ಮಾನ್ಯ ಬಂಧುಗಳೆ, ನನ್ನ ಕೆಲವು ತೌಲನಿಕ ಚಿಂತನೆಗಳನ್ನು ಮಂಡಿಸಲು ಅವಕಾಶವನ್ನು ಕಲ್ಪಿಸಿದ ವ್ಯವಸ್ಥಾಪಕರಿಗೆ ಮತ್ತು ನನ್ನೀ ಚಿಂತನೆಗಳನ್ನು ಆಲಿಸುತ್ತಿರುವ ನಿಮಗೆ ನನ್ನ ಕೃತಜ್ಞತೆಗಳು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆಶ್ರಯದಲ್ಲಿ ನನ್ನೀ ಉಪನ್ಯಾಸವು ನಡೆಯುತ್ತಿದೆ. ಸಮಾಜದಲ್ಲಿನ ಊನಶಕ್ತರಿಗೆ ನೆರವನ್ನು ಉದಾರವಾಗಿ ನೀಡುವ ಧಾರ್ಮಿಕ ಭಾವನೆಯು ಪರಂಪರೆಯಿಂದ ಬಂದಿದ್ದರೂ ವೈಚಾರಿಕ ಮತ್ತು ಲೌಕಿಕ ತಳಹದಿಯ ಮೇಲೆ ಸೇವೆಯನ್ನು ಕೈಗೊಳ್ಳಬೇಕೆಂಬ ಇರಾದೆಯನ್ನು ಹೊಂದಿದ್ದ ಶ್ರೀ ಗೋಪಾಲಕೃಷ್ಣ ಗೋಖಲೆಯವರು 1905ರಲ್ಲಿಯೇ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಆರಂಭಿಸಿದ್ದನ್ನು ನಾವು ನೆನೆಯಲೇಬೇಕಾಗಿದೆ. ಯಾಕೆಂದರೆ, ಸಮಾಜಕಾರ್ಯಕ್ಕೆ ಅದು ಸಮರ್ಥ ನೆಲೆಯನ್ನು ಕಲ್ಪಿಸಿತು. ಅಂಥ ಮಹನೀಯರ ಹೆಸರಿನಲ್ಲಿರುವ ಈ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಮಹಾ ಮೇಧಾವಿ, ರಾಷ್ಟ್ರ ಚಿಂತಕ, ಸಾರ್ವಜನಿಕ ಹಿತ ಪ್ರತಿಪಾದಕ ಡಾ.ಡಿ.ವಿ. ಗುಂಡಪ್ಪನವರನ್ನು ನಾನು ಪ್ರಪ್ರಥಮವಾಗಿ ನೆನೆಯುತ್ತೇನೆ. ನನ್ನೀ ಉಪನ್ಯಾಸವು ನ್ಯಾಯಮೂರ್ತಿ ಮತ್ತು ಮಹಾ ಸಾತ್ತ್ವಿಕ ಶ್ರೀ ನಿಟ್ಟೂರು ಶ್ರೀನಿವಾಸ ರಾವ್ ಇವರ ಜ್ಞಾಪಕದಲ್ಲಿ ನಡೆಯುತ್ತಿದೆ. ಆ ದೊಡ್ಡವರನ್ನು ನಾನು ಗೌರವಪೂರ್ವಕವಾಗಿ ನೆನೆಯುತ್ತೇನೆ. ಡಾ. ಗುಂಡಪ್ಪನವರಿಗೂ, ನ್ಯಾಯಮೂರ್ತಿ ನಿಟ್ಟೂರು ಅವರಿಗೂ ಗೋಖಲೆಯವರು ಮತ್ತು ಗಾಂಧಿಯುವರು ಪ್ರಿಯರಾದವರು. ಜೊತೆಗೆ ಆ ಇಬ್ಬರಿಗೂ ಸಮಾಜಕಾರ್ಯದಲ್ಲಿ ಆಸಕ್ತಿ ಇದ್ದದ್ದು ನಮ್ಮೆಲ್ಲರಿಗೂ ಪರಿಚಿತವೇ. ಈ ಸಂರ್ದದಲ್ಲಿ ಈ ನಾಲ್ವರನ್ನು ನಾನು ಹೃತ್ಪೂರ್ವಕ ನೆನೆಯುತ್ತೇನೆ. ಮೂರು-ನಾಲ್ಕು ವರ್ಷಗಳ ಹಿಂದೆಯೇ ಡಾ. ಎಸ್.ಆರ್. ರಾಮಸ್ವಾಮಿ ಅವರು ಮಹಾತ್ಮಾ ಗಾಂಧಿಯವರನ್ನು ಕುರಿತು ಉಪನ್ಯಾಸ ನೀಡಲು ನನ್ನನ್ನು ಆಹ್ವಾನಿಸಿದ್ದರು. ಆಗ ನನ್ನ ಆರೋಗ್ಯ ಚೆನ್ನಾಗಿರಲಿಲ್ಲವೆಂದು ಅವರ ಆಹ್ವಾನವನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ಆದರೆ, ಈಗಲೂ ನನ್ನ ಆರೋಗ್ಯ ಅಷ್ಟಕ್ಕಷ್ಟೆ ಆಗಿದ್ದಿದ್ದರೂ, ಅವರ ಮರು ಆಹ್ವಾನವನ್ನು ಒಪ್ಪಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ. ಆದುದರಿಂದ ಹಾನಿವೃದ್ಧಿಗಳನ್ನೆಲ್ಲಾ ಅವರ ಹೆಗಲಿನ ಮೇಲಿರಿಸಿ, ಈ ಉಪನ್ಯಾಸ ನೀಡಲು ಬಂದಿದ್ದೇನೆ. ಅವರಿಗೂ ನಾನು ಅತ್ಯಂತ ಋಣಿಯಾಗಿದ್ದೇನೆ.
ಗೊಂದಲ ಆಧುನಿಕ ಸಮಾಜಕಾರ್ಯದಂತೆ ಗಾಂಧೀಯ ಮಾರ್ಗವೂ ಆಧುನಿಕ. ಈ ಎರಡು ಸಂಗತಿಗಳ ತೌಲನಿಕ ಚಿಂತನೆ ಮಾಡುವಾಗ ಎದುರಾಗುವ ಗೊಂದಲ ಅಥವಾ ಸಮಸ್ಯೆ ಅಂದರೆ, ಈ ಎರಡನ್ನೂ ತಿಳಿದವರಿಗೆ, ನಿಮ್ಮಂಥವರಿಗೆ, ಏನನ್ನು ಹೇಳಲು ಸಾಧ್ಯ? ಆದುನಿಕ ಸಮಾಜಕಾರ್ಯವು, ಇತ್ತೀಚೆಗಂತೂ ಕ್ಷೇಮರಾಜ್ಯದ ವಾತಾವರಣದಲ್ಲಿ, ಹೆಚ್ಚು ಪರಿಚಿತವಾದ ವಿಷಯ. ಸಮಾಜಕಾರ್ಯವು ವೃತ್ತೀಯ ಪೋಷಾಕನ್ನು ಧರಿಸಿದ ಮೇಲಂತೂ ತರಬೇತಿ ಪಡೆದ ಸಮಾಜಕಾರ್ಯಕರ್ತರನ್ನು ಸರಕಾರವೂ, ಖಾಸಗೀ ಸಂಘಟನೆಗಳೂ ಅಪರಿಮಿತವಾಗಿ ನೇಮಕ ಮಾಡಿಕೊಳ್ಳುತ್ತಲಿರುವುದರಿಂದ ಸಮಾಜಕಾರ್ಯವು ಜನಸಾಮಾನ್ಯರಿಗೂ ಹೆಚ್ಚು ಪರಿಚಿತವಾದ ಸಂಗತಿಯಾಗಿದೆ. ಮಹಾತ್ಮಾಗಾಂಧಿಯವರು ಭಾರತದ ನರನಾಡಿಗಳಲ್ಲಿ ಪ್ರವಹಿಸುತ್ತಿರುವ ಶಕ್ತಿ-ಆಗಿರುವುದರಿಂದ ಅವರ ಚಿಂತನೆಗಳೂ, ಕಾರ್ಯ ವಿಧಾನಗಳೂ, ಒಟ್ಟಿನಲ್ಲಿ ಅವರು ಸಾಗಿದ ಮಾರ್ಗವು, ತುಂಬಾ ಆಪ್ತವಾದವುಗಳೇ. ಆದುದರಿಂದ ಆ ಮಾರ್ಗದ ಬಗ್ಗೆ ಏನು ಹೇಳಿದರೂ ಅದು ನಮಗೆ ಗೊತ್ತು ಎನ್ನುವವರೇ ಹೆಚ್ಚು. (ಆದರೆ, ಇತ್ತೀಚೆಗೆ ಅವರ ಬಗ್ಗೆ ಅವಜ್ಞೆಯು ಹೆಚ್ಚುತ್ತಿರುವುದನ್ನು ವಿಷಾದದಿಂದ ಹೇಳಬೇಕಾಗಿದೆ.) ಆದುದರಿಂದ ಈ ಎರಡೂ ಸಂಗತಿಗಳ ಬಗ್ಗೆ ಏನಾದರೂ ಹೇಳಿದರೆ, ಅನೇಕರಿಗೆ ಹಲವಾರು ಅನುಮಾನಗಳು ಸುಳಿಯುವುದುಂಟು. ಆದುದರಿಂದ ವಿಷಯ ಪ್ರತಿಪಾದನೆಯನ್ನು ನಿಭಾಯಿಸುವುದು ಕಷ್ಟದ ಕಾರ್ಯ. ಆದರೂ, ನನ್ನ ತಿಳಿವಳಿಕೆಗೆ ಅನುಗುಣವಾಗಿ ಈ ಎರಡೂ ಸಂಗತಿಗಳ ನಡುವೆ ಇರುವ ಸಾಮಾನ್ಯ ಮತ್ತು ವೈರುಧ್ಯ ಅಂಶಗಳನ್ನು ಗುರುತಿಸಲು, ಎರಡೂ ಒಗ್ಗೂಡುವ ಅಂಶವನ್ನು ಗುರುತಿಸುವ ಪ್ರಯತ್ನ ಮಾಡುತ್ತೇನೆ. ರಾಚನಿಕತೆ-ಕ್ರಿಯಾತ್ಮಕತೆ ಬಂಧುಗಳೆ, ಮಾನವ ಸಮಾಜದ ವಿದ್ಯಾರ್ಥಿಯಾಗಿ ನನ್ನ ಚಿಂತೆಯು ಹೀಗಿದೆ: ಮಾನವ ಸಮಾಜವು ಒಂದು ಶರೀರ; ಇದು ಅಸ್ತಿತ್ವದಲ್ಲಿರುವುದು ಮತ್ತು ಇದಕ್ಕೆ ಒಂದು ಅಸ್ಮಿತೆಯು (Identity) ಲಭಿಸಿರುವುದು ಇದು ಕ್ರಿಯಾಶೀಲವಾಗಿರುವುದರಿಂದ. ಒಬ್ಬ ಮಾನವ ಶಾಸ್ತ್ರಜ್ಞ ಹೇಳುವಂತೆ ರಾಚನಿಕತೆಯು ಅಸ್ತಿತ್ವದಲ್ಲಿರುವುದು ತನ್ನ ಕ್ರಿಯಾಶೀಲತೆಯಿಂದಲೇ. (The structure exists in its functioning) ಈ ಕ್ರಿಯಾಶೀಲತೆಯೇ ಸಮಾಜಕಾರ್ಯ. ಅಂದರೆ, ಸಮಾಜಕಾರ್ಯವಿಲ್ಲದಿದ್ದರೆ ಸಮಾಜಕ್ಕೆ ಅಸ್ತಿತ್ವವೇ ಇರುವುದಿಲ್ಲ, ಮತ್ತು ಇದಕ್ಕೆ ಅಸ್ಮಿತೆಯೂ ಇರುವುದಿಲ್ಲ. ಒಂದು ನಿಟ್ಟಿನಿಂದ ನೋಡಿದರೆ ಸಮಾಜ ಮತ್ತು ಸಮಾಜಕಾರ್ಯ ಎರಡೂ ಅಮೂರ್ತ (Abstract) ಆದವುಗಳು. ಇನ್ನೊಂದು ನಿಟ್ಟಿನಿಂದ ನೋಡಿದರೆ ಸಮಾಜವು ಹೆಚ್ಚು ಮೂರ್ತ ಸ್ವರೂಪದ್ದು (Concrete), ಸಮಾಜಕಾರ್ಯವು ಹೆಚ್ಚು ಅಮೂರ್ತವಾದದ್ದು. (Abstract). ಇಂಥ ಚಿತನೆಯು ಜಗತ್ತಿನ ಅನೇಕ ಮೇಧಾವಿಗಳ ಧೀಮಂತಿಕೆಯ ಚಿಂತನೆಗಳ ಸಂಚಿತ ಫಲವಾಗಿ ಮೂಡಿ ಬಂದಿದೆ, ಎಂದು ಪ್ರಾಂಜಲವಾಗಿ ಹೇಳಬಯಸುತ್ತೇನೆ. ಸಮಾಜ ಮತ್ತು ಸಮಾಜಕಾರ್ಯಗಳು ಸಾಪೇಕ್ಷವಾಗಿ ಮೂರ್ತಸ್ವರೂಪ ಪಡೆಯುತ್ತಿರುವುದು ಸಂಬಂಧಗಳ ಮತ್ತು ಕ್ರಿಯೆಗಳ ಮೂಲಕ. ಮಾನವ ಸಮಾಜವನ್ನು ಮಾನವ ಸಂಬಂಧಗಳ ಬಲೆಗಳ ಬಲೆ (Web of social or human relationships) ಎಂದು ಭಾವಿಸಲಾಗುತ್ತದೆ. ಈ ಬಲೆಯು ಸದಾ ಬದಲಾವಣೆಗೊಳ್ಳುತ್ತಲೇ ಸಾಗಿರುವ ಒಂದು ಸಂಕೀರ್ಣ (Complex) ವ್ಯವಸ್ಥೆ ಎಂದು ಅಥರ್ೈಸಲಾಗುತ್ತದೆ. ಕ್ರಿಯಾಶೀಲತೆಯಿಂದಲೇ ಅಸ್ತಿತ್ವದಲ್ಲಿರುವ ಮಾನವ ಸಮಾಜವು ಈ ಕ್ರಿಯಾಶೀಲತೆಯಿಂದಲೇ ಪರಿವರ್ತನೆಗೊಳ್ಳುತ್ತಲಿರುತ್ತದೆ ಎಂಬುದು ಇದರ ಮಥಿತಾರ್ಥ. ಕ್ರಿಯಾಶೀಲತೆಯ ಬೀಜವೆಂದರೆ ಮಾನವ ಕ್ರಿಯೆ (Action). ಈ ಕ್ರಿಯೆಯು ಸಂಚಲನಾತ್ಮಕ (Dynamic) ಆದದ್ದು. ಕ್ರಿಯೆಯು ಸಂಚಲನಾತ್ಮಕವಾದುದರಿಂದ ಇದು ಪ್ರತಿಕ್ರಿಯೆಯನ್ನು (Reaction) ಸೃಜಿಸುತ್ತದೆ. ಅನೇಕ ಕ್ರಿಯೆಗಳು ಅನೇಕ ಪ್ರತಿಕ್ರಿಯೆಗಳಿಗೆ ಹಾದಿ ಮಾಡಿಕೊಂಡುವುದರಿಂದ ಅವು ಪ್ರಕ್ರಿಯೆಯಾಗಿ/ಪ್ರಕ್ರಿಯೆಗಳಾಗಿ (Processes) ಪರಿವರ್ತನೆಗೊಳ್ಳುತ್ತವೆ. ಕ್ರಿಯೆಗಳೂ, ಪ್ರತಿಕ್ರಿಯೆಗಳೂ ವೈವಿಧ್ಯಮಯವಾಗಿವೆ. ವೈವಿಧ್ಯಮಯವಾದ ಪ್ರಕ್ರಿಯೆಗಳು ಹೆಣೆದುಕೊಂಡು ಸಂಬಂಧಗಳಾಗಿ ರೂಪಗೊಳ್ಳುತ್ತವೆ. ಈ ಸಂಬಂಧಗಳು ಹೆಣೆದುಕೊಂಡು ಒಂದು ಬಲೆಯಾಗಿ ಪರಿವರ್ತನೆಗೊಳ್ಳುತ್ತವೆ. ಈ ಬಲೆಯು ಸದಾ ಪರಿವರ್ತನೆಗೊಳ್ಳುತ್ತಲೇ ಇರುವುದರಿಂದ ಇದಕ್ಕೆ ಸಂಕೀರ್ಣತೆಯ ಗುಣವು ಲೇಪಿತವಾಗುತ್ತದೆ. ಆದುದರಿಂದಲೇ ಕ್ರಿಯಾಭೂಯಿಷ್ಠವಾದ ಸಮಾಜಕಾರ್ಯವು ಸಂಚಲನಾತ್ಮಕವಾಗಿರುತ್ತದೆ; ಈ ಸಂಚಲನಾತ್ಮಕತೆಯಿಂದಲೇ ಇದು ಮಾನವ ಸಂಬಂಧಗಳ ರಚನೆಗೆ, ಅದರ ಪರಿವರ್ತನೆಗೆ ಕಾರಣವಾಗುತ್ತದೆ. ಆದುದರಿಂದಲೇ ಸಮಾಜಕಾರ್ಯವು ಸಮಾಜದ ನಿರ್ಮಿತಿ ಮತ್ತು ಪರಿವರ್ತನೆಯ ಮೂಲ ಸೆಲೆಯಾಗುತ್ತದೆ. ಸಮಾಜದ ಸಂಕೀರ್ಣ ಪರಿವರ್ತನೆಯು ವಿವಿಧ ಕಾರಣಗಳಿಂದ ತನ್ನ ವೇಗವನ್ನು ವರ್ಧಿಸಿಕೊಳ್ಳುತ್ತದೆ. ಆಧುನಿಕತೆಯು ಹೆಚ್ಚಳಗೊಂಡಂತೆಲ್ಲಾ ಇದರ ವೇಗವು ತೀವ್ರಗೊಳ್ಳುತ್ತದೆ. ತೀವ್ರಗೊಂಡ ಪರಿವರ್ತನೆಯು ಸಂಬಂಧಗಳ ಬಲೆಯಲ್ಲಿ ಅಸ್ಥಿರತೆಯನ್ನು ತರುತ್ತದೆ. ಈ ಅಸ್ಥಿರತೆಯೇ ಅಸ್ವಸ್ಥತೆಯಾಗಿ, ಸಮಸ್ಯೆಗಳ ಸಂಕೀರ್ಣ ಬಲೆಯಾಗಿ, ರೂಪಾಂತರಗೊಳ್ಳುತ್ತದೆ. ಸಂಬಂಧಗಳ ಬಲೆಗೆ ಹೇಗೆ ಕಾರಣವಾಗುತ್ತದೆಯೋ ಹಾಗೆಯೇ ಅದರ ಅಸ್ವಸ್ಥತೆಯ ಪರಿಹಾರಕ್ಕೂ ಸಮಾಜಕಾರ್ಯವು ಬದ್ಧವಾಗಿರಬೇಕಾಗುತ್ತದೆ. ಸರಳ ಸಮಾಜದಲ್ಲಿ ಸಮಾಜಕಾರ್ಯವು ಸರಳ-ನೇರವಾಗಿರುವಂತೆ, ತೀವ್ರತರ ಸಂಕೀರ್ಣ ಪರಿವರ್ತನೆಯ ಸಮಾಜದಲ್ಲಿನ ಅಸ್ವಸ್ಥ ಸ್ಥಿತಿಗೆ ಸೂಕ್ತವಾಗಿ ಸಮಾಜಕಾರ್ಯವೂ ಸಂಕೀರ್ಣವೂ ತೀವ್ರಸ್ವರೂಪದ್ದೂ (Radical) ಆಗಬೇಕಾದದ್ದು ಅನಿವಾರ್ಯ. ಹೀಗಾಗಿಯೇ ಇದು ಪರೋಕ್ಷ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸಮಾಜದ ಹುಟ್ಟಿನೊಂದಿಗೇ ಅಂಕುರಗೊಂಡು ಅಥವಾ ಸಮಾಜದ ರಚನೆಗೇ ಕಾರಣವಾಗಿ ಸಾಗಿಬಂದ ಸಮಾಜಕಾರ್ಯವು ಸಂದರ್ಭಕ್ಕೆ ಸೂಕ್ತವಾಗಿ ವಿವಿಧ ತೆರನ ಹಾದಿಗಳನ್ನು ಹಿಡಿದು ಸಾಗಿರುವುದು ಅನಿವಾರ್ಯವಾಗುತ್ತದೆ. ಇಂಗ್ಲೆಂಡಿನಲ್ಲಿ ಆದ ಔದ್ಯೋಗಿಕ ಕ್ರಾಂತಿಯು ಸಮಾಜದ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲಗೊಳಿಸಿದುದರಿಂದ ಸಮಾಜಿಕ ಅಸ್ವಸ್ಥತೆಯು ಉಲ್ಬಣಗೊಳ್ಳತೊಡಗಿತು. ಇದಕ್ಕೆ ಸೂಕ್ತವಾದ ಉತ್ತರವೆಂಬಂತೆ, ಸಮಾಜಕಾರ್ಯವು ಆಧುನಿಕ ಪೋಷಾಕನ್ನು ಧರಿಸಿತು. ಯೂರೋಪಿನ ಇಂಗ್ಲೆಂಡ್ ಮತ್ತು ಫ್ರಾನ್ಸ್ ಪ್ರಮುಖವಾಗಿ ಆಧುನಿಕ ಸಮಾಜಕಾರ್ಯ ರೂಪಣಿಕೆಗೆ, ಪೋಷಣೆಗೆ ಅನುಕೂಲ ವಾತಾವರಣವನ್ನು ನಿರ್ಮಿಸಿದವು. ಸಮಾಜಕಾರ್ಯದ ಸಂಘಟನೆಗಳಿಗೆ, ಸಮಾಜಕಾರ್ಯಕರ್ತರ ಸಂಘಟನೆಗಳಿಗೆ ಹಾದಿಯಾಯಿತು. ಇಂಗ್ಲೆಂಡಿನ ಲಂಡನ್ನಿನಲ್ಲಿ 1869ರಲ್ಲಿ ಆರಂಭವಾದ ಚಾರಿಟಿ ಆರ್ಗನೈಜೇಷನ್ ಸೊಸೈಟಿಯು ಆಧುನಿಕ ಸಮಾಜಕಾರ್ಯಕ್ಕೆ ನಾಂದಿ ಹಾಡಿ ವೈಜ್ಞಾನಿಕತೆಗೆ, ವೈಧಾನಿಕತೆಗೆ ಚಾಲನೆ ನೀಡಿತು. ಯೂರೋಪಿನಿಂದ ಅಮೇರಿಕೆಯ ಖಂಡಕ್ಕೆ ಹಾರಿಹೋದ ಆಧುನಿಕ ಸಮಾಜಕಾರ್ಯವು ಅಲ್ಲಿ ದಷ್ಟಪುಷ್ಟವಾಗಿ ಬೆಳೆಯುತ್ತಾ ವೃತ್ತ್ಯಾತ್ಮಕ ಪೋಷಾಕನ್ನು ಧರಿಸಿತು. ಯೂರೋಪ್ ಮತ್ತು ಅಮೆರಿಕೆಯ ಭೂ ಭಾಗವು ಪಾಶ್ಚಾತ್ಯ ಸಂಸ್ಕೃತಿಯ ತೊಟ್ಟಿಲಾಯಿತು. ಜೊತೆಗೆ, ಇದು ತೀವ್ರ ಬದಲಾವಣೆಯನ್ನು ಬಿತ್ತಿ ಒಕ್ಕುವ ಪ್ರದೇಶವೂ ಆಯ್ತು. ಇದರಿಂದಾಗಿ ಇದು ಅಭಿವೃದ್ಧಿಗೊಂಡ, ಮುಂದುವರಿದ ಭೂಖಂಡವಾಗಿ ಹೆಸರು ಮಾಡಿತು. ಒಂದು ಪ್ರಮೇಯ: ಹಿನ್ನೆಲೆ-ಪರಿಕಲ್ಪನೆಗಳ ಅಂಕುರ. ಈ ಸಂದರ್ಭದಲ್ಲಿ ಒಂದು ಪ್ರಮೇಯವನ್ನು ಪ್ರಸ್ತಾಪಿಸಬೇಕು ಎನ್ನಿಸುತ್ತದೆ. ಅಲ್ಲಲ್ಲಿನ ಸಮಾಜದ ಪರಿಸ್ಥಿತಿಯ, ಅಂದಂದಿನ ಕಾಲದ ಗತಿಯ ಹಿನ್ನೆಲೆಯಲ್ಲಿ ಐತಿಹಾಸಿಕವಾಗಿ ಕೆಲವು ವಿಶಿಷ್ಟವಾದ ಪರಿಕಲ್ಪನೆಗಳು ಅಂಕುರಗೊಳ್ಳುತ್ತವೆ. ಅ. ಸಮಾಜೋರಾಜಕೀಯ ಪರಿಸ್ಥಿತಿ-ಪ್ರಜಾಪ್ರಭುತ್ವದ ರೂಪಣಿಕೆ: ಯೂರೋಪಿನಿಂದ ಅಮೆರಿಕೆಯ ಪ್ರದೇಶಕ್ಕೆ ವಲಸೆಹೋದ ಜನರು ಆ ಹೊಸ ನಾಡಿನಲ್ಲಿ ಸ್ವಾತಂತ್ರ್ಯದ ಉಸಿರನ್ನೂ ಬಲಿಷ್ಠಗೊಳಿಸಿಕೊಂಡರು; ವಿಸ್ತಾರವಾದ ಮತ್ತು ಫಲವತ್ತಾದ ಭೂಮಿಯನ್ನು ಆಕ್ರಮಿಸಿಕೊಂಡು ಉತ್ಸಾಹದಿಂದ ಮಹತ್ವಾಕಾಂಕ್ಷೆಯಿಂದ ದುಡಿಯತೊಡಗಿದರು; ಸಂಪತನ್ನು ಗಳಿಸತೊಡಗಿದರು; ಸಮಾಜೋ-ರಾಜಕೀಯ ಹಿನ್ನೆಲೆಯನ್ನು ಸೃಜಿಸಿದರು. ಹೀಗಾಗಿ ಅಲ್ಲಿನ ಸಮಾಜವು ಹೊಸ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಬಂಡವಾಳಶಾಹಿಯನ್ನು (Capitalism) ತಮ್ಮ ಜೀವಿತ ಪದ್ಧತಿಯನ್ನಾಗಿ ಅಲ್ಲಿನ ಜನರು ಅಳವಡಿಸಿಕೊಂಡರು. ತಮ್ಮೊಡನೆ ಕೊಂಡೊಯ್ದ ಆಧುನಿಕ ಸಮಾಜಕಾರ್ಯಕ್ಕೆ ನಿಯಂತ್ರಣರಹಿತ ವ್ಯಕ್ತಿ ಸ್ವಾತಂತ್ರ್ಯವು ಕೇಂದ್ರವಾದ ಪ್ರಜಾಪ್ರಭುತ್ವವನ್ನು (Democracy) ತತ್ತ್ವ ಸಿದ್ಧಾಂತವಾಗಿ ಅಂಗೀಕರಿಸಿ, ಅದನ್ನು ಗಟ್ಟಿಗೊಳಿಸಿಕೊಂಡರು. ಈ ಮೊದಲೇ ಪ್ರಸ್ತಾಪಿಸಿದಂತೆ ಅಮೆರಿಕೆಯನ್ನು ಒಳಗೊಂಡಂತೆ ಪಾಶ್ಚಾತ್ಯ ಸಂಸ್ಕೃತಿಯು ಸಮಾಜೋ-ರಾಜಕೀಯ ಹಿನ್ನೆಲೆಯುಳ್ಳ ಪ್ರಜಾಪ್ರಭುತ್ವವನ್ನು ತನ್ನ ತಾತ್ತ್ವಿಕ ಸಿದ್ಧಾಂತವನ್ನಾಗಿ ಅಂಗೀಕರಿಸಿತು. ಹೀಗಾಗಿ ಅಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯವನ್ನಿತ್ತು ಆಧುನಿಕ ಸಮಾಜಕಾರ್ಯಕ್ಕೆ ಅಗತ್ಯವಾದ ಕಾರ್ಯಸಾಧನಗಳಾದ ವಿಧಾನಗಳು, ತಂತ್ರಗಳು ಮತ್ತು ಕೌಶಲ್ಯಗಳು ವ್ಯಕ್ತಿ ಕೇಂದ್ರಿತ ಸಿದ್ಧಾಂತದ ಪ್ರಭಾವಕ್ಕೆ ಒಳಗಾದವು. ಆ ಹಿನ್ನೆಲೆಯಲ್ಲಿ ವಿನ್ಯಾಸಗೊಂಡ ವೈಧಾನಿಕತೆಯು ವ್ಯಕ್ತಿಗತ ಸಮಾಜಕಾರ್ಯಕ್ಕೆ (Social Case Work) ಪರಮ ಮಾನ್ಯತೆಯನ್ನು ನೀಡಿತು. ಈ ವ್ಯಕ್ತಿಗತ ಕಾರ್ಯವೇ ಸಮಾಜಕಾರ್ಯಕರ್ತರ ಮನೋದೃಷ್ಟಿಯನ್ನು, ಮೌಲ್ಯಗಳನ್ನು, ಸೂತ್ರಗಳನ್ನು, ಮತ್ತಿತರ ಸಂಗತಿಗಳನ್ನು ಪ್ರಭಾವಗೊಳಿಸಿತು. ಆ. ಸಮಾಜೋ-ಆರ್ಥಿಕ ಪರಿಸ್ಥಿತಿ: ಸಮತಾವಾದ/ ಸಮಾಜವಾದದ ರೂಪಣಿಕೆ: ರಷ್ಯಾ ಮತ್ತಿತರ ಸಮಾನ ವೈಲಕ್ಷಣ್ಯಗಳುಳ್ಳ ಪ್ರದೇಶಗಳಲ್ಲಿ ಆಂತರಿಕವಾಗಿಯೇ ಆಂದೋಲನದ ರೀತಿಯ ಬದಲಾವಣೆಯಾಯಿತು. ಕಾರ್ಲ್‍ಮಾರ್ಕ್ಸ್, ಏಂಗೆಲ್ಸ್‍ರಂಥ ಮೇಧಾವಿಗಳು ಸಮಾಜವನ್ನು ನವೀನ ರೀತಿಯಲ್ಲಿ ವಿಶ್ಲೇಷಿಸಿ, ಸಮಾಜೋ-ಆರ್ಥಿಕ ನೆಲೆಯನ್ನು ಗುರುತಿಸಿದರು. ಅವರ ಚಿಂತನೆಗೆ ಸ್ವಲ್ಪ ಭಿನ್ನ ರೀತಿಯಲ್ಲಿ ರಷ್ಯಾದಲ್ಲಿ ಕ್ರಾಂತಿಯಾಗಿ, ಈಗಾಗಲೇ ರೂಪಿತವಾದ ಸಮತಾವಾದ/ ಸಮಾಜವಾದವು (Communism/ Socialism) ತನ್ನ ಹಿಡಿತವನ್ನು ಸಾಧಿಸಿತು. ಊಳಿಗಮಾನ್ಯ ಪದ್ಧತಿಯ ರಾಜರ ನಿರಂಕುಶ ಆಡಳಿತೆಯು ಅಳಿದು ಹೋಗಿ, ನವ ಸಮಾಜೋ-ಆರ್ಥಿಕ ಹಿನ್ನೆಲೆಯಲ್ಲಿ, ಸಮುದಾಯಕ್ಕೆ ಪ್ರಾಧಾನ್ಯತೆಯನ್ನು ನೀಡಿ ಅದರ ಕಲ್ಯಾಣ, ಅಭ್ಯುದಯವನ್ನು ಸಾಧಿಸುವ ಯೋಜಿತ ಕಾರ್ಯಕ್ರಮಗಳನ್ನು ರೂಪಿಸಿ, ಕಾಲಬದ್ಧವಾಗಿ ಅವನ್ನು ಅನುಷ್ಠಾನಗೊಲಿಸಲು ಕ್ರಮ ಕೈಗೊಳ್ಳಲಾಯಿತು. ಹೀಗಾಗಿ ಜನರು ಎಲ್ಲರೂ ಸಮಾನರು, ಯಾರೂ ಯಾರಿಗಿಂತಲೂ ಶ್ರೇಷ್ಠರಲ್ಲ, ಕನಿಷ್ಠರಲ್ಲ, ಇಡೀ ಸಮುದಾಯವೇ ಪ್ರಾಧಾನ್ಯ, ಅದರ ಒಡಲಿನಲ್ಲಿಯೇ ಎಲ್ಲರೂ ಹುದುಗಿಕೊಂಡಿರುತ್ತಾರೆ. ಸಮುದಾಯದಲ್ಲಿಯೇ ಸಮಸ್ಯೆಗಳು ಉದ್ಭವವಾಗುವುದರಿಂದ ಅವುಗಳ ನಿವಾರಣೆಯು ಅಲ್ಲಿಯೇ ಆಗಬೇಕು. ಆದುದರಿಂದ ಸಮುದಾಯದ ಅಭಿವೃದ್ಧಿಯಲ್ಲಿಯೇ ಇಡೀ ಜನರ ಕಲ್ಯಾಣವನ್ನು ಕಾಣಬೇಕಾಗುತ್ತದೆ. ಇದಕ್ಕೆ ಅಧಿಕಾರವು ವ್ಯಕ್ತಿ ಕೇಂದ್ರಿತವಾಗಿರದೆ ಸಮುದಾಯ ಕೇಂದ್ರಿತವಾಗಿರಬೇಕಾಗುತ್ತದೆ, ಅಧಿಕಾರ ಕೇಂದ್ರೀಕರಣವೇ ಸಮರ್ಥವಾದ ಉಪಾಯ ಎಂದು ಬಗೆದು ಜನಸಮುದಾಯವು ಸಮಾಜಕಾರ್ಯದ ಕೇಂದ್ರ ಬಿಂದು, ಕೇಂದ್ರ ಆಸಕ್ತಿಯಾಯಿತು. ಆದುದರಿಂದಲೇ ರೂಪಿಸುವ ಮತ್ತು ಅನುಷ್ಠಾನಗೊಳ್ಳುವ ಪ್ರತಿಯೊಂದು ಕ್ರಮವೂ ಸಮುದಾಯದ-ಸಮತಾವಾದದ-ಪ್ರಭಾವಕ್ಕೆ ಒಳಗಾಯಿತು. ಇ. ಸಮಾಜೋ-ಧಾರ್ಮಿಕ/ ಆಧ್ಯಾತ್ಮಿಕ ಪರಿಸ್ಥಿತಿ: ವೃಂದ ಪ್ರಾಧಾನ್ಯತೆ: ಭಾರತವನ್ನೂ ಒಳಗೊಂಡಂತೆ ಪ್ರಾಚ್ಯ ಪ್ರದೇಶಗಳು ಅತಿ ಪ್ರಾಚೀನ ಸಂಸ್ಕೃತಿಯ, ಸಾಪೇಕ್ಷವಾಗಿ ಸ್ಥಿರ ಸಮಾಜವನ್ನು ಹೊಂದಿದವುಗಳು. ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳು ಮತ್ತು ಅವುಗಳಿಗೆ ಅನುಗುಣವಾದ ಜೀವನ ಪದ್ಧತಿಗಳು ರೂಪಗೊಂಡವು. ಇಂಥ ಸಮಾಜೋ-ಧಾರ್ಮಿಕ / ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸಂಘಟಿತ ವೃಂದಕ್ಕೆ ಮಾನ್ಯತೆಯು ದೊರೆಯಿತು. ಭಾರತವನ್ನೇ ಉದಾಹರಣೆಗೆ ತೆಗೆದುಕೊಂಡರೆ, ಇಲ್ಲಿ ಕುಟುಂಬಕ್ಕೆ, ಬಳಗಕ್ಕೆ, ಪಂಚಾಯಿತಿಗೆ, ಜಾತಿಗೆ ಪ್ರಧಾನ ಸ್ಥಾನವಿದ್ದುದು ಕಂಡುಬರುತ್ತದೆ ಹೀಗಾಗಿ, ವೃಂದವು ಮೇಲುಗೈ ಸಾಧಿಸಿತು. ಸಮಾಜಕಾರ್ಯವು ವೃಂದದ ಪ್ರಭಾವಕ್ಕೆ ಒಳಗಾಗಿ ವ್ಯಕ್ತಿಗಳು ಮತ್ತು ಸಮುದಾಯಗಳು ವೃಂದ ಪ್ರಕ್ರಿಯೆಗಳು ತಮ್ಮ ನಿಟ್ಟುಗಳನ್ನು ಕಟ್ಟಿಕೊಳ್ಳುವಂತಾಯಿತು. ಸಮಾಜದಲ್ಲಿನ ಸಮಸ್ಯೆಗಳು ವೃಂದ ಪ್ರಕ್ರಿಯೆಯ ಜನ್ಯವಾದುದರಿಂದ ವೃಂದ ಪ್ರಕ್ರಿಯೆಗಳ ಮೂಲಕವೇ ಅವುಗಳ ನಿವಾರಣೆಯಾಗಬೇಕು ಎಂಬುದು ಸ್ಥಾಪಿತ ಮಾರ್ಗದೃಷ್ಟಿಯಾಯಿತು. ಪಶ್ಚಿಮದ ಪ್ರಾಬಲ್ಯ ಆದರೂ, ಐತಿಹಾಸಿಕವಾಗಿ ಪಾಶ್ಚಾತ್ಯ ರಾಷ್ಟ್ರಗಳು ಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕೆಯ ಪ್ರದೇಶಗಳನ್ನು ಕ್ರಮೇಣ ಆಕ್ರಮಿಸಿಕೊಂಡು ತಮ್ಮ ಸಂಸ್ಕೃತಿಯ ಕಬಂಧ ಬಾಹುಗಳನ್ನು ಹರಡಿ ತಬ್ಬಿ ತಮ್ಮ ಹಿಡಿತವನ್ನು ಬಿಗಿಗೊಳಿಸಿದವು. ಈ ಆಕ್ರಮಣಕ್ಕೆ ಆ ಜನರ ಸಾಹಸ ಪ್ರವೃತ್ತಿಯು ಚಾಲಕ ಶಕ್ತಿಯಾಯಿತು. ಇದಕ್ಕೆ ನೆರವಾದದ್ದು ವಿಜ್ಞನದ ವೈವಿಧ್ಯಮಯವಾದ ಆವಿಷ್ಕಾರಗಳು, ತಮ್ಮದೇ ಶ್ರೇಷ್ಠಜೀವನ ಪದ್ಧತಿಯೆಂಬ ದೃಢನಂಬುಗೆ, ಅದನ್ನು ಇಡೀ ಪ್ರಪಂಚದಲ್ಲಿ ಹರಡಬೇಕೆಂಬ ಹಂಬಲ. ಪಾಶ್ಚಾತ್ಯರು ಆಕ್ರಮಿಸಿಕೊಂಡ ಪ್ರದೇಶಗಳನ್ನು ತಮ್ಮ ವಸಾಹತುಗಳನ್ನಾಗಿ ಪರಿವರ್ತಿಸಿಕೊಂಡರು. ತಮ್ಮ ರಾಜಕೀಯ, ಆರ್ಥಿಕ, ಧಾರ್ಮಿಕ, ನ್ಯಾಯಿಕ, ಶೈಕ್ಷಣಿಕ, ಭಾಷಿಕ, ಸಾಹಿತ್ಯಿಕ, ಇತ್ಯಾದಿ ಸಂಸ್ಥೆಗಳನ್ನು ತಮ್ಮ ವಸಾಹತುಗಳ ಮೇಲೆ ಹೇರತೊಡಗಿದರು. ಪಾಶ್ಚಾತ್ಯ ಭಾಷೆಗಳು, ಸಾಹಿತ್ಯವು ಇಡೀ ಪ್ರಪಂಚಕ್ಕೇ ಮಾದರಿ ಎಂಬ ಭ್ರಮೆಯನ್ನು ಹುಟ್ಟಿಸಿದವು. ಪಾಶ್ಚಾತ್ಯ ಪ್ರಭಾವವು ರಷ್ಯಾದಂಥ ಬಲಿಷ್ಠ ಸಮತಾವಾದೀಯ ಪ್ರದೇಶವನ್ನೂ ಆಕ್ರಮಿಸಿಕೊಂಡಿತು. ಸಮಾಜಕಾರ್ಯವು ಕೂಡಾ ತನ್ನ ಆಧುನಿಕ ಆಯುಧಗಳಿಂದ ಇಡೀ ಪ್ರಪಂಚವನ್ನು ತನ್ನ ಪ್ರಭಾವಲಯಕ್ಕೆ ಒಳಪಡಿಸಿಕೊಂಡಿತು. ಭಾರತವು ಆರ್ಷೇಯ ಕಾಲದಿಂದಲೂ ಜನಹಿತಕಾರ್ಯಕ್ಕೆ, ಸಕಲಜೀವಾತ್ಮರ ಲೇಸಿಗೆ, ಸರ್ವರ ಕಲ್ಯಾಣಕ್ಕೆ ಹೆಸರಾಗಿತ್ತು. ಕ್ರಿಸ್ತ ಜನನದ ಪೂರ್ವದಲ್ಲಿಯೇ ಬೌದ್ಧಯುಗದಲ್ಲಿ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಗಳು ಸಾಂಘಿಕವಾಗಿ, ಸಂಘಟಿತವಾಗಿ, ವೈಧಾನಿಕವಾಗಿ ನಡೆಯುತ್ತಿದ್ದವು. ಕಾರಣ-ಪರಿಣಾಮಗಳ ವೈಜ್ಞಾನಿಕ ವಿಶ್ಲೇಷಣೆಯ ಮೂಲಕವೇ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪ್ರಯತ್ನ ನಡೆಯುತ್ತಿತ್ತು. ಬ್ರಿಟಿಶರ ಪ್ರವೇಶದ ಮುನ್ನವೇ ಜೀವನ ಪದ್ಧತಿಯು ಶ್ರೇಷ್ಠತಮವೆಂದು ಜಗತ್ತಿಗೆ ತೋರಿಸಿಕೊಟ್ಟಿತ್ತು. ಹೀಗಿದ್ದರೂ ಪಾಶ್ಚಾತ್ಯೀಕರಣದಿಂದ ಪ್ರಾಚ್ಯವು ತನ್ನದೆಲ್ಲವೂ ಕಳಪೆ ಎಂದು ಭಾವಿಸುವ ಪರಿಸ್ಥಿತಿಗೆ ದೂಡಲ್ಪಟ್ಟತ್ತು. ಜಾಗತೀಕರಣದ ಬಿರುಬೀಸಿಗಂತೂ, ಸ್ವಾತಂತ್ರ್ಯದ ನವೀನ ಜೀವನದ ಉಸಿರನ್ನಾಡುತ್ತಿದ್ದರೂ ಪ್ರಾಚ್ಯರಲ್ಲಿ ಪಾಶ್ಚಾತ್ಯ ಸಂಸ್ಕೃತಿಯು, ಛದ್ಮವೇಷದಲ್ಲಾದರೂ, ವಿಜೃಂಭಿಸತೊಡಗಿತು. ವಸಾಹತುಗಳು ಅಳಿದು ಹೋದರೂ, ಇಲ್ಲಿನ ಜನರು ಸ್ವಾತಂತ್ರ್ಯದ ಉಸಿರನ್ನಾಡುತ್ತಿದ್ದರೂ, ನವವಸಾಹತುಶಾಹಿಯು ಪ್ರಾಚ್ಯರ ನರನಾಡಿಗಳನ್ನು ತುಂಬತೊಡಗಿತು. ಅಸ್ಮಿತೆಯೆಂಬುದು ಕಳಾಹೀನವಾಯಿತು. ಭಾರತದ ಸ್ಥಿತಿ ಸಮಾಜದ ಶರೀರಕ್ಕೆ ಪ್ರಾಣವಾದ ಸಮಾಜಕಾರ್ಯವು ಅಂದಂದಿನ ಧರ್ಮದ (Ethos)/ ಮನೋಭೂಮಿಕೆಯ/ ಜೀವ ಪದ್ಧತಿಯ/ ಪ್ರಧಾನ ಚಿಂತನೆಯ ಜಾಡು ಹಿಡಿದು ಸಾಗುವುದು ಸಹಜ ಕ್ರಿಯೆಯಾಯಿತು. (ಈ ಕುರಿತು ಈಗಾಗಲೇ ವಿವರಿಸಲಾಗಿದೆ.) ಭಾರತಕ್ಕೇ ನಮ್ಮ ದೃಷ್ಟಿಯನ್ನು ಸೀಮಿತಗೊಳಿಸಿಕೊಂಡರೆ, ಭಾರತೀಯ ಪರಿಕಲ್ಪನೆಗಳಾದ ಯುಗಗಳ ಹಿನ್ನೆಲೆಯಲ್ಲಿ ಪರಿವೀಕ್ಷಿಸಿದರೆ, ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳಲ್ಲಿ ಪ್ರಚಲಿತವಿರುವ ಧರ್ಮವು ಸಮಾಜಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿರುವುದನ್ನು ನಾವು ಕಾಣಬಹುದು.1 ಧರ್ಮದಂತೆಯೇ ಜನಜೀವನವು ಕುಟುಂಬ-ಬಳಗಗಳಲ್ಲಿ, ಆರ್ಥಿಕ-ರಾಜಕೀಯ ಪದ್ಧತಿಯಲ್ಲಿ, ಮತ-ಜಾತಿಗಳಲ್ಲಿ, ಹಳ್ಳಿ-ನಗರಗಳಲ್ಲಿ, ಪಂಚಾಯತಿ ಆಡಳಿತ ವ್ಯವಸ್ಥೆಯಲ್ಲಿ ವಿನ್ಯಾಸಗೊಳ್ಳುತ್ತಿತ್ತು. ಜನರ ನಡುವಿನ ಸಂಬಂಧಗಳು ಆ ಧರ್ಮದ ನಿಯಮ-ನಿಬಂಧನೆಗಳಿಗೆ ಅನುಗುಣವಾಗಿ ರೂಪುಗೊಂಡು ಅಸ್ತಿತ್ವದಲ್ಲಿರುತ್ತಿದ್ದವು. ವೃತ್ತೀಯ ಪೋಷಾಕನ್ನು ಧರಿಸಿರದಿದ್ದರೂ ಬೌದ್ಧಯಗದಷ್ಟು ಹಿಂದೆಯೇ ಸಂಘಟಿತ ಕಾರ್ಯ ನಡೆಯುತ್ತಿತ್ತೆಂಬುದನ್ನು ಮರೆಯಬಾರದು. ಆಧುನಿಕ ಸಮಾಜಕಾರ್ಯವು ಪ್ರವೇಶಿಸಿದ ಮೇಲೆ ತೀವ್ರತರ ಬದಲಾವಣೆ ಕಂಡಿತು. (ಆನಂತರ ಇದರ ಬಗ್ಗೆ ಪರಿಶೀಲಿಸೋಣ.) ಆಧುನಿಕ ಸಮಾಜಕಾರ್ಯ ಭಾರತಕ್ಕೆ ಸಮಾಜಕಾರ್ಯವು ಪ್ರವೇಶಿಸುವುದನ್ನು ಮತ್ತು ಗಾಂಧೀಯ ಮಾರ್ಗದ ಜೊತೆ ಇದನ್ನು ತಳಿಕೆ ಹಾಕುವುದನ್ನು ಪ್ರಸ್ತಾಪಿಸವುದಕ್ಕೆ ಮುನ್ನ ಆಧುನಿಕ ಸಮಾಜಕಾರ್ಯದ ವಿವರಗಳನ್ನು ಪರಿಶೀಲಿಸುವುದು ಸೂಕ್ತ ಅನ್ನಿಸುತ್ತದೆ. ಈ ಮೊದಲೇ ಹೇಳಿದ ಹಾಗೆ ಅಲ್ಲೊಲಕಲ್ಲೋಲಗೊಂಡ, ಧಿಗ್ಬ್ರಾಂತ ಸ್ಥಿತಿಯನ್ನು ತಲುಪಿದ್ದ ಪಾಶ್ಚಾತ್ಯ ಸಮಾಜವನ್ನು ನೈದಾನಿಕವಾಗಿ ಅರ್ಥಮಾಡಿಕೊಂಡು, ಅಸ್ವಾಸ್ಥ್ಯವನ್ನು ಪರಿಹರಿಸಲು ವೈಜ್ಞಾನಿಕ ವಿಧಾನಗಳನ್ನು, ತಂತ್ರಗಳನ್ನು ಮತ್ತು ಕೌಶಲ್ಯಗಳನ್ನು ಸಂವರಿಸಿ, ಸಂಘಟಿಸಿ ಅನುಷ್ಠಾನಗೊಳಿಸಲು ವಿವಿಧ ಕ್ಷೇತ್ರಗಳನ್ನು ಆಧುನಿಕ ಸಮಾಜಕಾರ್ಯವು ಗುರುತಿಸಿತು; ವ್ಯಕ್ತಿ-ವೃಂದ-ಸಮುದಾಯ, ಈ ತ್ರಿವಿಧ ಪ್ರಕಾರಗಳಲ್ಲಿ ಕ್ರಿಯಾನಿರತವಾಯ್ತು. ಈ ಪ್ರಕಾರಗಳಲ್ಲಿ ಕಂಡುಬರುವ ದೈಹಿಕ / ಭೌತಿಕ-ಮಾನಸಿಕ-ಸಾಮಾಜಿಕ ಅಸ್ವಾಸ್ತ್ಯ ಸ್ಥಿತಿಯನ್ನು ದೂರ ಮಾಡಲು ಕೆಲವು ಪರಿಣಾಮಕರ ಉಪಕರಣಗಳನ್ನು ಸಮಾಜಕಾರ್ಯವು ರೂಪಿಸಿಕೊಂಡಿತು; ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಇವನ್ನು ಪ್ರಯೋಗಿಸತೊಡಗಿತು. ಆಧುನಿಕ ಸಮಾಜಕಾರ್ಯವು ಪ್ರಮುಖವಾಗಿ ಎರಡು ವೈಲಕ್ಷಣ್ಯಗಳಿಂದ ಭಿನ್ನವಾಗಿ ತೋರುತ್ತದೆ. ಮೊದಲನೆಯದು ವೈಜ್ಞಾನಿಕ: ವೈಜ್ಞಾನಿಕ ತಳಹದಿ ಮೇಲೆ ಇದು ರೂಪಿತವಾಗಿದೆ; ಎರಡನೆಯದು ವೃತ್ತ್ಯಾತ್ಮಕ: ವೃತ್ತಿ ಸ್ವತ್ವವನ್ನು (Professional self) ಇದು ಪಡೆದಿರುತ್ತದೆ. ಇದು ವಿಜ್ಞಾನವೆಂಬುದರಿಂದ ಕಾರಣ-ಪರಿಣಾಮಗಳ ಚೌಕಟ್ಟಿನೊಳಗೆ ತನ್ನ ವ್ಯವಹಾರವನ್ನು ವಿನ್ಯಾಸಗೊಲಿಸಿಕೊಳ್ಳುತ್ತದೆ; ಯಾವುದೇ ಸಮಸ್ಯೆಯನ್ನು ಕೇವಲ ಭಾವನಾತ್ಮಕವಾಗಿ ಪರಿಗಣಿಸದೆ ವೈಚಾರಿಕ ನೆಲೆಯಲ್ಲಿ, ನೈದಾನಿಕವಾಗಿ ವಿಶ್ಲೇಷಿಸಿ, ಪರಿಹಾರಕ್ಕೆ ಸೂಕ್ತವಾದ ಉಪಾಯವನ್ನು ಕಂಡುಹಿಡಿದು ಅದನ್ನು ಪ್ರಯೋಗಿಸುತ್ತದೆ; ತನ್ನ ಪ್ರಯೋಗದ ಪರಿಣಾಮವನ್ನು ಮಾಪನ ಮಾಡುತ್ತದೆ; ಕಂಡುಬಂದ ಲೋಪ-ದೋಷಗಳನ್ನು ತಿದ್ದಿಕೊಳ್ಳಲು ಯತ್ನಿಸುತ್ತದೆ. ಈ ಕಾರಣಗಳಿಂದಲೂ ಇದು ವೃತ್ತಿಯಾಗಿ ಕಾರ್ಯನಿರತವಾಗಿದ್ದು ವಸ್ತುನಿಷ್ಠತೆ, ನಿರ್ವ್ಯಾಜತೆ ಇದಕ್ಕೆ ಪ್ರಮುಖ ಆಧಾರಗಳಾಗುತ್ತವೆ. ಹೀಗಾಗಿ ಇದು ತನ್ನ ಅಸ್ಮಿತೆಯನ್ನು ಗುರುತಿಸಿಕೊಂಡು, ಒಂದು ಶಿಸ್ತು ಆಗಿ, ತನ್ನ ಸುತ್ತಲೂ ಪ್ರತ್ಯೇಕತೆಯ ಕೋಟೆಗೋಡೆಯನ್ನು ನಿರ್ಮಿಸಿಕೊಳ್ಳುತ್ತದೆ. ಹಿಂದಿನಿಂದಲೂ ಗುರುತಿಸಲ್ಪಟ್ಟ ಶಿಸ್ತು-ವೃತ್ತಿಗಳ ಸಂದೋಹದಲ್ಲಿ ಇದು ನೆಲೆಗೊಂಡು ತನ್ನ ವ್ಯವಹಾರವನ್ನು ನಡೆಸುತ್ತದೆ. ಅದಕ್ಕಾಗಿಯೇ ಇದಕ್ಕೆ ನಿರ್ದಿಷ್ಟವಾದ ತತ್ತ್ವ-ಸಿದ್ಧಾಂತ, ಸೂತ್ರ-ಮೌಲ್ಯಗಳು, ವಿಧಾನ-ತಂತ್ರಗಳು, ಕೌಶಲ್ಯ-ಕಾರ್ಯ ವೈಖರಿಗಳು, ಅನುಷ್ಠಾನಯೋಗ್ಯ ಕ್ಷೇತ್ರಗಳು ಇರುತ್ತವೆ. ಇವೆಲ್ಲವನ್ನು ವ್ಯವಸ್ಥಿತವಾಗಿ ನಿಭಾಯಿಸಲು, ನಿರ್ವಹಿಸಲು ಸೂಕ್ತ ಆರೋಗ್ಯಕರ ವ್ಯಕ್ತಿತ್ವವುಳ್ಳ, ವೃತ್ತ್ಯಾತ್ಮಕವಾಗಿ ಪ್ರಶಿಕ್ಷಣ ಪಡೆದ ವ್ಯಕ್ತಿಗಳು ಅತ್ಯಗತ್ಯ. ಅಂದರೆ, ಆಧುನಿಕ ಸಮಾಜಕಾರ್ಯವು ಯಾರಿಂದಲಾದರೂ, ಹೇಗಾದರೂ, ಯಾವಾಗಲಾದರೂ, ಎಲ್ಲೆಲ್ಲಾದರೂ ಕೈಗೊಳ್ಳಬಹುದಾದ ಕಾರ್ಯವಲ್ಲ. ಸಮಾಜಕಾರ್ಯವನ್ನು ತರಬೇತಿ ಪಡೆದ (ಕೆಲವು ರಾಷ್ಟ್ರಗಳಲ್ಲಿ ಅಧಿಕೃತ ಪರವಾನಿಗೆ (Licence) ಪಡೆದ), ವ್ಯಕ್ತಿಗಳೇ ಕೈಗೊಳ್ಳಬೇಕು. ಈ ವೃತ್ತಿಕಾರರು ಎಷ್ಟೇ ಸಮರ್ಥರಿದ್ದರೂ ಏಕಾಕ್ಷಿಯಾಗಿ ಕಾರ್ಯ ನಿರ್ವಹಿಸಲಾರರು. ಅವರು ಅನ್ಯರೊಡನೆ ಸಾಂಘಿಕವಾಗಿ ಕಾರ್ಯನಿರತರಾಗಿರಬೇಕಾಗುತ್ತದೆ. ಇದೂ ಅಲ್ಲದೆ ಇವರು ಒಂದಲ್ಲಾ ಇನ್ನೊಂದು ಸಂಘಟನೆಯಲ್ಲಿ ನೇಮಕಗೊಂಡು ಅದರ ನಿಯಮ-ನಿಬಂಧನೆಗಳಿಗೆ ಅಧೀನರಾಗಿ ಕಾರ್ಯನಿರತರಾಗಿರಬೇಕು. ಕಾನೂನು ಚೌಕಟ್ಟಿನೊಳಗೆ ನೋಂದಣಿಗೊಂಡು ಸ್ಥಾಪಿತವಾದ ಸಂಸ್ಥೆ ಅಥವಾ ಕೇಂದ್ರವು ಕೂಡಾ ತನ್ನ ಸಂವಿಧಾನ ಮತ್ತು ಕಾನೂನಿನ ಕಟ್ಟಳೆಗಳಿಗೆ ಅನುಗುಣವಾಗಿ ನಡೆಯಬೇಕಾಗುತ್ತದೆ; ತಾನು ನೇಮಿಸಿಕೊಂಡ ಕಾರ್ಯಕರ್ತರನ್ನು ಹಾಗೆಯೇ ನಿಯಮಾನುಸಾರ ನಡೆಸಿಕೊಳ್ಳಬೇಕಾಗುತ್ತದೆ. ಕಾರ್ಯನಿರತ ಸಿಬ್ಬಂದಿಗೆ ನಿರ್ದಿಷ್ಟ ಸಂಭಾವನೆ ಅಥವಾ ಸಂಬಳ ನೀಡಬೇಕಾಗುತ್ತದೆ; ಸೇವಾ ನಿಯಮಗಳ ಪ್ರಕಾರ ನಿವೃತ್ತಿಯಾನಂತರದ ಸವಲತ್ತುಗಳನ್ನು ಕೇಂದ್ರವು ಒದಗಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಆಧುನಿಕ ಸಮಾಜಕಾರ್ಯದ ಮೌಲ್ಯಗಳನ್ನು ನಾವು ಪರಿಶೀಲಿಸಬೇಕು. ನಮ್ಮ ಅನುಭವದಲ್ಲಿ ವೈರುಧ್ಯದ ಪರಿಸ್ಥಿತಿಗಳಲ್ಲಿ ಅನೇಕ ಇಕ್ಕಟ್ಟುಗಳನ್ನು ನಾವು ಇದಿರಿಸುತ್ತೇವೆ. ಆಗ ನಾವು ಯಾವ ಮೌಲ್ಯಗಳನ್ನು ಅಂಗೀಕರಿಸಬೇಕು, ಯಾವ ಸೂತ್ರಗಳಂತೆ ನಡೆಯಬೇಕು ಎಂಬ ಗೊಂದಲ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಇಜ್ಜೋಡಿ ಮೌಲ್ಯಗಳು ನಮ್ಮಿದಿರು ಈ ರೀತಿ ಸುಳಿಯುತ್ತವೆ: ಇಜ್ಜೋಡಿ ಮೌಲ್ಯಗಳ ಪಟ್ಟಿ
ಈ ಎರಡೂ ಗುಂಪುಗಳಲ್ಲಿ ಒಂದನ್ನು ಆಯ್ದುಕೊಂಡವರು ಇನ್ನೊಂದನ್ನು ದೂರೀಕರಿಸುತ್ತಾರೆ/ತಿರಸ್ಕರಿಸುತ್ತಾರೆ. ಆದರೆ, ವ್ಯಾವಹಾರಿಕವಾಗಿ ಸಮಾಜಕಾರ್ಯಕರ್ತರು ಈ ಗುಂಪುಗಳಲ್ಲಿ ಒಂದನ್ನು ಆಯ್ದುಕೊಂಡು ಇನ್ನೊಂದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆಂದು ಹೇಳಲಾಗದು. ಸಂದರ್ಭಾನುಸಾರ, ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಇವುಗಳಲ್ಲಿ ಕೆಲವನ್ನು ಆಯ್ದುಕೊಂಡು ಕೆಲವನ್ನು ತಿರಸ್ಕರಿಸುವುದುಂಟು. ವಿರುದ್ಧ ಮೌಲ್ಯಗಳನ್ನು ಒಂದೆಡೆಗೆ ತರುವ ಸಾಧ್ಯತೆಗಳೂ ಉಂಟು. ಮಾರ್ಗದರ್ಶಿ ಸೂತ್ರಗಳು ಈ ಮೌಲ್ಯಗಳ ಆಧಾರದ ಮೇಲೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿಕೊಳ್ಳುವುದುಂಟು. ಉದಾಹರಣೆಗೆ, ಈ ಮುಂದಿನವುಗಳನ್ನು ಗಮನಿಸಬಹುದು:
ಈ ಸೂತ್ರಗಳು ಬಿಡಿಬಿಡಿಯಾದವುಗಳಲ್ಲ; ಇಡಿಯಾಗಿ ಕ್ರಿಯಾಶೀಲವಾಗಿರುತ್ತವೆ. ಒಂದನ್ನು ಹಿಡಿದು ಹೊರಟಾಗ ಇತರ ಸೂತ್ರಗಳೂ ಕಣ್ಮುಂದೆ ಇದ್ದೇ ಇರುತ್ತವೆ. ಅಂದರೆ, ಕಾರ್ಯಕರ್ತನದ್ದು ಅಖಂಡ, ಸಮಗ್ರ ಮಾರ್ಗದೃಷ್ಟಿಯಾಗಿರಬೇಕಾದದ್ದು ಅತ್ಯಗತ್ಯ. ಇಂಥ ಮಾರ್ಗದೃಷ್ಟಿಯಿಂದ ಸಮಾಜಕಾರ್ಯಕರ್ತನು ಇತರರೊಡನೆ ಸಂಘಟಿತನಾಗಿ ಕಾರ್ಯನಿರತನಾದರೆ ಗುರಿಗಳಾದ ಸಮಾಜಕಲ್ಯಾಣ ಮತ್ತು ಸಾಮಾಜಿಕ ಅಭ್ಯುದಯವು ಸಾಧಿತವಾಗುತ್ತವೆ. ಸಮಾಜಕಾರ್ಯದ ವಿಧಾನಗಳು ಆಧುನಿಕ ಸಮಾಜಕಾರ್ಯವು ವೈಚಾರಿಕ-ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿರುವುದರಿಂದ, ಒಂದು ವೃತ್ತಿಯಾಗಿ ಕಾರ್ಯಾಚರಣೆಯಲ್ಲಿರುವುದರಿಂದ ಅದು ತನ್ನ ನಿರ್ದಿಷ್ಟ ಮೌಲ್ಯಸೂತ್ರಗಳ ಬೆಳಕಿನಲ್ಲಿ ಪರೀಕ್ಷಿಸಲ್ಪಟ್ಟ ಕೆಲವು ವಿಧಾನ-ತಂತ್ರ-ಕೌಶಲ್ಯಗಳನ್ನು ಅಂಗೀಕರಿಸಿಕೊಂಡಿದೆ. ಅವುಗಳಲ್ಲಿ ಮುಖ್ಯವಾಗಿ ಆರು ವಿಧಾನಗಳನ್ನು ಮತ್ತು ಅವುಗಳಿಗೆ ಅನುಸ್ಯೂತವಾದ ತಂತ್ರ-ಕೌಶಲ್ಯಗಳನ್ನು ಗುರುತಿಸಬಹುದು.
ಸಮಾಜಕಾರ್ಯದ ಐತಿಹಾಸಿಕ ಘಟ್ಟಗಳು ಈಗಾಗಲೇ ಪ್ರಸ್ತಾಪಿಸಿದಂತೆ ಸಮಾಜಕಾರ್ಯವು ಮಾನವ ಸಮಾಜದ ಭಾಗವಾಗಿಯೇ ಒಡಮೂಡಿದ ಸಂಗತಿ. ಆಧುನಿಕ ಕಾಲದವರೆಗೂ ಅದು ಮುಖ್ಯವಾಗಿ ಒಂದೇ ಘಟ್ಟದಲ್ಲಿ ಸಾಗಿ, ಆಧುನಿಕ ಕಾಲದ ಸಂಕ್ರಾಂತಿಯ ಘಟ್ಟದಲ್ಲಿ ಎರಡನೆಯ ಘಟ್ಟವು ಕಾಣಿಸಿಕೊಂಡು ಆಧುನಿಕ ಕಾಲದಲ್ಲಿ ಮುಂದಿನ ಎರಡು ಘಟ್ಟಗಳಲ್ಲಿ ಹರಡಿಕೊಂಡಿದೆ ಎಂಬುದು ನನ್ನ ಒಂದು, ಪರೀಕ್ಷೆಗೆ ಒಳಪಡಬೇಕಾದ ಪ್ರಮೇಯ. ಸಮಾಜದ ರಚನೆಯು ಅದರ ಕ್ರಿಯಾತ್ಮಕತೆಯಿಂದ ಆಗುತ್ತದೆ, ಅಸ್ತಿತ್ವದಲ್ಲಿರುತ್ತದೆ ಎಂದು ಈಗಾಗಲೇ ನೊಡಲಾಗಿದೆ. ಸಮಾಜವು ಮಾನವ ಸಂಬಂಧಗಳ ಬಲೆಯಾದುದರಿಂದ ಇದು ಕ್ರಿಯೆ-ಪ್ರತಿಕ್ರಿಯೆ-ಪ್ರಕ್ರಿಯೆ-ಸಂಬಂಧಗಳ ವಿನ್ಯಾಸವೆಂದು ಅರ್ಥವಾಗುತ್ತದೆ. ಈ ವಿನ್ಯಾಸವು ವ್ಯಕ್ತಿ-ವ್ಯಕ್ತಿಗಳ ನಡುವೆ, ವ್ಯಕ್ತಿ-ವೃಂದಗಳ ನಡುವೆ, ವೃಂದ-ವೃಂದಗಳ ನಡುವೆ, ವೃಂದ-ಸಮುದಾಯಗಳ ನಡುವೆ, ವ್ಯಕ್ತಿ-ಸಮುದಾಯಗಳ ನಡುವೆ ಹಬ್ಬಿ ಹರಡಿಕೊಂಡಿದೆ. ಈ ವಿನ್ಯಾಸವು ಕ್ರಿಯೆಗಳ ಸಂಘಟಿತ ಜಾಲವೆಂದೇ ಪರಿಗಣಿತವಾಗಿದೆ. ಮಾನವನ ಕ್ರಿಯೆಗಳು ವ್ಯಕ್ತಿಗತವೆಂದು ಕಾಣಿಸಿದರೂ ಅವು ನಿಜದಲ್ಲಿ ಸಾಂಘಿಕ ಅಥವಾ ಸಾಮಾಜಿಕವಾದವು. ಮಾನವ ಕ್ರಿಯೆಯು ಹೇಗೆ ಸಂಬಂಧಗಳ ಜನನಕ್ಕೆ ಕಾರಣವೊ ಹಾಗೆಯೇ ಅದು ಸಂಬಂಧಗಳ ಪರಿಣಾಮವೂ ಹೌದು. ಅಂದರೆ, ಸಂಬಂಧಗಳು ಹೆಣೆದುಕೊಂಡು ಸಂಪೋಷಣೆಗೊಂಡಿರುವುದು ಅಲ್ಲಲ್ಲಿನ ಅಂದಂದಿನ ಯುಗಧರ್ಮದ, ಮೌಲ್ಯಗಳ, ಜೀವನ ಸೂತ್ರಗಳ, ಆಸೆ-ಹಂಬಲಗಳ, ನಿರೀಕ್ಷೆ ಈಡೇರಿಕೆಗಳ, ಸಂಘ-ಸಂಸ್ಥೆಗಳ ಕಟ್ಟೋಣದ, ಇಂತಹ ಇತರ ಸಂಗತಿಗಳ ಕ್ರಿಯಾತ್ಮಕತೆಯಿಂದ. ಅಂದರೆ, ಕ್ರಿಯೆಯು ಏಕವ್ಯಕ್ತಿ ಕೇಂದ್ರಿತವಲ್ಲ ಎಂಬುದು ಸಾಬೀತಾಗುತ್ತದೆ. ಸಂಬಂಧಗಳು ಸಂಘರ್ಷಣಗಳ ನಡುವೆಯೂ ಉಳಿದುಕೊಂಡು ಬರುವುದು, ಊನವಾದರೂ ಸರಿಹೊಂದುವುದು, ಹರಿದುಹೋದರೂ ಒಂದಾಗುವುದು, ಅಳಿದುಹೋದರೂ ಹೊಸರೂಪದಲ್ಲಿ ಅವತರಿಸುವುದು ಮಾನವರ ಪಾರಸ್ಪರಿಕ ಒಡನಾಟದಿಂದ, ಸಾಮರಸ್ಯದ ಸೌಹಾರ್ದದ ಕೊಡು-ಕೊಳ್ಳುವಿಕೆಯ, ತ್ಯಾಗ-ಬಲಿದಾನಗಳ, ಇಂತಹ ಸಾಂಘಿಕ ವ್ಯವಹಾರಗಳಿಂದ. ಆಥರ್ಿಕ, ರಾಜಕೀಯ, ಧಾಮರ್ಿಕ, ನೈತಿಕ, ನ್ಯಾಯಿಕ, ಕೌಟುಂಬಿಕ, ಬಳಗೀಯ, ಇತ್ಯಾದಿ ವಿಶೇಷಗಳು ಕೇವಲ ತೋರಿಕೆಯ ಘಟಕಗಳು. ಇವು ನಿಜದಲ್ಲಿ ಸಾಮಾಜಿಕ ವ್ಯವಸ್ಥೆಯ ಸಂವೈಧಾನಿಕ, ಅವಿಭಾಜ್ಯ ಅಂಗಗಳು. ಇವೆಲ್ಲವೂ ರೂಪುಗೊಂಡು ಅಸ್ತಿತ್ವದಲ್ಲಿರುವುದು ಮಾನವರ ಚಟುವಟಿಕೆಗಳ ಜಾಲದಿಂದ. ಆದುದರಿಂದಲೇ ಕ್ರಾಂತಿಯಾಯಿತೆಂದು ಬಗೆಯುವ ಆಧುನಿಕ ಕಾಲದವವರೆಗೂ ಪ್ರಪಂಚದ ಎಲ್ಲ ಕಡೆಯೂ ಈ ಪಾರಸ್ಪರಿಕ ನೆರವಿನ ಸಂಬಂಧಗಳ ಸಮಾಜಕಾರ್ಯದ ಮೊದಲ ಘಟ್ಟವು ಅಸ್ತಿತ್ವದಲ್ಲಿತ್ತು. ಆಗ ಪಾತ್ರಪಲ್ಲಟಕ್ಕೆ ಹೆಚ್ಚು ಅವಕಾಶವಿತ್ತು. ಅಂದರೆ, ವ್ಯಕ್ತಿಗಳು, ಗುಂಪುಗಳು, ಸಮುದಾಯಗಳು, ಇತರ ಸಾಂಘಿಕ ವ್ಯವಸ್ಥೆಗಳು ತಮ್ಮತಮ್ಮ ವಿಶಿಷ್ಟ ಹಾಗೂ ಸಾಮಾನ್ಯ ಪಾತ್ರಗಳನ್ನೂ ಆಡುತ್ತಿದ್ದವು. ಸಂದರ್ಭಕ್ಕೆ ಸೂಕ್ತವಾಗಿ ಇವುಗಳ ಪಾತ್ರ ಪಲ್ಲಟವಾಗುತ್ತಿದ್ದುದುಂಟು. ಉದಾಹರಣೆಗೆ, ಯಾರೂ ಯಾವಾಗಲೂ ಕೊಡುತ್ತಲೇ ಇರಲಿಲ್ಲ, ತೆಗೆದುಕೊಳ್ಳುತ್ತಲೂ ಇದ್ದರು; ಯಾವಾಗಲೂ ನೆರವನ್ನು ನೀಡುತ್ತಲೇ ಇರಲಿಲ್ಲ, ನೆರವನ್ನು ಪಡೆಯುತ್ತಲೂ ಇದ್ದರು; ಯಾವಾಗಲೂ ಶತ್ರುತ್ವವನ್ನು ಸಾಧಿಸುತ್ತಲೇ ಇರಲಿಲ್ಲ, ಸ್ನೇಹಸೌಹಾರ್ದವನ್ನು ಬೆಳೆಸಿಕೊಳ್ಳುತ್ತಲೂ ಇದ್ದರು. ಈ ಘಟ್ಟದಲ್ಲಿ, ವಿಶಿಷ್ಟ / ನಿದರ್ಿಷ್ಟ ಅನ್ನುವುದಕ್ಕಿಂತಲೂ ವೈವಿಧ್ಯ ಎಂಬಂಥ ಸ್ಥಿತಿಯೇ ಕಾಣಿಸುತ್ತಿತ್ತು. ಈ ಘಟ್ಟದಲ್ಲಿ ಸಮಾಜಕಾರ್ಯವು ಇತರ ಕಾರ್ಯಗಳ ಜೊತೆಗೆ ಅವಿನಾಭಾವದಿಂದ ಬೆರೆತುಕೊಂಡಿತ್ತು. ಸಮಾಜವು ಬದಲಾಗುತ್ತಾ ಸಾಗಿದಂತೆ, ಅದರಲ್ಲೂ ಅದು ತೀವ್ರವಾಗಿ ಸ್ವ-ಸ್ವರೂಪವನ್ನು ಪಡೆದಾಗ, ಸಮಾಜಕಾರ್ಯವು ಪಾತ್ರ ನಿರ್ದಿಷ್ಟತೆಯನ್ನು ಪಡೆಯತೊಡಗಿತು. ಅಂದರೆ, ದುಃಖಿತರ, ಸಮಸ್ಯೆ ಪೀಡಿತರ, ದಮನಕ್ಕೆ ಒಳಗಾದವರ ಇಂಥವರು ಅನ್ಯರಿಂದ ವಿಂಗಡನೆಗೊಂಡು ತಮಗೆ ಸಾಮಾನ್ಯರ ಜೊತೆಗೆ ವಿಶಿಷ್ಟ ರೀತಿಯ ಸೇವಾಕಾರ್ಯದ ಅಗತ್ಯವಿದೆ ಎಂದು ಪ್ರದರ್ಶಿಸತೊಡಗಿದರು; ಅವರದೇ ಒಂದು ಗುಂಪಾಗತೊಡಗಿತು. ಅವರ ಹೆಚ್ಚಳದಿಂದ ಸಮಾಜದಲ್ಲಿ ವಿಸಂಘಟನೆಯ ಲಕ್ಷಣಗಳು ಕಾಣಿಸತೊಡಗಿದವು. ಊನಶಕ್ತರ ಉಪಚಾರದ ಅಗತ್ಯ ಕಂಡಾಗ ನೆರವಾಗುವವರು ಮುಂದಾಗಿ ತಮ್ಮದೇ ಒಂದು ಗುಂಪಾಗಿ ಕಾಣಿಸತೊಡಗಿದರು. ಹೀಗೆ ಪಾತ್ರಗಳು ಎರಡಾಗಿ ಕ್ರೋಡೀಕರಣಗೊಳ್ಳತೊಡಗಿದವು. ಸಮಾಜಕಾರ್ಯದ ಇತಿಹಾಸದಲ್ಲಿ, ಆಧುನಿಕ ಸಮಾಜಕಾರ್ಯವು ಮೊಗದೋರುವ ಸಂದರ್ಭದಲ್ಲಂತೂ ಈ ಎರಡು ಗುಂಪುಗಳು ಒಡೆದು ಗಟ್ಟಿಗೊಳ್ಳತೊಡಗಿದವು. ಯಾವಾಗ ಸಾಮಾಜಿಕ ಸಮಸ್ಯೆಗಳು ಉಲ್ಬಣಗೊಳ್ಳತೊಡಗಿಕೊಳ್ಳತೊಡಗಿದವೋ ಆಗ ನೆರವಾಗುವವರ ಬೇಡಿಕೆಯೂ ಹೆಚ್ಚಾಗತೊಡಗಿತು. ನೆರವಾಗುವವರು ಬಲ್ಲಿದರು, ನೆರವನ್ನು ಪಡೆಯುವವರು ಇಲ್ಲದವರು; ಅವರು ದಾನಿಗಳು, ಇವರು ದೀನರು; ಅವರು ಕೊಡುವವರು ಮಾತ್ರ, ತೆಗೆದುಕೊಳ್ಳುವವರಲ್ಲ; ಇವರು ತೆಗೆದುಕೊಳ್ಳುವವರು ಮಾತ್ರ, ಕೊಡುವವರಲ್ಲ. ಇಂತಹ ಗುಂಪುಗಳ ನಿರ್ಮಾಣದಿಂದ ಸಮಾಜದಲ್ಲಿ ತರತಮ ಭಾವಗಳು, ಮೇಲು ಕೀಳಿನ ಭೇದಗಳು ಉಂಟಾಗಿ ಕೊಡುವವರು ಶ್ರೇಷ್ಠರು, ತೆಗೆದುಕೊಳ್ಳುವವರು ಕನಿಷ್ಠರು ಎಂಬಂತಾಯ್ತು. ಸಮಾಜದಲ್ಲಿ ವಿಭಿನ್ನ ಪಾತ್ರಗಳನ್ನಾಡುತ್ತಿದ್ದ ಧಾರ್ಮಿಕ, ಆರ್ಥಿಕ ಗುಂಪುಗಳು ಊನಶಕ್ತರ ನೆರವಿಗೆ ಮುಂದಾಗತೊಡಗಿದವು. ಪರಂಪರೆಯಿಂದ ನಡೆದುಬರುತ್ತಿದ್ದ ಪಾರಸ್ಪರಿಕ ಕೊಡುಕೊಳ್ಳುವಿಕೆಯು ಭಿನ್ನಗೊಂಡು ನೆರವನ್ನು ನೀಡುವುದು ನೈತಿಕೋ-ಧಾರ್ಮಿಕ ಚಟುವಟಿಕೆ ಎಂದು ಪರಿಗಣಿತವಾಯ್ತು. ಈ ಸಂದರ್ಭದಲ್ಲಿ ವೇದಕಾಲದಲ್ಲಿ ದಾನ ಪದ್ಧತಿಯು ರೂಪಾಂತರಗೊಂಡುದರ ನೆನಪಾಗುತ್ತದೆ. ಆಗ ದಾನ ಅಂದರೆ ಎಲ್ಲರೂ ಕೂಡಿ ಸಂಗ್ರಹಿಸಸಿದ್ದುದನ್ನು ವ್ಯವಸ್ಥಿತವಾಗಿ ಹಂಚಿಕೊಳ್ಳುವುದು ಎಂದಿದ್ದುದು, ಕ್ರಮೇಣ ಹಂಚುವಿಕೆಯ ಹೊಣೆ ಹೊತ್ತವರು ಸಂಗ್ರಹಗೊಂಡ ಸಂಪತ್ತಿಗೆ ತಾವೇ ಒಡೆಯರೆಂದೂ ತಾವು ಹಂಚುತ್ತಿರುವುದು ತಮ್ಮ ಔದಾರ್ಯದ ಧಾರ್ಮಿಕ ಭಾವನೆಯ ಕೃತಿಯೆಂದೂ, ಇದು ಇಲ್ಲದವರಿಗೆ ತಮ್ಮಂಥ ಉಳ್ಳವರು ತೋರುವ ಕೃಪಾಕಟಾಕ್ಷವೆಂದೂ ಇದೇ ದಾನ ಎಂದೂ ಸಾಧಿಸತೊಡಗಿದರು. ಹೀಗೆ ದಾನ ಶಬ್ದವು ಭ್ರಷ್ಟತೆಯ ಚರ್ಯೆಯ ಅರ್ಥ ಪಡೆಯಿತು. ಶ್ರೀಮಂತರು ಮಾತ್ರವಲ್ಲ ಮಠ-ಮಾನ್ಯಗಳೂ ಈ ಮನೋದೃಷ್ಟಿಯನ್ನು ಬೆಳೆಸಿಕೊಂಡವು. ಆಧುನಿಕ ಸಮಾಜಕಾರ್ಯವು ರೂಪುಗೊಂಡ 18-19ನೆಯ ಶತಮಾನದಲ್ಲಿ ಸಮಾಜಕಾರ್ಯಕರ್ತರು ಅರ್ಥಿವೃಂದಗಳಿಗೆ ನೆರವಾಗಲು ಸಂಘಟಿತರಾದ ಪರಿಯನ್ನು ನಾವು ಕಾಣಬಹುದು. ಉಲ್ಬಣಗೊಂಡ ಸಮಸ್ಯೆಗಳ ಪರಿಹಾರಕ್ಕೆ, ದಿಗ್ಭ್ರಾಂತಗೊಂಡ ಜನರ ನೆಮ್ಮದಿಗೆ, ವಿಸಂಘಟನೆಯ ನಿವಾರಣೆಗೆ ಸಮಾಜಕಾರ್ಯಕರ್ತರು ಏಕಾಕಿಗಳಾಗಿ ದುಡಿದರೆ ಪ್ರಯೋಜನವಿಲ್ಲ ಎಂಬ ಅರಿವಾಗಿ ಸಂಘಟಿತರಾಗಿ ಕ್ರಿಯಾಶೀಲರಾಗುವುದು ಅಗತ್ಯವೆಂದು ಕಂಡುಕೊಳ್ಳತೊಡಗಿದರು. ಜೊತೆಗೆ, ತಮಗಿರುವ ಆಸಕ್ತಿ ಮತ್ತು ಸಂಪತ್ತು ಮಾತ್ರವೇ ಸಾಕಾಗುವುದಿಲ್ಲ ಎಂದೂ ಅವರಿಗೆ ಅರಿವಾಯಿತು. ಅದಕ್ಕಾಗಿ ಸಮಸ್ಯೆಗಳನ್ನು ನೈದಾನಿಕವಾಗಿ ಅರ್ಥಮಾಡಿಕೊಳ್ಳಬೇಕು, ಸೂಕ್ತವಾದ ಪರಿಹಾರೋಪಾಯಗಳನ್ನು ಕಂಡುಹಿಡಿದು ಅವನ್ನು ವೈಧಾನಿಕವಾಗಿ ತಂತ್ರಗಳನ್ನು ಉಪಯೋಗಿಸಿಕೊಂಡು ಕೌಶಲ್ಯದಿಂದ ಅವನ್ನೇ ಅನುಷ್ಠಾನಗೊಳಿಸಬೇಕು ಎಂಬ ಚಿಂತನೆಯು ಪ್ರಬಲವಾಯಿತು. ಹೀಗಾಗಿ ಸಮಾಜಕಾರ್ಯವು ವೃತ್ತೀಯ ಪೋಷಾಕನ್ನು ಧರಿಸತೊಡಗಿತು. ಚಾರಿಟಿ ಆರ್ಗನೈಜೇಶನ್ ಸೋಸ್ಯಾಟಿಯು ಇಂಗ್ಲೆಂಡಿನ ಲಂಡನ್ನಿನಲ್ಲಿ (1869ರಲ್ಲಿ) ಆರಂಭಕೊಂಡಂದಿನಿಂದ ಆಧುನಿಕ ಸಮಾಜಕಾರ್ಯವು ವಿಶಿಷ್ಟ ರೂಪವನ್ನು ಪಡೆಯುತ್ತಾ ಅಸ್ಮಿತೆಯನ್ನು ಗಳಿಸಿಕೊಂಡ ಇದುವರೆಗೆ ಅಸ್ತಿತ್ವದಲ್ಲಿದ್ದ ವೈದ್ಯಕೀಯ, ವಕಾಲತ್ತು, ಇಂತಹ ವೃತ್ತಿಗಳ ಜೊತೆಗೆ ಸೇರಿಸಿಕೊಂಡಿತು. ಇದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ-ಅದರಲ್ಲೂ ಫಲವತ್ತಾದ ನವೀನ ಅಮೇರಿಕೆಯ ನೆಲದಲ್ಲಿ ಬಿತ್ತನೆಗೊಂಡಮೇಲಂತೂ-ಶಿಸ್ತುಗಳ ಶಿಸ್ತು ಎಂಬಂತಹ ಕೀರ್ತಿಗೆ ಭಾಜನವಾಗತೊಡಗಿತು. ಕಲ್ಯಾಣರಾಜ್ಯದ ಪರಿಕಲ್ಪನೆಯು ಹರಡುತ್ತಿದ್ದಂತೆ, ಜಗತ್ತಿನಲ್ಲಿ ಸಮಸ್ಯೆಗಳು ನಿಬಿಡವಾದಂತೆ ಇಡೀ ಸಮಾಜವೇ ಕುದಿಯತೊಡಗಿತು. ಆಗ ಸಮಾಜಕಾರ್ಯಕ್ಕೆ ವ್ಯಾಪಕತೆ ದೊರೆಕೊಂಡಿತು. ತಾನು ಪ್ರಮುಖ ವೃತ್ತಿಯೆಂದು ಬೀಗತೊಡಗಿ ತನ್ನ ಸುತ್ತಲೂ ಅಸ್ಮಿತೆಯ ಕೋಟೆಯನ್ನು ಕಟ್ಟಿಕೊಳ್ಳತೊಡಗಿತು. ಇದು ಇದರ ಮೂರನೆ ಘಟ್ಟವೆಂದು ಪರಿಗಣಿತವಾಯ್ತು. ಆಧುನಿಕ ಕಾಲವು ಅನೇಕ ವೈಶಿಷ್ಟ್ಯಗಳಿಗೆ ಹೆಸರಾಗಿದೆ. ವೈಜ್ಞಾನಿಕಯುಗ, ಯಂತ್ರಯುಗ, ಸ್ವಾತಂತ್ರ್ಯದಯುಗ, ತೀವ್ರ ಬದಲಾವಣೆಯ ಯುಗ, ಇಡೀ ಪ್ರಪಂಚವು ಆಕುಂಚನಗೊಂಡ ಯಗ, ಸಂವಹನ ಕ್ರಾಂತಿಯುಗ, ಹೀಗೆ ನಾನಾ ಹೆಸರುಗಳೆಲ್ಲವಕ್ಕೂ ಒಪ್ಪಿಗೆ ನೀಡುವ ಯುಗವಾಗಿದೆ. ಈ ಯುಗವು ಆಧುನಿಕ ವೃತ್ತಿಗಳು ಎಷ್ಟು ಪರಾವಲಂಬಿಗಳು ಎಂಬುದೂ, ಅಂತಾರಾಷ್ಟ್ರೀಯ ಅಥವಾ ಅಂತಾಶಿಸ್ತೀಯ ಸ್ಥಿತಿಯು ಅನಿವಾರ್ಯ ಎಂಬ ಅರಿವೂ ಈ ಕಾಲದಲ್ಲಿಯೇ ಮೂಡಿದೆ. ಹೀಗಾಗಿ ವೃತ್ತಿ ಪೋಷಾಕನ್ನು ಧರಿಸುತ್ತಿದ್ದಂತೆಯೇ ಸಮಾಜಕಾರ್ಯವು ಅದನ್ನು ಕಳಚಿಕೊಂಡು ಸರಳಸಾಮಾನ್ಯ ಉಡುಗೆ ತೊಡುವ ಸ್ಥಿತಿಯು ಬಂದೊದಗಿದೆ. ಮರಳಿ ಮನೆಗೆ ಎಂಬುದು ಅನಿವಾರ್ಯವಾಗಿದೆ. ಅನ್ಯ ಶಿಸ್ತು-ವೃತ್ತಿಗಳ ಸಹಕಾರ-ನೆರವು ಇರದಿದ್ದರೆ ಇದರ ಬೇಳೆ ಬೇಯುವುದಿಲ್ಲ ಎಂಬಂತಾಗಿದೆ. ಅದೂ ಅಲ್ಲದೆ ಸಮಾಜದಲ್ಲಿ ಹಬ್ಬಿ ಹರಡುತ್ತಿರುವ ನಿಯಂತ್ರಣಕ್ಕೆ ಅಸಾಧ್ಯವೆಂಬಂತಹ ಸಮಸ್ಯೆ-ಸಂಕಟ ಸ್ಥಿತಿಗಳನ್ನು ಸಮಾಜಕಾರ್ಯವು ನಿಭಾಯಿಸಲು ಅಶಕ್ತವಾಗಿದೆ. ಆರಂಭಕಾಲದಲ್ಲಿನ ಪಾತ್ರ ಪಲ್ಲಟ ಸ್ಥಿತಿಯತ್ತ ಮರಳುವಂತಾಗಿದೆ. ವೃತ್ತೀಯ ಪೋಷಾಕು ಮಲಿನಗೊಳ್ಳುತ್ತಲಿರುವುದು ಅರಿವಾಗಿ ಒಂದುರೀತಿಯಲ್ಲಿ ವೃತ್ತಿ ನಿರನಸ್ಥ ಸ್ಥಿತಿ (Deprofessionalisation) ಧುತ್ತೆಂದು ಮುಂದೆ ನಿಂತಿದೆ. ಇದು ಸಮಾಜಕಾರ್ಯದ ನಾಲ್ಕನೆಯ, ಬಹುಶಃ ಅಂತಿಮ ಘಟ್ಟ ಎಂದು ಹೇಳಬಹುದಾಗಿದೆ. ಗಾಂಧೀಯ ಮಾರ್ಗ ಆಧುನಿಕ ಸಮಾಜಕಾರ್ಯದಂತೆ ಗಾಂಧೀಯ ಮಾರ್ಗವೂ ಆಧುನಿಕ. ಆದರೆ, ಗಾಂಧೀಯ ಮಾರ್ಗ ಎಂಬುದೊಂದು ಉಂಟೆ? ಅದು ಅಪ್ಪಟವಾದ್ದೆ? ಎಂಬ ಸಂಶಯಗಳು ಸುಳಿಯುತ್ತವೆ. ಯಾಕೆಂದರೆ, ಆದಿಕಾಲದಿಂದಲೂ, ಒಂದು ರೀತಿಯಲ್ಲಿ ಅನಾದಿಕಾಲದ್ದು ಎಂದೆನ್ನಬಹುದಾದ, ಪರಂಪರೆಯ ಜನಪದೀಯ ಪದ್ಧತಿಯ, ಸನಾತನ ವೈದಿಕಮಾರ್ಗದ, ಬೌದ್ಧ-ಜೈನ ಪಥದ, ಬಸವ ಭಕ್ತಿ ಪಂಥದ, ಆಧುನಿಕ ವೈಜ್ಞಾನಿಕ ಮನೋಧರ್ಮದ ಸೆಳಕುಗಳು ಗಾಂಧೀಯ ಮಾರ್ಗವನ್ನು ಪ್ರಭಾವಗೊಳಿಸುತ್ತಲಿಲ್ಲವೆ? ಈ ಇಂಥ ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ. ಅನೇಕರು ಗಾಂಧಿಯವರು ಕೇವಲ ಮಹಾತ್ಮರು ಅಲ್ಲ, ಅವರು ದೇವರು, ಆದುದರಿಂದ ಅವರು ನಿರ್ಮಿಸಿದ್ದುದು ದೇವಪಥ ಎಂದು ಭಾವಿಸುತ್ತಾರೆ. ಆದರೆ, ಗಾಂಧೀಯ ಮಾರ್ಗವನ್ನೇ ತುಚ್ಛೇಕರಿಸುವ, ಅದಕ್ಕೆ ಏನೇನೂ ಬೆಲೆಯಿಲ್ಲ, ಅದರಿಂದ ಅನಾಹುತವೇ ಆಗುತ್ತದೆ ಎಂಬ ಧ್ವನಿಗಳೂ ಕೇಳಿಬರುತ್ತವೆ. ಇಂಥ ಧ್ವನಿಗಳು ಬರುತ್ತಿರುವುದು ಬಣ್ಣ ಕನ್ನಡಕದಿಂದ ನೋಡುವವರಿಂದ ಅಲ್ಲ, ಬಣ್ಣಗಣ್ಣುಗಳಿಂದ (ಕಾಮಾಲೆಗಣ್ಣುಗಳಿಂದ) ನೋಡುವವರಿಂದ ಎಂಬುದು ನಿಜ. ಗಾಂಧೀಯ ಮಾರ್ಗವನ್ನು ನಿಕಟವಾಗಿ ನೋಡಬೇಕಾಗಿದೆ. ಈ ಸಂದರ್ಭದಲ್ಲಿ ಎರಡು ಐತಿಹಾಸಿಕ ದಿನಾಂಕವನ್ನು ನಾವು ಗಮನಿಸಬೇಕು. ಆಧುನಿಕ ಸಮಾಜಕಾರ್ಯದ ಜನನವನ್ನು ಸಾಮಾನ್ಯವಾಗಿ, ಹತ್ತೊಂಬತ್ತನೆಯ ಶತಮಾನನದಲ್ಲಿ ಆರಂಭಗೊಂಡ ಚಾರಿಟಿ ಆರ್ಗನೈಜೇಶನ್ ಸೊಸೈಟಿಯ ಸ್ಥಾಪನೆಯಾದ (1869) ಎಂದು ಪರಿಗಣಿಸಲಾಗುತ್ತದೆ. ಕಾಕತಾಳೀಯ ಎಂಬಂತೆ ಮೋಹನದಾಸ ಕರಮಚಂದ ಗಾಂಧಿಯವರು ಜನ್ಮ ತಳೆದದ್ದೂ 1869ರಲ್ಲಿ. ಮೊದಲಿನದು ಪಶ್ಚಿಮದ ಇಂಗ್ಲೆಂಡಿನಲ್ಲಿ, ಎರಡನೆಯದು ಪೂರ್ವದ ಭಾರತದಲ್ಲಿ. ಎರಡನೆಯ ಘಟನೆಯೆಂದರೆ ಪ್ರಜಾಪ್ರಭುತ್ವ ಸಿದ್ಧಾಂತದ ಆಧಾರದ ವೃತ್ತ್ಯಾತ್ಮಕ ಸಮಾಜಕಾರ್ಯ ಪ್ರಶಿಕ್ಷಣವು ಆರಂಭವಾದದ್ದು 1936ರಲ್ಲಿ, ಭಾರತದ ಪಶ್ಚಿಮ ತೀರದ ಮುಂಬಯಿಯಲ್ಲಿ; ಭಾರತವು ಸಮಾಜವಾದೀ ರಾಜಕೀಯ ವ್ಯವಸ್ಥೆಯನ್ನು ಹೊಂದಿರಬೇಕು ಎಂಬ ನಿರ್ಣಯವನ್ನು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಂಗೀಕರಿಸಿದ್ದೂ 1936ರಲ್ಲಿ ಪೂರ್ವತೀರದ ಚೆನ್ನೈನಲ್ಲಿ ಸ್ವಾತಂತ್ರ್ಯಾನಂತರ, ನಮಗೆಲ್ಲ ತಿಳಿದಂತೆ, ಸಮಾಜಕಾರ್ಯವು ಗಾಂಧೀಯ ಮಾರ್ಗದ ಪ್ರಭಾವಕ್ಕೆ ಒಳಗಾದದ್ದೂ, ಭಾರತವು ಪ್ರಜಾಪ್ರಭುತ್ವಾತ್ಮಕ ಸಮಾಜವಾದಿ ತಾತ್ತ್ವಿಕ ಸಿದ್ಧಾಂತವನ್ನು ಅಂಗೀಕರಿಸಿದ್ದುದು ಗಮನಾರ್ಹ ಎಂದು ಭಾವಿಸುತ್ತೇನೆ. ಗಾಂಧೀಯ ಮಾರ್ಗದ ವೈಲಕ್ಷಣ್ಯಗಳು ವೈಶಿಷ್ಟ್ಯಗಳು ಗಾಂಧಿಯವರು ಭಾರತದಲ್ಲಿ ಹುಟ್ಟಿ, ಭಾರತೀಯ ಜೀವನ ಪದ್ಧತಿಯ ಪರಂಪರೆಯ ಸಾಂಸ್ಕೃತಿಕ ವಾತಾವರಣದಲ್ಲಿ, ಅದರಲ್ಲೂ ತನ್ನ ತಾಯಿಯ ಆರೈಕೆಯಲ್ಲಿ, ತಂದೆಯವರ ಕಣ್ಗಾವಲಿನಲ್ಲಿ, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬೆಳೆದವರು. ಇಂಗ್ಲೆಂಡಿನಲ್ಲಿ ವಕೀಲವೃತ್ತಿಯಲ್ಲಿ ತರಬೇತಿಯನ್ನು ಪಡೆಯುತ್ತಲೇ ಪಾಶ್ಚಾತ್ಯ ಸಂಸ್ಕೃತಿಯನ್ನು ಬೆರಗುಗಣ್ಣಿನಿಂದ ನೋಡಿ, ಅದನ್ನು ಅರಿತುಕೊಳ್ಳಲು ಪ್ರಯತ್ನಿಸಿದವರು. ದಕ್ಷಿಣ ಆಫ್ರಿಕೆಯಲ್ಲಿ ವಲಸೆಹೋದ ಭಾರತೀಯರ ಪರವಾಗಿ ನಿಂತು ನ್ಯಾಯಾಲಯದಲ್ಲಿ ಹೋರಾಟ ಮಾಡಿದವರು. ಕಪ್ಪು ಖಂಡವೆಂದು ಕುಖ್ಯಾತಿ ಪಡೆದ ಆಫ್ರಿಕೆಯಲ್ಲಿ ವರ್ಣದ್ವೇಷಕ್ಕೆ ತುತ್ತಾದ ಆಫ್ರಿಕಾದ ಮುಗ್ಧಜನರನ್ನು ನಿರ್ದಯದಿಂದ ಶೋಷಿಸುತ್ತಿದ್ದ ಬಿಳಿಯ ಬ್ರಿಟಿಶರನ್ನು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಎದುರಿಸಿದವರು. ಪಾಶ್ಚಾತ್ಯ ಮೇಧಾವಿಗಳ, ಟಾಲ್ಸ್ಟಾಯ್, ರಸ್ಕಿನ್, ಥೋರೋ ಅಂಥವರ ಚಿಂತನೆಗಳ ಪ್ರಭಾವಕ್ಕೆ ಒಳಗಾದವರು. ತಮ್ಮ ಮಡದಿ ಕಸ್ತೂರಬಾ ಅವರೊಡನೆ ಸಂಸಾರ ಹೂಡಿದ್ದರೂ, ಸಾಮಾನ್ಯ ಜನರ ಸರಳ ಕೌಟುಂಬಿಕ ಜೀವನವನ್ನು ಸಾಗಿಸದೆ ವಿಚಿತ್ರ ಎನ್ನಿಸಬಹುದಾದ ಪ್ರಯೋಗಗಳನ್ನು ಮಾಡಿದವರು. ಭಾರತಕ್ಕೆ ಮರಳಿ ಸಾರ್ವಜನಿಕ ಜೀವನವನ್ನು ಪ್ರವೇಶಿಸಿ, ರಾಜಕೀಯವನ್ನೂ, ಆರ್ಥಿಕತೆಯನ್ನೂ, ಧಾರ್ಮಿಕತೆಯನ್ನೂ, ನೈತಿಕತೆಯನ್ನೂ, ನ್ಯಾಯಕತೆಯನ್ನೂ, ಹೀಗೆಯೇ ಸಮಾಜದ ಇತರ ವಿವಿಧ ಸಂಗತಿಗಳನ್ನೂ ಒಂದೆಡೆಗೆ ತಂದು ಅವುಗಳನ್ನು ಬೆಸೆಯುವ, ಆ ಮೂಲಕ ಸತ್ಯ ಶೋಧನೆಗೆ ತೊಡಗಿದರು. ಎಲ್ಲ ಜಾತಿಯವರನ್ನು, ಎಲ್ಲ ಧರ್ಮದವರನ್ನ, ಎಲ್ಲ ಭಾಷಿಕರನ್ನು, ಎಲ್ಲ ವಯೋಮಾನದವರನ್ನು, ಸ್ತ್ರೀ-ಪುರುಷರಿಬ್ಬರನ್ನೂ, ಹೀಗೆ ಯಾರನ್ನೂ ಬಿಡದೆ, ಪ್ರಾಣಿ-ಪಕ್ಷಿಗಳನ್ನು, ಸಸ್ಯ-ಜಡವಸ್ತುಗಳನ್ನೂ ಒಳಗೊಂಡಂತೆ ಇಡೀ ದೇಶವನ್ನು ತಮ್ಮ ದೃಷ್ಟಿವ್ಯಾಪ್ತಿಗೆ ಒಳಪಡಿಸಿಕೊಂಡವರು. ಶಿಕ್ಷಣವನ್ನಷ್ಟೇ ಅಲ್ಲ ದೈಹಿಕ-ಮಾನಸಿಕ-ಆಧ್ಯಾತ್ಮಿಕ, ಲೈಂಗಿಕ, ಇತ್ಯಾದಿ, ಆರೋಗ್ಯವನ್ನೂ ಲಕ್ಷ್ಯದಲ್ಲಿ ಇರಿಸಿಕೊಂಡವರು. ಹೀಗಾಗಿ ಗಾಂಧೀಯವರು, ಬಹುಶಃ ಶಿವ-ವಿಷ್ಣುವಿನಂತೆ ಭಾರತೀಯರ ಮನದಲ್ಲಿ ಸ್ಥಾಪಿತವಾದವರು. ಅವರ ನಡೆ-ನುಡಿಯನ್ನು, ಅವರ ವೈವಿಧ್ಯಮಯ ಜೀವನವನ್ನು ಗಮನಿಸಿದವರು ಇವರದೆಂಥ ವ್ಯಕ್ತಿತ್ವ! ಎಂದು ಅಚ್ಚರಿಪಡುವವರ ಸಂಖ್ಯೆಯು ಅಂದೂ ಅಪಾರ, ಇಂದೂ ಅಪಾರ. ಅವರ ಅಭಿಪ್ರಾಯವನ್ನು, ಅವರ ಜೀವನ ಕ್ರಮವನ್ನು ಒಪ್ಪಲಿ, ಬಿಡಲಿ, ಅವರನ್ನು ಅನುಕರಿಸಲಿ-ಅನುಸರಿಸದಿರಲಿ ಅವರೊಂದು ಒಗಟು (Enigma) ಎಂದು ಸಾಮಾನ್ಯ ಜನರು ಭಾವಿಸುತ್ತಾರೆ. ಅಂಥವರು ಯಾವ ಪಂಥಕ್ಕೆ ಸೇರಿದವರು? ಯಾವ ಮಾರ್ಗವನ್ನು ಹಿಡಿದವರು? ಎಂಬ ಪ್ರಶ್ನೆಗಳಿಗೆ ಅವರದ್ದೇ ಒಂದು ಪಂಥ, ಅವರು ನಡೆದದ್ದೇ ಒಂದು ಮಾರ್ಗ, ಎಂದು ಹೇಳಬೇಕಾಗುತ್ತದೆ. ಇಂಥ ಗಾಂಧಿಯವರ ಮಾರ್ಗವನ್ನು ಬಹು ಸುಲಭವಾಗಿ, ಸರಳವಾಗಿ ನಿರ್ಣಯಿಸಲು, ವರ್ಣಿಸಲು ಸಾಧ್ಯವಿಲ್ಲವೆನ್ನಿಸುತ್ತದೆ. ಗಾಂಧಿಯವರನ್ನು ಕ್ರಾಂತಿಕಾರಿ ಅನ್ನುತ್ತಾರೆ. ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಬಯಸುತ್ತಾರೆ ಅನ್ನುತ್ತಾರೆ. ಆದರೆ, ಅದೇ ಉಸಿರಿನಲ್ಲಿಯೇ ಪರಂಪರೆಯನ್ನು ಅವರು ಪುರಸ್ಕರಿಸುತ್ತಾರೆ ಎಂದು ಅನ್ನಿಸುತ್ತದೆ. ಪ್ರಾಚೀನ ಭಾರತೀಯ ಚಿಂತಕರ, ಯೋಗಿಗಳ, ಸಂತರ, ಋಷಿಗಳ, ಧಾರ್ಮಿಕ ಮುಖಂಡರ ಪರಿಕಲ್ಪನೆಗಳನ್ನು ನಿಕಷಕ್ಕೆ ಒಳಪಡಿಸಿ, ತಮಗೆ ಸರಿ ಎಂದು ಕಂಡುಬಂದರೆ ಅವನ್ನು ಅಂಗೀಕರಿಸಿ, ಅವನ್ನು ಮೂರ್ತರೂಪಗೊಳಿಸಿ ಅನುಷ್ಠಾನಕ್ಕೆ ತಂದವರು. ಇಂಥವುಗಳಲ್ಲಿ ಸತ್ಯ, ಅಹಿಂಸೆ, ಪ್ರೇಮ, ದಯೆ, ಕಾರುಣ್ಯ, ಸಹಿಷ್ಣುತೆ, ನೈತಿಕತೆ, ಪ್ರಾಮಾಣಕತೆ, ಆತ್ಮಸಾಕ್ಷಿ, ದೃಢ ನಿಲುಮೆ, ಶ್ರದ್ಧೆ, ಗೌರವ, ನಿರ್ಭಯತೆ, ತ್ಯಾಗ, ನ್ಯಾಯಪರತೆ, ಸದ್ವರ್ತನೆ, ವ್ಯಸನಮುಕ್ತತೆ, ವಿಕೇಂದ್ರೀಕರಣ, ಸ್ವಸಂಪೂರ್ಣತೆ, ಸ್ವಾವಲಂಬನೆ, ನಿಃಸ್ವಾರ್ಥತೆ, ಇಂದ್ರಿಯ ನಿಗ್ರಹ, ಅನುಕಂಪೆ, ಅಸಂಗ್ರಹ, ದೇವರ ಅಸ್ತಿತ್ವದಲ್ಲಿ ಅಪಾರ ನಂಬುಗೆ, ಹೀಗೆ ಈ ಪ್ರಕಾರದ ಎಷ್ಟೋ ಮೌಲ್ಯಗಳನ್ನು ಅವರು ಎತ್ತಿ ಹಿಡಿಯುತ್ತಾರೆ. ಇವೆಲ್ಲವೂ ಮನುಕುಲದ ಉದ್ಧಾರಕ್ಕೆ, ಸಂಪೋಷಣೆಗೆ, ಸಮಾಜದ ಧಾರಣೆಗೆ ಅತ್ಯಗತ್ಯ ಎಂಬುದು ಅವರ ನಂಬುಗೆ. ಅವರು ಹಿಡಿದ ಮಾರ್ಗವು ಸಾಮಾನ್ಯರಿಗೆ ಕರಕಠಿಣ. ಅವರು ಮುಂದಿಟ್ಟ ಸಪ್ತ ಪಾತಕಗಳನ್ನು ಗಮನಿಸಿದರೆ ಇದರ ಅರ್ಥ ಸ್ಪಷ್ಟವಾಗುತ್ತದೆ: ತತ್ತ್ವರಹಿತ ರಾಜಕೀಯ, ನೀತಿವಿಹೀನ ವಾಣಿಜ್ಯ, ಶೀಲವಿಲ್ಲದ ಜ್ಞಾನ, ದುಡಿಮೆಯಿಲ್ಲದ ಸಂಪತ್ತು, ಪ್ರಜ್ಞೆಯಿಲ್ಲದ ಭೋಗ, ಮಾನವತಾಶೂನ್ಯ ವಿಜ್ಞಾನ ಮತ್ತು ತ್ಯಾಗವಿಲ್ಲದ ಪೂಜೆ (1924ರ ಯಂಗ್ ಇಂಡಿಯಾ). ಈ ಏಳು ಪಾತಕಗಳನ್ನು ಮಾಡದೇ ಇರುವುದನ್ನು ಈ ಇಪ್ಪತ್ತೊಂದನೆಯ ಶತಮಾನದಲ್ಲಿ ನಾವು ಎಲ್ಲಾದರೂ ಕಂಡಿದ್ದೇವೆಯೆ? ಮಾನವನು ದಿವ್ಯವನ್ನು ಸಾಧಿಸಬೇಕು ಎಂಬುದು ಅರವಿಂದ ಘೋಷರಂತೆ ಗಾಂಧಿಯವರದೂ ಆಗಿತ್ತು. ಇಲ್ಲಿ ನಮೂದಿತವಾದ ಯಾವ ಚಟುವಟಿಕೆಯೂ ಇವುಗಳಿಗೆ ಜೋಡಿಸಿದ ಪಾತಕಗಳನ್ನು ಮಾಡದಿದ್ದರೆ ಜೀವನ ನಿರ್ವಹಣೆ ಅಸಾಧ್ಯ ಎಂಬುದು ಆಧುನಿಕ ಯಂತ್ರಯುಗದ ಮಾನವನ ಅನಿಸಿಕೆ. ಹನ್ನೆರಡನೆಯ ಶತಮಾನದ ಬಸವಣ್ಣನವರೂ ಮಾನವಾಚರಣೆಗೆ ಬಹುಶಃ ಅಸಾಧ್ಯವೆಂಬಂಥ ಏಳು ಬೇಡಗಳನ್ನು ಮುಂದಿಟ್ಟರು. ಅವು ಹೀಗಿವೆ: ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಇದಿರ ಹಳಿಯಲು ಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ (ಈ ಎಲ್ಲವೂ ಹೇಳಲು, ಕೇಳಲು ಬಹು ಸುಲಭ, ಎಷ್ಟು ಸರಳ! ಆದರೆ?!) ಕ್ರಿಸ್ತಪೂರ್ವದಲ್ಲಿಯೇ ಗೌತಮಬುದ್ಧ ಬೋಧಿಸಿದ್ದರು ಹೀಗೆ ಅಷ್ಟಾಂಗಗಳನ್ನು: ಸಮ್ಯಕ್ ದೃಷ್ಟಿ, ಸಮ್ಯಕ್ ಯೋಚನೆ, ಸಮ್ಯಕ್ ಮಾತು, ಸಮ್ಯಕ್ ಕರ್ಮ, ಸಮ್ಯಕ್ ಜೀವನೋಪಾಯ, ಸಮ್ಯಕ್ ಪ್ರಯತ್ನ, ಸಮ್ಯಕ್ ಜಾಗೃತಿ ಮತ್ತು ಸಮ್ಯಕ್ ಸಮಾಧಿ. ಬುದ್ಧ-ಬಸವ-ಗಾಂಧಿಯವರು ಪ್ರತಿಪಾದಿಸಿದ, ಆಚರಿಸಿದ ಮಾರ್ಗಗಳು ವಿಭಿನ್ನವಾದರೂ ವೈರುಧ್ಯಗಳಲ್ಲ. ಈ ಆಚಾರ್ಯತ್ರಯರು ಸೂಚಿಸಿದ ಮಾರ್ಗವನ್ನು ಹಿಡಿದ ಮನುಷ್ಯನು ದೇವಮಾನವನಾಗದಿರುವನೆ? ಗಾಂಧಿಯವರು ಪ್ರತಿಪಾದಿಸಿದ ತತ್ತ್ವ-ಸೂತ್ರಗಳನ್ನು ಬಹುಶಃ ಅವರು ರೂಪಿಸಿ, ಅನುಷ್ಠಾನಕ್ಕೆ ತಂದ ಎಲ್ಲ ಕ್ರಿಯೆಗಳಲ್ಲು ನಾವು ಕಾಣುತ್ತೇವೆ. ಗಾಂಧೀಯ ಮಾರ್ಗವು ಮುಖ್ಯವಾಗಿ ಹೃದಯ-ಭಾವಗಳ ಸಂಗಮದಿಂದ ನಿರ್ಮಾಣಗೊಂಡದ್ದು. ಮನುಷ್ಯನ ಸತ್ತ್ವವು ಪ್ರಧಾನವಾಗಿ ಪರಿಶುದ್ಧವಾದದ್ದು. ದುಷ್ಟಶಕ್ತಿಗಳ ಪ್ರಭಾವದಿಂದ ಅದು ಕಲುಷಿತಗೊಳ್ಳುತ್ತದೆ. (ದುಷ್ಟಶಕ್ತಿಗಳು ಬೌದ್ಧಿಕವೋ?) ದುಷ್ಟಶಕ್ತಿಗಳನ್ನು ನಿವಾರಿಸುತ್ತಾ, ಪರಿಶುದ್ಧವಾದ ಮಾನವಸತ್ತ್ವವನ್ನು ಜಾಗೃತಗೊಳಿಸುವ ಪರಮ ಉದ್ದೇಶವೇ ಗಾಂಧೀಯ ಮಾರ್ಗದ್ದು. ಈ ಮಾರ್ಗವನ್ನು ಹಿಡಿದರೆ, ಮಾನವ ಕಲ್ಯಾಣವಾಗುತ್ತದೆ, ಸಮಾಜವು ಸುಖೀ ವ್ಯವಸ್ಥೆಯಾಗುತ್ತದೆ ಮತ್ತು ಸಾಮಾಜಿಕ ಅಭ್ಯುದಯವು ಸಹಜವಾಗಿಯೇ ಸಾಧಿತವಾಗುತ್ತದೆ. ತಮ್ಮ ಚಿಂತನೆ ಮತ್ತು ಅನುಭವದ ಬೆಳಕಿನಲ್ಲಿ ಗಾಂಧಿಯವರು ಕೆಲವು ವ್ಯಾವಹಾರಿಕ ಸೂತ್ರಗಳನ್ನು ರೂಪಿಸಿದರು; ಅವನ್ನು ಆದಷ್ಟೂ ತಮ್ಮ ಕಾರ್ಯದಲ್ಲಿ ಅನುಸರಿಸಲು ಪ್ರಯತ್ನಿಸಿದರು; ಅನ್ಯರೂ ಅವನ್ನು ಪಾಲಿಸಿದರೆ ಒಳಿತು, ಎಂಬುದನ್ನು ತೋರಿಸಿಕೊಟ್ಟರು. ಆ ಸೂತ್ರಗಳಲ್ಲಿ ಕೆಲವನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ:
ಇಷ್ಟೇ ಗಾಂಧೀ ಮಾರ್ಗ ಎಂದು ತಿಳಿಯುವಂತಿಲ್ಲ. ಪರಸ್ಪರ ಬೆಸುಗೆಯ-ಅಂತರ್ವಿಷ್ಟದ-ಪರ್ವ ಆಧುನಿಕ ಸಮಾಜಕಾರ್ಯ ಮತ್ತು ಗಾಂಧೀಯ ಮಾರ್ಗ-ಈ ಎರಡು ಸಂಗತಿಗಳನ್ನು ಪರಿಶೀಲಿಸಿದ ಮೇಲೆ ಇವೆರಡನ್ನೂ ಹತ್ತಿರ ತರುವುದು ಅಗತ್ಯವೆ ಎಂಬ ಚಿಂತನೆ ಕಡೆ ನಮ್ಮ ಗಮನ ಹರಿಸಬೆಕಾಗಿದೆ. ಈ ಎರಡರಲ್ಲೂ ತಿವ್ರತರವಾದ ಬದಲಾವಣೆಗಳಾಗುತ್ತಲಿವೆ. ಜಾಗತೀಕರಣದ ಬಿರುಬೀಸಿನಲ್ಲಿ, ಜಗತ್ತು ಒಂದು ದೊಡ್ಡ ಹಳ್ಳಿಯಾಗಿ ಪರಿವರ್ತನೆಗೊಲ್ಳುತ್ತಲಿದೆ ಎಂಬ ಭ್ರಮೆಯ ಬಿಸಿಯಲ್ಲಿ ಈ ಎರಡು ಮಾರ್ಗಗಳ ಹೊಂದಾಣಿಕೆಯನ್ನು ಚರ್ಚಿಸಬೇಕಾಗಿದೆ. ಜಗತ್ತಿನಾದ್ಯಂತ ಆಗುತ್ತಿರುವ ಭೌತ ಮತ್ತು ಮನೋಸಾಮಾಜಿಕ ತೀವ್ರತರ ಬದಲಾವಣೆಗಳು, ಸಂಖ್ಯೆಯಲ್ಲಿಯೂ, ತೀಕ್ಷ್ಣತೆಯಲ್ಲಿಯೂ ಬಾಹುಳ್ಯವನ್ನು ಪಡೆಯುತ್ತಿರುವ ಸಮಸ್ಯೆಗಳು-ಸಂಕಟ ಸ್ಥಿತಿಗಳು ಮತ್ತು ಯಾವ ಸಂಗತಿಯೂ ಪ್ರತ್ಯೇಕವಾಗಿ ಉಳಿದಿರುವ ಅಥವಾ ಉಳಿದುಕೊಂಡು ಹೋಗುವ ಸ್ಥಿತಿಯಲ್ಲಿ ಇರದಿರುವುದೂ ದಿಗ್ಭ್ರಾಂತ ಸ್ಥಿತಿಯನ್ನು ತೊಂದೊಡ್ಡಿವೆ. ಸಮಾಜಕಾರ್ಯ ಮಾತ್ರವೇ ಅಲ್ಲ, ಯಾವ ಒಂದು ವೃತ್ತಿಯೂ ಅಥವಾ ಪಂಥವೂ ಅಥವಾ ಜೀವನಕ್ರಮವೂ ಈ ದಿಗ್ಭ್ರಾಂತ ಸ್ಥಿತಿಗೆ ನಿವಾರಣೋಪಾಯವಾಗಿ ಕಾಣುತ್ತಲಿಲ್ಲ. ಆದುದರಿಂದ ಎಲ್ಲ ಮನಸ್ಸುಗಳು, ಎಲ್ಲ ಶಕ್ತ್ಯಂಶಗಳು (Forces) ಅಂತರ್ವಿಷ್ಟವಾಗಿ (Inclusive) ಈ ಸ್ಥಿತಿಯನ್ನು ನಿಭಾಯಿಸಬೇಕಾಗಿದೆ. ಆದರೂ ಒಬ್ಬ ಚಿಂತಕ ಹೇಳಿದಂತೆ, ಅಭ್ಯುದಯ ಸೂತ್ರವನ್ನು ದೇಶದ ಪರಂಪರೆಗೂ ಸಂಸ್ಕೃತಿಗೂ ಜೀವನ ರೀತಿಗೂ ಚಿಂತನ ಧೋರಣೆಗೂ ಹೊಂದುವಂಥದಾಗಿರಬೇಕಾಗುತ್ತದೆ. ಹವಾಮಾನ ವೈಪರೀತ್ಯದಿಂದ ಸ್ಥಿರವೆಂಬ ಪೃಥ್ವಿಯೂ ಸುಸ್ಥಿರ ಸ್ಥಿತಿಯಲ್ಲಿ ಇಲ್ಲ; ರಾಜಕೀಯ ವಿಪ್ಲವದಿಂದ ಯಾವ ರಾಷ್ಟ್ರವೂ ಸುವ್ಯವಸ್ಥಿತಿಯಲ್ಲಿ ಇಲ್ಲ; ಆರ್ಥಿಕ ಹಿಂಜರಿತದಿಂದ ಇಡೀ ಮನುಕುಲವೇ ತತ್ತರಿಸಿಹೋಗಿದೆ; ಧಾರ್ಮಿಕ ಅಶಾಂತಿಯಿಂದ ಎಲ್ಲಿಯೂ ಶಾಂತಿ ಸಮಾಧಾನವಿಲ್ಲ; ನೈತಿಕ ಅಧಃಪತನದಿಂದ ಜಾಗತಿಕ ಅಸಮತೋಲನವು ಜನಜೀವನವನ್ನು ಬಲವಾಗಿ ಅಲುಗಾಡಿಸಿದೆ; ವರ್ಗ-ಜಾತಿ ಕಲಹ-ಸಂಘರ್ಷಗಳು ವ್ಯಾಪಕವಾಗಿ ಭ್ರಷ್ಟಾಚಾರ, ಹಿಂಸೆ, ಭಯೋತ್ಪಾದನೆ, ಶೋಷಣೆ, ಉಳ್ಳವರ ಅಹಂಕಾರ-ಅಟ್ಟಹಾಸ, ಅಪನಂಬುಗೆ, ತಲ್ಲಣ, ದ್ವೇಷ, ಸಂದಿಗ್ಧತೆ, ಒಟ್ಟಿನಲ್ಲಿ ಎಲ್ಲಿಯೂ ನೆಮ್ಮದಿಯಿಲ್ಲದೆ ಜೀವನದ ಒಳ-ಹೊರಗೆ ಸುತ್ತಲೂ ಬೇಗೆಯು ಆವರಿಸಿಕೊಂಡಿದೆ. ಇದನ್ನು ತಣಿಸಲು, ಈ ಮೇಲೆ ಹೇಳಿದಂತೆ, ಯಾವ ಒಂದು ಉಪಾಯವೂ ಸಮರ್ಥವಾಗಿ ತೋರುತ್ತಿಲ್ಲ. ನಮ್ಮ ಇಂದಿನೀ ವಿಷಯಕ್ಕೆ ನಮ್ಮ ದೃಷ್ಟಿಯನ್ನು ಸೀಮಿತಗೊಳಿಸಿಕೊಂಡರೆ ಆಧುನಿಕ ಸಮಾಜಕಾರ್ಯವು ತನ್ನ ಕೋಟೆ ಗೋಡೆಗಳನ್ನು ಆಕುಂಚನಗೊಂಡ ವೃತ್ತೀಯ ಗಡಿಯನ್ನು ಮೀರಿ ಗಾಂಧೀಯ ಮಾರ್ಗದಂಥ ಬೆಳಕಿನ ಕಡೆ ದೃಷ್ಟಿ ಹಾಯಿಸಬೇಕಾಗಿದೆ. ಈ ಎರಡೂ ಮಾರ್ಗಗಳಲ್ಲಿ ಸಮಾನ ಅಂಶಗಳು ಸಾಕಷ್ಟು ಇವೆ ಎಂಬುದನ್ನು ಈಗಾಗಲೇ ನಾವು ಗಮನಿಸಿದ್ದೇವೆ. ಸಾರಾಂಶವಾಗಿ ಹೇಳಬೇಕಾದರೆ ಹೃದಯ-ಭಾವನೆಗಳಿಗೆ ಹೆಚ್ಚು ಒತ್ತನ್ನು ನಿಡಿರುವ ಗಾಂಧೀಯ ಮಾರ್ಗಾನುಯಾಯಿಗಳು, ವೈಜ್ಞಾನಿಕ-ವೈಚಾರಿಕ ಅಂಶಗಳಿಗೇ ಕಟ್ಟುಬಿದ್ದಿರುವ ಆಧುನಿಕ ಸಮಾಜಕಾರ್ಯಕರ್ತರೂ ತಮ್ಮ ತಮ್ಮ ಪಟ್ಟುಗಳನ್ನು ಸಡಿಲಿಸಿಕೊಂಡು ಜಗದೋನ್ನತಿಯ, ಮಾನವ ಕುಲದ ಉಳಿವಿಯಕೆಯ ಹಾದಿಯನ್ನು ರೂಪಿಸಿಕೊಂಡು ಸಾಗಬೇಕು, ಅನ್ನಿಸುತ್ತದೆ. ಇಲ್ಲಿ ಪ್ರಸ್ತುತವೆನ್ನಿಸುವ, ಒಂದು ಪ್ರಸಂಗವನ್ನು ಪ್ರಸ್ತಾಪಿಸಬೇಕೆನ್ನಿಸುತ್ತದೆ. ಭಾರತದಲ್ಲಿ ಇಪ್ಪತ್ತನೆಯ ಶತಮಾನದ ಆರನೆಯ ದಶಕದಲ್ಲಿ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ ಗಾಂಧೀ-ಪ್ರೇರಿತ ರಚನಾತ್ಮಕ ಕಾರ್ಯಕರ್ತರ ಮತ್ತು ವೃತ್ತೀಯ ಸಮಾಜಕಾರ್ಯಕರ್ತರ ಸಮಾವೇಶವನ್ನು ವಾರಣಾಸಿಯಲ್ಲಿ 1964ರಲ್ಲಿ ಭಾರತಕ್ಕೆ ಅಗತ್ಯವಾದ ಏಕೀಕೃತ ಸಮಾಜಕಾರ್ಯ ತತ್ತ್ವಸಿದ್ಧಾಂತವನ್ನು ರೂಪಿಸಲು ಕರೆಯಲಾಯಿತು. ಆ ಸಮಾವೇಶದಲ್ಲಿ ಸೇರಿದ ಹಿರಿಯ ಚೇತನಗಳು, ಮನಸ್ಸುಗಳು, ಪರಿಣಿತ ಜ್ಞಾನಿಗಳು ಚರ್ಚಿಸಿ, ಈ ಎರಡೂ ವಾಹಿನಿಗಳು ಒಂದಾಗುವ ದಿಕ್ಕಿನ ಅವಸರ-ಅನಿವಾರ್ಯತೆಯನ್ನು ಕಂಡುಕೊಂಡರು. ಸಮಾವೇಶವು ನೇಮಿಸಿದ ಕ್ರಿಯಾ ಸಮಿತಿಯ ಚಿಂತನೆಯಿಂದ ಮೂಡಿಬಂದ ಸಮಾಜಕಾರ್ಯದ ಪರಿಕಲ್ಪನೆಯು ಜಯಪ್ರಕಾಶ ನಾರಾಯಣರ ಮಾತಿನಲ್ಲೇ ಹೇಳುವುದಾದರೆ, ಸಂಚಲನಾತ್ಮಕವಾದ ಒಂದು ಗುಣವು ಇದಕ್ಕಿದ್ದು, ಈ ಶಿಸ್ತಿನಲ್ಲಿ ಕಾರ್ಯನಿರತನಾದವನಿಗೆ ಸೂಕ್ತ ಚಾರಿತ್ರ್ಯ, ಬೌದ್ಧಿಕ ಸಂಪನ್ನತೆ, ವ್ಯವಹಾರಕ್ಕೆ ಅಗತ್ಯವಾದ ಕೌಶಲ್ಯಗಳು ಹಾಗೂ ಉಪಕರಣಗಳು ಇರಬೇಕಾಗುತ್ತದೆ. ಸಮಾಜಕಾರ್ಯಕರ್ತನಿಗೆ ಗಾಂಧೀಯ ಮಾರ್ಗವೂ, ಗಾಂಧೀಯ ಮಾಗರ್ಾನುಯಾಯಿಗಳಿಗೆ ಆಧುನಿಕ ಸಮಾಜಕಾರ್ಯವೂ ಸಾಕಷ್ಟು ನೆರವಿಗೆ ಬರುತ್ತವೆ ಎಂದು ಭಾವಿಸುತ್ತೇನೆ. ಕೊಡುಕೊಳ್ಳುವ ಪ್ರಕ್ರಿಯೆಯಿಂದ ಸಮರ್ಥ ಮಾರ್ಗದರ್ಶನವಾಗುತ್ತದೆ ಎಂದು ಆಶಿಸುತ್ತೇನೆ. ಆಕರ ಸಾಹಿತ್ಯ:
ಡಾ.ಎಚ್.ಎಂ. ಮರುಳಸಿದ್ಧಯ್ಯ ನಂ.62 ಈಶಕೃಪೆ, ಮಂಜುನಾಥ ಕಾಲನಿ, ಜೆ.ಪಿ. ನಗರ 3ನೆಯ ಹಂತ, ಬೆಂಗಳೂರು-560078
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|