ಆದಿನ ಬೆಳಗ್ಗೆ ಏಳುವಾಗಲೇ ಅನ್ನಿಸಿತು, ಇವತ್ತು ಏನೋ ವಿಶೇಷವಿರುತ್ತದೆ ಎಂದು. ರೇಡಿಯೋದಲ್ಲಿ 'ಮಹಿಳೆಯರ ಪಾತ್ರ' ಎಂದು ಸಮಾಜಸೇವಕಿಯ ಮಾತು ನಡೆಯುತ್ತಿತ್ತು. ಜಯಳಿಗೆ ಆ ದಿನ ಎನೋ ಒಂದು ತರಹದ ಭಾವನೆಗಳು. ರೇಡಿಯೋದಲ್ಲಿ ಹೇಳುವುದನ್ನು ಕೇಳುವಾಗ ಹೌದು, ಹೀಗೇ ಮಾಡಬೇಕು ಅನ್ನಿಸಿತು. ಮಹಿಳೆಯ ಸ್ಥಾನದ ಬಗ್ಗೆ ಜಾಗೃತಿ ರಿಸರ್ವೇಶನ್ ಬಗ್ಗೆ ವಿವಾದಗಳು ಎಲ್ಲ ಕೇಳಿದ ಮಾತುಗಳೇ ಯಾವುದೂ ಹೊಸದಲ್ಲ. ಅವಳಿಗೆ ಅತ್ತೆಯ ಮಾತು ಜ್ಞಾಪಕಕ್ಕೆ ಬಂತು, ಇಂತದೆಲ್ಲ ಕೇಳಲು ಚಂದ, ಹೇಳಲೂ ಚಂದ. ಆದರೆ ಕಾರ್ಯರೂಪಕ್ಕೆ ತರಲು ಇನ್ನೂ ಎಷ್ಟು ಶತಮಾನವೋ? ನಾವೆಲ್ಲರೂ ನಮ್ಮ ಮನಸ್ಸಿನ ಗೊಂದಲಗಳನ್ನು ಬದಲಾಯಿಸುವವರೆಗೆ ಏನೂ ಬದಲಾಗುವುದು ಸಾಧ್ಯವಿಲ್ಲ. ಪ್ರತಿದಿನವನ್ನು ಆ ದಿನಕ್ಕೆ ಬೇಕಾದ ಹಾಗೆ ಹೊಂದಿಸಿಕೊಳ್ಳುವುದೇ ಒಳ್ಳೆಯದು ಅನಿಸುತ್ತೆ.
ಮಕ್ಕಳು ಬರುವುದರೊಳಗೆ ಮನೆ ಕೆಲಸ ಮುಗಿಸಿದರೆ ಸಾಕಾಗಿತ್ತು. ಈ ದಿನ ಕೆಲಸದವಳು ಬೇರೆ ರಜ. ಮನಸ್ಸಿನ ಯೋಚನೆಗೆ ಯಾವ ತರಹದ ಕಡಿವಾಣವಿಲ್ಲ. ಕೆಲಸ ಮಾಡಿಕೊಂಡೆ, ಯೋಚನೆಯ ಲಹರಿ ಹರಿಯುತ್ತಿತ್ತು. ಹೌದು ಸೌಮ್ಯಳ ಬೆಳಗ್ಗಿನ ಫೋನ್ ಕರೆ. ಪ್ರತೀ ಸಲ ಅವಳು ಫೋನ್ ಮಾಡಿ, ಅವಳ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಳು. ಜಯ ಅವಳಿಗೆ ಹೇಳಿದಳು, ನೀನು ಬರದೆ ನಾನು ನಿನಗೆ ಸಹಾಯ ಮಾಡಲು ಕಷ್ಟ ನಿನ್ನ ಪರಿಚಯ ಫೋನಿನಲ್ಲಿ ಆಗಿರುವುದರಿಂದ, ನಿನ್ನನ್ನು ನೋಡಬೇಕು. ಈ ದಿನದ ಕರೆ 5ನೇ ಸಲದ್ದಿರಬಹುದು. ಸಹಾಯ ಬೇಕು ಆದರೆ ಅದನ್ನು ಸ್ವೀಕರಿಸಲು ಅವಳೇ ಹುಟ್ಟಿಸಿಕೊಂಡಿರುವ ಅಡೆತಡೆಗಳು ಬಹಳ. ಜಯಳ ಯೋಚನೆಗೆ ಇದೊಂದು ವಿಷಯ. ಪ್ರತಿ ಸಲ ಹೀಗೆ ಒಂದೊಂದು ವಿಚಾರಗಳು ಅವಳ ಮನಸ್ಸನ್ನು ಹಿಡಿದಿರುತ್ತೆ, ಮನಸ್ಸಿನೊಂದಿಗೆ ಅವಳ ಚರ್ಚೆ ಬಹಳಷ್ಟು ಅದಕ್ಕೆನಾದರೂ ಕಂಪ್ಯೂಟರ ಚಿಪ್ ಹಾಕಿದರೆ...! ಏನೆಲ್ಲಾ ಸ್ಪಂದಿಸಿರುವ ವಿಷಯಗಳ ಬ್ರಹ್ಮಾಂಡವೇ ಆಗುತ್ತಿತ್ತೇನೋ. ಅಷ್ಟೋಂದು ವಿಚಾರಗಳ ಅಲೆ ಅವಳ ತಲೆಯಲ್ಲಿ ಹಾದು ಹೋಗುತ್ತಿತ್ತು. ಆ ವಿಚಾರಧಾರೆಗಳನ್ನೆಲ್ಲ ಬರೆಯಬೇಕು. ಇಲ್ಲವಾದರೆ ಬರೆಯಲು ಹೇಳಬೇಕು. ಎಷ್ಟು ಯೋಚಿಸಿದರೂ ಅದಕ್ಕೆ ಪರಿಹಾರ... ತಾನೆ ಬರೆಯಬೇಕು. ಇದು ಸಾಧ್ಯವಾ? ಬರೆದಿದ್ದುದನ್ನು ಯಾರು ಓದುತ್ತಾರೆ? ಹೀಗೆಲ್ಲಾ ಪ್ರಶ್ನೆಗಳು. ಸರಿ, ಜಯ, ಸೌಮ್ಯಳಿಗೆ ಖಂಡಿತವಾಗಿ ಹೇಳಿದಳು ನೀನು ಬಂದರೆ ಮುಂದಿನ ಮಾತು ಫೋನ್ ಇಟ್ಟುಬಿಟ್ಟಳು. ಸಾಕಾಗಿತ್ತು ಅವಳಿಗೆ. ಮತ್ತೆ ಫೋನ್ ಹೊಡೆದುಕೊಂಡಿತ್ತು. ಸೌಮ್ಯಳದೆ, ಇನ್ನು ಒಂದು ಘಂಟೆಯಲ್ಲಿ ಬರಲಾ? ಜಯ ಆ ದಿನ ತಲೆಗೆ ಸ್ನಾನ ಮಾಡುವ ಯೋಜನೆ, ಅವಳಿಗೆ ತಲೆಗೆ ನೀರು ಹಾಕ್ಕೊಂಡು ಶುದ್ಧ ಮಾಡುವುದು ಒಂದು ದೊಡ್ಡ ಕಷ್ಟದ ಕೆಲಸ, ಈಗ ಏನು ಮಾಡುವುದು? ಸೌಮ್ಯಳ ಪ್ರತಿಯೊಂದು ಕರೆಯಲ್ಲೂ ಅವಳಿಗೆ ಸೌಜನ್ಯದ ಮಾತು ಬೇಕಿತ್ತು. ಇನ್ನೊಬ್ಬರ ಸಹಾಯ ಬೇಕಿತ್ತು. ಇಲ್ಲವೆನ್ನಲು ಮನಸ್ಸು ಒಪ್ಪಲಿಲ್ಲ ಸರಿ ಬಾ ಎಂದಳು. ಬೇಗನೆ ಸ್ನಾನ ಮುಗಿಸಿ ರೆಡಿಯಾದಳು. ಬೆಲ್ನ ಶಬ್ದವಾಯಿತು. ಜಯಳನ್ನು ನೋಡಲು ಪಕ್ಕದ ಮನೆಯವರು ಬಂದಿದ್ದರು. ಅವರ ಮನೆಯಲ್ಲಿ ನಲ್ಲಿಯ ತೊಂದರೆಯಿಂದ ಬಹಳ ನೀರು ಪೋಲಾಗುತ್ತಾ ಇದೆ. ಯಾರಾದರೂ ಪ್ಲಂಬರ್ ಇದ್ದಾರಾ? ಜಯ ಅಂದುಕೊಂಡಳು ನಾನೊಂದು ತರಹದ ರೆಡಿ ಸರ್ವೀಸ್ ಅವೈಲಬಲ್'' ಎಂದು ಫೋನ್ ನಂಬರ್ ಹುಡುಕಿ, ತಾನೆ ಅವನನ್ನು ಕರೆಸಿ, ತೊಂದರೆಗೆ ಪರಿಹಾರ ಮಾಡಿಕೊಟ್ಟಳು. ಕೆಲಸದವಳು ಅವಳ ಮಗಳ ಕೈಯಲ್ಲಿ ನಿನ್ನೆ ತೆಗೆದುಕೊಂಡ ಡಬ್ಬ ಕಳುಹಿಸಿ, ಕೆಲಸ ಮಾಡಿಕೊಡಲು ಹೇಳಿ ಕಳುಹಿಸಿದ್ದಳು. ಸದ್ಯ ಅಷ್ಟಾದರು ಬಂದಳಲ್ಲ ಎಂದು ಅವಳಿಗೇ ಕೆಲಸ ಹೇಳಿ ಬರುವಷ್ಟರಲ್ಲಿ ಸೌಮ್ಯ ಬಂದಳು.... ಅವಳನ್ನು ನೋಡಿ ಜಯಳಿಗೆ ಒಂದು ವಿಧವಾದ ಆಶ್ಚರ್ಯ! ಪ್ರತೀ ಸಲ ಫೋನಿನಲ್ಲಿ ಮಾತನಾಡುವಾಗ ಅವಳ ಬಗ್ಗೆ ಮಾಡಿದ್ದ ಕಲ್ಪನೆಯೇ ಬೇರೆ, ಗಡುಸಾದ ದೊಡ್ಡ ಶರೀರದ, ಸೊಕ್ಕಿನ ಹೆಂಗಸು ಅಂದುಕೊಂಡಿದ್ದಳು. ಬಂದವಳು ಸೌಮ್ಯ ಸ್ವಭಾವದ, ಸಣ್ಣ ಮೈಕಟ್ಟಿನ, ಮುಗ್ಧ ಮುಖದವಳು. ನೋಡಿದಾಗ ಕರುಳಲ್ಲಿ ಚುರ್ ಆದಂತಾಯಿತು. ಈ ಜೀವಕ್ಕೇ ಹೀಗಾಯಿತೆ? ಅವಳು ಅಲ್ಲಿಯವರೆಗೆ ಫೋನಿನಲ್ಲಿ ಹೇಳಿದ ವಿಚಾರಧಾರೆಯ ಸುರುಳಿ ತಲೆಯನ್ನು ತುಂಬಿತು. ಸೌಮ್ಯ, ತಂದೆ ತಾಯಿಯ ಒಬ್ಬಳೇ ಮುದ್ದಿನ ಗೊಂಬೆ. ಯಾವುದೇ ತರಹದ ತೊಂದರೆ ಇಲ್ಲದೆ ಬೆಳೆದವಳು. ಕೇಳಿದ್ದೆಲ್ಲ ಸಿಕ್ಕುತ್ತಿತ್ತು, ಎಲ್ಲರಿಗೂ ನೋಡಿದಾಗ ಪ್ರೀತಿ ಹುಟ್ಟುತ್ತಿತ್ತು. ಶ್ರೀಮಂತ ಆಸ್ತಿಗೆ ಮುಂದಿನ ಒಡತಿ. ಇದರಿಂದಾಗಿ ಬೇಕಾದಷ್ಟು ಗೆಳೆಯ, ಗೆಳತಿ, ಅಭಿಮಾನಿಗಳೂ ಇದ್ದರು . ಅವರ ಸಂಬಂಧಿಕರಿಗೂ ಅವಳು ಅಚ್ಚು ಮೆಚ್ಚು. ಹದಿನೇಳು ವರ್ಷ ತುಂಬುತ್ತಲೇ ಅವಳಿಗೆ ಎಲ್ಲರೂ ವರಾನ್ವೇಷಣೆಗೆ ತೊಡಗಿದರು. ಎಲದರಲ್ಲೂ ಅನುರೂಪನಾದ ರಾಕೇಶ ಎನ್ನುವ ಹುಡುಗನಿಗೆ ಅವನ ಚಿಕ್ಕಮ್ಮ ಸೌಮ್ಯಳನ್ನು ಮದುವೆ ಮಾಡಿಕೊಡುವಂತೆ ಕೇಳಿಕೊಂಡಳು ಅವಳ ತಂದೆ ತಾಯಿಯೂ ಒಪ್ಪಿದರು. ಸೌಮ್ಯಳಿಗೆ ಸಣ್ಣ ವಯಸ್ಸಾದುದರಿಂದ ಹೊಂದಿಕೊಳ್ಳಲು ಸುಲಭವಾಗುವುದೆಂದು ರಾಕೇಶನ ಚಿಕ್ಕಮ್ಮನ ಅನಿಸಿಕೆ. ರಾಕೇಶನಿಗೆ ತಂದೆ ಇರಲಿಲ್ಲ, ಒಬ್ಬನೇ ಮಗ ಒಳ್ಳೆಯ ವಿದ್ಯಾವಂತ, ಆಸ್ತಿವಂತ, ನೋಡಲು ಸಿನಿಮಾ ಹೀರೋ ತರಹ ಇದ್ದನು. ಇನ್ನು ಕೇಳಬೇಕೆ? ಮದುವೆ ಬಹಳ ಅದ್ದೂರಿಯಿಂದ ನಡೆಯಿತು. ಊರಿಗೆ ಚಪ್ಪರ ಹಾಕಿಸಿದ್ದರು. ರಾಕೇಶ ಬಹಳ ಶೋಕಿಯ ಮನುಷ್ಯನಾದುದರಿಂದ ಯಾವಾಗಲೂ ಹೈ ಸೊಸೈಟಿ ಪಾರ್ಟಿಯಲ್ಲಿ ಓಡಾಡುತ್ತಿದ್ದ. ಸೌಮ್ಯಳನ್ನು ಸಿನಿಮಾ ಪಾರ್ಕ್‍ಗಳಿಗೆ ಕರೆದೊಯ್ಯವುದು, ಹೊಸ ಬಟ್ಟೆ ತೆಗೆಸಿಕೊಡುವುದು, ಎಲ್ಲಾ ಅವಳಿಷ್ಟದಂತೆ ಮಾಡುತ್ತಿದ್ದ. ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವಳ ಹೊಸ ಬಾಳಿನ ತಿರುವು ನೋಡಿ ಅವಳ ಸ್ನೇಹಿತೆಯರಿಗೆ, ದಾಂಪತ್ಯ ಜೀವನ ಇದ್ದರೆ ಹೀಗೆ ಇರಬೇಕು ಅನಿಸುತ್ತಿತ್ತು. ಒಳಗೊಳಗೆ ಹೊಟ್ಟೆಕಿಚ್ಚು ಆಗುತ್ತಿತ್ತು. ಒಂದು ದಿನ ಸೌಮ್ಯ ಏನು ನೀವು ಕೆಲಸಕ್ಕೆ ಹೋಗುವುದಿಲ್ಲವೆ? ಎಂದು ಕೇಳಿದಳು. ಸಿಗರೇಟ್, ವಿಸ್ಕಿ ಗ್ಲಾಸ್ ಹಿಡಿದಿದ್ದ ರಾಕೇಶ ಅವಳ ಮಾತಿಗೆ ಗಮನವೇ ಕೊಡದೆ ಬೇರೆ ಏನೋ ಯೋಚನೆಯಲ್ಲಿ ಮಗ್ನನಾಗಿದ್ದ. ದಿನಗಳು ಉರುಳಿದವು. ಸೌಮ್ಯಳಿಗೆ ವಾಂತಿ ಶುರುವಾಯಿತು. ಬೆಳಗ್ಗೆ ಏಳುವಾಗ ತಲೆಸುತ್ತುತ್ತಿತ್ತು, ಹಾಗೇ ಮಲಗಿದಳು. ಬಾಗಿಲು ತಟ್ಟಿದ ಶಬ್ದ...... ಏಳಲಾರದೆ ಎದ್ದಳು, ರಾತ್ರಿಯೆಲ್ಲಾ ನಿದ್ದೆ ಇರಲಿಲ್ಲ. ಪಕ್ಕದಲ್ಲಿ ನೋಡಿದಾಗ ರಾಕೇಶ ಇಲ್ಲದುದನ್ನು ಗಮನಿಸಿದಳು, ಕಣ್ಣು ಬಿಟ್ಟು ಗಡಿಯಾರ ನೋಡಿದಾಗ ಘಂಟೆ 11 ಆಗಿತ್ತು. ಮೆಲ್ಲನೆ ಎದ್ದಳು. ಬಾಗಿಲು ತಟ್ಟುವ ಶಬ್ದ ಇನ್ನೂ ಹೆಚ್ಚಾಯಿತು. ಬಾಗಿಲು ತೆಗೆದಾಗ ಅವಳ ಅಮ್ಮ ಮಗಳನ್ನು ಬಹಳ ದಿನಗಳ ನಂತರ ನೋಡಲು ಬಂದಿದ್ದರು. ಅಮ್ಮ, ಏನು ಫೋನ್ ಮಾಡದೆ ಬಂದಿರುವೆ? ಒಬ್ಬಳೇ ಬಂದೆಯಾ? ಬ್ಯಾಗ್ ತೆಗೆದುಕೊಂಡಳು. ಸೌಮ್ಯ, ಬ್ಯಾಗ್ನಲ್ಲಿ ನಿನಗೆ ಇಷ್ಟವಾದ ರವೆ ಉಂಡೆ ಇದೆ ತಿನ್ನಮ್ಮ'' ಸೌಮ್ಯಳ ಅಮ್ಮ ಹೇಳಿದಳು. ಇಲ್ಲಮ್ಮ, ಇನ್ನು ಈಗ ತಾನೆ ಏಳುತ್ತಿದ್ದೇನೆ. ಯಾಕೋ ತಲೆಸುತ್ತುತ್ತಾ ಇದೆ'' ಎಂದಳು. ಹೋಗಮ್ಮ, ಬೇಗನೇ ಮುಖ ತೊಳೆದು ಬಾ, ಒಟ್ಟಿಗೆ ಏನಾದರೂ ಹೊಟ್ಟೆಗೆ ಹಾಕೋಣ. ನಾನು ಏನೂ ತಿಂದಿಲ್ಲ'' ಎಂದು ಅಮ್ಮ ಅಡುಗೆ ಮನೆ ಕಡೆಗೆ ನಡೆದರು. ಕೆಲಸದ ಗೌರಮ್ಮ ಮಧ್ಯಾಹ್ನದ ಅಡುಗೆಯ ತಯಾರಿಯಲ್ಲಿ ಇದ್ದಳು. ಬಿಸಿ ಬೇಳೆ ಬಾತ್, ಮೊಸರನ್ನ ರೆಡಿಯಾಗಿತ್ತು. ಹಪ್ಪಳ ಕರಿದರೆ ಮುಗಿಯಿತು ಎಂದಳು ಗೌರಮ್ಮ. ಸೌಮ್ಯ ಸ್ನಾನ ಮುಗಿಸಿ, ರಾಕೇಶ ಎರಡು ದಿನದ ಹಿಂದೆ ತಂದ ಚೂಡಿದಾರ ಹಾಕಿಕೊಂಡು ಬಂದಳು. ಹಸಿರು ಬಣ್ಣದ ಚೂಡಿದಾರ್ನಲ್ಲಿ ಮುದ್ದಾಗಿ ಕಾಣುತ್ತಿದ್ದ ಮಗಳನ್ನು ನೋಡಿ, ಅಮ್ಮನಿಗೆ ಒಂದು ವಿಧದಲ್ಲಿ ತೃಪ್ತಿ ಅನ್ನಿಸಿ, ದೃಷ್ಟಿ ಆಗದಿರಲಿ ಅಂದುಕೊಂಡಳು. ಇಬ್ಬರೂ ಊಟಕ್ಕೆ ಕುಳಿತಾಗ ಫೋನ್ ರಿಂಗ್ ಆಯಿತು. ರಾಕೇಶನದು, ನಾನು ಊಟಕ್ಕೆ ಬರಲ್ಲ ಈ ದಿನ ತುಂಬಾ ಬ್ಯುಸಿ ನೀನು ಕಾಯಬೇಡ. ಸೌಮ್ಯಳ ಅಮ್ಮ ಊಟ ಬಡಿಸಿ ಆಗಿತ್ತು. ಇಬ್ಬರೂ ಅಲ್ಲಿಯ ಇಲ್ಲಿಯ ವಿಚಾರ, ಸಂಬಂಧಿಕರಲ್ಲಿ ಆಗುತ್ತಿದ್ದ ಗಲಾಟೆಗಳು, ಇನ್ಯಾರೋ ಟೂರ್ಗೆ ಹೋಗಿ ಬ್ಯಾಗ್ ಕಳೆದು ಹೋಗಿದ್ದು, ಮತ್ತೆ ಸಿಕ್ಕಿದ್ದು, ಹೀಗೆ ಹರಟೆ ಹೊಡೆಯುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ. ಅಡುಗೆಯವಳು ತಿನ್ನಲು ಕುರುಕಲು ತಂದಿತ್ತಳು. ಹಾಗೆಯೇ ತೋಟದಲ್ಲಿ ಸುತ್ತಾಡಿದರು. ಸೌಮ್ಯಳನ್ನು ಅವಳ ಅಮ್ಮ ಮೆಲ್ಲನೆ ಏನಮ್ಮಾ ಚೆನ್ನಾಗಿದ್ದೀಯಾ? ಎಂದು ಕೇಳಿದರು. ಯಾಕಮ್ಮ ಹಾಗೆ ಕೇಳುತ್ತೀಯಾ? ಸೌಮ್ಯ ಅಂದಳು. ಅಲ್ಲ, ರಾಕೇಶ ಮನೆಯಲ್ಲಿ ಕಾಣುತ್ತಿಲ್ಲ, ಇಷ್ಟು ಹೊತ್ತಿನವರೆಗೂ ಏನು ಕೆಲಸ?'' ಎಂದಳು. ಯಾಕೋ ಗೊತ್ತಿಲ್ಲಮ್ಮ ಎರಡು ದಿನದಿಂದ ಮನೆಗೆ ಬಂದಿಲ್ಲ ಫೋನಿನಲ್ಲಿ ಬಹಳ ಕೆಲಸವಿದೆ ಎಂದು ಹೇಳುತ್ತಿದ್ದಾರೆ ಎಂದಳು. ಮಗಳ ಮುಖ ನೋಡಿ ಅಮ್ಮನಿಗೆ ಚಿಂತೆ ಪ್ರಾರಂಭವಾಯಿತು. ರಾಕೇಶನನ್ನು ಭೇಟಿ ಮಾಡಿಯೇ ಹೋಗುವುದು ಎಂದು ನಿರ್ಧಾರ ಮಾಡಿಕೊಂಡಳು. ಹಾಗೂ ಹೀಗೂ ಸಮಯ ಕಳೆದು, ರಾತ್ರಿ 12 ಘಂಟೆಗೆ ತೂರಾಡುತ್ತಾ ಬಂದ ರಾಕೇಶನನ್ನು ಮಾತನಾಡಿಸುವುದು ಬೇಡವೆನಿಸಿತ್ತು. ಬೆಳಗ್ಗೆ 11 ಘಂಟೆಗೆ ಈಗ ತಾನೆ ಬೆಳಗಾದಂತೆ ಎದ್ದು ಬಂದ. ರಾತ್ರಿಯ ಕುಡಿತದ ಮಬ್ಬು ಇಳಿದಿರಲಿಲ್ಲ. ಅತ್ತೆ ಯಾವಾಗ ಬಂದಿರಿ? ಮಾವ ಹೇಗಿದ್ದಾರೆ ಎಂದ. ಅತ್ತೆಯನ್ನು ಮಾತನಾಡಿಸಿದ ರೀತಿ ನೋಡಿ ಸೌಮ್ಯಳಿಗೆ ಆಶ್ಚರ್ಯವಾಯಿತು. ಅಮ್ಮನಿಗೆ ತಿಳಿಯುವುದು ಬೇಡವೆಂದು ಅವಳು ಕೇಕ್ ಮಾಡುವ ಕೆಲಸದಲ್ಲಿ ಮಗ್ನಳಾದಳು. ಮನಸ್ಸೆಲ್ಲಾ ಮನೆಯಲ್ಲಿ ಕೆಲವು ದಿನದಿಂದ ನಡೆಯುತ್ತಿದ್ದ ವಿಷಯಗಳ ಬಗ್ಗೆ ಮೆಲುಕು ಹಾಕುತ್ತಿತ್ತು. ರಾಕೇಶ ಮದುವೆಯಾಗಿ 3 ತಿಂಗಳಿಂದ ಅವನ ಇನ್ನೊಂದು ಮುಖ ತೋರಿಸಲು ಪ್ರಾರಂಬಿಸಿದ್ದ. ಹೆಂಡತಿಗೆ ಸುಂದರವಾದ ಬಟ್ಟೆಗಳನ್ನು ತೊಡಿಸುವುದು, ಸಿಂಗರಿಸುವುದು, ಫೋಟೋ ತೆಗೆಯುವುದು ಮಾಡುತ್ತಾ ಸಂತೋಷಪಡುತ್ತಿದ್ದ. ಸಿನಿಮಾಗಳಿಗೂ ಕರೆದುಕೊಂಡು ಹೋಗಿ ಅಲ್ಲಿ ಪ್ರಚೋದಿಸಿ ತೋರಿಸುತ್ತಿದ್ದ ಹಾವ ಭಾವಗಳನ್ನು ಹೆಂಡತಿಯಲ್ಲಿ ಕಾಣಲು ಶುರುಮಾಡಿ, ಸೌಮ್ಯಳಿಗೆ ಹಿಂಸೆ ನೀಡುತ್ತಿದ್ದ. ಅವಳು ಅಸಮಾಧಾನ ತೋರಿಸಿದರೆ ಕೈಯಲ್ಲಿದ್ದ ಉರಿಯುವ ಸಿಗರೇಟಿನಿಂದ ಸುಡುತ್ತಿದ್ದ. ದಿನಗಳೆದಂತೆ ಕ್ರೂರತೆ ಜಾಸ್ತಿಯಾಗುತ್ತಾ ಹೋಯಿತು. ಅಮ್ಮನ ಮನೆಗೆ ಹೋಗುವುದಿರಲಿ ಅಲ್ಲಿಯ ವಿಷಯ ಮಾತನಾಡಲು ಬಿಡುತ್ತಿರಲಿಲ್ಲ. ಮೊದಲೆಲ್ಲಾ ಅಲ್ಲಿಯ ಹತ್ತಿರದ ಕ್ಲಬ್ಗೆ ಕರೆದುಕೊಂಡು ಹೋಗಿ, ಎಲ್ಲರೊಂದಿಗೆ ಬೆರೆಯುತ್ತಿದವನು, ಈಗ ಯಾರೂ ಬೇಕಿರಲಿಲ್ಲ. ಹಳೆಯ ಪರಿಚಯಸ್ಥರು ಸೌಮ್ಯಳನ್ನು ಮಾತನಾಡಿಸಲು ಬಂದರೆ ಆ ದಿನ ಅವಳನ್ನು ಆ ದೇವರೇ ಕಾಯಬೇಕಿತ್ತು. ಕಚ್ಚುವುದು, ಜಿಗುಟುವುದು, ನೋಯಿಸುವುದು, ಅವರೊಂದಿಗೆ ನಿನ್ನ ಲಲ್ಲೆಯೇನು? ನೀನು ಅವರನ್ನು ಮರಳು ಮಾಡಬೇಡ ಎಂಬ ಕುಹಕದ ಮಾತುಗಳು. ರಾತ್ರೆಯೆಲ್ಲ ನಿದ್ರೆ ಮಾಡಲು ಬಿಡುತ್ತಿರಲ್ಲಿಲ್ಲ. ಸೌಮ್ಯ ಇದೆಲ್ಲಾ ಅಮ್ಮನಿಗೆ ಗೊತ್ತಾಗದಂತೆ ಬಹಳ ಜಾಗ್ರತೆ ವಹಿಸಿದ್ದಳು. ಅಮ್ಮನನ್ನು ಬೇಗ ಮನೆಯಿಂದ ಕಳುಹಿಸಬೇಕು . ಅಪ್ಪನಿಗೆ ಫೋನ್ ಮಾಡಿ ಬೇಗನೆ ಬಂದು ಅಮ್ಮನನ್ನು ಕರೆದೊಯ್ಯಲು ಹೇಳಿದಳು. ಅಮ್ಮ ನೀ ಹೋಗಮ್ಮ. ಅಪ್ಪನಿಗೆ ನೀನಿಲ್ಲದೆ ಬಹಳ ಬೇಜಾರು. ಎಷ್ಟು ಜನ ಕೆಲಸದವರಿದ್ದರೂ, ನೀನಿದ್ದಂತೆ ಆಗಲ್ಲ. ವಯಸ್ಸಾದಂತೆ ನೀನು ಜೊತೆಗೆ ಇರಬೇಕು ಅನಿಸಿರುತ್ತೆ'' ಎಂದಳು. ತೋಟದಿಂದ ಅಪ್ಪನಿಗೆ ಇಷ್ಟವಾದ ಬದನೆ, ಬೆಂಡೆ ಕಿತ್ತು ತಂದಳು. ಅಮ್ಮನಿಗೆ ಊಟ ಬಡಿಸಿ ಡ್ರೈವರನ್ನು ಕರೆದು ಅಮ್ಮನನ್ನು ಬೇಗನೆ ಕಳುಹಿಸಿಕೊಟ್ಟಳು. ಕತ್ತಲಾಯಿತು. ದೀಪ ಹಚ್ಚಲು ಹೋದಾಗ ಜೀಪು ಬಂದ ಶಬ್ದ ಕೇಳಿಸಿತು. ರಾಕೇಶ ತೂರಾಡುತ್ತಾ ಒಳಗೆ ಬಂದ. ಸೌಮ್ಯಳಲ್ಲಿ ಏ ನಿನ್ನ ಅಮ್ಮ ಹೋದ ಹಾಗಿದೆ, ಕಾರು ಕಾಣಿಸುತ್ತಿಲ್ಲ ಎಂದು ತೊದಲಿದ. ಹೌದು ಮಧ್ಯಾಹ್ನ ಊಟ ಮುಗಿಸಿ ಹೋದರು ಎಂದಳು. ಒಳ್ಳೆಯದಾಯಿತು. ಇಲ್ಲಿಯ ವಿಷಯ ಏನಾದರೂ ಬಾಯಿ ಬಿಟ್ಟೆಯಾ''? ಎಂದು ಪ್ರಶ್ನಿಸಿದ. ಯಾವ ವಿಷಯ!?'' ಆಶ್ಚರ್ಯದಿಂದ ಸೌಮ್ಯ ಕೇಳಿದಳು. ರಾಕೇಶ ದುರು ದುರುನೆ ನುಂಗುವಂತೆ ನೋಡಿದ. ಏನೇ ಬಹಳ ನಾಟಕ ಆಡ್ತಾ ಇದ್ದಿಯಾ?'' ಅವಳ ನೀಳ ಕೂದಲಿಗೆ ಕೈ ಹಾಕಿ ದರದರನೆ ಎಳೆದು ಹೋದ. ಅವಳ ಮೈಮೇಲೆ ಬಿದ್ದು ಹಿಂಸಿಸಿ, ಮೃಗದಂತೆ ವರ್ತಿಸಿದ ಆಮೇಲೆ ಏನು ಆಗದವನಂತೆ ಸುಮ್ಮನೆ ಬಿದ್ದು ಕೊಂಡ. ಸೌಮ್ಯಳಿಗೆ ಅಳುವುದಕ್ಕು ತ್ರಾಣವಿರಲಿಲ್ಲ. ಕಣ್ಣಲ್ಲಿ ನೀರು ತುಂಬಿತ್ತು. ಬೆಳಗ್ಗೆ ಕೆಲಸದವರು ಬಂದಾಗ, ತನಗೇನೂ ಆಗಲೇ ಇಲ್ಲ ಎನ್ನುವಂತೆ ಸಿಂಗರಿಸಿ ಕೊಂಡಳು. ಕಾಫಿ ಕುಡಿದು ಹೊಲಿಯುವ ದಾರಕ್ಕೆ ಕೈ ಹಾಕಿದಳು, ಚಿತ್ರದಲ್ಲಿನ ಬಣ್ಣ ತುಂಬುವ ಪ್ರಯತ್ನ ಮಾಡಿದಳು. ಸಮಯ ಕಳೆಯುತ್ತಾ ಇತ್ತು. ಯಾಕೊ ತಲೆ ಸುತ್ತಿ ವಾಂತಿ ಬಂದಹಾಗೆ ಅನ್ನಿಸಿತು. ಹೀಗೆ ಸ್ವಲ್ಪ ದಿನದಿಂದ ಆಗುತ್ತಿದ್ದುದನ್ನು ಅಮ್ಮನಿಗೆ ಹೇಳಿಕೊಳ್ಳಬೇಕೆಂದು ಫೋನ್ ಮಾಡಿದಳು. ವಿಷಯ ತಿಳಿದ ಅಪ್ಪ ಸಂಭ್ರಮದಿಂದ ಬಂದು ಬುಟ್ಟಿ ಹಣ್ಣು ತೆಗೆದುಕೊಂಡು ಯಾವ ಮಾಯೆಯಲ್ಲಿ ಬಂದರೋ ತಿಳಿಯಲಿಲ್ಲ. ಮಗಳು ತಾಯಿಯಾಗುವಳು ಎಂಬ ಸಂತೋಷ ಅಪ್ಪನಿಗೆ, ಸೌಮ್ಯಳಿಗೆ ದುಃಖದಲ್ಲಿ ಗಂಟಲು ಕಟ್ಟಿದಂತಾಯಿತು. ಅಪ್ಪನ ಇಷ್ಟೊಂದು ಸಂತೋಷವನ್ನು ಅವಳು ಇದುವರೆಗೆ ನೋಡಿರಲ್ಲಿಲ್ಲ. ಅಪ್ಪನನ್ನು ನೋಯಿಸಲಾರದೆ, ಅವಳ ವೇದನೆಯನ್ನು ಹೇಳಲಾರದೆ ಮೂಕಿಯಾದಳು. ರಾಕೇಶನಿಗೂ ಸೌಮ್ಯ ತನ್ನ ಮಗುವಿನ ತಾಯಿಯಾಗುವಳು ಎಂದು ಸಂತೋಷವಾಗಿದ್ದು ಕಂಡು ಸೌಮ್ಯಳಿಗೆ ಒಂದು ರೀತಿಯ ಸಂತೋಷವಾಯಿತು. ಇನ್ನು ತನ್ನೊಂದಿಗಿನ ಅವನ ವರ್ತನೆ ಸುಧಾರಿಸಬಹುದು ಎಂದುಕೊಂಡಳು. ಸ್ವಲ್ಪ ದಿನಗಳು ಅವನಲ್ಲಿ ಒಂದು ತರಹದ ಬದಲಾವಣೆ ಕಂಡಳು. ಮಾತು ಕಡಿಮೆಯಾಯಿತು. ಮನೆಗೆ ಬೇಗ ಬರುತ್ತಿದ್ದ. ಜಾಸ್ತಿ ಹೊತ್ತು ನಿದ್ದೆ ಮಾಡುತ್ತಿದ್ದ. ಯಾವಾಗಲೂ ಮಲಗುವ ಆಸೆಯಲ್ಲಿರುತ್ತಿದ್ದ. ಹೆರಿಗೆಯ ಸಮಯ ಹತ್ತಿರವಾಗುತ್ತಿದ್ದಂತೆ ತವರು ಮನೆಗೆ ಹೋಗುವ ತಯಾರಿಯಲ್ಲಿ ಸೌಮ್ಯಳಿದ್ದಳು. ರಾಕೇಶನ ಕಡೆ, ತೋಟದ ಕಡೆ ಗಮನಕೊಡುವುದು ಕಡಿಮೆಯಾಗಿತ್ತು. ಎರಡು ದಿನಗಳ ಹಿಂದೆ ಜೀಪನ್ನು ಯಾರೋ ಹಣ ಕೊಟ್ಟು ತೆಗೆದುಕೊಂಡು ಹೋಗಿದ್ದರು. ಆ ದಿನ ಹೋದ ರಾಕೇಶ, ಮತ್ತೆರಡು ದಿನ ಬಿಟ್ಟು ಮನೆಗೆ ಬಂದಿದ್ದ. ಮನೆಯಲ್ಲಿ ಒಬ್ಬಳೇ ಇರುವುದು ಕಷ್ಟವಾಗುತ್ತಿತ್ತು ಸೌಮ್ಯಳಿಗೆ, ರಾಕೇಶನಲ್ಲಿ ತನ್ನನ್ನು ಅಮ್ಮನ ಮನೆಗೆ ಕರೆದೊಯ್ಯುವಂತೆ ಕೇಳಿಕೊಂಡಳು, ಅದನ್ನು ಕೇಳಿದವನು ಮತ್ತೆ ಅದೇ ಹಿಂದಿನ ರಾಕೇಶನಾದ. ಹುಚ್ಚು ಮಾತು, ಕೊಂಕು ನುಡಿ, ತಾಂಡವ ನೃತ್ಯವನ್ನೇ ಮಾಡಿದ. "ಯಾರು ಆಗದ ತಾಯ್ತನವೆ ನಿನ್ನದು ಸುಮ್ಮನಿರು'' ಎಂದು ಅವಳ ಬಾಯಿ ಮುಚ್ಚಿಸಿದ. ಮರುದಿನ ಬೆಳಗ್ಗೆ ಅವಳ ಅಪ್ಪ ಅಮ್ಮ ಬಂದು ಮಗಳನ್ನು ಕಳುಹಿಸಿ ಕೊಡಲು ಕೇಳಿದಾಗ ಹಿಂದಿನ ರಾತ್ರಿಯ ಯಾವುದೇ ವರ್ತನೆ ತೋರಿಸದೆ ಕರೆದುಕೊಂಡು ಹೋಗುವಂತೆ ಹೇಳಿದ. ಇನ್ನೇನೂ ಎಲ್ಲಾ ರೆಡಿಯಾಗೋಣವೆಂದು ಸೌಮ್ಯ ಒಳಗಡೆ ಪೆಟ್ಟಿಗೆಯಲ್ಲಿದ್ದ ಒಡವೆ ತೆಗೆಯಲು ಹೋದಾಗ ಒಡವೆಗಳು ಕಾಣೆಯಾಗಿದ್ದವು. ಅಲ್ಲಿ ಪ್ಯಾಕೇಟು ಪುಡಿಯ ಪೊಟ್ಟಣಗಳನ್ನು ಅವಳು ಆಗಷ್ಟೇ ಗಮನಿಸಿದ್ದಳು, ಕುಡಿಯುವ ಛಟ ಬಿಟ್ಟು ಗಾಂಜಾದ ದಾಸನಾಗಿರುವುದು ತಿಳಿದಾಗ ಅವಳಿಗೆ ಆಘಾತವಾಯಿತು. ಈಗ ಅದರ ಬಗ್ಗೆ ಮಾತನಾಡಿದರೆ ಬಂದ ತಂದೆ ತಾಯಿಯರ ಎದುರು ತೊಂದರೆಯಾಗುವುದು ಎಂದು ಸುಮ್ಮನೆ ಹೊರಟುಬಿಟ್ಟಳು. ತವರಿಗೆ ಬಂದ ಎರಡನೇ ದಿನ ಸೌಮ್ಯ ಗಂಡು ಮಗುವಿನ ತಾಯಿಯಾದಳು. ಈ ಸುದ್ದಿಯನ್ನು ರಾಕೇಶನಿಗೆ ತಿಳಿಸಲೆಂದು ಸೌಮ್ಯಳ ಅಪ್ಪ ಅವನಲ್ಲಿಗೆ ಹೋದರು. ಮತ್ತಿನ ಗುಂಗಿನಲ್ಲಿದ್ದ ರಾಕೇಶ ಅವರನ್ನು ಅವಮಾನ ಮಾಡಿ ಕಳುಹಿಸಿದ. ಮಗುವನ್ನು ನೋಡಲು ಬಂದಿರಲಿಲ್ಲ. ಇದರಿಂದ ಬಹಳವಾಗಿ ಮನನೊಂದು ಸೌಮ್ಯಳ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡರು. ಸೌಮ್ಯಳ ಜೀವನದ ಇನ್ನೊಂದು ಹೊಸ ಅಧ್ಯಾಯ ಪ್ರಾರಂಭವಾಯಿತು. ಅವಳು ಅರ್ಧಕ್ಕೆ ಬಿಟ್ಟಿದ್ದ ಎಂಬಿಎ ಕೋರ್ಸ್ ಮಾಡಲು ಹೊರಟಳು. ಪತಿ ತೀರಿಕೊಂಡ ದುಃಖ, ಮಗಳ ದುರಂತ ಜೀವನದಿಂದಾಗಿ ಅಮ್ಮ ತುಂಬಾ ನೊಂದು ಹೋಗಿದ್ದಳು. ಅಳಿಯನ ತೋಟವಿರುವ ಊರೇ ಬೇಡವೆಂದುಕೊಂಡು ತಮ್ಮ ತೋಟವನ್ನು ಮಾರಿ ಪಕ್ಕದ ಸಣ್ಣ ಊರಿಗೆ ಹೋಗಿ, ಅಲ್ಲ್ಲೊಂದು ಮನೆ ಕಟ್ಟಿಕೊಂಡರು. ಸೌಮ್ಯ ಹಿಂದೆ ಇದ್ದ ಹಾಸ್ಟೆಲ್ನಲ್ಲಿ ಇರೋಣವೆಂದುಕೊಂಡರೆ ಅಲ್ಲಿಗೆ ರಾಕೇಶನ ಉಪದ್ರ-ಉಪಟಳ ಹೆಚ್ಚಾಯಿತು. ರಾಕೇಶ ರಾತ್ರಿ ವೇಳೆ ಸೌಮ್ಯಳಿಗೆ ಫೋನ್ ಮಾಡಿ ತೊಂದರೆ ಕೊಡುತ್ತಿದ್ದ ಹಾಗೂ ಬೇರೆ ಪಡ್ಡೆ ಹುಡುಗರಿಗೆ ಕಾಸುಕೊಟ್ಟು ಸೌಮ್ಯಳಿಗೆ ಕೀಟಲೆ ಕೊಡುವಂತೆ ರಾಕೇಶ ಹುರಿದುಂಬಿಸುತ್ತಿದ್ದ. ಇದರಿಂದಾಗಿ ಅವಳು ಹಾಸ್ಟೆಲ್ ಬಿಟ್ಟು ಬಿಟ್ಟಳು. ಸೌಮ್ಯ - ರಾಕೇಶರ ಸಂಬಂಧ ಕಡಿದಿತ್ತಾದರೂ, ನ್ಯಾಯಾಲಯದಲ್ಲಿ ಮಗು ಅಪ್ಪನ ಜೊತೆಯಲ್ಲಿರುವಂತೆ ಮಾಡಿಸಿದ್ದ. ತಿಂಗಳಿಗೊಮ್ಮೆ ಅಮ್ಮನಿಗೆ ನೋಡುವ ಅವಕಾಶವಿತ್ತಾದರೂ ಕಿರುಕುಳದ ಹೆದರಿಕೆಯಿಂದ ಮಗನ ಮೇಲಿನ ಬಂಧನ, ವ್ಯಾಮೋಹ ಬಿಟ್ಟಳು. ಮಗುವಿನ ತಲೆ ತುಂಬಾ ಅಮ್ಮ ಕೆಟ್ಟವಳು ಎಂಬ ಕಥೆಯನ್ನು ರಾಕೇಶ ಬೋದಿಸಿದ್ದ. ತಾಯಿಯನ್ನು ಕಾಣುವ ಅವಕಾಶ ಸಿಕ್ಕಿದಾಗಲೂ ದೂರದಿಂದಲೇ ನೋಡಿ ಮಗು ಅಸಮಾಧಾನ ವ್ಯಕ್ತಪಡಿಸುತ್ತಿತ್ತು. ಮಗನನ್ನು ಬೋರ್ಡಿಂಗ್‍ನಲ್ಲಿ ಓದುವ ಏರ್ಪಾಟು ಮಾಡಿ ತನ್ನ ರಾಕ್ಷಸ ಕೃತ್ಯವನ್ನು ಅಡೆ ತಡೆಯಿಲ್ಲದೆ ಮುಂದುವರಿಸಿದ. ಅಮ್ಮನಿಂದ ಮಗನನ್ನು ದೂರಮಾಡಿಸಿ ತಾನು ಗೆದ್ದೆನೆಂಬ ಅಹಂಕಾರವೂ ರಾಕೇಶನಿಗಿತ್ತು. ಕಷ್ಟಪಟ್ಟು ಡಿಗ್ರಿ ಸಂಪಾದಿಸಿದ ಸೌಮ್ಯಳಿಗೆ ಪಂಚತಾರಾ ಹೋಟೆಲಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ವಯಸ್ಸು ಸಣ್ಣದಿದ್ದು, ಕಾಣಲು ಸುಂದರಳಾಗಿದ್ದುದರಿಂದ ಎಲ್ಲರೂ ಅವಳನ್ನು ಇಷ್ಟಪಡುತಿದ್ದರು. ಚಾಣಾಕ್ಷತನದಿಂದ ಕೆಲಸವನ್ನು ಮಾಡಿ ಮುಗಿಸುತ್ತಿದ್ದಳು. ಬಡ್ತೀಹೊಂದಿ ಇನ್ನೂ ದೊಡ್ಡ ಹುದ್ದೆಗೆ ಏರಿದಳು. ಈ ಮಟ್ಟಕ್ಕೆ ತಂದ ದೇವರನ್ನು ನಿತ್ಯವೂ ಸ್ಮರಿಸುತ್ತಿದ್ದಳು, ಅಮ್ಮನಿಗೆ ಮಗಳ ಬಗ್ಗೆ ಹೆಮ್ಮೆಯೆನಿಸುತ್ತಿತ್ತು. ಬೇರೆ ಮನೆ ಮಾಡಿ ಅಮ್ಮನನ್ನೂ ತನ್ನೊಂದಿಗೆ ಇರಲು ಹೇಳಬೇಕೆಂದು ಯೋಚಿಸುತ್ತಿದ್ದಳು. ನಿದ್ರೆ ಹತ್ತಿತ್ತು. ಟ್ರಿಣ್ ಟ್ರಿಣ್ ಫೋನ್ ಸದ್ದಾಯಿತು. ಯಾರು ? ನಿದ್ದೆಗಣ್ಣಲ್ಲಿ ಕೇಳಿದಳು . ಹಲೋ, ಸ್ವೀಟೀ, ಹೇಗಿದ್ದಿಯಾ. ದಿನಾ ದೂರದಿಂದ ನೊಡುತ್ತಿರುತ್ತೇನೆ. ಹತ್ತಿರದಿಂದ ನೋಡಿ ಮಾತಾನಾಡಿಸುವ ಆಸೆ . ಯಾರು ನೀವು ಪರಿಚಿತರಂತೆ ಮಾತಾನಾಡುತ್ತಿದ್ದೀರಿ? ಅದು ಇಷ್ಟು ಹೊತ್ತಿನಲ್ಲಿ, ನನಗಂತೂ ಪರಿಚಯವಿಲ್ಲದ ಧ್ವನಿ, ಇದು ಸಭ್ಯತನವಲ್ಲ. ಹಲೋ ಡಿಯರ್ ನಿನಗೆ ನನ್ನ ಪರಿಚಯವಿದೆ ನೆನಪಿಸಿಕೊ. ಹ್ಹ... ಹ್ಹ.. ನಗು ಸೌಮ್ಯಳಿಗೆ ಕತ್ತು ಹಿಚುಕಿದಂತಾಯಿತ್ತು. ಯಾರಿರಬಹುದು? ನಿನ್ನ ಹೆಸರು ಪರಿಚಯ ಹೇಳು ಇಲ್ಲಾ ಫೋನ್ ಇಡು ... ಸ್ವಲ್ಪ ಖಾರವಾಗಿ ಅಂದಳು. ನಾನು ಡೇವಿಡ್. ಮೊನ್ನೆ ಪಾರ್ಟಿ ಆಗಿದ್ದಾಗ ನನ್ನ ಗೆಸ್ಟ್‍ಗಳಿಗೆ ನೀನು ಬಹಳ ಚೆನ್ನಾಗಿ ಆರೆಂಜ್ ಮಾಡಿದ್ದಿ. ನಿಮ್ಮ ಮ್ಯಾನೇಜರ್ಗೆ ನಿನಗೆ ಪ್ರಮೋಷನ್ ಕೊಡುವಂತೆ ನಾನೇ ಹೇಳಿದ್ದು. ನೀನು ನನಗೆ ಅಷ್ಟೊಂದು ಇಷ್ಟವಾಗಿದ್ದಿ ಹ್ಹಿ... ಹ್ಹಿ... ಹಲ್ಲು ಕಿರಿದ ಸದ್ದು. ಸರ್ ನನಗೀಗ ತಲೆ ತುಂಬಾ ನೋಯುತ್ತಿದೆ ರಾತ್ರಿ ಬಹಳವಾಯಿತು ಎನ್ನುತ್ತಾ ಫೋನ್ ಇಟ್ಟಳು. ಈಗ ಸೌಮ್ಯಳಿಗೆ ತನ್ನ ಪ್ರಮೋಷನ್ ದುರುದ್ದೇಶ ತಿಳಿಯಿತು. ತನ್ನ ಅಪ್ಲಿಕೇಷನ್ನಲ್ಲಿ ಮದುವೆಯಾಗಿ ಡೈವರ್ಸ್ ಎಂದು ಬರೆದಿದ್ದಳು. ಡೇವಿಡ್‍ಗೆ ಇವಳು ಸುಲಭವಾಗಿ ಸಿಗಬಹುದೆಂದು ಅವನ ಯೋಚನೆಯಾಗಿರಬಹುದು. ಪಂಚತಾರ ಹೋಟೆಲ್ನಲ್ಲಿರುವವಳು ತಾನೇ. ಬೆಳಗ್ಗೆ ಎಂದಿನಂತೆ ಆಫೀಸ್ಗೆ ಹೋದಾಗ, ಮ್ಯಾನೇಜಿಂಗ್ ಡೈರಕ್ಟರಲ್ಲಿ ಈ ವಿಷಯ ಪ್ರಸ್ತಾಪಿಸಿದಳು. ಅವರಿಗೆ ಯಾವ ತರಹದ ಆಶ್ಚರ್ಯವೂ ಆಗಲಿಲ್ಲ. ಇಂತಹ ಕಡೆಗಳಲ್ಲಿ ಈ ರೀತಿ ಇರುವುದು ಸಹಜ. ಅದಕ್ಕೆಲ್ಲಾ ಮಹತ್ವ ಕೊಡುವುದು ಬೇಡ ಬಿಡಮ್ಮ ಎಂದು ಸುಲಭವಾಗಿ ಅಂದರು. ನಾಳೆಯಿಂದ ಮೂರು ದಿನ ಬಹಳ ದೊಡ್ಡ ಪ್ರೋಗ್ರಾಮ್ ಇದೆ. ಊರಿನ ಬಹಳ ದೊಡ್ಡ ಮನುಷ್ಯರೆಲ್ಲಾ ಸೇರುತ್ತಾರೆ. ಸರಿಯಾದ ಪ್ಲಾನಿಂಗ್ ಮಾಡು. "ವಿ ಶಲ್ ಮೀಟ್ ಫಾರ್ ಡಿಸ್ಕಷನ್". ನಿನ್ನ ರಿಕ್ವೈರ್ಮೆಂಟ್ ಏನಿದ್ದರೂ ತರಿಸಿಬಿಡು ಎನ್ನುತ್ತಾ ಮೊಬೈಲ್ನಲ್ಲಿ ಮಾತನಾಡುತ್ತಾ ಮುಂದೆ ಹೋದ ವ್ಯಕ್ತಿಯನ್ನೇ ನೋಡುತ್ತಾ ನಿಟ್ಟುಸಿರು ಬಿಟ್ಟಳು ಸೌಮ್ಯ. ಮೂರು ದಿನವೂ ಬಿಡುವಿಲ್ಲದ ಕೆಲಸದ ಭರದಲ್ಲಿ ಯೋಚಿಸಲು ಆಕೆಗೆ ಸಮಯವಿರಲಿಲ್ಲ. ತನಗೆ ವಹಿಸಿದುದನ್ನು ಅಚ್ಚುಕಟ್ಟಾಗಿ ಮುಗಿಸಿದಳು, ಎಲ್ಲವೂ ನಿಗದಿಪಡಿಸಿದಂತೆಯೇ ನಡೆಯಿತು ಎಂದು ಡೈರಿಯಲ್ಲಿ ಬರೆದು ನಿದ್ರಿಸಿದಳು. ಬೆಳಗ್ಗೆ ಎಂದಿನಂತೆ ಎದ್ದು ಫೋನ್ನಲ್ಲಿ ಕರೆ ಮಾಡಬೇಕಾಗಿರುವವರಿಗೆಲ್ಲ ಕರೆ ಮಾಡಿದಳು. ತನ್ನ ಕೈಕೆಳಗಿರುವವರಿಗೆ ಬೇಕಾದ ಡೈರಕ್ಷನ್ ಕೊಟ್ಟಳು. ಬಹಳ ದಿನಗಳಿಂದ ಎಣ್ಣೆಸ್ನಾನ ಮಾಡಿರಲಿಲ್ಲ. ತಲೆಗೆ ಎಣ್ಣೆ ಹಚ್ಚಿ, ಕೈಯಲ್ಲಿ ಕಾಪಿ ಲೋಟ ಹಿಡಿದು ಅಂದಿನ ನ್ಯೂಸ್ ಪೇಪರ್ ಪುಟ ಮಗುಚಿದಳು. ಬೇಗನೆ ಸ್ನಾನ ಮುಗಿಸಿ ಅಂದವಾಗಿ ಸೀರೆಯುಟ್ಟು ಹೊರಟು ನಿಂತಳು. ಕನ್ನಡಿಯಲ್ಲಿ ತನ್ನನ್ನೆ ನೋಡಿ ಖುಷಿಪಟ್ಟಳು. ಆಫೀಸಿನ ವಾಹನ ಬಂದು ತನ್ನನ್ನು ಕರೆದೊಯ್ಯವಾಗ ಒಮ್ಮೆ ಮನಸ್ಸಿನಲ್ಲಿಯೇ ಹೇಳಿಕೊಂಡಳು... ತಾನು ಎಲ್ಲಿಂದ ಎಲ್ಲಿಗೆ ತಲುಪಿದೆ? ಪಾರ್ಟಿ ನಡೆಯುವಲ್ಲಿಗೆ ಹೋಗಿ ಆರೇಂಜ್ಮೆಂಟ್ ಎಲ್ಲ ಗಮನಿಸಿದಳು. ಮರುದಿನದ ಕೆಲಸಗಳನ್ನು ಪ್ಲಾನ್ ಮಾಡಿಕೊಟ್ಟು ಮನೆಗೆಂದು ಹೊರಟು ನಿಂತಾಗ ತಾನು ಹೋಗಬೇಕಾದ ವಾಹನದ ಡ್ರೈವರ್ ಚೆನ್ನಾಗಿ ಕುಡಿದು ವಾಹನ ಚಲಾಯಿಸುವ ಸ್ಥಿತಿಯಲ್ಲಿರಲಿಲ್ಲ. ಅದಕ್ಕಾಗಿ ಬೇರೆ ವಾಹನಕ್ಕೋಸ್ಕರ ಹೊರಗೆ ಬಂದು ನಿಂತಳು. ಅಷ್ಟರಲ್ಲಿ ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಆಫೀಸ್ ಬಾಸ್ ಇರುವ ಕಾರು ಪಕ್ಕಕ್ಕೇ ಬಂದು ನಿಂತಿತ್ತು. ಕಾರು ಹತ್ತಲು ಹೇಳಿದರು. ನಿರಾಕರಿಸಲಾಗದೆ ಕಾರು ಏರಿದಳು. ಕಾರಿನಲ್ಲಿ ಇಬ್ಬರೂ ಸೌಮ್ಯಳನ್ನು ಬೇಕಾದಷ್ಟು ಹೊಗಳಿದರು ನಗುತ್ತಾ ಎಲ್ಲವನ್ನೂ ಕೇಳಿಸಿಕೊಂಡಳು. ಆಫೀಸ್ ಬಾಸ್ ದಾರಿಯಲ್ಲೇ ತಮಗೇನೋ ಕೆಲಸವಿದೆ ಎಂದು ಹೇಳಿ ಕಾರಿನಿಂದ ಇಳಿದರು. ಬಂದ ಮುಖ್ಯ ಅತಿಥಿ ಇವಳನ್ನು ಮನೆಗೆ ಬಿಡುವುದಾಗಿ ಹೇಳಿ ಮುಂದೆ ಹೋದರು. ಆದರೆ ಈ ಮನುಷ್ಯ ಸಭ್ಯನಂತೆ ಸೌಮ್ಯಳಿಗೆ ಕಾಣಿಸಲಿಲ್ಲ. ಓರೆ ಕಣ್ಣಲ್ಲಿ ಸೌಮ್ಯಳನ್ನು ನೋಡುತ್ತಲೇ ಸೀಗರೇಟ್ ಪ್ಯಾಕೆಟ್ ಹೊರತೆಗೆದ. ಸೇದಲು ಪರ್ಮಿಷನ್ ಇದೆಯಾ ಎಂದ. ನಿನ್ನ ಪರಮಿಷನ್ ಬೇಕು ಎಂದು ಒಂದು ತರಹದ ಮುಖ ಭಾವನೆಯಲ್ಲಿ ಹೇಳಿದ. ಸೌಮ್ಯಳಿಗೆ ಅರ್ಥವಾಗಲಿಲ್ಲ. ನಿನ್ನೆ ನಾನು ಫೋನ್ ಮಾಡಿದಾಗ ನೀನು ಕಠಿಣವಾಗಿ ಮಾತನಾಡಿ ಫೋನ್ ಇಟ್ಟೆಯಲ್ಲ, ಈಗ ನೀನು ಅಡ್ಜಸ್ಟ್ ಮಾಡಿ ಪರ್ಮಿಷನ್ ಕೊಟ್ಟರೆ ನಿನ್ನ ಜೀವನ ಮುಂದೆ ಒಳ್ಳೆಯದು ಆಗುವುದು, ನಿನ್ನ ಹಳೆಯ ವಿಷಯವೆಲ್ಲಾ ನನಗೆ ಗೊತ್ತು, ಆದರೆ ನಿನಗೆ ಮುಂದಕ್ಕೆ ಒಳ್ಳೆಯ ಭವಿಷ್ಯವಿದೆ. ಈ ತರಹದ ಬಾಳು ಎಷ್ಟು ದಿನ ಅಂತ ಬಾಳುತ್ತಿ? ಬುದ್ದಿಶಾಲಿಯಾಗಿ ವರ್ತಿಸು.... ಎಂದು ಇನ್ನು ಏನೇನೋ ಹೇಳುತ್ತಲೆ ಇದ್ದ. ಆಕೆಗೆ ಕಿವಿ ಕಿವುಡಾದಂತೆ ಆಯಿತು. ಅಬ್ಬಬ್ಬಾ... ಒಂಟಿ ಹೆಂಗಸು ಎಲ್ಲಿಯೂ ಬದುಕುವುದು ಕಷ್ಟ ಎಂದು ಅಮ್ಮ ಹೇಳಿದುದು ಕಿವಿಯಲ್ಲೆ ಕೇಳಿದಂತಾಯಿತು. ನೋಡಿ, ಈಗ ಇಷ್ಟು ಹೊತ್ತಿನಲ್ಲಿ ನನಗೆ ಏನೂ ಹೇಳಲು ತಿಳಿಯುತ್ತಿಲ್ಲ. ಅದೂ ಅಲ್ಲದೆ ನನಗೆ ಈಗ ತುಂಬಾ ಸುಸ್ತು ಆಗಿದೆ. ಯೋಚಿಸಲು ಸ್ವಲ್ಪ ಸಮಯ ಬೇಕು ಎಂದು ಸದ್ಯಕ್ಕೆ ತಪ್ಪಿಸಿಕೊಂಡಳು. ತನ್ನ ಯೋಚನೆ ಫಲಿಸಿತು ಎನ್ನುವಂತೆ ಕಾರು ಸ್ಪೀಡಾಗಿ ಓಡಿಸುತ್ತಾ, ದಟ್ ಈಸ್ ಲೈಕ್ ಏ ಗುಡ್ ಗರ್ಲ್ ಅದು ಒಳ್ಳೆಯದೇ ಎಂದ ತಾನು ಗೆದ್ದಂತೆ ಅವನ ಭಾವನೆಯಿತು, ತನ್ನ ಮನೆ ಸಮೀಪ ಕಾರಿನಿಂದ ಇಳಿದು ಕೊಂಡಳು. ರಾತ್ರಿಯಿಡಿ ನಿದ್ದೆ ಬರಲಿಲ್ಲ. ಹಾಗಾಗಿ ಆಗಲೇ ಕೂತು ರಜೆ ಚೀಟಿ ಬರೆದು, ಕಾರ್ ಡ್ರೈವರ್ನಿಗೆ ಕೊಡುವಂತೆ ಪಕ್ಕದ ಮನೆಯವರಿಗೆ ಕೊಟ್ಟಳು. ಬಟ್ಟೆಗಳನ್ನು ಬ್ಯಾಗಿಗೆ ತುರುಕಿಸಿ ಬೆಳಗಿನ ಬಸ್ಸಿಗೆ ಅಮ್ಮನಲ್ಲಿಗೆ ಹೊರಟಳು. ಹೇಳದೇ ಬಂದ ಮಗಳನ್ನು ನೋಡುತ್ತಲೇ ಅಮ್ಮನಿಗೆ ಬಹಳ ಸಂತೋಷವಾದರೂ, ಮಗಳ ಮುಖದಲ್ಲಿ ಇದ್ದ ಬೇಸರ ನೋಡಿ ಸ್ವಲ್ಪ ಅನುಮಾನವಾಯಿತು. ಸ್ವಲ್ಪ ಆರಾಮವಾದ ಮೇಲೆ ಕೇಳೋಣವೆಂದು ಅಮ್ಮ ಯೋಚಿಸಿ, ಕಾಫಿ ಬೇಕಾ ಎಂದು ಮಗಳನ್ನು ಕೇಳಿದಳು. ಆದರೆ ಕಾಫಿ ಬೇಡವೆಂದು, ದಾರಿಯಲ್ಲಿ ಕುಡಿದು ಬಂದಿರುವುದಾಗಿ ತಿಳಿಸಿ, ಸ್ವಲ್ಪ ಮಲಗುತ್ತೇನೆಂದು ಹೇಳಿ ಮಲಗಿದಳು. ನಿಟ್ಟುಸಿರಿನೊಂದಿಗೆ ಅಮ್ಮ ಅಡುಗೆ ಮನೆಗೆ ಹೋದಳು. ಎಷ್ಟೊ ಹೊತ್ತಿನ ನಂತರ ಸೌಮ್ಯಳಿಗೆ ಎಚ್ಚರವಾಯಿತು. ಮೆಲ್ಲನೆ ಅಮ್ಮನನ್ನು ಕರೆದಳು. ನಾನಿನ್ನು ಇಲ್ಲೇ ಇರುತ್ತೇನೆ. ಕೆಲಸಕ್ಕೆ ಹೋಗೋಲ್ಲ ಎಂದಳು. ಅಮ್ಮನಿಗೆ ತುಂಬಾ ಗಾಬರಿಯಾಯಿತು ಯಾಕೆ ಏನಾಯಿತು ಮಗು ಎಂದು ಚಡಪಡಿಸಿದಳು. ಎಲ್ಲಿ ಹೋದರೂ ಈ ಗಂಡು ಜಾತಿಗಳ ಹಿಂಸೆ ತಡೆಯಲಾಗದು, ನಾನೆಷ್ಟೇ ಎಚ್ಚರವಹಿಸಿದರೂ ಸಾಕಾಗುವುದಿಲ್ಲ. ಗಂಡ ಬಿಟ್ಟವಳು ಎಂದಾಕ್ಷಣ ನೀತಿಗೆಟ್ಟವಳು ಎಂದೇ ಎಲ್ಲರ ಭಾವನೆ. ಸುತ್ತುಬಳಸಿ ಮಾತನಾಡಿ ನನ್ನನ್ನು ಸ್ವಂತವಾಗಿಸುವ ಯೋಜನೆ ಅವರ ಮನಸ್ಸಿನಲ್ಲಿ ಬರುವಾಗ ನನಗೆ ಬಹಳ ಕಷ್ಟವಾಗುತ್ತದೆ ಎಂದು ತನಗೆ ಫೋನ್ ಬಂದ ವಿಚಾರದಿಂದ ಹಿಡಿದು ಎಲ್ಲವನ್ನೂ ಅಮ್ಮನಿಗೆ ಹೇಳಿ, ಅಮ್ಮನ ಮಡಿಲಲ್ಲಿ ಮುಖವಿಟ್ಟು ಗಳ ಗಳ ಅತ್ತಳು. ಅಮ್ಮನಿಗೆ ತುಂಬಾ ನೋವಾಯಿತು. ಭಗವಂತ, ಈ ಮಗುವಿಗೆ ಹೀಗೇಕೆ ಶಿಕ್ಷೆ? ಎಂದು ಮರುಗಿದಳು. ಒಂದು ವಾರ ಅಮ್ಮ ಮಗಳು ಚೆನ್ನಾಗಿ ಯೋಚಿಸಿದರು. ಹೆಂಗಸಿಗೆ ಕಾವಲುಗಾರನಾಗಿಯಾದರೂ ಒಬ್ಬ ಗಂಡ ಬೇಕು. ತಮ್ಮ ಬಂಧುಗಳಲ್ಲಿ ಈ ವಿಚಾರ ತಿಳಿಸಿದರು. ಕೆಲವರು ವಯಸ್ಸಾದ ಗಂಡಸರನ್ನು ತೋರಿಸಿಯೂ ಕೊಟ್ಟರು. ಕೊನೆಗೆ ತನಗಿಂತ 20 ವರ್ಷ ಹೆಚ್ಚಿನ ಒಬ್ಬ ವರ ಕಂಡು ಬಂದ. ಮನಸ್ಸಿಗೆ ಹಿಂಸೆ ಎನಿಸಿದರೂ ತಾನೂ ಓದಿದ ಪುಸ್ತಕದ ವಾಕ್ಯ ನೆನಪಿಗೆ ಬಂತು. ಇಟ್ ಈಸ್ ಬೆಟರ್ ಟು ಬಿ ಏ ಓಲ್ಡ್ ಮ್ಯಾನ್ ಡಾರ್ಲಿಂಗ್, ದ್ಯಾನ್ ಯಂಗ್ ಮ್ಯಾನ್ ಸ್ಲೇವ್ ಎಂದು ಮೊದಲ ಗಂಡನ ಹೊಡೆತದ ನೋವು ಜ್ಞಾಪಿಸಿಕೊಂಡಾಗ, ಇದು ಹಾಗೆ ಇರಲಾರದು. ಇಲ್ಲಿಯಾದರೂ ಹಿಂಸೆ ಇಲ್ಲದೆ ಬದುಕಬಹುದು? ಎಂದು ಕೊಂಡಳು. ವಯಸ್ಸಾದರೂ ರಮೇಶನು ಮೈಕಟ್ಟಿನಿಂದಾಗಿ ಯೌವ್ವನಸ್ಥನಂತೆಯೇ ಕಾಣುತ್ತಿದ್ದ. ಬುಟ್ಟಿ ತುಂಬಾ ಹಣ್ಣು ಹೂ ಸೀರೆ ಇಬ್ಬರಿಗೂ ತಂದು ಕೊಟ್ಟ. ಅಮ್ಮ ವಯಸ್ಸಾದರೇನಂತೆ, ಇನ್ನಾದರೂ ಇವನೊಂದಿಗೆ ಮಗಳು ಸುಖವಾಗಿರಲಿ ಎಂದು ಮನದಲ್ಲೇ ಹಾರೈಸಿದಳು. ಎರಡೂ ಕುಟುಂಬಗಳು ಸೇರಿ ಮದುವೆ ಮಾತುಕತೆ ಮುಗಿಸಿ ರಮೇಶ ಹಾಗೂ ಸೌಮ್ಯಳಿಗೆ ಮಾತನಾಡಲು ಬಿಟ್ಟರು. ಸೌಮ್ಯಳ ಹಿಂದಿನ ಯಾವುದೇ ವಿಚಾರಗಳನ್ನು ರಮೇಶ ಕೆದಕಲಿಲ್ಲ. ಅವನ ಇಬ್ಬರು ತಂಗಿಯರಿಗೆ ಮದುವೆಗೆ ತಡವಾದುದರಿಂದ ತನಗಿನ್ನು ಮದುವೆಯಾಗಲಿಲ್ಲ, ಅಲ್ಲದೆ ತನ್ನ ಬಟ್ಟೆಯ ಎಕ್ಕ್ಸ್‍ಪೋರ್ಟ್ ಕಂಪನಿಯನ್ನು ಮುಂದೆ ತರುವುದರಲ್ಲೆ ತಾನು ಮಗ್ನನಾಗಿದ್ದೆ ಎಂದು ತನ್ನ ಚರಿತ್ರೆಯನ್ನು ರಮೇಶ ಹೇಳಿದ. ಮದುವೆ ಬಹಳ ಸರಳವಾಗಿ ಮಾಡಿಕೊಳ್ಳೋಣ ಎಂದು ಸೌಮ್ಯಳಲ್ಲಿ ಹೇಳಿದ. ಒಳ್ಳೆಯ ಸಂಪಾದನೆಯಿದೆ, ಮನೆ ಇದೆ, ಮನೆಗೆ ಒಡತಿಯಾಗಿ ಇದ್ದರೆ ಸಾಕು. ಶ್ರೀಮಂತಿಕೆಗೆ ತಕ್ಕಂತೆ ಕಾರುಗಳೂ ಇವೆ, ನೀನು ಚೆನ್ನಾಗಿ ಇರಬಹುದು ಎಂದೆಲ್ಲ ಹೇಳಿದಾಗ ಸೌಮ್ಯ ಸರಿ ಎನ್ನಬೇಕಾಯಿತು. ಎಲ್ಲದರಲ್ಲೂ ರಮೇಶ್ ಪರವಾಗಿಲ್ಲ ಎಂದು ಸೌಮ್ಯಳಿಗೆ ಅನಿಸಿತು. ಎರಡು ದಿನ ಬಿಟ್ಟು ರಮೇಶನ ತಂಗಿಯರೂ ಸೌಮ್ಯಳನ್ನು ನೋಡಲು ಬಂದರು. ಇದುವರೆಗೂ ಇದ್ದ ಹಣವೆಲ್ಲ ತಮಗಾಗಿಯೇ ಖರ್ಚು ಮಾಡುತ್ತಿದ್ದ ಅಣ್ಣ, ಮದುವೆಯಾಗುವ ವಿಷಯ ತಂಗಿಯರಿಗೆ ಅಷ್ಟು ಸಂತೋಷ ಕೊಟ್ಟ ಹಾಗೆ ಕಾಣಲಿಲ್ಲ. ಅವರು ಸೌಮ್ಯಳಿಗೆ ನೋವಾಗುವಂತೆ ಒಂದೆರಡು ಮಾತು ಹೇಳಿದರು. ಕೋರ್ಟಿನಲ್ಲಿ ನಿನ್ನ ಮಗನನ್ನು ಬೇಡವೆಂದು ಗಂಡನಿಗೆ ಬಿಟ್ಟಿರುವಂತೆಯಲ್ಲ. ಇರುವ ಕೆಲಸವನ್ನು ಬಿಟ್ಟುಬಂದಿರುವೆಯಂತೆ''. ಹಿಂದಿನ ಜೀವನದ ಕಥೆಗಳನ್ನು ಇವರ್ಯಾಕೆ ತಿರುವುತ್ತಾರೆ? ಎಂದು ಸೌಮ್ಯಳಿಗೆ ಅನ್ನಿಸಿತು. ಆದರೂ ಅವಳು ಮುಗುಳ್ನಗುತ್ತಾ ಅದೆಲ್ಲ ಮುಗಿದ ವಿಷಯ. ಬಿಟ್ಟು ಬಿಡಿ ಅಂದಳು. ಅಣ್ಣ, ತಮ್ಮನ್ನೇ ದುರುಗುಟ್ಟಿ ನೋಡುವುದನ್ನು ತಿಳಿದ ತಂಗಿಯರು ಹೌದು ಇನ್ನು ಹೊಸ ಜೀವನ ಬೇಗ ಶುರು ಮಾಡಿ'' ಎಂದು ಮಾತು ಬದಲಿಸಿದರು. ನಾಲ್ಕನೆಯ ದಿನವೇ ಸಮೀಪದ ದೇವಸ್ಥಾನಕ್ಕೆ ಹೋಗಿ ಮದುವೆಯ ಶಾಸ್ತ್ರ ಮುಗಿಸಿದರು. ಸಂಜೆ ಹೋಟೆಲ್ನಲ್ಲಿ ಕೆಲವೇ ಹಿತೈಷಿಗಳನ್ನು ಊಟಕ್ಕೆ ಕರೆದರು. ಸೌಮ್ಯಳ ವಿವಾಹದ ಎರಡನೆಯ ಜೀವನ ಪ್ರಾರಂಭವಾಯಿತು. ರಮೇಶ ಯಾವಾಗಲೂ ಎಲ್ಲರ ಮುಂದೆ ಸಂಪತ್ತಿನ ವಿಷಯವನ್ನೇ ಮಾತನಾಡುವ ವೈಖರಿಯು ಸೌಮ್ಯಳಿಗೆ ಹೊಸದಾಗಿ ಕಂಡರೂ ಅವನ ಸ್ವಭಾವವೇ ಹಾಗೆ ಅಂದುಕೊಂಡು, ಅದಕ್ಕಾಗಿ ತಲೆ ಕೆಡಿಸಿಕೊಳ್ಳುವುದು ಬೇಡ ಎನಿಸಿತು. ಆಕೆಗೆ ಬೇಕಿದ್ದಿದ್ದು ಪ್ರೀತಿ, ವಾತ್ಸಲ್ಯ, ನಂಬಿಕೆಯ ಜೀವನ ಮಾತ್ರವೇ. ಇದ್ದ ದೊಡ್ಡ ಮನೆ ಒಳ್ಳೆಯ ಕಡೆ ಇತ್ತು. ಒಂಟಿಯಾಗಿದ್ದುದರಿಂದ ಬ್ರಹ್ಮಚಾರಿಗಳ ಮನೆಯಂತೆಯೇ ಇತ್ತು. ಬೆಲೆ ಬಾಳುವ ಟಿ ವಿ, ಅಲಂಕಾರಿಕಾ ವಸ್ತುಗಳು ಎಲ್ಲವೂ ಇದ್ದವು. ಎಲ್ಲವನ್ನು ತೋರಿಸಿದ ರಮೇಶ...ಕೆಲವು ನನ್ನದೆ ಆಯ್ಕೆ ಕೆಲವು ತಂಗಿಯರ ಆಯ್ಕೆ ಎಂದ. ತಂಗಿಯರು ಆಗಾಗ ಬಂದು ಹೋಗುತ್ತಿರುತ್ತಾರೆ ಎಂದ. ಬ್ಯುಸಿನೆಸ್ಗೆ ಸಹಾಯವಾಗಲೆಂದು ಹಲವಾರು ಕ್ಲಬ್ಗಳ ಮೆಂಬರ್ ಆಗಿದ್ದೇನೆ. ಮನೆಯಲ್ಲಿ ಇರಲು ಸಮಯವೇ ಸಿಗುವುದಿಲ್ಲ. ನೀನು ಎಲ್ಲರೊಂದಿಗೆ ಬೆರೆಯಬೇಕೆಂದು ನಗುತ್ತ ಹೇಳಿ, ಶೆಲ್ಪನಲ್ಲಿದ್ದ ಟವಲ್ ತೆಗೆದು ಬಾತ್ ರೂಂಗೆ ಹೋದ. ಸ್ವಲ್ಪ ಹೊತ್ತು ಸೌಮ್ಯ ಒಂದು ತರಹದ ಭ್ರಮೆಯಿಂದ ಕಿಟಿಕಿಯಾಚೆಯ ಹೂದೋಟ ನೋಡುತ್ತಾ ಕುಳಿತಳು. ತನ್ನ ಜೀವನದ ತಿರುವುಗಳನ್ನು ನೆನೆಯುತ್ತಿದ್ದಳು. ಆದರೆ ರಮೇಶನ ಬಗ್ಗೆಯು ಪೂರ್ತಿಯಾಗಿ ತಿಳಿದಿಲ್ಲವಲ್ಲ, ದೇವರು ತೋರಿಸಿದ ದಾರಿಯಲ್ಲಿ ಸಾಗಲಿ ಎಂದು ತಂದ ಸೂಟ್ ಕೇಸ್ ಬಿಚ್ಚಿ ಸೊಪು, ಟವಲ್ ತೆಗೆದು ಕೊಂಡಳು ರಮೇಶ ಹೊರಬರುತ್ತಲೇ ತನ್ನ ಸ್ನಾನವನ್ನು ಮುಗಿಸಿದಳು. ದೇವರಿಗೆ ದೀಪಹಚ್ಚಿ ನಮಿಸಿದಳು. ಹರಡಿರುವ ಸಾಮಾನುಗಳನ್ನು ಸ್ವಲ್ಪ ಮಟ್ಟಿಗೆ ಓರಣವಾಗಿ ಇಟ್ಟಳು. ಅಷ್ಟರಲ್ಲಿ ಅಲ್ಲಿಗೆ ಬಂದ ರಮೇಶ ಏನು ಮಾಡುತ್ತಿರುವೆ ಬೇಗನೆ ರೇಡಿಯಾಗು. ಹೊರಗಡೆ ತಿರುಗಾಡಿ ಬರೋಣ. ನನ್ನ ಬ್ಯುಸಿನೆಸ್ಗೆ ಸಂಬಂಧಿಸಿದ ಕೆಲವರ ಪರಿಚಯ ಮಾಡಿಸುತ್ತ್ತೆನೆ. ಗೋಯಲ್ ಅವರ ಮನೆಗೆ ಕೆಲವು ಜನ ಫ್ರೆಂಡ್ಸ್ ಬರುತ್ತಾರೆ. ಅವರಿಗೆಲ್ಲಾ ನಿನ್ನ ಪರಿಚಯವಾಗಬೇಕು. ಮೊನ್ನೆ ನಾನು ಕೊಟ್ಟ ಡೈಮಂಡ್ ಬಳೆ, ನೆಕ್ಲೆಸ್ ಹಾಕಿಕೊಂಡು ಬಾ'' ಎಂದಾಗ ಸೌಮ್ಯಳಿಗೆ ಆಶ್ಚರ್ಯವಾಯಿತು. ಇಲ್ಲೇ ತಿರುಗಾಡಲು ಒಬ್ಬರ ಮನೆಗೆ ಹೋಗುತ್ತಿರುವಾಗ, ಇಷ್ಟೆಲ್ಲ ಬೆಲೆ ಬಾಳುವ ಒಡವೆ ಬೇಕೇ? ರಮೇಶ ಅಂತಸ್ತಿಗೋಸ್ಕರ ಹೇಳುತ್ತಿರಬಹುದು. ಆದರೆ ಅವಳಿಗೆ ಬೇಕಾದ್ದು ಪ್ರೀತಿಸುವ ಪತಿ, ನೆಮ್ಮದಿಯ ಮನೆ, ಹೆದರಿಕೆ ಇಲ್ಲದ ಜೀವನ. ಇವೆಲ್ಲವೂ ಅವಳಿಗೆ ಸಿಗುವುದಾದರೆ ತಾನು ತನ್ನನ್ನು ಬದಲಾಯಿಸಿಕೊಳ್ಳಲು ಸಿದ್ದಳಿದ್ದಳು. ಆಕೆ ಸುಂದರವಾಗಿ ಅಲಂಕರಿಸಿಕೊಂಡು ಬಂದಳು. ರಮೇಶನಿಗೆ ತುಂಬಾ ಹೆಮ್ಮೆಯೂ, ಖುಷಿಯೂ ಆಯಿತು. ಕಾರಿಗೆ ಹತ್ತಿದ ರಮೇಶ ಹತ್ತು ಸಲ ಪರ್ಫ್ಯೂಮ್ ಹಾಕಿಕೊಂಡದ್ದು ನೋಡಿ ಸೌಮ್ಯಳಿಗೆ ತಮಾಷೆಯಾಗಿ ಕಂಡಿತು. ದಾರಿಯಲ್ಲಿ ಹೂಬುಟ್ಟಿ ತೆಗೆದುಕೊಂಡನು. ಎರಡೇ ತಿರುವಿನಲ್ಲಿ ಹೋಗಿ ಮನೆ ತಲುಪಿದಾಗ. ಇಷ್ಟು ಸಮೀಪದ ಮನೆಗೆ ಹೋಗಲು ಇಷ್ಟೊಂದು ಸಡಗರ ಬೇಕೆ? ಎಂದು ಸೌಮ್ಯಳಿಗೆ ಅನಿಸಿತು. ಕಾರಿನಿಂದ ಇಳಿಯುತ್ತಲೇ ಆ ಮನೆಯ ಯಜಮಾನ, ಯಜಮಾನತಿ ಆಪ್ತರಂತೆ ಬಂದು ಒಳಗೆ ಕರೆದೊಯ್ದರು. ಇವರಂತೆಯೇ ಬಂದ ಅತಿಥಿಗಳು ಆಗಲೇ ಸೇರಿದ್ದರು. ಬಂದವರೆಲ್ಲ ಪಾನೀಯದ ಹೊಳೆ ಹರಿಸಿದರು. ವಿಧ ವಿಧದ ತಿನಿಸುಗಳು ಬರುತ್ತಿದ್ದವು. ಎಲ್ಲರೂ ನಕ್ಕು ಮಾತನಾಡುತ್ತಿದ್ದ ರೀತಿ ಇವೆಲ್ಲವೂ ಹೊಸದಲ್ಲದ್ದಿದ್ದರೂ ತಾನಿಲ್ಲಿ ಪರಕೀಯಳು ಎಂಬ ಭಾವನೆ ಸೌಮ್ಯಳಿಗೆ ಬಂದಾಗ, ಮನೆಯೊಡತಿ ಗೌರಿ ಆತ್ಮೀಯದಿಂದ ಮಾತನಾಡಿಸಿದಳು. ಅವಳು ಹೆಸರಿಗೆ ತಕ್ಕಂತೆ ಇದ್ದಳಲ್ಲದೆ, ತಾಯ್ತನದ ಭಾವನೆ ಅವಳಲ್ಲಿ ಕಾಣುತ್ತಿತ್ತು. ಗೌರಿ ರಮೇಶ ತುಂಬಾ ಒಳ್ಳೇಯವನು. ಯಾರು ಏನು ಕೇಳಿದರೂ ಇಲ್ಲ ಎನ್ನುವ ಸ್ವಭಾವವೇ ಇಲ್ಲದವನು, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಸಮಾಧಾನ ಪಡಿಸುವ ರೀತಿಯಲ್ಲಿ ಹೇಳಿದಳು. ಸೌಮ್ಯಳು ಹಾಕಿದ ವಜ್ರದ ಸೆಟ್ ತನ್ನ ತಮ್ಮನ ಅಂಗಡಿಯಿಂದ ಖರೀದಿಸಿದ್ದಾಗಿ ಹೇಳಿದಳು. ರಮೇಶನು ಗೆಳೆಯರೊಂದಿಗೆ ಹೊರಗೆ ಬಂದನು. ಅವರಲ್ಲೊಬ್ಬ ನಿನಗೆ ಸುಂದರಳಾದ ಮಡದಿ ಸಿಕ್ಕಳು, ಮಗಳಂತೆ ಕಾಣುತ್ತಿದ್ದಾಳೆ. ಲೈಫ್ನ್ನು ಎಂಜಾಯ್ ಮಾಡು ಅನ್ನುತ್ತಾ ಹೊರಟ. ಮನೆಗೆ ಬರುವಾಗ ರಮೇಶ ಮೌನವಾಗಿಯೇ ಇದ್ದ. ಒಳಗೆ ಬರುತ್ತಲೆ ಸೌಮ್ಯ ಒಡವೆಗಳನ್ನೆಲ್ಲ ಕಳಚಿಟ್ಟು ನಿದ್ದೆ ಹೋಗಬೇಕೆಂದುಕೊಂಡಳು. ಅಷ್ಟರಲ್ಲಿ ರಮೇಶ ಕರೆದಂತೆ ಆದಾಗ ಸೌಮ್ಯ ತನ್ನ ಗಂಡ ಡೈನಿಂಗ್ ಟೇಬಲ್ನಲ್ಲಿ ಕುಳಿತಿರುವುದನ್ನು ಕಂಡು ಅಲ್ಲಿಗೆ ಬಂದಳು. ಆಗ ಅವನು ತನ್ನ ಫ್ರೆಂಡ್ಗಳ ಬಗ್ಗೆ ಸ್ವಲ್ಪ ಹುಷಾರಾಗಿರುವಂತೆ ಹೇಳಿದ. ಅವರೆದುರಿಗೆ ಹೆಚ್ಚಿನ ಶೃಂಗಾರ ಮಾಡುವುದು ಬೇಡ, ಸ್ವಲ್ಪ ವಯಸ್ಸಿನವರ ಹಾಗೆ ಮೇಕಪ್ ಮಾಡು, ಹೀಗೆಲ್ಲ ಹೇಳುತ್ತೇನೆಂದು ಬೇಸರ ಪಡಬೇಡ ಎಂದು ಹೇಳಿ ಸರ ಸರನೇ ಹೋಗಿ ರೂಂ ಬಾಗಿಲು ಹಾಕಿಕೊಂಡಾಗ ಇವಳಿಗೆ ಗಾಬರಿಯಾದರೂ ತೋರಿಸಿಕೊಳ್ಳದೆ, ಉಲ್ಲಸಿತಳಾಗಿಯೇ ಇದ್ದಳು ಹಾಗೂ ತಾನೂ ದೀಪ ಆರಿಸಿ ಮಲಗಿದಳು. ಬೆಳಿಗ್ಗೆ ಎದ್ದು ನೋಡುವಾಗ ಹಾಸಿಗೆಯ ಮೇಲೆ ಒಂದು ಹೂ ಮತ್ತು ಚೀಟಿ ಇತ್ತು. ಅದರಲ್ಲಿ ರಮೇಶ ತನ್ನ ಕೆಲಸದ ನಿಮಿತ್ತ ಬೇಗನೇ ಮನೆ ಬಿಟ್ಟಿರುವುದಾಗಿ, ಕಾರು ತೆಗೆದುಕೊಂಡು ಹೋಗಿ ಸೌಮ್ಯಳಿಗೆ ಶಾಪಿಂಗ್ ಮಾಡಲು ತಿಳಿಸಿದ್ದ ಹಾಗೂ ಡ್ರಾನಲ್ಲಿರುವ ಹಣದಲ್ಲಿ ತನಗೆ ಬೇಕಾದಷ್ಟನ್ನು ತೆಗೆದು ಬೇಕಾದಲ್ಲಿಗೆ ಹೋಗಿ ಶಾಪಿಂಗ್ ಮಾಡಿ ಮನೆಗೆ ಅಗತ್ಯವಿರುವ ಸಾಮಾನುಗಳನ್ನು ಕೊಂಡುಕೊಳ್ಳಲು ಬರೆದಿದ್ದ. ಆದರೆ ಸೌಮ್ಯಳಿಗೆ ಈ ರೀತಿ ಬರೆದದ್ದು ನೋಡಿ ಆಶ್ಚರ್ಯವಾಯಿತು. ಆಕೆ ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿ ಡ್ರೈವರ್ನನ್ನು ಕರೆದುಕೊಂಡು ಹೋಗಿ ಮನೆಯನ್ನು ಅಲಂಕರಿಸಲು ಬೇಕಾದ ವಸ್ತುಗಳನ್ನು ದೊಡ್ಡ ದೊಡ್ಡ ಮಾಲ್ಗಳಿಗೆ ಹೋಗದೆ ಸೇಲ್ನಲ್ಲಿ ಖರೀದಿಸಿದಳು. ಇದು ರಮೇಶನಿಗೆ ಸರಿ ಬರಲಿಲ್ಲ. ತಮ್ಮ ಅಂತಸ್ತಿಗೆ ಇದೆಲ್ಲ ಸರಿಯಲ್ಲ. ಅದನ್ನು ದೀಪಾವಳಿಗೆ ಯಾರಿಗಾದರೂ ಉಡುಗೊರೆಯಾಗಿ ಕೊಟ್ಟರಾಯಿತು. ನಾವಂತೂ ಎಕ್ಸಪೆನ್ಸಿವ್ ಸಾಮಾನು ಮಾತ್ರವೇ ಖರಿದಿಸಬೇಕು ಎಂದನು. ಸೌಮ್ಯಳಿಗೆ ಅವನ ಮನಸ್ಸು ಅರ್ಥವಾಯಿತು ಜನ ಮೆಚ್ಚಬೇಕು, ಆಡಂಬರದ ಜೀವನ ನಡೆಸಬೇಕು. ಇವನನ್ನು ಯಾವ ರೀತಿ ಸರಿಪಡಿಸಲಿ? ಭವಿಷ್ಯದ ಬಗ್ಗೆ ಚಿಂತಿಸಿದಳು, ಫೋನ್ ಹೊಡಕೊಂಡಿತು. ''ಹಲೊ ಎಂದಾಗ ಅಣ್ಣ ಎಲ್ಲಿ? ಸ್ವಲ್ಪ ಕರಿ'' ಗಡುಸಾದ ದನಿ ರಮೇಶನ ತಂಗಿಯದ್ದಿರಬೇಕು. ಏನು, ಹೇಗಿದ್ದೀರಾ ? ಚೆನ್ನಾಗಿದ್ದಿರಾ?'' ಒಂದು ಮಾತನ್ನಾದರೂ ಕೇಳಲಿಲ್ಲ. ಅಣ್ಣ ತಂಗಿಯ ಸಂಭಾಷಣೆಯಿಂದ ಸೌಮ್ಯಳಿಗೆ ತಿಳಿಯಿತು. ತಿಂಗಳು ತಿಂಗಳು ತಂಗಿಯರ ಖರ್ಚಿಗೆ ಅಣ್ಣನೇ ಕೊಡುತ್ತಾನೆ. ಮೊದಲಿನಂತೆಯೇ ನೀವು ಯಾವಾಗ ಬೇಕಾದರೂ ಬಂದು ಹೋಗುತ್ತೀರಿ, ಮದುವೆಯಾದರೂ ನಾನೇನು ಸ್ವಾತಂತ್ರ್ಯ ಕಳೆದುಕೊಂಡಿಲ್ಲ ಎಂದ ಅಣ್ಣ. ಫೋನ್ ಇಡುತ್ತಲೇ ರಮೇಶನನ್ನು ಸೌಮ್ಯ ಊಟಕ್ಕೆ ಕರೆದಳು. ಬಡಿಸಲು ಹೋದಾಗ, ನನಗಿದೆಲ್ಲ ಬೇಕಾಗಿಲ್ಲ, ನಾನೇ ಬಡಿಸಿಕೊಳ್ಳುತ್ತೇನೆ. ನೀನು ಬಡಿಸಿಕೊಂಡು ಊಟ ಮಾಡು'' ಎಂದ. ಒಮ್ಮೆಗೆ ಸೌಮ್ಯಳಿಗೆ ಭಯವಾಯಿತು. ಹಿಂದಿನ ಜೀವನ ಮರುಕಳಿಸಬಹುದೆ? ಮೌನವಾಗಿ ಇಬ್ಬರೂ ಊಟ ಮಾಡಿದರು. ಅಮ್ಮನನ್ನು ನೋಡಿ ಬರಬೇಕೆಂದು ಸೌಮ್ಯಳಿಗೆ ಅನ್ನಿಸಿತು. ವ್ಯಾಯಾಮ ಮಾಡುತ್ತಲಿದ್ದ ರಮೇಶನಲ್ಲಿ ಕೇಳಿಕೊಂಡಾಗ ನೀನು ಒಬ್ಬಳೇ ಹೋಗಬೇಡ ನಾನೂ ಬರುತ್ತೇನೆ, ನನ್ನ ಕೆಲಸ ನಾಳೆ ಮಾಡಿದರಾಯಿತು'' ಎಂದ. ಅವನೇ ಸೆಲೆಕ್ಟ್ ಮಾಡಿದ ಡ್ರೆಸ್ ಹಾಕಿದಳು. ದಾರಿಯಲ್ಲಿ ಅಮ್ಮನಿಗಾಗಿ ಬ್ಯಾಗ್ ತುಂಬಾ ಸಾಮಾನು ತೆಗೆದ. ಮೊದಲಿಗೆ ಅತ್ತೆ ಮನೆಗೆ ಬರಿಗೈಯಲ್ಲಿ ಹೋಗಬಾರದು ನನ್ನ ಹೆಂಡತಿಯ ಅಮ್ಮನಲ್ಲವೆ ಎಂದು ನಕ್ಕ, ಅಮ್ಮನಿಗೆ ತುಂಬಾ ಸಂತೊಷವಾಯಿತು. ಒಳ್ಳೆಯವನೇ ಅಳಿಯನಾಗಿ ಸಿಕ್ಕಿದ್ದ. ಹೊರಟು ನಿಂತಾಗ ಅಮ್ಮ ತುಂಬು ಹೃದಯದಿಂದ ಬೀಳ್ಕೊಟ್ಟಳು. ರಮೇಶನಿಗೆ ತನ್ನ ಬಿಜಿನೆಸ್ಗಾಗಿ ಹೊರದೇಶಕ್ಕೆ ಹೋಗಬೇಕಾಗಿತ್ತು. ಸೌಮ್ಯಳನ್ನು ಕರೆದೊಯ್ಯಬೇಕೆಂದು ಕೊಂಡ. ಆದರೆ ಅವಳ ಪಾಸ್ಪೋರ್ಟ್ ಸರಿಯಿರಲಿಲ್ಲ. ಅದಕ್ಕಾಗಿ ಅವಳಿಗೆ ಹೋಗಲಾಗಲಿಲ್ಲ. ಅಷ್ಟು ದಿನವು ಅಮ್ಮನನ್ನು ಇವಳೊಂದಿಗೆ ಇರುವಂತೆ ಹೇಳಿದ. ಮನೆಯ ಸಮೀಪದವರಲ್ಲೂ ಸಹಕರಿಸುವಂತೆ ಹೇಳಿದ, ತನ್ನಲ್ಲಿ ಇಷ್ಟು ಪ್ರೀತಿ ಇದೆಯಲ್ಲಾ ಎಂದು ಸೌಮ್ಯಳಿಗೆ ಸಮಾಧಾನವಾಯಿತು. ರಮೇಶ ಹೋದ ಎರಡನೆ ದಿನ ಅವನ ಇಬ್ಬರೂ ತಂಗಿಯರು ಮನೆಗೆ ಬಂದರು. ಅಣ್ಣ ಬರುವವರೆಗೂ ತಾವು ಇರುವುದಾಗಿ ಹೇಳಿದರು. ಅಮ್ಮನೊಂದಿಗೆ, ಇವರೊಂದಿಗೆ ಹೇಗಾಗುವುದೋ ಎಂದು ಸೌಮ್ಯಳಿಗೆ ಮುಜುಗರವಾಯಿತು. ಬೇಸರವಾಗದ ಹಾಗೆ ನೋಡಿಕೊಳ್ಳಬೇಕು ಎಂದು ನಿಶ್ಚಯಿಸಿದಳು. ಸಮೀಪದ ಬಂಧುಗಳ ಒಬ್ಬರ ಮದುವೆಗೆ ಅಮ್ಮ ಹೋಗಬೇಕಿತ್ತು ಕಾರು ಡೈವರ್ ಇಲ್ಲದುದರಿಂದ ಟ್ಯಾಕ್ಸಿ ಮಾಡಿ ಅಮ್ಮನನ್ನು ಕಳುಹಿಸಿದಳು. ರಮೇಶನ ತಂಗಿಯರು ಅಣ್ಣನ ಹಣವನ್ನು ಅನಾವಶ್ಯಕ ಮುಗಿಸುತ್ತಾಳೆ ಎಂದು ಸೌಮ್ಯಳಿಗೆ ಕೇಳುವಂತೆ ಹೇಳುತ್ತಲಿದ್ದರೂ, ತನ್ನ ಅಮ್ಮ ಚೆನ್ನಾಗಿ ಬದುಕಿದವಳು. ಅವಳಿಗೆ ತನ್ನದೇ ಆದ ಹಣವಿದೆ ಟ್ಯಾಕ್ಸಿಗೆ ಕೊಡುವಷ್ಟು ಹಣವಿಲ್ಲದವಳಲ್ಲ, ಎಂದು ಸ್ವಲ್ಪ ಖಾರವಾಗಿ ಹೇಳಿದಳು. ಇಬ್ಬರ ಮುಖವು ಸಪ್ಪಗೆ ಆಯಿತು. ಅಂದೇ ಅವರು ಹಿಂತಿರುಗಿ ಹೊಗುತ್ತೇವೆ ಅಂದಾಗ ಸೌಮ್ಯ ಬೇಡ ಅನ್ನಲಿಲ್ಲ. ಮದುವೆಯಿಂದ ಅಮ್ಮ ವಾಪಸಾದಾಗ ನಾದಿನಿಯರು ಮನೆಯಲ್ಲಿ ಇರಲಿಲ್ಲ. ಕಾರಣ ಅವಳಾಗಿ ಕೇಳಲಿಲ್ಲ. ಇವಳಾಗಿ ಹೇಳಲಿಲ್ಲ. ಇಬ್ಬರೂ ಆರಾಮವಾಗಿ ಬೇಕಾದಷ್ಟು ಸುತ್ತಿದರು, ತಿಂದರು, ಖುಷಿಪಟ್ಟರು, ಇಷ್ಟು ವರ್ಷ ಸಿಕ್ಕದ ಉಪಚಾರ ಈಗ ಸಿಕ್ಕಾಗ ಅಮ್ಮನಿಗೆ ಮಗಳ ಜೀವನ ಸುಖಕರವಾಯಿತು ಎಂದು ಸಂತೋಷವಾಯಿತು. ಇನ್ನು ಎರಡು ದಿನಗಳಲ್ಲಿ ರಮೇಶ ಬರುವುದಾಗಿ ಫೋನ್ ಬಂತು. ಫ್ಯಾಕ್ಟರಿಗಳಲ್ಲಿ ಮಾಡಿ ಮುಗಿಸಲು ರಮೇಶ ಹೇಳಿದ ಕೆಲಸಗಳನ್ನು ಮಾಡಿ ಮುಗಿಸಿದ್ದಳು. ವಾಪಸ್ಸು ಬಂದ ರಮೇಶ ತುಂಬಾ ಟೆನ್ಷನ್ನಲ್ಲಿ ಇದ್ದ ಹಾಗೆ ಕಂಡಿತು. ಕಾರಣ ಕೇಳಬೇಕೆಂದು ಕೊಂಡರೂ ಬಾಯಿ ಬಿಡಲಿಲ್ಲ. ಬರಬೇಕಾಗಿದ್ದ ಆರ್ಡರ್ ಕ್ಯಾನ್ಸಲ್ ಆಗಿತ್ತು, ಕಳುಹಿಸಿದ ಬಟ್ಟೆಗಳು ಕೂಡ ವಾಪಸ್ಸು ಬಂದಿತ್ತು. ಇದುವೇ ರಮೇಶನ ಟೆನ್ಷನ್ಗೆ ಕಾರಣ. ತಂಗಿಯರ ಫೋನ್ಗಳಿಗೂ ಸರಿಯಾಗಿ ಉತ್ತರಿಸಲಿಲ್ಲ, ಆದರೂ ಸೌಮ್ಯ ಮೌನಳಾಗಿಯೇ ಇದ್ದಳು. ತನ್ನೊಂದಿಗೆ ಮೊದಲು ಕೆಲಸಮಾಡುತ್ತಿದ್ದ ಲಕ್ಷ್ಮಿಯ ಫೋನ್ ಬಂತು ಮದುವೆಗೆ ಮೊದಲು ಉಪ್ಪಿನ ಕಾಯಿಯ ಫ್ಯಾಕ್ಟರಿ ಮಾಡಬೇಕೆಂದುಕೊಂಡ ಪ್ರಾಜೆಕ್ಟ್, ಈವಾಗ ಸ್ಯಾಂಕ್ಷನ್ ಆಗಿದೆ ಏನು ಮಾಡೋಣ? ಎಂದು ಕೇಳಿದಾಗ ಎರಡು ದಿನದ ಟೈಂ ಕೊಡಮ್ಮ'' ಎಂದು ಫೋನ್ ಇಟ್ಟುಬಿಟ್ಟಳು. ಮುಂದಿನ ವಾರ ಲಕ್ಷ್ಮಿಯ ಭೇಟಿಗೆ ಹೋದಳು. ಅವಳು ಬರುವ ಮೊದಲೇ ರಮೇಶ ಮನೆಗೆ ಬಂದಿದ್ದನು. ಏನು? ಎಲ್ಲಿಗೆ? ಯಾಕೆ? ಹೋದೆ'' ಎಂದೆಲ್ಲ ವಿಚಾರಣೆ ಮಾಡಿದ. ತನ್ನ ಸಹೋದರಿಯರು ಯಾಕೆ ಹೋದರು? ಇರಲು ನೀನ್ಯಾಕೆ ಹೇಳಿಲ್ಲ? ಎಂದ ಮುಖದಲ್ಲಿ ಅಸಮಾಧಾನ ಕಾಣುತ್ತಿತ್ತು. ನೀನು ನನಗೆ ಹೊಸಬಳು, ಅವರು ನನ್ನ ಒಡಹುಟ್ಟಿದವರು. ಅವರಿಗೆ ಬೇಜಾರಾದರೆ ನನಗೆ ಸಹಿಸಲಾಗದು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು'' ಎಂದು ಹೇಳುತ್ತಾ ಮನೆಯಿಂದ ಹೊರಟೇ ಬಿಟ್ಟ. ಇನ್ನು ಇವಳ ಪ್ರಾಜೆಕ್ಟ್ ಬಗ್ಗೆ ಹೇಳಲು ಸಮಯವೇ ಬಂದಿಲ್ಲ. ಮರುದಿನ ರಮೇಶ ಮನೆಯಲ್ಲಿರುವ ಸಮಯ ನೋಡಿ ಲಕ್ಷ್ಮಿಯನ್ನು ಬರಹೇಳಿದಳು. ಪರಸ್ಪರ ಪರಿಚಯ ಮಾಡಿಸಿದಳು. ಅವಳೊಂದಿಗೆ ಚೆನ್ನಾಗಿಯೇ ಮಾತನಾಡಿದ. ಪ್ರಾಜೆಕ್ಟ್, ಬ್ಯಾಂಕ್ಲೋನ್ ಎಲ್ಲವುಗಳ ಬಗ್ಗೆ ಚರ್ಚಿಸಿದರು, ಫುಲ್ ಸಪೋರ್ಟ್ ಮಾಡುವುದಾಗಿಯೂ ಹೇಳಿದ. ರಮೇಶ ಸ್ನಾನ ಮಾಡುತ್ತಿರುವ ಸಮಯ ನೋಡಿ ಸೌಮ್ಯ ಮೆಲ್ಲನೆ ಮನೆಯಿಂದ ಹೊರಬಿದ್ದಳು. ಕೆಲಸದವಳಲ್ಲಿ ತಾನು ಹೊರಹೋಗುತ್ತಿರುವುದಾಗಿ ಮಾತ್ರ ಹೇಳಿದಳು. ಮೊಬೈಲನ್ನು ಮನೆಯಲ್ಲಿಯೇ ಬಿಟ್ಟಳು. ಹೊರಟವಳು ಸೀದಾ ಲಕ್ಷ್ಮಿಯ ಮನೆಗೆ ಬಂದು ಕುಳಿತು ಬಿಟ್ಟಳು. ಸ್ವಲ್ಪ ಹೊತ್ತು ಯಾವುದೇ ಹಂಗಿಲ್ಲದೆ ಮೌನವಾಗಿ ಇರಬೇಕೆನ್ನಿಸಿತು. ಸುಮ್ಮನೆ ಕುಳಿತ ಗೆಳತಿಯನ್ನು ನೋಡಿದ ಲಕ್ಷ್ಮಿ ಸಂತೋಷದಿಂದ ಏನಮ್ಮಾ ಮದುವೆ ಆಗಿ ತಿಂಗಳುರುಳಿದರೂ ಇನ್ನೂ ಹನಿಮೂನ್ಗೆ ಹೋಗಿಲ್ಲವೆ? ಎಂದು ಸ್ನೇಹದಿಂದ ಚುಡಾಯಿಸಿದಳು. ಏನು ಹೇಳಬೇಕೆಂದರಿಯದೆ ಸೌಮ್ಯ ಅವಳನ್ನು ಗಟ್ಟಿಯಾಗಿ ಹಿಡಿದು ಗಳ ಗಳನೆ ಅತ್ತೇ ಬಿಟ್ಟಳು. ನನಗೆ ನಿನ್ನ ಸಲಹೆ ಬೇಕು'' ಮದುವೆಯಾದ ಈಗಿನ ಗಂಡನ ಬಗ್ಗೆ ಇರುವ ಇನ್ನೊಂದು ಮುಖದ ವಿಸ್ತಾರ ಕಥೆಯನ್ನು ಹೇಳಿದಳು. ಬಿಸಿಯ ಕಬ್ಬಿಣದ ಪಾತ್ರೆಯಿಂದ ಉರಿಯುವ ಕೆಂಡದ ಹೊಂಡದಲ್ಲಿ ಬಿದ್ದಿರುವೆ, ನಂಬಲೇ ಆಗದ ಎರಡು ವ್ಯಕ್ತಿತ್ವದ ಮನುಷ್ಯ ರಮೇಶ! ಒಂದಂತೂ ನಿಜ ಸೌಮ್ಯ, ಇದು ನಿನ್ನ ಪೂರ್ವಜನ್ಮದ ವಿಧಿ. ಹಾಗಾಗಿ ಹುಷಾರಾಗಿ ನಿನ್ನ ಜೀವನವನ್ನು ನೀನೇ ರೂಪಿಸಿಕೊ, ಅಮ್ಮನಿಗೆ ಈ ವಿಷಯವಾಗಿ ಏನೂ ತಿಳಿಸದಿರು. ನಿನ್ನ ಜೀವನ ಈ ರೀತಿ ಆಗಿದೆ ಏಂದು ತಿಳಿದರೆ ಅಮ್ಮನನ್ನು ನೀನು ಕಳೆದುಕೊಳ್ಳಬೇಕಾಗಬಹುದು. ನಮ್ಮ ಬಿಸ್ನೆಸ್ಸಿಗೆ ರಮೇಶನಿಂದ ಓಕೆ ಸಿಕ್ಕಿದೆಯಲ್ಲಾ ಅದನ್ನು ನಾವು ಮುಂದುವರಿಸಿ ಬೆಳೆಸೋಣ ನಾನು ಸದಾ ನಿನ್ನೊಂದಿಗೇ ಇರುತ್ತೇನೆ ಎಂದಳು. ಅವನ ಆರ್ಥಿಕ ಪರಿಸ್ಥಿತಿ ನೀನು ತಿಳಿದುಕೊಂಡಿದ್ದಿ ಎಂದು ಅವನಿಗೆ ಗೊತ್ತಾಗದಂತೆ ಜಾಗ್ರತೆವಹಿಸು. ಅವನಿಂದ ಯಾವ ಕಾರಣಕ್ಕೂ ದೂರವಾಗದಿರು, ನಿನ್ನ ಸಮಾಜದ ಬಂಧುಗಳೆಲ್ಲ ನಿನ್ನನ್ನು ಇನ್ನು ದೂರಮಾಡುವರು'' ಎಂದೆಲ್ಲ ಹೇಳಿ ಸಾಂತ್ವನಗೊಳಿಸಿದಳು. ದೇವರಂತೆ ಬಂದು ಲಕ್ಷ್ಮಿ ತನಗೆ ಬುದ್ದಿ ಹೇಳಿದಳು. ಸೌಮ್ಯ ತನ್ನ ಮನಸ್ಸನ್ನು ಸ್ಥಿಮಿತಕ್ಕೆ ತರುವ ಪ್ರಯತ್ನ ಮಾಡಿದಳು. ಇನ್ನು ಪ್ಯಾಕ್ಟರಿಯೊಂದೇ ಅವಳ ಜೀವನದ ಧ್ಯೇಯವಾಗಿತ್ತು, ಮೆಲ್ಲನೆ ಮನೆ ಕಡೆ ಹೊರಟಳು. ಬೇಕೆಂದಾಗ ಭೇಟಿಯಾಗಲು ಬರುವೆನೆಂದು ಹೇಳಿದಳು. ಢಬ ಢಬನೆ ಎದೆ ಹೊಡೆದು ಕೊಳ್ಳುತ್ತಿತ್ತು. ಮೆಲ್ಲನೆ ಮನೆಯೊಳಗೆ ಕಾಲಿಟ್ಟಳು. ಹೇ ಸೌಮ್ಯ ಎಲ್ಲಿಗೆ ಹೋಗಿ ಬಿಟ್ಟೆ? ಕಾರು ಮನೆಯಲ್ಲಿಯೇ ಇದೆ. ಮೊಬೈಲ್ ಬಿಟ್ಟು ಹೋಗಿದ್ದಿ. ಗಾಬರಿಯಾಗಿ ಬಿಟ್ಟೆ. ಏನೊಂದು ಮಾಡಲಾಗದೆ ಮನೆಯಲ್ಲಿಯೇ ಕುಳಿತು ಬಿಟ್ಟೆ'' ಪ್ರೀತಿಯಿಂದ ಬಡಬಡಿಸಿದ. ಸಾರಿ ಡಿಯರ್ ಹಾಗೆ ಹೇಳದೆ ಹೋಗಬಾರದಿತ್ತು ಸಮಿಪಕ್ಕೆ ಬಂದು ಸಮಾಧಾನಿಸುವಂತೆ ಹೇಳಿದಳು. ಫೋನ್ ಮಾಡಿ ಐಸ್ ಕ್ರಿಮ್ ತರಿಸಿದಳು. ಸಾಯಂಕಾಲ ಹೊರಗೆ ತಿರುಗಾಡಿ ಬರೋಣ ಎಂದು ಹೇಳಿದಳು. ಲಕ್ಷ್ಮಿಯ ಉಪದೇಶದಂತೆ ಚೆನ್ನಾಗಿ ನಾಟಕವಾಡಿದಳು. ಪ್ರಾಜೆಕ್ಟನ ಬಗ್ಗೆ ಡಿಸ್ಕಸ್ ಮಾಡುವುದಕ್ಕೋಸ್ಕರ ಲಕ್ಷ್ಮಿಯ ಮನೆಗೆ ಹೋಗಿದ್ದಾಗಿ ಹೇಳಿದಳು. ಮಾರನೆಯ ದಿನದಿಂದ ಪ್ಯಾಕ್ಟರಿಯ ವಿಷಯದಲ್ಲಿ ಬಿಡುವಿಲ್ಲದೆ ಓಡಾಡಿದಳು. ಪ್ರಾರಂಭವಾಗುತ್ತಲೇ ಬೇಕಾದಷ್ಟು ಆರ್ಡರ್ಗಳು ಸಿಕ್ಕಿದ್ದವು. ಹೊರದೇಶಗಳಿಗೂ ಕಳುಹಿಸುವ ಆರ್ಡರ್ ಬಂತು. ತನ್ನ ಕೆಲಸದಲ್ಲಿ ತಲ್ಲಿನಳಾದುದರಿಂದ ರಮೇಶನ ಬಗ್ಗೆ ಸ್ವಲ್ಪಮಟ್ಟಿಗೆ ಮರೆತಳು. ರಮೇಶನ ನಡತೆ ದಿನದಿನಕ್ಕೂ ಬದಲಾಗುತ್ತಿತ್ತು. ಯಾವ ರೀತಿ ನಿಭಾಯಿಸಬೇಕೆಂದು ತಿಳಿಯುತ್ತಿರಲಿಲ್ಲ. ತಂಗಿಯರಿಗೆ ಫೋನ್ ಮಾಡಿ ಬರಲು ಹೇಳಿದಳು. ದಿನಕಳೆದಂತೆ ತಿಳಿಯಿತು, ಇವನಿಗೆ ಮೆಂಟಲ್ ಡಿಸಾರ್ಡರ್ ಇದೆ, ಮೆಡಿಸನ್ ತೆಗೆದುಕೊಳ್ಳುತ್ತಿದ್ದಾನೆ ಎಂದು. ಇದು ತಿಳಿದು ಸೌಮ್ಯಳಿಗೆ ತಾನು ನಿಂತ ನೆಲವೇ ಕುಸಿದಂತಾಯಿತು, ಆದರೂ ಯಾರಿಗೂ ಏನು ತೊರಿಸಿಕೊಳ್ಳಲಿಲ್ಲ. ರಮೇಶನ ತಂಗಿಯರೇ ಅವನನ್ನು ನೋಡಿಕೊಳ್ಳುತ್ತಿದ್ದರು. ಸೌಮ್ಯ, ರಮೇಶನಿಗೆ ಹೇಳದೆ ಅಮ್ಮನನ್ನು ನೋಡಲು ಹೋಗಿ ಬಂದಳು. ಅಮ್ಮ ನೀನು ಚೆನ್ನಾಗಿದೀಯಾ ಮಗಳೇ?'' ಎಂದಾಗ ಚೆನ್ನಾಗಿದ್ದೀನಮ್ಮಾ ಎಂದಳು. ಎಲ್ಲವನ್ನು ಸುಳ್ಳಿನ ಹೊದಿಕೆಯಲ್ಲಿ ಮುಚ್ಚಿಟ್ಟಳು. ಎಷ್ಟು ದಿನಾ ಎಂದು ಮುಚ್ಚಿಡಲಿ ಎಂದು ಅನ್ನಿಸುತ್ತಿತ್ತು. ಹೇಗೋ ದಿನ ಕಳೆಯುತ್ತಿತ್ತು. ರಮೇಶನಿಗೆ ಇಷ್ಟವಾದ ಅಡುಗೆಯನ್ನು ಮಾಡಲು ಹೇಳಿದಳು. ಊಟದ ಸಮಯದಲ್ಲಿ ನಿನ್ನ ಪ್ರಾಜೆಕ್ಟ್ ಹೇಗೆ ನಡೆಯುತ್ತಾ ಇದೆ? ನಿನ್ನ ಗೆಳತಿ ಲಕ್ಷ್ಮಿ ತುಂಬಾ ಒಳ್ಳೆಯವಳು. ಒಳ್ಳೆಯ ಜೊತೆಗಾತಿಯನ್ನು ಸೆಲೆಕ್ಟ ಮಾಡಿದ್ದಿ ಎಂದು ಚೆನ್ನಾಗಿ ಊಟ ಮಾಡಿ ಮುಗಿಸಿದ. ತಂಗಿಯರನ್ನು ಕರೆದುಕೊಂಡು ಊರಿಗೆ ಹೊರಟ ಕಾರಿನ ತುಂಬಾ ಸಾಮಾನುಗಳನ್ನು ತುಂಬಿಸಿದ್ದ. ತಂಗಿಯರಲ್ಲಿ ಎಷ್ಟೊಂದು ಪ್ರೀತಿ ಈ ರಮೇಶನಿಗೆ? ತಿಂಗಳುಗಳ ಹಿಂದೆ ಮನೆಯನ್ನು ಚೊಕ್ಕಟ ಮಾಡಲು ಹೊರಟಿದ್ದ ಸೌಮ್ಯಳಿಗೆ ರಮೇಶನ ಅಲ್ಮೇರವನ್ನು ನೋಡುವ ಪ್ರಸಂಗ ಬಂದಿತ್ತು. ಫೈಲ್ಗಳನ್ನು ತೆಗೆದು ನೊಡಿದಾಗ ಅದರಲ್ಲಿ ರಮೇಶ ಬ್ಯಾಂಕಿಗೆ ಕೊಡಬೇಕಾಗಿರುವ ಸಾಲ ವಹಿವಾಟುಗಳನ್ನು ಗಮನಿಸಿದಳು. ಮೌಲ್ಯಗಳನ್ನೆಲ್ಲ ಲೆಕ್ಕಹಾಕಿದಾಗ ಸೌಮ್ಯ ಅವಾಕ್ಕಾದಳು. ಕಂಗಾಲಾಗಿ ಒಮ್ಮೆಗೆ ಉಸಿರಾಟ ನಿಂತಂತೆ ಆಯಿತು. ಹೊರದೇಶದ ಆರ್ಡರ್ ಸಿಗುವುದೆಂದು ಮುಂದಾಗಿ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದ. ಪೇಪರ್ಗಳನ್ನು ಗಮನಿಸಿದಾಗ ಇದರಲ್ಲಿ ಇನ್ನು ಯಾರೆಲ್ಲ ಸಿಕ್ಕಿಹಾಕಿಕೊಂಡಿರುವರೊ ಅನ್ನಿಸಿತ್ತು. ಆಕೌಂಟ್ನ ಬಗ್ಗೆ ಎಲ್ಲ ತಿಳಿದಿದ್ದರಿಂದ ಎಲ್ಲವು ಅವಳಿಗೆ ಅರ್ಥವಾಗುತ್ತಿತ್ತು. ಆರ್ಡರ್ ಕ್ಯಾನ್ಸಲ್ ಆಗಿದ್ದರಿಂದ ಇದಕ್ಕೆ ಮುಂದೇನು? ಇದೇ ರಮೇಶನ ಇನ್ನೊಂದು ವ್ಯಕ್ತಿತ್ವಕ್ಕೆ ಕಾರಣ ಎಷ್ಟೊಂದು ಸಾಲದ ಮೇಲೆ ನಿಂತಿದ್ದಾನೆ. ತನಗೆ ಇದೆಲ್ಲಾ ತಿಳಿದಿದೆ ಎಂದು ಸೌಮ್ಯ ಸ್ವಲ್ಪವೂ ತೋರಗೊಡಲಿಲ್ಲ. ಊರಿಗೆ ಹೋಗಿದ್ದ ರಮೇಶ ನಾಳೆ ತಿರುಗಿ ಬರುವುದಾಗಿ ಹೇಳಿ ಎರಡೇ ಮಾತಿನಲ್ಲಿ ಫೋನ್ ಇಟ್ಟಿದ್ದು ನೋಡಿ ಸ್ವಲ್ಪ ಬೇಸರವಾಯಿತು, ಏನು ಮಾಡಲಾಗುವುದು, ಹೆಣ್ಣೆ ನೀನು ಎಷ್ಟೇ ಸಭಲೆ ಎಂದುಕೊಂಡರೂ ನೀನು ಅಬಲೆಯೇ ಅಲ್ಲವೆ? ಎಂದು ಅವಳ ಮನಸಾಕ್ಷಿ ಅಣಕಿಸಿದ ಹಾಗಾಯಿತು. ಊರಿನಿಂದ ತಿರುಗಿ ಬಂದಾಗಲೂ ರಮೇಶನ ಹಾರಾಟ ಕಡಿಮೆಯಾಗಿರಲಿಲ್ಲ. ಕೂಗಾಡುತ್ತಿದ್ದಾಗ ಮನೆಯ ಹತ್ತಿರ ಕಾರೊಂದು ಬಂದು ನಿಂತಿತು. ಇವನ ಫ್ರೆಂಡ್, ರಮೇಶ, ನಾಳೆ ಗೇಮ್ಗೆ ಬರುತ್ತೀಯಾ? ದೊಡ್ಡ ಗ್ರೂಪ್. ಇಲ್ಲಿಂದ 50 ಕಿ.ಮೀ. ನಲ್ಲಿ ಶುರುವಾಗಿದೆ. ನಿನ್ನನ್ನು ಮೆಂಬರ್ ಆಗಿ ಸೇರಿಸಿದ್ದೇನೆ. ಚೆಕ್ ಬುಕ್ ತೆಗೆದುಕೊ ಹಾಗೆ ಫೋಟೊ ಕೂಡ ಎಂದೆಲ್ಲ ಅವಸರಿಸಿದ. ಹೊರಡುವುದರಲ್ಲಿದ್ದ ಅವನನ್ನು ರಮೇಶ ಕರೆದು ಫಾರಿನ್ನಿಂದ ತಂದ ಎಕ್ಸಪೆನ್ಸವ್ ಗಿಪ್ಟ್ ಒಂದನ್ನು ಕೊಟ್ಟ, ಆ ವಸ್ತುವಿನ ಬೆಲೆ ನೋಡಿದ ಸೌಮ್ಯ ಎಂಜಲು ನುಂಗುವ ಹಾಗಿತ್ತು. ರಮೇಶನ ಈ ತರಹದ ವೈಭವಗಳು, ಆಡಂಬರಜೀವನ, ಸಾಲಗಳು, ಬೆಲೆಬಾಳುವ ಉಡುಗೊರೆಗಳು, ಅಬ್ಬಬ್ಬಾ ಹುಚ್ಚುಹಿಡಿಯಬೇಕಾದ ಜೀವನ ಈಗೀಗ ಪ್ರೆಂಡ್ಗಳು ಇರುವಾಗ ತನ್ನುನ್ನು ಕಡೆಗಣಿಸುತ್ತಿದ್ದ. ಸೌಮ್ಯ ತುಂಬಾ ಹಿಂಸೆಪಟ್ಟಳು, ನೊಂದಳು, ಆದರೆ ಧೈರ್ಯದಿಂದ ಜಾಣ್ಮೆಯಿಂದ ಪ್ಯಾಕ್ಟರಿ ಮುಂದುವರಿಸುತ್ತಿದ್ದಳು. ಆರ್ಥಿಕವಾಗಿ ಬಹಳ ಮುನ್ನಡೆದಳು. ತಂಗಿಯರು ಒಂದು ಹಾಲಿಡೇಗೆ ತಮ್ಮನ್ನು ವಿದೇಶಕ್ಕೆ ಕರೆದೊಯ್ಯುವಂತೆ ಒತ್ತಾಯಿಸುತ್ತಿದ್ದರು. ಇದಕ್ಕಾಗಿ ಅವನು ಟ್ರಾವೆಲ್ ಏಜೆಂಟ್ನನ್ನು ಭೇಟಿ ಮಾಡಲು ಹೊರಡುತ್ತಿದ್ದನು. ಅದೇ ಸಮಯಕ್ಕೆ ಬ್ಯಾಂಕಿನಿಂದ ಅವನಿಗೆ ಅರ್ಜೆಂಟ್ ಫೋನ್ ಬಂತು ತಲೆ ತುಂಬ ಟೆನ್ಷನ್ನಿಂದ ಹೊರಟನು. ಅತಿಯಾದ ವೇಗದಲ್ಲಿ ವಾಹನ ಓಡಿಸಿ ಸಿಗ್ನಲ್ ಜಂಪ್ ಮಾಡಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದು ದೊಡ್ಡ ಅಪಘಾತ ಮಾಡಿಕೊಂಡ. ಆಸ್ಪತ್ರೆಯಿಂದ ಸೌಮ್ಯಳಿಗೆ ಫೋನ್ ಬಂದಾಗಲೇ ವಿಷಯ ತಿಳಿಯಿತು. ಎಲ್ಲರೂ ಆಸ್ಪತ್ರೆಗೆ ಹೋಗಿ ನೋಡಿದರೆ ಐಸಿಯು ನಲ್ಲಿ ಮಲಗಿದ್ದ. ಸೌಮ್ಯಳ ಕಣ್ಣಂಚಿನಲ್ಲಿ ನೀರು ಸುರಿಯಿತು. ಎಲ್ಲ ಕಥೆ ಮುಗಿದ ಸೌಮ್ಯ ತನ್ನ ಜೀವನವನ್ನು ತಾನೆ ನಡೆಸಿದಳು. ಎರಡು ವರ್ಷಗಳ ನಂತರ ಫ್ಯಾಕ್ಟರಿಗೆ ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಅವಾರ್ಡ್ ಸಿಕ್ಕಿತು. ಹೆಣ್ಣು ಒಬ್ಬಳು ಏನೆಲ್ಲ ಸಾಧಿಸಬಹುದು ಹೇಗೆ? ಏಂದೆಲ್ಲ ಸೌಮ್ಯಳ ಭಾವ ಚಿತ್ರದೊಂದಿಗೆ ಪತ್ರಿಕೆಯಲ್ಲಿ ಬಂದಿತು. ಈ ಭೂತಾಯಿಯ ಮಡಿಲಲ್ಲಿ ಇಂತಹ ಎಷ್ಟೋ ಹೆಣ್ಣು ಮಕ್ಕಳಿದ್ದಾರೆ? ಹೆಂಗಸರಿಗೆ ಸೌಮ್ಯ ಒಬ್ಬಳು ಮಾದರಿ... ಶ್ರೀಮತಿ ಪದ್ಮಸುಬ್ಬಯ್ಯ ಸಂಕಲ್ಪ್ ಟ್ರಸ್ಟ್, ಬೆಂಗಳೂರು
0 Comments
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |