Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications

ಇರಾಣ ದೇಶದ ಜನಪರ ಸೂಫೀ ಕವಿ ಶೇಖ್ ಸಾದಿ

10/12/2017

0 Comments

 
Picture
ಮೂಲ ಸ್ವಭಾವದ ಮಾನವ ಕುಲವೊಂದೆ
ಆತನ ಜೀವನ ಅರಳುವ ನೆಲವೊಂದೆ ;
ಪೆಟ್ಟು ತಿಂದಿತೋ ಯಾವುದೆ ಅವಯವವು
ಉಳಿದೆಲ್ಲವು ತಕ್ಷಣ ಎಚ್ಚರಗೊಳ್ಳುವವು;
ಯಾರ ನೋವಿಗೂ ಸ್ಪಂದಸದಿರುವವರು
ಮನುಜನ ಹೆಸರಿಗೇ ಕಳಂಕ ತರುವವರು !
      
ಇದು ಇರಾಣ ದೇಶದ 12ನೆಯ ಶತಮಾನದ ಜನಪರ ಸೂಫೀ ಕವಿ ಶೇಖ್ ಸಾದಿಯವರ ಗುಲಿಸ್ತಾನ್ (ಹೂದೋಟ) ಎಂಬ ಕಾವ್ಯಸಂಕಲನದಲ್ಲಿಯ ಒಂದು ಮಾರ್ಮಿಕ ಮಾದರಿ. ಕವಿಗೆ ವಿಶ್ವವಿಖ್ಯಾತಿಯನ್ನು ತಂದಿತ್ತ ಸರಳ ಕವಿತೆ. ಮಾನವಕುಲದಲ್ಲಿರುವ ಸಮಾನತೆ ಮತ್ತು ಏಕತೆಯನ್ನೇ ಲೋಕಕ್ಕೆ ನೆನಪಿಸಿಕೊಟ್ಟ ಈ ಸುಧಾರಕ ಮನೋವೃತ್ತಿಯ ಸೂಫಿ ಕವಿ ಭೌಗೋಲಿಕವಾಗಿ ದೂರವಿದ್ದರೂ ನಮ್ಮ ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಸಾಹಿತ್ಯಾಂದೋಲನದ ಸಮಕಾಲೀನನಾಗಿದ್ದನೆನ್ನುವುದು ಒಂದು ಆಕಸ್ಮಿಕ. ಹಾಗೆ ಯೋಚಿಸಿದರೆ ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ! ಎಂಬ ಅಲ್ಲಮವಾಣಿಯನ್ನೇ ನೆನಪಿಸುವ ಹೋಲಿಕೆಯಿದು. ಎತ್ತಣ ಕರ್ನಾಟಕ ಎತ್ತಣ ಇರಾಣ! ಎತ್ತಣ ಕಲ್ಯಾಣ ಎತ್ತಣ ಶಿರಾಜ್ ಪಟ್ಟಣ! ಶಿರಾಜ್ ಇರಾಣ ದೇಶದಲ್ಲಿ 6ನೆಯ ದೊಡ್ಡ ಪಟ್ಟಣ. ಕವಿಗಳು, ಮದಿರೆ ಮತ್ತು ತರತರದ ಹೂವುಗಳಿಗೆ ಹೆಸರಾದ ಪಟ್ಟಣ. ಪಟ್ಟಣದ ತುಂಬೆಲ್ಲ ಹಸಿರು ಮುರಿಯುವ ತೋಟಗಳು, ಕಣ್ಣು ಕೋರೈಸುವ ರಸಭರಿತ ಹಣ್ಣುಗಳು. ಇಂಥ ಸುಂದರವಾದ ಪಟ್ಟಣದಲ್ಲಿ 1184 ರಲ್ಲಿ ಜನ್ಮವೆತ್ತ್ತಿ ಬದುಕಿನ ಏರು-ಪೇರುಗಳನ್ನೆಲ್ಲ ದಾಟಿ ಸಾವು-ನೋವುಗಳನ್ನೆಲ್ಲ ಮೀಟಿ ಮುಸ್ಲಹುದ್ದೀನ್ (ಧರ್ಮಸುಧಾರಕ) ಎನಿಸಿಕೊಂಡ ಈ ಮಹಾಚಿಂತಕ ಕವಿ ಶೇಖ್ ಸಾದಿಯವರೂ ಸರಿಸುಮಾರು ನಮ್ಮ ನಾಡಿನ ಶರಣರಾಂದೋಲನದ ಕಾಲದಲ್ಲಿಯೇ ಹೆಚ್ಚು-ಕಡಿಮೆ ಅವರಂಥದೇ ಸಂದೇಶವನ್ನು ತಮ್ಮ ಸರಳ ಶೈಲಿಯ ಕಾವ್ಯಮಾಧ್ಯಮದ ಮೂಲಕ ಸಾರಿದ್ದೊಂದು ಯೋಗಾಯೋಗವೆನ್ನಬೇಕು. ವೈಚಾರಿಕ ಹಾಗೂ ಸಾಂಸ್ಕೃತಿಕ ಜಾಗತೀಕರಣಕ್ಕೆ ಯಾವ ದೇಶವೇನು! ಯಾವ ಕಾಲವೇನು! ವೈಚಾರಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ನಡುವೆಯೂ ಸಾಮ್ಯದ ರಸಸ್ಥಾನಗಳು ಬೆಳೆದು ನಿಂತೇ ಇರುತ್ತವೆ ! ಕೂತಲ್ಲೇ ಕೂತು ವೈಚಾರಿಕ ಸ್ವರೂಪದ ವಿಶ್ವವ್ಯಾಪಕ ಪರ್ಯಟನ ಮಾಡುವವರಿಗೆ ಇವೆಲ್ಲ ಕುತೂಹಲದ ಸಂಗತಿಗಳೇ. ಶೇಖ್ ಸಾದಿ ಕನ್ನಾಡಿನ ವಚನಸಾಹಿತ್ಯದ ಗಾಳಿಯುಂಡವರಂತೆ ಹಾಡಿದರೂ, ಅವರು ಬದುಕಿದ್ದು ಹಿಂಡನಗಲಿದ ಗಜವಾಗಿ ಊರೂರಿಗೆ ಅಲೆದ ನಮ್ಮ ಸರ್ವಜ್ಞ ಕವಿಯಂತೆ. ಅವರು ಸದಾ ಸಂಚಾರಿ; ವಿಶ್ವವಿರಾಗಿ! ಫಕೀರ ವ್ರತವನ್ನು ಸ್ವೀಕರಿಸಿ, ಊರೂರು ಸುತ್ತುತ್ತ, ಅವರು ರಚಿಸಿ ಹಾಡಿದ ಪದ್ಯಗಳಲ್ಲಿ ಒಂದು ಮಾದರಿ ಇಲ್ಲಿದೆ:
ಬೀಸುಗಾಲಿರಿಸಿ ಧಾವಿಸುವ ಕುದುರೆ ನಾನಲ್ಲ
ಅತಿ ಭಾರಕ್ಕೆ ಮೈಗೂಡುವ ಒಂಟೆಯೂ ಅಲ್ಲ !
ನನಗೂಬ್ಬರೂ ಪ್ರಜೆಗಳೆಂಬುವರಿಲ್ಲ
ಸುಲ್ತಾನನಾಣತಿಗೆ ನಾನು ಬಾಗುವನಲ್ಲ !
 
ಇದ್ದ ಸಂಗತಿಗಾಗಿ ನಾನು ಕೊರಗುವನಲ್ಲ
ಕಳೆದು ಹೋದುದಕಾಗಿ ಬೇಸರವು ನನಗಿಲ್ಲ !
ನನ್ನ ಉಸಿರಾಟಕ್ಕೆ ಯಾವ ಅಡೆತಡೆಯಿಲ್ಲ
ನನ್ನ ಬದುಕಿಗೆ ಹೆಚ್ಚು ವೆಚ್ಚವೆಂಬುದೆ ಇಲ್ಲ !
 
ಇಂಥ ನಿರಾಸಕ್ತ, ನಿರಾಡಂಬರ, ಸರಳ ಸಂಪನ್ನ ಜೀವನದ ದಾರಿ ತುಳಿಯುವ ಮೊದಲು, ಶೇಖ್  ಸಾದಿಯವರ ಬದುಕು ಸುಖದ ಸುಪ್ಪತ್ತಿಗೆಯೇನೂ ಆಗಿರಿಲಿಲ್ಲ. ನಮ್ಮ ನಾಡಿನ ಅಣ್ಣ ಬಸವಣ್ಣನವರು  ಸಾರಿದಂತೆ ಲೋಕನಿಷ್ಠುರ ಶರಣನಾರಿಗಂಜುವನಲ್ಲ ಎಂಬಂಥ ಧೋರಣೆಯನ್ನೇ ತಳೆದ ಸ್ವತಂತ್ರ  ಮನೋವೃತ್ತಿಯ ಈ ಸಂಚಾರಿ ಸೂಫೀ ಕವಿಯ ಬಾಲ್ಯ ಮಾತ್ರ ಕಷ್ಟ-ಸಂಕಟಗಳ ಸಂಗಮವೇ ಆಗಿತ್ತು. ಶೇಖ್ ಸಾದಿ ಇನ್ನೂ 12 ವರ್ಷದ ಬಾಲಕನಿದ್ದಾಗಲೇ ಅವರ ತಂದೆ ವಿಧಿವಶರಾದರು. ಆ ನಂತರ, ಶಿರಾಜದಲ್ಲಿ ಒಂದು ಸಣ್ಣ ಅಂಗಡಿ ನಡೆಸುತ್ತಿದ್ದ ಅವರ ಕಕ್ಕ ಅವರನ್ನು ಸಾಕಿ ಸಲುಹಿ ಬೆಳೆಸಿದರು. ವಿದ್ಯಾಬುದ್ಧಿ ಕೊಡಿಸಿದರು. ಸಾದಿಯವರ ಬದುಕಿನ ತರುಣ ಕಾಲದಲ್ಲೇ, ರಾತ್ರಿಯ ಪ್ರಶಾಂತ ಆಗಸದಲ್ಲಿ ಗುಡುಗು-ಸಿಡಿಲು ಹೊಡೆದಂತೆ, ಇರಾಣಿನ ಮೇಲೆ ಚಂಗೀಜ್ ಖಾನನ ಸೈನಿಕ ದಾಳಿ ನಡೆದು ಸಾವಿರಾರು ಅಮಾಯಕರ ಪ್ರಾಣಹಾನಿಯಾಗಿ ಸಾಮಾನ್ಯ ಜನಜೀವನವೆಲ್ಲ ಅಲ್ಲೋಲಕಲ್ಲೋಲವಾಯಿತು. ಅದೊಂದು ಒತ್ತಾಯದ ಧಾರ್ಮಿಕ ಪಲ್ಲಟದ ಪ್ರಸಂಗ. ಇರಾಣೀ ಮುಸಲ್ಮಾನರಿಗೆ ಉಸಿರುಗಟ್ಟಿದ ಅನುಭವ. ನಿಂತ ನೆಲವೇ ಕುಸಿದಂಥ ತೊಳಲಾಟ. ಆಗ ಅಳಿದುಳಿದ ಸಾಮಾನ್ಯ ಜನರಲ್ಲಿ ಮಾನಸಿಕ ಧೈರ್ಯ ತುಂಬುವ ಕೆಲಸದ ಅಗತ್ಯವಿತ್ತು. ಅದನ್ನು ತಮ್ಮ ಕಥೆ-ಕವಿತೆಗಳ ಮೂಲಕ, ಊರೂರು ಸತ್ತಾಡಿ, ಸಮರ್ಥಕವಾಗಿ ನಿಭಾಯಿಸಿದವರು ಶೇಖ್ ಸಾದಿ ಮತ್ತು ಅವರ ಸಮಕಾಲೀನ ಇತರ ಕವಿಗಳು! ಮನುಷ್ಯರಿಂದಲೇ ಮನುಷ್ಯರ ಮೇಲೆ ದಾಳಿಗಳು ನಡೆಯುತ್ತವೆ, ಸಮರಗಳು ಬರುತ್ತವೆ, ಹೋಗುತ್ತವೆ. ಮುಗ್ಧ  ಜನರು ಸಾಯುತ್ತಾರೆ, ಆದರೆ ಮನುಷ್ಯತ್ವ ಸಾಯುವುದಿಲ್ಲ, ಮನುಷ್ಯ-ಧರ್ಮ  ಸಾಯುವುದಿಲ್ಲ. ಆ ಧರ್ಮವೇ ಮನುಷ್ಯರ ಭವಿಷ್ಯತ್ತಿಗೆ ಆಧಾರವಾಗಿ ನಿಲ್ಲುತ್ತದೆ ಎಂಬಿತ್ಯಾದಿ ವಿಚಾರಗಳನ್ನು ಊರೂರಿಗೆ ತಿರುಗಿ ಶೇಖ್ ಸಾದಿ ಬಿತ್ತರಿಸಿದರು.
  
ಅದಕ್ಕೂ ಮುನ್ನ ಶೇಖ್ ಸಾದಿಯವರು ಶಿರಾಜ್ ಪಟ್ಟಣದಿಂದ ಇರಾಕ್ ದೇಶದ ರಾಜಧಾನಿ ಬಗದಾದ್ ನಗರಕ್ಕೆ ಹೋಗಿ ಅಲ್ಲಿಯ ನಿಜಾಮಿಯಾ ವಿಶ್ವವಿದ್ಯಾಲಯದಲ್ಲಿ ಅರೇಬಿಕ್ ಭಾಷೆ-ಸಾಹಿತ್ಯ, ಹದಿಸ್, ಕುರಾನ್ ಪವಿತ್ರ ಗ್ರಂಥದ ವಿವರಣೆ ಹಾಗೂ ಇಸ್ಲಾಮೀ ವಿಜ್ಞಾನದ ಆಳವಾದ ಅಧ್ಯಯನ ಮಾಡಿ ತಮ್ಮ ಸೃಜನಶೀಲ ಕಾರ್ಯಕ್ಕೆ ಸನ್ನದ್ಧರಾಗಿದ್ದರು. ಸುಮಾರು ಮೂರು ದಶಕಗಳಷ್ಟು ಕಾಲ ವಿಶ್ವದ ವಿವಿಧ ದೇಶಗಳ ಜನಜೀವನದ ನೇರ ಅನುಭವ ಹಾಗೂ ಪ್ರಚಲಿತ ವಿಚಾರಧಾರೆಯ ಪರಿಚಯ ಮಾಡಿಕೊಂಡು ತಾಯ್ನಾಡಿಗೆ ಮರಳಿ ಬಂದು ತಮ್ಮ ಲೇಖನಿಗೆ ಬಲದುಂಬಿದ ಕವಿಯಾಗಿದ್ದರು. ಬರಿ ಓದಿನ ಧರ್ಮದಾಚರಣೆಗಿಂತ  ಸರ್ವಮಾನ್ಯ ತತ್ತ್ವಗಳ ತಿಳುವಳಿಕೆಯಿಂದ ಮನುಷ್ಯ ಜೀವನದ ಶುದ್ಧೀಕರಣದತ್ತ ಗಮನ ಹರಿಸಿದವರಾಗಿದ್ದರು.
  
ಶೇಖ್ ಸಾದಿ ಅಪ್ಪಟ ಜನಪರಕವಿ. ಸದಾ ಜನಹಿತಚಿಂತೆಯೇ ಅವರ ಕಾಯಕ. ಯಾವ ಅರಸೊತ್ತಿಗೆಯನ್ನೂ ಅವರು ಹಾಡಿ ಹೊಗಳಲಿಲ್ಲ. ದೊರೆಗಳಿಗೆ ಶರಣು ಹಾಕಲಿಲ್ಲ. ಅಂತೆಯೇ ಅವರೆಂದೂ ಕಸೀದಾ ಕಾವ್ಯ (ಮೇಲಿನವರ ಸ್ತುತಿಗಾನ) ರಚಿಸುವ ಗೊಡವೆಗೇ ಹೋಗಲಿಲ್ಲ! ಚಂಗೀಜ್ ಖಾನ್ ಧ್ವಂಸಗೊಳಿಸಿ ಹೋದ ಇರಾಣಿನ ಸಾಂಸ್ಕೃತಿಕ ಕೇಂದ್ರಗಳ ಆಸುಪಾಸಿನ ಭಯಭೀತ ಜನರಲ್ಲಿ ಜೀವನೋತ್ಸಹ ತುಂಬಿ ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಅವರನ್ನು ಮತ್ತೆ ಕ್ರಿಯಾಶೀಲಗೊಳಿಸುವ ಸಂದರ್ಭದಲ್ಲಾಗಲೀ, ಇರಾಣಿನಲ್ಲಿ ಭಯಂಕರ ಭೂಕಂಪ ಸಂಭವಿಸಿ ಜನಜೀವನವೆಲ್ಲಾ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಾಗಲೀ ಶೇಖ್ ಸಾದಿಯವರು ಒಬ್ಬ ನಿಷ್ಠಾವಂತ ಸ್ವಯಂಸೇವಕನಂತೆ ಹಳ್ಳಿ-ಪಟ್ಟಣಗಳನ್ನೆಲ್ಲ ಸುತ್ತಿದರು. ಹಾದಿ-ಬೀದಿಗಳ ಬದಿಗೆ ಅಥವಾ ಕೂಡುರಸ್ತೆಗಳ ನಡುವಿನ ಜಾಗದಲ್ಲಿ ನಿಂತು, ಅಂತೆಯೇ ಸಣ್ಣ-ಪುಟ್ಟ ಚಾದಂಗಡಿಗಳ ಗಿರಾಕಿಗಳ ನಡುವೆ ಕೂತು ಅವರಿಗೆ ತಮ್ಮ ಕಾವ್ಯ-ಕಥೆಗಳ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಅವರಿಗೆ ಹಣ, ಕೀರ್ತಿ, ಘನತೆ, ರಾಜಮರ್ಯಾದೆ  ಇದಾವುದೂ ಬೇಕಿರಲಿಲ್ಲಿ. ಸಲ್ಲದ ಸಂಕೀರ್ಣತೆಗಿಂತ ನಿರಲಂಕಾರ ಸರಳತೆಯ ತತ್ವವನ್ನು ಮೈಗೂಡಿಸಿಕೊಂಡ ಅವರ ಕವಿತೆಗಳು ರಾಜಸೇವಕರಿಗೆ ಪ್ರಿಯವಾದಂತೆ, ಶ್ರೀಸಾಮಾನ್ಯರಿಗೂ ಪ್ರಿಯವೆನಿಸಿದವು. ಬಡಬಗ್ಗರ ನಾಲಿಗೆಗಳ ಮೇಲೂ ನಲಿದಾಡಿದವು. ಮನುಷ್ಯಪ್ರೀತಿಯೇ ಅವರ ಕಾವ್ಯದ ಪ್ರಮುಖ ದ್ರವ್ಯವಾದ ಕಾರಣ ಅದು ಇಡಿಯ ಮನುಷ್ಯಕುಲದ ಕರುಳು ಮಿಡಿಯುವ ಹಾಗೆ ಹೊರಹೊಮ್ಮಿತು. ಒಂದು ಉದಾಹರಣೆಯನ್ನು ಗಮನಿಸಬಹುದು :
     
 ನಾಕ-ನರಕಗಳ ನಡುವೆ ಗೋಡೆಯೊಂದನು ನಿಲಿಸಿದರೆ
ನಾಕವಾಸಿಗಳ ಪಾಲಿಗದುವೆ ನರಕವೆಂದೆನಿಸುವ ಭಾಸ!
ನರಕದವರಿಗೂ ಅದೆ ಗೋಡೆ ನಾಕವೆಂಬುವ ಭ್ರಮೆಯು
ಅಲ್ಲಿರುವುದೇ ತಮ್ಮ ಸೌಭಾಗ್ಯವೆಂದನಿಸುವ ವಿಪರ್ಯಾಸ!!
 
ಶೇಖ್ ಸಾದಿಯವರ ಮೂಲ ಹೆಸರು ಮುಶ್ರಿಫ್-ಉಲ್-ಬಿನ್ ಅಬ್ದುಲ್ಲಾ. ಶೇಖ್ ಸಾದಿ ಎಂಬುದು ಅವರಿಟ್ಟುಕೊಂಡ ಕಾವ್ಯನಾಮ. ಸುಮಾರು 30 ವರ್ಷಗಳಷ್ಟು ಸುದೀರ್ಘ ಕಾಲದ ದೇಶ-ವಿದೇಶಗಳ ಪರ್ಯಟನ ಮುಗಿಸಿ ತಮ್ಮ ಹುಟ್ಟೂರಿಗೆ ಮರಳಿದ ಮರು ವರ್ಷವೇ  ಅಂದರೆ 1257ರಲ್ಲಿ ಅವರು ತಮ್ಮ ಮೊದಲ ಗಜಲ್ ಸಂಗ್ರಹ ಬುಸ್ತಾನ್ (ಹಣ್ಣಿನ ತೋಟ) ಪ್ರಕಟಿಸಿದರು. ಅದಾದ ಒಂದೇ ವರ್ಷದಲ್ಲಿ ಗುಲಿಸ್ತಾನ್ (ಹೂದೋಟ) ಪ್ರಕಟಿಸಿದರು. ಹೂದೋಟದಲ್ಲಿ ಸಣ್ಣ ದೊಡ್ಡ ಗಿಡ-ಮರ-ಬಳ್ಳಿಗಳಿರುವಂತೆ ಇವರ ಗುಲಿಸ್ತಾನದಲ್ಲಿ ಗದ್ಯ-ಪದ್ಯ ರೂಪದಲ್ಲಿ ವಿವಿಧ ವಿಷಯಗಳನ್ನು ಕುರಿತಾದ ಕವನ-ಕಥೆಗಳುಂಟು. ಈ ಮಿಶ್ರಣದ ಸೂಗಸು ಆ ಕಾವ್ಯಕ್ಕೆ ಒಂದು ಬಗೆಯ ಘನತೆಯನ್ನೇ ಒದಗಿಸಿದೆಯೆನ್ನಬಹುದು. ಅವರು ಕಾವ್ಯಸಂಕಲನಗಳಿಗೆ ತಮ್ಮ ಹುಟ್ಟೂರಲ್ಲಿ ಹೆಜ್ಜೆ-ಹೆಜ್ಜೆಗೆ ಕಾಣುವ ಹಣ್ಣಿನ ತೋಟ ಮತ್ತು ಹೂದೋಟಗಳ ಹೆಸರಿಟ್ಟದ್ದು ಅವರ ಕಾವ್ಯ ಸಾಮಾನ್ಯ ಜನಮಾನಸಕ್ಕೆ ಹತ್ತಿರವಾಗುವದಕ್ಕೂ ನೆರವಾದಂತಾಯಿತು. ದಿವಾನ್ ಎಂಬುದು ಅವರ ಇನ್ನೊಂದು ಪ್ರಸಿದ್ಧ ಭಾವಗೀತೆಗಳ ಸಂಕಲನ. ಶೇಖ್ ಸಾದಿ ತಮ್ಮ ಜೀವಮಾನದಲ್ಲಿ ಒಟ್ಟಾರೆ 65 ಪ್ರಗಾಥಗಳನ್ನೂ, 200 ಚೌಪದಿಗಳನ್ನೂ, 7 ಚರಮಗೀತೆಗಳನ್ನು, 737 ಸುನೀತಗಳನ್ನೂ ಬರೆದುದಲ್ಲದೆ, ಲೆಕ್ಕವಿಲ್ಲದಷ್ಟು ಗಜಲ್ ಗೀತೆಗಳನ್ನು ಬರೆದು ಹೆಸರುವಾಸಿಯಾದವರು! ಶೇಖ್ ಸಾದಿಯವರು ಗಜಲ್ ರಚನೆಯಲ್ಲಂತೂ ಎತ್ತಿದ ಕೈ! ಅವರಿಗೆ ಗಜಲ್ ಕಾವ್ಯದ ಪ್ರವಾದಿ ಎಂಬ ಅಭಿಧಾನವಿತ್ತು ಇರಾಣಿನ ರಸಿಕರು ಎದೆದುಂಬಿ ಕೊಂಡಾಡಿದರು! ಮುಂದೆ 18 ನೆಯ ಶತಮಾನದಲ್ಲಿ ಬೆಳಕಿಗೆ ಬಂದ ಉರ್ದು ಕವಿ ಸಿರಾಜ್ ಎಂಬುವರೂ 10,000 ಚರಣಗಳುಳ್ಳ ಪ್ರೇಮ-ಪ್ರಣಯಗಳಂಥ   ವಿಷಯಗಳ ಕುರಿತಾದ ಗಜಲ್ ಸಂಗ್ರಹವನ್ನು ಪ್ರಕಟಿಸಿದ್ದುಂಟ್ಟು. ಅದರ ಹೆಸರೂ ದೀವಾನ್! 19 ನೆಯ ಶತಕದ ಮಧ್ಯಭಾಗದಲ್ಲಿ ಬೆಳಕು ಕಂಡ ಮಿರ್ಜಾ ಗಾಲಿಬ್ ಅವರ ದೀವಾನ್ ಕಾವ್ಯಸಂಕಲನವಂತೂ ಉರ್ದು ಕಾವ್ಯಲೋಕದಲ್ಲಿ ಮನೆ ಮಾತು! ಹೀಗೆ ಈ ದಿವಾನ್ ಎಂಬುದು ಪರ್ಷಿಯನ್ ಹಾಗೂ ಉರ್ದು ಸಾಹಿತ್ಯ ಪ್ರಪಂಚದಲ್ಲಿ ನಿತ್ಯ ನೆನಪಾಗಿ ಉಳಿಯುವ ಹೆಸರು! ಪರ್ಷಿಯನ್ ಅಥವಾ ಉರ್ದು ಕಾವ್ಯಪ್ರೇಮಿಗಳೆದೆಯಲ್ಲಿ ಎಂದೂ ಆರದ ಉಸಿರು!! ಆಧುನಿಕ ಕಾಲದ ಯಾವನೊಬ್ಬ ಉರ್ದು ಭಾಷೆ ಅಥವಾ ಸಾಹಿತ್ಯದ ವಿದ್ಯಾರ್ಥಿ ದೀವಾನ್ ಎಂದರೆ, ಯಾರದ್ದು? ಎಂದು ಕೇಳಿಯೇ ಮುಂದುವರಿಯಬೇಕಾಗುತ್ತದೆ!
  
ತಮ್ಮ ಮೊದಲಿನೆರಡೂ ಕಾವ್ಯಸಂಗ್ರಹಗಳು 1257-58 ರಲ್ಲಿ  ಬೆಳಕಿಗೆ ಬರುವ ಮ್ಮುನ್ನವೇ ಸಾದಿಯವರು ಇರಾಕ್, ಸಿರಿಯಾ, ಪೆಲೆಸ್ತಿನ್, ಅರೇಬಿಯಾ, ಯೆಮೆನ್, ಟರ್ಕಿ, ಮೊರೊಕ್ಕೊ, ಈಜಿಪ್ತ  ಇತ್ಯಾದಿ ದೇಶಗಳ ಪರ್ಯಟನ ಮಾಡಿ ಅಪಾರ ಅನುಭವವನ್ನೂ ಗಳಿಸಿದ್ದರು. ಅವರು ಭಾರತಕ್ಕೂ ಬಂದು ಹೋಗಿದ್ದರು. ತಮ್ಮ ಕಾವ್ಯಸಂಗ್ರಹಗಳಲ್ಲಿ ರಾಜಧರ್ಮ, ಸನ್ಯಾಸಿಗಳ ಆಚಾರ-ವಿಚಾರ, ಶಿಕ್ಷಣ, ಪ್ರೇಮ, ಮುಪ್ಪಿನ ತಾಪತ್ರಯಗಳು, ಮೌನದ ಮಹತ್ವ- ಇತ್ಯಾದಿ ವಿಷಯಗಳಲ್ಲದೆ ಅವರ ಪ್ರವಾಸಾನುಭವಕ್ಕೆ ಸಂಬಂಧಿಸಿದ ಅನೇಕ ಹಾಡುಗಳೂ ಸೇರಿದ್ದು ಗಮನಾರ್ಹವಾಗಿದೆ. ಅವರಿಗೆ ವಿಶೇಷ ಖ್ಯಾತಿ ಪ್ರಾಪ್ತವಾದದ್ದು ಅವರ ದೀವಾನ್ ಕಾವ್ಯಸಂಗ್ರದಿಂದ. ಗಾಲೀಬ್ ಕವಿಯ ಶಿಷ್ಯರಾಗಿದ್ದ ಮೌಲಾನಾ ಹಾಲಿಯವರು ಹಯಾತ್-ಏ-ಸಾದಿ ಎಂಬ ಹೆಸರಿನಲ್ಲಿ ಶೇಖ್ ಸಾದಿಯವರ ಜೀವನಚರಿತ್ರೆಯನ್ನು ಬರೆದು ಉಪಕರಿಸಿದ್ದಾರೆ. ಅದರಿಂದಾಗಿ ಲೋಕಕ್ಕೆ ಶೇಖ್ ಸಾದಿಯವರ ಬದುಕಿನ ನಿಚ್ಚಳ ಒಳನೋಟ ಸಿಗುವಂತಾಯಿತು. ಸದಾ ಸಂಚಾರಿಯಾಗಿದ್ದ ಈ ಸೂಫೀ ಕವಿಯ ಜನನವೂ ಮರಣವೂ ಒಂದೇ ಪಟ್ಟಣದಲ್ಲಾದುದು ಅವರ ಪುಣ್ಯವಿಶೇಷ! ಇರಾಣಿನ ಈ ಶಿರಾಜ್ ಪಟ್ಟಣದಲ್ಲಿ ಶೇಖ್ ಸಾದಿಯವರ ಸುಂದರ ಸಮಾಧಿ ಕಾವ್ಯ-ಭಕ್ತಿಯ ಕೇಂದ್ರವಾಗಿ ಕಂಗೊಳಿಸುವಂತಾಗಿದೆ. ಅದೀಗ ಒಂದು ಆಕರ್ಷಕ ಪ್ರವಾಸೀತಾಣವಾಗಿ ಶೋಭಿಸುವಂತಾಗಿದೆ. ಈ ಕವಿಯ 99 ವರ್ಷಗಳ ಸುದೀರ್ಘ ಕ್ರಿಯಾಶೀಲ ಜೀವನ ಆ ಸಮಾಧಿಸ್ಥಾನದಲ್ಲಿ ಒಂದು ಮೌನಕಾವ್ಯವಾಗಿ ಸಂದರ್ಶಕರ ಕಣ್ಣು ತೇವಗೊಳಿಸುತ್ತದೆ.
  
​ಶೇಖ್ ಸಾದಿಯವರ ಗದ್ಯ-ಪದ್ಯ ಮಿಶ್ರಿತ ಕಾವ್ಯದ ವೈಶಿಷ್ಟ್ಯವನ್ನು ಆಂಡ್ರೆ ಡುರೈರ್ ಎಂಬ ಜರ್ಮನ್ ಕವಿಯೊಬ್ಬರು ಮೊದಲು ಜರ್ಮನ್ ಭಾಷೆಯಲ್ಲಿ ಅನುವಾದಿಸಿ ಯುರೋಪ್ ವಾಚಕರಿಗೆ ಪರಿಚಯಿಸಿದರು. ಜರ್ಮನ್ ಭಾಷೆಯಲ್ಲಿ ಅವರ ಸಮೀಕ್ಷಾಗ್ರಂಥ ಪ್ರಕಟವಾದದ್ದು 1634ರಲ್ಲಿ. ಅದಾದ 20 ವರ್ಷಗಳ ಮೇಲೆ ಆ ಕಾವ್ಯವನ್ನು ಸಂಪೂರ್ಣವಾಗಿ ಜರ್ಮನ್ ಬಾಷೆಗೆ ತರ್ಜುಮೆ ಮಾಡಿ ಧನ್ಯತೆ ಪಡೆದವರು ಆಡ್ವರ್ ಓಲಿರಿಯೆಸ್. ಮಿಲಿಟರಿ ಸರ್ಜನ್ ವೃತ್ತಿಯಲ್ಲಿದ್ದ ರಾಸ್ ಎಂಬ ಇಂಗ್ಲಿಷ್ ಕವಿಗಳೊಬ್ಬರು ಸಾದಿಯವರ ಕಾವ್ಯವನ್ನು ಇಂಗ್ಲಿಷ್ನಲ್ಲಿ ಭಾಷಾಂತರಗೊಳಿಸಿದ್ದುಂಟು. ವಿಶ್ವದ ಅನೇಕ ಭಾಷೆಗಳಲ್ಲಿ ಈ ಸಂಚಾರೀ ಕವಿಯ ಕಾವ್ಯವೂ ಸಂಚರಿಸಿದೆ. ಈ ಎಲ್ಲ ವಿಸ್ತಾರದ ಜನಪ್ರಿಯತೆಗಿಂತ ಮಿಗಿಲಾದ ಸಂಗತಿಯೆಂದರೆ: ಈ ಲೇಖನದಾರಂಭದಲ್ಲಿ ಉಲ್ಲೇಖಿಸಿದ ಶೇಖ್ ಸಾದಿಯವರ ಅರ್ಥಪೂರ್ಣ ಪದ್ಯವನ್ನು  ಅಮೇರಿಕಾದಲ್ಲಿಯ ನ್ಯೂಯಾರ್ಕ್ ನಗರದಲ್ಲಿರುವ ಸಂಯುಕ್ತ ರಾಷ್ಟ್ರ ಸಂಘದ ಹಾಲ್ ಆಫ್ ನೇಷನ್ಸ್‍ನೆದುರು ಕೆತ್ತಿಸಿ ಈ ಕವಿಗೊಂದು ವಿಶ್ವಮಾನ್ಯತೆಯ ಅಜರಾಮರ ಸ್ಥಾನವನ್ನೇ ಕಲ್ಪಿಸಿಕೊಟ್ಟದ್ದು !
 
ಡಾ|| ಬಿ.ಎ.ಸನದಿ
ಮಿಲನ, ವಿನಾಯಕ ಸಾ ಮಿಲ್ ಎದುರು, ಹೆರವಟ್ಟ, ಕುಮಟಾ-581332
(ಕೃಪೆ: ಗಾಂಧಿಬಜಾರ್ ಪತ್ರಿಕೆ, ಜನವರಿ 2012)
0 Comments



Leave a Reply.


    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9



    Six-Days
    Labour Laws & Labour Codes Certification Program

    Know More

    Picture
    Know More

    Picture
    WhatsApp

    Picture

    MHR LEARNING ACADEMY

    Get it on Google Play store
    Download App
    Online Courses

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    Social Work Foot Prints


    RSS Feed


SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com