ಸಮಾಜ ವಿಜ್ಞಾನಿಗೆ ಸಮಾಜ ಕಾರ್ಯದ್ದೇ ಧ್ಯಾನ. ತಾನಿರುವ ಸ್ಥಳ, ಊರು ಅಷ್ಟೆ ಏಕೆ ಇಡೀ ರಾಷ್ಟ್ರವೇ ಸ್ವಚ್ಚವಾಗಿರಬೇಕೆಂದು ಶ್ರಮಿಸುತ್ತಾನೆ. ಅದಕ್ಕೆ ಭೂಮಿಕೆಯಾಗಿ ತನ್ನ ಅಂತರಂಗ ಬಹಿರಂಗಗಳಲ್ಲಿ ನಿಷ್ಪಕ್ಷಪಾತವನ್ನು, ನಿಸ್ವಾರ್ಥ ಸೇವೆಯ ಕಂಕೈರ್ಯವನ್ನು ಮೈಗೂಡಿಸಿಕೊಂಡು ಸಮಾನತೆಯ ಮಂತ್ರವನ್ನು ಜಪಿಸುತ್ತಾನೆ. ತನ್ನನ್ನು ತಾನು ಮೊದಲು ಬದಲಾವಣೆಗೆ ಒಡ್ಡಿಕೊಳ್ಳುತ್ತಾನೆ. ಆಗ ಮಾತ್ರ ನಿಜವಾದ ಸಮಾಜ ಸೇವಕನಾಗಲು ಶಕ್ತನಾಗುತ್ತಾನೆ. ಕೆಲಮೊಮ್ಮೆ ಪ್ರಯೋಗದ ಬಲಿಪಶುವೂ ಆಗಬೇಕಾಗುತ್ತದೆ. ಆದರೂ ಎದೆಗುಂದದೆ ಸಿಂಹ ಸದೃಶವಾದ ಗುಂಡಿಗೆಯನ್ನು ಹೊಂದಿರಬೇಕಾಗಿರುತ್ತದೆ. ಹೀಗಿದ್ದರೆ ಮಾತ್ರ ಭಯೋತ್ಪಾದನೆಯಂತೆ ವರ್ತಿಸುತ್ತಿರುವ ಜಾತಿ ವ್ಯವಸ್ಥೆಯನ್ನು, ರಸ್ತೆಗೆ ಕಸ ಎಸೆಯುತ್ತಿರುವ ನಾಗರೀಕ ಸಂಸ್ಕೃತಿಯನ್ನು, ಸಮಾಜಕಾರ್ಯವೆಂದರೆ ತರಗತಿಯಲ್ಲಿ ಬೋಧಿಸುವುದು ಎಂದು ಭ್ರಮಿಸಿರುವವರನ್ನು, ಸಂಪತ್ತನ್ನು ಕ್ರೋಡೀಕರಿಸಿಕೊಂಡು ಅಧಿಕಾರದ ಮಧವೇರಿದವರನ್ನು, ಯೋಜನೆಗಳ ನೆಪದಲ್ಲಿ ಹಣ ಸ್ವಾಹ ಮಾಡುತ್ತಿರುವ ನುಂಗಣ್ಣರನ್ನು ಈ ಮೊದಲಾದ ಎಲ್ಲಾ ವರ್ಗದವರ ಮನಸ್ಸನ್ನು ಒಳ್ಳೆಯ ಕಾರ್ಯಕ್ಕೆ ಅಣಿಗೊಳಿಸಲು ಸಾಧ್ಯವಿದೆ. ಆ ಕಾರ್ಯ ಅಧಿಕಾರದಿಂದಾಗಲಿ, ಕಾನೂನಿನ ಭಯದಿಂದಾಗಲಿ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ವ್ಯಕ್ತಿಗಳ ಮನಸ್ಸನ್ನು ಗೆಲ್ಲುವ ಮತ್ತು ಸುತ್ತಲಿನ ಜನರನ್ನು ನಿಷ್ಕಳಂಕವಾಗಿ ಪ್ರೀತಿಸುವ ಪ್ರಕ್ರಿಯೆ ನಡೆಯಬೇಕು. ಆಗ ಮಾತ್ರ ಸಮಾಜದಲ್ಲಿ ಸುಧಾರಣಿಯನ್ನು ತರಲು ಹಾಗೂ ಎಲ್ಲರೂ ಅದಕ್ಕೆ ಕೈಜೋಡಿಸುವಂತೆ ಮಾಡಲು ಸಾಧ್ಯವಿದೆ. ಅಂತಹ ಪ್ರೀತಿ, ವಿಶ್ವಾಸಗಳನ್ನೇ ತಮ್ಮ ಹೃದಯದಲ್ಲಿ ತುಂಬಿಕೊಂಡಿರುವ ಪ್ರೋ.ಹೆಚ್.ಎಂ.ಮರುಳಸಿದ್ಧಯ್ಯನವರು ಎಲ್ಲಾ ವರ್ಗದವರ ಹೃದಯವನ್ನು ಗೆಲ್ಲುವುದು ಮಾತ್ರವಲ್ಲ, ತಾವು ಯೋಜಿಸಿದ ಕಾರ್ಯಕ್ಕೆ ಕೈ ಜೋಡಿಸುವಂತೆ ಮಾಡಿಬಿಡುವುದು ಅವರ ಜಾಯಮಾನವಾಗಿದೆ. ಈ ಬಗೆಯ ನಿಷ್ಕಾಮ ಸೇವೆಯಿಂದಾಗಿಯೇ ಅವರಿಗೆ ನಿರ್ಮಲ ಗ್ರಾಮ, ನಿರ್ಮಲ ಕರ್ನಾಟಕ, ನಿರ್ಮಲ ಭಾರತ ಎಂಬ ಪದಪುಂಜಗಳ ಪರಿಕಲ್ಪನೆಯನ್ನು ಠಂಕಿಸಲು ಸಾಧ್ಯವಾಗಿರುವುದು. ಪ್ರೋ.ಹೆಚ್.ಎಂ.ಎಂ ಕರ್ನಾಟಕ ಕಂಡ ಒಬ್ಬ ಅಪರೂಪದ ಸಮಾಜ ವಿಜ್ಞಾನಿ. ಹಿರೇಕುಂಬಳಕುಂಟೆ ಎಂಬ ತೀರ ಹಿಂದುಳಿದಿರುವ ಗ್ರಾಮದ ಜಂಗಮ ಕುಲದಲ್ಲಿ ಹತ್ತು ಜನ ಮಕ್ಕಳೊಡನೆ ಹುಟ್ಟಿದವರಲ್ಲಿ ಕಿರಿಯವರು. ಹಳ್ಳಿಯವರ ಬಾಯಲ್ಲಿ ಪ್ರೀತಿಯ ಪ್ರೋಫೆಸರ್ ಆಗಿದ್ದಾರೆ. ಸಮಾಜ ಕಾರ್ಯದ ಮೂಲಕ ಅದರ ಪರಿವರ್ತನೆಗೆ ಪ್ರಯತ್ನಿಸುತ್ತಿರುವ ಒಬ್ಬ ಸಮಾಜ ಸುಧಾರಕರು ಹೌದು. ಇದರಿಂದಾಗಿಯೇ ಅಂತ್ಯಜರೊಡನೆ ಒಂದಾಗಿ ಬದುಕುವುದನ್ನು ಹಳ್ಳಿ ಜನತೆಗೆ ತಿಳಿಸಿಕೊಟ್ಟರು. ಅದರಂತೆ ಬದುಕುತ್ತಿರುವವರು ಕೂಡ. ಆದರೆ ಜನ ಮಾತ್ರ ಅದನ್ನು ಪೂರ್ಣವಾಗಿ ಸ್ವೀಕರಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಆದರೂ ಯಾರೊಬ್ಬರು ಬಹಿರಂಗವಾಗಿ ಪ್ರತಿಭಟಿಸಲಿಲ್ಲ. ಏಕೆಂದರೆ ಪ್ರೋಫೆಸರ್ರ ಸ್ನೇಹ ಮತ್ತು ಪ್ರೀತಿ ತುಂಬಿದ ಹಸ್ತಗಳು ಎಲ್ಲರನ್ನು ಬಾಚಿಕೊಂಡಿದ್ದವು. ಹೀಗಿದ್ದರೂ ಮೇಲ್ವರ್ಗದವರು ಅದರಲ್ಲೂ ಉಳ್ಳವರು ಪ್ರೋಫೆಸರ್ರನ್ನು ಒಳಗೊಳಗೆ ಬೈಯ್ದುಕೊಳ್ಳತೊಡಗಿದರು. ಕಾರಣ, ಜಾಸ್ತಿ ಜಮೀನು ಇದ್ದವರು ಇಲ್ಲದ ಬಡವರಿಗೆ, ದಲಿತರಿಗೆ ಸ್ವಲ್ಪ ಬಿಟ್ಟುಕೊಡಿ ಎಂದದ್ದು ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಇಂತಹ ಅಸಹನೆಯ ಭಾವನೆ ತನ್ನ ಮೇಲೆ ವ್ಯಕ್ತವಾಗುತ್ತಿದೆ ಎಂದು ತಿಳಿದಾಗಲೂ ಪ್ರೋಫೆಸರ್ ಎಂದೂ ತಾಳ್ಮೆಯನ್ನು ಕಳೆದುಕೊಂಡು ನಿರಾಶರಾದವರಲ್ಲ. ಅಲ್ಲದೆ ಸಂಪ್ರದಾಯ ಮನಸ್ಸುಗಳಿಗೆ ಸಮಾನತೆಯ ಪಾಠ ಹೇಳುವುದೆಂದರೆ ಸುಲಭದ ಕಾರ್ಯವಲ್ಲ. ಸ್ವತಃ ತನ್ನ ಬಂಧುಗಳು ಮತ್ತು ಒಡಹುಟ್ಟಿದವರಿಂದಲೇ ಅನೇಕ ಬಗೆಯ ಟೀಕೆಗಳನ್ನು ಎದುರಿಸಬೇಕಾಯಿತು. ಅವರ ಹಿರಿಯ ಅಣ್ಣನವರೊಬ್ಬರು ತಮ್ಮನ ಸಮಾಜಕಾರ್ಯವನ್ನು ಕುರಿತು ನನ್ನ ದೊಡ್ಡಪ್ಪನಾದ ಮುದುಕಣ್ಣನೊಡನೆ ಹಂಚಿಕೊಂಡ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸುವ ಮೊದಲು ದೊಡ್ಡಪ್ಪನ ಪರಿಚಯವನ್ನು ಸ್ವಲ್ಪ ಮಾಡಿಕೊಡುತ್ತೇನೆ. ವಯಸ್ಸಾದ ನನ್ನ ದೊಡ್ಡಪ್ಪ ಮೊನ್ನೆ ಹೊರಟು ಹೋದರು. ಮುದುಕಣ್ಣ ಎಂದು ಅವರ ಹೆಸರು. ದೊಡ್ಡಮ್ಮ ಮಾತ್ರ ಗಂಡನ ಹೆಸರು ಹೇಳುವಾಗ ಮುದುಕನಗೌಡ್ರು ಎಂದೇ ಹೇಳುತ್ತಿತ್ತು. ಹುಡುಗನಿದ್ದಾಗಲೂ ಅದೇ ಹೆಸರು ಕರೆಯಿಸಿ ಕೊಂಡಿದ್ದರಿಂದಲೋ ಏನೋ ಎಂದೂ ತಮ್ಮ ಹೆಸರಿನ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಅದೇನೆ ಇರಲಿ, ಅವರು ಹೇಳುತ್ತಿದ್ದ ಅನುಭವದ ಕಥನಗಳು ಮಾತ್ರ ನನ್ನ ಸ್ಮೃತಿಪಟಲದಲ್ಲಿ ಮಾಸದೆ ನಿಂತಿವೆ. ಬರಗಾಲ ಬಂದಾಗ ಅನುಭವಿಸಿದ ಕಷ್ಟಗಳು, ಇನ್ನೊಮ್ಮೆ ಮಳೆ ಅಧಿಕವಾಗಿ ಹೊಲಗಳೆಲ್ಲ ಜೌಗು ಹಿಡಿದು ಬೆಳೆಬಾರದೆ ಎದುರಿಸಿದ ತೊಂದರೆಗಳು, ಹೊಲದಲ್ಲಿ ಅಜ್ಜನು ಬೆಳಿಸಿದ್ದ ಜೀರಿಗೆ, ಸಬ್ಬಾಕ್ಸಿ ಮತ್ತು ಏಲಕ್ಕಿ ಮಾವಿನ ಮರಗಳಿಗೆ ಊರವರೆಲ್ಲಾ ಮಾರು ಹೋಗಿದ್ದು, ಧಾನ್ಯಗಳು ಹಾಗೂ ವೀಳೆದೆಲೆಗಳನ್ನು ಮಾರಾಟ ಮಾಡಲು; ಹೋರಿಗಳನ್ನು ಕೊಳ್ಳಲು ಎಪ್ಪತ್ತು ಕಿ.ಮೀ. ದೂರದ ದಾವಣಗೆರೆಗೆ ಎತ್ತಿನ ಬಂಡಿಯಲ್ಲಿ ಪ್ರಯಾಣ ಮಾಡುತ್ತಿದ್ದುದು. ವಧು ದಕ್ಷಿಣೆ ಕೊಟ್ಟು ದೊಡ್ಡಮ್ಮನನ್ನು ಮದುವೆ ಆಗಿದ್ದು ಇತ್ಯಾದಿ ಅವರ ಕಾಲದ ಘಟನೆಗಳನ್ನು ಒಂದೊಂದಾಗಿ ಹೇಳುತ್ತಿದ್ದರೆ ಸಮಯದ ಹಂಗಿಲ್ಲದೆ ಕೇಳುತ್ತಾ ಕುಳಿತು ಬಿಡುತ್ತಿದ್ದೆ. ದೊಡ್ಡಪ್ಪ ಸರಳವಾದ ವ್ಯಕ್ತಿ ಮತ್ತು ಅಷ್ಟೇ ಸ್ನೇಹಜೀವಿ. ಯಾವ ಗತ್ತು-ಗಮ್ಮತ್ತು ಅವರಲ್ಲಿ ಇರಲಿಲ್ಲ. ಪರಿಣಾಮವಾಗಿ ಹುಡುಗರಾದ ನಮಗೆಲ್ಲ ಅವರು ಆತ್ಮೀಯರಾಗಿದ್ದರು. ವ್ಯಾಸಂಗದ ನಡುವೆ ರಜಾದಿನಗಳಲ್ಲಿ ಊರಿಗೆ ಹೋದಾಗಲೆಲ್ಲ ದೊಡ್ಡಪ್ಪನ ಮಾತುಗಳನ್ನು ಕೇಳಲು ಕಾತರನಾಗಿರುತ್ತಿದ್ದೆ. ಅವರ ಸನಿಹವು ಒಂದು ಉತ್ತಮ ಕೃತಿಯನ್ನು ಓದಿದಂತಹ ಅನುಭವವನ್ನು ತಂದು ಕೊಡುತಿತ್ತು. ಹೀಗೆ ಒಂದು ದಿನ ಅವರ ಹತ್ತಿರ ಕುಳಿತ್ತಿದ್ದಾಗ ಏನೋ ಇವತ್ತು ಪ್ರೋಫೆಸರ್ ಬಂದಿದ್ರಂತೆ! 'ಊ ಬಂದಿದರೆ', ಏನ್ ಪ್ರೋಗ್ರಾಮ್? 'ಏನು ಅಂತ ಗೊತ್ತಿಲ್ಲ' ಊರಾಗಳ ಕಸ ವಡಿಯೋದು, ಚರಂಡಿ ಬಾಚೋದು, ತಿಪ್ಪೆಗುಂಡಿ ಕ್ಲೀನ್ ಮಾಡದು ಇಂಥದ್ದು ಏನಾರ ಇಲ್ಲೇನು? 'ಏನೋ ಗೊತ್ತಿಲ್ಲ, ಆದರೆ ಅಂಥದ್ದೆಲ್ಲ ಮಾಡೋಕೆ ಈಗ ಅವರಿಗೆ ವಯಸ್ಸಾಗಿದೆ.' ಆದ್ರೂ ಸುಮ್ಮನಿರಲ್ಲ ಕಣೊ.... ಆ ಸ್ವಾಮಿ, ಐನೋರಾಗಿ ಹುಟ್ಟಿ ಗುರುವಿನ ಸ್ಥಾನದಲ್ಲಿರಬೇಕಪ್ಪ, ಅದು ಬಿಟ್ಟು ಹೊಲೆಯರಂಗೆ ಬೀದಿ ಕಸಗುಡಿಸೋದ್ಯಾಕೆ? ಎಂದ ದೊಡ್ಡಪ್ಪನ ಮಾತಿಗೆ ಸರಿಯಾದ ಪ್ರತಿಕ್ರಿಯೆ ಕೊಡಬೇಕೆನಿಸುತ್ತಿತ್ತು. ಆದರೆ ನನ್ನ ವಿಚಾರ ಅವರ ತಲೆಯೊಳಗೆ ಹೋಗುವುದಿಲ್ಲ ಮತ್ತು ಅಪಥ್ಯವಾಗುತ್ತದೆ ಎಂದು ಭಾವಿಸಿ ಸುಮ್ಮನಾಗುತ್ತಿದ್ದೆ.
ಆದರೂ 'ಜಾತಿ ವ್ಯವಸ್ಥೆ ನಾವು ಮಾಡಿಕೊಂಡಿರುವಂಥದ್ದು, ನಿಜಕ್ಕೂ ಇರುವುದು ಒಂದೇ ಜಾತಿ ಅದೇ ಮನುಷ್ಯ ಜಾತಿ. ಬಹಳ ಹಿಂದೆ ಕ್ಷಾತ್ರಯುಗದಲ್ಲೆ ಪಂಪಕವಿ ಹೇಳಿದ್ದು ಅದನ್ನೆ. ನಾವೀಗ ಯಾವ ಯುಗದಲ್ಲಿದ್ದೇವೆ? ಶ್ರೀಸಾಮಾನ್ಯನೂ ಈ ಪ್ರಜಾಪ್ರಭುತ್ವದಲ್ಲಿ ಶ್ರೇಷ್ಠನೇ ಅಲ್ಲವೆ? ಹೀಗಿದ್ದರೂ ನಮ್ಮಲ್ಲಿ ಏಕೆ ತಾರತಮ್ಯ ಭಾವನೆ? ಮೇಲು-ಕೀಳು ಎನ್ನುವುದೆಲ್ಲ ಬರಿ ಭ್ರಾಂತಿ, ಕಟ್ಟುಕತೆ. ಮೇಲ್ವರ್ಗದವರ ಕುತಂತ್ರದಿಂದ ಆಗಿರುವ ಅನಾಹುತವೇ ಈ ಕೊಳಕು ಸಂಕೋಲೆ'- ಇತ್ಯಾದಿಯ ವಾದಸರಣಿಯನ್ನು ಒಮ್ಮೆ ಧೈರ್ಯಮಾಡಿ ಅವರ ಮುಂದೆ ಇಟ್ಟಾಗ ಹೆ! ಅದ್ಹೆಂಗೆ ಆದೀತು! ನೀನು ಆ ಪ್ರೋಫೆಸರ್ ದಾರಿ ಹಿಡಿತಿಯಲ್ಲೋ! ಜಾಸ್ತಿ ಓದಿಸಿದ್ರೆ ಇಂಗೆ ನೋಡು ಎಡವಟ್ಟಾಗೋದು ಎಂದು ಹೇಳಿ ನನ್ನನ್ನು ಪ್ರಶ್ನಾರ್ಥಕವಾಗಿ ನೋಡುತ್ತಿದ್ದರು. ನಂತರ ದೊಡ್ಡಪ್ಪ ಪ್ರೋಫೆಸರ್ರ ದೊಡ್ಡಣ್ಣನಾದ ಕೊಟ್ರೈನೋರು ಅಂತ ಇದೆ, ಅದು ಮಂಗಾಪುರದಲ್ಲಿ ಮೇಷ್ಟ್ರಾಗಿತ್ತು. ಮೊನ್ನೆ ನನಿಗೆ ಸಿಕ್ಕಾಗ ಏನಂತು ಗೊತ್ತ 'ಲೇ ಮುದುಕಣ್ಣ ನಮ್ಮ ಮರುಳಸಿದ್ಧ ಎಲ್ಲಾ ಸೈ ಕಣ, ಆದ್ರೆ ಈ ಮಾದಿಗರ್ನೆಲ್ಲ ಮನೆಯೊಳಕೆ ಕರ್ಕೋಳ್ಳುತ್ತಾನೆ. ಜೊತೆಯಲ್ಲೇ ಊಟ ಮಾಡ್ತಾನೆ, ಅವರ ಮನೆಗಳಿಗೂ ಹೋಗ್ತಾನೆ, ಅದು ಅಲ್ಲದೆ ಅವರ ಬೀದಿಗಳನ್ನೆಲ್ಲ ಗುಡಿಸ್ತಾನೆ. ಇಷ್ಟು ಸಾಲ್ದು ಅಂತ ಭಾಷಣದಲ್ಲಿ ಇವನಾರವ ಇವನಾರವ? ಎಂದೆಣಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ... ಅಂತ ಬಸವಣ್ಣರು ವಚನ ಬರೆದರೆ, ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ ಎಂದು ಸರ್ವಜ್ಞ ಹೇಳಿದರೆ, ಮಹಾತ್ಮ ಗಾಂಧೀಜಿ ಹರಿಜನರೊಡನೆ ವಾಸಮಾಡುತ್ತಿದ್ರು, ಬಾಬಾ ಅಂಬೇಡ್ಕರ್ ಜಾತಿ ವಿರುದ್ಧ ಹೋರಾಡಿದರೆ ಅಂತ ಏನೇನೋ ಹೇಳಿ ಜನರನ್ನು ಹಾದಿ ತಪ್ಪಿಸ್ತಾನೆ. ರಾಜಕೀಯದವರ್ಯಾರು ಇವನಂಗೆ ಭಾಷಣ ಮಾಡಲ್ಲ ಬಿಡು. ಆದ್ರೆ ಇವನ್ಯಾಕೆ ಇಂಗೆ ಮಾತಾಡ್ತನೊ ಗೊತ್ತಾಗಂಗಿಲ್ಲ. ಬಹಳ ಜಮೀನು ಇದ್ದೋರು ಇಲ್ಲದವರಿಗೆ ದಾನಮಾಡಿ ಅಂತಾನೆ, ಇದು ಯಾವ ನ್ಯಾಯನಪ್ಪ? ತನ್ನ ಹಳ್ಳಿ, ಅಲ್ಲಿನ ಜನರೆಂದ್ರೆ ಅವನಿಗೆ ಬಾರಿ ಪ್ರೀತಿ, ಅಭಿಮಾನ ಕಣಯ್ಯ, ಆದ್ರೆ ನಮ್ಮನ್ನು ಮತ್ತು ಹೊಲೆರ್ನೆಲ್ಲ ಒಂದೇ ಅಂತನಲ್ಲ ಅವನು ಮರುಳುಸಿದ್ಧ ಅಲ್ಲ ಕಣೊ ಮಾದಿಗರ ಸಿದ್ಧ' ಪ್ರೋಫೆಸರ್ನ ಹಿಂಗಂತು, ತಮ್ಮನ ಮೇಲೆ ತುಂಬ ಪ್ರೀತಿ ಕೊಟ್ರೈನೋರಿಗೆ ಆದ್ರೆ ಸಲ್ಲದ್ದನ್ನೆಲ್ಲ ಮಾಡ್ತನಲ್ಲ ಎಂದು ಬೇಸ್ರ ಮಾಡ್ಕಂಡು 'ಅವನು ಮಾದಿಗರ ಜಾತಿಯಲ್ಲಿ ಹುಟ್ಟುಬೇಕಿತ್ತು ತಪ್ಪಿ ಜಂಗಮರಲ್ಲಿ ಹುಟ್ಟಿಬಿಟ್ಟಿದನೆ' ಅಂತ ಬೈಯುತ್ತೆ ಎಂದ ದೊಡ್ಡಪ್ಪನ ಮಾತಿನಿಂದ ಕೆಲ ಸಮಯ ಮೌನ ಆವರಿಸಿದಂತಾಗಿ ಏನೂ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತೆ. ಏಕೆಂದರೆ, ಸ್ವತಃ ಅಣ್ಣನವರಿಂದಲೇ ಈ ರೀತಿಯ ಟೀಕೆಗೆ ಗುರಿಯಾದ ಪ್ರೋಫೆಸರನ್ನು ಉಳಿದ ಸಂಪ್ರದಾಯವಾದಿಗಳು ಮತ್ಯಾವ ಪರಿಯಲ್ಲಿ ಟೀಕಿಸಿರಬಹುದು! ಈ ಟೀಕೆ ಬಂದದ್ದು 1984 ರಲ್ಲಿ, ಆ ವೇಳೆ ಪ್ರೋಫೆಸರ್ ತಮ್ಮ ಹಳ್ಳಿ ಸೇರಿದಂತೆ ಸುತ್ತಲಿನ ಊರುಗಳಲ್ಲಿ ಬದಲಾವಣೆಯ ಹೊಸ ಗಾಳಿಯನ್ನು ಬೀಸಿದರು. ಅದರ ಮೊದಲ ಹೆಜ್ಜೆಯೆಂಬಂತೆ ಊರಲ್ಲಿನ ತಮ್ಮ ಮನೆಯೊಳಕ್ಕೆ ಪ್ರಥಮವಾಗಿ ಹರಿಜನರನ್ನು ಕರೆದೊಯ್ದು ಸಹಭೋಜನ ಮಾಡಿದ್ದು. ಇನ್ನು ಮುಂದೆ ಎಲ್ಲಾ ಜಾತಿಯವರು ಮುಕ್ತವಾಗಿ ತನ್ನ ಮನೆಗೆ ಬರಬೇಕೆಂದು ವಿನಂತಿಸಿಕೊಂಡದ್ದು ಆ ಸಮಯದಲ್ಲಿ ಈ ಘಟನೆ ಒಂದು ಕ್ರಾಂತಿಕಾರಕವಾಗಿತ್ತು. ಊರಿನ ಮೇಲ್ವರ್ಗದವರಿಗಂತೂ ಪ್ರೋಫೆಸರ್ ಮೇಲೆ ವಿಪರೀತ ಅಸಹನೆ. ಆದರೆ ವ್ಯಕ್ತಪಡಿಸುವಂತಿಲ್ಲ. ಏಕೆಂದರೆ ಪ್ರೋಫೆಸರ್ ಹಿರೇಮಠದ ಜಂಗಮ ಕುಲದವರು. ಎಲ್ಲಾ ವರ್ಗದವರಿಗೂ ಗುರುಗಳಾಗಿರುವಂಥವರು. ಹೀಗಾಗಿ ಯಾರೊಬ್ಬರು ಅವರ ಎದುರಿಗೆ ದನಿ ಎತ್ತಲಿಲ್ಲ. ಪ್ರಸ್ತುತದಲ್ಲಿ ಜಾತಿಗೊಂದು ಮಠ, ಆಯಾ ಜಾತಿಯವರ ಸಮಾವೇಶ ಮತ್ತು ಗುರುತಿನ ಚೀಟಿ ನೀಡುವ ಮಟ್ಟಕ್ಕೆ ಕುಲಪ್ರಿಯರು ಬಂದು ತಲುಪಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರೋ. ಹೆಚ್.ಎಂ. ಮರುಳಸಿದ್ಧಯ್ಯನವರು ತುಳಿದ ಹಾದಿ ಇತರರಿಗೆ ಮಾದರಿಯಾಗುವಂತಹುದು. ಊರಲ್ಲಿನ ಕಸಮಾತ್ರವಲ್ಲ ಮನದಲ್ಲಿನ ಜಾತಿ ಎಂಬ ಕಸವನ್ನು ಗುಡಿಸಿ ನಿರ್ಮಲ ಸಮಾಜವನ್ನು ಕಟ್ಟುವ ಕನಸು ಅವರದ್ದಾಗಿದೆ. ಅದಕ್ಕಾಗಿ ಅವರು ಯಾವ ತ್ಯಾಗಕ್ಕೂ ಸಿದ್ದ. ಅಪವಾದ ನಿಂದನೆಗಳಿಗೆ ಹೆದರದೆ ಮರುಳನಂತೆ ಮುಗಳು ನಗುತ್ತ ತಾನು ಹಿಡಿದ ಕಾರ್ಯವನ್ನು ಸಾಧಿಸುವ ಸಿದ್ಧಿ ಅವರಿಗೆ ಲಭಿಸಿದೆ. ಬಹುಶಃ ಅದಕ್ಕಾಗಿಯೇ ಅವರ ತಂದೆ-ತಾಯಿಗಳು ಮರುಳಸಿದ್ಧ ಎಂದು ಹೆಸರಿಟ್ಟಿರುವುದು ಸಾರ್ಥಕವಾಗಿದೆ. ಡಾ.ಎಂ.ಹಾಲಪ್ಪ ಕುಂಬಳಕುಂಟೆ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಳಿಯಾರು -ಕೆಂಕೆರೆ (ಪೋಸ್ಟ್), ಚಿಕ್ಕನಾಯಕನಹಳ್ಳಿ (ತಾಲ್ಲೊಕು), ತುಮಕೂರು(ಜಿಲ್ಲೆ)
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|