು ದಿನದ ಕಾರ್ಯವನ್ನು ಮೂರು ತಾನಿನಲ್ಲೇ ಮುಗಿಸಿದರು. ಚಿಕಿತ್ಸಾರ್ಥಿ ಪಾಟೀಲ ಹಾಡು ಕಟ್ಟಿ ಹಾಡಿದರು. ಅಡುಗೆಯ ಬಗ್ಗೆ ಒಂದೆರಡು ಮಾತು ಅಗತ್ಯ. ವಿದ್ಯಾರ್ಥಿಗಳು ತಾವು ತಂದ ಆಹಾರಧಾನ್ಯಗಳನ್ನೂ, ಚಿಕಿತ್ಸಾರ್ಥಿಗಳಿಗೆ, ಆಸ್ಪತ್ರೆಯವರಿಗೆ ಕೊಟ್ಟ ಸೀದಾ ಪದಾರ್ಥಗಳನ್ನೂ ಸೇರಿಸಿ ಎಲ್ಲರಿಗೂ ಒಂದೆ ತೆರೆನ ಅಡುಗೆಯನ್ನು ಏರ್ಪಡಿಸುತ್ತಿದ್ದರು. ಅವರಿವರೆನ್ನುವ ಭೇದವಿನಿತೂ ಇರಲಿಲ್ಲ. ಸಸ್ಯಾಹಾರವನ್ನೇ ತಯಾರಿಸುತ್ತಿದ್ದುದನ್ನು ಕಂಡ ಕೆಲವು ಶಿಬಿರಾರ್ಥಿಗಳ ನಾಲಗೆ ಒಣಗಿದಂತೆನಿಸಿರಬೇಕು. ಕಂಡೂ ಕಾಣದಂತೆ ಕಾಡಲ್ಲಿ ಕುಪ್ಪಳಿಸುವ ಜೀವವೊಂದು ಮೂವರ ನಾಲಗೆಯಲ್ಲಿ ಓಡಿಯಾಡಿತು ಎಂದು ತಿಳಿದು ಬಂದಿತು. ಆದರೆ ವ್ಯಾಸರಾಜನ ಬಿಸಿಬೇಳೆ ಬಾತ್ ಒಂದು ಹೊತ್ತಿಗಲ್ಲ ಎರಡು ಹೊತ್ತಿಗಾಗುವಷ್ಟು ಅಕ್ಷಯವಾಗಿದ್ದುದು ಎಲ್ಲರಿಗೂ ಸಂತವನ್ನಿತ್ತಿರಬೇಕು. ಉಪ್ಪಿಟ್ಟು, ರೊಟ್ಟಿ, ಚಪಾತಿ, ಅನ್ನ, ಸಾರು, ಚಟ್ನಿಪುಡಿ, ಒಮ್ಮೊಮ್ಮೆ ಉಪ್ಪಿನಕಾಯಿ, ಪಾಯಸ, ಅತಿಥಿಗಳು ತಂದ ಸಿಹಿತಿನಿಸುಗಳು. ಇವೆಲ್ಲಾ ಚಿಕಿತ್ಸಾರ್ಥಿಗಳಲ್ಲಿ ಮಹತ್ತರ ಬದಲಾವಣೆಯನ್ನು ಉಂಟು ಮಾಡಿದವೆಂದು ಕಾಣುತ್ತದೆ. ಆಹಾರದಲ್ಲಿ ನೀಡುವ ರೀತಿಯೂ ಅವರಿಗೆ ಹಿಡಿಸಿತೆಂದು ಕಾಣುತ್ತದೆ. ಶಿಬಿರದ ಕೊನೆ ಕೊನೆಗೆ ಅವರೆಲ್ಲರೂ ಶಿಬಿರದ ತಾದಾತ್ಮ್ಯವನ್ನು ಹೊಂದಿದ್ದುದರಲ್ಲಿ ಆಹಾರದ ಪಾತ್ರ ಬಹು ಮಹತ್ವವೆಂದು ತೋರುತ್ತದೆ. ತನ್ನೊಳಗೆ ಮಾತನಾಡುತ್ತಿದ್ದು, ಯಾರೊಡನೆಯೂ ಬೆರೆತು ಸಂಭಾಷಿಸದೆ, ರಿಜರ್ವ ಇರುತ್ತಿರುವವನಂತೆ ಕಂಡ ಚಿಕಿತ್ಸಾರ್ಥಿ ಅರವಿಂದ ಕೂಡಾ ಒಮ್ಮೆ ಬಡಿಸಿಯಾದ ಮೇಲೆ ಊಟಕ್ಕೆ ಕುಳಿತವರ ಹತ್ತಿರ ಹೋಗಿ ನಾನು ನಿಮಗೆ ಬಡಿಸಲೇ? ಎಂದು ಕೇಳಿದರು ಎಂದರೆ ಆ ವ್ಯಕ್ತಿಯಲ್ಲಾದ ಮಹತ್ತರ ಬದಲಾವಣೆಯನ್ನು ಯಾರಾದರೂ ಗುರುತಿಸಬಹುದಿತ್ತು. ಶಿಬಿರ ನಡೆಸುವಲ್ಲಿ ಅನೇಕ ತೊಂದರೆಗಳು ಬಂದೊದಗಿದ್ದರೂ ಸಾರಿಗೆಯ ವ್ಯವಸ್ಥೆಯದು ಮಾತ್ರ ಗಮನಿಸಬಹುದಾಗಿತ್ತು. ಮೊದಲ ದಿನ ಒಂದು ಸುತ್ತು ವ್ಯಾನ್ ಕೊಟ್ಟಿತು ವಿಶ್ವವಿದ್ಯಾಲಯ. ಅದರಿಂದ ಕೆಲವು ಸಾಮಾನುಗಳನ್ನು ಸಾಗಿಸಲು ಸಾಧ್ಯವಾಯಿತು. ಆದರೆ ವಿದ್ಯಾರ್ಥಿಗಳನ್ನೂ, ಚಿಕಿತ್ಸಾರ್ಥಿಗಳನ್ನೂ, ಸಾಗಿಸುವುದಕ್ಕಾಗಿ ಸ್ಥಳೀಯ ಬಸ್ಸುಗಳನ್ನು ಹಿಡಿಯಬೇಕಾಯಿತು. ಕೊನೆಯ ದಿನ ವ್ಯಾನಿನ ಬದಲು ಕಾರೊಂದು ದೊರೆಯಿತು. ಅದು ಜನರನ್ನಷ್ಟೇ ಸಾಗಿಸಲು ತಕ್ಕದ್ದು, ಮೂರು ಸುತ್ತಿಗೂ ಜನರೆಲ್ಲರನ್ನೂ ಸಾಗಿಸಲು ಸಾಧ್ಯವಾಗಲಿಲ್ಲ. ಸಲಕಿನಕೊಪ್ಪದ ಚಕ್ಕಡಿಯನ್ನು ಹೂಡಿ ಸಾಮಾನುಗಳನ್ನು ಸಾಗಿಸಲು ಊರ ಮಲ್ಲಪ್ಪ ಸಾರಥಿಯಾದರು ಎಂದೇ ಸಮಸ್ಯೆ ಪರಿಹಾರಗೊಂಡಿತು. ಜೊತೆಗೆ ಸರಕಾರೀ ಜೀಪೊಂದು ಸಹಕಾರದ ಕೈಚಾಚಿದ್ದುದರಿಂದ ಕೆಲಸ ಹೆಚ್ಚು ಸರಳವಾಯಿತು. ಸಾರಿಗೆಯ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಕಾನಡೆ ಸೋಲದಂತೆ ಇತರರೆಲ್ಲಾ ನೆರವಾದುದು ನೆನಸಿಕೊಳ್ಳುವಂತಹುದೇ, ಶಿಬಿರಾರ್ಥಿಗಳೂ, ಅನ್ಯರೂ, ಕೂಡಿ ಕೆಲಸ ಮಾಡಿದರೆ ಯಾವ ಸಮಸ್ಯೆಯನ್ನೂ ತಡವಬಹುದು, ತಡೆಯಬಹುದು ಎನ್ನಿಸಿತು. ಶಿಬಿರದ ಸಾಧನೆಗಳು ಈ ಶಿಬಿರವನ್ನು ಅಲೋಕಿಸಿದರೆ ಸಾಂಘಿಕ ಜೀವನದ ಒಂದು ನೆನಪಿಡುವ ಸೆಳಕು ಎಂಬುದು ಅರ್ಥವಾಗುತ್ತದೆ. ಶಿಬಿರವು ಕೆಲವು ಬಹು ಮುಖ್ಯವಾದ ಫಲಗಳನ್ನು ನೀಡಿತು. ಕೆಲವನ್ನಿಲ್ಲಿ ನಮೂದಿಸಬಹುದು: ಚಿಕಿತ್ಸಾರ್ಥಿಗಳ ಸುಧಾರಣೆ ಈ ಶಿಬಿರ ವಿಶಿಷ್ಟವಾದುದಕ್ಕೆ ಮನೋಚಿಕಿತ್ಸಾರ್ಥಿಗಳು ವಿದ್ಯಾರ್ಥಿಗಳೊಡನೆ ಹತ್ತು ದಿನ ಜೀವಿಸಿದ್ದು ಹಾಗೂ ಅವರ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆಯಾದದ್ದು. ಈಗಾಗಲೇ ಅವರಲ್ಲಾದ ಪರಿವರ್ತನೆಯ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಆದರೆ ಅವರು ಶಿಬಿರದ ಕಾರ್ಯಕಲಾಪಗಳಲ್ಲಿ ಭಾಗವಹಿಸಿದುದನ್ನು ನೆನೆಯಲೇ ಬೇಕಾಗುತ್ತದೆ. ಅಡುಗೆ ಮಾಡುವ ಕಾರ್ಯವನ್ನು ಹೊರತು ಎಲ್ಲ ಕೆಲಸಗಳಲ್ಲೂ ಅವರು ಭಾಗ ತೆಗೆದುಕೊಂಡರು. ಇತರರು ಇವರ ಬಗೆಗೆ ತೋರಿದ ಸ್ನೇಹಸೌಹಾರ್ದಗಳು, ಗೌರವಾದರಗಳು, ಔದಾರ್ಯಾನುಕಂಪಗಳು, ಪ್ರೀತಿವಿಶ್ವಾಸಗಳು, ಸರಿಸಮಾನ ದೃಷ್ಟಿಕೋನಗಳು ಇಂತಹ ಮಾನವೀಯ ಗುಣಾಢ್ಯತೆಗಳು ಮನೋಚಿಕಿತ್ಸಾರ್ಥಿಗಳಲ್ಲಿ ಉತ್ಸಾಹವನ್ನೂ, ಸ್ಫೂರ್ತಿಯನ್ನೂ, ನಂಬುಗೆಯನ್ನು, ಬದಲಾಗಬೇಕೆಂಬ ಬಯಕೆಯನ್ನೂ ತುಂಬಿದವೆನ್ನಲಿಕ್ಕೆ ಅವರು ಕಾರ್ಯಕ್ರಮಗಳಲ್ಲಿ ತೆಗೆದುಕೊಂಡ ಆಶಕ್ತಿಯಿಂದ ವಿದಿತವಾಗುತ್ತದೆ. ಅವರ ಹಿನ್ನೆಲೆಯ ಅರಿವನ್ನುಳ್ಳ ಯಾವ ಸಾಮಾನ್ಯ ಸರಳ ಮನುಷ್ಯನೂ ಅವರ ಜೊತೆ ನಿರ್ಭೀತಿಯಿಂದ ವರ್ತಿಸಲು ಸಾಧ್ಯವಿರಲಿಲ್ಲ. ಯಾವ ಗಳಿಗೆಯಲ್ಲಿ ಯಾರಿಗೆ ಏನಾದರೂ ಮಾಡಿದರೆ, ಅಥವಾ ಅವರಿಗೆ ಅವರೇ ಏನಾದರೂ ಮಾಡಿಕೊಂಡರೆ ಎಂಬ ಭಯ ಇತರರಲ್ಲಿ ಇದ್ದಿದ್ದರೆ ಅದು ಸ್ವಾಭಾವಿಕ. ಒಮ್ಮೊಮ್ಮೆ ನಮ್ಮ ಅಳವಿಗೆ ಮೀರಿದ ಸಾಹಸಕ್ಕೆ ಕೈ ಇಡಲಿಲ್ಲವೆ? ಎಂಬಂತಹ ಸಂಶಯಗಳೂ ಏಳುತ್ತಿದ್ದವು. ಊರಿನವರು ಚಿಕಿತ್ಸಾರ್ಥಿಗಳೊಡನೆ ಯಾವ ರೀತಿ ನಡೆದುಕೊಳ್ಳುತ್ತಾರೊ ಎಂಬ ಆತಂಕವೂ ಮನದ ಮೂಲೆಯೊಂದರಲ್ಲಿ ಕುಳಿತಿತ್ತು. ಆದರೆ ಶಿಬಿರದಲ್ಲಿ ಎಲ್ಲರ ನಡವಳಿಕೆಯೂ ಶ್ಲಾಘನೀಯವಾಗಿದ್ದುದರಿಂದಲೇ ಮನೋಚಿಕಿತ್ಸಾರ್ಥಿಗಳಲ್ಲಿ ಮಹತ್ತರ ಸುಧಾರಣೆಯಾಯಿತೆಂದು ಹೇಳಬೇಕು. ಅವರ ಆರೋಗ್ಯವೂ ಸುಧಾರಿಸಿತು. ಹತ್ತು ಜನರ ಸರಾಸರಿ ತೂಕ ಶಿಬಿರಕ್ಕೆ ಬರುವ ಮೊದಲು 98 ಪೌಂಡುಗಳಿದ್ದರೆ ಶಿಬಿರ ಮುಗಿದ ಮೇಲೆ 9 ಜನರ ಸರಾಸರಿ ತೂಕ 106 ಪೌಂಡುಗಳಿತ್ತು. (ಶಿಬಿರದ ಮಧ್ಯದಲ್ಲಿಯೇ ಒಬ್ಬ ಚಿಕಿತ್ಸಾರ್ಥಿ ಬಿಡುಗಡೆಯಾಗಿ ಹೋಗಿದ್ದುದರಿಂದ ಆತನ ತೂಕವನ್ನು ಮತ್ತೆ ತೆಗೆದುಕೊಳ್ಳಲಾಗಲಿಲ್ಲ). ಅವರ ತೂಕದ ಏರು 4 ರಿಂದ 12 ಪೌಂಡಿನವರೆಗೂ ಸಾಗುತ್ತದೆ. ಉಂಡ ಆಹಾರಕ್ಕಿಂತಲೂ ಉಂಡ ರೀತಿ ಹಾಗೂ ಹತ್ತುದಿನ ಬಾಳಿದ ರೀತಿ ಇಂಥ ತೂಕವನ್ನು ತಂದುದಕ್ಕೆ ಕಾರಣವೆನ್ನಿಸುತ್ತದೆ. ಚಿಕಿತ್ಸಾರ್ಥಿಗಳು, ಆಲಂಕಾರಿಕವಾಗಿ ಹೇಳುವುದಾದರೆ, ಶಿಬಿರದ ತೂಕವನ್ನು ನಿಜವಾಗಿಯೂ ಹೆಚ್ಚಿಸಿದರು. ವಿದ್ಯಾರ್ಥಿಗಳೆಲ್ಲರಿಗೂ ಚಿಕಿತ್ಸಾರ್ಥಿಗಳ ವೈಯಕ್ತಿಕ ಪರಿಚಯವಿರಲಿಲ್ಲ. ಶಿಬಿರದ ನಿರ್ದೇಶಕನಾದ ನನಗೂ ಇರಲಿಲ್ಲ. ಆದರೆ ಕ್ಷೇತ್ರಕಾರ್ಯಕ್ಕಾಗಿ ವಾರಕ್ಕೆ ಎರಡು ದಿನಗಳು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಹೋಗುತ್ತಿದ್ದು ವಿದ್ಯಾರ್ಥಿಗೆ ಆ ಕೇಂದ್ರದ ಒಟ್ಟಿನ ಸ್ಥೂಲಪರಿಚಯ ಹಾಗೂ ಶಿಬಿರಕ್ಕೆ ಬಂದಿದ್ದ ಚಿಕಿತ್ಸಾರ್ಥಿಗಳಿಗೆ ಕೆಲವರ ಮುಖಪರಿಚಯವಿತ್ತು. ಇನ್ನೊಬ್ಬ ವಿದ್ಯಾರ್ಥಿಯು ತಾನು ಕಾಲೇಜಿನಲ್ಲಿದ್ದಾಗ ಒಂದೆರಡು ಸಲ ಆಸ್ಪತ್ರೆಗೆ ಮನಃಶಾಸ್ತ್ರದ ತನ್ನ ಪ್ರಾಧ್ಯಾಪಕರೊಂದಿಗೆ ಹೋಗಿಬಂದಿದ್ದುದರಿಂದ ಅಲ್ಲಿನ ವಾತಾವರಣದ ಹಾಗೂ ಚಿಕಿತ್ಸಾರ್ಥಿಯೊಬ್ಬನ ಅಲ್ಪ ಪರಿಚಯವಿತ್ತು. ಆದರೆ ಶಿಬಿರದ ಕಾರ್ಯದರ್ಶಿಯಾಗಿದ್ದ ವಿದ್ಯಾರ್ಥಿಗೆ ಮಾತ್ರ ಚಿಕಿತ್ಸಾರ್ಥಿಗಳ ವೈಯಕ್ತಿಕ ಪರಿಚಯ ಮಾತ್ರವಲ್ಲದೆ ಅವರ ಪೂರ್ವೇತಿಹಾಸದ ಪರಿಚಯವೂ ಇತ್ತು. ಆತನ ಮೂಲಕವೇ ಶಿಬಿರಕ್ಕಾಗಿ ಆ ಚಿಕಿತ್ಸಾರ್ಥಿಗಳನ್ನು ಆಯ್ದುಕೊಂಡದ್ದು. ಚಿಕಿತ್ಸಾರ್ಥಿಗಳನ್ನು ಆಯ್ದುಕೊಳ್ಳುವಾಗ ಆಸ್ಪತ್ರೆಯ ಮನಃಶಾಸ್ತ್ರಜ್ಞ ಆನಂದ ರಾವ್ ಕೂಡಾ ನೆರವಾದರು. ನಿರ್ದೇಶಕ ಆಸ್ಪತ್ರೆಯ ಒಳಗಿನ ಕೋಣೆಯೊಂದರಲ್ಲಿ ಶಿಬಿರಕ್ಕೆ ಯಾರ್ಯಾರನ್ನು ಕರೆದೊಯ್ಯಬಹುದೆಂಬುದನ್ನು ನಿರ್ಧರಿಸಲು ಅನೇಕರನ್ನು ಕರೆದು ಮಾತನಾಡಿಸಿ ಸ್ಥೂಲವಾಗಿ ಪರೀಕ್ಷೆಯನ್ನು ನಡೆಸಿದ್ದುದೂ ಉಂಟು. ಆದರೆ ಅಷ್ಟರಿಂದಲೇ ಅವರನ್ನು ಅರಿತುಕೊಂಡಂತಾಗಲಿ. ಅವರ ಮನೋಸ್ಥಿತಿ ಸ್ಥಿಮಿತವಾದುದಲ್ಲವೆಂಬುದು ಅನುಭವವೇದ್ಯವಾದದು. ಶಿಬಿರದಲ್ಲಿರುವಾಗ ಚಿಕಿತ್ಸಾರ್ಥಿಗಳನ್ನು ಒಂದು ಗುಂಪೆಂದು ಭಾವಿಸಿ ವೀಕ್ಷಿಸಬೇಕಾದುದು ಅಗತ್ಯವೇನೊ ನಿಜವೇ. ಆದರೆ ಪ್ರತಿಯೊಬ್ಬ ಚಿಕಿತ್ಸಾರ್ಥಿಯ ವರ್ತನೆಯನ್ನು ತಿಳಿದುಕೊಳ್ಳುವುದು ಹೇಗೆ? ಅದಕ್ಕೆಂದೇ ಒಬ್ಬೊಬ್ಬ ವಿದ್ಯಾರ್ಥಿಗೆ ಒಬ್ಬೊಬ್ಬ ಚಿಕಿತ್ಸಾರ್ಥಿಯನ್ನು ಅಭ್ಯಾಸಮಾಡುವಂತೆ ವಿಧಿಸಲಾಯಿತು. ಇದರಿಂದ ಒಟ್ಟಿನಲ್ಲಿ ಅವರಲ್ಲಾದ ಪರಿವರ್ತನೆಯನ್ನು ಶಾಸ್ತ್ರೀಯವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂಬ ನಂಬುಗೆ. ಈ ನಂಬುಗೆಗೆ ಬಲವಾದ ನೆಲಗಟ್ಟು ಸಿಗಬಹುದಿತ್ತು. ಆದರೆ ನಿರೀಕ್ಷಿಸಿದಷ್ಟು ರೀತಿಯಲ್ಲಿ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡಂತೆ ಕಾಣಲಿಲ್ಲ ಈ ಸಂದರ್ಭದಲ್ಲಿ ಡಾ. ಸರೋಜಾಬಾಯಿಯವರು ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರಯ್ಯನವರಿಗೆ ಬರೆದ ಕೃತಜ್ಞತಾ ಪತ್ರದಲ್ಲಿನ ಕೆಲವು ಭಾಗಗಳನ್ನು ಉದಾಹರಿಸಿದರೆ ತಪ್ಪಿಲ್ಲವೆನ್ನಿಸುತ್ತದೆ. ರೋಗಿಗಳ ವರ್ತನೆಯಲ್ಲಾದ ಪರಿವರ್ತನೆಯನ್ನು ನಾನು ಅತ್ಯಂತ ಕುತೂಹಲಾಸಕ್ತಿಯಿಂದ ವೀಕ್ಷಿಸಿದ್ದೇನೆ. ಶಿಬಿರಕ್ಕೆ ಕಳಿಸಿದ್ದ ಹತ್ತು ರೋಗಿಗಳಲ್ಲಿ 7 ಜನರು ಅತ್ಯದ್ಭುತವಾಗಿ ಗುಣಮುಖರಾಗಿದ್ದಾರೆ. ಅವರಲ್ಲಿ ಆರು ಜನರಲ್ಲಿ ಗುಣಮುಖರಾಗಿದ್ದಾರೆಂದು ಈಗಾಗಲೇ ಅವರವರ ಮನೆಗಳಿಗೆ ಕಳಿಸಲಾಗಿದೆ. ಒಬ್ಬಾತನನ್ನು ಇನ್ನು ಕಳಿಸಬೇಕಾಗಿದೆಯಷ್ಟೆ. ಇನ್ನು ಮುಂದೆಯೂ ಇಂತಹ ಶಿಬಿರಗಳನ್ನು ನೀವು ಹೆಚ್ಚು ಹೆಚ್ಚಾಗಿ ನಡೆಸುತ್ತೀರಿ ಎಂದು ಆಶಿಸುತ್ತೇನೆ. ಇವುಗಳಲ್ಲಿ ನಮ್ಮ ರೋಗಿಗಳಿಗೆ ಭಾಗವಹಿಸಲು ಅವಕಾಶ ಕೊಡುತ್ತೀರಿ ಎಂದು ಇಚ್ಛಿಸುತ್ತೇನೆ. ಇಂಥ ಶಿಬಿರಗಳಿಂದ ವಿದ್ಯಾರ್ಥಿಗಳಿಗೂ ರೋಗಿಗಳಿಗೂ ಉಪಯೋಗವಾಗುವುದಲ್ಲದೆ ಸಾಮಾನ್ಯ ಜನರ ಭಾವನೆಯಲ್ಲಿಯೂ ಮಾರ್ಪಾಟಾಗುತ್ತದೆ. ಇದು ಸಲಕಿನಕೊಪ್ಪದ ಶಿಬಿರದಿಂದ ವಿದಿತವಾಗುತ್ತದೆ. ಊರಿನವರ ಸಹಕಾರೋತ್ಸವ ಶಿಬಿರದ ಉದ್ದೇಶಗಳಲ್ಲಿ ಏನಾದರೊಂದು ದೈಹಿಕಶ್ರಮಕ್ಕೆ ಅವಕಾಶವಾಗುವ ಕೆಲಸವನ್ನು ಕೈಕೊಂಡು, ಅದರಲ್ಲಿ ಮತ್ತು ಅದರ ಮೂಲಕ ಇತರ ಸಾಮುದಾಯಕ ಕೆಲಸಗಳಲ್ಲಿ ಶ್ರದ್ಧೆ ಹಾಗೂ ಉತ್ಸಾಹದಿಂದ ಜನರು ಭಾಗವಹಿಸುವಂತೆ ಪ್ರಚೋದಿಸುವುದೂ ಒಂದಾಗಿತ್ತು. ಇದಕ್ಕೆಂದೇ ಊರಿನ ಮುಖ್ಯ ರಸ್ತೆಯನ್ನು ರಿಪೇರಿ ಮಾಡಲು ಕೈಕೊಂಡದ್ದು. ಹತ್ತು ದಿನಗಳಲ್ಲಿ ಹೆಚ್ಚೆಂದರೆ ಒಂದು ಫರ್ಲಾಂಗಿನಷ್ಟು ಕೆಲಸವಾದರಾಯಿತೆಂದು 13ರಂದು ಕಾರ್ಯಾರಂಭವಾಯಿತು. ಆದರೆ ಇಡಿಯ ರಸ್ತೆ, ಸುಮಾರು ಎರಡು ಫರ್ಲಾಂಗಿನಷ್ಟು ಉದ್ದ ರಿಪೇರಿಯಾಯಿತು. ರಸ್ತೆಯ ಕೊನೆಕೊನೆಗೆ ಸುಮಾರು ಮೂರು ನೂರು ಅಡಿಗಳಷ್ಟು ಗಟ್ಟಿಕಲ್ಲನ್ನು ಕಡಿದು ಚರಂಡಿಯನ್ನು ನಿರ್ಮಿಸಬೇಕಾಗಿತ್ತು. ಎರಡೂ ಕಡೆಯ ಚರಂಡಿಗಳನ್ನು ಲೆಕ್ಕ ಹಾಕಿದರೆ ಐದುನೂರು ಅಡಿಗಳಿಂದಲೂ ಹೆಚ್ಚಾಗುತ್ತದೆ. ಈ ರಸ್ತೆಯನ್ನಲ್ಲದೆ ಒಳಗಿನ ಕಲ್ಲವ್ವನ ಗುಡಿಯ ಮುಂದಿನ ಬೀದಿಯನ್ನೂ ಸರಿಮಾಡಿ ಸಮಾಜಕಾರ್ಯ ರಸ್ತೆಯೆಂದು ಹೆಸರಿಡಲಾಯಿತು ಹಾಗೂ ಗುಡಿಯ ಹಿತ್ತಲಿನಲ್ಲಿ ಹೊರವಾಗಿ ಬೆಳೆದ ಕಸವನ್ನು ಕತ್ತರಿಸಿ ಸ್ವಚ್ಛಗೊಳಿಸಲಾಯಿತು. ಇಷ್ಟೆಲ್ಲಾ ಕೆಲಸವಾದದ್ದು ಬರಿಯ ಶಿಬಿರಾರ್ಥಿಗಳಿಂದ ಮಾತ್ರವಲ್ಲ. ವಿದ್ಯಾರ್ಥಿ ಗದಿಗೆಪ್ಪ, ಚಂದ್ರಕಾಂತ ಮುಂತಾದವರು ಇಲ್ಲಿ ದುಡಿದ ರೀತಿಯು ಮೆಚ್ಚುತಕ್ಕಂಥದಾಗಿತ್ತು, ನಿಜ. ಆದರೆ ಹಳ್ಳಿಗರು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚಾಗಿ ಬಂದು ದುಡಿದರು. ನೂರು ಮನೆಯ ಗ್ರಾಮದಿಂದ ಏನಿಲ್ಲವೆಂದರೂ 120 ಜನರಾದರೂ ಬಂದು ದುಡಿದಿರಬೇಕು. ಎಂದೂ ಒಂದಾಗಿ ಬಹುಶಃ ಇಂಥ ಊರ ಕಾರ್ಯ ಮಾಡಿರದಿದ್ದ ಯುವಕ ಮಂಡಲಿಯವರು 20ನೆಯ ತಾರೀಖಿನಂದು ಬಂದು ಬಹು ಕಠಿಣವಾದೆಡೆಯಲ್ಲಿ ಕೆಲಸ ಮಾಡಿದರು. ಕಲ್ಲವ್ವನ ಗುಡಿಯ ಹತ್ತಿರದ ಕೆಲಸಕ್ಕಂತೂ ತಾವಾಗಿಯೇ ಬಂದವರೂ ಇದ್ದರು. ಮಾದೇವು, ಬಸವರಾಜ ಕಲ್ಲವ್ವನ ಸೇವೆಗೆಂದು ಬಂದಿದ್ದವರಂತೆ. ಸಿಪಾಯಿ ಶಿವಪ್ಪ ಆ ಊರವನೇ ಆಗಿದ್ದುದು ಕೆಲಸಕ್ಕೊಂದು ಅರ್ಥ ಬಂದಿರಬೇಕು. ಒಂದು ಆಶ್ಚರ್ಯದ ಸಂಗತಿಯೆಂದರೆ ಮಹಿಳೆಯರು ಸಾಂಕೇತಿಕವಾಗಿಯಾದರೂ ಬಂದು ಸ್ವಲ್ಪ ಹೊತ್ತು ದುಡಿದದ್ದು. ಹಳ್ಳಿಯ ಮಹಿಳೆಯರು ಕೆಲಸದಲ್ಲಿ ಗಟ್ಟಿಗರು. ಕೂಲಿಕುಂಬಳಿಯಿಂದಲೇ ಹೆಚ್ಚಿನವರೆಲ್ಲಾ ಬದುಕುತ್ತಿರುವುದು. ಊರಿಗೆ ಸಂಬಂಧಿಸಿದಂತೆ ನಡೆಯುವ ಬಾವಿ ತೋಡುವ, ಕೆರೆ ಕಟ್ಟುವ, ರಸ್ತೆ ನಿರ್ಮಿಸುವ ಕೆಲಸದಲ್ಲೆಲ್ಲಾ ಹೆಣ್ಣಾಳುಗಳು ಗಂಡಸರೊಡಗೂಡಿ ದುಡಿಯುತ್ತಾರೆ. ಆದರೆ ಶಿಬಿರಾರ್ಥಿಗಳು ಕೈಕೊಂಡ ರಸ್ತೆಯ ರಿಪೇರಿಯ ಕೆಲಸ ಅಂತಹುದೇ ಒಂದು ಕಾರ್ಯವಾದರೂ ಅದರಲ್ಲಿ ಮಹಿಳೆಯರು ಭಾಗವಹಿಸುವುದಿಲ್ಲ. ಇದಕ್ಕೆ ಕಾರಣ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು. ಕೂಲಿಯಾಳಾಗಿ ದುಡಿಯಲು ಅಲ್ಲಿಗೇ ಬಂದಾರು. ಆದರೆ ಈ ಕೆಲಸ ಪುಕ್ಕಟೆಯಾಗಿ ಮಾಡುವಂತಹುದು. ಅಲ್ಲಿ ದುಡಿದರೆ ಹೊಟ್ಟೆ ತುಂಬುವುದು ಹೇಗೆ, ಎಂಬುದೊಂದು ಕಾರಣ. ಇದೆಲ್ಲಕ್ಕಿಂತಲೂ ಮುಖ್ಯವಾದ್ದು ಸಾಮಾಜಿಕವಾದ ನಿರ್ಬಂಧ. ಶಿಬಿರಾರ್ಥಿಗಳು ಹೊಸಬರು. ಪರ ಸಮುದಾಯಗಳಿಂದ ಬಂದವರು, ಮತ್ತೆ ಅವರು ಗಂಡಸರು, ಅವರೊಡನೆ ಬೆರೆತು ದುಡಿಯುವುದು ಒಳಿತಲ್ಲ. ಅಲ್ಲದೆ, ಸಾರ್ವಜನಿಕವಾದ ಇಂಥ ಕೆಲಸಗಳೆಲ್ಲಾ ಪುರಷರ ಪಾಲಿನವು. ಅಲ್ಲಿ ಹೆಂಗಳೆಯರಿಗೆ ಸ್ಥಾನವಿಲ್ಲ. ಇಂಥೆಲ್ಲ ಕಾರಣಗಳಿಂದ ಸಲಕಿನಕೊಪ್ಪದ ಸ್ತ್ರೀಯರು ಇಂಥ ಕಾರ್ಯಗಳಲ್ಲಿ ಭಾಗತೆಗೆದುಕೊಳ್ಳುವುದಿಲ್ಲ. ಆ ಊರಿನಲ್ಲಿ ನಡೆದ ಶಿಬಿರಗಳಲ್ಲಿ ಇದು ಆರನೆಯದು. ಇದರ ಹಿಂದೆ ಹೆಣ್ಣುಮಕ್ಕಳ ಶಿಕ್ಷಣ ತರಬೇತಿ ಕಾಲೇಜಿನ ಶಿಬಿರವೂ ನಡೆದಿತ್ತು. ಆ ಶಿಬಿರ ನಡೆದಾಗ ಆ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ನಾನು ಅಂದು ಈ ಮಾತುಗಳನ್ನು ಆಡಿದ್ದೆ: ಸಲಕಿನಕೊಪ್ಪ ನಮಗೆ ಚಂದ್ರನಿದ್ದ ಹಾಗೆ. ನಾವು ಇದುವರೆಗೂ ಸಲಕಿನಕೊಪ್ಪದ ಒಂದು ಮುಖ, ಅಂದರೆ ಪುರುಷಮುಖ ನೋಡಿದ್ದೇವೆ, ಸ್ತ್ರೀಮುಖವನ್ನು ಇನ್ನೂ ನೋಡಿಲ್ಲ, ಇಲ್ಲಿ ಸ್ತ್ರೀಯರು ಇದ್ದಾರೆಯೆ, ಎಂಬ ಸಂಶಯ ಬರುವಷ್ಟು ಇಲ್ಲಿನ ಸ್ತ್ರೀಯರು ನಮ್ಮ ಕಾರ್ಯಗಳಲ್ಲಿ ಭಾಗ ತೆಗೆದುಕೊಳ್ಳುತ್ತಿರಲಿಲ್ಲ. ಆದುದರಿಂದ ನೀವು ಅಮೆರಿಕೆಯ ಗಗನಯಾತ್ರಿಗಳು ಮಾಡಿದಂತ ಕೆಲಸವನ್ನು ಮಾಡಬೇಕಾಗಿದೆ. ಸಲಕಿನಕೊಪ್ಪದ ಇನ್ನೊಂದು ಮುಖದ ದರ್ಶನವನ್ನು ನಮಗೆ ಮಾಡಿಸಬೇಕಾಗಿದೆ. ಈ ಮಾತು ಆಡಿ ವರ್ಷ ಕಳೆದಿದ್ದರೂ, ಹಣ್ಣುಮಕ್ಕಳೇ ಶಿಬಿರ ನಡೆಸಿದ್ದರೂ ಆ ಊರ ಮಹಿಳೆಯರು ಮುಂದೆ ಬಂದಿರಲಿಲ್ಲ. ಆದರೆ ಆ ಶಿಬಿರವು ಅವರನ್ನು ಕೆಲವು ನಿಮಿಷಗಳಾದರೂ ಕರೆದು ತಂದು ಬುಟ್ಟಿ ತುಂಬಿದ ಮಣ್ಣನ್ನು ಚೆಲ್ಲುವ ಕೆಲಸದಲ್ಲಿ ತೊಡಗಿಸಿತು. ಇದು ಸಾಧ್ಯವಾದ್ದುದು ಅನೇಕ ಕಾರಣಗಳಿಂದ ಅವುಗಳಲ್ಲಿ ಮಹಿಳೆಯರಿಗೆ ರಾತ್ರಿ ಶಾಲೆ ಆರಂಭವಾದದ್ದೂ ಸೇರುತ್ತದೆ. ಅಂತೂ ಊರಿನವರು ಉತ್ಸಾಹದಿಂದ ಆ ಕೆಲಸದಲ್ಲಿ ಸಹಕರಿಸಿ ದುಡಿದರು. ವಿಶ್ವವಿದ್ಯಾಲಯದವರ ಬಗೆಗೆ ಅವರಲ್ಲಿ ಇದ್ದ ಗೌರವಾದರಗಳ ಜೊತೆಗೆ ವಿಶ್ವಾಸ ನಂಬುಗೆಗಳೂ ಮೂಡಿದ್ದುದು ಕಂಡಿತು. ಎಲ್ಲದಕ್ಕಿಂತಲೂ ತೃಪ್ತಿಯನ್ನು ನೀಡುವ ಒಂದು ದೃಶ್ಯ ಕಂಡಿತು. ಶಿಬಿರ ಮುಗಿವ ದಿನದಂದು ಮಹಿಳೆಯರು ಏರ್ಪಡಿಸಿದ ಚಹಾಕೂಟಕ್ಕೆ ಶಿಬಿರಾರ್ಥಿಗಳೆಲ್ಲಾ ಹೋಗುತ್ತಿರುವಾಗ ಮೇಗಳ ಓಣಿಯ ಮೊದಲ ಮನೆಯ ಮುಂದೆ ಆ ಮನೆಯವರೇ ಚರಂಡಿಯನ್ನು ತೋಡಿದ್ದುದು ಅವರಿಗೆ ಕಂಡಿತು. ಇಂಥ ಪರಿಣಾಮಕ್ಕಾಗಿ ಕಾಯುತ್ತಿದ್ದೆವು ಎಂಬ ಭಾವ ಹಾಯ್ದುಹೋಯಿತು. ಮುಂದಿನ ಕಟ್ಟಡಕ್ಕೆ ಇಂದಿನ ಬುನಾದಿ ಶಿಬಿರಾರ್ಥಿಗಳಿಗೆ ಶಿಬಿರದ ಜೀವನ ಹತ್ತು ದಿನದ್ದು, ವೈಯಕ್ತಿಕವಾಗಿ ಜೀವನಪರ್ಯಂತವೂ ಬಹುಶಃ ನೆನಪಿಡುವಂತಹ ಜೀವನ. ಆದರೆ ಸಲಕಿನಕೊಪ್ಪಕ್ಕೆ ಹಾಗೂ ಸಮಾಜಕಾರ್ಯ ವಿಭಾಗಕ್ಕೆ ಶಿಬಿರವು ಯಾವುದೊ ಒಂದು ಮಹಾ ಕಾರ್ಯಸೌಧಕ್ಕೆ ತಳಹದಿಯನ್ನು ಹಾಕಿತು, ಎನ್ನಿಸುತ್ತದೆ. ಸಮುದಾಯ ಸಂಘಟನೆಯ ಕಾರ್ಯ ಸತತವಾಗಿ ಸಾಗುವ ಪ್ರಕ್ರಿಯೆ. ಒಮ್ಮೆ ಬಹು ಸ್ಪಷ್ಟವಾಗಿ ಪ್ರಕಟವಾಗಬಹುದು, ಇನ್ನೊಮ್ಮೆ ಸುಪ್ತವಾಗಿ ಕಾಣದಿರಬಹುದು. ಆದರೆ ಒಮ್ಮೆ ನಿಷ್ಠೆಯಿಂದ ಆರಂಭವಾದ ಕಾರ್ಯ ಸುಪರಿಣಾಮದ ಸರಪಳಿಯನ್ನು ನಿರ್ಮಿಸುತ್ತಾ ಹೋಗುತ್ತದೆ. ಒಂದೊಂದು ಕಾರ್ಯವು ಮುಂದಿನ ಕಾರ್ಯಕ್ಕೆ ಭದ್ರ ಬುನಾದಿಯನ್ನು ಹಾಕುತ್ತಾ ಸಾಗುತ್ತದೆ. ಕೆಲಸ ಮುಂದುವರಿದಂತೆಲ್ಲಾ ಸಂಚಿತ ಪರಿಣಾಮವು ಒಲ್ಲೆನೆಂದರೂ ಹಣ್ಣಾಗಿ ಉದುರುತ್ತದೆ. ಅಂಥ ಒಂದು ಕಾರ್ಯಯೋಜನೆಗೆ ಈ ಶಿಬಿರದಲ್ಲಿ ಅಡಿಗಲ್ಲನ್ನು ಇಡಲಾಯಿತು. ಹಳ್ಳಿಯ ಅಭಿವೃದ್ಧಿಯಾಗಬೇಕಾದರೆ ಹಣಕ್ಕಿಂತಲೂ ಆಸಕ್ತಿ ಶ್ರದ್ಧೆ, ಉತ್ಸಾಹ ಜನರಲ್ಲಿ ಹೆಚ್ಚಾಗಿರಬೇಕಾಗುತ್ತದೆ. ಇವನ್ನು ಬೆದಕಿ, ಬೆಳಗಿ, ಇಲ್ಲದಿದ್ದರೆ ಮೂಡಿಸಿ, ಸಂಪೋಷಿಸಿಕೊಂಡು ಬರುವಂಥ ಕಾರ್ಯವನ್ನು ಸಮಾಜಕಾರ್ಯಕರ್ತರು ಕೈಕೊಳ್ಳಬೇಕಾಗುತ್ತದೆ. ಸಮಾಜಕಾರ್ಯಕರ್ತರಲ್ಲಿ ಸಮುದಾಯದಲ್ಲಿನ ಸಮಸ್ಯೆಗಳನ್ನೂ, ಅವುಗಳಿಗೆ ಪರಿಹಾರ ನೀಡುವಂಥ ಸಂಪನ್ಮೂಲಗಳನ್ನೂ ಸೂಕ್ಷ್ಮದೃಷ್ಟಿಯಿಂದ ನೋಡವ, ಅವುಗಳನ್ನು ಸಾಧ್ಯವಾದ ಮಟ್ಟಿಗೆ ಪರಂಪರೆಯ ನಂಬುಗೆಗೆ ತೀರಾ ವಿರುದ್ಧವಲ್ಲವೆಂಬಂಥ ವಿಧಾನಗಳ ಮೂಲಕ ಹದಗೊಳಿಸುವ ಸಾಮರ್ಥ್ಯವನ್ನು ಗಳಿಸಬೇಕಾಗುತ್ತದೆ. ಅಂಥ ಸಾಮಥ್ರ್ಯವಿರುವ ಸಮಾಜಕಾರ್ಯಕರ್ತರು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. 1. ಈ ಲೇಖನದ ಮೊದಲಿಗೇ ಮನೋಚಿಕಿತ್ಸಾಲಯದ ಬಂಧನದ ವಾತಾವರಣಕ್ಕೂ, ಹಳ್ಳಿಯ ಸ್ಚಚ್ಛಂದ ವಾತಾವರಣಕ್ಕೂ ಇರುವ ವ್ಯತ್ಯಾಸವನ್ನು ಪ್ರಸ್ತಾಪಿಸಲಾಗಿದೆ. ಬಹುಶಃ ಇಂತಹ ವಾತಾವರಣ ಮತ್ತು ಇತರ ಕಾರಣಗಳಿಂದಾಗಿಯೇ ಮನೋಚಿಕಿತ್ಸಾರ್ಥಿಗಳಲ್ಲಿ ಮಹತ್ತರ ಸುಧಾರಣೆಯಾಯಿತು. ಈ ಸಂದರ್ಭದಲ್ಲಿ ಮನೋಚಿಕಿತ್ಸಾಲಯಗಳ ಭೌತ ವಾತಾವರಣದ ಬಗ್ಗೆ ಒಂದು ಮಾತನ್ನು ಹೇಳಬೇಕಾಗುತ್ತದೆ. ಕೈದಿಗಳನ್ನು ಬಂಧಿಸಿಡಲು ಕಟ್ಟಿದ ಸೆರೆಮನೆಗಳಂತೆ ಮನೋಚಿಕಿತ್ಸಾಲಯಗಳೂ ಕಟ್ಟಲ್ಪಟ್ಟಿರುವುದುಂಟು. ಇಂಥ ಕಟ್ಟೋಣ ಬ್ರಿಟಿಷರಿಂದ ಪಡೆದ ಬಳುವಳಿಯೆಂದೇ ಹೇಳಬೇಕು. ಮನೋರೋಗಿಗಳು ಸಮಾಜಕ್ಕೆ ಕಂಟಕಪ್ರಾಯರು, ಅವರಿಂದ ಅಪಾಯ ಹೆಚ್ಚು ಆದುದರಿಂದ ಅವರನ್ನು ದೂರ ದೂರದಲ್ಲಿನ ಭದ್ರವಾದ ಸ್ಥಳವೊಂದರಲ್ಲಿ ಇಟ್ಟು ಹದ್ದುಗಾವಲಿನಿಂದ ಕಾಯಬೇಕು-ಇತ್ಯಾದಿಯಾಗಿ ಜನರು ಭಾವಿಸುತ್ತಿದ್ದರು. ಅವರು ಇಂಥ ಹೆದರಿಕೆಯ ಭಾವನೆಯ ಸೆರೆಮನೆಯಂಥ ಮನೋಚಿಕಿತ್ಸಾಲಯದ ಕಟ್ಟಡಗಳ ರೂಪವನ್ನು ಪಡೆಯಿತು. ಭೌವ್ಯಾಕಾರದ, ಎತ್ತರವಾದ ಗೋಡೆಗಳ ಕಟ್ಟಡಗಲ್ಲಿ ಸಾವಿರಾರು ಮನೋರೋಗಿಗಳನ್ನು ತುರುಗಿಸಿಟ್ಟು ಚಿಕಿತ್ಸಾಲಯಗಳು ಸಮುದಾಯದಿಂದ ಪ್ರತ್ಯೇಕವಾಗಿದ್ದುದೂ, ರೋಗಿಗಳನ್ನು ಸಮುದಾಯದಿಂದ ಸಂಪೂರ್ಣ ಬೇರ್ಪಡಿಸಿದುದೂ ಜನರ ಭಯದ ಕಾರಣದಿಂದಲೇ. ಇಂಗ್ಲೆಂಡಿನಲ್ಲಿನ ಇಂಥ ಚಿಕಿತ್ಸಾಲಯಗಳ ಪರಂಪರೆ ಭಾರತಕ್ಕೂ ಹಬ್ಬಿ ಹರಡಿತು. ಇಂಗ್ಲೆಂಡಿನಲ್ಲಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಈ ಪುಸ್ತಕ ನೋಡಿರಿ : Anthnony Forder, Social Casework and Administration, Faber and Faber, London, 1966, p.84. ಡಾ.ಎಚ್.ಎಂ. ಮರುಳಸಿದ್ಧಯ್ಯ (ಸಂಗ್ರಹ ಲೇಖನ) ಪೂರ್ಣ ಪಾಠಕ್ಕೆ ನೋಡಿ: ಸಮುದಾಯ ಸಂಘಟನೆ, ಐಬಿಎಚ್ ಪ್ರಕಾಶನ, ಬೆಂಗಳೂರು 2004 (ಅನುಬಂಧ-3)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|