ಸಮುದಾಯ ಸಹಭಾಗಿತ್ವ ಎಂಬುದು ಈ ದಿನಗಳಲ್ಲಿ ಬರೀ ಅಭಿವೃದ್ಧಿಯ ಧ್ಯೇಯವಾಕ್ಯವಾಗೇನೂ ಉಳಿದಿಲ್ಲ. ದಶಕಗಳ ಹಿಂದೆ ಅದೇನಿದ್ದರೂ ಬರೀ ಮಾತನಾಡುವ ಮತ್ತು ದೇಣಿಗೆ ನೀಡುವ ಸಂಸ್ಥೆಗಳಿಗೆ ಸಲ್ಲಿಸುವ ಪ್ರಸ್ತಾವದಲ್ಲಿ ಬರೆಯುತ್ತಿದ್ದ ಪದ ಮಾತ್ರ ಆಗಿತ್ತು. ಕಾಲ ಕ್ರಮೇಣ ಅದರ ಪ್ರಭಾವ ಮತ್ತು ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲಾರಂಭಿಸಿದ ಸರ್ಕಾರೇತರ ಸಂಸ್ಥೆಗಳು ಈ ವ್ಯವಸ್ಥೆಯನ್ನು ತಮ್ಮ ಕಾರ್ಯಕ್ರಮಗಳ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡವು. ಸರ್ಕಾರ ಸಹ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ತನ್ನ ಬಹುತೇಕ ಕಾರ್ಯಕ್ರಮಗಳಲ್ಲಿ ಹಲವು ಬಗೆಯ ಸಮುದಾಯ ಸಹಭಾಗಿತ್ವಕ್ಕೆ ಅದು ಅಧಿಕೃತವಾದ ಅವಕಾಶವನ್ನೇ ಒದಗಿಸುತ್ತಾ ಬಂದಿದೆ. ಹೀಗಾಗಿ ಇಂದು ರಾಜ್ಯದ ಬಡತನ ನಿರ್ಮೂಲನೆಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಸಮುದಾಯಗಳು ಪಾಲ್ಗೊಂಡು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಆದರೆ ಇಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆಗುತ್ತಿದೆಯೇ? ಸಮುದಾಯಗಳು ನಿಜವಾಗಲೂ ಅಪೇಕ್ಷಿತ ಮಟ್ಟದಲ್ಲಿ ಈ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿವೆಯೇ?
ಈ ಪಾಲ್ಗೊಳ್ಳುವಿಕೆಯ ಮಟ್ಟವನ್ನು ಅಳತೆ ಮಾಡಲು ಸಾಧ್ಯವೇ? ಹೌದು, ಎಂದಾದರೆ ಅದರ ಅಳತೆಗೋಲಾದರೂ ಯಾವುದು? ಸಮುದಾಯಗಳನ್ನು ನಿಗದಿತ ಚೌಕಟ್ಟಿನ ವ್ಯಾಪ್ತಿಗೆ ಸೇರಿಸಿಕೊಂಡ ಮಾತ್ರಕ್ಕೆ ಅವು ಕಾರ್ಯಕ್ರಮದಲ್ಲಿ ನಿಜವಾಗಲೂ ಪಾಲ್ಗೊಂಡಂತಾಗುವುದೇ? ಇಂತಹ ವಿವಿಧ ಪ್ರಶ್ನೆಗಳು ಕಳೆದ ಹಲವಾರು ವರ್ಷಗಳಿಂದ ನನ್ನನ್ನು ಕಾಡುತ್ತಿವೆ. ಕೆಲ ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ಸಾಕಷ್ಟು ಅಬ್ಬರದ ಪ್ರಚಾರದೊಂದಿಗೆ ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣಾ ಕಾರ್ಯಕ್ರಮವನ್ನು ಜಾರಿಗೆ ತಂದಿತು. ಇದರಲ್ಲಿ ಗ್ರಾಮ ಅರಣ್ಯ ಸಮಿತಿಗಳ (ವಿಎಫ್ಸಿ) ರಚನೆಯೂ ಸೇರಿತ್ತು. ಸಮಿತಿಯನ್ನು ಹೇಗೆ ಜನಪ್ರಿಯಗೊಳಿಸಬೇಕು ಮತ್ತು ಎಷ್ಟು ಸದಸ್ಯರನ್ನು ಅದು ಒಳಗೊಳ್ಳಬೇಕು ಎಂಬ ನಿರ್ದೇಶನವನ್ನೂ ಸರ್ಕಾರ ಕೊಟ್ಟಿತ್ತು. ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಈ ಯೋಜನೆಯಲ್ಲಿ ಅಪಾರ ಆಸಕ್ತಿ ತೋರಿದ್ದರು. ಇದರ ಫಲವಾಗಿ, ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿದ್ದ ಅಧಿಕಾರಿಗಳು ಸಹ ಈ ವಿಷಯದಲ್ಲಿ ಅತ್ಯುತ್ಸಾಹ ವ್ಯಕ್ತಪಡಿಸಿದರು. ಕೇವಲ ಮೂರು ತಿಂಗಳೊಳಗೆ 3 ಸಾವಿರ ಸಮಿತಿಗಳನ್ನು ರಚಿಸುವುದಾಗಿ ಘೋಷಿಸಿದರು. ಆದರೆ ವಾಸ್ತವದಲ್ಲಿ ಆಗಿದ್ದೇ ಬೇರೆ. ಅರಣ್ಯ ಸಂರಕ್ಷಕರು ಸ್ಥಳೀಯವಾಗಿ ತಮಗೆ ತಿಳಿದಿದ್ದ ಜನರ ಹೆಸರುಗಳನ್ನು ಬರೆದು ಇಲಾಖೆಗೆ ಸಲ್ಲಿಸುವಷ್ಟಕ್ಕೇ ಈ ಅಬ್ಬರ ಕೊನೆಗೊಂಡಿತು. ಕಾಗದದ ಮೇಲೆ ಮೂರು ಸಾವಿರ ಗ್ರಾಮ ಅರಣ್ಯ ಸಮಿತಿಗಳು ಅಸ್ತಿತ್ವಕ್ಕೆ ಬಂದವು. ಅವುಗಳಲ್ಲಿ ನಿಜವಾದ ಸಮುದಾಯ ಆಧಾರಿತ ಗುಂಪುಗಳು ಎಷ್ಟು ಎಂಬುದು ಮಾತ್ರ ಯಾರೊಬ್ಬರ ಅಂದಾಜಿಗೂ ಸಿಗಲಿಲ್ಲ! ದುಃಖದ ಸಂಗತಿಯೆಂದರೆ ಈಗ ಈ ಯಾವ ಗುಂಪುಗಳೂ ಅಸ್ತಿತ್ವದಲ್ಲೇ ಇಲ್ಲ ಮತ್ತು ಏನು ಆಗಬಾರದೋ ಅದಕ್ಕೆ ಉದಾಹರಣೆಯಾಗಷ್ಟೇ ಇವು ಈಗ ನೆನಪಿನಲ್ಲಿ ಉಳಿದುಕೊಂಡಿವೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಕಾರ್ಯಕ್ರಮವು ಭಾರತದಾದ್ಯಂತ ಯಶಸ್ವಿ ಪ್ರಯೋಗಗಳನ್ನು, ಅದರಲ್ಲೂ ಎನ್‍ಜಿಒ ಕ್ಷೇತ್ರದ ಸಾಧನೆಯನ್ನು ಅತ್ಯಾಸಕ್ತಿಯಿಂದ ಅನುಕರಿಸುವ ಯತ್ನ ಮಾಡಿತು. ನಮ್ಮಂತಹ ಹಲವಾರು ಸರ್ಕಾರೇತರ ಸಂಸ್ಥೆಗಳು ಸಮುದಾಯಗಳಿಗೆ ವಿಶ್ವಾಸಾರ್ಹವಾದ ಮತ್ತು ಕ್ರಿಯಾತ್ಮಕವಾದ ಅವಕಾಶಗಳನ್ನು ಒದಗಿಸಲು, ಅವುಗಳ ಆಶೋತ್ತರಗಳಿಗೆ ಸ್ಪಂದಿಸಲು ಸಮರ್ಥವಾಗಿವೆ. ಈ `ಉತ್ತಮ ಅಭ್ಯಾಸ'ವನ್ನು ಅನುಸರಿಸಲು ಮುಂದಾದ ಆರೋಗ್ಯ ಸಚಿವಾಲಯವು `ಗ್ರಾಮೀಣ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ' ರಚನೆಯನ್ನು ಕಡ್ಡಾಯಗೊಳಿಸಿತು. ಆದರೆ ಅದಕ್ಕೆ ಸಾಧ್ಯವಾದದ್ದು `ಅಣಕು ಸಾಧನೆ' ಮಾತ್ರ. ಎನ್‍ಜಿಒಗಳು ತಮ್ಮ ಕಾರ್ಯಕ್ರಮಗಳಲ್ಲಿ ಮಾಡಿದ ನಿಜವಾದ ಸಾಧನೆಯ ಪ್ರಕ್ರಿಯೆಗಳನ್ನು ಕಾರ್ಯರೂಪಕ್ಕೆ ತರಲು ಅದು ವಿಫಲವಾಯಿತು. ಈಗ ಈ ಸಮಿತಿಗಳು ರಾಜಕೀಯ ಆಮಿಷದ ರೀತಿಯಲ್ಲಷ್ಟೇ ರಚನೆಯಾಗುತ್ತಿವೆ. ಅಲ್ಲದೆ ಲೆಕ್ಕಕ್ಕೆ ಸಿಗದ ಹಣ ವರ್ಗಾವಣೆಗೆ ಅವಕಾಶ ಮಾಡಿಕೊಡುವ ಮತ್ತೊಂದು ಸುಲಭದ ಮಾರ್ಗವಾಗಿವೆ. ಆದರೆ ಎಲ್ಲ ಗುಂಪುಗಳಲ್ಲೂ ಇಂತಹುದೇ ಸಮಸ್ಯೆ ಇದೆ ಎಂದು ನಾನು ಹೇಳಲಾರೆ. ಕಾವಲುಪಡೆಗೊಂದು ಕಾವಲುಪಡೆ! ಅತ್ಯುತ್ತಮವಾಗಿ ಆರಂಭವಾದರೂ ಸೂಕ್ತ ಸಿದ್ಧತೆ ಇಲ್ಲದೆ ವಿಫಲವಾದ ಮತ್ತೊಂದು ಪ್ರಮುಖ ಕಾರ್ಯಕ್ರಮವೆಂದರೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಜಾಗೃತ ಸಮಿತಿಗಳು. ಈ ವ್ಯವಸ್ಥೆಯಡಿ ಅಸ್ತಿತ್ವಕ್ಕೆ ಬಂದಿರುವ ನ್ಯಾಯಬೆಲೆ ಅಂಗಡಿಗಳ ಪರಿವೀಕ್ಷಣೆ ನಡೆಸಿ ಕಾವಲುಪಡೆಯಂತೆ ಈ ಸಮಿತಿಗಳು ಕಾರ್ಯ ನಿರ್ವಹಿಸಬೇಕಿತ್ತು. ಆಹಾರ ಧಾನ್ಯದ ವಿತರಣೆಯು ನಿಗದಿತ ಮಾನದಂಡಗಳಿಗೆ (ಗುಣಮಟ್ಟ ಮತ್ತು ಪ್ರಮಾಣ ಎರಡರಲ್ಲೂ) ಅನುಗುಣವಾಗಿ ಸಮರ್ಪಕವಾಗಿ ನಡೆಯುತ್ತಿದೆಯೆ ಎಂಬುದರ ಮೇಲೆ ಕಣ್ಗಾವಲಿರಿಸುವ ಮೂಲಕ ಬಳಕೆದಾರರ ನಡುವೆ ಜನಪ್ರಿಯವಾಗಬೇಕಿತ್ತು. ಆದರೆ ದುರದೃಷ್ಟವಶಾತ್ ಇವುಗಳಲ್ಲಿ ಬಹುತೇಕ ಸಮಿತಿಗಳು ಈಗ ಅಸ್ತಿತ್ವದಲ್ಲೇ ಇಲ್ಲ. ಇನ್ನು ಹಲವೆಡೆ ಅಂಗಡಿಗಳ ಮಾಲೀಕರ ಬಂಧುಗಳು ಮತ್ತು ಸ್ನೇಹಿತರೇ ಹೆಚ್ಚು ಜನಪ್ರಿಯರಾದರು. ಕೆಲ ಸ್ಥಳಗಳಲ್ಲಿ ಸದಸ್ಯರು `ಅಕ್ರಮ'ಗಳ ಪಾಲುದಾರರೂ ಆದರು. ಇದರ ಫಲವಾಗಿ ಒಂದಷ್ಟು ಅಕ್ಕಿ ಮತ್ತು ಸೀಮೆಎಣ್ಣೆ ಇವರಿಗೆ ನಿಯಮಿತವಾಗಿ ಸರಬರಾಜಾಯಿತು. ವ್ಯಂಗ್ಯವೆಂದರೆ ಇಂತಹ ಸ್ಥಿತಿಯಲ್ಲಿ ಈ ಜಾಗೃತ ಸಮಿತಿಗಳ ಮೇಲ್ವಿಚಾರಣೆಗೇ ಈಗ ಮತ್ತೊಂದು ಜಾಗೃತ ಸಮಿತಿಯನ್ನು ಅಸ್ತಿತ್ವಕ್ಕೆ ತರಬೇಕಾಗಿದೆ. ಸಮುದಾಯ ಸಹಭಾಗಿತ್ವದ ರಚನೆ ಮತ್ತು ಕಾರ್ಯನಿರ್ವಹಣೆಗೆ ಹೆಚ್ಚು ಗಮನ ಹರಿಸಿದ್ದರೆ ಇಂತಹ ದುರವಸ್ಥೆಯನ್ನು ತಪ್ಪಿಸಲು ಸಾಧ್ಯವಿರಲಿಲ್ಲವೇ? ಅವುಗಳ ಹೊಣೆಗಾರಿಕೆ ಹಾಗೂ ಪಾತ್ರದ ಬಗ್ಗೆ ಸೂಕ್ತ ತರಬೇತಿ ನೀಡಿದ್ದರೆ ಈ ಸಮಿತಿಗಳು ಹೆಚ್ಚು ಕ್ರಿಯಾಶೀಲ ಮತ್ತು ನೈತಿಕವಾಗಿ ಇರುವಂತೆ ನೋಡಿಕೊಳ್ಳಲು ಆಗುತ್ತಿರಲಿಲ್ಲವೇ? ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುವ ಕಾರ್ಯಕ್ರಮಗಳಲ್ಲಿ ಸಮುದಾಯಗಳು ಹೇಗೆ ತೊಡಗಿಕೊಳ್ಳಬಹುದು ಎಂಬುದಕ್ಕೆ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳು (ಎಸ್‍ಡಿಎಂಸಿ) ಅತ್ಯುತ್ತಮವಾದ ಉದಾಹರಣೆ. ರಾಜ್ಯದಾದ್ಯಂತ ಇರುವ ಇಂತಹ ಸಾವಿರಾರು ಗುಂಪುಗಳೊಂದಿಗೆ ಕಾರ್ಯ ನಿರ್ವಹಿಸಿರುವ ನನ್ನ ಅನುಭವದ ಮೇಲೆ ಹೇಳುವುದಾದರೆ, ಸದಸ್ಯರ ಆಯ್ಕೆ, ತರಬೇತಿಗೆ ಗಮನ ಹರಿಸಿದರೆ, ಅವುಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದರೆ ಈ ಗುಂಪುಗಳ ಸುಗಮ ಕಾರ್ಯ ನಿರ್ವಹಣೆಗೆ ವಿಪುಲ ಅವಕಾಶಗಳಿವೆ. ಸಮುದಾಯವು ಕಾರ್ಯಕ್ರಮಕ್ಕೆ ಬಾಧ್ಯಸ್ಥವಾಗುವಂತೆ ನೋಡಿಕೊಂಡರೆ ಬರೀ ಸಭೆಗಳಲ್ಲಿ ಪಾಲ್ಗೊಳ್ಳುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಅದು ತೊಡಗಿಕೊಳ್ಳುವಂತೆ ಮಾಡಬಹುದು. ಕ್ರಿಯಾಶೀಲವಾಗಿರುವ ಇಂತಹ ಬಹಳಷ್ಟು ಗುಂಪುಗಳು ನಿಗದಿತ ಕಾರ್ಯಸೂಚಿಯನ್ನೂ ಮೀರಿ ತಮ್ಮ ಶಾಲೆಗಳ ಅತ್ಯುತ್ತಮ ಸಾಧನೆಗೆ ಕಾರಣವಾಗಿರುವ ಉದಾಹರಣೆಗಳೂ ಸಾಕಷ್ಟಿವೆ. ಅಸ್ತ್ರದ ಮೇಲೆ ವಕ್ರದೃಷ್ಟಿ ಈಗ ಶಾಸನಬದ್ಧವಾಗಿರುವ ಮತ್ತೊಂದು ಸಮುದಾಯ ಆಧಾರಿತ ಕಾರ್ಯಕ್ರಮ `ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ'ಯ (ಎನ್ಆರ್‍ಇಜಿಎಸ್) `ಸಾಮಾಜಿಕ ಲೆಕ್ಕಪರಿಶೋಧನೆ'. ದೂರದೃಷ್ಟಿಯ ಈ ಪರಿಕಲ್ಪನೆಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಇದೂ ಮತ್ತೊಂದು ಅವನತ ಸರ್ಕಾರಿ ಯೋಜನೆ ಆಗುವ ಅಪಾಯವೇ ಹೆಚ್ಚು. ಈಗಾಗಲೇ ಸಮುದಾಯಗಳ ಬಳಿ ಇರುವ ಈ ಅಸಾಧಾರಣ ಅಸ್ತ್ರದ ಮೇಲೆ ವಕ್ರದೃಷ್ಟಿ ಬಿದ್ದಿರುವ ವದಂತಿಯೂ ಇದೆ. ಸಮುದಾಯಗಳು ಹೆಚ್ಚು ಹೆಚ್ಚು ಜವಾಬ್ದಾರಿ ಹೊರಲು ಮುಂದೆ ಬಂದಷ್ಟೂ ಕಾರ್ಯಕ್ರಮಗಳ ಜಾರಿಯ ಹೊಣೆ ಹೊತ್ತವರಲ್ಲಿ (ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆ) ಅಸ್ಥಿರತೆ ಮತ್ತು ದಿಗಿಲು ಹುಟ್ಟಿಕೊಳ್ಳುತ್ತದೆ. ಸಾಮಾಜಿಕ ಲೆಕ್ಕಪರಿಶೋಧನೆಯು ಸಮುದಾಯದ ಸಬಲೀಕರಣ ಮತ್ತು ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆಗೆ ಅತ್ಯುತ್ತಮವಾದ ಸಾಧನ. ಇದಕ್ಕೆ ವ್ಯಾಪಕ ಸಿದ್ಧತೆ ಬೇಕಾಗುತ್ತದೆ ಮತ್ತು ಈ ಶಕ್ತಿಶಾಲಿ ಅಸ್ತ್ರವನ್ನು ನಿರ್ವಹಿಸಲು ಸಮುದಾಯ ಸಹ ಸಾಕಷ್ಟು ಪರಿಪಕ್ವ ಆಗಬೇಕಾಗುತ್ತದೆ. ಈ ಎಲ್ಲ ಸ್ವಾಗತಾರ್ಹ ಬೆಳವಣಿಗೆಯ ನಡುವೆಯೂ ತಳಮಟ್ಟದಲ್ಲಿ ಈ ಬಗ್ಗೆ ಗೊಂದಲ ಸಹ ಇದೆ. ಸಮುದಾಯಗಳು ಆಡಳಿತದಲ್ಲಿ ಪಾಲ್ಗೊಳ್ಳಲು ಪಂಚಾಯಿತಿ ಮಟ್ಟದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ನಂಬಲಾಗಿದೆ. ಸಮುದಾಯದ ಆಶೋತ್ತರಗಳನ್ನು ಬಿಂಬಿಸುವ ಸಲುವಾಗಿಯೇ ತಾವು ಆಯ್ಕೆಯಾಗಿರುವುದು ಎಂದು ಬಲವಾಗಿ ಪ್ರತಿಪಾದಿಸುವ ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿ ಅಸ್ತಿತ್ವಕ್ಕೆ ಬರುತ್ತಿರುವ ಈ ಹೊಸ ಗುಂಪುಗಳ ನಡುವೆ ಈಗ ಒತ್ತಡ ಸೃಷ್ಟಿಯಾಗುತ್ತಿದೆ. ಈ ಒತ್ತಡವನ್ನು ತಗ್ಗಿಸುವ ಪ್ರಯತ್ನ ನಡೆದಿದೆ. ಆದರೆ ಈ ಸಂಧಾನದ ಪರಿಣಾಮವಾಗಿ ಮತ್ತ್ತೆ ಸರ್ಕಾರವೇ ನೇತೃತ್ವ ವಹಿಸುವಂತಾಗದೆ ಸಮುದಾಯದ ನೇತೃತ್ವದಲ್ಲಿ ಸಂಘಟನಾತ್ಮಕವಾದ ಪ್ರಕ್ರಿಯೆ ರೂಪುಗೊಳ್ಳಬೇಕಿದೆ. ಸಮುದಾಯ ಸಹಭಾಗಿತ್ವವು ತಳಮಟ್ಟದಲ್ಲಿ ಸ್ವಾಭಾವಿಕವಾದ ಮತ್ತು ಕ್ರಮಬದ್ಧವಾದ ವ್ಯವಸ್ಥೆಯಾಗಿರಬೇಕೇ ಹೊರತು ಕೆಲ ಯೋಜನೆಗಳು ಅಥವಾ ಕಾರ್ಯಕ್ರಮಗಳ ಅಗತ್ಯಕ್ಕೆ ತಕ್ಕಂತೆ ಅಸ್ತಿತ್ವಕ್ಕೆ ಬಂದಂತಹ ಬೆಳವಣಿಗೆ ಆಗಬಾರದು. ಈ ಗುಂಪುಗಳ ರಚನೆ ಹಾಗೂ ಕಾರ್ಯನಿರ್ವಹಣೆಯು ಅಧಿಕಾರಿಗಳು ಸಾವಿರಾರು ಮೈಲಿ ದೂರದಲ್ಲಿ ಕುಳಿತು ರೂಪಿಸಿದ ನಿಯಮಗಳ ಅನುಸಾರ ನಡೆಯುವಂತಾಗದೆ ಸಾಮಾಜಿಕ ಕ್ರಿಯಾಶೀಲ ಮಾದರಿಯಲ್ಲಿ ರೂಪುಗೊಳ್ಳಬೇಕು. ಒಟ್ಟಾರೆ, ಸಮುದಾಯದ ಪಾಲ್ಗೊಳ್ಳುವಿಕೆ ಎಂಬುದು ಸೂಕ್ಷ್ಮವಾದ ಮತ್ತು ಸುದೀರ್ಘಾವಧಿಯ ಪ್ರಕ್ರಿಯೆ. ಈ ಗುಂಪುಗಳನ್ನು ಮೇಲ್ಮಟ್ಟದಿಂದ ಹೇರದೆ ಅವು ಸಂಘಟನಾತ್ಮಕವಾಗಿ ರೂಪುಗೊಳ್ಳಲು ಅವಕಾಶ ಕೊಡಬೇಕು. ಅವುಗಳ ನಡುವೆ ನಿಷ್ಟಕ್ಷಪಾತ ಪ್ರಾತಿನಿಧ್ಯ ಇರಬೇಕು. ಯಾರೊಬ್ಬರೂ ಅವುಗಳ ಮೇಲೆ ಆಗ್ರಹಪೂರ್ವಕ ಒತ್ತಡ ಹಾಕಿ ಪೂರ್ವ ನಿರ್ಧಾರಿತ ರೀತಿಯಲ್ಲೇ ಅವು ಕೆಲಸ ಮಾಡಬೇಕೆಂದು ನಿರೀಕ್ಷಿಸಬಾರದು. ಆಗ ಮಾತ್ರ ಸಮುದಾಯದ ಕಾರ್ಯನಿರ್ವಹಣೆ ಋಣಾತ್ಮಕ ಪರಿಣಾಮ ಬೀರುವುದಿಲ್ಲವೆಂಬ ಭರವಸೆ ಇಟ್ಟುಕೊಳ್ಳಬಹುದು. ಸಮುದಾಯದ ಗುಂಪುಗಳ ರಚನೆ ಮತ್ತು ಕಾರ್ಯನಿರ್ವಹಣೆಗೆ ಸೂಕ್ತ ಗಮನ ಹರಿಸಬೇಕಾದದ್ದು ಅತ್ಯವಶ್ಯಕ. ಅವು ತಾರ್ಕಿಕ ಅಂತ್ಯ ಕಾಣಲು ಅಗತ್ಯವಾದ ತರಬೇತಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಬೇಕಾದ ಪರಿಪಕ್ವತೆಗೆ ಸಮಯಾವಕಾಶ ನೀಡಬೇಕು. ಸಮಯ ನಿಗದಿ ಮಾಡಿ ಕಾರ್ಯಕ್ರಮದ ಚೌಕಟ್ಟಿನಡಿ ಗುರಿ ಸಾಧಿಸಲು ಒತ್ತಾಯಿಸಿದರೆ ಅವುಗಳ ಉದ್ದೇಶವೇ ನಿರರ್ಥಕವಾಗುತ್ತದೆ. ಇದೆಲ್ಲದರ ನಡುವೆಯೂ `ಸಮುದಾಯ ಪಾಲ್ಗೊಳ್ಳುವಿಕೆ' ವ್ಯವಸ್ಥೆಯನ್ನೇ ವಜಾ ಮಾಡಿ ಈ ಕಾರ್ಯಕ್ರಮಗಳು ಎಂದಿನಂತೆ ವ್ಯಾವಹಾರಿಕವಾಗಿ ನಡೆದುಕೊಂಡು ಹೋಗುವಂತೆ ಮಾಡಿಬಿಡುವುದು ವ್ಯವಸ್ಥೆಗೆ ಅತ್ಯಂತ ಸುಲಭದ ಕಾರ್ಯ. ಇಂತಹ ಸ್ಥಿತಿಯಲ್ಲಿ ಈ ಗುಂಪುಗಳು ಕಾರ್ಯಕ್ರಮಕ್ಕೆ ಅಗತ್ಯವಾದ ಒಂದು ಸಾಂಕೇತಿಕ ವ್ಯವಸ್ಥೆಯಾಗಷ್ಟೇ ಉಳಿಯದೆ ಸದಸ್ಯರು ಮತ್ತು ಅವರ ಸಾಮಥ್ರ್ಯದ ಮೇಲೆ ಅವುಗಳಿಗೆ ಗೌರವ ಪ್ರಾಪ್ತಿಯಾಗುವಂತಾಗಬೇಕು. ಆಗ ಮಾತ್ರ ಸಮುದಾಯ ಸಹಭಾಗಿತ್ವವು ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾದ ಶಕ್ತಿಶಾಲಿ ಸಾಧನವಾಗುತ್ತದೆ. ಡಾ.ಆರ್. ಬಾಲಸುಬ್ರಹ್ಮಣ್ಯಂ ಕೃಪೆ: ಪ್ರಜಾವಾಣಿ ಮಂಗಳವಾರ 8ನೇ ಫೆಬ್ರುವರಿ 2011
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|