ಈ ಕಥೆಯು 100 ವರ್ಷಗಳಿಗಿಂತಲೂ ಹಳೆಯದಾಗಿರಬಹುದು. ಆದರೆ ಪ್ರಸ್ತುತ ದಿನಗಳಿಗೂ ಅನ್ವಯವಾಗುವ ವಾಸ್ತವದ ಚಿತ್ರಣ. 1892ರ ಇಸವಿ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಶುಲ್ಕವನ್ನು ಕಟ್ಟಲು ಪರದಾಡುತ್ತಿದ್ದ. ಆತನೊಬ್ಬ ಅನಾಥನಾಗಿದ್ದು ಈ ಹಣವನ್ನು ಹೇಗೆ ಹೊಂದಿಸುವುದು ಎಂಬುದೂ ಸಹ ಅವನಿಗೆ ಗೊತ್ತಿರಲಿಲ್ಲ. ಹೀಗೆ ಯೋಚನೆಯಲ್ಲಿರುವಾಗ ತಕ್ಷಣ ಆತನಿಗೆ ಒಂದು ಉಪಾಯ ಹೊಳೆಯಿತು. ತನ್ನ ಸ್ನೇಹಿತನೊಡಗೂಡಿ ಕಾಲೇಜಿನಲ್ಲಿ ಒಂದು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ ಅದರಿಂದ ಬರುವ ಹಣವನ್ನು ತನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದನು. ಈ ಯೋಜನೆಯನ್ನು ಕಾರ್ಯರೂಪಗೊಳಿಸಲು ಅಂದಿನ ಪ್ರಸಿದ್ಧ ಪಿಯಾನೋ ವಾದಕರಾಗಿ ಹೆಸರು ಮಾಡಿದ್ದ ಇಗ್ನೇಸಿ.ಜೆ.ಪೆಡೆರ್ವಸ್ಕಿ ಎಂಬುವರನ್ನು ಭೇಟಿ ಮಾಡಿ ತಮ್ಮ ಯೋಜನೆಗಳನ್ನು ತಿಳಿಸಿದರು. ಪೆಡೆರ್ವಸ್ಕಿಯ ವ್ಯವಸ್ಥಾಪಕರು ಹಣದ ಮೊತ್ತವನ್ನು ಗೊತ್ತುಪಡಿಸಿದರು. ಆ ಮೊತ್ತವು 2000 ಅಮೇರಿಕನ್ ಡಾಲರ್‍ಗಳಾಗಿತ್ತು. ಈ ಶರತ್ತಿಗೆ ಒಪ್ಪಿದ ಯುವಕರು ಕಾರ್ಯಕ್ರಮವನ್ನು ಆಯೋಜಿಸಿಯೇ ಬಿಟ್ಟರು. ಎಂದಿನಂತೆ ಪೆಡೆರ್ವಸ್ಕಿ ತನ್ನ ಸಂಗೀತ ಕಾರ್ಯಕ್ರಮವನ್ನು ನಡೆಸಿದರು. ದುರಾದೃಷ್ಟವಶಾತ್ ಸಾಕಷ್ಟು ಟಿಕೇಟ್‍ಗಳು ಮಾರಾಟವಾಗದೇ ಹಾಗೆಯೇ ಉಳಿದವು. ಕೇವಲ 1600 ಅಮೇರಿಕನ್ ಡಾಲರ್ ಮಾತ್ರ ಟಿಕೇಟ್ ಮಾರಾಟದಿಂದ ಸಂಗ್ರಹವಾಗಿತ್ತು. ಈ ಘಟನೆಯಿಂದ ಆ ಯುವಕರು ತುಂಬಾ ನಿರಾಶರಾಗಿ ಪೆಡೆರ್ವಸ್ಕಿಯ ಬಳಿ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿ ಸಂಗ್ರಹವಾಗಿದ್ದ 1600 ಡಾಲರ್ ಮತ್ತು ಉಳಿಕೆ ನೀಡಬೇಕಿದ್ದ 400 ಡಾಲರ್‍ಗೆ ಚೆಕ್ಕನ್ನು ನೀಡಿ ತಕ್ಷಣ ಹಣ ಕೊಡುವುದಾಗಿ ಕೇಳಿಕೊಂಡರು. ಅದಕ್ಕೆ ಪೆಡೆರ್ವಸ್ಕಿ ಹುಡುಗರನ್ನು ಕುರಿತು `ಇದು ಸಾಧ್ಯವಿಲ್ಲ, ಇದು ನ್ಯಾಯ ಸಮ್ಮತವಾದುದಲ್ಲ', ಎಂದು ಹೇಳುತ್ತಾ ಹುಡುಗರು ನೀಡಿದ್ದ ಚೆಕ್ಕನ್ನು ಅವರ ಮುಂದೆ ಹರಿದು ಹಾಕಿದರು, ಹುಡುಗರು ಸಂಗ್ರಹಿಸಿದ್ದ 1600 ಡಾಲರ್‍ಗಳನ್ನು ಹಿಂದಿರುಗಿಸಿ ಹುಡುಗರನ್ನು ಉದ್ದೇಶಿಸಿ ಹೇಳಿದರು, `ಸಂಗ್ರಹವಾಗಿರುವ 1600 ಡಾಲರ್‍ಗಳಲ್ಲಿ ಈ ಕಾರ್ಯಕ್ರಮಕ್ಕೆ ನೀವು ಖರ್ಚು ಮಾಡಿದ್ದ ಹಣ ಮತ್ತು ನಿಮ್ಮ ವಿದ್ಯಾಭ್ಯಾಸಕ್ಕೆ ಅಗತ್ಯವಿರುವಷ್ಟನ್ನು ಇಟ್ಟುಕೊಂಡ ಮೇಲೆ ಏನು ಉಳಿಯುತ್ತದೋ ಅದನ್ನು ಮಾತ್ರ ನನಗೆ ನೀಡಿ', ಎಂದನು. ಈ ಮಾತನ್ನು ಆಲಿಸುತ್ತಿದ್ದ ಆ ಹುಡುಗರಿಗೆ ಆಶ್ಚರ್ಯವಾಯಿತು. ತುಂಬಾ ಕೃತಜ್ಞಾಪೂರ್ವಕವಾಗಿ ಧನ್ಯವಾದ ಹೇಳಿ ಸಂತೋಷಗೊಂಡರು. ಈ ಒಂದು ಚಿಕ್ಕ ಘಟನೆ ದಯೆ, ಕರುಣೆಯ ಒಂದು ಪ್ರತೀಕವಷ್ಟೇ. ಈ ಒಂದು ಸಂಗತಿಯಿಂದ ತಿಳಿಯುವುದೇನೆಂದರೆ ಪೆಡೆರ್ವಸ್ಕಿ ಒಬ್ಬ ಶ್ರೇಷ್ಟ ಮಾನವೀಯ ಮೌಲ್ಯಗಳಿಂದ ಕೂಡಿದ ವ್ಯಕ್ತಿ ಎಂದೆನಿಸುತ್ತದೆ. ಏಕೆಂದರೆ ತನಗೆ ಬರಬೇಕಾದ 2000 ಡಾಲರ್ ಗಳನ್ನು ಆ ಯುವಕರಿಂದ ಪಡೆಯಬಹುದಾದ ಎಲ್ಲಾ ಹಕ್ಕುಬಾದ್ಯತೆಗಳನ್ನು ಹೊಂದಿದ್ದರೂ ಯಾವುದೇ ರೀತಿಯ ಹಕ್ಕನ್ನು ಚಲಾಯಿಸದೆ ಆ ಇಬ್ಬರು ಯುವಕರಿಗೆ ಸಹಾಯಮಾಡಿದರು. ಆ ಯುವಕರು ಯಾರು ಎಂಬುದೇ ತಿಳಿಯದ ಪೆಡೆರ್ವಸ್ಕಿ ಯುವಕರಿಗೆ ಸಹಾಯ ಮಾಡಿದರು. ಶ್ರೇಷ್ಠವ್ಯಕ್ತಿಗಳು, ಸಹಾಯ ಬೇಡುವ ವ್ಯಕ್ತಿಗಳೂ ಬೇರೆಯವರಿಗೆ ಸಹಾಯವಾಗಲಿ ಅಥವಾ ನೆರವಾಗಲಿ ಎಂಬ ಹಿತ ಸ್ವಾರ್ಥದಿಂದ ಸಹಾಯ ಮಾಡುತ್ತಾರೆ. ಈ ರೀತಿಯ ಹಿತ ಸ್ವಾರ್ಥಸಹಾಯವು ಒಂದಲ್ಲಾ ಒಂದು ದಿನ ನೆರವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ಈ ಕೆಳಗಿನ ಸಂಗತಿಯಿಂದ ತಿಳಿಯಬಹುದಾಗಿದೆ. ಯುವಕರಿಗೆ ಸಹಾಯ ಮಾಡಿದ್ದ ಪಿಯಾನೋ ವಾದಕ ಪೆಡೆರ್ವಸ್ಕಿ ಮುಂದೆ ಪೋಲ್ಯಾಂಡ್ನ ಪ್ರಧಾನಮಂತ್ರಿಯಾದರು, ಪ್ರಖ್ಯಾತ ನಾಯಕರೆಂದು ಹೆಸರು ಮಾಡಿದರು, ಆದರೆ ದುರಾದೃಷ್ಟವಶಾತ್ ವಿಶ್ವ ಮಹಾ ಸಮರದಿಂದ ನಾಶವಾಗಿದ್ದ ಪೋಲ್ಯಾಂಡ್ನಲ್ಲಿ 1.5 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದರು. ಇವರ ಹಸಿವನ್ನು ನೀಗಿಸುವಷ್ಟು ಹಣ ಪೆಡೆರ್ವಸ್ಕಿ ಅಧಿಕಾರದ ಪೋಲ್ಯಾಂಡ್ ಸರ್ಕಾರದ ಬಳಿ ಇರಲಿಲ್ಲ. ಇದರಿಂದ ನಿರಾಶರಾದ ಪೆಡೆರ್ವಸ್ಕಿಯವರು ಹಣಕ್ಕಾಗಿ ಮತ್ತು ಪರಿಹಾರಕ್ಕಾಗಿ ದಿಕ್ಕುತೋಚದ ಸ್ಥಿತಿಯಲ್ಲಿ ಅಮೇರಿಕಾದ ಆಹಾರ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸಹಾಯ ಬೇಡಿದರು. ಆ ಕೇಂದ್ರದ ಮುಖ್ಯಸ್ಥನಾಗಿದ್ದ ಒಬ್ಬ ವ್ಯಕ್ತಿ ಹರ್ಬಟ್ ಹೂವರ್ ಎಂಬುವನು (ಈತ ಮುಂದೆ ಅಮೇರಿಕಾದ ಅಧ್ಯಕ್ಷನಾದ). ಪೆಡೆರ್ವಸ್ಕಿಯ ಮನವಿಯನ್ನು ಸಮ್ಮತಿಸಿ ಪೋಲ್ಯಾಂಡ್‍ಗೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ಹಡಗಿನಲ್ಲಿ ಕಳುಹಿಸಿಕೊಟ್ಟನು. ಈ ಸಹಾಯದಿಂದ ಪೋಲ್ಯಾಂಡ್‍ನ ಪರಿಸ್ಥಿತಿ ಸುಧಾರಣೆಗೊಂಡಿತು. ಪೆಡೆರ್ವಸ್ಕಿಯು ನಿರಾಳನಾಗಿ ಸಂತೋಷಗೊಂಡು ಆ ಕೇಂದ್ರದ ಮುಖ್ಯಸ್ಥನಿಗೆ ಧನ್ಯವಾದ ತಿಳಿಸಲು ತೀರ್ಮಾನಿಸಿ ಹರ್ಬರ್ಟ್ ಹೂವರ್‍ನನ್ನು ಭೇಟಿ ಮಾಡಿ ವೈಯಕ್ತಿಕ ಧನ್ಯವಾದವನ್ನು ಹೇಳಲು ಪ್ರಾರಂಭಿಸಿದನು. ಅದಕ್ಕೆ ಹೂವರ್ ಪೆಡೆರ್ವಸ್ಕಿಯನ್ನು ತಡೆದು ಈ ರೀತಿ ಹೇಳಿದನು, "ನೀವು ನನಗೆ ಧನ್ಯವಾದವನ್ನು ಹೇಳಬಾರದು ಪ್ರಧಾನಮಂತ್ರಿಗಳೇ, ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ ಬಹಳ ದಿನಗಳ ಹಿಂದೆ ನೀವು ಸಹಾಯ ಮಾಡಿದ ಇಬ್ಬರು ಕಾಲೇಜು ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬನಾಗಿದ್ದೆ" ಎಂದು ತಿಳಿಸಿದನು. ಈ ಘಟನೆಯಿಂದ ನಾವು ಕಲಿಯಬೇಕಾಗಿರುವುದು ಬೇರೆಯವರಿಗೆ ಸಹಾಯ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಾವು ಸಹಾಯ ಮಾಡಿದ ವ್ಯಕ್ತಿ ಸಾಧನೆ ಮಾಡಿದಾಗ ಅದರಿಂದ ಸಿಗುವ ಆನಂದ ಅತೀವವಾದದ್ದು. ನಾವೇ ಸಾಧಿಸಿದ ಭಾವ ನಮ್ಮದು. ಸಹಾಯ ಮಾಡುವಾಗ ನಾವು ಏನನ್ನೂ ನಿರೀಕ್ಷಿಸಬಾರದು. ಈ ಪ್ರಪಂಚವು ಒಂದು ಸುಂದರವಾದ ತಾಣ. ಇದರಲ್ಲಿ ಎಲ್ಲವೂ ನಮ್ಮನ್ನು ಗಮನಿಸುತ್ತಿರುತ್ತವೆ. ಎಲ್ಲರೂ ಒಂದಲ್ಲಾ ಒಂದು ಸ್ಥಳದಲ್ಲಿ ಸಂಧಿಸುತ್ತೇವೆ. ಸಂಧಿಸುವಾಗ ನಮ್ಮಿಂದಾದ ಸಹಾಯವನ್ನು ನೆನಪಿಸಿಕೊಳ್ಳುತ್ತಾರೆ. ಪ್ರಪಂಚದಲ್ಲಿ ಪ್ರತಿಯೊಬ್ಬರೂ ನಮಗೆ ಕಾಣದಂತೆಯೇ ಒಬ್ಬರನ್ನೊಬ್ಬರು ಅವಲಂಬಿಸಿರುತ್ತೇವೆ. ಇತರರು ನಮಗರಿವಿಲ್ಲದಂತೆ ನಮ್ಮಿಂದ ಸಹಾಯಾಸ್ತಕ್ಕೆ ಕಾಯುತ್ತಿರುತ್ತಾರೆ. ಒಳ್ಳೆಯ ಸ್ವಾರ್ಥದಿಂದ ಸಹಾಯ ಮಾಡಬೇಕು. ನಾನು ಬೇರೆಯವರಿಗೆ ಸಹಾಯ ಮಾಡಿದರೆ ನನಗೇನು ಉಪಯೋಗ ಎಂದು ಯೋಚಿಸದೆ, ನಾನು ಸಹಾಯ ಮಾಡದಿದ್ದರೆ ಮತ್ಯಾರು ಸಹಾಯ ಮಾಡಬಲ್ಲರು? ಎಂದು ಸಹಾಯ ಮಾಡಿಬಿಡಬೇಕು.
ಸಮಾಜಕಾರ್ಯಕರ್ತರಾದ ನಾವು ಯಾವುದೇ ಸಂದರ್ಭದಲ್ಲಿಯೂ ಪಲಾಯನಗೈಯದೆ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿ, ಸಮೂಹ ಮತ್ತು ಸಮುದಾಯಗಳಿಗೆ ಸಹಾಯ ಮಾಡಬೇಕು. ಹಾಗೆಯೇ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟು ಸಮಸ್ಯೆ ಪರಿಹಾರದ ಭಾಗವಾಗಿ ತಮ್ಮ ವೃತ್ತಿಯ ಮೌಲ್ಯಗಳನ್ನು ಎತ್ತಿ ಹಿಡಿದಾಗ ಮಾತ್ರ ಸಮಾಜಕಾರ್ಯವು ಸಮಸ್ಯೆಯ ಪರಿಹಾರ ಮಾರ್ಗವಾಗುತ್ತದೆ, ಇಲ್ಲದಿದ್ದರೆ ಸಮಾಜಕಾರ್ಯ ವೃತ್ತಿಪರರಾದ ನಾವುಗಳು ಸಮಸ್ಯೆಗಳ ಭಾಗವಾಗಿ ಬಿಡುತ್ತೇವೆ. "ಬೇರೆಯವರಿಗೆ ಸಹಾಯಮಾಡು, ನಿನಗೆ ಬೇರೆಯವರು ಸಹಾಯ ಮಾಡುತ್ತಾರೆ. ನಿನ್ನ ಜೀವನದಲ್ಲಿ ನೀನು ಏನನ್ನು ನೀಡಿರುತ್ತೀಯೋ ಅದನ್ನು ಪಡೆಯುತ್ತೀಯ," "Help others and others will help you. Life is indeed a great leveller. In life you receive only what you give." ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|