ದಲಿತರ ಸಬಲೀಕರಣಕ್ಕೆ ಪ್ರಸ್ತುತ ಮುಖ್ಯವಾಗಿ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ, ಆರ್ಥಿಕ ಭದ್ರತೆ, ರಾಜಕೀಯ ಭದ್ರತೆ, ಉದ್ಯೋಗ ಭದ್ರತೆಗಳನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ. ಪೀಠಿಕೆ ಪ್ರಜಾಪ್ರಭುತ್ವದ ಮೂಲ ಬೇರುಗಳಾದ ಪಂಚಾಯತಿರಾಜ್ ಸಂಸ್ಥೆಗಳು ಸ್ಥಳೀಯ ಜನರಿಗೆ ಒಂದು ವ್ಯವಸ್ಥೆಯಾಗಿದ್ದು, ಸ್ಥಳೀಯ ಜನರಿಗೆ ತಮ್ಮದೇ ಆದ ಹೊಣೆಗಾರಿಕೆಯನ್ನು ನಿರ್ವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರಿಂದ ಸ್ಥಳೀಯ ಜನರು ಕೂಡಾ ರಾಷ್ಟ್ರ-ರಾಜ್ಯದ ಆಗು-ಹೋಗುಗಳು, ಆಡಳಿತದ ರೀತಿ-ನೀತಿಗಳು, ಸರ್ಕಾರದ ರೀತಿ-ನೀತಿಗಳು ಹಾಗೂ ರಾಜಕೀಯ ಪ್ರಜ್ಞೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿದೆ. ಈ ಪಂಚಾಯತಿರಾಜ್‍ನ ಮುಖ್ಯ ಉದ್ದೇಶವು ಕೇವಲ ಕೆಲವೇ ವ್ಯಕ್ತಿಗಳಿಗೆ ಅಧಿಕಾರ ನೀಡುವುದಲ್ಲ. ಬದಲಿಗೆ ಸಮಾಜದ ಎಲ್ಲಾ ವರ್ಗದವರಿಗೆ ಅಧಿಕಾರವನ್ನು ನೀಡುವುದೇ ಆಗಿದೆ. ಇದರಿಂದ ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ವಾಸ್ತವಿಕವಾಗಿ ಅಧಿಕಾರ ಮತ್ತು ಸಂಪನ್ಮೂಲಗಳನ್ನು ವಿಕೇಂದ್ರೀಕರಣಗೊಳಿಸಿ ಪಂಚಾಯತಿರಾಜ್ ಸಂಸ್ಥೆಗಳ ಮೂಲಕ ಜನರು ಪಾಲ್ಗೊಳ್ಳುವಂತೆ ಮಾಡಿದಾಗ ಅಭಿವೃದ್ಧಿ ಸುಲಭ ಸಾಧ್ಯ. ಪಂಚಾಯತಿರಾಜ್ ಸಂಸ್ಥೆಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ತಂದಿರುವಂತೆ ಕರ್ನಾಟಕದಲ್ಲಿಯೂ ಮೂರು ಹಂತದ ಪಂಚಾಯಿತಿಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸುವಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ಎನಿಸಿಕೊಂಡಿದೆ. ಹೀಗಾಗಿ ಕರ್ನಾಟಕವೂ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡಿರುವ ಪಂಚಾಯತಿರಾಜ್ ಸಂಸ್ಥೆಗಳನ್ನು ಮೈಗೂಡಿಸಿಕೊಂಡಿರುವುದನ್ನು ಇತ್ತೀಚಿನ ಇತಿಹಾಸದುದ್ದಕ್ಕೂ ಕೂಡಾ ಕಾಣಬಹುದು.
ಕರ್ನಾಟಕ ಪಂಚಾಯತಿರಾಜ್‍ನ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಇದಕ್ಕೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಪಂಚಾಯಿತಿಗಳು ಕಾಲದಿಂದ ಕಾಲಕ್ಕೆ ಗಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದಂತಹ ಅನೇಕ ಮಾರ್ಪಾಡುಗಳನ್ನು ಹೊಂದುತ್ತಾ ಬೆಳೆದು ಬಂದಿದೆ. ಅವುಗಳಲ್ಲಿ ಪಂಚಾಯಿತಿಗಳ ವಿವಿಧ ಕಾಯಿದೆಗಳು, ಅಂಗರಚನೆ, ಕಾರ್ಯವಿಧಾನ, ಸ್ವಾಯತ್ತತೆ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ನೀತಿ ಇತ್ಯಾದಿಗಳನ್ನು ಅನುಷ್ಠಾನಗೊಳಿಸುವಲ್ಲಿ ಮಹತ್ವಪೂರ್ಣವಾದ ಪಾತ್ರವನ್ನು ವಹಿಸುತ್ತವೆ. ಅಲ್ಲದೇ ಪಂಚಾಯಿತಿಗಳ ಕಾರ್ಯವೈಖರಿಗಳಲ್ಲಿ ಎಲ್ಲ ವರ್ಗದವರಿಗೂ ಪಾಲ್ಗೊಳ್ಳಲು ಮೀಸಲಾತಿಯನ್ನು ಒದಗಿಸುವಂತೆ ದಲಿತರಿಗೂ (ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗ) ಅವಕಾಶವನ್ನು ಕಲ್ಪಿಸಲಾಗಿದೆ. ಹೀಗಾಗಿ ಅವರು ಮೀಸಲಾತಿ ಮೂಲಕ ಪಂಚಾಯಿತಿ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಬಲೀಕರಣ ಹೊಂದಲು ಸಾಧ್ಯವಾಗುತ್ತದೆ. ದಲಿತರು ಮತ್ತು ಸಬಲೀಕರಣದ ಪರಿಕಲ್ಪನೆ 'ದಲಿತ'ರ ಪರಿಕಲ್ಪನೆ 'ದಲಿತ' ಎಂಬ ಪದವನ್ನು ಅರ್ಥೈಸಲು ಮತ್ತು 'ದಲಿತ' ಎಂದರೆ ಯಾರು? ಎಂದು ವ್ಯಾಖ್ಯಾನಿಸಿ ಹಲವರು ಪ್ರಯತ್ನಿಸಿದ್ದಾರೆ. ಆದರೂ ಈ ಕುರಿತ ಚರ್ಚೆಯು ಇನ್ನೂ ಮುಂದುವರೆದಿದೆ. ಸಾಮಾನ್ಯವಾಗಿ ವ್ಯಕ್ತಿಗತ ವ್ಯಾಖ್ಯೆಗಳು 'ದಲಿತ' ಪದಕ್ಕೆ ಹೆಚ್ಚು ವಿಚಾರಗಳನ್ನು ಸ್ಪಷ್ಟಪಡಿಸುತ್ತವೆ. ದಲಿತ ಪದವನ್ನು ಕುರಿತು ಡಾ. ವಿ. ಮುನಿವೆಂಕಟಪ್ಪ ಹೀಗೆ ಹೇಳುತ್ತಾರೆ. ದಲಿತ ಎಂದರೆ ಯಾರು ಹುಟ್ಟಿನಿಂದ ಅಸ್ಪೃಶ್ಯರಾಗಿದ್ದು, ನಿರಂತರವಾಗಿ ದಲಿತ ಮನೋಧರ್ಮವನ್ನು ಮೈಗೂಡಿಸಿಕೊಂಡು ದಲಿತಪರ ಕಾಳಜಿಯನ್ನು ಕಾಯ್ದುಕೊಳ್ಳುತ್ತಾರೋ ಅವರೇ ದಲಿತ. ಅದೇ ರೀತಿ ದೇವಯ್ಯ ಹರವೆ ಹೀಗೆ ವ್ಯಾಖ್ಯಾನಿಸುತ್ತಾರೆ. 'ಅಸ್ಪೃಶ್ಯ ಜನಾಂಗಕ್ಕೆ ಇಂಡಿಯಾದ್ಯಾಂತ ಹೊಂದಿಕೆಯಾಗಬಹುದಾದ ಒಂದೇ ಒಂದು ಪದ 'ದಲಿತ' ಎಂಬುದು ಮಾತ್ರ. ದಲಿತರು ಶತಮಾನಗಳಿಂದ ಜನ ಸಮುದಾಯದಲ್ಲಿ ಬಹುತೇಕ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಶೋಷಣೆಗೆ ಒಳಗಾದವರು. ಒಟ್ಟು ಮನುಷ್ಯ ಸಮಾಜದೊಂದಿಗೆ ಬದುಕಲಾಗದೇ ಊರ ಹೊರಗೆ ವಾಸಿಸಿ, ಕೀಳು ವೃತ್ತಿಯ ಮೇಲೆ ಅವಲೋಬಿತವಾಗಿ, ಹೆಸರು ಹೇಳಿಕೊಳ್ಳಲು ನಾಚಿಕೆಪಡುವ ಅಸ್ಪೃಶ್ಯರು ಅಥವಾ ಬಹಿಷ್ಕೃತರೆನಿಸಿಕೊಂಡವರೆಲ್ಲರೂ ದಲಿತರೆನಿಸಿಕೊಳ್ಳುತ್ತಾರೆ. ಹೀಗಾಗಿ ಒಟ್ಟಿನಲ್ಲಿ ದಲಿತ ಎಂದರೆ : ದಮನಕ್ಕೆ ಒಳಗಾದವರು ಎಂದು ಹೇಳಬಹುದು. ಶತಮಾನಗಳಿಂದ ಇವರು ತುಳಿತಕ್ಕೆ ಒಳಗಾದವರು ಅಸ್ಪೃಶ್ಯರೇ ಆಗಿದ್ದಾರೆ. 'ದಲಿತ' ಎಂದರೆ ಯಾರು? ಎಂಬುದನ್ನು ಮೂರು ರೀತಿಯ ಅಂಶಗಳು ವಿವಿರಿಸುತ್ತವೆ. ಅವುಗಳಲ್ಲಿ
ಆದರೆ ಇಂದು ವಿವಿಧ ಸವಲತ್ತುಗಳಿಗಾಗಿ ಮೀಸಲಾತಿ ಉದ್ದೆಗಳನ್ನು ಕಬಳಿಸಲು ಅನೇಕ ದಲಿತೇತರರು ದಲಿತರಾಗುತ್ತಿದ್ದಾರೆ. ಮತ್ತೊಂದು ಕಡೆ ವಿದ್ಯಾವಂತ ದಲಿತವರ್ಗ ಎಲ್ಲಾ ಅವಕಾಶಗಳನ್ನು ಪಡೆದು ಹಿಂದುಳಿದ ಇತರ ದಲಿತರನ್ನು ಮರೆತು ದೂರ ಸರಿಯುತ್ತಿದ್ದಾರೆ. ಆದ್ದರಿಂದ ಮುಂದುವರೆದ ವಿದ್ಯಾವಂತ ದಲಿತರು ದಲಿತ ಸಮುದಾಯಕ್ಕೆ ದಿಕ್ಕು ತೋರಿಸಿ ಅವರ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಸಬಲೀಕರಣಕ್ಕೆ ಶ್ರಮಿಸುವುದು ಆವಶ್ಯಕವಾಗಿದೆ. 'ಸಬಲೀಕರಣ'ದ ಪರಿಕಲ್ಪನೆ 'ಸಬಲೀಕರಣ ಎಂಬ ಪರಿಕಲ್ಪನೆಯು ವಿವಿಧ ಆಯಾಮಗಳನ್ನು ಒಳಗೊಡಿದೆ. ಶೋಷಿತ ವ್ಯಕ್ತಿಗಳು ತಮ್ಮ ಜೀವನದ ಮೇಲೆ ನಿಯಂತ್ರಣ ಪಡೆದುಕೊಂಡು ಇತರರೊಂದಿಗೆ ಸಹಭಾಗಿಯಾಗಿ ಅಭಿವೃದ್ಧಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು. ಹೀಗಾಗಿ ದಲಿತರ ಸಬಲೀಕರಣವು ದಲಿತರ ಶಕ್ತಿಯನ್ನು ಹೆಚ್ಚಿಸುವುದು, ಅಂದರೆ ದಲಿತರಲ್ಲಿ ಶಕ್ತಿಯನ್ನು ವೃದ್ಧಿಸಿ, ವರ್ಗಭೇದ ಸಮಾಜದಲ್ಲಿ ನ್ಯಾಯಯುತ ಸ್ಥಾನಮಾನ ದೊರಕಿದಿ ಗೌರವಯುತವಾಗಿ ಬದುಕಲು ಅವಕಾಶ ನೀಡುವುದು ಎಂಬುದಾಗುತ್ತದೆ. ಕರ್ನಾಟಕದಲ್ಲಿಂದು ಬಹುತೇಕ ದಲಿತರು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಇನ್ನಿತರೇ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನ ಪಡೆಯುವಲ್ಲಿ ವಿಪಲರಾಗುತ್ತಿದ್ದಾರೆ. ಇದು ದಲಿತರ ಸಬಲೀಕರಣಕ್ಕೆ ಅಡ್ಡಿಯಾಗುತ್ತಿದೆ. ಏಕೆಂದರೆ ಇಂದಿಗೂ ದಲಿತರ ಮೇಲಿನ ದೌರ್ಜನ್ಯಗಳು, ದಬ್ಬಾಳಿಕೆ, ಶೋಷಣೆ, ಕಿರುಕುಳ, ಅವಮಾನ, ತಾರತಮ್ಯ, ಸಾಮಾಜಿಕ ಬಹಿಷ್ಕಾರ ಇತ್ಯಾದಿಗಳ ನಿರಂತರವಾಗಿ ಮುಂದುವರಿಯುತ್ತಿರುವುದು ಕಂಡುಬರುತ್ತದೆ. ಆದ್ದರಿಂದ ದಲಿತರ ಸಬಲೀಕರಣಕ್ಕೆ ಪ್ರಸ್ತುತ ಮುಖ್ಯವಾಗಿ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ, ಆರ್ಥಿಕ ಭದ್ರತೆ, ರಾಜಕೀಯ ಭದ್ರತೆ, ಉದ್ಯೋಗ ಭದ್ರತೆಗಳನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ. ಪಂಚಾಯಿತಿಗಳಲ್ಲಿ ದಲಿತರ ಮೀಸಲಾತಿ ಮತ್ತು ಸಬಲೀಕರಣ ಹಲವಾರು ವರ್ಷಗಳಿಂದ ಪಂಚಾಯತಿರಾಜ್ ವ್ಯವಸ್ಥೆಯ ಚೌಕಟ್ಟಿನೊಳಗೆ ಬಳಸಿಕೊಳ್ಳದೇ ಸಮಾಜದಿಂದ ಶೋಷಣೆ ಮತ್ತು ತುಳಿತಕ್ಕೆ ಒಳಗಾಗಿದ್ದ ದಲಿತರನ್ನು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ) ಪಂಚಾಯತಿರಾಜ್ ಆಡಳಿತ ವ್ಯವಸ್ಥೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಬಲೀಕರಣ ಹೊಂದುವಂತೆ ಮಾಡುವ ಮೂಲಕ 'ಮೀಸಲಾತಿ'ಯನ್ನು ಕಲ್ಪಿಸಲಾಯಿತು. ಮೀಸಲಾತಿ ಮೂಲಕವೇ ಸಮಾನತೆ ಮತ್ತು ಸಮಾನ ಅವಕಾಶ ಸಿಗಲು ಸಾಧ್ಯ. ಸಮಾನತೆ ಸಾಧಿಸುವ ಮೂಲ ಗುರಿಯೇ ಮೀಸಲಾತಿ. ಇದು ನಮ್ಮ ಸಂವಿಧಾನವು ರೂಪಿಸಿರುವ ಸೂತ್ರ ಮತ್ತು ತತ್ತ್ವ. ಸಮಾಜದಲ್ಲಿ ಅಸಮಾನತೆ ಮತ್ತು ಶೋಷಣೆಗಳು ಹೆಚ್ಚಾದಾಗ ಸ್ವಾತಂತ್ರ್ಯ ಮತ್ತು ಅಸಮಾನತೆಗೆ ಅರ್ಥ ಸಿಗಬೇಕಾದರೆ ಮೀಸಲಾತಿ ಅತ್ಯಗತ್ಯ. ಇದರಿಂದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಇತ್ಯಾದಿ ಕ್ಷೇತ್ರಗಳಲ್ಲಿ ಎಲ್ಲಾ ವರ್ಗಗಳು ಪಾಲ್ಗೊಂಡು ಸಬಲೀಕರಣ ಹೊಂದಲು ಸಾಧ್ಯವಾಗುತ್ತದೆ. ಇಂತಹ ಕಾರ್ಯವನ್ನು ಪಂಚಾಯತಿರಾಜ್ ಸಂಸ್ಥೆಗಳಲ್ಲಿ ದಲಿತರಿಗೆ ಮೀಸಲಾತಿಯನ್ನು ಒದಗಿಸುವ ಪ್ರಕ್ರಿಯೆ ಪ್ರಾರಂಭಿಸಿ ಇಂದಿಗೂ ಮುಂದುವರಿಯುತ್ತಿದೆ. ಕರ್ನಾಟಕವು ಪಂಚಾಯತಿರಾಜ್ ಸಂಸ್ಥೆಗಳಲ್ಲಿ ದಲಿತರಿಗೆ ಮೀಸಲಾತಿಯನ್ನು ಕಲ್ಪಿಸಿ ಅವರಿಗೆ ಉತ್ತೇಜನ ಮತ್ತು ಪ್ರೇರಣೆ ನೀಡುವ ಮೂಲಕ ಸಾಮಾಜಿಕ ಮತ್ತು ರಾಜಕೀಯ ಘನತೆ ಗೌರವವನ್ನು ಹೆಚ್ಚಿಸುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಸ್ವಾತಂತ್ರ್ಯ ಪೂರ್ವದ ಕರ್ನಾಟಕ ಪಂಚಾಯತಿರಾಜ್ ಸಂಸ್ಥೆಗಳಲ್ಲಿ ಅಲ್ಪ ಪ್ರಮಾಣದ ಮೀಸಲಾತಿಯನ್ನು ದಲಿತರಿಗೆ ನೀಡಲಾಗಿತ್ತು. 1923ರ ಜಿಲ್ಲಾ ಸ್ಥಳೀಯ ಮಂಡಳಿಗಳ ಅಧಿನಿಯಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸದಸ್ಯತ್ವವನ್ನು ಮೀಸಲಿಡಲಾಗಿತ್ತು. ರಾಮತ್ ಕಮೀಷನ್ನಿನ ಶಿಫಾರಸ್ಸಿನ ಮೇಲೆ 1930ರಲ್ಲಿ ಜಾರಿಗೆ ಬಂದ ನಿಯಮದಲ್ಲಿಯೂ ಹರಿಜನರಿಗೆ ಸ್ಥಾನಗಳನ್ನು ಮೀಸಲಿಟ್ಟಿತ್ತು. ಕರ್ನಾಟಕ ವರ್ಗೀಕರಣ ನಂತರ ಕರ್ನಾಟಕ ಸ್ಥಳೀಯ ಮಂಡಳಿಗಳ ಹಾಗೂ ಗ್ರಾಮ ಪಂಚಾಯತ್ ಅಧಿನಿಯಮ 1959ರ ಕಾಯ್ದೆಯ ಪ್ರಕಾರ ಗ್ರಾಮ ಪಂಚಾಯಿತಿಗಳು, ತಾಲೂಕು ಅಭಿವೃದ್ಧಿ ಮಂಡಳಿಗಳು ಮತ್ತು ಜಿಲ್ಲಾ ಅಭಿವೃದ್ಧಿ ಸಮಿತಿಗಳು ರೂಪುಗೊಂಡವು. ಇದರಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಅವರ ಜನಸಂಖ್ಯೆಯ ಆಧಾರದ ಮೇಲೆ ಸ್ಥಾನಗಳನ್ನು ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಅಭಿವೃದ್ಧಿ ಮಂಡಲಿಗೆ ಹಾಗೂ ಜಿಲ್ಲಾ ಅಭಿವೃದ್ಧಿ ಸಮಿತಿಗೆ ಒಬ್ಬ ಪರಿಶಿಷ್ಟ ಜಾತಿ ಮತ್ತು ಒಬ್ಬ ಪರಿಶಿಷ್ಟ ವರ್ಗದವರಿಗೆ ಮೀಸಲಿಡಲಾಗಿತ್ತು. ಹೀಗೆ ವಿವಿಧ ಹಂತಗಳ ಪಂಚಾಯತಿರಾಜ್ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಒದಗಿಸಿದ್ದರಿಂದ ಅವರೂ ಅನೇಕ ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಸಾಧ್ಯವಾಯಿತು. ನಂತರ ಪಂಚಾಯತಿರಾಜ್ ಸಂಸ್ಥೆಗಳಿಗೆ ಹೊಸ ರೂಪು ಕೊಡುವ ಸಲುವಾಗಿ ಅಧಿಕಾರಿ ವಿಕೇಂದ್ರಿಕರಣವನ್ನು ವಿಸ್ತರಿಸಿ, ಗ್ರಾಮೀಣ ಪ್ರದೇಶದ ಸರ್ವಾಂಗೀಣ ಪ್ರಗತಿಗೆ ಹೊಸ ದಿಕ್ಕನ್ನು ತೋರಿಸುವ ಸಲುವಾಗಿ ಕರ್ನಾಟಕ ಜಿಲ್ಲಾ ಪರಿಷತ್, ತಾಲೂಕು ಪಂಚಾಯಿತಿ ಸಮಿತಿ, ಮಂಡಲ್ ಪಂಚಾಯಿತಿ ಮತ್ತು ನ್ಯಾಯ ಪಂಚಾಯಿತಿ ಅಧಿನಿಯಮ 1983ನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗೆ ಶೇ. 15ರಷ್ಟು, ಪರಿಶಷ್ಟ ವರ್ಗಕ್ಕೆ ಶೇ. 3ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿತ್ತು. ಆಗ ಸದಸ್ಯ ಸ್ಥಾನಗಳಿಗೆ ಮಾತ್ರ ಮೀಸಲಾತಿ ಇತ್ತು. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಇರಲಿಲ್ಲ. ಆಗ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಶೇ. 20.54 ಸ್ಥಾನಗಳನ್ನು ಪಡೆದಿದ್ದರು. ಇದರಿಂದ ಈ ಕಾಯ್ದೆಯು ಇಡೀ ದೇಶದಲ್ಲಿಯೇ ಕರ್ನಾಟಕವು ಹೆಚ್ಚು ಸಾಮಾಜಿಕ ಗೌರವವನ್ನು ಎತ್ತಿ ಹಿಡಿದ ಕೀರ್ತಿಗೆ ಒಳಗಾಗಿ ಪಂಚಾಯತಿರಾಜ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಯಿತು. ಪಂಚಾಯತಿರಾಜ್ ಸಂಸ್ಥೆಗಳ ಬಲವರ್ಧನೆ ಹಾಗೂ ಪರಿಶಷ್ಟ ಜಾತಿ ಮತ್ತು ಪಂಗಡಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಬರುವಂತೆ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ 1993ರಲ್ಲಿ ಸಂವಿಧಾನಕ್ಕೆ 73ನೆಯ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಮನ್ನಣೆ ನೀಡಲಾಯಿತು. ಕರ್ನಾಟಕದಲ್ಲಿಯೂ 1993ರ ಪಂಚಾಯತಿರಾಜ್ ಕಾಯ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆಯಾ ಪ್ರದೇಶಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಮೂರು ಹಂತದ ಪಂಚಾಯತಿರಾಜ್ ಸಂಸ್ಥೆಗಳಿಗೆ ಅನ್ವಯವಾಗುವಂತೆ ಸದಸ್ಯತ್ವದಿಂದ ಹಿಡಿದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಿಗದಿಪಡಿಸಲಾಗಿದೆ. ಈ ಮೀಸಲಾತಿ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಪರಿಶಿಷ್ಟ ಜಾತಿ ಶೇ 23.12 ಸ್ಥಾನಗಳನ್ನು, ಪರಿಶಿಷ್ಟ ಪಂಗಡಗಳಿಗೆ ಶೇ 16.74 ಸ್ಥಾನಗಳನ್ನು, ತಾಲ್ಲೂಕು ಪಂಚಾಯಿತಿಗಳಿಗೆ ಪರಿಶಿಷ್ಟ ಜಾತಿಗೆ ಶೇ 18 ರಷ್ಟು, ಪರಿಶಿಷ್ಟ ಪಂಗಡಕ್ಕೆ ಶೇ 5.56 ಸ್ಥಾನಗಳನ್ನು ಜಿಲ್ಲಾ ಪಂಚಾಯಿತಿಗೆ ಪರಿಶಿಷ್ಟ ಜಾತಿಗೆ ಶೇ 17.95 ಸ್ಥಾನಗಳನ್ನು ಪರಿಶಿಷ್ಟ ಪಂಗಡಕ್ಕೆ ಶೇ 5.11 ಸ್ಥಾನಗಳನ್ನು ನಿಗದಿಪಡಿಸಲಾಗಿತ್ತು. ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿಗಳು 1,365 ಅಧ್ಯಕ್ಷರು-ಉಪಾಧ್ಯಕ್ಷರು, ಪರಿಶಿಷ್ಟ ಪಂಗಡದ 391 ಅಧ್ಯಕ್ಷರು-ಉಪಾಧ್ಯಕ್ಷರು ಆಯ್ಕೆಯಾಗಿ ಬಂದಿದ್ದರು. ನಂತರ 1997ರ ಮಾರ್ಚಿನಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರ-ಉಪಾಧ್ಯಕ್ಷರ ಸ್ಥಾನಗಳಿಗೆ (20 ತಿಂಗಳು ಅಧಿಕಾರವಧಿ ನಿಗದಿ) ತಿದ್ದುಪಡಿ ತರುವ ಮೂಲಕ ತಾಲ್ಲೂಕು ಪಂಚಾಯಿತಿಗೆ ಪರಿಶಿಷ್ಟ ಜಾತಿಯಿಂದ 32 ಅಧ್ಯಕ್ಷರು 31 ಪರಿಶಿಷ್ಟ ಪಂಗಡದಿಂದ 09 ಅಧ್ಯಕ್ಷರು 10 ಉಪಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿಗೆ ಪರಿಶಿಷ್ಟ ಜಾತಿಯಿಂದ 03 ಅಧ್ಯಕ್ಷರು, 03 ಉಪಾಧ್ಯಕ್ಷರು, ಪರಿಶಿಷ್ಟ ಪಂಗಡದಿಂದ 01 ಅಧ್ಯಕ್ಷರು, 01 ಉಪಾಧ್ಯಕ್ಷರು, ಆಯ್ಕೆಯಾಗಿದ್ದರು. 2009-10ನೆಯ ಸಾಲಿನಲ್ಲಿ ನಡೆದ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಿ ಆಯ್ಕೆಯಾದ ಒಟ್ಟು ಸದಸ್ಯರುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸದಸ್ಯರುಗಳ ಸಂಖ್ಯೆಯ ವಿವಿರಗಳು ಈ ರೀತಿ ಇದೆ. ಗ್ರಾಮ ಪಂಚಾಯಿತಿಗಳ ಒಟ್ಟು ಸದಸ್ಯರುಗಳ ಸಂಖ್ಯೆ 90635. ಇದರಲ್ಲಿ ಪರಿಶಿಷ್ಟ ಜಾತಿ 168630 ಸದಸ್ಯರು, ಪರಿಶಿಷ್ಟ ಪಂಗಡದ 9842 ಸದಸ್ಯರು, ತಾಲ್ಲೂಕು ಪಂಚಾಯಿತಿಗಳ ಒಟ್ಟು ಸದಸ್ಯರ ಸಂಖ್ಯೆ 1013, ಇದರಲ್ಲಿ ಪರಿಶಿಷ್ಟ ಜಾತಿಯಿಂದ 186 ಸದಸ್ಯರು, ಪರಿಶಿಷ್ಟ ಪಂಗಡದಿಂದ 86 ಸದಸ್ಯರು, ಆಯ್ಕೆಯಾಗಿರುವುದು ಕಂಡುಬಂದಿದೆ. ಸಬಲೀಕರಣಕ್ಕೆ ಇರುವ ಅಡಚಣೆಗಳು ಪಂಚಾಯತಿರಾಜ್ ಸಂಸ್ಥೆಗಳಲ್ಲಿ ದಲಿತರಿಗೆ ನೀಡಿರುವ ಮೀಸಲಾತಿಯಿಂದ ಆಯ್ಕೆಯಾಗಿ ಬಂದರೂ ಅವರು ಸಬಲೀಕರಣ ಹೊಂದಲು ಹಲವಾರು ಅಡಚಣೆಗಳು ಕಂಡುಬರುತ್ತಿವೆ. ಅವುಗಳಲ್ಲಿ ಬಹುತೇಕ ದಲಿತ ಸದಸ್ಯರು ಅನಕ್ಷರಸ್ಥರಾಗಿರುವುದು, ಪಂಚಾಯಿತಿಗಳ ಕಾಯಿದೆಗಳು, ನೀತಿ ನಿಯಮಗಳ ಬಗ್ಗೆ ಅರಿವು ಇಲ್ಲದಿರುವುದು, ಪಂಚಾಯಿತಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಗೊತ್ತಿಲ್ಲದಿರುವುದು, ಅಧಿಕಾರಿಗಳು ಪಂಚಾಯಿತಿ ಕಾರ್ಯ ಚಟುವಟಿಕೆ ಬಗ್ಗೆ ಸಮರ್ಪಕ ಮಾಹಿತಿಗಳನ್ನು ನೀಡದಿರುವುದು, ಪಂಚಾಯಿತಿಗಳ ಇನ್ನಿತರೇ ಸದಸ್ಯರಿಂದ ಜಾತಿಯತೆ, ಅನುಮಾನ, ಕಿರುಕುಳಕ್ಕೆ ದಲಿತ ಸದಸ್ಯರು ಒಳಗಾಗಿರುವುದು, ದಲಿತರಿಗೆ ರಾಜಕೀಯ ಪ್ರಜ್ಞೆ ಕೊರತೆ ಇರುವುದು, ಸಂಕೋಚ ಸ್ವಭಾವ, ಉದಾಸೀನತೆ, ತಾತ್ಸಾರ ಮನೋಭಾವನೆ ಇರುವುದು, ದಲಿತರನ್ನು ಪ್ರಭಾವಿ ಮತ್ತು ಬಲಾಡ್ಯರು ಕೈಗೊಂಬೆಯನ್ನಾಗಿ ಮಾಡಿಕೊಂಡಿರುವುದು. ಹೀಗೆ ಹಲವಾರು ಅಡ್ಡಿ ಆತಂಕಗಳನ್ನು ಎದುರಿಸುತ್ತಿರುವುದರಿಂದ ದಲಿತರ ಸಬಲೀಕರಣಕ್ಕೆ ಅಡಚಣೆಯುಂಟಾಗಿದೆ. ಪಂಚಾಯತಿರಾಜ್ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಲಿತರ ಸಬಲೀಕರಣಕ್ಕೆ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬಹುದು 1. ಸಾಮಾಜಿಕ ಸಬಲೀಕರಣ
2. ಆರ್ಥಿಕ ಸಬಲೀಕರಣ
3. ರಾಜಕೀಯ ಸಬಲೀಕರಣ
4. ಇತರೇ ಸಬಲೀಕರಣ
ಸರ್ಕಾರ ಪಂಚಾಯತಿರಾಜ್ ಸಂಸ್ಥೆಗಳ ಮೂಲಕ ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಾ ಬಂದಿದೆ, ಬರುತ್ತಿದೆ. ಇದನ್ನು ದಲಿತರು ಸಮರ್ಪಕ ಮತ್ತು ವ್ಯವಸ್ಥಿತವಾಗಿ ಬಳಸಿಕೊಂಡು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಬಲೀಕರಣ ಹೊಂದಬೇಕು. ಈ ನಿಟ್ಟಿನಲ್ಲಿ ದಲಿತರಿಗೆ ಅಧಿಕಾರಿಗಳ ಜನಪ್ರಧಿಗಳ ಮತ್ತು ಜನಸಾಮಾನ್ಯರ ಸಹಕಾಯ ಅತ್ಯಂತ ಅವಶ್ಯಕವಾಗಿದೆ. ಆಧಾರ ಗ್ರಂಥಗಳು
ಸಿ. ಮುನಿಕೃಷ್ಣ ಸಂಶೋಧನಾರ್ಥಿ, ರಾಜ್ಯಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.
1 Comment
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |