ಗತೀಕರಣ, ನಗರೀಕರಣಗಳು ವ್ಯಕ್ತಿ-ಪ್ರತಿಷ್ಟೆ ಸಮಾಜವನ್ನು ಅಲ್ಲೋಲಕಲ್ಲೋಲ ಮಾಡುತ್ತಿವೆ. `ಅಭಿವೃದ್ಧಿಯ' ಬೆನ್ನಹತ್ತಿರುವ ಮನುಷ್ಯನಿಗೆ ಬೇರೇನೂ ಕಾಣದಾಗಿದೆ. ಇನ್ನು ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳಿಗಂತೂ ಲೆಕ್ಕವೇ ಇಲ್ಲ. ಈ ಅಭಿವೃದ್ಧಿಯ ಪ್ರತಿಫಲಗಳು ಜನರಿಗೆ ಎಷ್ಟು, ಹೇಗೆ ತಲುಪುತ್ತಿವೆಯೋ ಗೊತ್ತಿಲ್ಲ. ಆದರೆ, ಪರಿಸರದ ಮೇಲೆ ಅತ್ಯಾಚಾರವೆಸಗುತ್ತಿರುವುದಂತೂ ನಿಜ. `ಅಭಿವೃದ್ಧಿ'ಯೆಂಬ ಮಾಯೆಯಿಂದ ಹೊರಸೂಸುವ ಮಾಲಿನ್ಯದಿಂದ ಇಂದು ಜೀವಿಗಳು ಜೀವಿಸಲೂ ಕೂಡ ತತ್ಪಾರವೇರ್ಪಟ್ಟಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತದ ಭೂಪಟದಲ್ಲಿ ಒಂದು ಚುಕ್ಕೆಯಷ್ಟಿರುವ ಗ್ರಾಮ. ನಿಶ್ಶಬ್ದವಾಗಿ ಸ್ವಚ್ಛತೆ ಮತ್ತು ನೈರ್ಮಲ್ಯ ವಿಚಾರಗಳಲ್ಲಿ `ಕ್ರಾಂತಿ'ಯನ್ನೇ ಮಾಡಿದೆಯೆಂಬ ವಿಚಾರ ತಿಳಿಯಲು ಹೇಗೆ ಸಾಧ್ಯ? ಆದರೂ ಇದು ನಿಜ. ನಾಗರಿಕ ಸಮಾಜಕ್ಕೆ ಸ್ವಚ್ಛತೆ, ಪರಿಸರ ಸಂರಕ್ಷಣೆಯ ಮೂಲಕ ನಾಗರಿಕತೆಯ ಶಿಸ್ತನ್ನು ಬೋಧಿಸುತ್ತಿರುವ ಆ ಪುಟ್ಟ ಗ್ರಾಮವೇ ಮೇಘಾಲಯ ರಾಜ್ಯದ `ಮಾಲಿನಾಂಗ್'.
ಶಿಲ್ಲಾಂಗ್ನಿಂದ 90 ಕಿ.ಮೀ. ದಕ್ಷಿಣಕ್ಕೆ, ಬಾಂಗ್ಲಾ ಗಡಿಯಿಂದ 48 ಕಿ.ಮೀ. ಸಮೀಪದಲ್ಲಿರುವ ಈ ಗ್ರಾಮ 87 ಕುಟುಂಬಗಳ 485 ಜನರನ್ನು ತನ್ನ ಒಡಲಿನಲ್ಲಿರಿಸಿಕೊಂಡಿದೆ. 2003ನೆಯ ಇಸವಿಗಿಂತ ಮೊದಲು ಒಂಟಿಯಾಗಿದ್ದ ಈ ಗ್ರಾಮ ಇಂದು ಪ್ರವಾಸಿಗರಿಂದ ತುಂಬಿ ತುಳುಕಲು, ಆ ಮೂಲಕ ಪ್ರಕೃತಿ ಪಾಠ ಪ್ರಾರಂಭಿಸಲು ಕಾರಣವಾಗಿದೆ. 2003ರಲ್ಲಿ `ಡಿಸ್ಕವರಿ ಇಂಡಿಯಾ' ನಿಯತಕಾಲಿಕೆಯು ಈ ಗ್ರಾಮವನ್ನು "ಏಷ್ಯಾ ಖಂಡದ ದೇವರ ಸ್ವಂತ ಉದ್ಯಾನ" ಎಂದು ಗುರುತಿಸಿ ಅದನ್ನು ಪ್ರಪಂಚದ ಮೂಲೆಮೂಲೆಗೆ ಪ್ರಚಾರಪಡಿಸಿತ್ತು. ರಮ್ಯಮನೋಹರ ಭೂ ಪ್ರದೇಶ, ಸ್ವಚ್ಛ ಪರಿಸರವನ್ನು ಹೊಂದಿರುವ ಗ್ರಾಮವು ಗೋಡೆಯ ಮೇಲಿನ ಚಿತ್ರಪಟದಲ್ಲಿ ರಚಿಸಿರುವ ಮಾದರಿ ಗ್ರಾಮದಂತಿದೆ. ಈ ಹಳ್ಳಿಯ ನಿರ್ವಹಣೆ ಹೊಣೆ ಹೊತ್ತಿರುವ `ಲೂಷಯ್ ಪಿಗ್ರೋಪ್' ಗ್ರಾಮಸ್ಥನ ಮಾತಿನಂತೆ "ಸ್ವಚ್ಛತೆ ಮತ್ತು ನೈರ್ಮಲ್ಯವು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ಸಾಕಾರಗೊಳಿಸಲು ಹಳ್ಳಿಯ ಜನರೆಲ್ಲಾ ಒಮ್ಮನಸ್ಸಿನಿಂದ ಕೈಜೋಡಿಸಿರುವ ಫಲ ಈ ಗ್ರಾಮ". ಈ ಹಳ್ಳಿಯ ಚಿಕ್ಕ ಮಕ್ಕಳಿಗೆ ಬಾಲ್ಯದಿಂದಲೇ ಎಲ್ಲೆಂದರಲ್ಲಿ ಉಗುಳಬಾರದು, ಸುತ್ತಮುತ್ತಲಿನ ಪರಿಸರವನ್ನು ನಿರ್ಮಲವಾಗಿಟ್ಟುಕೊಳ್ಳಬೇಕೆಂಬುದರ ಪಾಠ ಮನೆಯಿಂದಲೇ ಪ್ರಾರಂಭವಾಗುತ್ತದೆ. ಇದು ಸಾಮಾಜೀಕರಣದ ಭಾಗವಾಗಿರುವುದರಿಂದ, ಮಕ್ಕಳು ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಾರೆ. `ಇದೇನ್ರೀ, ಹೀಗೇಳ್ತೀರಿ... ಈ ಹಳ್ಳಿಯಲ್ಲೆಲ್ಲೂ ಕಸವೇ ಬೀಳೋಲ್ವೇ, ಅಂತ ನೀವು ಕೇಳಬಹುದು. `ಊರು ಅಂದ ಮೇಲೆ ಗಲೀಜು ಇರೋಲ್ವೇ, ಅಂತ ಮತ್ತೊಬ್ಬರು ಧ್ವನಿಗೂಡಿಸಬಹುದು. `ನೀವು ಕೇಳುವ ಪ್ರಶ್ನೆ ಸಹಜವೇ.. ಅದಕ್ಕೆಲ್ಲಾ ಜನರು ಉತ್ತರ ಹುಡುಕಿದ್ದಾರೆ. ಈ ಹಳ್ಳಿಯಲ್ಲಿ ನೀವು ಯಾವುದೇ ಬೀದಿಗಳಿಗೆ ಹೋದರೂ ಅದು ಸ್ವಚ್ಛವಾಗಿವೆ. ಕಾರಣ, ಈ ಬೀದಿಗಳ ನಿರ್ವಹಣೆಗೆ `ಜನರಿಂದ ರಚಿತವಾದ ಸಮಿತಿಯಿಂದ ನೇಮಿಸಲ್ಪಟ್ಟ ಇಬ್ಬರು ಮಹಿಳೆಯರು ಪ್ರತೀದಿನ ರಸ್ತೆಗಳನ್ನು ಗುಡಿಸುವುದು, ಸಂಗ್ರಹಣೆಯಾದ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಜವಾಬ್ದಾರಿ ನಿಭಾಯಿಸುತ್ತಾರೆ. ಇಲ್ಲಿನ ಜನರು ಪ್ರತೀ ಬೀದಿಯ ಕೊನೆಯಲ್ಲಿ ಇಟ್ಟಿರುವ ಬಿದಿರಿನ ಕಸದ ತೊಟ್ಟಿಯಲ್ಲೇ ತ್ಯಾಜ್ಯವನ್ನು ಹಾಕುತ್ತಾರೆ. ಇದರ ಜೊತೆಗೆ ಪ್ರತೀ ಮನೆಯೂ 20 ಅಡಿ ಆಳದ ಗುಂಡಿಯೊಂದನ್ನು ಮನೆಯ ಹಿತ್ತಲಲ್ಲಿ ತೋಡಿಕೊಂಡಿರುತ್ತಾರೆ. ಅದರಲ್ಲಿ ಮನೆಯ ತ್ಯಾಜ್ಯವನ್ನು ಹಾಕುತ್ತಾರೆ. ಅದು ಕೆಲವೇ ತಿಂಗಳುಗಳಲ್ಲಿ ಉತ್ತಮ ಗೊಬ್ಬರವಾಗಿ ಅವರ ಹೊಲ ಸೇರುತ್ತದೆ'. `ಅದೆಲ್ಲಾ ಸರಿ, ಮಹಾಮಾರಿ `ಪ್ಲಾಸ್ಟಿಕ್' ನಿರ್ವಹಣೆ ಹೇಗೆ' ಎಂಬ ಪ್ರಶ್ನೆಗೆ `ನಮ್ಮಲ್ಲೇನೂ, ಪ್ಲಾಸ್ಟಿಕ್ ಅನ್ನು ನಿಷೇಧಿಸಿಲ್ಲ, ಆದರೆ ಅದರ ಬಳಕೆಗೆ ಪ್ರೋತ್ಸಾಹ ನೀಡುವುದಿಲ್ಲ. ಬಳಕೆಯಾಗಿ ಬಿಸಾಡಿದ ಪ್ಲಾಸ್ಟಿಕ್ ಅನ್ನು ಊರಿನಿಂದ ಹೊರಗೆ ದೊಡ್ಡ ಗುಂಡಿಯೊಂದನ್ನು ತೋಡಿ ಅದರಲ್ಲಿ ಹಾಕಿ ಮುಚ್ಚುತ್ತಾರೆ. ಮಕ್ಕಳಿಗೆ ಇದೊಂದು ಪಾಠವಾಗುತ್ತದೆ. ಇಡೀ ಗ್ರಾಮವನ್ನು `ಧೂಮಪಾನ ಮುಕ್ತ' ವಲಯವೆಂದು ಘೋಷಿಸಲಾಗಿದೆ. ಇಲ್ಲಿ ಯಾರೂ ಧೂಮಪಾನ ಮಾಡುವಾಗಿಲ್ಲ. ಅಡಿಕೆಯನ್ನು ಬೆಳೆದ ಪ್ರತಿಯೊಬ್ಬರೂ ತಂಬಾಕನ್ನು ಜಗಿಯುವ ಸಂಪ್ರದಾಯಕ್ಕೆ ಒಳಪಟ್ಟಿದ್ದರೂ ಯಾರೂ ರಸ್ತೆಗಳಲ್ಲಿ ಉಗುಳುವುದಿಲ್ಲ, ಅಕಸ್ಮಾತ್ ಉಗುಳುವ ಪುಂಡರಿಗೆ ಎರಡು ಬಾರಿ ಎಚ್ಚರಿಕೆಯನ್ನು ನೀಡಿ, ಮೂರನೆಯ ಬಾರಿ 50ರಿಂದ 100 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಸರ್ಕಾರ ಲಕ್ಷಾಂತರ ಖರ್ಚುಮಾಡಿ ಗಿಡಮರಗಳನ್ನು ನೆಟ್ಟರೆ ಅದನ್ನು ಸಂರಕ್ಷಿಸುವ ಕೆಲಸವನ್ನು ಹಳ್ಳಿಯವರು ತಮ್ಮ ಸ್ವಂತ ಇಚ್ಛೆಯಿಂದ ಮಾಡುತ್ತಿದ್ದಾರೆ. ಹಿರಿಕಿರಿಯರೆಲ್ಲಾ ಒಡಗೂಡಿ ಹಳ್ಳಿಯನ್ನು ಹಸಿರಿನಿಂದ ಸಮೃದ್ಧಗೊಳಿಸಿದ್ದಾರೆ. ಪ್ರಕೃತಿಯನ್ನು ಹಸಿರಿನ ಸೀರೆಯಲ್ಲಿ ಕಾಣುವ ಕಂಗಳಿಗೆ ಹಬ್ಬದೌತಣ ಸವಿದಂತಾಗುತ್ತದೆ. ಈ ಗ್ರಾಮವು ಊರಿನಿಂದ 5 ಕಿ.ಮೀ. ದೂರದ ಹೊಳೆಯಿಂದ ನೀರನ್ನು ಪಡೆಯುತ್ತದೆ. ದಿನದ 24 ಗಂಟೆಯೂ ನೀರನ್ನು ಪಡೆಯುವ ಜನರು ಅದನ್ನು ಪವಿತ್ರವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಯಾರೂ ಅದನ್ನು ಮಲಿನಗೊಳಿಸುವ ಕಾರ್ಯಕ್ಕೆ ಇಳಿಯುವುದಿಲ್ಲ. ಇಲ್ಲಿನ ಮತ್ತೊಂದು ಅದ್ಭುತವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು. ಈ ಗ್ರಾಮವು 8ನೆಯ ತರಗತಿಯವರೆಗೆ ಶಾಲೆಯನ್ನು ಹೊಂದಿದೆ. ಶೈಕ್ಷಣಿಕ ಮಟ್ಟ ಬರೋಬ್ಬರಿ 100% ! ಗ್ರಾಮದ ಬಹುಪಾಲು ಜನರು ಇಂಗ್ಲಿಷನ್ನು ಮಾತನಾಡುತ್ತಾರೆ. ಹಳ್ಳಿಯಲ್ಲಿ 4 ಜನ ಮಾಧ್ಯಮಿಕ, ಇಬ್ಬರು ಪ್ರಾಥಮಿಕ, ಇಬ್ಬರು ನರ್ಸರಿ ಶಾಲೆಯ ಶಿಕ್ಷಕರಿದ್ದು, ಅವರಲ್ಲಿ ಇಬ್ಬರು ಶಿಕ್ಷಕರು 30 ಕಿ.ಮೀ. ದೂರದವರು. ಇವರಿಗೆ ಶಾಲೆಯ ಹತ್ತಿರವೇ ಉಚಿತ ವಸತಿ ವ್ಯವಸ್ಥೆ ಮಾಡಿದ್ದು, ವಾರಾಂತ್ಯದಲ್ಲಿ ಮಾತ್ರ ತಮ್ಮ ಊರುಗಳಿಗೆ ತೆರಳುತ್ತಾರೆ. ಹಳ್ಳಿಯಲ್ಲಿ ವಾಸಿಸುವ ಜನರು ಖಾಶೀ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿದ್ದು, ಮಹಿಳೆಯರು ಕೌಟುಂಬಿಕ ವಿಚಾರಗಳಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಬಹುಪಾಲು ಅಂಗಡಿ ಮುಂಗಟ್ಟುಗಳನ್ನು ಮಹಿಳೆಯರೇ ನಿಭಾಯಿಸುತ್ತಿದ್ದು, ಕ್ಲಿಷ್ಟಕರ ದೈಹಿಕ ಕೆಲಸಗಳು ಪುರುಷರದ್ದು. ಇಲ್ಲಿನ ಜನರಿಗೆ ಕೃಷಿಯೇ ಜೀವನಾಧಾರವಾಗಿದ್ದು ಭೂಮಿಯನ್ನು ಕೃಷಿಗೆ ಯೋಗ್ಯಗೊಳಿಸುವ ಕಾರ್ಯವನ್ನು ಮಾಡುತ್ತಾರೆ. ಬಿತ್ತನೆ ಕೊಯ್ಲುವಿನಂತಹ ಕಡಿಮೆ ಶ್ರಮದ ಕೆಲಸಗಳಲ್ಲಿ ಸ್ತ್ರೀಯರು ಭಾಗಿಯಾಗುತ್ತಾರೆ. ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ಜನರು ಹೇಗೆ ನಿಭಾಯಿಸುತ್ತಿದ್ದಾರೆ? ಎಂಬ ಪ್ರಶ್ನೆ ಮೂಡುವುದು ಸಹಜವೇ. ಈ ಗ್ರಾಮದ ಜನರು ಊರಿನ ಹಿರಿಯನೊಡಗೂಡಿ `10 ಜನರ ಸಮಿತಿ'ಯೊಂದನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಯು ಗ್ರಾಮದ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಇವೇ ಮೊದಲಾದ ಸಂಗತಿಗಳನ್ನು ನೋಡಿಕೊಳ್ಳುತ್ತದೆ. ಈ ನಿರ್ವಹಣಾ ಕಮಿಟಿಯ ಜೊತೆಗೆ, ರಕ್ಷಣೆ ಮತ್ತು ಕ್ರೀಡಾ ಸಮಿತಿಗಳು ಗ್ರಾಮದಲ್ಲಿವೆ. ಅಪರಾಧ ಸಂಬಂಧದ ವಿಚಾರಗಳ ಬಗ್ಗೆ ರಕ್ಷಣಾ ಸಮಿತಿಯು ಗಮನಹರಿಸಿ ಅಗತ್ಯವಿದ್ದರೆ ಆರಕ್ಷಕರಿಗೆ ತಿಳಿಸುವ ಕಾರ್ಯವನ್ನು ನಿಭಾಯಿಸಿದರೆ, ಹಳ್ಳಿಯ ಯುವಕರಿಗೆ ಮತ್ತು ಮಕ್ಕಳಿಗೆ ಕ್ರೀಡಾಕೂಟಗಳ್ನು ಆಯೋಜಿಸುವ ಕೆಲಸವನ್ನು ಕ್ರೀಡಾ ಸಮಿತಿಯು ನಿರ್ವಹಿಸುತ್ತದೆ. ಒಟ್ಟಾರೆ ಹಳ್ಳಿಯ ಜನರ ಸರ್ವಾಂಗೀಣ ಬೆಳವಣಿಗೆಯನ್ನು ಸಮಿತಿಗಳು ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಈ ಸಮಿತಿಗಳ ಜನರು ಇಷ್ಟೇ ಮಾಡಿಕೊಂಡಿದಿದ್ದರೆ `ಛೇ ಅವರೆಂತಹ ಸ್ವಾರ್ಥಿಗಳು' ಎಂದು ಹಂಗಿಸಬಹುದಿತ್ತೇನೋ. ಅವರು ಅದಕ್ಕೆ ಅವಕಾಶಕೊಟ್ಟಿಲ್ಲ ಏಕೆಂದರೆ, `ಮಾಲಿನಾಂಗ್'ನ ಸುತ್ತಮುತ್ತಲ 7 ಹಳ್ಳಿಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಜಾಗೃತಿ ಅಷ್ಟಾಗಿ ಇರದಿರುವುದನ್ನು ಗಮನಿಸಿದ ಕಮಿಟಿಯ ಸದಸ್ಯರು, ಆ ಹಳ್ಳಿಗಳಲ್ಲಿ ಆರೋಗ್ಯ, ನೈರ್ಮಲ್ಯ, ಇತ್ಯಾದಿಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಇವರ ಶ್ರಮದ ಫಲವಾಗಿ ಅವುಗಳೂ ಇಂದು `ಮಾಲಿನಾಂಗ್' ನಂತೆ ಮಾದರಿ ಗ್ರಾಮಗಳಾಗುವ ದೆಸೆಯಲ್ಲಿವೆ. `ಇಷ್ಟೆಲ್ಲಾ ಮಾಡಲು ಹಣ ಬೇಡ್ವಾ... ಎಲ್ಲಿಂದ ತರ್ತಾರೆ, ಅಂಥ ನಾವೇನಾದರೂ ಕೇಳಿದರೆ, `ಇಗೋ ನೋಡಿ.., ಎಂದು ಪ್ರವಾಸಿಗರಿಂದ ಸಂಗ್ರಹವಾದ ಸ್ವಲ್ಪ ಹಣವನ್ನು, ದಾನ, ದತ್ತಿಗಳನ್ನು ತೋರಿಸುತ್ತಾ... ಮುಖ್ಯ ಮೂಲವಾದ ಸರ್ಕಾರದ ಸಮಗ್ರ ಜಲ ಅಭಿವೃದ್ಧಿ ಕಾರ್ಯಕ್ರಮ (IWDP) ಮತ್ತು ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಯೋಜನೆಯೆಡೆ ಕೈತೋರಿಸುತ್ತಾರೆ. ಸರ್ಕಾರದಿಂದ ದೊರೆಯುವ ಅನುಕೂಲಗಳನ್ನು ಅಚ್ಚುಕಟ್ಟಾಗಿ ಬಳಸಿಕೊಂಡು ಊರನ್ನು ಶ್ರೀಮಂತಗೊಳಿಸುವ ಕಲೆ ಕಲಿಸುತ್ತಿದ್ದಾರೆ. ಜೊತೆಗೆ, ಸಹಕಾರಿ ತತ್ತ್ವದನ್ವಯ ಕ್ಯಾಂಟೀನ್ ನಡೆಸಿ, ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಹಣವನ್ನು ಗಳಿಸಲಾಗುತ್ತದೆ. `ಏನ್ರೀ, ಇಷ್ಟೆಲ್ಲಾ ಹೊಗಳ್ತಾ ಇದ್ದೀರಾ... ಹಳ್ಳಿಗೆ ಯಾವ್ದೇ ಸಮಸ್ಯೆ ಇಲ್ವೆ, ಅಂತ ನಾವೇನಾದರೂ ಕೇಳಿದರೆ, ಅತ್ಯಂತ ವಿನಮ್ರವಾಗಿ `20 ಕಿ.ಮೀ. ದೂರದ ಪ್ರಾಥಮಿಕ ಚಿಕಿತ್ಸಾ ಕೇಂದ್ರದೆಡೆ ಬೆರಳ್ತೋರುತ್ತಾರೆ. ಹೌದು, ಇಲ್ಲಿನವರಿಗೆ ಯಾವುದೇ ಕಾಯಿಲೆಗಳು ಬಂದರೂ ಚಿಕಿತ್ಸೆಗೆ 20 ಕಿ.ಮೀ. ಕ್ರಮಿಸಬೇಕು. ಸರಿಯಾದ ವಾಹನ ಸೌಲಭ್ಯವಿಲ್ಲದ್ದರಿಂದ, ಗ್ರಾಮ ನಿವಾಸಿಯೊಬ್ಬರಿಗೆ ಸೇರಿದ ಕಾರಿನಲ್ಲಿ ಕಿ.ಮೀ.ಗೆ 1 ರೂ. ನಂತೆ ಪಾವತಿಸಿ ಬಾಡಿಗೆಗೆ ಪಡೆಯಬೇಕು. 2 ಕಾರುಗಳು ಈ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿವೆ. ಇಲ್ಲಿನ ಮತ್ತೊಂದು ಪ್ರವಾಸೀ ತಾಣವೆಂದರೆ, 150 ವರ್ಷ ಹಳೆಯ ಮರದ ಬೇರಿನಿಂದ ನಿರ್ಮಾಣವಾದ `ಬೇರು ಸೇತುವೆ'. ಬೇರುಗಳು ಒಂದಕ್ಕೊಂದು ಹೆಣೆದುಕೊಂಡು ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಗೊಂಡಿದೆ. ಗ್ರಾಮಸ್ಥರು ನೆಮ್ಮದಿಯಿಂದ ಈ ಪ್ರಕೃತಿ ವೈಶಿಷ್ಟ್ಯವನ್ನು ಅನುಭವಿಸುತ್ತಿದ್ದಾರೆ. ಹೌದು, ಜಗತ್ತು ತುಂಬಾ ವಿಶಾಲವಿದೆ. ಯಾವ್ಯಾವುದೋ ಮೂಲೆಯಲ್ಲಿ ಏನೇನೋ ಸಂಶೋಧನೆ, ಕ್ರಾಂತಿಗಳು ತಣ್ಣನೆ ನಡೆಯುತ್ತಿರುತ್ತವೆ. ಅವುಗಳನ್ನು ಗುರುತಿಸುವ ಕಾರ್ಯಗಳು ನಡೆಯಬೇಕಷ್ಟೇ. ಪುಟ್ಟಗ್ರಾಮವಾದ `ಮಾಲಿನಾಂಗ್'ನಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ. `ಸಮುದಾಯವೇ ಶಾಲೆ ಜನರೇ ಶಿಕ್ಷಕರೆಂಬ' ಮಾತನ್ನು ಅಕ್ಷರಶಃ ಸಾಕಾರಗೊಳಿಸಿದ `ಮಾಲಿನಾಂಗ್'ನಂತಹ ಗ್ರಾಮಗಳೂ ಇವೆ. ಸಮಾಜಕಾರ್ಯವನ್ನು ವೃತ್ತಿಯಾಗಿರಿಸಿಕೊಂಡಿರುವ ಸಮಾಜಕಾರ್ಯಕರ್ತರು ಇಂತಹ ಗ್ರಾಮೀಣ ಪ್ರಯೋಗಗಳಿಗೆ ಮುಂದಾಗುವರೇ? ಕನಿಷ್ಠ ಮುಂದಿನ ಭಾವಿ ಸಮಾಜಕಾರ್ಯಕರ್ತರಿಗೆ ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡುವರೇ? ಕಾಲವೇ ಉತ್ತರಿಸಬೇಕು. ಕೃಪೆ: ಡೆಕ್ಕನ್ ಹೆರಾಲ್ಡ್, ಡಿ.5, 2010. ಬೆಂಗಳೂರು ಮೂಲ: ಶ್ರೀ ರೇಖಾಕಲ್ಮಲ್ ಕನ್ನಡಕ್ಕೆ: ಆನಂದ ಎನ್.ಎಲ್., ಉಪನ್ಯಾಸಕರು, ಸಿಎಂಆರ್ ಕಾಲೇಜು, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |