ಸಮಾಜಕಾರ್ಯ ಎಂದರೇನೇ ವಿಚಿತ್ರವಾಗಿ ಕಾಣುತ್ತಿದ್ದ ಕಾಲ ಮರೆಯಾಗಿ ತನ್ನ ವಿಶಿಷ್ಟತೆಯಿಂದ ಸಮಾಜದಲ್ಲಿ ಗೌರವ ಗಳಿಸುತ್ತಿರುವ ಕಾಲದಲ್ಲಿ ಸಮಾಜಕಾರ್ಯ ಅವಸಾನದ ಹಾದಿ ಹಿಡಿದಿರುವುದು ನಿಜಕ್ಕೂ ದುರ್ದೈವದ ಸಂಗತಿ. ಭಾರತದ ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಸಮಾಜಕಾರ್ಯವು ಸಮಾಜಸೇವೆಯ ಹೆಸರಿನಲ್ಲಿ ಪುರಾತನ ಕಾಲದಿಂದಲೂ ಆಚರಣೆಯಲ್ಲಿದ್ದಿತ್ತು. ಸೇವೆಯೇ ಸಮಾಜಕಾರ್ಯದ ಜೀವಾಳ. ಆದರೆ ಅದನ್ನು ವ್ಯವಸ್ಥಿತವಾಗಿ, ವೈಜ್ಙಾನಿಕ ಜ್ಞಾನದಡಿ ಕ್ರಮಬದ್ಧವಾಗಿ ಆಚರಣೆಗೆ ತಂದಿದ್ದು ಮಾತ್ರ 1936 ರ ತರುವಾಯ. ನಂತರದ ದಿನಗಳಲ್ಲಿ ಸಮಾಜಕಾರ್ಯವನ್ನು ಒಂದು ವಿಶಿಷ್ಟ ವಿಷಯವಾಗಿ ಪರಿಗಣಿಸಲ್ಪಟ್ಟು ಪದವಿ, ಸ್ತಾಯಕೋತ್ತರ ಮತ್ತು ಸ್ನಾತಕ ಹಂತಗಳಲ್ಲಿ ಬೋಧಿಸಲು ದೇಶದ ಬಹುತೇಕ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳೂ ಹಾಗೂ ಪರಿಗಣಿಸಲ್ಪಟ್ಟ ಖಾಸಗಿ ವಿಶ್ವವಿದ್ಯಾಲಯಗಳು (ಡೀಮ್ಡ್ ಯೂನಿವರ್ಸಿಟಿ) ಮುಂದಾದವು. ಇದರ ಫಲವಾಗಿ ಇಂದು ಸಮಾಜಕಾರ್ಯ ಮನೆಮಾತಾಗಿದೆ ಹಾಗೂ ಸಮಾಜಕಾರ್ಯವನ್ನು ಅಭ್ಯಸಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ಸಮಾಜಕಾರ್ಯ ಶಿಕ್ಷಣವನ್ನು ಪಡೆದ ಬಹುಪಾಲು ಜನರು ಸಮಾಜದ ವಿವಿಧ ವಲಯಗಳಲ್ಲಿ, ವಿವಿಧ ಸ್ಥರಗಳಲ್ಲಿ ಹಾಗೂ ವಿವಿಧ ಬಗೆಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ / ಮೂಡಿಸುತ್ತಿದ್ದಾರೆ. ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ರಂಗಗಳಲ್ಲಿ ಅಷ್ಟೇ ಅಲ್ಲದೇ ಸ್ವಯಂಸೇವಾ ವಲಯ ಹಾಗೂ ಸಾಮಾಜಿಕ ಕ್ರಿಯೆಗೆ ಸಂಬಂಧಿಸಿದಂತಹ ವಿಭಿನ್ನ ವಲಯಗಳಲ್ಲಿ ಸಮಾಜಕಾರ್ಯಕರ್ತರು ಕೈಗೊಂಡ ಕಾರ್ಯ ಅವಿಸ್ಮರಣೀಯ. ಹೀಗೆ ಸಮಾಜದ ವಿವಿಧ ರಂಗ ಹಾಗೂ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಸಮಾಜದಿಂದ ಮನ್ನಣೆ ಮತ್ತು ಗೌರವಗಳನ್ನು ಸಂಪಾದಿಸಿಕೊಳ್ಳುತ್ತಿರುವ ಬಹುಪಾಲು ಸಮಾಜಕಾರ್ಯಕರ್ತರು, ತಮ್ಮ ವೃತ್ತಿಯ ಆಶೋತ್ತರಗಳನ್ನು, ಮೌಲ್ಯಗಳನ್ನು, ತತ್ವಗಳನ್ನು ಮತ್ತು ವೃತ್ತಿ ಧರ್ಮವನ್ನು ಸಂಪೂರ್ಣವಾಗಿ ಮರೆತಂತಿದೆ. ಇದರ ಫಲವಾಗಿ ಇಂದು ಸಮಾಜಕಾರ್ಯ ಅವಸಾನದತ್ತ ಸಾಗುತ್ತಿದೆ. ಪ್ರಸ್ತುತ ಈ ಹೇಳಿಕೆಯನ್ನು ಯಾವ ವೃತ್ತಿಪರ ಸಮಾಜಕಾರ್ಯಕರ್ತನೂ ಒಪ್ಪುವುದಿಲ್ಲ ಕಾರಣ ಸಮಾಜಕಾರ್ಯ ಶಿಕ್ಷಣದಲ್ಲಿ ಆಗುತ್ತಿರುವ ಬದಲಾವಣೆಗಳ ಸೂಕ್ಷ್ಮತೆಯನ್ನು ಅರಿಯುವಲ್ಲಿ ಬಹುತೇಕರು ವಿಫಲರಾಗಿದ್ದಾರೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳ ಸಮಾಜಕಾರ್ಯ ವಿಭಾಗಗಳಿಗೆ ಹಾಗೂ ಸಂಯೋಜಿತ ಕಾಲೇಜುಗಳಿಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನಿಸಿದಾಗ, ಸಮಾಜಕಾರ್ಯವನ್ನು ಅಧ್ಯಯನ ವಿಷಯವಾಗಿ ಸ್ವೀಕರಿಸಿರುವ ವಿದ್ಯಾರ್ಥಿಗಳ ಸಂಖ್ಯೆ ಕಳೆದೆರಡು ವರ್ಷಗಳಿಂದ ಗಣನೀಯವಾಗಿ ಕಡಿಮೆಯಾಗುತ್ತಿದೆ. ಉದಾಹರಣಿಗೆ ಇತ್ತೀಚೆಗೆ ಅಂತ್ಯಗೊಂಡ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಪ್ರವೇಶಾತಿ ಪ್ರಕ್ರಿಯೆಯನ್ನೇ ಗಮನಿಸಿ, ಹಿಂದಿನ ವರ್ಷ ವಿಶ್ವವಿದ್ಯಾಲಯ ವಿಭಾಗವನ್ನೂ ಸೇರಿದಂತೆ ಎಲ್ಲ ಸಂಯೋಜಿತ ಕಾಲೇಜುಗಳ ಬಹುಪಾಲು ಸೀಟುಗಳ ಭರ್ತಿಯಾಗಿದ್ದವು. ಆದರೆ ಪ್ರಸ್ತುತ ಸಾಲಿನಲ್ಲಿ ವಿಶ್ವವಿದ್ಯಾಲಯ ಮತ್ತು ಕೋಲಾರ ಸ್ನಾತಕೋತ್ತರ ಪದವಿಯನ್ನು ಹೊರತುಪಡಿಸಿದರೆ ಉಳಿದ ಎಲ್ಲ ಕಾಲೇಜುಗಳಲ್ಲಿ ಕೆಲ ಸೀಟುಗಳು ಭರ್ತಿಯಾಗದೇ ಉಳಿದಿವೆ. ಒಂದು ಕಾಲೇಜಿನಲ್ಲಿ ಕೇವಲ ಒಂದು ಸೀಟು ಮಾತ್ರ ಭರ್ತಿಯಾಗಿದ್ದರೆ, ಮತ್ತೊಂದು ಕಾಲೇಜಿನಲ್ಲಿ ಮೂರು ಸೀಟುಗಳು, ಮಗದೊಂದು ಕಾಲೇಜಿನಲ್ಲಿ ಆರು ಸೀಟುಗಳು ಮಾತ್ರ ಭರ್ತಿಯಾಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಬಹುಶಃ ಮುಂದಿನ ವರ್ಷ ಈ ಮೂರೂ ಕಾಲೇಜುಗಳನ್ನು ಮುಚ್ಚಬೇಕಾದ ಅನಿವಾರ್ಯ ಪರಿಸ್ಥಿತಿ ಎದಿರಾಗುವುದರಲ್ಲಿ ಸಂಶಯವಿಲ್ಲ. ಪ್ರಸ್ತುತ ಎದಿರಾಗಿದುವ ದಾಖಲಾತಿ ನ್ಯೂನ್ಯತೆಯೆಂಬ ಜಾಡ್ಯ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಿರದೆ ಕರ್ನಾಟಕದ ಬಹುಪಾಲು ವಿಶ್ವವಿದ್ಯಾಲಯಗಳನ್ನು ಆವರಿಸಿದೆ. ಜೊತೆಗೆ ಸದರಿ ಕೋರ್ಸಿನ ಪ್ರವೇಶವನ್ನು ಹರಸಿ ಬರುವ ಆಕಾಂಕ್ಷಿಗಳ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆ ಆಗಿರುವುದು ಸಮಾಜಕಾರ್ಯ ಹಾಗೂ ಸಮಾಜಕಾರ್ಯ ಶಿಕ್ಷಣದ ಬೆಳವಣಿಗೆಯ ಹಿತದೃಷ್ಟಿಯಿಂದ ಮಾರಕವಾಗಿ ಪರಿಣಮಿಸುತ್ತಿದೆ.
ಬಹುಶಃ ವೃತ್ತಿಪರ ಸಮಾಜಕಾರ್ಯಕರ್ತರಿಗೆ ಮತ್ತು ಸಮಾಜಕಾರ್ಯವನ್ನು ಬೋಧಿಸುತ್ತಿರುವ ಶಿಕ್ಷಕರಿಗೆ ಇದೊಂದು ವಿಷಯವೇ ಅಲ್ಲ. ಕಾರಣ ಈಗಾಗಲೇ ಅವರು ತಮ್ಮ ಜೀವನದ ನೆಲೆಯನ್ನು ಕಂಡುಕೊಂಡಿದ್ದಾರೆ. ನೆಲೆ ಕಂಡುಕೊಳ್ಳದ ಸಮಯದಲ್ಲಿ ಇದ್ದಂತಹ ವೃತ್ತಿಯ ಬಗ್ಗೆಗಿನ ಪ್ರೀತಿ ಮತ್ತು ವೃತ್ತಿಧರ್ಮದ ಬಗ್ಗೆಗಿನ ಗೌರವ ನೆಲೆಕಂಡುಕೊಂಡ ಕೂಡಲೇ ಮಾಯವಾಗಿದೆ. ಇಂತಹ ವ್ಯಕ್ತಿಗಳ ಸಂಖ್ಯೆ ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಸಮಾಜಕಾರ್ಯ ಕ್ಷೇತ್ರದಲ್ಲಿ ಅಧಿಕವಿರುವುದು ದುರ್ದೈವವೇ ಸರಿ. ಪ್ರಸ್ತುತ ಸಮಾಜಕಾರ್ಯ ಶಿಕ್ಷಣ ಪಡೆದು ಸಮಾಜಕಾರ್ಯಕರ್ತರಾದವರು ತಮ್ಮ ವೃತ್ತಿಯ ಬಗ್ಗೆ ಬೆಳೆಸಿಕೊಂಡಿರುವ ಅಸಡ್ಡೆ ಸಮಾಜಕಾರ್ಯದ ಉನ್ನತಿಗೆ ಕೊಡಲಿ ಪೆಟ್ಟು ನೀಡುತ್ತಿದೆ. ಸಮಾಜಕಾರ್ಯವನ್ನು ಅಭ್ಯಸಿಸಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವ ಒಬ್ಬ ಸಮಾಜಕಾರ್ಯಕರ್ತ ತಾನು ಎಚ್.ಆರ್. ಮ್ಯಾನೇಜರ್ / ವೆಲ್ಫೇರ್ ಆಫಿಸರ್ ಎಂದು ಹೇಳಿಕೊಳ್ಳುತ್ತಾನೆ/ಳೆಯೇ ಹೊರತು ನಾನೊಬ್ಬ ಸಮಾಜಕಾರ್ಯಕರ್ತ ಅಥವಾ ಸಮಾಜಕಾರ್ಯ ಹಿನ್ನೆಲೆಯಿಂದ ಬಂದವನು/ಳು ಎಂದು ಹೇಳಿಕೊಳ್ಳುವುದಿಲ್ಲ/ ಹೇಳಿಕೊಳ್ಳಲು ತಾತ್ಸಾರ. ಒಮ್ಮೆ ಉದ್ಯೋಗ ಗಿಟ್ಟಿಸಿಕೊಂಡರಾಯಿತು, ನಂತರ ತಾವು ಬೆಳೆದು ಬಂದ ಹಾದಿ, ತಾವು ಓದಿದ ಕೋರ್ಸು, ಅದರ ಮೌಲ್ಯ, ಆಶಯ, ತತ್ವ ಹೀಗೆ ಎಲ್ಲವನ್ನೂ ನಿರ್ಲಕ್ಷಿಸಿಬಿಡುತ್ತಾರೆ. ಇಂತಹ ವೃತ್ತಿಪರ ಸಮಾಜಕಾರ್ಯಕರ್ತರು ಸಮಾಜಕಾರ್ಯವನ್ನು ಬೆಳೆಸುವರೇ ಎಂಬುದು ಯಕ್ಷಪ್ರಶ್ನೆ. ನನ್ನ ಪ್ರಕಾರ ಇವರು ಸಮಾಜಕಾರ್ಯಕರ್ತರಾಗುವುದಕ್ಕೆ ನಾಲಾಯಕ್ಕು. ವೃತ್ತಿಪರ ಸಮಾಜಕಾರ್ಯಕರ್ತರ ವಿಚಾರ ಬದಿಗಿರಲಿ. ಏಕೆಂದರೆ ಅವರು ತಮ್ಮವೇ ಕಾರ್ಯಗಳಲ್ಲಿ ಮಗ್ನರಾಗಿ ಬಿಡುವಿಲ್ಲದಂತಿದ್ದಾರೆಂದು ತಿಳಿಯೋಣ. ಇಚ್ಚೆಯಿದ್ದಲ್ಲಿ ಅಥವಾ ತಮಗೆ ಅನ್ನ ನೀಡುತ್ತಿರುವ ವೃತ್ತಿಯ ಬಗ್ಗೆ ಗೌರವವಿದ್ದ ಪಕ್ಷದಲ್ಲಿ ಯಾವುದೇ ಅನಿವಾರ್ಯ ಪರಿಸ್ಥಿತಿ ಎದಿರಾದರೂ ತಮ್ಮ ವೃತ್ತಿಯನ್ನು ಕಡೆಗಣಿಸುತ್ತಿರಲಿಲ್ಲ ಮತ್ತು ವೃತ್ತಿಗೌರವವನ್ನು ಬಿಡುತ್ತಿರಲಿಲ್ಲ. ಆದರೆ ಪರಿಸ್ಥಿತಿ ನಾವಂದುಕೊಂಡಷ್ಟು ಸರಳವಾಗಿಲ್ಲ. ಕಾರಣ ಸಮಾಜಕಾರ್ಯವನ್ನು ಅಭ್ಯಸಿಸಲು ಬರುವ ಬಹುಪಾಲು ಆಕಾಂಕ್ಷಿಗಳ ಮೊದಲ ಆದ್ಯತೆ ನೌಕರಿ ಗಿಟ್ಟಿಸಿಕೊಳ್ಳುವುದೇ ಆಗಿದೆ. ಒಮ್ಮೆ ನೌಕರಿ ಗಿಟ್ಟಿಸಿಕೊಂಡ ನಂತರ ಸಮಾಜಕಾರ್ಯದ ಕಡೆ ತಿರುಗಿಯೂ ಸಹ ನೋಡುವುದಿಲ್ಲ. ಇದು ಸದ್ಯದ ಪರಿಸ್ಥಿತಿ. ಆದರೆ ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಸಮಾಜಕಾರ್ಯಕರ್ತರೆಲ್ಲರೂ ಒಟ್ಟಾಗಿ ಸೇರುವ ಆಲೋಚನೆ /ಚರ್ಚೆಗಳು ನಡೆಯುವುದುಂಟು. ಆದರೆ ಅವು ಅನುಷ್ಠಾನಕ್ಕೆ ಬರುವುದೇ ಇಲ್ಲ. ಅದೃಷ್ಟವಶಾತ್, ಒಂದು ವೇಳೆ ಅನುಷ್ಠಾನಗೊಂಡರೆ ಅಲ್ಲಿ ನಡೆಯುವ ಚರ್ಚೆ ಸಮಾಜಕಾರ್ಯದ ಅಭಿವೃದ್ಧಿಯ ಹೊರತಾಗಿರುವುದೆಂಬುದು ವಿಪರ್ಯಾಸ. ಇಂತಹ ಚರ್ಚೆಗಳನ್ನು ಕೆಲವರು ಉಪಯೋಗಿಸಿಕೊಂಡು ತಮ್ಮ ಬಗ್ಗೆ ಹಾಗೂ ತಾವು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಬಗ್ಗೆ ಕೊಚ್ಚಿಕೊಳ್ಳುವುದೂ ಉಂಟು. ಇದರಿಂದ ಸಮಾಜಕಾರ್ಯದ ಅಭಿವೃದ್ಧಿ ಆಗುವುದೇ ಎಂಬುದು ನನಗಿರುವ ಯಕ್ಷಪ್ರಶ್ನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರು ಎನಿಸಿಕೊಂಡವರು ಹಲವಾರು ಗುಂಪುಗಳನ್ನು ರಚಿಸಿಕೊಂಡು ವ್ಯವಹರಿಸುವುದೂ ಉಂಟು. ಆದರೆ ಅದು ಕೇವಲ ನೌಕರಿಗೆ ಸಂಬಂಧಿಸಿದ ಮಾಹಿತಿ ರವಾನಿಸುವುದಕ್ಕೆ ಅಥವಾ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿವೆ. ರಚನಾತ್ಮಕ ಹಾಗೂ ಸಮಾಜಕಾರ್ಯ ಕ್ಷೇತ್ರದ ಅಭಿವೃದ್ಧಿಯ ವಿಚಾರಗಳನ್ನು ಚರ್ಚಿಸುವ ವೃತ್ತಿಪರ ಸಮಾಜಕಾರ್ಯಕರ್ತರು ಸಿಗುವುದು ವಿರಳಾತಿವಿರಳವೆಂದರೆ ತಪ್ಪಾಗದು. ಹೀಗೆ ಮಾಡುವುದರಿಂದ ಸಮಾಜಕಾರ್ಯದ ಅಭಿವೃದ್ಧಿಗಾಗಲಿ ಅಥವಾ ಸಮಾಜಕಾರ್ಯ ಶಿಕ್ಷಣಕ್ಕಾಗಲಿ ಅಥವಾ ಸಮಾಜಕಾರ್ಯ ಸಾಹಿತ್ಯ ಸೃಷ್ಠಿಗಾಗಲೀ ಯಾವುದೇ ಕೊಡುಗೆ ನೀಡಲು ಸಾಧ್ಯವಿಲ್ಲ. ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ವೃತ್ತಿಪರ ಸಮಾಜಕಾರ್ಯಕರ್ತರ ಸಂಗತಿ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ವಿಚಿತ್ರ. ಮಾತೇ ಬಂಡವಾಳವಾಗಿಸಿಕೊಂಡು, ಮಾತುಗಳಲ್ಲೇ ಅರಮನೆ ಕಟ್ಟಿ ರಾಜರಂತೆ ಬೀಗುತ್ತಿರುವ ಇವರು ಸಮಾಜಕಾರ್ಯದ ಸಾಹಿತ್ಯ ಸೃಷ್ಟಿಗೆ ನೀಡಿರುವ ಕೊಡುಗೆ ನಗಣ್ಯ. ಬಹುಶಃ ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಸೃಷ್ಟಿಯಾಗಿದ್ದರೆ ಅದು ಪ್ರೊ. ಎಚ್.ಎಂ. ಮರುಳಸಿದ್ದಯ್ಯ ಮತ್ತು ರಮೇಶ್ ಎಂ. ಸೋನಕಾಂಬಳೆಯವರಿಂದ ಮಾತ್ರ. ಹಾಗಾದರೆ ಬೇರೆ ಯಾರೂ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಇಲ್ಲವೇ? ಖಂಡಿತಾ ಇದ್ದಾರೆ. ಆದರೆ ಅವರಿಗೆ ಅವರದೇ ಆದ ಜಂಜಾಟಗಳಿವೆ. ಅವರದ್ದೇ ಆದ ಕುಟುಂಬವಿದೆ. ಜೀವನವಿದೆ.ಬಿ.ಓ.ಇ., ಬಿ.ಓ.ಎಸ್., ಎಲ್.ಐ.ಸಿ., ವಿಷಯ ಪರಿಣಿತ., ವೈವಾ., ಇವ್ಯಾಲ್ಯೂಯೇಷನ್ ಹೀಗೆ ಹಲವಾರು ಕಾರ್ಯಗಳಲ್ಲಿ ಮಗ್ನರಾಗಿವಾಗ ಸಾಹಿತ್ಯ ರಚನೆಗೆ ಸಮಯವೆಲ್ಲಿ ದೊರೆಯುತ್ತದೆ? ಒಂದು ದಿನವೂ ಪುರುಸೊತ್ತಿಲ್ಲ. ದಿನಕ್ಕೆ ನೂರಿನ್ನೂರು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕಲ್ಲವೇ! ಕೆಲವೊಮ್ಮೆ ರಜಾ ದಿನಗಳಲ್ಲೂ ನಿಷ್ಠೆಯಿಂದ ಈ ಕಾರ್ಯ ಮಾಡುವುದೂ ಉಂಟು. ಏಕೆಂದರೆ ಅದಕ್ಕೆ ಸಂಬಳದ ಹೊರತಾಗಿ ಹೆಚ್ಚಿಗೆ ಹಣ ಸಿಗುವುದು. ಒಂದು ವೇಳೆ ಈ ವಿಚಾರಗಳಲ್ಲಿರುವ ಆಸಕ್ತಿ ಪಾಠ-ಪ್ರವಚನಗಳನ್ನು ಬೋಧಿಸಿ, ಕ್ಷೇತ್ರಕಾರ್ಯ ವರದಿಗಳನ್ನು ಮೌಲ್ಯಮಾಪನ ಮಾಡುವುದರಲ್ಲಿ ತೋರಿಸಿದ್ದರೆ, ಬಹುಶಃ ಸಮಾಜಕಾರ್ಯಕ್ಕೆ ಪ್ರಸ್ತುತ ಪರಿಸ್ಥಿತಿ ಎದಿರಾಗುತ್ತಿರಲಿಲ್ಲ. ಇಲ್ಲಿ ಸಮಾಜಕಾರ್ಯ ಶಿಕ್ಷಕರನ್ನು ದೂಷಿಸಿ ಪ್ರಯೋಜನವಿಲ್ಲ, ಕಾರಣ ರಾಜ್ಯದ ಯಾವುದೇ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಬೇಡಿಕೆಗನುಗುಣವಾಗಿ ಪ್ರಾಧ್ಯಾಪಕರ ಲಭ್ಯತೆ ಇಲ್ಲ. ಆದರೂ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಮಾಜಕಾರ್ಯ ವಿಭಾಗ ಅಸ್ತಿತ್ವದಲ್ಲಿದೆ, ಅಲ್ಲಿ ವಿದ್ಯಾರ್ಥಿಗಳೂ ಓದುತ್ತಿದ್ದಾರೆ. ಹೀಗಿರುವಾಗ ಮೌಲ್ಯಮಾಪನ, ವೈವಾದಂತಹ ಕೆಲಸಗಳನ್ನು ಯಾರಿಂದ ತಾನೇ ಮಾಡಿಸಲು ಸಾಧ್ಯ. ಅದಕ್ಕಾಗಿ ಬೇರೆಯವರನ್ನು ನೇಮಿಸಲು ಸಾಧ್ಯವಿಲ್ಲವಲ್ಲ. ಒಂದು ವೇಳೆ ಉಳಿದ ಎಲ್ಲ ಕೆಲಸಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಬಹುದು ಆದರೆ ಪರಿಕ್ಷೆ ಮತ್ತು ಮೌಲ್ಯಮಾಪನದಂತಹ ಸೂಕ್ಷ್ಮವಿಚಾರಗಳಿಗೆ ಖಾಯಂ ಪ್ರಾಧ್ಯಾಪಕರೇ ಬೇಕಲ್ಲವೆ. ಬಹುಶಃ ಇದೇ ಕಾರಣದಿಂದ ಇರಬಹುದು ಮೌಲುಮಾಪನ ಕೆಲಸಕ್ಕೆ ನಿಯೋಜನೆಗೊಳ್ಳುವ ಶಿಕ್ಷಕರು ವಿಧಿಯಿಲ್ಲದೆ ದಿನವೊಂದಕ್ಕೆ ನೂರಿನ್ನೂರು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದು. ಪ್ರಸ್ತುತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್ ಮಾಡಲೂ ತಾಕತ್ತು ಬೇಕು. ಈ ಕಾರಣದಿಂದಲೇ ಇರಬಹುದು ಸ್ನಾತಕೋತ್ತರ ತರಗತಿಗಳಲ್ಲಿ ಯಾವುದೇ ವಿದ್ಯಾರ್ಥಿ ಫೇಲಾಗದಿರುವುದು. ವೈವಾಗಳಲ್ಲಿ ಕೇಳಲ್ಪಡುವ ಪ್ರಶ್ನೆಗಳಂತೂ ಕೇಳುವವರಿಗೇ ಪ್ರೀತಿ. ಇನ್ನೂ ಕಿರು ಪ್ರಬಂಧಗಳೋ? ಈ ಬಗ್ಗೆ ಪ್ರಸ್ತಾಪಿಸದಿರುವುದೇ ಒಳಿತು. ಹೀಗಿರುವಾಗ ಸಮಾಜಕಾರ್ಯ ಶಿಕ್ಷಣ ಪಡೆದು ಹೊರಬಂದ ವಿದ್ಯಾರ್ಥಿಗಳಿಂದ ಯಾವ ಕ್ವಾಲಿಟಿ / ಕೌಶಲ್ಯಗಳನ್ನು ನಿರೀಕ್ಷಿಸಲು ಸಾಧ್ಯ. ಒಂದು ಪತ್ರವನ್ನೂ ಸರಿಯಾಗಿ ಬರೆಯಲು ಬರದವರನ್ನು ಯಾವ ಕಂಪೆನಿ / ಎನ್.ಜಿ.ಓ ಉತ್ತಮ ಸಂಬಳಕ್ಕೆ ಕೆಲಸಕ್ಕೆ ತೆಗೆದುಕೊಳ್ಳುವರು. ಕೆಲಸವಿರಲಿ, ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳಲಾಗದವರನ್ನು ಸಮಾಜ ಹೇಗೆ ತಾನೇ ಸ್ವೀಕರಿಸುವುದು. ಕನಿಷ್ಟ ಮಾನದಂಡಗಳನ್ನೂ ಹೊಂದಿರದ ತರಬೇತಿ ಹೊಂದಿದ ಸಮಾಜಕಾರ್ಯರ್ತರನ್ನು ಕಂಪೆನಿ / ಸಂಸ್ಥೆ ಹೇಗೆ ತಾನೇ ನೌಕರಿ ನೀಡುವುದು. ಈ ಕನಿಷ್ಟ ಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜಕಾರ್ಯಕರ್ತರಿಗೆ ಇಲ್ಲವೇ? ಅಂತಿಮವಾಗಿ, ಖಾಯಂ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜಕಾರ್ಯ ಶಿಕ್ಷಕರು ಕನಿಷ್ಟ ಪಕ್ಷ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳನ್ನು ನಡೆಸಿಕೊಡುತ್ತಿದ್ದಾರೆಯೇ? ಕ್ಷೇತ್ರ ಕಾರ್ಯದಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆಯೇ? ಕೆಲ ಸರ್ಕಾರೇತರ ವಿಶ್ವವಿದ್ಯಾಲಯಗಳನ್ನು ಮತ್ತು ಸಂಯೋಜಿತ ಕಾಲೇಜುಗಳನ್ನು ಹೊರತು ಪಡೆಸಿದರೆ ಯಾವ ವಿಶ್ವವಿದ್ಯಾನಿಲಯದ ಪ್ರೊಫೆಸರುಗಳು ಕ್ಷೇತ್ರಕಾರ್ಯದ ಭೇಟಿಗೆ ತೆರಳುತ್ತಾರೆ. ಕ್ಷೇತ್ರಕಾರ್ಯದ ದಿನ ಬಂದರೆ ಸಾಕು ಮೌಲ್ಯಮಾಪನ, ವೈವಾ, ಎಲ್.ಐ.ಸಿ, ಇತ್ಯಾದಿಗಳಲ್ಲಿ ಭಾಗಿಯಾಗುವ ಪ್ರೊಫೆಸರ್ರುಗಳು ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆಯೇ? ಏನೇ ಇರಲಿ ವಿಶ್ವವಿದ್ಯಾಲಯದ ವಿಭಾಗಗಳಲ್ಲಿ ಇಂದಿಗೂ ವಿದ್ಯಾರ್ಥಿಗಳ ಕೊರತೆ ಕಂಡಿಲ್ಲವೆಂಬುದೇ ಒಂದು ಸಂತೋಷದ ಸಂಗತಿ. ಇವುಗಳನ್ನು ಹೊರತುಪಡಿಸಿದರೆ ಸಮಾಜಕಾರ್ಯದ ಅವಸಾನಕ್ಕೆ ಬಹುಮುಖ್ಯ ಕಾರಣ ನುರಿತ ಹಾಗೂ ತರಬೇತಿ ಹೊಂದಿದ ಶಿಕ್ಷಕರ ತೀವ್ರ ಕೊರತೆ. ಬಹುಶಃ ಭಾರತದ ಯಾವುದೇ ವಿಶ್ವವಿದ್ಯಾಲಯ ಶಿಕ್ಷಕರ ಕೊರತೆಯಿಂದ ಮುಕ್ತವಾಗಿಲ್ಲ. ಕರ್ನಾಟಕದಲ್ಲಿ ಇದರ ತೀವ್ರತೆ ಅಧಿಕವಾಗಿರುವುದಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗವೇ ಅದ್ಬುತ ಉದಾಹರಣೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗವು ಏಕ ವ್ಯಕ್ತಿಯ ಸೈನ್ಯದಂತಿದೆ. ಇಲ್ಲಿ ಒಬ್ಬರೇ ಪೂರ್ಣಕಾಲಿಕ ಖಾಯಂ ಪ್ರೊಫೆಸರ್ ಇನ್ನುಳಿದ ನಾಲ್ವರು ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು ಮತ್ತು ಇಬ್ಬರು ಅಲ್ಪಕಾಲಿಕ ಅತಿಥಿ ಉಪನ್ಯಾಸಕರು. ಇಲ್ಲಿರುವ ಎಲ್ಲರೂ ಯು.ಜಿ.ಸಿಯ ಮಾನದಂಡಗಳನ್ನು ಪೂರೈಸಿದ್ದರೂ ಅಲ್ಪಕಾಲಿಕ ಅತಿಥಿ ಉಪನ್ಯಾಸಕರು ಇದೇ ವಿಭಾಗದ ಸ್ನಾತಕ ಸಂಶೋಧನಾರ್ಥಿಗಳೂ ಸಹ ಆಗಿರುವರು. ಇವರು ಬೋಧನೆಗೆ ಮಾತ್ರ ಸೀಮಿತ. ಕ್ಷೇತ್ರಕಾರ್ಯ ವರದಿಗಳ ಮೌಲ್ಯಮಾಪನ, ಮಾರ್ಗದರ್ಶನ, ಓರಿಯಂಟೇಶನ್ ಭೇಟಿ, ಕಿರು ಪ್ರಬಂಧದ ಮಾರ್ಗದರ್ಶನಕ್ಕೆ ಇವರನ್ನು ಉಪಯೋಗಿಸಿಕೊಳ್ಳಬಾರದು, ಕಾರಣ ಇವರು ಅಲ್ಪಕಾಲಿಕ ಅತಿಥಿ ಉಪನ್ಯಾಸಕರು ಮಾತ್ರ. ಇನ್ನು ಖಾಯಂ ಪ್ರೊಪೆಸರ್, ವಿಭಾಗದ ಮುಖ್ಯಸ್ಥರೂ ಆಗಿರುವ ಕಾರಣ ಎಲ್ಲ ಆಡಳಿತ ಕಾರ್ಯಗಳೂ, ಬಿ.ಓ.ಇ., ಬಿ.ಓ.ಎಸ್, ಎಲ್.ಐ.ಸಿ., ಮೌಲ್ಯಮಾಪನ, ಸ್ನಾತಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವೈವಾ, ಇತರೆ ವಿಶ್ವವಿದ್ಯಾಲಯಗಳಿಗೆ ಮೌಲ್ಯಮಾಪನಕ್ಕಾಗಿ ಭೇಟಿ ಇವೇ ಮೊದಲಾದ ಕಾರ್ಯಗಳಲ್ಲಿ ತೊಡಗಿರುವ ಕಾರಣ ತರಗತಿಗಳಲ್ಲಿ ಬೋಧಿಸಲು ಸಾಧ್ಯವೇ? ಬಹುಶಃ ಸೆಮಿಸ್ಟರ್ಗೆ ಒಂದೋ ಅಥವಾ ಎರಡೋ ತರಗತಿಗಳನ್ನು ತೆಗೆದುಕೊಂಡರೆ ಆ ವಿದ್ಯಾರ್ಥಿಗಳೇ ಭಾಗ್ಯಶಾಲಿಗಳು. ಇನ್ನು ಕ್ಷೇತ್ರಕಾರ್ಯ ಮಾರ್ಗದರ್ಶನವಂತೂ ಇಲ್ಲವೇ ಇಲ್ಲ. ಹೀಗಿರುವಾಗ ವಿದ್ಯಾರ್ಥಿಗಳಲ್ಲಿ ಕ್ವಾಲಿಟಿಯನ್ನು ತರಲು ಹೇಗೆ ಸಾಧ್ಯ. ಇವುಗಳ ಜೊತೆಗೆ ವಾರ್ಷಿಕ ವರದಿ, ನ್ಯಾಕ್ ವರದಿ, ಆಡಳಿತಾತ್ಮಕ ವಿಷಯಗಳು, ದಾಖಲಾತಿ ಪ್ರಕ್ರಿಯೆ ಇವೇ ಮೊದಲಾದ ಕಾರ್ಯಗಳೊಟ್ಟಿಗೆ ಪಾಠ ಮಾಡಿ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನೀಡಲು ಸಾಧ್ಯವೇ? ಇನ್ನು ಪೂರ್ಣಕಾಲಿಕ ಅತಿಥಿ ಉಪನ್ಯಾಸಕರ ಪರಿಸ್ಥಿತಿ ದೇವರಿಗೇ ಪ್ರೀತಿ. ವರ್ಷಕ್ಕೆ ಹನ್ನೆರಡು ತಿಂಗಳಾದರೂ ಸಿಗುವ ಗೌರವಧನ ಮಾತ್ರ ಒಂಭತ್ತು ತಿಂಗಳದ್ದು. ಅದಕ್ಕೂ ಗೋಗರೆಯಬೇಕು. ಪಾಠ-ಪ್ರವಚನ, ಕ್ಷೇತ್ರಕಾರ್ಯಕ್ಕೆ ವಿದ್ಯಾರ್ಥಿಗಳನ್ನು ನಿಯೋಜಿಸುವುದು, ಅವರ ವರದಿಗಳನ್ನು ಮೌಲ್ಯಮಾಪನ ಮಾಡುವುದು, ಮಾರ್ಗದರ್ಶನ ನೀಡುವುದು, ಪೂರ್ವನಿಯೋಜಿತ ಭೇಟಿ, ಶಿಬಿರ, ಇನ್ನೋವೇಟಿವ್ ಪ್ರಾಜೆಕ್ಟ್, ಹೀಗೆ ಏನೆಲ್ಲ ಕಾರ್ಯಗಳಿವೆಯೋ ಅವುಗಳೆಲ್ಲವುಗಳ ಒತ್ತಡ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರ ಮೇಲಿದೆ. ಯು.ಜಿ.ಸಿ ಮಾರ್ಗದರ್ಶನದ ಪ್ರಕಾರ ಶಿಕ್ಷಕ ಮತ್ತು ಪ್ರಶಿಕ್ಷಣಾರ್ಥಿಗಳ ಅನುಪಾತ 1:10 ಇರಬೇಕು. ಆದರೆ ಪ್ರಸ್ತುತ ಬೆಂಗಳೂರು ಸಮಾಜಕಾರ್ಯ ವಿಭಾಗದಲ್ಲಿರುವ ಶಿಕ್ಷಕ ಮತ್ತು ಪ್ರಶಿಕ್ಷಣಾರ್ಥಿಗಳ ಅನುಪಾತ ಎರಡರಿಂದ ಮೂರು ಪಟ್ಟು ಅಧಿಕವಿದೆ. ಹೀಗಿರುವಾಗ ಶಿಕ್ಷಣದಲ್ಲಿ ಗುಣಮಟ್ಟ ತರಲು ಸಾಧ್ಯವಾಗುವುದಾದರೂ ಹೇಗೆ. ಉಳಿದಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಸಮಾಜಕಾರ್ಯ ವಿಭಾಗಗಳನ್ನು ಹೊಂದಿರುವ ಕಾಲೇಜುಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಬಹುಶಃ ಒಂದೆರಡು ಕಾಲೇಜುಗಳಲ್ಲಿ ಆಯ್ದ ಉಪನ್ಯಾಸಕರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಉಪನ್ಯಾಸಕ ಬೋಧಿಸಲು ಬೇಕಿರುವ ಕನಿಷ್ಟ ಮಾನದಂಡಗಳನ್ನೂ ಹೊಂದಿಲ್ಲ. ಅಂದರೆ ಉಪನ್ಯಾಸಕ ಅರ್ಹತಾ ಪರೀಕ್ಷೆ (ಎನ್.ಇ.ಟಿ / ಕೆ-ಸೆಟ್) ಅಥವಾ ಪಿ.ಎಚ್.ಡಿ ಪದವಿಯನ್ನು ಪಡೆದಿಲ್ಲ. ಆ ಕಾಲೇಜುಗಳಲ್ಲಿಯೂ ಸಹ ಶಿಕ್ಷಕ ಮತ್ತು ಪ್ರಶಿಕ್ಷಣಾರ್ಥಿಗಳ ಅನುಪಾತ ಯು.ಜಿ.ಸಿ ಮಾರ್ಗದರ್ಶಿ ಸೂತ್ರಗಳಂತೆ ಸಂಯೋಜಿತಗೊಂಡಿಲ್ಲ. ಮೊದಲೇ ಶಿಕ್ಷಕರ ತೀವ್ರ ಕೊರತೆಯಿಂದ ನರಳುತ್ತಿರುವ ಸಮಾಜಕಾರ್ಯ ವಿಭಾಗ ಹಾಗೂ ಸಂಯೋಜಿತ ಕಾಲೇಜುಗಳು ಇನ್ನು ಪಠ್ಯದ ಜೊತೆಜೊತೆಗೆ ಕ್ಷೇತ್ರಕಾರ್ಯ, ಓರಿಯೆಂಟೇಷನ್, ಶಿಬಿರ, ಇನ್ನೋವೇಟೀವ್ ಪ್ರಾಜೆಕ್ಟ್, ಕ್ಷೇತ್ರಕಾರ್ಯ ಭೇಟಿ ಮತ್ತು ಮಾರ್ಗದರ್ಶನ, ಕಿರು ಅಧ್ಯಯನ ಮಾರ್ಗದರ್ಶನ ಹೀಗೆ ಹಲವಾರು ಚಟುವಟಿಕೆಗಳಿರುವ ಸಮಾಜಕಾರ್ಯ ಶಿಕ್ಷಣದಲ್ಲಿ ಗುಣಮಟ್ಟವನ್ನು ತರುವುದಾದರೂ ಎಲ್ಲಿಂದ? ಇಂತಹ ಪರಿಸ್ಥಿತಿಯಲ್ಲಿ ಸಂಯೋಜಿತ ಕಾಲೇಜುಗಳಲ್ಲಿ ಸಮಾಜಕಾರ್ಯವನ್ನು ಅಭ್ಯಸಿಸುವವರ ಸಂಖ್ಯೆ ಕಡಿಮೆಯಾಗದೆ ದ್ವಿಗುಣವಾಗುತ್ತದೆಯೇ? ಕೇವಲ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಿಂಲೇ ನಡೆಸಲ್ಪಡುತ್ತಿರವ ಏಕೈಕ ಸಮಾಜಕಾರ್ಯ ವಿಭಾಗ ದೇಶದಲ್ಲಿ ಎಲ್ಲಿಯಾದರೂ ಇದೆ ಎಂದಾದರೆ, ಅದು ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಕೋಲಾರ ಸ್ನಾತಕೋತ್ತರ ಕೇಂದ್ರ. ಇಲ್ಲಿಯೂ ಸಹ ಸುಮಾರು 80ಕ್ಕೂ ಅಧಿಕ ಪ್ರಶಿಕ್ಷಣಾರ್ಥಿಗಳಿದ್ದು, ಅವರಿಗೆ ಬೋಧಿಸಲು ಮತ್ತು ಮಾರ್ಗದರ್ಶನ ನೀಡಲು ನಿಯೋಜನೆಗೊಂಡಿರುವ ಉಪನ್ಯಾಸಕರ ಸಂಖ್ಯೆ ಕೇವಲ ಐದು ಮಾತ್ರ. ಇಲ್ಲಿ ನಿಯೋಜನೆಗೊಂಡಿರುವ ಎಲ್ಲ ಅತಿಥಿ ಉಪನ್ಯಾಸಕರೂ ಪುರುಷರಾಗಿದ್ದು, ಶಿಬಿರ ಮತ್ತು ಇನ್ನೋವೇಟಿವ್ ಪ್ರಾಜೆಕ್ಟ್ಗೆ ತೆರೆಳಿದ ಸಂದರ್ಭದಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿಗಳ ಬಗ್ಗೆ ಕಾಳಜಿ ವಹಿಸಲು ಮಹಿಳಾ ಉಪನ್ಯಾಸಕರಿಲ್ಲದಿರುವುದು ದುರಂತವಲ್ಲದೇ ಇನ್ನೇನು? ಹಕ್ಕು-ಭಾದ್ಯತೆ, ವ್ಯಕ್ತಿಯ ಘನತೆ ಮತ್ತು ಗೌರವ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಕ್ರಿಯೆಗಳನ್ನು ಬೋಧಿಸಲ್ಪಡುವ ಸಮಾಜಕಾರ್ಯ ವಿಭಾಗಗಳಲ್ಲಿಯೇ ಅವುಗಳಿಗೆ ಬೆಲೆಯಿಲ್ಲದಿರುವಾಗ ಸಮಾಜಕಾರ್ಯವನ್ನು ಅಭ್ಯಸಿಸಿ ಅಥವಾ ಬೋಧಿಸಿ ಪ್ರಯೋಜನವಾದರೂ ಏನು? ಹಾಗಾದರೆ ಸಮಾಜಕಾರ್ಯವಿರುವುದು ಕೇವಲ ಬೋಧನೆಗೆ ಮಾತ್ರವೇ? ಅನುಷ್ಠಾನಕ್ಕಲ್ಲವೇ? ಸಮಾಜಕಾರ್ಯವನ್ನು ಬೋಧಿಸಲ್ಪಡುವ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪರಿಸ್ಥಿತಿಗಳೇ ಹದಗೆಟ್ಟಿದ್ದಾಗ ಇನ್ನು ಗುಣಮಟ್ಟದ ಬಗ್ಗೆ ಮಾತನಾಡುವ ನೈತಿಕ ಹೊಣೆ ವಿಶ್ವವಿದ್ಯಾಲಯಗಳಿಗೆ ಇದೆಯೇ? ಇಂತಹ ವಿಶ್ವವಿದ್ಯಾಲಯಗಳಿಗೆ ನ್ಯಾಕ್ ಯಾವ ಪುರುಷಾರ್ಥಕ್ಕಾಗಿ 'ಎ' ಗ್ರೇಡ್ ಪ್ರಮಾಣಪತ್ರವನ್ನು ನೀಡುತ್ತದೆ ಎಂಬುದು ಬಗೆಹರಿಯದ ಯಕ್ಷಪ್ರಶ್ನೆ. ಮೇಲೆ ತಿಳಿಸಿದ ನಗ್ನಸತ್ಯವನ್ನು ತಿಳಿದ ನಂತರವೂ ಗುಣಮಟ್ಟದ ಬಗ್ಗೆ ಮಾತನಾಡುವ ಸಾಹಸ ಬಹುಶಃ ಯಾವೊಬ್ಬ ವೃತ್ತಿಪರ ಸಮಾಜಕಾರ್ಯಕರ್ತನೂ ಮಾಡಲಾರ. ಹಾಗಾದರೆ ಹದಗೆಟ್ಟಿರುವ ಪರಿಸ್ಥಿತಿಯನ್ನು ಸರಿಪಡಿಸಲು ಸಾಧ್ಯವಿಲ್ಲವೇ? ಅವಸಾನದ ಕಡೆ ಮುಖ ಮಾಡಿರುವ ಸಮಾಜಕಾರ್ಯವನ್ನು ಉಳಿಸಲು ಆಗುವುದಿಲ್ಲವೇ? ಖಂಡಿತಾ ಸಾಧ್ಯವಿದೆ. ಸಮಾಜಕಾರ್ಯ ಶಿಕ್ಷಣ ಪಡೆದ ಕಾರಣದಿಂದ ನೌಕರಿ ಗಿಟ್ಟಿಸಿಕೊಂಡು ಪ್ರಸ್ತುತ ಉತ್ತಮ ಸ್ಥಿತಿಯಲ್ಲಿರುವ ಕೆಲವರಾದರೂ ಸಮಾಜಕಾರ್ಯದ ಶಿಕ್ಷಣದ ಕಡೆ ಗಮನಹರಿಸಿದರೆ ಖಂಡಿತಾ ಅವಸಾನದತ್ತ ಸಾಗುತ್ತಿರುವ ಸಮಾಜಕಾರ್ಯ ಶಿಕ್ಷಣವನ್ನು ಉಳಿಸಿ ಬೆಳೆಸಬಹುದು. ಆದರೆ ಈ ಕಾರ್ಯದ ಕಡೆ ಗಮನಹರಿಸದ ಇವರು ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಲ್ಲಿ ಕ್ವಾಲಿಟಿಯಿಲ್ಲ/ ಕೌಶಲ್ಯಗಳಿಲ್ಲ ಎಂದು ಸದಾ ದೂರುತ್ತಿರುತ್ತಾರೆ. ಇಂತಹ ಮಹನೀಯರಿಗೊಂದು ಪ್ರಶ್ನೆ. ಕ್ಷೇತ್ರಕಾರ್ಯವೇ ಜೀವಾಳವಾಗಿರುವ ಸಮಾಜಕಾರ್ಯ ಶಿಕ್ಷಣದಲ್ಲಿ ಸಿದ್ಧಾಂತಕ್ಕಿಂತ ಕ್ಷೇತ್ರಕಾರ್ಯಕ್ಕೆ ಹೆಚ್ಚು ಮಹತ್ವವಿದೆ. ಹಾಗಿರುವಾಗ ಕ್ಷೇತ್ರಕಾರ್ಯಕ್ಕೆ ಅವಕಾಶ ಕಲ್ಪಿಸಿ ಅಲ್ಲಿ ವಿದ್ಯಾರ್ಥಿಗಳನ್ನು ಮಾರುಕಟ್ಟೆಗೆ ಬೇಕಿರುವ ಹಾಗೆ ತಯಾರು ಮಾಡಬಹುದಲ್ಲವೇ? ಹೇಗೂ ಪ್ರಾಧ್ಯಾಪಕರ ಕೊರತೆಯಿಂದ ಸಮಾಜಕಾರ್ಯ ಶಿಕ್ಷಣದಲ್ಲಿ ಗುಣಮಟ್ಟ ಇಲ್ಲವೆಂಬ ಸತ್ಯ ಎಲ್ಲರಿಗೂ ತಿಳಿದಿದೆ. ಹಾಗಿದ್ದರೆ ತಾವು ಕೆಲಸಮಾಡುವ ಕಂಪೆನಿಗಳಲ್ಲೋ, ಸ್ವಯಂಸೇವಾ ಸಂಸ್ಥೆಗಳಲ್ಲೋ ಅಥವಾ ದವಾಖಾನೆಗಳಲ್ಲೋ ಈ ಅವಕಾಶವನ್ನು ಕಲ್ಪಿಸಿ ಪ್ರಶಿಕ್ಷಣಾರ್ಥಿಗಳಲ್ಲಿ ಗುಣಮಟ್ಟವನ್ನು ಹುಟ್ಟುಹಾಕಬುದು ಅಲ್ಲವೇ? ಹಾಗಿದ್ದರೂ ಏಕೆ ಬರೀ ಶಿಕ್ಷಣವನ್ನು ದೂರುವಿರಿ? ಶಿಕ್ಷಕರಿಂದ ಆಗದ ಕೆಲಸವನ್ನು ನೀವು ಮಾಡಿ ತೋರಿಸಿ ನಂತರ ಶಿಕ್ಷಣದ ಗುಣಮಟ್ಟ ಸರಿ ಇಲ್ಲವೆಂದು ವಾದಿಸಿ. ಆಗ ಒಪ್ಪಬಹುದು ನಿಮ್ಮ ವಾದವನ್ನು. ಬಹುಶಃ ಇಂದು ಕ್ಷೇತ್ರಕಾರ್ಯಕ್ಕೆ, ಓರಿಯಂಟೇಷನ್ ಭೇಟಿ ಮತ್ತು ಬ್ಲಾಕ್ ಪ್ಲೇಸ್ಮೆಂಟ್ಗೂ ಸಹ ಹಣ ವಸೂಲಿ ಮಾಡುವಂತಹ ಸಂಸ್ಥೆ ಹಾಗೂ ದವಾಖಾನೆಗಳಲ್ಲಿ ಕೆಲಸ ಮಾಡುವ ಸಮಾಜಕಾರ್ಯಕರ್ತರಿಗೆ ಈ ವಿಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಾದರೂ ಎಲ್ಲಿದೆ. ಹೀಗಿರುವಾಗ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರತರಾದವರನ್ನೂ ಒಳಗೊಂಡಂತೆ ಇತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಮಾಜಕಾರ್ಯಕರ್ತರೂ ಇಂದಿನ ಪರಿಸ್ಥಿತಿಗೆ ನೇರ ಹೊಣೆಗಾರರೇ ಆಗಿದ್ದಾರೆ. ಇನ್ನು ಸಮಾಜಕಾರ್ಯಕರ್ತರಿಗೆ ಒಂದು ವ್ಯವಸ್ಥಿತ ಸಂಘಟನೆಯಿಲ್ಲ ಎಂದು ಬಾಯಿಬಡಿದುಕೊಳ್ಳುವ ಸಮಾಜಕಾರ್ಯಕರ್ತರಿಗೇನೂ ಕೊರತೆಯಿಲ್ಲ. ಬಹುಶಃ ಕರ್ನಾಟಕದಲ್ಲೂ ಕೆಲವು ವೃತ್ತಿಪರ ಸಮಾಜಕಾರ್ಯಕರ್ತರ ಸಂಘಟನೆಗಳಿವೆ. ಆದರೆ ಅವುಗಳು ಕಾಲೇಜಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಮಾತ್ರ ಸೀಮಿತವಾಗಿವೆಯೆಂಬುದು ದುರದೃಷ್ಟಕರ. ಸಮಾಜಕಾರ್ಯವೆಂಬ ವಿಶಾಲ ಕ್ಷೇತ್ರಕ್ಕೆ ಕಾಲೇಜು, ವಿಶ್ವವಿದ್ಯಾಲಯಗಳೆಂಬ ಸೀಮಿತ ಚೌಕಟ್ಟುಗಳನ್ನು ಹಾಕಿಕೊಂಡು ಸ್ವಾರ್ಥಸಾಧನೆಗಾಗಿ ಕಾರ್ಯನಿರ್ವಹಿಸುವ ಇಂತಹ ಸಂಘಟನೆಗಳು ಸಮಾಜಕಾರ್ಯದ ಬೆಳವಣಿಗೆಗೆ ಏನಾದರೂ ಕೊಡುಗೆಗಳು ನೀಡಿವೆಯೇ? ವರ್ಷಕ್ಕೊಮ್ಮೆ ನಿರ್ದಿಷ್ಟ ಕಾಲೇಜೋ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರು ಒಂದೆಡೆ ಸೇರಿ ಗೆಟ್ ಟು ಗೆದರ್ ಮಾಡಿಕೊಂಡರೆ ಸಾಕೇ? ಇಲ್ಲವೇ ಯಾವುದೋ ಒಂದು ಸೆಮಿನಾರ್ ಆಯೋಜಿಸಿ ನಾವೂ ಸಮಾಜಕಾರ್ಯಕರ್ತರಿದ್ದೇವೆ ಎಂದು ಸಮಾಜದ ಇತರರಿಗೆ ತೋರ್ಪಡಿಸಿಕೊಂಡರೆ ಸಾಕೇ?ಇದರಿಂದ ಸಮಾಕಾರ್ಯ ಶಿಕ್ಷಣದಲ್ಲಿ ಬದಲಾವಣೆ ಕಾಣಲು ಸಾಧ್ಯವೇ? ಈ ಸಮಗಟನೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡವರು ಮತ್ತು ತೊಡಗಿಸಿಕೊಂಡವರಾದರೂ ಸಮಾಜಕಾರ್ಯ ಶಿಕ್ಷಣದ ಬಗ್ಗೆ ಕಾಳಜಿವಹಿಸಿ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ಎಂದಾದರೂ ಧ್ವನಿಯೆತ್ತಿದ್ದಾರೆಯೇ? ಹಾಗಾದರೆ ಈ ಸಂಘಟನೆಗಳು ಕೇವಲ ಸೆಮಿನಾರ್ ಗಳನ್ನು ಆಯೋಜಿಸಲು ಮತ್ತು ಸಮಾಜಕಾರ್ಯ ದಿನಾಚರಣೆಗಳನ್ನು ಆಚರಿಸಲು ಮಾತ್ರ ಸೀಮಿತವೇ? ಸಮಾಜಕಾರ್ಯ ಶಿಕ್ಷಣದಲ್ಲಿ ಗುಣಮಟ್ಟವಿಲ್ಲ ಎಂಬ ಸತ್ಯದ ಅರಿವು ಇವರಿಗಿಲ್ಲವೇ? ಬೆಂಗಳೂರು ವಿಶ್ವವಿದ್ಯಾಲಯವನ್ನೂ ಒಳಗೊಂಡಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ಕೊರತೆಯಿರುವ ಸತ್ಯ ಇವರಿಗೆ ತಿಳಿದಿಲ್ಲವೇ? ಆದರೂ ಏಕೆ ಸಂಘಟನೆಗಳು ಈ ಬಗ್ಗೆ ಚಕಾರವೆತ್ತುತ್ತಿಲ್ಲ? ಪ್ರತೀ ಬಾರಿ ಸಭೆ ಸೇರಿದಾಗ ಸಂಘಟನೆಯನ್ನು ಬಲಪಡಿಸಲು ಸದಸ್ಯತ್ವವನ್ನು ಹೆಚ್ಚಿಸುವ ಬಗ್ಗೆ ಮಾತ್ರ ಆಲೋಚಿಸುವ ಇವರು ಸಮಾಜಕಾರ್ಯ ಶಿಕ್ಷಣದಲ್ಲಿರು ಕೊರತೆಗಳನ್ನು ನೀಗಿಸುವತ್ತ ಗಮನಹರಿಸುತ್ತಿಲ್ಲವೇಕೆ? ಸ್ವಾಮಿ, ಸಂಘಟನೆಗಳನ್ನು ಬಲಪಡಿಸುವುದಕ್ಕಿಂತ ಮೊದಲು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸಿ. ಸಮಾಜಕಾರ್ಯ ಶಿಕ್ಷಣದಲ್ಲಿರುವ ಲೋಪಗಳನ್ನು ಸರಿಪಡಿಸಲು ಸಂಬಂಧಿಸಿದವರ ಗಮನಸೆಳೆಯಲು ಪ್ರಯತ್ನಿಸಿ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿಭಾಗಗಳಲ್ಲಿ ಶಿಕ್ಷಣ ಗುಣಮಟ್ಟವನ್ನು ಸುಧಾರಿಸಲು ಹೇಗೆ ರಾಷ್ಟ್ರಮಟ್ಟದಲ್ಲಿ ಕೌನ್ಸಿಲ್ಗಳು ಇವೇಯೋ ಹಾಗೆ ಸಮಾಜಕಾರ್ಯಕ್ಕೂ ಒಂದು ಕೌನ್ಸಿಲ್ ರಚನೆಮಾಡಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವತ್ತ ಬೇಡಿಕೆಯಿಡಿ. ಅದು ಸಾಧ್ಯವಾಗದಿದ್ದರೂ ಕನಿಷ್ಟಪಕ್ಷ ಪ್ರಾಧ್ಯಾಪಕರ ಕೊರತೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಸಂಬಂಧಿಸಿದ ವಿಶ್ವವಿದ್ಯಾಯಗಳ ಕುಲಪತಿ ಮತ್ತು ಉಪಕುಲಪತಿಗಳ ಹಾಘೂ ಸರ್ಕಾರಗಳ ಗಮನಕ್ಕೆ ತನ್ನಿ. ಪ್ರಸ್ತುತ ಸನ್ನಿವೇಶದಲ್ಲಿ ಸಮಾಜಕಾರ್ಯಕರ್ತರ ಅನಿವಾರ್ಯವನ್ನು ಸರ್ಕಾರಗಳಿಗೆ ಮನದಟ್ಟು ಮಾಡಿಸಿ. ಆಗ ಸಮಾಜಕಾರ್ಯ ಶಿಕ್ಷಣ ಕ್ಷೇತ್ರ ಮತ್ತು ಕಾರ್ಯಕ್ಷೇತ್ರ ತಂತಾನೆ ಬಲಗೊಳ್ಳುತ್ತದೆ. ಸಂಘಟನೆಗಳೂ ತಂತಾನೆ ಬಲಗೊಳ್ಳುತ್ತವೆ. ಇಂತಹ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸುವುದನ್ನು ಬಿಟ್ಟು ಸಮಾಜಕಾರ್ಯ ಶಿಕ್ಷಣದಲ್ಲಿ ಗುಣಮಟ್ಟವಿಲ್ಲ ಎಂದು ಎಷ್ಟು ಬಾಯಿಬಡಿದುಕೊಂಡರೂ ಪ್ರಯೋಜನವಿಲ್ಲ. ಇನ್ನೆಷ್ಟು ಬಾರಿ ಪಠ್ಯಕ್ರಮವನ್ನು ಬದಲಿಸಿದರೂ ಶಿಕ್ಷಕರ ಕೊರತೆಯಿಂದ ನರಳುತ್ತಿರುವ ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟವನ್ನಂತೂ ಸುಧಾರಿಸಲು ಅಸಾಧ್ಯ. ಸಮಾಜಕಾರ್ಯ ಶಿಕ್ಷಣದ ಗುಣಮಟ್ಟ ಸರಿಹೋಗದ ಹೊರತು ಸಮಾಜಕಾರ್ಯಕ್ಕೆ ಉಳಿಗಾಲವಿಲ್ಲ ಎಂದು ನಿಮಗನಿಸಿದರೆ ಅದನ್ನು ಸರಿಪಡಿಸಲು ಮಾರ್ಗಗಳನ್ನು ಹುಡುಕಬೇಕೇ ಹೊರತು ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿರುವ ಕೆಲವೇ ಪ್ರಾಧ್ಯಾಪಕರ ಮೇಲೆ ಗೂಬೆಕೂರಿಸುವುದು ಎಷ್ಟು ಸರಿ. ನಿಜ, ಖಾಯಂ ನೌಕರಿಯನ್ನು ಹೊಂದಿದ ಬಹುಪಾಲು ಪ್ರಾಧ್ಯಾಪಕರು ಬೋಧಿಸದೇ ಕರ್ತವ್ಯಲೋಪವೆಸಗುತ್ತಿದ್ದಾರೆ. ಆದರೆ ಅದನ್ನು ನೇರವಾಗಿ ಪ್ರಶ್ನಿಸದೇ ಅಸಂಬದ್ಧವಾಗಿ ಹರಟುವುದರಿಂದ ಪ್ರಯೋಜನವಾದರೂ ಏನು? ಇದರಿಂದ ಕಾಲಹರಣವಾಗುತ್ತದೆಯೇ ಹೊರತು ಬೇರಾವುದೇ ಅಭಿವೃದ್ಧಿಯಾಗಲಾರದು. ಇಡೀ ಸಮಾಜದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಹೊರಟಿರುವ ಸಮಾಜಕಾರ್ಯ ವೃತ್ತಿಯಲ್ಲಿ ತೊಡಗಿರುವ ಸಮಾಜಕಾರ್ಯಕರ್ತರು ತಮ್ಮ ವೃತ್ತಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾರದಷ್ಟು ಅಸಮರ್ಥರೇ? ನಮ್ಮ ಸಮಸ್ಯೆಗಳನ್ನೇ ಬಗೆಹರಿಸಿಕೊಳ್ಳದ ನಾವು ಸಮಾಜದ ಸಮಸ್ಯೆಗಳನ್ನು ಹೇಗೆ ಬಗೆಹರಿಸಲು ಸಾಧ್ಯ? ಆತ್ಮೀಯ ಸಮಾಜಕಾರ್ಯಕರ್ತರೇ, ಬಹುಶಃ ಇದೇ ಸುಸಮಯ. ನಮ್ಮ ವೃತ್ತಿಯ ಶಿಕ್ಷಣಕ್ಕೆ ಒದಗಿರುವ ಕಂಟಕವನ್ನು ಬಗೆಹರಿಸದ ಹೊರತು ನಮ್ಮ ವೃತ್ತಿಗೆ ಉಳಿಗಾಲವಿಲ್ಲ. ಕಿಂಚಿತ್ತಾದರೂ ನಮ್ಮಲ್ಲಿ ವೃತ್ತಿಧರ್ಮ, ವೃತ್ತಿ ಗೌರವಗಳು ಇದ್ದರೆ ಪ್ರಸ್ತುತ ಒದಗಿಬಂದಿರುವ ಆಪತ್ತಿನಿಂದ ಸಮಾಜಕಾರ್ಯವನ್ನು ರಕ್ಷಿಸಬೇಕೆಂದಿಂದರೆ ಮೊದಲು ಸಮಾಜಕಾರ್ಯ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಿರುವ ಪರಿಣಾಮಕಾರಿ ಸುಧಾರಣೆಗಳಿಗೆ ಒಕ್ಕೋರಲಿನಿಂದ ಧ್ವನಿಗೂಡಿಸೋಣ. ಇಲ್ಲವಾದರೆ ಸಮಾಜಕಾರ್ಯದ ಅವಸಾನಕ್ಕೆ ವೃತ್ತಿಪರರಾದ ನಾವೇ ಕಾರಣಕರ್ತರಾಗುತ್ತೇವೆ. ಇಂದು ನಾವು ಇಡುವ ಹೆಜ್ಜೆ, ತೆಗೆದುಕೊಳ್ಳುವ ನಿರ್ಧಾರ ನಮಗೊಬ್ಬರಿಗೆ ಅಲ್ಲ ಇಡೀ ಸಮಾಜಕಾರ್ಯವೃತ್ತಿಯ ಉಳಿವು - ಅಳಿವಿಗೆ ಸಂಬಂಧಿಸಿದ್ದು. ಆಲೋಚಿಸಿ ಪ್ರತಿಕ್ರಿಯಿಸಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕೆಳಕಂಡ Comment ಬಾಕ್ಸ್ ನಲ್ಲಿ ಹಂಚಿಕೊಳ್ಳಿ. ಅನಾಮಿಕ
7 Comments
Dr. Pattan Rakesh
1/28/2018 06:45:50 pm
Really I appreciate and say thanks to writer of this article .....he described actual situation of social work education .....if possible plz tell who wrote this article
Reply
Yashoda
1/28/2018 10:44:25 pm
Yes. We meet once .
Reply
Dr channaveera
1/30/2018 05:32:25 pm
Thanks crically assesing the social work profession, education, practice, professionsls, and Associations and most importantly coming out openly. This could have been done ever before social work was started eight decades back by our predessors in India, as mandated by the ethical standards of the Profession. As a result, niether in Karnataka nor in India there is a representative Professional regulating body. The present multiple associations, as you pointed out, have failed to meet the aspirations of the profession. Every Association, whether primary or secondory, public or private, Electoral (Parliement, Assembly, Corporations, Councils, Panchyats etc) or non electoral (Committees) etc as advocated by Ambedkar must have representative democracy. The doors of Association, prior to its establishment, should be open to all the members concerned without any descrimination. The governing variabls of democracy must be principles and values like liberty, equality, fraternity, secularism, science etc. It is therefore, as Amedkar further elaborated, is a value based social democracy not merely numerical game. Even if some with good intention esatablished Associations, they have created scope for Hero worship for which there is no space in democracy. Favouring any such Association is nothing but directly or indirectly disfavouring the others. The only way, therefore, is to form Karnataka representative Association with collective wisdom of all the members cocerned, adopting value based democracy which is also essential aspect of social work profession. We professionals, are like orphans for decades, as there is no our Representative family i.e. Asoociation As a result, we could see how we were voceless when the orders were not issued to the newly selected Assistant professors. There are many issues which can be easily solved through collective Association, but it doesn't exist. One at present, the burning issue is the missing of the reservation of Kannadigas in various courses including Psychiatric social work of NIMHANS including. Let us therefore all - Social work educators, practioners, and entrapreneurs collectively come together through a state level conferene exclusively focussing on profession and state level Association. But, immediately pl write as many as possible to the Director NIMHANS individually or through organistion to which you belong for renotification as per policy, including the compensation for the seats that had been denied in the past to Kannadigas.
Reply
xyzzz
1/31/2018 03:28:16 am
ಅನಾಮಿಕಳಾಗಿ ಪ್ರತಿಕ್ರಿಯಿಸಿರುತ್ತಿರುವುದಕ್ಕೆ ಕ್ಷಮಿಸಿ, ಒಬ್ಬ ವಿದ್ಯಾರ್ಥಿಯಾಗಿ ಲೇಖನಕ್ಕೆ ಪ್ರತಿಕ್ರಿಯಿಸಿದರೆ ಎಷ್ಟರ ಮಟ್ಟಿಗೆ ಸರಿ ಎಂಬ ಭಾವನೆ ಕಾಡುತ್ತಿತ್ತು. ಆದರೆ ಹಿರಿಯರಾದ ಚೆನ್ನವೀರ ಸರ್ ಬಹಳ ದೀರ್ಘವಾಗಿ ಪ್ರತಿಕ್ರಿಯಿಸಿರುವುದನ್ನು ಕಂಡು ಪ್ರತಿಕ್ರಿಯೆ ನೀಡಲು ಧೈರ್ಯ ತಂದುಕೊಂಡು ಪ್ರತಿಕ್ರಿಯಿಸುತ್ತಿರುವೆ. ತಪ್ಪಿದ್ದಲ್ಲಿ ಕ್ಷಮಿಸಿಬಿಡಿ.
Reply
XYZ
1/30/2018 09:56:04 pm
ಅನಾಮಿಕಳಾಗಿ ಪ್ರತಿಕ್ರಿಯಿಸಿರುತ್ತಿರುವುದಕ್ಕೆ ಕ್ಷಮಿಸಿ, ಒಬ್ಬ ವಿದ್ಯಾರ್ಥಿಯಾಗಿ ಲೇಖನಕ್ಕೆ ಪ್ರತಿಕ್ರಿಯಿಸಿದರೆ ಎಷ್ಟರ ಮಟ್ಟಿಗೆ ಸರಿ ಎಂಬ ಭಾವನೆ ಕಾಡುತ್ತಿತ್ತು. ಆದರೆ ಹಿರಿಯರಾದ ಚೆನ್ನವೀರ ಸರ್ ಬಹಳ ದೀರ್ಘವಾಗಿ ಪ್ರತಿಕ್ರಿಯಿಸಿರುವುದನ್ನು ಕಂಡು ಪ್ರತಿಕ್ರಿಯೆ ನೀಡಲು ಧೈರ್ಯ ತಂದುಕೊಂಡು ಪ್ರತಿಕ್ರಿಯಿಸುತ್ತಿರುವೆ. ತಪ್ಪಿದ್ದಲ್ಲಿ ಕ್ಷಮಿಸಿಬಿಡಿ.
Reply
Xyz
1/30/2018 11:16:02 pm
ಅನಾಮಿಕಳಾಗಿ ಪ್ರತಿಕ್ರಿಯಿಸಿರುತ್ತಿರುವುದಕ್ಕೆ ಕ್ಷಮಿಸಿ, ಒಬ್ಬ ವಿದ್ಯಾರ್ಥಿಯಾಗಿ ಲೇಖನಕ್ಕೆ ಪ್ರತಿಕ್ರಿಯಿಸಿದರೆ ಎಷ್ಟರ ಮಟ್ಟಿಗೆ ಸರಿ ಎಂಬ ಭಾವನೆ ಕಾಡುತ್ತಿತ್ತು. ಆದರೆ ಹಿರಿಯರಾದ ಚೆನ್ನವೀರ ಸರ್ ಬಹಳ ದೀರ್ಘವಾಗಿ ಪ್ರತಿಕ್ರಿಯಿಸಿರುವುದನ್ನು ಕಂಡು ಪ್ರತಿಕ್ರಿಯೆ ನೀಡಲು ಧೈರ್ಯ ತಂದುಕೊಂಡು ಪ್ರತಿಕ್ರಿಯಿಸುತ್ತಿರುವೆ. ತಪ್ಪಿದ್ದಲ್ಲಿ ಕ್ಷಮಿಸಿಬಿಡಿ.
Reply
xyz
1/31/2018 03:27:19 am
ಅನಾಮಿಕಳಾಗಿ ಪ್ರತಿಕ್ರಿಯಿಸಿರುತ್ತಿರುವುದಕ್ಕೆ ಕ್ಷಮಿಸಿ, ಒಬ್ಬ ವಿದ್ಯಾರ್ಥಿಯಾಗಿ ಲೇಖನಕ್ಕೆ ಪ್ರತಿಕ್ರಿಯಿಸಿದರೆ ಎಷ್ಟರ ಮಟ್ಟಿಗೆ ಸರಿ ಎಂಬ ಭಾವನೆ ಕಾಡುತ್ತಿತ್ತು. ಆದರೆ ಹಿರಿಯರಾದ ಚೆನ್ನವೀರ ಸರ್ ಬಹಳ ದೀರ್ಘವಾಗಿ ಪ್ರತಿಕ್ರಿಯಿಸಿರುವುದನ್ನು ಕಂಡು ಪ್ರತಿಕ್ರಿಯೆ ನೀಡಲು ಧೈರ್ಯ ತಂದುಕೊಂಡು ಪ್ರತಿಕ್ರಿಯಿಸುತ್ತಿರುವೆ. ತಪ್ಪಿದ್ದಲ್ಲಿ ಕ್ಷಮಿಸಿಬಿಡಿ.
Reply
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|