ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ನಿಧಿ ಬಳಕೆ ಮಾಡಿಕೊಂಡು ಎನ್‍ಜಿಒ (ಸರ್ಕಾರೇತರ ಸಂಸ್ಥೆಗಳು) ಕಾರ್ಯಾಚರಿಸುತ್ತಿವೆ. ಆ ಮೂಲಕ ಆ ದೇಶದ ನೀತಿ ನಿಯಮಗಳ ಮೇಲೆ ಪ್ರಭಾವ ಬೀರುವುದು ಒಂದೆಡೆಯಾದರೆ ಇನ್ನೊಂದೆಡೆ ಅಲ್ಲಿನ ಮೂಲ ಸಂಸ್ಥೆಗಳನ್ನು ನಾಶಪಡಿಸುವ ಕೆಲಸ ಕೂಡಾ ನಡೆಯುತ್ತಿದೆ. ಎನ್‍ಜಿಒ ಎಂದರೆ ಆಯಾ ದೇಶದಲ್ಲಿ, ಪ್ರಾದೇಶಿಕವಾಗಿ ಮಾನವೀಯ ಸೇವೆಗಳನ್ನು ಒದಗಿಸುವ ಸಂಸ್ಥೆ ಎಂಬ ಭಾವನೆ ಪಾಶ್ಚಿಮಾತ್ಯ ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಲ್ಲಿ ಇದೆ. ಯಾಕೆಂದರೆ, ಪೊಲೀಸ್ ದೌರ್ಜನ್ಯ ಅಥವಾ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಹೋರಾಟ, ಬಡತನದ ವಿರುದ್ಧ ಹೋರಾಟ, ಪರಿಸರ ಸ್ನೇಹಿ ಚಟುವಟಿಕೆಗಳು ಮೊದಲಾದವುಗಳು ಎನ್‍ಜಿಒ ಗಳ ಕಾರ್ಯವ್ಯಾಪ್ತಿ. ಈ ಎಲ್ಲ ಚಟುವಟಿಕೆಗಳಿಗೆ ಹಣ ಒದಗಿಸುವುದು ವಿದೇಶಿ ಮೂಲ. ಈ ವಿದೇಶಿ ಮೂಲಗಳಿಗೆ ತಮ್ಮ ಕಾರ್ಯಸೂಚಿಯನ್ನು ಆಯಾ ದೇಶಗಳಲ್ಲಿ ಸ್ಥಾಪಿಸಬೇಕಾಗಿರುತ್ತದೆ. ಹಾಗಾಗಿ, ವಿದೇಶಿ ಮೂಲಗಳು ತಮ್ಮ ರಾಜತಾಂತ್ರಿಕ ತಂತ್ರದ ಮೂಲಕ ಅದನ್ನು ಸಾಧಿಸಲು ಪ್ರಯತ್ನಿಸುತ್ತವೆ. ಇದೊಂದು ರೀತಿಯಲ್ಲಿ ಪರೋಕ್ಷ ಯುದ್ಧವೇ ಸರಿ. ಕೆಲವು ವಾರಗಳ ಹಿಂದೆ, ಈಜಿಪ್ಟ್ನಲ್ಲಿ ನಡೆದ ಘಟನೆ ಇದು. ಈಜಿಪ್ಟಿಯನ್ ಕಾನೂನು ಪ್ರಕಾರ ಅಲ್ಲಿನ ಸರಕಾರ ಅರಬ್ ಸ್ಪ್ರಿಂಗ್ ಎಂಬ ಎನ್‍ಜಿಒ ಒಂದನ್ನು ಮುಚ್ಚುವಂತೆ ಆದೇಶಿಸಿತು. ಮಾತ್ರವಲ್ಲದೇ ಚುನಾವಣಾ ಪ್ರಕ್ರಿಯೆಗಳನ್ನು ಗಮನಿಸಲು ಮುಂದಾದ ಎಂಟು ಅಮೆರಿಕ ನಾಗರಿಕ ಗುಂಪುಗಳನ್ನು ಕೂಡಾ ದೂರ ಇರಿಸಿತು. ಅವುಗಳಿಗೆ ಪರವಾನಗಿ ನೀಡಲಿಲ್ಲ. ಈಜಿಪ್ಟಿಯನ್ ಕಾನೂನು ಪ್ರಕಾರ, ಅಲ್ಲಿನ ಸರಕಾರದ ಪರವಾನಗಿ ಇಲ್ಲದೆ ಯಾವುದೇ ಎನ್‍ಜಿಒ ಕೆಲಸ ಮಾಡುವಂತೆ ಇಲ್ಲ. ಸಾಮಾನ್ಯವಾಗಿ ಅಮೆರಿಕನ್ ಎನ್‍ಜಿಒ ಗಳನ್ನು ಕ್ವಾಂಗೋಸ್ ಎನ್ನುತ್ತಾರೆ. ಅವುಗಳ ಪ್ರಮುಖ ಕಾರ್ಯಸೂಚಿಯೇ ವಿದೇಶಗಳಲ್ಲಿ ಅಮೆರಿಕದ ಹಿತಾಸಕ್ತಿಯನ್ನು ಬಿತ್ತಿ ಬೆಳೆಸುವುದು. ಕಳೆದ ತಿಂಗಳು ಯುಎಇ (ಸಂಯುಕ್ತ ಅರಬ್ ಸಂಸ್ಥಾನ)ದಲ್ಲಿ ಡೆಮಾಕ್ರಟಿಕ್ ಪಕ್ಷದ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದ ಅಮೆರಿಕನ್ ಕ್ವಾಂಗೋ ಸಂಸ್ಥೆಯನ್ನು ಮುಚ್ಚಲು ಅಲ್ಲಿನ ಸರಕಾರ ನಿರ್ಧರಿಸಿತು. ಈ ಸಂಸ್ಥೆಗೆ ಹಣಕಾಸು ನೆರವು ನೇರವಾಗಿ ಅಮೆರಿಕ ಸರ್ಕಾರವೇ ಒದಗಿಸುತ್ತಿತ್ತು. ಇದನ್ನು ಗಮನಿಸಿದ ರಿಯಾದ್ ಮತ್ತು ಇತರೆ ರಾಜಧಾನಿಯ ಅಧಿಕಾರಿಗಳು ಕ್ವಾಂಗೋ ಹಸ್ತಕ್ಷೇಪವನ್ನು ಯುಎಇ ಸರಕಾರದ ಗಮನಕ್ಕೆ ತರುತ್ತಾರೆ. ಹೀಗಾಗಿ ಯುಎಇ ಸರಕಾರ ಅದನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವ ಪ್ರಯತ್ನ ಕ್ವಾಂಗೋಸ್ಗಳದ್ದು ಎಂಬ ವಿಚಾರದಲ್ಲಿ ಸಂಯುಕ್ತ ಅರಬ್ ಸಂಸ್ಥಾನಗಳ ಎಲ್ಲ ರಾಜಧಾನಿಗಳದ್ದೂ ಒಂದೇ ಅಭಿಪ್ರಾಯ. ಪ್ರಜಾತಂತ್ರದ ಕಾರ್ಯಕರ್ತರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಅವುಗಳು ಬೆಳೆಯುತ್ತವೆ. ಹಾಗೇ ಇತಿಹಾಸದ ಪುಟ ತಿರುಗಿಸಿದರೆ, ಸೋವಿಯತ್ ರಿಪಬ್ಲಿಕ್ನಲ್ಲಿ ಉಂಟಾದ ಕ್ರಾಂತಿಯ ಕತೆಯ ಹಿನ್ನೆಲೆ ಕೂಡಾ ಇದುವೇ. ಅವರು ಅಮೆರಿಕಕ್ಕೆ ಬೇಕಾಗಿ ಪರಿಸರದ ವಿಚಾರ ತೆಗೆದುಕೊಂಡರು. ಅಮೆರಿಕಾದ ಇಚ್ಛೆಗೆ ತಕ್ಕಂತೆ ಬದಲಾವಣೆ ಆಯಿತು. ಹೀಗಾಗಿ ಯುಎಇ ಮತ್ತು ಇತರೆ ಗಲ್ಫ್ ರಾಜ್ಯಗಳು ತೆಗೆದುಕೊಂಡ ನಿರ್ಧಾರ ಜರ್ಮನ್ ಮತ್ತು ಅಮೆರಿಕ ಪ್ರಾಯೋಜಿತ ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅವರು ಹೊಸ ವ್ಯವಸ್ಥೆಗೆ ತಕ್ಕಂತೆ ಹೊಂದಿಕೊಳ್ಳಬೇಕಾಗಿದೆ. ಅಮೆರಿಕದ ಆಡಳಿತ ನೀತಿ ಹೇಗಿದೆ ಅಂದರೆ, ರೀಗನ್ ಆಡಳಿತದೊಂದಿಗೆ ನಿಕಟ ಸಂಪರ್ಕ ಹೊಂದಿರುವ ದ ನ್ಯಾಷನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ (ಎನ್ಇಡಿ) ಎಂಬ ಸಂಸ್ಥೆ ಅಮೆರಿಕದ ವಿದೇಶಿ ನೀತಿರೂಪಕ ಸಾಧನವಾಗಿ ಪರಿಗಣಿಸಲ್ಪಟ್ಟಿತ್ತು. ಇದನ್ನು ಸ್ಥಾಪಿಸಿದವರು ಅಲೆನ್ ವೈನ್ ಸ್ಟೈನ್. ಇವರು ಮಾಜಿ ಪ್ರೊಫೆಸರ್, ವಾಷಿಂಗ್ಟನ್ ಪೋಸ್ಟ್ನ ಅಂಕಣಕಾರ, ಹಾಗೆಯೇ ಸೆಂಟರ್ ಫಾರ್ ಸ್ಟ್ರಾಟಜಿಕ್ ಮತ್ತು ಇಂಟರ್ ನ್ಯಾಷನಲ್ ಸ್ಟಡೀಸ್ನ ಸದಸ್ಯರೂ ಹೌದು. ಈ ಸಂಸ್ಥೆ ನವನಿರ್ಮಾಣದ ಚಿಂತಕರ ಚಾವಡಿ ಎಂದೇ ಖ್ಯಾತಿ ಪಡೆದಿದೆ. ಹೆನ್ರಿ ಕಿಸ್ಸಿಂಜರ್ ಮತ್ತು ಬ್ರೆಝಿಂನ್ಸ್ಕಿ ಮೊದಲಾದವರು ಕೂಡಾ ಈ ಸಂಸ್ಥೆಯ ಸದಸ್ಯರು. ಈ ಎನ್ಇಡಿಯ ಮೊದಲ ನಿರ್ದೇಶಕ ಕಾರ್ಲ್ ಗ್ರೆಶ್ಮನ್ ಬಯಕೆಯಂತೆ ಎನ್ಇಡಿ ಸಿಐಎಯ ಒಂದು ಭಾಗವಾಗಿಬಿಟ್ಟಿತು. 1983ರಲ್ಲಿ ಇದರ ಸ್ಥಾಪನೆಯಾದಾಗಿನಿಂದ ಈ ಸಂಸ್ಥೆಗೆ ಅನುದಾನಕ್ಕೆ ಅಮೆರಿಕನ್ ಕಾಂಗ್ರೆಸ್ ಅನುಮೋದನೆ ನೀಡಬೇಕು. ಅದು ಕೂಡಾ ಆಡಳಿತದ ಒಂದು ಭಾಗವಾಗಿ ಅದನ್ನು ಮಾಡಲೇ ಬೇಕಿತ್ತು! ಈ ಎನ್ಇಡಿ ಸಂಸ್ಥೆಯ ಚಟುವಟಿಕೆ ಏನು ಅಂದರೆ, ಕಾರ್ಮಿಕ ವಿರೋಧಿ ಚಳವಳಿ, ಎಡರಂಗ ವಿರೋಧಿ ಚಳವಳಿ, ವೆನಿಜುವೆಲಾ ಮತ್ತು ಹೈಟಿಗಳ ಸ್ಥಳೀಯಾಡಳಿತದ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸುವುದು, ಅಮೆರಿಕ ವಿರೋಧಿ ಭಾವನೆಗಳು ಉಂಟಾದಾಗ ಅಂತಹ ದೇಶಗಳಲ್ಲಿ ಅಸ್ಥಿರತೆ ಉಂಟುಮಾಡುವುದು ಇತ್ಯಾದಿ ಚಟುವಟಿಕೆಗಳು. ನೇರವಾಗಿ ಅಮೆರಿಕ ಸರಕಾರದಿಂದಲೇ ಇದಕ್ಕೆ ಹಣಕಾಸು ನೆರವು. ಈಗ ವಿಷಯಕ್ಕೆ ಬರುವುದಾದರೆ, ಈಜಿಪ್ಟ್ನಲ್ಲಿ ಏಪ್ರಿಲ್ 6ರಂದು ಅರಬ್ ಸ್ಪ್ರಿಂಗ್ ನಡೆಸಿದ ಯೂತ್ ಮೂವ್ಮೆಂಟ್ ಹಿಂದೆ ಫ್ರೀಡಂ ಹೌಸ್ ಎಂಬ ಸಂಸ್ಥೆಯ ಕೈವಾಡ ಇತ್ತು. ಈ ಫ್ರೀಡಂ ಹೌಸ್ 1941ರಲ್ಲಿ ಮಾನವಹಕ್ಕು ಮತ್ತು ಡೆಮಾಕ್ರಸಿ ಪರವಾಗಿ ಕೆಲಸ ಮಾಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ. ಬುಷ್ ಆಡಳಿತಾವಧಿಯಲ್ಲಿ ಈ ಸಂಸ್ಥೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ಭಯೋತ್ಪಾದನೆ ವಿರುದ್ಧ ಯುದ್ಧ ಎಂಬ ಅಂಶದಡಿ ಕೆಲಸ ನಿರ್ವಹಿಸಿದೆ. ಇದಕ್ಕೆ ಅಮೆರಿಕ ಸರಕಾರ ಯುಎಸ್ ಅನುದಾನ ಮೂಲಕ ಮತ್ತು ಎನ್ಇಡಿ ಸಂಸ್ಥೆ ಮೂಲಕ 66% ಹಣಕಾಸು ನೆರವು ನೀಡಿದ್ದು ಈಗ ಬಹಿರಂಗ ಸತ್ಯ.
ಬುಷ್ ಆಡಳಿತ ತನ್ನ ಸಾಮ್ರಾಜ್ಯಶಾಹಿ ಕಾರ್ಯಸೂಚಿಗೆ ತಕ್ಕಂತೆ ಕೆಲಸ ನಿರ್ವಹಿಸುವಂತೆ ಎನ್ಜಿಒಗಳ ಮೇಲೆ ಒತ್ತಡ ಹೇರಿತ್ತು. 2003ರಲ್ಲಿ ಯುಎಸ್ಎಐಡಿ (ಯುಎಸ್ ಅನುದಾನ)ನ, ಅಫ್ಘಾನಿಸ್ತಾನದ ಕರ್ಝೈ ಸರಕಾರಕ್ಕೆ ಎನ್ಜಿ-ಯುಎಸ್ ಅನುದಾನ ಒದಗಿಸುವ ಮೂಲಕ ಅಮೆರಿಕ ನೆರವು ನೀಡಿದೆ ಎಂಬ ಹೇಳಿಕೆ ನೀಡಿದ. ಆದರೆ, ಅಫ್ಘನ್ನರು ಯಾರು ಕೂಡಾ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಿಲ್ಲ. ಇದೇ ರೀತಿ, ಇರಾಕ್ನಲ್ಲಿ ಕೂಡಾ ಎನ್‍ಜಿಒ ಮೂಲಕ ಕೆಲಸ ಮಾಡಿಸಬೇಕು. ಆ ಮೂಲಕ ಅಮೆರಿಕದ ನೀತಿಯನ್ನು ಎತ್ತಿ ಹಿಡಿಯಬೇಕು ಎಂದು ಬಯಸಿದ್ದ. ಆದರೆ ಅದು ಕಾರ್ಯಗತವಾಗಲಿಲ್ಲ. ವಿದೇಶದ ಆಡಳಿತದಲ್ಲಿ ನೇರ ಹಸ್ತಕ್ಷೇಪಕ್ಕೆ ಅಮೆರಿಕ ಬಳಸುವ ಇನ್ನೊಂದು ಅಸ್ತ್ರ ಅಮ್ನೆಸ್ಟಿ ಇಂಟರ್ನ್ಯಾಷನಲ್. ಸುಸಾನೆ ನೋಸೆಲ್ ಎಂಬ ಮಹಿಳೆ ಈಗ ಇದರ ಕಾರ್ಯಕಾರಿ ನಿರ್ದೇಶಕಿ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಈ ಮಹಿಳೆ, ಅಮೆರಿಕದ ಅಂತಾರಾಷ್ಟ್ರೀಯ ಸಂಸ್ಥೆಗಳ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿದ್ದವರು. ಅಮೆರಿಕದ ಹಿತಾಸಕ್ತಿಯನ್ನು ಬೇರೆ ದೇಶದ ಮೇಲೆ ಜಾಣ್ಮೆಯಿಂದ ಹೇರುವುದು ಇದರ ಕೆಲಸ. ಇದನ್ನೇ ಲಿಬಿಯಾದಲ್ಲಿ ಈ ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿದೆ ಕೂಡಾ. ಇನ್ನೊಂದೆಡೆ ವಾಷಿಂಗ್ಟನ್, ಮಾನವೀಯ ನೆಲೆಯ ಹಸ್ತಕ್ಷೇಪವನ್ನು ವಿಶ್ವಸಂಸ್ಥೆ ಮೂಲಕ ಮುಂದುವರಿಸಿದೆ. ಹೀಗಾಗಿ ಅಮ್ನೆಸ್ಟಿ ಕೂಡಾ ಸಿರಿಯಾ ವಿರುದ್ಧದ ಅಪಪ್ರಚಾರದ ಯುದ್ಧದಲ್ಲಿ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇನ್ನು ಭಾರತದ ವಿಚಾರಕ್ಕೆ ಬರುವುದಾದರೆ, ವಿದೇಶಿ ಅನುದಾನ ಪಡೆದು ಕೆಲಸ ಮಾಡುವ ಎನ್ಜಿಒಗಳ ಬಗ್ಗೆ ಅಸಮಾಧಾನ ಇದ್ದರೂ, ಕೇಂದ್ರ ಸರಕಾರ ಅದನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಲಿಲ್ಲ. ಯಾವಾಗ, ತಾನು ತಮಿಳುನಾಡಿನ ಕುಂಡಂಕುಳದಲ್ಲಿ 15 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ಅಣು ವಿದ್ಯುತ್ ಸ್ಥಾವರ ಯೋಜನೆಗೆ ವಿದೇಶಿ ಪ್ರಾಯೋಜಿತ ಎನ್‍ಜಿಒ ಗಳು ತಡೆಒಡ್ಡಲು ಪ್ರಯತ್ನಿಸಿದವೋ ಹಾಗೆಯೇ, ಕುಲಾಂತರಿ ತಳಿಗಳ ವಿರುದ್ಧದ ಪ್ರತಿಭಟನೆ ಕೇಂದ್ರ ಸರಕಾರದ ಕಣ್ಣು ಕೆಂಪಾಗಿಸಿದವು. ಭಾರತ ಕಾನೂನು ಪ್ರಕಾರ ವಿದೇಶಿ ಅನುದಾನ ಪಡೆದ ಎನ್‍ಜಿಒ ಗಳು ಅದನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ದೇಶ, ರಾಜ್ಯಗಳ ವೈಜ್ಞಾನಿಕ, ಆರ್ಥಿಕ ಅಥವಾ ಇನ್ನಾವುದೇ ಅಭಿವೃದ್ಧಿಗೆ ಪೂರಕ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವುದಕ್ಕೆ ಬಳಸುವಂತಿಲ್ಲ. ಕುಂಡಂಕುಳದಲ್ಲಿ ಚರ್ಚ್ ಪ್ರಾಯೋಜಿತ ಪ್ರತಿಭಟನೆ ರಾಜಕೀಯ ಪ್ರೇರಿತವಾದುದು ಎಂಬ ಬಗ್ಗೆ ಕೇಂದ್ರ ಸರಕಾರಕ್ಕೆ ಯಾವುದೇ ಸಂಶಯವಿಲ್ಲ. ಹೀಗಾಗಿ ಎನ್‍ಜಿಒ ಗಳ ಅಧಿಕಾರ ಅಥವಾ ಕಾರ್ಯವ್ಯಾಪ್ತಿ, ಹಣದ ಮೂಲ ಮತ್ತು ಸಂಶಯಾಸ್ಪದ ಕಾರ್ಯಸೂಚಿ ಅಂದರೆ ಮತಾಂತರ, ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುವುದು ಇತ್ಯಾದಿ ಈಗ ಚರ್ಚೆಯ ವಿಚಾರ, ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, 2001 ರಿಂದ 2010ರ ಅವಧಿಯಲ್ಲಿ ಭಾರತದಲ್ಲಿ ಕೆಲಸ ಮಾಡುತ್ತಿರುವ ಎನ್‍ಜಿಒ ಗಳು ವಿದೇಶದಿಂದ 70,000 ಕೋಟಿ ಅನುದಾನ ಪಡೆದುಕೊಂಡಿವೆ. ಅತಿ ಹೆಚ್ಚು ಅನುದಾನ ನೀಡಿದ ದೇಶಗಳ ಪೈಕಿ ಅಮೆರಿಕ ಮುಂಚೂಣಿಯಲ್ಲಿದೆ. ಜರ್ಮನಿ, ಬ್ರಿಟನ್ ಕೂಡಾ ಅನುದಾನ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಏಷ್ಯಾ ಖಂಡದಲ್ಲಿ ಕಾರ್ಯಾಚರಿಸುತ್ತಿರುವ ಅಮೆರಿಕದ ಗೋಸ್ಪೆಲ್ 232.71 ಕೋಟಿ ರೂ. ಅನುದಾನ ಪಡೆದರೆ, ಸ್ಪೇನ್, ಬಾರ್ಸಿಲೋನಾದ ವಿಸೆಂಟೆ ಫೆರರ್ 228.6 ಕೋಟಿ ರೂ. ಮತ್ತು ಅಮೆರಿಕಾದ ವರ್ಲ್ಡ್ ವಿಷನ್ ಗ್ಲೋಬಲ್ ಸೆಂಟರ್ 197.62 ಕೋಟಿ ರೂ. ವಿದೇಶಿ ಅನುದಾನ ಉಪಯೋಗಿಸಿದ ಎನ್‍ಜಿಒ ಗಳ ಪಟ್ಟಿಯಲ್ಲಿವೆ. ಈ ಅನುದಾನದ ಅಂಕಿ-ಅಂಶಗಳ ವಿಶ್ಲೇಷಣೆ ಮಾಡಿದರೆ, ಮೂಲಸೌಕರ್ಯ ಅಭಿವೃದ್ಧಿಗೆ (1482.58 ಕೋಟಿ ರೂ.), ಗ್ರಾಮೀಣ ಅಭಿವೃದ್ಧಿಗೆ (944.3 ಕೋಟಿ ರೂ.), ಮಕ್ಕಳ ಕಲ್ಯಾಣಕ್ಕೆ (742.42 ಕೋಟಿ ರೂ.) ಮತ್ತು ವಿದ್ಯಾಭ್ಯಾಸದ ಮೂಲ ಸೌಕರ್ಯಕ್ಕಾಗಿ (630.78 ಕೋಟಿ ರೂ.) ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ಶಿಪ್ ಮತ್ತು ಇತರೆ ವೆಚ್ಚಗಳಿಗೆ ಬಹುತೇಕ ವಿದೇಶಿ ಅನುದಾನ ಬಳಕೆಯಾಗಿರುವುದು ಕಂಡು ಬರುತ್ತದೆ. ಸಾಮಾನ್ಯವಾಗಿ, ಎನ್‍ಜಿಒ ಗಳಿಗೆ ಸಿಗುವ ಒಟ್ಟು ಅನುದಾನದ 50-70% ಹಣವನ್ನು ಸಂಘಟನೆಯ ಅಥವಾ ಸಂಸ್ಥೆಯ ಮೂಲ ಸೌಕರ್ಯ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತದೆ. ಹೇಗೆ ಎಂದರೆ ಸೈಟ್ ಅಥವಾ ಜಮೀನು ಕೊಳ್ಳುವುದು, ವಾಹನ, ಕಚೇರಿ ಮೂಲ ಸೌಕರ್ಯ, ಮೊಬೈಲ್, ಲ್ಯಾಪ್ಟಾಪ್ ಮತ್ತು ಕ್ಯಾಮರಾಕ್ಕೆ ಬಳಕೆಯಾಗುತ್ತದೆ. ಜೊತೆಗೆ ಸಿಬ್ಬಂದಿ ವೇತನ, ಕನ್ಸಲ್ಟೆನ್ಸಿ ಶುಲ್ಕ, ಗೌರವ ಧನ, ವಿದೇಶ ಪ್ರವಾಸ ಭತ್ಯೆ ಮತ್ತು ಇತರೆ ಖರ್ಚುಗಳು. ಇಂತಹ ಖರ್ಚು ವೆಚ್ಚಗಳು ತೆರಿಗೆ ವಿನಾಯಿತಿ ಪಡೆಯಬೇಕೆ? ಇವುಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅಥವಾ ಸಾರ್ವಜನಿಕರಿಗೆ ಉಪಯೋಗ ಆಗುವಂಥಾದ್ದು ಏನಿದೆ? ಬಹುದೊಡ್ಡ ಪ್ರಮಾಣದ ಅನುದಾನ ಅಥವಾ ಹಣ ಮತಾಂತರಕ್ಕೆ ಬಳಸಲ್ಪಡುತ್ತಿದೆ. ಇದನ್ನು ಚಾರಿಟಿ ಅಥವಾ ಸಾರ್ವಜನಿಕ ಸೇವೆ (ಪಬ್ಲಿಕ್ ಸರ್ವೀಸ್) ವರ್ಲ್ಡ್ ವಿಷನ್, ಮೊದಲಾದ ಶಬ್ದಗಳಿಂದ ಹೆಸರಿಸಲಾಗುತ್ತಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ ಸ್ವತಃ ಅವರದ್ದೇ ಅಂತರ್ಜಾಲ ತಾಣಗಳಲ್ಲಿ ಹೇಳಿಕೊಂಡಂತೆ ಇದು ಕ್ರಿಶ್ಚಿಯನ್ ಐಡೆಂಟಿಟಿ. ಜಾಗತಿಕ ಮಟ್ಟದಲ್ಲಿ ಈ ಸಂಸ್ಥೆಗಳಿಗೆ ಕೆಲಸ ಮಾಡುವ 20% ಜನರು ಬೇರೆ ನಂಬಿಕೆಗಳನ್ನು ಹೊಂದಿರುತ್ತಾರೆ. ಆದರೂ, ಅವರು ತಮ್ಮ ಬರವಣಿಗೆಯಲ್ಲಿ ಕ್ರಿಶ್ಚಿಯಾನಿಟಿ ಬಗ್ಗೆ ವಿಶ್ವಾಸ ತೋರಿಸಬೇಕು. ಈ ಎಲ್ಲ ಅನುಭವಗಳ ಮೇಲೆ ಹೇಳುವುದಾದರೆ, ಬಹುತೇಕ ಭಾರತೀಯರಿಗೆ ತಮ್ಮ ದೇಶಕ್ಕೆ ಇಂತಹ ಎನ್ಜಿಒಗಳ ಅಗತ್ಯ ಇಲ್ಲ ಎಂದು ಕಾಣುತ್ತಿದೆ. ನಮ್ಮ ಬದುಕಿನ ಸುಧಾರಣೆ ಅಥವಾ ಉದ್ಧಾರಕ್ಕಾಗಿ ಅಥವಾ ಸಾಮಾಜಿಕ ಚಟುವಟಿಕೆಗಳಿಗೆ ಸ್ಥಳೀಯ ಅನುದಾನಗಳೇ ಸಾಕು. ನಮ್ಮ ದೇಶ ಭಾರತವೇ, ಏಷ್ಯಾ ಮತ್ತು ಆಫ್ರಿಕಾದ ಬೇರೆ-ಬೇರೆ ದೇಶಗಳಿಗೆ ಅನೇಕ ನೆರವು ನೀಡುತ್ತಿರುವಾಗ, ತನ್ನ ಕಾಲ ಮೇಲೆ ತಾನು ನಿಲ್ಲಲು ಸಾಧ್ಯವಿಲ್ಲವೇ? ಇಂತಹ ವಿದೇಶಿ ಮೂಲದ ನೆರವು ಸ್ವೀಕರಿಸಿ ಭಾರತದಲ್ಲಿ ಕೆಲಸ ಮಾಡುವ ಎನ್‍ಜಿಒ ಗಳ ಅಗತ್ಯ ಏನಿದೆ? ಇಂಥ ನೆರವು ಪಡೆಯುವುದರಲ್ಲಿ ಯಾವುದೇ ಅರ್ಥವೂ ಇಲ್ಲ. ಸಂಧ್ಯಾ ಜೈನ್ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ವಿಶ್ಲೇಷಕರು (ಕೃಪೆ: ವಿಜಯವಾಣಿ, ಮೇ 10, 2012)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|