Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರ ನೀರಾವರಿ ಸೌಲಭ್ಯದ ಬಳಕೆ ಮತ್ತು ಸಮಸ್ಯೆ

10/11/2017

1 Comment

 
ನಾಡಿಗೆ ಬೆಳಕು ನೀಡುವ ಬೆಳಕಿನ ಕೇಂದ್ರ, ಅನ್ನದ ನಾಡು, ಚಿನ್ನದ ಬೀಡು, ಬಿಳಿ ಬಂಗಾರ ಬೆಳೆಯುವ ಜಿಲ್ಲೆಯೆಂದು ಪ್ರಸಿದ್ಧವಾಗಿರುವ ರಾಯಚೂರು ತನ್ನ ಉತ್ತರಕ್ಕೆ ಕೃಷ್ಣೆ ಮತ್ತು ದಕ್ಷಿಣಕ್ಕೆ ತುಂಗಭದ್ರೆ ನದಿಗಳನ್ನೊಳಗೊಂಡ `ದೋಆಬ್ ಪ್ರದೇಶ' ಸಮೃದ್ಧವಾದ ಸಂಪತ್ಭರಿತ ನಗರವಾಗಿದ್ದರೂ,`ಬೆಳಕು ನೀಡುವ ದೀಪದ ಸುತ್ತಲೂ ಕತ್ತಲೂ ಎನ್ನುವಂತೆ ಸಕಲ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಕತ್ತಲಮಯವಾದ ರಾಯಚೂರಿಗೆ ಜೀವತುಂಬುವ ಜೀವನಾಡಿಯಾಗಿರುವ ತುಂಗಭದ್ರೆಯು ಈ ಭಾಗದ ಜನರ ನೀರಿನ ದಾಹವನ್ನು  ನೀಗಿಸುವುದಷ್ಟೇ ಅಲ್ಲದೆ, ನೀರಾವರಿ ಅಭಿವೃದ್ಧಿಯಾಗಲೂ ಸಹಾಯಕವಾಗಿದೆ. ಆದರೆ ಜಿಲ್ಲೆಯ ಹಿರಿಯ ನಾಯಕರ, ರಾಜಕೀಯ ಮುಖಂಡರ, ಹಿರಿಯ ಅಧಿಕಾರಿಗಳ ಹಾಗೂ ಮುತ್ಸದ್ಧಿಗರ, ಹೋರಾಟಗಾರರ ನಿರ್ಲಕ್ಷ್ಯದಿಂದ ಈ ಜಿಲ್ಲೆಯ ಜನತೆಯು (ರೈತರು) ತುಂಗಭದ್ರ ಎಡದಂಡೆ ಕಾಲುವೆಯ ನೀರಿನ ಸಂಪೂರ್ಣ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೈದ್ರಾಬಾದ್ ಕರ್ನಾಟಕ (ಈಗ ಕಲ್ಯಾಣಕರ್ನಾಟಕ ಎಂದು ಕರೆಯಲ್ಪಡುತ್ತಿರುವ) ಪ್ರಾಂತ್ಯದಲ್ಲಿ ಪದೇ ಪದೇ ಪ್ರವಾಹ, ನಿರುದ್ಯೋಗ, ಆಹಾರ ಸಮಸ್ಯೆ, ಬರಗಾಲದಂಥ ಆರ್ಥಿಕ ಸಮಸ್ಯೆಯ ಸುಳಿಗೆ ಸಿಲುಕುವಂತಾಗಿದೆ.
ಜಿಲ್ಲೆಯ ಹಿನ್ನಲೆ :
ಕಪ್ಪು ಮಣ್ಣಿನ ಬಯಲು ಸೀಮೆ ರಾಯಚೂರು ಐತಿಹಾಸಿಕವಾಗಿ ತನ್ನದೇ ಆದ ಮಹತ್ವದ ಹಿನ್ನೆಲೆಯನ್ನು ಒಳಗೊಂಡಿದೆ. ಸುಮಾರು ಕ್ರಿ.ಪೂ. 2000 ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿದ್ದು, ಬಾದಾಮಿ ಚಾಲುಕ್ಯರ ಕಾಲದಿಂದ ಬಹುಮನಿ ಸುಲ್ತಾನರವರೆಗೆ ಆಳ್ವಿಕೆ ನಡೆಸಿದ ರಾಜರು ಈ ನಗರವನ್ನು ವಿಭಿನ್ನವಾಗಿ ಬಳಿಸಕೊಂಡಿರುವ ಸಾಕ್ಷ್ಯಾಧಾರಗಳು ಇಂದಿಗೂ ಜೀವಂತವಾಗಿವೆ. ಅಲ್ಲದೆ ವಿಜಯನಗರದ ಶ್ರೀ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ರಾಯಚೂರಿನ ವಶಕ್ಕಾಗಿ ಎರಡು ಬಾರಿ ಯುದ್ದ ಮಾಡಿರುವುದನ್ನು ಸ್ಮರಿಸಬಹುದಾಗಿದೆ. `ರಾಯ' ಎಂದರೆ ರಾಜ ಎಂದರ್ಥ. ರಾಯಚೂರು ಎನ್ನುವುದು ರಾಜನ ಊರು ಎಂಬ ಅರ್ಥವನ್ನು ತಿಳಿಸುತ್ತದೆ.
  
ರಾಯಚೂರು ಜಿಲ್ಲೆಯು 1857ರ ಸಿಪಾಯಿ ದಂಗೆಗಿಂತ ಮೊದಲೇ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಚಳುವಳಿಯ ಕಿಡಿ ಪ್ರಾರಂಭಿಸಿದ್ದು 1819ರಲ್ಲಿ ಕೊಪ್ಪಳದ ಪ್ರಸಿದ್ಧ ಜಮೀನ್ದಾರನಾದ `ವೀರಪ್ಪ'ನು. ಬ್ರಿಟೀಷರ ವಿರುದ್ಧ ದಂಗೆ ಎದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
  
15.08.1947 ರಂದು ಭಾರತ ಆಂಗ್ಲರ ಕಪಿಮುಷ್ಟಿಯಿಂದ ಸ್ವತಂತ್ರವಾಯಿತು. ಆದರೆ ಹೈದರಾಬಾದ್ ಕರ್ನಾಟಕಕ್ಕೆ ಒಳಪಟ್ಟ ರಾಯಚೂರಿನಲ್ಲಿ ಯಾರೂ ಸ್ವಾತಂತ್ರ್ಯೋತ್ಸವ ಆಚರಿಸಬಾರದೆಂಬ ಕಟ್ಟುನಿಟ್ಟಿನ ಆಜ್ಞೆಯನ್ನು ಹೊರಡಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ರಾಯಚೂರಿನ ಯುವ ಹೋರಾಟಗಾರರಾಗಿದ್ದ ಎಂ.ನಾಗಪ್ಪನವರು, ಅಡವಿರಾವ್, ಪರ್ವತರೆಡ್ಡಿ, ಚಂದ್ರಯ್ಯ, ಅಸಫಶಾಹಿ ,ಮುಂತಾದವರು `ಸಾಥ್ ಕಛೇರಿಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ಅದ್ವಿತೀಯ ಸಾಹಸವನ್ನು ಮೆರೆದರು.
  
ಜಿಲ್ಲೆಯ ವ್ಯಾಪ್ತಿ :
ರಾಯಚೂರು ಜಿಲ್ಲೆಯು ಗಾತ್ರದ ದೃಷ್ಟಿಯಿಂದ ರಾಜ್ಯದ 11ನೆಯ ಸ್ಥಾನದಲ್ಲಿದ್ದು, 2 ಕಂದಾಯ ವಿಭಾಗಗಳನ್ನು ಒಳಗೊಂಡಿದ್ದು, 5 ತಾಲ್ಲೂಕುಗಳು, 37 ಹೋಬಳಿ, ಒಟ್ಟು  8,385 ಚ.ಕಿ.ಮೀಟರ್ ವಿಸ್ತೀರ್ಣ ಹೊಂದಿರುವ ಈ ಜಿಲ್ಲೆಯ ಜನಸಂಖ್ಯೆ 16,68,762. ಇದರಲ್ಲಿ ಒಟ್ಟು  2,40,431 ಗ್ರಾಮೀಣ ಕುಟುಂಬಗಳಿದ್ದು, 1,28,261 ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. 830 ಜನವಸತಿ ಗ್ರಾಮಗಳು ಮತ್ತು 53 ಜನವಸತಿ ಇಲ್ಲದ ಗ್ರಾಮಗಳನ್ನು ಒಳಗೊಂಡಿದೆ. (ಕರ್ನಾಟಕ ಆರ್ಥಿಕ ಸಮೀಕ್ಷೆ  2010-11ರ ಪ್ರಕಾರ).
 
ಜಿಲ್ಲೆಯ ವಾತಾವರಣ :
ಜಿಲ್ಲೆಯ ಬಹುತೇಕ ಪ್ರದೇಶ ಗಿಡಮರಗಳಿಲ್ಲದೆ ಬಯಲು ಭೂಮಿಯ ಒಣ ಹವೆಯಿಂದ ಕೂಡಿದ ಪ್ರದೇಶವಾಗಿದ್ದು, ಇದು ಸಮುದ್ರದ ಮಟ್ಟದಿಂದ ಸುಮಾರು 1311 ಅಡಿ ಎತ್ತರದಲ್ಲಿದೆ. ಇದು ಕರ್ನಾಟಕದ ಉತ್ತರ ಖುಷ್ಕಿ ವಲಯದಲ್ಲಿದ್ದು, ಜಿಲ್ಲೆಯ ಬಹುಭಾಗದ ಮಣ್ಣು ಶೇಕಡ 60ರಷ್ಟು ಕಪ್ಪು ಇದ್ದು, ಉಳಿದ ಶೇಕಡ 40 ರಷ್ಟು ಕ್ಷೇತ್ರ ಕೆಂಪು ಮಸಾರಿಯಿಂದ ಕೂಡಿದೆ. ಚಳಿಗಾಲದಲ್ಲಿ (ಜನವರಿ ಮತ್ತು ಫೆಬ್ರವರಿ) ಅತಿ ಹೆಚ್ಚು ಚಳಿ ಇದ್ದು, ಬೇಸಿಗೆಯ ಕಾಲದಲ್ಲಿ ಅತಿ ಹೆಚ್ಚು ತಾಪಮಾನದಿಂದ, ಅತ್ಯಧಿಕ 44 ರಿಂದ 45 ಡಿಗ್ರಿ ಸೆಂಟಿಗ್ರೇಡ್ ನಷ್ಟು ಉಷ್ಣಾಂಶವನ್ನು ಹೊಂದಿರುತ್ತದೆ. ಇಲ್ಲಿ ಬೀಳುವ ಮಳೆಯು ಅತ್ಯಂತ ಕಡಿಮೆಯಾಗಿದ್ದು, ವಾರ್ಷಿಕ ಸರಾಸರಿ 421 ಮಿ.ಮಿ. ಇರುತ್ತದೆ. ಆದರೆ ಒಟ್ಟು ಮಳೆ ಬೀಳುವ ದಿನಗಳು ಕೇವಲ 37 ದಿನಗಳು ಮಾತ್ರ. ಕರ್ನಾಟಕ ಆರ್ಥಿಕ ಸಮೀಕ್ಷೆ 2010-11ರ ಪ್ರಕಾರ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಜಿಲ್ಲೆಗಳಲ್ಲಿ ಬಿಜಾಪುರ (565) ಪ್ರಥಮವಾಗಿದ್ದು ನಂತರದಲ್ಲಿ ರಾಯಚೂರು (712) ಎರಡನೆ ಸ್ಥಾನದಲ್ಲಿದೆ.
 
ಬಿತ್ತನೆ ಮತ್ತು ನೀರಾವರಿ ಸೌಲಭ್ಯ :
ರಾಯಚೂರು ಜಿಲ್ಲೆಯು 1996-97ರ ವರೆಗೆ 9 ತಾಲ್ಲೂಕುಗಳನ್ನು ಒಳಗೊಂಡಿದ್ದು, ಜಿಲ್ಲೆಯ ಭೌಗೋಳಿಕ ಕ್ಷೇತ್ರ 13,88,338 ಹೆಕ್ಟೇರು ಇದ್ದು ಬಿತ್ತನೆಯ ಕ್ಷೇತ್ರವು 11,08,821 ಹೆಕ್ಟೇರುಗಳಷ್ಟು ಹೊಂದಿದ್ದು ಇದರಲ್ಲಿ ತುಂಗಭದ್ರ ಎಡದಂಡೆ ಕಾಲುವೆಯಿಂದ 2,14,044 ಹೆಕ್ಟೇರುಗಳಷ್ಟು ನೀರಾವರಿಗೆ ಒಳಪಟ್ಟಿತ್ತು. 1997 ನಂತರದಲ್ಲಿ 5 ತಾಲ್ಲೂಕುಗಳನ್ನು ಹೊಂದಿದ ರಾಯಚೂರು ಜಿಲ್ಲೆಯ ಒಟ್ಟು ಭೌಗೋಳಿಕ ಕ್ಷೇತ್ರ  8,35,848 ಹೆಕ್ಟೇರುಗಳಾಯಿತು. ಇದರಲ್ಲಿ 5,75,541 ಬಿತ್ತನೆಗೆ ಒಳಪಟ್ಟಿದ್ದು 1,03,278 ಹೆಕ್ಟೇರು ಪ್ರದೇಶವು ತುಂಗಭದ್ರ ನದಿಯ ನೀರಾವರಿ ಸೌಲಭ್ಯವನ್ನು ಹೊಂದಿದೆ (ರಾಯಚೂರು ಕೃಷಿ ಇಲಾಖೆಯ 2000ನೆ ವಾರ್ಷಿಕ ವರದಿಯಂತೆ).
 
ರಾಯಚೂರು ಜಿಲ್ಲೆಯಲ್ಲಿ ಭತ್ತ ಬೆಳೆಯಲು ತುಂಗಭದ್ರ ಎಡದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಪಡೆದ ತಾಲ್ಲೂಕಾನ್ವಯ ಪ್ರದೇಶ (ಹೆಕ್ಟೇರುಗಳಲ್ಲಿ)
Picture
ಎಡದಂಡೆ ಕಾಲುವೆಯು ಜಿಲ್ಲೆಯಲ್ಲಿ ಒಟ್ಟು  127 ಮೈಲು ಅಂತರದಲ್ಲಿ ಹರಿಯಲಿದ್ದು 8 ಲಕ್ಷ ಎಕರೆವರೆಗಿನ ನೀರಾವರಿ ಕಲ್ಪಿಸುವ ಯೋಜನೆಯನ್ನು ಹೊಂದಿದ್ದರೂ ಕೇವಲ 5.8 ಲಕ್ಷ ಎಕರೆಗಳಷ್ಟು ಮಾತ್ರ ನೀರಾವರಿ ಸೌಲಭ್ಯ ಒದಗಿಸುವದರೊಂದಿಗೆ ಸಿಂಧನೂರು ತಾಲ್ಲೂಕಿನ 146 ಹಳ್ಳಿಗಳು, ಮಾನ್ವಿ ತಾಲ್ಲೂಕಿನ 126 ಹಳ್ಳಿಗಳು, ದೇವದುರ್ಗ ತಾಲ್ಲೂಕಿನ 03 ಹಳ್ಳಿಗಳು ಹಾಗೂ ರಾಯಚೂರು ತಾಲ್ಲೂಕಿನ 12 ಹಳ್ಳಿಗಳನ್ನೊಳಗೊಂಡಂತೆ ಒಟ್ಟು 287 ಪ್ರಮುಖ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಲಾಗಿದೆ.
 
ನೀರಾವರಿಯಿಂದ ಬದಲಾದ ಜೀವನ ವ್ಯವಸ್ಥೆ :
ಬೆಂಕಿಯ ನಗರವಾಗಿರುವ ರಾಯಚೂರಿಗೆ ಅಮೃತಧಾರೆಯಾಗಿರುವ ತುಂಗಭದ್ರ ಎಡದಂಡೆ ಕಾಲುವೆ ಸಾಯುವ ಹಲವು ಜೀವಗಳಿಗೆ ತುತ್ತು ಅನ್ನ ಮತ್ತು ಗುಟುಕು ನೀರನ್ನು ನೀಡಿ ಆ ಜೀವಕ್ಕೆ ಉತ್ತಮ ಜೀವನದ ದಾರಿ ಕಂಡುಕೊಳ್ಳುವಲ್ಲಿ ಪ್ರಮುಖವಾಗಿದ್ದು, ಈ ಪ್ರದೇಶದ ರೈತರು ರಾಜ್ಯದ ಜನತೆಗೆ ಅನ್ನ ನೀಡುವುದರೊಂದಿಗೆ ನೆರೆ ರಾಜ್ಯಗಳಿಗೆ ಭತ್ತವನ್ನು ರಪ್ತು ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಉತ್ತಮ ಜೀವನ ನಡೆಸಲು ಉತ್ತಮವಾದ ಕೃಷಿಗೆ ನೀರಾವರಿ ಅತ್ಯಂತ ಪ್ರಮುಖವಾದ ಅಂಶ ಎಂಬುವುದು ಪ್ರತಿಯೊಬ್ಬ ವ್ಯಕ್ತಿ (ರೈತನಿ)ಗೂ ತಿಳಿದಂಥ ವಿಷಯವಾಗಿದೆ. ವಿಶೇಷವಾಗಿ ರಾಯಚೂರು ಜಿಲ್ಲೆಯ ಜನತೆಗೆ ಇದರ ಅರಿವು ಪರಿಪೂರ್ಣವಾಗಿ ಗೊತ್ತಾಗಿದೆ. ಹೇಗೆಂದರೆ ಈ ಜಿಲ್ಲೆಯಲ್ಲಿ ನೀರಾವರಿಗೆ ಒಳಪಟ್ಟ (ಸಿಂಧನೂರು, ಮಾನ್ವಿ ಮತ್ತು ರಾಯಚೂರಿನ ಅರ್ಧ ಭಾಗದ) ಜನರು ಸುಖ ಸಮೃದ್ಧ ಜೀವನ ನಡೆಸಿದರೆ ಇನ್ನುಳಿದ ಭೂಮಿರಹಿತ ಬಡಜನ ಮತ್ತು ಭೂಮಿ ಹೊಂದಿದ್ದರೂ ನೀರಿನ ಸೌಲಭ್ಯಗಳಿಲ್ಲದೆ ತಮ್ಮ ಜಮೀನು ಮತ್ತು ಊರುಗಳನ್ನು ಬಿಟ್ಟು ನೀರಾವರಿ ಹೊಂದಿದ ಊರುಗಳಿಗೆ ಮತ್ತು ಕೆಲವರು ದೊಡ್ಡ ದೊಡ್ಡ ನಗರಗಳಿಗೆ ಒಂದು ಹೊತ್ತಿನ ಊಟಕ್ಕಾಗಿ ಕೆಲಸ ಹುಡುಕಿಕೊಂಡು ವಲಸೆ ಹೋಗುವಂತಹ ಪರಿಸ್ಥಿತಿಯನ್ನು ಪ್ರಸ್ತುತ ಇಂದಿನವರೆಗೂ ಮುಂದುವರೆದಿರುವುದನ್ನು ನೋಡಬಹುದಾಗಿದೆ. ಇದಕ್ಕೆ ಕಾರಣ ನೀರಾವರಿಯ ಅಸಮರ್ಪಕ ಬಳಕೆ ಹಾಗೂ ಆಂದ್ರಪ್ರದೇಶದಿಂದ ವಲಸೆ ಬಂದಂತಹ ಜನಗಳು ಕ್ಯಾಂಪ್ ಎನ್ನುವಂತಹ ಹೆಸರಿನಿಂದ ಭದ್ರಬುನಾದಿ ಹಾಕಿ ಊರುಗಳನ್ನು ಸ್ಥಾಪಿಸಿಕೊಂಡು ಈ ಭಾಗದಲ್ಲಿ ಸಿಗುವಂತಹ ಎಲ್ಲಾ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಿಸಕೊಳ್ಳುತ್ತಿರುವುದನ್ನು ಗುರುತಿಸಬಹುದು.
 
ತುಂಗಭದ್ರ ಅಣೆಕಟ್ಟಿನ ನೀರು ಸಂಗ್ರಹಣೆಯ ಸಾಮರ್ಥ್ಯ ಇಳಿಮುಖವಾದ ಒಂದು ನೋಟ. 
Picture
ಸಮಸ್ಯೆಗಳು :
ಬಿಸಿಲುಕುದುರೆ ನಾಡಲ್ಲಿ ಅಂತರ್ಜಲದ ಮಟ್ಟ  ದಿನೇ ದಿನೇ ಕಡಿಮೆಯಾಗಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮಳೆಯು ಕೆಲವೇ ದಿನಗಳು ಬೀಳುವುದರಿಂದ ಹಾಗೂ ಕಪ್ಪು ಮಣ್ಣಿನಲ್ಲಿ ನೀರು ಶೀಘ್ರವಾಗಿ ಇಂಗದೇ ಹಳ್ಳ ಕೊಳ್ಳಗಳನ್ನು ಸೇರುತ್ತವೆ. ಇದರಿಂದ ಜಿಲ್ಲೆಯ ಕೃಷಿ ಉತ್ಪನ್ನಕ್ಕೆ ಧಕ್ಕೆಉಂಟಾಗುತ್ತದೆ.
  
ಈ ಮೇಲಿನ ತುಂಗಭದ್ರ ಅಣೆಕಟ್ಟೆಯ ನೀರು ಸಂಗ್ರಹ ಸಾಮಥ್ರ್ಯದ ಚಿತ್ರಣವನ್ನು ಗಮನಿಸಿದಾಗ ಮುಂದಿನ ವರ್ಷಗಳಲ್ಲಿ ಕುಡಿಯಲು ನೀರು ಸಿಗದಂತಹ ಸೂಚನೆಗಳನ್ನು ನೀಡುವಂತಿದೆ. ವಿಶೇಷವಾಗಿ ರಾಯಚೂರು ಭಾಗದ ಜನರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
  
ಮೂಲತಃ ಜಿಲ್ಲೆಯವರೆ (ವಿಶೇಷವಾಗಿ ದಲಿತರು, ಕೂಲಿಕಾರ್ಮಿಕರು, ಹಿಂದುಳಿದ ಗುಂಪಿನವರು) ತಮ್ಮ ಊರುಗಳನ್ನು ಬಿಟ್ಟು ಉದ್ಯೋಗವನ್ನರಸಿ ಬೇರೆ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬೇರೆ ಬೇರೆ ಊರುಗಳಿಂದ ಬಂದು ರಾಯಚೂರಿನಲ್ಲೇ ಜೀವನವನ್ನು ರೂಪಸಿಕೊಂಡವರಲ್ಲಿ ಬಹುತೇಕ ಆಂದ್ರಪ್ರದೇಶದವರಾಗಿದ್ದಾರೆ.
  
ತುಂಗಭದ್ರ ಎಡದಂಡೆ ಕಾಲುವೆಯು ಪದೇ ಪದೇ ದುರಸ್ಥಿಗೆ ಒಳಪಡುವುದು (ವಿಶೇಷವಾಗಿ ರೈತರು ಬಿತ್ತನೆಯ ಸಮಯದಲ್ಲೇ ಈ ಸಮಸ್ಯೆಗಳು ಮರುಕಳಿಸುತ್ತವೆ). ಇದರಿಂದ ರೈತ ಜನಸಮೂಹ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ರೈತರು ಪ್ರತಿಭಟನೆ ಅಥವಾ ಹೋರಾಟದ ಮೂಲಕ ಸರ್ಕಾರಕ್ಕೆ ತಿಳಿಸಲು ಪ್ರಯತ್ನಿಸಿದಾಗ ಹೋರಾಟವನ್ನು ದಮನಗೊಳಿಸುವುದೇ ಪರಿಹಾರವೆಂದು ತಿಳಿದ ಸರ್ಕಾರ ರೈತರ ಹೋರಾಟದ ದಿಕ್ಕನ್ನು ಬದಲಿಸಿದೆ. ಇದಕ್ಕೆ ಉದಾ: 1998ರಲ್ಲಿ ಮಾನ್ವಿ ತಾಲ್ಲೂಕಿನ ಸಿರವಾರ ಹೋಬಳಿಯ ರೈತರ ಮೇಲೆ ನಡೆದ ಗೋಲಿಬಾರ್. ಕೊನೆಯ ಭಾಗದಲ್ಲಿರುವಂತಹ ರೈತರ ಗದ್ದೆಗಳಲ್ಲಿ ಬೆಳೆ ಬೆಳೆದು ನಿಂತಿದ್ದು, ನೀರಿಲ್ಲದೆ ಭತ್ತ ಒಣಗಿ ಬೆಳೆ ನಾಶವಾಗುವಂತಹ ಸ್ಥಿತಿ ತಲುಪಿತ್ತು. ಈ ಸಂದರ್ಭದಲ್ಲಿ ರೈತರು 10.03.1998 ರಂದು ರಸ್ತಾರೋಕೋ ಮತ್ತು ಪ್ರತಿಭಟನೆ ಮಾಡಿ 20 ಜನ ರೈತರು ಗಾಯಾಳುಗಳಾಗಿರುವುದನ್ನು ಸ್ಮರಿಸಬಹುದು.
  
1990ರ ದಶಕದಲ್ಲಿ ರೈತರು ಮತ್ತು ರೈತ ಕೂಲಿಕಾರ್ಮಿಕರು ತಮ್ಮ ಸಮಸ್ಯೆಯ ವಿರುದ್ಧ ಹೋರಾಟಕ್ಕಿಳಿದಾಗ ಹೋರಾಟದ ದಿಕ್ಕು ನಕ್ಸಲೈಟ್ ರೂಪಪಡೆಯಿತು. 2000ರ ನವೆಂಬರ್ನಲ್ಲಿ ಗಂಗಾವತಿಯ ರೈತರು ಭತ್ತಸಂಗ್ರಹ ಮತ್ತು ಬೆಂಬಲ ಬೆಲೆಗೆ ಒತ್ತಾಯಿಸಿ ಹೋರಾಟ ಮಾಡಿದಾಗ ರೈತ ಹೋರಾಟಗಾರರ ಮೇಲೆ ಲಾಠಿಚಾರ್ಜ್, ಅಶ್ರುವಾಯು ಸಿಡಿತ ಮಾಡಲಾಯಿತು.
  
ರೈತರು ಇಷ್ಟೊಂದು ಸಮಸ್ಯೆಗಳೊಂದಿಗೆ ಕಷ್ಟದಿಂದ ಬೆಳೆದಂತಹ ಬೆಳೆಗೆ ಸೂಕ್ತವಾದ ಸಮಯದಲ್ಲಿ ಸೂಕ್ತವಾದ ಬೆಲೆಯನ್ನು  ನಿಗದಿಪಡಿಸದೇ  ಇರುವುದರಿಂದ ಇಂತಹ ಪರಿಸ್ಥಿತಿಯನ್ನು ದಲ್ಲಾಳಿಗಳು ಹಾಗೂ ಬಂಡವಾಳಶಾಹಿಗಳು ಉಪಯೋಗಿಸಿಕೊಳ್ಳುವರು. ಇದರಿಂದ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿ ರೈತ ಆತ್ಮಹತ್ಯೆಯಂತಹ ಘಟನೆಗಳು ನಡೆಯಲು ಅವಕಾಶ ಕಲ್ಪಿಸಿದಂತಾಗಿದೆ.
  
ರೈತರ ಮತ್ತು ನೀರಾವರಿ ಸಮಸ್ಯೆಗಳನ್ನು ಒಂದು ಕ್ಷಣ ಯೋಚಿಸಿದಾಗ ಈ ಸಮಸ್ಯೆಗಳ ಪರಿಹಾರಕ್ಕೆ ಅನೇಕ ತಜ್ಞರು, ರೈತ ಮುಖಂಡರು, ಕೃಷಿ ಮತ್ತು ನೀರಾವರಿ ತಜ್ಞರುಗಳು ಕಂಡುಕೊಂಡ, ಸೂಚಿಸಿದ ಪರಿಹಾರ ಮಾರ್ಗಗಳು ಹಾಗೂ ಸರ್ಕಾರ ಘೋಷಿಸಿದ ಮತ್ತು ಜಾರಿಗೊಳಿಸಿದ ಪರಿಹಾರೋಪಾಯಗಳನ್ನು ಆಯಾ ಸಮಯಕ್ಕೆ ತಕ್ಕಂತೆ ಸಮರ್ಪಕವಾಗಿ ಉಪಯೋಗಿಸುವಲ್ಲಿ ವಿಫಲತೆ ಕಾಣುತ್ತದೆ. ಈ ವಿಫಲತೆಗೆ ಕಾರಣ ಎಲ್ಲಾ ರಾಜಕೀಯ ನಾಯಕರು, ಎಲ್ಲಾ ಹಂತದ ಅಧಿಕಾರಿ ವರ್ಗ ಹಾಗೂ ಮತದಾರರ  ಪಾತ್ರ ಒಳಗೊಂಡಿದೆ.ಎಲ್ಲಾ ವರ್ಗದವರು ಅನ್ನ, ನೀರು ಸೇವಿಸುವುದರಿಂದ ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ.
 
ಗ್ರಂಥಋಣಿ
  1. Raichur District Development Plan             -           Government of Karnataka
  2. Annual Report – (2007 -08)                         -           Tungabhadra Board (Dam), Hospet
  3. District Population Booklet,  Raichur (2001)  -       Directorate of Census Operation Karnataka
  4. ವಾರ್ಷಿಕ ಆಡಳಿತ ವರದಿ (1999-2000)-ಜಿಲ್ಲಾ ಪಂಚಾಯತ್ ಕಾರ್ಯಾಲಯ, ರಾಯಚೂರು
  5. ವಾರ್ಷಿಕ ಆಡಳಿತ ವರದಿ (2009-2010)-             ಜಿಲ್ಲಾ ಪಂಚಾಯತ್ ಕಾರ್ಯಾಲಯ, ರಾಯಚೂರು
  6.  ರಾಯಚೂರು ವಾಣಿ (17.06.2006)        -           ಕನ್ನಡ ದಿನ ಪತ್ರಿಕೆ
  7. ಪ್ರಜಾವಾಣಿ ಕರ್ನಾಟಕ ದರ್ಶನ (24.12.2009)-   ಕನ್ನಡ ದಿನ ಪತ್ರಿಕೆ
  8. ಪ್ರಜಾವಾಣಿ ಕರ್ನಾಟಕ ದರ್ಶನ (24.02.2011)-   ಕನ್ನಡ ದಿನ ಪತ್ರಿಕೆ
 
ಶಿವರಾಜ್
ಸಂಶೋಧನಾರ್ಥಿ, ಇತಿಹಾಸ ವಿಭಾಗ, ಬೆಂ.ವಿ., ಬೆಂ-56
1 Comment
Shabuddeen mujawar
7/7/2018 03:49:09 am

Nadi

Reply



Leave a Reply.


    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups

    Categories

    All
    ಇತರೆ
    ಎನ್‍ಜಿಓ
    ಪರಿಸರ
    ವ್ಯಕ್ತಿಚಿತ್ರಗಳು
    ಸಮಾಜಕಾರ್ಯ
    ಸಮುದಾಯ ಸಂಘಟನೆ
    ಸಂಪುಟ 1
    ಸಂಪುಟ 2
    ಸಂಪುಟ 3
    ಸಂಪುಟ 4
    ಸಂಪುಟ 5
    ಸಂಪುಟ 6
    ಸಂಪುಟ 7
    ಸಂಪುಟ 8
    ಸಂಪುಟ 9

    Social Work Foot Prints


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com