ಅಂದು ಹೆಣ್ಣು ಶಾಲೆಗೆ ಹೋಗುವುದನ್ನು ಕಂಡರೆ ಮೈಮೇಲೆ ಸೆಗಣಿ ಎಸೆಯುತ್ತಿದ್ದರಂತೆ. ಅಂಥಾ ಹೊತ್ತಲ್ಲಿ, ಅಂದರೆ 200 ವರ್ಷಗಳ ಹಿಂದೆ ಕುದುರೆಮುಖದ ತಪ್ಪಲಿನ ಗಂಗಾಮೂಲದ ಕಾಡ ನಡುವೆ ಅನಂತ ಶಾಸ್ತ್ರಿಗಳು ಆಶ್ರಮ ಕಟ್ಟಿ 50 ವಿದ್ಯಾರ್ಥಿನಿಯರಿಗೆ ವೇದಾಭ್ಯಾಸ ಮಾಡಿಸುತ್ತಿದ್ದರು! ಮುಂದೆ ಆಶ್ರಮ ನಡೆಸಲಾಗದೆ ದೇಶಾಟನೆ ಹೊರಟಾಗ ಶಾಸ್ತ್ರಿಗಳ ಪತ್ನಿ ಲಕ್ಷ್ಮೀಬಾಯಿಯ ಕಂಕುಳಲ್ಲಿ ಜೋತಾಡುತ್ತಿದ್ದದ್ದು ಇದೇ ಪುಟ್ಟ ಹುಡುಗಿ ರಮೆ. ಹೋದಲ್ಲೆಲ್ಲಾ ಪುರಾಣ ಪ್ರವಚನಗೈದರು. ಸಿಕ್ಕ ಸಂಭಾವನೆಯಲ್ಲಿ ಮೂರು ಹೊತ್ತಿನ ಅನ್ನ. ಏನೂ ಇಲ್ಲದಿದ್ದಾಗ ಕಾಡಿಗೆ ತೆರಳಿ ಹಣ್ಣು ಗಡ್ಡೆಗಳನ್ನು ಬೀಜ, ಸಿಪ್ಪೆ ಸಹಿತ ನುಂಗಿ ನೀರು ಕುಡಿಯುತ್ತಿದ್ದರು. ರಸ್ತೆ ಬದಿ, ಸೇತುವೆಗಳ ಕಮಾನಿನಡಿ ರಾತ್ರಿಯ ನಿದ್ದೆ. ಮೈ ತುಂಬ ಬಟ್ಟೆಯೂ ಇಲ್ಲ. ಕಾರ್ಕಳದಿಂದ ಶಿವಮೊಗ್ಗ, ರಾಯಚೂರು, ಅಲ್ಲಿಂದ ಕಾಶ್ಮೀರ-ಪೂರ್ವಕ್ಕೆ ಕಲ್ಕತ್ತಾ. ರಮೆಯ ಕೈ ಹಿಡಿದು ಶಾಸ್ತ್ರಿಗಳ ಕುಟುಂಬ ಕಾಲ್ನಡಿಗೆಯಲ್ಲಿ ನಡೆದದ್ದು ಭರ್ತಿ 10,000 ಮೈಲು ದೂರ! ಬಂಗಾಳದ ಬರ ಶಾಸ್ತ್ರಿಗಳ ಜೀವಕ್ಕೆ ಎರವಾಯಿತು. ದಿಕ್ಕಾಪಾಲದ ಕುಟುಂಬಕ್ಕೆ ಅನ್ನಾಹಾರವೂ ಇಲ್ಲ. ಆದರೆ ರಮೆಯ ಎದೆಯೊಳಗೆ ಭಾರತದ ಅಧ್ಯಾತ್ಮ ಸಂಪತ್ತು ಮಡುಗಟ್ಟಿತ್ತು. ಆ ಹೊತ್ತಿಗೆ ಆಕೆಗೆ ಭಾಗವತದ 18,000 ಶ್ಲೋಕಗಳು ಬಾಯಿಪಾಠವಾಗಿದ್ದವು. ಮೇಧಾವಿ ರಮೆ ಕಲಕತ್ತೆಯ ಹಲವೆಡೆ ಪ್ರವಚನ ಕೊಟ್ಟಳು. ನೂರು ನೋವುಗಳಲ್ಲಿ ಬೆಂದು ಹೂರಣವಾದ ಮನಸ್ಸಲ್ಲಿ ಅಸಾಧ್ಯ ಪ್ರತಿಭೆ ಚಿಗುರುತ್ತಿತ್ತು. ಪಂಡಿತರು ಅಚ್ಚರಿಗೊಂಡರು. ಕಲಕತ್ತೆಯ ಜನ ಈಕೆಗೆ 'ಪಂಡಿತಾ, ಸರಸ್ವತಿ' ಬಿರುದು ಕೊಟ್ಟರು. ಅಪ್ರತಿಮ ಸುಂದರಿಯಾಗಿದ್ದ ರಮೆಗೆ 20 ತುಂಬಿತು. ದುರದೃಷ್ಟಕ್ಕೆ ತಾಯಿಯೂ ತೀರಿಕೊಂಡು ತಬ್ಬಲಿಯಾದಳು. ಅಂಥ ಅನಾಥ ಕ್ಷಣಗಳಲ್ಲಿ ಬಿಪಿನ್ ಬಿಹಾರಿದಾಸ್ ಎಂಬ ಶೂದ್ರ ವಿದ್ವಾಂಸ ರಮೆಗೆ ಹತ್ತಿರವಾದ. ಇಬ್ಬರಿಗೂ ಮೆಚ್ಚುಗೆಯಾಗಿ ಮದುವೆಯೂ ಆಯಿತು. ರಮೆ ಚಿತ್ಪಾವನಿ ಬ್ರಾಹ್ಮಣರ ಮಗಳು. ಆ 18 ತಿಂಗಳ ದಾಂಪತ್ಯಕ್ಕೆ ಮನೋರಮೆ ಎಂಬ ಮಗಳು ಜನಿಸಿದಳು. ಕಲ್ಕತ್ತಾಗೆ ಕಾಲರಾ ಬಡಿದಾಗ ರಮೆಯ ನಗು ಮಾಯ ಮತ್ತು ಬದುಕಿನ ಕೊನೆಯ ಆಸರೆಯಾಗಿದ್ದ ಬಿಪಿನ್ ಕಾಲವಾಗಿದ್ದ. ತನ್ನದ್ದೆಲ್ಲವೂ ಕಳೆದು ಹೋದಾಗ ರಮಾಬಾಯಿಯ ಕಣ್ಣೆದುರು ಬಂದದ್ದು ದೇಶದ ಸಹಸ್ರ ಶೋಷಿತೆಯರು. ಆ ಹೊತ್ತಿಗಾಗಲೇ ಪುಣೆಯಲ್ಲಿ ರಮಾಬಾಯಿಗೆ ಹಲವರ ಸಾಂಗತ್ಯ ದೊರಕಿತು. ಅವರಲ್ಲಿ ಮಹಾದೇವ ಗೋವಿಂದ ರಾನಡೆ ಕುಟುಂಬವೂ ಒಂದು. ಜತೆಗೂಡಿ ಪುಣೆಯಲ್ಲಿ ಪ್ರಪ್ರಥಮವಾಗಿ 'ಆರ್ಯಾ ಮಹಿಳಾ ಸಮಾಜ'ವನ್ನು ಸ್ಥಾಪಿಸಿದರು. ಸ್ತ್ರೀಯರ ಸರ್ವತೋಮುಖ ಏಳಿಗೆಗೆ ಪ್ರಯತ್ನಿಸುವುದು ಇದರ ಉದ್ದೇಶ ಎಂದರು ರಮಾಬಾಯಿ. ಬಳಿಕ ಹಲವು ಕಡೆ ಸಂಚರಿಸಿ ಆರ್ಯ ಮಹಿಳಾ ಸಮಾಜದ ಶಾಖೆಗಳನ್ನು ತೆರೆದರು. ಈ ನಡುವೆ ಸ್ತ್ರೀಯರ ನಿರಕ್ಷರತೆ, ಅಜ್ಞಾನ, ಪರಾವಲಂಬನೆ ಕುರಿತು 'ಸ್ತ್ರೀ ಧರ್ಮ ನೀತಿ' ಎಂಬ ಮರಾಠಿ ಕೃತಿಯನ್ನು ಬರೆದರು ರಮಾಬಾಯಿ. ಹಾಗಂತ ಬರಹಕ್ಕೆ, ಭಾಷಣಕ್ಕೆ ಮಾತ್ರ ಆಕೆ ಸೀಮಿತಗೊಳ್ಳಲಿಲ್ಲ. ಬಾಲ ವಿಧವೆಯರಿಗೆ ಭವಿಷ್ಯ ಕೊಡುವ ಸಂಸ್ಥೆ ಕಟ್ಟಬೇಕೆಂದು ಹಲವೆಡೆ ಓಡಾಡಿದರು. 'ಸ್ತ್ರೀ ಧರ್ಮ ನೀತಿ' ಪುಸ್ತಕ ಮಾರಿ ಬಂದ ದುಡ್ಡು ಗುಂಟುಕಟ್ಟಿ, ಎರಡರ ಹರೆಯದ ಮನೋರಮೆಯನ್ನು ಕಂಕುಗಳಲ್ಲಿ ಇಟ್ಟುಕೊಂಡು ಲಂಡನ್ನಿನ ಹಡಗು ಏರಿಯೇ ಬಿಟ್ಟರು. ಅದು 1883 ಏಪ್ರಿಲ್ 26ರ ಸಂಜೆ. ಇಂಗ್ಲೆಂಡ್ನಲ್ಲಿ ಮೊದಲೇ ಪರಿಚಿತರಾದ 'ವಾಂಟೇಜ್ ಕಾನ್ವೆಂಟ್'ನ ಸಿಸ್ಟರ್ಸ್ ಪ್ರೀತಿಯಿಂದ ಸ್ವಾಗತಿಸಿದರು. ಮರಾಟಿ, ಸಂಸ್ಕೃತ, ಧಾರ್ಮಿಕ ಶಿಕ್ಷಣ ಬೋಧಿಸುತ್ತಾ ಬಂದ ದುಡ್ಡಲ್ಲಿ ಇಂಗ್ಲಿಷ್, ವಿಜ್ಞಾನ, ಗಣಿತ ಶಿಕ್ಷಣ ಪಡೆದರು. ಇದೇ ಹೊತ್ತಿಗೆ ರಮಾಬಾಯಿಗೆ ಕರುಣಾಮಯಿ ಜೀಸಸ್ನತ್ತ ಮನಸ್ಸು ಒಲಿಯಿತು. ಸ್ತ್ರೀಯರನ್ನು ಉದಾರವಾಗಿ ಕಾಣುವ ಕ್ರೈಸ್ತ ಧರ್ಮ ತನ್ನ ನೋವಿ ಸಾಂತ್ವನವಾದೀತು ಅಂದುಕೊಂಡರು ರಮಾಬಾಯಿ. ಕುಲದೇವತೆ ಕೊಡಲಿ ಹಿಡಿದ ಪರಶುರಾಮನನ್ನು ಬಿಟ್ಟು ಶಿಲುಬೆಗೆ ವಾಲಿದ ಜೀಸಸ್ಗೆ ಕೈ ಮುಗಿದಳು. ಲಂಡನ್ನಿನ ಜನ ಈ ಮೇಧಾವಿ ಮಹಿಳೆಯ ಬೆನ್ನಿಗೆ ನಿಂತರು. ಈಗ ಆಕೆಗೆ ಇಂಗ್ಲಿಷು ಅಂದರೆ ನೀರು ಕುಡಿದಂತೆ ಸಲೀಸು. ರಮಾಬಾಯಿಯ ಹಿಂದೂ ಕ್ರೈಸ್ತ ಧರ್ಮ ಸಾರಗಳ ಪ್ರವಚನದ ಕುರಿತು ಅಮೆರಿಕದವರೆಗೂ ಸುದ್ದಿ ತಲುಪಿ ತಮ್ಮತ್ತ ಕರೆಸಿಕೊಂಡರು. ಅಮೆರಿಕದಲ್ಲಿ ಕಿಂಡರ್ ಗಾರ್ಡನ್ ಶಿಕ್ಷಣ ಕ್ರಮದ ಕುರಿತು ತಿಳಿದುಕೊಂಡರು ರಮಾಬಾಯಿ. ಆ ಸಂದರ್ಭದಲ್ಲಿ ಭಾರತದಲ್ಲಿ ಪ್ರಾಥಮಿಕ ಶಿಕ್ಷಣವೆಂದರೆ ಮರಳಿನಲ್ಲಿ ಬರೆಯುವುದು, ಛಡಿಯೇಟಿನ ಹಿಂಸೆ. ರಮಾಬಾಯಿ ಸ್ವತಃ ಕಿಂಡರ್ ಗಾರ್ಡನ್ ಶಿಕ್ಷಣ ಕಲಿತು, ಮರಾಠಿ ಭಾಷೆಯಲ್ಲಿ ಬಾಲೋದ್ಯಾನ ಪುಸ್ತಕಗಳನ್ನು ಬರೆದರು. ಭಾರತದ ನೆಲದಲ್ಲಿ ಮೊತ್ತಮೊದಲು ಕಿಂಡರ್ ಗಾರ್ಡನ್ ಶಿಕ್ಷಣ ಕಲಿಸಿದ ಕೀರ್ತಿ ರಮಾಬಾಯಿಗೆ ಸಲ್ಲಬೇಕು. ಹಾಗೆ ಅಮೆರಿಕದಲ್ಲಿ 30,000 ಮೈಲು ದೂರ ಪ್ರವಾಸ ಮಾಡಿದರು. ಅಮೆರಿಕದ ಎಲ್ಲೆಡೆ 'ರಮಾಬಾಯಿ ಸರ್ಕಲ್' ಹುಟ್ಟಿಕೊಂಡಿತು. 'ರಮಾಬಾಯಿ ಅಸೋಸಿಯೇಶನ್' ಸಂಸ್ಥೆ ರೂಪುಗೊಂಡಿತು. ಈ ಸಂಸ್ಥೆ ಬಾಲವಿಧವೆಯರಿಗೆ ಪಾಠಶಾಲೆ, ವಸತಿಗೃಹ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಿ ಕೊಟ್ಟಿತು. ರಮಾಬಾಯಿ ಭಾರತಕ್ಕೆ ಹಿಂತಿರುಗುವಾಗ 25,000 ಡಾಲರ್ ಕೈಗಿತ್ತರು. ಜೊತೆಗೆ ಕಿಂಡರ್ ಗಾರ್ಡನ್ ಶಿಕ್ಷಣಕ್ಕಾಗಿ ಮೂವರು ಶಿಕ್ಷಕಿಯರೂ ಭಾರತಕ್ಕೆ ಬಂದರು. ಕಲ್ಕತ್ತಾ ಸೇರಿದ ರಮಾಬಾಯಿ ಶಾರದಾ ಸದನವೆಂಬ ಬಾಲವಿಧವೆಯರ ಸಂಸ್ಥೆ ಕಟ್ಟಿದರು. ಕೇಶ ಮುಂಡನ ವಿರೋಧಿಸಿ, ದೇಶದೆಲ್ಲೆಡೆಯ ವಿಧವೆಯರನ್ನು ಸಂಸ್ಥೆಗೆ ಸೇರಿಸಿಕೊಂಡರು. ಸಂಪ್ರದಾಯಸ್ಥರಿಂದ ಅಪಪ್ರಚಾರಗಳು ನಡೆದರೂ ಲೆಕ್ಕಿಸದೆ ಪ್ರತಿಯೊಬ್ಬ ವಿಧವೆಯನ್ನೂ ವೈಯಕ್ತಿಕ ಕಾಳಜಿಯಿಂದ ನೋಡಿಕೊಂಡರು ರಮಾಬಾಯಿ. ತಾನು ಕ್ರೈಸ್ತಳಾದರೂ ಉಳಿದರವರ ಮತಾಂತರಕ್ಕೆ ಯತ್ನಿಸಲಿಲ್ಲ. ತನ್ನ ಹೆಸರನ್ನು ಹಾಗೇ ಉಳಿಸಿ, ಕ್ರೈಸ್ತ ಗ್ರಂಥಗಳಲ್ಲದೆ ಹಿಂದೂ ಧರ್ಮ ಶಾಸ್ತ್ರಗಳ ಕಲಿಕೆಯನ್ನೂ ಮುಂದುವರಿಸಿದರು. ಆಕೆ ಎಂಥವರೆಂದರೆ ಕ್ರೈಸ್ತರ ನೆಲದಲ್ಲೇ ಆ ಧರ್ಮದಲ್ಲೂ ಇದ್ದ ಅಂಧಶ್ರದ್ಧೆಯನ್ನು ಖಂಡಿಸಿದ್ದ ದಿಟ್ಟೆ. ಯಕ್ಷಗಾನ ಅರ್ಥದಾರಿ, ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಅವರ ಕಾರ್ಕಳ ತಾಲೂಕಿನ ಮಾಳದ ಮನೆಯ ಪಕ್ಕದಲ್ಲೇ ಈ ರಮಾಬಾಯಿ ಹುಟ್ಟಿದ ಮನೆಯಿತ್ತು. ಜೋಶಿ ಕೂಡಾ ರಮಾಬಾಯಿ ವಂಶಜರೇ. ಹೀಗೆ ಕನ್ನಡತಿಯಾಗಿದ್ದರೂ ಕನ್ನಡಿಗರಿಗೆ ತೀರಾ ಅಪರಿಚಿತರಾಗಿದ್ದರು. ಗಟ್ಟಿಗಿತ್ತಿಯ ಬದುಕೇ ಚಳವಳಿ!' ಎಂತೆಂಥವರದ್ದೋ ಅಭಿನಂದನ ಗ್ರಂಥಗಳು, ಜೀವನಚರಿತ್ರೆಗಳು ಪ್ರಕಟವಾಗುತ್ತವೆ. ಓದಿ ನಮ್ಮ ಬದುಕನ್ನೂ ಗಟ್ಟಿಗೊಳಿಸುವಂಥ ಕೃತಿಗಳು ಎಷ್ಟು ಬರುತ್ತಿವೆ ಹೇಳಿ? ಕಾಂತಾವರ ಕನ್ನಡ ಸಂಘದವರು 'ನಾಡಿಗೆ ನಮಸ್ಕಾರ' ಮಾಲಿಕೆಯಲ್ಲಿ ಪುಟ್ಟದೊಂದು ಕೃತಿ ಪ್ರಕಟಿಸಿದ್ದು ಬಿಟ್ಟರೆ ರಮಾಬಾಯಿಯನ್ನು ಕನ್ನಡ ಜಗತ್ತಿಗೆ ಪರಿಚಯಿಸಿದ್ದು ಇಲ್ಲವೇ ಇಲ್ಲ. 60 ವರ್ಷಗಳ ಹಿಂದೆ ಕಾರ್ಕಳದ ಲಕ್ಷ್ಮಣ ಜೋಶಿಯವರು ರಮಾಬಾಯಿ ಜೀವನಚರಿತ್ರೆಯನ್ನು ಬರೆದಿದ್ದರಂತೆ. ಅಂಥಾ ರಮಾಬಾಯಿಯ ಬದುಕೇ ಒಂದು ಚಳವಳಿ. 1977ರಲ್ಲಿ ವಿದೇಶಿ ಲೇಖಕಿ ಹೆಲೆನ್ ರಮಾಬಾಯಿ ಕುರಿತು ಒಂದು ಪುಸ್ತಕ ಬರೆದಿದ್ದರು. ಅದರಲ್ಲಿ ರಮಾಬಾಯಿ ತನ್ನ ಬಾಲ್ಯವನ್ನು ಮರು ನೆನಪಿಸಿದ ರೀತಿಯಂತೂ ಹೃದಯಂಗಮ. ಆಕೆ ಬರೆಯುತ್ತಾಳೆ- 'ಹೊರ ಜಗತ್ತಿನ ಎಲ್ಲಾ ಕಿಂಡಿಬಾಗಿಲುಗಳು ಮುಚ್ಚಿದ ಕಾಡು ನಡುವಿನ ಆ ಆಶ್ರಮದಲ್ಲಿ ಹೆಣ್ಮಕ್ಕಳ ವೇದಘೋಷದ ಮಧ್ಯೆ ನನ್ನ ಬಾಲ್ಯ ಕಳೆಯಿತು. ಮದ್ರಾಸ್ ಪ್ರೆಸಿಡೆನ್ಸಿ ಬರಕ್ಕೆ ತತ್ತರಿಸಿದ ಕಾಲ. ಊರವರಿಂದ ಬಹಿಷ್ಕಾರ ಬೇರೆ. ಇರುವುದೆಲ್ಲವನ್ನೂ ಬಿಟ್ಟು ತೀರ್ಥಯಾತ್ರೆಗೆ ಹೊರಡಲು ತೀರ್ಮಾನಿಸಿದ್ದರು ನನ್ನಪ್ಪ. ಊರೂರು ಅಲೆದಾಡಿದೆವು. ನನ್ನ ಆಗಿನ ಪರಿಸ್ಥಿತಿಗೆ ದೇವರ ಶಾಪ ಕಾರಣವೆಂದು ಹಂಗಿಸಿದವರೂ ಇದ್ದರು. ಹಾಗೆ ನಾವು ಜ್ಯೋತಿಷಿಗಳ ಬಳಿ ಹೋಗಿ ಚಿನ್ನ ಕೊಟ್ಟೆವು. ಅರ್ಚಕರ ಬಳಿ ಏನೇನೋ ಹೋಮ ನಡೆಸಲು ಹಣ ಕೊಟ್ಟೆವು. ಏನೂ ಪ್ರಯೋಜನವಾಗಲಿಲ್ಲ. ಸಿಕ್ಕ ಸಿಕ್ಕ ಜಾಗದಲ್ಲಿ ರಾತ್ರಿ ಕಳೆಯುತ್ತಿದ್ದೆವು. ನಮ್ಮಲ್ಲಿದ್ದ ಚಿನ್ನ, ಬೆಳ್ಳಿ, ಅಮೂಲ್ಯ ಆಭರಣಗೆಲ್ಲವನ್ನೂ ಮಾರಿದೆವು. ಎಷ್ಟೋ ದಿನಗಳ ಅಲೆದಾಟದ ಬಳಿಕ ತಿರುಪತಿಯ ತಿರುಮಲ ಗುಡ್ಡಕ್ಕೆ ಹೋದೆವು. ಊರಿನ ಸಹವಾಸವೇ ಸಾಕೆನಿಸಿತ್ತು. ನಮ್ಮ ಸಂಗ್ರಹದಲ್ಲಿದ್ದ ಆಹಾರವೆಲ್ಲವನ್ನೂ ಚೂರು ಚೂರೇ ತಿಂದು ಅಕ್ಕಿಯ ಕೊನೆಯ ಅಗುಳೂ ಖಾಲಿಯಾಯಿತು. ಎಷ್ಟೋ ದಿನಗಳ ಉಪವಾಸದಿಂದ ತಂದೆ ನಡೆಯಲಾಗದಷ್ಟು ಕೃಶವಾಗಿದ್ದರು. ಗರ್ಭಗುಡಿಯ ಸ್ನಿಗ್ಧ ನಗುವಿನ ದೇವರ ಹೃದಯವೂ ಕಲ್ಲಿನಷ್ಟೇ ಕಠೋರವಾಗಿತ್ತು. ಒಂದು ಕೆರೆಯ ದಡದಲ್ಲಿ ಕೂತ ತಂದೆ ಇಚ್ಛಾಮರಣ ಹೊಂದುವ ಆಸೆಯನ್ನು ವ್ಯಕ್ತಪಡಿಸಿ ನಮ್ಮನ್ನೆಲ್ಲಾ ಪಕ್ಕ ಕರೆದರು. ನನ್ನ ಕಣ್ಣೆದುರೇ ಅಪ್ಪ ಸಾಯುವ ದೃಶ್ಯವನ್ನು ನೋಡಲಾರದಾದೆವು. ಕಣ್ಣು ಕಾಣಿಸಿದ ತಂದೆ ಬಿಗಿಯಾಗಿ ಕೈ ಹಿಡಿದು ಹೇಳಿದ ಮಾತು ಎಂದೂ ಮರೆಯಲಾಗದು. ನಾನಾಗ ಹದಿಹರೆಯದ ಹುಡುಗಿ.' ಹಳೆಯ ಇಂಗ್ಲಿಷು ಅಕ್ಷರಗಳಲ್ಲಿ ಬರೆದ ಈ ಸಾಲುಗಳನ್ನು ಓದುತ್ತಿದ್ದರೆ ನಮ್ಮೆದೆ ಹಿಮಗರ್ಭವಾಗುತ್ತದೆ. ಮುಂದೆ ರಮೆ ಕಲ್ಕತ್ತಾ ಸೇರಿ 'ಪಂಡಿತಾ' ಬಿರುದು ಪಡೆಯುವವರೆಗಿನ ಬದುಕು ಕಡುಕಷ್ಟದಲ್ಲೇ ಸಾಗಿತು. ಪಂಜಾಬ್ನ ಜೇಲಂ ನದಿ ತೀರದಲ್ಲಿ ಸುಡುಸುಡು ಚಳಿಗೆ ಕುತ್ತಿಗೆವರೆಗಿನ ಮರಳಲ್ಲಿ ಹೂ ರಾತ್ರಿ ಕಳೆದಿದ್ದನ್ನು ರಮೆ ನೆನಪಿಸುತ್ತಾರೆ. ಅದರಿಂದ ಉಂಟಾದ ಕಿವುಡು ಆಕೆಗೆ ಶಾಶ್ವತವಾಯಿತು. ಮುಂದೆ ಕಲ್ಕತ್ತಾ, ಪುಣೆಗಳಲ್ಲಿ ಎದೆಕಿಂಡಿಗಳನ್ನು ತಟ್ಟಿ ಎಚ್ಚರಿಸುವಂಥ ಆಕೆಯ ಪ್ರವಚನಗಳು, ಶೂದ್ರನೊಂದಿಗೆ ವಿವಾಹ, ಸಂಗಾತಿ ಸಾವು, ಸಾವಿರ ವಿಧವೆಯರ ಬಾಳಿಗೆ ಆಸರೆಯಾದ ರೀತಿ, ಇಂಗ್ಲೆಂಡು, ಅಮೆರಿಕದೆಲ್ಲೆಡೆ ಪ್ರವಾಸ, ಅಲ್ಲೆಲ್ಲಾ ಆರಂಭವಾದ ರಮಾಬಾಯಿ ಸರ್ಕಲ್ಸ್, ಜೀಸಸ್ಗೆ ಪ್ರೇಯರ್, ಕಿಂಡರ್ ಗಾರ್ಡನ್ ಸ್ಕೂಲ್, ಆರ್ಯ ಮಹಿಳಾ ಸಮಾಜ, ಶಾರದಾ ಸದನ, ಮುಕ್ತಿ ಸದನ.. ಉಡುಪಿ ಜಿಲ್ಲೆಯ ಮಾಳವೆಂಬ ಹಳ್ಳಿಯ ಚಿತ್ಪಾವನರ ಹುಡುಗಿ ಹೀಗೆ ನೋವು ನುಂಗಿ ಮುಗಿಲ ಮೆಟ್ಟಿಲುಗಳನ್ನು ಏರುತ್ತಾ ಹೋದ ಪರಿ ಮಾತ್ರ ಅಕ್ಷರಾತೀತ. ರಮಾಬಾಯಿ HIGH CASTE HINDU WOMEN ಎಂಬ ಪುಸ್ತಕವನ್ನು ಇಂಗ್ಲಿಷಿನಲ್ಲಿ ಬರೆದರು. ಅಮೆರಿಕಾದಲ್ಲಿ ಪರಿಚಿತಳಾದ ಭಾರತದ ಮೊದಲ ಮಹಿಳಾ ಡಾಕ್ಟರ್ ಮತ್ತು ಅಮೆರಿಕಾಕ್ಕೆ ಹೋದ ಮೊದಲ ಭಾರತೀಯ ಮಹಿಳೆ ಆನಂದಿಬಾಯಿ ಜೋಶಿ ಅವರಿಗೆ ಈ ಕೃತಿಯನ್ನು ಸಮರ್ಪಿಸಿದ್ದರು. ಅಂದು ಅಮೆರಿಕಾದಲ್ಲಿ ಈ ಕೃತಿಯು 10,000 ಪ್ರತಿಗಳು ಮಾರಾಟವಾಗಿದ್ದವು. ಬಂದ ದುಡ್ಡಲ್ಲಿ ಭಾರತದಲ್ಲಿ ಬೋಧಿಸಬೇಕಾದ ಕಿಂಡರ್ ಗಾರ್ಡನ್ ಪುಸ್ತಕಗಳನ್ನು ತಯಾರಿಸಿದ್ದರು ರಮಾಬಾಯಿ. ಇತ್ತ ಇಂಗ್ಲೆಂಡ್ ರಾಣಿ ವಿಕ್ಟೋರಿಯಾ ರಮಬಾಯಿ ಸೂಚನೆಯಂತೆ ಭಾರತದಲ್ಲಿ ಸ್ತ್ರೀ ವೈದ್ಯರು ಮತ್ತು ಮಹಿಳೆಯರು ಆಸ್ಪತ್ರೆಗಳನ್ನು ಸ್ಥಾಪಿಸುವ ಏರ್ಪಾಡು ಮಾಡಿದರು. 1892ರಲ್ಲಿ ಸ್ಥಾಪನೆಗೊಂಡ ಶಾರದಾ ಸದನದ ನಿರ್ವಹಣೆಗೆ ರಮಾಬಾಯಿ ಅಸೋಸಿಯೇಶನ್ನವರು ಕೊಡುತ್ತಿದ್ದ ಹಣ ಮುಗಿಯುತ್ತಾ ಬಂತು. ಇದನ್ನರಿತ ರಮಾಬಾಯಿ ಪುಣೆಯಿಂದ 34 ಮೈಲಿ ದೂರದ ಖೇಡಗಾಂವ್ದಲ್ಲಿ 100 ಎಕರೆ ಬಂಜರು ಭೂಮಿ ಖರೀದಿಸಿ ಕೃಷಿ ಮಾಡಿದರು. ಇದೇ ಹೊತ್ತಲ್ಲಿ ಅಂದರೆ 1897ರಲ್ಲಿ ಭಾರತ ಭಯಂಕರ ಕ್ಷಾಮಕ್ಕೆ ತುತ್ತಾಗಿ ಸಾವಿರಾರು ಜನ ಅನ್ನಹಾರವಿಲ್ಲದೆ ಸಾಯುವಂತಾಯಿತು. ಬರದ ಭಯಂಕರ ಅನುಭವವಿದ್ದಳಲ್ಲವೆ ರಮೆ? ಅನ್ನ, ಬಟ್ಟೆ, ದವಸ ಧಾನ್ಯಗಳನ್ನು ಎಂಟು ಎತ್ತಿನ ಗಾಡಿಗಳಲ್ಲಿ ಓಯ್ದು ಹಂಚಿದರು. ಅವರೆಲ್ಲರ ಕಷ್ಟ ವಿಚಾರಿಸುತ್ತ ಬುಂದೇಲಖಂಡ, ಸೋಹಾನಗರಪುರ, ಬಬ್ಬಲ್ಪುರದಲ್ಲೆಲ್ಲ ಸಂಚರಿಸಿದರು. ಈ ರಮೆಯ ಮನಸ್ಸು ಅದೆಷ್ಟು ವಿಶಾಲವೆಂದರೆ ಕ್ಷಾಮ ಪೀಡಿತ 3,000 ನಿರಾಶ್ರಿತರನ್ನು ಶಾರದಾ ಸದನಕ್ಕೆ ಕರೆತಂದರು. ಅಪ್ಪಟ ದೇವತೆಯಂತೆ ನಿರಾಶ್ರಿತರ ಪುನರ್ವಸತಿ ಆರಂಭಿಸಿದರು. ಈ ಮಹಾ ಕಾರ್ಯಕ್ಕೆ ಸರಕಾರದ ಬೆಂಬಲವಾಗಲೀ, ಶ್ರೀಮಂತರ ಧನಸಹಾಯವಾಗಲೀ ಸಿಗುತ್ತಿರಲಿಲ್ಲ. ಕೆಲವು ವಿದೇಶಿಯರು ಸಹಕರಿಸುತ್ತಿದ್ದರಷ್ಟೇ. ಅದೂ ದೇವತೆಯಂಥ ರಮಾಬಾಯಿಗೋಸ್ಕರ. ಇದೆಲ್ಲವನ್ನು ನೆನಪಿಸಿಕೊಂಡರೆ, ಈ ಹೊತ್ತಿನ ಕರ್ನಾಟಕ ಬರ ರಾಜಕಾರಣದ ದೊಂಬರಾಟ ಕಂಡವರಿಗೆ ನಗು ಬಾರದಿರದು. ಆ ಬಳಿಕ ರಮಾಬಾಯಿ ಬೆಂಗಳೂರು ಪಕ್ಕದ ದೊಡ್ಡಬಳ್ಳಾಪುರ ಮತ್ತು ಗುಲ್ಬರ್ಗಗಳಲ್ಲೂ ಮುಕ್ತಿಸದನವನ್ನು ಆರಂಭಿಸಿದರು. ಖೇಡಗಾಂವದಲ್ಲಿ ರಮಾಬಾಯಿ 10-20 ಬಾವಿಗಳನ್ನು ತೆರೆದರು. 40 ಎಕರೆ ಬಂಜರು ಭೂಮಿಯಲ್ಲಿ ಕೃಷಿ ಮಾಡಿದರು. ರೋಗ ಪೀಡಿತರಿಗೆ ಆಸ್ಪತ್ರೆಯೊಂದನ್ನು ತೆರೆದರು. ನಮ್ಮ ಕಾರ್ಕಳದ ರಮಾಬಾಯಿ ಅದೆಂಥ ಕರುಣಾಮಯಿ! ಇಂಥ ರಮೆ ಅಂದು ತಾಯಿಯ ಕಂಕುಳಲ್ಲಿ ಆಶ್ರಮ ಬಿಟ್ಟು ದೇಶಾಟನೆ ಹೊರಟ 40 ವರ್ಷಗಳ ಬಳಿಕ 1891ರಲ್ಲೊಮ್ಮೆ ಹುಟ್ಟೂರು ಮಾಳಕ್ಕೆ ಬಂದು ಹೋಗಿದ್ದನ್ನು ಈಗಲೂ ಅಲ್ಲಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ. ರಮೆಯ ಬಗ್ಗೆ ಇನ್ನೂ ಹೇಳಬೇಕೆನಿಸುತ್ತದೆ. ಜೊತೆಗೆ ಈಕೆಯ ಮಗಳು ಮನೋರಮೆ ಹೇಗಿದ್ದಳೆಂಬುದನ್ನೂ ನೀವು ತಿಳಿದುಕೊಳ್ಳಲೇಬೇಕು. ಜಗತ್ತಿನ ಚರಿತ್ರೆಯ ಶ್ರೇಷ್ಠ ಮಹಿಳೆ ಪಂಡಿತಾ ರಮಾಬಾಯಿಯವರ ಸಾಧನೆ 12ನೇ ಶತಮಾನದ ವಚನಕಾರರ ಸುಧಾರಣೆಗೆ ಒಂದಿನಿತೂ ಕಡಿಯಾದದ್ದಲ್ಲ. ಈಕೆ ಪುಸ್ತಕಗಳನ್ನು ಬರೆದರು. ಆ ಅಕ್ಷರಗಳಲ್ಲಿ ಬದುಕಿನದ್ದಕ್ಕೂ ಅನುಭವಿಸುತ್ತಿದ್ದ ಗಾಢ ನೋವು, ವಿಷಾದ, ಅವಮಾನ, ಛಲಗಳೇ ಜಿನುಗುತ್ತಿತ್ತು. 19ನೆಯ ಶತಮಾನದಲ್ಲಿ ಬರವಣಿಗೆಯಿಂದಲೇ ಬದುಕು ಸಾಗಿಸಿದ ಕೆಲವೇ ಮಹಿಳೆಯರಲ್ಲಿ ರಮಬಾಯಿ ಒಬ್ಬರಾಗಿದ್ದರು. ತೊಟ್ಟಿಲ ಮಗುವಿನಿಂದ ಹಿಡಿದು ಸಾವಿನ ಕಡೆಯ ಕ್ಷಣದವರೆಗೆ ಅಲೆಮಾರಿಯಾಗಿಯೇ ಬದುಕಬೇಕಾಯಿತು. ಆಕೆಯ ಅಕ್ಷರಗಳಿಗೆ ಅಸಾಧ್ಯ ಶಕ್ತಿಯಿದ್ದರೆ ಅದು ಇಂಥ ಅನುಭವಗಳಿಂದಲೇ ಸಿದ್ಧಿಸಿದ್ದು. ಭಾರತದಲ್ಲಿ 10,000 ಮೈಲು ಕಾಲ್ನಡಿಗೆ ಮತ್ತು ವಿದೇಶಗಳಲ್ಲಿ 30,000 ಮೈಲು ದೂರ ಪ್ರಯಾಣಿಸಿದವಳಲ್ಲವೇ? ಆ ಕಾಲದ ವಿಧವೆಯರು, ನಿರಾಶ್ರಿತರು, ಮಕ್ಕಳು, ನಿರ್ಗತಿಕ ಮಹಿಳೆಯರ ಪಾಲಿನ ಈ ನಿಜದ ದೇವತೆ ಪುಣೆಯ ಖೇಡಗಾಂವದ ನೂರು ಎಕರೆ ಭೂಮಿಯಲ್ಲಿ ಕನಸನ್ನು ಹೊತ್ತು ವಾಸ್ತವಗೊಳಿಸಿದಳು. ಅಪ್ಪ, ಅಮ್ಮ, ಸೋದರ, ಕೈ ಹಿಡಿದ ಸಂಗಾತಿ ಎಲ್ಲರೂ ಅಗಲಿದಾಗ ರಮಾಬಾಯಿಯ ಬದುಕಿಗೆ ಆಸರೆಯಾಗಿದ್ದವಳೊಬ್ಬಳೆ. ಎಂಟು ತಿಂಗಳ ಮಗಳು ಮನೋರಮೆ. ರಮೆ ಪೂನಾಕ್ಕೆ ಬಂದು ಎರಡೇ ವರ್ಷಗಳಲ್ಲಿ ಅಮೆರಿಕಾಕ್ಕೆ ತೆರಳಬೇಕಾಯಿತು. ಈ ಸಂದರ್ಭ ಎರಡು ವರ್ಷದ ಮಗಳನ್ನು ಹಡಗಿನ ಪರಿಚಾರಿಕೆ ಜತೆಗೆ ಇಂಗ್ಲೆಂಡಿಗೆ ಕಳುಹಿಸಿದರು-ವಿದ್ಯಾಭ್ಯಾಸಕ್ಕೆ. ಇಂಗ್ಲೆಂಡಿನ `ವಾಂಟೇಜ್' ಕಾನ್ವೆಂಟ್ನ ಸಿಸ್ಟರ್ಸ್ ಪುಟ್ಟ ಮನೋರಮೆಯನ್ನು ಪ್ರೀತಿಯಿಂದ ಸಲಹಿದರು. ಪೊರೆವ ಅಮ್ಮ ಅನಾಥರು, ಶೋಷಿತರನ್ನು ಉದ್ಧರಿಸಲೆಂದು ಸೀರೆ ತುದಿ ಹಿಡಿದು ದೇಶ ಸುತ್ತುತ್ತಿದ್ದರೆ ಇತ್ತ ಮಗಳು ಯಾವುದೋ ದೇಶದ ಯಾವುದೋ ಅಮ್ಮನ ಮಡಿಲಲ್ಲಿ ಆಡಿಕೊಂಡಿದ್ದಳು! ಮನೋರಮೆಯ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಇಂಗ್ಲೆಂಡ್, ಅಮೆರಿಕಾದಲ್ಲೇ ಆಯಿತು. ಮೂರು ವರ್ಷಗಳ ಕಾಲೇಜು ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ತಾಯಿ ರಮಾಬಾಯಿ ಅಸ್ವಸ್ಥರಾದರೆಂದು ಖೇಡಗಾಂವ್ಗೆ ಬಂದಳು. ಅಮ್ಮ ಕಟ್ಟಿದ ಶಾರದಾ ಸದನದ ಲೆಕ್ಕಪತ್ರ, ಅಧ್ಯಾಪನ ನೋಡಿಕೊಳ್ಳುತ್ತ, 64 ಮೈಲು ದೂರದ ಪುಣೆಯ ಕಾಲೇಜಿಗೆ ದಿನವೂ ಹೋಗಿ ಬರುತ್ತಿದ್ದಳು. ಅಮ್ಮ ಎಂದರೆ ಆಕೆ ಜೀವ. ಶಾರದಾ ಸದನದ ಬಾಲಕಿಯರಿಗೆಲ್ಲಾ ಮನೋರಮೆ ಪ್ರೀತಿಯ ಅಕ್ಕ. ಇಂಥ ಮನೋರಮೆ ಖೇಡಗಾಂವದಲ್ಲೊಂದು ಅಂಧರ ಶಾಲೆಯನ್ನು ತೆರೆದಳು. ಅಮೆರಿಕದಲ್ಲಿ ಬ್ರೈಲ್ ತರಹದ ರಬ್ಬರಿನ ಉಬ್ಬು ಅಕ್ಷರಗಳನ್ನು ಸ್ಪರ್ಶದಿಂದ ಗುರುತಿಸುವುದನ್ನು ಮನೋರಮೆ ಕಲಿತಿದ್ದನ್ನು ಇಲ್ಲಿ ಬಳಸಿಕೊಂಡಳು. ಅದು ಭಾರತದಲ್ಲಿ ಆರಂಭವಾದ ಮೊತ್ತಮೊದಲ ಅಂಧರ ಶಾಲೆ. 1903ರಲ್ಲಿ ಮನೋರಮೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸ ಹೋದಾಗ ಅಮ್ಮನಂತೆ ಪ್ರಾರ್ಥನಾ ಮಂಡಲಗಳನ್ನು ಸ್ಥಾಪಿಸಿ, ಉಪನ್ಯಾಸ ಕೊಟ್ಟಳು. `ವಿಧವೆಯರ ಸ್ನೇಹಿತೆ' ಎಂಬ 200 ಪುಟಗಳ ಅಮ್ಮನ ಆತ್ಮಕತೆ ಬರೆದಳು. ನಮ್ಮ ಗುಲ್ಬರ್ಗಾದಲ್ಲಿ ಬಾಲಕಿಯರ ಪಾಠಶಾಲೆ ತೆರೆದಳು. 1913ರಲ್ಲಿ ಅಲ್ಲೇ ಶಾಂತಿ ಸದನ ಪಾಠಶಾಲೆಯನ್ನು ಆರಂಭಿಸಿದಳು. ಮುಕ್ತಿಸದನ, ಶಾರದಾ ಸದನ, ಶಾಂತಿ ಸದನಗಳ ಜವಾಬ್ದಾರಿಯೆಲ್ಲ ಮನೋರಮೆಯ ಹೆಗಲಿಗೆ ಬಿತ್ತು. ಎಲ್ಲೆಲ್ಲ ಅನಾಥ ಸ್ತ್ರೀಯರು ಸಂಕಷ್ಟದಲ್ಲಿದ್ದಾರೋ ಅಲ್ಲೆಗೆಲ್ಲ ಮನೋರಮೆ ಧಾವಿಸುತ್ತಿದ್ದಳು. ಎತ್ತಿನ ಗಾಡಿಯ ಕುಲುಕಾಟದಲ್ಲಿ ಅಂದು ಆಕೆ ಕ್ರಮಿಸಿದ ದೂರ ಅದೆಷ್ಟೋ? ದೇವಾಲಯಗಳ ಚಾವಡಿ, ಶಾಲೆಗಳ ಜಗಲಿಯಲ್ಲಿ ರಾತ್ರಿ ಕಳೆಯುತ್ತಿದ್ದಳು. ಮನೋರಮೆಯ ಆರೋಗ್ಯ ಹದಗೆಟ್ಟಿತ್ತು. ಶ್ವಾಸಕೋಶದ ತೊಂದರೆಯಿಂದ ಆ ಪುಟ್ಟ ಹೃದಯ ತತ್ತರಿಸಿತು. 1921ನೇ ಜುಲೈ 24ರಂದು 40ನೇ ವಯಸ್ಸಲ್ಲಿ ಮನೋರಮೆ ಕಾಲವಾದಳು. ಹೀಗೆ ನಮ್ಮ ರಮಾಬಾಯಿಯ ಬದುಕಿನ ಕೊನೆಯ ಆಸರೆಯೂ ಕಣ್ಮರೆಯಾಯಿತು.
ಮಗಳನ್ನೂ ಕಳೆದುಕೊಂಡ ರಮಾಬಾಯಿಯವರ ಕೊನೆಯ ದಿನಗಳು ಸಂಕಷ್ಟದಲ್ಲೇ ಸಾಗಿತು. `ನನ್ನ ಶಾಲೆ ಪೂರ್ಣ ಜಾತ್ಯತೀತವಾಗಿರಲು ಒಪ್ಪದ ಮಿಶನರಿಗಳು ಮತ್ತು ತಮ್ಮ ಮಗಳಿಗೆ ಬೋಧಕಿಯಾಗಿ ಒಬ್ಬ ಕ್ರಿಶ್ಚಿಯನ್ನಳ ಇರವನ್ನು ಸಹಿಸದ ಹಿಂದೂ ಸಂಪ್ರದಾಯವಾದಿಗಳು ಇವರಿಬ್ಬರ ನಡುವೆ ನಾನು ಸಿಕ್ಕಿ ಬಿದ್ದಿದ್ದೇನೆ' ಎನ್ನುತ್ತಾರೆ ರಮಾಬಾಯಿ. ಒಂದೆಡೆ ಪುರೋಹಿತಶಾಹಿ, ಇನ್ನೊಂದೆಡೆ ಪಾದ್ರಿಶಾಹಿ. ವಿಶಾಲವಾಗಿ ಕೈ ಚಾಚಿದ ಆ ಜೀಸಸ್ನ ತೆಕ್ಕೆಗೆ ಆತುಕೊಂಡರೂ ರಮಾಬಾಯಿಯ ನೋವಿಗೆ ಉತ್ತರ ಸಿಗಲಿಲ್ಲ. ಆರಂಭದಲ್ಲಿ `ಉಚ್ಛ ಕುಲದ' ವಿದ್ವಾಂಸ ಹೆಣ್ಣೊಬ್ಬಗಳು ಮತಾಂತರ ಹೊಂದಿದ್ದ್ಕಕೆ ಮಿಶನರಿಗಳು ಸಂಭ್ರಮಿಸಿದರು. ಆದರೆ ಈ ಗದ್ದಲದಲ್ಲಿ ಆಕೆ ಹೇಳಿದ್ದು ಯಾರಿಗೂ ಕೇಳಿಸಲಿಲ್ಲ. ಕೇಳಿಸಲಿಲ್ಲ. ರಮಾಬಾಯಿಯವರ ಧರ್ಮ ಶಾಸ್ತ್ರೀಯ ವಾದಗಳನ್ನು ಅರ್ಥಮಾಡಿಕೊಳ್ಳಲಾಗದ ಮಿಶನರಿಗಳು ಆಕೆಯ ನಿಲುವನ್ನು ಬಲವಾಗಿ ಟೀಕಿಸುತ್ತಿದ್ದರು. ಹಿಂದೂ ಮತ್ತು ಕ್ರೈಸ್ತ ಧರ್ಮ ಶಾಸ್ತ್ರಗಳ ಅಗಾಧ ಪಾಂಡಿತ್ಯ ಮಡುಗಟ್ಟಿರುವುದರಿಂದ ಆಕೆಯ ವಾದವನ್ನೇ ಅವರು ಅರ್ಥೈಸಲಾರದಾದರು. ಅದಕ್ಕೆ ಎ.ಬಿ.ಶಾ ಹೇಳುತ್ತಾರೆ. `ಆಕೆ ಇಡೀ ಚರಿತ್ರೆಯಲ್ಲಿ ಅತ್ಯುತ್ತಮ ಮಹಿಳೆ, ಅಷ್ಟೇ ಅಲ್ಲ. ಆಕೆ ಇಡೀ ಚರಿತ್ರೆಯಲ್ಲಿ ಅತ್ಯುತ್ತಮ ಭಾರತೀಯರಲ್ಲಿ ಒಬ್ಬರು'. ಅಂಥವಳು ಕನ್ನಡಿಗಳು ಎಂಬ ಹೆಮ್ಮೆ ನಮಗಿದೆ ನಿಜ. ಆದರೆ ನಾವೆಷ್ಟು ಆಕೆಯನ್ನು ನೆನಪಿಸಿಕೊಂಡಿದ್ದೇವೆ? ಕನ್ನಡಿಗಳಾಗಿದ್ದರೂ ಇಂಥ ಮೇರು ವ್ಯಕ್ತಿತ್ವವನ್ನು ನೆನಪಿಸುವಂಥ ಒಂದೇ ಒಂದು ಗಮನಾರ್ಹ ಕೆಲಸ ಕರ್ನಾಟಕದಲ್ಲಿ ನಡೆದಿಲ್ಲ. ಕನ್ನಡಿಗರು ಅಷ್ಟೂ ಕೃತಘ್ನರಾ? ರಮಾಬಾಯಿಯವರ ಸ್ಫೂರ್ತಿಯಲ್ಲಿ ಇಂದಿಗೂ ಶಾಂತಿ ಸದನ ದೇಶದೆಲ್ಲೆಡೆ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರಿನಲ್ಲೂ ಅದರದೊಂದು ಶಾಖೆಯಿದೆ. ಮಗಳ ಅಕಾಲಿಕ ಮರಣ ರಮಾಬಾಯಿಯವರನ್ನು ಜರ್ಜರಿಸಿತು. ಎರಡು ವರ್ಷಗಳ ಹಿಂದೆಯೇ ಅಸ್ಥಿಜ್ವರ ಪೀಡಿಸುತ್ತಿತ್ತು. ಇದುವರೆಗೆ ಯಾರೂ ಮಾಡಿರದ ಮರಾಠಿ ಬೈಬಲ್ ರಚನೆಯಲ್ಲಿ ತೊಡಗಿದ್ದರು ರಮಾಬಾಯಿ. ತನ್ನ ಕೆಲಸ ಪೂರ್ತಿಯಾಗುವವರೆಗೆ ಬದುಕಿದ್ದರೆ ಸಾಕೆನ್ನುತ್ತಿದ್ದರಂತೆ. ಔಷಧಿ ಬದಲಿಗೆ ದೇವರ ಪ್ರಾರ್ಥನೆಯೇ ಬಲ ಕೊಡುತ್ತಿತ್ತು. ಒಂದು ಸಂಜೆ ಆಶ್ರಮದ ಹೆಣ್ಮಕ್ಕಳನ್ನೆಲ್ಲಾ ಪಕ್ಕ ಕರೆದ ರಮಾಬಾಯಿ. `ಮನೋರಮೆಯಂತೆ ನಾನೂ ದೇವರ ಬಳಿ ತೆರಳುವ ದಿನ ಬಂದಿದೆ. ಇನ್ನು ಮುಂದೆ ನಿಮ್ಮನ್ನು ಸುಂದರೀಬಾಯಿ ನೋಡಿಕೊಳ್ಳುತ್ತಾಳೆ' ಎಂದಾಗ ಮಕ್ಕಳು, ಮಹಿಳೆಯರು ದುಃಖ ತಡೆಯದಾದರು. ಅಂದಿಗೆ ಆಕೆಗೆ 65 ವರ್ಷ ತುಂಬಿತ್ತು. 1922ರ ಏಪ್ರಿಲ್ 5ರಂದು ಸಂಜೆ ರಮಾಬಾಯಿ ಮರಾಠಿ ಬೈಬಲ್ ಕೃತಿಯ ಕೊನೆಯ ವಾಕ್ಯ ಬರೆದು ಹಸ್ತಪ್ರತಿಯನ್ನು ಛಾಪಖಾನೆಗೆ ಕಳಿಸಿದರಷ್ಟೇ. ರೂಮು ತೊಳೆದು ಮಿಂದು ಬಂದ ರಮೆ ದೇವರ ಧ್ಯಾನ ಮಾಡುತ್ತ ಮಲಗಿದರು. ಮತ್ತೆ ಏಳಲಿಲ್ಲ. ಮುಕ್ತಿ ಸದನದ ಅಂಗಳದಲ್ಲಿ ದುಃಖ ತೊಟ್ಟಿಕ್ಕುತ್ತಿತ್ತು. ಇತ್ತ ಕಾರ್ಕಳದ ಅನಂತ ಶಾಸ್ತ್ರಿಗಳ ಆತ್ಮ ಕಣ್ಣೊರೆಸಿಕೊಂಡಿತು.? ಚಂದ್ರಶೇಖರ್ ಮಂಡೆಕೋಲು ಕೃಪೆ: ವಿಜಯವಾಣಿ (22.4.2012)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|