ಆಧುನಿಕ ಸಮಾಜಕಾರ್ಯವನ್ನು ಒಂದು ವೃತ್ತಿ ಎಂದು ಭಾವಿಸಲಾಗುತ್ತದೆ. ವೃತ್ತಿಗೆ ಇರಬೇಕಾದ ಕೆಲವು ಅತೀ ಮುಖ್ಯವಾದ, ಅನಿವಾರ್ಯವಾದ ಹಾಗೆಯೇ ವಿಶಿಷ್ಟವಾದ ವೈಲಕ್ಷಣ್ಯಗಳು ಇರಬೇಕು. ಬೋಧನೆ, ಅನುಸಂಧಾನ, ಪ್ರಯೋಗ, ವಿಧಾನ-ತಂತ್ರಗಳ, ಮೌಲ್ಯ ಸೂತ್ರಗಳ, ತತ್ತ್ವಾದರ್ಶ-ಸಿದ್ಧಾಂತಗಳ ರೂಪಣಿಕೆ, ಅನುಷ್ಠಾನ ಕ್ಷೇತ್ರಗಳ ನಿರ್ಧಾರ, ಸಮಾಜಕಾರ್ಯದಲ್ಲಿ ತೊಡಗಿರುವವರು-ಪ್ರಶಿಕ್ಷಣಾರ್ಥಿಗಳು, ಪ್ರಶಿಕ್ಷಕರು, ಕಾರ್ಯಕರ್ತರು ಮುಂತಾದವರೆಲ್ಲರೂ ಹೊಂದಿರಲೇಬೇಕಾದ ಸೂಕ್ತ ವ್ಯಕ್ತಿತ್ವ, ಇತ್ಯಾದಿಗಳೆಲ್ಲವುಗಳ ಜೊತೆಗೆ, ಸಮಾಜಕಾರ್ಯದಲ್ಲಿ ನಿರತರಾಗಿರುವವರು ತುಂಬಿದ ಆಸಕ್ತಿಯಿಂದ, ಬದ್ಧನಿಷ್ಠೆಯಿಂದ ನಿರಂತರವಾಗಿ ಭಾಗವಹಿಸಲು ಸೂಕ್ತವಾದ ಪ್ರಯೋಗಶಾಲೆಯು ಅತ್ಯಗತ್ಯ. ಹೋಲಿಕೆ ಅಷ್ಟು ಸರಿಯಲ್ಲ ಎಂಬ ಅಭಿಪ್ರಾಯ ಇದ್ದರೂ ವೈದ್ಯಶಾಸ್ತ್ರದ ಶಾಲೆಗೆ ಹೇಗೆ ಒಂದು ಆಸ್ಪತ್ರೆ ಬೇಕೊ, ಇಂಜಿನಿಯರಿಂಗ್ ಶಾಲೆಗೆ ಹೇಗೆ ಒಂದು ಕಾರ್ಯಾಗಾರ (Workshop) ಬೇಕೊ, ಸಮಾಜಕಾರ್ಯ ಶಾಲೆಗೂ ಒಂದು ಪ್ರಯೋಗಾಲಯ ಬೇಕೇಬೇಕಾಗುತ್ತದೆ. ಈ ಚಿಂತನೆಯು ನಾನು ದಿಲ್ಲಿ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ನಲ್ಲಿ ಪ್ರಶಿಕ್ಷಣಾರ್ಥಿಯಾಗಿದ್ದಾಗಲೇ (1956-58) ಅಂಕುರಗೊಂಡಿತು. ಆ ಶಾಲೆಯಲ್ಲಿ ನಡೆಯುತ್ತಿದ್ದ ಬೋಧನೆ, ಚರ್ಚಾಗೋಷ್ಠಿ, ಸಂಶೋಧನೆ, ವೈಯಕ್ತಿಕ ಮತ್ತು ವೃಂದ ಚರ್ಚೆ, ವರದಿ ಸಿದ್ಧತೆ, ಕ್ಷೇತ್ರಕಾರ್ಯ, ಸಮಾಜಕಾರ್ಯದಲ್ಲಿ ನಿರತವಾಗಿರುವ ಕೇಂದ್ರಗಳಿಗೆ ನೀಡುವ ಸಂದರ್ಶನ, ಸಭೆ-ಸಮ್ಮೇಳನ ಇತ್ಯಾದಿಗಳು ನನ್ನ ಮನೋದೃಷ್ಟಿಯನ್ನು ಕ್ರಾಂತಗೊಳಿಸುವಲ್ಲಿ ನೆರವಾದವು. ನನ್ನ ಪ್ರಾಧ್ಯಾಪಕರು ನಡೆಸುತ್ತಿದ್ದ ಸಂಶೋಧನೆಗಳು, ಅವರು ಕೈಗೊಂಡ ಪ್ರಯೋಗಗಳು, ರಚಿಸಿದ ಕೃತಿಗಳು, ನನ್ನ ಸಹಪಾಠಿಗಳು ಕ್ಷೇತ್ರಕಾರ್ಯದಲ್ಲಿ ಪಡೆದ ಅನುಭವ, ಸಮಾಜಕಾರ್ಯ ಸಾಹಿತ್ಯದ ಅವಲೋಕನ, ನಮ್ಮ ಸಮಾಜ-ಸಂಸ್ಕೃತಿ-ಸಮಸ್ಯೆಗಳಿಗೆ ಸೂಕ್ತವಾದ ಪಠ್ಯ ಗ್ರಂಥಗಳಿಲ್ಲದ ಕೊರಗು ನನ್ನ ಚಿಂತನೆಗೆ ಹೊಸ ಹೊಸ ಆಯಾಮಗಳನ್ನು ನೀಡುತ್ತಿದ್ದುದನ್ನು ಇಂದು ಸಿಂಹಾವಲೋಕನದ ರೀತಿಯಲ್ಲಿ ಅಂದಿನ ಸ್ಥಿತಿಯನ್ನು ನೋಡಿದಾಗ ಪ್ರಯೋಗಾಲಯದ ಅಗತ್ಯ ಎಷ್ಟೆಂಬುದರ ಅರಿವಾಗುತ್ತದೆ.
ಹಳೆಯ ಅನುಭವ ನುಗ್ಗಿಬಂದಾಗ ನನ್ನ ಸಮಾಜಕಾರ್ಯ ಅಧ್ಯಾಪನ ದಿನಗಳನ್ನು-ಈ ನಿಟ್ಟಿನಲ್ಲಿ ಮರು ಅವಲೋಕನ ಮಾಡಬೇಕೆನ್ನಿಸುತ್ತದೆ; ನನ್ನ ಪ್ರಶಿಕ್ಷಣದ ದಿನಗಳಲ್ಲಿ ನಡೆದ ಘಟನೆಯೊಂದು ನನ್ನ ಮನದಾಳದಲ್ಲಿ ಎಷ್ಟು ಬೇರೂರಿತ್ತೆಂದರೆ, ಆ ಘಟನೆ ನಡೆದು ಸುಮಾರು ಇಪ್ಪತ್ತು ವರ್ಷಗಳಾದ ಮೇಲೂ ಅದು ನನ್ನ ಪ್ರಜ್ಞಾಪದರಿಗೆ ನುಗ್ಗಿ ಬಂದು ಒಂದು ಬರಹದ ರೂಪದಲ್ಲಿ ಅಭಿವ್ಯಕ್ತಗೊಂಡಿತು. ಅದು ನನ್ನ ಸಹಪಾಠಿ ಕು.ಬಾಲಾಗುಪ್ತಾ ಅವರು ಕ್ಷೇತ್ರಕಾರ್ಯದಲ್ಲಿ ಗಾಢವಾಗಿ ಅನುಭವಿಸಿದ್ದುದರ ಚಿತ್ರಣ, ಎರಡು ಬಾಷ್ಟಗಳ ನಡುವೆ ಎಂದು ಅದಕ್ಕೆ ಸೃಜನಾತ್ಮಕ ಶೀರ್ಷಿಕೆಯನ್ನು ನೀಡಿದೆ. ಅದು ಕನ್ನಡದ ಸುಪ್ರಸಿದ್ದ ಸಾಪ್ತಾಹಿಕ ಸುಧಾದಲ್ಲಿ ಪ್ರಕಟಗೊಂಡಿತು. ಅದು ಅಂದು ಸಮಾಜಕಾರ್ಯದಲ್ಲಿ ನಿರತರಾಗಿದ್ದ ಕನ್ನಡಿಗರ ಗಮನ ಸೆಳೆಯಿತು. (ಇದೇ ಸಂಚಿಕೆಯ ಬೇರೆ ಕಡೆ ಅಚ್ಚಾಗಿದೆ). ನನ್ನ ವಿದ್ಯಾರ್ಥಿಗಳಾದ ಜಯಸ್ವಾಮಿ ಮತ್ತು ರಾಜೇಂದ್ರ ಅವರು ತಮ್ಮ ಕ್ಷೇತ್ರಕಾರ್ಯದ ಸಂದರ್ಭದಲ್ಲಿ-ಕರ್ನಾಟಕ ಶಿಶು ಕಲ್ಯಾಣ ಮಂಡಲಿಯ ಆಶ್ರಯದಲ್ಲಿ-ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಚಿಂದಿ ಆಯುವ ಮಕ್ಕಳನ್ನು ಸಂಘಟಿಸಿ ಅವರ ಜೀವನಕ್ಕೊಂದು ಹೊಸ ದಿಕ್ಕನ್ನು ತೋರಿಸುವ ಜಯ-ರಾಜೇಂದ್ರ ಕಾರ್ಯಕ್ರಮವನ್ನು ರೂಪಿಸಿ, ಪ್ರಯೋಗಿಸಿದರು. ಅಂದಿನ ಮಂಡಲಿಯ ಪದಾಧಿಕಾರಿಗಳು ತುಂಬಿದಾಸಕ್ತಿಯಿಂದ ಆ ನವೀನ ಪ್ರಯೋಗಕ್ಕೆ ಅವಕಾಶವನ್ನು ಕಲ್ಪಿಸಿದರು. ಆ ಪ್ರಸಂಗವನ್ನು ನಾನು ಒಂದು ಬರೆಹದ ಮೂಲಕ ಪ್ರಕಟಿಸಿದೆ. ಅದನ್ನು ಕರ್ನಾಟಕ ಸರಕಾರದ ಮಾಸ ಪತ್ರಿಕೆ (ಕರ್ನಾಟಕ ವಿಕಾಸ) ಪ್ರಕಟಿಸಿತು. ಅದರ ಶೀರ್ಷಿಕೆಯೂ ಸೃಜನಾತ್ಮಕವೇ ಆಗಿತ್ತು; ಕಸವಲ್ಲಂ ಇದು ಕಸವರಂ ಎಂಬುದೇ ಆ ಶೀರ್ಷಿಕೆ. ಇಲ್ಲಿ ಚಿಂದಿ ಆಯುವವರನ್ನು ಸಮುದಾಯದವರು ಚಿಂದಿಯೊಡನೆ ಸಮೀಕರಿಸಿ, ಅವರನ್ನು ಕಸವೆಂದು ಕಾಣುವ ಸಾಧ್ಯತೆ ಇದೆ. ಆದರೆ, ಸಮಾಜಕಾರ್ಯಕರ್ತರಿಗೆ ಆ ಚಿಣ್ಣರು ಕಸವರಂ ಅಂದರೆ ಚಿನ್ನ. ಹೇಗೆ ಚಿಂದಿಯನ್ನು ಚಿನ್ನವೆಂದು ಚಿಣ್ಣರು ಆಯ್ದುಕೊಳ್ಳುತ್ತಾರೊ ಹಾಗೆ ಸಮಾಜಕಾರ್ಯಕರ್ತರು ಆ ಚಿಣ್ಣರನ್ನು ಚಿನ್ನವೆಂದು ಆಯ್ದುಕೊಂಡು ಅವರನ್ನು ಆರೈಸುತ್ತಾರೆ, ಆರೈಸಬೇಕು ಎಂಬುದು ಈ ಬರೆಹದ ಆಂತರ್ಯ. ಸೇವಾಶಿಬಿರಗಳಿಗೆ ನವೀನ ಆಯಾಮ ನನ್ನ ದೃಷ್ಟಿಯಲ್ಲಿ ಸಮಾಜಕಾರ್ಯ ಶಾಲೆಯವರು ಕೈಗೊಳ್ಳುವ ವಾರ್ಷಿಕ ಸೇವಾಶಿಬಿರಗಳನ್ನು ಹೇಗೆಂದರೆ ಹಾಗೆ, ಎಲ್ಲೆಂದರೆ ಅಲ್ಲಿ ಮಾಡುವುದು ಉಚಿತವಲ್ಲ. ಅದನ್ನು ವೈಧಾನಿಕವಾಗಿ, ಸಮಾಜಕಾರ್ಯಕ್ಕೆ ಪುಷ್ಟಿದಾಯಕವಾಗುವಂತೆ ರೂಪಿಸಿ, ಅನುಷ್ಠಾನಗೊಳಿಸಬೇಕು. ಸೇವಾಶಿಬಿರಗಳನ್ನು ಇತರ ಕಾಲೇಜುಗಳಲ್ಲೂ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ ಕೈಗೊಳ್ಳುವುದುಂಟು. ಈ ಶಿಬಿರಗಳೂ ವ್ಯವಸ್ಥಿತವಾಗಿ ನಡೆಯಬೇಕೆಂಬುದು ನನ್ನ ಇರಾದೆ. ಇದಕ್ಕೆಂದೇ ನಾನೊಂದು ಕ್ರಮವನ್ನು ರೂಪಿಸಿ, ಅದನ್ನು ಪ್ರತಿಪಾದಿಸುತ್ತಾ ಬರುತ್ತಿದ್ದೇನೆ. ಇದು ಮುಖ್ಯವಾಗಿ ಸಮಾಜಕಾರ್ಯ ಶಾಲೆಗಳು ಅನುಸರಿಸಬೇಕು ಎಂಬುದು ನನ್ನ ವಿನಮ್ರ ಒತ್ತಾಯ. ಸಮಾಜಕಾರ್ಯ ಶಾಲೆಯು ವರ್ಷವರ್ಷವೂ ನಡೆಸುತ್ತಿರುವ ಸೇವಾಶಿಬಿರಗಳು ಬೇರೆಬೇರೆ ಹಳ್ಳಿಗಳಲ್ಲಿ ಅಥವಾ ಕೊಳೆಗೇರಿಗಳಲ್ಲಿ ನಡೆಸುತ್ತವೆ. ಆದರೆ, ಶಿಬಿರಗಳು ಸಮುದಾಯದ ಮೇಲೆ ಸತ್ಪ್ರಭಾವ, ಸತ್ಪರಿಣಾಮ ಬೀರಬೇಕಾದರೆ, ಒಂದು ಸೂಕ್ತವಾದ ಹಾಳತವಾದ ಸಮುದಾಯವನ್ನು ಆಯ್ದುಕೊಳ್ಳಬೇಕು. ಆ ಸಮುದಾಯದೊಡನೆ ಅನುನಯ ಸಂಬಂಧವನ್ನು (Rapport) ಶಾಲೆಯು ಪ್ರಶಿಕ್ಷಣಾರ್ಥಿಗಳ, ಪ್ರಶಿಕ್ಷಕರ ಮೂಲಕ ಸ್ಥಾಪಿಸಬೇಕು. ಇದಕ್ಕಾಗಿ ಆ ಸಮುದಾಯವನ್ನು ಒಂದು ಕ್ಷೇತ್ರಕಾರ್ಯದ ಕೇಂದ್ರವೆಂದು ಸ್ವೀಕರಿಸಬೇಕು. ಕ್ಷೇತ್ರಕಾರ್ಯಕ್ಕಾಗಿಯೇ ಆ ಸಮುದಾಯದಲ್ಲಿ ಒಬ್ಬ, ಸಾಧ್ಯವಾದರೆ ಇಬ್ಬರು ಪ್ರಶಿಕ್ಷಣಾರ್ಥಿಗಳನ್ನು ವಾಸಿಸಲು ಪ್ರೋತ್ಸಾಹಿಸಬೇಕು. ಇದಕ್ಕೆ ಬೇಕಾದ ನೆರವನ್ನು ಸಮುದಾಯದಿಂದ ಮತ್ತು ಶಾಲೆಯಿಂದ ಒದಗಿಸುವ ಪ್ರಯತ್ನ ಮಾಡಬೇಕು. ಆ ಪ್ರಶಿಕ್ಷಣಾರ್ಥಿಯು ವಾರದಲ್ಲಿ (ಭಾನುವಾರವನ್ನು ಒಳಗೊಂಡಂತೆ) ಮೂರು ದಿನಗಳಲ್ಲಿ ಕ್ಷೇತ್ರಕಾರ್ಯವನ್ನು ಮಾಡಬೇಕು. ಉಳಿದ ನಾಲ್ಕು ದಿನಗಳಲ್ಲಿ ಶಾಲೆಯ ಪಾಠಪ್ರವಚನದಲ್ಲಿ ಭಾಗವಹಿಸುತ್ತಾನೆ. ಕಾಲಕಾಲಕ್ಕೆ ಆತನ ಅನುಭವವನ್ನು ಅನೌಪಚಾರಿಕವಾಗಿ ಮತ್ತು ಔಪಚಾರಿಕವಾಗಿ ತನ್ನ ಸಹಪಾಠಿಗಳು ಮತ್ತು ಪ್ರಶಿಕ್ಷಕರೊಡನೆ ಹಂಚಿಕೊಳ್ಳಬೇಕು. ಸೇವಾಶಿಬಿರವನ್ನು ಹಮ್ಮಿಕೊಳ್ಳುವುದಕ್ಕಿಂತ ನಾಲ್ಕಾರು ತಿಂಗಳ ಮೊದಲೇ ಶಿಬಿರಾರ್ಥಿಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬೇಕು. ಆ ಗುಂಪುಗಳು ಸಾಮಾನ್ಯವಾಗಿ ಒಂದೇ ಗಾತ್ರದಲ್ಲಿ, ಹೆಣ್ಣು- ಗಂಡುಗಳ ಸಮ ಸಂಖ್ಯೆಯಲ್ಲಿ ಇರುವುದು ಉಚಿತ. ಈ ಗುಂಪುಗಳಿಗೆ ಸಂಖ್ಯೆಗಳನ್ನಾಗಲೀ, ಸಮಾಜಕಾರ್ಯದಲ್ಲಿ ಹೆಸರು ಮಾಡಿದವರ ಹೆಸರುಗಳನ್ನಾಗಲೀ ಇರಿಸಬಹುದು. ಪ್ರತಿ ಭಾನುವಾರ ಒಂದೊಂದು ಗುಂಪು ಕ್ಷೇತ್ರ ಸಮುದಾಯಕ್ಕೆ ಹೋಗಿ ಬೆಳಗಿನಿಂದ ಸಂಜೆಯವರೆಗೆ, ಅಲ್ಲಿರುವ ಕ್ಷೇತ್ರಾರ್ಥಿಯ ನೆರವಿನೊಡನೆ ಸಮುದಾಯವನ್ನು ಅಧ್ಯಯನ ಮಾಡಬೇಕು. (ಈ ಸಂದರ್ಭದಲ್ಲಿ ನಾನು ರೂಪಿಸಿದ ಪಂಚಮುಖೀ ಅಭ್ಯುದಯ ಮಾರ್ಗವನ್ನು ಗಮನದಲ್ಲಿ ಇರಿಸಿಕೊಳ್ಳಬಹುದು.)1. ಸಂದರ್ಶಿಸುವ ಗುಂಪಿಗೆ ಒಬ್ಬ ನಾಯಕ/ಕಿ ಇರುತ್ತಾನೆ/ಳೆ. ಆ ನಾಯಕನು ಆ ಗುಂಪಿನೊಡನೆ ಸಮಾಲೋಚಿಸಿ, ಒಂದು ಅನುಭವದ ವರದಿಯನ್ನು ಸಿದ್ಧ ಮಾಡಬೇಕು. ಆ ವರದಿಯನ್ನು ಮರುದಿನ (ಸೋಮವಾರ) ಸೂಕ್ತವಾದ ಸಮಯದಲ್ಲಿ ಶಿಬಿರಾರ್ಥಿಗಳಾಗಲಿರುವವರ ಮುಂದೆ ಮಂಡಿಸಿ, ಚರ್ಚಿಸಬೇಕು. ಇದೇ ರೀತಿ ಉಳಿದ ಮೂರು ಗುಂಪುಗಳು ಉಳಿದ ಮೂರು ಭಾನುವಾರಗಳಲ್ಲಿ ಅದೇ ಸಮುದಾಯಕ್ಕೆ ಅನುಭವ ಸಂದರ್ಶನವನ್ನು ನೀಡಬೇಕು; ವರದಿಗಳನ್ನು ಆಯಾಯ ಗುಂಪಿನ ನಾಯಕ(ಕಿ) ಸಿದ್ಧಪಡಿಸಬೇಕು, ಸೋಮವಾರಗಳಂದು ಅನುಭವದ ಹಂಚಿಕೆ ಮಾಡಿಕೊಳ್ಳಬೇಕು. ಹೀಗೆ ನಾಲ್ಕಾರು ತಿಂಗಳ ಅನುಭವ-ಸಂದರ್ಶನಗಳಿಂದ ಶಿಬಿರಾರ್ಥಿಗಳಾಗುವವರಿಗೆ ಆ ಸಮುದಾಯದ ರೂಪುರೇಖೆಯ/ಆಕೃತಿಯ ಗಾಢಾನುಭವವಾಗುತ್ತದೆ; ಸಮುದಾಯದವರೊಡನೆ ನಿಕಟ-ಆಪ್ತ ಸಂಬಂಧ ಬೆಳೆಯುತ್ತದೆ; ಅಲ್ಲಿನ ಸಮಸ್ಯೆಗಳ, ಸಂಪನ್ಮೂಲಗಳ, ಸಮುದಾಯದ ನಾಯಕತ್ವದ ನಿಕಟ ಪರಿಚಯವಾಗುತ್ತದೆ; ಶಿಬಿರದ ಸಂದರ್ಭದಲ್ಲಿ ಯಾವ ಭೌತ ಕಾರ್ಯಕ್ರಮವನ್ನು ಸ್ವೀಕಾರ ಮಾಡಿದರೆ ಸೂಕ್ತ ಎಂಬುದು ಹೊಳೆಯುತ್ತದೆ; ಸ್ಥಳೀಯ ಸಹಕಾರವನ್ನು ಪಡೆಯಲೂ, ಸಂಪನ್ಮೂಲಗಳನ್ನು ಕ್ರೋಢೀಕರಿಸಲೂ ಸಮುದಾಯದಲ್ಲಿ ಬದಲಾವಣೆ- ಅಭ್ಯುದಯದ ಕಡೆಗೆ ಒಲವನ್ನು ಮೂಡಿಸಲೂ ಸಾಧ್ಯವಾಗುತ್ತದೆ. ನಾಲ್ಕು ಅಥವಾ ಆರು ತಿಂಗಳಾನಂತರ ಶಿಬಿರವನ್ನು ಹಮ್ಮಿಕೊಂಡರೆ ಶಿಬಿರವು ಯಶಸ್ವಿಯಾಗುತ್ತದೆ. (ಗಮನಿಸಬೇಕಾದ ಅಂಶವೆಂದರೆ, ಒಬ್ಬ ಶಿಬಿರಾರ್ಥಿಯು ಇಡೀ ಸಂದರ್ಶನಗಳ ಅವಧಿಯಲ್ಲಿ ಕೇವಲ ನಾಲ್ಕು ಅಥವಾ ಆರು ಸಲ-ತಿಂಗಳಿಗೊಮ್ಮೆ ಸಮುದಾಯಕ್ಕೆ ಭೇಟಿ ನೀಡಿದಂತಾಗುತ್ತದೆ; ಆ ಸಮುದಾಯಕ್ಕೆ ಶಾಲೆಯವರು ಪ್ರತೀ ಭಾನುವಾರ ಸಂದರ್ಶನ ನೀಡಿದಂತಾಗುತ್ತದೆ; ಅಲ್ಲಿನ ಕ್ಷೇತ್ರಾರ್ಥಿಗೆ ಸಾರ್ಥಕವಾಗಿ ಕ್ಷೇತ್ರಕಾರ್ಯ ಮಾಡಿದಂತಾಗುತ್ತದೆ). ಇಂಥ-ಪ್ರಯೋಗವನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾನು ಅಧ್ಯಾಪನದಲ್ಲಿದ್ದಾಗ ಕಾಲೇಜೊಂದರ ನೆರವಿನಿಂದ, ದೊರಗು-ದೊರಗಾದರೂ ದೊಡ್ಡ ಆಲದ ಮರದ ಪಕ್ಕದ ಲಕ್ಷ್ಮೀಪುರದಲ್ಲಿ ನಡೆಸಲಾಯ್ತು. ಕೆಲವು ಪ್ರಸಂಗಗಳು ಪ್ರಯೋಗದ ಕೆಲವು ಸಂದರ್ಭಗಳನ್ನು ಪ್ರಸ್ತಾಪಿಸಬೇಕೆನ್ನಿಸುತ್ತದೆ. ನಾನು ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದಾಗ ಸೇವಾಶಿಬಿರಕ್ಕೆ ಹೊಸ ಆಯಾಮವನ್ನು ನೀಡಲಾಯ್ತು. ಸಮಾಜಕಾರ್ಯದಲ್ಲಿ ನಿರತವಾಗಿರುವ ಸೇವಾಕೇಂದ್ರಗಳ ಫಲಾನುಭವಿಗಳನ್ನು (ಬಾಲಮಂದಿರಗಳ, ತಿದ್ದುವಶಾಲೆಗಳ, ಮನೋಚಿಕಿತ್ಸಾಲಯದ ನಿವಾಸಿ- ಪಲಾನುಭವಿಗಳನ್ನು ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳ ಜೊತೆಗೆ ಸೇವಾ ಶಿಬಿರಗಳಲ್ಲಿ ಭಾಗವಹಿಸುವ ಅವಕಾವನ್ನು ಕಲ್ಪಿಸಲಾಯ್ತು. (ಇಂಥ ಪ್ರಯೋಗವು ಬೇರೆಲ್ಲೂ ನಡಿದಿರುವ ಮಾಹಿತಿ ನನಗಂತೂ ಲಭ್ಯವಿಲ್ಲ) ಇದರಿಂದ ಪ್ರಶಿಕ್ಷಣಾರ್ಥಿಗಳಿಗೂ ಆ ಫಲಾನುಭವಿಗಳಿಗೂ ಮರೆಯಲಾಗದ ರೋಚಕ ಅನುಭವವಾಯ್ತು.2 (ಬೆಂಗಳೂರು ವಿ.ವಿ.ಯಲ್ಲಿ ನಡೆದ ಸಮಾಜಕಾರ್ಯ ಶಿಬಿರಗಳಿಗೆ ಜೆ.ಪಿ.ಯವರನ್ನು ನೆನಪಿಸುವ ಪೂರ್ಣಕ್ರಾಂತಿ ಶಿಬಿರ ಎಂಬ ಹೆಸರನ್ನು ನೀಡಲಾಗಿತ್ತು). ಅಭ್ಯುದಯ ಕೇಂದ್ರಗಳ ಸ್ಥಾಪನೆಯ ಪ್ರಯತ್ನ ಸಮಾಜಕಾರ್ಯ ಶಾಲೆಗೆ ಪ್ರಯೋಗಾಲಯ ಬೇಕು ಎಂಬ ಗುಂಗಿನಲ್ಲಿದ್ದ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿದ್ದಾಗ ಧಾರವಾಡದ ಕೊಳೆಗೇರಿಯೊಂದರಲ್ಲಿ (ಗೊಲ್ಲರ ಕೇರಿ) ಮತ್ತು ಹತ್ತಿರದ ಎರಡು ಹಳ್ಳಿಗಳಲ್ಲಿ (ನಿಗದಿ ಮತ್ತು ಸಲಕಿನಕೊಪ್ಪ) ಅಭ್ಯುದಯ ಕೇಂದ್ರಗಳನ್ನು ಕರ್ನಾಟಕ ವಿಶ್ವವಿದ್ಯಾಲಯದ ಮತ್ತು ಅದರ ಅಂಗಸಂಸ್ಥೆಯಾದ ಗಾಂಧೀಭವನದ ನೆರವಿನಿಂದ ಸ್ಥಾಪಿಸಿ, ನಡೆಸಲಾಯ್ತು. ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕಾರ್ಯಕರ್ತರನ್ನು ಪ್ರೂರ್ಣಾವಧಿಯವರೆಗೆ ನೇಮಿಸಿಕೊಳ್ಳಲಾಯ್ತು. ಇನ್ನೊಂದು ಹಳ್ಳಿಯಲ್ಲಿ ಪ್ರಶಿಕ್ಷಣಾರ್ಥಿಯೋರ್ವನನ್ನು ವಾಸಿಸುತ್ತಾ ಮೂರು ದಿನ ಕ್ಷೇತ್ರಕಾರ್ಯ ಮತ್ತು ನಾಲ್ಕು ದಿನ ಪಾಠಪ್ರವಚನಕ್ಕಾಗಿ ವಿಶ್ವವಿದ್ಯಾಲಯಕ್ಕೆ ಹೋಗಿ ಬರುವಂತೆ ಏರ್ಪಾಟು ಮಾಡಲಾಯ್ತು. ಆ ಎರಡು ಹಳ್ಳಿಗಳು ಹತ್ತಿರವಿದ್ದುದರಿಂದಲೂ ಅರೆಮಲೆನಾಡಿನ ಪರಸ್ಪರ ಹೊಂದಿಕೊಂಡಿದ್ದ ಇತರ ಹಳ್ಳಿಗಳನ್ನು ವಲಯಕ್ಷೇತ್ರವನ್ನಾಗಿ ಗುರುತಿಸಿ, ಆ ಹಳ್ಳಿಗೊಂಚಲಿನಲ್ಲಿ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯ್ತು ಜನ ಸಂಪರ್ಕವು ಗಾಢವಾಗುತ್ತಿದ್ದಂತೆ ಅಭ್ಯುದಯ ಕಾರ್ಯಕ್ರಮಗಳಿಗೆ ವ್ಯಾಪಕತೆ ಒದಗಿತು. ಆ ಇಡೀ ಪ್ರದೇಶವನ್ನು ಸಮಾಜಕಾರ್ಯ ಮಾರ್ಗದೃಷ್ಟಿಯಿಂದ ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಸಾಧ್ಯವಾದೀತೆ, ಎಂಬ ಚಿಂತನೆಯನ್ನು ಮಾಡತೊಡಗಿದೆ. ಆದರೆ, ನಾನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸ್ಥಳಾಂತರಗೊಂಡಿದ್ದುದರಿಂದ ಆ ಕಾರ್ಯವು ಅಲ್ಲಿಯೇ ಸ್ಥಗಿತಗೊಂಡಿತು, ಎಂದು ಆನಂತರ ಗೊತ್ತಾಯಿತು. ಹೀಗಾಗಬಾರದಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಅನೌಪಚಾರಿಕವಾಗಿ ಬ್ಯೂರೋ ಆಫ್ ಸೈಕೋಸೋಸಿಯಲ್ ಥೆರಪಿ ಯನ್ನು ಆರಂಭಿಸಿ, ಕೌಟುಂಬಿಕ ಆಪ್ತಸಲಹಾಲೋಚನೆಗೆ ಅವಕಾಶ ಕಲ್ಪಿಸಲಾಯ್ತು. ಆನಂತರ ಖಾಸಗಿಯಾಗಿ ಸ್ವಯಂಸೇವಾಸಂಸ್ಥೆಯೊಂದನ್ನು ಸೆಂಟರ್ ಫಾರ್ ಸೈಕೊಸೋಶಿಯಲ್ ಡೆವಲಪ್ಮೆಂಟ್ ಎಂದು ನೋಂದಣೆ ಮಾಡಲಾಯಿತು. ಇದರ ಪ್ರಾಯೋಜಕರಾಗಿ ಸಮಾಜಕಾರ್ಯದ ಮತ್ತೆ ಕೆಲವು ವಿಭಾಗಗಳ ಸಿಬ್ಬಂದಿಯವರೂ ಸೇರಿದ್ದರು. ಇದರ ಮೂಲಕ ನಗರದ ಪಶ್ಚಿಮ ಹೊರವಲಯದ ಅರೆಮಲೆನಾಡಿನಂತಿರುವ ಚುಂಚನಕೊಪ್ಪೆ ವಲಯದ ನಲವತ್ತು ಹಳ್ಳಿಗಳಲ್ಲಿ ಅಭ್ಯುದಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ವಿಶ್ವವಿದ್ಯಾಲಯದ ಧನಸಹಾಯ ಆಯೋಗದ, ನಗರದಲ್ಲಿನ ಐಟಿಸಿಯ, ಹೀವೋಸ್ ಸಂಸ್ಥೆಯ, ನಗರದ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆಯ, ಕರ್ನಾಟಕ ಸರಕಾರದ ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ ಇಲಾಖೆಯ ಹಾಗೂ ಖಾಸಗಿ ಸರ್ಕಾರೇತರ ಸಂಸ್ಥೆ ಕ್ರಿಶ್ಚಿಯನ್ ಚೈಲ್ಡ್ ಫಂಡ್ ನೆರವಿನಿಂದ, ಸಮಾಜಕಾರ್ಯದ ಕೆಲವು ಪ್ರಶಿಕ್ಷಣಾರ್ಥಿಗಳನ್ನು ಆ ಪ್ರದೇಶದ ನಾನಾ ಭಾಗಗಳಲ್ಲಿ ನೆಲೆಸುವಂತೆ ಏರ್ಪಡಿಸಿ ಬೇರೆ ಕೆಲವು ಯುವಕರನ್ನು ನೇಮಿಸಿಕೊಂಡು ಅಭ್ಯುದಯ ಕಾರ್ಯಕ್ಕೆ ಸಾನುಕೂಲವಾದ ಸಂಶೋಧನೆ, ಕಾರ್ಯಕ್ರಮ ರೂಪಣಿಕೆ ಮತ್ತು ಅನುಷ್ಠಾನ, ಜನಜಾಗ್ರತೆಗೆ ಬೇಕಾದ ಕೆಲವು ಕ್ರಮಗಳನ್ನು ಕೈಗೊಂಡು ಸಾಕಷ್ಟು ಸಾರ್ಥಕ ಕೆಲಸವನ್ನು ಮಾಡಲಾಯ್ತು.3,4 ಮೈಸೂರಿನಲ್ಲಿ ಜೆ.ಎಸ್.ಎಸ್. ಸಂಸ್ಥೆಯವರು ಸ್ಥಾಪಿಸಿದ್ದ ಸಮಾಜಕಾರ್ಯ ವಿಭಾಗದಲ್ಲಿ ಕೆಲವು ವರ್ಷಗಳು ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ ಅಭ್ಯುದಯ ಕೇಂದ್ರದ ಸ್ಥಾಪನೆಯ ಪ್ರಯತ್ನ ಮಾಡಲಾಯ್ತು. ಸೂತ್ತೂರಿನ ಆಸುಪಾಸಿನ ಹತ್ತು ಹಳ್ಳಿಗಳ ಗೊಂಚಲನ್ನು ಗುರುತಿಸಿ, ಸಮಾಜಕಾರ್ಯದ ಆಶಯದ ಪ್ರಕಾರ ಅಲ್ಲಿ ವೈದಾನಿಕ ಅಭಿವೃದ್ಧಿಯನ್ನು ಸಮಾಜಕಾರ್ಯ ವಿಭಾಗದ ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳ ನೆರವಿನೊಡನೆ ಕಾರ್ಯಕ್ರಮವನ್ನು ಕೈಗೊಳ್ಳುವ ನಿರ್ಣಯ ತೆಗೆದುಕೊಳ್ಳಲಾಯ್ತು. ಸುತ್ತೂರಿನಲ್ಲಿಯೇ ನೆಲಸಿ, ಆ ಹಳ್ಳಿಗಳ ಅಧ್ಯಯನ ಮಾಡುತ್ತಾ ಅಲ್ಲಿಗೆ ಕ್ಷೇತ್ರ ಕಾರ್ಯಕ್ಕೆ ಹೋಗುವ ಪ್ರಶಿಕ್ಷನಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಮಾಜಕಾರ್ಯದಲ್ಲಿ ಸ್ನಾತಕೊತ್ತರ ಪದವಿ ಪಡೆದ ಯುವಕನನ್ನು ನೇಮಿಸಿಕೊಳ್ಳಲಾಯ್ತು. ಅಲ್ಲಿಯೇ ಇದ್ದ ಕೃಷಿ ವಿಜ್ಞಾನ ಕೇಂದ್ರ ಶಿಕ್ಷಣ ಸಂಸ್ಥೆಗಳು, ಪಂಚಾಯಿತಿ ಮುಂತಾದ ಸಂಘಟನೆಗಳ ಸಹಕಾರವನ್ನು ಪಡೆಯಲು ಯೋಜಿಸಲಾಯತು. ಕೆಲಸವು ಆರಂಭವಾಯಿತಾದರೂ ಅಪೇಕ್ಷೆಯಂತೆ ಕಾರ್ಯಕ್ರಮವು ಮುಂದುವರೆಯಲು ಸಾದ್ಯವಾಗಲಿಲ್ಲ. ಪ್ರಯೋಗಾಲಯದ ಆವಶ್ಯಕತೆ ಇದುವರೆಗೆ ವಿವರಿಸಿದ ಕೆಲವು ಸಂಗತಿಗಳಿಂದ ಪಡೆದ ಮತ್ತು ಸಮಾಜಕಾರ್ಯ ಪ್ರಶಿಕ್ಷಣವನ್ನು ಸಂಪುಷ್ಟಗೊಳಿಸಲು ನನಗೆ ಅನ್ನಿಸುವ ಹಾಗೆ ಸಮಾಜಕಾರ್ಯ ಶಾಲೆಗಳಿಗೆ ಪ್ರಯೋಗಾಲಯಗಳ ಆವಶ್ಯಕತೆಯನ್ನು ವಿವರಿಸಲು ಬಯಸುತ್ತೇನೆ. ಪ್ರಾಸ್ತವಿಕವಾಗಿ ಈ ಕೆಲವು ಅಂಶಗಳ ಕಡೆಗೆ ಗಮನಸೆಳೆಯಲು ಬಯಸುತ್ತೇನೆ. ಭಾರತದಲ್ಲಿ 1936ರಲ್ಲಿ ಮುಂಬೈಯಲ್ಲಿ ಆರಂಭವಾದ ಸಮಾಜಕಾರ್ಯ ಪ್ರಶಿಕ್ಷಣ ಶಾಲೆಯಿಂದ ಭಾರತದಲ್ಲಿ ಸಮಾಜಸೇವೆ-ಕಲ್ಯಾಣ ಕ್ಷೇತ್ರಕ್ಕೆ ಹೊಸ ಆಯಾಮವನ್ನು ತರಲಾಯಿತು. ಆ ಆಯಾಮವು ವೃತ್ತೀಯ ಪೋಷಾಕನ್ನು ಧರಿಸಿತು. ಈ ಎಪ್ಪತೈದು ವರ್ಷಗಳಲ್ಲಿ ಸಮಾಜಕಾರ್ಯ ಪ್ರಶಿಕ್ಷಣವು ಖಾಸಗಿ ಆವರಣದಿಂದ ಸಾರ್ವಜನಿಕ ಸರಕಾರಿ ವಲಯಕ್ಕೂ, ಪೂರ್ಣ ಸ್ವಾತಂತ್ರ್ಯ ಹೊಂದಿದ್ದುದು ವಿಶ್ವವಿದ್ಯಾಲಯದ ನಿಯಮಗಳ ಬಂಧನಕ್ಕೆ, ಬೆರಳೆಣಿಕೆಯ ಸಂಖ್ಯೆಯಿಂದ ನೂರಾರು ಸಂಖ್ಯೆಗೆ, ಕೇವಲ ಕೆಲವೇ (ಮುಂಬೈ, ದಿಲ್ಲಿ, ಲಖ್ನೋ, ಮದ್ರಾಸ್ ಇಂಥ ಪ್ರಮುಖ) ಕೇಂದ್ರಗಳಲ್ಲೇ ಉಸಿರಾಡುತ್ತಿದ್ದ ಪ್ರಶಿಕ್ಷಣವು ಭಾರತದ ಎಲ್ಲಾ ಕಡೆಯೂ ಹಬ್ಬಿ ಹರಡುವೆಡೆಗೆ, ಕೇವಲ ಖಾಸಗಿಯಾಗಿಯೇ ಶೈಕ್ಷಣಿಕ ಚಿಂತನೆಯಲ್ಲಿ ಮಡುಗಟ್ಟಿದ್ದುದು ವಿಶ್ವವಿದ್ಯಾಲಯದ ವಿಶಾಲ ಚಿಂತನೆಯ ಮಂಟಪದ ಕಡೆಗೆ ಪ್ರಶಿಕ್ಷಣವು ವಿಸ್ತಾರಗೊಂಡಿತು; ಸಾಮಾನ್ಯ ಪ್ರಶಿಕ್ಷಣವಾಗಿರಬೇಕೆ, ವಿಶೇಷ-ವಿಶಿಷ್ಟ ವಿಷಯಕವಾಗಿರಬೇಕೆ ಎಂಬ ಡೊಲಾಯಮಾನ ಸ್ಥಿತಿಗೆ, ಆಕಾಶದಿಂದ ಭೂಮಿಯ ಕಡೆಗೆ (ಅಂದರೆ, ಸ್ನಾತಕೊತ್ತರ ಮಟ್ಟದಿಂದ ಸ್ನಾತಕ ಮಟ್ಟಕ್ಕೂ) ಹೀಗೆ ಪ್ರಶಿಕ್ಷಣವು ಪ್ರವಹಿಸಿದುದನ್ನು ನಾವು ಗಮನಿಸಬಹುದು. ಇದರ ಜೊತೆಗೆ ಪರದೇಶಿ ಸಾಂಸ್ಕೃತಿಕ ಮೂಸೆಯಿಂದ ಮೂಡಿದ ಸಮಾಜಕಾರ್ಯ ತಾತ್ತ್ವಿಕ ಸಿದ್ಧಾಂತ ಮತ್ತು ಪಠ್ಯಗಳ ಸಂಕೋಲೆಯನ್ನು ಕ್ರಮೇಣವಾಗಿಯಾದರೂ ಸಡಿಲಿಸಿಕೊಳ್ಳುತ್ತಾ ದೇಶೀಯ ಸಾಂಸ್ಕೃತಿಕ ತತ್ತ್ವಾದರ್ಶದ ಕಡೆ ಮೊಗಮಾಡಿದ ಪ್ರವಣತೆಯನ್ನು ನಾವು ಗಮನಿಸಬೇಕೆನ್ನಿಸುತ್ತದೆ. ಕೇವಲ (ಅದರಲ್ಲೂ, ಆಂಗ್ಲಭಾಷೆಯಲ್ಲಿಯೇ ಪ್ರಕಟವಾದ) ಪಾಶ್ಚಾತ್ಯ ಲೇಖಕರ ಪಠ್ಯಪುಸ್ತಕಗಳಿಗೆ ಜೋತುಬಿದ್ದ ಪ್ರಶಿಕ್ಷಕರೂ ಪ್ರಶಿಕ್ಷಣಾರ್ಥಿಗಳೂ ಭಾರತೀಯ ವಿದ್ವಾಂಸರ ಕೃತಿಗಳನ್ನು ಆಂಗ್ಲ ಮತ್ತು ಭಾರತೀಯ ಭಾಷೆಗಳಲ್ಲಿ ಪ್ರಕಟವಾದ ಪಠ್ಯಗಳ ಕಡೆಗೆ ಒಲವನ್ನು ತೋರಿಸುವಂತಾಗಿರುವುದನ್ನೂ ಗಮನಿಸಬೇಕು. ಇನ್ನೂ ಆಂಗ್ಲ ಭಾಷೆಯಲ್ಲೇ ಪ್ರಶಿಕ್ಷಣ ಮಾಧ್ಯಮವು ವ್ಯಾಪಕವಾಗಿದ್ದರೂ ಭಾರತೀಯ ಭಾಷೆಗಳಲ್ಲೂ ಬೋಧನೆಯ ಆವಶ್ಯಕತೆ ಅನಿವಾರ್ಯತೆ ಕಂಡುಬರುತ್ತಿದೆ ಎಂಬುದೂ ಗೌಣ ಬೆಳವಣಿಗೆಯೇನೂ ಅಲ್ಲ. ಲೋಪ - ದೋಷಗಳು ಆದರೂ ಸಮಾಜಕಾರ್ಯ ಪ್ರಶಿಕ್ಷಣದಲ್ಲಿ ಅನೇಕ ತೀವ್ರ ಲೋಪ - ದೋಷಗಳು ಎದ್ದು ತೋರುತ್ತಿವೆ. ಮೇಲ್ನೋಟಕ್ಕೆ ಕಾಣಿಸುವಂಥ ಅಂಶಗಳು: ಶೈಕ್ಷಣಿಕ ಗುಣಮಟ್ಟವು ಶಿಥಿಲಗೊಂಡಿದೆ; ಎಲ್ಲೆಲ್ಲಿಯೂ ಅಶ್ರದ್ಧೆ, ನಿರ್ಲಕ್ಷ್ಯ ಗಾಢವಾಗಿದೆ; ಭ್ರಷ್ಟತೆಯೂ ಹಬ್ಬಿ ಹರಡಿತ್ತಿದೆ; ಸಂಶೋಧನೆಯಾಗಲಿ, ಸಾಹಿತ್ಯ ಪ್ರಕಟನೆಯಾಗಲಿ ಫ್ರೌಢತೆಯನ್ನು ಮೆರೆಯುತ್ತಲಿಲ್ಲ; ಭಾರತೀಯವೆಂಬಂತಹ ಸಿದ್ಧಾಂತಗಳು ಹೊರಹೊಮುತ್ತಲಿಲ್ಲ; ವೃತ್ತಿಸ್ವತ್ವವೆಂಬುದು ಮಾತಿನಲ್ಲಿದೆಯೇ ಹೊರತು ಕೃತಿಯಲ್ಲಿ ಕಾಣುತ್ತಲಿಲ್ಲ; ಅನುಷ್ಠಾನ ಕ್ಷೇತ್ರದಲ್ಲೂ ಸ್ಪಷ್ಟತೆಯಾಗಲಿ, ನಿರ್ದಿಷ್ಟತೆಯಾಗಲಿ, ಸದೃಢತೆಯಾಗಲಿ, ಅದಮ್ಯ ಸಾಹಸ ಪ್ರವೃತ್ತಿಯಾಗಲಿ, ಸಾಧಿಸುವ ಛಲವಾಗಲಿ ಅಷ್ಟಾಗಿ ಕಾಣಿಸುತ್ತಲಿಲ್ಲ. ಬಹು ಪ್ರಖರವಾಗಿ ಕಾಣುತ್ತಿರುವುದೆಂದರೆ, ಇರುವಿಕೆಯಿಂದಲಲ್ಲ. ಇಲ್ಲದಿರುವುದಕ್ಕಿಂತಲೂ ಹೆಚ್ಚಾಗಿ, ಸಂಘಟನೆಯ ಏರಿಳಿವು. ಕೆಲವು ಪ್ರಮುಖ ಶಾಲೆಗಳ ಹಳೆಯ ಪ್ರಶಿಕ್ಷಣಾರ್ಥಿಗಳನ್ನು ಹೊರತು ಪಡಿಸಿದರೆ, ಪ್ರಶಿಕ್ಷಣ ಕ್ಷೇತ್ರದಲ್ಲಾಗಲಿ ಅನುಷ್ಠಾನ ಕ್ಷೇತ್ರದಲ್ಲಾಗಲಿ, ಸಂಘಟನೆ ಎಂಬುದು ಮರೀಚಿಕೆಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಉತ್ಸಾಹದಿಂದ ಆರಂಭವಾದ ಅಸ್ವಿ ಮತ್ತು ಐಎಟಿಎಸ್ ಡಬ್ಲ್ಯೂ ಹಲವು ವರ್ಷಗಳು ಚೆನ್ನಾಗಿ ಕಾರ್ಯ ನಿರ್ವಹಿಸಿ ಅಡಗಿ ಹೋದವು. ಆಗೀಗ ಅಲ್ಲಲ್ಲಿ ಅಲ್ಪಪ್ರಮಾಣದಲ್ಲಿ ಸಂಘಟನೆಯ ಪ್ರಯತ್ನಗಳು ನಡೆಯುತ್ತಲಿವೆ. ಆದರೆ ಒಂದು ಸಂಘಟನೆಯು ಐಎಸ್ಪಿಎಸ್ ಡಬ್ಲ್ಯೂ ಮಾತ್ರ ವಾರ್ಷಿಕ ಸಮ್ಮೇಳನಗಳನ್ನು ಸತತ ಮೂರು ದಶಕಗಳವರೆಗೂ ನಡೆಸುತ್ತಾ ಬಂದಿದೆ. ಕಟ್ಟುನಿಟ್ಟಿನ ಕ್ರಮಗಳು ಈ ದೋಷಗಳನ್ನು ಈ ಕೊರತೆಗಳನ್ನು ಗಮನದಲ್ಲಿರಿಸಿಕೊಂಡಾಗ ಏನಾದರೂ ರಚನಾತ್ಮಕ ಚಿಂತನೆ ಮತ್ತು ತದನುಗುಣವಾದ ಅನುಷ್ಠಾನ ಬೇಕೆನ್ನಿಸುತ್ತದೆ. ಸಮಾಜಕಾರ್ಯದ ಪ್ರಶಿಕ್ಷಣವು ಉನ್ನತೋನ್ನತವಾಗಬೇಕಾದರೆ, ಈ ಕೆಲವು ಕಟ್ಟುನಿಟ್ಟಿನ ಕ್ರಮಗಳು ಅಗತ್ಯ. ಬಹು ಸುಲಭವಾಗಿ ಸಮಾಜಕಾರ್ಯ ಶಾಲೆಗಳನ್ನು ಸ್ಥಾಪಿಸಲು ಹಾಗೂ ವಿಶ್ವವಿದ್ಯಾಲಯಗಳಿಗೆ ಸಂಲಗ್ನಗೊಳ್ಳಲು ಅವಕಾಶವಿರಕೂಡದು. ಪ್ರಶಿಕ್ಷಣಾರ್ಥಿಗಳ ಪ್ರವೇಶ ಸಂಖ್ಯೆಯನ್ನು ಮಿತವಾಗಿಸಬೇಕು. ಸ್ನಾತಕೊತ್ತರ ಪದವಿ ಗಳಿಸಿದ ಕೂಡಲೇ ಯಾರೂ ಪ್ರಶಿಕ್ಷಕರಾಗಲು ಅವಕಾಶ ಇರಕೂಡದು. ಅವರಿಗೆ ಸಂಶೋಧನೆಯ ನಾಲ್ಕಾರು ವರ್ಷಗಳ ಅನುಭವ ಇರಬೇಕು. ಸಾಧ್ಯವಾದರೆ ಡಾಕ್ಟರೇಟ್ ಪದವಿಯ ಜೊತೆಗೆ ವೃತ್ತಿ ಸಾಹಿತ್ಯದ ಪ್ರಕಟನೆಗಳು ಅಗತ್ಯವಾಗಿ ಅವರಿಗೆ ಇದ್ದಿರಬೇಕು. ಅತ್ಯಗತವಾದ ವೃತ್ತಿ ಸಾಹಿತ್ಯ ಕೃತಿಗಳ ಸಂಗ್ರಹದ ಗ್ರಂಥಾಲಯ, ಸೂಕ್ತ ಮೂಲ ಸೌಕರ್ಯಗಳು ಇರಬೇಕು. ವಿಶ್ವವಿದ್ಯಾಲಯದ ಮಟ್ಟದಲ್ಲಿ ವಿಚಕ್ಷಣದಳವು ರಚಿತವಾಗಿ ಅದು ಪ್ರಶಿಕ್ಷಣದ ಆಗುಹೋಗುಗಳ ಮೇಲೆ ಸದಾ ನಗ ಇರಿಸಬೇಕು ಪಠ್ಯಕ್ರಮವು ಸ್ಥಳೀಯ ಸಾಮಾಜಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ರೂಪಿತವಾಗಿರಬೇಕು. ರಾಷ್ಟ್ರ ಮಾತ್ರವಲ್ಲ ಸಂಬಂಧಿಸಿದ ರಾಜ್ಯದ ಸಮಾಜ - ಸಂಸ್ಕೃತಿಯು ಪಠ್ಯಕ್ರಮದಲ್ಲಿ ಮಾತ್ರವಲ್ಲ ಇತರ ಚಟುವಟಿಕೆಗಳಲ್ಲೂ ಪ್ರತಿಫಲನಗೊಂಡಿರಬೇಕು ಅತ್ಯಗತ್ಯವಾಗಿ ನಗರ-ಗ್ರಾಮ ಸಮುದಾಯಗಳಲ್ಲಿ ಪ್ರಯೋಗಾಲಯದಂಥ ಸಂಸ್ಥೆಯನ್ನು ನಡೆಸುತ್ತಿರಬೇಕು. ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಂಲಗ್ನಗೊಂಡ ಎಲ್ಲ ಶಾಲೆಗಳೂ, ಪ್ರಶಿಕ್ಷಕರೂ, ಪ್ರಶಿಕ್ಷಣಾರ್ಥಿಗಳೂ ಸೂಕ್ತವಾಗಿ ಸಂಘಟಿತವಾಗಿ ಆಯಾಯ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳಲ್ಲಿನ ಸಮಸ್ಯೆಗಳು - ಪರಿಹಾರ ಕ್ರಮಗಳ ಬಗೆಗೆ ತೀವ್ರ ಗಮನ ಹರಿಸಬೇಕು ಸಮೀಕ್ಷೆ ಸಂಶೋಧನೆಯ ಮೂಲಕ ಕಲ್ಯಾಣ-ಅಭ್ಯುದಯದ ಧೋರಣೆಗಳನ್ನು ರೂಪಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಿ, ಅವು ಅನುಷ್ಠಾನಗೊಳ್ಳುವಂತೆ ಅನುಸರಣೆಯ ಕ್ರಮವನ್ನು ಕೈಗೊಳ್ಳಬೇಕು. ಅನುಭವದ ಆಧಾರದ ಮೇಲೆ ಇವುಗಳ ಜೊತೆಗೆ ಬೇರೆ ಕೆಲವು ಉದ್ದೇಶಗಳನ್ನು ಸೇರಿಸಬಹುದು. ಅಥವಾ ಇವುಗಳನ್ನು ತಿದ್ದುಪಡಿಗೆ ಒಳಪಡಿಸಬಹುದು. ಪ್ರಯೋಗಾಲಯದ ರೂಪುರೇಖೆ ವ್ಯಾಪ್ತಿ ಸಮಾಜಕಾರ್ಯವು ವೃತ್ತಿ ಹೌದೆ, ಅಲ್ಲವೆ ಎಂಬ ಜಿಜ್ಞಾಸೆಯ ಜೊತೆಗೆ ವೃತ್ತಿ ಎಂದು ಪರಿಗಣಿಸುವುದಾದರೆ ಇದರಿಂದಾಗುವ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳೇನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇದನ್ನು ವೈದ್ಯಕೀಯ ಮತ್ತಿತರ ವೃತ್ತಿ ಪ್ರಕಾರಗಳಿಗೆ ಹೋಲಿಸುವ ಅಗತ್ಯವಿದೆಯೇ, ಇಲ್ಲವೇ? ಈ ಪ್ರಶ್ನೆಗೆ ದೊರೆಯುವ ಉತ್ತರದಿಂದ ಸಮಾಜಕಾರ್ಯಕ್ಕೆ ಲಾಭವಿದೆಯೇ, ನಷ್ಟವಾಗುತ್ತದೆಯೆ, ಎಂಬ ಸಂಶಯವೂ ಎದುರಾಗುವ ಸಾಧ್ಯತೆಯೇ ಇದೆ. ಈ ಎಲ್ಲ ಪ್ರಶ್ನೆಗಳಿಗೆ ಸಂಶಯಗಳಿಗೆ, ಗೊಂದಲಗಳಿಗೆ ಕಾರಣವೆಂದರೆ ಇದು ಮಾನವ ಸಮಾಜದ ರಾಚನಿಕತೆಯೊಡನೆಯೇ ಬೆಸೆದುಕೊಂಡಿರುವುದು ಮತ್ತು ಎಲ್ಲ ಪ್ರಕಾರದ ಚಟುವಟಿಕೆಗಳ ಜೊತೆ ಕ್ರಿಯಾತ್ಮಕ ಸಂಬಂಧಗಳನ್ನು ಹೊಂದಿರುವುದು. ಆಧುನಿಕ ಸಮಾಜಕಾರ್ಯವಂತೂ ಒಂದು ಅಂತಾಶಿಸ್ತೀಯ, ಅಂತಾವೃತ್ತೀಯ ಸಂಗತಿಯಾಗಿದೆ. ಇದರಿಂದ ಎಲ್ಲ ಪ್ರಕಾರದ ಚಟುವಟಿಕೆಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಒಡಲೊಳಗೆ ಅಡಗಿಸಿಕೊಳ್ಳಲೇಬೇಕಾಗುತ್ತದೆ. ಈ ಮೇಲಿನ ಚರ್ಚೆಗೆ ಅತೀತವಾಗಿ, ನಿರ್ವಿವಾದವಾಗಿ ಈ ಸಂಗತಿಯು ನಿರ್ದಿಷ್ಟವಾಗಿರಬೇಕು, ಪರಿಪುಷ್ಟವಾಗಿರಬೇಕು, ಸುಪರಿಣಾಮವನ್ನು ಪಡೆಯುವಂತಿರಬೇಕು. ಜೊತೆಗೆ ಇದು ಎಲ್ಲಿ ಕಾರ್ಯಗತವಾಗುತ್ತದೋ ಅಲ್ಲಿನ ಸಮಾಜ-ಸಂಸ್ಕೃತಿಗೆ ತದನುಗುಣವಾಗಿ ಕ್ರಿಯಾತ್ಮಕವಾಗಿರಬೇಕಾಗುತ್ತದೆ. ಉದಾಹರಣೆಗಾಗಿ ಭಾರತದಲ್ಲಿನ ಸಮಾಜಕಾರ್ಯವು ಇಲ್ಲನ ಧರ್ಮಕ್ಕೆ (ಧರ್ಮವೆಂಬುದನ್ನು ದೇಶಕಾಲದ ಸ್ಥಿತಿ ಎಂಬ ನಿರ್ದಿಷ್ಟ ಅರ್ಥದಲ್ಲಿ ಬಳಸಲಾಗಿದೆ) ಅನುಗುಣವಾಗಿರಬೇಕಾಗುತ್ತದೆ. ಆರ್ಥಿಕವಾಗಿ ಮುಂದುವರಿದ ಪಾಶ್ಚಾತ್ಯ ಜಗತ್ತಿನ ಸಮಾಜೋರಾಜಕೀಯದ ಹಿನ್ನಲೆಯನ್ನುಳ್ಳ ಪ್ರಜಾಪ್ರಭುತ್ವವಾಗಲಿ, ಸಮಾಜೋ-ಆರ್ಥಿಕ ಹಿನ್ನಲೆಯಿಂದ ಉಣ್ಮಿದ ಸಮಾಜವಾದವಾಗಲೀ ಇದ್ದರೂಪದಲ್ಲಿಯೇ ಭಾರತದಲ್ಲಿ, ಅದರಲ್ಲೂ ಸಮಾಜಕಾರ್ಯದ ಸಿದ್ಧಾಂತವಾಗಿ ಅಂಗೀಕಾರವಾಗುವುದು ಸೂಕ್ತವಲ್ಲ ಎಂಬುದು ಅನುಭವಕ್ಕೆ ಬಂದಿದೆ. ಇಲ್ಲಿನ ಸಮಾಜೋ-ಧಾರ್ಮಿಕ/ಆಧ್ಯಾತ್ಮಿಕ ಹಿನ್ನಲೆಯಲ್ಲಿ ಭಕ್ತಿಯೋಗದಂಥ, ಸರ್ವೋದಯದಂಥ ಚಿಂತನ ಸಿದ್ಧಾಂತವು ಅಗತ್ಯವಾಗುತ್ತದೆ. ಸಮಾಜಕಾರ್ಯಕರ್ತರಿಗೆ ನೀಡುವ ತರಬೇತಿಯ ಸಂದರ್ಭದಲ್ಲಿ ಹಾಗೂ ವ್ಯಾವಹಾರಿಕವಾಗಿ ಕಾರ್ಯಕ್ರಮಗಳ ಅನುಷ್ಠಾನ ಪ್ರಕ್ರಿಯೆಯ ಸಂದರ್ಭದಲ್ಲಿ ಸೂಕ್ತವಾದ ವಿಧಾನಗಳು-ತಂತ್ರಗಳು-ಮೌಲ್ಯಗಳು-ಸೂತ್ರಗಳು-ಕೌಶಲ್ಯಗಳು ಯಾವು, ಎಂಬುದನ್ನು ಹೇಗೆ ನಿರ್ಧರಿಸುವುದು? ಅನುಷ್ಠಾನ ಪರ್ವದಾನಂತರ ಉಣ್ಮಿದ ಪರಿಣಾಮಗಳನ್ನು ಅಳೆಯುವುದು ಹೇಗೆ? ಇಂತಹ ಹಲವಾರು ಸಂಗತಿಗಳನ್ನು ನಿರಂತರವಾಗಿ ಪರಾಮರ್ಶೆಗೆ ಒಳಪಡಿಸಬೇಕಲ್ಲವೇ? ಇದಕ್ಕೊಂದು ಪರಮ ಸೂಕ್ತವಾದ ವೇದಿಕೆ ಪರಿಷ್ಕರಿಸಲು ಸಾಧ್ಯವಾದ ಮೂಸೆ (Crucible) ಬೇಡವೇ? ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರವಾಗಿ ಸಮಾಜಕಾರ್ಯ ಪ್ರಶಿಕ್ಷಣ ಶಾಲೆಗೆ ಒಂದು ಪ್ರಯೋಗಾಲಯ, ಅನುಷ್ಠಾನ ವೇದಿಕೆಯ ಅಗತ್ಯತೆಯು ಮೂಡಿಬರುತ್ತದೆ. ಈ ಹಿಂದೆಯೇ ಸೂಚಿಸಿದಂತೆ ಪ್ರಶಿಕ್ಷಣ ಶಾಲೆಯು ತನಗೆ ಸೂಕ್ತವೂ ಹಾಳತವೂ ಆದ ಪ್ರಯೋಗಾಲಯವಾಗಿ ತನ್ನ ಆವರಣದಲ್ಲೋ, ನಗರ ಅಥವಾ ಗ್ರಾಮೀಣ ಸಮುದಾಯದಲ್ಲೋ ಸೇವಾಸಂಸ್ಥೆಯೊಂದನ್ನು ಸ್ಥಾಪಿಸಬೇಕು. ಅದರಲ್ಲಿ ಪ್ರಶಿಕ್ಷಣ ಶಾಲೆಯ ಎಲ್ಲ ಪ್ರಕಾರದ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದು ಕೆಲವು ನಿರ್ದಿಷ್ಟ ಉದ್ದೇಶಗಳನ್ನು ಹೊಂದಿದ್ದು ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ವೈಧಾನಿಕವಾಗಿ ರೂಪಿಸಿ, ಅನುಷ್ಠಾನಗೊಳಿಸಬೇಕು. ಇವುಗಳಲ್ಲಿ ಪಾಠಪ್ರವಚನ ಪ್ರಕ್ರಿಯೆಯಲ್ಲಿ ಬಳಸುವ ಸಿದ್ಧಾಂತಗಳನ್ನು, ವಿದಾನ ವಿನ್ಯಾಸಗಳನ್ನು ಪರೀಕ್ಷೆಗೆ ಒಳಪಡಿಸುವುದೂ, ಸಂಶೋಧನೆಗಳನ್ನು ಕೈಗೊಳ್ಳುವುದೂ ಸುತ್ತುಮುತ್ತಣ ಸಮುದಾಯದ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಕ್ರಮಗಳನ್ನು, ಸಮುದಾಯದವರ ಸಹಭಾಗಿತ್ವದೊಡನೆ, ರೂಪಿಸಿ, ಅನುಷ್ಠಾನಗೊಳಿಸುವುದು, ನವೀನ ಅನುಷ್ಠಾನ ಯೋಗ್ಯ ಪರಿಕ್ರಮಗಳನ್ನು ಕಂಡರಿಸುವುದು, ಸಂಪನ್ಮೂಲ ಸಂಗ್ರಹ- ಕ್ರೋಡೀಕರಣದಲ್ಲಿ ಅನುಭಾವವನ್ನು ಪಡೆಯುವ ಅವಕಾಶವನ್ನು ಒದಗಿಸುವುದು, ಲೆಕ್ಕವನ್ನು ಇರಿಸಿ ಅದನ್ನು ಅಧಿಕೃತ ಲೆಕ್ಕ ಪರಿಶೋಧನೆ (Audit) ಮಾಡಿಸುವ ಅನುಭವಗಳಿಸಲು ಅವಕಾಶ ದೊರೆಯುತ್ತದೆ, ಇತ್ಯಾದಿ ಪ್ರಯೋಗಾಲಯದ ಕಕ್ಷೆಯೊಳಗೆ ಬರಬೇಕಾಗುತ್ತದೆ. ಈ ಎಲ್ಲ ಪ್ರಯೋಗಗಳಲ್ಲಿ ಪ್ರಶಿಕ್ಷಕರೂ, ಪ್ರಶಿಕ್ಷಣಾರ್ಥಿಗಳೂ ಭಾಗವಹಿಸುವುದರಿಂದ ಅವರಿಗೆ ಸೈದ್ಧಾಂತಿಕ ಹಾಗೂ ವ್ಯಾವಹಾರಿಕ ಜ್ಞಾನವು ಕರಗತವಾಗುತ್ತದೆ. ತಮ್ಮ ವ್ಯಕ್ತಿತ್ವವನ್ನು ಸಮೃದ್ಧಗೊಳಿಸಿಕೊಂಡು ಸಮರ್ಥ ಕಾರ್ಯಕರ್ತನಾಗಿ ರೂಪುಗೊಳ್ಳಲೂ ಇದು ನೆರವಾಗುತ್ತದೆ. ಕಮ್ಮಟದಲ್ಲಿ (Mint) ಸಿದ್ಧವಾದ ನಾಣ್ಯಗಳ ಹಾಗೆ ಪ್ರಶಿಕ್ಷಣಾರ್ಥಿಗಳು ಪ್ರಶಿಕ್ಷಣ ಶಾಲೆಯಲ್ಲೂ, ಹೊರ ಕ್ಷೇತ್ರಗಳಲ್ಲೂ ಸಲ್ಲುತ್ತಾರೆ. ಈ ಕುರಿತ ವರ್ಣನೆಯನ್ನು ಲಂಬಿಸುವ ಅಗತ್ಯವಿಲ್ಲವೆಂದು ಭಾವಿಸುತ್ತೇನೆ. ಈ ಲೇಖನದ ಉದ್ದಕ್ಕೂ ಪ್ರತಿಪಾದಿಸಿದ ವಿಚಾರಾಂಶಗಳನ್ನು ಮನಗಂಡರೆ ಇಡಿಯ ಉದ್ದೇಶದ ಸ್ಪಷ್ಟ ಚಿತ್ರಣವು ಮನೋಭಿತ್ತಿಯ ಮೇಲೆ ಮೂಡುತ್ತದೆ ಎಂದು ನಾನು ಬಾವಿಸುತ್ತೇನೆ. ಟಿಪ್ಪಣಿ
ಡಾ.ಎಚ್.ಎಂ.ಮರುಳಸಿದ್ಧಯ್ಯ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|