ತಮ್ಮ ಜೀವನವನ್ನು ತಾವೇ ಕೊನೆಗೊಳಿಸುವಂತಹ ಕಾರ್ಯವನ್ನು ಆತ್ಮಹತ್ಯೆ ಎಂದು ಗುರುತಿಸಲಾಗುವುದು. ಆತ್ಮಹತ್ಯೆ ಎಂಬ ಪದವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ಪದದಲ್ಲಿ ಅಡಗಿರುವಂತಹ ಒಂದು ಕೊರತೆ ಗೋಚರವಾಗುವುದು. ಆತ್ಮಹತ್ಯೆ ಎಂದರೆ ಆತ್ಮವನ್ನು ಕೊಲೆ ಮಾಡುವುದು ಎಂದರ್ಥ. ನಮಗೆಲ್ಲರಿಗೂ ಗೊತ್ತಿರುವಂತಹ ವಿಷಯ ಏನೆಂದರೆ, ಆತ್ಮವನ್ನು ಕೊಲೆ ಮಾಡಲು ಸಾಧ್ಯವಿಲ್ಲ. ಆದರೆ ದೇಹವನ್ನು ಕೊಲೆ ಮಾಡಲು ಸಾಧ್ಯ. ಆದುದರಿಂದ ಆತ್ಮಹತ್ಯೆ ಎನ್ನುವ ಬದಲು, ಆತ್ಮದ ಬಿಡುಗಡೆ ಮತ್ತು ದೇಹದ ಅಂತ್ಯ ಇಲ್ಲವೆ ತನ್ನ ಕೊಲೆ ಎಂದು ಕರೆದರೆ ತಪ್ಪಾಗಲಾರದು. ಮಾನವ ಜನ್ಮ ದೊಡ್ಡದು, ಅದನ್ನು ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ ಎಂದಿದ್ದಾರೆ ದಾಸ ಶ್ರೇಷ್ಠರು. ಆತ್ಮಹತ್ಯೆ ಎಂಬುದು ಇತ್ತೀಚೆಗೆ ಉದ್ಬವವಾಗಿರುವಂತಹ ಸಮಸ್ಯೆಯೇ ಅಥವಾ ಹಳೆಯ ಸಮಸ್ಯೆಯೇ ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಬಂದಿರುವುದು ಸ್ವಾಭಾವಿಕವೇ ಸರಿ. ಆತ್ಮಹತ್ಯೆಯು ಪುರಾತನ ಕಾಲದಿಂದಲೂ ಇರುವಂತಹ ಒಂದು ವರ್ತನೆ. ಇದು ಬರಿ ಮನುಷ್ಯನಲ್ಲಿ ಇದೇ ಎಂದು ಹೇಳುವುದು ಸರಿ ಅಲ್ಲ, ಏಕೆಂದರೆ ಕೆಲವು ಪಕ್ಷಿಗಳೂ, ಉದಾಹರಣೆಗೆ ಸಾಲೊಮನ ಮೀನು ಕೂಡ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನಮ್ಮ ಪುರಾಣಗಳಲ್ಲಿ, ಸಾಮಾಜಿಕ ಚರಿತ್ರೆಗಳಲ್ಲಿ ಅನೇಕ ಆತ್ಮಹತ್ಯೆ ಘಟನೆಗಳು ವ್ಯಕ್ತವಾಗಿವೆ. ಅನೇಕ ಗಣ್ಯವ್ಯಕ್ತಿಗಳು ಕೂಡ ತಮ್ಮ ಜೀವನವನ್ನು ಆತ್ಮಹತ್ಯೆಯಿಂದ ಅಂತ್ಯಗೊಳಿಸಿರುವಂತಹ ಘಟನೆಗಳು ಎಲ್ಲರಿಗೂ ಗೊತ್ತಿರುವಂತಹ ವಿಷಯ. ಯಾವ ಕಾರಣಗಳಿಂದ ಈ ನಡತೆಯು ಉಂಟಾಗುವುದು ಎಂದು ಪ್ರಶ್ನಿಸಿದರೆ, ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡು ಎಲ್ಲ ದಾರಿಗಳು ಮುಚ್ಚಿದೆ ಎಂದು ಅನಿಸಿದಾಗ, ಸಂಪ್ರದಾಯ ನಿಯಮಗಳಿಂದ ಬಿಡಿಸಿಕೊಳ್ಳಲಾಗದೆ ಇರುವಾಗ, ಆತ್ಮಹತ್ಯೆ ಎಂಬ ಒಂದೇ ದಾರಿ ಕಾಣಿಸುವುದು.
ಆತ್ಮಹತ್ಯೆಕಾರಿಯ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮೊದಲು ವೈದ್ಯರು ತಪಾಸಣೆ ನಡೆಸಿ, ನಂತರ ಮಾನಸಿಕ ವೈದ್ಯರ ಚಿಕಿತ್ಸೆ ನಡೆಸುವುದು ಸಾಮಾನ್ಯ. ಇವರಿಬ್ಬರ ಅಭಿಪ್ರಾಯದಿಂದ ನಮಗೆ ತಿಳಿದು ಬರುವುದು ಏನೆಂದರೆ, ಮಾನಸಿಕ ಖಿನ್ನತೆ, ಮಾದಕ ವಸ್ತುಗಳ ದುರ್ಬಳಕೆ, ಗುಣ ಮಾಡಲಾಗದಂತಹ ದೈಹಿಕ ಕಾಯಿಲೆಗಳಾದ ಏಡ್ಸ್, ಕ್ಯಾನ್ಸರ್ ಇತ್ಯಾದಿಗಳು, ಮೂಢನಂಬಿಕೆಗಳು, ಪರಿಹಾರ ಸಿಗದಂತಹ ನೋವಿನಿಂದ ನರಳುವುದು, ಈ ಕೆಲವು ಅಂಶಗಳು ಆತ್ಮಹತ್ಯೆಗೆ ಕಾರಣಗಳಾಗಿರುವುದು. ವಿಶ್ವ ಆರೊಗ್ಯ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ ವರ್ಷಕ್ಕೆ ಒಂದು ಕೋಟಿ ಜನರು ಆತ್ಮಹತ್ಯೆಯಿಂದ ಸಾಯುವರು, ಭಾರತದಲ್ಲಿ ವರ್ಷಕ್ಕೆ ಒಂದು ಲಕ್ಷ ಜನರು ಆತ್ಮಹತ್ಯೆ ಕಾರಣದಿಂದ ಸಾಯುವರು. ಅಂದರೆ ಒಂದು ನಿಮಿಷದಲ್ಲಿ 5 ಜನರು ಈ ತರಹ ಸಾವಿಗೆ ಬಲಿಯಾಗುವರು. 13 ಜನರು ಆತ್ಮಹತ್ಯೆ ಪ್ರಯತ್ನ ಮಾಡಿದರೆ, ಅವರಲ್ಲಿ ಒಬ್ಬ ಸಾಯುವನು. ನಮ್ಮ ಕಾನೂನಿನ ಪ್ರಕಾರ ಆತ್ಮಹತ್ಯೆ ಒಂದು ಅಪರಾಧ. ಆದುದರಿಂದ ಇವರು ಶಿಕ್ಷೆಗೆ ಒಳಗಾಗುವರು. ನೊಂದಿರುವ ವ್ಯಕ್ತಿಗೆ ಚಿಕಿತ್ಸೆ ಕೊಡುವುದು ಮುಖ್ಯವೊ ಅಥವಾ ಶಿಕ್ಷೆ ಕೊಡುವುದು ಮುಖ್ಯವೊ ಎಂಬ ವಾದ ಎಲ್ಲರ ಮನಸ್ಸಿನಲ್ಲಿ ಬರುವುದು ಸಹಜ. ಕಾಲಾಂತರಗಳಿಂದ ಇದು ನಡೆದು ಬಂದರೂ, ಆತ್ಮಹತ್ಯೆ ಮಾಡಿಕೊಳ್ಳುವವರು ಮಾನಸಿಕ ರೋಗಿಗಳು, ಅಪರಾಧಿಗಳಲ್ಲ. ಆದುದರಿಂದ ಅವರಿಗೆ ಮಾನಸಿಕ ಚಿಕಿತ್ಸೆ ಅತ್ಯಗತ್ಯ. ಇದರಿಂದ ಆತ್ಮಹತ್ಯೆ ತಡೆಗಟ್ಟಬಹುದು. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಸಮಸ್ಯೆ ಅನಿಸುತ್ತೋ, ಅದೇ ನಂತರ ಸಮಸ್ಯೆ ಅನಿಸುವುದಿಲ್ಲ. ಈ ತರಹ ಪರಿವರ್ತನೆ ಆಗಿದ್ದಲ್ಲಿ, ಪುನಃ ಆ ವ್ಯಕ್ತಿ ಆತ್ಮಹತ್ಯೆ ಪ್ರಯತ್ನ ಮಾಡುವ ಸಾಧ್ಯತೆ ಇಲ್ಲ. ಯಾರಲ್ಲಿ ಈ ಪರಿವರ್ತನೆ ಆಗುವುದಿಲ್ಲವೊ, ಆ ವ್ಯಕ್ತಿ ಮತ್ತೊಮ್ಮೆ ಅಥವಾ ಪದೇ ಪದೇ ಆತ್ಮಹತ್ಯೆ ಪ್ರಯತ್ನ ಮಾಡುವ ಸಾಧ್ಯತೆ ಇರುವುದು. ಆತ್ಮಹತ್ಯೆ ಮಾಡಿಕೊಳ್ಳುವವರು ಉಪಕರಣಗಳ ಬಗ್ಗೆ ಹೇಗೆ ಮಾಹಿತಿ ಪಡೆದುಕೊಳ್ಳುವರು. ಇತರರ ನಡತೆಯನ್ನು ನೋಡಿ ಕಲಿಯುವುದು. ಈಗಿನ ಸಮಾಜದಲ್ಲಿ ಮಾಹಿತಿ ಪಡೆಯಲು ಅನೇಕ ದಾರಿಗಳು ಇವೆ. ಉದಾ: ಸಿನಿಮಾ, ಟಿ.ವಿ, ದಿನಪತ್ರಿಕೆಗಳು, ಇಂಟರೆನೆಟ್, ಇತ್ಯಾದಿ. ವಿಶ್ವ ಆರೊಗ್ಯ ಸಂಸ್ಥೆ ಹೇಳಿಕೆ ಪ್ರಕಾರ ಆರೋಗ್ಯ ಎಂದರೆ-ಕಾಯಿಲೆ ಇಲ್ಲದಿರುವುದೇ ಆರೋಗ್ಯ ಅಲ್ಲ. ಅದು ಮುಖ್ಯವಾಗಿ "ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಪರಿಪೂರ್ಣವಾಗಿ ಇರುವುದೇ ಆರೋಗ್ಯ" ಮತ್ತು "ಮಾನಸಿಕ ಆರೋಗ್ಯವಿಲ್ಲದಿದ್ದರೆ ಆರೋಗ್ಯವೇ ಇಲ್ಲ" ಎಂದು ಹೇಳಬಹುದು. ಧಾರ್ಮಿಕ ಗುಣಗಳು ಯಾರಲ್ಲಿ ಬಲವಾಗಿರುವುದೊ ಅವರು ಆತ್ಮಹತ್ಯೆಯಿಂದ ದೂರ ಇರುವರು. ಇದು ಬಲಹೀನವಾದಂತೆ, ಆತ್ಮಹತ್ಯೆಯ ಹತ್ತಿರ ಹೋಗುವರು. ಧಾರ್ಮಿಕ ದೃಷ್ಟಿಯಿಂದ ಆತ್ಮಹತ್ಯೆ ತಪ್ಪು. ದೇವರು ಕೊಟ್ಟ ದೇಹವನ್ನು ಕಾಪಾಡಬೇಕು. ಕೊಲ್ಲಲು ನಮಗೆ ಅಧಿಕಾರವಿಲ್ಲ. ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸೂಚನೆ ಕೊಡುತ್ತಾನೆಯೆ? ಸಾಮಾನ್ಯ ಜನರು ಅಥವಾ ಕುಟುಂಬದವರು ಗುರುತಿಸಲು ಸಾಧ್ಯವೆ? ಸಾಧ್ಯತೆ ಇದೆ. ಉದಾ: ಯಾರು ನಿಜವಾಗಿ "ಜೀವನ ಸಾಕಾಗಿದೆ, ನನ್ನ ಸಮಸ್ಯೆಗೆ ದಾರಿ ಇಲ್ಲ, ದೇವರು ಯಾವಾಗ ಕಣ್ಣನ್ನು ಮುಚ್ಚಿಸುತ್ತಾನೊ," ಎಂದು ಮಾತನಾಡುವವರು, ಜುಗುಪ್ಸೆಯಿಂದ ನರಳುವವರು. ಯಾರು ಕುಡಿತದ ಚಟಕ್ಕೆ ಒಳಗಾಗಿರುವವರು, ಜೀವನದಲ್ಲಿ ಅಘಾತವನ್ನು ಅನುಭವಿಸುವ, ಶೋಕದಿಂದ ಹೊರ ಬರಲು ಆಗುವುದಿಲ್ಲವೋ, ಇವರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುವುದು. ಅವರಿಗೆ ಮಾನಸಿಕ ಚಿಕಿತ್ಸಾ ವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಅತ್ಯಗತ್ಯ. ಪರೀಕ್ಷೆಯ ಸಮಯದಲ್ಲಿ ಇಲ್ಲವೆ, ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಯುವ ಜನರಲ್ಲಿ ಆತ್ಮಹತ್ಯೆ ಅಧಿಕವಾಗುವುದು. ಇದಕ್ಕೆ ತಂದೆ-ತಾಯಿಯರು ಮಕ್ಕಳ ಮೇಲೆ ಒತ್ತಡ ಮತ್ತು ಶೈಕ್ಷಣಿಕ ಪದ್ಧತಿಗಳು ಕಾರಣವಾಗಿರುವುದು. ತಂದೆ-ತಾಯಿಯರು ಮಕ್ಕಳಿಗೆ ಸರಿಯಾದ ದಾರಿ ತೋರಿಸುವ ಹಾಗೆ ಇರಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುವುದೇ ಎಂಬ ಗಾದೆ ಮಾತು ಆತ್ಮಹತ್ಯೆ ನಿವಾರಣೆಯಲ್ಲಿ ಸಹಾಯವಾಗುವುದು, ಏಕೆಂದರೆ "ಆರೊಗ್ಯವೇ ಭಾಗ್ಯ" ಇದನ್ನು ಸಾಧಿಸಲು ಒಬ್ಬರಿಂದ ಸಾಧ್ಯವಿಲ್ಲ. ಆದರೆ ವೈದ್ಯರು, ಮನೋವೈದ್ಯರು, ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು, ಕಾನೂನು ಮತ್ತು ಪೊಲೀಸ್ ಇಲಾಖೆಯವರು, ಶಿಕ್ಷಕರು, ಧಾರ್ಮಿಕ ಮುಖ್ಯಸ್ಥರ ಸಹಕಾರದಿಂದ ಆತ್ಮಹತ್ಯೆ ನಿವಾರಣೆ ಗುರಿಯನ್ನು ಸಾಧಿಸಲು ಆಗುವುದು. ಈ ಸಮಸ್ಯೆಯು ಜೀವನದ ಒಂದು ಅವಿಭಾಜ್ಯ ಭಾಗ. ಪ್ರತಿಯೊಂದು ಸಮಸ್ಯೆಗಳಿಗೂ ತನ್ನದೇ ಆದ ಪರಿಹಾರಗಳು ಇದ್ದೇ ಇರುತ್ತವೆ, ಆದರೆ ನಮಗೆ ಬೇಕಾದ ಸಂದರ್ಭದಲ್ಲಿ ಲಭ್ಯವಾಗುವುದಿಲ್ಲ. ಆತ್ಮಹತ್ಯೆಯನ್ನು ತಡೆಗಟ್ಟಬಹುದೇ? ಹೌದು! ನಿಜವಾಗಿಯೂ ತಡೆಗಟ್ಟಬಹುದು. ಮುಖ್ಯವಾಗಿ ತುರ್ತು ಸಮಯಗಳಲ್ಲಿ ವೈದ್ಯಕೀಯ ಚಿಕಿತ್ಸೆ, ವ್ಯಕ್ತಿಯನ್ನು ಒಂಟಿಯಾಗಿ ಬಿಡದಿರುವುದು, ಮದ್ಯ ವ್ಯಸನ ಸಮಸ್ಯೆಗಳಗೆ ಸೂಕ್ತ ಪರಿಹಾರ ತಂದು ಕೊಳ್ಳುವುದು, ವ್ಯಕ್ತಿಗಳೊಂದಿಗೆ ಬೆರೆತು ಜೊತೆಗಿರುವುದು ಮತ್ತು ಇತರರ ಸಹಾಯ ಹಸ್ತ, ಸಾಮಾಜಿಕ ಬೆಂಬಲ ಸಿಗುವಂತೆ ಮಾಡುವುದು. ಪ್ರತಿ ವರ್ಷ ನಾವು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಸೆಪ್ಟೆಂಬರ್ 10 ರಂದು ಅಚರಣೆ ಮಾಡೋಣ ಮತ್ತು ಮಾಹಿತಿ ನೀಡೋಣ. ಜೊತೆಗೆ ದಿನನಿತ್ಯ ಕಾಣುವ ಆತ್ಮಹತ್ಯೆಯನ್ನು ತಡೆಗಟ್ಟೋಣ. ಜೀವನವನ್ನು ಪ್ರಜ್ವಲವಾಗಿ ಬೆಳಗಿಸೋಣ ಮತ್ತು ಆತ್ಮಹತ್ಯೆಯನ್ನು ನಾಶ ಮಾಡೋಣ ಎಂಬ ನುಡಿ, ಜೀವನದಲ್ಲಿ ನಮ್ಮ ನಿಮ್ಮೆಲ್ಲರ ಗುರಿಯಾಗಲಿ. ಡಾ|| ಹೆಚ್.ಚಂದ್ರಶೇಖರ್ ಡಾ|| ವಿ.ಎ.ಪಿ.ಘೋರ್ಪಡೆ ಮೋಹನ್ ಕುಮಾರ್.ಆರ್ ಮನೋವೈದ್ಯಕೀಯ ವಿಭಾಗ, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |