ಕನ್ನಡದ ಮೇರುಕೃತಿ, ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗವು ಜೀವನಾನುಭವದ ಸಾರವಾಗಿದ್ದು ಸಕಲರಿಗೂ ಒಳಿತನ್ನು ಬಯಸುವ ಕೃತಿಯಾಗಿದೆ. ಎಲ್ಲಾ ವೇದಗಳ ಸಾರಕ್ಕೆ, ಜೀವನಾನುಭವಗಳನ್ನು ಬೆರೆಸಿ ಮಾಡಿದ ಅಮೃತವೇ ಮಂಕುತಿಮ್ಮನ ಕಗ್ಗ. ಇಲ್ಲಿನ ಹಿತನುಡಿಗಳನ್ನು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡರೆ, ಜೀವನದಲ್ಲಿನ ಬಹುತೇಕ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸಮಾಜಕಾರ್ಯವೆನ್ನುವುದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ವೃತ್ತಿ. ವ್ಯಕ್ತಿ, ಸಮಾಜಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಧ್ಯಯಿಸಿ, ಸೂಕ್ತ ಪರಿಹಾರ ಒದಗಿಸುವುದು ಈ ವೃತ್ತಿಯ ಉದ್ದೇಶ. ಇದಕ್ಕೆ ಸೂಕ್ತ ತರಬೇತಿ, ತತ್ತ್ವಾದರ್ಶಗಳ ಜೊತೆಗೆ ಜೀವನಾನುಭವವು ಪ್ರಮುಖವಾದುದು. ಈ ಅನುಭವಗಳಿಗೆ ಡಿ.ವಿ.ಜಿ. ಯಂತಹ ಚಿಂತಕರ ವಾಸ್ತವವಾದಿಗಳ ಬರಹಗಳು ಅತ್ಯಮೂಲ್ಯವಾದವು. ಇವರ ಬರಹಗಳಲ್ಲಿ ಮುಕ್ತಿ ದೇವರು ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದರೂ, ಸಮಸ್ಯೆಗಳನ್ನು ಎದುರಿಸಿ ಸುಖೀಜೀವನ ನಡೆಸುವ ಕಲೆಯನ್ನು ಕಲಿಸುತ್ತದೆ.
ಆದ್ದರಿಂದ ನಾನು, ಕನ್ನಡದ ಉತ್ತಮ ಕೃತಿಯೊಂದು ಸಮಾಜಕಾರ್ಯಕ್ಕೆ ನೀಡಿರುವ ಉತ್ತಮ ಕೊಡುಗೆಯೆಂದು ಈ ಬರಹದಲ್ಲಿ ತೋರಿಸಲು ಪ್ರಯತ್ನಿಸಿದ್ದೇನೆ. ಇದನ್ನು ಸಮಾಜಕಾರ್ಯಕರ್ತರನ್ನು ತರಬೇತಿಗೊಳಿಸುವವರು ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥೈಸಲು, ತರಬೇತುದಾರರು ವೃತ್ತಿ ಅಭ್ಯಾಸ ಮಾಡುವಾಗ ಇಲ್ಲಿನ ಅಂಶಗಳನ್ನು ಬಳಸಿಕೊಂಡರೆ ಪರಿಣಾಮಕಾರಿಯಾಗಿ ಸಮಸ್ಯೆಗಳಿಗೆ ಸ್ಪಂದಿಸಬಹುದೆಬುಂದು ನನ್ನ ನಂಬಿಕೆ. ಸಮಾಜಕಾರ್ಯಕರ್ತ ಸಮಾಜಕ್ಕೆ ಎಷ್ಟು ಉಪಯೋಗಿಯಾಗಿರಬೇಕು ಎಂಬುದಕ್ಕೆ ಈ ಕೆಳಗಿನ ಸಾಲುಗಳು ಉತ್ತರಿಸುತ್ತವೆ. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಗೆ ಎಲ್ಲರೊಳಗೊಂದಾಗು- ಮಂಕುತಿಮ್ಮ ವೃತ್ತಿಯಲ್ಲಿ ಬರುವ ಕಷ್ಟ ಕಾರ್ಪಣ್ಯಗಳನ್ನೆಲ್ಲಾ ತಡೆದು, ದೀನದುರ್ಬಲರಿಗೆ ಸಹಾಯಮಾಡಬೇಕು, ಎಲ್ಲರೊಳಗೆ ಒಂದಾಗಿ ಬಾಳುವೆ ನಡೆಸುವುದು ಅಗತ್ಯ ಎಂಬುದು ಇದರರ್ಥ. ಸಾಮಾನ್ಯವಾಗಿ ನಾವು ವೃತ್ತಿಗೆ ಹೊಸದಾಗಿ ಬಂದು ಈ ಪ್ರಪಂಚದಲ್ಲಿರುವ ಕಷ್ಟಗಳೆಲ್ಲವನ್ನೂ ತೊಡೆದುಹಾಕಿ ಬಿಡುತ್ತೇನೆ ಎಂಬ ಕಲ್ಪನೆಯಿರುತ್ತದೆ. ಇದು ಎಷ್ಟೋ ಸಂದರ್ಭದಲ್ಲಿ ನಿರಾಸೆ ಆಗಲಿಕ್ಕೂ ಕಾರಣವಾಗುತ್ತದೆ. ಆದ್ದರಿಂದ, ಎಷ್ಟೋ ಆದರ್ಶಗಳ ಕನಸುಗಳನ್ನು ಹೊತ್ತು ಬಂದು ಈ ವೃತ್ತಿಯಲ್ಲಿ ಬಹಳ ಬೇಗ ನಿರಾಸೆಯನ್ನು ಕಾಣುತ್ತೇವೆ. ಅದಕ್ಕೆ ಹಲವಾರು ಕಾರಣಗಳು, ಅಂಥ ಸಂದರ್ಭಗಳಲ್ಲಿ ಈ ಕಗ್ಗ ನಮ್ಮ ಉತ್ಸಾಹವನ್ನು ಹಿಗ್ಗಿಸುತ್ತದೆ. ಬಲುಹಳೆಯ ಲೋಕವಿದು, ಬಲುಪುರಾತನ ಲೋಕ ಬೆಳೆದಿರ್ಪುದಿದು ಕೋಟಿರಸಗಳನು ಪೀರ್ದು ಸುಲಭವಲ್ಲಿದರ ಸ್ವಭಾವವನು ಮಾರ್ಪಡಿಸೆ ಸಲದಾತುರೆಯದಕೆ- ಮಂಕುತಿಮ್ಮ ಸಮಾಜಕ್ರಿಯೆ, ಸಮಾಜಬದಲಾವಣೆ ಮಾಡಲು ಪ್ರಯತ್ನಿಸುವಂತಹ ಸಮಾಜಕಾರ್ಯಕರ್ತರು ಈ ಅಂಶವನ್ನು ತಿಳಿದಿದ್ದರೆ ಒಳ್ಳೆಯದು. ಸಮಾಜದ ನೀತಿ, ನಿಯಮ, ಸಂಪ್ರದಾಯಗಳನ್ನು ಬದಲಾಯಿಸುವುದಕ್ಕೆ ಆತುರಪಡಬೇಡಿ ಎಂಬ ಮಾತುಗಳು ವ್ಯಕ್ತವಾಗುತ್ತವೆ. ಈ ಮಾತುಗಳಿಗೆ ಹೊಂದಿಕೊಂಡಂತೆ ಮತ್ತೊಂದು ಪದ್ಯವಿದೆ: ಮತಿವಂತರಿದ್ದಲ ನಮ್ಮ ಹಿಂದೆಯುಮಿಲ್ಲಿ ಹಿತಚಿಂತಕರು ಜನಕೆ, ಕೃತಪರಿಶ್ರಮರು? ಅತಿವೈದ್ಯದಿಂದ ಹೊಸರುಜಿನಕಡೆಯಾದೀತೋ ಮಿತಿಯಂ ನವೀಕರಣ- ಮಂಕುತಿಮ್ಮ ನಮ್ಮ ಪೂರ್ವಿಕರೂ ಸಮಸ್ಯೆಗಳನ್ನು ಬಗೆಹರಿಸಲು ತುಂಬಾ ಪ್ರಯತ್ನಿಸಿದ್ದಾರೆ. ಅವರಲ್ಲಿ ನಮಗಿಂತ ಬುದ್ಧಿವಂತರು, ಅನುಭವಸ್ಥರೂ ಇದ್ದರು, ಅವರು ತಿಳಿವಳಿಕೆಯಿಂದ ಕೆಲಸ ಮಾಡಿದ್ದರು. ಅತಿಯಾದ ಔಷಧಿಯನ್ನು ಸೇವಿಸುವುದರಿಂದ ಒಂದು ರೋಗವು ಹೋಗಿ ಇನ್ನೊಂದು ಹೊಸರೋಗ ಬರುವ ಸಾಧ್ಯತೆಯಿದೆ, ಎನ್ನುವ ತತ್ತ್ವ ನಮ್ಮ ಬದಲಾವಣೆ ಮತ್ತು ಅಭಿವೃದ್ಧಿಪರಿಕಲ್ಪನೆಗೆ ಹಿಡಿದ ಕನ್ನಡಿಯಾಗಿದೆ. ಸಮಾಜಕಾರ್ಯದ ಸುಸ್ಥಿರಾಭಿವೃದ್ಧಿಗೆ ಈ ಪದ್ಯ ದೀಪವಾಗುತ್ತದೆ. ಸಮಸ್ಯೆಗಳಿಗೆ ಸಂಪೂರ್ಣವಾಗಿ ಪರಿಹಾರಗಳನ್ನು ಕಂಡುಕೊಳ್ಳುವುದರ ಬಗ್ಗೆ ಡಿ.ವಿ.ಜಿ. ಯವರು ಅದ್ಭುತವಾಗಿ ಹೀಗೆ ಹೇಳಿದ್ದಾರೆ. ಸಾರ್ವಲೌಕಿಕ ಸೌಖ್ಯ ನೆಲಸುವನ್ನೆಗಮಿಳಿಯೊ ಳೊರ್ಪನುಂ ಸುಖಿಯಲ್ತು, ದಿಟದಿ, ಪೂರ್ಣದಲಿ ಒರ್ಬನುಬ್ಬಸದ ಬಿಸಿ ವಿಷವಾಯುವಾಗಿ ತಾ ನುರ್ವರೆಯ ಮುಸುಕೀತು-ಮಂಕುತಿಮ್ಮ ಪ್ರಪಂಚದಲ್ಲಿ ಎಲ್ಲರೂ ಸುಖವಾಗಿ ಇದ್ದ ಹೊರತು, ಈ ಜಗತ್ತಿನಲ್ಲಿ ನಾವು ನೆಲೆಸುವವರಲ್ಲಿ ಯಾರೂ, ನಿಜವಾಗಿ, ಪೂರ್ತಿಯಾಗಿ ಸುಖಿಯಾಗಿರಲಾರರು. ಏಕೆಂದರೆ ಒಬ್ಬನ ಬಿಸಿ ಉಸಿರು, ವಿಷಾನಿಲವಾಗಿ ಈ ಭೂಮಿಯನ್ನೇ ಸಂಪೂರ್ಣವಾಗಿ ಮುಸುಕಬಹುದು. ಪ್ರತಿಯೊಬ್ಬರ ಒಳಿತನ್ನು ಬಯಸಬೇಕು ಯಾರೊಬ್ಬರ ಸಮಸ್ಯೆಯನ್ನು ನಾವು ಕಡೆಗಣಿಸಬಾರದೆಂದು ಈ ಮಾತುಗಳು ಎಚ್ಚರಿಸುತ್ತವೆ. ಸಮಾಜಕಾರ್ಯದಲ್ಲಿ ವ್ಯಕ್ತೀಕರಣ ಎಂಬುದೊಂದು ಪರಿಕಲ್ಪನೆಯಿದೆ. ಇದರಲ್ಲಿ ಪ್ರತಿಯೊಂದು ಜೀವಿಗೂ ಇರುವ ಆತ್ಮಗೌರವವನ್ನು ರಕ್ಷಿಸಬೇಕೆಂದು ತಿಳಿಸುತ್ತದೆ. ಈ ಅಂಶವನ್ನು ಕವಿ ಡಿ.ವಿ.ಜಿ.ಯವರು ಅತ್ಯುತ್ತಮವಾಗಿ ಈ ರೀತಿ ವಿವರಿಸಿದ್ದಾರೆ. ಗೌರವಿಸು ಜೀವನವ, ಗೌರವಿಸು ಚೇತನವ ಆರದೋ ಜಗವೆಂದು ಭೇದವೆಣಿಸದಿರು ಹೋರುವುದೆ ಜೀವನ ಸಮೃದ್ಧಗೋಸುಗ ನಿನಗೆ ದಾರಿಯಾತ್ಮೋನ್ನತಿಗೆ -ಮಂಕುತಿಮ್ಮ ವೃತ್ತಿಕಾರ್ಯ ಎಂಬುದು ಸಮಾಜಕಾರ್ಯದ ಒಂದು ವಿಧಾನವಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿಯ ಸಮಸ್ಯೆಯನ್ನು ಬಗೆಹರಿಸುವ ಗುಣ ಹೊಂದಿದೆ. ಈ ಸಂದರ್ಭದಲ್ಲಿ ಮುಕ್ತವಾದ ಭಾವನೆ (ವೆಂಟಿಲೆಷನ್ ಆಫ್ ಫೀಲಿಂಗ್) ಎಂಬ ತಂತ್ರ ಒಂದಿದೆ. ಅಂದರೆ ವ್ಯಕ್ತಿಯ ಭಾವನೆಗಳನ್ನು, ಕಷ್ಟಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟು ಆ ಮೂಲಕ ವ್ಯಕ್ತಿಯನ್ನು ಅರ್ಥೈಸಿಕೊಂಡು ಅವನ ಸಮಸ್ಯೆ ಬಗೆಹರಿಸುವ ತಂತ್ರವದು. ಈ ತಂತ್ರವನ್ನು ಡಿ.ವಿ.ಜಿ.ಯವರು ಸೊಗಸಾಗಿ ನಾಲ್ಕು ಸಾಲುಗಳಲ್ಲಿ ವಿವರಿಸಿದ್ದಾರೆ. ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು ಮರುಗನೊಂದುವುದು ಪೊನ್ ಕಾದ ಬಳಿಕ ನರ ಜೀವವಂತು ಶುಚಿಯಹುದು ದುಃಖಶ್ರುವಿಂ ತರುವಾಯ ಪುನರುದಯ- ಮಂಕುತಿಮ್ಮ ಬಿಸಿಲಿನ ಬೇಗೆ ಆರಿದ ಬಳಿಕ, ಮಳೆಬಿದ್ದಾಗ, ಸಸಿ ಹುಟ್ಟುತ್ತದೆ. ಬಂಗಾರವಾದರೋ ಪುಟವಿಟ್ಟು ಕಾಸಿದ ಬಳಿಕ, ಹೊಳಪನ್ನು ತಳೆಯುತ್ತದೆ. ಅಂತೆಯೇ ಮನುಷ್ಯ ಜೀವನವೂ ದುಃಖದಿಂದ ಕಣ್ಣೀರನ್ನು ಸುರಿಸಿದ ಬಳಿಕ ಶುಚಿಯಾಗಿ ಪುನರ್ಜನ್ಮ ಪಡೆಯುತ್ತದೆ. ವ್ಯಕ್ತಿಯನ್ನು ಅಥವಾ ಸಮಾಜವನ್ನು ಅರ್ಥೈಸಿಕೊಳ್ಳಲು ಅಥವಾ ಅದರ ಸಮಸ್ಯೆಯನ್ನು ಬಗೆಹರಿಸಲು ಅದರಲ್ಲಿರುವ ಅಂತಃಶಕ್ತಿಯನ್ನು ಬಳಸಿಕೊಳ್ಳಬೇಕೆಂಬುದರ ಬಗ್ಗೆ ಎಲ್ಲರೂ ತಿಳಿದಿರಬೇಕಾದ ನುಡಿಮುತ್ತೊಂದನ್ನು 4 ಸಾಲುಗಳಲ್ಲಿ ನೀಡಿದ್ದಾರೆ. ಅದು ಹೀಗಿದೆ: ಮರವನ್ನರಿಯುವೊಡೆ ಬುಡವ ಕೀಳಲು ಬೇಡ ತರಿಯಬೇಡೆಲೆಕಡ್ಡಿಗಳ ಪರಿವೀಕ್ಷಣೆಕೆ ಎರೆ ನೀರ, ಸುರಿಗೊಬ್ಬರವ, ಕೆದುಕು ಪಾತಿಯನು ನೀರುಕಿಸುತ ತಳಿರಲರ- ಮಂಕುತಿಮ್ಮ ಒಬ್ಬ ವ್ಯಕ್ತಿಯ, ಸಮಾಜದ ಉದ್ಧಾರಕ್ಕೆ ಆ ವ್ಯಕ್ತಿಯ ಮೂಲವನ್ನು ಕೆದಕಿ, ಕೆಡಕುಗಳನ್ನು ಕೊಂಡಾಡಿದರೆ ಸುಖವಿಲ್ಲ. ಅವನ ಒಳ್ಳೆಯ ಅಂಶಗಳಿಗೆ ನೀರು ಎರೆದು, ಗೊಬ್ಬರವನ್ನು (ಅವಶ್ಯಕತೆಗಳನ್ನು ಪೂರೈಸುವುದರಿಂದ) ಆ ವ್ಯಕ್ತಿಗೆ, ಅಥವಾ ಸಮಾಜಕ್ಕೆ ಉಪಯೋಗವಾಗುವಂತೆ ಮಾಡಿದರೆ, ಆ ವ್ಯಕ್ತಿ, ಸಮಾಜ ಸಂತೋಷಗೊಳ್ಳುವುದನ್ನು ನೋಡಬಹುದೆಂದು ನೀತಿ ಹೇಳುತ್ತಾರೆ. ಸಮಾಜಕಾರ್ಯದಲ್ಲಿ ಅನುಭೂತಿಶಕ್ತಿ ಎಂಬುದೊಂದು ಅಂಶ ಅತ್ಯಂತ ಪ್ರಮುಖವಾದುದು ಮುಖ್ಯವಾಗಿ ವ್ಯಕ್ತಿಕಾರ್ಯದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ತಪ್ಪು ಮಾಡಿದ ವ್ಯಕ್ತಿಯನ್ನು ಕುರಿತು, ಈಗೇಕೆ ಮಾಡಿದ, ತಪ್ಪು ಮಾಡಿಬಿಟ್ಟ ಎಂದು ಹೇಳುವಾಗ ಅವನ ಸಂದರ್ಭದಲ್ಲಿ ಒಂದು ಕ್ಷಣ ನಾವು ನಿಂತು ಯೋಚಿಸುವುದೇ ಅನುಭೂತಿಶಕ್ತಿ, ಈ ಅಂಶವನ್ನು ಕುರಿತು ಡಿ.ವಿ.ಜಿ.ಯವರು ಈ ರೀತಿ ಹೇಳುತ್ತಾರೆ. ಪಾಪವೆಂಬುದದೇನು ಸುಲಭಸಾಧನೆಯಲ್ಲ ತಾಪದಿಂ ಬೇಯದವನ್ ಅದನೆಸೆಪನಲ್ಲ ವಾಪಿಯೊಳವ ದಡದಿ ನಿಂತಾತನರಿವನೇಂ? ಪಾಪಿಯೆದೆಯೊಳಕಿಳಿಯೊ - ಮಂಕುತಿಮ್ಮ ಪಾಪ ಅಥವಾ ತಪ್ಪು ತಿದ್ದುವುದು ಅಷ್ಟು ಸುಲಭವಾದ ಕೆಲಸವೇನಲ್ಲ. ಅದನ್ನು ಎಲ್ಲರೂ ಮಾಡುವುದಕ್ಕೂ ಆಗುವುದಿಲ್ಲ. ಕಷ್ಟಪಟ್ಟು ಬೇಗೆಯಿಂದ ನೊಂದವನು ಅದನ್ನು ಮಾಡಲಾಗುವುದಿಲ್ಲ. ಬಾವಿಯ ದಡದಲ್ಲಿ ನಿಂದು, ಅದರ ಆಳ ತಿಳಿಯಲಾದೀತೆ? ಆ ಪಾಪ ಅಥವಾ ಸಮಸ್ಯೆಯಲ್ಲಿ ಆತ ಏಕೆ ಸಿಕ್ಕಿಹಾಕಿಕೊಂಡನೆಂದು ತಿಳಿಯಬೇಕು. ಇದನ್ನು ತಿಳಿಯದೇ ನೀನು ಯಾವ ನಿರ್ಣಯಕ್ಕೂ ಬರಬೇಡ ಎಂದು ತಿಳಿಸುತ್ತಿದ್ದಾರೆ. ಹೊಂದಾಣಿಕೆ ಎಂಬುದು ಜೀವನದಲ್ಲಿ ಬಹುಮುಖ್ಯ. ಎಲ್ಲಾ ಸಮಸ್ಯೆಗಳಿಗೂ ಬಾಳಿನಲ್ಲಿ ಪರಿಹಾರಗಳು ಇರುವುದಿಲ್ಲ. ಕೆಲವಕ್ಕೆ ಪರಿಹಾರವಿದ್ದರೆ, ಕೆಲವನ್ನು ಹೊಂದಾಣಿಕೆ ಮುಖಾಂತರ ಬಗೆಹರಿಸಿಕೊಳ್ಳಬೇಕು. ಉದಾಹರಣೆಗೆ, ಒಂದು ಮಗು ಯಾರದೋ ಮನೆಯಲ್ಲಿ ಹುಟ್ಟಿದಾಗ, ಕಷ್ಟಗಳಿರಲಿ, ಸುಖವಿರಲಿ ಹೊಂದಾಣಿಕೆ ಅನಿವಾರ್ಯ. ಇದಕ್ಕೆ ಮಂಕುತಿಮ್ಮನ ಕಗ್ಗದಲ್ಲಿ: ಹೊರಗು ಹೊರೆಯಾಗದವೊಲ್ ಒಳಗನನುಗೊಳೀಸಿ, ನೀ ನೊಳಗು ಶೆಕೆಯಾಗದವೊಲ್ ಅಳವಡಿಸಿ ಹೊರಗು ಸರಿಸಮ ದೊಳೆರಡನುಂ ಬಾಳಿನಲ್ಲಿ ಜೋಡಿಪುದೆ ಪರಮಜೀವನ ಯೋಗ- ಮಂಕುತಿಮ್ಮ ಹೊರಗಡೆ ಹೊರೆಯಾದರೆ, ಒಳಗನ್ನು ಹೊಂದಿಸಿಕೊಂಡು, ಒಳಗಡೆ ಹೊರೆಯಾದರೆ ಹೊರಗನ್ನು ಜೋಡಿಸಿಕೊಂಡು, ಇವುಗಳರೆಡನ್ನು ಸರಿಸಮನಾಗಿ ಜೀವನವನ್ನು ನಡೆಸುವುದೇ ಶ್ರೇಷ್ಠವಾದ ಬಾಳು ಎಂದಿದ್ದಾರೆ. ಅಂದರೆ ಸಮಸ್ಯೆ ಬಂದಾಗ ನಮ್ಮ ಜೀವನದಲ್ಲಿ ಚಿಕ್ಕ ಹೊಂದಾಣಿಕೆಗಳ ಮುಖಾಂತರ ಸಮಸ್ಯೆ ಬಗೆಹರಿಸಿಕೊಂಡು ಉತ್ತಮ ಜೀವನ ನಿರ್ವಹಿಸಬಹುದೆಂದು ಎಲ್ಲರಿಗೂ ತಿಳಿವಳಿಕೆ ನೀಡುತ್ತಿದ್ದಾರೆ. ಸಮಾಜಕಾರ್ಯದ ಮುಖ್ಯ ಉದ್ದೇಶ ಜನರಿಗೆ ಸಹಾಯ ಮಾಡುವುದರ ಮೂಲಕ ತಮಗೆ ತಾವೇ ಸಹಾಯ ಮಾಡಿಕೊಳ್ಳುವಂತೆ ಮಾಡುವುದು. ಅಂದರೆ, ಇಲ್ಲಿ ವ್ಯಕ್ತಿಯ ಸಾಧ್ಯತೆ ಎಂಬುದು ಅತ್ಯಂತ ಮುಖ್ಯ ಅವನ ಅಂತಃಶಕ್ತಿಯನ್ನು ಹೊರತೆಗೆದು ಬಳಸಿಕೊಳ್ಳುವುದು ನಿಜವಾದ ಸಮಾಜಕಾರ್ಯ. ಅದಕ್ಕೆ ಡಿ.ವಿ.ಜಿ.ಯವರು ಸುಂದರವಾಗಿ ಈ ರೀತಿ ಹೇಳುತ್ತಾರೆ. ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ಘನಮಹಿಮನೊಳ್ ಜ್ವಲಿಸುತಿತರರೊಳ್ ನಿದ್ರಿಸುತೆ ಅನಲನೆಲ್ಲರೊಳಿಹನು- ಮಂಕುತಿಮ್ಮ ನಮಗಿರುವ ಕಣ್ಣು ಬಾಯಿಗಳೇ ವಾಲ್ಮೀಕಿಗೂ ಇರುವುದು. ಅವನಿಗೆ ಬರೆಯಲು ಸಾಧ್ಯವಾದರೆ ನಮಗೆ ಸಾಧ್ಯವಾಗದೆ? ಶ್ರೇಷ್ಠವಾದ ಹಿರಿಮೆಯುಳ್ಳವನಲ್ಲಿ ಉರಿಯುತ್ತಿರುವ ಮತ್ತು ಇತರರಲ್ಲಿ ನಿದ್ರಿಸುತ್ತಿರುವ ಅಗ್ನಿ, ಎಲ್ಲರಲ್ಲೂ ಇದ್ದಾನೆ. ಅದನ್ನು ಗುರುತಿಸಿ ಮನೆ ದೀಪ ಬೆಳಗಿಸುವ ಕೆಲಸ ಸಮಾಜಕಾರ್ಯಕರ್ತನಿಂದ ಸಾಧ್ಯ ಎಂಬುದನ್ನು ಈ ಮೇಲಿನ ಸಾಲುಗಳು ವಿವರಿಸುತ್ತವೆ. ತಾಳ್ಮೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮುಖ್ಯವಾದುದು. ಅದರಲ್ಲೂ ವ್ಯಕ್ತಿಯ ಮಾನಸಿಕ ಮತ್ತು ಸಾಮಾಜಿಕ ಅಂಶಗಳ ಮೇಲೆ ಕೆಲಸ ಮಾಡುವ ಸಮಾಜಕಾರ್ಯದಲ್ಲಿ ತಾಳ್ಮೆಯೆಂಬುದು ಅತ್ಯವಶ್ಯಕ. ಒಂದು ಕಡೆ ಅರ್ಥಿ, ಮತ್ತೊಂದು ಕಡೆ ಸಮಾಜಕಾರ್ಯಕರ್ತ ತುಂಬಾ ಆತುರತೆ ತೋರುವುದನ್ನು ನೋಡಿದ್ದೇವೆ. ಸಮುದಾಯದಲ್ಲೂ ಅಭಿವೃದ್ಧಿ ಎಂಬುದು ಅತ್ಯಂತ ಬೇಗ ಸಂಭವಿಸಬೇಕೆಂದು ಬಯಸುತ್ತಾರೆ. ಅವರಿಗೆ ಇಲ್ಲೊಂದು ಕಿವಿಮಾತಿದೆ. ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? ಪಾಲುಂಟು ಕಾಲಮ್ಗೆ ನಮ್ಮ ಕೃಷಿಗಳಲಿ ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? ತಾಳುಮೆಯ ಪರಿಪಾಟ -ಮಂಕುತಿಮ್ಮ ಬೆಳಗ್ಗೆ ಕಾಳನು ಬಿತ್ತಿದರೆ, ಸಂಜೆ ಪೈರಾಗುತ್ತದೆಯೇ?, ಅಕ್ಕಿಯನ್ನು ಬೇಯಿಸದಿದ್ದರೆ ಅದು ಅನ್ನವಾಗುವುದೇ? ನಮ್ಮ ಜೀವನದಲ್ಲಿ ಪ್ರತಿಯೊಂದಕ್ಕೂ ಒಂದು ನಿರ್ದಿಷ್ಟ ಸಮಯವಿದೆ. ಸಮಯದ ಪಾತ್ರ ಜೀವನದಲ್ಲಿ ಅತ್ಯಂತ ಹೆಚ್ಚು. ಇದನ್ನು ಸಮಾಜಕಾರ್ಯಕರ್ತ ಅರಿಯುವುದು ಒಳ್ಳೆಯದು. ಸಾಮಾನ್ಯವಾಗಿ ಹಿಂದಿನಿಂದಲೂ ಸಮಾಜಸೇವೆಗೆಂದು ಅನುಕೂಲಸ್ಥರು, ಹಣಕಾಸಿನ ನೆರವನ್ನು ನೀಡುತ್ತಾ ಬಂದಿದ್ದಾರೆ. ಇದರಲ್ಲಿ ಬಹುತೇಕ ಜನರು ಸ್ವಾರ್ಥ ಸಾಧನೆಗಾಗಿ ಸಹಾಯ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಂಸ್ಥಾ ಸಾಮಾಜಿಕ ಜವಾಬ್ದಾರಿ (Corporate Social Responsibility) ಎಂಬುದು ಬೆಳಕಿಗೆ ಬಂದಿದೆ. ಈ ಬೆಳವಣಿಗೆ ಒಳ್ಳೆಯದೆ. ಆದರೆ, ಕೊಡುವವರ ಉದ್ದೇಶ ತೆರಿಗೆಯಿಂದ ತಪ್ಪಿಸಿಕೊಳ್ಳಲೋ, ತಾವು ಮಾಡುತ್ತಿರುವ ಅನಾಚಾರಗಳ ಬಗ್ಗೆ ಬಾಯಿ ಮುಚ್ಚಿಸಲೋ, ತನ್ನ ಸರಕು ಮಾರಾಟ ಮಾಡಲೋ ಬಳಸಿಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಬಳಕೆಯಾಗುತ್ತಿರುವ ಹಣ ಸತ್ಯದಿಂದ ಕೂಡಿಲ್ಲ. ಡಿ.ವಿ.ಜಿ.ಯವರ ಈ ಕವನ ಸಂದರ್ಭೋಚಿತವಾಗಿದೆ. ಮುದಿಕುರುಡಿ ಹೊಂಗೆಯನು ಬಾದಾಮಿ, ಕೋ ಯೆನುತ ಪದುಳದಿಂ ಮೊಮ್ಮಗಂಗೆ ಕೊಡಲು ಸಿಹಿಯಹುದೆ? ಹೃದಯವೊಳಿತದೊಡೇಂ? ತಿಳಿವಿಹುದೆ? ಜಾಣಿಹುದೆ? ಸುಧೆ ಬಂತೆ ಸುಲಭದಲಿ? -ಮಂಕುತಿಮ್ಮ ಹೊಂಗೆ ಕಾಯಿಯನ್ನು, ಬಾದಾಮಿಯೆಂದು ಭಾವಿಸಿ ತಿನ್ನಲು ಕೊಟ್ಟರೆ ಅದರ ರುಚಿ ಮಾರ್ಪಡುವುದೇ? ಹಾಗೆ ಭಾವಿಸಿ ಕೊಟ್ಟರೆ ವಿಷಯ ಮಾರ್ಪಡುವುದಿಲ್ಲ. ಆದ್ದರಿಂದ ಕೊಡುವ ಅಂಶವೂ ಸರಿಯಾಗಿರಬೇಕೆಂದು ಇಲ್ಲಿ ತಿಳಿಸುತ್ತದೆ. ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಇಂದು ಬಡವರ ಉದ್ಧಾರಕ್ಕೆಂದು ಅವನಲ್ಲಿ ಇಲ್ಲಸಲ್ಲದ ಆಸೆ ಆಮಿಷಗಳನ್ನು ಒಡ್ಡಿ ಇರುವುದೆಲ್ಲವ ಬಿಟ್ಟು ಏನೂ ಇರದುದರೆಡೆ ನಡೆ ಎಂಬುದನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬರುತ್ತದೆ. ಇದರಿಂದ ಜನರ ನೆಮ್ಮದಿಯನ್ನು ನಾಶ ಮಾಡುತ್ತಿದೆ. ಇದಕ್ಕೆಂದೆ ಡಿ.ವಿ.ಜಿ.ಯವರು: ಗುಡಿಸಿಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ ಬಡವನಲಿ ಕೊರತೆಗಳ ನೆಡುವುದರಿದಲ್ಲ ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು ಕೊಡಲಹುದವಂಗೆ ನೀಂ! -ಮಂಕುತಿಮ್ಮ ಗುಡಿಸಲನ್ನು ಕೇವಲ ಒಣಹುಲ್ಲು, ಕಡ್ಡಿ ಎಂದು ದೂರಿ, ಅವನಲ್ಲಿ ಹೊಸಮನೆಯ ಆಮಿಷ ತೋರಿಸಿ, ಇರುವ ಮನೆಯನ್ನು ಕಿತ್ತುಹಾಕಿ, ಕಾಡಿ, ಬೇಡಿ, ಹೊಸಮನೆ ಕಟ್ಟಿಕೊಂಡರೂ, ಅವನು ವಾಸ ಮಾಡುವ ನೆಮ್ಮದಿಯನ್ನು ಸರ್ಕಾರ ಪುನಃ ಅವನಿಗೆ ಕೊಡಲು ಸಾಧ್ಯವಿಲ್ಲ (ಉದಾ: ಮನೆಗೆ ಸಾಲುವಷ್ಟು ಹಣ ಸರ್ಕಾರ ಕೊಡದೆ, ಹೆಚ್ಚಿನ ಹಣಕ್ಕೆ ಸಾಲಮಾಡಿ ಬಡ್ಡಿಕಟ್ಟುವುದು, ಕಟ್ಟಿದ ಮನೆಯ ಗುಣಮಟ್ಟ ಸರಿಯಿಲ್ಲದಿರುವುದು) ಇದು ಸಮಾಜಕಾರ್ಯಕರ್ತನಿಗೆ ಸಾಮಾಜಿಕ ಕ್ರಿಯೆ ಮಾಡುವಲ್ಲಿ ಪ್ರಚೋದನೆ ನೀಡುತ್ತದೆ. ಒಟ್ಟಾರೆಯಾಗಿ, ಸಮಾಜಕಾರ್ಯದ ಮುಖ್ಯ ಉದ್ದೇಶ, ಸಕಲರ ಶ್ರೇಯಸ್ಸನ್ನು ಬಯಸುವುದು ಅದಕ್ಕಾಗಿ ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ ನಗುವು ಕೇಳುತ ನಗುವುದ ಅರೆಯದ ಧರ್ಮ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ -ಮಂಕುತಿಮ್ಮ ನಮ್ಮ, ಸಮಾಜದ ಒಳಿತನ್ನು ಇತರರಿಗೆ ಉಪಕಾರಿಯಾದ ಕೆಲಸಗಳನ್ನು ಅವರ ಸಮಸ್ಯೆ ನಿವಾರಿಸುತ್ತಾ ನಿರ್ವಹಿಸಿ, ಸಕಲರ ಶ್ರೇಯಸ್ಸನ್ನು ಜೊತೆಗೆ ತನ್ನ ಶ್ರೇಯಸ್ಸು ಪಡೆಯುವುದು. ಸಮಾಜಕಾರ್ಯರ್ತನಾಗಿ, ಜವಾಬ್ದಾರಿಯುತ ಪ್ರಜೆಯಾಗಿ ನಮ್ಮ ಧರ್ಮವಾಗಿರಬೇಕೆಂದು ಮಾರ್ಮಿಕವಾಗಿ ತಿಳಿಸಿದ್ದಾರೆ. ಕೊನೆಗೆ ಒಂದು ಮಾತು ಹೇಳಲೇ ಬೇಕು, ಇಂದು ಸಮಾಜಕಾರ್ಯವನ್ನು ಕೇವಲ ಒಂದು ಶೋಕಿಗಾಗಿ, ಹಣ ಮಾಡುವ ದಂದೆಗಾಗಿ, ಎಲ್ಲೂ ಸಲ್ಲದವರು ಇಲ್ಲಿ ಸಲ್ಲುವ ಜಾಗವೆಂದು ತಿಳಿದು ಈ ವೃತ್ತಿಗೆ ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ. ಅದಕ್ಕೆ ಮಂಕುತಿಮ್ಮನ ಕಗ್ಗದಲ್ಲಿ ಚೂಟಿಯಾದ ಉತ್ತರವಿದೆ. ತೊಲಗೆಲವೊ ಮನೆಯಿಂದ ಮನವು ಬರಡಾದಂದೆ ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ತೊಲಗು ಜಗದಿಂದೂರ, ಇಳೆಗಾಗದಿರು ಭಾರ ತೊಲಗಿ ನೀಂ ಮರೆಯಾಗು -ಮಂಕುತಿಮ್ಮ ಈ ಸಮಾಜದಲ್ಲಿನ ನೋವುಗಳನ್ನು, ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದಾಗ, ಈ ಕ್ಷೇತ್ರದಿಂದ ದೂರಾಗುವುದು ಉಚಿತ. ಕಾರಣ, ಇದು ತುಂಬಾ ಪವಿತ್ರವಾದ ವೃತ್ತಿ. ಜನರ ಕಣ್ಣೀರನ್ನು ಒರೆಸಲು ಸಾಧ್ಯವಾಗದಿದ್ದಾಗ ಅಲ್ಲಿ ನೀವಿದ್ದು ಪ್ರಯೋಜನವಿಲ್ಲ. ಅದರಲ್ಲೂ ಸ್ವಾರ್ಥ ಸಾಧಿಸಿಕೊಳ್ಳುವವರಿಗಂತೂ ಈ ಮೇಲಿನ ನುಡಿಗಳು ಚಾಟಿ ಏಟಿನಂತೆ. ನೋಡುವ ಕಣ್ಣಿದ್ದರೆ, ಎಂತಹ ಕೆಟ್ಟ ಸಂದರ್ಭದಿಂದಲೂ ಒಳ್ಳೆಯದನ್ನು ಕಲಿಯಬಹುದು. ಇನ್ನು ಸಕಲರಿಗೂ ಲೇಸನ್ನು ಬಯಸುವ ಮಂಕುತಿಮ್ಮನ ಕಗ್ಗ ದಿಂದಲಂತೂ ಚಿನ್ನದ ಗಣಿಯನ್ನು ಪಡೆಯಬಹುದು ಅಲ್ಲವೇ? ಎನ್.ಎಲ್. ಆನಂದ್ ಉಪನ್ಯಾಸಕರು, ಸಿ.ಎಂ.ಆರ್. ಕಾಲೇಜು, (ಸ್ವಾಯತ್ತ) ಬೆಂಗಳೂರು
1 Comment
Vasudeva Sharma
7/17/2017 03:36:31 am
ಬಹಳ ಸೊಗಸಾಗಿದೆ ಆನಂದ.
Reply
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |