'ಭಾರತದ ಮಕ್ಕಳ ಅಪೌಷ್ಟಿಕತೆ ರಾಷ್ಟ್ರೀಯ ಅಪಮಾನ' ಹೀಗೆ ಉದ್ಗರಿಸಿದವರು ಯಾರೋ ಸಾಮಾನ್ಯರಲ್ಲ. ಭಾರತದ ಪ್ರಧಾನ ಮಂತ್ರಿಗಳಾದ ಮಾನ್ಯ ಮನಮೋಹನ್ ಸಿಂಗ್‍ರವರು (2012). ಈ ರೀತಿಯ ವಿಷಾದಕರ ಹೇಳಿಕೆಗೆ ಕಾರಣವಾದದ್ದು ನಂದಿ ಫೌಂಡೇಶನ್ ನಡೆಸಿದ ಹಸಿವು ಮತ್ತು ಅಪೌಷ್ಟಿಕತೆ ಕುರಿತಾದ ಅಧ್ಯಯನದಿಂದ ಹೊರಹೊಮ್ಮಿದ ಅಂಕಿಅಂಶಗಳು. ಇಲ್ಲಿ ನಿಮಗೊಂದು ಪ್ರಶ್ನೆ ಉದ್ಭವಿಸಬಹುದು, ಹಾಗಾದರೆ ಇಷ್ಟು ಕಾಲ ಮಕ್ಕಳ ಅಪೌಷ್ಟಿಕತೆ ಕುರಿತು ಯಾರಿಗೂ ಅರಿವಿರಲಿಲ್ಲವೇ? ಕೆಲವರಿಗೆ ಇದ್ದಿರಬಹುದು, ಆದರೆ ಯಾವುದೇ ಸಮಸ್ಯೆಯ ವ್ಯಾಪ್ತಿಯ ಬಗ್ಗೆ ನಿಖರವಾಗಿ ತಿಳಿಯುವುದು ಒಂದು ನಿರ್ದಿಷ್ಟವೂ ಮತ್ತು ಕ್ರಮಬದ್ಧವೂ ಆದ ವಿಧಾನದಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದಾಗ ಮಾತ್ರ. ಈಗಲೂ ನಮ್ಮಲ್ಲಿ ಬಹುತೇಕರಿಗೆ ಅಂಕಿಸಂಖ್ಯೆಗಳೆಂದರೆ ಅಲರ್ಜಿ. ಓದುವಾಗ ಸಂಖ್ಯೆಗಳನ್ನು, ಪ್ರಮಾಣ, ಶೇಕಡಾವಾರುಗಳನ್ನು ಬಿಟ್ಟು ಓದುವವರೇ ಹೆಚ್ಚು! ಆದರೆ ಸಂಖ್ಯೆಗಳಿಗೆ ಬಹಳ ಪ್ರಾಮುಖ್ಯತೆಯಿದೆ. ಯಾವುದೇ ಪ್ರದೇಶದ, ಯಾವುದೇ ಕ್ಷೇತ್ರದ ಯೋಜನೆಗಳನ್ನು, ಕಾರ್ಯಕ್ರಮ ಮತ್ತು ನೀತಿಗಳನ್ನು ರೂಪಿಸುವುದು ಹಾಗೂ ಅವುಗಳಿಗೆ ಸೂಕ್ತವಾದ ಅನುದಾನವನ್ನು ನಿಗದಿಪಡಿಸುವುದು ಆ ಕುರಿತಾದ ಅಂಕಿಅಂಶಗಳ ಆಧಾರದ ಮೇಲೆಯೇ. ಯಾವುದಾದರೂ ಒಂದು ಗ್ರಾಮದ ಉದಾಹರಣೆ ತೆಗೆದುಕೊಳ್ಳೋಣ. ಆ ನಿರ್ದಿಷ್ಟ ಗ್ರಾಮದಲ್ಲಿ 0-6 ವರ್ಷದ ಮಕ್ಕಳು ಎಷ್ಟಿದ್ದಾರೆ ಎಂಬುದರ ಅರಿವು ಸಂಬಂಧಪಟ್ಟ ಇಲಾಖೆಗಳಿಗೆ ಇದ್ದಲ್ಲಿ ಮಾತ್ರ, ಈ ವಯೋಮಾನದ ಮಕ್ಕಳಿಗೆ ಬೇಕಾಗುವ ರೋಗನಿರೋಧಕಗಳು ಯಾವುವು ಮತ್ತು ಅವುಗಳ ಬೇಕಾಗುವ ಪ್ರಮಾಣ ಎಷ್ಟು ಎಂಬುದನ್ನು ಯೋಜಿಸಲು ಆರೋಗ್ಯ ಮತು ಕುಟುಂಬ ಕಲ್ಯಾಣ ಇಲಾಖೆಗೆ ಸಹಾಯಕವಾಗುತ್ತದೆ. ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅಂಗನವಾಡಿಯ ದಾಖಲಾತಿಯೂ ಸೇರಿದಂತೆ ಇಷ್ಟು ಮಕ್ಕಳಿಗೆ ಬೇಕಾಗುವ ಪೂರಕ ಪೌಷ್ಟಿಕ ಆಹಾರದ ಪ್ರಮಾಣವನ್ನು ಯೋಜಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಬಹು ಮುಖ್ಯವಾದದ್ದು ಇವುಗಳಿಗೆ ತಗಲುವ ಖರ್ಚನ್ನೂ ಸಹ ಯೋಜಿಸಲು ನಿಖರವಾಗಿ ಸಾಧ್ಯವಾಗುವುದು ವಾಸ್ತವ ಅಂಕಿಅಂಶಗಳು ತಿಳಿದಿದ್ದರೆ ಮಾತ್ರ. ಇದು ತೀರ ಸರಳವಾದ ಒಂದು ರೀತಿಯ ಉದಾಹರಣೆ ಅಷ್ಟೆ. ಕೆಲವೊಮ್ಮೆ ಮುಂದಿನ ವರ್ಷದಲ್ಲಿ ಹುಟ್ಟಬಹುದಾದ ಮಕ್ಕಳ ಸಂಖ್ಯೆಯನ್ನು ಅಂದಾಜಿಸಿ ಅವರ ಸುರಕ್ಷಿತ ಜನನದ ವ್ಯವಸ್ಥೆಗಳು, ರೋಗನಿರೋಧಕಗಳ ಪ್ರಮಾಣಗಳು ಇವೇ ಮೊದಲಾದವುಗಳನ್ನು ಅಂದಾಜಿಸಿ, ಅವುಗಳ ಪೂರೈಕೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಇಂತಹ ಮಾಹಿತಿಗಳು ಕೇವಲ ಇಲಾಖೆಗಳ ದಾಖಲೆಗಳಲ್ಲಿದ್ದರೆ ಸಾಲದು. ಅವು ಸಾರ್ವಜನಿಕರಿಗೂ ತಿಳಿಯುವಂತಿರಬೇಕು, ಸ್ಥಳೀಯ ಆಡಳಿತಕ್ಕೂ ಗೊತ್ತಿರಬೇಕು. ಆಗ, ಆಯಾ ಸೇವೆಗಳು ಹೇಗೆ ಜಾರಿಯಾಗುತ್ತಿವೆ ಎಂದು ಗಮನಿಸಲು, ಉಸ್ತುವಾರಿ ಮಾಡಲು, ಅಥವಾ ಹೆಚ್ಚಿನ ಬೇಡಿಕೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಯೋಜನೆಗಳನ್ನು/ಕಾರ್ಯಕ್ರಮಗಳನ್ನು ರೂಪಿಸುವುದೂ ಸಹ ಈ ರೀತಿಯಾಗಿಯೇ. ಯಾವುದೇ ಪ್ರದೇಶದ ಯಾವುದೇ ಅಂಕಿಸಂಖ್ಯೆಗಳು ಜಡವಲ್ಲ, ಅವು ದಿನೇ ದಿನೇ ಬದಲಾಗುತ್ತಿರುವುದರಿಂದ, ಯಾವುದೇ ಯೋಜನೆ ರೂಪಿಸಬೇಕಾದರೆ ಅದು ಆ ಸಮಯದಲ್ಲಿನ ವಾಸ್ತವ ಅಂಕಿಸಂಖ್ಯೆಗಳ ಆಧಾರದ ಮೇಲೆ ಆಗಲೇಬೇಕು. ಇಲ್ಲವಾದಲ್ಲಿ ಯೋಜನೆಗೂ ಮತ್ತು ಅದು ತಲುಪಬೇಕಾದ ಫಲಾನುಭವಿಗಳ ಸಂಖ್ಯೆಗೂ ವ್ಯತ್ಯಾಸವಾಗಿ ಇಡೀ ಯೋಜನೆಯ ಒಟ್ಟಾರೆ ಆಶಯವೇ ವಿಫಲವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳ ಹಕ್ಕುಗಳು ಮತ್ತು ಸಾಧಿಸುವ ಗುರಿಗಳು 1989ರಲ್ಲಿ ವಿಶ್ವಸಂಸ್ಥೆಯಲ್ಲಿ ಅನುಮೋದಿತಗೊಂಡ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ಸರ್ಕಾರ 1992 ರಲ್ಲಿ ಸಹಿ ಮಾಡಿ, ದೇಶದ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಬದ್ಧತೆಯನ್ನು ತೋರಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಕುರಿತು ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿವೆ. ಆದರೆ ಈ ಎಲ್ಲಾ ಯೋಜನೆಗಳ ಜಾರಿಯ ಪರಿಣಾಮವಾಗಿ ಮಕ್ಕಳ ಸ್ಥಿತಿ ಉತ್ತಮಗೊಳ್ಳುತ್ತಿದೆಯೋ ಇಲ್ಲವೋ ಎಂಬುದನ್ನು ಕಂಡುಕೊಳ್ಳಬೇಕಾದರೆ ಕಾಲಕಾಲಕ್ಕೆ ನಿರ್ದಿಷ್ಟ ಪ್ರದೇಶಗಳಲ್ಲಿ ಮಕ್ಕಳ ಸ್ಥತಿಗತಿ ಕುರಿತು ಸಮೀಕ್ಷೆ ನಡೆಸಿ ಅಂಕಿಅಂಶಗಳನ್ನು ಕ್ರೋಡೀಕರಿಸಿ ವಿಶ್ಲೇಷಿಸುವ ಅವಶ್ಯಕತೆಯಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಅಭವೃದ್ಧಿ ಕುರಿತಂತೆ ಹಲವಾರು ಗುರಿಗಳಿವೆ. ಉದಾಹರಣೆಗೆ, ಸಹಸ್ರಮಾನದ ಅಭಿವೃದ್ಧಿ ಗುರಿಗಳು (Millenium Development Goals). ಇದರಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾದ ಹಲವಾರು ಸೂಚಕಗಳನ್ನು 2015ರೊಳಗೆ ಸಾಧಿಸುವ ಗುರಿಗಳನ್ನಾಗಿ ನಿರ್ದಿಷ್ಟಪಡಿಸಲಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಇದರಲ್ಲಿ ನೀಡಿರುವ ಗುರಿಗಳನ್ನು ನಿಗಧಿತ ಅವಧಿಯೊಳಗೆ ಸಾಧಿಸುವುದಾಗಿ ಒಪ್ಪಿಕೊಂಡಿವೆ. ಇವುಗಳಲ್ಲಿ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಹೆಸರಿಸಬಹುದಾದ ಇನ್ನೊಂದು ಗುರಿಯೆಂದರೆ ಮಕ್ಕಳಿಗೆ ಸೂಕ್ತವಾದ ಜಗತ್ತು (World Fit for Children). ಇನ್ನು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿಯೂ ಮಕ್ಕಳ ಹಕ್ಕುಗಳ ಜಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಕ್ರಿಯಾ ಯೋಜನೆಗಳನ್ನು ಹೊರತರುತ್ತಿವೆ. ಈ ಯೋಜನೆಗಳಲ್ಲಿಯೂ ಮಕ್ಕಳಿಗೆ ಸಂಬಂಧಿಸಿದ ಸೂಚಕಗಳನ್ನು ನಿರ್ದಿಷ್ಟ ಅವಧಿಯಲ್ಲಿ ಸಾಧಿಸುವ ಗುರಿಗಳನ್ನು ಸರ್ಕಾರಗಳೂ ಮುಂದಿಟ್ಟಿವೆ. ಆದರೆ ಬಹುತೇಕರಿಗೆ ಸ್ಪಷ್ಟವಾಗಿಲ್ಲದಿರುವುದು, ಈ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆಯೋ ಇಲ್ಲವೋ ಎಂಬುದು. (ಕ್ರಿಯಾ ಯೋಜನೆ ರೂಪಿಸಿದ ಸರ್ಕಾರಗಳಿಗೆ ಕೆಲವೊಮ್ಮೆ ಈ ಕುರಿತು ತಿಳಿದಿರುವುದಿಲ್ಲ ಎನ್ನುವುದು ಇನ್ನೊಂದು ವಿಚಾರ). ಇವುಗಳಲ್ಲಿ ಸ್ಥಾನಿಕವಾಗಿ ಮತ್ತು ರಾಜ್ಯ/ರಾಷ್ಟ್ರ ಮಟ್ಟದಲ್ಲಿ ತಿಳಿದುಕೊಳ್ಳಲು ಕಾಲಕಾಲಕ್ಕೆ ಅಂಕಿಅಂಶಗಳನ್ನು ಸಂಗ್ರಹಿಸಿ, ಹಿಂದಿನ ದಾಖಲೆಗಳಿಗೆ ಹೋಲಿಸಿ ವಿಶ್ಲೇಷಿಸಿ ವರದಿಗಳನ್ನು ನೀಡಿದಾಗ ಮಾತ್ರ ತಿಳಿಯುತ್ತದೆ. ಹಾಗಿದ್ದಲ್ಲಿ ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಅದರಲ್ಲೂ ದೇಶದ ಜನಸಂಖ್ಯೆಯ ಶೇಕಡಾ 45ರಷ್ಟು ಮಕ್ಕಳನ್ನು ಹೊಂದಿರುವ ದೇಶದಲ್ಲಿ ಮಕ್ಕಳ ಕುರಿತಾದ ಅಂಕಿಅಂಶಗಳನ್ನು ಸಂಗ್ರಹಿಸುವುದು ಹೇಗೆ ಮತ್ತು ಯಾರು ಸಂಗ್ರಹಿಸುತ್ತಾರೆ ಎನ್ನುವುದು ದೊಡ್ಡ ಪೆಶ್ನೆ. ರಾಷ್ಟ್ರ ಮಟ್ಟದ ಕೆಲವೊಮ್ಮೆ ರಾಜ್ಯ ಮಟ್ಟದ ಮಕ್ಕಳ ಕುರಿತಾದ ಅಂಕಿಸಂಖ್ಯೆಗಳನ್ನು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್‍ನಂತಹ ಸಂಸ್ಥೆಗಳು ನಿಗಧಿತ ಅವಧಿಗೆ ಒಮ್ಮೆ ಮಾಡುತ್ತವೆ. ಅದೇ ರೀತಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ಸಮೀಕ್ಷೆ ನಡೆಸಿದರೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕುರಿತಂತೆ ಜಿಲ್ಲಾ ಮಟ್ಟದ ಸಮೀಕ್ಷೆಗಳು ಕಾಲಕಾಲಕ್ಕೆ ನಡೆಯುತ್ತವೆ. ಈ ಸಮೀಕ್ಷೆಗಳು ಸರ್ಕಾರದಿಂದ ಪ್ರಾಯೋಜಿತವಾಗಿದ್ದರೂ, ಇವುಗಳನ್ನು ನಡೆಸುವುದು ಸ್ವಾಯತ್ತ ಸಂಸ್ಥೆಗಳು. ಹಾಗಾಗಿ ಈ ಸಮೀಕ್ಷೆಗಳು ಹೊರಹೊಮ್ಮಿದ ಅಂಕಿ ಅಂಶಗಳನ್ನು ರಾಷ್ಟ್ರವ್ಯಾಪಿ ಅನೇಕರು (ಸರ್ಕಾರ, ಸ್ವಯಂಸೇವಾ ಸಂಘಟನೆಗಳು, ಕೈಗಾರಿಕೆಗಳು, ವ್ಯಾಪಾರಿಗಳು, ಸಂಶೋಧಕರು, ಮಾಧ್ಯಮ, ಅಂತಾರಾಷ್ಟ್ರೀಯ ಸಂಸ್ಥೆಗಳು) ತಮ್ಮ ಕೆಲಸಗಳಿಗೆ ಸೂಕ್ತವಾಗಿ ಬಳಸಿಕೊಳ್ಳುತ್ತಾರೆ. ಆದರೆ ಈ ಸಮೀಕ್ಷೆಗಳು ನೀಡುವ ಅಂಕಿಅಂಶಗಳೂ ಮತ್ತು ಅದೇ ವಿಚಾರಗಳನ್ನು ಕುರಿತು ರಾಜ್ಯ ಸರ್ಕಾರದ ಇಲಾಖೆಗಳು ನೀಡುವ ಅಂಕಿಅಂಶಗಳು ಅನೇಕ ಬಾರಿ ಹೊಂದಾಣಿಕೆಯಾಗುವುದಿಲ್ಲ! ಮಕ್ಕಳು ಮತ್ತು ರಾಜ್ಯ ಕ್ರಿಯಾ ಯೋಜನೆಗಳು ರಾಜ್ಯ ಸರ್ಕಾರಗಳು ಮಕ್ಕಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಅನೇಕ ಇಲಾಖೆಗಳನ್ನು ತೊಡಗಿಸಿದೆ. ಅಂತಹದರಲ್ಲಿ ಒಂದು ಶಿಕ್ಷಣ ಇಲಕಾಖೆ. ಶಿಕ್ಷಣ ಇಲಾಖೆಯು ಪ್ರತಿ ವರ್ಷ ಶಾಲಾ ವಯಸ್ಸಿನ ಮಕ್ಕಳು, ಶಾಲೆಯಿಂದ ಹೊರಗುಳಿದ ಮಕ್ಕಳು ಇವೇ ಮೊದಲಾದ ವಿಷಯಗಳನ್ನು ಕುರಿತು ಮಕ್ಕಳ ಗಣತಿಯನ್ನು ನಡೆಸುತ್ತದೆ. ಈ ಸಮೀಕ್ಷೆಯನ್ನು ಶಿಕ್ಷಣ ಇಲಾಖೆಯ ಶಿಕ್ಷಕರೇ ನಡೆಸುವುದು ಮತ್ತು ಅವುಗಳನ್ನು ಕ್ರೋಡೀಕರಿಸಿ ಅರ್ಥ ಕೊಡುವುದು. ಹೀಗಾಗಿ ಇದರಲ್ಲಿ ಕಾಣುವುದು ಅಂಕಿಅಂಶಗಳ ಸುಂದರ ಜೋಡಣೆ ಎಂದು ಕೆಲವರು ಟೀಕಿಸುತ್ತಾರೆ. ಹಾಗಾಗಿ ಇದು ಇಂದಿಗೂ ಪ್ರಶ್ನಾರ್ಹ. ಆದರೂ ಈ ಅಂಕಿಅಂಶಗಳನ್ನೆ ನಾವು ನಂಬಿ ಕೂರಬೇಕು ಮತ್ತು ಅದಕ್ಕೆ ತಕ್ಕುದಾಗಿ ನಮ್ಮ ಯೋಜನೆಗಳನ್ನು ಸಿದ್ಧಮಾಡಬೇಕು ಎಂಬುದು ವಾಸ್ತವಿಕ ಪರಿಸ್ಥಿತಿ. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ 2001ರಲ್ಲಿ ರೂಪಿಸಿದ್ದ ಬಾಲಕಾರ್ಮಿಕ ಪದ್ಧತಿ ನಿಷೇಧ ಕ್ರಿಯಾ ಯೋಜನೆಯಲ್ಲಿ ಹೇಳಿದ್ದ ಬಾಲ ಕಾರ್ಮಿಕರ ಸಂಖ್ಯೆಯನ್ನೇ ಸರ್ಕಾರ ಇಂದಿಗೂ ಉಲ್ಲೇಖಿಸುತ್ತಿದೆ (39,900). ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿಲ್ಲವೇ? ಅಂದರೆ ಇಲಾಖೆಯು 2001ರ ನಂತರ ಬಾಲಕಾರ್ಮಿಕರ ಸಮೀಕ್ಷೆ ನಡೆಸಿಲ್ಲ! ಇಲ್ಲಿ ಎದ್ದು ಕಾಣುವ ಪ್ರಶ್ನೆ, ಕ್ರಿಯಾ ಯೋಜನೆಯ ಗುರಿಗಳನ್ನು ಎಷ್ಟರ ಮಟ್ಟಿಗೆ ಸಾಧಿಸಲಾಗಿದೆ ಮತ್ತು ಶಿಕ್ಷಣ ಇಲಾಖೆಯ ಅಂಕಿಅಂಶದಲ್ಲಿ ಎಷ್ಟು ಬಾಲಕಾರ್ಮಿಕರು ಶಾಲೆಗೆ ಬಂದರು ಎಂಬುದು ಗೊತ್ತಿಲ್ಲ. ಹೀಗಾದಲ್ಲಿ ಕ್ರಿಯಾ ಯೋಜನೆಗೆ ಅರ್ಥ ಸಿಗುವುದಿಲ್ಲ ಎನ್ನುವುದು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಹಲವರ ಅಂಬೋಣ. ಮೇಲೆ ಉಲ್ಲೇಖಿಸಿರುವುದು ಕೇವಲ ಶಿಕ್ಷಣ ಮತ್ತು ಬಾಲಕಾರ್ಮಿಕ ಪರಿಸ್ಥಿತಿ ಕುರಿತಂತೆ. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಹಯೋಗದೊಡನೆ 2003-2010ರ ರಾಜ್ಯ ಮಕ್ಕಳ ಕ್ರಿಯಾ ಯೋಜನೆಯನ್ನು ಹೊರತಂದಿತ್ತು. ಇದರಲ್ಲಿಯೂ ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ, ಹದಿಹರೆಯದ ಹೆಣ್ಣುಮಕ್ಕಳ ಇವೇ ಮೊದಲಾದವುಗಳಿಗೆ ಸಂಬಂಧಿಸಿದ ಹಲವಾರು ಸೂಚಕಗಳಿಗೆ ಸಾಧಿಸುವ ಗುರಿಗಳನ್ನು ನಿಗಧಿಪಡಿಸಲಾಗಿತ್ತು. ಈ ಕ್ರಿಯಾ ಯೋಜನೆಯ ಗತಿಯೂ ಮೇಲಿನ ಕ್ರಿಯಾಯೋಜನೆಗಳಂತೆಯೇ ಆಯಿತು. ಏಕೆಂದರೆ ಬಹುತೇಕ ಇಲಾಖೆಗಳಿಗೆ ಕ್ರಿಯಾ ಯೋಜನೆಗಳನ್ನು ಹೊರತರುವುದು ಸಡಗರವೇ ಹೊರತು ಅದರಲ್ಲಿನ ಗುರಿಗಳ ಅನುಸರಣೆ ಮಾಡುವುದಕ್ಕಲ್ಲ. ಆದರೂ ಹಿಂದಿನ ಕ್ರಿಯಾ ಯೋಜನೆಯಲ್ಲಿ ಸಾಧಿಸಿದ್ದೆಷ್ಟೆಂದು ವಿಶ್ಲೇಷಿಸದ ಮತ್ತೊಂದು ಕ್ರಿಯಾ ಯೋಜನೆಯನ್ನು ಹೊರತರುವ ಸಡಗರಕ್ಕೆ ಸಂಬಂಧಿಸಿದ ಇಲಾಖೆ ಮುಂದಾಗುವುದಕ್ಕೆ ಏನೆನ್ನಬೇಕೋ ಗೊತ್ತಿಲ್ಲ. ಇಲಾಖಾ ಹೊಂದಾಣಿಕೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹೊಂದಾಣಿಕೆಗೆ ಬಂದರೆ ಅಂಕಿಅಂಶಗಳ ಪರಿಸ್ಥಿತಿ ಇನ್ನೂ ಹಾದಿತಪ್ಪಿರುವುದು ಕಂಡುಬರುತ್ತದೆ. ನಿರ್ದಿಷ್ಟ ಸೂಚಕಕ್ಕೆ ಸಂಬಂಧಿಸಿದಂತೆ ಒಂದು ಇಲಾಖೆ ನೀಡಿದ ಅಂಕಿಅಂಶಗಳು ಇನ್ನೊಂದು ಇಲಾಖೆ ನೀಡುವ ಅಂಕಿಅಂಶಗಳಿಗೆ ಭಿನ್ನವಾಗಿರುತ್ತವೆ. ಉದಾಹರಣೆಗೆ ಯಾವುದೇ ಗ್ರಾಮದಲ್ಲಿ ರೋಗ ನಿರೋಧಕಗಳನ್ನು ನೀಡಿರುವ ಮಕ್ಕಳ ಸಂಖ್ಯೆ ಎಂದು ಅಂಗನವಾಡಿ ಕಾರ್ಯಕರ್ತೆ ನೀಡುವುದಕ್ಕೂ ಮತ್ತು ಕಿರಿಯ ಆರೋಗ್ಯ ಸಹಾಯಕಿ ನೀಡುವುದಕ್ಕೂ ವ್ಯತ್ಯಾಸವಿರುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗ್ರಾಮ ಮಟ್ಟದಲ್ಲಿ ಇಲಾಖೆಗಳು ನೀಡುವ ಅಂಕಿಅಂಶದಲ್ಲಿರುವ ವೈರುಧ್ಯಗಳು ಜಿಲ್ಲಾಮಟ್ಟ ಅಥವಾ ರಾಜ್ಯ ಮಟ್ಟದಲ್ಲಿ ಕ್ರೋಡೀಕರಣಗೊಳ್ಳುವ ಸಮಯಕ್ಕೆ ಕೆಲವೊಮ್ಮೆ ಅತ್ಯಂತ ನಾಜೂಕಾಗಿ ಹೊಂದಾಣಿಕೆಯಾಗಿರುತ್ತವೆ! ವಿವಿಧ ಇಲಾಖೆಗಳು ನೀಡುವ ಅಂಕಿಅಂಶಗಳನ್ನು ಸಂಗ್ರಹಿಸಿ ಸಮಗ್ರವಾದ ಮಾಹಿತಿ ನೀಡುವ ಸಲುವಾಗಿಯೇ ಇರುವ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಧಿಕಾರಿಗಳೂ ಸಹ ಈ ವೈರುಧ್ಯವನ್ನು ಗಮನಿಸುವುದಿಲ್ಲ ಅಥವಾ ಗಮನಿಸಿದರೂ ಅವರಿಗೆ ಜಾಣ ಕುರುಡು. ಇನ್ನು ಮಕ್ಕಳ ಕುರಿತಾದ ಕೆಲವು ಸೂಚಕಗಳಾದ ಬಾಲ್ಯವಿವಾಹ, ಪ್ರಾಯ ಪೂರ್ವ ಹೆರಿಗೆ ಮೊದಲಾದವುಗಳು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ದಾಖಲಿಸುವುದೇ ಇಲ್ಲ. ಅನೇಕ ರಾಷ್ಟ್ರೀಯ ಸಮೀಕ್ಷೆಗಳು ರಾಜ್ಯದಲ್ಲಿ ಪ್ರತಿಶತ 23ರಷ್ಟು ಬಾಲ್ಯವಿವಾಹವಾಗುತ್ತಿವೆ ಮತ್ತು ಪ್ರತಿಶತ 19ರಷ್ಟು ಹೆರಿಗೆಗಳು 15-19 ವರ್ಷದ ವಯೋಮಾನದವರಿಗೆ ಆಗುತ್ತಿದೆ ಎಂದು ಹೇಳುತ್ತಿದ್ದರೂ ಸಹ, ಅವು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳಲ್ಲಿ ದಾಖಲಾಗುವುದಿಲ್ಲ. ಏಕೆಂದರೆ ಯಾವುದೇ ಅಧಿಕಾರಿ ಇವುಗಳನ್ನು ದಾಖಲು ಮಾಡಿದರೆ ಅವರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ! ಹಾಗಾಗಿ ಯಾರೂ ಬಾಲ್ಯವಿವಾಹ ಮತ್ತು 18 ವರ್ಷದೊಳಗಿನ ಗರ್ಭಿಣಿಯರ ಸಂಖ್ಯೆಯನ್ನಂತೂ ದಾಖಲಿಸುವುದೇ ಇಲ್ಲ! ಹಲವಾರು ಬಾರಿ ಅಂಗನವಾಡಿ ಕಾರ್ಯಕರ್ತೆ ಅಥವಾ ಕಿರಿಯ ಆರೋಗ್ಯ ಸಹಾಯಕಿ ಇವುಗಳನ್ನು ದಾಖಲಿಸಿದರೂ, ಈ ಮಾಹಿತಿ ತಾಲೂಕು ಅಥವಾ ಜಿಲ್ಲಾ ಮಟ್ಟದಲ್ಲಿ ಕ್ರೋಡೀಕರಣಗೊಂಡಾಗ ನಾಪತ್ತೆಯಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಮಕ್ಕಳ ಯಾವುದೇ ಸಮಸ್ಯೆಗೆ ಅದಕ್ಕೆ ಸಂಬಂಧಪಟ್ಟ ಇಲಾಖೆ ತಾನೇ ಸಂಪೂರ್ಣ ಹೊಣೆ ಎಂದು ಭಾವಿಸಿರುವುದು. ಉದಾಹರಣೆಗೆ ಬಾಲಕಾರ್ಮಿಕ ಪದ್ಧತಿ ಇನ್ನೂ ಜಾರಿಯಲ್ಲಿದ್ದರೆ, ಅದು ಕಾರ್ಮಿಕ ಇಲಾಖೆಯ ಪರಿಮಿತಿಯಲ್ಲಿ ಬರುವುದರಿಂದ ಅದಕ್ಕೆ ಕಾರ್ಮಿಕ ಇಲಾಖೆ ತಾನೇ ಸಂಪೂರ್ಣ ಹೊಣೆ ಎಂದು ಭಾವಿಸಿರುವುದರಿಂದ ಅಥವಾ ಕಾರ್ಮಿಕ ಇಲಾಖೆಯನ್ನೇ ಹೊಣೆ ಮಾಡುವ ವಾಡಿಕೆಯ ಪರಿಪಾಠ ಇರುವುದರಿಂದ, ರಾಜ್ಯದಲ್ಲಿರುವ ಬಾಲಕಾರ್ಮಿಕರ ಸಂಖ್ಯೆಯ ಕುರಿತು ವಾಸ್ತವ ಚಿತ್ರಣವನ್ನು ಇಲಾಖೆ ನೀಡುವುದಿಲ್ಲ. ಆದರೆ ನಿಜಕ್ಕೂ ಇದು ಕೇವಲ ಕಾರ್ಮಿಕ ಇಲಾಖೆಯ ಜವಾಬ್ದಾರಿಯಲ್ಲ. ಸ್ಥಳೀಯ ಸರ್ಕಾರ, ಹಲವು ಇಲಾಖೆಗಳ ಸಂಯೋಜಿತ ಜವಾಬ್ದಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳು, ಸಮುದಾಯ, ಪೋಷಕರು ಇವೇ ಮೊದಲಾದವರ ಪಾತ್ರವೂ ಇದರಲ್ಲಿ ಮುಖ್ಯವಾಗುತ್ತದೆ. ರಾಷ್ಟ್ರೀಯ ಸಾಂಖ್ಯಿಕ ಆಯೋಗ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅಂಕಿಅಂಶಗಳನ್ನು ಸಂಗ್ರಹಿಸಲು ಇರುವ ತೊಂದರೆಗಳು ಮತ್ತು ವಿವಿಧ ಇಲಾಖೆಗಳು ನೀಡುವ ಅಂಕಿಅಂಶಗಳ ವೈರುಧ್ಯಗಳನ್ನು ನಿವಾರಿಸಿ, ಸರ್ಕಾರಿ ಇಲಾಖೆಗಳು ನೀಡುವ ಅಂಕಿಅಂಶಗಳ ಮೇಲೆ ಸಾರ್ವಜನಿಕರ ವಿಶ್ವಾಸವನ್ನು ಗಳಿಸುವ ಸಲುವಾಗಿ ಕೇಂದ್ರ ಸರ್ಕಾರ 2006ರಲ್ಲಿ ರಾಷ್ಟ್ರೀಯ ಸಾಂಖ್ಯಿಕ ಆಯೋಗವನ್ನು (National Statistical Commission) ರಚಿಸಿತು. ಆರಂಭದ ದಿನಗಳಲ್ಲಿ ಆಯೋಗವು ಜನಗಣತಿಯೂ ಸೇರಿದಂತೆ ದೇಶದಲ್ಲಿರುವ ಸುಮಾರು 60ಕ್ಕೂ ಹೆಚ್ಚು ಆಯ್ದ ಸಮೀಕ್ಷೆಗಳಲ್ಲಿ (Sample Survey) ಅಂಕಿಅಂಶಗಳ ಸಂಗ್ರಹಣೆ, ವಿಶ್ಲೇಷಣೆ ಮತ್ತು ಹಂಚಿಕೆಗಳಲ್ಲಿ ಏಕರೂಪತೆಯನ್ನು ತರಲು ಪ್ರಯತ್ನಿಸಿತು. ಇದರ ಪ್ರಯತ್ನದ ಫಲವಾಗಿ 2008ರಲ್ಲಿ ಭಾರತೀಯ ಸಾಂಖ್ಯಿಕ ಕಾಯ್ದೆ ಜಾರಿಗೆ ಬಂದರೂ ಇದಕ್ಕೆ ಪೂರಕವಾಗಿ ಸಾಂಖ್ಯಿಕ ಸಂಗ್ರಹಣಾ ನಿಯಮಗಳು ಜಾರಿಗೆ ಬಂದದ್ದು 2001ರಲ್ಲಿ. ಆದರೆ ಎಲ್ಲಾ ಆಯೋಗಗಳಂತೆಯೇ ಈ ಆಯೋಗವನ್ನೂ ಸರ್ಕಾರ ನಿಜವಾದ ಅರ್ಥದಲ್ಲಿ ಸದೃಢ ಮತ್ತು ಸ್ವಾಯತ್ತಗೊಳಿಸಲಿಲ್ಲ. ಇದಕ್ಕೆ ಕಾರಣ ನೀತಿನಿರೂಪಕರಿಗೆ ಅಂಕಿಸಂಖ್ಯೆಗಳ ಮೇಲಿರುವ ನಿರ್ಲಕ್ಷ್ಯ, ಪ್ರಬಲ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ವಾಸ್ತವ ಚಿತ್ರಣವನ್ನು ಜನರ ಮುಂದಿಡುವ ಅನಿವಾರ್ಯತೆಗೆ ಒಡ್ಡಿಕೊಳ್ಳದಿರುವ ಆಡಳಿತ ವ್ಯವಸ್ಥೆ. ಸರ್ಕಾರದ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು, ಅದರಲ್ಲೂ ವಿಶೇಷವಾಗಿ ಸಾಂಖ್ಯಿಕ ತಜ್ಞರೂ ಮತ್ತು ಸಂಸ್ಥೆಗಳು ಧ್ವನಿ ಎತ್ತದಿದ್ದ ಪರಿಣಾಮವಾಗಿ ಆಯೋಗದಲ್ಲಿ ಆರಂಭದಲ್ಲಿ ರೂಪಿಸಿದ್ದ ಅರೆಕಾಲಿಕ ಅಧ್ಯಕ್ಷರು, ಅರೆಕಾಲಿಕ ಸದಸ್ಯರು ಆಯೋಗದಲ್ಲಿರುವ ಪದ್ಧತಿ ಇನ್ನೂ ಮುಂದುವರೆದುದರಿಂದ ಮತ್ತು ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡದಿದ್ದುದರ ಸಲುವಾಗಿ, ನಿಜವಾದ ಆಸಕ್ತರು ಮತ್ತು ಅರ್ಹರು ಆಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಾಗಲಿಲ್ಲ ಮತ್ತು ಆಯೋಗವನ್ನು ಸದೃಢಗೊಳಿಸಲಾಗಲಿಲ್ಲ. ಸ್ವಯಂಸೇವಾ ಸಂಸ್ಥೆಗಳ ಪಾತ್ರ ಮಕ್ಕಳ ಹಕ್ಕುಗಳ ಜಾರಿಗಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾವಿರಾರು ಸ್ವಯಂಸೇವಾ ಸಂಸ್ಥೆಗಳು ದುಡಿಯುತ್ತಿವೆ. ಅಂಕಿಸಂಖ್ಯೆಗಳ ವಿಷಯಕ್ಕೆ ಬಂದರೆ ಸ್ವಯಂಸೇವಾ ಸಂಸ್ಥೆಗಳಿಗೂ ಮತ್ತು ಸರ್ಕಾರಿ ಇಲಾಖೆಗಳಿಗೂ ಅಷ್ಟೇನೂ ವ್ಯತ್ಯಾಸವಿಲ್ಲ. ಇಬ್ಬರದೂ ದಿವ್ಯ ನಿರ್ಲಕ್ಷ್ಯ. ಬಹುತೇಕ ಸ್ವಯಂಸೇವಾ ಸಂಸ್ಥೆಗಳು ಹಲವಾರು ವರ್ಷಗಳಿಂದ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಮುದಾಯದೊಡನೆ ಮಕ್ಕಳ ಹಕ್ಕುಗಳ ಜಾರಿಗಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ತಮ್ಮ ಮಧ್ಯವರ್ತಿಕೆಯಿಂದ ಆಗಿರುವ ಪರಿಣಾಮಗಳ ಕುರಿತು ಕೇವಲ ಮಾತಿನಲ್ಲಿ ಉಲ್ಲೇಖಿಸುತ್ತಾರೆಯೇ ಹೊರತು ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ ನಿಖರವಾದ ಅಂಕಿ ಅಂಶಗಳಿಂದ ಅವುಗಳನ್ನು ನಿರೂಪಿಸುವುದಿಲ್ಲ. ಪ್ರಾಯಶಃ ಅದಕ್ಕೆ ಕಾರಣ ಬಹುತೇಕ ಸ್ವಯಂಸೇವಾ ಸಂಘಟನೆಗಳಿಗೆ ಮಾಹಿತಿ ಸಂಗ್ರಹಣಾ ವಿಧಾನ ಮತ್ತು ವಿಶ್ಲೇಷಣೆ ಮಾಡುವ ಬಗ್ಗೆ ಪರಿಣಿತಿ ಇರುವುದಿಲ್ಲ, ಕೆಲವರಿಗೆ ಇದ್ದರೂ ಸಮಯ ಮತ್ತು ಅದಕ್ಕೆ ತಗಲುವ ವೆಚ್ಚವನ್ನು ಭರಿಸುವ ಶಕ್ತಿಯಿರುವುದಿಲ್ಲ. ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯು 2003-06ರ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಮೂರು ತಾಲೂಕುಗಳ ಹದಿನೈದು ಗ್ರಾಮಪಂಚಾಯಿತಿಗಳಲ್ಲಿ ಮಕ್ಕಳ ಕುರಿತಾದ ಮಾಹಿತಿ ಸಂಗ್ರಹಿಸಿ (ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇವೇ ಮೊದಲಾದವುಗಳಿಂದ) ಕಂಡುಕೊಂಡ ಅಂಶಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಡನೆ ಹಂಚಿಕೊಂಡ ಪರಿಣಾಮವಾಗಿ ಇಲಾಖೆಯು ಪ್ರತಿಯೊಂದು ಗ್ರಾಮ ಪಂಚಾಯಿತಿಯೂ ನವೆಂಬರ್ ತಿಂಗಳಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗಳನ್ನು ನಡೆಸಬೇಕೆಂದು ಸುತ್ತೋಲೆಯನ್ನು ಹೊರಡಿಸಿತು. ಈ ಸುತ್ತೋಲೆಯ ಪ್ರಕಾರ ಈ ವಿಶೇಷ ಗ್ರಾಮಸಭೆಗಳನ್ನು ನಡೆಸುವ ಮೊದಲು ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಮಕ್ಕಳ ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಬಾಲ್ಯವಿವಾಹ, ರಕ್ಷಣೆ ಇವೇ ಮೊದಲಾದ ಅಂಕಿ ಅಂಶಗಳನ್ನು ಸಂಗ್ರಹಿಸಿ, ಅವುಗಳನ್ನು ಆಧಾರವಾಗಿಟ್ಟುಕೊಂಡು ಗ್ರಾಮಸಭೆಯಲ್ಲಿ ಚರ್ಚಿಸಬೇಕು ಮತ್ತು ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯಲು ಅವಶ್ಯವಿರುವ ಎಲ್ಲಾ ನಿರ್ಧಾರಗಳನ್ನು ಸ್ಥಳೀಯವಾಗಿಯೇ ತೆಗೆದುಕೊಳ್ಳುವುದರ ಜೊತೆಗೆ ಅವುಗಳ ಜಾರಿಗಾಗಿ ಸ್ಥಳೀಯ ಮಟ್ಟದ ಕ್ರಿಯಾಯೋಜನೆ ಮಾಡಿ ಯತ್ನಿಸಬೇಕು ಎಂದಿದೆ. ಇಂತಹದೇ ಕೆಲವು ಪ್ರಯತ್ನಗಳನ್ನು ಮಕ್ಕಳ ರೋಗನಿರೋಧಕಗಳನ್ನು ಕುರಿತು ಇರುವ ವಾಸ್ತವ ಅಂಕಿಸಂಖ್ಯೆಗಳನ್ನಿಟ್ಟುಕೊಂಡು ಎ.ಪಿ.ಡಿ (ಅಸೋಷಿಯೇಷನ್ ಆಫ್ ಪೀಪಲ್ ವಿತ್ ಡಿಸೇಬಲಿಟೀಸ್) ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಜನಾಂದೋಲನ ನಡೆಸಿತು. ಸ್ಥಳೀಯ ಸರ್ಕಾರಕ್ಕೆ ಇದರ ಪ್ರಾಮುಖ್ಯತೆಯನ್ನು ವಿವರಿಸಿ, ಅಂಗನವಾಡಿಗಳು ಮತ್ತು ಆರೋಗ್ಯ ಕಾರ್ಯಕರ್ತೆಯರ ಸಹಭಾಗಿತ್ವದಲ್ಲಿ ಸಂಪೂರ್ಣ ರೋಗನಿರೋಧಕ ಲಸಿಕೆ ಹಾಕಿಸುವುದು ಅದರಿಂದ ಶಿಶುಮರಣ ತಡೆ ಮತ್ತು ಅಂಗವಿಕಲತೆ ತಡೆ ಸಾಧ್ಯ ಎಂಬುದನ್ನು ನಿರೂಪಿಸಿತು. ಅಂಗವಿಕಲತೆ ಮತ್ತು ರೋಗನಿರೋಧಕಗಳನ್ನು ಹಾಕಿಸಿರುವ ಕುರಿತು ನಿರ್ದಿಷ್ಟ ಅಂಕಿಸಂಖ್ಯೆಗಳ ಮಾಹಿತಿ ಇದ್ದ ಕಾರಣ ಈ ಸಾಧನೆ ಸಾಧ್ಯವಾಯಿತು. ಇಂತಹ ಇನ್ನೊಂದು ಪ್ರಯೋಗ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕಳೆದ ಆರು ವರ್ಷಗಳಲ್ಲಿ (2006-12) ನಡೆದಿದೆ. ಅಲ್ಲಿ ಕ್ರಿಯಾಶೀಲವಾಗಿರುವ ಸ್ನೇಹ ಎನ್ನುವ ಸ್ವಯಂಸೇವಾ ಸಂಸ್ಥೆ ಇಡೀ ತಾಲ್ಲೂಕಿನ ಮಕ್ಕಳ ಸಮೀಕ್ಷೆ ನಡೆಸಿ, ಶಾಲೆಗೆ ದಾಖಲಾಗಿರುವ ಮಕ್ಕಳು ಮತ್ತು ಶಾಲೆಯಲ್ಲಿ ಇಲ್ಲದ ಮಕ್ಕಳು, ಶಾಲೆ ಮಧ್ಯದಲ್ಲೇ ಬಿಟ್ಟ ಮಕ್ಕಳು, ಬಾಲಕಾರ್ಮಿಕರ ಸ್ಥಿತಿಗತಿಯ ವರದಿಯನ್ನು ಮಾಡಿತು. ಇದಕ್ಕೆ ಪೂರಕವಾಗಿ, ಎಷ್ಟು ಶಾಲೆಗಳಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಅನುಪಾತ ಎಷ್ಟಿದೆ, ಶಾಲೆಗಳಲ್ಲಿ ಕೊಠಡಿಗಳ ಸಂಖ್ಯೆ, ಶಾಲೆಗಳಲ್ಲಿರುವ ಶೌಚಾಲಯಗಳು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಇರುವುದು ಮತ್ತು ಸದಸ್ಯರ ಕ್ರಿಯಾಶೀಲತೆಯನ್ನೂ ತನ್ನ ವರದಿಯಲ್ಲಿ ಒಳಗೊಂಡಿತ್ತು. ಈ ಎಲ್ಲ ಮಾಹಿತಿಗಳು ದಾಖಲೆ ಸಮೇತ ಇದ್ದುದರಿಂದ ಸಂಸ್ಥೆ ಶಿಕ್ಷಣ ಇಲಾಖೆಯೊಡನೆ ಸಮಾಲೋಚನೆ ನಡೆಸಿ, 'ಶಿಕ್ಷಣದ ಸಾರ್ವತ್ರೀಕರಣ' ಚಳವಳಿಯನ್ನು ಕೂಡ್ಲಿಗಿ ತಾಲ್ಲೂಕಿನಲ್ಲಿ ನಡೆಸಲು ಸಾಧ್ಯವಾಯಿತು. ಅಂಕಿಸಂಖ್ಯೆಯ ಬೆಂಬಲದ ಆಧಾರದಿಂದಲೇ ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ 'ಪಡಿ/ವೆಲೋರೆಡ್' ಸಂಸ್ಥೆ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸುವ ದಿಶೆಯಲ್ಲಿ ದಾಪುಗಾಲು ಇಡಲು ಸಾಧ್ಯವಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಬಾಲ್ಯವಿವಾಹ ಪ್ರಕರಣಗಳನ್ನು ಸರ್ಕಾರ ನಿರಾಕರಿಸುತ್ತಲೇ ಇದ್ದಾಗ, ಧಾರವಾಡದ ಕಿಡ್ಸ್, ಬಿಜಾಪುರದ ಉಜ್ವಲಾ ಮತ್ತು ರೀಚಸ್ ಸಂಸ್ಥೆಗಳು ನಡೆಸಿದ ಕಿರು ಅಧ್ಯಯನ ಮತ್ತು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ನಡೆಸಿದ ಕ್ಷೇತ್ರಾಧ್ಯಯನದ ಫಲವಾಗಿ ಕರ್ನಾಟಕ ಉಚ್ಚ ನ್ಯಾಯಾಲಯ 'ಬಾಲ್ಯವಿವಾಹ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ'ಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಯಿತು. ನ್ಯಾಯಾಲಯ ನೀಡಿದ ಸೂಚನೆಯಂತೆ 'ಬಾಲ್ಯವಿವಾಹ ತಡೆ ಕುರಿತು ಉನ್ನತಾಧಿಕಾರದ ಸಮಿತಿ'ಯನ್ನು ಸರ್ಕಾರ ರಚಿಸಿತು. ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆ/ಮಕ್ಕಳ ಹಕ್ಕುಗಳ ನಿಗಾ ಕೇಂದ್ರ 2005ರಿಂದಲೂ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಮಕ್ಕಳ ಕುರಿತಾದ ಅಂಕಿಅಂಶಗಳನ್ನು ಸಂಗ್ರಹಿಸಿ, ವಿಶ್ಲೇಷಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಅಂಶಗಳನ್ನು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ದುಡಿಯುತ್ತಿರುವ ಹಲವಾರು ಸ್ವಯಂಸೇವಾ ಸಂಸ್ಥೆಗಳು ವಕೀಲಿಗಾಗಿ, ಮಾಧ್ಯಮ ಮಿತ್ರರು ತಮ್ಮ ಮಕ್ಕಳ ಕುರಿತಾದ ವರದಿಗಳಲ್ಲಿ ಬಳಸಿಕೊಳ್ಳುತ್ತಿರುವುದರ ಜೊತೆಗೆ ರಾಜ್ಯದ ಹಲವಾರು ಶಾಸಕರು, ಸಂಶೋಧಕರು ಮತ್ತು ಆಸಕ್ತರು ಮಕ್ಕಳ ಕುರಿತಾದ ಅಂಕಿಅಂಶಗಳಿಗಾಗಿ ಸಂಸ್ಥೆಯನ್ನು ಸಂಪರ್ಕಿಸುತ್ತಿದ್ದಾರೆ. ಮೇಲೆ ಹೇಳಿದ ಬಾಲ್ಯವಿವಾಹ ತಡೆ ಕುರಿತು ಸರ್ಕಾರ ನೇಮಿಸಿದ ಉನ್ನತಾಧಿಕಾರದ ಸಮಿತಿಗೂ ಸಹ ಸಂಸ್ಥೆಯು ಬಾಲ್ಯವಿವಾಹ, ಕಾರಣಗಳು ಮತ್ತು ಅದರ ಪರಿಣಾಮಗಳು ಇವೇ ಮೊದಲಾದವುಗಳ ಕುರಿತಾದ ಅಂಕಿಅಂಶಗಳ ವಿಶ್ಲೇಷಣೆಯನ್ನು ಒದಗಿಸಿತ್ತು. ರಾಜ್ಯ ಮಟ್ಟದ ಮತ್ತು ದಕ್ಷಿಣಭಾರತ ಮಟ್ಟದ ಹಲವಾರು ಕಾರ್ಯಾಗಾರಗಳಲ್ಲಿಯೂ ಸಹ ಇವುಗಳನ್ನು ಅನೇಕರು ಬಳಸುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಕ್ಕಳ ಕುರಿತಾದ ಬಹಳಷ್ಟು ಅಂಕಿಅಂಶಗಳು ದೊರೆಯತ್ತವೆ ಮತ್ತು ಜಿಲ್ಲಾ ಮಟ್ಟದಲ್ಲಿಯೂ ಹಲವಾರು ಅಂಕಿಅಂಶಗಳು ದೊರೆಯುತ್ತವೆ. ಆದರೆ ತಾಲ್ಲೂಕು ಮತ್ತು ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಕುರುತು ಯಾವುದೇ ಅಂಕಿಅಂಶಗಳು ದೊರೆಯುವುದಿಲ್ಲ. ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಕ್ಕಳ ವಾಸ್ತವ ಸ್ಥಿತಿಗತಿ ಕುರಿತು ಅಂಕಿಅಂಶಗಳು ಲಭ್ಯವಿರಬೇಕು ಮತ್ತು ಅವುಗಳ ಆಧಾರದ ಮೇಲೆ ಗ್ರಾಮ ಪಂಚಾಯಿತಿಗಳು ಮಕ್ಕಳ ಕ್ರಿಯಾ ಯೋಜನೆಗಳನ್ನು ತಯಾರಿಸಿ, ಜಾರಿಮಾಡಬೇಕು ಎಂದು ಚೈಲ್ಡ್ ರೈಟ್ಸ್ ಸಂಸ್ಥೆ ಅನೇಕ ವರ್ಷಗಳ ಕಾಲ ನಡೆಸಿದ ಪ್ರಯತ್ನದ ಫಲವೇ 2006ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಸುತ್ತೋಲೆ. ಈ ಸುತ್ತೋಲೆಯ ಆಶಯದಂತೆ ಪ್ರತಿಯೊಂದು ಗ್ರಾಮಪಂಚಾಯಿತಿ ಮತ್ತು ಸ್ಥಳೀಯವಾಗಿ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಘಟನೆಗಳು ಮಕ್ಕಳ ಕುರಿತಾದ ಅಂಕಿಅಂಶಗಳನ್ನು ಕಾಲಕಾಲಕ್ಕೆ ಸಂಗ್ರಹಿಸಿ, ವಿಶ್ಲೇಷಿಸಿ, ಹಿಂದಿನ ಅಂಕಿಅಂಶಗಳಿಗೆ ತುಲನೆ ಮಾಡಿ, ಪರಿಸ್ಥಿತಿಗೆ ತಕ್ಕಂತೆ ಮಕ್ಕಳ ಪರವಾದ ನಿರ್ಣಯಗಳನ್ನು ತೆಗೆದುಕೊಂಡದ್ದೇ ಆದಲ್ಲಿ ಕರ್ನಾಟಕವು ಮಕ್ಕಳ ಸ್ನೇಹಿ ರಾಜ್ಯವಾಗುವುದರಲ್ಲಿ ಅನುಮಾನವಿಲ್ಲ. ಸತೀಶ್ ಜಿ.ಸಿ. ಸಹನಿರ್ದೇಶಕರು ಚೈಲ್ಡ್ ರೈಟ್ಸ್ ಟ್ರಸ್ಟ್, # 4606, ಹೈಪಾಯಿಂಟ್ 4, ಅರಮನೆ ರಸ್ತೆ, ಬೆಂಗಳೂರು-01 (ಎಲ್ಲ ಅಭಿಪ್ರಾಯಗಳು ಲೇಖಕರದ್ದು)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|