ಮದುವೆಗೆ ಗೆಳತಿಯ ಆಮಂತ್ರಣ ಬಂದಿತ್ತು. ಆ ಮದುವೆ ಶುಭದಿನ ಹೊಸ ಜಗತ್ತೊಂದನ್ನು ಚಿತ್ರಪಟದಲ್ಲಿ ಮುದ್ರೆಯೊತ್ತುತ್ತದೆ ಅಂತ ತಿಳಿದಿರಲಿಲ್ಲ. ಜೀವವಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಕವಚವೊಂದು ಬದ್ಧತೆಯನ್ನು ನಿರ್ಮಿಸಿ ಕೊಡುತ್ತದೆ ಅಂತ ಗೊತ್ತಿತ್ತು. ಅದನ್ನು ಮೀರಿ ಮನುಷ್ಯನ ಮನಸ್ಸಿಗೇ ಸವಾಲೊಡ್ಡುವ ಶಾರೀರಿಕ ತಲ್ಲಣದ ಸನ್ನಿವೇಶಕ್ಕೆ ಎದೆಯನ್ನೊಮ್ಮೆ ಮುಟ್ಟಿ ನೋಡುತ್ತೇನೆ. ಹಸಿವಿನ ಪ್ರಪಂಚದ ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತೇನೆ. ಈ ಕಡಲ ಅಲೆಗಳಲ್ಲಿ ದಡ ಸೇರಲು ಹವಣಿಸುವ ಪುಟ್ಟ ದೋಣೆಯೆಂದು ಗೊತ್ತಿರಲಿಲ್ಲ. ಅಲೆಗಳು ಹಾಗೇ ಬಡಿಯುತ್ತಲೇ ಇವೆ... ತಡಿಯಲ್ಲಿ ಮೂಡಿಸಿದ ಹೆಜ್ಜೆಗಳ ಅಳಿಸುತ್ತಲೇ ಇವೆ...! ಹೆಜ್ಜೆಗಳು ಮೂಡುತ್ತಲೇ ಇವೆ... ಮದುವೆ ಇದ್ದದ್ದು ಬೆಂಗಳೂರಿನಲ್ಲಿ. 500 ರೂಪಾಯಿಯೊಂದಿಗೆ ನನ್ನ ಪ್ರಯಾಣ. ಎಂದಿಗೂ ಎಲ್ಲಿಗೂ ಹೊರಡುವಾಗ ಒಂದಷ್ಟು ಸಾಹಿತಿಗಳ ಪುಸ್ತಕ, ಪತ್ರಕರ್ತನಾಗಿದ್ದರಿಂದ ಒಂದೆರಡು ಲೇಖನಗಳ ಟಿಪ್ಪಣಿ, ಜೋಳಿಗೆ ಹೆಗಲಿಗೆ ಭಾರವಾಗುತ್ತಿರಲಿಲ್ಲ. ಬಸ್ಸಿನಲ್ಲಿ ಮಡಿಕೇರಿಯಿಂದ ಬೆಂಗಳೂರುವರೆಗೆ ಆರು ಗಂಟೆಗಳ ಕಾಲ ಕೂರಬೇಕಲ್ಲ. ಸುಮ್ಮನೇ ಕುಳಿತಾಗ ಸಮಯದ ಗೈರು ಹಾಜರಿಯ ಕೊರತೆಯನ್ನು ಈ ಪುಸ್ತಕಗಳು ನೀಗಿಸುತ್ತಿದ್ದವು. ನನ್ನೊಂದಿಗೆ ಮಾತಾಡುತ್ತಿದ್ದವು.
ಹಾಗೆ ದ.ರಾ.ಬೇಂದ್ರೆ, ಎಂ.ಟಿ. ವಾಸುದೇವನ್ ನಾಯರ್, ಪ್ರೇಮ್ ಚಂದ್, ಜಿ.ಎಸ್. ಶಿವರುದ್ರಪ್ಪ ಇತ್ಯಾದಿ...! ಅದರಲ್ಲಿ ವಾಸುದೇವನ್ ನಾಯರರ ಒಂದು ಕಥೆ ಹಸಿವಿನ ಕ್ಷಣಗಳನ್ನು ಕೆದಕಿದಂತಾಯಿತು. ಕಥೆ ಕರ್ಕಟಕ ಮಾಸ. ಕೇರಳದಲ್ಲಿ ಕಕ್ಕಡ ಮಾಸಂ ಅಂತ ಕರೀತಾರೆ. ಕೃಷಿಕರಿಗೆ ತುಂಬಾ ಕಷ್ಟದ ತಿಂಗಳು ಇದು. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಶುಭ ಪ್ರತೀತಿ. ಜ್ಞಾನಪೀಠ ಪ್ರಶಸ್ತಿ ವಿಜೇತ ಎಂ.ಟಿ. ವಾಸುದೇವನ್ ನಾಯರರ ಹುಟ್ಟಿದ ನಕ್ಷತ್ರ ಇದು. ಅದರಲ್ಲಿ ಅವರ ಹುಟ್ಟುಹಬ್ಬದ ದಿನವನ್ನು ಅವರ ತಾಯಿ ಹೇಗೆ ಆಚರಿಸಿದರು ಅಂತ ವಿವರಿಸುತ್ತಾರೆ. ಖಾದ್ಯಾನ್ನಗಳ ವಿಚಾರದಲ್ಲಿ ಕೇರಳ ಸ್ವಾವನಂಭಿಯಲ್ಲ ಎಂದೂ ವ್ಯಂಗ್ಯವಾಡುತ್ತಾರೆ. ಒಬ್ಬ ಶಾಲಾ ಬಾಲಕ ಸ್ಥಾನದಲ್ಲಿ ನಿಂತ ಮನಃಸ್ಥಿತಿಯ ಚಿತ್ರಣ. ತನ್ನದೇ ಆದ ಹಸಿವಿನ ಅನುಭವ ಕೇರಳವಲ್ಲದೇ ಇಡೀ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದೆ ಉಳಿಯುವ ಮನುಷ್ಯಾವಸ್ಥೆಯ ದಾರುಣ ಸ್ಥಿತಿಯ ಕಥೆಯಿದು. ಔಷಧಿಗೂ ಅಕ್ಕಿ ಕಾಳಿಲ್ಲದ ಮನೆಯಲ್ಲಿ ಅವರು ಬೆಳೆದದ್ದು ಅಂತ ತಿಳಿಯಿತು. ತನ್ನ ಕರುಳ ಬಳ್ಳಿಯ ಹುಟ್ಟುಹಬಕ್ಕೆ ತಾಯಿ ಪಡುವ ವ್ಯಾತನಾಮಯ ಸಂದರ್ಭ ಇಡೀ ಪ್ರಯಾಣದಲ್ಲಿ ನನ್ನನ್ನು ಬೆಂಗಳೂರು ತಲುಪಿಸಿದ್ದೇ ಗೊತ್ತಾಗಲಿಲ್ಲ. ಮನಸ್ಸು ಖಾಲಿಯಾಗಲೇ ಇಲ್ಲ. ಈ ಹಸಿವಿನ ಜಗತ್ತಿನಲ್ಲಿ ನನ್ನದೊಂದು ದನಿ ಕೇಳಿಸಿತು, ಇಲ್ಲಿಯ ಬಂಡೆ ಕಲ್ಲಿಗೆ ಅದರ ಪರಿಚಯವಿದೆ ಅನ್ನಿಸಿತು. ಮೆಜೆಸ್ಟಿಕ್‍ನಿಂದ ನೇರವಾಗಿ ಭಾರತಿನಗರಕ್ಕೆ ಬಂದಿಳಿದೆ. ಒಂದು ಗಲ್ಲಿಗೆ ಗೆಳತಿಯ ಮದುವೆ ಮಂಟಪಕ್ಕೆ ಬಂದಾಗ ಪರಿಚಯಸ್ಥರ ನಗುವಿನೊಳಗೆ ಅವಿತುಕೊಳ್ಳಲು ಯತ್ನಿಸಿದ್ದೆ. ಒಂದಿಬ್ಬರು ಗೆಳೆಯರು ನನ್ನ ಜೋಳಿಗೆಯ ಬಗ್ಗೆ ಮಾತು ತೆಗೆದರು. ಅದು-ಇದು ಅಂತ ನಡೆದಾಗ ಮುಹೂರ್ತಕ್ಕೆ ಅರ್ಧ ಗಂಟೆಯ ಸಮಯವಿತ್ತು. ಮದುವೆ ಮಂಟಪದ ಸುತ್ತೆಲ್ಲಾ ಓಡಾಡಬೇಕೆನಿಸಿತ್ತು. ಮದುವೆಗೆ ಬಂದ ಜನರ ಸಮೂಹದಿಂದ ಕೊಂಚ ದೂರ ಹೆಜ್ಜೆಯಿಟ್ಟೆ. ಸ್ವಾಗತ ಬಾಗಿಲಿಗೆ. ಅನತಿ ದೂರದಲ್ಲಿ ಒಬ್ಬಳು ಹಣ್ಣು ಹಣ್ಣು ಅಜ್ಜಿ ಕುಳಿತಿದ್ದಳು. ಮೂರ್ನಾಲ್ಕು ಖಾಲಿ ಪಾತ್ರೆಗಳೂ ಅವಳೊಂದಿಗೆ ಐವರು ಮಕ್ಕಳು, ಒಂದು ಸಣ್ಣದು ಹೆಣ್ಣು ಮಗು. ಅದರ ಕೈಯಲ್ಲಿ ಒಂದು ತಟ್ಟೆ. ಇನ್ನೆರಡು ಎಂಟತ್ತು ವರ್ಷದ ಹೆಣ್ಣು ಮಕ್ಕಳು, ಮಿಕ್ಕಿದ್ದು ಸಣ್ಣ ಹುಡುಗರು ಅಜ್ಜಿಯ ಮೊಮ್ಮಕ್ಕಳು ಅಂದುಕೊಂಡೆ. ಮದುವೆಯ ಅಡುಗೆ ಕೋಣೆಯ ದಿಕ್ಕಿಗೇ ಅವರು ದಿಟ್ಟಿಸುತ್ತಿದ್ದರು. ಮದುವೆಯ ಸಂಭ್ರಮದಲ್ಲಿ ಅನ್ನ ಕೇಳಲು ಬಂದವರು. ಅನ್ನ-ಖಾದ್ಯಾನ್ನಗಳ ಸುವಾಸನೆ ಹಸಿದು ಆಸ್ವಾಧಿಸುತ್ತಿದ್ದವರಂತೆ ಗೋಚರಿಸಿತು. ಹಾಗೇ ಅವರ ಸುತ್ತೆಲ್ಲ ಬೀದಿ ನಾಯಿಗಳು ಓಡಾಡುತ್ತಿದ್ದವು. ಇಂಥ ಸನ್ನಿವೇಶಗಳು ಎಲ್ಲಾ ಕಡೆಯಿದೆ ಎಂದು ಕ್ಷಣ ಆಲೋಚಿಸಿದ್ದೆ. ಫ್ರೆಂಚ್ ಕಥೆಯ ಇಂಗ್ಲಿಷ್ ಅನುವಾದ ಓದಿದ ನೆನಪು ಬಂತು. ಅದೊಂದು ದೊಡ್ಡ ಪಟ್ಟಣ. ಅಲ್ಲಿ ಭಿಕ್ಷುಕರ ನಾಲ್ಕು ಗುಂಪುಗಳಿದ್ದವು. ಪಟ್ಟಣದಲ್ಲಿ ವಾರಕ್ಕೆ ಹೇಗಿದ್ದರೂ ಮದುವೆಗಳು ನಡೆಯುತ್ತಿದ್ದವು. ಎಲ್ಲಾ ಮದುವೆಗಳಿಗೂ ಈ ಗುಂಪು ಅನ್ನಕ್ಕಾಗಿ ಹೋಗುತ್ತಿದ್ದವು. ಹಾಗೆ ನಡೆಯುತ್ತಿದ್ದಾಗ ಒಮ್ಮೆ ಮದುವೆ ಮನೆಯ ಹೊರಾಂಗಣದಲ್ಲಿ ಈ ಗುಂಪುಗಳ ನಡುವೆ ಅನ್ನದ ಜಗಳ ಶುರುವಾಯಿತು. ಅದು ಎಲ್ಲಿಯವರೆಗೆ ನಡೆಯಿತ್ತೆಂದರೆ, ಮದುವೆಯನ್ನೇ ಮುಂದೂಡುವಂತೆ ಮಾಡಿತು. ಮಧ್ಯಸ್ಥಿಕೆ ತೆಗೆದುಕೊಂಡವರು, ಪೊಲೀಸರು ಮತ್ತು ಪಟ್ಟಣದ ಆಡಳಿತ ಮಂಡಳಿಯ ತೀರ್ಮಾನ ಹೀಗಿತ್ತು: ಭಿಕ್ಷುಕರ ಅನ್ನದ ಗುಂಪಿಗೆ ಟೋಕನ್ ಸಿಸ್ಟಂ ಕೊಡುವುದು. ಪಟ್ಟಣದಲ್ಲಿ ಯಾವುದೇ ಮದುವೆ ನಿಶ್ಚಯವಾದಲ್ಲಿ ಒಂದು ಗುಂಪಿಗೆ ಮಾತ್ರ ಅನ್ನ ಕೇಳುವ ಅವಕಾಶ ಅಂತ. ಮಿಕ್ಕುಳಿದವರು ಹೋಗುವಂತಿಲ್ಲ. ಬೇರೆ ಮದುವೆ ಇದ್ದರೆ ಅಲ್ಲಿಗೆ ಹೋಗಬಹುದು. ಇಲ್ಲದಿದ್ದರೆ ಭಿಕ್ಷೆ ಬೇಡಿಯೇ ಹಸಿವು ಇಂಗಿಸಿಕೊಳ್ಳಬೇಕಿತ್ತು. ಅಂಥ ಸ್ಥಿತಿ ಬೆಂಗಳೂರಿನಲ್ಲಿ ಇಲ್ಲ ಎನ್ನುವ ಸಮಾಧಾನದಿಂದ ಹೆಚ್ಚಿನ ಗಮನ ಕೊಡದೆ ಮುಹೂರ್ತ ಮಂಟಪಕ್ಕೆ ಬಂದೆ. ಎಲ್ಲಾ ಮುಗಿದಾಗ ಊಟದ ಸಮಯ ಬಂತು. ಹೊಟ್ಟೆ ಹಸಿಯುತ್ತಿತ್ತು. ಬೆಳಗ್ಗೆ ಮೂರು ಗಂಟೆಗೆ ಬಿಟ್ಟಿದ್ದು ಮಡಿಕೇರಿಯಿಂದ ಮೆಜೆಸ್ಟಿಕ್ನಲ್ಲಿ ಒಂದು ಕಪ್ ಕಾಫಿ ಬಿಟ್ಟರೆ ಏನೂ ತಿಂದಿರಲಿಲ್ಲ. ಮೊದಲ ಪಂಕ್ತಿಯಲ್ಲೇ ಕುಳಿತು ಊಟ ಮುಗಿಸಿ ಎಲ್ಲರೊಂದಿಗೆ ಕೈ ತೊಳೆಯಲೆಂದು ಹೊರಗೆ ಬಂದೆ. ನೀರಿನ ವ್ಯವಸ್ಥೆ ಎಂಜಲೆಲೆಗಳನ್ನು ಬಿಸಾಡುವ ಕಸದ ತೊಟ್ಟಿ ಸಮೀಪದಲ್ಲೆ ಇತ್ತು. ಒಂದು ಪುಟ್ಟ ಮಗು ಆ ಕಸದ ತೊಟ್ಟಿಯ ಬಳಿ ಅಳುತ್ತಿರುವಂತೆ ಸ್ವರ ಆಲಿಸಿದೆ. ಜೇಬಿನಿಂದ ಕೈ ಚೌಕ ತೆಗೆದು ಅಲ್ಲೇ ಬದಿಗೆ ಸರಿದು ಕೈ ಒರಸುತ್ತಾ ನಿಂತೆ. ಮದುವೆಯ ಸ್ವಾಗತ ಬಾಗಲಿನಲ್ಲಿ ಅಜ್ಜಿಯೊಂದಿಗೆ ಆ ಮಗು ಹಸಿವಿನಿಂದ ಅಳುತ್ತಿತ್ತು. ಊಟದ ಎಂಜಲೆಲೆಗಳನ್ನು ಮಂಟಪದ ಕೆಲಸಗಾರರು ಎತ್ತಿ ಎತ್ತಿ ಆ ಕಸದ ತೊಟ್ಟಿಯ ಬಳಿ ಎಸೆದು ಹೋದರು. ಅವರಿಗೂ ಗೊತ್ತಿತ್ತೇನೋ ತಿಪ್ಪೆಯ ಅನ್ನಕಾಗಿ ತಮ್ಮ ತಮ್ಮ ಖಾಲಿ ಪಾತ್ರೆಗಳಲ್ಲಿ ತುಂಬಿಸಿಕೊಳ್ಳತೊಡಗಿದರು. ಅಲ್ಲಿಯೇ ಸಾವಕಾಶವಾಗಿ ತಿನ್ನುತ್ತಲೂ ಇದ್ದರು. ಆ ಹೆಣ್ಣು ಮಗುವಂತೂ ಎಲೆಗಳ ಮಧ್ಯದಲ್ಲೇ ಅನ್ನವನ್ನು ತಿನ್ನತೊಡಗಿತು. ಹಸಿವಿನ ಪ್ರವಾಹ...! ಬೋರ್ಗರೆಯುವ ಅನ್ನದ ನರ್ತನಕ್ಕೆ ಬಾಯಿ-ಕೈ-ಕಣ್ಣುಗಳು ಒಂದಾದಂತೆ...! ಅದೇ ಸಮಯಕ್ಕೆ ಅಲ್ಲಿಯೇ ಸುತ್ತಾಡುತ್ತಿದ್ದ ಬೀದಿ ನಾಯಿಗಳು ಬಂದವು...! ಅವರ ಮಧ್ಯೆ ಮುನ್ನುಗಲು ಪ್ರಯತ್ನಿಸುತ್ತಿದ್ದವು. ಅವುಗಳನ್ನು ಮಕ್ಕಳು ಓಡಿಸಲು ಯತ್ನಿಸುತ್ತಿದ್ದಂತೆ ಕೆಲವು ನಾಯಿಗಳು ದುರುಗುಟ್ಟಿ ಬೊಗಳಲು ಪ್ರಾರಂಭಿಸಿದವು. ಕಚ್ಚಲು ಹವಣಿಸಿದವು. ಮೊದಲು ಸಿಕ್ಕಿದ್ದು ಆ ಹೆಣ್ಣು ಮಗು. ಮಗುವಿಗೆ ಕಚ್ಚಿದಾಕ್ಷಣ ಅದು ಉಳಿದ ಅನ್ನದ ಎಲೆಯೊಂದಿಗೆ ಅಜ್ಜಿಯ ಬಳಿ ಸೇರಿತು. ಒಂದು ಕಡೆ ಎಲೆಗಳಲ್ಲಿ ಅನ್ನಕ್ಕೆ ಹುಡುಕಿ ತುಂಬಿಸುವುದು, ಮತ್ತೊಂದು ಕಡೆ ನಾಯಿಗಳೊಂದಿಗೆ ಜಗಳ, ಜೊತೆಗೆ ಕಾಗೆಗಳೂ...! ಎಂಜಲೆಲೆಗಳ ಮಧ್ಯೆ ಮಕ್ಕಳು, ಸುತ್ತಲೂ ನಾಯಿಗಳು, ಕಾಗೆಗಳು, ನೊಣಗಳು...! ಊಟದ ಪಂಕ್ತಿ ಮುಗಿಯುತ್ತಿದ್ದಂತೆ ಕೆಲಸಗಾರರು ಆ ಕಸದ ತೊಟ್ಟಿಗೆ ಹಾಕುತ್ತಲೇ ಇದ್ದರು. ಖಾಲಿ ಪಾತ್ರೆಗಳು ಅನ್ನದಿಂದ ತುಂಬಿದವು. ಆ ಮಕ್ಕಳು ನೇರವಾಗಿ ಅಜ್ಜಿಯ ಬಳಿ ಓಡಿದರು. ನಾಯಿಗಳೊಂದಿಗಿನ ಕಿತ್ತಾಟದಿಂದ ಒಂದು ಹೆಣ್ಣು ಮಗುವಿನ ಬಟ್ಟೆ ಹರಿದಿತ್ತು. ಇನ್ನೊಂದು ಮಗು ಚಡ್ಡಿ-ಶರ್ಟು ಎರಡೂ ಹರಿದು ಕೊಂಡಿತ್ತು. ಅಜ್ಜಿ ಪಕ್ಕದಲ್ಲೇ ಇದ್ದ ಅವಳ ಜೋಳಿಗೆಯಿಂದ ತಟ್ಟೆಗಳನ್ನು ಹೊರ ತೆಗೆದಳು. ಮಕ್ಕಳು ತಂದ ಅನ್ನವನ್ನು ಒಟ್ಟು ಸೇರಿಸಿ ತಟ್ಟೆಗಳಿಗೆ ಹಾಕಿ ಹಂಚಿ ತಾನೂ ತಿನ್ನತೊಡಗಿದಳು. ಪಕ್ಕದಲ್ಲಿದ್ದ ಜೋತು ಬಿದ್ದಿದ್ದ ಸಣ್ಣ ಮಗುವಿನ ಬಾಯಿಗೂ ತುತ್ತುಣಿಸಿದಳು. ನನ್ನ ಹೊಟ್ಟೆಯನ್ನೊಮ್ಮೆ ಮುಟ್ಟಿ ನೋಡಿದೆ ಈಗಷ್ಟೆ ತಿಂದ ಅನ್ನ ಕರಗಿ ಹೋದಂತನಸಿತು. ಎದೆಯೊಳಗೆ ಉದಿಸಿದ ಹಸಿವಿನ ಭಯದ ಜ್ವಾಲೆ ಹೊತ್ತಿ ಉರಿಯಿತು. ಎರಡು ತೊಟ್ಟು ಕಣ್ಣೀರು ಸುರಿಸಿ ಅದನ್ನು ಆರಿಸಲು ಪ್ರಯತ್ನಪಟ್ಟೆ. ಎಷ್ಟೋ ದಿನಗಳಿಂದ ಮುಚ್ಚಿದ್ದ ಪ್ರಪಂಚ ಬಾಗಿಲು ತೆರೆದಂತೆ, ಹಸಿವಿನ ಜೋಳಿಗೆಯ ಹೊಟ್ಟೆಗೆ ಸಮಾಧಾನದ ನಿಟ್ಟುಸಿರು. ನೀರಿನ ಭಾರದಿಂದ ಕಟ್ಟೆಯೊಡೆದ ಅಣೆಕಟ್ಟಿನಂತೆ, ತಾಯಿ ಗರ್ಭದಿಂದ ಆಗ ತಾನೇ ಹೊರಬಂದ ಪ್ರಬುದ್ಧ ಮಗುವಿನಂತೆ ಅಮ್ಮಾ...ಎನ್ನುವ ಒಂದು ಅರ್ತಸ್ವರ...! ಹಸಿವಿನಿಂದ ಕೈಯಾಡಿಸುತ್ತಿದ್ದ ಮಗುವಿಗೆ ತಾಯಿ ಮೊಲೆ ಹಾಲುಣಿಸಿದ ಚಿತ್ರಣ...! ಗೆಳತಿಯ ಮದುವೆ ವ್ಯವಸ್ಥೆಗೊಂದು ಅಡಿಪಾಯ ನೀಡಿತು. ನಾನು ಯಾರು? ಈ ಜಗತ್ತಿನ ಸಂತೆಯಲಿ ಹೆಚ್ಚೆಂದರೆ ನಾನು... ಎಂಜಲೆಲೆಗೆ ಮುಗಿಬಿದ್ದ ಹಸಿವಿನ ಬಾಲಕ...! ಕೃಪೆ: ರವಿ ಮುರ್ನಾಡು ಕ್ಯಾಮರೂನ್, ಮಧ್ಯಾಆಫ್ರಿಕಾ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|