ವಿಶ್ವ ಇಂದು ಎಷ್ಟೊಂದು ಪ್ರಭಾವಿ ಮಹಿಳೆಯರನ್ನು ಕಂಡಿದೆ, ಮುಖ್ಯವಾಗಿ ಅಮೇರಿಕದ ಹಿಲರಿ ಕ್ಲಿಂಟನ್, ದಿ|| ಇಂದಿರಾಗಾಂಧಿ, ಜರ್ಮನಿಯ ಚಾನ್ಸುಲರ್ ಏಂಜಲಾ ಮರ್ಕೆಲಾ, ಶ್ರೀಲಂಕಾದ ದಿ|| ಮಾಜಿ ಅಧ್ಯಕ್ಷೆ ಕುಮಾರಿ ಬಂಡಾರಿ ನಾಯಕೆ, ಪೆಪ್ಸಿ-ಕೋಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಮುಖ್ಯಸ್ಥೆ ಇಂದಿರಾನೂಯಿ, ಪ್ರಸ್ತುತ ಆಸ್ಟ್ರೇಲಿಯದ ಮೊದಲ ಮಹಿಳಾ ಪ್ರಧಾನಮಂತ್ರಿ ಜೂಲಿಯ್ ಗಿಲಾರ್ಡ್. ಹೀಗೆ ಅನೇಕ ಪ್ರಭಾವಿ ಮಹಿಳೆಯರನ್ನು ಪ್ರಪಂಚವು ಕಂಡಿದೆ, ಆದರೆ ಈ ಮೇಲಿನ ಮಹಿಳಾ ಪ್ರಮುಖರು ಒಂದು ವಂಶಪಾರಂಪರ್ಯವಾಗಿ ಅಧಿಕಾರ ಹೊಂದಿದವರು. ಇನ್ನು ಕೆಲವರು ಹಣಕಾಸಿನ ಪ್ರಾಬಲ್ಯದಿಂದ ಪ್ರಪಂಚದಲ್ಲಿ ತಮ್ಮ ಛಾಪನ್ನು ಮೂಡಿಸಿದವರು. ಈ ದಿನ ನಾವು ಮಾತಾನಾಡುತ್ತಿರುವುದು ಈ ಮೇಲಿನ ಮಹಿಳಾ ಪ್ರಮುಖರ ಬಗ್ಗೆಯಲ್ಲ. ಇವತ್ತು ನಾವು ಪ್ರಪಂಚದ ಕಗ್ಗತ್ತಲೆಯ ನಾಡು ಎಂದು ಕರೆಯುವ ಆಫ್ರಿಕ ಖಂಡದ ಪುಟ್ಟ ಹಾಗೂ ಬಡ ರಾಷ್ಷ್ರವಾದ ಕೀನ್ಯಾ ದೇಶದ ಬಗ್ಗೆ ನಾವೆಲ್ಲಾ ಕೇಳಿದವರು. 21 ನೆಯ ಶತಮಾನದಲ್ಲಿ ಈ ಒಂದು ದೇಶದ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯಂತೆ ಉದಯಿಸಿ ಬಂದ ಧೀರ ಮಹಿಳೆಯ ಹೆಸರೆ ಶ್ರೀಮತಿ ವಂಗಾರಿ ಮಾಥಾಯಿ. ಅಷ್ಟಕ್ಕೂ ಈ ವಂಗಾರಿ ಮಾಥಾಯಿ ಯಾರು ಅಂತೀರಾ? ಕೀನ್ಯಾ ದೇಶದಲ್ಲಿ ಜನಿಸಿದ ಸಾಮಾನ್ಯ ಮಹಿಳೆಯಾದವಳು ಇಂದು ಅಸಾಧಾರಣವಾದ ಕೆಲಸ ಮಾಡಿದ್ದಾಳೆ. ಈ ಮಹಿಳೆ ಜನಿಸಿದ್ದು 1940 ಕೀನ್ಯಾ ದೇಶದ ನ್ಯಾರಿ ಎಂಬ ಪುಟ್ಟ ಪಟ್ಟಣದಲ್ಲಿ ಅದು ಕೀನ್ಯಾದ ಪರ್ವತ ಕಣಿವೆಯಾದ ಮೌಂಟ್ ಕಿನ್ಯಾದಲ್ಲಿದೆ. ಪ್ರಪಂಚಕ್ಕೆ ವಂಗಾರಿ ಮಾಥಾಯಿ ಪರಿಸರ ಹಾಗೂ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಆಂದೋಲನ ಮಾಡಿದ ಆಫ್ರಿಕ ಖಂಡದ ಪ್ರಥಮ ಮಹಿಳೆ. ಕೇಂದ್ರ ಕಿನ್ಯಾದ ಕೊಳೆಗೇರಿ ಜನಗಳ ನಡುವೆ ಬೆಳೆದವಳು. ಆ ಜನಗಳ ಕಷ್ಷ ನೋವು-ನಲಿವು ಮತ್ತು ಅವರ ಹಕ್ಕುಗಳಿಗೆ ಅಧಾರ ಸ್ತಂಭವಾಗಿ ನಿಂತವಳೆ ಈ ವಂಗಾರಿ. ಹಾಗೆಯೇ ಇಡೀ ಕೀನ್ಯಾ ಹಸಿರು ಪ್ರದೇಶವಾಗಬೇಕು ಎಂದು ಹೋರಾಡಿದವಳು. ಅಷ್ಟೇ ಏಕೆ ಪ್ರಪಂಚದ ವಿವಿಧ ದೇಶಗಳಿಗೆ ಹೋಗಿ ಪರಿಸರದ ಬಗ್ಗೆ ಭಾಷಣ ಮಾಡಿ ಅದರ ಬಗ್ಗೆ ಕಾಳಜಿ ಮೂಡಿಸಿದರು. ಸ್ವಂತ ಹಣದಿಂದ ಸಸಿಗಳನ್ನು ಜನರಿಗೆ ಉಚಿತವಾಗಿ ನೀಡಿ ಕಾಡು ಬೆಳೆಸುವಂತೆ ಪ್ರಪಂಚಕ್ಕೆ ಸಂದೇಶ ನೀಡಿದಳು. ಅಷ್ಟೇ ಅಲ್ಲ ಕಾಡು ಭೂಮಿಯಿಂದ ಕಣ್ಮರೆಯಾದರೆ ಮನುಕುಲದ ಸಂತತಿ ನಾಶಕ್ಕೆ ಹತ್ತಿರವಿದೆಯೆಂದು ಸಂಶೋಧನೆ ಮಾಡಿ ಹಾಗೆ ಸ್ವಂತವಾಗಿ ಪರಿಸರದ ಕಾಳಜಿ ಹಾಗೂ ಗೌರವ ಇಟ್ಟುಕೊಂಡು 1977 ರಲ್ಲಿ ಗ್ರೀನ್ಬೆಲ್ಟ್ ಎಂಬ ಆಂದೋಲನವನ್ನು ಆರಂಭ ಮಾಡಿದಳು. ಇದರ ಬಗ್ಗೆ ಹಾಗೂ ಭವಿಷ್ಯದ ಭೂಮಿಯ ಬಗ್ಗೆ ವಿದ್ಯಾರ್ಥಿಯಾಗಿದ್ದಾಗಲೇ ಕನಸು ಕಂಡಿದ್ದಳು. ಅವರು ಅಧ್ಯಯನ ಮಾಡಿದ ಕಾಲೇಜು ಮೌಂಟ್ ಸೇಂಟ್ ಸ್ಕೂಲಾಸ್ಟಿಕ್ ಕಾಲೇಜು ಆಟ್ಚಸನ್ ಕಾನ್ಸಸ್ನಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಪ್ರತಿಷ್ಠಿತ ವಿದ್ಯಾರ್ಥಿ ವೇತನ ಪಡೆದುಕೊಂಡಿದ್ದರು. ಮುಂದೆ ವಂಗಾರಿಯು ವೆಟರ್ನರಿ ಅನಾಟಮಿ ಡಾಕ್ಟರೇಟ್ ಪದವಿ ಪಡೆದ ಪೂರ್ವ ಅಥವಾ ಮಧ್ಯ ಆಫ್ರಿಕಾದ ಮೊಟ್ಟಮೊದಲ ಏಕೈಕ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ವಂಗಾರಿ ಮಾಥಾಯಿಯು ಶಾಂತಿ ಮತ್ತು ಪರಿಸರವಾದಿ ಮಾತ್ರವಾಗಿರಲಿಲ್ಲ. ಅವರು 2002 ರಲ್ಲಿ ಕೀನ್ಯಾದ ರಾಜಕಾರಣದ ಮುಖ್ಯವಾಹಿನಿಯಲ್ಲಿ ಕಂಡುಬಂದಿದ್ದರು. ಅಷ್ಟೇ ಅಲ್ಲ ಅದೇ ವರ್ಷದಲ್ಲಿ ಪಾರ್ಲಿಮೆಂಟ್‍ಗೆ ಆಯ್ಕೆ ಆಗಿದ್ದರಲ್ಲದೆ ಎರಡು ವರ್ಷಗಳ ಕಾಲ ಪರಿಸರ ಖಾತೆಯಲ್ಲಿ ಸಹ ಸಚಿವೆಯಾಗಿ ಕಾರ್ಯನಿರ್ವಹಿಸಿದರು ಅಷ್ಟೇ ಅಲ್ಲ ಕೀನ್ಯಾದ ಕೇಂದ್ರ ರಾಜಧಾನಿಯಾದ ನೈರೋಬಿಯಾದ ಕೊಳೆಗೇರಿ ಮಕ್ಕಳು ಮತ್ತು ಮಹಿಳೆಯರ ಬಗ್ಗೆ ಉತ್ತಮ ಮಾನವೀಯ ಸಂಬಂಧ ಹೊಂದಿದ್ದರು. ಇದೇ ಅಲ್ಲದೇ ಮಾನವ ಹಕ್ಕುಗಳ ರಕ್ಷಣೆ ಹಾಗೂ ಮಹಿಳೆಯರಿಗೆ ಉದ್ಯೋಗಾವಕಾಶ ಕೊಡಿಸುವುದು ಅವರ ಧ್ಯೇಯವಾಗಿತ್ತು. ಕೀನ್ಯಾದ ಪಾರ್ಲಿಮೆಂಟ್ ಈ ಮಥಾಯ್‍ಗೆ ಬಹಿಷ್ಕಾರ ಹಾಕಿತು, ಕಾರಣ ಅವರು ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿದರು ಎಂದು ಪಾರ್ಲಿಮೆಂಟ್‍ನಿಂದ ಹೊರ ಬಂದರು. ಎದೆಗುಂದದೆ ಭ್ರಷ್ಟಾಚಾರವನ್ನು ವಿರೋಧಿಸುವ ಅಲೆಯನ್ನು ಕೀನ್ಯಾ, ಆಫ್ರಿಕಾ ಖಂಡದಾದ್ಯಂತ ಪ್ರತಿಭಟನೆ ಆಂದೋಲನ ನಡೆಸಿದರು. ಪೋಲಿಸರ ಲಾಠಿ ಏಟಿನ ಥಳಿತಕ್ಕೆ ಮಥಾಯ್ರ ಪ್ರತಿಭಟನೆಯ ಕಿಚ್ಚು ಶಾಂತವಾಗಲಿಲ್ಲ ಮಾಥಾಯ್ಯವರ ಮಾನವತಾವಾದಿ, ಪರಿಸರವಾದಿ ಗುಣಗಳನ್ನು ಕಂಡು ಕೀನ್ಯಾದ ಖ್ಯಾತ ಸಮಾಜ ವಿಜ್ಞಾನಿಯಾದಂತಹ ಜಾನ್ ಗೀತೋಂಗುರವರು ಮಾಥಾಯ್‍ಯನ್ನು “Maathai was known to speak truth to power” ಈ ರೀತಿ ಹೇಳಿದ್ದಾರೆ. ಜಾನ್ ಮೂಲತಃ ಭ್ರಷ್ಟಾಚಾರದ ವಿರೋಧಿಯಾಗಿದ್ದರು ಮಾಥಾಯ್‍ಯನ್ನು ಬೆಂಬಲಿಸಿದ್ದಕ್ಕೆ ಜಾನ್ರವರಿಗೆ ಅಲ್ಲಿನ ಸರ್ಕಾರ ದೇಶದಿಂದ ಬಹಿಷ್ಕಾರ ಹಾಕಿತು. 1977 ರಲ್ಲಿ ಗ್ರೀನ್ ಬೆಲ್ಟ್ ಆಂದೋಲವನ್ನು ಪ್ರಾರಂಭಿಸಿದ ನಂತರ ಮಾಥಾಯ್ ಮತ್ತು ಜಾನ್‍ರವರು ಕೀನ್ಯಾದಾದ್ಯಂತ ಜನಪ್ರಿಯತೆಗಳಿಸಿದ್ದರು ಹಾಗೆ ಕೀನ್ಯಾದಲ್ಲಿ ಜನಜಾಗೃತಿ ಮೂಡಿಸುವಲ್ಲಿ ತಮ್ಮ ಬದುಕನ್ನೇ ಇವರು ಪಣವಾಗಿಟ್ಟರು. ವಂಗಾರಿಯವರು ಸಂಘಟಿಸಿದ ಗ್ರೀನ್ಬೆಲ್ಟ್ ಸಂಸ್ಥೆಯು ಆಫ್ರಿಕಾದಾದ್ಯಂತ 40 ದಶಲಕ್ಷ ಸಸಿಗಳನ್ನು ನೆಟ್ಟು ಬೆಳೆಸಿದೆ. ಕಾಡುನಾಶ ಮಾಡುವವರ ವಿರುದ್ಧ ನೂರಾರು ಹೋರಾಟಗಳನ್ನು ಹಮ್ಮಿಕೊಂಡಿದ್ದರು. ಅಷ್ಟೇ ಏಕೆ, ಒಬ್ಬ ಸಮಾಜಕಾರ್ಯಕರ್ತೆಯಾಗಿ ಕೀನ್ಯಾ ದೇಶದ ಮಾಜಿ ಅಧ್ಯಕ್ಷ ಡೇನಿಯಲ್ ಅರಾಫ್ ಅವರ ಸರ್ವಾಧಿಕಾರದ ಆಡಳಿತದ ವಿರುದ್ಧ ನಡೆದ ಜನಾಂದೋಲನದಲ್ಲಿ ಪಾಲ್ಗೊಂಡು ಪೋಲಿಸರಿಂದ ಹಲವು ಸಲ ದೌರ್ಜನ್ಯಕ್ಕೊಳಪಟ್ಟಿದ್ದರು. ವಂಗಾರಿಗೆ ಇಷ್ಟೊಂದು ಹೋರಾಟದ ಕಿಚ್ಚು ಇದ್ದರೂ ಅವರು ಕೌಟುಂಬಿಕವಾಗಿ ಕಲಹದಿಂದ ಬಳಲಿದ್ದರು; ಕಾರಣ ಅವರ ಗಂಡನಾದ ಮಾವಾಂಗಿಯು ಅವಳ ವಿರುದ್ದ ವಿವಾಹ ವಿಚ್ಛೇದನ ನೀಡಿದ್ದರು, ಕಾರಣ ಮಾಥಾಯಿಯು ಮಾಡುವ ಕಾರ್ಯವೈಖರಿಯು ಗಂಡನಿಗೆ ಇಷ್ಟವಿರಲಿಲ್ಲ. ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ವಂಗಾರಿಯು ಪ್ರತಿಭಟನೆ ಮಾಡಿದ್ದರು. ಯಾಕೆಂದರೆ, ನ್ಯಾಯಾಧೀಶರು ವಿಚ್ಛೇದನ ಪರಿಗಣಿಸಿದ ಕೂಡಲೇ ವಂಗಾರಿ ಮಾಥಾಯ್‍ಯನ್ನು ಪೋಲಿಸರು ಬಂಧಿಸಿದರು; ಅವರು ಸೆರೆವಾಸದಲ್ಲಿ ಕಳೆಯಬೇಕಾಗಿ ಬಂತು. ಇದನ್ನು ಲೆಕ್ಕಿಸದೆ ವಂಗಾರಿಯವರು ಜೈಲಿನಿಂದಲೇ ಮಾನವನ ಹಕ್ಕುಗಳ ಬಗ್ಗೆ ಹೋರಾಡಿದರು; ಅವರ ಹೋರಾಟದ ಮಾತುಗಳು ಮಾತ್ರ ಹೆಚ್ಚಾಗುತ್ತಲೇ ಹೋದವು. ಈ ಎಲ್ಲಾ ಕಷ್ಟಗಳ ನಡುವೆಯೇ ಅವರು ಹೋರಾಡಿದ್ದಕ್ಕಾಗಿ ಫ್ರಾನ್ಸ್ ದೇಶದಿಂದ ನೀಡುವ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಲೀಜನ್ ದಿ ಆನರ್ ಮತ್ತು ಜಪಾನ್ ದೇಶದಿಂದ ನೀಡುವ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕಾರ್ಡನ್ ಆಫ್ ಆರ್ಡರ್ ಆಫ್ ದಿ ರೈಸಿಂಗ್ ಸನ್ ಜೈಲಿನಲ್ಲಿರುವಾಗಲೇ ವಂಗಾರಿಯನ್ನು ಗುರುತಿಸಿಕೊಂಡು ಇವು ಬಂದವು. ಮೂಲತಃ ವಂಗಾರಿ ಮಾಥಾಯ್ ಹುಟ್ಟು ಹೋರಾಟಗಾರ್ತಿ, ಪರಿಸರವಾದಿ, ಮಹಿಳಾ ಹಕ್ಕುಗಳ ಹಾಗೂ ಮಾನವ ಹಕ್ಕುಗಳ ರಕ್ಷಕಿ, ಉತ್ತಮ ರಾಜಕಾರಣಿ, ಭ್ರಷ್ಟಾಚಾರದ ವಿರೋಧದ ಮೊದಲ ಧ್ವನಿಯನ್ನು ಕೀನ್ಯಾದ ಪಾರ್ಲಿಮೆಂಟ್‍ನಲ್ಲಿ ಎತ್ತಿ ಗರ್ಜಿಸಿದವಳು. ಮುಖ್ಯವಾಗಿ ಮಹಿಳಾವಾದಿ, ಹಾಗೆಯೇ ಸಮಾಜ, ದೇಶ, ವಿಶ್ವದಲ್ಲಿ ಶಾಂತಿಯಿಂದ, ಸಹಬಾಳ್ವೆಯಿಂದ ಪ್ರತಿಯೊಬ್ಬ ಮಾನವನೂ ಬದುಕಬೇಕೆಂದವಳು. ವಂಗಾರಿಯವರು ಮಾನವತಾವಾದಿಯ ಶಾಂತಿಯ ಸಂದೇಶ ಮೈಗೂಡಿಸಿಕೊಂಡಿದ್ದರಿಂದ ಅವರಿಗೆ ಜಗತ್ತಿನಲ್ಲಿಯೇ ಮಹತ್ತರ ಸಾಧನೆ ಮಾಡಿದವರಿಗೆ ನೀಡುವ ಶ್ರೇಷ್ಠ ನಾಗರಿಕ ಶಾಂತಿ ಪ್ರಶಸ್ತಿಯಾದ 2004 ರಲ್ಲಿ ನೋಬಲ್ ಪ್ರಶಸ್ತಿಯನ್ನು ವಂಗಾರಿ ಮಾಥಾಯ್ಯವರ ಮಹತ್ತರ ಸಾಧನೆ ಗುರುತಿಸಿ 2004ರಲ್ಲಿ ನೀಡಿ ಗೌರವಿಸಲಾಗಿದೆ. ವಂಗಾರಿ ಮಾಥಾಯ್‍ಯವರಿಗೆ ಸಂದ ನೊಬೆಲ್ ಪ್ರಶಸ್ತಿ ಕೀನ್ಯಾ ದೇಶದವರು ಮಾತ್ರ ಸಂತೋಷಪಡಲಿಲ್ಲ. ಈ ಒಂದು ಶಾಂತಿ ಪ್ರಶಸ್ತಿ ಬಂದಾಗ ಇಡೀ ಆಫ್ರಿಕಾ ಖಂಡ, ಹಾಗೆಯೇ ಜಗತ್ತೇ ಎದ್ದು ನಿಂತು ಈ ಸಮಾಜಕಾರ್ಯಕರ್ತೆಗೆ ಒಂದು ಹ್ಯಾಟ್ಸ್ ಆಫ್ ಹೇಳೋದು ಮಾತ್ರ ಮರೆಯಲಾಗದು. ಆದರೆ ಈ ಒಂದು ಮಹಾತಾಯಿ ವಂಗಾರಿ ತನ್ನ 71 ನೆಯ ವಯಸ್ಸಿನಲ್ಲಿ ತೀರಿದರು. (25-09-2011) ವಂಗಾರಿಯ ಮರಣ ಸುದ್ದಿ ಕೇಳಿದ ವಿಶ್ವ ಸಂಸ್ಥೆಯ ಮನದಲ್ಲಿ ಮೌನವೆ ಆವರಿಸಿತ್ತು. ಆದರೆ ಈ ಒಬ್ಬ ದಿಟ್ಟ ಧೀರ ಮಹಿಳೆ ಸಾವಿನ ಸುದ್ದಿ ಜಗತ್ತಿಗೆ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ, ಈ ಸಾವಿನ ಸುದ್ದಿಯನ್ನು ಕೇಳಿದ ವಿಶ್ವಸಂಸ್ಥೆಯ (UNEP) ಪರಿಸರ ವಿಭಾಗ ತನ್ನ ಶೋಕ ವ್ಯಕ್ತಪಡಿಸಿದೆ. ಅಲ್ಲದೇ ಪ್ರಪಂಚದಲ್ಲಿ ಮುಂದೆ ಇಂತಹ ಸಮಾಜಕಾರ್ಯಕರ್ತೆ, ಶಾಂತಿಧೂತಳು, ಪರಿಸರವಾದಿ, ಮಾನವತಾವಾದಿ ಮತ್ತೊಮ್ಮೆ ಈ ಜಗತ್ತಿಗೆ ಹುಟ್ಟಿ ಬರಲಿ. ವಂಗಾರಿ ಮಾಥಾಯ್ ಮಾತ್ರವಲ್ಲ ವಂಗಾರಿ ಮಹಾತಾಯಿ ಎಂದು ಕರೆದರೂ ತಪ್ಪಲ್ಲ. ವಂಗಾರಿ ಮಾಥಾಯ್ ಅವರ ಮೂರು ಜನ ಮಕ್ಕಳಾದ ವಾವೇರು, ವಂಜೀರು ಮತ್ತು ಮೂಟ ಹಾಗೂ ಒಬ್ಬಳು ಮೊಮ್ಮಗಳಾದ ರುಥು ಅವರನ್ನು ವಂಗಾರಿ ಅಗಲಿದ್ದಾರೆ, ಎಂದು ಗ್ರೀನ್ ಬೆಲ್ಟ್ ಸಂಸ್ಥೆಯಿಂದ ತಿಳಿದು ಬಂದಿದೆ. ಆಕರ; ನೊಬೆಲ್ ಪ್ರಶಸ್ತಿ ವೆಬ್‍ಸೈಟ್ ಕೂಡಲಸಂಗಮ ಸಂಗಪ್ಪ ವಗ್ಗರ್, MSW ಹುನಗುಂದ, ಬಾಗಲಕೋಟೆ
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
|
|
|
|
SITE MAP
SitePOSH |
NIRATHANKAOUR OTHER WEBSITESSubscribe |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |