ಜೀವ ಸಂಕುಲದಲ್ಲಿ ಗಿಡ, ಮರ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳಲ್ಲಿನ ಪ್ರಭೇದ, ವಿಭೇದಾದಿಗಳಲ್ಲಿನ ವಿವಿಧತೆ ಮಾತ್ರವಲ್ಲ ಈ ವಿವಿಧತೆ ಸದಾ ಏರಿಳಿತಗೊಳ್ಳುವ ವ್ಯವಸ್ಥೆಗೆ ಜೀವ ವೈವಿಧ್ಯವೆಂದು ಸರಳವಾಗಿ ವ್ಯಾಖ್ಯಾನಿಸಲಾಗುತ್ತದೆ. ಹುಟ್ಟು, ಬದುಕು, ಸಾವು ಈ ಜೀವಯಾತ್ರೆ ಎಲ್ಲೆಡೆ ಇದ್ದಿದ್ದೆ. ಈ ಯಾತ್ರೆಯ ಅತ್ಯಂತ ಪ್ರಮುಖ ಘಟ್ಟವಾದ ಬದುಕೆಂಬುದು ನೈಜವಾಗಿ ಅರಳುವುದಾದರೂ ಕೌಟುಂಬಿಕ ಪರಿಸ್ಥಿತಿಗೂ ಮಿಗಿಲಾಗಿ ಅದರ ಸುತ್ತಲಿನ ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ಪರಿಸರಗಳ ಪ್ರಭಾವದಿಂದ. ಮಲೆನಾಡೆಂಬುದು ಪಶ್ಚಿಮಘಟ್ಟ, ನಿತ್ಯ ಹರಿದ್ವರ್ಣ ಕಾಡು, ಬೆಟ್ಟ ಗುಡ್ಡ, ಕೆರೆ, ಝರಿ, ಹಳ್ಳ ಕೊಳ್ಳಗಳಿಂದ ಕೂಡಿದ್ದು ದೇಶದಲ್ಲೇ ವಿಶಿಷ್ಟ ಪರಿಸರ ವ್ಯವಸ್ಥೆಯಾಗಿದೆ. ಇದು ಇಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ. ಇಲ್ಲಿನ ವಿಶಿಷ್ಟ ಪರಿಸರ ವ್ಯವಸ್ಥೆಯ ಅತ್ಯಂತ ಮೂರ್ತಸ್ವರೂಪವೇ `ಜೀವ ವೈವಿಧ್ಯ' (Biological Diversity) ವಾಗಿದೆ. ಈ ಪಶ್ಚಿಮಘಟ್ಟ ಪ್ರದೇಶ ಜಗತ್ತಿನ ಹತ್ತು ದಟ್ಟ ಜೀವ ವೈವಿಧ್ಯ ತಾಣಗಳಲ್ಲೊಂದು ಎಂಬ ಖ್ಯಾತಿ ಪಡೆದಿದೆ. ಇದಕ್ಕೆ ಹೊಂದಿಕೊಂಡೇ ಮಲೆನಾಡ ಹಿತ್ತಲು, ತೋಟ, ಹೊಲಗಳಲ್ಲೂ ನಾಟಿ ತಳಿಗಳು, ಹಣ್ಣು ತರಕಾರಿ, ಸಸ್ಯ, ಗಿಡ, ಮರಗಳ ಜೀವ ವೈವಿಧ್ಯ ಕೂಡ ಅಷ್ಟೇ ದಟ್ಟವಾಗಿರುತ್ತದೆ. ಅಂದಮೇಲೆ, ಮಲೆನಾಡ ಬದುಕುಗಳು ಅರಳುವುದಾದರೂ ಈ ದಟ್ಟ ಜೀವ ವೈವಿಧ್ಯದೊಳಗೇ ಎಂದಾಯ್ತು. ಹೀಗೆ, ಬದುಕನ್ನರಳಿಸಿಕೊಳ್ಳುವ ಅನನ್ಯ ಅವಕಾಶವನ್ನು ಬಾಲ್ಯದಲ್ಲಿ ಪಡೆಯುವಂತಾಗಿ ಈಗ ಬೆಂಗಳೂರಿನಂತಹ ಕಾಂಕ್ರಿಟ್ ಜಂಗಲ್ಗಳಲ್ಲಿ ಸಿಕ್ಕಿ ತೊಳಲಾಡುತ್ತಿರುವ ನನ್ನಂತಹವರಿಗೆ ಆ ಅದ್ಭುತ ಅವಕಾಶದ ಮರುನೆನಪೇ ಅಪಾರ ಸಂತಸ ತರುವಂತಾಗಿದೆ. ಆದರೆ, ಈ ಜನಸಂಖ್ಯೆ ಹೆಚ್ಚಳ, ಅರಣ್ಯನಾಶ, ಪರಿಸರ ವಿನಾಶಗಳಿಂದಾಗಿ ಅಲ್ಲಿನ ಆ ಜೀವ ವೈವಿಧ್ಯ ಕೂಡ ಕ್ಷೀಣಿಸುವಂತಾಗಿದ್ದು, ಇಲ್ಲಿನ ಬದುಕೇ ಈಗ ಕಮರುವಂತಾಗಿದೆ. ಮಿಗಿಲಾಗಿ, ಮುಂಬರುವ ತಲೆಮಾರುಗಳು ಇಂತಹ ಅವಕಾಶದಿಂದ ಪೂರ್ತಿ ವಂಚಿತವಾಗುವ ಅಪಾಯ ಕೂಡ ನಮ್ಮ ಮುಂದಿದೆ. ಈ ಎಲ್ಲಾ ವಿಚಾರಗಳತ್ತ ಕಣ್ಣು ಹಾಯಿಸುವುದು ಈ ಒಂದು ಪುಟ್ಟ ಲೇಖನದ ಪ್ರಯತ್ನವಾಗಿದೆ. ಜೀವ ಸಂಕುಲದಲ್ಲಿ ಗಿಡ, ಮರ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಾದಿಗಳಲ್ಲಿನ ಪ್ರಭೇದ, ವಿಭೇದಾದಿಗಳಲ್ಲಿನ ವಿವಿಧತೆ (variety) ಮಾತ್ರವಲ್ಲ ಈ ವಿವಿಧತೆ ಸದಾ ಏರಿಳಿತಗೊಳ್ಳುವ (variability) ವ್ಯವಸ್ಥೆಗೆ ಜೀವ ವೈವಿಧ್ಯವೆಂದು ಸರಳವಾಗಿ ವ್ಯಾಖ್ಯಾನಿಸಲಾಗುತ್ತದೆ. ಜೀವ ಶಾಸ್ತ್ರಜ್ಞರು, ಪಶ್ಚಿಮಘಟ್ಟದಲ್ಲಿ ಅದೆಷ್ಟು ಜಾತಿಯ, ಪ್ರಭೇದ, ವಿಭೇದಗಳ ಜೀವ ಜಂತುಗಳಿರುವವು ಎಂದು ತಿಳಿಸುವುದು ಮಾತ್ರವಲ್ಲ ಒಂದು ನಿರ್ದಿಷ್ಟ ವಿಸ್ತೀರ್ಣದಲ್ಲಿ ಎಷ್ಟು ಜನಸಂಖ್ಯೆಯಲ್ಲಿ ಇವುಗಳಿರುವವು ಎಂದು ನಿಖರವಾಗಿ ಲೆಕ್ಕ ಹಾಕಿ ತಿಳಿಸಬಲ್ಲವರಾಗಿರುವರು. ಇದು ಸ್ವಲ್ಪ ಯಾಂತ್ರಿಕವಾಗಿ ಜೀವ ವೈವಿಧ್ಯವನ್ನು ನೋಡುವ ಪರಿಯಾಗಿದೆ. ಇದು ಮೂಲಭೂತ ಸ್ಥರದಲ್ಲಿ ವನ್ಯತೆ (wilderness) ಯೊಳಗೆ ಹುದುಗಿರುವ ಕಾಡಿನೊಳಗಿನ ಜೀವ ವೈವಿಧ್ಯದತ್ತ ನೋಡುವಂತಾಗಿದೆ. ಆದರೆ ನಿತ್ಯ ಕಾಣಸಿಗುವ ಬೋಗಿಮರ, ಮಲೆನಾಡ ಗಿಡ್ಡ ಹಸು, ಕರಿಬಾಳೆ, ಬಕ್ಕೆ ಹಲಸು, ಪುನರ್ಪುಳಿ, ಜೀರಿಗೆ, ಮೆಣಸು, ಅಪ್ಪೆ ಮಿಡಿ, ಮಾವಿನ ಕಾಯಿ, ಮುಕ್ಕಡಕ, ಕಾಸರ್ಕಮರ, ಸುಗಂಧಿ ಬೇರಿನಂತಹ ಕಷಾಯ ಸಸ್ಯಗಳು, ಹಿತ್ತಲುಗಳಲ್ಲಿ ರಾರಾಜಿಸುವ ಡೇರೆ, ಮಲ್ಲಿಗೆ, ಕೆಂಡಸಂಪಿಗೆ, ಹೂ ಗಿಡಮರಗಳು, ಬಸಳೆ, ತೊಂಡೆ, ಹರಿವೆ ತರಕಾರಿಗಳು, ಎಲ್ಲಕ್ಕಿಂತ ಮಿಗಿಲಾಗಿ ಗದ್ದೆಗಳಲ್ಲಿ ಅದ್ಭುತವಾಗಿ ಬೆಳೆಯುತ್ತಿದ್ದ ಹೆಗ್ಗ, ಜೋಳಿಗೆ, ರತ್ನಚೂಡಿ, ಕಾಯಮೆ ಇತ್ಯಾದಿ, ನೂರಾರು ಬತ್ತದ ತಳಿಗಳಂತಹ ಸಾಕಾಣಿಕೆಗೆ ಒಳಪಟ್ಟಿರುವ (domensticated) ನಾಡೊಳಗಿನ ಜೀವ ವೈವಿಧ್ಯ ಕೂಡ ಮಲೆನಾಡ ಬದುಕುಗಳನ್ನು ಅರಳಿಸುವಲ್ಲಿ ವಿಶೇಷ ಪಾತ್ರವಹಿಸುತ್ತವೆ. ಈ ಸಾಕಾಣಿಕೆಗೊಳಪಟ್ಟ ಜೀವ ವೈವಿಧ್ಯಕ್ಕೆ ಸಾಂಸ್ಕೃತಿಕ ಕವಚ ಹೊದಿಸಿ ಗಟ್ಟಿ ಮಾಡಲು ಹಲವು ಆಚರಣೆ, ಸಂಪ್ರದಾಯ, ರೀತಿ, ರಿವಾಜುಗಳ ಭದ್ರ `ದೇಶೀಯ ಸಂಸ್ಥೆಗಳು' (traditional institutions) ಇಲ್ಲಿ ವಿಸ್ತ್ರುತವಾಗಿದ್ದವು. ಹಾಗೇ, ಇಲ್ಲಿನ ಹಲವಾರು ತಳಮಟ್ಟದ ಅನುಶೋಧಕರ ಹೊಸ ಹೊಸ ಅನ್ವೇಷಣೆಗಳು ಈ ನಿಟ್ಟಿನಲ್ಲಿ ತಲೆ ಎತ್ತಿದ್ದು ಈ ಮಲೆನಾಡ ಜೀವ ವೈವಿಧ್ಯ ವ್ಯವಸ್ಥೆಯನ್ನು ಗಟ್ಟಿಮಾಡುವಂತಾಗಿದ್ದವು. ಹಾಗಾಗಿ, ಸಾಕಾಣಿಕೆಗೆ ಒಳಪಟ್ಟಿರುವ ಜೀವ ವೈವಿಧ್ಯದ ಮೇಲೆ ಈ ಲೇಖನ ಹೆಚ್ಚು ಒತ್ತು ಕೊಡಲಾಗಿದೆ. ಆದರೆ ವನ್ಯತೆಯೊಳಗೆ ಹುದುಗಿರುವ ಜೀವ ವೈವಿಧ್ಯ ಈ ನಿಟ್ಟಿನಲ್ಲಿ ಅಗೌಣವೆಂಬುದು ಖಂಡಿತಾ ಅಲ್ಲ. ಅದಿಲ್ಲದಿದ್ದರೆ ಈ ಸಾಕಾಣಿಕೆಗೊಳಪಟ್ಟಿರುವ ಜೀವ ವೈವಿಧ್ಯವೆಂಬುದು ಇರುತ್ತಲೇ ಇರಲಿಲ್ಲ.
ಜೀವ ವೈವಿಧ್ಯವೆಂಬುದು ಮಾನವನ ತೆಕ್ಕೆಗೆ ಒಳಪಟ್ಟು ಹೇಗೆ ಆತನ ಬದುಕನ್ನು ಹಸನು ಮಾಡುತ್ತದೆ ಎನ್ನುವುದಕ್ಕೆ ಮಲೆನಾಡ ಹಿತ್ತಲು, ಇಲ್ಲಿನ ಬತ್ತದ ಗದ್ದೆಗಳಿಂದ ಸಮೃದ್ಧ ಹಚ್ಚ ಹಸುರಿನ ವೈವಿಧ್ಯಮಯ ಅಡಕೆ ತೋಟಗಳೇ ಸಾಕ್ಷಿ. ಹಿತ್ತಲುಗಳು ಒಂದರ್ಥದಲ್ಲಿ ಮಲೆನಾಡ ಸಂಸ್ಕೃತಿಯ ಮೂರ್ತರೂಪವೆಂದರೆ ತಪ್ಪಾಗಲಾರದು. ಹಿತ್ತಲುಗಳಿಲ್ಲದ ಮನೆ, ಅದು ಯಾವ ಜಾತಿ, ಧರ್ಮದವರದ್ದೇ ಆಗಿರಲಿ ಮಲೆನಾಡಿನಲ್ಲಿ ಮನೆಗಳೇ ಅಲ್ಲ. ಇವುಗಳ ಉಸ್ತುವಾರಿ ಹೆಚ್ಚು ಕಡಮೆ ಮಹಿಳೆಯರಿಗೇ ಮೀಸಲು. ಇವುಗಳು ಅತ್ಯಂತ ವಿಕೇಂದ್ರೀಕೃತ ಉತ್ಪಾದನ ಘಟಕಗಳಾಗಿದ್ದರೂ ಮಾರುಕಟ್ಟೆ ಮುಖವಾಗಿರದೇ ಕುಟುಂಬದ ಲೌಕಿಕ, ಸಾಂಸ್ಕೃತಿಕ ಅಷ್ಟೇಕೆ ಪಾರಮಾರ್ಥಿಕ ಉದ್ದೇಶಗಳ ಪರವಾಗಿರುತ್ತವೆ ಎಂದರೆ ತಪ್ಪಾಗಲಾರದು. ಇಲ್ಲಿ ಬೆಳೆಯುವ ಬಹುತೇಕ ನಾಟಿ ತಳಿ ತರಕಾರಿಗಳಾದ ಬಸಳೆ, ಸೌತೆ, ಬೀನ್ಸ್, ಹಾಗಲ, ಕುಂಬಳ, ನುಗ್ಗೆ, ಜೊತೆಗೆ ಕರಿಬೇವು, ಅಮಟೆ, ವಾಟೆ, ಜೀರಕ ಮುಂತಾದ ರುಚಿವರ್ಧಕಗಳು ಕುಟುಂಬಕ್ಕೆ ಪೌಷ್ಟಿಕತೆ ಮತ್ತು ಆಹಾರದ ಭದ್ರತೆ ನೀಡಿದ್ದರೆ, ಮಾವು, ಹಲಸು, ಪೇರಳೆ, ಪಪ್ಪಾಯ ಹಣ್ಣುಗಳು ಬಾಯಿ ಚಪಲತೆಯನ್ನು ನೀಗಿಸಿ ಈ ನಿಟ್ಟಿನಲ್ಲಿ ಸಮೃದ್ಧತೆಯನ್ನು ದ್ವಿಗುಣಗೊಳಿಸಿರುತ್ತವೆ. ಇಲ್ಲಿ ಬೆಳೆಯುವ ಡೇರೆ, ಮಲ್ಲಿಗೆ, ಸಂಪಿಗೆ, ದಾಸವಾಳ, ಗುಲಾಬಿ, ಜಾಜಿ ಹೂಗಳು ಮಹಿಳೆಯರ ಮುಡಿಗೆ ಮುಡುಪಾಗುವುದು ಮಾತ್ರವಲ್ಲ. ಸಾಂಸ್ಕೃತಿಕ ಸಮಾರಂಭಗಳಲ್ಲಿ ಹಾಗೇ, ಪೂಜೆ, ಪುನಸ್ಕಾರ ಇತ್ಯಾದಿ ಧಾರ್ಮಿಕ ಆಚರಣೆಗಳಲ್ಲೂ, ಅವಿಭಾಜ್ಯ ಅಂಗಗಳಾಗಿರುತ್ತವೆ. ನಮ್ಮ ಮಲೆನಾಡ ಮಹಿಳೆಯರ ಹೆಗ್ಗಳಿಕೆ ಆಕೆ ತನ್ನ ಹಿತ್ತಲಿನಲ್ಲಿ ಅದೆಷ್ಟು ವಿಧ ವಿಧದ ಡೇರೆ, ಗುಲಾಬಿ, ಇತ್ಯಾದಿ ಹೂಗಳನ್ನು ಬೆಳೆಸಿರುತ್ತಾಳೆ ಎನ್ನುವುದರ ಮೇಲೆ ಅಡಗಿರುತ್ತದೆ. ಜೊತೆಗೆ ನಮ್ಮ ಮಲೆನಾಡ ಹಿತ್ತಲೆಂಬುದು ತುಳಸಿ, ಅರಿಶಿನ, ಶುಂಠಿಗಳಿಂದ ಹಿಡಿದು ತುಂಬೆ, ಕಾಳು ಜೀರಿಗೆ, ಕಳ್ಳಿ ಹೊನಗನೆಸೊಪ್ಪು, ಚವಿ, ಸುಗಂಧಿ, ಇತ್ಯಾದಿ ಹಲವು ಹತ್ತಾರು ಔಷಧಿ ಸಸ್ಯಗಳ ಅಗರವಾಗಿದ್ದು ಕುಟುಂಬದ ಅದರಲ್ಲೂ ಮುಖ್ಯವಾಗಿ ಮಕ್ಕಳ ಮಹಿಳೆಯರ, ವೃದ್ಧರ ಪ್ರಾಥಮಿಕ ಆರೋಗ್ಯದ ರಕ್ಷಣೆಯ ಮೂಲ ಸ್ಥಾನವೂ ಆಗಿರುತ್ತದೆ. ಕುಟುಂಬದ ಆರೋಗ್ಯ ಮತ್ತು ಸಾಂಸ್ಕೃತಿಕ ಬದುಕು ಮತ್ತು ಆಹಾರ ಭದ್ರತೆಗೆ ಪೂರಕವಾಗಿದ್ದು, ತರಕಾರಿ, ಹೂವು, ಹಣ್ಣು, ಔಷಧಿಗಳ ವಿಚಾರದಲ್ಲಿ ಹೆಚ್ಚು ಕಡಮೆ ಒಂದು ಕುಟುಂಬಕ್ಕೆ ಸ್ವಾವಲಂಬನೆ ನೀಡುವ ಸಾಮಥ್ರ್ಯ ಈ ಮಲೆನಾಡ ಹಿತ್ತಲುಗಳಿಗಿತ್ತು. ಜೊತೆಗೆ ಈ ಹಿತ್ತಲ ಬೇಲಿಗಳಲ್ಲಿನ ಹಾಲುವಾಣ, ಹೊಂಗೆ, ಇತ್ಯಾದಿ ಗಿಡಗಳು ಕಷ್ಟ ದಿನಗಳಲ್ಲಿ ದನ ಕರುಗಳ ಮೇವಿಗೂ ಆಸರೆಯಾಗಿದ್ದವು. ಇನ್ನು ಮಲೆನಾಡ ಅಡಕೆ ತೋಟಗಳಂತೂ ವೈವಿಧ್ಯಮಯ ಕೃಷಿಗೆ ಹೇಳಿ ಮಾಡಿಸಿದಂತಿರುತ್ತದೆ. ಇಲ್ಲಿ ಅಡಕೆ ಮೂಲ ವಾಣಿಜ್ಯ ಬೆಳೆಯಾಗಿದ್ದರೂ ಬಾಳೆ, ಕರಿಮೆಣಸು, ವೀಳ್ಯ, ಯಾಲಕ್ಕಿಗಳಿಂದ ಹಿಡಿದು ಇತ್ತೀಚಿಗಿನ ದಿನಗಳಲ್ಲಿ ಕೋಕ, ವೆನಿಲ್ಲಾಗಳೂ ತುಂಬಿ ಈ ತೋಟಗಳು ಹಚ್ಚ ಹಸಿರಾಗಿ ಕಂಗೊಳಿಸುತ್ತಿರುತ್ತವೆ. ಇಲ್ಲಿನ ಸ್ವಲ್ಪ ಹುಳಿಮಿಶ್ರಿತ, ಆರೋಗ್ಯ ಗುಣಗಳನ್ನೂ ಹೊಂದಿರುವ ವಿಶಿಷ್ಟ ಕರಿಬಾಳೆ ಮತ್ತೆಲ್ಲೂ ಸಿಗದು. ಜೊತೆಗೆ ಪುಟ್ಟಬಾಳೆ, ರಸಬಾಳೆ, ಕಲ್ಯಾಣಬಾಳೆ, ಕಲ್ಲುಬಾಳೆ(!), ಗಳು ಕೂಡ ಅಷ್ಟೇ ವಿಶಿಷ್ಟವಾದವು. ಮಲೆನಾಡ ಈ ಎಲ್ಲಾ ಬಾಳೆ ವೈವಿಧ್ಯಗಳ ಸಂರಕ್ಷಣೆಗೆಂದೇ ಕುದಾಂದ್ರಿ ತಪ್ಪಲಿನ ಬೆಟ್ಟೆಗೆರೆ ದೇವಸ್ಥಾನದಲ್ಲಿ ಲಕ್ಷ ಹಣ್ಣು ಹರಕೆ' ಎನ್ನುವ ಈ ಬಾಳೆ ತಳಿಗಳ ಮೇಳ ಏರ್ಪಡಿಸುವ ಒಂದು ಧಾರ್ಮಿಕ ಆಚರಣೆ ಚಾಲ್ತಿಯಲ್ಲಿತ್ತು. ಹೀಗೆ ವೈವಿಧ್ಯಮಯವಾಗಿರುವ ಸಾಂಪ್ರಾದಾಯಕ ಮಲೆನಾಡ ಅಡಕೆ ತೋಟಗಳು ರೈತರಿಗೆ ವಿಧವಿಧ ಮೂಲದಿಂದ ಆದಾಯ ನೀಡುತ್ತಾ ಸುಸ್ಥಿರ ವಾಣಿಜ್ಯ ಕೃಷಿಯ ಅತ್ಯುನ್ನತ ಮಾದರಿ ಒಂದನ್ನು ನಮ್ಮ ಮುಂದಿಟ್ಟಿರುತ್ತದೆ. ಇದನ್ನೆ ಮತ್ತಷ್ಟು ಅಭಿವೃದ್ಧಿಪಡಿಸಿದ ನಮ್ಮ ಸಾವಯವ ಕೃಷಿ ಋಷಿಗಳಲ್ಲೊಬ್ಬರಾದ ದಿವಂಗತ ಕುರುವಳ್ಳಿ ಪುರುಷೋತ್ತಮ ರಾಯರು 12 ತಿಂಗಳ 12 ಕೊಯಿಲಿನ ಕೃಷಿ ಮಾದರಿ ಒಂದನ್ನು ರೂಪಿಸಿ, ಸರ್ಕಾರಿ ನೌಕರರಂತೆ ನಾನು ಕೂಡ ಪ್ರತಿ ತಿಂಗಳು ಸಂಬಳ ಪಡೆಯುತ್ತೇನೆ' ಎಂದು ಹೆಮ್ಮೆಯಿಂದ ಹೇಳುವಂತಾಗಿದ್ದರು. ಈ ರೀತಿಯ ನೂರಾರು ಸಾವಯವ ರೈತರು, ಮಹಿಳೆಯರು, ತಳಮಟ್ಟದ ಅನುಶೋಧಕರು ವೈವಿಧ್ಯಮಯ ಕೃಷಿಯನ್ನು ಕೈಗೊಂಡು ಇಲ್ಲಿನ ಜೀವ ವೈವಿಧ್ಯತೆಯನ್ನು ಗಟ್ಟಿಮಾಡುವುದು ಮಾತ್ರವಲ್ಲ ಅದರ ಸುಸ್ಥಿರ ಬಳಕೆಯ ರೀತಿಯನ್ನೂ ಕಂಡು ಕೊಂಡಿದ್ದರು. ಉದಾಹರಣೆಗೆ ಬೆಳ್ತಂಗಡಿ ತಾಲ್ಲೂಕಿನ ಅಮ್ದಾಲು ರವಿಶಂಕರ್ ಕಾಡಿನ ಹಿಪ್ಪಲಿ (Piper longuam) ಗಿಡವನ್ನು ತಮ್ಮ ತೋಟದ ಕಾಳು ಮೆಣಸಿನೊಡನೆ ಕಸಿಮಾಡಿ, ಸೊರಗು ರೋಗಕ್ಕೆ ಪ್ರತಿರೋಧವಿರುವ ಸದೃಢ ಕಾಳುಮೆಣಸಿನ ಗಿಡವನ್ನು ಆವಿಷ್ಕಾರ ಮಾಡಿದ್ದರು. ಮಲೆನಾಡ ಈ ಕಾಡು ಮತ್ತು ಅದರೊಳಗಣ ಜೀವ ವೈವಿಧ್ಯವೆಂಬುದು ನಾಡೊಳಗಣ ಬದುಕಿಗೆ ವಿಮುಖವಾಗೇನೂ ಇರಲಿಲ್ಲ, ಬದಲಿಗೆ ಇವು ಅದಕ್ಕೆ ಪೂರಕವಾಗಿದ್ದವು. ಉದಾಹರಣೆಗೆ, ಈ ಮಲೆನಾಡ ಸಾಂಪ್ರದಾಯಕ ಅಡಕೆ ತೋಟಗಳಿಗೆ ನೆರಳು, ಮಳೆ ಗಾಳಿಗಳಿಂದ ರಕ್ಷಣೆ, ಮಿಗಿಲಾಗಿ ಅಡಕೆಗೆ ಪ್ರತಿ ವರ್ಷವೂ ಬೇಸಾಯ ಮಾಡಲು ಹಸಿರೆಲೆ ಗೊಬ್ಬರ ಹಾಗೇ, ಬೇಲಿಗೆ ಮುಳ್ಳು, ಬಿದಿರುಗಳು, ಜಾನುವಾರಿಗೆ ಹುಲ್ಲು, ಮೇವು, ಇತ್ಯಾದಿಗಳನ್ನು ಸತತ ಪೂರೈಸಲು ಬೋಗಿ ಮರವೇ ಪ್ರಮುಖವಾಗಿ ನೂರಾರು ಉಷ್ಣವಲಯದ ನಿತ್ಯ ಹರಿತ್ ಕಾಡು ಮರಗಳಿಂದ ಕೂಡಿದ ದಟ್ಟ ಹಸಿರಿನನ ಸೊಪ್ಪಿನ ಬೆಟ್ಟದ ರಕ್ಷಣೆಯಿತ್ತು. ಈ ಸೊಪ್ಪಿನ ಬೆಟ್ಟ ಅಥವಾ ಹಾಡ್ಯವೆನ್ನುವುದು ಕಾಡೊಳಗಿನ ವನ್ಯ ಜೀವವಿವಿಧತೆಯನ್ನು ನಾಡೊಳಗಿನ, ಅಡಕೆ ತೋಟದ ಜೀವ ವಿವಿಧತೆಯೊಳಗೆ ಮೇಳೈಸಿ, ಎರಡಕ್ಕೂ ಪೂರಕ ಸಂಬಂಧ ಏರ್ಪಡಿಸುವ ಒಂದು ಅನನ್ಯ ಸಾಂಸ್ಥಿಕ (Institutional) ರಚನೆ ಎನ್ನಬಹುದು. ಈ ವಿಶಿಷ್ಟ ರಚನೆ ಬ್ರಿಟಿಷ್ ಅವಧಿಯಲ್ಲೇ ಏರ್ಪಾಡಾಗಿದ್ದು, ಇದರ ಪ್ರಕಾರ ಪ್ರತಿ ಒಂದು ಎಕರೆ ಅಡಕೆ ತೋಟಕ್ಕೆ ಕನಿಷ್ಠ 6-7 ಎಕರೆಗಳನ್ನು ಅರಣ್ಯ ಅಥವಾ ಹಾಡ್ಯದ ಮೇಲಿನ ಸೊಪ್ಪು, ಸೌದೆ, ಮೇವು, ಇತ್ಯಾದಿ ಉಪ ಉತ್ಪನ್ನ ಮಾತ್ರ ಬಳಕೆಯ ಅಧಿಕಾರ (usufruct rights) ನೀಡಲಾಗಿರುತ್ತದೆ. ಯಾವ ಕಾಡೇ ಆಗಲಿ ನಾಟ, ಮರಮುಟ್ಟು, ಸೌದೆಗಳಿಂದ ಹಿಡಿದು ಬಿದಿರು, ಬೆತ್ತ, ಜೇನು, ಅಂಟು, ಸೀಗೆ, ಹೀಗೆ ನೂರಾರು ಉಪ ಉತ್ಪನ್ನಗಳನ್ನು ನೀಡುತ್ತದೆ. ಇನ್ನು ನಿತ್ಯ ಹರಿದ್ವರ್ಣ ಮಲೆನಾಡ ಕಾಡಿನಿಂದ ನಾಡೊಳಗಿನ ಬದುಕಿಗೆ ಸಿಗುವ ಕಾಣಿಕೆಗೆ ಇತಿ ಮಿತಿಗಳೇ ಇರುವುದಿಲ್ಲ. ಇಲ್ಲಿ ಹೊರತಾಗಿ ಬೇರೆಲ್ಲೂ ಸಿಗದ ಪುನರ್ಪುಳಿ, ಕಸು, ಕಳಲೆ, ಅಣಬೆಗಳಿಂದ ಹಿಡಿದು ಮಾಂಸಹಾರಿಗಳಿಗೆ ಪ್ರಿಯವಾದ ಕಾಡುಹಂದಿ, ಕಾಡುಕೋಳಿ, ಮಿಗಗಳಂತ ನೂರಾರು ಪ್ರಾಣಿ ಪಕ್ಷಿಗಳು ಮಲೆನಾಡ ಬದುಕನ್ನು ಸಮೃದ್ಧತೆಯ ಪರಕಾಷ್ಠೆಗೆ ಓಯ್ದಿದ್ದವು. ಅಣಬೆ ಒಂದಕ್ಕೆ ಬಂದರೆ ಚುಳ್ಳಣಬೆ, ಅಕ್ಕಿಅಣಬೆ, ಹೆಗಾಲ, ಕೋರಲ, ಹೈಗನ್ನ ಅಣಬೆಗಳೆಂದು ಹತ್ತಾರು ವಿಧದ ಕಾಡ ಅಣಬೆಗಳನ್ನು ಹುಡುಕಿ ಒಕ್ಕಲಿಗ ಮಹಿಳೆಯರು ರುಚಿ ರುಚಿಕರ ಸ್ವಾದಿಷ್ಟ ಅಡುಗೆ ಮಾಡುತ್ತಿದ್ದರು. ಇನ್ನು ಇಲ್ಲಿನ ಸಹಸ್ರಾರು ಔಷಧಿ ಸಸ್ಯಗಳಂತೂ ಹಾವು, ಹುಚ್ಚುನಾಯಿ ಕಡಿತದಿಂದ ಸರ್ಪಸುತ್ತಿನವರೆಗೆ ಆಧುನಿಕ ಆರೋಗ್ಯ ಶಾಸ್ತ್ರದಲ್ಲಿ ಪರಿಹಾರ ಅಲಭ್ಯವಾಗಿರುವ ಹಲವು ಹತ್ತಾರು ಕಾಯಿಲೆಗಳನ್ನು ನಿವಾರಿಸುವ ಸಾಮಥ್ರ್ಯವಿದ್ದು, ಇಂದಿನ ಅಷ್ಟೇಕೆ ಮುಂದಿನ ತಲೆಮಾರುಗಳಿಗೂ ಜೀವ ರಕ್ಷಣೆಯ ಸೆಲೆಯಾಗಿರುತ್ತವೆ ಎಂದರೆ ತಪ್ಪಾಗಲಾರದು. ಹೀಗೆ ಕಾಡೊಳಗಿನ ಜೀವ ವೈವಿಧ್ಯವೂ ಮಲೆನಾಡ ಬದುಕಿನ ಮೇಲೆ ನೇರ ಪರಿಣಾಮ ಬೀಳುತ್ತಲಿದ್ದು ಇದು ನಾಶವಾಗದಂತೆ ಗಟ್ಟಿ ಮಾಡಲು ದೇವಬನ, ಪಂರ್ಜಳ್ಳಿವನ, ದೇವರಕಾಡು ಇತ್ಯಾದಿ, ಧಾರ್ಮಿಕ ಸಂಸ್ಥೆಗಳ ಮೂಲಕ ಒಂದು ವಿಧವಾದ ಸಾಮಾಜಿಕ ಬೇಲಿ ಯನ್ನು (Social fencing) ಇದರ ಸುತ್ತ ಹೆಣೆಯುವ ಪ್ರಯತ್ನ ಮಾಡಲಾಗಿರುತ್ತದೆ. ಈ ದೇವರಕಾಡು, ಬನ, ವನಗಳಲ್ಲಿ ಜನ ಮರ ಮುಟ್ಟುಗಳನ್ನು ಕಡಿಯುವುದಿರಲಿ ಬಿದ್ದ ಒಣ ಕಟ್ಟಿಗೆ, ದರಗೆಲೆಗಳನ್ನು ಮುಟ್ಟಲು ಅಂಜುವಂತಹ ಭಯ, ಭಕ್ತಿಯ ವಾತಾವರಣ ಏರ್ಪಾಡಾಗಿರುತ್ತದೆ. ಹೀಗೆ ಇದರ ಮೂಲ ಉದ್ದೇಶ ಕಾಡೊಳಗಣ ಈ ಜೀವ ವೈವಿಧ್ಯವನ್ನು ಕಾಪಾಡುವುದೇ ಆಗಿರುತ್ತದೆ. ಇನ್ನು ಮಲೆನಾಡ ಬತ್ತದ ಗದ್ದೆಗಳಂತೂ ನಾಟಿತಳಿಗಳ ಆಗರವಾಗಿತ್ತು. ಹೆಗ್ಗ, ಜೋಳಿಗೆ, ಕರಿದಡಿ, ರತ್ನಚೂಡಿ, ಕಯಮೆ, ಪೀಟಸಾಲ, ಜೀರಸಾಲದಿಂದ ಹಿಡಿದು ಕಂಡು ಕೇಳರಿಯದ ಅದೇನು ಕೇಳ್ತೆ, ಮೊರಡ್ಡ, ಹಳ್ಳಿಂಗ ಹೀಗೆ ನೂರಾರು ನಾಟಿ ಬತ್ತದ ತಳಿಗಳು ಮೊನ್ನೆ ಮೊನ್ನೆವರೆಗೂ ಮಲೆನಾಡ ಹೊಲಗಳಲ್ಲಿ ರಾರಾಜಿಸುತ್ತಿದ್ದವು. ಇವನ್ನು ಹೊಲದಲ್ಲುಳಿಸಿಕೊಳ್ಳುವ ಹಲವು. ಹತ್ತಾರು ರೀತಿ, ರಿವಾಜು, ಧಾರ್ಮಿಕ ಆಚರಣೆಗಳೂ ಇಲ್ಲಿ ಮೈದಳೆದಿದ್ದವು. ಉದಾಹರಣೆಗೆ ಹೊರನಾಡ ಅನ್ನಪೂರ್ಣೇಶ್ವರಿಗೆ ಹೆಗ್ಗ ಬತ್ತದ ಹೊರತಾಗಿ ಬೇರಾವ ಅಕ್ಕಿಯ ಅನ್ನ ನೈವೇದ್ಯ ಮಾಡಿದರೂ ಪವಿತ್ರವಲ್ಲವೆಂಬ ನಂಬಿಕೆಯಿಂದ ಹೊರನಾಡ ಸುತ್ತ ಮುತ್ತಲ ರೈತರ ಹೊಲದಲ್ಲಿ ಈ ತಳಿ ಕಾಣಸಿಗುತ್ತಿತ್ತು. ಈ ನಾಟಿ ಬತ್ತದ ತಳಿಗಳು ಇಳುವರಿಯಲ್ಲಿ ಸುಧಾರಿಸಿದ ಆಧುನಿಕ ತಳಿಗಳಿಗೆ ಹೋಲಿಸಿದಲ್ಲಿ ಸ್ವಲ್ಪ ಹಿಂದೆ ಬೀಳುತ್ತಿದ್ದರೂ ರಸಗೊಬ್ಬರ ಬೇಡದೆ, ಕ್ರಿಮಿಕೀಟ ನಾಶಕ ಹಾವಳಿಗೆ ತುತ್ತಾಗದೆ ಸದೃಢವಾಗಿರುವುದು ಮಾತ್ರವಲ್ಲ ಆಳೆತ್ತರ ಬೆಳೆದು ಜಾನುವಾರುಗಳಿಗೂ ಸಮೃದ್ಧ ಮೇವು ನೀಡುತ್ತಿದ್ದವು. ಇಲ್ಲಿನ ಜಾನುವಾರುಗಳಲ್ಲಿ `ಮಲೆನಾಡ ಗಿಡ್ಡ' ಹಸು ತಳಿ ಅತ್ಯಂತ ವಿಶಿಷ್ಟವಾದದ್ದು. ಸೌಮ್ಯ ಸ್ವಭಾವದ, ಚಿಕ್ಕಗಾತ್ರದ ಈ ಹಸುತಳಿ ಅಸಾಧಾರಣ ರೋಗನಿರೋಧಕ ಶಕ್ತಿ ಹೊಂದಿರುವಂತಹದು. ಇಲ್ಲಿನ ಜಡಿ ಮಳೆ, ಬಿಸಿಲು, ಗಾಳಿಗೆ ಮೈಯೊಡ್ಡಿ ಮೇಯ್ದು ಒಂದೆರಡು ಲೀಟರ್ ಹಾಲು ನೀಡಿದರೂ ಒಂದರ್ಥದಲ್ಲಿ ಇದರ ಸಾಕಾಣಿಕೆಗೆ ಖರ್ಚೇನೂ ಇಲ್ಲದೆ, ಶೂನ್ಯ ಬಂಡವಾಳದ ಹೈನುಗಾರಿಕೆಯಾಗಿರುತ್ತದೆ. ಈ ತಳಿಯಲ್ಲಿ ಅತ್ಯಂತ ಶ್ರೇಷ್ಠ `ಹಸುಗಳಾದ' ಕೌಲುಬಣ್ಣದ `ಕಪಿಲೆ' ಹಸುಗಳು ವೇದಗಳಲ್ಲಿ ಉಲ್ಲೇಖಿತವಾಗಿವೆ. ಇವುಗಳ ಹಣೆ, ಬಾಲದ ತುದಿ ಮತ್ತು ಗೊರಸು ಮೇಲ್ಭಾಗದಲ್ಲಿ ಬಿಳಿ ಬಣ್ಣವಿದ್ದು ಇದರ ಹಾಲು, ಗಂಜಲ, ಸೆಗಣಿ ಎಲ್ಲವೂ ಔಷಧೀಯ ಗುಣ ಹೊಂದಿದ್ದು ಶ್ರೇಷ್ಠವಾಗಿರುವಂತಹದ್ದು ಎನ್ನಲಾಗಿದೆ. ಇದರ ಘೋರ ಪರಿಣಾಮದ ಚಿಹ್ನೆಗಳು ಈಗ ಸ್ಪಷ್ಟವಾಗಿ ಗೋಚರವಾಗತೊಡಗಿವೆ. ಕಾಡುನಾಶದಿಂದ ಸೊಪ್ಪು, ಕಟ್ಟಿಗೆ, ಉರುವಲು ಮತ್ತು ಮೇವಿಗೂ ತೊಂದರೆ ಒದಗಿರುವುದು ಮಾತ್ರವಲ್ಲ ಅಡಕೆ ಕೃಷಿಗೆ ಬೇರುಹುಳ, ಕಂಡು ಕೇಳರಿಯದ ಹಳದಿ ರೋಗಗಳಂತಹ ಪೀಡೆಗಳು ಬೀಳುವಂತಾಗಿವೆ. ಕಾಡು ದಟ್ಟವಾಗಿದ್ದಾಗ ಅಲ್ಲಿನ ಕಾಡು ಹಂದಿಗಳು ತೋಟದೊಳಗಿನ ಮತ್ತು ಹೊರಗಿನ ಈ ಬೇರುಹುಳುಗಳನ್ನು ತಿಂದು ತೇಗುತ್ತಿದ್ದವು. ಹಾಗೇ, ಈ ಹಿಂದೆ ಕಾಡೊಳಗೆ ಹಾಯಾಗಿದ್ದ ಕ್ರಿಮಿ, ಕೀಟಗಳು, ಆಸರೆ ತಪ್ಪಿ ಅಡಕೆ, ಕಾಫಿ, ತೆಂಗು ತೋಟಗಳ ಮೇಲೆ ಹಾವಳಿ ಮಾಡಿರಲೂಬಹುದು. ಮಲೆನಾಡ ಮಹಿಳೆಯರು ತಮ್ಮ ಹಿತ್ತಲನ್ನು ಮರೆತಿರುವುದರಿಂದ ಈಗ ಜನ ತರಕಾರಿ, ಸೊಪ್ಪು, ಹೂವಿಗೆ ಸಂಪೂರ್ಣ ಪೇಟೆಗೆ ಹೋಗಬೇಕಾಗಿದೆ. ಈ ಹಿಂದೆ ಹೇರಳವಾಗಿ ಸಿಗುತ್ತಿದ್ದ ಕರಿಬಾಳೆ ಕಟ್ಟೆ ರೋಗದಿಂದ ಈಗ ಸಂಪೂರ್ಣ ಮಾಯವಾಗಿದೆ. ಮಳೆ ಮತ್ತು ಕಾರ್ಮಿಕರ ಕೊರತೆಯಿಂದ ರೈತರು ಬತ್ತದ ಬೆಳೆಗೆ ತಿಲಾಂಜಲಿ ಇಡುವಂತಾಗಿರುವರು. ಹಾಗಾಗಿ ಮಲೆನಾಡ ಗಿಡ್ಡದಂತಹ ಜಾನುವಾರಿಗೆ ಮೇವು ಸಿಗದಾಗಿದೆ. ಜತೆಗೆ ಅರಣ್ಯ ಒತ್ತುವರಿ, ಕಾಡುನಾಶದಿಂದ ಮೇವಾಡಿಸಲೂ ಜಾನುವಾರಿಗೆ ಅಸಾಧ್ಯವಾಗಿದೆ. ಅಂದು ಮಲೆನಾಡಿನ ಕಾಡುಗಳು ಎಷ್ಟು ದಟ್ಟವಾಗಿದ್ದವು ಎನ್ನುವುದಕ್ಕೆ ನಮ್ಮ ರಾಷ್ಟ್ರಕವಿ ಕುವೆಂಪುರವರ ರಚನೆಯಿಂದಲೇ ಅರಿಯಬೇಕಾಗುತ್ತದೆ. `ಆಕಾಶಕ್ಕಿಂತಲೂ ಕಾಡೆ ಸರ್ವವ್ಯಾಪಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡಿರುತ್ತದೆ. ಪೃಥ್ವಿಯನ್ನೆಲ್ಲ ಹಬ್ಬಿ ತಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೊ ಒಂದಿನಿತಿನಿತೆ ಅಂಗೈಯಗಲದ ಪ್ರದೇಶವನ್ನು ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ, ಅಷ್ಟೆ. ಅದೂ ಕೂಡ ಅವನು ನಿತ್ಯವೂ ಜಾಗರೂಕವಾಗಿ ತಾನು ಗೆದ್ದುಕೊಂಡಿದ್ದನ್ನು ನಿರಂತರವೂ ರಕ್ಷಿಸಿಕೊಳ್ಳುತ್ತಾ ಹೋಗುವುದನ್ನು ಮರೆತನೆಂದರೆ, ಬಹುಬೇಗನೆ ಹಳು ಬೆಳ್ದು ಮತ್ತೆ ಅದು ಕಾಡಿನ ವಶವಾಗಿ ಬಿಡುತ್ತದೆ' (ಮಲೆಗಳಲ್ಲಿ ಮದುಮಗಳು, ಪುಟ 125). ಆದರೆ ಆ ದಟ್ಟಕಾನನಗಳ ಸ್ಥಿತಿ ಈಗ ಹೇಗಿದೆ ಎಂಬುದನ್ನು ಅರಿಯಲು ನಮ್ಮ ಕಮ್ಮರಡಿ ಪ್ರೌಢಶಾಲೆಯ ಹಿಂದಿರುವ `ಬೋಗಿ ಹಾಡ್ಯವೇ' ಸಾಕ್ಷಿ. ಆ ಕಾಡಿನಲ್ಲಿ ಪಶ್ಚಿಮ ಘಟ್ಟದ ವಿಶಿಷ್ಟ ಮರವಾದ ಬೋಗಿ ಮರಗಳು ನೆಟ್ಟಗೆ ಸಾಲುಸಾಲಾಗಿ ಆಕಾಶದೆತ್ತರ ಒಂದರ ಪಕ್ಕದಲ್ಲಿ ಮತ್ತೊಂದು ನಿಂತಿದ್ದು ಊರಜನ ಅದಕ್ಕೆ ಬೋಗಿ ಹಾಡ್ಯ ಎಂದಿದ್ದರು. ನಾನು ಹೈಸ್ಕೂಲು ಓದುತ್ತಿದ್ದ ಸಮಯ ನನ್ನ ಮನೆ ಆ ಬೋಗಿ ಹಾಡ್ಯದ ಆಚೆ ಕುಂಬ್ರಕೋಡಿನಲ್ಲಿತ್ತು. ಆ ಕಾಡಿದ ದಟ್ಟತೆಗೆ ನಾವು ಅದೆಷ್ಟು ಭಯ ಬೀಳುತ್ತಿದ್ದೆವು ಅಂದರೆ, ನನಗೆ ಒಬ್ಬನೆ ಅದರಿಂದ ನುಸುಳಿ ಬರಲು ಸಾಧ್ಯವೇ ಇರಲಿಲ್ಲ. ಸಂಜೆ ನಂತರ ಯಾರು ಹೋಗುವುದೂ ಅಸಾಧ್ಯದ ಮಾತು. ಏನಿದ್ದರೂ ಕಮ್ಮರಡಿ ಪೇಟೆ ಸುತ್ತಿ ಬೈರಣ ಬಯಲಿನ ಮೂಲಕವೇ ಸರಿ. ಆದರೆ ಈಗ, ಬಕ್ಕತಲೆಯಲ್ಲಿ ಕಷ್ಟಪಟ್ಟು ಹುಡುಕಬೇಕಾದ ಕೂದಲುಗಳಂತೆ ಅಲ್ಲಲ್ಲಿ ಮರಗಳಿದ್ದು, ಹೆಚ್ಚು ಕಡಮೆ ಬಟ್ಟಂ ಬಯಲಾಗಿದೆ ಆ ಬೋಗಿಹಾಡ್ಯ. ಒಟ್ಟಾರೆ ಮಲೆನಾಡ ಆರ್ಥಿಕ ಮತ್ತು ಸಾಂಸ್ಕೃತಿಕ ಬದುಕಿನ ಬುಡಕ್ಕೆ ಕೊಡಲಿ ಏಟು ಬೀಳುವಂತಾಗಿದೆ. ಪರಿಣಾಮ ಅಷ್ಟೇ ಘೋರವಾಗತೊಡಗಿದೆ. ಮಲೆನಾಡು ಇಂದು ವಲಸೆ, ಸಾಮಾಜಿಕ ಅಶಾಂತಿ, ಕೋಮುಕಲಹ, ಅಪರಾಧಗಳ ಅಗರವಾಗಿದೆ. ರೈತ ಆತ್ಮಹತ್ಯೆಯಲ್ಲಿ ರಾಜ್ಯದಲ್ಲೇ ಮುಂದಿದೆ. ಮಿಗಿಲಾಗಿ ಈಗೀಗ ತಲೆ ಎತ್ತಿರುವ ನಕ್ಸಲ್ ಸಮಸ್ಯೆ ಇಂದು ಮಲೆನಾಡ ಉಳಿವಿಗೇ ಮಾರಕವಾಗಿದೆ. ಹಾಗಾಗಿ ರೈತರು, ಪ್ರಜ್ಞಾವಂತ ಜನರು ಅದರಲ್ಲೂ ಮುಖ್ಯವಾಗಿ ಮಲೆನಾಡ ಯುವಜನತೆ ಎಚ್ಚೆತ್ತುಕೊಳ್ಳುವುದು ಇಂದು ತುರ್ತು ಅಗತ್ಯವಾಗಿದೆ. ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ (ಕೃಪೆ: ಹಿತ್ತಲ ಗಿಡ)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|