Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಶೈಕ್ಷಣಿಕ ಮರುಭೂಮಿಯಲ್ಲೊಂದು ಓಯಸಿಸ್

10/25/2017

0 Comments

 
Picture
ಡಾ|| ತಿಪ್ಪೇಸ್ವಾಮಿಯವರಿಗೆ ಎಪ್ಪತ್ತು ಸಂವತ್ಸರಗಳು ತುಂಬುತ್ತಿವೆ, ಎಂದು ತಿಳಿದೇ ಅಚ್ಛರಿಯಾಯಿತು. ಅಗಾಧವನ್ನು ಆಗುವುದು ಅಸಾಧ್ಯವೆಂಬುದನ್ನು, ಸಾಧಿಸಿರುವ, ಇನ್ನೂ ಎತ್ತರಕ್ಕೆ ಏರುವ ಹುಮ್ಮಸ್ಸಿನಲ್ಲಿರುವ ಸಾತ್ವಿಕ ತಿಪ್ಪೇಸ್ವಾಮಿ ಅವರಿಗೆ ಸದ್ದಿಲ್ಲದೇ ಎಪ್ಪತ್ತು ಅಗುತ್ತಿದೆ ಎಂದರೆ ನನಗಂತೂ ಅಚ್ಚರಿಯಾಗುತ್ತಿದೆ.
ಡಾ|| ತಿಪ್ಪೇಸ್ವಾಮಿಯವರು ಹಳೆಯ ಮೈಸೂರು ಸೀಮೆಯ ಚಿತ್ರದುರ್ಗ ಜಿಲ್ಲೆಯ ಜಗಳೂರು ಪಟ್ಟಣದವರು,  ನಾನು ಹಳೆಯ ಮದ್ರಾಸು ಅಧಿಪತ್ಯದ (ಕುಂಪಣಿ ಸೀಮೆ ಎಂದು ಕರೆಯಲ್ಪಡುತ್ತಿದ್ದ ಪ್ರಾಂತ್ಯದ) ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿಗೆ ಸೇರಿದ ಗಡಿಯ ಹಳ್ಳಿ ಹಿರೇಕುಂಬಳಗುಂಟೆಯವನು. ಮೈಸೂರು ಸೀಮೆ ಮತ್ತು ಕುಂಪಣಿ ಸೀಮೆಗಳನ್ನು ಬೇರ್ಪಡಿಸುವ ಗಡಿಯ ಆಚೆ-ಈಚಿನವರು ನಾವಿಬ್ಬರು. ನನ್ನ ಊರು ಕುಂಪಣಿ ಸೀಮೆಗೆ ಸೇರಿದ್ದರೂ ನಮ್ಮ ಹೊಲಗಳು, ಕೆಲವು ಬಂಧು ಬಾಂಧವರು, ಅದರಲ್ಲೂ ನನ್ನ ತಾಯಿಯ ತವರು ಮನೆ (ಗಡಿ ಮಾಕುಂಟೆ), ಅಕ್ಕ-ಸೋದರತ್ತೆಯರ ಮನೆಗಳು (ಹೊಸಕೆರೆ) ಮೈಸೂರು ಸೀಮೆಯಲ್ಲಿದ್ದುದರಿಂದ, ಜಗಳೂರಿನ ತಿಪ್ಪೇಸ್ವಾಮಿಯವರ ಬಂಧುಬಳಗದವರಿಗೂ ನಮಗೂ ನಿಕಟ ಸಂಬಂಧಗಳಿದ್ದುದರಿಂದ ಬಾಲ್ಯದಿಂದಲೂ ಆತ್ಮೀಯತೆಯು ಸಹಜವಾಗಿಯೇ ನಮ್ಮಿಬ್ಬರಲ್ಲಿ ಬೆಳೆದು ಬಂದಿತ್ತು. (ನಮ್ಮ ಕೂಡ್ಲಿಗಿ ತಾಲ್ಲೂಕು ಸೇರಿದಂತೆ) ಬಳ್ಳಾರಿ ಜಿಲ್ಲೆಯ ಕೆಲವು ತಾಲ್ಲೂಕುಗಳು ಹಳೆಯ ಮೈಸೂರು ಸಂಸ್ಥಾನದಲ್ಲಿ, 1953 ರಲ್ಲಿ ವಿಲೀನವಾದ ಮೇಲೆ ಜಗಳೂರು-ಕೂಡ್ಲಿಗಿ ತಾಲ್ಲೂಕುಗಳು ರಾಜಕೀಯವಾಗಿಯೂ ಕೂಡಿದಂತಾಗಿ 1956 ರವರೆಗೂ ಡಾ|| ತಿಪ್ಪೇಸ್ವಾಮಿಯವಂತೆ ನಾನೂ ಮೈಸೂರು ಸೀಮೆಯವನೇ ಆಗಿದ್ದೆ. ಆನಂತರ, 1956 ರ ನಂತರ, ನಾವೆಲ್ಲರೂ ಕರ್ನಾಟಕದ ಭಾಗವಾಗಿ ಹೋದೆವು.

ನಾನು ನನ್ನ ಹಳ್ಳಿಯನ್ನು ಬಿಟ್ಟು, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕಾನಾಮಡುಗು, ಕೊಟ್ಟೂರು, ಮೈಸೂರು, ದಿಲ್ಲಿ, ಕೋಯಮತ್ತೂರು, ಕಲ್ಬುರ್ಗಿ ಸುತ್ತಿ (ಕೆಲವಾರು ತಿಂಗಳು ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿ) ಧಾರಾವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋಗಿ ಸಮಾಜಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕನಾಗಿ ಸೇರಿದ್ದುದು 1959 ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಮಟ್ಟದಲ್ಲಿ ಸಮಾಜಕಾರ್ಯ ಪ್ರಶಿಕ್ಷಣಕ್ಕೆ ಅನುಕೂಲವಿರದುದನ್ನು ಗಮನಿಸಿ, ಮಾನವಶಾಸ್ತ್ರಜ್ಞ ಡಾ|| ಕೆ. ಈಶ್ವರನ್ ಅವರ ನೆರವಿನಿಂದ ಸಮಾಜಕಾರ್ಯ ಪ್ರಶಿಕ್ಷಣವನ್ನು (ಆರಂಭದಲ್ಲಿ ಸಮಾಜ ಕಲ್ಯಾಣ ಹೆಸರಿನಲ್ಲಿ) ಸ್ನಾತಕೋತ್ತರ ಮಟ್ಟದಲ್ಲಿ ಆರಂಭಿಸುವಲ್ಲಿ ಯಶಸ್ವಿಯಾದೆ. ಈ ಪ್ರಯತ್ನಕ್ಕೆ ಪೂರ್ಣ ಬೆಂಬಲ ಕೊಟ್ಟವರು ಆಗಿನ ಕುಲಪತಿ ರ್ಯಾಂಗ್ಲರ್ ಡಿ.ಸಿ. ಪಾವಟೆ ಅವರು. ಏಕ ಪಾತ್ರಾಭಿನಯ ಶೈಲಿಯಲ್ಲಿ ಮೊದಲ ವರ್ಷ (1962-63) ಸಮಾಜಕಾರ್ಯ ಕೋಸರ್ಿನ ಎಲ್ಲಾ ಹೊಣೆಯನ್ನು ಹೊತ್ತುಕೊಂಡು ದುಡಿಯುವಾಗ, ನನ್ನ ಅನೇಕ ನವೀನ ಪ್ರಯೋಗಗಳನ್ನು ಸಾಧ್ಯವಾಗಿಸುವಾಗ, ನನಗೆ ಬಹುವಾಗಿ ನೆರವಾದವರಲ್ಲಿ, ಮುಖ್ಯವಾಗಿ ನಾನು ನೆನೆಯಬೇಕಾದದ್ದು ಅಂದಿನ ಪ್ರಶಿಕ್ಷಣಾರ್ಥಿ ಸ್ನೇಹಿತರನ್ನು. 1962 ರಲ್ಲಿ ಆರಂಭವಾದ ಸಮಾಜಕಾರ್ಯ ಕೋರ್ಸ್‍ಗೆ ಮೂರನೆಯ ಬ್ಯಾಚ್ನಲ್ಲಿ (1964-66) ತಿಪ್ಪೇಸ್ವಾಮಿಯವರು ಪ್ರಶಿಕ್ಷಣಾರ್ಥಿಯಾಗಿ ಸೇರಿದರು. (ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಾನು ಎಂ.ಎ. ಪದವಿ ಪಡೆದು ಬಂದಂತೆ, ಅವರು ಅದೇ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ಪ್ರಶಿಕ್ಷಣಾರ್ಥಿಯಾಗಿ ಸೇರಿದರು). ನಾನು ಧಾರವಾಡದಲ್ಲಿ ಪ್ರಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದು, ಅವರು ಧಾರವಾಡಕ್ಕೆ ಎಂ.ಎಸ್.ಡಬ್ಲ್ಯೂ. ಪದವಿ ಗಳಿಸಲು ಬರಲು ಒಂದು ಪ್ರಮುಖ ಆಕರ್ಷಣೆಯಾಗಿತ್ತೆಂದೇ ಭಾವಿಸುತ್ತೇನೆ.

ಅವರು ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೇಲೆ ಅನೇಕ ಆವಸ್ಥೆಗಳನ್ನು ದಾಟಿ, ತಮ್ಮ ಹುಟ್ಟೂರಿಗೆ ಮರಳಿ ಬಂದು ಜಗಳೂರಿನಲ್ಲಿ ಅಮರಭಾರತಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಶೈಕ್ಷಣಿಕವಾಗಿ ಮರುಭೂಮಿಯಂತಿದ್ದ ನೆಲದಲ್ಲಿ ಶೈಕ್ಷಣಿಕ ಓಯಸಿಸ್ನ್ನು ಸೃಷ್ಟಿಸಿದರು. ಅವರು 70 ನೆಯ ವರ್ಷಕ್ಕೆ ಕಾಲಿರಿಸಿರುವ ಈ ಸಂದರ್ಭದಲ್ಲಿ ಸಿಂಹಾವಲೋಕನದಿಂದ ಅವರ ಸಾಹಸವನ್ನು ಪರಿಗಣಿಸಿದರೆ, ಗ್ರಾಮೀಣ ಪರಿಸರದಲ್ಲಿ ವಿವಿಧ ತೆರದ ಜ್ಞಾನ ಶಾಖೆಗಳನ್ನು ಅವರು ತೆರೆದು ನಡೆಸುತ್ತಿರುವುದು, ಇಹಪರಗಳೆರಡನ್ನು ಬೆಸೆಯುವ ಮಹತ್ವದ ಕೈಂಕರ್ಯದಲ್ಲಿ ತೊಡಗಿರುವುದು ಮತ್ತು ಇದರಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿರುವುದು ಜನರಲ್ಲಿ ಅಚ್ಚರಿಯನ್ನು ಮೂಡಿಸುವುದರ ಜೊತೆಗೆ ಹೆಮ್ಮೆಯನ್ನು ತರುತ್ತದೆ ಎಂಬುದನ್ನು ಕಾಣಬಹುದು. ನಾವು ಗಮನಿಸಲೇಬೇಕಾದ ಬೆಳವಣಿಗೆ ಜಗಳೂರು ಮತ್ತು ಆಸುಪಾಸಿನಲ್ಲಿ ಡಾ|| ತಿಪ್ಪೇಸ್ವಾಮಿಯವರ ಶಿಕ್ಷಣ ಸಂಸ್ಥೆಗಳು ಅನ್ಯರಲ್ಲಿ ಪ್ರೇರಣೆಯನ್ನುಂಟು ಮಾಡಿ ಅವರು ಆಸುಪಾಸಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದು. ಇದು ಒಂದು ರೀತಿಯ ಸ್ಪರ್ಧೆಯೆನ್ನಿಸಬಹುದು. ಆದರೆ, ಡಾ|| ತಿಪ್ಪೇಸ್ವಾಮಿಯವರ ಸಂಸ್ಥೆಗಳು ಈ ಕಾರಣದಿಂದಲೂ ಇನ್ನೂ ಹೊಳಪಿನಿಂದ ವಿಕಸಿಸುತ್ತಲಿವೆ ಎಂಬುದನ್ನು ಗಮನಿಸಬಹುದು.

ಡಾ|| ತಿಪ್ಪೇಸ್ವಾಮಿಯವರದ್ದು ವ್ಯಾಪಕ ದೃಷ್ಟಿ; ಅಲ್ಲದೇ ಕಾಲ - ದೇಶಗಳನ್ನು ಒಗ್ಗೂಡಿಸುವ ಸಾಹಸ ಪ್ರವೃತ್ತಿ. ಭಾರತೀಯ ಸಂಸ್ಕೃತಿಯನ್ನು ತಮ್ಮ ನರನಾಡಿಗಳಲ್ಲಿ ತುಂಬಿಕೊಂಡಿರುವ ಅವರು ಉತ್ತರದ ಪುರಾತನ ನಾಲಂದ ವಿಶ್ವವಿದ್ಯಾಲಯದ ಹೆಸರನ್ನು ತಮ್ಮ ಶಿಕ್ಷಣ ಸಂಸ್ಥೆಗೆ ಇರಿಸಿರುವುದರ ಮೂಲಕ ದಕ್ಷಿಣದಲ್ಲಿ, ಈ 20-21ನೆಯ ಶತಮಾನದ ಆಧುನಿಕ ಯುಗದಲ್ಲಿ, ಆ ಪುರಾತನ ಚೈತನ್ಯವನ್ನು ಬಿತ್ತಿ ಬೆಳೆಯುವಲ್ಲಿ ನಿರತರಾಗಿದ್ದಾರೆ. ಬಾಲಭಾರತಿ ಹೆಸರಿನಡಿಯಲ್ಲಿ ಪುರಾತನ ಜ್ಞಾನವನ್ನು ಆಧುನಿಕ ವಿಜ್ಞಾನದ ಜೊತೆಗೆ ಮೇಳೈಸುವುದರ ಮೂಲಕ ಮಕ್ಕಳಲ್ಲಿ ಸಾತ್ವಿಕ ಮತ್ತು ಸ್ವಾಸ್ಥ್ಯ ವ್ಯಕ್ತಿತ್ವವನ್ನು ಬೆಳೆಸುವ ಗಟ್ಟಿ ನೆಲೆಯನ್ನು ಒದಗಿಸಿದರು.

ಡಾ|| ತಿಪ್ಪೇಸ್ವಾಮಿಯವರ ಚೇತನವು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಸೀಮಿತಗೊಳ್ಳದೇ ಅದ್ಯಾತ್ಮ ವಿದ್ಯೆಯ ಕಡೆಗೂ ಚಾಚಿದೆ.  ಒಂದು ಆಶ್ರಮವನ್ನು ಸ್ಥಾಪಿಸಿ, ಧ್ಯಾನ, ಯೋಗಾಭ್ಯಾಸ, ದೈವಿಕ ಚಿಂತನೆಯ ಕಡೆ ಜನರ, ಅದರಲ್ಲೂ ಯುವ ಜನರ ಮನಸ್ಸನ್ನು ಸೆಳೆಯುವುದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇವರದ್ದು ಕೃಷಿಯ ಮನೆತನ. ಈ ಕ್ಷೇತ್ರವು ಇವರ ಇನ್ನೊಂದು ಪ್ರಯೋಗಕ್ಕೆ ನೆಲೆಯನ್ನು ಒದಗಿಸಿತು. ಜಗಳೂರು ಕೆರೆಯ ಉತ್ತರ ಭಾಗದಲ್ಲಿ ಬರಡು ಭೂಮಿಯನ್ನು ಕೊಂಡು ಅದನ್ನು ಬಹು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿ ಅದರಲ್ಲಿ ತೆಂಗುಕಂಗುಮಾವು-ಬಾಳೆ, ಇತ್ಯಾದಿ ವಿವಿಧ ಸಸ್ಯಗಳ ಒಂದು ಸುಂದರ ತೋಟವನ್ನು ಮಾಡಿ ಅಕ್ಕಪಕ್ಕದಲ್ಲಿ ಸೋಜಿಗವನ್ನುಂಟು ಮಾಡಿದ್ದಾರೆ. ಜೊತೆಗೆ ಅಲ್ಲಿ ಹಾಲು ಉತ್ಪಾದನೆಗಾಗಿ ಹಸುಗಳನ್ನು ಸಾಕಿದ್ದುದೂ ಉಂಟು. ಕಾಲೇಜಿಗೆ ಬಹು ಸಮೀಪದಲ್ಲಿಯೇ ದೊರೆತ ನಿವೇಶನದಲ್ಲಿ ಅಪರಿಮಿತ ಜಲ ನಿಧಿಯೇ ಸಿಕ್ಕಿದುದರಿಂದ ಅಲ್ಲಿಯೇ ಮನೆ ಕಟ್ಟಿ, ಆ ನೀರನ್ನು ಕಾಲೇಜಿಗೂ ಸದಾ ಒದಗಿಸತೊಡಗಿದರು. ಇದಿಷ್ಟೇ ಅಲ್ಲದೇ, ಮನೆ ಮತ್ತು ಕಾಲೇಜಿನ ಪರಿಧಿಯನ್ನು ದಾಟಿ ಜಗಳೂರು ಪಟ್ಟಣಕ್ಕೆ ನೀರೊದಗಿಸಲು ಮುಂದಾದರು. ಜಗಳೂರಿನ ಪರಿಚಯ ಉಳ್ಳವರಿಗೆ ಗೊತ್ತಿದೆ ಅಲ್ಲಿ ನೀರಿಗೂ ಬರ, ಎಂದು. ಅಲ್ಲಿನ ಜನರು ನೀರಿಗಾಗಿ ಪರದಾಡುತ್ತಿರುವುದನ್ನು ಸಹಿಸದ ಡಾ|| ತಿಪ್ಪೇಸ್ವಾಮಿಯವರು ಜಗಳೂರಿನ ಪುರಸಭೆಯವರಿಗೆ ನೀರನ್ನು ಸರಬರಾಜು ಮಾಡಲು ಸಿದ್ಧವಿರುವುದಾಗಿ ಹೇಳಿದ್ದುದು ಅವರ ಔದಾರ್ಯ ಭಗೀರಥ ಮನೋಧರ್ಮಕ್ಕೆ ದ್ಯೋತಕವಾಗಿದೆ.

ಸಮಾಜಕಾರ್ಯದ ವಿದ್ಯಾರ್ಥಿಯಾಗಿದ್ದ ಡಾ|| ತಿಪ್ಪೇಸ್ವಾಮಿಯವರು ಮಾನವ ಸಂಪನ್ಮೂಲದ ಸಂವರ್ಧನೆಯಲ್ಲಿ ತೊಡಗಿ ಚೈತನ್ಯಭರಿತ ಯುವಜನರ ತಂಡಗಳನ್ನೇ ಕಟ್ಟಿದ್ದಾರೆ. ಶಿಶುವಿಹಾರದಲ್ಲಿ, ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಾಲೆಯಲ್ಲಿ, ಪದವಿ ಪೂರ್ವ, ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣ ವಿಭಾಗಗಳಲ್ಲಿ ಇವರು ರೂಪಿಸಿದ, ನಿಷ್ಠೆಯಿಂದ ದುಡಿಯುವ ಯುವ ಜನರನ್ನು ಕಾಣುವುದು ಕಣ್ಣಿಗೆ ಹಬ್ಬ. ಅವರೊಡನೆ ಒಡನಾಡುವುದು ರೋಚಕ ಅನುಭವ. ಈ ಯುವಜನರು ಗೋಡೆಗಳೊಳಗೆ ಪಾಠ ಪ್ರವಚನದಲ್ಲಿ ನಿರತರಾಗಿರುವುದಲ್ಲದೇ, ಗೋಡೆಯಿಂದಾಚೆ ಸಾರ್ವಜನಿಕ ಚಟುವಟಿಕೆಗಳಲ್ಲೂ ಅಷ್ಟೇ ನಿಷ್ಠೆಯಿಂದ ಕ್ರಿಯಾಶೀಲರಾಗಿದ್ದಾರೆ.

ಸಂಗೀತ-ನಾಟಕ, ಮುಂತಾದ ಕಲೆಗಳಲ್ಲೂ ಡಾ|| ತಿಪ್ಪೇಸ್ವಾಮಿಯವರಿಗಿರುವ ಆಸಕ್ತಿಯು ನಾಲಂದ ಕಲಾ ಭಾರತಿ ಎಂಬ ಹವ್ಯಾಸಿ ರಂಗ ವೇದಿಕೆಯನ್ನು ಸ್ಥಾಪಿಸುವಲ್ಲಿ ಮುಗುಳೊಡೆದಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿ, ಶಿಕ್ಷಕ-ಶಿಕ್ಷಕಿ, ಶಿಕ್ಷಕೇತರ ಸಿಬ್ಬಂದಿ ಇವರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಡಾ|| ತಿಪ್ಪೇಸ್ವಾಮಿಯವರ ಪ್ರೇರಕ ಶಕ್ತಿಯು ಜಾಗೃತವಾಗಿದೆ.

ನಾಲಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಕಾಲೇಜಿನ ಆವರಣದ ಒಳಗೂ ಹೊರಗೂ ಸಾರ್ಥಕ ಸೇವೆಯಲ್ಲಿ ತೊಡಗಿರುವುದು ಇಡೀ ಶಿಕ್ಷಣ ಸಂಸ್ಥೆಗೊಂದು ಭೂಷಣವಾಗಿದೆ. ನನ್ನ ಅನುಭವದ ಉದಾಹರಣೆ ಇಲ್ಲಿದೆ. ನಾವು ನಮ್ಮ ಊರ ಪಕ್ಕದ ದಲಿತರ ಹಳ್ಳಿ ಚಿಕ್ಕ ಕುಂಬಳಗುಂಟೆಯಲ್ಲಿ ನಮ್ಮ ಮಗ ಸತೀಶನ ಸ್ಮರಣೆಗಾಗಿ ಕೈಗೊಂಡ ಸಮುದಾಯಾಭಿವೃದ್ಧಿ, ಮುಖ್ಯವಾಗಿ ಪರಿಸರ ನೈರ್ಮಲ್ಯ ಕಾರ್ಯದಲ್ಲಿ ನಾಲಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಅಲ್ಲಿನ ಜನರೊಡನೆ ಬೆರೆತು ಸಕ್ರಿಯವಾಗಿ ಪಾಲ್ಗೊಂಡು ಮಾಡಿದ ಸ್ಮರಣೀಯ ಕಾರ್ಯವು ಅಲ್ಲಿ ಎಲ್ಲರ ಮೆಚ್ಚುಗೆ ಕೃತಜ್ಞತೆಗಳನ್ನು ಪಡೆಯಿತು. ಇದರಂತೆ, ಜಗಳೂರು ಪಟ್ಟಣದ ಸುತ್ತಣದ ಎಷ್ಟೋ ಸಮುದಾಯಗಳಲ್ಲಿ ಸ್ಮರಣೀಯ ಕಾರ್ಯ ಮಾಡಿರಲೇಬೇಕೆನ್ನಿಸುತ್ತದೆ. ಇಂತಹ ಚಟುವಟಿಕೆಗಳಲ್ಲೂ ಬಿಡುವು ಮಾಡಿಕೊಂಡು, ಡಾ|| ತಿಪ್ಪೇಸ್ವಾಮಿಯವರು ಪಾಲ್ಗೊಳ್ಳುತ್ತಾರೆಂಬುದನ್ನು ದಾಖಲಿಸಲೇಬೇಕಾಗುತ್ತದೆ.

ನಾಲಂದ ಕಾಲೇಜಿನ ಆವರಣವು ಸಸ್ಯೋದ್ಯಾನವೇ ಆಗಿದೆ. ಬರಡು ಗುಡಕ್ಕೆ ಹಸಿರನ್ನು ಹೊಂದಿಸುವಲ್ಲಿ ಪ್ರಯತ್ನ ಶೀಲವಾಗಿರುವುದು ಆ ಪಟ್ಟಣಕ್ಕೊಂದು ಕಲೆಯನ್ನು ತಂದಿದೆ. ಸಾರ್ವಜನಿಕರ ಮತ್ತು ನೌಕರರ ಉಪಯೋಗಕ್ಕೆಂದೇ ಸಹಕಾರಿ ತತ್ತ್ವದ ಆಧಾರದ ಮೇಲೆ, ಸುಲಭ ಬೆಲೆಯಲ್ಲಿ ವಸ್ತುಗಳನ್ನು ಒದಗಿಸುವ ಘಟಕವೊಂದನ್ನು ಯೋಚಿಸಿರುವುದು ನಾಲಂದ ಸಂಸ್ಥೆಯ ವೈವಿಧ್ಯಮಯ ಆಸಕ್ತಿಯ ದ್ಯೋತಕವೇ ಆಗಿದೆ. ಕಾಲೇಜಿನ ಸಿಬ್ಬಂದಿ ವರ್ಗವು ನೆಮ್ಮದಿಯ ಜೀವನವನ್ನು ನಡೆಸಲು ಬೇಕಾದಂತಹ ಸ್ವಂತ ಮನೆಯನ್ನು ಹೊಂದುವ ಯೋಜನೆಗೂ ಡಾ|| ತಿಪ್ಪೇಸ್ವಾಮಿಯವರ ಸಹಾಯ-ಸಹಕಾರ ಹಸ್ತ ಇದೆಯೆಂದೂ ಭಾವಿಸುತ್ತೇನೆ. ಇಡೀ ಸಂಸ್ಥೆಯು ಸಾಮರಸ್ಯದ ಬಳಗೀಯ ಛಾಪನ್ನು ಹೊಂದಿದ ಐಕ್ಯ ಘಟಕವಾಗಿ ರೂಪದಳೆದು ಬಲಿಷ್ಠವಾಗುತ್ತಲಿದೆ. ಇದರ ರೂವಾರಿಯು ಡಾ|| ತಿಪ್ಪೇಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರಲ್ಲದೇ ಮತ್ತಾರು ಇದ್ದಾರು?

ಡಾ|| ತಿಪ್ಪೇಸ್ವಾಮಿಯವರು ಇಂಡಿಯನ್ ಅಕಾಡೆಮಿ ಆಫ್ ಸೋಷಿಯಲ್ ಸೈನ್ಸಸ್  ಅಲಹಾಬಾದ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಇತ್ಯಾದಿ ಸಂಸ್ಥೆಗಳ ಆಜೀವ ಸದಸ್ಯರಾಗಿ ತಮ್ಮ ವಿದ್ವತ್ ಸಂಪರ್ಕವನ್ನು ವ್ಯಾಪಕಗೊಳಿಸಿಕೊಂಡಿದ್ದಾರೆ. ತಮ್ಮ ಸಂಸ್ಥೆಗೆ ಭೂಷಣವಾಗುವಂತ ಗ್ರಂಥಾಲಯ, ಪ್ರಯೋಗಾಲಯಗಳನ್ನು ಸ್ಥಾಪಿಸಿ ಬೆಳೆಸುವುದಲ್ಲದೇ ಬಹು ಉಪಯುಕ್ತವಾದ ವಿದ್ವತ್ ಉಪನ್ಯಾಸಗಳನ್ನು, ಚರ್ಚಾಕೂಟಗಳನ್ನು, ವಿಚಾರ ಸಂಕಿರಣಗಳನ್ನು, ಬೋಧಪ್ರದ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳುವಲ್ಲಿ ಡಾ|| ತಿಪ್ಪೇಸ್ವಾಮಿಯವರು ಒಂದು ಹೆಜ್ಜೆ ಮುಂದೆಯೇ.

ಡಾ|| ತಿಪ್ಪೇಸ್ವಾಮಿಯವರು ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡುವಾಗ ನಿರಾಶ್ರಿತರ (ಭಿಕ್ಷುಕರ) ಕಾಲೋನಿಯಲ್ಲಿ ಶೋಧಕಾರ್ಯ ಕೈಗೊಂಡು ಒಂದು ಒಳ್ಳೆಯ ಸಂಶೋಧನೆಯ ನಿಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಾದರ ಪಡಿಸಿದ್ದರು. ಅವರ ಈ ಅಧ್ಯಯನವು ಒಂದು ಕಾರಣವಾಗಿರಬಹುದು. ನಮ್ಮ ಜನರು ನಿರಾಶ್ರಿತರ ನೆಲೆಗೆ ಹೋಗದೆ, ತಮಗೆ ತಾವೇ ಆಶ್ರಯವನ್ನು ನಿರ್ಮಿಸಿಕೊಂಡು ನೆಮ್ಮದಿಯ ಬದುಕನ್ನು ಬಾಳಲಿ ಎಂಬ ಹಂಬಲದಿಂದ ಅವರು ಅನೇಕ ರೀತಿಗಳಲ್ಲಿ ಜನರನ್ನು ಸ್ವಾವಲಂಬಿಗಳಾಗಿಸಲು ಅವರನ್ನು ತಿದ್ದಿ ತೀಡುವ, ಮಾರ್ಗದರ್ಶನ ನೀಡುವ, ಸವಲತ್ತುಗಳನ್ನು ಒದಗಿಸುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ.

ಡಾ|| ತಿಪ್ಪೇಸ್ವಾಮಿಯವರು ಶರಣರ ಬೋಧನೆಯ ಬೆಳಕಿನಲ್ಲಿ ತಮ್ಮ ವ್ಯಕ್ತಿತ್ವವನ್ನು ಶುಚಿಯಾಗಿ ಇರಿಸಿಕೊಂಡಿದ್ದಾರೆ. ಜೊತೆಗೆ, ತಮ್ಮ ಒಡನಾಡಿಗಳ ಮೇಲೂ ಪ್ರಭಾವ ಬೀರಿ ಅವರ ವ್ಯಕ್ತಿತ್ವವನ್ನು ಆರೋಗ್ಯಯುತವನ್ನಾಗಿಸುವಲ್ಲಿ, ಸಾರ್ವಜನಿಕ ಜೀವನವು ಸವೃದ್ಧಿಯದಾಗಿರಬೇಕೆಂದು ಸದಾ ಚಿಂತಿಸುವ, ಆ ಕಡೆಗೆ ತುಡಿಯುತ್ತಿರುವ ಜೀವ ಡಾ|| ತಿಪ್ಪೇಸ್ವಾಮಿಯವರದ್ದು. ಅವರು ಹೀಗೆಯೇ ಉತ್ಥಾನಗೊಳ್ಳುತ್ತ ಸಾಗಲಿ ಎಂದು ಮನಸಾರೆ ಹಾರೈಸುತ್ತೇನೆ.
 
ಡಾ.ಎಚ್.ಎಂ. ಮರುಳಸಿದ್ಧಯ್ಯ
(2008)
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9



    Six-Days
    Labour Laws & Labour Codes Certification Program

    Know More

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com