ರೈತರ ಆತ್ಮಹತ್ಯೆಗಳು: ನಿಯಂತ್ರಣದಲ್ಲಿ ವಿವಿಧ ತಜ್ಞರ ಪಾತ್ರ ಮತ್ತು ಆತ್ಮಹತ್ಯೆ ನಿಯಂತ್ರಣದಲ್ಲಿ ರೈತ ಚೇತನ.....7/24/2017 ತಿರುಳು: ಭಾರತದಲ್ಲಿ ಆಗುತ್ತಿರುವ ರೈತರ ಆತ್ಮಹತ್ಯೆಗಳು, ಪ್ರಮುಖ ಕಾರಣಗಳು, ಚಿಕಿತ್ಸೆ ಮತ್ತು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ವಿವಿಧ ತಜ್ಞರ ಪಾತ್ರಗಳ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಈ ಲೇಖನ. ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮತ್ತು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ ಸಹಯೋಗದೊಂದಿಗೆ ಪ್ರಾರಂಭಿಸಿದ ರೈತ ಚೇತನ ಯೋಜನೆ ಯನ್ನು ರೈತರ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿನಾಂಕ 23/07/2015 ರಂದು ಪ್ರಾರಂಭಿಸಲಾಯಿತು. ಕರ್ನಾಟಕದಲ್ಲಿ ಈ ವಿನೂತನ ಯೋಜನೆಯಿಂದ ಅನೇಕ ರೈತರು ಬೆಳೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು. ಕೆಲವು ರೈತರ ಆತ್ಮಹತ್ಯೆಗಳನ್ನು ಈ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ತಡೆಗಟ್ಟುವ ನಿಟ್ಟಿನಲ್ಲಿ ಯಶಸ್ವಿಯಾದರು. ಕೆಲವು ರೈತರ ಹಣಕಾಸಿನ ಸಮಸ್ಯೆಗಳಿಗೆ ವಿವಿಧ ಇಲಾಖೆಗಳ ಸಹಕಾರದಿಂದ ಹಣಕಾಸಿನ ನೆರವನ್ನು ನೀಡಲಾಯಿತು. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ವಿವಿಧ ತಜ್ಞರ ಪಾತ್ರ ಮುಖ್ಯವಾಗಿರುತ್ತದೆ. ಕೃಷಿ ತಜ್ಞರು, ಮನೋರೋಗ ತಜ್ಞರು, ನೈದಾನಿಕ ಮನಶಾಸ್ತ್ರಜ್ಞರ, ಮನೋವೈದ್ಯಕೀಯ ಸಮಾಜಕಾರ್ಯಕರ್ತರ ಪಾತ್ರ ಮತ್ತು ಕೃಷಿ ಸಂಶೋಧಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಈ ಎಲ್ಲಾ ತಜ್ಞರ ಸಂಯೋಜನೆಯೊಂದಿಗೆ ರೈತ ಚೇತನ ಯೋಜನೆಯು ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಆತ್ಮಹತ್ಯೆಗಳ ಬಗ್ಗೆ ವರದಿಯನ್ನು ಮಾಡುವಾಗ ಸುದ್ದಿ ಮತ್ತು ದೃಶ್ಯಮಾಧ್ಯಮದವರ ಪಾತ್ರ ಪ್ರಮುಖವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಂತೆ ಆತ್ಮಹತ್ಯೆ ಕುರಿತು ವರದಿಯನ್ನು ಮಾಡುವ ಬಗ್ಗೆ ಇರುವ ಮಾರ್ಗಸೂಚಿಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಭಾರತವು ಕೃಷಿ ಆಧಾರಿತ ರಾಷ್ಟ್ರವಾಗಿದ್ದು, ಶೇಕಡಾ 48.9 ರಷ್ಟು ಜನರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೃಷಿಯನ್ನು ಅವಲಂಬಿಸಿಕೊಂಡಿರುತ್ತಾರೆ. ಭಾರತದಲ್ಲಿ ಆಗುತ್ತಿರುವ ರೈತರ ಆತ್ಮಹತ್ಯೆಗಳು ಇಂದು ನಿನ್ನೆಯದಲ್ಲ. ಭಾರತ ದೇಶದಲ್ಲಿ ರೈತರ ಆತ್ಮಹತ್ಯೆಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೊಲಿಕೆ ಮಾಡಿದರೆ ಅಂಕಿ ಸಂಖ್ಯೆಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಉತ್ತರ ಪ್ರದೇಶ, ಪಂಜಾಬ್, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆಗಳ ಪ್ರಕರಣಗಳು ಅಧಿಕವಾಗಿರುವದರ ಬಗ್ಗೆ ವಿವಿಧ ಸಂಶೋಧನಗಳಿಂದ ತಿಳಿದುಬಂದಿದೆ. ಕೇವಲ ಹಣಕಾಸಿನ ಸಮಸ್ಯೆಗಳು ರೈತರ ಆತ್ಮಹತ್ಯೆಗಳು ಆಗಲಿಕ್ಕೆ ಕಾರಣ ಎನ್ನುವ ವಾದವನ್ನು ಒಪ್ಪಿಕೊಳ್ಳಲಿಕ್ಕೆ ಆಗುವುದಿಲ್ಲ. ರೈತರ ಆತ್ಮಹತ್ಯೆಗೆ ಅನೇಕ ರೀತಿಯ ಕಾರಣಗಳ ಬಗ್ಗೆ ಹಲವು ಸಂಶೋಧನೆಗಳಲ್ಲಿ ವಿವರಿಸಲಾಗಿದೆ.
ಆತ್ಮಹತ್ಯೆ ಬಗ್ಗೆ ಸಂಬಂಧಿಸಿದ ಅಂಕಿ ಸಂಖ್ಯೆಗಳನ್ನು ವಿವಿಧ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಆದ ರೈತರ ಆತ್ಮಹತ್ಯೆಗಳ ಅಂಕಿ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಂಡು ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಅಂಕಿ ಸಂಖ್ಯೆಗಳನ್ನು ಗಮನಿಸಿದ್ದಲ್ಲಿ, 1995 ರಲ್ಲಿ ಭಾರತದಲ್ಲಿ ಸಮುದಾಯದಲ್ಲಿ ಸಾಂದ್ರತೆ ಅನುಗುಣವಾಗಿ ಆತ್ಮಹತ್ಯೆಯ ಸಂಖ್ಯೆ ಪ್ರತಿ ಲಕ್ಷಕ್ಕೆ ಶೇ 9.7% ರಷ್ಟು ಇತ್ತು. ಮಹಾರಾಷ್ಟ್ರ ರಾಜ್ಯದ ವಿದರ್ಭ ಪ್ರದೇಶದಲ್ಲಿ ಜನಸಂಖ್ಯೆಯು 1,20,000 ರಷ್ಟು ಇದ್ದು, ರೈತರ ಆತ್ಮಹತ್ಯೆಯ ಪ್ರಮಾಣವು ವರ್ಷಕ್ಕೆ 116 ರಷ್ಟು ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, 2005 ರಲ್ಲಿ 572, 2006 ರಲ್ಲಿ 1065 ರಷ್ಟು ಮತ್ತು 2007 ರಲ್ಲಿ 600 ರಷ್ಟು ರೈತರ ಆತ್ಮಹತ್ಯೆಗಳು ಆಗಿರುತ್ತದೆ ಎಂದು 2008 ರಲ್ಲಿ ಬೆಹರೆ ಪಿ.ಬಿ ಮತ್ತು ಬೆಹರೆ ಎ.ಪಿ ಎಂಬ ಸಂಶೋಧನಾಕಾರರು ನಡೆಸಿದ ಅಧ್ಯಯನದಿಂದ ತಿಳಿದುಬರುತ್ತದೆ. ನ್ಯಾಷನಲ್ ಕ್ರೈಮ್ ರೆಕಾಡ್ರ್ಸ ಬ್ಯೂರೋ ಆಫ್ ಇಂಡಿಯಾದ ವರದಿಯ ಪ್ರಕಾರ 2014 ರಲ್ಲಿ 5,650 ರೈತರ ಆತ್ಮಹತ್ಯೆಗಳು ಆಗಿವೆ. 2005 ರಿಂದ ಪ್ರತಿ 1 ಲಕ್ಷಕ್ಕೆ 1.4 ರಿಂದ 1.8 ರಷ್ಟು ಆತ್ಮಹತ್ಯೆಗಳ ಪ್ರಮಾಣವನ್ನು ರೈತ ಸಮುದಾಯದಲ್ಲಿ ಕಾಣಬಹುದಾಗಿದೆ. ಜಗತ್ತಿನಾದ್ಯಂತ ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ 05ಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಕೂಡ ಕಳವಳಕಾರಿಯಾದ ಸಂಗತಿ. ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಲು ಮತ್ತು ಆತ್ಮಹತ್ಯೆಗಳ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ ವಿಶ್ವ ಆತ್ಮಹತ್ಯೆ ಪ್ರತಿಬಂಧಕ ದಿನಾಚರಣೆಯ ಪ್ರಯುಕ್ತವಾಗಿ 2016 ರ ಈ ವರ್ಷದ ಘೋಷಣೆ ಸಂಪರ್ಕ, ಸಂವಹನ ಮತ್ತು ಕಾಳಜಿ (Connect, Communication and Care) ಎನ್ನುವುದನ್ನು ಆಯ್ಕೆಮಾಡಿಕೊಳ್ಳಲಾಗಿತ್ತು. ಪ್ರತಿಯೊಂದು ಆತ್ಮಹತ್ಯೆಯು ನಿಜಕ್ಕೂ ದುರಂತವೇ ಸರಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಅಂದಾಜು 8 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಯಿಂದ ಆಗುವ ಸಾವಿನ ಪ್ರಮಾಣದ ಸಂಖ್ಯೆ ಇತರ ಕಾರಣಗಳಿಂದ ಸಾಯುವ ಪ್ರಮಾಣದ ಸಂಖ್ಯೆಗಿಂತ ಹೆಚ್ಚು. ಆತ್ಮಹತ್ಯೆಗೆ ಕಾರಣವಾಗುವ ಅಂಶಗಳು ಮತ್ತು ಇದರ ತಡೆಗಟ್ಟುವಿಕೆ ಸಂಕೀರ್ಣವಾಗಿದ್ದು, ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆತ್ಮಹತ್ಯೆ ಘಟನೆಯು ವ್ಯಕ್ತಿಗಳ ಮೇಲೆ, ಕುಟುಂಬದ ಮೇಲೆ ಮತ್ತು ಸಮುದಾಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಪ್ರತಿ ವರ್ಷ ವಿಶ್ವದ 15-29 ವರ್ಷ ವಯೋಮಾನದವರಲ್ಲಿ ಆತ್ಮಹತ್ಯೆಗಳು ಹೆಚ್ಚು ಪ್ರಮಾಣದಲ್ಲಿ ಆಗುತ್ತಿರುವುದು ಶೋಚನೀಯ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 15-29 ವರ್ಷ ವಯೋಮಾನದವರಲ್ಲಿ ಸಾವಿಗೆ ಕಾರಣವಾಗುವ ಅಂಶಗಳಲ್ಲಿ ಆತ್ಮಹತ್ಯೆಯು 2ನೇ ಸ್ಥಾನವನ್ನು ಹೊಂದಿದೆ. ಈ ಆತ್ಮಹತ್ಯೆ ಪ್ರಮಾಣದ ಸಂಖ್ಯೆಗಳು ಕೆಲವು ರಾಷ್ಟ್ರಗಳಲ್ಲಿ ಸ್ವಲ್ಪ ವ್ಯತ್ಯಾಸವನ್ನು ಭಿನ್ನವಾಗಿ ಕಾಣಬಹುದು ಅಷ್ಟೆ. ಜಗತ್ತಿನ ಎಲ್ಲ ಭಾಗಗಳಲ್ಲಿ ಆತ್ಮಹತ್ಯೆಗಳು ನಡೆಯುತ್ತಿದ್ದು, ಆತ್ಮಹತ್ಯೆಯು ಇಂದು ಜಗತ್ತಿನ ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಹೆಚ್ಚು ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ಅಂತರಾಷ್ಟ್ರೀಯ ಆತ್ಮಹತ್ಯೆ ಪ್ರತಿಬಂಧಕ ಸಂಘವು ಈ ಬಾರಿಯ ಆಚರಣೆಯಲ್ಲಿ ಸಂಪರ್ಕ, ಸಂವಹನ ಮತ್ತು ಕಾಳಜಿ ಎನ್ನುವ ಮೂರು ಮುಖ್ಯ ಅಂಶಗಳನ್ನು ಅಳವಡಿಸಿಕೊಂಡಿದೆ. ಆತ್ಮಹತ್ಯೆಗೆ ಕಾರಣಗಳು: ವ್ಯಕ್ತಿಗಳು ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇನು?, ಇದಕ್ಕೆ ಬಡತನ, ನಿರುದ್ಯೋಗ, ಮಾನಸಿಕ ಕಾಯಿಲೆಗಳು, ಮದ್ಯ ಹಾಗೂ ಮಾದಕ ವಸ್ತುಗಳು, ಹಠಾತ್ತ ಪ್ರವೃತ್ತಿಗಳು, ಹಣಕಾಸಿನ ತೊಂದರೆಗಳು, ಸೋಲಿನ ಆಘಾತಗಳು, ಶೋಷಣೆ, ಹಿಂಸೆ ಮತ್ತು ಇತರ ಅಂಶಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳು ಆದರೂ ಸಹ, ನಿಖರವಾಗಿ ಮತ್ತು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ದುರ್ಬಲ ಗುಂಪಿನ ವರ್ಗಕ್ಕೆ ಸೇರಿದವರಲ್ಲಿ ಸಮುದಾಯದಲ್ಲಿನ, ಪರಿಸರದ ಒತ್ತಡಗಳೂ ಹೆಚ್ಚಾದಾಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ. ಆದರೂ ಕೂಡ, ಕೆಲವು ಸಂಶೋಧನೆಗಳು ಮಾನಸಿಕ ಕಾಯಿಲೆಗಳಿಗೂ ಮತ್ತು ಆತ್ಮಹತ್ಯೆಗೂ ಸಂಬಂಧವಿದೆ ಎಂದು ಹೇಳುತ್ತವೆ. ಆತ್ಮಹತ್ಯೆ ವರ್ತನೆ ಒಂದು ಸಂಕೀರ್ಣ ವಿದ್ಯಮಾನವಾಗಿದ್ದು, ಆತ್ಮಹತ್ಯೆ ಪ್ರಕರಣಗಳು ಹಲವಾರು ಅಂಶಗಳಿಂದ ಪ್ರಭಾವ ಬೀರಲ್ಪಡುತ್ತವೆ. ಅವುಗಳು, ವೈಯಕ್ತಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ, ಜೈವಿಕವಾಗಿ ಅಥವಾ ಪರಿಸರ ಅಂಶಗಳಿಂದಲೂ ಕೂಡ ಆತ್ಮಹತ್ಯೆಗಳು ನಡೆಯತ್ತವೆ ಎನ್ನುವ ವಿಷಯವನ್ನು ಭಾಗಶಃ ಒಪ್ಪುವ ವಿಚಾರವಾಗಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮತ್ತು ಸಂಕೀರ್ಣ ಪರಿಸ್ಥಿಗಳನ್ನು ಎದುರಿಸುವಲ್ಲಿ ಮತ್ತು ಸಹಾಯವನ್ನು ಪಡೆದುಕೊಳ್ಳುವಲ್ಲಿ ಆಗುವ ವಿಫಲತೆಗಳು, ನಿರಂತರ ಶೋಷಣೆ, ಬಾಲ್ಯದಲ್ಲಿ ಆಗುವ ತೀವ್ರತೆರನಾದ ಶೋಷಣೆಗಳು, ಅಲ್ಪ ಮತ್ತು ತೀವ್ರತೆರನಾದ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಆಗುವ ವಿಫಲತೆಗಳು ಆತ್ಮಹತ್ಯೆ ಮಾಡಿಕೊಳ್ಳಲು ಆಗುವ ಕಾರಣಗಳು ಎಂದು ಕೆಲವು ಸಂಶೋಧನೆಗಳು ತಿಳಿಸುತ್ತವೆ. ರೈತರ ಆತ್ಮಹತ್ಯೆಗೆ ಕಾರಣಗಳು: ಹಲವು ವರ್ಷಗಳಿಂದ ಆಗುತ್ತಿರುವ ರೈತರ ಆತ್ಮಹತ್ಯೆಗಳನ್ನು ಅವಲೋಕಿಸಿದಾಗ ರೈತರ ಆತ್ಮಹತ್ಯೆಗಳು ಹಲವು ಅಂಶಗಳನ್ನು ಒಳಗೊಂಡಿದೆ. ಮುಖ್ಯವಾಗಿ, ಹಣಕಾಸಿನ ಸಮಸ್ಯೆಗಳು, ಸಾಲ ಭಾದೆ, ಲೇವಾದೇವಿದಾರರ ಕಿರುಕುಳಗಳು, ಒತ್ತಡಗಳು, ದುಷ್ಚಟಗಳು, ಮಧ್ಯ ಹಾಗೂ ಮಾದಕ ವಸ್ತುಗಳ ಚಟಕ್ಕೆ ಒಳಗಾಗುವುದರಿಂದ ರೈತರ ಆತ್ಮಹತ್ಯೆಗಳು ಆಗುತ್ತಿವೆ. ಭಾರತ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಪ್ ಸೊಷಿಯಲ್ ಸೈನ್ಸ್ ಒಂದು ಸಂಶೋಧನೆ ನಡೆಸಿದ್ದು, ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣಗಳ ಬಗ್ಗೆ ಪ್ರಸ್ತಾಪಿಸಲಾಯಿತು. ಪ್ರಮುಖವಾಗಿ ಪದೇ ಪದೇ ಆಗುವ ಬೆಳೆ ನಷ್ಟಗಳು, ಕೃಷಿ ನಡೆಸಲು ಬೇಕಾದ ಅವಶ್ಯಕ ಹಣಕಾಸನ್ನು ನಿಭಾಯಿಸುವಲ್ಲಿ ಅಸಾಮರ್ಥ್ಯತೆ ಮತ್ತು ಸಾಲಗಳು ಆಗಿರುತ್ತವೆ ಎಂದು ಪ್ರಸ್ತಾಪಿಸಿದೆ. ಪ್ರೊ.ಸಿದ್ದಾರ್ಥ ಎನ್.ಎಮ್ ಇವರ ಪ್ರಕಾರ ರೈತರ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳೆಂದರೆ, ಹೆಚ್ಚುತ್ತಿರುವ ದರಗಳು ಹಾಗೂ ರಸಾಯನಿಕ ಗೊಬ್ಬರಗಳ ದರಗಳಲ್ಲಿ ಏರಿಕೆ ಮತ್ತು ರೈತರು ಬೆಳೆದ ಪದಾರ್ಥಗಳು ಸೂಕ್ತ ಬೆಲೆ ಇಲ್ಲದಿರುವುದು. ರೈತರ ಹಣಕಾಸಿನ ಒತ್ತಡಗಳು; ಏರುತ್ತಿರುವ ಕೃಷಿ ಸಲಕರಣೆಗಳ ಬೆಲೆಗಳು ರೈತರಲ್ಲಿ ಒತ್ತಡಗಳನ್ನು ಹೆಚ್ಚುವಂತೆ ಮಾಡಿವೆ. ರೈತರು ವೈಜ್ಞಾನಿಕವಾಗಿ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳದೇ ಇರುವುದು. ರೈತರಲ್ಲಿ ಇರುವ ಮನೋತೊಂದರೆಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಇರುವುದು; ಇದು ಮಾನಸಿಕ ಅಸ್ವಸ್ಥತೆಗೆ ಇರುವ ಕಳಂಕದ ಪರಿಣಾಮವಾಗಿ ಮನೋವೈದ್ಯರ ಬಳಿ ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಇರುವುದರಿಂದ ರೈತರ ಆತ್ಮಹತ್ಯೆಗಳು ಆಗುತ್ತವೆ. ಖಿನ್ನತೆ; ಕೃಷಿಕರು ಬಳಸುವ ರಾಸಯನಿಕ ಗೊಬ್ಬರಗಳು, ಔಷಧಗಳ ಪರಿಣಾಮದಿಂದ ರೈತರು ಕೆಲವೊಂದು ಬಾರಿ ಮನೋಭಾವನೆಗೆ ಸಂಬಂಧಿಸಿದ ಕಾಯಿಲೆಗಳು (Mood Disorders) ಬರುವ ಗಂಡಾಂತರಗಳು ಇದ್ದು, ಇದರಿಂದ ರೈತರ ಆತ್ಮಹತ್ಯೆಗಳು ಆಗುತ್ತವೆ. ಅಗತ್ಯ ನೀರಿನ ಕೊರತೆ; ಮಳೆಯ ಕೊರತೆಯಿಂದ, ಅಂತರ್ಜಲ ಕುಸಿತದ ಪರಿಣಾಮವಾಗಿ ರೈತರು ಸಮಯಕ್ಕೆ ಸರಿಯಾಗಿ ಬೆಳೆಯನ್ನು ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ, ರೈತರು ಬೆಳೆಗಳಿಗೆ ಹೂಡಿಕೆ ಮಾಡಿದ ಹಣ ನಷ್ಟವಾಗಿ ರೈತರನ್ನು ಖಿನ್ನತೆಯಿಂದ ಬಳಲುವಂತರನ್ನಾಗಿ ಮಾಡುತ್ತದೆ. ಅಗತ್ಯ ವಿದ್ಯುತ್ ಕೊರತೆ; ರೈತರು ಬೆಳೆಗಳನ್ನು ಬೆಳೆಯವುದಕ್ಕಾಗಿ ಪಂಪ್ಸೆಟ್ಗಳನ್ನು ಅಳವಡಿಸಿಕೊಂಡಿರುತ್ತಾರೆ. ಸಮಯಕ್ಕೆ ಸರಿಯಾಗಿ ವಿದ್ಯುತ್ ಬರದೇ ಇರುವುದರಿಂದ ಬೆಳೆಗಳು ನೀರಿಲ್ಲದೇ ಒಣಗಿ ಹೋಗುತ್ತವೆ. ರೈತರಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸುವಲ್ಲಿ ಆಗುವ ತೊಂದರೆಗಳು ರೈತರ ಆತ್ಮವಿಶ್ವಾಸವನ್ನು ಕುಗ್ಗುವಂತೆ ಮಾಡುತ್ತವೆ. ಇಂತಹ ಅನೇಕ ಕಾರಣಗಳಿಂದಾಗಿ ಇಂದು ರೈತರ ಆತ್ಮಹತ್ಯೆಗಳನ್ನು ಕಾಣುತ್ತಿದ್ದೇವೆ. ವ್ಯಕ್ತಿಗಳು ಆತ್ಮಹತ್ಯೆ ಯೋಚನೆಗಳಿಂದ ಹೇಗೆ ಹೊರಬರಬೇಕು ಎಂದು ವೈದ್ಯರಿಂದ ಸಲಹೆ ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆಯಲು ಇಂದಿಗೂ ಸಾಧ್ಯವಾಗುತ್ತಿಲ್ಲ, ಇದಕ್ಕೆ ಮಾನಸಿಕ ಕಾಯಿಲೆಗಳು ಮತ್ತು ಆತ್ಮಹತ್ಯೆಯ ಬಗ್ಗೆ ಇವರು ಕಳಂಕ (Stigma) ಕಾರಣಗಳಾಗಿದ್ದು, ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯನ್ನು ಪಡೆಯಲು ವಿಳಂಬ ಧೋರಣೆಗಳನ್ನು ಅನುಸರಿಸುತ್ತಾರೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿವಿಧ ರಾಷ್ಟ್ರಗಳೂ ಕೂಡ ಇದನ್ನು ಕಾಣಬಹುದು. ವಿಶ್ವ ಮಾನಸಿಕ ಆರೋಗ್ಯ ಕ್ರಿಯಾ ಯೋಜನೆ (2013-2020) ಯಲ್ಲಿ ಜಾಗತಿಕ ಆತ್ಮಹತ್ಯೆ ಪ್ರಮಾಣವನ್ನು ತಗ್ಗಿಸಲು ನಿರ್ಧರಿಸಲಾಗಿದೆ. 2020 ರ ವೇಳಗೆ ಜಾಗತಿಕ ಆತ್ಮಹತ್ಯೆ ಪ್ರಮಾಣವನ್ನು ಕನಿಷ್ಠ ಶೇಕಡಾ 10% ರಷ್ಟು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗ ಸಂಘ-ಸಂಸ್ಥೆಗಳು ನಿರ್ಧರಿಸಿವೆ. ಸಂಪರ್ಕ, ಸಂವಹನ ಮತ್ತು ಕಾಳಜಿ (Connect, Communication and Care) ಸಾಮಾಜಿಕ ಸಂಪರ್ಕದಿಂದ ವ್ಯಕ್ತಿಯ ಆತ್ಮಹತ್ಯೆಯನ್ನು ತಡೆಗಟ್ಟಬಹುದು. ಕುಟುಂಬಕ್ಕೆ ಬೇಕಾದ, ಪ್ರೀತಿಯ ವ್ಯಕ್ತಿಯನ್ನು ಕಳೆದುಕೊಂಡಾಗ, ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಕುಟುಂಬವು ಅಥವಾ ವ್ಯಕ್ತಿಗೆ ಮಾನಸಿಕವಾಗಿ ಅತಿಯಾದ ಬೇಸರವೆನಿಸುವುದು ಸಹಜ. ಇಂತಹ ವ್ಯಕ್ತಿಗಳ ಜೊತೆ ಸಂಪರ್ಕ ಬೆಳೆಸುವುದರಿಂದ ಅವರ ಭಾವನೆಗಳಿಗೆ ಸ್ಪಂದಿಸುವುದು ಆತ್ಮಹತ್ಯೆ ತಡಗಟ್ಟುವ ಕ್ರಮಗಳಲ್ಲಿ ಮಹತ್ವದ ವಿಷಯ. ಇಂತಹ ಸಂಪರ್ಕಗಳಿಂದ ಆತ್ಮಹತ್ಯೆಗೆ ಕಾರಣವಾಗಬಹುದಾದ ಸಂಕೀರ್ಣ ಸನ್ನಿವೇಶಗಳು ಮತ್ತು ಕಾರಣಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಇಂತಹ ವ್ಯಕ್ತಿಗಳ ಭಾವನೆಗಳ ಜೊತೆ ಸ್ಪಂದಿಸುವುದರಿಂದ ಆತ್ಮಹತ್ಯೆಯ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ವಿಶ್ವ ಆತ್ಮಹತ್ಯೆ ಪ್ರತಿಬಂಧಕ ಸಂಘವು ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ವ್ಯಕ್ತಿಗಳು, ಸಂಘಟನೆಗಳು ಮತ್ತು ಸಮುದಾಯಗಳು ಈ ನಿಟ್ಟಿನಲ್ಲಿ ಜವಾಬ್ದಾರಿಗಳನ್ನು ಹೊಂದಿವೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸುವುದರಿಂದ ಆತ್ಮಹತ್ಯೆ ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತದೆ ಎನ್ನುವುದು ವಿಶ್ವ ಆತ್ಮಹತ್ಯೆ ಪ್ರತಿಬಂಧಕ ಸಂಘದ ಸಲಹೆ. ಸಮುದಾಯದಲ್ಲಿ ಇರುವಂತಹ ಜನರು ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಂತೆ ಆತ್ಮಹತ್ಯೆಯು ಒಂದು ಆರೋಗ್ಯದ ಸಮಸ್ಯೆಯಂತೆ ಎಂದು ಭಾವಿಸಬೇಕು. ಆತ್ಮಹತ್ಯೆಗೆ ಸುಲಭವಾಗಿ ಒಳಗಾಗುವ ಜನರಿಗೆ ಸಮುದಾಯದ ಜನರನ್ನು ಸಜ್ಜುಗೊಳಿಸಿ ಯಾವುದೇ ಕಳಂಕವಿಲ್ಲದೇ ಆತ್ಮಹತ್ಯೆಗೆ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಗಳನ್ನು ಇಂದು ಮಾಡಬೇಕು ಎನ್ನುವುದು ವಿಶ್ವ ಆತ್ಮಹತ್ಯೆ ಪ್ರತಿಬಂಧಕ ಸಂಘದ ಒತ್ತಾಯ. ಪತ್ರಿಕಾ ಮತ್ತು ದೃಶ್ಯ ಮಾಧ್ಯಮದವರ ಜವಾಬ್ದಾರಿಯು ಅತಿ ಮಹತ್ವದ್ದಾಗಿದ್ದು, ಆತ್ಮಹತ್ಯೆ ಕುರಿತು ಪ್ರಕಟಣೆಗಳನ್ನು ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಸಲಹೆಗಳನ್ನು ನೀಡಿದೆ. ಸಂಪರ್ಕ ಮತ್ತು ಸಂವಹನಗಳಿಂದ ಆತ್ಮಹತ್ಯೆ ಪ್ರಮಾಣಗಳನ್ನು ತಗ್ಗಿಸಲು ಸಾಧ್ಯವಿದ್ದು, ಇದರ ಜೊತೆ ರಾಷ್ಟ್ರೀಯ ಆರೋಗ್ಯ ನೀತಿಗಳಲ್ಲಿ ಆತ್ಮಹತ್ಯೆ ತಡೆಗಟ್ಟುವಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಮತ್ತು ಆತ್ಮಹತ್ಯೆಯು ಸಾರ್ವಜನಿಕ ಆರೋಗ್ಯ ಸಮಸ್ಯೆಯೆಂದು ಪರಿಗಣಿಸಿ ಹೆಚ್ಚಿನ ಹಣಕಾಸಿನ ನೆರವನ್ನು ಆತ್ಮಹತ್ಯೆ ನಿಯಂತ್ರಿಣ ಮಾಡಲು ಅರಿವು ಕಾರ್ಯಕ್ರಮಗಳನ್ನು ಮಾಡಲು ನೀಡಬೇಕು ಎನ್ನುವುದು ವಿಶ್ವ ಆತ್ಮಹತ್ಯೆ ಪ್ರತಿಬಂಧಕ ಸಂಘದ ಅಭಿಮತ. ಈ ವರ್ಷದ ವಿಶ್ವ ಆತ್ಮಹತ್ಯೆ ಪ್ರತಿಬಂಧಕ ದಿನಾಚರಣೆಯ ಘೋಷಣೆಯಲ್ಲಿ ಆರೋಗ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ತಜ್ಞರುಗಳು ಆತ್ಮಹತ್ಯೆಯ ವಿಷಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ, ಆತ್ಮಹತ್ಯೆ ಪ್ರಮಾಣವನ್ನು ತಗ್ಗಿಸಲು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎನ್ನುವುದರ ಕುರಿತು ಆದ್ಯತೆಯನ್ನು ನೀಡಲಾಗಿದೆ. ಆತ್ಮಹತ್ಯೆಯು ಆರೋಗ್ಯದ ಸಮಸ್ಯೆಯ ಸೂಚಕ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸುವ ಹಲವು ಜನರಲ್ಲಿ ತಮ್ಮ ಉದ್ದೇಶಗಳ ಬಗ್ಗೆ, ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ನಿಖರವಾದ ಎಚ್ಚರಿಕೆಗಳನ್ನು ಅಥವಾ ಮೂನ್ಸೂಚನೆಗಳನ್ನು ನೀಡಿರುತ್ತಾರೆ. ಆತ್ಮಹತ್ಯೆ ಬಗ್ಗೆ ನೀಡುವ ಮೂನ್ಸೂಚನೆಗಳನ್ನು ಗಂಭಿರವಾಗಿ ಪರಿಗಣಿಸಿವುದು ಮುಖ್ಯವಾದ ಅಂಶವಾಗಿರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವ ಬಹುತೇಕ ಜನರು ಜೀವಿಸುವ ಮತ್ತು ಸಾಯುವ ಬಗ್ಗೆ ಗಲಿಬಿಲಿಗೆ ಒಳಗಾಗುತ್ತಾರೆ, ಮತ್ತು ಇದನ್ನು ಆತ್ಮಹತ್ಯೆ ಚಂಚಲತ್ವ ಎಂದು ಕರೆಯುತ್ತಾರೆ. ಇವರಲ್ಲಿ ಕೆಲವರಿಗೆ ಜೀವಿಸುವ ಆಸೆ ಇರುತ್ತದೆ; ಆದರೆ, ತಮ್ಮ ನೋವು ಮತ್ತು ಹಿಂಸೆಯಿಂದ ಹೊರಬರಲು ಸಾಯುವುದು ಒಂದೇ ಮಾರ್ಗ ಎಂದು ಇವರು ಭಾವಿಸುತ್ತಾರೆ. ಅವರು ತಮ್ಮೊಂದಿಗೆ ಮರಣವು ಆಟವಾಡಲಿ ಎಂದು ಜೀವವನ್ನು ಒಪ್ಪಿಸಿಬಿಡುತ್ತಾರೆ, ಮತ್ತು ತಮ್ಮನ್ನು ಉಳಿಸುವುದು ಇತರರಿಗೆ ಬಿಟ್ಟ ವಿಷಯ ಎಂದು ಕೈಚೆಲ್ಲುತ್ತಾರೆ. ಆತ್ಮಹತ್ಯೆಯಲ್ಲಿ ಕೊನೆಗೊಳ್ಳುವ ಬಹು ಸಾಮಾನ್ಯವಾದ ಮಾನಸಿಕ ಕಾಯಿಲೆ ಎಂದರೆ, ಪುನರಾವರ್ತಿತ ಕಾಯಿಲೆಯಾಗಿರುವ ಮೇಜರ್ ಡಿಪ್ರೆಶನ್ (ತೀವ್ರ ಖಿನ್ನತೆ) ಆಗಿದೆ. ಪ್ರತಿ ಬಾರಿ ಒಬ್ಬ ರೋಗಿ ಖಿನ್ನತೆಯನ್ನು ಅನುಭವಿಸಿದಾಗ, ಆತ್ಮಹತ್ಯೆ ಮಾಡಿಕೊಳ್ಳುವ ಸಂಭವ ಇರುತ್ತದೆ. ಆತ್ಮಹತ್ಯೆಯ ಮುನ್ನೆಚ್ಚರಿಕೆಯ ಸೂಚನೆಗಳು: ಆತ್ಮಹತ್ಯೆಗಳ ಪ್ರಕರಣಗಳನ್ನು ಅವಲೋಕಿಸಿದಾಗ, ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳು ಕೆಲವು ಮೂನ್ಸೂಚನೆಗಳನ್ನು ನೀಡಿರುತ್ತಾರೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ತಕ್ಷಣ ಕಾರ್ಯಪ್ರವೃತ್ತರಾದಾಗ ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗೆ ಸಹಾಯ ಮಾಡಬಹುದು. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳು ಆತ್ಮಹತ್ಯೆಯ ಬಗ್ಗೆ ಮಾತನಾಡುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಯೋಜನೆ ಮಾಡುವುದು, ಪದೇ ಪದೇ ನಿಸ್ಸಹಾಯಕತೆ ಬಗ್ಗೆ ಅಭಿಪ್ರಾಯಗಳನ್ನು ಹೇಳುವುದು, ಕುಟುಂಬ ಮತ್ತು ಸ್ನೇಹಿತರೊಂದಿಗಿನ ಸಂಪರ್ಕದಿಂದ ದೂರವಿರುವುದು, ಯಾವಾಗಲೂ ಒಬ್ಬರೇ ಇರುವುದು, ಏಕಾಗ್ರತೆಯ ಕೊರತೆಯನ್ನು ಹೊಂದುವುದು ಮತ್ತು ಅತಿಯಾದ ಕೀಳರಿಮೆಯನ್ನು ಬೇಳೆಸಿಕೊಂಡಿರುವುದು ಈ ರೀತಿಯ ಲಕ್ಷಣಗಳನ್ನು ಹೊಂದಿರುತ್ತಾರೆ. ಆತ್ಮಹತ್ಯೆ ಯೋಚನೆಗಳನ್ನು ಹೇಗೆ ಬದಲಿಸಿಕೊಳ್ಳಬೇಕು? ಆತ್ಮಹತ್ಯೆ ಯೋಚನೆಗಳು ಬಂದರೆ ತಡ ಮಾಡದೇ ಕುಟುಂಬದ/ಸ್ನೇಹಿತರ/ಮನೋವೈದ್ಯರ ಸಹಾಯವನ್ನು ಪಡೆದುಕೊಳ್ಳುವುದು ಸೂಕ್ತ. ಆತ್ಮಹತ್ಯೆ ಯೋಚನೆಗಳ ಬಗ್ಗೆ ಇನ್ನೊಬ್ಬರೊಂದಿಗೆ ಹೇಳಿಕೊಳ್ಳುವುದು, ಆತ್ಮಹತ್ಯೆಗೆ ಚಿಕಿತ್ಸೆ ಎಂದು ಅರಿತುಕೊಂಡು ವೈದ್ಯರನ್ನು/ಮನೋವೈದ್ಯರನ್ನು ತಕ್ಷಣ ಭೇಟಿಯಾಗುವುದರಿಂದ ಆತ್ಮಹತ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವ ತೀವ್ರವಾದ ಯೋಚನೆಗಳು ದೂರದ ಪ್ರದೇಶಗಳಲ್ಲಿರುವ ಅಥವಾ ಗ್ರಾಮಾಂತರ ಪ್ರದೇಶಗಳಲ್ಲಿರುವ ವ್ಯಕ್ತಿಗಳಲ್ಲಿ ಬಂದರೆ, ಅಂತಹವರು ತಕ್ಷಣ ವೈದ್ಯರ ಸಂಪರ್ಕವನ್ನು ಪಡೆಯಲು ಆಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಆರೋಗ್ಯ ಸಹಾಯವಾಣಿ (ಕರ್ನಾಟಕ ಸರಕಾರದ 104 ಗೆ ಕರೆಮಾಡಿ ಸಹಾಯ ಪಡೆದುಕೊಳ್ಳುವುದು) ಯ ಸಿಬ್ಬಂದಿಯ ಸಹಾಯವನ್ನು ಪಡೆದುಕೊಳ್ಳಬಹುದು. ಸಮೀಪದ ಪ್ರದೇಶಗಳಲ್ಲಿ ಲಭ್ಯವಿರುವ ಮನೋವೈದ್ಯರ ಬಳಿ ಸೂಕ್ತ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆ ಪಡೆದುಕೊಳ್ಳಬಹುದು. ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಾದ ಡಿಮ್ಹಾನ್ಸ್ ಧಾರವಾಡ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಹಾಗೂ ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಮನೋವೈದ್ಯರು ಲಭ್ಯವಿದ್ದು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಆತ್ಮಹತ್ಯೆ ಯೋಚನೆಗಳು ಬಂದಾಗ ಯಾವ ವೈದ್ಯರು ಲಭ್ಯವಿಲ್ಲದೇ ಹೋದ ಪಕ್ಷದಲ್ಲಿ ಹತ್ತಿರವಿರುವ ಸಂಬಂಧಿಕರು ಅಥವಾ ಸ್ನೇಹಿತರ ಬಳಿ ಭಾವನೆಗಳನ್ನು ಹಂಚಿಕೊಳ್ಳಬೇಕು. ಕೆಲವು ನಿಮಿಷಗಳು ಜೀವನದ ದಾರಿಯನ್ನು ಬದಲಿಸಬಲ್ಲವು. ಭವಿಷ್ಯದ ಬಗ್ಗೆ ಆಶಾವಾದಿಯಾಗಲು ಪ್ರಯತ್ನಿಸುವುದರಿಂದ ಆತ್ಮಹತ್ಯೆ ಯೋಚನೆಗಳು ಬರುವುದಿಲ್ಲ. ಆತ್ಮಹತ್ಯೆಗೆ ನಿರ್ಧರಿಸಿದ ವ್ಯಕ್ತಿಗೆ ಹೇಗೆ ಸಹಾಯ ಮಾಡುವುದು: ಆತ್ಮಹತ್ಯೆಗೆ ನಿರ್ಧರಿಸಿದ ವ್ಯಕ್ತಿಯ ಭಾವನೆಗಳಿಗೆ ಸ್ಪಂದಿಸುವುದು ಬಹಳ ಮುಖ್ಯ. ತಕ್ಷಣ ಯಾವುದೇ ಸಲಹೆಗಳನ್ನು ನೀಡದೇ, ಅವನು/ಅವಳು ಒಬ್ಬಂಟಿಗರಲ್ಲ ಎಂದು ಮನವರಿಕೆ ಮಾಡಿಕೊಡಬೇಕು. ಆತ್ಮಹತ್ಯೆಗೆ ನಿರ್ಧರಿಸಿದ ವ್ಯಕ್ತಿಯು ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಸಮುದಾಯಕ್ಕೆ ಮಹತ್ವದ ವ್ಯಕ್ತಿಯೆಂದು ಮನವರಿಕೆ ಮಾಡಿಕೊಡಬೇಕು. ತದನಂತರ, ವೈದ್ಯರನ್ನು ಸಂಪರ್ಕಿಸಲು ಸಹಾಯ ಮಾಡಬೇಕು ಮತ್ತು ಅವನ ಕುಟುಂಬದ ಸದಸ್ಯರ ನೆರವನ್ನು ಪಡೆದುಕೊಳ್ಳಲು ಸಹಾಯ ಮಾಡಬೇಕು. ಇದು ವ್ಯಕ್ತಿಯ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಆತ್ಮಹತ್ಯೆ ಯೋಚನೆಗಳು ಬಂದ ವ್ಯಕ್ತಿಯು ತನ್ನಷ್ಟಕ್ಕೆ ತಾನೆ ಸಹಾಯ ಮಾಡಿಕೊಳ್ಳುವುದು ಬಹಳ ಮುಖ್ಯ: ಮಾನಸಿಕ ಆರೋಗ್ಯದ ಸಮಸ್ಯೆಯಿದ್ದ ಪಕ್ಷದಲ್ಲಿ ಅದನ್ನು ಒಪ್ಪಿಕೊಂಡು ಮನೋವೈದ್ಯರಲ್ಲಿ ಚಿಕಿತ್ಸೆ ಪಡೆಯಲು ಯಾವುದೇ ಹಿಂಜರಿಕೆ ಅಥವಾ ಮುಜಗರಕ್ಕೆ ಒಳಗಾಗದೇ ಒಪ್ಪಿಕೊಳ್ಳುವುದು. ಆತ್ಮಹತ್ಯೆ ಯೋಚನೆಗಳನ್ನು ನಿಲ್ಲಿಸಲು ಒಬ್ಬರಿಂದ ಸಾಧ್ಯವಾಗದು ಎಂದು ಅರಿತುಕೊಳ್ಳುವುದು ಮತ್ತು ಕುಟುಂಬದ ಅಥವಾ ಸ್ನೇಹಿತರೊಂದಿಗೆ ಚರ್ಚಿಸಿ ಆತ್ಮಹತ್ಯೆ ಯೋಚನೆಗಳಿಂದ ಹೊರ ಬರಲು ಪರಿಹಾರವನ್ನು ಕಂಡುಕೊಳ್ಳುವುದು. ತನ್ನ ಬಗ್ಗೆ ತಾನೇ ನಿಂದಿಸಿಕೊಳ್ಳುವುದನ್ನು ನಿಲ್ಲಿಸುವುದು. ಸ್ನೇಹಿತರೊಂದಿಗೆ ಆತ್ಮಹತ್ಯೆ ವಿಷಯವನ್ನು ಗುಪ್ತವಾಗಿ ಇಡುವಂತೆ ಹೇಳಬಾರದು. ಇದರ ಬದಲಾಗಿ ಪರಿಹಾರದ ಬಗ್ಗೆ ಸಹಾಯವನ್ನು ಪಡೆದುಕೊಳ್ಳಬೇಕು. ಜೀವನ ಅಮೂಲ್ಯವಾಗಿದ್ದು ಇದನ್ನು ಕಳೆದುಕೊಂಡರೆ ಮತ್ತೇ ಪಡೆದುಕೊಳ್ಳಲಾಗದು ಎಂಬುದನ್ನು ಯೋಚಿಸಿಬೇಕು. ಜೀವವು ಉಳಿಸಿಕೊಂಡಲ್ಲಿ ಒಳ್ಳೆಯ ದಿನಗಳು ಮತ್ತು ಸಂತೋಷದ ಕ್ಷಣಗಳು ಬರುತ್ತವೆ ಎನ್ನುವುದನ್ನು ನಂಬಬೇಕು. ಆತ್ಮಹತ್ಯೆ ತಡೆಗಟ್ಟುವಲ್ಲಿ ಪ್ರಸ್ತುತ ಸ್ಥಿತಿ: ಹಿಂದಿನ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಇಂದು ಆತ್ಮಹತ್ಯೆಯ ಬಗ್ಗೆ ಇರುವ ಧೋರಣೆಗಳಲ್ಲಿ ಸ್ವಲ್ಪ ಬದಲಾವಣೆಗಳು ಆಗಿವೆ ಎಂದು ಹೇಳಬಹುದು. ಜನರು ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಹೆಚ್ಚಾಗುತ್ತಿದೆ. ವಿವಿಧ ದೇಶಗಳಲ್ಲಿ ರಾಷ್ಟ್ರೀಯ ಆರೋಗ್ಯ ನೀತಿಗಳಲ್ಲಿ ಆತ್ಮಹತ್ಯೆ ತಡೆಗಟ್ಟಲು ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಆತ್ಮಹತ್ಯೆಗೆ ಕಾರಣಗಳನ್ನು ನಿಖರವಾಗಿ ತಿಳಿದುಕೊಳ್ಳಲು ಸಂಶೋಧನಾ ಕೇಂದ್ರಗಳನ್ನು ಬೇರೆ ಬೇರೆ ದೇಶಗಳಲ್ಲಿ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕೆಲವು ದೇಶಗಳಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಶೈಕ್ಷಣಿಕ ಕೋರ್ಸಗಳನ್ನು ಪ್ರಾರಂಭಿಸಲಾಗಿದೆ. ಆತ್ಮಹತ್ಯೆಗೆ ಸಹಾಯವಾಣಿ, ತಜ್ಞರಿಂದ ಆಪ್ತಸಮಾಲೋಚನೆ ಮಾಡುವುದು, ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳಲ್ಲಿ ಖಿನ್ನತೆ ಕಾಯಿಲೆಗೆ ಪರಿಣಾಮಕಾರಿ ಔಷಧಗಳನ್ನು ಕೊಡುವುದು ಮತ್ತು ವಿದ್ಯುತ್ ಕಂಪನ ಚಿಕಿತ್ಸೆ ಕೊಡುವ ವೈಜ್ಞಾನಿಕ ಪದ್ಧತಿಗಳನ್ನು ಇಂದು ಕಾಣಬಹುದು. ವಿವಿಧ ಸರಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕೂಡ ಆತ್ಮಹತ್ಯೆಯ ಪ್ರಮಾಣವನ್ನು ತಗ್ಗಿಸಲು ನಿರಂತರವಾಗಿ ಶ್ರಮಿಸುತ್ತಿವೆ. ಆರೋಗ್ಯ ಕ್ಷೇತ್ರಗಳಲ್ಲಿ ಆತ್ಮಹತ್ಯೆಗಳ ಪ್ರಕರಣಗಳನ್ನು ತಡೆಗಟ್ಟಲು ಅನೇಕ ತಜ್ಞರು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರಲ್ಲಿ ಆತ್ಮಹತ್ಯೆಗಳನ್ನು ತಡೆಗಟ್ಟುವ ಕುರಿತು ಅರಿವು ಮೂಡಿಸಲು ವಿವಿಧ ಸರಕಾರಿ/ಸರಕಾರೇತರ ಸಂಸ್ಥೆಗಳೊಂದಿಗೆ ಆತ್ಮಹತ್ಯೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಕೇವಲ ಆರ್ಥಿಕ ಸಮಸ್ಯೆಗಳು ನಿವಾರಣೆ ಆದರೆ ಆತ್ಮಹತ್ಯೆ ಪ್ರಕರಣಗಳು ಆಗುವುದಿಲ್ಲ ಎನ್ನುವ ತೀರ್ಮಾನ ಬರಲು ಸಾಧ್ಯವಿಲ್ಲ. ಇಂದು ಆತ್ಮಹತ್ಯೆಯನ್ನು ತಡೆಗಟ್ಟುವುದು ಒಂದು ಜಾಗತಿಕ ಸವಾಲು ಆಗಿ ನಮ್ಮ ಮುಂದೆ ನಿಂತಿದೆ. ಇದಕ್ಕೆ ಸಾರ್ವಜನಿಕರಲ್ಲಿ ಆತ್ಮಹತ್ಯೆಯ ಬಗ್ಗೆ ಅರಿವನ್ನು ಮೂಡಿಸುವುದರಿಂದ ಸ್ವಲ್ಪ ಮಟ್ಟಿಗಾದರೂ ಆತ್ಮಹತ್ಯೆಯ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಗಬಹುದು ಎಂದು ತಿಳಿದುಕೊಳ್ಳಬೇಕು. ವಿವಿಧ ಸರಕಾರದ ಯೋಜನೆಗಳು ಮತ್ತು ನೀತಿಗಳು: ಭಾರತ ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸರಕಾರದ ನೀತಿಗಳಲ್ಲಿ, ವಿವಿಧ ಯೋಜನೆಗಳನ್ನು ಜಾರಿಗೆ ತರುವಲ್ಲಿ, ರೈತರ ಆರೋಗ್ಯ ಸುಧಾರಿಸುವಲ್ಲಿ ವಿವಿಧ ರಾಜ್ಯಗಳಲ್ಲಿ ಸರಕಾರಗಳು ಕೃಷಿ ಕ್ಷೇತ್ರದಲ್ಲಿ ಹೆಸರನ್ನು ಗಳಿಸಿರುವ ವ್ಯಕ್ತಿಗಳ ಸಲಹೆಗಳನ್ನು ಪಡೆದು ರೈತರಿಗಾಗಿಯೇ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವುದಕ್ಕಾಗಿ ವಿವಿಧ ರಾಜ್ಯಗಳಲ್ಲಿ ಉಚಿತ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ರಾಜ್ಯ ಸರಕಾರದ, ಕೃಷಿ ಇಲಾಖೆಯ ವತಿಯಿಂದ ಉಚಿತ ಸಹಾಯವಾಣಿ ಕರೆಯಾದ 1800-425-3553, ಕೃಷಿ ವಿಶ್ವವಿದ್ಯಾಲಯ, ಧಾರವಾಡ ವತಿಯಿಂದ ಪ್ರಾರಂಭಿಸಿದ 080-23625411. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ವತಿಯಿಂದ ಉಚಿತ ಸಹಾಯವಾಣಿ ನಂಬರ್ 1551 ನ್ನು ಪ್ರಾರಂಭಿಸಲಾಗಿತ್ತು. ತದನಂತರದಲ್ಲಿ, 1551 ಬದಲಾಗಿ 1800-180-1551 ನಂಬರನ್ನು ಪ್ರಾರಂಭಿಸಲಾಯಿತು. 2014 ರಲ್ಲಿ ಬೇಯರ್ ಎನ್ನುವ ಕೃಷಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಉದ್ಯಮಶೀಲ ಸಂಸ್ಥೆ (In 2014, Bayer launched a national helpline for farmers) ಯು 1800-200-6321 ಉಚಿತ ಸಹಾಯವಾಣಿಯನ್ನು ಪ್ರಾರಂಭಿಸಿತು. ಇದು ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಇದರ ಸೇವೆ ಲಭ್ಯವಿದ್ದು, ರೈತರ ಕರೆಗಳಿಗೆ ಸ್ಥಳೀಯ ಕೃಷಿ ತಜ್ಞರು ಉತ್ತರಗಳನ್ನು ನೀಡುತ್ತಾರೆ. ಇದು ಬೆಳಗ್ಗೆ 9.00 ಗಂಟೆಯಿಂದ ಸಾಯಂಕಾಲ 06.00 ಗಂಟೆಯವರಗೆ ಕಾರ್ಯನಿರ್ವಹಿಸುತ್ತದೆ. ಭಾರತದ ಅಗ್ರಿಕಲ್ಚರಲ್ ಇನ್ಶ್ಯೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಇದು ಕೂಡ ಉಚಿತ ಸಹಾಯವಾಣಿ ನಂಬರ್ 1800-103-0061 ಪ್ರಾರಂಭಿಸಿದ್ದು, ರೈತರಿಗೆ ಬೆಳೆ ವಿಮೆ ಮಾಹಿತಿಯನ್ನು ನೀಡುವಲ್ಲಿ ಉಪಯುಕ್ತವಾಗಿದೆ. ರಾಜ್ಯ ಸರಕಾರದ ಆರೋಗ್ಯ ಸಹಾಯವಾಣಿ 104 ಗೆ ಕರೆಮಾಡಿ, ದೈಹಿಕ ಸಮಸ್ಯೆಗಳ ಬಗ್ಗೆ ಮತ್ತು ಲಭ್ಯವಿರುವ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು. ಆತ್ಮಹತ್ಯೆ ಯೋಚನೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಆಪ್ತಸಮಾಲೋಚನೆ ಮಾಡುವರು ಮತ್ತು ಚಿಕಿತ್ಸೆ ಅವಶ್ಯಕವಿದ್ದಲ್ಲಿ ಮನೋವೈದ್ಯರನ್ನು ಸಂಪರ್ಕಿಸಲು ತಕ್ಷಣ ಸಲಹೆ ನೀಡುತ್ತಾರೆ. ಡಿಮ್ಹಾನ್ಸ್, ಧಾರವಾಡ ಮತ್ತು ಕೃಷಿ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಪ್ರಾರಂಭಿಸಿದ ರೈತ ಚೇತನ ಉಚಿತ ಸಹಾಯವಾಣಿ 1800-425-51150 ನಂಬರ್ ಇದಾಗಿದ್ದು, ಈ ನಂಬರ್ಗೆ ಕರೆಮಾಡಿದಲ್ಲಿ ರೈತರಿಗೆ ಬೆಳೆಗಳ ಬಗ್ಗೆ, ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಮತ್ತು ಇತರ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ರೈತರ ಆತ್ಮಹತ್ಯೆಗಳನ್ನು ತಗ್ಗಿಸುವಲ್ಲಿ ಸಹಾಯವಾಣಿಗಳು: ಕರ್ನಾಟಕ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಥಮಬಾರಿಗೆ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ ಸಂಯುಕ್ತಾಶ್ರಯದಲ್ಲಿ ರೈತ ಚೇತನ ಸಹಾಯವಾಣಿ ಎನ್ನುವ ಉಚಿತ ಸಹಾಯವಾಣಿಯನ್ನು ಪ್ರಾರಂಭಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ರೈತರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ರೈತರ ಚೇತನ ಎನ್ನುವ ಒಂದು ನೂತನ ಯೋಜನೆಯನ್ನು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಈ ವಿನೂತನೆ ಯೋಜನೆಗೆ ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಒಂದು ಪ್ರತ್ಯೆಕ ಘಟಕವನ್ನು ಅನ್ನದಾತರಿಗೋಸ್ಕರ ತೆರೆಯಲಾಗಿದೆ. ಹಣಕಾಸಿನ ತೊಂದರೆಗಳು, ಸಾಲ, ಸಾಲಗಾರರಿಂದ ಮಾನಸಿಕ ಕಿರುಕುಳ, ಅತಿಯಾದ ಒತ್ತಡ, ನಿದ್ರಾಹೀನತೆ, ಬೆಳೆ ನಾಶ, ಇನ್ನಿತರ ಕಾರಣಗಳು ರೈತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕರ್ನಾಟಕ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ದೃಷ್ಠಿಕೋನದಿಂದ ಪ್ರಾರಂಭಿಸಿರುವ ಈ ಯೋಜನೆಯಲ್ಲಿ ಈ ಕೆಳಗಿನ ಸೌಲಭ್ಯಗಳು ಉಚಿತವಾಗಿ ದೊರೆಯುತ್ತವೆ. (ರೈತ ಚೇತನ ಉಚಿತ ಸಹಾಯವಾಣಿ ನಂಬರ್: 1800-425-51150) ಈ ಯೋಜನೆಯಲ್ಲಿ ರೈತರಿಗೆ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡುವುದು, ರೈತರಲ್ಲಿ ಬೇರೆ ಬೇರೆ ಬೇಳೆಗಳನ್ನು ಬೆಳೆಯುವಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸುವುದರ ಬಗ್ಗೆ ಅರಿವನ್ನು ಮೂಡಿಸುವುದು, ಆಪ್ತ ಸಮಾಲೋಚನೆ, ಖಿನ್ನತೆ, ಅತಿಯಾದ ಒತ್ತಡ, ಮಧ್ಯವ್ಯಸನ ಚಟಗಳಿಗೆ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡುವುದು, ಹೊಂದಾಣಿಕೆ ಸಮಸ್ಯೆ, ರೈತರ ಆತ್ಮಹತ್ಯೆ ಯೋಚನೆಗಳಿಗೆ ಮನೋವೈದ್ಯರಿಂದ ಆಪ್ತಸಮಾಲೋಚನೆ ಒದಗಿಸುವುದು ಈ ರೀತಿಯ ಉದ್ದೇಶಗಳನ್ನು ಒಳಗೊಂಡಿದೆ. ರೈತ ಚೇತನ ಸಹಾಯವಾಣಿಯ ಪ್ರಯೋಜನಗಳು ಮತ್ತು ಅನುಭವಗಳು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಸಹಯೋಗದೊಂದಿಗೆ ದಿನಾಂಕ 23/07/15 ರಂದು ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭಿಸದ ನಂತರ ಹಲವು ಪ್ರಯೋಜನೆಗಳನ್ನು ನಾಡಿನ ಅನೇಕ ರೈತರು ಪಡೆದುಕೊಂಡಿರುವರು. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾರಂಭವಾದ ಈ ಯೋಜನೆಯಲ್ಲಿ ಆಪ್ತಸಮಾಲೋಚನೆ, ಉಚಿತ ಸಹಾಯವಾಣಿ, ವಿವಿಧ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡುವುದು, ಸರಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು, ರೈತರ ಮಾನಸಿಕ ತೊಂದರೆಗಳಿದ್ದಲ್ಲಿ ಪರಿಣಾಮಕಾರಿ ಚಿಕಿತ್ಸೆ ಮತ್ತು ಔಷಧೋಪಚಾರ ನೀಡುವುದು, ಖಿನ್ನತೆ ಮತ್ತು ಆತ್ಮಹತ್ಯೆ ಸಮಸ್ಯೆಗಳಿಗೆ ಆಪ್ತಸಮಾಲೋಚನೆ ಒದಗಿಸುವುದು, ಮದ್ಯ ವ್ಯಸನ ಚಟಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು, ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವುದು ಪ್ರಮುಖ ಅಂಶಗಳನ್ನು ಇಟ್ಟುಕೊಳ್ಳಲಾಗಿತ್ತು. ಈ ವಿನೂತನ ಯೋಜನೆಗೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ಆವರಣದಲ್ಲಿ ಒಂದು ಪ್ರತ್ಯೇಕ ಘಟಕವನ್ನು ಅನ್ನದಾತರಿಗೋಸ್ಕರ ತೆರೆಯಲಾಗಿದ್ದು, ರೈತ ಚೇತನ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸುವ ಸಮಯದಲ್ಲಿ ಧಾರವಾಡದ ಜಿಲ್ಲಾಧಿಕಾರಿಗಳಾದ ಶ್ರೀ.ಪಿ.ರಾಜೇಂದ್ರ ಚೋಳನ್, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಕುಲಪತಿಗಳಾದ ಪ್ರೋ.ಡಾ.ಡಿ.ಪಿ. ಬಿರಾದಾರ, ಡಿಮ್ಹಾನ್ಸ್ ನಿರ್ದೇಶಕರಾದ ಡಾ.ರವೀಶ್ ಬಿ.ಎನ್, ವೈದ್ಯಕೀಯ ಅಧೀಕ್ಷಕರಾದ ಡಾ.ಸೋಮಶೇಖರ ಬಿಜ್ಜಳ್ ಮತ್ತು ಕೃಷಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಖಾದಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪತ್ರಿಕಾ ಮಾಧ್ಯಮ ಮಿತ್ರರನ್ನು ಆಹ್ವಾನಿಸಲಾಗಿತ್ತು. ಈ ವಿನೂತನ ಯೋಜನೆಯು ಪ್ರಾರಂಭವಾದ ದಿನದಿಂದ ಹಿಡಿದು ಅನೇಕ ರೈತರು ಉಚಿತ ದೂರವಾಣಿಗೆ ಕರೆಮಾಡಿ ವಿವಿಧ ಬೆಳೆಗಳ ಬಗ್ಗೆ, ಕುಂದು ಕೊರತೆಗಳ ಬಗ್ಗೆ ಹೇಳಿಕೊಳ್ಳತೊಡಗಿದರು. ಕೃಷಿ ವಿಶ್ವ ವಿದ್ಯಾಲಯ ಧಾರವಾಡದ ಕುಲಪತಿಗಳಾದ ಪ್ರೊ.ಡಾ.ಡಿ.ಪಿ. ಬಿರಾದಾರ ಇವರು ವಿಶೇಷವಾದ ಕಾಳಜಿಯನ್ನು ವಹಿಸಿ, ಇದಕ್ಕಾಗಿಯೇ ಒಂದು ಘಟಕವನ್ನು ಪ್ರಾರಂಭಿಸಿದರು. ಈ ಘಟಕಕ್ಕಾಗಿಯೇ ಅನುಭವಿ ಸಿಬ್ಬಂದಿ ತಂಡವನ್ನು ರಚನೆ ಮಾಡಿದರು. ರೈತರು ಉಚಿತವಾಣಿಗೆ ಕರೆ ಮಾಡಿದ ವಿವರವನ್ನು ಕಡ್ಡಾಯವಾಗಿ ಕಡತದಲ್ಲಿ ನಮೂದಿಸಲು ಸಿಬ್ಬಂದಿಗಳಿಗೆ ಸೂಚಿಸಿದರು. ಒಂದು ವೇಳೆ ರೈತರು ಮಾನಸಿಕ ಕಾಯಿಲೆಯಿಂದ ಅಥವಾ ಆತ್ಮಹತ್ಯೆ ಯೋಚನೆಗಳನ್ನು ಹೊಂದಿರುವಂತಹ ರೈತರಿದ್ದಲ್ಲಿ, ಅಂತಹ ರೈತರನ್ನು ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಯ ನುರಿತ ಮನೋವೈದ್ಯಕೀಯ ತಂಡದ ಗಮನಕ್ಕೆ ತಂದು, ಮಾನಸಿಕವಾಗಿ ನೊಂದಂತಹ ರೈತರಿಗೆ ಆಪ್ತಸಮಾಲೋಚನೆ ಮಾಡಿಸಲು ಯೋಜನೆಯನ್ನು ಹಾಕಿಕೊಳ್ಳಲಾಯಿತು. ವಿವಿಧ ಜಿಲ್ಲೆಗಳಿಂದ ಕರೆ ಮಾಡಿದ ರೈತರ ಸಮಸ್ಯೆಗಳಿಗೆ ಸರಕಾರದ ವಿವಿಧ ಸಂಸ್ಥೆಗಳ ನಡುವೆ ಸಂಯೋಜನೆಯನ್ನು ಮಾಡಲು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ರೈತ ಚೇತನ ಯೋಜನೆಯ ತಂಡದವರು ಶ್ರಮವಹಿಸ ತೊಡಗಿದರು. ಪ್ರಾರಂಭದಲ್ಲಿ ಕೆಲವು ಕರೆಗಳು ಮಾತ್ರ ಬರಬಹುದೆಂದು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ನಂತರದ ದಿನಗಳಲ್ಲಿ ಅತಿ ಹೆಚ್ಚು ಕರೆಗಳು ವಿವಿಧ ಜಿಲ್ಲೆಗಳಿಂದ ಬರತೊಡಗಿದವು. ಜುಲೈ 23, 2015 ರಂದು ಪ್ರಾರಂಭ ಮಾಡಿದ ರೈತ ಚೇತನ ಯೋಜನೆಯ ಉಚಿತ ಕರೆಗೆ ರಾಜ್ಯದ 25 ಜಿಲ್ಲೆಗಳಿಂದ ರೈತರು ದೂರವಾಣಿ ಕರೆ ಮಾಡಿದ ಸಂಖ್ಯೆ 7400 ಕ್ಕೂ ಅಧಿಕವಾಗಿ, ಈ ಎಲ್ಲಾ ಕರೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಯಿತು. ಒಟ್ಟು ಕರೆ ಮಾಡಿದ ರೈತರಲ್ಲಿ ಮೂರು ಜನ ಆತ್ಮಹತ್ಯೆ ಯೋಚನೆಗಳನ್ನು ಹೊಂದಿದ್ದು, ಕೃಷಿ ವಿಶ್ವ ವಿದ್ಯಾಲಯದ ತಂಡದವರು ಈ ಮೂರು ಜನ ರೈತರನ್ನು ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ತಂಡದ ಗಮನಕ್ಕೆ ತಂದರು. ಡಿಮ್ಹಾನ್ಸ್ ಸಂಸ್ಥೆಯ ಮನೋರೋಗ ವಿಭಾಗದ ಸಹಪ್ರಾಧ್ಯಪಕರು 03 ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸನ್ನು ಮಾಡಿದ ರೈತರಿಗೆ ಸೂಕ್ತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಮಾಡಿ, 03 ರೈತರ ಆತ್ಮಹತ್ಯೆಯನ್ನು ತಡಗಟ್ಟಲು ಯಶಸ್ವಿಯಾದರು. ಕೃಷಿ ವಿಶ್ವವಿದ್ಯಾಲಯದ ತಂಡದವರು ಸುಮಾರು 25 ಜಿಲ್ಲೆಗಳಿಂದ ಕರೆಮಾಡಿದ ಕರೆಗಳಿಗೆ ಶೇಕಡಾ 35 ರಿಂದ 40 ರೈತರಿಗೆ ಸಾಂತ್ವನ ಮಾಡಲು ಯಶಸ್ವಿಯಾದರು. ಶೇಕಡಾ 60 ರಷ್ಟು ರೈತರ ಕರೆಗಳಿಗೆ ಕೃಷಿ ಸಲಹೆಯನ್ನು ನೀಡಲಾಯಿತು. ರೈತ ಚೇತನ ಸಹಾಯವಾಣಿಗೆ ಸ್ಪಂದಿಸಿ ರೈತರಿಗೆ ಸಂಬಂಧಿಸಿದ ವಿವಿಧ ಸರಕಾರಿ ಇಲಾಖೆಗಳು: ರೈತ ಚೇತನ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಯಶಸ್ವಿಯಾಗಲು ರಾಜ್ಯ ಸರಕಾರದ ದಕ್ಷ ಮತ್ತು ಪ್ರಾಮಾಣಿಕ ಜಿಲ್ಲಾ ಅಧಿಕಾರಿಗಳ ಕೊಡುಗೆ ಮರೆಯುವಂತಿಲ್ಲ. ಬಾಗಲಕೋಟ, ಧಾರವಾಡ, ಬೀದರ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿ ವಿವಿಧ ರೈತರಿಗೆ ಸಹಾಯ ಕಲ್ಪಿಸುವಲ್ಲಿ ನೆರವಾದರು. ಬೀದರ, ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ಆರ್ಥಿಕ ಸಹಾಯವನ್ನು ರೈತರಿಗೆ ಮಾಡಿದ್ದನ್ನು ಮರೆಯುವಂತಿಲ್ಲ. ಕರ್ನಾಟಕ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಾದ ತಹಸೀಲ್ದಾರ, ಆಹಾರ ನಾಗರಿಕ ಸರಬರಾಜು ಮತ್ತು ಭೂ ವಿಜ್ಞಾನ, ಡೆಪ್ಯೂಟಿ ಕಮೀಷನರ್ ಆಪ್ ಎಕ್ಸೈಜ್ (ಬಾಗಲಕೋಟ), ಸಹಕಾರ ಸಂಘಗಳ ಉಪನಿಬಂಧಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಅಂತರ್ಜಲ ಕಛೇರಿ ಮತ್ತು ವಿವಿಧ ಅಬಿವೃದ್ಧಿ ಇಲಾಖೆಗಳು ಈ ರೈತ ಚೇತನ ಯೋಜನೆಯ ಜೊತೆ ಕೈಜೊಡಿಸಿದರು. ಈ ಇಲಾಖೆಯ ಅಧಿಕಾರಿಗಳು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಾ.ಡಿ.ಪಿ. ಬಿರಾದಾರ ಇವರಿಗೆ ಉತ್ತಮ ಸಹಕಾರವನ್ನು ರೈತ ಚೇತನ ಯೋಜನೆಯಲ್ಲಿ ನೀಡಿದ್ದು ಸರಕಾರದ ವಿವಿಧ ಇಲಾಖೆಗಳು ರೈತರ ಬಗ್ಗೆ ಇರುವಂಹ ಕಾಳಜಿಯನ್ನು ಈ ಯೋಜನೆಯಲ್ಲಿ ಕಾಣಬಹುದಾಗಿದೆ. ಬೆಂಗಳೂರಿನ ಸಹೃದಯಿ ಭಜನಾ ಮಂಡಳಿಯವರ ಹೃದಯವಂತಿಕೆ: ರೈತ ಚೇತನ ಯೋಜನೆಯ ಉಚಿತ ದೂರವಾಣಿಗೆ ಕರೆ ಮಾಡಿದ 03 ಜನ ರೈತರಿಗೆ ಮೂರು ಹಸುಗಳನ್ನು, 03 ಜನ ರೈತರಿಗೆ ಬೆಳೆ ಬೆಳೆಯಲು ಸಹಾಯವನ್ನು ಮಾಡಿದರು. 02 ಕೊಳವೆ ಬಾವಿಯಿಂದ ನೀರು ಮೇಲೆತ್ತಲು ಪೈಪುಗಳು ಮತ್ತು ಕೇಬಲ್ ವೈರ್ ಗಳನ್ನು ನೀಡಿದರು. 02 ಜನ ರೈತರಿಗೆ Submercible pump ಕೊಡಿಸಲು ಆರ್ಥಿಕ ಸಹಾಯವನ್ನು ಮಾಡಿದರು. ಒಬ್ಬರಿಗೆ ಕಂಪ್ಯೂಟರ್, ಒಬ್ಬ ರೈತನ ಮಗನಿಗೆ ನೌಕರಿ ಕೊಡಿಸುವುದಾಗಿ ಮನನೊಂದ ರೈತನಿಗೆ ಭರವಸೆಯನ್ನು ನೀಡಿದ್ದಾರೆ. ಒಬ್ಬ ರೈತನ ಮಗನಿಗೆ ವಿದ್ಯಾಭ್ಯಾಸ ಮಾಡಿಸಲು ಹಣದ ಸಹಾಯವನ್ನು ಮಾಡಿದ್ದು ಬೆಂಗಳೂರಿನ ಸಹೃದಯಿ ಭಜನಾ ಮಂಡಳಿಯವರು ರೈತರ ಬಗ್ಗೆ ಇರುವ ಕಳಕಳಿ ಮತ್ತು ಅವರ ಹೃದಯವಂತಿಕೆಯನ್ನು ಈ ಯೋಜನೆಯಲ್ಲಿ ಕಾಣಲಾಗಿದೆ. ಈ ರೈತ ಚೇತನ ಯೋಜನೆ ಆರಂಭವಾಗುವ ಸಮಯದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸೋಮಶೇಖರ ಬಿಜ್ಜಳ ರವರು ಕೃಷಿ ವಿಶ್ವವಿದ್ಯಾಲಯ ಧಾರವಾಡದ ಅಧಿಕಾರಿಗಳೊಂದಿಗೆ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದು ಸಂತೋಷದ ವಿಷಯ. ಮತ್ತು ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ ಮತ್ತು ನೈದಾನಿಕ ಮನಶಾಸ್ತ್ರ ವಿಭಾಗದ ಸಿಬ್ಬಂದಿಗಳು ರೈತ ಚೇತನ ಯೋಜನೆ ತಂಡದ ಸದಸ್ಯರಾಗಿ ಉತ್ತಮಕಾರ್ಯವನ್ನು ಮಾಡಿದ್ದು, ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಇಲ್ಲಿರುವ ರೈತ ಚೇತನ ಯೋಜನೆ ವಿಶೇಷ ಘಟಕಕ್ಕೆ ಹೋಗಿ ಕಾರ್ಯಕ್ರಮಗಳನ್ನು ಮಾಡಲು ಯಶಸ್ವಿಯಾದರು. ಕೃಷಿ ವಿಶ್ವ ವಿಧ್ಯಾಲಯದ ವತಿಯಿಂದ ವಿವಿಧ ಹಳ್ಳಿಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಾನಸಿಕ ಕಾಯಿಲೆಗಳನ್ನು ಗುರುತಿಸುವುದು ಹೇಗೆ ಎನ್ನುವ ಬಗ್ಗೆ ಉಪನ್ಯಾಸವನ್ನು ನೀಡಿ, ರೈತರು ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಅರಿವನ್ನು ಮೂಡಿಸಲಾಯಿತು. ಈ ರೈತ ಯೋಜನೆಯು ಪ್ರಾರಂಭವಾಗಿ ದಿನಾಂಕ 23/07/2016 ರಂದು ಒಂದು ವರ್ಷ ಕಳೆದು, ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ಇನ್ನು ಹಲವು ಮಹತ್ವದ ವಿಚಾರಗಳನ್ನು ಈ ಯೋಜನೆಯಲ್ಲಿ ಅಳವಡಿಸಲು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಾ.ಡಿ.ಪಿ. ಬಿರಾದಾರವರು ಯೋಜನೆಗಳನ್ನು ಸಿದ್ದಪಡಿಸಿಕೊಂಡಿದ್ದು, ಈ ರೈತ ಯೋಜನೆಯನ್ನು ರಾಷ್ಟ್ರಿಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯನ್ನಾಗಿ ಮಾಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹಾಗು ಈ ಯೋಜನೆಯಲ್ಲಿ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಸಹಕಾರವನ್ನು ವಿವಿಧ ಆಯಾಮಗಳಲ್ಲಿ ಬಳಸಿಕೊಳ್ಳಲು ಮುಂದಾಗಿರುವುದು ಡಿಮ್ಹಾನ್ಸ್ ಸಂಸ್ಥೆಯ ಪರಿಣಾಮಕಾರಿ ಸೌಲಭ್ಯಗಳ ಬಗ್ಗೆ ಇರುವ ಸ್ಥಿತಿಯನ್ನು ತೋರಿಸುತ್ತದೆ. ರೈತ ಚೇತನ ಯೋಜನೆಯು ಯಶಸ್ವಿಯಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಆತ್ಮಹತ್ಯೆಯ ಕುರಿತು ವರದಿ ಮಾಡುವ ಸುದ್ದಿ ಮಾಧ್ಯಮಗಳಿಗೆ ಮಾರ್ಗಸೂಚಿಗಳು: ಆತ್ಮಹತ್ಯೆಯು ಒಂದು ಪ್ರಮುಖ ಸಾಮಾಜಿಕ ಆರೋಗ್ಯ ಸಮಸ್ಯೆಯಾಗಿದ್ದು, ಸಾಮಾಜಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಅತಿ ಪ್ರಭಾವವಾಗಿ ಪರಿಣಾಮಗಳನ್ನುಂಟು ಮಾಡುತ್ತದೆ. ಆತ್ಮಹತ್ಯೆಗೆ ಕಾರಣವಾಗುವ ಅಂಶಗಳು ಮತ್ತು ಇದರ ತಡೆಗಟ್ಟುವಿಕೆ ಸಂಕೀರ್ಣವಾಗಿದ್ದು, ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ, ಕೆಲವು ಆಧಾರಗಳ ಪ್ರಕಾರ, ಆತ್ಮಹತ್ಯೆಗಳನ್ನು ತಡೆಗಟ್ಟಲು ಮಾಧ್ಯಮವು ಮಹತ್ವದ ಪಾತ್ರವಹಿಸುತ್ತದೆ. ಒಂದು ದೃಷ್ಠಿಕೋನದಲ್ಲಿ ಮಾದ್ಯಮಗಳಲ್ಲಿ ಆತ್ಮಹತ್ಯೆಯ ಕುರಿತು ಪ್ರಸಾರ ಮಾಡುವ ವರದಿಗಳಿಂದ ದುರ್ಬಲ ವ್ಯಕ್ತಿಗಳ ಮೇಲೆ ಅನುಕುರಣೆಯೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಭಾವ ಬೀರುತ್ತವೆ, ವಿಶೇಷವಾಗಿ, ಒಂದು ವೇಳೆ ಮಾದ್ಯಮಗಳಲ್ಲಿ ಮಾಡುವ ಪ್ರಸಾರದ ವ್ಯಾಪ್ತಿಯು ವ್ಯಾಪಕ, ಎದ್ದುಕಾಣುವ ರೀತಿಯಲ್ಲಿ, ಉದ್ರೇಕಕಾರಿಯಾಗಿ ಮತ್ತು ಸ್ಪಷ್ಟವಾಗಿ ಆತ್ಮಹತ್ಯೆಯ ವಿಧಾನವನ್ನು ವರದಿ ಮಾಡಿದ್ದೇ ಆದರೆ ಈ ರೀತಿಯ ಅನುಕರಣೆಗಳು ಆಗುತ್ತವೆ. ಇನ್ನೊಂದು ದೃಷ್ಠಿಕೋನದಲ್ಲಿ ನೋಡುವುದಾದರೆ, ಜವಾಬ್ದಾರಿಯುತ ಅಥವಾ ಹೊಣೆಗಾರಿಕೆಯ ವರದಿಯು ಜನರಲ್ಲಿ ಆತ್ಮಹತ್ಯೆಯ ಬಗ್ಗೆ ಅರಿವನ್ನು ಮೂಡಿಸುತ್ತದೆ ಮತ್ತು ಆತ್ಮಹತ್ಯೆಯನ್ನು ತಡೆಗಟ್ಟಲು ಬೇಕಾದ ಸಹಾಯವನ್ನು ಪಡೆಯಲು ಜನರಿಗೆ ಉತ್ತೇಜಿಸುತ್ತದೆ. ಪ್ರಬುದ್ದ ಮಾಧ್ಯಮಗಳು ಆತ್ಮಹತ್ಯೆಯ ಬಗ್ಗೆ ಸೂಕ್ತ, ನಿಖರ ಮತ್ತು ಸಮರ್ಥವಾಗಿ ವರದಿ ಮಾಡಿದ್ದಲ್ಲಿ, ಆತ್ಮಹತ್ಯೆಯಿಂದ ಜೀವನದಲ್ಲಿ ಆಗುವ ದುರಂತಗಳನ್ನು ತಡೆಗಟ್ಟಬಹುದು. ಮಾಧ್ಯಮವು ಭಾವೊದ್ರೇಕದಿಂದ ಕೂಡಿದ ವಿವಿಧ ರೀತಿಯ ಹಿಂಸೆಯನ್ನು ಉತ್ತೇಜಿಸುವಲ್ಲಿ ಆಗಬಲ್ಲ ಪಾತ್ರದ ಬಗ್ಗೆ ಬಹಳ ಸುದೀರ್ಘವಾಗಿ ಪರಾಮರ್ಶಿಸಿದೆ. ವಾಸ್ತವಿಕವಾಗಿ ಸಂಶೋಧಕರುಗಳಲ್ಲಿ ಒಮ್ಮತ ಅಭಿಪ್ರಾಯಗಳು ಬೆಳೆಯುತ್ತಿದ್ದು, ಆತ್ಮಹತ್ಯೆಯ ಘಟನೆಗಳ ಕುರಿತು ಮಾಧ್ಯಮಗಳು ಹೆಚ್ಚು ವಿವರವಾಗಿ ಪ್ರಸಾರ ಮಾಡುವುದರಿಂದ, ಮನಸ್ಥಿತಿ ಸರಿಯಿಲ್ಲದ ವ್ಯಕ್ತಿಗಳಲ್ಲಿ ವಾಸ್ತವಿಕವಾಗಿ ಅನುಕರಣೆ ಮಾಡಲು ಅವಕಾಶ ಮಾಡಿಕೊಡುತ್ತದೆ. ಕೆಲವು ಆಧಾರಗಳ ಪ್ರಕಾರ, ಆತ್ಮಹತ್ಯೆಯ ಕುರಿತು ವರದಿ ಮಾಡುವ ಕೆಲವು ರೀತಿಯ ವರದಿಗಳು, ಜನರಲ್ಲಿ ಅನುಕರಣೆ ಮಾಡಲು ಉತ್ತೇಜನ ನೀಡುತ್ತದೆ, ಇದು ತಿಳಿದು ಅಥವಾ ಅರಿವಿಲ್ಲದೇ ಆಗಬಹುದು ಅಥವಾ ಅದಕ್ಕಿಂತಲೂ ಇನ್ನೊಂದು ಹಿಂಸೆಯ ರೂಪದ್ದಾಗಿರುತ್ತದೆ: ಆತ್ಮಹತ್ಯೆ. ಆದ್ದರಿಂದ, ಭಾರತೀಯ ಮನೋವೈದ್ಯಕೀಯ ಸಂಘ, ಕರ್ನಾಟಕ ಶಾಖೆಯು ಮಾಧ್ಯಮಗಳಿಗೆ ಆತ್ಮಹತ್ಯೆಯ ಕುರಿತು ಪ್ರಸಾರ/ವರದಿ ಮಾಡುವ ಸಂದರ್ಭಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಬಲವಾಗಿ ಶಿಫಾರಸ್ಸು ಮಾಡಲು ಇಚ್ಚಿಸುತ್ತದೆ. ಸಾಮಾನ್ಯವಾಗಿ ಆತ್ಮಹತ್ಯೆಯ ಕುರಿತು ಹೇಗೆ ವರಿದಿಯನ್ನು ಮಾಡಬೇಕು: ಆತ್ಮಹತ್ಯೆಯ ಬಗ್ಗೆ ವರದಿ ಮಾಡುವ ಸಂದರ್ಭದಲ್ಲಿ ಕೆಲವು ನಿಶ್ಚಿತ ಸಮಸ್ಯೆಗಳು/ಸಂಗತಿಗಳನ್ನು ಹೇಳಬೇಕಾಗುತ್ತದೆ ಅವುಗಳಲ್ಲಿ ಈ ಕೆಳಗಿನವುಗಳು ಸೇರಿವೆ.
ಒಂದು ನಿರ್ದಿಷ್ಟ ಆತ್ಮಹತ್ಯೆಯ ಬಗ್ಗೆ ಹೇಗೆ ವರದಿ ಮಾಡಬೇಕು: ಈ ಕೆಳಗಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು:
ಏನು ಮಾಡಬೇಕು?
ಏನು ಮಾಡಬಾರದು?
ಸಮಾರೋಪ: ರೈತರ ಆತ್ಮಹತ್ಯೆಗಳ ಸಂಖ್ಯೆಯನ್ನು ತಡೆಗಟ್ಟಲು ಸರಕಾರದ ವಿವಿಧ ಸಂಸ್ಥೆಗಳು ಶ್ರಮವಹಿಸುತ್ತಿವೆ. ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕೂಡ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ಕೊಡುಗೆಗಳನ್ನು ನೀಡಿವೆ. ರೈತರ ಆತ್ಮಹತ್ಯೆಗಳು ಕೇವಲ ಒಂದು ನಿರ್ದಿಷ್ಟ ಅಂಶದಿಂದ ಅವಲಂಬಿಸಿರುವುದಿಲ್ಲ. ರೈತ ಚೇತನ ಯೋಜನೆಯಂತಹ ವಿನೂತನ ರೈತಪರ ಯೋಜನೆಗಳು ರೈತರಿಗೆ ಬೇಕಾದ ಮಾಹಿತಿಯನ್ನು, ಸಮುದಾಯದಲ್ಲಿರುವ ವಿವಿಧ ಸಂಸ್ಥೆಗಳ ನೆರವನ್ನು ಒದಗಿಸಿದ್ದಲ್ಲದೇ, ಕೆಲವು ರೈತರ ಆತ್ಮಹತ್ಯೆಗಳನ್ನು ತಡೆಗಟುವಲ್ಲಿ ಯಶಸ್ಸನ್ನು ಕಂಡಿದೆ. ಇದಕ್ಕೆ ಬೆಂಬಲವಾಗಿ, ಸುದ್ದಿ-ಮಾಧ್ಯಮಗಳು ಉತ್ತಮವಾದ ಬೆಂಬಲವನ್ನು ನೀಡಿದೆ. ಆದ್ದರಿಂದ, ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ಮನೋವೈದ್ಯಕೀಯ ವೃತ್ತಿಪರರು ಇಂದು ವಿವಿಧ ನೂತನ ಮಾರ್ಗಗಳ ಮೂಲಕ ರೈತರಿಗೆ ಬೇಕಾದ ಕೆಲವು ಅಗತ್ಯಮಾಹಿತಿಗಳನ್ನು ವಿವಿಧ ಸರಕಾರದ ಸಂಸ್ಥೆಗಳ ಜೊತೆ ಒಡಂಬಡಿಕೆ ಅಥವಾ ಸಹಕಾರದ ಮೂಲಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿರುವುದು ಸಂತಸದ ವಿಷಯ. ಮನೋವೈದ್ಯರು, ಮನೋಸಾಮಾಜಿಕ ಕಾರ್ಯಕರ್ತರು ಮತ್ತು ಮನಶಾಸ್ತ್ರಜ್ಞರು ಇಂದು ರೈತರ ಆತ್ಮಹತ್ಯೆಗಳ ಬಗ್ಗೆ ಸಂಶೋಧನಾತ್ಮಕ ಚಟುವಟಿಕೆಗಳನ್ನು ಮಾಡುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ರೈತರ ಆತ್ಮಹತ್ಯೆಗಳ ಬಗ್ಗೆ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ನೆರವಾಗುತ್ತವೆ. ಆಧಾರ ಗ್ರಂಥಗಳು:
ಡಾ. ರವೀಶ್ ಬಿ.ಎನ್ ನಿರ್ದೇಶಕರು, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ. ಶ್ರೀ ಅಶೋಕ ಎಸ್. ಕೋರಿ ಮನೋವೈದ್ಯಕೀಯ ಸಮಾಜಕಾರ್ಯಕರ್ತರು, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ.
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|