ಭಾಷೆ ಎನ್ನುವುದು ವ್ಯಕ್ತಿಯ ಅಂತರಂಗದ ಅಭಿವ್ಯಕ್ತಿ ಮಾತ್ರ ಆಗಿರದೇ ಆ ನಾಡಿನ ಆತ್ಮವೇ ಆಗಿರುತ್ತದೆ. ನಾಡಿನ ಭಾಷೆ ನಾಡ ಜನರೆಲ್ಲರನ್ನು ಒಂದುಗೂಡಿಸುವ ಅಪಾರ ಶಕ್ತಿಯನ್ನು ಪಡೆದಿರುವಂತೆಯೇ ನಾಡಿನ ಅಂತಃ ಸತ್ವವೂ ಆಗಿರುತ್ತದೆ. ಭಾಷೆಯ ಹಂಗಿಲ್ಲದೇ ಬದುಕುವವರು ನಾಡಿನ ಹಂಗನ್ನೂ ತೊರೆದವರಾಗಿರುತ್ತಾರೆ. ಭಾಷೆಯೊಂದು ಉಳಿಯಲು, ಬೆಳೆಯಲು ಪಂಡಿತರ ನೆರವಿಗಿಂತ ಜನಸಾಮಾನ್ಯರ ಬಳಸುವಿಕೆ ಮುಖ್ಯವಾಗುತ್ತದೆ. ವ್ಯಾಕರಣ, ಶಾಸ್ತ್ರ, ಸಾಹಿತ್ಯ ಇವುಗಳಿಂದ ಭಾಷೆ ಬಹುಮುಖವಾಗಿ ಬೆಳೆಯುವುದು ಸತ್ಯವಾದರೂ ಜನಸಾಮಾನ್ಯರ ನುಡಿಗಟ್ಟು, ಗಾದೆ, ಜಾನಪದ ಸತ್ವ, ಮೌಖಿಕ ಪರಂಪರೆಯ ಕಥನಗಳು, ಕಾವ್ಯಗಳು, ಗೀತೆಗಳು ಇವೆಲ್ಲವುಗಳಿಂದ ತೇಜಸ್ಸನ್ನು ಪಡೆಯುತ್ತದೆ.
ಈ ಆಧುನಿಕ ಕಾಲದಲ್ಲೂ ಸ್ವಂತ ಲಿಪಿಯೇ ಇಲ್ಲದ ಅನೇಕ ಭಾಷೆಗಳು ನಮ್ಮ ಕಣ್ಣ ಮುಂದೆ ನಲಿದಾಡುತ್ತಿವೆ. ಶಾಸ್ತ್ರೀಯ ಚೌಕಟ್ಟು ಅವುಗಳಿಗೆ ಇಲ್ಲವಾದರೂ ಮಾತೃಭಾಷೆ ಎಂದು ಸ್ವೀಕರಿಸುವ ಆ ಜನರ ಪ್ರೀತಿಯ ಬಳಕೆಯಿಂದಾಗಿ ಅವುಗಳು ಜೀವಂತವಾಗಿವೆ. ದೇವಭಾಷೆ ಎಂಬ ಹಿರಿಮೆ ಪಡೆದು, ವ್ಯಾಕರಣ, ಶಾಸ್ತ್ರ, ಛಂದಸ್ಸು, ಅಪಾರ ಸಾಹಿತ್ಯ ಹೊಂದಿರುವ ಸಂಸ್ಕೃತವು ಜನರ ಬಳಕೆಯಲ್ಲಿಲ್ಲದ ಕಾರಣದಿಂದಾಗಿ ಮೃತ ಭಾಷೆಯಾಗಿದೆ. ಜನಸಾಮಾನ್ಯರು ಬಳಸುವವರೆಗೆ ಭಾಷೆ ಜೀವಂತವಾಗಿರುತ್ತದೆ. ಇದು ನಿಂತೊಡನೆ ಭಾಷೆ ಸಾವಿನೆಡೆಗೆ ಪಯಣಿಸುತ್ತದೆ. ಈ ಆಧುನಿಕ ಕಾಲದಲ್ಲಿ ಈ ವೇಗ ತುಸು ಹೆಚ್ಚು ಎನ್ನಬಹುದು. ಪ್ರಭುತ್ವದ ಶಕ್ತಿ ಅಗಾಧವಾದುದು. ಆರ್ಥಿಕ ಶಕ್ತಿಯನ್ನು ಹೊಂದಿರುವ ಪ್ರಭುತ್ವ ಎಲ್ಲ ಕಾಲದಲ್ಲೂ ಧರ್ಮ, ಸಾಹಿತ್ಯ, ಸಂಸ್ಕೃತಿಗಳ ಮೇಲೆ ಸವಾರಿ ಮಾಡಿರುವುದನ್ನು ಕಾಣುತ್ತೇವೆ. ಅಂತೆಯೇ ಪ್ರಭುತ್ವದ ಕಾಲಾವಧಿ ದೀರ್ಘವಾದಾಗ ಅದರ ಭಾಷೆಯೇ ನಾಡಿನ ಭಾಷೆಯಾಗಿ ಪರಿವರ್ತನೆಯಾಗುವುದೂ ಇದೇ ಕಾರಣಕ್ಕಾಗಿ. ಆರ್ಥಿಕ ಶಕ್ತಿಯೇ ಇಂದಿನ ಆಧುನಿಕ ಕಾಲದ ಮಹಾ ಶಕ್ತಿಯಾಗಿದೆ. ತನಗೆದುರಾದ ಎಲ್ಲವನ್ನೂ ಕ್ಷಣಾರ್ಧದಲ್ಲಿ ನುಂಗಿ ಹಾಕುವ ಈ ಶಕ್ತಿಯ ಮುಂದೆ ಭಾಷೆಯಂತಹ ಸೂಕ್ಷ್ಮಜಗತ್ತು ನಲುಗಿ ಹೋಗುತ್ತದೆ. ತನ್ನ ಸಾಸಹಸೀ ಮನೋಭಾವ ಮತ್ತು ಸೈನಿಕ ಬಲದಿಂದ ವಸಾಹತುಗಳನ್ನು ಸೃಷ್ಟಿಸಿಕೊಂಡು ಅಲ್ಲೆಲ್ಲಾ ಇಂಗ್ಲೀಷ್ ಭಾಷೆಯನ್ನು ಆಂಗ್ಲರು ಹರಡಿದರು. ಅಮೇರಿಕಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿನ ಮೂಲ ನಿವಾಸಿಗಳ ಭಾಷೆಗಳು ಕಣ್ಮರೆಯಾಗಿ ಇಂಗ್ಲೀಷ್ ಆ ಜನರ ಮಾತೃಭಾಷೆಯ ಸ್ಥಾನಪಡೆಯಿತು. ಈ ಆಧುನಿಕ ಕಾಲದಲ್ಲಿ ಭಾಷೆಯೊಂದು ನಾಶವಾದರೆ ಅದಕ್ಕೆ ಆರ್ಥಿಕ ಶಕ್ತಿಯೇ ಕಾರಣವಾಗುತ್ತದೆಯೇ ಹೊರತು ಆ ಜನರ ಮಾತೃಭಾಷಾ ದ್ವೇಷವಲ್ಲ. ಇಂಗ್ಲಿಷ್ ಭಾಷೆಯು ಭಾರತೀಯರಿಗೆ, ಮುಖ್ಯವಾಗಿ ಕನ್ನಡಿಗರಿಗೆ ಮೋಹಕವಾಗಿ ಕಾಣುತ್ತಿರುವುದು ಕೂಡಾ ಆರ್ಥಿಕ ಕಾರಣಗಳಿಗಾಗಿಯೇ ಹೊರತು ಸಾಹಿತ್ಯ ಪ್ರೇಮವಾಗಿ ಅಲ್ಲ. ಅಲ್ಲದೇ ಇದು ಕನ್ನಡ ದ್ವೇಷವೂ ಅಲ್ಲ. ಕಳೆದ ಎರೆಡು ಸಾವಿರ ವರ್ಷಗಳಿಂದ ಕನ್ನಡವು ಭಾಷಿಕವಾಗಿ, ಸಾಹಿತ್ಯಕವಾಗಿ ಪ್ರತಿಶತಮಾನದಲ್ಲೂ ಅಭಿವೃದ್ಧಿ ಹೊಂದುತ್ತಲೇ ಬಂದಿದೆ. ಕಳೆದೆರಡು ಶತಮಾನಗಳಲ್ಲಿ ಇಂಗ್ಲೀಷ್ ಪ್ರಭಾವದಿಂದ ಸಾಹಿತ್ಯಕವಾಗಿ ಹೊಸತನವನ್ನೂ, ನವೀನತೆಯನ್ನೂ ಪಡೆಯಿತು. ಆದರೆ ದಿನಕಳೆದಂತೆ ಭಾಷಿಕವಾಗಿ ಇಂಗ್ಲೀಷ್ ಎದುರು ಮಂಕಾಗ ತೊಡಗಿತು. ಭಾರತದಲ್ಲಿನ ದೇಶೀಯ ಭಾಷೆಗಳೆಲ್ಲವೂ ಇದೇ ಆತಂಕವನ್ನು ಇಂದು ಎದುರಿಸುತ್ತಿವೆ. ಭಾರತದಂತಹ ಸಂಕೀರ್ಣ ದೇಶದಲ್ಲಿ ಈ ಆಧುನಿಕ ಕಾಲದಲ್ಲೂ ಸಾಮಾಜಿಕ ಬದಲಾವಣೆಗಳ ಗತಿ ತುಂಬ ನಿಧಾನ. ಆರ್ಥಿಕ ಬದಲಾವಣೆಗಳು ತುಸು ವೇಗ ಪಡೆಯುತ್ತವೆ. ಶೈಕ್ಷಣಿಕ ಬದಲಾವಣೆಗಳು ಅತಿ ವೇಗವನ್ನು ಪಡೆಯುತ್ತವೆ. ಹಾಗಾಗಿಯೇ ಈ ಸಮಸ್ಯೆಯನ್ನು ಅತ್ಯಂತ ತುರ್ತು ಎಂದು ಪರಿಭಾವಿಸಿ ಪರಿಹಾರೋಪಾಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಾಗಿದೆ. ಇಲ್ಲವಾದರೆ ಮುಂದಿನ ನೂರು ವರ್ಷಗಳ ನಂತರ ಕನ್ನಡವೂ ಸಂಸ್ಕೃತದಂತಹ ಶಾಸ್ತ್ರೀಯ ಭಾಷೆಯಾಗಿ ಅಚಲವಾಗಿ ಗ್ರಂಥಾಲಯದಲ್ಲಿ ಉಳಿಯಬಹುದು. ಇದು ತುಸು ಅತಿರೇಕದ ವಿಚಾರ ಎನಿಸಿದರೂ ಇಂತಹ ಮನೋಭಾವವನ್ನಿಟ್ಟುಕೊಂಡು ಕಾರ್ಯೋನ್ಮುಖರಾಗುವುದು ಒಳಿತು. ಕಡಿಮೆ ಮಕ್ಕಳಿರುವ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಸರಕಾರ ಮುಂದಾಗಿದೆ. ಹಾಗಾದರೆ ಮಕ್ಕಳೇಕೆ ಕಡಿಮೆಯಾದರು? ಆ ಮಕ್ಕಳು ಯಾವ ಶಾಲೆಗಳಿಗೆ ಸೇರಿದರು? ಪೋಷಕರ ಅಭೀಪ್ಸೆ ಎಂತಹದು? ಖಾಸಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳು ಹಳ್ಳಿಗಾಡುಗಳಿಗೆ ಏಕೆ. ಎಲ್ಲಿಂದ ಬಂದವು? ಇದು ಇದ್ದಕ್ಕಿದ್ದಂತೆ ಹೇಗೆ ಸಂಭವಿಸಿತು? ಎಲ್ಲಕ್ಕಿಂತ ಮುಖ್ಯ ಯಾರ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದಬೇಕು? ಏಕೆ ಓದಬೇಕು? ಇಂತಹ ಅಸಂಖ್ಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇದೊಂದು ಸಂಕೀರ್ಣವಾದ ಸಮಸ್ಯೆ. ಇದನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದರೂ ಇನ್ನೂ ಅನೇಕ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಇದುವರೆಗೆ ಖಾಸಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳು ನಗರ ಪ್ರದೇಶಗಳಲ್ಲಿ ಮಾತ್ರ ಇದ್ದು ಶ್ರೀಮಂತರ ಮಕ್ಕಳ ವಿದ್ಯೆಗೆ ನೆರವೀಯುತ್ತಿದ್ದವು. ಅಪಾರ ಮೊತ್ತದ ಹಣವನ್ನು ವಂತಿಗೆ ನೀಡುವುದರಿಂದ ಇವುಗಳ ಆದಾಯ ಉನ್ನತ ಮಟ್ಟದಲ್ಲಿತ್ತು. ಕ್ರಮೇಣ ಇವುಗಳು ಅತ್ಯಂತ ಹೆಚ್ಚು ಆದಾಯ ತರುವ ಉದ್ಯಮಗಳಾಗಿ ಪರಿವರ್ತನೆಯಾದವು. ಹಾಗಾಗಿ ನಿಧಾನವಾಗಿ ಪಟ್ಟಣ ಪ್ರದೇಶಗಳಿಗೂ ಇವು ಹೆಜ್ಜೆ ಇಟ್ಟವು. ಎಲ್ಲ ಜಾತಿಗಳಲ್ಲಿನ ಬಡವರು, ಹಳ್ಳಿಗರು ಮಾತ್ರ ಸರಕಾರಿ ಕನ್ನಡ ಶಾಲೆಗಳನ್ನೇ ಅವಲಂಬಿಸಿದರು. ಇಂತಹ ಸಂದರ್ಭದಲ್ಲಿ ಮತ್ತೆ ಆರ್ಥಿಕ ಶಕ್ತಿಯೇ ಇಂಗ್ಲೀಷ್ ಭಾಷೆಯ ನೆರವಿಗೆ ಬಂದಿತು. ಮಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿ ಹೆಚ್ಚಾದೊಡನೆ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಬೇಡಿಕೆ ಹೆಚ್ಚಾಯಿತು. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವುದಕ್ಕೆ ಪ್ರತಿಷ್ಠೆಯೊಂದೇ ಕಾರಣವಾಗದೇ ಅದು ಉದ್ಯೋಗ ನೀಡುವ ಸಂಭವವೂ ಹೆಚ್ಚಾದದ್ದು ಪ್ರಧಾನ ಅಂಶವಾಯಿತು. ಕನಿಷ್ಠ ನಾಲ್ಕೈದು ಸಾವಿರ ವಂತಿಕೆ ನೀಡುವ, ನಾಲ್ಕೈದು ನೂರು ಮಾಸಿಕ ಶುಲ್ಕ ಪಾವತಿಸುವ ಶಕ್ತಿ ಇದ್ದವರೆಲ್ಲ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಹಾಗಾಗಿ ಜನರ ಅಭೀಪ್ಸೆಯಂತೆ ಹಳ್ಳಿಗಾಡುಗಳಲ್ಲಿ ಇಂಗ್ಲಿಷ್ ಶಾಲೆಗಳು ತಮ್ಮ ಜಾಲವನ್ನು ವ್ಯವಸ್ಥಿತವಾಗಿ ಹರಡುತ್ತಿವೆ. ಇಂದು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಶುಲ್ಕ ಪಾವತಿಸಲಾಗದ ಬಡವರು ಹಾಗು ಸಮೀಪದಲ್ಲಿ ಇಂತಹ ಶಾಲೆಗಳ ಸೌಲಭ್ಯ ಇಲ್ಲದವರು ಮಾತ್ರ ಸರಕಾರಿ ಕನ್ನಡ ಮಾಧ್ಯಮದ ಶಾಲೆಗಳನ್ನು ಅನಿವಾರ್ಯವಾಗಿ ನೆಚ್ಚಿಕೊಂಡಿದ್ದಾರೆ. ಇಲ್ಲಿಯೇ ಮುಖ್ಯ ಪ್ರಶ್ನೆ ಉದ್ಭವಿಸುತ್ತದೆ. ಯಾರ ಮಕ್ಕಳು ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳಲ್ಲಿ ಓದಬೇಕು ? ಹಾಗೂ ಏಕೆ ಓದಬೇಕು.? ಇದಕ್ಕೆ ತಕ್ಷಣದ ಭಾವನಾತ್ಮಕ ಉತ್ತರವೂ ಸಿದ್ಧವಿದೆ. ಆದರೆ ಯಾರೂ ಅದನ್ನು ಬಾಯಿಬಿಟ್ಟು ಹೇಳುವುದಿಲ್ಲ. ಕನ್ನಡದ ಹಿರಿಮೆ, ಪರಂಪರೆ, ಸಾಹಿತ್ಯ, ಸಂಸ್ಕೃತಿ, ಪ್ರಾಚೀನತೆ ಇವೆಲ್ಲವನ್ನೂ ಕಾಪಾಡಲು ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಓದಿಸಿರಿ ಎಂದು ಬೆರಳು ತೋರಿಸುತ್ತಾರೆ. ನಮ್ಮ ಹಿರಿಯರ ಈ ಬೆರಳು ಮತ್ತೆ ಅದೇ ರೈತರ, ಕೂಲಿ ಕಾರ್ಮಿಕರ, ಬಡವರ ಕಡೆಗೆ ಗುರಿ ಮಾಡಿರುತ್ತದೆ. ತಮ್ಮ ಮಕ್ಕಳು, ಮೊಮ್ಮಕ್ಕಳೆಲ್ಲರನ್ನೂ ಇಂಗ್ಲೀಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಸೇರಿಸಿರುವ ಕನ್ನಡಮ್ಮನ ಮಕ್ಕಳು ಇತರರ ಕಡೆಗೆ ಬೆರಳು ತೋರಿಸಿ ಸುಮ್ಮನಾಗುತ್ತಿದ್ದಾರೆ. ಇತ್ತೀಚೆಗೆ ಎಲ್ಲರೂ ರೈತರ ಕುರಿತಾಗಿ ಒಂದು ಮಾತು ಹೇಳುತ್ತಿದ್ದಾರೆ. ಹಳ್ಳಿಗಳಲ್ಲಿನ ರೈತರ ಮಕ್ಕಳು ರೈತರಾಗಿ ಉಳಿಯುತ್ತಿಲ್ಲ. ವ್ಯವಸಾಯ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಅವರೆಲ್ಲ ನಗರಗಳಿಗೆ ವಲಸೆ ಬಂದು ಇಲ್ಲಿಯೇ ನೆಲೆ ನಿಲ್ಲುತ್ತಿದ್ದಾರೆ. ಇದರಿಂದ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತವಾಗಲಿದೆ... ಇತ್ಯಾದಿ., ಇತ್ಯಾದಿ. ಹಾಗಾದರೆ ರೈತರ ಮಕ್ಕಳು ಮಾತ್ರ ರೈತರಾಗಬೇಕೆ ? ಅವರು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪಡೆದು ನಗರಗಳಲ್ಲಿ ವಾಸಿಸಬಾರದೇ ? ನಗರ ವಾಸಿಗಳ ಸುಶಿಕ್ಷಿತರ ಮಕ್ಕಳು ಹಳ್ಳಿಗಳಿಗೆ ಏಕೆ ಬರಬಾರದು ಎಂಬುದು ರೈತರ ಪ್ರಶ್ನೆಯಾಗಿದೆ. ಕನ್ನಡದ ಸರಕಾರಿ ಶಾಲೆಗಳನ್ನು ಮುಚ್ಚುವ ಇಂತಹ ನಾಡಿನ ನಾಡಿ ಮಿಡಿತಕ್ಕೆ ಸಂಬಂಧಿಸಿದ ಅತ್ಯಂತ ಗಹನ ಹಾಗೂ ಜ್ವಲಂತ ಸಮಸ್ಯೆಗೆ ಇಷ್ಟೊತ್ತಿಗೆ ಅನೇಕ ಪ್ರತಿಭಟನೆ, ಚಳವಳಿ, ಹೋರಾಟಗಳು ಆರಂಭವಾಗಬೇಕಿತ್ತು. ಆದರೆ ಅಂತಹದ್ದೇನೂ ನಡೆಯುತ್ತಿಲ್ಲ ಎಂಬುದು ವಿಷಾದಕರ ಸತ್ಯ. ಆದರೂ ಒಂದು ಸಮಾಧಾನದ ಅಂಶವೆಂದರೆ ಹಿರಿಯರಾದ ಡಾ.ಜಿ.ಎಸ್. ಶಿವರುದ್ರಪ್ಪ, ಡಾ.ಯು.ಆರ್.ಅನಂತಮೂರ್ತಿ ಹಾಗೂ ಡಾ.ಚಂದ್ರಶೇಖರ ಕಂಬಾರ ಮತ್ತಿತರ ಮಹನೀಯರು ನ್ಯಾಯಾಲಯದ ಮೊರೆ ಹೋಗಿ ಸದ್ಯಕ್ಕೆ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಗೆ ತಡೆ ಒಡ್ಡಿದ್ದಾರೆ. ಕನ್ನಡ ಸರಕಾರಿ ಶಾಲೆಗಳು ಮುಚ್ಚಿದರೆ ನಿಜಕ್ಕೂ ತಕ್ಷಣದ ತೊಂದರೆ ಅನುಭವಿಸುವುದು ಬಡವರೇ. ಒಮ್ಮೆ ಈ ಶಾಲೆಗಳು ಮುಚ್ಚಿದರೆ ಖಾಸಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳು ಮಾರುಕಟ್ಟೆ ತಂತ್ರವನ್ನು ಅನುಸರಿಸುತ್ತವೆ. ಸಂಗ್ರಹಿಸಿ ಲಾಭಗಳಿಸುವ ವ್ಯಾಪಾರಿಯಂತೆ ಜನರ ಅವಶ್ಯಕತೆಯನ್ನೇ ಬಂಡವಾಳವಾಗಿ ಬಳಸಿಕೊಂಡು ದುರ್ಬಲರು ವಿದ್ಯೆಯನ್ನು ಪಡೆಯಲಾಗದ ಸ್ಥಿತಿಯನ್ನು ನಿರ್ಮಿಸುತ್ತವೆ. ಹಾಗೂ ಅಪಾರ ಲಾಭ ಗಳಿಸುತ್ತವೆ. ಸದ್ಯಕ್ಕೆ ನಿಂತಿರುವ ಸರಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ಇಂದಲ್ಲ ನಾಳೆ ಆರಂಭವಾಗಬಹುದು. ಆದರೆ ಆಗ ಅದು ಮತ್ತಷ್ಟು ವೇಗವನ್ನು ಪಡೆದುಕೊಳ್ಳುತ್ತದೆ. ಹಾಗಾದರೆ ಏನು ಸಂಭವಿಸಬಹುದು? ಇದೊಂದು ಚರ್ಚಿಸಲು ಕೂಡ ದುಃಖವಾಗುವ ಸಂಗತಿ. ಚರ್ಚಿಸಿದರೆ ಚರ್ವಿತ ಚರ್ವಣವಾಗುತ್ತದೆ. ಇದಕ್ಕೊಂದು ಉದಾಹರಣೆ ಸಾಕು. ಇಂದು ಉನ್ನತ ವಿದ್ಯೆ ಪಡೆದ ಮಹನೀಯರೆಲ್ಲ ತಮ್ಮ ದೈನಂದಿನ ಬದುಕಿನ ಸಂವಹನಕ್ಕೆ ಇಂಗ್ಲೀಷನ್ನೇ ಬಳಸುತ್ತಿದ್ದಾರೆ. ಇನ್ನೊಂದು ತಲೆಮಾರು ದಾಟಿದರೆ, ನಂತರದ ಪೀಳಿಗೆ ತಮ್ಮ ಮೂಲ ಮಾತೃಭಾಷೆಯಾದ ಕನ್ನಡದಿಂದ ನವ ಮಾತೃಭಾಷೆಯಾದ ಇಂಗ್ಲೀಷನ್ನೇ ಅಪ್ಪಿಕೊಳ್ಳುತ್ತಾರೆ. ಭಾಷೆಯು ಬಳಸಿದಂತೆಲ್ಲ ಚಂದವಾಗುವ ಗುಣವನ್ನು ಹೊಂದಿರುತ್ತದೆ. ಮುಂದೊಂದು ದಿನ ಅಪರೂಪಕ್ಕೊಮ್ಮೆ ವಿಕಾರ ಕನ್ನಡವನ್ನು ಬಳಸುವ ಪೀಳಿಗೆ ಸೃಷ್ಟಿಯಾಗಬಹುದು. ಭಾಷಾ ಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಮನಶ್ಯಾಸ್ತ್ರಜ್ಞರು, ತತ್ವಜ್ಞಾನಿಗಳು ಎಲ್ಲರೂ ಮಾತೃಭಾಷೆಯ ಶಿಕ್ಷಣದ ಮಹತ್ವವನ್ನು ಹೇಳಿದ್ದಾರೆ. ಮಾನವನ ಭಾವಲೋಕ ಅರಳುವುದು ಮಾತೃಭಾಷೆಯ ಕಲಿಕೆಯಿಂದ ಮಾತ್ರ. ಕಲಿಯಲು, ಮನನ ಮಾಡಿಕೊಳ್ಳಲು, ಚಿಂತಿಸಲು, ಅಭಿವ್ಯಕ್ತಿಸಲು ಮಾತೃಭಾಷೆಯೇ ಅತ್ಯುತ್ತಮ ಮಾಧ್ಯಮ. ಈ ಎಲ್ಲದಕ್ಕೂ ಪರಕೀಯ ಭಾಷೆಯನ್ನು ಅವಲಂಬಿಸಿದರೆ ಭಾವಲೋಕದ ಅಭಿವ್ಯಕ್ತಿ ಕೃತಕವಾಗುತ್ತದೆ ಮತ್ತು ವಿಕೃತವಾಗುತ್ತದೆ. ಇದೆಲ್ಲದರ ಮಧ್ಯೆ ನಾವು ಗಮನಿಸಲೇ ಬೇಕಾದ ಮತ್ತೊಂದು ಮುಖ್ಯ ಸಂಗತಿಯಿದೆ. ಅದು ಸರಕಾರದ ಶಾಲೆಗಳಲ್ಲಿ ಕಲಿಸುವ ವಿಧಾನ. ವಿದ್ಯೆ ಕಲಿಸುವ ವಿಧಾನಗಳು ನಮಗೆ ಪರಂಪರೆಯಿಂದಲೇ ತಿಳಿದಿವೆ. ಇತರ ಜಗತ್ತಿಗೆ ನಾವು ಕಲಿಸುವಷ್ಟು ಸಮರ್ಥರಿದ್ದೇವೆ. ಆದರೂ ನಾವು ಎಲ್ಲಿಂದಲೋ ತಂದ ಕಲಿಕಾ ವಿಧಾನಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ನಿರಂತರ ಪ್ರಯೋಗಿಸುತ್ತಿದ್ದೇವೆ. ಖಾಸಗಿ ಶಾಲೆಗಳು ಮಾತ್ರ ಈ ಯಾವ ವಿಧಾನಗಳನ್ನೂ ಅನುಸರಿಸದೇ ಸಾಂಪ್ರದಾಯಿಕ ವಿಧಾನಗಳಲ್ಲೇ ಕಲಿಸುತ್ತಾ ಯಶಸ್ಸನ್ನು ಪಡೆಯುತ್ತಿವೆ. ಸರಕಾರಿ ಶಾಲೆಗಳಲ್ಲೂ ಸಾಂಪ್ರದಾಯಿಕ ವಿಧಾನದಲ್ಲೇ ಕಾಲಗತಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡು ಕಲಿಸುವುದು ಸೂಕ್ತವಾದುದ್ದು. ಅತ್ಯಂತ ಸರಳ ಕ್ರಿಯೆಯಾದ ಪ್ರಾಥಮಿಕ ಶಾಲೆಗಳ ಕಲಿಸುವ ವಿಧಾನವನ್ನು ಪದೇ ಪದೇ ಪ್ರಯೋಗಕ್ಕೊಳಪಡಿಸುವುದು ಸರಿಯಲ್ಲ. ಹಾಗಾದರೆ ಕೊನೆಗೂ ಇದೆಲ್ಲದಕ್ಕೆ ಪರಿಹಾರವೇನು ಎಂಬ ಪ್ರಶ್ನೆ ಮೊದಲಿಗೇ ಎದುರಾಗುತ್ತದೆ. ಆದರೆ ಎಲ್ಲಕ್ಕೂ ಮೊದಲು ನಾವು ಒಂದು ವಿಚಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅದೆಂದರೆ ಇಂದಿನ ಇಂಗ್ಲೀಷ್ ಭಾಷೆಯ ಅವಶ್ಯಕತೆ ಭಾರತದಂತಹ ಬಹುಬಾಷಾ ದೇಶಕ್ಕೆ ಇಂಗ್ಲಿಷ್ ಇಂದು ಸಂವಹನದ ಮುಖ್ಯ ವಾಹಕವಾಗಿದೆ. ಇದನ್ನು ಒಳಗೊಂಡೇ ಕನ್ನಡವನ್ನೂ, ಕನ್ನಡತನವನ್ನೂ ಉಳಿಸಿಕೊಳ್ಳುವ ದೂರಗಾಮೀ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ಸಮಸ್ಯೆಗೆ ಈಗಾಗಲೇ ತಜ್ಞರು ನೀಡಿರುವ ಹಳೆಯ ಸಲಹೆಗಳನ್ನೇ ಮತ್ತೆ ನೆನಪಿಸಿಕೊಳ್ಳಬಹುದು.
ಬಿ.ಎಂ.ರಾಜಶೇಖರ ಶಿಕ್ಷಕರು ಮನೆ ನಂ:430, ಶೇಷಾದ್ರಿ ನಿಲಯ, ಮಸೀದಿ ರಸ್ತೆ, ಬಸವೇಶ್ವರ ಬಡಾವಣೆ, ಹೊಸಪೇಟೆ-583201, ಬಳ್ಳಾರಿ ಜಿಲ್ಲೆ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |